Thursday, July 16, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 20

ಜಾತ್ರೆ, ಚಂದಾ ವಸೂಲಿ
ಕುಂದೂರುಮಠದಲ್ಲಿ ವರ್ಷಕ್ಕೊಮ್ಮೆ ಷಷ್ಟಿಜಾತ್ರೆ ನಡೆಯುತ್ತಿದ್ದುದ್ದನ್ನು ಮೊದಲೇ ಹೇಳಿದ್ದೇನೆ. ಸುತ್ತಮುತ್ತಲಿನ ಹಳ್ಳಿಯವರಿಗೆ ಅದೊಂದು ಪ್ರಮುಖ ಜಾತ್ರೆಯಾಗಿತ್ತು. ಸುಬ್ರಹ್ಮಣ್ಯನ ಹೆಸರಿನಲ್ಲಿ ಜಾತ್ರೆ ನಡೆಯುತ್ತಿದ್ದರೂ, ರಂಗನಾಥಸ್ವಾಮಿ ಮತ್ತು ಮೆಳೆಯಮ್ಮನ ದೇವಾಲಯಗಳಿಗೂ ಜನ ವಿಪರೀತ ಸೇರುತ್ತಿದ್ದರು. ನೂರಾರು ವಿವಿಧ ರೀತಿಯ ಅಂಗಡಿಗಳು, ಹತ್ತಾರು ಮಿಠಾಯಿ ಅಂಗಡಿಗಳು, ರಾಟೆ ತೊಟ್ಲು, ಗಿರಗಟ್ಟೆ, ತಡಿಕೆ ಹೋಟೆಲ್ ಇತ್ಯಾದಿಗಳೆಲ್ಲಾ ಸೇರಿ ಜಾತ್ರೆಯ ಆಕರ್ಷಣೆ ಹೆಚ್ಚಾಗಿರುತ್ತಿತ್ತು. ಸಿನಿಮಾದ ಹುಚ್ಚು ಹಬ್ಬಿದ್ದನ್ನು ಮೊದಲೆ ಹೇಳಿದ್ದೇನೆ. ಹೀಗೆ, ಜಾತ್ರೆಯಲ್ಲಿ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ಅಂಗಡಿಯವರು ಮಠಕ್ಕೆ ಇಂತಿಷ್ಟು ಎಂದು ಹಣ ಕೊಡಬೇಕಾಗಿತ್ತು. ಜಾತ್ರೆ ನಡೆಯುವಾಗಲೇ ಈ ಹಣವನ್ನು ಮಠದವರು ಸಂಗ್ರಹಿಸಿಬಿಡುತ್ತಿದ್ದರು.
ಸಾಮಾನ್ಯವಾಗಿ ಜಾತ್ರೆಯ ದಿನಗಳಲ್ಲಿ ಒಂದು ವಾರ ರಜವಿದ್ದರೂ ಹೆಚ್ಚಿನ ಹಾಸ್ಟೆಲ್ ಹುಡುಗರು ಊರಿಗೆ ಹೋಗುತ್ತಿರಲಿಲ್ಲ. ಜಾತ್ರೆಗೆಂದೇ ದುಡ್ಡನ್ನು ಉಳಿತಾಯ ಮಾಡಿಟ್ಟುಕೊಂಡಿದ್ದವರು ಒಂದೆರಡು ದಿನದಲ್ಲಿಯೇ ಖರ್ಚು ಮಾಡಿಕೊಂಡು, ಅಂಗಡಿ ಬೀದಿಯಲ್ಲಿ ಅಲೆಯುತ್ತಾ ಕಾಲ ಕಳೆಯುತ್ತಿದ್ದರು. ಆದರೆ ನಾವು ಹತ್ತನೇ ತರಗತಿಯಲ್ಲಿದ್ದಾಗ, ವಾರ್ಡನ್ನರ ಪ್ರಚೋದನೆಯಿಂದ ಸ್ವಾಮೀಜಿಯವರಲ್ಲಿಗೆ, ನನ್ನ ನೇತೃತ್ವದಲ್ಲಿ ಹುಡುಗರ ಒಂದು ಗುಂಪನ್ನು ಕರೆದುಕೊಂಡು ಹೋಗಿದ್ದೆ. ಸ್ವಾಮೀಜಿಯವರಲ್ಲಿ ನಮ್ಮ ಬೇಡಿಕೆ ಸರಳವಾಗಿತ್ತು. ಅದೆಂದರೆ, ‘ಜಾತ್ರೆಗೆ ಸಂಬಂಧಪಟ್ಟ ಸಣ್ಣಪುಟ್ಟ ಕೆಲಸಗಳಿಗೆ ಹಾಸ್ಟೆಲ್ ಹುಡುಗರನ್ನು ಅವರು ಬಳಸಿಕೊಂಡಿದ್ದರಿಂದ, ಹುಡುಗರಿಗೆ ಒಂದಷ್ಟು ಮಿಠಾಯಿ, ಹಣ್ಣು ಮೊದಲಾದವುಗಳನ್ನು ಕೊಡಿಸಿ’ ಎಂಬುದಾಗಿತ್ತು.
