‘ನಾಳೆ ಸೂರ್ಯಗ್ರಹಣವಾಗುತ್ತಿದೆ, ಈಗೆಂತ ಚಂದ್ರೋದಯ?’ ಎಂದುಕೊಳ್ಳಬೇಡಿ.
ಚಂದ್ರ ಉದಯವಾದರೇನೇ ಸೂರ್ಯಗ್ರಹಣವಾಗಲು ಸಾಧ್ಯ!
ಜೊತೆಗೆ ಚಂದ್ರಲೋಕಕ್ಕೆ ಮಾನವ ಕಾಲಿರಿಸಿ ನಲವತ್ತು ವರ್ಷಗಳೂ ಕಳೆದೊಹೋದವು.
ಆದರೆ ನಾನು ಹೇಳಲು ಹೊರಟಿರುವುದು ಗ್ರಹಣದ ಅಥವಾ ಚಂದ್ರಯಾನದ ವಿಷಯವನ್ನಲ್ಲ.
ಮಹಾನ್ ಗಿರಿಕಂದರಗಳಿಂದ ಕೂಡಿದ ಚಂದ್ರ ನಮ್ಮ ಕವಿಗಳಿಗೆ ಮಾತ್ರ ಅತಿ ಸುಂದರ! ಈ ಹಿನ್ನೆಲೆಯಲ್ಲಿ ಒಂದು ಚಂದ್ರೋದಯದ ವರ್ಣನೆಯನ್ನು ನಿಮಗೆ ಪರಿಚಯಿಸುವ ಇರಾದೆ ನನ್ನದು.
ನಾನು ಹೇಳಲು ಹೊರಟಿರುವ ಚಂದ್ರೋದಯದ ವರ್ಣನೆ ಬಂದಿರುವದು ಪಂಪಭಾರತದ ನಾಲ್ಕನೇ ಆಶ್ವಾಸದಲ್ಲಿ. ಅರ್ಜುನ ದೇಶಸಂಚಾರ ಮಾಡುತ್ತಾ ಕೃಷ್ಣ-ಬಲರಾಮರ ದ್ವಾರಕೆಗೆ ಬರುತ್ತಾನೆ. ಅವನಿಗೆ ಭವ್ಯವಾದ ಸ್ವಾಗತ ದೊರೆಯುತ್ತದೆ. ಆಗ ಮೊದಲ ಭಾರಿಗೆ ಸುಭದ್ರೆ ಮತ್ತು ಸರ್ಜುನರ ದೃಷ್ಟಿಗಳು ಪರಸ್ಪರ ಸಂಧಿಸುತ್ತವೆ. ಆನಂತರ, ಸ್ಥಿರತೆಗೆ ಸಂಕೇತವಾದ ಸೂರ್ಯ ಅಸ್ತಮಿಸುತ್ತಾನೆ. ಚಂಚಲತೆಗೆ ಸಂಕೇತವಾದ ಚಂದ್ರೋದಯವಾಗುತ್ತದೆ. ಜೊತೆಗೆ, ಚಂಚಲತೆಯನ್ನುಂಟು ಮಾಡುವ ವಿರಹ ಅರ್ಜುನ ಸುಭದ್ರೆ ಇಬ್ಬರಲ್ಲೂ ಉಂಟಾಗುತ್ತದೆ. ಅವರಿಬ್ಬರ ತೀವ್ರವಾದ ವಿರಹಕ್ಕೆ ಕಾರಣವಾದ ಅವತ್ತಿನ ಚಂದ್ರೋದಯವನ್ನು ಪಂಪ ಹೇಗೆ ಕಂಡರಿಸಿದ್ದಾನೆ ಎಂಬುದನ್ನು ಅರಿಯುವುದೇ ಈ ಲೇಖನದ ಉದ್ದೇಶ.
ಸೂರ್ಯಾಸ್ತವಾದ ಕೆಲ ಸಮಯದಲ್ಲಿಯೇ ‘ದಿತಿಸುತಂ ಮಸಿಯಿಂದಂ ಜಗಮೆಲ್ಲಮಂ ಮುಂ ಪೂಳ್ದನೋ’ (ರಾಕ್ಷಸನು ಜಗತ್ತೆಲ್ಲವನ್ನೂ ಮಸಿಯಿಂದ ಮುಚ್ಚಿಬಿಟ್ಟನೋ), ಎಂಬ ರೀತಿಯಲ್ಲಿ ಕತ್ತಲು ಆವರಿಸಿಬಿಟ್ಟಿದೆ. ಆಗ ‘ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನ್ ಅಲೆಯಲ್ ಆರಾದವು’ (ತಾರಾಸಮೂಹಗಳು ದಿಕ್ಕುಗಳೆಂಬ ಹೆಣ್ಣುಗಳು ತೊಟ್ಟಿರುವ ಮಾಣಿಕ್ಯಗಳಂತೆ ಆಕಾಶಾದಾದ್ಯಂತ ಬೆಳಗಿದರೂ ಆ ಕತ್ತಲೆಯನ್ನು ಕಳೆಯಲಾಗಲಿಲ್ಲ). ಅಂತಹ ಸಂದರ್ಭದಲ್ಲಿ ಒಳಗೆ ದೀಪಗಳನ್ನು ಉರಿಯಿಸುತ್ತಿದ್ದ ಉಪ್ಪರಿಗೆ ಮನೆಗಳು (ತಮೋರಾಜಕಂ ಮುಳಿದು ಸೆಱೆಗೆಯ್ದ ಬೆಳಗಿನ ಸೆಱೆಯ ಮನೆಗಳನ್ನವಾದುವು) ‘ಕತ್ತಲೆ ಎಂಬ ರಾಜನು ಕೋಪದಿಂದ ಬೆಳಕನ್ನು ಬಂದಿಸಿಟ್ಟಿರುವ ಸೆರೆಮನೆ’ಗಳಂತೆ ಕಾಣುತ್ತಿದ್ದವಂತೆ!
ಆಗ ಪೂರ್ವದಿಗಂತದಲ್ಲಿ ಚಂದ್ರೋದಯವಾಗುತ್ತದೆ. ಅದು ಹೇಗಿತ್ತು?
ಅದು ಕೆಂಪು ಕೆಂಪಾಗಿತ್ತು. ಚಂದ್ರ ಕೂಡಾ ಕೆಂಪಾಗಿದ್ದ. ಅದೂ ಎಂತಹ ಕೆಂಪು? (ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತಮಾದಂತೆ) ಸಿಂಹದಿಂದ ಸೀಳಲ್ಪಟ್ಟ ಜಿಂಕೆಯ ರಕ್ತರಾಶಿಯಿಂದ ತುಂಬಿದ ಕೆಂಪು!
ಚಿತ್ರಕೃಪೆ: ಅಂತರಜಾಲ
ಸಂಜೆ ಅಥವಾ ಸಂಧ್ಯಾ ಎಂಬ ಪರಸ್ತ್ರೀಯಲ್ಲಿ ಸೇರಿದ್ದಕ್ಕೆ ಚಂದ್ರನ ಹೆಂಡತಿಯಾದ ರೋಹಿಣಿ ಚಂದ್ರನಿಗೆ ಒದೆಯುತ್ತಾಳೆ. (ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನ್ ಆತ್ಮಾಂಗದೊಳ್ ರೋಹಿಣೀ ಚರಣಾಲಕ್ತಕ ರಾಗಮಚ್ಚಿದುದೋ) ಆಗ ಅವಳ ಕಾಲಿಗೆ ಹಚ್ಚಿದ್ದ ಕೆಂಪು ಬಣ್ಣ ಚಂದ್ರನಿಗೂ ವ್ಯಾಪಿಸಿದ್ದರಿಂದ ಚಂದ್ರೋದಯದ ಸಮಯದಲ್ಲಿ ಕೆಂಪು ಬಣ್ಣವುಂಟಾಗುತ್ತದಂತೆ!
