Monday, February 06, 2012

ದೇವರು ರುಜು ಮಾಡಿದ ಸಿಬ್ಬಲುಗುಡ್ಡೆ!

ಜಡವೆಂಬುದೆ ಇಲ್ಲ; ಚೇತನವೇ ಎಲ್ಲ ಎಂದು ಸೃಷ್ಟಿಯ ಸರ್ವದರಲ್ಲಿಯೂ ಚೇತನವನ್ನು ಕಾಣುವ ಕವಿಯ ಮನೋಧರ್ಮ ನೂರಾರು ಕವಿತೆಗಳಲ್ಲಿ ವ್ಯಕ್ತವಾಗಿದೆ. ಹುಲ್ಲಿನೆಸಳ ತುದಿಯ ಹನಿಯನ್ನು ತೃಣಸುಂದರಿ ಮೂಗಿನ ಮುತ್ತಿಗೆ ಹೋಲಿಸಿದಂತೆ ಮಲೆನಾಡಿನ ಮಳೆಗಾಲದಲ್ಲಿ ತೊಯ್ಯುವ ಸಹ್ಯಾದ್ರಿ ಪರ್ವತ ಶಿಖರಗಳನ್ನು ಪಟ್ಟಾಭಿಷಕ್ತರಾಗುತ್ತಿರುವ ರಾಮ ಸೀತೆಯರಿಗೆ ಹೋಲಿಸುವಲ್ಲಿಯೂ, ಕಿರುಉಪೆಮಗಳನ್ನು ಸೃಷ್ಟಿಸಿದಂತೆ ಮಹೋಪಮೆಗಳನ್ನು ಸೃಷ್ಟಿಸುವಲ್ಲಿಯೂ ಕವಿಪ್ರತಿಭೆ ಹಲವಾರು ಸಂಧರ್ಭಗಳಲ್ಲಿ ಬೆರಗುವೊಡೆದಿರುವುದನ್ನು ಕಾಣಬಹುದು.

ಈ ಹಿನ್ನೆಲೆಯಲ್ಲಿ ಸಿಬ್ಬಲು ಗುಡ್ಡೆ ಮತ್ತು ದೇವರು ರುಜು ಮಾಡಿದನು ಈ ಎರಡು ಕವಿತೆಗಳು ಸಾಕ್ಷಿಯಾಗಿವೆ. ಸಿಬ್ಬಲುಗುಡ್ಡೆಯ ಹೊಳೆಯಲ್ಲಿ ಈಜುವಾಗಲೇ ದೇವರ ರುಜು ಕವಿಗೆ ಕಂಡಿದ್ದು!

ತೀರ್ಥಹಳ್ಳಿಯಿಂದ ಸುಮಾರು ಎರಡೂವರೆ ಮೈಲಿ ದೂರದಲ್ಲಿ ಮೇಳಿಗೆ ಎಂಬ ಹಳ್ಳಿ. ಅಲ್ಲಿಂದ ಒಂದೂವರೆ ಮೈಲಿ ಕಾಡಿನ ಕಾಲುದಾರಿಯಲ್ಲಿ ನಡೆದು ಹೋದರೆ ಸಿಬ್ಬಲುಗುಡ್ಡೆ ಸಿಕ್ಕುತ್ತದೆ. ಈ ಸ್ಥಳ ಹಳ್ಳಿಯೂ ಅಲ್ಲ, ಊರೂ ಅಲ್ಲ. ಅಲ್ಲಿ ಇರುವುದೊಂದೇ ಕಟ್ಟಡ: ಗುಡಿಸಲಿನಂತೆ ತೋರುವ ಗಣೇಶನ ಗುಡಿ. ಅಲ್ಲಿಯ ಗುಡಿಯ ಅರ್ಚಕ. ಬೇರೆ ಮನೆಗಳಿಲ್ಲ, ಜನವಿಲ್ಲ. (ಈಗ ದೇವಾಲಯ ನಿರ್ಮಾಣವಾಗಿದೆ). ನವಿಲುಕಲ್ಲಿನಿಂದ ಸಿಬ್ಬಲುಗುಡ್ಡೆಗೆ ಹೋಗಬಹುದು.