ಹಾಗೆ ನೋಡಿದರೆ ನಾವು ಮಠಕ್ಕೆ ಅಂತಹ ಕೆಲಸವನ್ನೇನು ಮಾಡಿಕೊಟ್ಟಿರಲಿಲ್ಲ. ಜಾತ್ರೆ ಶುರುವಾಗುವ ಮೊದಲು ಹದಿನೈದು ದಿನಗಳ ಮುಂಚೆ ಒಂದು ವಿಧಿಯನ್ನು ನಡೆಸುತ್ತಾರೆ. ಅದಕ್ಕೆ ‘ಎಣ್ಣೆಸೀರೆ ಸುಡುವುದು’ ಎಂದು ಹೆಸರು. ಈ ‘ಎಣ್ಣೆ ಸೀರೆ ಸುಡುವ ಕಾರ್ಯ’ಕ್ಕೆಂದೇ ಕೆಲವು ರೈತಾಪಿ ಜನಗಳು ಒಂದೆರಡು ಸೇರು ಹರಳನ್ನು (ಹಳ್ಳನ್ನು) ಮಠಕ್ಕೆ ಕಾಣಿಕೆ ಎಂದು ಕೊಡುತ್ತಿದ್ದರು. ಆಗ ಕೊಟ್ಟ ಹರಳೇ ಸುಮಾರು ಮೂರ್‍ನಾಲ್ಕು ಕ್ವಿಂಟಾಲ್ ಆದರೂ ಆಗುತ್ತಿದ್ದವು. ಆದರೆ ಆ ವಿಧಿಗೆ ಬಳಸುತ್ತಿದ್ದುದ್ದು ಕೇವಲ ಒಂದೆರಡು ಲೀಟರ್ ಎಣ್ಣೆ ಮಾತ್ರ! ಹೊಸ ರೇಷ್ಮೆ ಸೀರೆ ಎಂದು ಹೇಳುತ್ತಿದ್ದರೂ, ಅದು ರೇಷ್ಮೆಯದ್ದಾಗಿರದೆ, ಮೆಳೆಯಮ್ಮನಿಗೆ ಯಾವುದೋ ಭಕ್ತರು ತಂದುಕೊಡುತ್ತಿದ್ದ ಇಪ್ಪತ್ತು-ಮೂವತ್ತು ರೂಪಾಯಿ ಬೆಲೆಯ ಸೀರೆಯಾಗಿರುತ್ತಿತ್ತು!
ಎಣ್ಣೆ ಸೀರೆ ಸುಡುವ ರಾತ್ರಿಯಂದು, ಸುಬ್ರಹ್ಮಣ್ಯನ ಉತ್ಸವಮೂರ್ತಿಯನ್ನು ಅಡ್ಡೆಯಲ್ಲಿ ಹೊತ್ತು, ಮೆರವಣಿಗೆಯಲ್ಲಿ ಕರೆದುಕೊಂಡು ಎರಡೂ ಸುಬ್ಬಪ್ಪನ ಗುಡಿಗಳ ಮೂಲಸ್ಥಾನದಲ್ಲಿ ಪೂಜೆ ಮಾಡಿಸಿ, ಕೆಳಗಿನ ಸುಬ್ಬಪ್ಪನ ಗುಡಿಯ ಬಳಿ ಒಂದು ಹೊಸ ಸೀರೆಗೆ, ಒಂದೆರಡು ಲೀಟರ್‌ನಷ್ಟು ಹರಳೆಣ್ಣೆ ಹಾಕಿ ಸುಟ್ಟು ಅದರಿಂದ ಉತ್ಪಾದನೆಯಾಗುವ ಕರಿ(ಮಸಿ)ಯನ್ನು ಸಂಗ್ರಹಿಸುವುದೇ ಆ ವಿಧಿ. ಹಾಗೆ ಸಂಗ್ರಹಿಸಿದ ಕಪ್ಪನ್ನು ಸ್ವಾಮೀಜಿಗಳು ಬಂದ ಭಕ್ತರ ಹಣೆಗೆ ಹಚ್ಚಿ ಆಶೀರ್ವದಿಸುತ್ತಿದ್ದರು.
ಹಾಗೆ ಅಡ್ಡೆದೇವರುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು, ಅದು ರಾತ್ರಿ ವೇಳೆಯಾದ್ದರಿಂದ ಬೇರೆ ಹಳ್ಳಿಯ ಜನರು ಬರುತ್ತಿದ್ದುದ್ದು ಕಡಿಮೆ. ಆಗ ಹಾಸ್ಟೆಲ್ ಹುಡುಗರನ್ನು ಕರೆಯುತ್ತಿದ್ದರು. ಸ್ವಲ್ಪ ಬಲಿಷ್ಠರಾಗಿದ್ದ ನಾವು ಅನೇಕರು ಅಡ್ಡೆ ದೇವರನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದೆವು. ಆ ಘನಕಾರ್ಯವನ್ನೇ ನಾವು ಮುಂದಿಟ್ಟುಕೊಂಡು ಮಿಠಾಯಿಯನ್ನು ಕೊಡಿಸುವಂತೆ ಸ್ವಾಮೀಜಿಗಳಲ್ಲಿ ಬೇಡಿಕೆ ಇಟ್ಟಿದ್ದು. ಅದಕ್ಕೆ ವಾರ್ಡನ್ ಚಿತಾವಣೆ ಬೇರೆ!
