Monday, July 27, 2009

ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ! - ಶ್ರೀ ಮಧುಸೂದನ ಪೆಜತ್ತಾಯ

ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಎರಡು ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.
ನಾನು ನನ್ನ ಅಜ್ಜ ಡಾ. ರಾಮರಾವ್ ಬಾಗ್ಲೋಡಿ (ರಿಟಾಯರ್ಡ್ ರಾಯಲ್ ಇಂಡಿಯನ್ ಆರ್ಮಿ) ಅವರ ಹಳ್ಳಿಯ ಮನೆಯಲ್ಲಿ ಬೆಳೆದೆ.
ಅವರು ತನ್ನ ಜಮೀನುಗಳಿದ್ದ ಕಿನ್ನಿಕಂಬಳ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಅವರು ಅಲೋಪಥಿ ಡಾಕ್ಟರ್ ಆಗಿದ್ದರೂ ಆಯುರ್ವೇದ ಔಷದದಲ್ಲಿ ಪರಿಣತರಾಗಿದ್ದರು.
ನನ್ನ ಅಜ್ಜಿಯ ಹೆಸರು ಕೃಷ್ಣವೇಣಿಯಮ್ಮ.
ನಾನು ಕೂಡಾ ತಮ್ಮಂತೆಯೇ ದೊಡ್ಡ ಹಟ್ಟಿಯ ಪಕ್ಕ ಇದ್ದ ಮನೆಯಲ್ಲೇ ಬೆಳೆದವನು.
ಮನೆಯಿಂದ ಹಟ್ಟಿಗೆ ಹೋಗುವ ಅಂತರದಲ್ಲೇ ಬಲಬದಿಯಲ್ಲಿ ಇದ್ದದ್ದು ಕರುಗಳ ಕೋಣೆ. ಎಡಬದಿಯಲ್ಲಿ ಇದ್ದುದು ಹಿಂಡಿ ದಾಸ್ತಾನು ಇಡುವ ಕೋಣೆ. ಅದರಲ್ಲಿ ಘಮಘಮಿಸುವ (ಐತುವಿನ ಗಾಣದ) ತೆಂಗಿನ ಹಿಂಡಿ, ಯಂತ್ರದಿಂದ ಹೊರಬರುವಾಗಲೇ ಹಲ್ಲೆಗಳ ರೂಪದಲ್ಲಿ ಬರುತ್ತಿದ್ದ ನೆಲಗಡಲೆ ಮತ್ತು ಎಳ್ಳಿನ ಹಿಂಡಿಯ ಚೀಲಗಳು, ಕೈಯ್ಯಲ್ಲಿ ಭತ್ತ ಕುಟ್ಟುವಾಗ ಮನೆಯಲ್ಲೇ ದೊರಕುತ್ತಿದ್ದ ಭತ್ತದ ತೌಡು, ನುಚ್ಚಕ್ಕಿ ಹಾಕಿಡುತ್ತಾ ಇದ್ದ ಮಣ್ಣಿನ ಬಾನಿಗಳು ಮತ್ತು ದೊಡ್ಡದಾದ ಒಂದು ಕಲ್ಲುಪ್ಪು ಹಾಕಿಡುವ ಮರದ ಪೆಟಾರಿ..... ಇವೆಲ್ಲಾ ಇದ್ದವು.