ಚಂದ್ರ ಅಥವಾ ಚಂದ್ರನಲ್ಲಿ ಕಾಣುವ ಜಿಂಕೆಯು ಕತ್ತಲೆ ಎಂಭ ಆನೆಯ ಕೊಂಬಿನಿಂದ ಗಾಯಗೊಂಡಿದ್ದರಿಂದ (ತಮೋಗಜದ ಕೋಡೇಱಂದಮೇಂ ನೊಂದುದೋ ಹರಿಣಂ) ಅಷ್ಟೊಂದು ಕೆಂಪಾಗಿಬಿಟ್ಟಿದೆಯಂತೆ!
ಸ್ವಲ್ಪ ಕಾಲದ ನಂತರ ಚಂದ್ರ ಕೆಂಪುಬಣ್ಣ ಕಳೆದು ಸಹಜ ಬೆಳಕಿನ ಬಣ್ಣಕ್ಕೆ ತಿರುಗುತ್ತಾನೆ.
ಚಿತ್ರಕೃಪೆ: ಅಂತರಜಾಲ
ಅದಕ್ಕೆ ಕಾರಣವೇನು?
ಬೆಂಳದಿಂಗಳು ಪ್ರೇಮಿಗಳಲ್ಲಿ ವಿರಹವನ್ನು ಹೆಚ್ಚಿಸುತ್ತದಂತೆ. ಅವರಲ್ಲಿ ಸೇರುವ ಬಯಕೆಯನ್ನು ವೃದ್ಧಿಸುತ್ತದಂತೆ. ಚಂದ್ರ ತನ್ನ ಕೆಂಪು ಬಣ್ಣವನ್ನು ಪ್ರೇಮಿಗಳಿಗೆ/ವಿರಹಿಗಳಿಗೆ ಹಂಚಿಕೊಟ್ಟಿದ್ದರಿಂದ (ತನ್ನ ರಾಗಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ) ತಾನು ಬೆಳ್ಳಗಾದನಂತೆ!
ಚಂದ್ರೋದಯ ಪೂರ್ಣವಾಯಿತು. ಅವನ ನಡುವಿನ ಕಪ್ಪು ಕಲೆ ಹೇಗೆ ಕಾಣುತ್ತಿತ್ತು?
(ಗೆಳೆಯ ಮಲ್ಲಿಕಾರ್ಜುನ್ ತೆಗೆದಿರುವ ಫೋಟೋ ನೋಡಿ. ಆ ಕಲೆ ಕರ್ನಾಟಕ ಭೂಪಟದಂತೆ ಕಾಣುತ್ತದೆ!)
ಚಿತ್ರಕೃಪೆ: ಡಿ.ಜಿ.ಮಲ್ಲಿಕಾರ್ಜುನ್
ಆದರೆ ಪಂಪನಿಗೆ!?
ಈಶ್ವರನ ಶಾಪದಿಂದ ಸುಟ್ಟು ಹೋಗಿ, ಮತ್ತೆ ಅವನ ಅನುಗ್ರಹದಿಂದಲೇ ಅನಂಗನಾಗಿ ಪುನರ್ಜನ್ಮವೆತ್ತಿದ ಮನ್ಮಥನಿಗೆ ಪುಣ್ಯಸ್ನಾನ ಮಾಡಿಸುವುದಕ್ಕೆ ಚಂದ್ರಕಾಂತ ಶಿಲೆಯಲ್ಲಿ ಮಾಡಿದ ಪಾತ್ರೆಯಲ್ಲಿ ನೀರನ್ನು ತುಂಬಿಸಿದ್ದಳಂತೆ. ಆ ನೀರು ಸುವಾಸನಾಯುಕ್ತವಾಗಲು ಕನ್ನೈದಿಲೆ ಪುಷ್ಪವನ್ನು ಹಾಕಿದ್ದಳಂತೆ. (ಚಂದ್ರಕಾಂತ ಘಟದೊಳ್ ತಂದೞಳ್ತಿಯಿಂ ಪುಷ್ಪ ವಾಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕೞಳ್ಪಿಂದುವಾ) ಚಂದ್ರಕಾಂತ ಶಿಲೆಯ ಪಾತ್ರೆಯ ನಡುವೆ ತೇಲುತ್ತಿರುವ ಕನ್ನೈದಿಲೆ ಪುಷ್ಪದಂತೆ, ಈ ಪೂರ್ಣ ಚಂದ್ರನ ನಡುವಿನ ಕಲೆ ಕಾಣುತ್ತಿತ್ತು, ನಮ್ಮ ಪಂಪನಿಗೆ!
