Friday, January 24, 2014

ಚತುರನ ಚಾತುರ್‍ಯ : ಅಜ್ಜ ಹೇಳಿದ್ದ ಕಥೆ ಪಠ್ಯಪುಸ್ತಕದಲ್ಲಿ ಕಂಡಾಗ

ಒಂದು ಊರಿನಲ್ಲಿ ಚತುರನಾದ ಒಬ್ಬ ನಾಪಿತನಿದ್ದನು. ಅದೇ ಊರಿನಲ್ಲಿ ಪಂಚಾಂಗವನ್ನೋದುವ ಬ್ರಾಹ್ಮಣನೊಬ್ಬನಿದ್ದ. ನಾಪಿತನಿಗೆ ಬ್ರಾಹ್ಮಣನ ಮೇಲೆ ವಿಶ್ವಾಸ. ಏನೇ ಕೆಲಸ ಮಾಡಬೇಕಾದರೂ ಆತನನ್ನು ಕೇಳಿಯೇ ಮಾಡುತ್ತಿದ್ದ.
ಆ ಊರಿನಿಂದ ನಾಲ್ಕು ಯೋಜನ ದೂರದಲ್ಲಿ ಮಹಾದೇವನ ಕ್ಷೇತ್ರವೊಂದಿತ್ತು. ವರ್ಷಕ್ಕೊಮ್ಮೆ ಅಲ್ಲಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಗೆ ತುಂಬಾ ಜನ ಸೇರುತ್ತಿದ್ದರು. ನಾಪಿತನು ತನ್ನ ವೃತ್ತಿಯ ಜೊತೆಗೆ ಒಳ್ಳೆಯ ನಾದಸ್ವರವಾದಕನೂ ಆಗಿದ್ದ. ’ಜಾತ್ರೆಯ ಸಮಯದಲ್ಲಿ ತಾನು ಅಲ್ಲಿದ್ದರೆ, ವೃತ್ತಿ-ಪ್ರವೃತ್ತಿಯಿಂದ ಒಳ್ಳೆಯ ಸಂಪಾದನೆ ಮಾಡಬಹುದು, ಜೊತೆಗೆ ದೇವರ ದರ್ಶನವೂ ಆಗುವುದು’ ಎಂಬ ಯೋಜನೆ ನಾಪಿತನದು. ಎಂದಿನಂತೆ ಬ್ರಾಹ್ಮಣನಲ್ಲಿ ಈ ವಿಷಯವನ್ನು ತಿಳಿಸಿ, ಯಾತ್ರೆಗೆ ಒಳ್ಳೆಯ ಮುಹೂರ್ತವನ್ನು ಹೇಳಬೇಕೆಂದು ಕೇಳುತ್ತಾನೆ. ಆ ದಿನ ಬ್ರಾಹ್ಮಣನಿಗೆ ಏನೂ ತೋಚುವುದಿಲ್ಲ. ಸುಮ್ಮನೆ, ’ನಾಳೆ ಸೂರ್ಯೋದಯಕ್ಕೆ ಸರಿಯಾಗಿ ಹೊರಡು’ ಎನ್ನುತ್ತಾನೆ. 


ಬ್ರಾಹ್ಮಣನ ಮಾತಿನಲ್ಲಿ ಪರಮವಿಶ್ವಾಸಿಯಾಗಿದ್ದ ನಾಪಿತನು, ಸೂರ್ಯೋದಯಕ್ಕೆ ಸರಿಯಾಗಿ ಹೊರಟು, ಸಾಕಷ್ಟು ದೂರ ನಡೆದ ಮೇಲೆ ಒಂದು ದಟ್ಟವಾದ ಕಾಡನ್ನು ಪ್ರವೇಶಿಸುತ್ತಾನೆ. ಅಲ್ಲಿ ನರಭಕ್ಷಕನಾಗಿದ್ದ ಹುಲಿಯೊಂದು ಮಹಾಉಗ್ರವಾಗಿ ಆರ್ಭಟಿಸುತ್ತಾ ಎದುರಾಗುತ್ತದೆ. ಆಗ ನಾಪಿತನು, ’ಇನ್ನು ನನಗೆ ಸಾವೇ ನಿಶ್ಚಿತ, ಹೆಂಡತಿ ಮಕ್ಕಳು ಅನಾಥರಾಗುವರು, ಇನ್ನೇನು ಗತಿ’ ಎಂದುಕೊಳ್ಳುತ್ತಾನೆ. ಹುಲಿ ಹತ್ತಿರ ಬನರುವಷ್ಟರಲ್ಲಿ ಒಂದು ಪ್ರಯತ್ನ ಮಾಡೋಣವೆಂದುಕೊಂಡು, ಕೈಗಳಿಂದ ಭುಜಗಳನ್ನು ಬಡಿದುಕೊಳ್ಳುತ್ತ, ಜೋರಾಗಿ ಅಟ್ಟಹಾಸ ಮಾಡಿ, ಎಲವೋ ಹುಲಿಯೆ, ದಷ್ಟಪುಷ್ಟವಾಗಿರುವ ನೀನು ದೇವರ ದಯೆಯಿಂದ ನನಗೆ ಸಿಕ್ಕಿದ್ದೀಯ. ಬಾ, ಮುಂದಕ್ಕಡಿ ಇಡು ಎಂದು ಕೂಗುತ್ತಾ ಕೈಯಲ್ಲಿದ್ದ ಹಗ್ಗದ ತುಂಡೊಂದನ್ನು ಹುಲಿಯ ಕೊರಳಿಗೆ ಕಟ್ಟುವವನಂತೆ ಸನ್ನೆ ಮಾಡುತ್ತಾನೆ.
