Saturday, June 06, 2009

ಪಂಪಭಾರತದಲ್ಲಿ ಸೂರ್ಯಾಸ್ತ! - ಭಾಗ : 1

ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ;
ಬಾ ಫಾಲ್ಗುಣ ರವಿ ದರ್ಶನಕೆ!
ಕುವೆಂಪು ಅವರ ಸೂರ್ಯೋದಯ ವರ್ಣನೆಯ ಈ ಗೀತೆಯ ಸಾಲುಗಳನ್ನು ವೀಣೆಯ ನಿನಾದದೊಂದಿಗೆ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ. ಒಂದೊಂದು ಪದಗಳೂ ಸೂರ್ಯೋದಯದ ವರ್ಣದೋಕುಳಿಯನ್ನು ಕಟ್ಟಿಕೊಡುತ್ತವೆ. ಸೂರ್ಯೋದಯದ ವರ್ಣವೈಭವಕೆ ಮಾರುಹೋಗದ ಕವಿಗಳೇ ಇಲ್ಲ. ಕನ್ನಡದ ಎಲ್ಲಾ ಕವಿಗಳು ಒಂದಿಲ್ಲೊಂದು ಸಮಯದಯಲ್ಲಿ ಸೂರ್ಯೋದಯದವನ್ನು ಅನುಭವಿಸಿದವರೆ; ಬರೆದವರೆ! ಅಂತೆಯೇ ಸೂರ್ಯಾಸ್ತವನ್ನೂ ಕವಿಗಳು ಬಿಟ್ಟಿಲ್ಲ. ಆದರೆ ಇಲ್ಲಿ ಸೂರ್ಯೋದಯದ ಸೌಂದರ್ಯದ ವರ್ಣನೆಯಂತೆ ಬಣ್ಣನೆಗಿಳಿಯದೆ ಗಹನವಾದ ಸಮಯದಲ್ಲಿ ಸೂರ್ಯಾಸ್ತವನ್ನು ಒಂದು ಸಾರ್ಥಕ ಉಪಮೆಯಾಗಿ ಬಳಸಿಕೊಂಡಿರುವುದೇ ಹೆಚ್ಚು.
ಮೊನ್ನೆ ಪಂಪಭಾರತದ ದ್ವಿತೀಯಾಶ್ವಾಸದ ೮೬ನೇ ಪದ್ಯದ ಅಧ್ಯಯನ ನಡೆಯುತ್ತಿದ್ದಾಗ, ಪಂಪ ಸೂರ್ಯಾಸ್ತವನ್ನು ಒಂದು ಕಾವ್ಯಸತ್ಯವನ್ನು ಮುಂಗಾಣ್ಕೆಯಾಗಿ ಸಹೃದಯ ಓದುಗನಿಗೆ ದರ್ಶನ ಮಾಡಿಸಲು ಬಳಸಿಕೊಂಡಿರುವದು ಗಮನಕ್ಕೆ ಬಂತು. ಆಗ ಗುರುಗಳಾದ ಡಾ.ಕೆ.ಆರ್.ಗಣೇಶ ಅವರು ‘ಪಂಪಭಾರತದಲ್ಲೇ ಹಲವಾರು ಬಾರಿ ಸೂಯಾಸ್ತವನ್ನು ಪಂಪ ಚಿತ್ರಿಸಿದ್ದಾನೆ. ರನ್ನ ಕುಮಾರವ್ಯಾಸರೂ ಸೂರ್ಯಾಸ್ತವನ್ನು ಬಳಸಿಕೊಂಡಿದ್ದಾರೆ’ ಎಂದಿದ್ದರು.
ನಾನೂ ಈ ಮೂರೂ ಕವಿಗಳ ಸೂರ್ಯಾಸ್ತಮಯದ ಸನ್ನಿವೇಶ ಬರುವ ಪದ್ಯಗಳನ್ನು ಒಟ್ಟಿಗೆ ಓದಿದಾಗ, ಆ ಕವಿಗಳ ದರ್ಶನ ನನಗೆ ಮೆಚ್ಚುಗೆಯಾಯಿತು. ವಿಶೇಷವಾಗಿ ಪಂಪಭಾರತದಲ್ಲಿ ಯುದ್ಧದ ಸನ್ನಿವೇಶದಲ್ಲಿ ಆಯಾಯ ಸಂದರ್ಭಕ್ಕೆ ಅನುಗುಣವಾಗಿ ಸೂರ್ಯಾಸ್ತವನ್ನು ಹಲವಾರು ಬಾರಿ ಪಂಪ ಬಳಸಿಕೊಂಡಿದ್ದಾನೆ. ಆ ಪದ್ಯಗಳ ಓದು ನನ್ನಲ್ಲಿ ಹೆಚ್ಚಿನ ಸಂತೋಷವನ್ನುಂಟು ಮಾಡಿತು. ಆ ಸಂತೋಷವನ್ನು ನನ್ನ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ಪಂಪಭಾರತದಲ್ಲಿ ಬರುವ ಸೂರ್ಯಸ್ತದ ಸನ್ನಿವೇಶಗಳನ್ನು ನೋಡೋಣ. ಕೌರವರ ಮತ್ತು ಪಾಂಡವರ ಶಸ್ತ್ರವಿದ್ಯೆಯ ಪ್ರದರ್ಶನಕ್ಕೆ ಏರ್ಪಾಟಾಗಿದ್ದ ವೇದಿಕೆಯಲ್ಲಿ ಅರ್ಜುನನಿಗೆ ಎದುರಾಗಿ ಕರ್ಣ ಬಂದು ನಿಂತಾಗ ದುರ್ಯೋಧನನೊಬ್ಬನನ್ನುಳಿದು ಮಿಕ್ಕವರೆಲ್ಲಾ ಸೂತನೆಂದು ಛೇಡಿಸುತ್ತಾರೆ. ಆಗ ದುರ್ಯೋಧನ ಆತನಿಗೆ ಅಂಗರಾಜ್ಯದ ಅಧಿಪತಿಯನ್ನಾಗಿ ವೈಭವದಿಂದ ಪಟ್ಟವನ್ನು ಕಟ್ಟುತ್ತಾನೆ. ಆಗ ಆ ದಿನದ ಸೂರ್ಯಾಸ್ತ ಕವಿಗೆ ಹೀಗೆ ಕಾಣುತ್ತದೆ.
ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮುಯ್ವಾಂತು ಇರದಿರ್
ಗುಣಾರ್ಣವನಿನ್ ಅಸ್ತಮಯಕ್ಕಿದು ಸಾಲ್ಗುಂ ಈಗಳ್ ಎಂಬಂತೆವೊಲ್
ಅಂದು ಮುಂದಱದು ತನ್ನ ಮಗಂಗೆ ಸಮಂತು ಬುದ್ಧಿವೇೞ್ವಂತೆವೊಲ್
ಅತ್ತಲ್ ಅಸ್ತಗಿರಿಯಂ ಮಱೆಗೊಂಡುದು ಸೂರ್ಯಮಂಡಲಂ
[‘ಹೀಗೆ ದುರ್ಯೋಧನನು ಮಾಡಿದ ರಾಜ್ಯವೈಭವಕ್ಕೆ ಸುಮ್ಮನೆ ಉಬ್ಬಿಹೋಗಬೇಡ. ಗುಣಾರ್ಣವ(ಅರ್ಜುನ)ನಿಂದ ನೀನು ಸಾಯುವುದಕ್ಕೆ ಈಗ ಇಷ್ಟೇ ಸಾಕು’ ಎಂದು ಸೂರ್ಯನು ಮುಂದೆ ತನಗಾಗುವುದನ್ನು ಇಂದೇ ಪೂರ್ಣವಾಗಿ ಬುದ್ಧಿ ಹೇಳುವ ಹಾಗೆ ಅಸ್ತಮಯನಾದನು.]
ಕರ್ಣ ಸೂರ್ಯನ ಮಗ. ತನ್ನ ಮಗ ದುರ್ಯೋಧನನ ಸ್ನೇಹವನ್ನು ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅದರಿಂದಾಗಿ ಮುಂದೆ ಆತ ಅರ್ಜುನನಿಂದ ಹತನಾಗಬೇಕಾಗುತ್ತದೆ ಎಂಬ ಸತ್ಯವನ್ನು ಬಲ್ಲ ಸೂರ್ಯ, ಈಗ ನಾನು ಅಸ್ತಂಗತನಾಗುತ್ತಿರುವ ಹಾಗೆ ನೀನೂ ಅಸ್ತಂಗತನಾಗುತ್ತೀಯೇ ಎನ್ನುವ ರೀತಿಯಲ್ಲಿ ಅಸ್ತಮಿಸಿಬಿಡುತ್ತಾನೆ. ಆ ಸೂರ್ಯಾಸ್ತಮಯವು ಕರ್ಣನಿಗೆ ಸದ್ಬುದ್ಧಿಯನ್ನುಂಟು ಮಾಡಬೇಕಾಗಿತ್ತು; ಮಾಡಲಿಲ್ಲ. ಆದ್ದರಿಂದ ಮುಂದೆ ಕರ್ಣನೂ ಕುರುಕ್ಷೇತ್ರ ಯುದ್ಧದಲ್ಲಿ ಅಸ್ತಮಿಸಬೇಕಾಗುತ್ತದೆ ಎಂಬುದು ಕವಿಯ ಆಶಯ!
ಮುಂದೆ ಯುದ್ಧಭೂಮಿಯಲ್ಲಿ ಭೀಷ್ಮ ಮತ್ತು ಶ್ವೇತ (ವಿರಾಟನ ಮಗ ಹಾಗೂ ಉತ್ತರನ ಅಣ್ಣ) ಇವರ ನಡುವೆ ಯುದ್ಧ ನಡೆಯುತ್ತದೆ. ಆಗ ಶಿವಸ್ವರೂಪಿಯಾದ ಬಿಲ್ಲನ್ನು ಧರಿಸಿ, ರಣಭಯಂಕರನಾಗಿ ಯುದ್ಧ ಮಾಡುತ್ತಿದ್ದ ಶ್ವೇತನನ್ನು ಕಂಡು ಭೀಷ್ಮನು ನಮಸ್ಕಾರ ಮಾಡುತ್ತಾನೆ. ಅದನ್ನು ಗೌರವಿಸಿ ಶಿವಸ್ವರೂಪಿ ಬಿಲ್ಲನ್ನು ಪಕ್ಕಕ್ಕೆ ಇಟ್ಟು ಬೇರೊಂದು ಶಕ್ತ್ಯಾಯುಧವನ್ನು ಭೀಷ್ಮನ ಮೇಲೆ ಪ್ರಯೋಗಿಸುತ್ತಾನೆ. ಅದನ್ನು ಕತ್ತರಿಸಿದ ಭೀಷ್ಮ ಶ್ವೇತನ ಕತ್ತನ್ನು ಕತ್ತರಿಸಿ ಹಾಕುತ್ತಾನೆ. ಅದೇ ವೇಳೆಗೆ ಸೂರ್ಯಾಸ್ತಮಿಸುತ್ತಿರುತ್ತಾನೆ. ಆಗ ಕವಿ
ಶ್ವೇತನ ಬೀರಮನ್
ಉಪಮಾತೀತಮನ್
ಈ ಧರೆಗೆ ನೆಗೞೆ ನೆಗೞ್ದುದನ್
ಇದನಾಂ ಪಾತಾಳಕ್ಕೆ ಅಱಪುವೆನ್
ಎಂಬ ಈ ತೆಱದೊಳೆ ದಿನಪನ್ ಅಪರಜಲನಿಧಿಗಿೞದಂ
[‘ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವನ್ನು ನಾನು ಪಾತಾಳಕ್ಕೂ ತಿಳಿಸುತ್ತೇನೆ’ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು] ಎಂದು ಆ ದಿನದ ಯುದ್ಧಸಮಾಪ್ತಿವಾಕ್ಯವನ್ನು ನುಡಿಯುತ್ತಾನೆ.
ಮಾರನೆಯ ದಿನ ಭೀಷ್ಮನಿಗೆ ಸ್ವತಃ ಅರ್ಜುನನೇ ಎದುರಾಗಿ ಯುದ್ಧ ಮಾಡುತ್ತಾನೆ. ಅವರಿಬ್ಬರ ನಡುವಿನ ಯುದ್ಧ ಭಯಂಕರವಾಗಿ ನಡೆಯುತ್ತಿರುತ್ತದೆ. ಭೀಷ್ಮನ ಕೋಪಕ್ಕೆ ದೇವತೆಗಳೇ ಭಯಗೊಳ್ಳುತ್ತಾರೆ. ಆಗ ಸೂರ್ಯಾಸ್ತದ ಸಮಯ. ಆಗ ಕವಿ