ಗುಡಿಯ ಹಿಂದೆ ನಿಬಿಡ ನಿರ್ಜನಾರಣ್ಯಗಳ ನಡುವೆ ಹರಿಯುವ ತುಂಗೆ. ಆಚೆ ದಡದಲ್ಲಿ ತುಸು ಹಳದಿ ಬಣ್ಣದ ಮಳಲ ರಾಶಿ, ಅದರಂಚಿನಲ್ಲಿ ಹಚ್ಚ ಹಸುರಿನ ವನಪಂಕ್ತಿ. ಗುಡಿಯ ಹಿಂಭಾಗದ ನೀರಿನಲ್ಲಿ ನಿರ್ಭೀತಿಯಿಂದ ಚಲಿಸುವ ದೊಡ್ಡ ದೊಡ್ಡ ಮೀನುಗಳು. ಈ ದೇವರ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ. ಅವು ವಿಘ್ನೇಶನ ರಕ್ಷೆಯಲ್ಲಿ ಬೆಳೆದು ವಿಹರಿಸುತ್ತಿವೆ. ಮಲೆನಡುವಣ ಹೊಳೆಯ ಸೊಬಗಹುದಾಣ ಸಿಬ್ಬಲುಗುಡ್ಡೆಯನ್ನು ಕುರಿತು ಅದೇ ಹೆಸರಿನ ಸಾನೆಟ್ಟೊಂದು ೨೯-೪-೧೯೩೬ರಲ್ಲಿ ರಚಿತವಾಗಿದೆ.
ಮೇಲೆ ಬಾನುಕ್ಕುನೀಲಿಯಲಿ ತೇಲುತಿದೆ ರವಿ;
ಸುತ್ತುಂ ದಿಗಂತಲೀನಮನಂತ ವನಪಂಕ್ತಿ
ರಾಜಿಸಿದೆ, ಹೊಳೆಗೆ ಹಸುರಂಚಾಗಿ. ಸುಖ ಶಾಂತಿ
ಜೊತೆಗೂಡಿ ಪರಿವಂತೆ ಸೌಂದರ‍್ಯಮತ್ತ ಕವಿ.
ಹೃದಯದಲಿ, ಹಬ್ಬಿದ ಮಳಲುಹಳದಿಯನಪ್ಪಿ
ಪ್ರವಹಿಸಿದೆ ತುಂಗಾ ಸಲಿಲ ನೀಲಿಮಾಪ್ರೀತಿ
ಪ್ರೇಮ ಸಂಗೀತಮಂ ಪಾಡಿ . . . . ಏಂ ನಿರ್ಭೀತಿ
ಮೀಂಗಳಿಗೆ! . . . . 
ಇದು ಸಿಬ್ಬಲುಗುಡ್ಡೆಯ ಚಿತ್ರಣ. ಈ ಚಿತ್ರದೊಳಗೆ ಕವಿಯೂ ಸೇರಿದ್ದಾನೆ. ನಿಸರ್ಗದೊಳಗೆ ತಾನೂ ಸೇರಿಹೋದಾಗಲೇ ಕಬ್ಬಿಗನಿಗಾಗಲೀ ಸಹೃದಯನಿಗಾಗಲೀ ಅದರ ವಿಸ್ಮಯ ತೆರೆದುಕೊಳ್ಳುವುದು. ಮುಂದಿನ ಭಾಗದಲ್ಲಿ ಕವಿ ಸಂಪೂರ್ಣ ಪರವಶರಾಗಿ ಹೋದ ಚಿತ್ರಣ ಬರುತ್ತದೆ.
ರಮ್ಯತೆಗೆ ತಿಲಕವಿಟ್ಟಂತೊಪ್ಪಿ
ಅದೊ ಹಾರಿ ಬರುತಲಿವೆ ನೀರ‍್ಕಾಗೆ ಬೆಳ್ಳಕ್ಕಿ,
ವನಪಟದ ಭಿತ್ತಿಯಲಿ ನೂರು ಕರಿಬಿಳಿ ಚುಕ್ಕಿ,
ಪ್ರಾಣವೇ ವರ್ಣಚಿತ್ರಂ ಬರೆಯುತಿರುವಂತೆ
ಪ್ರಾಣಮಯವಾಗಿ! ದರ್ಶನಕೆ ಕಬ್ಬಿಗನ ಮೈ
ಹೊಳೆಯುವಂತೆ, ನೀರಂತೆ, ಬಾನಂತೆ, ಬನದಂತೆ
ಪುಲಕಿತಂ, ಪರವಶಂ, ಪಸುಳೆವೋಲ್ ತಕ್ಕತೈ!
ರಮ್ಯತೆಗೆ ತಿಲಕವಿಟ್ಟಂತೊಪ್ಪಿ ಅದೊ ಹಾರಿ ಬರುತಲಿವೆ ನೀರ‍್ಕಾಗೆ ಬೆಳ್ಳಕ್ಕಿ, ವನಪಟದ ಭಿತ್ತಿಯಲಿ ನೂರು ಕರಿಬಿಳಿ ಚುಕ್ಕಿ - ಈ ದೃಶ್ಯ ಅಲ್ಲಿ ಸರ್ವಸಾಮಾನ್ಯವಾಗಿತ್ತು ಅನ್ನಿಸುತ್ತದೆ. ೨೮-೧-೧೯೩೭ರ ರಚನೆಯಾಗಿರುವ ದೇವರು ರುಜು ಮಾಡಿದನು ಕವಿತೆಗೆ ಕಾರಣವಾಗಿರುವುದು ಇದೇ ದೃಶ್ಯ! ಈ ದೃಶ್ಯವನ್ನು ಕವಿ ಮತ್ತೆ ಮತ್ತೆ ಕಂಡಿದ್ದಾರೆ. ಕವಿಯ ಕಮಲಯಾನದ ಕಲಾವಿಮಾನ ಬಂದಿಳಿಯುವ ಒಂದು ವಿಮಾನ ನಿಲ್ದಾಣ ಎನ್ನಬಹುದು ಸಿಬ್ಬಲುಗುಡ್ಡೆಯ ಈ ದೃಶ್ಯ!