ಆಗ ಹುಲಿ, ’ಇದೇನು ಅಚ್ಚರಿ! ಭಯಂಕರನಾದ ನನ್ನನ್ನೇ ಮುಂದಕ್ಕೆ ಬಾ ಎಂದು ಕರೆಯುತ್ತಾ, ಹಗ್ಗದಿಂದ ಕಟ್ಟಲು ಸಿದ್ಧನಾಗಿದ್ದಾನಲ್ಲ! ಏನು ಕಾರಣವಿರಹುದು?’ ಎಂದುಕೊಂಡು, ದಿಗಿಲಿನಿಂದ ಎಲವೋ, ಮನುಷ್ಯರನ್ನು ತಿಂದು ತೇಗುವ ನನ್ನನ್ನು ಕಂಡೂ ಅಟ್ಟಹಾಸ ಮಾಡುತ್ತಿರುವ ನೀನು ಯಾರು? ಮೊದಲು ಹೇಳು ಎನ್ನುತ್ತದೆ.


ನಾಪಿತನು, ಎಲವೋ ಕ್ಷುದ್ರ ಜಂತುವೆ, ಲೋಕಾಧಿಪತಿಯಾದ ಮಹಾದೇವನು ವ್ಯಾಘ್ರಯಜ್ಞ (ಹುಲಿಮೇಧ!) ಮಾಡುತ್ತಿದ್ದಾನೆ. ನನ್ನನ್ನೂ ಸೇರಿಸಿ ಐದು ಮಂದಿ ಗಂಧರ್ವರಿಗೆ ಭೂಲೋಕದಿಂದ ತಲಾ ನೂರು ಹುಲಿಗಳನ್ನು ಹಿಡಿದು ತರುವಂತೆ ಕಟ್ಟಪ್ಪಣೆ ಮಾಡಿದ್ದಾನೆ. ಅದಕ್ಕಾಗಿಯೆ ಮಾನವರಾಗಿ ನಾವು ಬಂದಿದ್ದೇವೆ. ನಾನೀಗಾಗಲೇ ತೊಂಭತ್ತನಾಲ್ಕು ಹುಲಿಗಳನ್ನು ಹಿಡಿದು ಮಹಾದೇವನಿಗೆ ಒಪ್ಪಿಸಿದ್ದೇನೆ. ಇನ್ನುಳಿದ ಆರು ಹುಲಿಗಳನ್ನು ಹಿಡಿಯಲು ನೆನ್ನೆ ಮತ್ತೆ ಬಂದು, ಇದೇ ಮಹಾರಣ್ಯದಲ್ಲಿ, ನಿನ್ನನ್ನೇ ಹೋಲುವ ಹುಲಿಯೊಂದನ್ನು ಹಿಡಿದು ನನ್ನ ಕಂಕುಳಲ್ಲಿ ಬಂಧಿಸಿಟ್ಟುಕೊಂಡಿದ್ದೇನೆ. ಅದೂ ನೀನು ಅವಳಿಜವಳಿಯೆ? ಈಗ ನರಭಕ್ಷಕನಾದ ನಿನ್ನನ್ನೂ ಬಂಧಿಸುತ್ತೇನೆ. ಬಾ ಬೇಗ ಮುಂದಕ್ಕಡಿಯಿಡು ಎಂದು ಮೊದಲಿಗಿಂತ ಹೆಚ್ಚಾಗಿ ಆರ್ಭಟಿಸುತ್ತಾನೆ.