ಎನ್ನುಮನ್ ಅಸುರಾರಿಯ ಪಿಡಿವುನ್ನತ
ಕರಚಕ್ರಂ ಎಂದು ಭೀಷ್ಮಂ ತಱಗುಂ
ಮುನ್ನಂ ಅಡಂಗುವೆನ್ ಎಂಬವೊಲ್
ಅನ್ನೆಗಂ ಅಸ್ತಾಚಳಸ್ಥನಾದಂ ದಿನಪಂ
[‘ನನ್ನನ್ನು ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ. ಮೊದಲೇ ಮರೆಯಾಗುತ್ತೇನೆ’ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಅಸ್ತವಾದನು] ಎಂದು ಉದ್ಗರಿಸುತ್ತಾನೆ.
ಭೀಷ್ಮನ ಪರಾಕ್ರಮಕ್ಕೆ ಸ್ವತಃ ಕೃಷ್ಣನೇ ಚಿಂತಾಕ್ರಾಮತನಾಗಿರುತ್ತಾನೆ. ಕೃಷ್ಣನ ಸಮೇತ ಅರ್ಜುನನ ಕುದುರೆಯನ್ನು ಇನ್ನೂರು ಗಜ ಹಿಂದಕ್ಕೆ ಭೀಷ್ಮ ತಳ್ಳಿರುತ್ತಾನೆ. ಅಂತಹ ಭೀಷ್ಮನು ಕೋಪದಿಂದ ನನ್ನನ್ನೇ(ಸೂರ್ಯನನ್ನೇ) ಕೃಷ್ಣ ಹಿಡಿದಿರುವ ಚಕ್ರವೆಂದು ಭಾವಿಸಿ ಪುಡಿಮಾಡಿಬಿಟ್ಟರೆ ಎಂಬ ಭಯ ಸೂರ್ಯನಿಗಾಗುತ್ತದೆ. ಬೇಗ ಮರೆಯಾಗಿಬಿಡುತ್ತೇನೆ ಎಂದು ಆತ ಅಸ್ತಂಗತನಾಗುತ್ತಾನಂತೆ!
ಮುಂದೆ ಭೀಷ್ಮನು ಶರಶಯ್ಯೆಯಲ್ಲಿ ಮಲಗಿದ ಮೊದಲ ದಿನದ ಸೂರ್ಯಾಸ್ತ ಪಂಪನಿಗೆ ಹೀಗೆ ಕಾಣುತ್ತದೆ.
ನೆರೆದ ವಿರೋಧಿನಾಯಕರನ್
ಆಹವದೊಳ್ ತಱದು ಒಟ್ಟಲ್ ಒಂದಿದ ಒಡ್ಡು ಉರುಳ್ವಿನಂ
ಆ ಗುಣಾರ್ಣವನ್ ಅಡುರ್ತಿಱದಲ್ಲಿ ಸಿಡಿಲ್ದ ನೆತ್ತರೊಳ್ ಪೊರೆದು
ನಿರಂತರಂ ಪೊಲಸು ನಾಱುವ ಮೆಯ್ಯನೆ ಕರ್ಚಲೆಂದು
ಚೆಚ್ಚರಂ ಅಪರಾಂಬುರಾಶಿಗಿೞವಂತೆ ಇೞದಂ ಕಮಳೈಕಬಾಂಧವಂ
[ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ ಸಿಡಿದ ರಕ್ತದಿಂದ ಲೇಪನಗೊಂಡು, ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು ತೊಳೆಯಬೇಕೆಂದು ಸೂರ್ಯನು ಜಾಗ್ರತೆಯಾಗಿ ಪಶ್ಚಿಮಸಮುದ್ರಕ್ಕೆ ಇಳಿದನೋ ಎಂಬಂತೆ ಸೂರ್ಯನು ಮುಳುಗಿದನು.]
ಯುದ್ಧಭೂಮಿಯಲ್ಲಿ ಸಿಡಿಯುವುದು ಹರಿಯುವುದು ಕೆಂಪು ರಕ್ತ. ಸೂರ್ಯಾಸ್ತವಾಗುವಾಗ ಪಶ್ಚಿಮದ ಬಣ್ಣ ಕೆಂಪು. ಆ ಸೂರ್ಯನ ಕೆಂಪಿಗೆ ಕಾರಣ ಅರ್ಜುನ ಶತ್ರುಗಳನ್ನು ಇರಿಯುವಾಗ ಮೇಲೆ ಚಿಮ್ಮಿದ ರಕ್ತ. ಅದು ಸೂರ್ಯನಿಗೂ ತಗುಲಿಬಿಟ್ಟಿದೆ! ಆ ಕೆಂಪನ್ನು ತೊಳೆದುಕೊಳ್ಳಲೋ ಎಂಬಂತೆ ಸೂರ್ಯ ಕಡಲಿಗಿಳಿಯುತ್ತಾನೆ!
ಮುಂದೆ ಅರ್ಜುನನು ಅಭಿಮನ್ಯುವಿನ ಸಾವಿಗೆ ಪ್ರತಿಕಾರವೆಂಬಂತೆ ಸೈಂಧವನ ತಲೆಯನ್ನು ಕತ್ತರಿಸಿದಾಗ ಅದು ಆಕಾಶಾಭಿಮುಖವಾಗಿ ಹಾರುತ್ತದೆ. ಅದೇ ವೇಳೆಗೆ ಸೂರ್ಯನು ಮುಳುಗುವುದರಲ್ಲಿದ್ದ. ಅದು ಕವಿಗೆ ಹೀಗೆ ಕಾಣುತ್ತದೆ.
ತೆಗೆನೆಱೆದೂಱಕೊಂಡಿಸೆ,
ಶಿರಂ ಪರಿದತ್ತ ವಿಯತ್ತಳಂಬರಂ ನೆಗೆದೊಡೆ,
ರಾಹು ಬಾಯ್ದೆಱೆದು ನುಂಗಲೆ ಬಂದಪುದೆಂಬ ಶಂಕೆಂದಗಿದು
ದಿನೇಶನ್ ಅಸ್ತಗಿರಿಯಂ ಮಱೆಗೊಂಡನ್ .......

