ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ ಇನ್ನೊಬ್ಬರು ಇರುತ್ತಿದ್ದರು. ಎಲ್ಲೋ ಒಂದೆರಡು ಬಾರಿ ಏಳೆಂಟು ಜನರ ಗುಂಪು ಮಾಡಿಕೊಂಡು ಕಥೆ ಓದುವುದಕ್ಕೆ ಬಂದದ್ದನ್ನು ನೋಡಿದ್ದೇನೆ. ಅದಕ್ಕೇನೂ ಆತ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಊಟ, ತಿಂಡಿ, ಬೀಡಿಕಾಸು ಮಾತ್ರ. ಆದರೆ ಕರೆಸಿದ ಮನೆಯವರು ಕೊಟ್ಟರೆ ಬೇಡವೆನ್ನುತ್ತಿರಲಿಲ್ಲ.
ಆತ ಓದುತ್ತಿದ್ದ ಕಥೆಗಳಲ್ಲಿ ರಾಜಾ ವಿಕ್ರಮಾದಿತ್ಯ ಮತ್ತು ರಾಜಾ ಸತ್ಯವ್ರತ ಮಾತ್ರ ನನ್ನ ನೆನಪಿನಲ್ಲಿ ಉಳಿದಿವೆ. ಸ್ವಲ್ಪ ಹೆಣ್ಣಿನ ಧ್ವನಿಯಿದ್ದು ರಾಗವಾಗಿ ಕಥೆ ಓದುತ್ತಿದ್ದ. ಹಾಡುಗಳನ್ನು ದಮಡಿ ಬಡಿದುಕೊಂಡು ತಾಳಬದ್ಧವಾಗಿ ಹಾಡುತ್ತಿದ್ದ. ನಡುವೆ ಬರುತ್ತಿದ್ದ ಗದ್ಯವನ್ನೂ ಒಂದು ವಿಶಿಷ್ಟ ಲಯದಲ್ಲಿ ಹೇಳುತ್ತಿದ್ದ. ಗದ್ಯ ಕೊನೆಯಲ್ಲಿ 'ಹೇಳುತ್ತಿದ್ದಾರೆಂತೆನೀ...' ಎಂದು ದೀರ್ಘವಾಗಿ ರಾಗವೆಳೆಯುತ್ತಿದ್ದ. ಚಿಕ್ಕ ಹುಡುಗರಾಗಿದ್ದ ನಾವೆಲ್ಲರೂ ಅವನೊಟ್ಟಿಗೆ 'ಹೇಳುತ್ತಿದ್ದಾರೆಂತೆನೀ...' ಎಂದು ತಾರಕದಲ್ಲಿ ಕಿರುಚುತ್ತಿದ್ದೆವು.
ಅವನ ಈ ಶನಿಪ್ರಭಾವದ ಕಥೆಗಳಿಗಿಂತ, ನಡುವೆ ಆತ ಹೇಳುತ್ತಿದ್ದ ಉಪಕಥೆಗಳು ನನಗೆ ಬಹಳ ಇಷ್ಟವಾಗುತ್ತಿದ್ದವು. ಪ್ರತೀ ಕಥೆ ಹೇಳುವಾಗಲೂ, ಆ ಕಥೆಯಲ್ಲಿ ನಮ್ಮನ್ನೇ ಪಾತ್ರದಾರಿ ಮಾಡಿಕೊಳ್ಳುತ್ತಿದ್ದ. ಚಿಕ್ಕವನಾದ ನನ್ನನ್ನೇ ನಾಯಕನ ಪಾತ್ರದಲ್ಲಿ ಸೇರಿಸುತ್ತಿದ್ದ. ಈ ಉಪಕಥೆಗಳಲ್ಲಿ ಒಂದೆರಡು ಕಥೆಗಳು ಈಗಲೂ ನನ್ನ ಮನದಲ್ಲಿ ಅಚ್ಚಳಿಯದಂತೆ ನಿಂತುಬಿಟ್ಟಿವೆ. ಅವುಗಳನ್ನು ಮತ್ತೊಮ್ಮೆ ಯಾವಗಲಾದರೂ ಹೇಳುತ್ತೇನೆ.
ನಾವು ದೊಡ್ಡವರಾದಂತೆ ಈ ಕಥೆ ಕೇಳುವ ಹುಚ್ಚು ಕಡಿಮೆಯಾಯಿತೇ? ಅಥವಾ ಎಂಟನೇ ತರಗತಿಯಿಂದ ನನಗೊದಗಿ ಬಂದ ಹಾಸ್ಟೆಲ್ ಜೀವನದಲ್ಲಿ ನಿತ್ಯ ನನಗೆ ಸಿಗುತ್ತಿದ್ದ ಅತಿಮನರಂಜಕ ಘಟನೆಗಳಿಂದಾಗಿ ನಾನು ಇದರ ಬಗ್ಗೆ ಆಸಕ್ತಿ ಕಳೆದುಕೊಂಡೆನೇ, ಗೊತ್ತಾಗುತ್ತಿಲ್ಲ.
ಈ ಶಾಂತಣ್ಣ ಒಳ್ಳೆಯ ನಟನಾಗಿದ್ದ. ಊರಿನಲ್ಲಿ ಆಡುತ್ತಿದ್ದ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದ. ಕಲಾವತಿ ಕಲ್ಯಾಣ ಎಂಬ ಬಯಲುಸೀಮೆಯ ದೈತ್ಯಕುಣಿತದ ಯಕ್ಷಗಾನದಲ್ಲಿ ಕಲಾವತಿಯ ಪಾತ್ರ ಮಾಡಿದ್ದ. ಇನ್ನೊಮ್ಮೆ ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ. ಒಮ್ಮೆ ಮಾತ್ರ ರಾಜಾ ವಿಕ್ರಮಾದಿತ್ಯ ನಾಟಕದಲ್ಲಿ ವಿಕ್ರಮಾದಿತ್ಯನ ಪಾತ್ರ ಮಾಡಿ ಎಲ್ಲರಿಂದಲೂ 'ಭೇಷ್, ಶಾಂತಣ್ಣ ಗಂಡು ಪಾತ್ರವನ್ನೂ ಮಾಡಬಲ್ಲ' ಎಂದು ಹೊಗಳಿಸಿಕೊಂಡಿದ್ದ.
ಹುಟ್ಟಿನಿಂದ ಕುಂಬಾರ ಕುಲಕ್ಕೆ ಸೇರಿದ್ದ ಶಾಂತಣ್ಣ ಮಡಕೆ ಮಾಡುವುದನ್ನು ನಾನೆಂದೂ ನೋಡಲಿಲ್ಲ. ಶಾಂತಣ್ಣ ಮಾತ್ರ ಏಕೆ? ಆ ಊರಿನಲ್ಲಿದ್ದ ಸುಮಾರು ಐವತ್ತು ಕುಂಬಾರ ಕುಟುಂಬಗಳಲ್ಲಿ ಮಡಕೆ ಮಾಡುತ್ತಿದ್ದುದು ಎರಡು ಕುಟುಂಬಗಳು ಮಾತ್ರ! ಉಳಿದವರೆಲ್ಲರಿಗೂ ಕೃಷಿಯೇ ಜೀವನಾಧಾರವಾಗಿತ್ತು. ಈ ಶಾಂತಣ್ಣನಿಗೂ ನಾಲ್ಕಾರು ಎಕರೆ ಹೊಲ ತೋಟ ಇತ್ತು. ತನ್ನ ಹೊಲದಲ್ಲಿ ಚೆನ್ನಾಗಿಯೇ ದುಡಿಮೆ ಮಾಡುತ್ತಿದ್ದ. ಊರೊಟ್ಟಿನ ಕೆಲಸಗಳಲ್ಲಿ ಎಂದೂ ಮುಂದೆ ಇರುತ್ತಿದ್ದ.
ಇಂತಹ ಶಾಂತಣ್ಣನ ಬದುಕು ಬದಲಾದುದು ಒಂದು ವಿಪರ್ಯಾಸ. ಬೇರೆ ಊರಿನ ಹಣವೊಂತರೊಬ್ಬರು, ಊರಿನಲ್ಲಿ ಸಾಮಿಲ್ಲು ತೆರೆಯಲು ಬಂದಾಗ. ಅವರು ಸೂಕ್ತವಾದ ಜಾಗ ಹುಡುಕುತ್ತಿದ್ದರು. ರಸ್ತೆಯ ಪಕ್ಕದಲ್ಲಿದ್ದ ಶಾಂತಣ್ಣನ ಒಂದು ಹೊಲ ಅತ್ಯಂತ ಸೂಕ್ತವಾಗಿ ಅವರಿಗೆ ಕಂಡಿತು. ಶಾಂತಣ್ಣನಿಗೆ ಅಷ್ಟೊತ್ತಿಗಾಗಲೇ ಹದಿನೈದು ಹದಿನಾರರ ಮಗನಿದ್ದ. ಆತ ಎಸ್ಸೆಸ್ಸೆಲ್ಸಿಗೆ ಮಣ್ಣು ಹೊತ್ತು ಹೊಲದಲ್ಲಿ ಅಪ್ಪನೊಂದಿಗೆ ದುಡಿಯುತ್ತಿದ್ದ. ಸಾಮಿಲ್ಲಿಗೆ ಬೇಕಾದ ಅರ್ಧ ಎಕರೆ ಜಮೀನು ಕೊಟ್ಟರೆ, ಆತ ಹುಟ್ಟಿನಿಂದ ಕಾಣದಷ್ಟು ದುಡ್ಡು, ಮತ್ತು ಒಬ್ಬರಿಗೆ ಕೆಲಸ ಕೊಡುವುದಾಗಿ ಬಂದ ಆಮಿಷವನ್ನು ಆತ ತಡೆಯದಾದ. ಮಗ ಹೊಲದಲ್ಲಿ ದುಡಿಯುವುದಾದರೆ ನಾನೇಕೆ ಸಾಮಿಲ್ಲಿನಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡು, ಅಲ್ಲಿಯೇ ನೆಲಸಿ ಸಂಪಾದನೆ ಮಾಡಬಾರದು. ಒಬ್ಬ ಮಗನಲ್ಲದೇ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ ನೆಲೆ ಕಾಣಿಸಲು ಅದು ಅತ್ಯಂತ ಸುಲಭದ ಮಾರ್ಗ ಎಂದು ಆತನಿಗೆ ಅನ್ನಿಸಿರಬೇಕು. ಆತ ಒಪ್ಪಿದ.
ಆರೇ ತಿಂಗಳಿನಲ್ಲಿ ಅಲ್ಲಿ ಸಾಮಿಲ್ಲು ಪ್ರತಿಷ್ಠಾಪನೆಯಾಯಿತು. ಕಾವಲುಗಾರನಾಗಿ, ಕೆಲಸಗಾರನಾಗಿ, ಮ್ಯಾನೇಜರನಾಗಿ ಶಾಂತಣ್ಣ ಅಲ್ಲಿ ಪ್ರತಿಷ್ಠಾಪನೆಗೊಂಡ. ಸಾಮಿಲ್ಲಿನ ಯಜಮಾನ ಹಗಲೆಲ್ಲಾ ಅಲ್ಲಿದ್ದು ರಾತ್ರಿ ತನ್ನ ಊರಿಗೆ ಹೋಗುತ್ತಿದ್ದ. ಮೊದಲು ಡ್ರೈವರ್ ಬೇರೆಯೇ ಇದ್ದ. ಶಾಂತಣ್ಣ ನಿಧಾನವಾಗಿ ಆ ಕೆಲಸವನ್ನು ಕಲಿತಿದ್ದರಿಂದ ಸಾಮಿಲ್ಲಿನ ಡ್ರೈವರ್ ಕೆಲಸವೂ ಆತನ ಹೆಗಲಿಗೆ ಬಂತು. ಯಜಮಾನ ಎರಡು ಮೂರು ದಿನಗಳ ಕಾಲ ಈ ಕಡೆ ತಲೆ ಹಾಕದಿದ್ದರೂ ಶಾಂತಣ್ಣ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟ.
ಕೈಯಲ್ಲಿ ದುಡ್ಡು ಆಡಲಾರಂಭಿಸಿತು. ಬೀಡಿಯ ಬದಲು ಸಿಗರೇಟು ಬಂತು. ಆತನ ಮುರುಕಲು ಮನೆ ಒಳ್ಳೆಯ ಮರಮುಟ್ಟುಗಳಿಂದ ಶೃಂಗಾರವಾಯಿತು. ಅರ್ಧ ರೇಟಿಗೆ ಆತ ಕೊಡುತ್ತಿದ್ದ ಸಣ್ಣಪುಟ್ಟ ಮರಕ್ಕಾಗಿ ಸ್ನೇಹಿತರು ಹೆಚ್ಚಾದರು. ಶಾಂತಣ್ಣನ ಆಸೆ ಬೆಳೆಯುತ್ತಲೇ ಹೋಯಿತು. ಕೇವಲ ಆಸೆ ಬೆಳೆದಿದ್ದರೆ ಅಂತಹ ಪ್ರಮಾದವೇನೂ ಆಗುತ್ತಿರಲಿಲ್ಲ. ಒಂದು ದಿನ ಯಜಮಾನನಿಗೆ ಲಾಸ್ ಆಗಿ, ಅದಕ್ಕೆ ಶಾಂತಣ್ಣನೇ ಕಾರಣ ಎಂದು ಕೆಲಸದಿಂದ ಬಿಡಿಸಬಹುದಿತ್ತು, ಅಷ್ಟೆ. ಆದರೆ ಆದದ್ದು ಬೇರೆಯೇ!
ಸಾಮಿಲ್ಲಿನ ಬಳಿಯೇ ಜಮಾಯಿಸುತ್ತಿದ್ದ ಜನ, ದುರಾಸೆಗೆ ಬಿದ್ದು ಆತನಿಗೆ ಕುಡಿತದ ಹುಚ್ಚು ಹತ್ತಿಸಿಬಿಟ್ಟರು. ಮೊದಲು ಅವರೇ ಹಣ ಕೊಟ್ಟು ಕುಡಿಸುತ್ತಿದ್ದರು. ಒಮ್ಮೆ ಅದಕ್ಕೆ ದಾಸನಾದ ಶಾಂತಣ್ಣ ನಂತರ ತನ್ನ ದುಡ್ಡಿನಿಂದಲೇ ಎಲ್ಲರಿಗೂ ಕುಡಿಸಿ ತಾನೂ ಕುಡಿದು ತೂರಾಡುತ್ತಿದ್ದ. ಐದಾರು ವರ್ಷದಲ್ಲಿ ಮನೆ ಮಕ್ಕಳನ್ನು ಒಂದು ಹಂತಕ್ಕೆ ತಂದಿದ್ದ ಶಾಂತಣ್ಣ ಮುಂದಿನ ಮೂರೇ ವರ್ಷದಲ್ಲಿ ಊರಿನ ಅತ್ಯಂತ ದೊಡ್ಡ ಕುಡುಕನಾಗಿದ್ದ. ದಿನದ ಇಪ್ಪತ್ತನಾಲ್ಕು ಗಂಟೆಯೂ ಆತ ಅಮಲಿನಲ್ಲೇ ಇರುತ್ತಿದ್ದ. ಈ ಕುಡಿತ ಆತನನ್ನು ಜೀವಂತ ಶವ ಮಾಡಿಬಿಟ್ಟಿತು. ಆತ ಜೀವಂತವಾಗಿಯೇ ಒಣಗಿಸಿದ ಮನುಷ್ಯನಂತೆ ಕಾಣುತ್ತಿದ್ದ. ಎರಡು ಬೆರಳಿನ ಗಾತ್ರ ಆತನ ತೊಡೆ ತೋಳುಗಳಿದ್ದವು ಎಂದರೆ ಕುಡಿತ ಆತನ ಮೇಲೆ ಬೀರಿದ ಪರಿಣಾಮದ ಅರಿವು ನಿಮಗಾದೀತು!
ಆತನ ದುರದೃಷ್ಟಕ್ಕೆ ಸಾಮಿಲ್ಲು ಮುಚ್ಚಿಹೋಯಿತು. ಕೈಲ್ಲಿದ್ದ ದುಡ್ಡು ಕಾಸು ಖರ್ಚಾಗಿ ಹೋಯಿತು. ಕೊನೆಗೆ ಕಂಡಕಂಡವರಲ್ಲಿ ಕೈನೀಡಿ ಬೇಡಿ ಕುಡಿಯುವ ಹಂತಕ್ಕೆ ಇಳಿದುಬಿಟ್ಟ. ಕುಡಿತ ಆತನನ್ನು ಕೊಲ್ಲುತ್ತಿರುವುದರ ಜೊತೆಗೆ ಆತನ ನೈತಿಕತೆಯನ್ನೂ, ಆತ್ಮಸ್ಥೈರ್ಯವನ್ನೂ, ಆತನಲ್ಲಿದ್ದ ಕಲೆಯನ್ನೂ ಕೊಂದು ಹಾಕಿಬಿಟ್ಟಿತು.
ಹೀಗಿದ್ದ ಶಾಂತಣ್ಣನನ್ನು ಒಮ್ಮೆ ಮುಖಾಮುಖಿಯಾಗುವ ಪ್ರಸಂಗ ಮೂರು ತಿಂಗಳ ಹಿಂದೆ ನನಗೊದಗಿ ಬಂತು. ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಆತ ಬಂದ. ನಾನು ನಿಂತಿದ್ದ ಅಂಗಡಿಯ ಮಾಲೀಕ ಸೀನ ಉರುಫ್ ಶ್ರೀನಿವಾಸನ ಬಳಿ ಬಂದು ಸಿಗರೇಟು ಕೇಳಿದ. ಅಷ್ಟರಲ್ಲಿ ಆಗಲೇ ಆತ ಕುಡಿದು ತೂರಾಡುತ್ತಿದ್ದ. ಸೀನ ಮೊದಲು ನಿರಾಕರಿಸಿದರೂ ಕೊನೆಗೆ ಹೋಗಲಿ ಎಂದು ಒಂದು ಸಿಗರೇಟು ಕೊಟ್ಟ. ಅದಕ್ಕೆ ಬೆಂಕಿ ತಾಗಿಸಿ ಕೊಂಡು ಅಂಗಡಿಯ ಮುಂದೆ ಇದ್ದ ಹಾಸುಗಲ್ಲಿನ ಮೇಲೆ ತನ್ನ ಒಣಗಿದ ಕೈ ಕಾಲುಗಳನ್ನು ಬಿಟ್ಟುಕೊಂಡು ಕುಳಿತು ರಾಜ ಟೀವಿಯಲ್ಲಿ ಸಿಗರೇಟು ಸೇದಿದ. ಆ ಭಂಗಿಯಲ್ಲಿ ಆತನನ್ನು ಕಂಡು ಆತನ ವಿಕ್ರಮಾದಿತ್ಯ ಪಾರ್ಟು ನೆನಪಾಯಿತು. ನನ್ನ ಮೊಬೈಲ್ ಕ್ಯಾಮೆರಾದಿಮದ ಪೋಟೊ ತೆಗೆದುಕೊಂಡೆ, ಆದರೆ ಆತನ ಭಂಗಿ ಬದಲಾಗಿತ್ತು!
ನನಗೆ ಅಯ್ಯೋ ಅನ್ನಿಸಿ, ಅವನಿಗೊಂದು ಬಿಸ್ಕೆಟ್ ಪ್ಯಾಕ್ ಕೊಡಿಸುವ ಯೋಚನೆ ಬಂತು. ಸೀನನಿಗೆ ಕೇಳಿದೆ. ಅದಕ್ಕೆ ಆತ, 'ನೀವು ಬಿಸ್ಕೆಟ್ ಕೊಟ್ಟರೆ, ಅದರಲ್ಲೇ ನಿಮಗೆ ಹೊಡೆದರೂ ಆಶ್ಚರ್ಯವಿಲ್ಲ. ಇಲ್ಲಾ ಬಾಯಿಗೆ ಬಂದಂತೆ ಬಯ್ಯುತ್ತಾನೆ. ಒಂದು ಪಕ್ಷ ಮನಸ್ಸು ಬದಲಾಯಿಸಿ ಅದನ್ನು ತೆಗೆದುಕೊಂಡರೂ, ಮತ್ತೆ ನನ್ನ ಅಂಗಡಿಗೇ ಅದನ್ನು ತಂದು, ಅದರ ಬದಲಿಗೆ ಸಿಗರೇಟು ಪಡೆದು ಸೇದುತ್ತಾನೆ. ಸುಮ್ಮನೆ ಯಾಕೆ ಕೊಡುತ್ತೀರ?' ಎಂದು ಬಿಟ್ಟ. ನನಗೆ ಸ್ವಲ್ಪ ಆತಂಕವಾದರೂ, ಏನಾದರಾಗಲಿ, ನನ್ನ ಬಾಲ್ಯದಲ್ಲಿ ನನಗೆ ಹೀರೋ ಆಗಿ ಕಂಡಾತನಿಗೆ ಒಂದು ಬಿಸ್ಕೆಟ್ ಪ್ಯಾಕ್ ಕೊಡಲೇಬೇಕು ಎನ್ನಿಸಿ, ಅಂಗಡಿಯಿಂದ ಪಡೆದು, ಶಾಂತಣ್ಣನಿಗೆ ಕೊಡುತ್ತಾ 'ಇದನ್ನು ತಿಂದು ನೀರು ಕುಡಿ, ನಡೆದಾಡಲು ಶಕ್ತಿಯಾದರೂ ಬರುತ್ತದೆ.' ಎಂದೆ.