ವಾರ್ಡನ್ ಮತ್ತು ನಾವು ಚಾಪೆಯ ಕೆಳಗೆ ನುಸುಳಿದರೆ, ಸ್ವಾಮಿಜಿಗಳಿಬ್ಬರೂ ರಂಗೋಲಿಯ ಕೆಳಗೆ ನುಸುಳಿದ್ದರು. ಸ್ವಲ್ಪ ಜಿಪುಣರೂ ದುರಾಸೆಯವರೂ ಆಗಿದ್ದ ಅವರು ತಮ್ಮ ಕಡೆಯಿಂದ ಒಂದೂ ನಯಾಪೈಸೆ ಕೊಡದೆ ನಮ್ಮ ಬೇಡಿಕೆ ಈಡೇರಿಸಿಬಿಟ್ಟಿದ್ದರು! ಒಂದು ಚೀಟಿಯಲ್ಲಿ, ಎಲ್ಲಾ ಮಿಠಾಯಿ ಅಂಗಡಿಯವರೂ ಅರ್ಧರ್ಧ ಕೇಜಿ ಮಿಠಾಯಿಯನ್ನು ನಮಗೆ ಕೊಡಬೇಕೆಂದು ಬರೆದು, ಮಿಠಾಯಿ ಅಂಗಡಿಯವರಿಗೆ ಬರೆ ಎಳೆದಿದ್ದರು. ಹಾಗೇ ಕಡ್ಲೆಪುರಿ, ಕಾರ, ಬತ್ತಾಸು, ಮಾರುವವರಿಗೆ ಒಂದು ಚೀಟಿಯನ್ನು ಬರೆದು ಅವರೂ ಇಂತಿಷ್ಟು ಕೊಡಬೇಕೆಂದು ಫರ್ಮಾನು ಹೊರಡಿಸಿದ್ದರು. ಬಾಳೇಹಣ್ಣನ್ನು ಮಾರುವ ಅಂಗಡಿಗಳಿಗೆ ಒಂದು ಚೀಟಿಯನ್ನು ಬರೆದುಕೊಟ್ಟಿದ್ದರು.
ನಾವು ಏನೂ ಇಲ್ಲದಿರುವುದಕ್ಕಿಂತ ವಾಸಿ ಎಂದುಕೊಂಡು ಚೀಟಿಯನ್ನು ತೆಗೆದುಕೊಂಡು ಎಲ್ಲಾ ಮಿಠಾಯಿ ಅಂಗಡಿ ಮತ್ತು ಕಡ್ಲೆಪುರಿ ಅಂಗಡಿ ಬಾಳೇಹಣ್ಣಿನ ಅಂಗಡಿಗಳ ಬಳಿ ಹೋಗಿ ಚೀಟಿ ತೋರಿಸಿ ಕೇಳುತ್ತಿದ್ದೆವು. ಅವರು ಒಳಗೊಳಗೆ ಬಯ್ಯುತ್ತಲೇ ತಮಗೆ ತೋಚಿದಷ್ಟನ್ನು ಕೊಡುತ್ತಿದ್ದರು. ಹೀಗೆ ಸುಮಾರು ಐದಾರು ಕೇ.ಜಿ.ಯಷ್ಟು ಮಿಠಾಯಿಯನ್ನು ಇಪ್ಪತ್ತು ಲೀಟರಿಗೂ ಹೆಚ್ಚು ಕಡ್ಲೆಪುರಿ, ಒಂದೆರಡು ಕೇ.ಜಿ.ಯಷ್ಟು ಕಾರ, ನೂರಾರು ಬಾಳೇಹಣ್ಣುಗಳನ್ನು ನಾವು ಸಂಗ್ರಹಿಸಿದ್ದೆವು. ರಾತ್ರಿ ಹಾಸ್ಟೆಲ್ ಹುಡುಗರಿಗೆಲ್ಲಾ ಹಂಚಿದ್ದೆವು. ಇಷ್ಟೆಲ್ಲಾ ಕಷ್ಟ ಪಟ್ಟರೂ ಒಬ್ಬೊಬ್ಬರಿಗೆ ನೂರು ಗ್ರಾಮ್‌ನಷ್ಟು ಮಾತ್ರವೇ ಮಿಠಾಯಿ ಸಿಕ್ಕಿದ್ದು!
ಪಾಪಣ್ಣ ಅರ್ಧ ಕೆ.ಜಿ. ಜಿಲೇಬಿ ತಿಂದ!
ಇದೇ ಸಂದರ್ಭದಲ್ಲಿ ಮಿಠಾಯಿಯ ಬಗ್ಗೆ ವಿಪರೀತ ವ್ಯಾಮೋಹವಿದ್ದ ಪಾಪಣ್ಣ ಎಂಬುವವನು, ‘ಅರ್ಧ ಕೇ.ಜಿ. ಜಿಲೇಬಿಯನ್ನು ಒಬ್ಬನೇ ತಿನ್ನುತ್ತೇನೆ’ ಎಂದು ಸುರೇಶ ಎಂಬುವವನಲ್ಲಿ ಬೆಟ್ ಕಟ್ಟಿಬಿಟ್ಟ. ಪಾಪಣ್ಣ ತಿನ್ನದೇ ಇದ್ದರೆ, ಜಿಲೇಬಿಯ ಹಣ ಮತ್ತು ಐವತ್ತು ರೂಪಾಯಿಗಳನ್ನು ಸುರೇಶನಿಗೆ ಕೊಡಬೇಕಾಗಿತ್ತು. ತಿಂದರೆ ಜಿಲೇಬಿಯ ಹಣ ಜೊತೆಗೆ ಐವತ್ತು ರೂಪಾಯಿಯನ್ನು ಸುರೇಶ ಪಾಪಣ್ಣನಿಗೆ ಕೊಡಬೇಕಾಗಿತ್ತು. ಈ ಬೆಟ್ಟಿಂಗ್ ಅಲ್ಲದೆ ಪ್ರೇಕ್ಷಕರಾಗಿದ್ದ ನಾವು ಪಾಪಣ್ಣ ತಿನ್ನುತ್ತಾನೆ ಎಂದು, ತಿನ್ನುವುದಿಲ್ಲ ಎಂದು ಐದೋ ಹತ್ತೋ ರುಪಾಯಿ ಬೆಟ್ ಕಟ್ಟಿಕೊಂಡಿದ್ದೆವು.