[ಅರ್ಜುನನು ಬಾಣವನ್ನು ದೀರ್ಘವಾಗಿ ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು, ಸೈಂಧವನ ತಲೆಯು ಕತ್ತರಿಸಿ ಆಕಾಶದೆಡೆ ಹಾರಲು, ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು.]
ದಿನಚರಿಯ ಮುಗಿಸಿ ಹೊರಡುವುದರಲ್ಲಿದ್ದ ಸೂರ್ಯನಿಗೆ ಹಾರಿ ತನ್ನತ್ತ ಬರುತ್ತಿರುವ ಸೈಂದವನ ತಲೆ ಸೂರ್ಯನಿಗೆ ರಾಹುಗ್ರಹದಂತೆ ಕಂಡಿತು ಎಂಬ ಪಂಪನ ಕಲ್ಪನೆ ಮಹತ್ತರವಾದದ್ದು. ಇಲ್ಲಿ ಸೈಂಧವ ಅಧರ್ಮದ ಪ್ರತಿನಿಧಿಯಾಗಿದ್ದಾನೆ. ಆತನ ತಲೆ ಸೂರ್ಯನನ್ನು ಹಿಡಿದು ಕತ್ತಲನ್ನು ಉಂಟುಮಾಡುವ ರಾಹುವನ್ನು ಹೋಲುತ್ತಿತ್ತು ಎಂಬುದು ಪಂಪನ ಮಹಾಕವಿಪ್ರತಿಭೆಗೆ ಸಾಕ್ಷಿಯಾಗಿದೆ.
ದ್ರೋಣಾಚಾರ್ಯನು ಸತ್ತ ನಂತರ ಅಶ್ವತ್ತಾಮನು ನಾರಾಯಣಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ. ಕೃಷ್ಣನ ಸಲಹೆಯಂತೆ ಎಲ್ಲರೂ ಅದಕ್ಕೆ ನಮಸ್ಕರಿಸಿ ಅಪಾಯದಿಂದ ಪಾರಾಗುತ್ತಾರೆ. ಆ ದಿನದ ಸೂರ್ಯಾಸ್ತವನ್ನು ಕವಿ-
ಕವಿದೆರಡುಂ ಪತಾಕಿನಿಗಳಾಗಡುಂ
ಎನ್ನನೆ ಸಕ್ಕಿ ಮಾಡಿ ಕಾದುವುದಱನ್
ಇಲ್ಲಿ ಸತ್ತ ಅರಸುಮಕ್ಕಳ ಪಾಪಂ ಇದೆಲ್ಲಂ ಎನ್ನನ್ ಎಯ್ದುವುದು
ಉಪವಾಸದಿಂ ಜಪದಿನ್ ಆನ್ ಅದನ್ ಓಡಿಸಿ ಶುದ್ಧನ್ ಅಪ್ಪೆನ್
ಎಂಬವೊಲ್ ಅಪರಾಂಬುರಾಶಿಗಿೞದಂ ನಳಿನೀವರಜೀವಿತೇಶ್ವರಂ