ಬಗ್ಗಿಸಿದ ತಲೆಯನ್ನು ನಿಧಾನವಾಗಿ ಮೇಲೆತ್ತಿ ನನ್ನನ್ನು ದೃಷ್ಟಿಯಿಟ್ಟು ನೋಡಿದ. ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಚರ್ಮ ಒಣಗಿಹೋಗಿತ್ತು. ಇನ್ನೇನು ಆತ ನನ್ನನ್ನು ಬಯ್ಯಬಹುದು, ಇಲ್ಲಾ ಬಿಸ್ಕೆಟ್ ಪ್ಯಾಕ್ ಕಿತ್ತು ಎಸೆಯಬಹುದು ಎಂಬ ಆಲೋಚನೆಯಲ್ಲಿ ನಾನು ಮುಳುಗಿದ್ದರೂ ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಆತನಿಗೆ ಏನನ್ನಿಸಿತೋ, ಒಮ್ಮೆಲೆ ಬಿಸ್ಕೆಟ್ ಪ್ಯಾಕ್ ಕಿತ್ತುಕೊಂಡ. 'ಓಹೋ ರಾಜಕುಮಾರ, ನೀನು ರಾಜಕುಮಾರ. ನನಗೆ ಗೊತ್ತು. ನಾನೇ ನಿನ್ನನ್ನು ರಾಜಕುಮಾರ ಮಾಡಿದ್ದೆ. ಏಳುಸಮುದ್ರದ ಆಚೆಯ ರಾಜಕುಮಾರಿಯ ನಿನಗೆ ಮದುವೆ ಮಾಡಿಸಿದ್ದೆ. ರಾಜಕುಮಾರ ನೀನು ಚೆನ್ನಾಗಿರು, ಚೆನ್ನಾಗಿರು' ಎಂದು ಏನೇನೂ ಹೇಳುತ್ತಾ, ನಿಧಾನವಾಗಿ ಬಿಸ್ಕೆಟ್ ಪ್ಯಾಕ್ ತೆರೆದು ತಿನ್ನತೊಡಗಿದ. ಅರ್ಧ ಅವನ ಬಾಯಿಗೆ ಅರ್ಧ ನೆಲಕ್ಕೆ ಬಿಸ್ಕೆಟ್ ಆಹಾರವಾಗತೊಡಗಿತು!
ಸೀನ ಆಶ್ಚರ್ಯದಿಂದ ನೋಡಿದ. ಏನೋ ಹೇಳಲು ಅಥವಾ ಕೇಳಲು ಆತ ಕಾತರನಾಗಿದ್ದ. ನಾನು ಸುಮ್ಮನಿರುವಂತೆ ಕಣ್ಸನ್ನೆ ಮಾಡಿದೆ. ಆತ ಸುಮ್ಮನಾದ. ನನ್ನ ಬಸ್ಸು ಬಂತು. ನಾನು ಅದನ್ನೇರಿ ಹೊರಟೆ.
ಮೊನ್ನೆ ಊರಿಗೆ ಹೋಗಿದ್ದಾಗ, ಶಾಂತಣ್ಣ ಸತ್ತು ಹೋಗಿದ್ದ ಸುದ್ದಿ ತಿಳಿಯಿತು. ನಾನು ಹೋದ ದಿನವೇ ಆತನ ತಿಥಿ! ನಾನು ಸಂಜೆ ವಾಪಸ್ಸು ಬರಲು ಬಸ್ ನಿಲ್ದಾಣಕ್ಕೆ ಬರುವಾಗ ದಾರಿಯಲ್ಲಿ ಒಬ್ಬ (ಆತ ನಮ್ಮ ಪಕ್ಕದ ತೋಟದವನು) ಕುಡಿದು ರೋಧಿಸುತ್ತಿದ್ದ. 'ನನ್ನ ಗೆಳೆಯ, ನನ್ನ ಮಿತ್ರ ಶಾಂತಣ್ಣ ಸತ್ತೋಗಿಬಿಟ್ಟ, ನಾವೇನು ಇಲ್ಲಿ ಶಾಶ್ವತವಾ? ಅವನ ಹಿಂದೆ ನಾವೂ ಹೋಗುವುದೇ' ಎಂದು ವಿಕಾರವಾಗಿ ರೋಧಿಸುತ್ತಾ ಹೇಳುತ್ತಿದ್ದ. ಆಶ್ಚರ್ಯವೆಂದರೆ ಆತ ನನ್ನನ್ನೂ ಸೇರಿಸಿಕೊಂಡು 'ನಾವು ನಾವು' ಎಂದು ಹೇಳುತ್ತಿದ್ದ!
ಶಾಂತಣ್ಣನೇನೋ ಸತ್ತು ಶಾಂತವಾಗಿದ್ದ! ಆದರೆ ಇಂತಹ ಕುಡುಕರು ಆತನನ್ನು ಹಿಂಬಾಲಿಸಲು ಮಾತ್ರ ಪೈಪೋಟಿ ಮಾಡುತ್ತಲೇ ಇರುತ್ತಾರೆ ಎನ್ನಿಸಿ, ನನ್ನ ನಡಿಗೆಯನ್ನು ಚುರುಕುಗೊಗಿಸಿದೆ.
Thursday, March 31, 2011
Monday, March 28, 2011
'ಸರಸ್ವತಿ : ವಿಸ್ಮಯ ಸಂಸ್ಕೃತಿ' ಕೃತಿ ಲೋಕಾರ್ಪಣೆ ಸಮಾರಂಭದ ಚಿತ್ರಗಳು 27.03.2011
ಚಿತ್ರಗಳ ಕೊಡುಗೆ: ಕೆ. ಶಿವು ಮತ್ತು ಕೆ. ಶ್ಯಾಮ್
Friday, March 25, 2011
ಸರಸ್ವತಿ ಕೃತಿಯುವತಿಗೆ ಹೆಚ್.ಎಸ್.ವಿ. ಮುನ್ನುಡಿತಿಲಕ
ನಮ್ಮಲ್ಲಿ ಸಾಹಿತ್ಯ ಮತ್ತು ಸಂಶೋಧನೆಗಳು ಸಮ ಸಮಾನಂತರವಾಗಿ ಮತ್ತು ಸಮೃದ್ಧವಾಗಿ ಪ್ರವಹಿಸುತ್ತಿದ್ದ ಕಾಲವೊಂದಿತ್ತು. ಈಗೀಗ ಸಾಹಿತ್ಯದ ಹೊನಲು ಸಮೃದ್ಧವಾಗಿಯೇ ಇರುವುದಾದರೂ ಸಂಶೋಧನೆಯ ಹೊನಲು ಮೊದಲ ಉಕ್ಕು ಕಳೆದುಕೊಂಡ ಹಾಗಿದೆ. ಅದಕ್ಕೆ ಬಹುಮುಖ್ಯ ಕಾರಣ ಸಂಶೋಧಕ ಗಳಿಸಬೇಕಾದ ಪರಿಣಿತಿ, ನಡೆಸಬೇಕಾದ ನಿರಂತರ ವ್ಯಾಸಂಗ ಮತ್ತು ತ್ವರಿತವಾಗಿ ಸಿಕ್ಕಬಹುದಾದ ಯಶಸ್ಸಿನತ್ತ ಗಮನಹರಿಸದ ನಿತಾಂತ ಶ್ರದ್ಧೆ ಹೊಸಪೀಳಿಗೆಯಲ್ಲಿ ಕಡಿಮೆಯಾಗುತ್ತಿರುವುದು. ಇದು ಕನ್ನಡ ಸಾಹಿತ್ಯ ಸಂಸ್ಕೃತಿಯ ಒಟ್ಟಂದದ ಮುನ್ನಡೆಗೆ ತಕ್ಕಮಟ್ಟಿನ ತೊಡಕೆಂದೇ ನಮ್ಮ ಹಿರಿಯ ವಿದ್ವಾಂಸರು ಭಾವಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೊಸ ಪೀಳಿಗೆಯ ಕೆಲವರಾದರೂ ಸಂಶೋಧನೆಯತ್ತ ಮನಸ್ಸು ಹರಿಬಿಡುತ್ತಿರುವುದು ಸಮಾಧಾನ ಪಡಬಹುದಾದ ಸಂಗತಿಯಾಗಿದೆ. ಶ್ರೀ ಬಿ.ಆರ್. ಸತ್ಯನಾರಾಯಣ ತಮ್ಮ ಸರಸ್ವತಿ ಕುರಿತ ಸರ್ವಾಂಗಕೋಶದ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ತೊಡಗಿಕೊಂಡಿರುವುದು ನಿಜಕ್ಕೂ ಸಾಹಿತ್ಯಾಸಕ್ತರಿಗೆ ಸಂತೋಷ ನೀಡುವ ಸಂಗತಿಯಾಗಿದೆ.
ಸರಸ್ವತಿ, ಜ್ಞಾನಕೋಶ ಮಾದರಿಯ ಕೃತಿಯಾಗಿದೆ. ಇಂಥ ಕೃತಿಯನ್ನು ರಚಿಸುವುದಕ್ಕೆ ಒದಗಿಬಂದ ಪ್ರೇರಣೆ ಮತ್ತು ಕಾರಣವನ್ನು ಕುರಿತು ಲೇಖಕರೇ ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಸರಸ್ವತಿಯ ಬಗೆಗೆ ಇದುವರೆಗೆ ನಡೆದಿರುವ ಮಹತ್ವವೆನ್ನಬಹುದಾದ ಅಧ್ಯಯನಗಳು ಕೂಡಾ ತಮ್ಮಷ್ಟಕ್ಕೆ ತಾವು ಸೀಮಿತಾರ್ಥದಲ್ಲಿ ಪರಿಪೂರ್ಣವಾದರೂ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ವಿಷಯಕ್ಕೆ ಬಂದಾಗ ಅಪೂರ್ಣವಾಗಿರುವುದನ್ನು ಗಮನಿಸಿದ್ದೇವೆ. ಕನ್ನಡದಲ್ಲಿಯಂತೂ ಸರಸ್ವತಿಯನ್ನು ಕುರಿತು ಒಂದು ಸಮಗ್ರವೆನ್ನಬಹುದಾದ ಅಧ್ಯಯನವಾಗಿಯೇ ಇಲ್ಲ. ಸುಮಾರು ಎರಡು ಸಾವಿರ ವರ್ಷಗಳಿಂದ ಜೀವಂತವಿರುವ, ಒಂದು ಜೀವಂತ ಸಂಸ್ಕೃತಿ-ಕನ್ನಡ ಸಂಸ್ಕೃತಿ-ಯ ಹಿನ್ನೆಲೆಯಲ್ಲಿ ಅಂಥ ಸಂಶೋಧನೆಯನ್ನು ನಡೆಸುವುದೇ ಪ್ರಸ್ತುತ ಅಧ್ಯಯನದ ಮೂಲ ಉದ್ದೇಶ. ಲೇಖಕರ ಈ ಮೂಲ ಉದ್ದೇಶವು ಈ ಕೃತಿಯಲ್ಲಿ ಸಮರ್ಥವಾಗಿ ಸಾಧಿತವಾಗಿದೆ ಎಂಬುದು ಅಭಿಮಾನಪಡಬಹುದಾದ ಸಂಗತಿಯಾಗಿದೆ. ಲೇಖಕರೇ ಸೂಚಿಸಿರುವಂತೆ, ಕನ್ನಡ ಸಂಸ್ಕೃತಿಯ ಅವಿಭಾಜ್ಯ ಆಕರಗಳಾದ ಸಾಹಿತ್ಯ, ಜಾನಪದ, ಶಾಸನ, ಶಿಲ್ಪ, ಚಿತ್ರಕಲೆ ಮೊದಲಾದವುಗಳ ಹಿನ್ನೆಲೆಯಲ್ಲಿ ಅಧ್ಯಯಯನವನ್ನು ನಡೆಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಸರಸ್ವತಿಯ ಮೂಲ ಸ್ವರೂಪವನ್ನು ಅರಿಯಲು ವೈದಿಕ, ಜೈನ, ಮತ್ತು ಬೌದ್ಧ ಮತಗಳ ಸರಸ್ವತಿ ಮತ್ತು ವಿಶ್ವಸಂಸ್ಕೃತಿಯಲ್ಲಿ (ಅದನ್ನು ಅನ್ಯದೇಶೀಯ ಸಂಸ್ಕೃತಿಗಳಲ್ಲಿ ಎನ್ನುವುದು ಹೆಚ್ಚು ಸೂಕ್ತ) ಸರಸ್ವತಿಗೆ ಸಮಾನವಾದ ಸ್ವರೂಪವುಳ್ಳ ದೇವತೆಗಳ ಸ್ವರೂಪವನ್ನೂ ಕುರಿತು ಅಧ್ಯಯನ ನಡೆಸಲಾಗಿದೆ. ಇವುಗಳಲ್ಲದೆ ಕನ್ನಡ ಸಂಸ್ಕೃತಿಯನ್ನು ಪ್ರಭಾವಿಸಿರುವ ವೈದಿಕ ಪುರಾಣಗಳು, ಮಹಾಕಾವ್ಯಗಳಲ್ಲಿ ಅಂತರ್ಗತವಾಗಿರುವ ಸರಸ್ವತಿಯ ಬಗೆಗಿನ ವಿಚಾರಗಳನ್ನು ಗಮನಿಸಲಾಗಿದೆ. ಕನ್ನಡ ಸಾಹಿತ್ಯದ ವಸ್ತು, ವಿಷಯ, ರೂಪ, ಛಂದಸ್ಸು, ಕಾವ್ಯಮೀಮಾಂಸೆ ಇವುಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಸಂಸ್ಕೃತ ಸಾಹಿತ್ಯದ ಕೆಲವು ಪ್ರಮುಖ ಕವಿಗಳ ಸರಸ್ವತೀ ಸಂಬಂಧೀ ವಿಷಯಗಳನ್ನು ಕನ್ನಡ ಸಾಹಿತ್ಯ ಸರಸ್ವತಿಯ ಅಧ್ಯಯನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯಾದ್ಯಂತ ಸಿಗುವ ನೂರಾರು ಸರಸ್ವತಿಯ ಶಿಲ್ಪಗಳ ಅಧ್ಯಯನಕ್ಕೆ ಪೂರ್ವಭಾವಿಯಾಗಿ ವೈದಿಕ, ಜೈನ, ಬೌದ್ಧ ಮತಗಳ ಶಿಲ್ಪಶಾಸ್ತ್ರೀಯ ಆಧಾರ ಗ್ರಂಥಗಳನ್ನಲ್ಲದೆ, ತಾಂತ್ರಿಕ ಪಠ್ಯಗಳನ್ನೂ ಗಮನಿಸಲಾಗಿದೆ.
ಶ್ರೀ ಬಿ.ಆರ್. ಸರ‍್ತನಾರಾಯಣರ ಮನೋಧರ್ಮ ಸಂಶೋಧನೆಗೆ ಹೇಳಿ ಮಾಡಿಸಿದಂತಿದೆ. ಭಾಷೆಯಲ್ಲಿ ನೇರ ಮತ್ತು ನಿಖರವಾದ ಅಭಿವ್ಯಕ್ತಿ ಕ್ರಮವಿದೆ. ಅನಗತ್ಯ ಊತಗಳು ಕಾಣುವುದಿಲ್ಲ. ಶೈಲಿಯು ಯಾವ ಕಾರಣಕ್ಕೂ ಆಲಂಕಾರಿಕವಾಗುವುದಿಲ್ಲ. ಹೀಗಾಗಿ ಉದ್ದಕ್ಕೂ ಪುಸ್ತಕದಲ್ಲಿ ವಿಷಯದ ನಿರ್ದುಷ್ಟತೆ ಕಂಡುಬರುತ್ತದೆ. ಸರಸ್ವತಿ ಎಂಬ ಎಂಬ ಒಂದು ಪರಿಕಲ್ಪನೆಯ ಸುತ್ತಾ ಸಮಗ್ರವಾಗಿ ಹೇಳಬಬಹುದಾದುದ್ದನ್ನೆಲ್ಲಾ ಇಲ್ಲಿ ಹೇಳಲಾಗಿದೆ ಎಂಬ ತೃಪ್ತಿ ಓದುಗರಿಗೆ ಉಂಟಾಗುವಂತೆ ಕೃತಿಯ ರಚನಾ ವಿನ್ಯಾಸ ರೂಪದಾಳಿದೆ. ಕನ್ನಡದಲ್ಲಿ ಇಷ್ಟು ಸೊಗಸಾಗಿ ಸರಸ್ವತಿ ಎಂಬ ಪರಿಕಲ್ಪನೆಯನ್ನು ಕುರಿತು ಒಂದು ಜ್ಞಾನಕೋಶವನ್ನೇ ನಿರ್ಮಿಸಿರುವ ಸಂಶೋಧಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸಬೇಕಾಗಿದೆ. ಮುಂದಿನ ಅಧ್ಯಯನಗಳು ಈ ಜ್ಞಾನಕೋಶವನ್ನು ಇನ್ನಷ್ಟು ಮತ್ತಷ್ಟು ಸಮೃದ್ಧಗೊಳಿಸುವಲ್ಲಿ ಈ ಕೃತಿ ಮೂಲ ಆಕರವಾಗಿ ನಿಲ್ಲುತ್ತದೆ. ಸಂಶೋಧನೆ ಎನ್ನುವುದು ಒಂದು ಸಾಮೂಹಿಕ ಕ್ರಿಯಾಶೀಲತೆಯಾಗಿರುವುದರಿಂದ ಸರಸ್ವತೀ ಚಿಂತನೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಗರಿಕಟ್ಟಿಕೊಳ್ಳುವುದರಲ್ಲಿ ನನಗೆ ಸಂದೇಹವಿಲ್ಲ.
ಇಂಥ ಒಂದು ಕೃತಿಯನ್ನು ಸಮರ್ಥವಾಗಿ ನಿರ್ವಹಿಸಿರುವ ಸಂಶೋಧಕರನ್ನೂ, ಇಂಥ ಒಂದು ಕೃತಿಯನ್ನು ಪ್ರಕಟಿಸಲು ಮುಂದಾಗಿರುವ ಪ್ರಕಾಶಕರನ್ನೂ ಎಷ್ಟು ಶ್ಲಾಘಿಸಿದರೂ ಕಮ್ಮಿಯೇ. ಶ್ರೀ ಬಿ.ಆರ್.ಸತ್ಯನಾರಾಯಣ ಸಂಶೋಧನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಸ ಪೀಳಿಗೆಯ ಒಬ್ಬ ಗಂಭೀರ ಲೇಖಕ ಎಂಬ ಮಾತನ್ನಂತೂ ಇಲ್ಲಿ ಹೇಳಲೇಬೇಕಾಗಿದೆ.
ಎಚ್.ಎಸ್.ವೆಂಕಟೇಶಮೂರ್ತಿ
ಸ್ನೇಹಿತರೆ ಸರಸ್ವತಿ : ವಿಸ್ಮಯ ಸಂಸ್ಕೃತಿ ಕೃತಿಯನ್ನು, ಇದೇ 27.3.11 ಭಾನುವಾರ ಬೆಳಿಗ್ಗೆ 9.30ಕ್ಕೆ ಸ್ವತಃ ಹೆಚ್.ಎಸ್.ವಿ.ಯವರೇ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ. - ಸತ್ಯನಾರಾಯಣ
Tuesday, March 22, 2011
ಥಣಾರಿಯ ಪ್ರಣಯ ಪ್ರಸಂಗ
ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅಪ್ಪ ಅಮ್ಮ ಇಟ್ಟಿದ್ದೋ? ಅಥವಾ ಮಧ್ಯದಲ್ಲಿ ಸೇರಿಕೊಂಡಿದ್ದೋ? ಹಾಗಿದ್ದರೆ ಅವನ ಒರಿಜಿನಲ್ಲಾದ ಹೆಸರೇನು? ಎಂಬುದೂ ನನಗೆ ಗೊತ್ತಿಲ್ಲ. ಆತನದು ಬಡತನದ ಬದುಕಾದರೂ ಅಲ್ಪತನದ್ದಲ್ಲ. ಆದ್ದರಿಂದ ನನ್ನ ಪ್ರಕಾರ ಆತನದು ಅಲ್ಪಪ್ರಾಣವಲ್ಲ; ಮಹಾಪ್ರಾಣ. ಅದಕ್ಕಾಗಿಯಾದರೂ ನಾನು ಆತನ ಹೆಸರಿನಲ್ಲಿ ಮಹಾಪ್ರಾಣ ’ಥ’ಕಾರವನ್ನೇ ಬಳಸುತ್ತೇನೆ.