ಹುಲಿಗೆ ಒಳಗೊಳಗೆ ಭಯವಾಗುತ್ತದೆ. ಮೆಲ್ಲನೆ, ಎಲ್ಲಿ? ನಿನ್ನ ಕಂಕುಳಲ್ಲಿರುವ ಹುಲಿಯನ್ನು ತೋರು ಎನ್ನುತ್ತದೆ. ಹುಲಿ ಭೀತಗೊಂಡಿರುವುದನ್ನು ಮನಗಂಡ ನಾಪಿತ, ಮನಸ್ಸಿನಲ್ಲಿಯೇ ಉತ್ಸಾಹಗೊಂಡು, ಎಲಾ ಜಂತುವೆ, ನನ್ನನ್ನೇ ಪರೀಕ್ಷಿಸುತ್ತೀಯಾ!? ನೋಡಿಲ್ಲಿ ಎನ್ನುತ್ತಾ ಕಂಕುಳಲ್ಲಿದ್ದ ಹಡಪದಿಂದ ಕನ್ನಡಿಯನ್ನು ತೆಗೆದು ತೋರುತ್ತಾನೆ.
ಕನ್ನಡಿಯಲ್ಲಿ ತನಗಿಂತಲೂ ದೊಡ್ಡದಾಗಿ ಕಾಣುತ್ತಿದ್ದ, ತನ್ನಂತೆಯೇ ಇರುವ ಹುಲಿಯನ್ನು ನೋಡಿ, ’ನನಗಿಂತ ದೊಡ್ಡದಾದ ಹುಲಿಯನ್ನು ಇಷ್ಟು ಚಿಕ್ಕ ಚೌಕಟ್ಟಿನಲ್ಲಿ ಬಂಧಿಸಿರುವ ಈತ ಮನುಷ್ಯನೇ ಅಲ್ಲ! ಶಿವಶಿವಾ! ನಾನು, ಇವನು ನರಮನುಷ್ಯ. ತಿನ್ನೋಣ ಎಂದು ಎದುರು ಬಂದು ಕೆಟ್ಟೆ! ಇನ್ನೇನು ಗತಿ’ ಎಂದು ನಡುಗುತ್ತಾ, ಆತನ ಕಾಲಿಗೆ ಬಿದ್ದು, ದಮ್ಮಯ್ಯ ನನನ್ನು ಬಿಟ್ಟುಬಿಡು. ಮನುಷ್ಯರನ್ನು ತಿಂದ ಮೇಲೆ ಅವರು ಬಳಿಯಿದ್ದ ಚಿನ್ನಾಭರಣವನ್ನು ನನ್ನ ಗುಹೆಯೊಳಗೆ ಕೂಡಿಸಿಟ್ಟಿದ್ದೇನೆ. ಅವುಗಳನ್ನೆಲ್ಲಾ ನೀಡುತ್ತೇನೆ. ನನ್ನನ್ನು ಹಿಡಿದೊಯ್ಯಬೇಡ ಎಂದು ದೈನ್ಯದಿಂದ ಬೇಡುತ್ತದೆ.
ಹೌದಾ! ಎಲ್ಲಿ? ನಿನ್ನ ಗುಹೆಯನ್ನು ನೋಡೋಣ ಎಂದ ನಾಪಿತನನ್ನು ಹುಲಿ ಗುಹೆಗೆ ಕರೆದುಕೊಂಡು ಹೋಗಿ ತೋರಿಸುತ್ತದೆ. ಮನುಷ್ಯರ ಮೂಳೆ-ಮಾಂಸಗಳಿಂದ ಕೊಳಕಾಗಿರುವ ಜಾಗದ ಒಂದೆಡೆಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ದುಡ್ಡು-ಚಿನ್ನವನ್ನು ನೋಡುತ್ತಾನೆ. ಅದರಲ್ಲಿ ತಾನು ಹೊರುವಷ್ಟನ್ನು ಕಟ್ಟಿಕೊಂಡು, ಎಲವೋ ಹುಲಿಯೆ. ನಿನ್ನನ್ನು ಉಳಿಸಿದ್ದೇನೆ. ಧರ್ಮದಿಂದ ಜೀವನ ನಡೆಸು. ನನ್ನಂತೆಯೇ ಇನ್ನೂ ನಾಲ್ವರು ಹುಲಿಗಳಿಗೋಸ್ಕರ ಹುಡುಕುತ್ತಿದ್ದಾರೆ. ಅವರ ಕಣ್ಣಿಗೆ ಬೀಳದಿರು. ಹೋಗು. ಎಂದು ಹೇಳಿ ’ಬದುಕಿದೆಯಾ ಬಡಜೀವವೆ’ ಎಂದುಕೊಂಡು ಕ್ಷಣದಲ್ಲಿ ಅಲ್ಲಿಂದ ಹೊರಟು ಊರು ಸೇರುತ್ತಾನೆ. ತಂದ ಸಂಪತ್ತಿನಲ್ಲಿ ಅರ್ಧದಷ್ಟನ್ನು ಬ್ರಾಹ್ಮಣನಿಗೆ ಕೊಡುತ್ತಾನೆ. ಉಳಿದುದರಲ್ಲಿ ತಾನೂ ಸುಖವಾಗಿರುತ್ತಾನೆ. 