[‘ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ ಯುದ್ಧಮಾಡುವುದರಿಂದ, ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ’ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು.]
ಹಗಲಿನಲ್ಲಿ ಮಾತ್ರ ಯುದ್ಧ ನಡೆಯುತ್ತಿತ್ತು. ಅದಕ್ಕೆ ಸೂರ್ಯನೇ ಸಾಕ್ಷಿ. ಯುದ್ಧದಂತಹ ಪಾಪಕಾರ್ಯಕ್ಕೆ ಸಾಕ್ಷಿಯಾಗಿರುವುದು ಪಾಪದ ಕೆಲಸ! ಅಂತಹ ಪಾಪವನ್ನು ಸೂರ್ಯ ಕಳೆದುಕೊಳ್ಳಲು ಇಚ್ಛಿಸಿದ ಎಂಬ ಕಲ್ಪನೆ ನವೀನತರನಾಗಿದೆ.
{................ಮುಂದಿನ ವಾರ ಮುಂದುವರೆಯುವುದು. ಪಂಪನೊಂದಿಗೆ ರನ್ನ ಮತ್ತು ಕುಮಾರವ್ಯಾಸರ ಸೂರ್ಯಾಸ್ತ ದರ್ಶನವನ್ನೂ ಗಮನಿಸಲಾಗುವುದು}

