Monday, October 05, 2009

ಕವಿಚಕ್ರವರ್ತಿಯಾಗಿ ರನ್ನ: ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 3

ಸುದೀರ್ಘ ಪಯಣವಾದರೂ ರನ್ನನಿಗೆ ಬೇಸರವಾಗಲಿಲ್ಲ. ಜೊತೆಯಲ್ಲಿ ಅತ್ತಿಮಬ್ಬೆ ಜೈನಧರ್ಮದ ತತ್ವಗಳನ್ನು, ಆಚಾರ್ಯಪುರುಷರ ಬಗೆಗಿನ ಕಥಗೆಳನ್ನು ಹೇಳುತ್ತಾ ನಡೆಯುತ್ತಿದ್ದಳು. ಹೀಗೆ ದಾರಿ ಸಾಗುವಾಗಲೇ ರನ್ನನ ತಲೆಯಲ್ಲಿ ಮಹಾಕಾವ್ಯವೊಂದರ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದವು. ಗುರು ಅಜಿತಸೇನಾಚಾರ್ಯರು ನೆನಪಿಗೆ ಬರುತ್ತಿದ್ದರು. ಪಂಪನ ಆದಿಪುರಾಣ ಕಣ್ಣಮುಂದೆ ಬರುತ್ತಿತ್ತು. ತಾನೂ ಒಬ್ಬ ತೀರ್ಥಂಕರನ ಚರಿತ್ರೆಯನ್ನು ಆಧರಿಸಿದ ಮಹಾಕಾವ್ಯವೊಂದನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದ. ಸ್ವತಃ ಅತ್ತಿಮಬ್ಬೆಯೇ ಆ ಕಾವ್ಯಕ್ಕೆ ಸ್ಫೂರ್ತಿಯಾಗಿದ್ದಳು.
ಒಂದುದಿನ ಅತ್ತಿಮಬ್ಬೆಯ ನೇತೃತ್ವದಲ್ಲಿ ತೈಲಪ ಚಕ್ರವರ್ತಿಯ ಬೇಟಿಯಾಯಿತು. ತೈಲಪನು ಪರಮಸಂತೋಷದಿಂದಲೇ ರನ್ನನಿಗೆ ಸ್ವಾಗತ ಬಯಸಿದ. ಯಾವ ತೊಂದರೆಯೂ ಇಲ್ಲದೆ ರನ್ನನಿಗೆ ರಾಜಾಶ್ರಯ ದೊರೆಯಿತು. ಚಕ್ರವರ್ತಿಯ ಸೌಜನ್ಯ, ಕವಿಜನಪ್ರೀತಿ, ಅತ್ತಿಮಬ್ಬೆಯ ಬೆಗಗಿನ ಗೌರವ ಇವೆಲ್ಲವೂ ರನ್ನನಲ್ಲಿ ತೈಲಪನ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಕೆಲವೇ ದಿನಗಳಲ್ಲಿ ‘ಅಜಿನಾಥಪುರಾಣ’ ಎಂಬ ಮಹಾಕಾವ್ಯದ ರಚನೆಗೆ ರನ್ನ ಕೈಹಾಕಿದ. ಯಾವುದೇ ಆತಂಕವಿಲ್ಲದ ರಾಜಾಶ್ರಯ, ರಾಜನ ಸ್ನೇಹ-ಪ್ರೀತಿ, ಅತ್ತಿಮಬ್ಬೆಯ ಮಾತೃವಾತ್ಸಲ್ಯ, ಮನೆಯಲ್ಲಿ ತನ್ನಿಚ್ಛೆಯನರಿತು ನಡೆಯುವ ‘ದೇಶಭಕ್ತಿ ಪತಿಭಕ್ತಿಗಳೇ ಆಭರಣಗಳಾಗಿ ಧರ್ಮದಲ್ಲಿ ನಿಷ್ಠೆಯುಳ್ಳವರಾದ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಪತ್ನಿಯರು, ರಾಯ ಮತ್ತು ಅತ್ತಿಮಬ್ಬೆ (ಚಾಮುಂಡರಾಯನ ನೆನಪಿಗಾಗಿ ಮಗನಿಗೆ ರಾಯ ಎಂದೂ, ಅತ್ತಿಮಬ್ಬೆಯ ನೆನಪಿಗಾಗಿ ಮಗಳಿಗೆ ಅತ್ತಿಮಬ್ಬೆ ಎಂದೂ ಹೆಸರಿನ್ನಿಟ್ಟಿದ್ದನು) ಎಂಬ ಮುದ್ದಾದ ಮಕ್ಕಳು ಇವರೆಲ್ಲರ ನಡುವೆ ರನ್ನನ ಕಾವ್ಯರಚನೆ ಯಾವುದೇ ಆತಂಕವಿಲ್ಲದೆ ನಡೆದು ದಡ ಮುಟ್ಟಿತು. ಒಂದು ಶುಭದಿನ ರಾಜಸಭೆಯಲ್ಲಿ ಲೋಕಾರ್ಪಣವೂ ಆಯಿತು.
ಕೆಲವೇ ದಿನಗಳಲ್ಲಿ ಅದರ ಪ್ರತಿಗಳನ್ನು ಮಾಡಿಸಿ ಎಲ್ಲಡೆ ಹಂಚಲಾಯಿತು. ಕಾವ್ಯ ಜನಪ್ರಿಯವೂ ಆಯಿತು. ರನ್ನನಂತಹ ಮಹಾಕವಿಯು ನನ್ನ ಆಸ್ಥಾನದಲ್ಲಿರುವುದು ನನಗೆ ಹೆಮ್ಮೆಯೆಂದು ಭಾವಿಸಿದ ತೈಲಪ ರನ್ನನಿಗೆ ‘ಕವಿಚಕ್ರವರ್ತಿ’ ಎಂಬ ಬಿರುದನ್ನು ದಯಪಾಲಿಸಿ ಸನ್ಮಾನಿಸಿದನು. ತನ್ನ ಕಾವ್ಯಕ್ಕೆ ದೊರೆತ ಜನಮನ್ನಣೆ, ಅದರ ರಚನೆಗೆ ದೊರೆತ ತೈಲಪನ ಸಹಕಾರ, ಪ್ರೋತ್ಸಾಹ ನಂತರ ತೈಲಪನ ಔದಾರ್ಯ ಇವೆಲ್ಲವೂ ರನ್ನನ ಮನಸ್ಸಿನಲ್ಲಿ ನೆಲೆಯೂರಿದ್ದವು. ತೈಲಪ ಮಹಾಚಕ್ರವರ್ತಿಯಾಗಿ, ಮಹಾಪುರುಷನಾಗಿ ಕಂಡಿದ್ದ. ಒಂದು ಮಾಹಕೃತಿ ಭುವನದ ಭಾಗ್ಯದಿಂದಾಗಿ ಒಬ್ಬ ಕವಿಯಿಂದ ಜನ್ಮ ತಾಳುತ್ತದೆ. ಅದು ಮಹಾಘಟನೆ. ಅಂತಹ ಮಹಾಘಟನೆ ಸಂಭವಿಸುವುದಕ್ಕೆ ತೈಲಪನಂತಹ ಸಾಹಿತ್ಯಪ್ರಿಯ, ಕವಿಜನಪ್ರಿಯ ಚಕ್ರವರ್ತಿಗಳ ಕೊಡುಗೆ ಅನನ್ಯ. ತೈಲಪನ ಮಗನಾದ ಸತ್ಯಾಶ್ರಯನೂ ಅಷ್ಟೆ, ರನ್ನನಲ್ಲಿ ಗೌರವ ಪ್ರೀತಿಯುಳ್ಳವನಾಗಿದ್ದನು. ತೈಲಪ ತನಗೆ ಮಾಡಿದ ಸಹಾಯಕ್ಕಾಗಿ ರನ್ನ ತೈಲಪನ ಹೆಸರಿನಲ್ಲಿ ‘ಚಕ್ರೇಶ್ವರ ಚರಿತ್ರೆ’ ಪ್ರಶಸ್ತಿಕಾವ್ಯವನ್ನೂ ಬರೆದು ಪ್ರಸ್ತುತ ಪಡಿಸಿದ.