ಹಿಂದೊಮ್ಮೆ ಇದೇ ಪಾಪಣ್ಣ, ಒಂದೇ ನಿಮಿಷದಲ್ಲಿ ಒಂದು ಪ್ಯಾಕ್ ಗ್ಲೂಕೋಸ್ ಬಿಸ್ಕೆಟ್ಟನ್ನು ತಿಂದು ಬೆಟ್ ಗಿದ್ದಿದ್ದ. ಒಂದು ಪ್ಯಾಕ್ ಬಿಸ್ಕೆಟ್ಟನ್ನು ಪೂರಾ ಒಂದೆರಡು ಗ್ಲಾಸ್ ನೀರಿನಲ್ಲಿ ಹಾಕಿ ಗಟಗಟನೆ ಕುಡಿದುಬಿಟ್ಟಿದ್ದ. ಅವನ ವಿರುದ್ಧ ಬೆಟ್ ಕಟ್ಟಿದ್ದವರು ಅದನ್ನು ಒಪ್ಪಿರಲಿಲ್ಲ. ಆದರೆ ವಾರ್ಡನ್ ಮಧ್ಯ ಪ್ರವೇಶದಿಂದ ಪಾಪಣ್ಣ ಗೆದ್ದಿದ್ದನ್ನು ತೀರ್ಮಾನಿಸಲಾಗಿತ್ತು. ಬೆಟ್ ಕಟ್ಟುವ ಮೊದಲು ನೀರು ಕುಡಿಯಬಾರದು ಎಂದು ಹೇಳಿಲ್ಲದಿದ್ದರಿಂದ ವಾರ್ಡನ್ ಪಾಪಣ್ಣನ ಪರವಾಗಿ ತೀರ್ಮಾನ ಕೊಟ್ಟಿದ್ದರು. ಆದ್ದರಿಂದ ನಾನು, ಈ ಭಾರಿಯೂ ಪಾಪಣ್ಣ ಗೆಲ್ಲುತ್ತಾನೆ ಎಂದು ಐದು ರೂಪಾಯಿ ಬೆಟ್ ಕಟ್ಟಿದ್ದೆ!
ಜಾತ್ರೆಯ ಐದನೇ ದಿನ ಸಂಜೆ, ಸರಿಯಾಗಿ ತೂಕ ಮಾಡಿದ ಅರ್ಧ ಕೇ.ಜಿ. ಜಿಲೇಬಿಯನ್ನು ತಂದು, ಸ್ಕೂಲ್ ಬಳಿಯಿದ್ದ ಒಂದು ಮರದ ಕೆಳಗೆ ಪಾಪಣ್ಣನಿಗೆ ಕೊಡಲಾಯಿತು. ಐದಾರು ರಾಗಿ ಮುದ್ದೆ, ಒಂದು ರಾಶಿ ಅನ್ನವನ್ನು ನಿತ್ಯವೂ ಧ್ವಂಸ ಮಾಡುತ್ತಿದ್ದ ಪಾಪಣ್ಣನಿಗೆ ಅದು ಕಷ್ಟವಾಗಿ ಕಾಣಲೇ ಇಲ್ಲ. ತಿನ್ನಲು ಪ್ರಾರಂಭಿಸಿ ಹದಿನೈದೇ ನಿಮಿಷದಲ್ಲೇ ಮುಕ್ಕಾಲು ಪಾಲು ಮುಗಿಸಿಬಿಟ್ಟಿದ್ದ. ನಂತರ ಶುರುವಾಯಿತು ನೋಡಿ ಅವನ ಕಷ್ಟ. ಕೈಯಲ್ಲಿದ್ದ ಜಿಲೇಬಿ ಬಾಯಿಗೆ ಹೋಗಲು ಮುಷ್ಕರ ಹೂಡುತ್ತಿತ್ತು. ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಹದಿನೈದು ಹದಿನಾರು ವರ್ಷದ ಹುಡುಗನೊಬ್ಬ ಅರ್ಧ ಕೇಜಿ ಜಿಲೇಬಿಯನ್ನು ತಿನ್ನುವುದು ಸಾಮಾನ್ಯವಾದ ವಿಚಾರವಾಗಿರಲಿಲ್ಲ. ಆತನ ಬಾಯಿತುಂಬಾ ಅರ್ಧಂಬರ್ಧ ಜಗಿದ ಜಿಲೇಬಿಯಿದ್ದರೆ ಕೈಯಲ್ಲಿಯೂ ಜಿಲೇಬಿಯಿತ್ತು. ತಟ್ಟೆಯಲ್ಲಿ ಇನ್ನೂ ಮೂರ್‍ನಾಲ್ಕು ಜಿಲೇಬಿಗಳು ಕುಳಿತಿದ್ದವು. ಅಷ್ಟಕ್ಕೆ ಆತ ತುಂಬಾ ಸೋತು ಹೋಗಿದ್ದ.
‘ಸ್ವಲ್ಪ ನೀರು ಕುಡಿ’ ಯಾರೋ ಸಲಹೆ ಕೊಟ್ಟರು. ‘ಸ್ವಲ್ಪ ಹೊತ್ತು ಎದ್ದು ಓಡಾಡಿ ಆಮೇಲೆ ತಿನ್ನು’ ಎಂದು ಇನ್ನಾರೋ ಸಲಹೆ ಕೊಟ್ಟರು. ಆದರೆ ಅದಕ್ಕೆ ಸುರೇಶನ ಆಕ್ಷೇಪಣೆಯಿತ್ತು. ‘ಕುಳಿತಲ್ಲಿಂದ ಏಳದೆ ತಿನ್ನಬೇಕು’ ಎಂದು ಆತ ಹಠ ಹಿಡಿದ. ಮೊದಲಿಗೆ ಇವ್ಯಾವುವೂ ನಿರ್ಧಾರವಾಗದಿದ್ದ ಕಾರಣ ವಾದವಿವಾದಗಳು ನಡೆದವು. ಇದರಿಂದಾಗಿ ಪಾಪಣ್ಣನೂ ಸ್ವಲ್ಪ ಸುಧಾರಿಸಿಕೊಂಡು, ‘ನಾನು ಮಧ್ಯೆ ಒಂದು ಮೆಣಸಿನಕಾಯಿ ತಿನ್ನುತ್ತೇನೆ’ ಎಂದ. ಸುರೇಶ ಅದಕ್ಕೂ ಒಪ್ಪದಿದ್ದಾಗ, ನಾವೆಲ್ಲಾ ಆತನನ್ನು ಒಪ್ಪಿಸಬೇಕಾಯಿತು. ಒಂದು ಮೆಣಸಿನ ಕಾಯಿಯನ್ನು ಹಾಗೇ ಕಚ್ಚಿ ಕಚಕಚ ತಿಂದ ಪಾಪಣ್ಣ ನಂತರ ಸರಾಗವಾಗಿ ಇನ್ನು ಎರಡು ಜಿಲೇಬಿಗಳನ್ನು ಮುಗಿಸಿಬಿಟ್ಟಿದ್ದ. ನಂತರ ತಟ್ಟೆಯಲ್ಲಿ ಉಳಿದಿದ್ದ ಎರಡು ಜಿಲೇಬಿಗಳನ್ನು ಎತ್ತಿಕೊಂಡು ಒಂದೇ ಬಾರಿಗೆ ಬಾಯಿಯಲ್ಲಿ ತುರುಕಿಕೊಂಡು ಜಿಗಿದು, ಒಂದಷ್ಟನ್ನು ನುಂಗಿ, ಒಂದಷ್ಟನ್ನು ಹಲ್ಲಿನ ಸಂದಿಯಲ್ಲೆಲ್ಲಾ ಸೇರಿಸಿಕೊಂಡು ‘ನಾನು ಗೆದ್ದೆ’ ಎಂದು ಕೂಗಿದ! ಸುರೇಶ ವಿಧಿಯಿಲ್ಲದೆ ಐವತ್ತು ರೂಪಾಯಿಗಳನ್ನು ಕೊಡಬೇಕಾಯಿತು.
ಪಾಪಣ್ಣ ಪಂದ್ಯವನ್ನು ಗೆದ್ದ ಖುಷಿ ಮತ್ತು ವಾತಾವರಣ ಅಂದು ರಾತ್ರಿಯ ಹೊತ್ತಿಗೆ ಇಲ್ಲವಾಗಿತ್ತು. ಆತನಿಗೆ ವಿಪರೀತ ಹೊಟ್ಟೆಉರಿ ಕಾಣಿಸಿಕೊಂಡಿತ್ತು. ಜೊತೆಗೆ ಭೇದಿಯೂ ಶುರುವಾಯಿತು. ನಾಲ್ಕಾರು ಬಾರಿ ಹೊರಗೆ ಹೋಗಿಬಂದ ಆತನನ್ನು ಐದನೇ ಬಾರಿಗೆ ಎತ್ತಿಕೊಂಡೇ ಕಕ್ಕಸ್ಸಿಗೆ ಕರೆದೊಯ್ಯಬೇಕಾಯಿತು. ಅಡುಗೆ ಮನೆಯಲ್ಲಿದ್ದ ಧರ್ಮಣ್ಣನನ್ನು ಎಬ್ಬಿಸಿ ವಿಷಯ ತಿಳಿಸಲಾಯಿತು. ಪಾಪಣ್ಣನ ಕಣ್ಣು ಮೇಲೆ, ಕೆಳಗೆ ಆಡಲು ಶುರುವಾಯಿತು. ಸುರೇಶ ಅಳುತ್ತಾ ಕುಳಿತಿದ್ದ. ನಾವೆಲ್ಲಾ ಕಂಗಾಲಾಗಿದ್ದೆವು. ಧರ್ಮಣ್ಣ ಒಂದಷ್ಟು ಮಜ್ಜಿಗೆ ತಂದು ಕುಡಿಸಿದ. ರಾತ್ರೋ ರಾತ್ರಿ ಮಠದ ತೋಟಕ್ಕೆ ಹೋಗಿ ಒಂದು ಎಳನೀರನ್ನು ತಂದು ಕುಡಿಸಿದರು. ರಾತ್ರಿಯ ವೇಳೆ ತೆಂಗಿನ ಮರವನ್ನು ಹತ್ತಬಾರದಂತೆ, ಕಾಯಿ ಕೀಳಬಾರದಂತೆ! ಹಾಗೇನಾದರು ಮಾಡಲೇ ಬೇಕಾದರೆ ಒಂದು ಬಿಂದಿಗೆ ನೀರನ್ನು ತೆಂಗಿನ ಮರಕ್ಕೆ ಹಾಕಬೇಕಂತೆ! ಆ ಅವಸರದಲ್ಲೂ ಆ ವಿಧಿಯನ್ನು ಮಾಡಲಾಯಿತು. ಬೆಳಗಿನ ಜಾವ ಒಂದು ಬಾರಿ ಜೋರು ವಾಂತಿಯಾಯಿತು. ನಂತರ ಮತ್ತಷ್ಟು ಎಳನೀರು ಕುಡಿಸಿ ಮಲಗಿಸಿದರು. ಧರ್ಮಣ್ಣ ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಬೆಳಿಗ್ಗೆ ಏಳರ ಹೊತ್ತಿಗೆ ಪಾಪಣ್ಣ ಏನೂ ಆಗದವನಂತೆ ಎದ್ದು ಕುಳಿತಿದ್ದ! ‘ಸ್ವಲ್ಪ ಹೊಟ್ಟೆ ಉರಿಯುತ್ತಿದೆ. ಅಷ್ಟೆ’ ಎಂದು ಮತ್ತಷ್ಟು ಎಳನೀರು ಮಜ್ಜಿಗೆ ಕುಡಿದು ಒಂದೇ ದಿನದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದ!