10 comments:

PARAANJAPE K.N. said...

ಸೂರ್ಯಾಸ್ತದ ಕುರಿತು ಪ೦ಪನಿ೦ದ ಕುವೆ೦ಪು ತನಕ ಅನೇಕ ಕವಿಗಳು ಮಾಡಿದ ವರ್ಣನೆ, ಕವಿಯ ಮನಮ೦ದಿರದಲ್ಲಿ ಮೂಡಿದ ಭಾವನೆಗಳ ಉಲ್ಲೇಖ, ಜೊತೆಜೊತೆಗೆ ಮಹಾಭಾರತದ ಪ್ರಸ೦ಗಗಳ ಹಿಮ್ಮೇಳದೊ೦ದಿಗೆ ನಿಮ್ಮ ಬರಹ ಚೆನ್ನಾಗಿ ಮೂಡಿ ಬ೦ದಿದೆ.

Unknown said...

Sathya avare nimma suryasthada bagge kavigalu madida varneya manada maathugala ullekada collection thumba chennagide.
Heege ennu hechchagi moodibarali anno ashaydondige

Shantha

sunaath said...

ಪಂಪನ ಕಾವ್ಯಚಾತುರ್ಯವನ್ನು ನಮಗೆ ತಿಳಿಯಾಗಿ ತಿಳಿಸಿ ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು. ಮುಂದಿನ ಕಂತನ್ನು ಎದರು
ನೋಡುತ್ತೇನೆ.

shivu.k said...

ಸರ್,

ಪಂಪನ ಸೂರ್ಯಾಸ್ತದ ವರ್ಣನೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ..ಜೊತೆಯಲ್ಲಿ ಮಹಾಭಾರತದ ಘಟನೆಗಳನ್ನು ತಿಳಿಸುವುದರೊಂದಿಗೆ ಚೆನ್ನಾಗಿ ಬರೆದಿದ್ದೀರಿ...ಅದಕ್ಕೆ ತಕ್ಕಂತೆ ಫೋಟೋಗಳು ಸುಂದರವಾಗಿವೆ...
ಮುಂದಿನ ಕಂತು ನಿರೀಕ್ಷಿಸುತ್ತಿದ್ದೇನೆ...

ಧನ್ಯವಾದಗಳು.

ಜಲನಯನ said...