ಹೀಗೆ ತನ್ನ ಸಾಹಿತ್ಯಿಕ ಹಾಗೂ ಸಾಂಸಾರಿಕ ಜೀವನವನ್ನು ಯಶಸ್ವಿಯಾಗಿ ಕಳೆಯುತ್ತಿದ್ದ ರನ್ನನಿಗೆ, ಚಾಲುಕ್ಯ ಚಕ್ರವರ್ತಿಗಳ ಇತಿಹಾಸವೂ ಆಸಕ್ತಿದಾಯಕ ವಿಷಯವಾಗಿ ಕಂಡಿತು. ಬದಾಮಿಯಲ್ಲಿ ಪ್ರಾರಂಭವಾಗಿ, ರಾಷ್ಟ್ರಕೂಟರಿಂದ ಹಿನ್ನಲೆಗೆ ಸರಿದು, ಮತ್ತೆ ಕಲ್ಯಾಣದಲ್ಲಿ ತೈಲಪನ ಮುಖೇನ ಪುನರುತ್ತಾನಗೊಂಡಿತ್ತು ಚಾಲುಕ್ಯ ವಂಶ. ತೈಲಪನ ಮಗ ಸತ್ಯಾಶ್ರಯ ಇರಿವೆಬೆಡಂಗನೆಂದೆ ಖ್ಯಾತಿವೆತ್ತು ತನ್ನ ತಂದೆಯ ನಂತರ ಚಕ್ರವರ್ತಿಯಾಗಿದ್ದ. ತಂದೆಗೆ ತಕ್ಕ ಮಗನಾಗಿದ್ದ, ತಾನೂ ಕವಿಜನಪ್ರಿಯನಾಗಿದ್ದ. ಸಾಹಸಪ್ರಿಯನೂ ಆಗಿದ್ದ. ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ತನ್ನ ರಾಜ್ಯವನ್ನು ವಿಸ್ತರಿಸಿ ಬಲಪಡಿಸಿದ್ದ. ರನ್ನನಲ್ಲಿ ಮೊದಲಿನಂತೆ ಗೌರವವಾಗಿ ನಡೆದುಕೊಳ್ಳುತ್ತಿದ್ದ. ಆ ಸಂದರ್ಭದಲ್ಲಿ ರನ್ನನಿಗೆ ಸತ್ಯಾಶ್ರಯನನ್ನು ನಾಯಕನನ್ನಾಗಿ ಮಾಡಿಕೊಂಡು ಕಾವ್ಯವೊಂದನ್ನು ಬರೆಯುವ ಆಸೆ ಮೊಳಕೆಯೊಡೆಯಿತು. ಪೂರ್ವದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಪೊನ್ನನ ಭವನೈಕರಾಮಾಭ್ಯುದಯ ಕಾವ್ಯಗಳು ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದವು. ಅದರಂತೆ ರನ್ನನೂ ತನ್ನ ಆಶ್ರಯದಾತನ ಮಗನೂ, ಸ್ವತಃ ಆಶ್ರಯದಾತನೂ ಆದ ಸತ್ಯಾಶ್ರಯನನ್ನು ಮಹಾಭಾರತದ ಸಾಹಸಭೀಮನಿಗೆ ಹೋಲಿಸಿ, ಸಾಹಸಭೀಮವಿಜಯ ಎಂಬ ಮಹಾಕಾವ್ಯದ ರಚನೆಗೆ ಕೈಹಾಕಿದ. ಆದರೆ ಸಂಪ್ರದಾಯವನ್ನು ಮುರಿದು ತನ್ನದೇ ಆದ ಕಾವ್ಯಶೈಲಿಯನ್ನು ರನ್ನ ರೂಢಿಸಿಕೊಂಡಿದ್ದ. ಆಗಲೂ ಪಂಪನ ವಿಕ್ರಮಾರ್ಜುನ ವಿಜಯ ಮಹಾಕಾವ್ಯ ಜನಪ್ರಿಯತೆಯ ತುಟ್ಟತುದಿಯಲ್ಲಿತ್ತು. ಕೇವಲ ನಾಯಕ ಅರ್ಜುನನ ಬದಲು ಭೀಮ ಎಂದಾದರೂ, ಒಟ್ಟು ಕಥೆ ಮಹಾಭಾರತವೇ ಆಗುತ್ತಿತ್ತು. ಪಂಪನ ಭಾರತ ಜನಪ್ರಿಯತೆಯ ತುಟ್ಟತುದಿಯಲ್ಲಿದ್ದಾಗ ತಾನೂ ಅದನ್ನೆ ಮರುಸೃಷ್ಟಿ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂಬುದನ್ನು ಮನಗಂಡಿದ್ದ ರನ್ನ ಸಂಕ್ಷಿಪ್ತವೂ ನವ್ಯವೂ ಆದ ಶೈಲಿಯನ್ನು ಮೈಗೂಡಿಸಿಕೊಂಡು ಸಿಂಹಾವಲೋಕನ ಕ್ರಮದಲ್ಲಿ ‘ಸಾಹಸಭೀಮವಿಜಯ’ವನ್ನು ಬರೆದು ಮುಗಿಸಿದ. ಇಡೀ ಸಾರಸ್ವತ ಲೋಕವೇ ಕವಿಚಕ್ರವರ್ತಿಯಾದ ರನ್ನನ ಈ ಕೃತಿಯನ್ನು ಸಂಭ್ರಮದಿಂದ ಸ್ವಾಗತಿಸಿತು.
ಅಂದಿನ ಕಾಲಕ್ಕೆ ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದ ಬಳೆಗಾರ ವೃತ್ತಿಯ ಕುಟುಂಬದಲ್ಲಿ ಹುಟ್ಟಿ, ಸ್ವಪ್ರಯತ್ನದಿಂದ ಪ್ರಕಾಶಿತನಾಗಿ, ಕನ್ನಡ ಜನತೆಯ ಪ್ರೀತಿಯ ಮಗನಾಗಿ ಬೆಳೆದ ರನ್ನಮಯ್ಯ, ಮಹಾಕವಿಯಾಗಿ, ಕವಿಚಕ್ರವರ್ತಿಯಾಗಿ, ಕವಿರತ್ನನಾಗಿ, ಕವಿಮುಖಚಂದ್ರನಾಗಿ ನೂರುವರ್ಷಗಳ ತುಂಬು ಜೀವನ ನಡೆಸಿ ಅಸ್ತಂಗತನಾಗಿದ್ದಾನೆ. ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚತುರ್ಮುಖ, ಉಭಯಕವಿ ಮೊದಲಾದ ಬಿರುದುಗಳನ್ನು ಧರಿಸಿ, ಕನ್ನಡ ಕಾವ್ಯಲೋಕದಲ್ಲಿ ಅಮರನಾಗಿದ್ದಾನೆ. ಹಲವಾರು ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾನೆ. ಆತನ ‘ಸಾಹಸಭೀಮವಿಜಯ’ ಗದಾಯುದ್ಧ’ ಎಂಬ ಹೆಸರಿನಲ್ಲಿ ಚಿರನೂತನವಾಗಿ ಇಂದಿಗೂ ಕಾವ್ಯಾಸಕ್ತರನ್ನು ಆಕರ್ಷಿಸುತ್ತಾ ಕೆರಳಿಸುತ್ತಾ ಉಳಿದುಬಂದಿದೆ.