11 comments:

Jayalaxmi said...

:-) ಚೆನ್ನಾಗಿದೆ ನಿಮ್ಮ ಈ ಲೇಖನ. ಬೆಟ್ ಕಟ್ಟಿ ನಂತರ ಅವಸ್ಥೆ ಪಡುವ ಜನ ಪ್ರತಿ ಊರಲ್ಲೂ ಸಿಕ್ತಾರೆ ಅಲ್ವಾ?

Ittigecement said...

ಸತ್ಯನಾರಾಯಣರೆ...

ನಮ್ಮ ಬಾಲ್ಯದ ಬೆಟ್ಟಿಂಗ್ ದಿನಗಳನ್ನು ನೆನಪಿಗೆ ತಂದುಬಿಟ್ಟಿದ್ದೀರಿ...

ಆ ದಿನಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದೀರಿ..

ಸುಂದರ ಬರಹಕ್ಕೆ ಅಭಿನಂದನೆಗಳು...

Guruprasad said...

ಸತ್ಯನಾರಯಣರವರೆ
ತುಂಬ ಚೆನ್ನಾಗಿ ಇದೆ, ನಿಮ್ಮ ಅನುಭವದ ಲೇಖನ ,,, ನಾವು ಚಿಕ್ಕವರಾಗಿದ್ದಾಗ ಬೆಟ್ ಕಟ್ಟಿ, ಆಡಿದ ಆಟಗಳು ನೆನಪಾದವು,, ಎಷ್ಟು ಚೆನ್ನಾಗಿ ಇರುತ್ತೆ ಅಲ್ವ....? ೧ ನಿಮಿಷದಲ್ಲಿ ನಾನು 6 ಬಿಸ್ಕುಟ್ ತಿನ್ನಬೇಕಾಗಿ ಇತ್ತು,, ಅದನ್ನು ತಿನ್ನದಿರ ಸೋತ ನೆನಪು ಮರುಕಳಿಸಿತು.....

shivu.k said...