ಮರ ಹತ್ತಿ ಕಾಯಿ ಕೀಳುವುದು, ಗಣೆ ಬಳಸಿ ಕಾಯಿ ಕೆಡವುದು, ಕಾಯಿ-ಕೊಬ್ಬರಿ ಸುಲಿಯುವುದು ಆತನ ಖಾಯಂ ಕೆಲಸ. ಅವನು ಮಾಡಲು ಮನಸ್ಸು ಮಾಡಿದರೆ, ವರ್ಷದ ೩೬೫ ದಿನಗಳೂ ಆತ ಬ್ಯುಸಿಯಾಗಿರಬಹುದು. ತೆಂಗಿನ ತೋಟದ ರೈತರು, ಬೆಳಿಗ್ಗೆಯೇ ಅವನ ಮನೆಯ ಮುಂದೆ ಬಂದು ಗೋಗರೆದು, ಬೈಕ್ ಹತ್ತಿಸಿಕೊಂಡು, ಕ್ರಾಸಿನಲ್ಲಿರುವ ತಡಿಕೆ ಹೋಟೆಲ್ಲಿನಲ್ಲಿ ಇಡ್ಲಿ, ಕಾಫಿ ಕೊಡಿಸಿಕೊಂಡು ಕೆಲಸಕ್ಕೆ ಕರೆದೊಯ್ಯುತ್ತಾರೆ. ಮನೆಗಳಲ್ಲಿ ಹೆಂಗಸರು, ಅವನಿಗಿಷ್ಟವಾದ ರೊಟ್ಟಿ, ಮೆಣಸಿನಕಾಯಿ ಖಾರದ ಜೊತೆಗೆ ತುಪ್ಪ ಸುರಿದು ಅವನನ್ನು ಸಂತುಷ್ಟಗೊಳಿಸುತ್ತಾರೆ.
ಇಂತಹ ಫುಲ್‌ಟೈಮ್ ಕೆಲಸ ಅವನಿಗಿದ್ದರೂ ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಹೆಚ್ಚು. ಆತ ಸೋಮಾರಿಯೆಂದಲ್ಲ. ಬದುಕಲು ಎಷ್ಟು ಬೇಕು? ಎಂಬ ಅಕಾಲ ವೈರಾಗ್ಯ. ಅಕಾಲ ವೈರಾಗ್ಯವೇಕೆಂದರೆ ಅವನಿಗಿನ್ನೂ ನಲವತ್ತು ವರ್ಷ ಮೀರಿಲ್ಲ. ಪಾದರಸದಂತೆ ಚುರುಕಾಗಿ ಓಡಾಡಿಕೊಂಡು ಚಟಪಟ ಅಂತ ಮಾತನಾಡಿಕೊಂಡು ಕೆಲಸ ಮಾಡುವ ಆತನಿಗೆ ತನ್ನದು ಎನ್ನುವ ಯಾವ ಜಮೀನು ಇಲ್ಲ. ದನ ಇಲ್ಲ. ಮನೆ ಇಲ್ಲ. ಅಷ್ಟಕ್ಕೂ ಅವನು ಯಾವ ಊರಿನವನು, ಎಲ್ಲಿಂದ ಬಂದ ಎಂಬು ಯಾವ ವಿವರಗಳೂ ಗೊತ್ತಿಲ್ಲ. ಕೆಲಸವಿದ್ದ ದಿನಗಳಲ್ಲಿ, ಕೆಲಸಕ್ಕೆ ಕರೆದವರ ಮನೆಯಲ್ಲಿ ಊಟ, ತಿಂಡಿ, ದೇವಸ್ಥಾನದ ಜಗಲಿಯಲ್ಲಿ ನಿದ್ದೆ. ಕೆಲಸವಿಲ್ಲದ ದಿನ ತಡಿಕೆ ಹೋಟೆಲ್ಲಿನ ಪೂರಿ, ಇಡ್ಲಿ, ಚಿತ್ರಾನ್ನ, ಕಾಫಿ. ಮತ್ತೆ ಯಥಾ ಪ್ರಕಾರ ದೇವಸ್ಥಾನದ ಜಗಲಿಯಲ್ಲಿ ನಿದ್ದೆ. ಮಳೆಗಾಲವಿರಲಿ ಚಳಿಗಾಲವಿರಲಿ ಜಾಗ ಮಾತ್ರ ಬದಲಾಗುವುದಿಲ್ಲ. ಹೊದಿಕೆಯೂ ಬೇಕಾಗಿಲ್ಲ. ದಿನಾ ಕೆರೆಯಲ್ಲಿ ಈಜು ಹೊಡೆಯುವುದು, ಇದ್ದ ಒಂದೇ ಬಟ್ಟೆಯನ್ನು ತೊಳೆದು ಹಾಕಿಕೊಳ್ಳುವುದು. ಅದು ಹರಿದು ಹೋದ ಮೇಲೆ ಯಾರದರು ಮನೆಯಲ್ಲಿ ಇದ್ದ ಹಳೆಯ ಚಡ್ಡಿ-ಅಂಗಿ ಪಡೆದು ಹಾಕಿಕೊಳ್ಳುವುದು.
ಹೀಗೆ ಯಾರ ಮತ್ತು ಯಾವುದರ ಹಂಗೂ ಇಲ್ಲದೆ ರಾಜನಂತಿದ್ದ ಥಣಾರಿಗೂ ಒಂದು ಪ್ರವೃತ್ತಿಯಿತ್ತು. ಅದೆಂದರೆ ರಾಗಿ ಹಾಗೂ ಭತ್ತದ ಮೆದೆಗಳನ್ನು ಅಲಂಕಾರಿಕವಾಗಿ ಒಟ್ಟುವುದು. ರಾಗಿ ಭತ್ತ ಕಟಾವು ಸಮಯದಲ್ಲಿ, ತೆಂಗಿನ ಕಾಯಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಬಂದ್ ಮಾಡಿಬಿಡುತ್ತಾನೆ. ಯಾರು ಕರೆದರೂ ಹೋಗಿ, ಅವತ್ತು ಅವನಿಗೆ ಸರಿಯೆನಿಸಿದ ಆಕಾರದಲ್ಲಿ ಮೆದೆ ಒಟ್ಟುತ್ತಾನೆ. ರೈತರು ಆಗಲ್ಲ ಹೀಗೆ ಎಂದರೆ, ’ನಿಮಗೇನು? ಮಳೆ ಬಂದರೆ ಪೈರು ನೆನೆಯಬಾರದು. ಬೀಳಬಾರದು. ಅಷ್ಟೇ ತಾನೆ? ನಾನು ಹೇಗೆ ಒಟ್ಟಿದರೆ ನಿಮಗೇನು? ಬೇಕಾದರೆ ಒಟ್ಟಿಸಿಕೊಳ್ಳಿ. ಬೇಡವಾದರೆ ಬಿಡಿ’ ಎಂದು ತನ್ನಿಚ್ಛೆಯಂತೆ ಮೆದೆ ಒಟ್ಟುತ್ತಿದ್ದ. ಅದರಿಂದ ತಮಗೇನೂ ತೊಂದರೆಯಿಲ್ಲ ಎಂದರಿತ ರೈತರು ತೆಪ್ಪಗಾಗುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಕೆಲಸಗಳನ್ನು ಮಾಡಲು ಜನಗಳೇ ಸಿಗುತ್ತಿರಲಿಲ್ಲವಾದ್ದರಿಂದ ಆತನೇ ಆಗ್ಗೆ ಇವರ ಪಾಲಿಗೆ ಚಂದ್ರ ಇಂದ್ರ ಎಲ್ಲ!
ಹೀಗೆ ಸುಮಾರು ಏಳೆಂಟು ವರ್ಷಗಳನ್ನು ನಮ್ಮೂರಿನಲ್ಲಿ ಕಳೆದ ಥಣಾರಿಯ ಬದುಕಿಗೂ ಒಂದು ಭಯಂಕರ ತಿರುವು ಸಿಕ್ಕಿಬಿಟ್ಟಿತು. ಒಂದು ಕಾಲಕ್ಕೆ ಊರಿನಲ್ಲಿ ಪೊಲೀಸ್ ಪಟೇಲನಾಗಿದ್ದ ವ್ಯಕ್ತಿಯ ಏಳುಜನ ಗಂಡುಮಕ್ಕಳು, ಅಪ್ಪ ಆಸ್ತಿ ಮಾಡಿಟ್ಟಿರುವುದೇ ಮಜಾ ಮಾಡಲು ಎಂಬಂತೆ ನಿರ್ದಯವಾಗಿ ಕರಗಿಸುವುದರಲ್ಲಿ ಪೈಪೋಟಿಗೆ ಇಳಿದಿದ್ದರು. ಇಬ್ಬರು ಊರು ಬಿಟ್ಟು ಬೆಂಗಳೂರು ಸೇರಿದ್ದರು. ಒಂದಿಬ್ಬರು ಹೇಗೂ ಇನ್ನೂ ರೈತರಾಗೇ ಉಳಿದಿದ್ದರು. ಇನ್ನಿಬ್ಬರು ತಮ್ಮ ತಮ್ಮ ಅತ್ತೆಮನೆಗಳನ್ನು ಸೇರಿ ಮನೆ ತೊಳೆಯುವ ಅಳಿಯಂದಿರಾಗಿದ್ದರು. ಇನ್ನು ಉಳಿದ ಮಧ್ಯದ ಮಗ ರಾಮ ಉರುಫ್ ಪಾಟೇಲರ ರಾಮಗೌಡ, ಪಿತಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲವನ್ನೂ ಕರಗಿಸಿ, ಅದು ಹೇಗೂ, ಆತನ ಹೆಂಡತಿಯ ಬಾಯಿಗೆ ಹೆದರಿಯೋ ಏನೋ ಉಳಿಸಿಕೊಂಡಿದ್ದ ಎರಡೂವರೆ ಎಕರೆಯ ಹೊಲದಲ್ಲಿ ಹೆಂಡತಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಸಾರ ಹೂಡಿದ್ದ. ಹೆಂಡತಿ ಮಕ್ಕಳು ಕಷ್ಟಪಟ್ಟು ಹೊಟ್ಟೆ ಬಟ್ಟೆಗೆ ನೇರ ಮಾಡಿಕೊಂಡಿದ್ದರು. ಆದರೆ ಈ ರಾಮ ತಾನು ಕಲಿತದ್ದನ್ನು ಬಿಡಲಾರದೆ, ಜಮೀನು ಮಾರಲು ಸಮ್ಮತಿಸದ ಹೆಂಡತಿ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುವವನ ರೀತಿಯಲ್ಲಿ ಚನ್ನರಾಯಪಟ್ಟಣದಲ್ಲಿ ತರಕಾರಿ ವ್ಯಾಪಾರಕ್ಕೆ ನಿಂತುಬಿಟ್ಟ. ಅಲ್ಲಿಯೇ ವ್ಯಾಪಾರಕ್ಕೆ ಬರುತ್ತಿದ್ದ ಗಂಡ ಸತ್ತ ರಂಗಮ್ಮಳ ಬಲೆಗೆ ಬಿದ್ದ. ಇಬ್ಬರಿಗೂ ಪರಸ್ಪರರ ಅಗತ್ಯವಿತ್ತೇನೋ!? ಒಂದು ದಿನ ಚನ್ನರಾಯಪಟ್ಟಣದಲ್ಲಿ ಒಟ್ಟಿಗೆ ಸಂಸಾರ ಹೂಡಿಯೇಬಿಟ್ಟರು.
ಇತ್ತ ರಾಮನ ಹೆಂಡತಿ ಮಕ್ಕಳು ’ಪೀಡೆ ತೊಲಗಿತು’ ಎಂದುಕೊಂಡರು. ತಮ್ಮ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದುದಲ್ಲದೆ ಕೂಲಿನಾಲಿ ಮಾಡಿ, ಬೋರ್ ಹಾಕಿಸಿಕೊಂಡು, ಹೊಲವನ್ನು ತೋಟ ಮಾಡುವ ಪ್ರಯತ್ನಕ್ಕಿಳಿದುಬಿಟ್ಟರು. ಆಗ ಅವರ ಅಗತ್ಯಕ್ಕೆ ಹೆಚ್ಚು ಒದಗಿ ಬಂದವನೆಂದರೆ ನಮ್ಮ ಕಥಾನಾಯಕ ಥಣಾರಿ! ರಾಮನ ಹೆಂಡತಿಗೆ ಥಣಾರಿಯ ಮೇಲೆ ಮನಸ್ಸಿತ್ತೋ? ಇಲ್ಲವೋ? ಹೇಳುವುದು ಕಷ್ಟ. ಅಥವಾ ತನಗೆ ತನ್ನ ಮಕ್ಕಳಿಗೆ ಮೋಸ ಮಾಡಿ ಯಾವುದೋ ಗಂಡ ಸತ್ತವಳ ಜೊತೆಯಲ್ಲಿ ಸಂಸಾರ ಹೂಡಿರುವ ಗಂಡನ ಮೇಲಿನ ಕೋಪವೋ? ಗೊತ್ತಿಲ್ಲ. ದಿನದ ಮೂರೂ ಹೊತ್ತು, ತೋಟವಾಗುತ್ತಿದ್ದ ಹೊಲದಲ್ಲಿ ಕತ್ತೆಯಂತೆ ದುಡಿಯಲು ಬೇಕಾಗಿದ್ದ ಗಂಡಾಳಿನ ಅವಶ್ಯಕತೆಯೋ? ಗೊತ್ತಿಲ್ಲ. ಅಂತೂ ಥಣಾರಿಯ ವಾಸ ರಾಮನ ಮನೆಗೆ ಬದಲಾಯಿತು. ರಾಮನ ಹೆಂಡತಿಯೂ ಮಕ್ಕಳೂ ಅವನನ್ನು ಸ್ವಾಗತಿಸಿದರು. ಊರವರು, ಹಿಂದೆ ರಾಮನ ಹೆಂಡತಿಯನ್ನು ಥಣಾರಿಯನ್ನು ಅಶ್ಲೀಲವಾಗಿ ಕಲ್ಪಿಸಿಕೊಂಡು ಮಾತನಾಡುತ್ತಿದ್ದರೆ ಹೊರತು, ರಾಮನ ಹೆಂಡತಿಯ ಎದುರಿಗೆ ಬಾಯಿ ಬಿಡುತ್ತಿರಲಿಲ್ಲ. ಏಕೆಂದರೆ ಆಕೆಯ ಬಾಯಿಗೆ ಸಿಕ್ಕವನೂ ಎಂತಹಾ ಗಟ್ಟಿಗ ಗಂಡಸಾದರೂ, ನಾಚಿಕೆಯಿಂದ, ಮುಜುಗರದಿಂದ, ’ಸಾಕಪ್ಪಾ ಸಾಕು’ ಎಂದು ಜಾಗ ಖಾಲಿಮಾಡುವಂತೆ ಮಾಡುವ ಶಕ್ತಿ ಅವಳ ತೀಕ್ಷ್ಣವಾದ ಬಯ್ಗುಳಗಳಿಗಿತ್ತು. ಅವಳನ್ನು ಕೆಣಕಿದವನ ಗಂಡಸುತನದಿಂದ ಹಿಡಿದು, ಆತನ ಮನೆಯ ಹೆಂಗಸರ ಮರ್ಮಾಂಗಕ್ಕೇ ತಗುಲುವಂತಹ ಬಯ್ಗಳುಗಳನ್ನು ಆಕ್ಷಣದಲ್ಲಿ ಸೃಷ್ಟಿಸಿ ಒಗೆದುಬಿಡುತ್ತಿದ್ದಳು.
ಅವಳ ಎದುರಿಗೆ ಆಡದಿದ್ದರೆ ಏನಾಯಿತು? ಥಣಾರಿಯ ಎದುರಿಗೆ ಅನ್ನುತ್ತಿದ್ದರು. ’ರಾಮನ ಹೆಂಡತಿಯ ಕೈ ಅಡುಗೆ ಥಣಾರಿಯ ಮೈಗೆ ಚೆನ್ನಾಗಿ ಹತ್ತಿಬಿಟ್ಟಿದೆ, ಮಧುಮಗನಾಗಿಬಿಟ್ಟಿದ್ದಾನೆ’, ’ಗಂಡನೋ? ಅಳಿಯನೋ?’ ಎಂದು ಛೇಡಿಸುತ್ತಿದ್ದರು. ರಾಮನ ಹೆಂಡತಿಯ ಸ್ವಭಾವಕ್ಕೆ ತದ್ವಿರುದ್ದನಾಗಿದ್ದ ಥಣಾರಿ ಮಾತ್ರ ಒಂದೂ ಮಾತನಾಡುತ್ತಿರಲಿಲ್ಲ. ಆತನನ್ನು ಛೇಡಿಸಿದವರೇ ’ಯಾಕಾದರೂ ಈ ಮಾತು ತೆಗೆದವೆಪ್ಪ’ ಎಂದು ಸುಮ್ಮನಾಗಬೇಕಾಗುತ್ತಿತ್ತು!
ಹೀಗೆ ಥಣಾರಿ, ರಾಮನ ಹೆಂಡತಿಯ ಮನೆಯ ವಾಸಕ್ಕೆ ಐದಾರು ವರ್ಷ ವಯಸ್ಸಾಗುವಷ್ಟರಲ್ಲಿ ಗುಡಿಸಲು ಹೋಗಿ ಮುಂದೆ ಆರ‍್ಸಿಸಿಯಿದ್ದ, ಹೆಂಚಿನ ಮನೆ ಬಂದಿತ್ತು. ಅವರ ಕಷ್ಟಕ್ಕೆ ಪ್ರತಿಫಲವಾಗಿ ತೆಂಗಿನ ಮರಗಳು ಒಂದೆರಡು ಗೊನೆ ಮೂಡಿಸಿಕೊಂಡು ನಳನಳಿಸುತ್ತಿದ್ದವು. ಥಣಾರಿ ಬೇರೆಯವರ ಮನೆಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿರಲಿಲ್ಲವಾದರೂ ಮೊದಲಿಗಿಂತ ಕಡಿಮೆ ಮಾಡಿಬಿಟ್ಟಿದ್ದ. ಮೈಮೇಲೆ ಒಳ್ಳೊಳ್ಳೆಯ ಬಟ್ಟೆಗಳು ಬಂದಿದ್ದವು. ರಾಮನ ಹೆಂಡತಿಯೊಂದಿಗೆ ಥಣಾರಿ ಚನ್ನರಾಯಪಟ್ಟಣಕ್ಕೆ ಸಂತೆಗೆ ಹೋಗಿ ಬರುವಷ್ಟು ಮುಂದುವರೆದಿದ್ದ. ಚನ್ನರಾಯಪಟ್ಟಣಕ್ಕೆ ಹೋದರೂ, ರಾಮ ತರಕಾರಿ ಮಾರುವ ಕಡೆಗೆ ಹೋಗುವುದನ್ನು ಪ್ರಯತ್ನಪೂರ್ವಕವಾಗಿ ತಡೆಗಟ್ಟುತ್ತಿದ್ದರು. ರಾಮನೇನೂ ತನ್ನ ಹೆಂಡತಿಯ ಹೊಸ ಸಾಹಸದ ಬಗ್ಗೆ ನಿರ‍್ಲಿಪ್ತನಾಗಿರದಿದ್ದರೂ, ಅಸಹಾಯಕನಾಗಿದ್ದ. ತನ್ನ ತಪ್ಪುಗಳನ್ಣೇ ಬೆಟ್ಟದಷ್ಟು ಇಟ್ಟುಕೊಂಡಿದ್ದ ರಾಮ, ಇತ್ತ ಇಟ್ಟುಕೊಂಡವಳ ಭಯ, ಅತ್ತ ಕಟ್ಟಿಕೊಂಡವಳ ಬಾಯಿ ಇವುಗಳಿಂದ ತೆಪ್ಪಗಾಗಿದ್ದ. ಆದರೆ ಊರವರು ಯಾರಾದರೂ ಬಂದು ವಿಷಯ ತೆಗೆದಾಗ ತನ್ನ ಗಂಡಸುತನವನ್ನು ಮಾತಿನಲ್ಲೇ ತೋರಿಸುತ್ತಿದ್ದ. ’ನಾಳೆಯೇ ಊರಿಗೆ ಬಂದು ಆ ಥಣಾರಿಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಎಷ್ಟು ಬಾರಿ, ಎಷ್ಟು ಜನರ ಬಳಿ ಹೇಳಿದ್ದನೋ? ಆದರೆ ಊರ ಕಡೆ ಮಾತ್ರ ಬರಲಿಲ್ಲ!