ಮೊದಲ ಭಾಗ ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 1

ಎರಡನೇ ಭಾಗ ಶ್ರವಣಬೆಳಗೊಳದಲ್ಲಿ ರನ್ನ - ಮಹಾಕವಿ ರನ್ನನ ಜೀವನ ಚರಿತ್ರೆ; ಕಂತು - 2

11 comments:

sweet hammu said...

ರನ್ನನ ಬಗ್ಗೆ ತುಂಬ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

AntharangadaMaathugalu said...

ಸತ್ಯ ಸಾರ್...
ಮುಗಿದೇಹೋಯಿತಾ ಮೂರೇ ಕಂತಿನಲ್ಲಿ... ತುಂಬಾ ಚೆನ್ನಾಗಿತ್ತು. ನಾನಿನ್ನೂ ತುಂಬಾ ವಿವರವಾಗಿ ಇನ್ನೊಂದೆರಡು ಕಂತುಗಳಾದರು ಬರಬಹುದೆಂದಿದ್ದೆ...! ಹೀಗೇ ಮಹಾ ಕವಿಗಳ ಹಾಗೂ ಕಾವ್ಯಗಳ ಪರಿಚಯ ನಮ್ಮ ಸಾಧಾರಣ ಮಟ್ಟಕ್ಕೆ ಅರ್ಥವಾಗುವಂತೆ ಮಾಡಿಕೊಡಿ ಸಾರ್.. ನಿಮ್ಮ ಶೈಲಿ ಓದಕ್ಕೆ ಸುಲಭವಾಗಿ, ಚೆನ್ನಾಗಿದೆ... ಧನ್ಯವಾದಗಳು...

ಶ್ಯಾಮಲ

shivu.k said...

ಡಾ. ಸತ್ಯನಾರಾಯಣ ಸರ್,

ರನ್ನ ಬಗ್ಗೆ ಒಂದು ಸುಂದರ ವಿಸ್ತಾರವಾದ ವಿವರಗಳೊಂದಿಗೆ ಆತನ ಚರಿತ್ರೆಯನ್ನು ಪ್ರಸ್ತುತಪಡಿಸಿದ್ದೀರಿ. ಜೊತೆಗೆ ಆತನ ಬರೆದ ಪುಸ್ತಕಗಳ ವಿವರಗಳನ್ನು ಕೊಟ್ಟಿದ್ದೀರಿ..

ಉತ್ತಮ ಮಾಹಿತಿಯುಳ್ಳ ಲೇಖನಕ್ಕೆ ಧನ್ಯವಾದಗಳು.

PARAANJAPE K.N. said...

ನಿಮ್ಮ ಕವಿ-ಕಾವ್ಯ ಪರಿಚಯ ಮಾಲಿಕೆ ಮಾಹಿತಿಯುಕ್ತವಾಗಿದೆ. ಇನ್ನಷ್ಟು ಕನ್ನಡ ಕವಿಗಳ ಜೀವನ-ಸಾಧನೆ ಮೇಲೆ ಬೆಳಕು ಚೆಲ್ಲಿ.

ಸುಮ said...

ಸರ‍್ ರನ್ನನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು. ಹೀಗೆ ಇನ್ನಷ್ಟು ಮಹಾಕವಿಗಳ ಪರಿಚಯ ಮಾಡಿಕೊಡಿ ಸರ‍್.

ಸಾಗರದಾಚೆಯ ಇಂಚರ said...

ರನ್ನನ ಬಗೆಗಿನ ಸುಂದರ ವಿವರಣೆಗೆ ಧನ್ಯವಾದಗಳು , ಎಷ್ಟೋ ಸಂಗತಿ ತಿಳಿದೇ ಇರಲಿಲ್ಲ, ಒಳ್ಳೆಯ ಬರಹ

ಕ್ಷಣ... ಚಿಂತನೆ... said...