ಸೂರ್ಯೋದಯ, ಸೂರ್ಯಾಸ್ತ, ಪ್ರಕೃತಿ ವೀಕ್ಷಣೆ, ಬೇಟೆಯಂತೆಯೇ ಕವಿಗಿದ್ದ ಮತ್ತೊಂದು ಆಸಕ್ತಿಯೆಂದರೆ ಈಜುವುದು. ಅದರಲ್ಲೂ ತುಂಗಾನದಿಯಲ್ಲಿ ಈಜುವುದೆಂದರೆ ಕವಿಗೆಲ್ಲಿಲ್ಲದ ಪ್ರೀತಿ. ಆದಿನ ಕವಿ ನೀರಿನಲ್ಲಿ ಮನದಣಿಯೆ ಈಜಿ, ಕೊನೆಯಲ್ಲಿ ನೀರಿನಲ್ಲಿ ಮೇಲ್ಮುಖವಾಗಿ ಮಲಗಿ ತೇಲುತ್ತಿರುತ್ತಾರೆ. ಆಗ ಕಣ್ಣೀಗೆ ಬೀಳುತ್ತದೆ ನೀಲಿಯಾಕಾಶ. ಅದಕ್ಕೆ ಆಧಾರಕೊಟ್ಟು ನಿಂತಿರುವಂತೆ ಕಾಣುವ ಹಸಿರು ವನರಾಜಿ. ಆ ನೀಲಿಯಾಕಾಶದ ಹಿನ್ನೆಲೆಯಲ್ಲಿ ಆಗಾಗ ಹಕ್ಕಿಗಳ ಪಂಕ್ತಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿರುತ್ತವೆ. ಅವುಗಳನ್ನು ಬೆಸೆದಿದ್ದ ರೇಖಾವಿನ್ಯಾಸ ಕವಿಗೆ ದೇವರು ಮಾಡಿದ ರುಜುವಿನಂತೆ ಕಾಣುತ್ತದೆ. ಕವಿ ರಸವಶನಾಗಿಬಿಡುತ್ತಾನೆ. ಆ ರಸ ಸಮಾಧಿಯಿಂದೇಳುವಷ್ಟರಲ್ಲಿ, ಕವಿ ಕಂಡ ದರ್ಶನದ ವಾಗ್ರೂಪವೇ ಈ ಕವಿತೆ.
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!
ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!
ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು.
ಹೂಬಿಸಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ‍್ತೊದಲು
ರಂಜಿಸೆ ಇಕ್ಕೆಲದಲಿ ಹೊಮ್ಮಳಲು
ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲೆಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!