ಹೀಗಿರವಲ್ಲಿ ರಾಮನ ಮಗಳು ಮದುವೆಗೆ ಬಂದಳು. ಅವಳ ಬಗ್ಗೆಯೂ ಹಲವು ಪುಕಾರುಗಳು ಗೊತ್ತು ಗುರಿಯಿಲ್ಲದೆ ಊರಿನ ಪಡ್ಡೆಗಳ ಬಾಯಲ್ಲಿ ಹರಿದಾಡುತ್ತಿದ್ದರೂ, ರಾಮನ ಹೆಂಡತಿಯ ಎದುರಿಗೆ ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಇಂತಹ ಪುಕಾರುಗಳೇ ಸಾಕಿತ್ತು, ಮಗಳನ್ನು ನೋಡಲು ಬಂದ ನಾಲ್ಕಾರು ಗಂಡುಗಳು ಗೋಣು ಅಲ್ಲಾಡಿಸಲು. ರಾಮನ ಹೆಂಡತಿಗೆ ಆ ಕ್ಷಣಕ್ಕೆ ಹಲವಾರು ಸತ್ಯಗಳು ಗೋಚರವಾಗತಡಗಿದವು ಅನ್ನಿಸುತ್ತದೆ. ಗಂಡ ಮನೆಯಲ್ಲಿಲ್ಲದಿರುವುದು, ಥಣಾರಿ ಮನೆಯಲ್ಲಿ ವಾಸ್ತವ್ಯ ಹೂಡಿರುವುದು ಇವುಗಳನ್ನು ಗೊತ್ತಿದ್ದೂ ಮಗಳನ್ನು ಮದುವೆಯಾಗಬಹುದಾದ ಗಂಡು ಬಂದರೆ ಸರಿ ಎಂದುಕೊಂಡಳು. ಮೀಸೆ ಮೂಡಿದ್ದ ಊರಿನ ಹಲವಾರು ಪಡ್ಡೆಗಳು ಅವಳ ಕಣ್ಣಮುಂದೆ ಸುಳಿದುಹೋದರು. ಅವಳ ಆಸೆಯಂತೆ, ಅವಳ ಗಂಡನ ತಪ್ಪನ್ನು, ಥಣಾರಿಯ ಕೂಡಿಕೆಯನ್ನು ಒಪ್ಪಿಕೊಂಡು ಕಷ್ಟಜೀವಿಗಳಾಗಿದ್ದ ಆ ಹೆಣ್ಣುಮಗಳನ್ನು ಮದುವೆಯಾಗಲೂ ಒಂದಿಬ್ಬರು ಆಸೆಪಟ್ಟಿದ್ದರು. ಆದರೆ ಅವೆರಡಕ್ಕಿಂತ ಅವರಿಗಿದ್ದ ಭಯವೆಂದರೆ, ರಾಮನ ಹೆಂಡತಿಯ ಬಾಯಿ!
ಇವ್ಯಾವುದರ ಅರಿವೂ ಇಲ್ಲದ ರಾಮನ ಹೆಂಡತಿಗೆ, ಮಕ್ಕಳ ಮದುವೆಯಾಗಬೇಕೆಂದರೆ ಗಂಡ ಮನೆಗೆ ಬರಬೇಕು ಎಂಬ ಸತ್ಯದ ಅರಿವು ಮೂಡತೊಡಗಿತು. ಆದರೆ ಥಣಾರಿ ಇರುವವರೆಗೂ ಆತ ಬರುವುದಿಲ್ಲ ಎಂದೆನಿಸಿದಾಗ, ಥಣಾರಿಯ ಮೇಲೆ ಮುನಿಸು ಬರುತ್ತಿತ್ತು. ಆತನನ್ನು ಹೊರಕ್ಕೆ ಕಳುಹಿಸುವ ಹುನ್ನಾರವನ್ನು ಮನಸ್ಸಿನಲ್ಲಿ ಯೋಚಿಸಿದ್ದರೂ ಕಾರ್ಯರೂಪಕ್ಕೆ ಇಳಿಸಲು ಹಿಂದೇಟು ಹಾಕುತ್ತಿದ್ದಳು. ಥಣಾರಿ ಹೊರಹೋದರೂ ಗಂಡ ಬರದೇ ಇದ್ದರೆ ಎಂಬ ಯೋಚನೆಯೂ ಆಕೆ ಬರುತ್ತಿತ್ತು. ಆದರೆ ಅವಳ ಮನಸ್ಸನಲ್ಲಿರುವುದು ಅವಳಿಗರಿವಿಲ್ಲದೇ ಕೃತಿಯಲ್ಲಿ ಪ್ರಕಟವಾಗುತ್ತಿತ್ತೇನೋ? ಥಣಾರಿಯ ಗಮನಕ್ಕೂ ಇದು ಬಂತು. ತನ್ನ ಬದುಕಿನ ಬಗ್ಗೆ ಮೊದಲ ಬಾರಿಗೆ ಆತನಿಗೆ ಬೇಸರ ಮೂಡಿ ’ಮುಂದೇನು?’ ಎಂದು ಯೋಚಿಸುವಂತೆ ಮಾಡಿತು.
ರಾಮನ ಹೆಂಡತಿಯ ಹುನ್ನಾರ, ಥಣಾರಿಯ ಯೋಚನೆ ಇವೆಲ್ಲವಕ್ಕೂ ಅಂತ್ಯಕಾಣಿಸುವ ಕಾಲ ಬಂದೇಬಿಟ್ಟಿತು. ಅಲ್ಲಿ ನಾಯಿ ಹಸಿದಿತ್ತು, ಹಿಟ್ಟು ಅಳಸಿತ್ತು ಎಂಬಂತೆ ಕೂಡಿಕೆಯಾಗಿದ್ದ ರಾಮ ಮತ್ತು ರಂಗಮ್ಮರ ಬದುಕೂ ನೆಟ್ಟಗಿರಲಿಲ್ಲ. ಕುಡಿಯುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ರಾಮನಿಗೂ, ರಂಗಮ್ಮನ ಅಡಿಯಾಳಾಗಿ ಅವಳು ಹೇಳಿದಂತೆ ಕೇಳಿಕೊಂಡು ಇರುವುದು ಗಂಡಸಾದ ತನಗೆ ಅವಮಾನವೆಂದು ಏಳೆಂಟು ವರ್ಷಗಳ ನಂತರ ಜ್ಞಾನೋದಯವಾದಂತೆ ಅನ್ನಿಸತೊಡಗಿತು. ರಂಗಮ್ಮಳಿಗೂ ಇದೊಂದು ಪೀಡೆ ತೊಲಗಿದರೆ ಸಾಕು ಎನ್ನಿಸಿರಬೇಕು. ಇವೆಲ್ಲವಕ್ಕೂ ಪರಿಹಾರವೆನ್ನುವಂತೆ ರಾಮನ ಎರಡನೆಯ ಮಗಳು ಒಂದು ದಿನ ಅಪ್ಪನಿಗೆ ಸಿಕ್ಕಿಬಿಟ್ಟಳು. ಮಗಳನ್ನು ಕಂಡು ರಾಮನಿಗೆ ಅದೇನನ್ನಿಸಿತೋ, ಆಕೆಯ ಕೈಹಿಡಿದುಕೋಂಡು ಗೊಳೋ ಎಂದು ಅತ್ತುಬಿಟ್ಟ. ಎಷ್ಟಾದರೂ ಹೆಣ್ಣು ಮಗು. ಮನಸ್ಸು ಕರಗಿ ತಾನೂ ಅತ್ತಿತು. ಆಕ್ಷಣದಲ್ಲಿ ಅಪ್ಪನ ತಪ್ಪುಗಳು ಅತ್ಯಂತ ಸಣ್ಣದಾಗಿ ಕಂಡವು. ಮನೆಗೆ ಬರುವಂತೆ ಕರೆದೇಬಿಟ್ಟಳು. ರಾಮನೂ ನಾಳೆಯೇ ಬರುತ್ತೇನೆ ಎಂದು ಮಗಳಿಗೆ ಸಮಾಧಾನ ಮಾಡಿ, ಹೂವು ಹಣ್ಣು ತರಕಾರಿ ಮೊದಲಾದವನ್ನು ಖರೀದಿಸ್ಷಿವಳ ಕೈಗಿತ್ತು ಕಳುಹಿಸಿಬಿಟ್ಟ.
ಈ ಮೊದಲೇನಾದರೂ ಮಗಳು ಈ ರೀತಿ ಮಾಡಿದ್ದರೆ ರಾಮನ ಹೆಂಡತಿ ಅವಳನ್ನು ಬಯ್ಗುಳಗಳಲ್ಲಿ ಅದ್ದಿ ತೆಗೆದುಬಿಡುತ್ತಿದ್ದಳು. ಆದರೆ ಈಗ ಪರಿಸ್ಥಿತಿ ಹಾಗಿರಲಿಲ್ಲ. ತಾಯಿ ಇಬ್ಬರು ಹೆಣ್ಣು ಮಕ್ಕಳು ಕುಳಿತು, ಯೋಚಿಸಿದರು. ಆ ಕ್ಷಣಕ್ಕೆ ರಾಮ ಮನೆಗೆ ಬರುವುದೇ ಮೂವರಿಗೂ ಮುಖ್ಯವಾಗಿ ಕಂಡಿತು. ಅದನ್ನು ಅಪ್ರತ್ಯಕ್ಷವಾಗಿ, ಥಣಾರಿಯ ಕಿವಿಗೆ ಬೀಳುವಂತೆ ವರ್ತಿಸಿದರು. ಊಟಕ್ಕೇ ಮೊದಲೇ ಈ ಎಲ್ಲಾ ಘಟನೆಗಳು ನಡೆದಿದ್ದರಿಂದಲೋ ಏನೋ, ಅಂದು ತಟ್ಟೆಯ ಎದುರಿಗೆ ಕುಳಿತಿದ್ದ ಥಣಾರಿಗೆ ಮುದ್ದೆಯಾಗಲೀ ಅನ್ನವಾಗಲೀ ರುಚಿಸಲಿಲ್ಲ. ದಂಡಿಯಾಗಿ ತರಕಾರಿ ಹಾಕಿ ಮಾಡಿದ್ದ ಸಾರಿನಲ್ಲಿ ರಾಮನ ಚಿತ್ರ ಮಸುಕುಮಸುಕಾಗಿ ಮೂಡಿ ಊಟ ಸೇರದಾಯಿತು. ಈ ಕ್ಷಣ ಮನೆಯಿಂದ ಹೊರಗೆ ಹೋಗಬೆಕೆನ್ನಿಸಿದರೂ, ಅದು ಹೇಗೆ? ಎನ್ನುವುದು ಆತನಿಗೆ ಹೊಳೆಯದೆ ಚಡಪಡಿಸತೊಡಗಿದ. ಒಳಗೆ ಕೋಣೆಯಲ್ಲಿ ಮೂವರು ಹೆಂಗಸರ ನಡುವೆ ಮಾತು ನಡದೇ ಇತ್ತು. ಅವರಿಗೆ ತಿಳಿಯದಂತೆ, ಸದ್ದಾಗದಂತೆ ಬಾಗಿಲು ತೆಗೆದು ಹೊರಹೋಗಲು ಸಾಧ್ಯವೇ ಎಂದು ಥಣಾರಿ ಯೋಚಿಸುತ್ತಿದ್ದ.
ಅಷ್ಟರಲ್ಲಿ ಯಾವುದೋ ಬೊಬ್ಬೆ, ನಾಯಿ ಬೊಗಳುವಿಕೆ ಊರಕಡೆಯಿಂದ ಕೇಳತೊಡಗಿತು. ಆ ಮನೆಯೊಳಗಿದ್ದ ನಾಲ್ವರೂ ಆಗತಾನೆ ನಿದ್ದೆಯಿಂದ ಎದ್ದವರಂತೆ, ’ಅದು ಏನು? ಅದು ಏನು?’ ಎಂದು ಗಾಬರಿಗೊಂಡರು. ಹೊರಹೋಗಲು ಚಡಪಡಿಸುತ್ತಿದ್ದ ಥಣಾರಿ, ಹಾಕಿದ್ದ ನಿಕ್ಕರು, ಬನಿಯನ್ ಮೇಲೆ ಒಂದು ಪಂಚೆ ಎಸೆದುಕೊಂಡು, ’ಅದೇನೆಂದು ನೋಡಿ ಬರತ್ತೇನೆ’ ಎಂದು ಹೊರಬಿದ್ದ. ಆತನ ಪಂಚೆಯನ್ನು ತೆಗೆದುಕೊಂಡು ಹೊರಬಿದ್ದುದು ಮೂವರಿಗೂ ಅನುಮಾನ ಮೂಡಿಸಿತು. ಆದರೆ ಮಾತಿಗಿಳಿಯಲಿಲ್ಲ. ಬೊಬ್ಬೆ ಸ್ವಲ್ಪ ಹೊತ್ತಿನ ನಂತರ ಮನೆಯ ಹತ್ತಿರವೇ ಬಂತು. ಪರಿಚಿತ ಧ್ವನಿಗಳೂ ಕೇಳಿಸಿದವು. ಮೂವರೂ ಬಾಗಿಲು ತೆಗೆಯದೇ ಚಡಪಡಿಸುತ್ತಿದ್ದರು. ಆದರೆ ಬಾಗಿಲಿಗೇ ಬಂದು ಬಡಿಯತೊಡಗಿತು. ’ಯಾರು’ ಎಂಬ ಪ್ರಶ್ನೆಗೆ ಹೊರಗಿನಿಂದ ಉತ್ತರ ಬಂತು. ’ರಾಮನಿಗೆ ಆಕ್ಸಿಡೆಂಟಾಗಿ ಬಿದ್ದಿದ್ದ, ಕರ‍್ಕೊಂಡ್ಬಂದಿದ್ದೀವಿ. ಒಳಿಕೆ ಕರ‍್ಕೊ’ ಎಂದ ಪರಿಚಿತ ಧ್ವನಿ ಅವಳ ಗಂಡನ ಅಣ್ಣನದಾಗಿತ್ತು. ತೆಗೆದ ಬಾಗಿಲಿನಿಂದ ಮೂವರೂ ಒಟ್ಟಿಗೆ ಹೊರಬಂದು, ಮಂಡಿಯಿಂದ ಕೆಳಕ್ಕೆ ಜಜ್ಜಿಹೋಗಿ, ರೋಧಿಸಲೂ ಶಕ್ತಿಯಿಲ್ಲದವನಂತೆ ಸೋತುಹೋಗಿದ್ದ ರಾಮನನ್ನು ಕಂಡು ರೋಧಿಸತೊಡಗಿದರು. ಬಂದವರು ರಾಮನನ್ನು ಅವರ ಕೈಗೆ ಒಪ್ಪಿಸಿ, ಥಣಾರಿ ಅಲ್ಲಿ ಕಾಣಬಹುದೇನೋ ಎಂದು ಕದ್ದು ಮುಚ್ಚಿ ಒಳಗೆ ಕಣ್ಣಾಡಿಸಿ ಜಾಗ ಖಾಲಿ ಮಾಡಿದರು.
ಅಂದು ರಾಮ ತನಗೆ ಸಿಕ್ಕ ಕಿರಿಯಮಗಳಿಗೆ ಹಣ್ಣು ಹೂವು ತರಕಾರಿ ಕಳುಹಿಸಿದ್ದು ರಂಗಮ್ಮಳಿಗೆ ಹೇಗೋ ತಿಳಿದುಹೋಗಿತ್ತು. ಅಷ್ಟಾದರೆ ಅವಳು ಯೋಚನೆ ಮಾಡುತ್ತಿರಲಿಲ್ಲವೇನೋ? ಅಪ್ಪ ಮಗಳಿಬ್ಬರು ಪರಸ್ಪರ ಕೈಹಿಡಿದು ಅಳುತ್ತಿದ್ದು, ಮಗಳು ಮನೆಗೆ ಕರೆದಿದ್ದು, ಅಪ್ಪ ನಾಳೆಯೇ ಬರುತ್ತೇನೆ ಎಂದಿದ್ದು ಅವಳನ್ನು ವಿಪರೀತವಾಗಿ ಕೆರಳಿಸಿಬಿಟ್ಟಿತ್ತು. ಸಂಜೆ ಸ್ವಲ್ಪ ತೂರಾಡುತ್ತಲೇ ಮನೆಯ ಹತ್ತಿರ ಬಂದ ರಾಮನನ್ನು ಕುತ್ತಿಗೆ ಹಿಡಿದು ಹೊರಗೆ ದಬ್ಬಿ ಬಾಗಿಲು ಹಾಕಿಕೊಂಡುಬಿಟ್ಟಿದ್ದಳು. ರಾಮನಿಗೆ ಮಾತನಾಡಲೂ ಅವಕಾಶ ಕೊಟ್ಟಿರಲಿಲ್ಲ. ಆಗ ರಾಮನಿಗೆ ತನ್ನ ಹೆಂಡತಿ ಮಕ್ಕಳು ಅತ್ಯಂತ ಪ್ರೀತಿಯುಳ್ಳವರಾಗಿ ಸುಂದರವಾಗಿ ಕಂಡರು. ತಕ್ಷಣ ಊರ ಕಡೆಗೆ ಹೋಗುತ್ತಿದ್ದ ಒಂದು ಆಟೋ ಹಿಡಿದು ಊರಿಗೆ ಹೋಗಲು ನಿರ್ಧರಿಸಿದ್ದ. ಅಂದು ಥಣಾರಿ ಮನೆಯಲ್ಲಿದ್ದರೂ ಪರವಾಗಿಲ್ಲ. ನಾನು ಹೋಗಬೇಕು ಎಂದು ತೀರ್ಮಾನಿಸಿದ. ಆದರೆ ಕುಡಿಯದೇ ಹೋಗಲು, ಹಾಗೆ ಹೋಗಿ ಬಾಯಿಬಡುಕಿ ಹೆಂಡತಿಯನ್ನು, ಥಣಾರಿಯನ್ನು ಎದುರಿಸಲು ಆತನ ಮನಸ್ಸು ಒಪ್ಪಲಿಲ್ಲ. ಅಂಗಡಿಗೆ ಹೋಗಿ ಚೆನ್ನಾಗಿ ಎರಡು ಕ್ವಾರ‍್ಟರ್ ರಮ್‌ನಲ್ಲಿ ಒಂದನ್ನು ಹೊಟ್ಟೆಗೆ, ಇನ್ನೊಂದನ್ನು ಜೇಬಿಗೆ ಇಳಿಸಿ ಆಟೋ ಹತ್ತಿಯೇಬಿಟ್ಟ. ಕ್ರಾಸಿನಲ್ಲಿ ಆಟೋ ಇಳಿದು ತನ್ನ ಮನೆಯೆ ಕಡೆ ಹೋಗಲು ರಸ್ತೆ ದಾಟುತ್ತಿರಬೇಕಾದರೆ, ಆತನ ಮುಂದೆ ಹೆಂಡತಿ, ಥಣಾರಿ, ಮಕ್ಕಳು ಇವರೇ ಇದ್ದುದರಿಂದಲೋ ಏನೋ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಕಾಣಲೇ ಇಲ್ಲ. ಬಂದ ಕಾರಿನಿಂದ ತಪ್ಪಿಸಿಕೊಳ್ಳಲೋ ಅಥವಾ ಕುಡಿತದ ಪರಿಣಾಮದಿಂದ ಆಗಲೇ ಶುರುವಾಗಿದ್ದ ತೂರಾಟದಿಂದಲೋ ಮುಗ್ಗರಿಸಿ ಬಿದ್ದುಬಿಟ್ಟಿದ್ದ. ಕಾರು ಆತನ ಎರಡೂ ಕಾಲುಗಳ ಮೇಲೆ ಹಾದು ಬಂದ ವೇಗದಲ್ಲೇ ಮುಂದೇ ಹೋಗಿಬಿಟ್ಟಿತ್ತು. ಅಲ್ಲಿ ಸೇರಿದ್ದ ನಾಲ್ಕಾರು ಮಂದಿ ಕೂಗಿದರೂ ಕಾರು ನಿಲ್ಲಲಿಲ್ಲ. ಅವರೆಲ್ಲಾ ರಾಮನನ್ನು ಹಿಡಿದು ಕೂರಿಸಿ ನೀರು ಕುಡಿಸಿ, ಅವನ ಅಣ್ಣನನ್ನು ಕರೆತಂದರು. ಅವನ ಅಣ್ಣನಾದರೋ, ನಿರ್ಲಪ್ತತೆಯಿಂದ, ’ಅವನ ಮನೆಯ ಹತ್ತಿರ ಹೊತ್ತುಕೊಂಡು ಹೋಗಿ ಬಿಟ್ಟುಬಿಡೋಣ. ಆಮೇಲೆ ಅವನ ಹೆಂಡತಿ ಮಕ್ಕಳುಂಟು, ಅವನುಂಟು’ ಎಂದುಬಿಟ್ಟ.. ಜಜ್ಜಿಹೋಗಿದ್ದ ಕಾಲುಗಳಿಂದ ರಕ್ತ ಹರಿಯುತ್ತಿತ್ತು. ಅದನ್ನು ನಿಲ್ಲಿಸಲು ಒಂದಿಬ್ಬರು ಪ್ರಥಮಚಿಕಿತ್ಸೆ ಯೋಚಿಸುತ್ತಿದ್ದರು. ಅದು ಹೇಗೋ ಒಬ್ಬನಿಗೆ ರಾಮನ ಜೇಬಿನಲ್ಲಿದ್ದ ರಮ್ಮಿನ ಬಾಟಲ್ಲು ಸಿಕ್ಕಿತು. ಅದನ್ನು ತೆಗೆದು ಮುಚ್ಚಳ ಬಿಚ್ಚಿ, ರಕ್ತಸಿಕ್ತವಾಗಿದ್ದ ಕಾಲುಗಳ ಮೇಲೆ ಸುರಿದುಬಿಟ್ಟ. ರಾಮ ನೋವಿನಿಂದ ಕಿರುಚುತ್ತಿದ್ದದನ್ನೂ ಲೆಕ್ಕಿಸದೆ ನಾಲ್ಝಯದು ಜನ ಸೇರಿ ಅವನನ್ನು ಹೊತ್ತು ತಂದು ಅವನ ಹೆಂಡತಿಗೆ ಒಪ್ಪಿಸಿ ಕತ್ತಲಲ್ಲಿಯೇ ಮರೆಯಾಗಿಬಿಟ್ಟಿದ್ದರು.