ಸತ್ಯನಾರಾಯಣ ಸರ್,

ಜಾತ್ರೆಯ ವಿಚಾರವನ್ನು ಚೆನ್ನಾಗಿ ಬರೆದಿದ್ದೀರಿ...

‘ಎಣ್ಣೆಸೀರೆ ಸುಡುವುದು’ ಹೊಸ ವಿಚಾರ ಅದನ್ನು ತಿಳಿದುಕೊಂಡ ಹಾಗೆ ಆಯಿತು. ಮತ್ತೆ ಪಾಪಣ್ಣ ಬೆಟಿಂಗ್...ಅದರ ಕಾರ್ಯಕ್ರಮ ನಂತರ ರಾತ್ರಿ ಅವನ ದೇಹ ತೊಂದರೆ ಎಲ್ಲಾ ಓದಿ ನಗು ಬಂತು ಮತ್ತು ಬಾಲ್ಯದ ಆನಂದಗಳನ್ನು ನೆನೆಸಿಕೊಂಡು ಖುಷಿಯಾಯ್ತು...

ಚಿಕ್ಕಂದಿನಲ್ಲಿ ನಾನು ಹಸಿರು ಮೆಣಸಿನಕಾಯಿ ತಿನ್ನುತ್ತೇನೆ ಅಂತ ಬೆಟ್ ಕಟ್ಟಿ ತಿಂದು ನಂತರ ಒದ್ದಾಡಿದ್ದು ನೆನಪಾಗಿ ನಗು ಬಂತು..

umesh desai said...

ಸತ್ಯನಾರಾಯಣ ಅವರೆ ಅಂತೂ ಜಿಲೇಬಿ ತಿನ್ನುವಉಮೇದು ಅವನಿಗೆ ಬರಹ ಆತ್ಮೀಯವಾಗಿತ್ತು...

ಸವಿಗನಸು said...

ಸತ್ಯನಾರಾಯಣರೆ...
ನನ್ನ ಬಾಲ್ಯದಲ್ಲಿ 35 ಇಡ್ಲಿ ತಿಂದು ಮುಗಿಸಿದ್ದ ಗೆಳೆಯನ ನೆನಪಾಯಿತು...ಆದ್ರೆ ಗುಂಡುಕಲ್ಲು ತರಹ ಇದ್ದ.....ಚೆಂದದ ಲೇಖನ

ಜಲನಯನ said...

ಡಾ. ಬಿ.ಆರ್.ಎಸ್. ನಮ್ಮ ಜಾತ್ರೆಯ ಕದ್ದು ಹೋಗುವ ದಿನಗಳನ್ನು ನೆನೆಪಿಸಿದಿರಿ. ನಮ್ಮ ಎಚ್.ಕ್ರಾಸ್ ಜಾತ್ರೆ..(ಕೋಲಾರ-ಚಿಕ್ಕಬಳ್ಳಾಪುರ ರಸ್ತೆ ಮತ್ತು ಚಿಂತಾಮಣಿ-ಬೆಂಗಳೂರು ರಸ್ತೆಯ ಸಂಧಿ ಸ್ಥಾನ) ನಮ್ಮೂರಿಂದ ೨ಕಿ.ಮಿ. ನಮ್ಮ ಸ್ಕೂಲಿನ ದಿನಗಳಲ್ಲಿ ಹಿರಿಯರ ಜೊತೆಯಿಲ್ಲದೇ ಹೋಗುವ ಅನುಮತಿ ಹಿರಿಯರು ಕೊಡುತ್ತಿರಲಿಲ್ಲ, ಸ್ಕೂಲಿಂದ ಇದಕ್ಕೆಂದೇ ಪ್ರವಾಸ ಸಹಾ ಇರ್ತಿತ್ತು...ಮಿಠಾಯಿ ಅಂಗಡಿಗಳು, ಕಡಲೆಪುರಿ, ಬತ್ತಾಸು, ಮಂಡಕ್ಕಿ ಉಂಡೆ, ಬಣ್ಣ-ಬಣ್ಣದ ಕನ್ನಡಕ (ಪ್ಲಾಸ್ಟಿಕ್ಕಿಂದು), ಕಡಲೆಬೀಜ (ನೆಲಗಡಲೆ), ಸರ್ಕಸ್, ಮ್ಯಾಜಿಕ್ ಮಾರ್ಟ್, ಗಿರಿಗಿಟ್ಲೆ, ಸುಮಾರು ೫-೬ ಟೂರಿಂಗ್ ಟಾಕೀಸುಗಳಲ್ಲಿ ಹಲವು ಸಿನಿಮಾ ಪ್ರದರ್ಶನಗಳು, ಏನೆಲ್ಲಾ...ಓಹ್..!! ಎಲ್ಲಾ ನೆನಪಾಗುತ್ತೆ.....ನಿಮ್ಮ ಚಿತ್ರಗಳೂ ಇವಕ್ಕೆ ಪೂರಕ....ಒಳ್ಳೆಯ ಮೆಮೋರಿ ಬ್ರಶ್..ಹಾಕಿದ್ದೀರಿ...