ಹಿಂಡಿಯ ಕೋಣೆಯ ಪರಿಮಳ ಇಂದಿನ ಕ್ಯಾಟಲ್ ಫೀಡ್ ಹೊರಸೂಸೀತೆ?
ಅದರ ಎದುರಿನದು ಹಸೀ ಹುಲ್ಲು ಹಾಗೂ ದಿನಕ್ಕೆ ಬೇಕಷ್ಟು ಬೈಹುಲ್ಲು ಸಂಗ್ರಹಿಸುವ ಕೋಣೆ.
ಈ ಕೋಣೆಯ ನಂತರ ಇದ್ದುದು ಅಕ್ಕಚ್ಚಿನ ಹಂಡೆಯ ಹಬೆಯಾಡುವ ಕೋಣೆ. ಅದನ್ನು ದಾಟಿ ಹೋದರೆ ನಮಗೆ ಸಿಗುತ್ತಾ ಇದ್ದುದು ದನಗಳ ಗೋದಿಲು ಎಂಬ ಹೆದ್ದಾರಿ! ಇಕ್ಕೆಲದಲ್ಲೂ ಒಂದಕ್ಕೊಂದು ಮುಖ ಹಾಕಿರುವಂತೆ ಕಟ್ಟಿದ ಎಮ್ಮೆ ಮತ್ತು ದನಗಳ ಸಾಲು!
ಪ್ರತೀ ಪಶುವಿಗೂ ಒಂದು ಚೌಕಟ್ಟು. ಅದಕ್ಕೆ ಭದ್ರ್ರವಾಗಿ ಕಟ್ಟಿದ ಬಣ್ಣದ ಕುಚ್ಚಿನ ಗೊಂಡೆ ಹಗ್ಗಗಳು. ಬೈಪಣೆಯಲ್ಲೇ ಪ್ರತೀ ದನಕ್ಕೂ ಒಂದು ಕಲ್ಲಿನ ಮರಿಗೆ - ಅದೇ ದನಗಳ ಊಟದ ಬಟ್ಟಲು ಯಾ ಅಕ್ಕಚ್ಚು ಕುಡಿಯುವ ಬಾನಿ.
ದನಗಳ ತಲೆಯ ಮೇಲೆ ಮಳೆಗಾಲಕ್ಕೆ ಬೆಚ್ಚನೆ ಕಾಪಿಟ್ಟ ಭತ್ತದ ಹುಲ್ಲಿನ ದಾಸ್ತಾನು.
ಬೈಪಣೆಯ ಮಧ್ಯೆ ನಡೆದುಕೊಂಡು ಹೋಗಿ ನಮ್ಮ ಅಜ್ಜಿ ದನಗಳಿಗೆ ದಿನಾ ಬೆಳಗ್ಗೆ ಮತ್ತು ಸಂಜೆ ಅಕ್ಕಚ್ಚಿನಲ್ಲಿ ನೆನೆಸಿಟ್ಟ ಹಿಂಡಿ ತಿನ್ನಿಸಿ, ಕುಡಿಯಲು ಬೇಕಷ್ಟು ಉಗುರು ಬೆಚ್ಚನೆಯ ‘ಅರ್ಕಂಜಿ’ ಹೊಯ್ಯುವರು.
ಹಾಲುಕೊಡುವ ದನಗಳಿಗೆ ಸ್ವಲ್ಪ ಹೆಚ್ಚಿನ ಅರ್ಕಂಜಿ ಹಾಗೂ ಹಿಂಡಿಯ ಉಪಚಾರ ದಿನಾ ಇದ್ದದ್ದೇ!
ನಾನು ದನಗಳ ಹಿಂಭಾಗಕ್ಕೆ ಎಂದಿಗೂ ಹೋದವನಲ್ಲ! ಕಾರಣ ನಮ್ಮದು ಸೊಪ್ಪಿನ ಹಟ್ಟಿ. ಹಟ್ಟಿಯ ನೆಲತುಂಬಾ ಹಸಿ ಸೊಪ್ಪು, ಸೆಗಣಿ ಮತ್ತು ಗಂಜಳ! ಆ ವಾಸನೆ ನನಗೆ ಇಷ್ಟ ಆಗುತ್ತಾ ಇರಲಿಲ್ಲ. ಕಾಲಿಗೆ ಬೇರೆ ದುರ್ವಾಸನೆಯ ಸೆಗಣಿ ಹಿಡಿಯುವ ಭಯ ನನಗೆ ಕೂಡಾ ಇತ್ತು! (ಮುಂದೆ ಇನ್ನೊಮ್ಮೆ ನಾನು ‘ಗೊಬ್ಬರ’ಮಿತ್ರನಾದ ಕತೆ ಹೇಳುತ್ತೇನೆ!)
ದನಗಳಿಗೆ ಈ ಸೊಪ್ಪಿನ ಹಟ್ಟಿಯೇ ಇಷ್ಟ ಅಂತೆ! ಅವು ಮಳೆಗಾಲದಲ್ಲಿ ಬೆಚ್ಚಗೆ ಸೊಪ್ಪಿನ ಮಲೆ ಮಲಗಿರುತ್ತಾ ಇದ್ದುವು. ಹದಿನೈದು ದಿನಗಳಿಗೊಮ್ಮೆ ಗೊಬ್ಬರ ಬಾಚಿದಾಗ ಬೆಚ್ಚನೆಯ ಗೊಬ್ಬರ ದಿಂದ ಹೊಗೆ (ಹಬೆ) ಏಳುತ್ತಿದ್ದದ್ದನ್ನು ನಾನು ಕಂಡಿದ್ದೆ. ಬೇಸಿಗೆಯಲ್ಲಿ ನಮ್ಮ ದನ ಮತ್ತು ಎಮ್ಮೆಗಳು ತಮ್ಮ ‘ಉಚ್ಚೆಯ ಮೇಲೆ ತಂಪಾಗಿ’ ಮಲಗುತ್ತಿದ್ದುವು.
ನಮ್ಮ ದನಗಳನ್ನು ಬೆಳಗ್ಗೆ ಹಾಲು ಕರೆದನಂತರ ಮುದರ ಮತ್ತು ರಾಧು ಮೇಯಲು ನಮ್ಮ ಕುಮರಿಯ ಜಾಗಕ್ಕೆ ಒಯ್ಯುವರು. ಅಲ್ಲಿ ದನ ಮೇಯಿಸಲು ಸಾಧ್ಯವಾಗದಂತೆ ಕುಮರಿಯಲ್ಲೇ ಒಂದು ಕಾಡು ಕಲ್ಲಿನ ಪಾಗಾರ ಹಾಕಿ ಎರಡೆಕರೆ ಜಾಗವನ್ನು ಪ್ರತ್ಯೇಕಿಸಿದ್ದರು. ಅಲ್ಲಿ ನಮ್ಮ ಅಜ್ಜ ಮುಳಿ ಹುಲ್ಲು ಬೆಳೆಸುತ್ತಾ ಇದ್ದರು. ಮುಳಿಹುಲ್ಲು ಹೊಂಬಣ್ಣಕ್ಕೆ ತಿರುಗುವ ಮೊದಲು (ಕತ್ತರಿಸಿದಾಗ ಹಾಲು ತುಂಬಿ ಬರುವಂತೆ ಕಾಣುತ್ತಿದ್ದ ಸಮಯದಲ್ಲಿ) ಪರಿಮಳ ಸೂಸುತ್ತಿದ್ದ ‘ದೋರೆ’ ಬೆಳೆದ ಹುಲ್ಲನ್ನು ಕತ್ತರಿಸಿ ‘ಕರಡ’ ತಯಾರಿಸಿ ಕರಡದ ಬಣವೆ ಮಾಡಿಸುತ್ತಾ ಇದ್ದರು. ಇದು ಅಮೇರಿಕಾದ "ಸೈಲೋ"ಕ್ಕಿಂತ ಕಡಿಮೆ ಇರಲಿಕ್ಕಿಲ್ಲ. ಬೆಳೆದು ಒಣಗಿದ ಮುಳಿಹುಲ್ಲು ಒಕ್ಕಲು ಮನೆಗಳ ಹುಲ್ಲಿನ ಮಾಡಿಗೆ ಪ್ರತೀ ಮಳೆಗಾಲದ ಮೊದಲು ಹೊದಿಸಲು ಅಜ್ಜ ಕೊಡುತ್ತಾ ಇದ್ದರು.
ನನಗೆ ಐದು ವರ್ಷ ಪ್ರಾಯ ತುಂಬುತ್ತಲೇ ಕರುಗಳ ಕೋಣೆಯ ಆಕರ್ಷಣೆ! ಕರುಗಳಿಗೆ ನಮ್ಮ ಗದ್ದೆಯ ಬದು ಬೆಳೆಯುತ್ತಾ ಇದ್ದ ಗರಿಕೆ ತಂದು ತಿನ್ನಿಸುವ ಚಟ! ನಾನು ತಂದ ಮುಷ್ಟಿಯಷ್ಟು ಗರಿಕೆ ಹುಲ್ಲು ಮುಗಿಯುತ್ತಲೇ, ಮೆಲ್ಲಗೆ ಹುಲ್ಲಿನ ಕೋಣೆಗೆ ಹೋಗಿ, ನನ್ನ ಪುಟ್ಟ ಬಾಹುಗಳಿಗೆ ಸಿಕ್ಕಷ್ಟು ಹಸೀ ಹುಲ್ಲು ತಂದು ಕರುಗಳಿಗೆ ನೀಡುತ್ತಾ ಇದ್ದೆ! ಒಣ ಭತ್ತದ ಹುಲ್ಲನ್ನು ನಾನು ಮುಟ್ಟುತ್ತಾ ಇರಲಿಲ್ಲ. ಬೈಹುಲ್ಲನ್ನು ನನ್ನ ಬಾಹುಗಳಿಂದ ಬಾಚಿ ತಂದರೆ ನನ್ನ ಮೈ ಎಲ್ಲಾ ತುರಿಕೆ ಬರುತ್ತಾ ಇತ್ತು.
ನಾನು ದಿನದ ಬಹು ಹೊತ್ತನ್ನು ಕರುಗಳ ಜತೆಗೆ ಆಡುತ್ತಾ ಕಳೆಯುತ್ತಾ ಇದ್ದುದರಿಂದ ನನಗೆ "ಕರುಗಳ ಯಜಮಾನ" ಎಂಬ ಅಡ್ಡ ಹೆಸರು ಬಂದಿತ್ತು!
ಬೆಳಗ್ಗೆ ಮತ್ತು ಸಾಯಂಕಾಲ ನಮ್ಮ ಅಜ್ಜಿ ಹಾಲು ಕರೆಯುತ್ತಾ ಇದ್ದರು. ಮನೆಯ ಉಪಯೋಗಕ್ಕಿಂತ ಹೆಚ್ಚಿಗೆ ಇದ್ದ ಹಾಲನ್ನು ಮಂಗಳೂರಿನ ಮೋಹಿನಿ ವಿಲಾಸಕ್ಕೆ ಅಣ್ಣು ಡ್ರೈವರನ "ಅಣ್ಣು ಬಸ್"ನಲ್ಲಿ ಕಳುಹಿಸುತ್ತಿದ್ದೆವು. ಅಣ್ಣು ಬಸ್ ಎಂದು ನಾವು ಕರೆಯುತ್ತಿದ್ದುದು ಎಸ್.ಡಿ.ಪಿ.ಎಮ್.ಎಸ್ ಅಂದರೆ ಶ್ರೀ ದುರ್ಗಾ ಪರಮೇಶ್ವರೀ ಮೋಟಾರ್ ಸರ್ವಿಸ್ ಬಸ್ಸನ್ನು! ಇದನ್ನು ನಮ್ಮ ಆಳು ಮುದರ ‘ದೆತ್ತ್ ಪಾಡಿ ಪರತ್ತ್ ಮೋಟಾರ್ ಸರ್ವಿಸ್!’ ಅಂದರೆ ನಿಕೃಷ್ಟವಾದ ಹಳೆಯ ಮೋಟಾರ್ ಸರ್ವಿಸ್ ಅಂತ ಕರೆಯುತ್ತಾ ಇದ್ದ!
ಪ್ರತೀ ಸಾಯಂಕಾಲ ಮುದರ ಹಟ್ಟಿಯ ಏಕೈಕ ಹೊರಬಾಗಿಲನ್ನು ಒಳಗಿನಿಂದ ಅಗಳಿ ಹಾಕಿ ಬಂದ್ ಮಾಡುತ್ತಾ ಇದ್ದ! ಆನಂತರ ಮನೆಯ ಅಂತರದ ಜಗಲಿ ಬಾಗಿಲಿನಿಂದ ಹೊರಗೆ ಹೋಗಿ, ಬಿದಿರಿನ ಕಣೆಗಳಿಂದ ಮಾಡಿದ ಬಲವಾದ ತಟ್ಟಿಯೊಂದನ್ನು ಹಟ್ಟಿಯ ಬಾಗಿಲಿನ ಮಲಿದ್ದ ಮದನ ಕೈಗಳಿಗೆ ಹಗ್ಗದಿಂದ ಬಿಗಿದು ಕಟ್ಟುತ್ತಾ ಇದ್ದ. ಹೀಗೆ ಮಾಡದೇ ಇದ್ದರೆ ಕೆಲವೊಮ್ಮೆ ಹಸಿದ ಹೆಬ್ಬುಲಿಗಳು (ಪಟ್ಟೆ ಹುಲಿಗಳು) ಆ ಬಾಗಿಲಿಗೆ ತಮ್ಮ ಬಲವಾದ ಪಂಜಾದಿಂದ ಹೊಡೆದು ಎಷ್ಟು ದಪ್ಪದ ಬಾಗಿಲನ್ನಾದರೂ ಮುರಿದು ಒಳಬಂದು ದನಗಳನ್ನು ಕೊಂದು ಕಾಡಿಗೆ ಒಯ್ದು ತಿನ್ನುತ್ತಾ ಇದ್ದುವಂತೆ!
ನಾವು ಕೆಲವೊಮ್ಮೆ ರಾತ್ರಿಯ ಹೊತ್ತು ಹುಲಿಯ ಆರ್ಭಟವನ್ನು ಕೇಳುತ್ತಾ ಇದ್ದೆವು. ನನ್ನ ಅಜ್ಜ ಆನೆಕಾಲು ರೋಗದಿಂದ ಬಳಲುತ್ತಾ ಇದ್ದರು. ಅವರಿಗೆ ಬೇಗನೆ ನಡೆಯಲು ಸಾಧ್ಯವಾಗುತ್ತಾ ಇರಲಿಲ್ಲ. ಮನೆಯಲ್ಲಿ ಬಂದೂಕು ಇದ್ದರೂ ಅವರು ಹುಲಿಗಳನ್ನು ಹೊಡೆಯಲು ಶಕ್ತರಾಗಿ ಇರಲಿಲ್ಲ. ನಾವು ಹುಲಿಯ ಆರ್ಭಟ ಕೇಳಿದರೆ "ನಮ್ಮ ಹಟ್ಟಿಗೆ ಅದು ಬರಲಾರದು!" ಅಂತ ಧೈರ್ಯ ಮಾಡಿ ಹೊದ್ದು ಮಲಗುತ್ತಾ ಇದ್ದೆವು. ನಮ್ಮ ಅಜ್ಜ ನಿದ್ರೆಯಿಂದ ಎಚ್ಚತ್ತು ಟಾರ್ಚ್ ಹಾಯಿಸಿ ಹುಲಿ ಕಾಣುತ್ತದೋ? - ಅಂತ ನೋಡುತ್ತಾ ಇದ್ದರು. ನನ್ನ ಮಾವಂದಿರು ಕೆಲಸದ ನಿಮಿತ್ತ ಪರ ಊರುಗಳಲ್ಲಿ ನೆಲೆಸಿದ್ದರು.
ಅಜ್ಜ ತಮ್ಮ ತಾರುಣ್ಯದಲ್ಲಿ ಹುಲಿ ಶಿಕಾರಿ ಮಾಡಿದವರೇ! ಅವರು ಕೊಂದ ಒಂದು ಪಟ್ಟೆ ಹುಲಿಯ ತಲೆ ಬುರುಡೆಯೊಂದು ನಮ್ಮ ಮನೆಹಿಂದಿನ ಮಾವಿನ ಮರದಲ್ಲಿ ಒಂದು ತಂತಿ ಕಟ್ಟಿ ನೇತು ಹಾಕಲ್ಪಟ್ಟಿತ್ತು! ಯಾವುದಾದರೂ ಮನುಷ್ಯ ಅಥವಾ ದನಕ್ಕೆ ಹುಲಿಯ ಉಗುರು ಅಥವಾ ಹಲ್ಲು ನಾಟಿ ನಂಜಾದರೆ, ಆ ಹುಲಿಯ ತಲೆಬುರುಡೆಯನ್ನು ಇತರೇ ನಂಜು ನಿವಾರಕ ಔಷದೀಯ ವಸ್ತುಗಳೊಡನೆ ತೆಯ್ದು ಹಚ್ಚುತ್ತಾ ಇದ್ದರು.
ಒಮ್ಮೆ ಹಗಲು ಹೊತ್ತಿನಲ್ಲೇ ಮೇಯಲು ಹೋಗಿದ್ದ ನಮ್ಮ ಮನೆಯ ಗೌರಿ ಎಂಬ ಬಲವಾದ ದೊಡ್ದ ದನವನ್ನು ಪಟ್ಟೆಹುಲಿಯೊಂದು ಕೊಲ್ಲಲು ಪ್ರಯತ್ನಿಸಿತು. ಬಲವಾದ ಆ ದನ ಹ್ಯಾಗೋ ಹುಲಿಯಿಂದ ತಪ್ಪಿಸಿಕೊಂಡು ಮನೆಯವರೆಗೆ ಬಂತು! ಅದರ ಮೈ ತುಂಬಾ ಹುಲಿ ಪರಚಿದ ಗಾಯ! ಅದರ ಗಂಗೆ ತೊಗಲು ಹುಲಿಯು ಕಚ್ಚಿದಾಗ ಹರಿದೇ ಹೋಗಿತ್ತು. ಆ ಸಾಧು ದನವು ನಮ್ಮ ಅಜ್ಜ ಗಾಯಕ್ಕೆ ಹೊಲಿಗೆ ಹಾಕಿದಾಗ ಗಲಾಟೆ ಮಾಡದೇ ನಿಂತಿತ್ತು! ಅಜ್ಜಿಯು ಹಟ್ಟಿಯ ಹೊರಗಿದ್ದ ತೇಯುವ ಕಲ್ಲಿನ ಮೇಲೆ ಬೇಗ ಬೇಗನೇ ನಂಜಿನ ಔಷದವನ್ನು ಸಿದ್ಧಮಾಡಿ ಹುಲಿಯ ತಲೆಬುರುಡೆಯನ್ನು ಅದರ ಮೇಲಿಟ್ಟು ತೇಯ್ದರು. ಈ ಔಷದವನ್ನು ಹತ್ತು ದಿನ ಎಡೆಬಿಡದೇ ಎರಡು ಹೊತ್ತು ಹಚ್ಚಿದನಂತರ ನಮ್ಮ ಗೌರಿ ದನ ಸಂಪೂರ್ಣ ಗುಣಮುಖ ಆಯಿತು.
ಆಗ ನಾನು ಸಂತೋಷದಿಂದ ಕುಣಿದೆ.
ನಾನು ದೊಡ್ದದಾದ ಮೇಲೆ ಆ ದನ ಹಿಡಿಯುವ ಹುಲಿಯನ್ನು ಅಜ್ಜನ ಬಂದೂಕು ಬಳಸಿ ಕೊಲ್ಲುವೆ! - ಎಂದು ಆ ದಿನ ಶಪಥ ಮಾಡಿದೆ.
ನನಗೆ ಅಜ್ಜನ ಬಂದೂಕು ಪಾರಂಪರಿಕವಾಗಿ ಸಿಗಲಿಲ್ಲ. ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!
ಆ ಹುಲಿಯೂ ನನಗಾಗಿ ಕಾದು ಕಾದು ಸೋತು ಕೊನೆಗೊಮ್ಮೆ ವೃದ್ಧಾಪ್ಯದಿಂದ "ಬಹು ನಿರಾಶೆ ಪಟ್ಟು" ಸತ್ತೇ ಹೋಗಿರಬೇಕು!
ಚಿತ್ರಗಳು: ಲೇಖಕರವು

8 comments:

http://santasajoy-vasudeva.blogspot.com said...

ಅತ್ಯಂತ ಸುಂದರ ಅನುಭವ! ಖುಷಿ ಕೊಡ್ತು .ಫೋಟೋಗಳು ಅತ್ಯಂತ ಸುಂದರವಾಗಿದೆ.ನಾವು ಮಧುಸೂಧನ ಅವರೊಂದಿಗೆ ಹುಲಿಗೆ ಕಾಯುವಂತೆ ಆಯಿತು,ಅಷ್ಟು ಮನಸ್ಪರ್ಶಿ ಆಗಿದೆ ಬರಹ!

shivu.k said...

ಡಾ.ಸತ್ಯನಾರಾಯಣ ಸರ್,



ಶ್ರೀ ಮಧುಸೂದನ ಪೆಜತ್ತಾಯ ಅವರ ಈ ಲೇಖನ ಓದುತ್ತಿದ್ದಂತೆ ಒಂದು ಸುಂದರ ಬಾಲ್ಯಲೋಕದೊಳಗೆ ಪ್ರವೇಶಿಸಿದ ಅನುಭವ. ಹಳ್ಳಿ ಚಿತ್ರಗಳ ಅನುಭವವನ್ನು ತಾವು ಅನುಭವಿಸಿ ಇತರರು ಅನುಭವಿಸುವಂತೆ ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಫೋಟೋಗಳನ್ನು ನೀವು ಬಳಸಿದ್ದೀರಿ....

ಸೊಗಸಾದ ಹಳ್ಳಿಚಿತ್ರಗಳ ಲೇಖನದ ಜೊತೆಗೆ ಹುಲಿರಾಯನ ಕತೆಯೂ ಕಲ್ಪನೆಯಲ್ಲಿ ಮೂಡುತ್ತಾ ಹೋಗುತ್ತದೆ...

ಧನ್ಯವಾದಗಳು.

Annapoorna Daithota said...

ಒಳ್ಳೆಯ ಲೇಖನ.

ನಮ್ಮ ಅಪ್ಪ, ಚಿಕ್ಕಪ್ಪ, ಎಲ್ಲ ಚಿಕ್ಕವರಿದ್ದಾಗ, ಆ ಕಾಲದಲ್ಲಿ, ಊರಲ್ಲಿ ನಮ್ಮ ಮನೆಯ ಬಳಿಗೂ ಹುಲಿ ಬರುತ್ತಿತ್ತಂತೆ, ಘರ್ಜನೆ ಕೇಳಿಸುತ್ತಿತ್ತಂತೆ. ಹಸುಗಳನ್ನು ಹೊತ್ತೊಯ್ದುದೂ ಇತ್ತಂತೆ.

sunaath said...

ಮಧುಸೂದನ ಪೆಜತ್ತಾಯರ ಅನುಭವಗಳನ್ನು ನಮಗೆ ಉಣಬಡಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

shivu.k said...

ಸರ್,

ಅವಧಿಯಲ್ಲಿ ನಿಮ್ಮ ಲೇಖನ ಪ್ರಕಟವಾಗಿದೆ. ಅಭಿನಂದನೆಗಳು.

umesh desai said...

ಹುಲಿ ನಾ ನೋಡಿದ್ದು ಬೋನಿನ ಹಿಂದೆ ಶ್ರೀ ಮಧುಸೂಧನ್ ಅವರ ಅನುಭವ ಕೇಳುತ್ತಿದ್ದರೆ ಮೈ ಜುಂ ಅಂತು ಒಳ್ಳೆ ಲೇಖನ
ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು

PARAANJAPE K.N. said...

ನನ್ನ ಆತ್ಮೀಯ ಹಿರಿಯ ಮಿತ್ರರೇ ಆಗಿರುವ ಶ್ರೀ ಪೆಜತ್ತಾಯ (ಕೇಸರಿ) ಯವರ ರೋಚಕ ಬರಹವನ್ನು ನಿಮ್ಮ ಬ್ಲಾಗಿನ ಮೂಲಕ ನಮಗೆ ಓದುವ೦ತೆ ಮಾಡಿದ್ದಕ್ಕೆ ಅಭಿನ೦ದನೆಗಳು. ಅವರ "ಕಾಗದದ ದೋಣಿ" ಮತ್ತು "ನಮ್ಮ ರಕ್ಷಕ ರಕ್ಷಾ" ಪುಸ್ತಕ ಗಳನ್ನೂ ನಾನು ಓದಿದ್ದೇನೆ. ಅವರ ಜೀವನಾನುಭವ ಅನನ್ಯವಾದುದು.

Unknown said...

Pajittaayara anubhava lekhana chennagittu.. blog nalli haakiddakke dhanyavaadagalu...