ರಾಮನ ಹೆಂಡತಿಯ ಕಣ್ಣ ಮುಂದೆ, ಎರಡೂ ಕಾಲುಗಳು ಜಜ್ಜಿಹೋಗಿರುವ ಗಂಡ ರಾಮ ಮತ್ತು ಮೂರೂ ಹೊತ್ತು ತೋಟದಲ್ಲಿ ಕತ್ತೆಯಂತೆ ಕೆಲಸ ಮಾಡುತ್ತಿದ್ದ ಥಣಾರಿ ಮೂಡಿ ಮರೆಯಾಗುತ್ತಿದ್ದರು. ಆದರೆ ಎಷ್ಟು ದಿನ ಕಳೆದರೂ ಥಣಾರಿ ಎಲ್ಲಿ ಹೋದ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದುಹೋಯಿತು. ಈಗಲೂ ನನ್ನೂರಿನ ರೈತಾಪಿ ಜನ ಆತನನ್ನು ನೆನಪಿಸಿಕೊಳ್ಳುವುದು ಎರಡು ಸಂದರ್ಭದಲ್ಲಿ. ಒಂದು ತೆಂಗಿನ ಕಾಯಿ ಕೀಳುವಾಗ ಮತ್ತು ಸುಲಿಯುವಾಗ. ಎರಡು ರಾಗಿ ಮೆದೆ ಒಟ್ಟುವಾಗ. ’ಈಗ ನಮ್ಮ ಥಣಾರಿ ಇರಬೇಕಿತ್ತು’ ಎಂದು ಯಾರಾದರೂ ಒಬ್ಬರು ವಿಷಯ ತೆಗೆದರೆ, ಉಳಿದವರು ಸೇರಿಕೊಂಡು ಆ ಕೆಲಸ ಮುಗಿಯುವವರೆಗೂ ಅದನ್ನೇ ಎಲೆ ಅಡಿಕೆ ಮಾಡಿಕೊಂಡು ಜಿಗಿಯುತ್ತಿರುತ್ತಾರೆ.

Monday, March 14, 2011
ಡಾ. ಮೈಥಿ ಹೇಳಿದ ಭವಿಷ್ಯ ನಿಜವಾಯಿತು!?
ಮೊನ್ನೆ ಸುಚಿತ್ರಾದಲ್ಲಿ ’ದಿ ಪ್ಯಾಕ್’ ಪ್ರದರ್ಶನವಾಯಿತು. ನಾನೂ ನನ್ನ ಮಗಳ ಜೊತೆ ಹೋಗಿ ನೋಡಿದೆ. ಅದೊಂದು ಅದ್ಭುತ! ಪ್ರದರ್ಶನ ಮುಗಿದ ನಮ್ಮ ಕಾಲೇಜಿನ ಒಂದಿಬ್ಬರು ಹಳೆಯ ವಿದ್ಯಾರ್ಥಿಗಳು ಸಿಕ್ಕಿದರು. ಅದರಲ್ಲಿ ಒಬ್ಬ ಪ್ರಾಣಿ ಪಕ್ಷಿ ಫೋಟೋಗ್ರಫಿಯಲ್ಲಿ ಸ್ವಲ್ಪ ಆಸಕ್ತಿಯಿರುವಾತ. ಆದರೆ ಬಹಳ ಉಡಾಫೆ ಮನುಷ್ಯ; ಆದರೆ ಕೆಟ್ಟವನಲ್ಲ. ಒಟ್ಟಾರೆ ಬದುಕನ್ನು ಸೀರಿಯಸ್ಸಾಗೇನೂ ತೆಗೆದುಕೊಂಡವನಲ್ಲ ಎನ್ನಬಹುದು. ಅಪ್ಪ ಮಾಡಿಟ್ಟಿದ್ದ ಆಸ್ತಿಯಿದ್ದುರಿಂದ ಯಾವುದೇ ಸಂಪಾದನೆ ಇಲ್ಲದಿದ್ದರೂ ಆರಾಮವಾಗಿಯೇ ಇದ್ದ. ಈ ಎಲ್ಲಾ ವಿಲಕ್ಷಣಗಳು ಅವನಿಗಿದ್ದುದರಿಂದಲೋ ಏನೋ ಆತ ಕಾಲೇಜು ಬಿಟ್ಟು ಆರೇಳು ವರ್ಷಗಳೇ ಕಳೆದರು ನನ್ನಂತೆಯೇ ಇನ್ನೂ ಕೆಲವು ಸಹೋದ್ಯೋಗಿಗಳಿಗೆ ಒಬ್ಬ ಸ್ನೇಹಿತನಾಗಿ ಉಳಿದಕೊಂಡು ಬಿಟ್ಟಿದ್ದ. ಆತನ ಮನೆಯೂ ನಮ್ಮ ಮನೆಯ ಬಳಿಯೇ ಇದ್ದುದರಿಂದ ನನ್ನೊಂದಿಗೆ ಸಿನಿಮಾ ಓದು ಹರಟೆ ಎಲ್ಲಾ ನಡೆಸುತ್ತಿದ್ದ. ಆತ ಪ್ಯಾಕ್ ನೋಡಿ ತುಂಬಾ ಖುಷಿಯಾಗಿದ್ದ. ಒಂದಷ್ಟು ಹೊತ್ತು ಚಿತ್ರದ ಬಗ್ಗೆ ಹರಟೆ ಹೊಡೆದು, ’ಸರ್. ನಾನು ಕೃಪಾಕರ ಸೇನಾನಿಯವರು ಬರೆದ ಹದಿನಾಲ್ಕು ದಿನಗಳು ಪುಸ್ತಕ ಓದಿಲ್ಲ. ಈ ಚಿತ್ರ ನೋಡಿದ ಮೇಲೆ ಅದನ್ನು ಓದಬೇಕೆನ್ನಿಸಿದೆ. ನಿಮ್ಮಲ್ಲಿದ್ದರೆ ದಯಮಾಡಿ ಕೊಡಿ. ಒಂದೇ ದಿನದಲ್ಲಿ ವಾಪಸ್ ಕೊಡುತ್ತಾನೆ’ ಎಂದ. ಈ ಹಿಂದೊಮ್ಮೆ ಆತ ತೆಗೆದುಕೊಂಡಿದ್ದ ಪುಸ್ತಕ ಹಿಂದಿರುಗಿಸಲು ಮೂರು ತಿಂಗಳು ಸತಾಯಿಸಿಕೊಂಡಿದ್ದರಿಂದ, ನಾನು ನಯವಾಗಿಯೇ ನಿರಾಕರಿಸಿದೆ. ಆದರೆ ಬಿಡಲೇ ಇಲ್ಲ. ಕೊನೆಗೆ ವಿಧಿಯಿಲ್ಲದೆ ’ಕೊಡುತ್ತೇನೆ. ಆದರೆ ಹೇಳಿದ ಸಮಯಕ್ಕೆ ಸರಿಯಾಗಿ ವಾಪಸ್ಸು ಕೊಡಬೇಕು. ಇಲ್ಲದಿದ್ದರೆ ಇನ್ನು ಜೀವಮಾನದಲ್ಲೇ ನಿನಗೆ ಪುಸ್ತಕ ಕೊಡುವುದಿಲ್ಲ’ ಎಂದು ಕಡಕ್ಕಾಗಿ ನುಡಿದು, ’ನಾಳೆ ಬಂದು ತೆಗೆದುಕೊಂಡು ಹೋಗು’ ಎಂದಿದ್ದೆ.
ಮಾರನೆಯ ದಿನ ಹೇಳಿದ ಸಮಯಕ್ಕೆ ಸರಿಯಾಗಿ ಆತ ಹಾಜರು. ’ನೋಡಿ ಸಾರ್ ಕೃಪಾಕರ ಸೇನಾನಿಯವರ ಬಗ್ಗೆ ಇಂಟರ್ ನೆಟ್ಟಿನಲ್ಲಿ ಸಾಕಷ್ಟು ಮಾಹಿತಿ ಕೂಡಾ ಕಲೆಕ್ಟ್ ಮಾಡಿದ್ದೇನೆ. ಅವರ ಬಗ್ಗೆ ಬಹಳ ಇಂಟರೆಸ್ಟ್ ಬಂದುಬಿಟ್ಟಿದೆ ಸರ್’ ಎಂದ. ನಾನು ಮಾತ್ರ ಪುಸ್ತಕವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸುವಂತೆ ಮತ್ತೆ ಮತ್ತೆ ಹೇಳಿ ಆತನನ್ನು ಬೀಳ್ಕೊಟ್ಟಿದ್ದೆ.
ಅದರ ಮಾರನೆಯ ದಿನ ಆತ ಹಾಜಾರಾಗಿಬಿಟ್ಟ! ನನಗೆ ಆಶ್ಚರ್ಯ. ಸುಮ್ಮನೆ ಬಂದಿದ್ದಾನೆಯೋ ಅಥವಾ ಪುಸ್ತಕ ಓದಿ ಮುಗಿಸಿ ತಂದಿದ್ದಾನೆಯೋ ಎಂದುಕೊಳ್ಳುವಷ್ಟರಲ್ಲಿ, ಆತನೇ ತನ್ನ ಬ್ಯಾಗಿನಿಂದ ಪುಸ್ತಕ ಹೊರತೆಗೆದ. ಅದರ ಮಧ್ಯದಲ್ಲಿ ಕಾಗದದ ಚೂರೊಂದನ್ನು ಇಟ್ಟಿದ್ದ. ’ಸದ್ಯ ಪುಸ್ತಕ ಬಂತಲ್ಲ’ ಎಂದು ನಾನು ತೆಗೆದುಕೊಳ್ಳುವಷ್ಟರಲ್ಲಿ ಆತ ’ಸರ್ ನೀವು ಜಾತಕ ಜೋತಿಷ್ಯ ದೇವರು ಏನನ್ನೂ ನಂಬುವುದಿಲ್ಲ. ಅಲ್ಲವೆ?’ ಎಂದ. ಈ ಹಿಂದೆಯೇ ಒಮ್ಮೆ ಕಾಲೇಜಿನಲ್ಲಿ ದೊಡ್ಡ ವಾದ ವಿವಾದವಾಗಿ ಹೋಗಿತ್ತು. ಜಾತಕ ಗ್ರಹಣ ಫಲಜೋತಿಷ್ಯ ಇವುಗಳೆಲ್ಲಾ ಚರ್ಚೆಗೆ ಬಂದಿದ್ದವು. ತಮಾಷೆಯಾಗಿ ಪ್ರಾರಂಭವಾಗಿದ್ದ ವಾದ ವಿವಾದ ಗಂಭೀರ ಸ್ವರೂಪ ಪಡೆದುಕೋಂಡಿತ್ತು. ಅಂದಿನಿಂದ ನಾನು ವಾದಕ್ಕಿಳಿಯುವುದನ್ನು ಬಿಟ್ಟುಬಿಟ್ಟಿದ್ದೆ. ಅದು ಈತನಿಗೂ ಗೊತ್ತಿತ್ತು. ಆದರೂ ಆಗಾಗ ನನ್ನನ್ನು ವಾದಕ್ಕೆಳೆಯುವ ವಿಫಲ ಪ್ರಯತ್ನ ಮಾಡುತ್ತಿದ್ದ. ನನಗೆ ವಾದ ಮಾಡಲು ಮನಸ್ಸಿರಲಿಲ್ಲ. ಪ್ರತಿಕ್ರಿಯಿಸದೆ ಸುಮ್ಮನಾದೆ.
ಆದರೆ ಆತ ಸುಮ್ಮನಾಗಲಿಲ್ಲ. ’ಸರ್. ಈಗ ನೀವು ಹೇಳಲೇಬೇಕು. ಈ ಪುಸ್ತಕದ ಹಿನ್ನೆಲೆಯಲ್ಲಿ ಜೋತಿಷ್ಯ ಸತ್ಯ ಎಂದು ನಾನು ಪ್ರೂವ್ ಮಾಡುತ್ತೇನೆ’ ಎಂದ. ಒಂದು ಕ್ಷಣ ನನಗೆ ಗಾಬರಿಯಾಯಿತು. ಕೃಪಾಕರ ಸೇನಾನಿಯವರ ಹದಿನಾಲ್ಕು ದಿನಗಳು ಪುಸ್ತಕ ಕೊಟ್ಟಿದ್ದೆನೋ ಅಥವಾ ಯಾವುದಾದರೂ ಜೋತಿಷ್ಯದ ಪುಸ್ತಕ ಕೊಟ್ಟಿದ್ದೆನೋ ಎಂದು ಗಾಬರಿಯಾಗಿ ಮತ್ತೊಮ್ಮೆ ಪುಸ್ತಕ ನೋಡಿದೆ. ಅದೇ ಪೊದೆ ಮೀಸೆಯ ವೀರಪ್ಪನ್ ನಗುತ್ತಿದ್ದ ಮುಖಪುಟದಲ್ಲಿ. ಕೃಪಾಕರ ಸೇನಾನಿ ಜ್ಯೋತಿಷ್ಯದ ಬಗ್ಗೆ ಇದರಲ್ಲಿ ಏನು ಬರೆದಿದ್ದಾರೆ ಎಂದು ಮೂರು ಬಾರಿಯಾದರೂ ಓದಿದ್ದ ನಾನು ತಲೆಕೆಡಿಸಿಕೊಳ್ಳತೊಡಗಿದೆ. ನನಗೆ ತಕ್ಷಣ ನೆನಪಿಗೆ ಬಂದಿದ್ದು ಡಾ.ಮೈಥಿ ಹಸ್ತರೇಖೆ ನೋಡಿ ವೀರಪ್ಪನಿಗೆ ಭವಿಷ್ಯ ಹೇಳಿದ ಪ್ರಸಂಗ!
ಪುಸ್ತಕದ ನಡುವೆ ಇಟ್ಟಿದ್ದ ಕಾಗದದ ಚೂರಿದ್ದ ಪುಟವನ್ನು ತೆರೆದೆ. ನನ್ನ ಊಹೆ ನಿಜವಾಗಿತ್ತು. ಆಗ ಆತ ’ಸರ್. ಕೃಪಾಕರ ಸೇನಾನಿ ಸಳ್ಳನ್ನಂತೂ ಬರೆಯುವುದಿಲ್ಲ. ಅಲ್ಲವಾ ಸಾರ್’ ಎಂದ. ನನಗೂ ಮಾಡಲು ಬೇರೆ ಕೆಲಸವಿರಲಿಲ್ಲ. ಜೊತೆಗೆ ಈ ಪುಸ್ತಕ ಯರ‍್ಯಾರ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಭಾವ ಬೀರಿದೆ ಎಂಬ ಕುತೂಹಲವೂ ಇದ್ದುದರಿಂದ ಇಲ್ಲ ಎಂದು ತಲೆಯಲ್ಲಾಡಿಸಿದೆ. ’ನೋಡಿ ಸರ್, ಕೃಪಾಕರ ಸೇನಾನಿ ಸುಳ್ಳು ಬರೆಯುವವರಲ್ಲ. ಡಾ.ಮೈಥಿ ಹೇಳಿದ ಭವಿಷ್ಯ ನಿಜವಾಗಿದೆ ಅಲ್ಲವಾ ಸರ್’ ಎಂದ. ನಾನು ’ಅದು ಹೇಗೆ’ ಎಂದೆ.
’ನೀವೆ ನೋಡಿ ಸಾರ್. ಮೈಥಿ ವಿಜ್ಞಾನಿ. ಆತನೂ ಕಾರಣವಿಲ್ಲದೆ ಏನನ್ನೂ ಒಪ್ಪಿಕೊಳ್ಳುವುದಿಲ್ಲ. ಆತ ಕೃಪಾಕರರಿಗೆ ಹೇಳಿದ್ದೇನು? ನಿನ್ನ ಐವತ್ತನೇ ವಯಸ್ಸಿಗೆ ನೀನು ವಿಶ್ವವಿಖ್ಯಾತನಾಗುತ್ತೀಯ ಎಂದು’ ಆ ವಾಕ್ಯವನ್ನು ಬೆರಳಿನಿಂದ ತೋರಿಸುತ್ತಾ ಹೇಳಿದ. ’ಈಗ ಅದು ನಿಜವಾಗಿದೆ. ಕೃಪಾಕರ ಸೇನಾನಿ ಇಬ್ಬರೂ ದಿ ಪ್ಯಾಕ್ ನಿಂದ ವಿಶ್ವವಿಖ್ಯಾತರಾಗಿದ್ದಾರೆ. ಮೈಥಿಯವರು ಹೇಳಿದ್ದ ಭವಿಷ್ಯ ನಿಜವಾಗಿದೆ’ ಎಂದು ಘೋಷಿಸಿಯೇಬಿಟ್ಟ! ಮುಂದುವರೆದು ’ಸರ್ ಇನ್ನು ಮುಂದೆ ನೀವು ಜೋತಿಷ್ಯ ನಂಬಬಾರದೇಕೆ?’ ಎಂದು ಪ್ರಶ್ನಿಸಿದ. ನಾನು ಏನೂ ಮಾತನಾಡಲಿಲ್ಲ. ಆತನ ಬುದ್ಧಿವಂತಿಕೆಗೆ ಮನಸ್ಸಿನಲ್ಲಿ ನಗುತ್ತಿದ್ದೆ. ಮತ್ತೆ ಆತನೇ ಮಾತು ಮುಂದುವರೆಸಿದ.
’ಸರ್ ಇನ್ನೂ ಒಂದು ಉದಾಹರಣೆ ಇದೇ ಪುಸ್ತಕದಿಂದ ತೋರಿಸಿಕೊಡುತ್ತೇನೆ. ಆಗಲಾದರೂ ನೀವು ಭವಿಷ್ಯ ಜೋತಿಷ್ಯ ಎಲ್ಲಾ ನಂಬುತ್ತೀರಾ’ ಎಂದ. ನಾನು ಅದೇನಿರಬಹುದು ಎಂದು, ’ಮೊದಲು ತೋರಿಸು. ಆಮೇಲೆ ನೋಡೋಣ’ ಎಂದೆ. ’ಡಾ.ಮೈಥಿ ವೀರಪ್ಪನ ಕೈನೋಡಿ ಏನು ಹೇಳಿದರು, ಗೊತ್ತಾ?’ ಎಂದ. ನನಗೆ ಮೈಥಿ ಹೇಳಿದ ಮಾತು ಸೇನಾನಿ ಹತ್ತು ವರ್ಷ ಹೆಚ್ಚಿಸಿ ಹೇಳಿದ್ದು, ಕೃಪಾಕರ, ಸೇನಾನಿಯನ್ನು ಹೊಸ ಬ್ರಹ್ಮನೆಂದು ಕರೆದಿದ್ದು ಎಲ್ಲಾ ನೆನಪಾಯಿತು. ಆದರೂ ಇಲ್ಲ ಎನ್ನುವಂತೆ ತಲೆಯಾಡಿಸಿದೆ. ’ಮೈಥಿ, ಇವನು ಇನ್ನು ಹತ್ತು ವರ್ಷ ಸಾಯುವುದಿಲ್ಲ ಎಂದು ಹೇಳಿದ್ದರು. ಅದಕ್ಕೆ ಸೇನಾನಿ ಹತ್ತು ಸೇರಿಸಿ ಎಪ್ಪತ್ತು ಅಂದಿದ್ದರು. ಈಗ ಹೇಳಿ. ಯಾರ ಮಾತು ನಿಜವಾಯಿತು. ಮೈಥಿ ಹೇಳಿದ ಸರಿಸುಮಾರು ಹತ್ತು ವರ್ಷದ ನಂತರ ವೀರಪ್ಪನ್ ನೆಗೆದುಬಿದ್ದ. ಸೇನಾನಿ ಹತ್ತು ವರ್ಷ ಹಚ್ಚಿಸಿ ಹೇಳಿದ್ದು ಸುಳ್ಳಾಯಿತು. ಮೈಥಿ ಒಳ್ಳೆಯ ಭವಿಷ್ಯಕಾರರು. ವಿಜ್ಞಾನಿ ಬೇರೆ. ಈಗ ಎಲ್ಲಿದ್ದಾರೋ ಏನೋ!’ ಎಂದು ಯೋಚಿಸತೊಡಗಿದ. ಗೊತ್ತಾದರೆ ಮೈಥಿಯವರನ್ನು ಹುಡುಕಿ ಹೊರಟುಬಿಡುತ್ತಿದ್ದನೋ ಏನೋ?