ಇದು ದೇವರ ರುಜುವನ್ನು ಕವಿ ಕಂಡಾಗ ಇದ್ದ ಬಾಹ್ಯ ಜಗತ್ತು! ಆದರೆ ಆ ಬಾಹ್ಯ ಜಗತ್ತು ಸಚೇತವಾಗಿತ್ತು. ಆಕಾಶದ ನೀಲಿನಗೆ, ಹಕ್ಕಿಗಳಿಂಚರ, ಬಂಡೆಗಳ ನಡುವೆ ಹರಿಯುತ್ತಿರುವ ನೀರಿನ ಮಂಜುಳ ನಿನಾದ, ನದಿ, ನದಿಯ ಮರಳು ಎಲ್ಲವೂ ಸಚೇತನವಾಗಿಯೇ ಇದ್ದವು. ಇವೆಲ್ಲವೂ ಸಚೇತನವಾಗಿಯೇ ಇರುವಂತೆ ಮಾಡಿರುವ ಪರಾತ್ಪರವಸ್ತು ಯಾವುದೋ ಅದೇ ಪರಾತ್ಪರ ತನ್ನನ್ನು ತಾನು ಪ್ರಕಟಗೊಳಿಸಿಕೊಳ್ಳುತ್ತಿರುವುದಾಗಿ ಹೇಳಿಕೆಯೋಂದನ್ನು ಇತ್ತು ಆ ತನ್ನ ಮಧುಸೌಂದರ್ಯದ ಮಧುರ ಪ್ರಣಾಳಿಕೆಗೆ ಬೆಳ್ಳಕ್ಕಿಯ ಹಾರಾಟದ ಪಂಕ್ತಿಯ ನೆಪದಲ್ಲಿ ರುಜು ಹಾಕಿದಂತೆಯೂ ಕವಿ ದರ್ಶನಕ್ಕೆ ಹೊಳೆಯುತ್ತದೆ (ಎಸ್.ವಿ.ಪಿ). ಚಿರಚೇತನ ತಾನಿಹೆನೆಂದು ಹೇಳುತ್ತಿರುವಂತೆ, ತಾನು ರಚಿಸಿದ ಕಲಾಕೃತಿಗೆ ತನ್ನ ಸಹಿಯನ್ನು ಹಾಕುವ ಕಲೆಗಾರನಂತೆ ದೇವರು ಇಲ್ಲಿ ತಾನು ಸಚೇತನವಾಗಿರಿಸಿರುವ ಸುಂದರ ಪ್ರಕೃತಿಯ ಚಿತ್ರಕ್ಕೆ ತನ್ನ ಸಹಿಯನ್ನು ಹಾಕುತ್ತಾನೆ; ಹಾರುವ ಹಕ್ಕಿಗಳ ಪಂಕ್ತಿಯ ನೆಪದಲ್ಲಿ!
ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,
ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!
ಈ ಕವಿತೆಯ ಬಗ್ಗೆ ಎಸ್.ವಿ.ಪಿ.ಯವರ ಮನದುಂಬಿದ ಮಾತುಗಳು ಹೀಗಿವೆ: ಈ ಕವನದಲ್ಲಿ ಕುವೆಂಪು ಅವರ ಕಾವ್ಯಕಲೆ ವಿಶ್ವತಾಸಂಸ್ಪರ್ಶಿಯೂ ಬ್ರಹ್ಮದರ್ಶಿಯೂ ಆಗಿರುವುದನ್ನು ನಾವು ಕಾಣುತ್ತೇವೆ. ಇಂತಹ ಕವನಗಳಲ್ಲಿ ನಾವು ಪದಗಳನ್ನು ಕಾಣುವುದಿಲ್ಲ. ಸರಸ್ವತಿಯ ಚರಣಚಿಹ್ನೆಗಳನ್ನೆ ಕಾಣುತ್ತೇವೆ.