ಸೀತಾರಾಮ. ಕೆ. / SITARAM.K said...

ಲೇಖನ ಚೆನ್ನಾಗಿದೆ. ಜಾತ್ರೆಯ ಹೆಸರಲ್ಲಿ ನಡೆವ ಮೋಜು ಅದರ ಹಿ೦ದಿನ ತಯಾರಿ,ತಯಾರಿ ಹೆಸರಲ್ಲಿ ನಡೆವ ಶೋಷಣೆ, ಬೆಟ್ಟಿ೦ಗ್, ಇತ್ಯಾದಿಗಳ ಅಭಿವ್ಯಕ್ತಿ ತು೦ಬಾ ಚೆನ್ನಾಗಿದೆ. ಓದುತ್ತಾ ಬಾಲ್ಯದ ನೆನಪು ಹರಿಯಿತು.

Roopa said...

ಸತ್ಯ ಸರ್,
ನಮ್ಮ ಮನೆಯಲ್ಲಿ ಆಗಾಗ್ಗೆ ಕುಂದೂರಿಗೆ ಹೋಗಿ ಮೆಳಯಮ್ಮನಿಗೆ ಪೂಜೆ ಮಾಡಿಸಿಕೊಂಡು ಬರ್ತಾರೆ. ಅಲ್ಲಿನ ಜಾತ್ರೆನ ಬಹಳ ಚಿಕ್ಕವಳಿದ್ದಾಗ ನೋಡಿದ್ದೆ.
ಊರಿನ ಜಾತ್ರೆಗಳ ಮಿಠಾಯಿ, ಕಡ್ಲೆಪುರಿ, ಬತ್ತಾಸು ನೆನಪಿಸಿದ್ರಿ:)
ಬೆಟ್ಟಿಂಗೆಂದು ಜಿಲೇಬಿ ತಿಂದು ಅವಸ್ಥೆ ಪಟ್ಟ ಪಾಪಣ್ಣನ ಬಗ್ಗೆ ಓದಿ ನಗು ಬಂತು.

Unknown said...

ಶ್ರೀಮತಿ ರೂಪಶ್ರೀಯವರಿಗೆ ನಮಸ್ಕಾರಗಳು.

ಕುಂದೂರುಮಠದ ಬಗ್ಗೆ ಗೊತ್ತಿರುವವ ಒಬ್ಬ ಓದುಗರಾದರೂ ಸಿಕ್ಕರಲ್ಲ ಎಂಬ ಬಹುದೊಡ್ಡ ಸಮಾಧಾನ ಈಗ ನನ್ನದಾಗಿದೆ. ನಿಮಗೆ ಗೊತ್ತೆ,? ನನ್ನ ಹೈಸ್ಕೂಲು ದಿನಗಳು ಪುಸ್ತಕ ಓದಿದ ಮಹಾಶಯರೊಬ್ಬರು, ನಿಜವಾಗಿ ಕುಂದೂರು ಮಠ ಎಂಬುದೊಂದಿದೆಯೇ? ಅಥವಾ ಅದು ಆರ್.ಕೆ.ನಾರಾಯಣರ ಮಾಲ್ಗುಡಿಯ ರೀತಿಯಲ್ಲಿ ನಿಮ್ಮ ಕಲ್ಪನೆಯೇ ಎಂದು ಕೇಳಿದ್ದರು!

ನಿಮ್ಮದು ಅಲ್ಲಿ ಯಾವರ ಊರು?

ಈಗಲೂ ಕುಂದೂರು ಮಠದ ಸಂಪರ್ಕ ಇದೆಯೇ?

ನಮ್ಮ ತೋಟ ಕುಂದೂರುಮಠದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ.

ಈಗ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವ ಹವ್ಯಾಸವನ್ನು ನಾನು ಬಿಟ್ಟು ಸುಮಾರು ಹದಿನೈದು ವರ್ಷಗಳೇ ಕಳೆದು ಹೋಗಿವೆ. ಆದರೂ ಮೊನ್ನೆ ನನ್ನ ಪುಸ್ತಕ ಓದಿ, ಆ ಸ್ಥಳಗಳನ್ನೆಲ್ಲಾ ನೋಡಬೇಕು ಎಂದ ಬೆಂಗಳೂರಿನ ಒಬ್ಬ ಸ್ನೇಹಿರನ್ನು ನಾನು ಕುಂದೂರು ಮಠಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ದೇವಾಲಯ, ಸ್ಕೂಲು ಹಾಸ್ಟೆಲ್ಲು ಎಲ್ಲಾ ತೋರಿಸಿಕೊಂಡು ಬಂದೆ.

ನಿಮ್ಮ ಪತ್ರಕ್ಕೆ, ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಶ್ವಾಸದೊಂದಿಗೆ

ಸತ್ಯನಾರಾಯಣ

Unknown said...

hahahaha... sooper saar