ನಾನು ’ಸರಿಯಪ್ಪ ಮೈಥಿ ಸಿಕ್ಕರೆ ನಿನಗೆ ಹೇಳುತ್ತೇನೆ. ಸದ್ಯಕ್ಕೆ ಹೊರಡು. ನನಗೆ ಬೇರೆ ಕೆಲಸವಿದೆ’ ಎಂದೆ. ಅದಕ್ಕೆ ಆತ, ’ಸರ್ ನೀವು ಏನೂ ಹೇಳಲೇ ಇಲ್ಲ. ಭವಿಷ್ಯ ಜೋತಿಷ್ಯ ಎಲ್ಲಾ ನಿಜ ಎಂದು ಒಪ್ಪಿಕೊಳ್ಳಿ. ಇಲ್ಲ ಇದನ್ನು ಬರೆದಿರುವ ಕೃಪಾಕರ ಸೇನಾನಿಯವರು ಸುಳ್ಳು ಸುಳ್ಳೇ ಬರೆದಿದ್ದಾರೆ ಎಂದು ನೀವು ಒಪ್ಪಿಕೊಳ್ಳಬೇಕಾಗುತ್ತದೆ!’ ಎಂದ.
ನಾನು ಕುಸಿದು ಹೋದೆ. ಏನೇನೋ ಹೇಳಿ ಅವನನ್ನು ಕಳುಹಿಸಿದೆ. ಒಂದು ಪುಸ್ತಕ ಯಾವ್ಯಾವ ರೀತಿ ಯೋಚನೆಗಳನ್ನು ಒಬ್ಬ ಓದುಗನಲ್ಲಿ ಹುಟ್ಟುಹಾಕುತ್ತದೆ ಎಂಬುದನ್ನು ಕಂಡು ನನಗೆ ವಿಸ್ಮವಾಗಿತ್ತು. ನಂತರ ಆತ ಹೇಳಿದ ವಿಚಾರಗಳನ್ನು ಒಂದಕ್ಕೊಂದು ತಾಳೆ ಹಾಕಿದೆ. ಕೃಪಾಕರ ಸೇನಾನಿಯವರು ಇಂದು ವಿಶ್ವವಿಖ್ಯಾತರಾಗಿದ್ದಾರೆ. ವೀರಪ್ಪನ್ ಸತ್ತುಹೋಗಿದ್ದಾನೆ. ಮೈಥಿ ಎಲ್ಲಿದ್ದಾರೋ ಗೊತ್ತಿಲ್ಲ. ಇದರ ಬಗ್ಗೆ ಕೃಪಾಕರ ಸೇನಾನಿ ಏನು ಹೇಳಬಹುದು ಎಂಬ ಕುತೂಹಲವಂತೂ ನನ್ನಲ್ಲಿ ಉಳಿದುಬಿಟ್ಟಿದೆ.
ಓವರ್ ಟು ಕೃಪಾಕರ ಸೇನಾನಿ!

Tuesday, March 08, 2011
ಕಥೆ ಹಳೆಯದಾದರೇನು?
ರಸ್ತೆ ಬದಿಯ ಕನಸುಗಾರಇಂದು ಬೆಳಿಗ್ಗೆಯಿಂದಲೂ ನನ್ನೊಳಗೆ ಯುದ್ಧ ನಡೆಯುತ್ತಲೇ ಇತ್ತು. ಇದು ಕಥೆಯೊಂದು ಹುಟ್ಟುವ ಪರಿ ಎಂದು ನನ್ನಷ್ಟಕ್ಕೆ ನಾನು ಕಂಡುಕೊಂಡ ಒಂದು ವ್ಯಯಕ್ತಿಕ ಸತ್ಯ. ಸುಮಾರು ಮೂರು ವರ್ಷಗಳಿಂದ ನನಗೆ ಗೊತ್ತಿಲ್ಲದಂತೆಯೇ ಒಂದು ಹವ್ಯಾಸವಾಗಿ ಬೆಳೆದು ಬಂದಿದ್ದ ಒಂದು ಅಭ್ಯಾಸವನ್ನು ನೆನ್ನೆ ಮೊದಲ ಬಾರಿಗೆ ಸ್ವಪ್ರಯತ್ನದಿಂದ ತಪ್ಪಿಸಿದ್ದೆ.
ನೀವು ಎಂದಾದರು ಬೆಂಗಳೂರಿನ ಮುಖ್ಯ ರೈಲ್ವೆ ನಿಲ್ದಾಣದಿಂದ ಹೊರ ಬಂದು, ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್‌ನಿಲ್ದಾಣದ ಮೇಲು ಸೇತುವೆಯ ಮೇಲೆ ನಡೆದುಕೊಂಡು ಬಂದು ಕೊನೆಯಲ್ಲಿ ಕೆಳಕ್ಕೆ ಇಳಿಯಲು ಎಡಕ್ಕೆ ತಿರುಗಿ, ಹಾಗೆಯೇ ಮುಖನೇರವಾಗಿ, ಸಿಟಿ ಬಸ್‌ನಿಲ್ದಾಣದ ಕಾಂಪೋಂಡು ಗೋಡೆಗೇ ಅಂಟಿಕೊಂಡಂತೆ ನಡೆದು ಹೋಗಿರುವವರಾದರೆ, ಆಗ ಸಂಜೆಯಾಗಿದ್ದಲ್ಲಿ, ಅಲ್ಲಿ ಒಂದು ಕಡೆ ರಸ್ತೆಯಲ್ಲಿಯೇ ಗಾಜಿನ ಲೋಟದೊಳಗೆ ಇಟ್ಟ ನಾಲ್ಕೈದು ಮೇಣದಬತ್ತಿಗಳು ಉರಿಯುತ್ತಿರಿವುದನ್ನು ಕಂಡಿರುತ್ತೀರಿ. ಹತ್ತಿರ ಹೋಗಿ ನೋಡಿದಿರಾದರೆ, ಕೇವಲ ಎರಡು ಅಥವಾ ಮೂರು ಬಣ್ಣಗಳನ್ನಷ್ಟೇ ಬಳಸಿ, ನೆಲವನ್ನೇ ಕ್ಯಾನ್ವಾಸನ್ನಾಗಿಸಿ ಬೃಹತ್ ಚಿತ್ರವೊಂದನ್ನು ಬಿಡಿಸಿರುವುದನ್ನು ಕಾಣಬಹುದು. ನಾನು ಗಮನಿಸಿರುವಂತೆ ಇದ್ದಿಲು ಪುಡಿ, ಇಟ್ಟಿಗೆ ಚೂರು ಮತ್ತು ಮರಳು ಇವಿಷ್ಟೇ ಅಲ್ಲಿ ಬಳಕೆಯಾಗಿರಬಹುದಾದ ಸಾಮಗ್ರಿಗಳು. ಇಡೀ ಚಿತ್ರ ಕಾಣಲಿ ಎಂಬತೆಯೋ, ಅಥವಾ ಅಲಂಕಾರದ ಒಂದು ಭಾಗವಾಗಿಯೋ ಈ ಮೇಣದಬತ್ತಿಗಳನ್ನು ಉರಿಸಲಾಗುತ್ತದೆ.
ನಮ್ಮ ಫ್ಯಾಕ್ಟರಿಯ ಬಸ್ ಪ್ರತಿದಿನ ಸಂಜೆ ಆರೂವರೆ ಏಳು ಗಂಟೆಗೆಲ್ಲ ನನ್ನನ್ನು ರೈಲ್ವೆ ನಿಲ್ದಾಣದ ಮುಂಬಾಗಕ್ಕೆ ತೀರಾ ಎಡಬದಿಗೆ ಇರುವ ಸರ್ಕಲ್ಲಿನಿಂದ ಮುಂದಕ್ಕೆ ಇಳಿಸಿ ಹೋಗುತ್ತಿತ್ತು. ಅಲ್ಲಿಂದ ನಿಧಾನಕ್ಕೆ ಕಾಲೆಳೆದುಕೊಂಡು ಸಿಟಿ ಬಸ್ ಸ್ಟ್ಯಾಂಡಿಗೆ ಬರಬೇಕಾಗಿದ್ದ ನನಗೆ, ಆ ಮಾರ್ಗ ಮದ್ಯದಲ್ಲಿ ಹೀಗೆ ರಸ್ತೆಯಲ್ಲಿಯೇ ಅದ್ಭುತವಾಗಿ ಬೃಹತ್ ಚಿತ್ರಗಳನ್ನು ಬಿಡಿಸಿರುವದನ್ನು ಐದತ್ತು ನಿಮಿಷ ನಿಂತು ನೋಡುವ ಅಭ್ಯಾಸ ನನಗೇ ಗೊತ್ತಿಲ್ಲದಂತೆ ಬೆಳೆದುಬಿಟ್ಟಿತ್ತು. ಅಲ್ಲಿ ಸಾಮನ್ಯವಾಗಿ ಗಣಪತಿ ಅಥವಾ ಆಂಜನೇಯನ ಚಿತ್ರಗಳನ್ನು ಹೆಚ್ಚಾಗಿ ಬಿಡಿಸಲಾಗುತ್ತಿತ್ತು. ಒಮ್ಮೊಮ್ಮೆ ರಾಮ, ಕೃಷ್ಣ, ಸಿಂಹದ ಮೇಲಿನ ಚಾಮುಂಡಿ, ಕಾಗೆಯ ಮೇಲಿನ ಶನೈಶ್ಚರ ಚಿತ್ರಗಳೂ ಇರುತ್ತಿದ್ದವು. ದಾರಿಯಲ್ಲಿ ಬರುವವರಲ್ಲಿ, ಹೋಗುವವರಲ್ಲಿ ಆಸಕ್ತಿಯಿದ್ದವರು ಒಂದೆರಡು ಕ್ಷಣ ನಿಂತು ನೋಡಿ ಮುಂದುವರೆಯುತ್ತಿದ್ದರು. ನೋಡಿ ಸಂತೃಪ್ತರಾದ ಕೆಲವು ಉದಾರ ಸಹೃದಯರು ಐವತ್ತು ಪೈಸೆ, ಒಂದು ಅಥವಾ ಎರಡು ರುಪಾಯಿಗಳನ್ನು ಚಿತ್ರದ ಮೇಲೆ ಎಸೆದು ಹೋಗುತ್ತಿದ್ದರು. ಒಂದಷ್ಟು ದುಡ್ಡು ಕೂಡುತ್ತಿದ್ದಂತೆಯೆ, ಅಲ್ಲಿಯೇ ಕುಳಿತಿದ್ದ ಮುದುಕನಾಗಲಿ ಅಥವಾ ಅವನ ಜೊತೆಯಲ್ಲಿದ್ದ ಸುಮಾರು ಹದಿನೆಂಟು ವರ್ಷದ ಹುಡುಗನಾಗಲಿ ದುಡ್ಡನ್ನು ಒಟ್ಟಾಗಿಸಿ ಪ್ಲಾಸ್ಟಿಕ್ ಚೀಲವೊಂದಕ್ಕೆ ತುಂಬಿಕೊಳ್ಳುತ್ತಿದ್ದರು. ಪ್ರತಿದಿನ ನಾನು ಬರುವಷ್ಟರಲ್ಲಿ ಚಿತ್ರ ಪೂರ್ಣವಾಗಿರುತ್ತಿದ್ದರಿಂದ ಅವರಲ್ಲಿ ಯಾರು ಚಿತ್ರಕಾರರು ಎಂದು ನನಗೆ ಬಹುದಿನಗಳವರಗೆ ತಿಳಿದೇ ಇರಲಿಲ್ಲ.
ಚಿತ್ರ ಕೃಪೆ : ಎಲಿಷ್ಮಾ
ಹೀಗೆ ಸುಮಾರು ಐದಾರು ತಿಂಗಳು ಕಳೆದಿರಬಹುದು. ಆ ಮುದುಕನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆಗಳಿದ್ದವೋ ಏನೋ ಗೊತ್ತಿಲ್ಲ. ಒಂದು ದಿನವೂ ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಹುಡುಗನೂ ಅಷ್ಟೆ. ಆದರೆ ಹುಡುಗ ಚಿತ್ರವಿಚಿತ್ರವಾದ ಬಟ್ಟೆಗಳನ್ನು ತೊಡುತ್ತಿದ್ದನು. ಅವೆಲ್ಲವೂ ಬೇರೊಬ್ಬರು ತೊಟ್ಟುಬಿಟ್ಟಿದ್ದ ಉಡುಪುಗಳೆಂದು ಸುಲಭವಾಗಿ ಗೊತ್ತಾಗುತ್ತಿತ್ತು. ಆದರೆ ಅವುಗಳನ್ನು ಮಡಿಯಾಗಿಸಿ, ಇಸ್ತ್ರಿ ಮಾಡಿಸಿ ಹಾಕಿಕೊಳ್ಳುತ್ತಿದ್ದನಾದ್ದರಿಂದ ಒಂದು ರೀತಿಯ ಅವ್ಯಕ್ತವಾದ ಆಕರ್ಷಣೆ ಆ ಎಣ್ಣೆಗೆಂಪು ಮುಖದಲ್ಲಿತ್ತು. ಹಗಲುಗನಸಿನ ಅಮಲಿನಲ್ಲಿರುತ್ತಿದ್ದ, ತೀಕ್ಷ್ಣವಾದ ಕಣ್ಣುಗಳುಳ್ಳ ಆ ಹುಡುಗನ ಹೆಸರೇನೆಂದು ನನಗೆ ಈಗಲೂ ಗೊತ್ತಿಲ್ಲ. ಆದರೆ ಆತನಿಗೆ ಸರಿಯಾದ ಅವಕಾಶವಿದ್ದಿದ್ದರೆ ಒಳ್ಳೆಯ ವಿದ್ಯಾವಂತನಾಗಿ ಮುಂದೆ ಬರುವವನಿದ್ದ ಎಂದು ನನಗೆ ಅನ್ನಿಸಿದ್ದಿದೆ. ಪ್ರಾರಂಭದ ವರ್ಷದಲ್ಲಿ ಅವರಿಬ್ಬರ ದಿವ್ಯ ನಿರ್ಲಕ್ಷವನ್ನು ಗಮನಿಸಿದ ನನಗೆ, ಇವರಿಬ್ಬರು ನನ್ನನ್ನು ಗಮನಿಸಿದ್ದಾರೆಯೆ? ನಿತ್ಯವೂ ಬಂದು, ನಿಂತು ನೋಡುವದಲ್ಲದೆ, ಒಂದು ರುಪಾಯಿಯನ್ನು ಹಾಕಿ ಹೋಗುತ್ತಿದ್ದೆ. ಆಗ ನನಗೆ ಗೊತ್ತಿಲ್ಲದಂತೆ ನನಗೆ ಅಂಟಿಕೊಂಡ ವಿಚಿತ್ರ ಚಟವೆಂದರೆ ಚಿತ್ರ ಚೆನ್ನಾಗಿದ್ದ ದಿನ ಐದು ರುಪಾಯಿಯವರೆಗೂ ಹಾಕುತ್ತಿದ್ದೆ. ಇನ್ನೊಂದು ಅಂಶವೆಂದರೆ, ಚಿತ್ರದ ಯಾವ ಭಾಗ ನನ್ನ ದೃಷ್ಟಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಅನ್ನಿಸುತ್ತದೆಯೋ ಆ ಭಾಗಕ್ಕೇ ಹಣವನ್ನು ಹಾಕುತ್ತಿದ್ದೆ. ಈ ವಿಚಿತ್ರವನ್ನು ಪ್ರತಿದಿನ ಗಮನಿಸುತ್ತಿದ್ದ ವೃದ್ದ ಮತ್ತು ಬಾಲಕರಿಬ್ಬರೂ ಮೊದಮೊದಲು ಅದೇ ದಿವ್ಯ ನಿರ್ಲಕ್ಷದಿಂದಿದ್ದರು. ನಂತರದ ದಿನಗಳಲ್ಲಿ ಅವರ ಮುಖದಲ್ಲಿ ಕಂಡೂ ಕಾಣದಂತೆ ಸುಳಿಯುತ್ತಿದ್ದ ಕಿರುನಗೆ ಅವರು ನನ್ನನ್ನು ಗಮನಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಮುದುಕ ಒಮ್ಮೊಮ್ಮೆ ಮುಂದುವರೆದು ಎದೆಯ ಮೇಲೆ ಬಲಗೈಯನ್ನಿಟ್ಟು ತುಸು ತಲೆ ಬಾಗಿಸಿ ನಮಸ್ಕರಿಸುವ ಕ್ರಿಯೆಯಲ್ಲಿ ತೊಡಗುತ್ತಿದ್ದುದುಂಟು. ಆತನಿಗೆ ತನ್ನ ಚಿತ್ರಕ್ಕೊಬ್ಬ ನಿತ್ಯಸಹೃದಯನೊಬ್ಬ ಸಿಕ್ಕನೆಂದು ಖುಷಿಯಾಗಿರಬಹುದೆಂದು ನನಗನ್ನಿಸುತ್ತಿತ್ತು. ನಿಜ ಹೇಳಬೇಕೆಂದರೆ ನನಗೆ ಚಿತ್ರಕಲೆಯ ಬಗ್ಗೆ ಯಾವ ಪ್ರಾಥಮಿಕ ಜ್ಞಾನವೂ ಇರಲಿಲ್ಲ. ಚಿತ್ರ ಚೆನ್ನಾಗಿದೆಯೇ ಇಲ್ಲವೇ ಎಂಬುದು ನನ್ನ ಅವತ್ತಿನ ಮನಸ್ಥಿತಿಯನ್ನು ಅವಲಂಬಿಸಿರುತಿತ್ತು ಎಂದು ಈಗ ನನಗನ್ನಿಸುತ್ತದೆ.
ಮೂರು ವರ್ಷಗಳಿಂದ ವಾರದಲ್ಲಿ ಐದು ದಿನ ನಡೆಯುತ್ತಿದ್ದಂತೆ ಮೊನ್ನೆಯೂ ನಮ್ಮ ಫ್ಯಾಕ್ಟರಿಯ ಬಸ್ ನನ್ನನ್ನು ಇಳಿಸಿ ಮುಂದೆ ಹೋದಾಗ ಅಭ್ಯಾಸ ಬಲದಿಂದ ನನ್ನ ಕಾಲುಗಳು ಆ ಚಿತ್ರಕಾರನ ತಾಣದ ಕಡೆಗೆ ನಡೆದವು. ಮನಸ್ಸು ಸಂತೋಷವಾಗಿಯೇ ಇತ್ತು. ಜೇಬಿನಲ್ಲಿ ಕೈಯಾಡಿಸಿದಾಗ ಐದು ರುಪಾಯಿಯ ನಾಣ್ಯವೊಂದು ಸಿಕ್ಕಿ ಅದನ್ನು ಹಾಗೆಯೇ ಮುಷ್ಟಿಯಲ್ಲಿ ಹಿಡಿದುಕೊಂಡು ನಡೆಯುತ್ತಲೇ ಚಿತ್ರವಿರುತ್ತಿದ್ದ ಕಡೆಗೆ ಕಣ್ಣಾಡಿಸಿದೆ. ಆಶ್ಚರ್ಯ! ಮೊದಲ ಬಾರಿಗೆ ಆ ಕನಸುಗಾರ ಹುಡುಗನಿಲ್ಲದೆ ಆ ಮುದುಕನೊಬ್ಬನೇ ಕುಳಿತಿದ್ದ. ಶುಕ್ರವಾರ ಸಂಜೆಯೂ ಆ ಹುಡುಗನಿದ್ದ. ಸೋಮುವಾರ ಸಂಜೆ ಇಲ್ಲ. ಆತ ಎರಡು ದಿನದಿಂದಲೂ ಇಲ್ಲವೋ? ಅಥವಾ ಈ ದಿನ ಮಾತ್ರ ಇಲ್ಲವೋ? ಎಂಬ ಕುತೂಹಲ ನನ್ನಲ್ಲಿ ಮೂಡಿ ಬಲವಾಗತೊಡಗಿತು. ಸಮೀಪ ಬಂದವನು ನಿತ್ಯದಂತೆ ಚಿತ್ರವನ್ನು ಗಮನಿಸದೆ ಆ ಮುದುಕನ ಕಡೆಗೆ ನೋಡುತ್ತಿದ್ದೆ. ನನ್ನ ಮುಖದಲ್ಲಿದ್ದ ಕುತೂಹಲವೇ ಅವನಿಗೆ ‘ಆ ಹುಡುಗನೆಲ್ಲಿ?’ ಎಂದು ಪ್ರಶ್ನೆ ಕೇಳುತ್ತಿತ್ತೋ ಏನೋ? ಯಾವತ್ತೂ ಇಲ್ಲದ ಒಣನಗೆಯನ್ನು ನಕ್ಕು ಬಲಗೈಯನ್ನು ಎದೆಯ ಮೇಲೆ ತಂದು ನಮಸ್ಕರಿಸುವ ಕ್ರಿಯೆಯನ್ನು ಮುಗಿಸಿದವನೇ ‘ಆ ಹುಡುಗನನ್ನು ಹುಡುಕುತ್ತಿದ್ದೀರ ಸ್ವಾಮಿ’ ಎಂದ. ನನಗೆ ಆಶ್ಚರ್ಯವೆನ್ನಿಸಿದ್ದು ಆತನ ಮಧುರವಾದ ದ್ವನಿ. ಬೀದಿ ಬದಿಯ ಜೀವವೊಂದಕ್ಕೆ ಇಷ್ಟೊಂದು ಸುಂದರವಾದ ದ್ವನಿ ಇರುತ್ತದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ‘ಹೌದು’ ಎಂಬತೆ ತಲೆಯಾಡಿಸಿದೆ. ಹತ್ತಿರ ಬರುವಂತೆ ಕೈಯಾಡಿಸಿದನೋ, ಮುಖದ ಹತ್ತಿರ ನೃತ್ಯ ಮಾಡುತ್ತಿದ್ದ ಸೊಳ್ಳೆಯನ್ನು ಓಡಿಸಿದನೋ ಗೊತ್ತಿಲ್ಲ. ನನಗೆ ಹತ್ತಿರ ಹೋಗಬೇಕೆನ್ನಿಸಿ, ಮುಂದೆ ಹೋಗಿ ಅವನಿಗೆ ತೀರಾ ಸಮೀಪದಲ್ಲಿ ರಸ್ತೆಯಿಂದ ಅರ್ಧ ಅಡಿ ಎತ್ತರವಿದ್ದ ಪುಟ್‌ಪಾತಿನ ಮೇಲೆ ಕಷ್ಟಪಟ್ಟು ಕುಳಿತುಕೊಂಡೆ.