ಮುಂದಿನ ವರ್ಷ ಜಾತ್ರೆ ಬಂದಾಗ ನಾಪಿತನು ’ಕಳೆದ ಭಾರಿ ದೇವತಾಯಾತ್ರೆಯನ್ನು ಮಾಡುವನೆಂದು ಹೊರಟು, ಧನದ ಆಸೆಯಿಂದ ಮೊಟಕುಗೊಳಿಸಿ, ಮಹಾಪಾಪಕ್ಕೆ ತುತ್ತಾಗಿದ್ದೇನೆ. ಈಗಲಾದರೂ ಹೋಗಿ ದೇವರ ದರ್ಶನ ಮಾಡಿ ಬರುತ್ತೇನೆ’ ಎಂದು ನಿಶ್ಚಯಿಸುತ್ತಾನೆ. ಯಥಾಪ್ರಕಾರ ಬ್ರಾಹಣನಲ್ಲಿ ಲಗ್ನನಿಶ್ಚಯಕ್ಕೆ ಕೇಳುತ್ತಾನೆ. ಬ್ರಾಹ್ಮಣನು ಮನಸ್ಸಿನಲ್ಲಿಯೇ ’ಇವನು ಧನ ಸಂಪಾದನೆಗೆ ಹೋಗುತ್ತಿದ್ದಾನೆ. ಕಳೆದ ಭಾರಿ ನನಗೇ ಅಷ್ಟೊಂದು ಕೊಟ್ಟ ಇವನು, ಇನ್ನೆಷ್ಟು ತಂದಿದ್ದನೊ, ಕಾಣೆ! ಆದ್ದರಿಂದ ಇವನೊಡನೆ ನಾನೂ ಹೋಗುವುದು ಒಳ್ಳೆಯದು’ ಎಂದು ಯೋಜಿಸಿ, ಎಲವೋ ನಾಪಿತನೆ, ನಾನೂ ಯಾತ್ರೆಯ ಸಂಕಲ್ಪವನ್ನು ಮಾಡಿ, ನಾಳೆ ಸೂರ್ಯೋದಯದಲ್ಲೆ ಹೊರಡುವವನಿದ್ದೇನೆ ಜೊತೆಯಲ್ಲೇ ಹೋಗೋಣ ಎನ್ನುತ್ತಾನೆ. ’ನಾಪಿತನು ಕಾಡಿನ ಹಾದಿ, ಹುಲಿಕಾಟ ಬೇರೆ ಇದೆ’ ಎಂದರೂ ಬ್ರಾಹ್ಮಣ ಒಪ್ಪುವುದಿಲ್ಲ. ಕೊನೆಗೆ ನಾಪಿತ ಆದುದಾಗಲಿ ಎಂದು, ಹುಲಿಯ ಭಯದಿಂದ, ಹಳೆಯ ದಾರಿಯನ್ನು ಬಿಟ್ಟು ಬೇರೊಂದು ದಾರಿಯಲ್ಲಿ ಬ್ರಾಹಣನೊಂದಿಗೆ ಹೊರಡುತ್ತಾನೆ.