ನಾನು ಪದವಿ ತರಗತಿಯಲ್ಲಿದ್ದಾಗ ಈ ಕವನ ಪಠ್ಯಪುಸ್ತಕದಲ್ಲಿತ್ತು. ಅದನ್ನು ಪಾಠ ಮಾಡಲು ಪ್ರಾರಂಭಿಸುವ ಮೊದಲು ಟಿ.ಕೆ. ಶಿವಣ್ಣ ಎಂಬ ಪ್ರಾಧ್ಯಪಕರು, ಈ ಜಗತ್ತಿನಲ್ಲಿ ಎಷ್ಟೊಂದು ಜನರಿದ್ದಾರೊ ಅಷ್ಟೊಂದು ವೆರೈಟಿ ಸಹಿಗಳಿದ್ದಾವೆ. ಏನು ಚೆಂದ, ಏನು ಅಂದ! ಇನ್ನು ದೇವರ ರುಜು ಹೇಗಿದ್ದಿರಬಹುದು? ಹೇಗಿದ್ದರಿಬಹುದು ಎನ್ನುವುದಕ್ಕಿಂತ ದೇವರಿಗೊಂದು ರುಜುವನ್ನು ಕಲ್ಪಿಸಿರುವುದರಲ್ಲಿ ಹಾಗೂ, ಬಿಡಿಸಿದ ಚಿತ್ರದ ಮೂಲೆಯೊಂದರಲ್ಲಿ ಸಹಿ ಮಾಡುವ ಕಲಾವಿದನಂತೆ, ಸೃಷ್ಟಿಯೆಂಬ ಮಹದ್‌ಚಿತ್ರವನ್ನೇ ರಚಿಸಿದ ದೇವರೆಂಬ ಕಲೆಗಾರನ ಸಹಿಯ ಕಲ್ಪನೆಯಲ್ಲಿ ಕವಿಯ ಅನನ್ಯತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದ ಮಾತುಗಳು, ಇಂದಿಗೂ ಹಾರುವ ಹಕ್ಕಿಗಳನ್ನು ನೋಡಿದಾಗ ಮತ್ತೆ ಮತ್ತೆ ನೆಪಾಗುತ್ತವೆ.

1 comment:

ಮನದಾಳದಿಂದ............ said...

ಸತ್ಯ ಸರ್,
ನಿಜ ಸಿಬ್ಬಲುಗುಡ್ಡೆ ಸೌಂದರ್ಯದ ಬೀಡು. ಅಲ್ಲಿಯ ಮಂದಿರ, ಆ ನದಿ , ಮೀನುಗಳು.............
ಅದಕ್ಕೆ ಕಲಶದಂತೆ ರಾಷ್ಟ್ರ ಕವಿಯ ಸುಂದರ ಕವನ!

ಸಿಬ್ಬಲುಗುಡ್ಡೆಯ ಚಿತ್ರಣ ಮತ್ತು ಕವಿಯ ಕವನದ ವಿವರಣೆಗೆ ಧನ್ಯವಾದಗಳು.