‘ನೀವು ಪೇಪರ್ ಓದುವುದಿಲ್ಲವೆ?’ ಎಂದ ಮುದುಕನ ದ್ವನಿಯ ಮಾಧುರ್ಯವನ್ನು ಸವಿಯಬೇಕಾಗಿದ್ದವನಿಗೆ ಪ್ರಶ್ನೆ ಸ್ವಲ್ಪ ಇರುಸುಮುರುಸೆನಿಸಿತು. ಆದರೂ ತೋರಿಸಿಕೊಳ್ಳದೆ ‘ನಾನು ಪತ್ರಿಕೆ ಓದುವುದು ಕಡಿಮೆ. ಪತ್ರಿಕೆಗಳಲ್ಲಿ ಪುಟ ತಿರುವಿದರೆ ಸಾಕು ಕೊಲೆ, ಅತ್ಯಾಚಾರ ಅಪಘಾತಗಳದ್ದೇ ಸುದ್ದಿ ಇರುತ್ತದೆ. ಆದ್ದರಿಂದ ಪತ್ರಿಕೆಗೂ ನನಗೂ ಅಷ್ಟಕ್ಕಷ್ಟೆ’ ಎಂದ ನನಗೆ ಇಷ್ಟೊಂದು ದೀರ್ಘವಾದ ವಿವರಣೆ ಬೇಕಿತ್ತೆ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ.
‘ನೀವು ಕೊಲೆಯ ವಿಚಾರ ಎಂದಿರಲ್ಲ. ಅದೇ ವಿಷಯ. ನೀವು ಕೊಲೆಗಿಲೆ ಎಂದು ಬೇಸರ ಮಾಡಿಕೊಳ್ಳದೆ ಪತ್ರಿಕೆ ಓದುವವರಾಗಿದ್ದರೆ, ನಾನಿಂದು ನನ್ನ ಜೊತೆಯಲ್ಲಿರುತ್ತಿದ್ದ ಹುಡುಗ ಕೊಲೆಯಾದ ವಿಚಾರವನ್ನು ನಾನೇ ಹೇಳಬೇಕಾದ ಪ್ರಸಂಗ ಬರುತ್ತಿತ್ತೆ’ ಎಂದು ನಿಲ್ಲಿಸಿದ. ನನಗೆ ನಿಜವಾಗಿಯೂ ದೊಡ್ಡ ಆಘಾತವೇ ಆಯಿತು. ನಾನು ಕನಸು ಮನಸಿನಲ್ಲೂ ಊಹಿಸಿರದಿದ್ದ ಘಟನೆ ಇದಾಗಿತ್ತು. ನನಗೆ ಏನು ಮಾಡಬೇಕೆಂದಾಗಲಿ, ಮಾತನಾಡಬೇಕೆಂದಾಗಲಿ ತೋಚಲಿಲ್ಲ. ಸುಮ್ಮನ್ನೆ ಮುದುಕನ ಮುಖವನ್ನೇ ಮಿಳಮಿಳನೆ ನೋಡುತ್ತಿದ್ದೆ. ಮುದುಕನೇ ಮುಂದುವರೆದು ‘ಹುಡುಗ ಕೊಲೆಯಾದ. ಅವನ ಆಯಸ್ಸೇ ಅಷ್ಟಿತ್ತೊ ಏನೋ’ ಎಂದು ಒಂದು ನಿಡಿದಾದ ನಿಟ್ಟುಸಿರೊಂದನ್ನು ಹೊರಹಾಕಿದ. ‘ಆತ ನಿನ್ನ ಮಗನೇ?’ ಎಂಬ ನನ್ನ ಪ್ರಶ್ನೆ ಮುಗಿಯುವ ಮೊದಲೇ ‘ಇಲ್ಲಾ’ ಎಂಬಂತೆ ಕೈಯಾಡಿಸುತ್ತ, ‘ಮಗನೂ ಅಲ್ಲ, ಸಂಬಂಧಿಯೂ ಅಲ್ಲ. ಹ್ಞೂ. ನನ್ನದು ಅವನದು ಒಂದು ರೀತಿಯ ಕುಂಟ ಕುರುಡನ ಸಂಬಂಧ. ನನಗೆ ನಡೆಯಲಾಗದಿದ್ದರೆ, ಅವನಿಗೆ ದಾರಿ ಕಾಣುತ್ತಿರಲಿಲ್ಲ. ‘ನನ್ನ ಜೊತೆಯಲ್ಲಿ ಗುಡಿಸಲಲ್ಲಿಯೇ ಉಳಿದುಕೊಳ್ಳುತ್ತಿದ್ದ. ಎರಡು ಹೊತ್ತು ಊಟ ಹಾಕುತ್ತಿದ್ದೆ. ಸಮಯ ಕಳೆಯಲು ಚಿತ್ರಕಲೆಯನ್ನು ಹೇಳಿಕೊಡುತ್ತಿದ್ದೆ. ಚಿತ್ರಕಲೆ ಅಂದೆ. ನಮ್ಮದು ಹೊಟ್ಟೆ ಪಾಡಿನದು’ ಎಂದು ನಿಲ್ಲಿಸಿ, ಅಂದು ಬರೆದಿದ್ದ ಆಂಜನೇಯನ ಚಿತ್ರದ ಮೇಲೆಯೇ ನುಗ್ಗಿ ಬರುತ್ತಿದ್ದ ದನವನ್ನು ಕೂಗಿ ಓಡಿಸಿದ. ಮತ್ತೆ ಬಂದು ಕುಳಿತೊಕೊಂಡ ಮುದುಕ ಏನನ್ನೋ ಜ್ಞಾಪಿಸಿಕೊಳ್ಳುತ್ತಿರುವಂತೆ ತಲೆ ಬಗ್ಗಿಸಿ ಮೌನವಾಗಿಬಿಟ್ಟ. ರಸ್ತೆಯಲ್ಲಿ ಓಡಾಡುವ ಜನ ಹೆಚ್ಚಿಗೆ ಇರಲಿಲ್ಲ. ಆದರೆ ಹೋಗುತ್ತಿದ್ದ ಪ್ರತಿಯೊಬ್ಬರೂ ಚಿತ್ರ ನೋಡದಿದ್ದರೂ ನಮ್ಮಿಬ್ಬರನ್ನೇ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಯಾರೊ ಎಸೆದ ನಾಣ್ಯ ಸಿಡಿದು ಆತನ ಪಕ್ಕಕೆ ಬಂದು ಬಿದ್ದಾಗ, ಅದನ್ನು ಎತ್ತಿ ಚಿತ್ರದ ನಡುವಿಗೆಸೆದು ಅವರ ಕಡೆಗೆ ನೋಡಿ ಮುಗುಳನಕ್ಕು, ನನ್ನೆಡೆಗೆ ತಿರುಗಿ ಹೇಳತೊಡಗಿದ.
ನಿಮಗೆ ಗೊತ್ತೆ? ಹುಡುಗನಿಗೆ ಭಯಂಕರವಾದ ಆಸೆಗಳಿದ್ದವು. ಕನಸುಗಳಿದ್ದವು. ಆದರೆ ಅವು ಯಾವೂ ಈಡೇರುವಂತವುಗಳಲ್ಲ. ಆದರೆ ಹುಡುಗ ಅಷ್ಟೇ ಭಯಂಕರವಾದ ಆಶಾವಾದಿಯಾಗಿದ್ದ. ನೋಡುತ್ತಿದ್ದ ಸಿನಿಮಾಗಳ ಪ್ರಭಾವದಿಂದಲೊ ಏನೊ. ‘ನನ್ನ ಜೀವನದಲ್ಲೂ ಪವಾಡ ಸದೃಶ್ಯವಾದ ಘಟನೆ ನಡದೇ ತೀರುತ್ತದೆ’ ಎಂದು ಆಗಾಗ ಹೇಳುತ್ತಿದ್ದ. ದಾರಿಯಲ್ಲಿ ಕಂತೆಗಟ್ಟಲೆ ಹಣ ಸಿಗುವುದು, ಲಾಟರಿಯಲ್ಲಿ ಹಣ ಬರುವುದರಿಂದ ಹಿಡಿದು, ತಾನು ಬೆಂಗಳೂರಿನ ಮೇಯರ್ ಆಗುವವರೆಗೂ ಕನಸು ಕಾಣುತ್ತಿದ್ದ. ಅದರಲ್ಲಿ ಮುಖ್ಯವಾದದ್ದೆಂದರೆ ‘ಯಾರಾದರೊಬ್ಬ ಚೆಲುವೆ ತನ್ನನ್ನು ಇಷ್ಟಪಟ್ಟು ಮದುವೆಯಾಗುತ್ತಾಳೆ’ ಎಂಬುದು. ನಾನೊಮ್ಮೆ ಆತನಿಗೆ ಏಳು ಸಮುದ್ರದಾಚೆಯ ರಾಜಕುಮಾರಿಯ ಕಥೆಯನ್ನು ಹೇಳಿದಾಗ, ‘ನನ್ನ ಜೀವನದಲ್ಲೂ ಅಂಥ ರಾಜಕುಮಾರಿಯೊಬ್ಬಳು ಬರುತ್ತಾಳೆ’ ಎಂದು ಆತ್ಮವಿಶ್ವಾಸದಿಂದಲೇ ನುಡಿದಿದ್ದ. ಇನ್ನೊಮ್ಮೆ ರಾಜಕುಮಾರಿಯೊಬ್ಬಳು ಆನೆ ಆರಿಸಿದ ತಿರುಕನನ್ನು ಮದುವೆಯಾದ ತೆಲಗು ಸಿನಿಮಾವನ್ನು ನೋಡಿ, ಅದು ತನ್ನದೇ ಕಥೆಯೆಂಬಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದ. ನಮ್ಮ ಚಿತ್ರವನ್ನು ನೋಡಿಕೊಂಡು ಮುಂದೆ ಸಾಗುತ್ತಿದ್ದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ. ಪ್ರತಿದಿನ ರಾತ್ರಿ ಮಲಗುವಾಗ, ‘ಈ ದಿನ ಇಷ್ಟು ರಾಜಕುಮಾರಿಯರನ್ನು ನೋಡಿದೆ. ಅದರಲ್ಲಿ ನನ್ನವಳು ಇರಲಿಲ್ಲ’ ಎಂದು ಹೇಳುತ್ತಿದ್ದ. ‘ಈ ರೀತಿಯ ಹುಚ್ಚು ಒಳ್ಳೆಯದಲ್ಲವೊ’ ಎಂದು ನಾನೇನಾದರೂ ಹೇಳಿದರೆ, ‘ನೋಡಿದೆಯಾ, ದೇವರಿಗೂ ನನ್ನ ಹಾಗೆ ಹುಚ್ಚಿದೆ. ಅದಕ್ಕೇ ಆತ ಇಷ್ಟೊಂದು ಸುಂದರಿಯರನ್ನು ಸೃಷ್ಟಿಸಿದ್ದಾನೆ. ಆ ಹೆಣ್ಣುಗಳನ್ನು ನೋಡು. ಎಷ್ಟೊಂದು ಸುಂದರವಾಗಿ, ಮೃದುವಾಗಿ ಇರುತ್ತಾರೆ. ಅವರು ಗಂಡಸರಂತಲ್ಲ. ದೇವರೂ ಹೆಂಗಸರ ಪಕ್ಷಪಾತಿ’ ಎಂದು ಏನೇನೊ ಹೇಳುತ್ತಿದ್ದ. ಹುಡುಗತನ ಎಂದು ನಾನೂ ಸುಮ್ಮನಾಗಿಬಿಡುತ್ತದೆ.
ಆದರೆ ಆತನ ಕನಸು ನನಸಾಗುವ ಹಾಗಿದೆ ಎಂದು ನನಗನ್ನಿಸಿದ್ದು ಕಳೆದ ಸೋಮುವಾರ. ಸುಮಾರು ಒಂದೆರೆಡು ತಿಂಗಳಿಂದ ಇದೇ ದಾರಿಯಲ್ಲಿ ಹೋಗುತ್ತಿದ್ದ, ಇವನು ಗಮನಿಸುತ್ತಿದ್ದ ರಾಜಕುಮಾರಿಯೊಬ್ಬಳು ಸೋಮವಾರ ಕರೆದು ಮಾತನಾಡಿಸಿದಳು. ಅಗೊ ಅಲ್ಲಿದೆಯಲ್ಲ, ಆ ದೀಪದ ಕಂಬದ ಕೆಳಗೆ ಒಂದರ್ಧ ಗಂಟೆ ಮಾತನಾಡಿರಬಹುದು. ತಿರುಗಿ ಬಂದವನ ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ಖುಷಿಯಿಂದ ತೂರಾಡುತ್ತಿದ್ದ. ಹತ್ತಿರಕ್ಕೆ ಕರೆದು ‘ಏನೊ’ ಎಂದು ಕೇಳಿದಾಗ ‘ನೋಡಿದೆಯಾ, ನನ್ನ ಜೀವನದ ರಾಜಕುಮಾರಿ ಸಿಕ್ಕಿಬಿಟ್ಟಳು. ನಾನು ಹೇಳುತ್ತಿದ್ದ ನನ್ನ ಜೀವನದಲ್ಲಿ ನಡೆಯಬಹುದಾದ ಪವಾಡಗಳಲ್ಲಿ ಇದು ಮೊದಲನೆಯದು’ ಎಂದು ಅವಳೊಂದಿಗೆ ಮಾತನಾಡಿದ್ದೆಲ್ಲವನ್ನೂ ಹೇಳಿದ. ಆ ಹುಡುಗಿಯೊಬ್ಬಳು ಅರ್ಚಕರ ಮಗಳಂತೆ. ಟ್ರಾವೆಲ್ಸೊಂದರಲ್ಲಿ ಟೈಪಿಸ್ಟ್ ಆಗಿ ಕೆಲಸ. ಐದಾರು ಸಾವಿರ ಸಂಬಳ. ಅವಳು ಅಂದುಕೊಳ್ಳುತ್ತಿದ್ದ ‘ನನ್ನ ಗಂಡ ಇಂಥವನಿರಬೇಕು’ ಎಂಬಂತೆ ನಮ್ಮ ಹುಡುಗನೂ ಇದ್ದಾನಂತೆ, ಆತ ಚಿತ್ರಕಲಾವಿದನಾಗಿರುವುದು ಇನ್ನೂ ಇಷ್ಟವಂತೆ, ಎಂದು ಹೊಗಳಿ ನಾಳೆ ಮತ್ತೆ ಬರುವುದಾಗಿ ಹೇಳಿ ಹೋದಳಂತೆ.
ನಾಳೆ ಮತ್ತೆ ಬಂದಳು. ಮತ್ತದೇ ಕಂಬದ ಕೆಳಗೆ ಮತ್ತಷ್ಟು ಹೊತ್ತು ಮಾತುಕತೆ. ಬಂದವನೆ ‘ನೋಡು ಅವಳು ನನ್ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ ಒಂದು ಸಮಸ್ಯೆಯಂತೆ. ಅವಳು ಕೆಲಸ ಮಾಡುತ್ತಿರುವ ಟ್ರಾವೆಲ್ಸಿನಲ್ಲಿರುವ ಡ್ರೈವರ್ ಒಬ್ಬ ತನ್ನನ್ನೇ ಮದುವೆಯಾಗೆಂದು ಪೀಡಿಸುತ್ತಿದ್ದಾನಂತೆ. ಅದಕ್ಕೆ ಅವಳು ತನಗೀಗಲೇ ಮದುವೆ ಗೊತ್ತಾಗಿದೆ ಎಂದು ಸುಳ್ಳು ಹೇಳಿ ಅವನಿಂದ ಮೊದಲು ದೂರವಾಗುತ್ತಾಳಂತೆ. ಅದಕ್ಕೆ ನನ್ನ ಸಹಾಯ ಬೇಕಂತೆ. ಅದಕ್ಕು ಮೊದಲು ಶನಿವಾರ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಅವಳ ತಂದೆ ತಾಯಿಯರಿಗೆ ತೋರಿಸುತ್ತಾಳಂತೆ’ ಇನ್ನು ಏನೇನೋ ಹೇಳಿದ. ನನಗೂ ಈ ಹುಡುಗನ ಅದೃಷ್ಟವನ್ನು ಕಂಡು ಆಶ್ಚರ್ಯ. ಅದರ ಜೊತೆಗೆ ಆತಂಕವೂ ಇತ್ತು ಎನ್ನಿ. ನಾನೇನನ್ನೇ ಹೇಳಿದರೂ ಅವನು ಕೇಳುವ ಸ್ಥಿತಿಯಲ್ಲಿಲ್ಲವೆಂದು ಸುಮ್ಮನಾಗಿಬಿಟ್ಟೆ.
ನಡುವೆ ಆ ಹುಡುಗಿ ಬುಧವಾರವೂ ಬಂದಳು. ಮಾತುಕತೆ ಏನೆಂದು ಹುಡುಗ ನನಗೆ ಹೇಳಲಿಲ್ಲ. ನಾನೂ ಕೇಳಲಿಲ್ಲ. ಮತ್ತೆ ಶುಕ್ರವಾರ ಬಂದು ಏನು ಹೇಳಿ ಹೋದಳೋ ಗೊತ್ತಿಲ್ಲ. ಬಂದವನೆ ‘ನೋಡು ಇಷ್ಟು ದಿನ ನನಗಾಗಿ ನಾನು ಏನನ್ನೂ ಕೇಳಿಲ್ಲ. ನಾಳೆ ಅವಳ ಮನೆಗೆ ಹೋಗಬೇಕು. ಒಂದು ಜೊತೆ ಒಳ್ಳೆಯ ಬಟ್ಟೆಯನ್ನು ತಗೆದುಕೊಳ್ಳಬೇಕು. ಸ್ವಲ್ಪದುಡ್ಡು ಕೊಟ್ಟುಬಿಡು’ ಎಂದು ಗೋಗರೆದ. ನಾನೂ ಹೋಗಲಿ ಎಂದು ಕೊಟ್ಟುಬಿಟ್ಟೆ. ನಾವು ಮನೆಗೆ ಹೊರಡುವ ಸಮಯ ಯಾರೋ ಇಬ್ಬರು ಬಂದು ಅವನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಒಂದಷ್ಟು ಹೊತ್ತು ಮಾತನಾಡಿದರು. ಅಲ್ಲಿಂದ ಬಂದವನೆ ಬಹಳ ಉದ್ವೇಗದಿಂದ ಕೂಡಿದ್ದ. ಸ್ವಲ್ಪ ಭಯವೂ ಇತ್ತೆನ್ನಿ. ‘ನೋಡು, ಮೊನ್ನೆ ನೋಡಿದ್ದ ಸಿನಿಮಾದಲ್ಲಿ ಹೀರೋಗೆ ಇಬ್ಬರು ರೌಡಿಗಳು ಬಂದು, ಆತ ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡುವಂತೆ ಬೆದರಿಸಿತ್ತಾರಲ್ಲ, ಹಾಗೆ. ಈಗ ಬಂದವರು ನನಗೂ ಅದನ್ನೇ ಹೇಳಿದರು. ಇಂಥ ಘಟನೆಗಳೆಲ್ಲ ನಾಯಕರ ಬದುಕಿನಲ್ಲಿ ನಡೆಯುವಂತವುಗಳು. ಅದಕ್ಕೆ ನಾನೂ ಸಿದ್ದನಾಗಿಯೇ ಇದ್ದೇನೆ. ನಾನು ಅವಳನ್ನು ಮದುವೆಯಾಗುವುದು ಖಂಡಿತ. ಇವರು ಅದೇನು ಕಿತ್ತುಕೊಳ್ಳುತ್ತಾರೊ ಕಿತ್ತುಕೊಳ್ಳಲಿ. ಇದು ನನ್ನ ಜೀವನದ ಎರಡನೆಯ ಪವಾಡ’ ಎಂದು ಏನೇನೋ ಬಡಬಡಿಸಿದ. ನನಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ.