ಮೇಲೇರಿ ಬರುತ್ತಿದ್ದ ಚಂದ್ರನ ಪ್ರಕಾಶ ಹೇಗಿತ್ತು? ಅದೂ ಈ ಭೂಲೋಕದ ಪ್ರೇಮಿಗಳ ಕಣ್ಣಿಗೆ ಹೇಗೆ ಕಣುತ್ತಿತ್ತು?
ಭೂಮಿ ಅಂತರಿಕ್ಷಗಳನ್ನು ಚಂದ್ರನ ಬೆಳಕು ಆವರಿಸಿತ್ತು. ಅಷ್ಟೊಂದು ಬೆಳಕನ್ನು ಸುರಿಸುತ್ತಿಒರುವ ಚಂದ್ರ ಈ ವಿರಹಿಗಳ/ಪ್ರೇಮಿಗಳ ಕಣ್ಣಿಗೆ, ಮನ್ಮಥನು ನಮ್ಮನ್ನು ಹುಡುಕಲು ತಂದಿರುವ (ಮದನನ ಸೋದನ ದೀವಿಗೆ) ಕೈದೀಪದಂತೆ ಕಾಣುತ್ತಿತ್ತಂತೆ! ಅಷ್ಟರ ಮಟ್ಟಿಗೆ ಚಂದ್ರ ಆಕಾಶದ ನೀಲಿ ತಟ್ಟೆಯಲ್ಲಿ ಹೊಳೆಯುತ್ತಿದ್ದ.
ಇದಿಷ್ಟು ಪಂಪ ಚಂದ್ರೋದಯದ ವಿವಿಧ ಹಂತಗಳನ್ನು ಕುರಿತು ಮಾಡಿರುವ ಕಲ್ಪನೆ. ಇಲ್ಲಿಂದ ಮುಂದಕ್ಕೆ, ಚಂದ್ರದೋಯದ ಹಿನ್ನೆಲಯಲ್ಲಿ, ಅರ್ಜುನ ಸುಭದ್ರೆಯರ ಮನಸ್ಸಿನಲ್ಲಿ ನಡೆಯುವ ವಿರಹ ವ್ಯಪಾರವನ್ನು, ಮಾನಸಿಕ ತಾಕಲಾಟವನ್ನು ಕವಿ ಚಿತ್ರಿಸಿದ್ದಾನೆ. ಅದರ ವರ್ಣನೆಯ ಅಗತ್ಯ ಇಂದಿನ ನಮಗೆಲ್ಲಾ ಅನಾವಶ್ಯಕವೆಂದು ಹೇಳಬಹುದೇ? ಏಕೆಂದರೆ, ಶೃಂಗಾರ ಅಥವಾ ಬಾಂಧವ್ಯಕ್ಕೆ ಸಂಬಂಧಿಸಿದಂತೆ ನಾವೆಲ್ಲಾ ಒಂದಲ್ಲ ಒಂದು ಸಮಯದಲ್ಲಿ ವಿರಹವನ್ನು ಅನುಭವಿಸಿದವರೇ ಅಲ್ಲವೇ!?
8 comments:
ಸತ್ಯ ಸರ್...
ಹಳೆಯ ಕಾವ್ಯಗಳ ರಸದೌತಣ ನಮಗೆಲ್ಲ...
ಬಹಳ ಸುಂದರ ವರ್ಣನೆ...
ಭಾವ ಸಂಬಂಧಗಳ ಹಾಗೆ ಭಾವನೆಗಳು..
ಪ್ರೀತಿ, ಪ್ರೇಮಗಳು ಎಲ್ಲ ಕಾಲದಲ್ಲೂ ಸಲ್ಲುತ್ತವೆ...
ನಿಮ್ಮ ಮುಂದಿನ ಭಾಗವನ್ನು ಆಸ್ವಾದಿಸಲು ಉತ್ಸುಕರಾಗಿದ್ದೇವೆ...
ಎಲ್ಲ ಫೋಟೊಗಳು..
ಅದರಲ್ಲೂ ಗೆಳೆಯ ಮಲ್ಲಿಯವರ
ಫೋಟೊ ನೋಡಿ ಸೋಜಿಗವಾಯಿತು...
ನೀವು ಕಾವ್ಯದ ಶಬ್ಧಗಳಲ್ಲಿ ಮಾತಾಡಿದರೆ
ಮಲ್ಲಿಯವರು ಫೋಟೊಗಳಿಂದ ಮಾತನಾಡುತ್ತಾರೆ...
ಇಬ್ಬರಿಗೂ ಅಭಿನಂದನೆಗಳು...
ಸತ್ಯನಾರಯಣ ಸರ್,
ಸೂರ್ಯಗ್ರಹಣದ ಮಾತುಗಳು ಚಾಲ್ತಿಯಲ್ಲಿರುವಾಗ ಚಂದ್ರನ ಬಗ್ಗೆ ಸೊಗಸಾದ ಕಾವ್ಯಗಳ ವಿಚಾರ ಮತ್ತು ಅವುಗಳ ಚಂದ ವಿವರಣೆ. ಪಂಪಭಾರತದಲ್ಲಿ ಚಂದ್ರನ ಬಗ್ಗೆ ವರ್ಣನೆ, ಅರ್ಜುನ-ಸುಭದ್ರೆ ದೃಷ್ಟಿಗಳು ಸಂಧಿಸುವಿಕೆ, ವಿರಹ, ಅದಕ್ಕೆ ಕಾರಣನಾದ ಚಂದ್ರ ಇತ್ಯಾದಿಗಳನ್ನು ಮತ್ತು ಕೆಲವು ಹಳಗನ್ನಡ ಸಾಲುಗಳನ್ನು ನಮಗೆ ಚೆನ್ನಾಗಿ ವಿವರಿಸಿದ್ದೀರಿ..
ಧನ್ಯವಾದಗಳು
ಸರ್,
ಚಂದ್ರನ ಬಗ್ಗೆ ಎಷ್ಟೊಂದು ಚಂದದ ಸಾಲುಗಳಲ್ವಾ ಪಂಪನಿಂದ.
ನಾನು ಫೋಟೋ ತೆಗೆದದ್ದು ಸಾರ್ಥಕವಾಯಿತು ಅನ್ನಿಸಿತು ಈ ಕಾವ್ಯ ವರ್ಣನೆ ನೋಡಿ. ಧನ್ಯವಾದಗಳು.
ಶ್ರೀ ಪೆಜತ್ತಾಯ ಅವರ ಪ್ರತಿಕ್ರಿಯೆ (ಈ ಮೇಲ್ ಮೂಲಕ)
ಸಂಜೆ ಅಥವಾ ಸಂಧ್ಯಾ ಎಂಬ ಪರಸ್ತ್ರೀಯಲ್ಲಿ ಸೇರಿದ್ದಕ್ಕೆ ಚಂದ್ರನ ಹೆಂಡತಿಯಾದ ರೋಹಿಣಿ ಚಂದ್ರನಿಗೆ ಒದೆಯುತ್ತಾಳೆ. (ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನ್ ಆತ್ಮಾಂಗದೊಳ್ ರೋಹಿಣೀ ಚರಣಾಲಕ್ತಕ ರಾಗಮಚ್ಚಿದುದೋ) ಆಗ ಅವಳ ಕಾಲಿಗೆ ಹಚ್ಚಿದ್ದ ಕೆಂಪು ಬಣ್ಣ ಚಂದ್ರನಿಗೂ ವ್ಯಾಪಿಸಿದ್ದರಿಂದ ಚಂದ್ರೋದಯದ ಸಮಯದಲ್ಲಿ ಕೆಂಪು ಬಣ್ಣವುಂಟಾಗುತ್ತದಂತೆ!
ರೋಹಿಣಿಯ ದಿಟ್ಟತನ ಮೆಚ್ಚ ತಕ್ಕದ್ದೇ! ಆದರೂ . . . . . . ಶಿಕ್ಷೆ ಬಹಳ ಲಘು!
ವಂದನೆಗಳು
ಪೆಜತ್ತಾಯ
Pejathaya
satyanaaraayana ಸಾರ್,,
ತುಂಬಾ ತುಂಬಾ ಕೆಲಸದ ಒತ್ತಡದ ನಡುವೆ ಈಗ್ಗೆ ಕೆಲವು ದಿನಗಳಿಂದ ಬ್ಲಾಗ್ ಬರೆಯಲು ಅಥವಾ ಓದಲು ಸಮಯ ಸಿಕ್ಕಿರಲಿಲ್ಲ... ಕ್ಷಮೆಯಿರಲಿ.. :-) ... ಬರಹ ಚೆನ್ನಾಗಿತ್ತು... ಹಳೆ ಕಾವ್ಯಗಳನ್ನು ಚೆನ್ನಾಗಿ ವಿವರಿಸಿದ್ದೀರಿ.. ಚಿತ್ರಗಳೂ ಬರಹಕ್ಕೆ ತಕ್ಕುದಾಗಿ ಚೆನ್ನಾಗಿವೆ... ಇನ್ನಷ್ಟು ಪಂಪನ ಬಗ್ಗೆ ಬರೆಯಿರಿ...
ಚಂದಿರನ ಬಗೆಗಿನ ವರ್ಣನೆ ಸದಾ ಸುಂದರ.ನಿಮ್ಮ ಕಾವ್ಯ ಶೈಲಿಯಲ್ಲಿನ ಚಂದಿರನ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಅದ್ಭುತ .
ಒಳ್ಳೆಯ ಕಾವ್ಯದ ರಸದೌತಣ... ತುಂಬ ಧನ್ಯವಾದಗಳು.
ಪಂಪ ಮಹಾ ಕವಿಯ ಕಾವ್ಯಗಳ ಬಗ್ಗೆ ಮತ್ತಷ್ಟು ಬರೆಯಿರಿ.
ಸತ್ಯ ಸಾರ್....
ಚಂದ್ರನ ವರ್ಣನೆ ಜೊತೆಗೆ ಅರ್ಜುನ ಸುಭದ್ರೆಯರ ಕಣ್ಣು ಕಣ್ಣು ಒಂದಾದ ಮೇಲೆ ವಿರಹದ ಅನುಭವ... ವರ್ಣನೆ ತುಂಬಾ ಚೆನ್ನಾಗಿದೆ. ಕಾವ್ಯದ ಕಣ್ಣುಗಳಿಂದ ನೋಡಿದಾಗ ಮಾತ್ರವೇ ಚಿತ್ರಗಳಲ್ಲೂ ಹೊಸ ಪರಿ ಕಾಣುತ್ತೆ. ಚಿತ್ರ ವ್ಯಾಖ್ಯಾನಕ್ಕೆ ಪರ್ಫೆಕ್ಟ್ ಆಗಿದೆ. ಮುಂದಿನ ಭಾಗಗಳಿಗಾಗಿ ಕಾಯುತ್ತಿದ್ದೇನೆ......
ಶ್ಯಾಮಲ
Post a Comment