ಕಳೆದ ವರ್ಷ ನಾಪಿತನ ಕೈಯಲ್ಲಿ ಸಿಕ್ಕಿಕೊಂಡು ಸಾವಿನ ದರ್ಶನ ಮಾಡಿದ್ದ ಹುಲಿ, ’ತಾನು ಇವನಿಂದ ಬಿಡುಗಡೆಗೊಂಡರೆ, ನಿನಗೆ ದೊಡ್ಡ ಸಮಾರಾಧನೆಯ್ನನು ಮಾಡಿ, ತನ್ನ ಬಂಧುಬಾಂಧವ ಹುಲಿಗಳಿಗೆಲ್ಲಾ ಔತಣ ನೀಡುತ್ತೇನೆ’ ಎಂದು ದೇವರಿಗೆ ಹರಕೆ ಮಾಡಿಕೊಂಡು, ಬೇರೆ ಕಾಡಿಗೆ ಬಂದು ಸೇರಿಕೊಂಡಿತ್ತು. ತನ್ನ ಹರಕೆಯಂತೆ, ಆ ಜಾತ್ರೆಯ ದಿವಸವೇ ಅನೇಕ ಪ್ರಾಣಿ ಪಕ್ಷಿಗಳನ್ನು ಕೊಂದು, ಔತಣಕ್ಕಾಗಿ ತನ್ನ ಬಳಗದವರನ್ನೆಲ್ಲಾ ಕರೆದುಕೊಂಡು ಹೋಗುತ್ತಿತ್ತು. ಮಾರ್ಗ ಬದಲಿಸಿ ಹೊರಟ ನಾಪಿತ-ಬ್ರಾಹ್ಮಣರಿಬ್ಬರು ಅದೇ ದಾರಿಯಲ್ಲಿ ಬಂದುದ್ದರಿಂದ ಹುಲಿಗಳ ಹಿಂಡನ್ನು ಎದುರುಗೊಳ್ಳುತ್ತಾರೆ. ’ಈ ಬ್ರಾಹ್ಮಣ ನನ್ನೊಂದಿಗೆ ಬಂದು ಹುಲಿಗೆ ತುತ್ತಾಗುವಂತಾಗುತ್ತದಲ್ಲ’ ಎಂದು ಯೋಚಿಸಿದ ನಾಪಿತ, ಅವನನ್ನು ದೊಡ್ಡ ಮರಕ್ಕೆ ಹತ್ತಿಸಿ ಅಯ್ಯಾ ಹಾರುವನೆ. ಅಂಜಬೇಡ. ಬಲವಾದ ಕೊಂಬೆಯೊಂದನ್ನು ಅಪ್ಪಿ ಅಲುಗಾಡದೆ ಕುಳಿತುಕೊ ಎಂದು ತಾನೂ ಕೊಂಬೆಯನ್ನು ತಬ್ಬಿಕೊಂಡು ಕುಳಿತುಕೊಳ್ಳುತ್ತಾನೆ. ಹುಲಿಗಳೆಲ್ಲಾ ಅವರು ಕುಳಿತಿದ್ದ ಮರದ ಕೆಳಗೆ ಬಂದು ಸೇರಿ, ಪೊದೆಯಲ್ಲಿ ಅಡಗಿಸಿಟ್ಟಿದ್ದ ಮೃತ ಪ್ರಾಣಿ ಪಕ್ಷಿಗಳನ್ನು ಎಳೆದು ತಿನ್ನಲಾರಂಭಿಸುತ್ತವೆ. ಹಾರುವನ ಪ್ರಾಣ ನೆತ್ತಿಗೆ ಬಂದಂತಾಗುತ್ತದೆ. ’ಇಂದು ಬದುಕುಳಿಯುವ ಮಾರ್ಗವೇ ಇಲ್ಲವೆ, ಶಿವಶಿವಾ’ ಎಂದು ನಾಪಿತ ಯೋಚಿಸುತ್ತಾನೆ.