ಶನಿವಾರ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ನಿತ್ಯದಂತೆ ನಾವು ಇಲ್ಲಿಗೆ ಬಂದೆವು. ಹುಡುಗ ಹೊಸಬಟ್ಟೆ ತೊಟ್ಟು ಬಹಳ ಉದ್ವಿಗ್ನನಾಗಿರುವಂತೆ ಕಾಣುತ್ತಿದ್ದ. ಗಳಿಗೆಗೊಮ್ಮೆ ಹೋಗಿಬರುವವರನ್ನು ಟೈಮ್ ಕೇಳುತ್ತ ಅವಳು ಬರುವ ಕಡೆಗೆ ನೋಡುತ್ತ, ನಾನು ಕೇಳುತ್ತಿದ್ದ ಬಣ್ಣಗಳನ್ನು ಯಾಂತ್ರಿಕವಾಗಿ ಎತ್ತಿಕೊಡುತ್ತಿದ್ದ. ನನ್ನ ಪಾಡಿಗೆ ನಾನು ಅಂದು ಶನಿವಾರವಾದ್ದರಿಂದ ಕಾಕವಾಹನ ಶನೈಶ್ಚರ ದೇವರ ಚಿತ್ರವನ್ನು ಬಿಡಿಸುವುದರಲ್ಲಿ ಮಗ್ನನಾಗಿದ್ದೆ. ಒಂದೂವರೆಯ ಹೊತ್ತಿಗೆ ‘ನೋಡು, ಅವಳು ಬಂದಳು. ನಾನು ಹೋಗುತ್ತೇನೆ’ ಅಂದು ಹೊರಟೇ ಬಿಟ್ಟ. ಕತ್ತೆತ್ತಿ ನೋಡಿದ ನನಗೆ, ಕೈ ಕೈ ಜೋಡಿಸಿ ನಡೆದು ಹೋಗುತ್ತಿದ್ದ ಅವರನ್ನು ಕಂಡು, ಒಳ್ಳೆಯ ಜೋಡಿಯೆ ಎನ್ನಿಸಿತ್ತು. ಆದರೆ ‘ಹೋಗುತ್ತೇನೆ’ ಎಂದು ಹೋದವನು ತಿರುಗಿ ಬರಲಿಲ್ಲ.
ಅವರು ಹೋಗಿ ಸುಮಾರು ಒಂದು ಗಂಟೆಯಾಗಿರಬಹುದು. ರೈಲ್ವೆ ಸ್ಟೇಶನ್ ಕಡೆಯಿಂದ ಬಂದವರಿಬ್ಬರು ಅಲ್ಲೊಂದು ಕೊಲೆಯಾಗಿರುವ ವಿಚಾರವನ್ನು ಮಾತನಾಡಿಕೊಂಡು ಹೋಗುತ್ತಿದ್ದರು. ನನ್ನೊಳಗೆ ಏನೋ ಬರಿದಾಗುತ್ತಿದೆ ಎನ್ನಿಸಿ, ಚಿತ್ರ ನೋಡಲು ನಿಂತರೂ ಕೊಲೆಯ ವಿಷಯವನ್ನೇ ಮಾತನಾಡುತ್ತಿದ್ದ ಅವರ ಮಾತುಗಳಿಗೆ ಕಿವಿಗೊಟ್ಟೆ. ಕೊಲೆಯಾದ ಐದೇ ನಿಮಿಷದಲ್ಲಿ ಅಲ್ಲಿ ಪೋಲೀಸ್ ಬಂದಿದ್ದು ಕೊಲೆಗಾರನನ್ನು ಸ್ಥಳದಲ್ಲಿ ಬಂಧಿಸಿದ್ದು, ಬೆಂಗಳೂರು ಪೋಲೀಸರ ಧಕ್ಷತೆಯ ವಿಚಾರ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಕೊನೆಗೆ ತಡೆಯಲಾರದೆ ‘ಎಲ್ಲಿ ಸ್ವಾಮಿ ಕೊಲೆಯಾಗಿರೋದು’ ಎಂದು ಕೇಳಿಬಿಟ್ಟೆ. ಅದಕ್ಕವರು ‘ರೈಲ್ವೆ ಸ್ಟೆಶನ್ ಪಕ್ಕದಲ್ಲೆ, ಒಂದು ಹುಡುಗಿಗಾಗಿ ಜಗಳವಾಡಿ ಕೊಲೆಯಾಗಿದೆ’ ಅಂದು ಚಿಲ್ಲರೆಯನ್ನು ಚಿತ್ರದ ಮೇಲೆ ಎಸೆದು ನಡೆದುಬಿಟ್ಟರು. ನನಗೆ ಕಣ್ಣಿಗೆ ಕತ್ತಲಿಟ್ಟಂತಾಗಿ, ಎದೆಯಲ್ಲಿ ಸಣ್ಣಗೆ ನೋವು ಕಾಣಿಸಿಕೊಂಡಿತು. ‘ದೇವರೆ ಹಾಗಗದಿರಲಿ’ ಎಂದುಕೊಂಡು ಎದ್ದು ರೈಲ್ವೆ ಸ್ಟೇಶನ್ ಕಡೆ ನಡೆದೆ. ಅಲ್ಲಿ, ಮೈಸೂರು ಕಡೆಯ ಲೈನಿದೆಯಲ್ಲ, ಅಲ್ಲಿ. ಜನಗಳ ದೊಡ್ಡ ಗುಂಪು ಇದ್ದದ್ದನ್ನು ಕಂಡು ಅಲ್ಲಿಗೆ ಓಡಿದೆ. ಇನ್ನು ಮಹಜರು ನಡದೇ ಇತ್ತು. ಯಾವುದು ಆಗದಿರಲಿ ಎಂದು ನಾನು ಅಂದುಕೊಂಡಿದ್ದೆನೋ ಅದೇ ಆಗಿತ್ತು. ರಕ್ತದ ಮಡುವಿನಲ್ಲಿ ನಮ್ಮ ಹುಡುಗ ಬಿದ್ದಿದ್ದ. ಆ ಹುಡುಗಿಯೂ ಅಲ್ಲಿಯೇ ಇದ್ದಳು. ನಾನಂದು ಕೊಂಡಂತೆ ಅವಳು ಬೆದರಿದಂತೆ ಕಾಣಲಿಲ್ಲ. ಯುದ್ಧವೊಂದನ್ನು ಗೆದ್ದ ಯೋಧನ ಮುಖಭಾವವನ್ನು ನಾನು ಅವಳಲ್ಲಿ ಗುರುತಿಸಿದೆ. ಅಲ್ಲೆ ಒಂದು ಕಡೆ ಒಬ್ಬನಿಗೆ ಕೈಕೋಳ ತೊಡಿಸಿ ಕೂರಿಸಿದ್ದರು. ನನಗೆ ಅವನನ್ನು ಎಲ್ಲಿಯೋ ನೋಡಿದ್ದೇನೆ ಅನ್ನಿಸಿ ಸ್ವಲ್ಪ ಹತ್ತಿರ ಹೋಗಿ ಗಮನಿಸಿದೆ. ಹುಡುಗಿ ನಮ್ಮ ಹುಡುಗನಿಗೆ ಹೇಳಿದಂತೆ ಆತ ಡ್ರೈವರ್ ಆಗಿರಲಿಲ್ಲ. ಸಣ್ಣಪುಟ್ಟ ಕಳ್ಳತನ ಮಾಡಿ ಜೈಲು ಕಂಡು ರೌಡಿಯನ್ನಿಸಿಕೊಂಡಿದ್ದ ವೆಂಕಟೇಶನೇ ಆತ. ಅಷ್ಟರಲ್ಲಿ ಹುಡುಗಿಯ ತಂದೆ ಬಂದರೆಂದು ಕಾಣುತ್ತದೆ. ಹುಡುಗಿಯ ಹೇಳಿಕೆ ತಗೆದುಕೊಳ್ಳತೊಡಗಿದರು. ನಾನು ಹೋಗುವಷ್ಟರಲ್ಲಿ ವೆಂಕಟೇಶನ ಹೇಳಿಕೆ ತಗೆದುಕೊಂಡಾಗಿತ್ತಾದ್ದರಿಂದ ಆತ ಏನು ಹೇಳಿದ್ದನೆಂದು ನನಗೆ ಗೊತ್ತಿಲ್ಲ. ಆದರೆ ಹುಡುಗಿ ಮಾತ್ರ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದು ಬಿಟ್ಟಿದ್ದಳು. ಅವಳು ತನ್ನ ಹೇಳಿಕೆಯಲ್ಲಿ ‘ಇವರಾರೊ ನನಗೆ ಗೊತ್ತಿಲ್ಲ. ಯಾವುದೋ ಹುಡುಗಿಯ ವಿಚಾರವಾಗಿ ಪರಸ್ಪರ ವಾದ ಮಾಡಿಕೊಂಡು ನನ್ನ ಹಿಂದೆ ಬರುತ್ತಿದ್ದವರು, ಇದ್ದಕಿದ್ದಂತೆ ಜಗಳಕ್ಕೆ ಬಿದ್ದರು. ಈತ ಅವನನ್ನು ಚಾಕುವಿನಿಂದ ಹಿರಿದು ಕೊಂದುಬಿಟ್ಟ. ಭಯವಾಗಿ ನಾನು ಕಿರುಚಿಕೊಂಡೆ. ದೇವರ ದಯದಿಂದ ಅಷ್ಟರಲ್ಲಿ ಪೋಲೀಸರು ಬಂದು ಈತನನ್ನು ಬಂಧಿಸಿದರು’ ಎಂದು ಪತ್ರಿಕೆಯರ ಮುಂದೆ ನಿರ್ಭೀತಿಯಿಂದ ಹೇಳಿಬಿಟ್ಟಳು.
ಹೆಚ್ಚಿನ ರಿಸ್ಕ್ ತಗೆದುಕೊಳ್ಳಲು ನಾನು ಸಿದ್ದನಿರಲಿಲ್ಲ. ಅದರಿಂದ ನಮ್ಮ ಹುಡುಗ ಸತ್ತವನು ಬದುಕಿ ಬರುತ್ತಲೂ ಇರಲಿಲ್ಲ. ವೆಂಕಟೇಶನನ್ನು ಪೋಲೀಸರು ಸ್ಟೇಶನ್ನಿಗೆ ಕರೆದುಕೊಂಡು ಹೋದರು. ಇತ್ತ ತಂದೆ ಮಗಳು ಮನೆಗೆ ನಡೆದರು. ನಾನು ಆ ದಿನ ಪೂರ್ತಿ ಹೋರಾಟ ಮಾಡಿ, ಕೆಲವರ ಕೈ ಬಿಸಿ ಮಾಡಿ ಹುಡುಗ ನನಗೆ ಸಂಬಂಧಪಟ್ಟವನೆಂದು ನಂಬಿಸಿ, ಹೆಣವನ್ನು ಪಡೆದುಕೊಂಡು ಅಂದು ರಾತ್ರಿಯೆ ಸಂಸ್ಕಾರ ಮಾಡಿಬಿಟ್ಟೆ. ಮರುದಿನ ಪತ್ರಿಕೆಯಲ್ಲಿ ಮಮೂಲು ಸುದ್ದಿಯಾಯಿತು. ‘ಹುಡುಗಿಗಾಗಿ ಕೊಲೆ’ ಎಂದು.
ನಾನು ನಿಟ್ಟುಸಿರು ಬಿಟ್ಟೆ. ‘ನೀನು ನಿಜ ಹೇಳಿಬಿಡಬೇಕಿತ್ತು. ಇದರಿಂದ ಅಪರಾಧಿಗೆ ಶಿಕ್ಷೆ ಆಗುತಿತ್ತು. ನಿಜವಾದ ಅಪರಾಧಿ ಆ ಹುಡುಗಿ. ಕೊನೆಯ ಪಕ್ಷ ಆ ಹುಡುಗಿ ಏಕೆ ಹಾಗೆ ಮಾಡಿದಳು ಎಂದಾದರು ತಿಳಿಯುತಿತ್ತು’ ಎಂದು ನನ್ನ ಸಮಾಧಾನಕ್ಕೊ, ಆತನ ಸಮಾಧಾನ ಮಾಡಲಿಕ್ಕೊ ಎಂಬಂತೆ ಹೇಳತೊಡಗಿದೆ. ನಡುವೆ ಬಾಯಿ ಹಾಕಿದ ಮುದುಕ ‘ಅದು ನನಗೆ ಗೊತ್ತು. ನೆನ್ನೆಯೆಲ್ಲ ಅದೇ ಕೆಲಸವನ್ನು ಮಾಡಿದ್ದೇನೆ. ಆ ಹುಡುಗಿಯ ಅಪ್ಪ ಇದ್ದಾನಲ್ಲ, ಅವನು ಯಾವ ಅರ್ಚಕನೂ ಅಲ್ಲ. ಆಳುವ ಸರ್ಕಾರಕ್ಕೆ ಹತ್ತಿರದವನಾದ ಒಬ್ಬ ಶ್ರೀಮಂತ. ಮರಿ ಪುಡಾರಿ. ಆತ ಮುಂದಿನ ಎಲೆಕ್ಷನ್ನಿನಲ್ಲಿ ಎಂಎಲ್‌ಎ ಆಗುವುದು ಗ್ಯಾರಂಟಿ. ಆತನ ಹೆಸರು ಬೇಡ. ಅದು ನನ್ನಲ್ಲಿಯೇ ಇರಲಿ’ ಎಂದು ಸುಮ್ಮನಾದ. ಆದರೆ ನನಗೆ ಸುಮ್ಮನಿರಲಾಗಲಿಲ್ಲ. ‘ಆತನ ಹೆಸರಾಗಲಿ, ಆತನಾರೆಂದಾಗಲಿ ನನಗೆ ಬೇಡ. ಆದರೆ ಆ ಹುಡುಗಿ ಏಕೆ ಸುಳ್ಳು ಹೇಳಿದಳು. ಅದನ್ನಾದರು ಹೇಳು’ ಎಂದು ಕೇಳಿದೆ. ಸ್ವಲ್ಪ ಹೊತ್ತು ನನ್ನ ಮುಖವನ್ನು ದಿಟ್ಟಿಸಿದ ಮುದುಕನಿಗೆ, ಇದು ನಂಬಬಹುದಾದ ಪ್ರಾಣಿ ಎನ್ನಿಸಿತೇನೊ, ಹೇಳತೊಡಗಿದ. ‘ನೋಡಿ, ಬೆಂಗಳೂರಿನಲ್ಲಿ ನಮಗೇ ಗೊತ್ತಿಲ್ಲದಂತೆ ಈ ಅಂಡರ್‌ವರ್ಡ್ ಹೇಗೆ ಬೆಳಿತಾಯಿದೆ ಅಂತ. ಕೊಲೆಗಾರನಿದ್ದಾನಲ್ಲ, ಅವನು ಮೊದಲೇ ರೌಡಿ. ಈ ಹುಡುಗಿ ಚೆಲ್ಲು. ಇನ್ನು ಕಾಲೇಜಿನಲ್ಲಿ ಓದುತ್ತಿರುವುದು. ಈ ಸೆಕ್ಸ್ ಚಿತ್ರ ಇರುತ್ತಂತಲ್ಲ, ಆ ತರದ ಪೆನ್ನುಗಳನ್ನು ಮಾರೊ ನೆಪದಲ್ಲಿ ಆ ಹುಡುಗಿನ ಪಟಾಯಿಸಿ ಬೆತ್ತಲೆ ಫೋಟೊ ತಗೆದಿದ್ದನಂತೆ. ಮಜ ಮಾಡಲು ಅಪ್ಪ ಕೊಡುತ್ತಿದ್ದ ಕಂತೆ ಕಂತೆ ದುಡ್ಡು ಸಾಲದೆಯೋ ಅಥವಾ ಕೇವಲ ಖುಷಿಗಾಗಿಯೋ ಕಾಣೆ. ಈ ಹುಡುಗಿಯೂ ಒಪ್ಪಿಕೊಂಡಿತ್ತಂತೆ. ಆದರೆ ಆ ಪೋಟೊಗಳನ್ನು ಇಟ್ಟುಕೊಂಡು ತನ್ನನ್ನೇ ಮದುವೆಯಾಗುವಂತೆ ಒತ್ತಾಯಿಸತೊಡಗಿದ. ಇದರಿಂದ ಎದರಿದ ಹುಡುಗಿ ಮನೆಯಲ್ಲಿ ನೋಡಿದ್ದ ಹುಡುಗನನ್ನು ಮದುವೆಯಾಗಲು ಒಪ್ಪಲಿಲ್ಲ. ಆದರೆ ಅವಳ ಅಪ್ಪ ಇದ್ದಾನಲ್ಲ, ಕ್ರಿಮಿನಲ್ ನನ್ಮಗ ಅವನು. ಕೇವಲ ಎರಡೇ ದಿನದಲ್ಲಿ ಮಗಳು ಮದುವೆ ಬೇಡ ಅನ್ನುತ್ತಿರುವುದಕ್ಕೆ ಕಾರಣ ಹುಡುಕಿದ. ಆದರೆ ದುಡುಕಲಿಲ್ಲ. ಮುಂದಿನ ಎಲೆಕ್ಷನ್ನಿಗೆ ನಿಲ್ಲುವ ಯೋಚನೆಯಲ್ಲಿದ್ದವನಿಗೆ, ಅದು ಬೇಕೂ ಇರಲಿಲ್ಲ. ಮನೆಯ ಮಾತು ಹೊರಬಾರದಂತೆ ಎಚ್ಚರಿಕೆ ವಹಿಸಿದ. ಆದರೆ ಮಗಳನ್ನು ಒಪ್ಪಿಸಿ ವೆಂಕಟೇಶನನ್ನು ನಿವಾರಿಸಲು ಒಂದು ಪ್ಲಾನ್ ಮಾಡಿದ. ಅದಕ್ಕಾಗಿ ಒಂದು ಬಲಿ ಕೊಡಲು ನಿರ್ಧರಿಸಿದ. ಆ ಬಲಿಯೇ ನಮ್ಮ ಹುಡುಗ’ ಎಂದು ಮಾತು ಮುಗಿಸಿದ ಮುದುಕ ಎದ್ದು ಚಿತ್ರದ ಮೇಲೆ ಬಿದ್ದಿದ್ದ ಚಿಲ್ಲರೆ ಕಾಸನ್ನು ಗುಡ್ಡೆ ಹಾಕತೊಡಗಿದ. ಇನ್ನು ಮಾತನಾಡಲು ಏನೂ ಉಳಿದಿಲ್ಲವೆನಿಸಿ ‘ನಾನು ಬರುತ್ತೇನೆ’ ಎಂದು ಹೊರಟೆ. ‘ಒಂದು ನಿಮಿಷ’ ಎಂದ ಮುದುಕನ ಕರೆಗೆ ತಿರುಗಿ ‘ಏನು’ ಎಂಬಂತೆ ನೋಡಿದೆ. ‘ಈ ವಿಷಯ ಗುಟ್ಟಾಗಿರಲಿ. ನಂಗ್ಯಾಕೆ ಬೇಕು ಹೇಳಿ. ಬಡವರ ಕೋಪ ದವಡೆಗೆ ಮೂಲ ಅಂತ. ಅಂದ ಹಾಗೆ ಬರೊ ಭಾನುವಾರಕ್ಕೆ ಎಂಟುದಿನಕ್ಕೆ ಆ ಹುಡುಗಿ ಮದುವೆ. ಬೇಕಾದ್ರೆ ಆ ಹುಡುಗಿ ಹೇಗಿದಾಳೆ ಅಂತ ಹೋಗಿ ನೋಡ್ಕಂಡು ಬನ್ನಿ. ನೀವು ಆಶ್ಚರ್ಯ ಪಡ್ತಿರಾ. ದೇಹಕ್ಕೂ ಮನಸ್ಸಿಗೂ ಎಷ್ಟೊಂದು ಅಂತರ ಅಂತ’ ಎಂದು ಬಗ್ಗಿ ತನ್ನ ಸಾಮಾನುಗಳನ್ನು ಜೋಡಿಸಿಕೊಳ್ಳತೊಡಗಿದ. ಸ್ಟ್ಯಾಂಡಿನ ಕಡೆಗೆ ಕಾಲೆಳೆದುಕೊಂಡು ಹೊರಟವನಿಗೆ ಹಗಲುಗನಸಿನ ಅಮಲುಗಣ್ಣುಳ ಆ ಹುಡುಗನ ಮುಖ ಹೆಜ್ಜೆ ಹೆಜ್ಜೆಗೂ ಮೂಡಿ ಮರೆಯಾಗತೊಡಗಿತು. ಹುಡುಗನಿಗೆ ಅಗಾಧವಾದ ನಂಬಿಕೆಯಿದ್ದ ಪವಾಡಗಳಲ್ಲಿ ಮೂರನೆಯದೂ ನಡೆದು ಹೋಗಿತ್ತು. ಆದರೆ ‘ಇದು ನನ್ನ ಜೀವನದ ಮೂರನೆ ಪವಾಡ’ ಎಂದು ಎದೆ ತಟ್ಟಿ ಹೇಳಿಕೊಳ್ಳಲು ಆತ ಮಾತ್ರ ಇರಲಿಲ್ಲ.
Subscribe to:
Posts (Atom)