ಸರ್‍, ಕವಿ ರನ್ನನ ಬಗ್ಗೆ ಮೂರು ಕಂತುಗಳಲ್ಲಿ ಬಂದ ಈ ಪರಿಚಯ ಲೇಖನ ತುಂಬಾ ಮಾಹಿತಿಯುಳ್ಳದ್ದು. ಶಾಲೆಯಲ್ಲಿ ರನ್ನನ ಬಗ್ಗೆ ಪಾಠವಿತ್ತು. ಆ ಶಾಲಾ ದಿನಗಳನ್ನು ನೆನಪಾಗುತ್ತಿತ್ತು, ಈ ನಿಮ್ಮ ಲೇಖನ ಓದುವಾಗ. ಹೀಗೆಯೇ ಇನ್ನಿತರ ಕವಿಗಳ ಪರಿಚಯವೂ ಮೂಡಿಬರಲಿ.

ಧನ್ಯವಾದಗಳು.

ಚಂದ್ರು

Mahanthesh said...

ತಮ್ಮ ಸರಳ ಭಾಷೆ ಎಂಥವರನ್ನು ಆಕರ್ಷಿಸದೆ ಇರದು. ತಮ್ಮ ಲೇಖನ ಬಹಳ ಉಪಯುಕ್ತ. ಕನ್ನಡಿಗರಾಗಿ ನಮ್ಮ ಕವಿಗಳು, ಲೇಖಕರು, ಸಾಹಿತಿಗಳ ಬಗ್ಗೆ ತಿಳಿದುಕೊಂಡಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಓದುಗರನ್ನು ಓದುವಂತೆ ಪ್ರೇರೆಪಿಸುವುದು ಎಷ್ಟು ಕಷ್ಟದ ಕೆಲಸವೆಂದು ನಾನು ಬಲ್ಲೆ. ತಮ್ಮಂತಹ ಬರಹಗಾರರಿಂದ ಕನ್ನಡ ಇನ್ನೂ ಉತ್ತುಂಗಕ್ಕೆ ಏರಲಿ ಎಂಬ ಆಶಯ ನನ್ನದು. ತಮಗೆ ಓದುಗರು ಸ್ಫೂರ್ತಿಯನ್ನು ತುಂಬಲಿ. ತಮ್ಮಿಂದ ಇನ್ನೂ ಹೆಚ್ಚಿನ ಲೇಖನಗಳು ಹೊರಹೊಮ್ಮಲಿ.

Me, Myself & I said...

ಒಂದು ಪ್ಯಾರ ಓದಿದ್ರೆ ಸಾಕು, ಬರಹದಲ್ಲಿ ಶ್ರದ್ದೆ ತಾನಾಗೇ ಬಂದು ಬಿಡುತ್ತೆ. ಆಮೇಲೆ ಉಳಿದ ಭಾಗವನ್ನ ಆ ಶ್ರದ್ದೆನೇ ಓದಿಸ್ಕೊಂಡು ಹೋಗುತ್ತೆ ಸಾರ್. ಅಷ್ಟೊಂದು ಸರಳ ಭಾಷೆ ನಿಮ್ಬ್ದು.

ಮಂಸೋರೆ said...

ರನ್ನನ ಬಗ್ಗೆ ಒಳ್ಳೆಯ ಮಾಹಿತಿ ... ಒಳ್ಲೆಯ ವಿಶಯ ನಿಮ್ಮಿಂದ ತಿಳಿಯಿತು...

ತಿರು ಶ್ರೀಧರ said...

ಸಾರ್ ನಿಮ್ಮ ರನ್ನನ ವಿವರಣೆ ತುಂಬಾ ಚೆನ್ನಾಗಿದೆ. Facebookನಲ್ಲಿ ಕನ್ನಡ ಸಂಪದ ಎಂಬ ನನ್ನ ಪುಟದಲ್ಲಿ ಇದರ ಲಿಂಕ್ ನೀಡುತ್ತಿದ್ದೇನೆ. ನಿಮ್ಮ ಒಪ್ಪಿಗೆ ಇದೆ ಎಂದು ಆಶಿಸುತ್ತೇನೆ.