ಆಗ, ಹೆಗ್ಗಡಿ ಹುಲಿಯು, ಆ ಹುಲಿಯನ್ನು ಕುರಿತು, ಏನಯ್ಯಾ, ಈ ಸಮಾರಾಧನೆಗೆ ಕಾರಣವೇನು? ಎಂದು ಕೇಳುತ್ತದೆ. ಹುಲಿಯು ಹಿಂದಿನ ಕಥೆಯನ್ನೆಲ್ಲಾ ಹೇಳಿದಾಗ, ಹೆಗ್ಗಡಿ ಹುಲಿಯು ಮನುಷ್ಯ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ನಾಟಕ ಮಾಡಿ ನಿನ್ನನ್ನು ವಂಚಿಸಿದ್ದಾನೆ ಎನ್ನುತ್ತದೆ. ಹುಲಿ, ಅಯ್ಯಾ ಹೆಗ್ಗಡಿಯೇ, ನನಗಿಂತ ಬಲವಾಗಿದ್ದ, ನಿಮ್ಮಂತೆಯೇ ಇದ್ದ ಒಂದು ದೊಡ್ಡ ಹುಲಿಯನ್ನು ಇಷ್ಟೇ ಇಷ್ಟು ಜಾಗದ ಚೌಕಟ್ಟಿನಲ್ಲಿ ಬಂಧಿಸಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಆ ಗಂಧರ್ವನನ್ನು ಬಹುವಿಧವಾಗಿ ಬೇಡಿಕೊಂಡು, ಪ್ರಾಣವುಳಿಸಿಕೊಳ್ಳುವುದಕ್ಕೋಸ್ಕರ ನನ್ನಲ್ಲಿದ್ದ ಸಂಪತ್ತೆಲ್ಲವನ್ನು ಕೊಟ್ಟೆ. ’ನನ್ನಂತೆಯೇ ಇರುವ ಇನ್ನೂ ನಾಲ್ವರ ಕಣ್ಣಿಗೆ ಬೀಳಬೇಡ’ ಎಂದು ಹೇಳಿ, ನನ್ನನ್ನು ಉಳಿಸಿದ. ಬದುಕಿದರೆ ಸಾಕೆಂದು ದೇವರಿಗೆ ಹೇಳಿಕೊಂಡಿದ್ದ ಹರಕೆಯಂತೆ ಸಮಾರಾಧನೆ ನೆಡೆಸಿದ್ದೇನೆ ಎನ್ನುತ್ತದೆ.
ಅಷ್ಟರಲ್ಲಿ ಊಟ ಮುಗಿಸಿದ ಅನೇಕ ಹುಲಿಗಳು ಒಟ್ಟೊಟ್ಟಿಗೆ ಘರ್ಜಿಸಲು ಆರಂಭಿಸುತ್ತವೆ. ಅವುಗಳ ಉತ್ಸಾಹದ ಘರ್ಜನೆಗೆ ಭೂಮಿಯೇ ಕಂಪಿಸಿ, ಕಾಡಿನಲ್ಲೆಲ್ಲಾ ಸಿಡಿಲು ಹೊಡೆದಂತಾಗುತ್ತದೆ. ಆ ಶಬ್ದಕ್ಕೆ ಮೇಲೆ ಕುಳಿತಿದ್ದ ಬ್ರಾಹ್ಮಣನು, ಭಯದಿಂದ ಎಚ್ಚರ ತಪ್ಪಿ ಹುಲಿಗಳ ಮದ್ಯಕ್ಕೆ ಬಿದ್ದುಬಿಡುತ್ತಾನೆ. ’ಅಯ್ಯೊ ಅನ್ಯಾಯವಾಗಿ ಸಾಯುತ್ತಾನಲ್ಲ’ ಎಂದುಕೊಂಡ ನಾಪಿತನು ಆದುದಾಗಲಿ ಎಂದು ’ಎಲವೋ ಗಂಧರ್ವ ನೀನು ಧುಮುಕಿದುದು ಲೇಸಾಯ್ತು. ಮುಂಚಿತವಾಗಿ ಆ ಗಡ್ಡದ ಹುಲಿಯನ್ನು ಹಿಡಿ, ಹಿಡಿ ಎಂದು ಕಾಡೆಲ್ಲಾ ಕೇಳುವಂತೆ ಕೂಗಲಾರಂಭಿಸಿದ. ಆಗಷ್ಟೇ ಕಥೆ ಕೇಳಿದ್ದ ಹುಲಿಗಳೆಲ್ಲಾ, ’ಗಂಧರ್ವನು ಎಲ್ಲರನ್ನು ಏಕಕಾಲದಲ್ಲಿ ಹಿಡಿಯುವ ಉದ್ದೇಶದಿಂದ ಅಡಗಿ ಕುಳಿತಿದ್ದಾನೆ, ನಾವೆಲ್ಲಾ ಸಿಕ್ಕಿಬಿದ್ದೆವು’ ಎಂದು ಭೀತಿಯಿಂದ ದಿಕ್ಕಾಪಾಲಾಗಿ ಓಡುತ್ತವೆ.