ಡಾ. ಸತ್ಯ, ನಮ್ಮೆಲ್ಲರ ನೆನಪುಗಳ ಮೇಲಿನ ಧೂಳನ್ನು ಕೊಡಹುತ್ತಾ ಬಹಳ ವಿವರವಾಗಿ ಪಂಪಭಾರತದಲ್ಲಿ ಸೂರ್ಯಾಸ್ತಮ ಸಮಯದ ಹಲವು ಆಯಾಮಗಳನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಿದ್ದೀರಿ. ಪಂಪ ತನ್ನ ಪ್ರಭುವನ್ನು ಅರ್ಜುನನಿಗೆ ಹೋಲಿಸಿ ವರ್ಣಿಸಿದ್ದಾನೆಂದೂ ಕೇಳಿದ್ದೇವೆ (ನನಗೆ ನೆನಪಿದ್ದಂತೆ..ತಪ್ಪಿದ್ದರೆ ಕ್ಷಮಿಸಿ). ಹಾಗೇ..ಅಂದಿನ ಕವಿಗಳು ತಮ್ಮ ಮಹಾ ಕಾವ್ಯಗಳಲ್ಲಿ ತಮ್ಮ ಪ್ರಭುಗಳ (ಆಶ್ರಯದಾತರ) ಛಾಪನ್ನು ಮೂಡಿಸಿ ಪಾತ್ರವಿವರಣೆ ಕೊಡಿತ್ತಿದ್ದರಂತೆ, ಇದರ ಬಗ್ಗೆ ನಿಮ್ಮ ಮುಂದಿನ ಕಂತೊಗಳಲ್ಲಿ ತಿಳಿಸಿ. ಧನ್ಯವಾದಗಳು..ಅದ್ಭುತ ಮಾಹಿತಿಗೆ.

Thimmappa’s said...

surya maanaviyate mytaledu vivida asta kandukolluva pari mattu mooru kavigalannu holisi noduva nimma kalpane sundara haagu hrudayasparshi.

ಅಂತರ್ವಾಣಿ said...

ಸತ್ಯ ಅವರೆ,
ಪ್ರತಿ ಕವಿಗೂ ಸೂರ್ಯ ಮಾತ್ರ ಅಲ್ಲ, ನಮ್ಮ ಪರಿಸರ ಎಷ್ಟು ಸ್ಫೂರ್ತಿ ಕೊಡುತ್ತದೆ ಹೊಸ ಕವನ ರಚಿಸಲು.

ಪಂಪ, ರನ್ನರು ಎಲ್ಲರ ಕವನ ನೀವು ಹಾಕಿ ನಮಗೆ ಓದುವ ಅವಕಾಶ ಕೊಟ್ಟಿದ್ದೀರ. ವಂದನೆಗಳು

ರೂpaश्री said...

ಸತ್ಯ ಸರ್,

ಪಂಪಭಾರತದಲ್ಲಿ ಕವಿ ವರ್ಣಿಸಿದ್ದ ಸೂರ್ಯಾಸ್ತದ ಸನ್ನಿವೇಶಗಳನ್ನೂ, ಮಹಾಭಾರತದ ಘಟನೆಗಳನ್ನೂ ಸರಳವಾದ ಪದಗಳಲ್ಲಿ ಅಷ್ಟೇ ಸುಂದರವಾಗಿ ವಿವರಿಸಿದ್ದೀರ... ಫೋಟೋಗಳು ಲೇಖನಕ್ಕೆ ಹೇಳಿ ಮಾಡಿಸಿದ ಹಾಗಿವೆ!!

ಮುಂದಿನ ಕಂತಿಗಾಗಿ ಕಾಯುವೆ...

ಬಿಸಿಲ ಹನಿ said...

ಪಂಪ ಭಾರತದಲ್ಲಿ ಬರುವ ಸೂರ್ಯಾಸ್ತಮಾನವನ್ನು ವಿವಿಧ ಸಂದರ್ಭಗಳೊಂದಿಗೆ ಚನ್ನಾಗಿ ವಿವರಿಸಿದ್ದೀರಿ. ಅದರ ಮುಂದಿನ ಸಂಚಿಕೆಗಾಇ ಕಾಯುವೆ. ಜನ್ನನ ಯಶೋಧರ ಚರಿತೆಯಲ್ಲಿ ಬರುವ ಮುಖ್ಯವಾಗಿ ಬಲಿಯ ಸಂದರ್ಭದಲ್ಲಿ ಬರುವ ವಸಂತ ಋತುವಿನ ವರ್ಣನೆಯ ಮೇಲೂ ಲೇಖನ ಬರೆಯಿರಿ.
ಮಾಹಿತಿ ಪೂರ್ಣ ಲೇಖನ. ಅಭಿನಂದನೆಗಳು.

Unknown said...

ಕನ್ನಡದ ಕುವೆಂಪು 🙏🥰❤️