ಆಗ ಆ ಹುಲಿಗೆ ಎದುರಾದ ನರಿಯೊಂದು ಅಚ್ಚರಿಯಿಂದ, ಅಯ್ಯಾ, ಸಮಸ್ತ ಪ್ರಾಣಿಗಳು ನಿನಗೆ ಹೆದರಿ ಓಡುತ್ತವೆ. ಆದರೆ ನೀನೇ ಹೆದರಿ ಓಡುತ್ತಿದ್ದೀಯಾ! ನಿಂತು ವಿಷಯವೇನೆಂದು ಹೇಳು. ನಾನಿದ್ದೇನೆ. ಅಂಜಬೇಡ ಎನ್ನುತ್ತದೆ. ನರಿಯ ಮಾತಿನಿಂದ ಹುಲಿ ಸ್ವಲ್ಪ ಧೈರ್ಯಗೊಂಡು ನಡೆದುದೆಲ್ಲವನ್ನು ಹೇಳಿ, ನನ್ನನ್ನು ಹಿಡಿಯಲು ಗಂಧರ್ವನು ಬರುತ್ತಾನೆ ಎಂದು ಭಯಗೊಳ್ಳುತ್ತದೆ. ನರಿಯು ಮಾನವನು ಬಲು ಬುದ್ಧಿವಂತಿಕೆಯನ್ನು ಉಪಯೋಗಿಸಿದ್ದಾನೆ. ಪ್ರಾಣಭಯದಿಂದ ಕೆಳಗೆ ಬಿದ್ದವನು ಸಾಯುತ್ತಾನಲ್ಲಾ ಎಂದು, ಮರದ ಮೇಲಿದ್ದವನು ಚಮತ್ಕಾರದಿಂದ ಕೂಗಿದ ಮಾತ್ರಕ್ಕೆ, ನೀನು ಕಾಲಿಗೆ ಬುದ್ಧಿ ಹೇಳುವುದೆ? ನಿನ್ನ ಧೈರ್ಯಕ್ಕೆ ಬೆಂಕಿ ಬೀಳಲಿ. ತೋರಿಸು ಮನುಷ್ಯಾಧಮನ. ನಿನ್ನಿಂದಲೇ ಆತನನ್ನು ಕೊಲ್ಲಿಸುತ್ತೇನೆ ಎಂದು ಭರವಸೆ ನೀಡುತ್ತದೆ.
ಮೇಲಿಂದ ಧುಮುಕಿ, ತನ್ನನ್ನೇ ಮುಂಚಿತವಾಗಿ ಹಿಡಿಯೆಂದು ಕೂಗಿದವನು ಮನುಷ್ಯ ಮಾತ್ರದವನಲ್ಲ. ಎಂದು ಹೆದರಿ ಬರಲೊಪ್ಪದ ಹುಲಿಯನ್ನು, ನರಿ ನಾನು ಮುಂದೆ ಹೋಗುತ್ತೇನೆ. ನನ್ನ ಹಿಂದೆ ನೀನು ಬಾ ಎಂದು ಧೈರ್ಯ ತುಂಬಿ ಹಿಂದಕ್ಕೆ ಕರೆದುಕೊಂಡು ಬರುತ್ತದೆ.
ಇತ್ತ, ಹುಲಿಗಳೆಲ್ಲಾ ದೂರವಾದ ಮೇಲೆ, ನಾಪಿತನು ಮರದಿಂದ ಇಳಿದು, ಪ್ರಜ್ಞೆ ತಪ್ಪಿದ್ದ ಹಾರುವನನ್ನು ಸಂತೈಸಿ ಅಯ್ಯಾ ದಾರಿ ಒಳ್ಳೆಯದಲ್ಲ, ಬರಬೇಡಿ ಎಂದರೂ ಕೇಳಲಿಲ್ಲ. ಇಷ್ಟು ಧೈರ್ಯವಿಲ್ಲದಿದ್ದರೆ ಗತಿಯೇನು? ಕೆಳಗೆ ಹುಲ್ಲು ಇದ್ದುದರಿಂದ ಕೈಕಾಲು ಮುರಿಯಲಿಲ್ಲ! ಸಾಕಿನ್ನು ದೇವರ ಸೇವೆ. ನಡೆಯಿರಿ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೊರಟಿರುತ್ತಾನೆ. ಆಗ ಎದುರಿಗೆ ನರಿಯೂ ಹುಲಿಯೂ ಬರುತ್ತವೆ. ತಕ್ಷಣ ನಾಪಿತನಿಗೆ ’ನರಿ ಕಾಡಿನ ಪ್ರಾಣಿಗಳಲ್ಲಿ ಮಹಾಬುದ್ಧಿಶಾಲಿಯಾದುದು. ಸರ್ವಸತ್ವಗಳಲ್ಲಿ ಮಹಾಸತ್ವಶಾಲಿಯಾದುದು ಹುಲಿ. ಇವೆರಡೂ ಒಂದಾಗಿ ಬಂದ ಮೇಲೆ ನಮ್ಮನ್ನ ದೇವರೇ ಕಾಪಾಡಬೇಕು. ಆದರೂ ಪ್ರಯತ್ನ ಮಾಡಿ ನೋಡೋಣ’ ಎಂದು ನರಿಯನ್ನು ಕುರಿತು, ಎಲವೋ ಕಳ್ಳನರಿಯೇ ಮೂರು ದಿನದೊಳಗಾಗಿ ಐದು ಹುಲಿಗಳನ್ನು ತಂದು ಒಪ್ಪಿಸುವೆನೆಂದು ಹೇಳಿ, ಪ್ರತಿಜ್ಞೆ ಮಾಡಿದ್ದ ನೀನು, ಇಂದು ನೆಪಕ್ಕಾಗಿ ಒಂದು ಬಡಕಲು ಹುಲಿಯನ್ನು ಹಿಡಿದು ತಂದಿದ್ದೀಯಲ್ಲಾ? ಎಂದು ಜೋರಾಗಿ ಆರ್ಭಟಿಸುತ್ತಾ, ನೆಲದಲ್ಲಿದ್ದ ಕಲ್ಲುಗಳನ್ನು ತೆಗೆದು ನರಿಯತ್ತ ಬೀರಲಾರಂಭಿಸಿತ್ತಾನೆ. ಆಗ ಹುಲಿಯು ’ಆಹಾ! ನರಿಯು ಮೋಸದಿಂದ ಗಂದರ್ವನಿಗೆ ನನ್ನನ್ನು ಒಪ್ಪಿಸಲು ಕರೆತಂದಿದೆಯಲ್ಲಾ! ವಂಚನೆಯನ್ನರಿಯದೆ ಈ ಪಾಪಿಯನ್ನು ನಂಬಿ ಕೆಟ್ಟೆ. ಇನ್ನೇನು ಗತಿ?’ ಎಂದು ಹಿಂದಿರುಗಿ ಓಡಿ ಕಾಡಿನಲ್ಲಿ ಮರೆಯಾಗುತ್ತದೆ. ನಾಪಿತನ ಕಲ್ಲಿನ ಹೊಡೆತಕ್ಕೆ ಸಿಕ್ಕಿದ ನರಿ ಸಾಯುತ್ತದೆ. ನಾಪಿತ ಆ ಬ್ರಾಹ್ಮಣನನ್ನು ಎಳೆದುಕೊಂಡು ಊರು ಸೇರುತ್ತಾನೆ.

* ಸುಮಾರು ೩೦-೩೫ ವರ್ಷಗಳ ಹಿಂದೆ, ಬಾಲ್ಯದಲ್ಲಿ ನನ್ನ ಅಜ್ಜನಿಂದ ಕೇಳಿದ್ದ ಜಾನಪದ ಕಥೆ ಹಾಗೂ ಈಗ ಪಠ್ಯಪುಸ್ತಕವೊಂದರಲ್ಲಿ ಸೇರಿರುವ ೧೮-೧೯ನೆಯ ಶತಮಾನದ ಯಾದವಕವಿಯ ’ಕಲಾವತೀಪರಿಣಯ’ದ ’ಚತುರನ ಚಾತುರ್ಯ’ ಎಂಬ ಉಪಕಥೆ ಇವೆರಡೂ ಒಂದೇ ಆಗಿವೆ! ಜಾನಪದ ಕಥೆಯೊಂದನ್ನು ಯಾದವಕವಿ ತನ್ನ ಕೃತಿಯೊಳಗೆ ಬಳಸಿಕೊಂಡನೆ? ಅಥವಾ ನನ್ನ ಅಜ್ಜ ಕಲಾವತೀ ಪರಿಣಯದ ಈ ಕಥೆಯನ್ನು ಓದಿದ್ದರೆ ಅಥವಾ ಕೇಳಿದ್ದರೆ? ಕಥೆಯ ಸ್ವರೂಪವನ್ನು ಗಮನಿಸಿದರೆ ನನ್ನ ಮೊದಲಿನ ಅನುಮಾನವೇ ಸರಿಯೆನ್ನಿಸುತ್ತದೆ. ಆ ಕಥೆಯ ಹೊಸಗನ್ನಡ ಸಂಗ್ರಹಾನುವಾದವೇ ಈ ಕಥೆ. 

(ಫಬ್ರವರಿ 2014ರ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕಥೆ)