ರಮೇಶ ಐರನ್ ಮಾಡಿ ‘ಮಗ್ಗಲುಚ್ಚೆ’ ಎಂಬ ಅಡ್ಡ ಹೆಸರು ಪಡೆದಿದ್ದು
ನಮ್ಮ ಹಾಸ್ಟೆಲ್ಲಿನಲ್ಲಿ ನನ್ನ ತರಗತಿಯವನೇ ಆದ ‘ಆನೆಕೆರೆ’ ಎಂಬ ಹುಡುಗನಿದ್ದ. ನಾಲ್ವರು ರಮೇಶ ಎಂಬುವವರು ಇದ್ದುದರಿಂದ ಅವರವರ ಊರಿನ ಹೆಸರಿನಿಂದ ಅವರನ್ನು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದವು. ಆನೆಕೆರೆ ರಮೇಶನನ್ನು ‘ಆನೆಕೆರೆ’ ಎಂದು. ಕೆರೆಗಳ್ಳಿ ರಮೇಶನನ್ನು ‘ಕೆರೆಗಳ್ಳಿ’ ಎಂದು, ಸಿಂಗಾಪುರದ ರಮೇಶನನ್ನು ಆತ ಕುಳ್ಳಗಿದ್ದುದರಿಂದ ‘ಕುಳ್ಳ ರಮೇಶ’ ಎಂದು ಕರೆಯುವದು ರೂಢಿಯಾಗಿತ್ತು. ತರಬೇನಹಳ್ಳಿಯವನಾದ ರಮೇಶನನ್ನು, ಪಾಪ ಪೂರ್ತಿ ಹೆಸರೂ ಕರೆಯದೆ, ಕೇವಲ ‘ತರಬೇ’ ಎಂದು ಕರೆಯುತ್ತಿದ್ದವು. ಕೆಲವೊಮ್ಮೆ ‘ರಾಮಿ’ ಎಂಬ ತ್ರಿಶಂಕು ಹೆಸರಿನಿಂದಲೂ ಆತನನ್ನು ಕರೆದು ಗೋಳುಗುಟ್ಟಿಸುತ್ತಿದ್ದೆವು. ಈ ಆನೆಕೆರೆ ಎಂಬ ರಮೇಶನಿಗೆ ಮಗ್ಗಲುಚ್ಚೆ ಮತ್ತು ಇಪ್ಪತ್ತು ಇಡ್ಲಿ ಎಂಬ ಅಡ್ಡ ಹೆಸರುಗಳೂ ಇದ್ದವು! ಅದರಲ್ಲೂ ಈ ಮಗ್ಗಲುಚ್ಚೆ ಎಂಬ ಹೆಸರು ಆತನಿಗೆ ಪ್ರಾಪ್ತವಾಗಿದ್ದು ಒಂದು ವಿಶೇಷ ಸಂದರ್ಭದಲ್ಲಿ.
ಹಾಸ್ಟೆಲ್ಲಿನಲ್ಲಿದ್ದ ನಮಗೆಲ್ಲಾ ನಮ್ಮ ಬಟ್ಟೆಗಳನ್ನು ಐರನ್ ಮಾಡಿಸಿಕೊಂಡು ಹಾಕಿಕೊಳ್ಳಬೇಕೆಂಬ ಚಪಲ. ಆದರೆ ಅಲ್ಲಿ ಯಾರೂ ಧೋಬಿಗಳಿರಲಿಲ್ಲ. ಯಾರ ಬಳಿಯೂ ಐರನ್ ಬಾಕ್ಸ್ ಕೂಡಾ ಇರಲಿಲ್ಲ. ವಾರ್ಡನ್ ಮೊದಲಾದವರು ಚನ್ನರಾಯಪಟ್ಟಣಕ್ಕೆ ಹೋದಾಗ ತಮ್ಮ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಐರನ್ ಮಾಡಿಸಿಕೊಂಡು ಬರುತ್ತಿದ್ದರು. ಆದು ನಮಗೆ ಅತ್ಯಂತ ದುಬಾರಿಯಾದ ಕೆಲಸವಾದ್ದರಿಂದ ನಾವು ಕೆಲವೊಂದು ಅಡ್ಡಮಾರ್ಗಗಳನ್ನು ಶೋಧಿಸಿಕೊಂಡಿದ್ದೆವು. ಅದರಲ್ಲಿ ಅತಿ ಸುಲಭ ಮಾರ್ಗವೆಂದರೆ, ಒಂದು ತಂಬಿಗೆಯಲ್ಲಿ ಕುದಿಯುವ ನೀರನ್ನು ತುಂಬಿಕೊಂಡು ನಮ್ಮ ಬಟ್ಟೆಯ ಮೇಲೆ ತಂಬಿಗೆಯಿಂದ ಉಜ್ಜುವುದು! ಇನ್ನೊಂದು, ನಮಗೆ ಊಟ ಮಾಡಲು ಕೊಟ್ಟಿದ್ದ ತಟ್ಟೆಯಲ್ಲಿ ಕೆಂಡವನ್ನು ತುಂಬಿಕೊಂಡು ಅದರಿಂದ ಬಟ್ಟೆಯನ್ನು ಉಜ್ಜಿಕೊಳ್ಳುವುದು! ಮೊದಲು, ಈ ಎರಡನೇ ಮಾರ್ಗವನ್ನು ಶೋಧಿಸಿದವರು, ಹೆಚ್ಚು ಕೆಂಡ ಹಾಕಿಕೊಂಡು ಬಟ್ಟೆಯನ್ನು ಸುಟ್ಟುಕೊಂಡಿದ್ದರಿಂದ ನಂತರದವರು ಸ್ವಲ್ಪಸ್ವಲ್ಪ ಕೆಂಡ ಮಾತ್ರ ಹಾಕಿಕೊಳ್ಳುತ್ತಿದ್ದೆವು. ಇವೆರಡೂ ನಾವೆಲ್ಲರೂ ಸಾಮಾನ್ಯವಾಗಿ ಅನುಸರಿಸುತ್ತಿದ್ದ ಮಾರ್ಗಗಳಾಗಿದ್ದವು.
ಈ ಆನೆಕೆರೆ ಅರ್ಥಾತ್ ಆನೆಕೆರೆ ರಮೇಶ ಐರನ್ ಸಮಸ್ಯೆಗೆ ಒಂದು ಹೊಸ ಮಾರ್ಗವನ್ನು ಶೋಧಿಸಿದ್ದ. ಅದೆಂದರೆ ರಾತ್ರಿ ಮಲಗುವಾಗ ಐರನ್ ಮಾಡಬೇಕಾದ ಬಟ್ಟೆಯನ್ನು ತನ್ನ ಹಾಸಿಗೆಯ ಕೆಳಗೆ ಹಾಕಿಕೊಂಡು ಮಲಗುತ್ತಿದ್ದ. ಹಾಸಿಗೆಯೆಂದರೆ ಅದು ದಪ್ಪ ಹಾಸಿಗೆಯಲ್ಲ. ಒಂದು ಗೋಣೀತಾಟು, ಅದರ ಮೇಲೊಂದು ಜಮಖಾನ, ಅದರ ಮೇಲೆ ಎರಡು ಬೆಡ್‌ಸ್ಪ್ರೆಡ್‌ಗಳು ಹೀಗೆ ಹಾಸಿಕೊಳ್ಳಲು ನಾಲ್ಕು, ಹೊದೆಯಲು ಒಂದು ಉಲ್ಲನ್ ರಗ್ ಮತ್ತು ಒಂದು ದಿಂಬು. ಇವಿಷ್ಟೂ ಹಾಸ್ಟೆಲ್ಲಿನಿಂದಲೇ ನಮಗೆ ಒದಗಿಸಲ್ಪಟ್ಟಿದ್ದವು. ಇವುಗಳಲ್ಲಿ ಮೇಲಿನ ಎರಡು ಬೆಡ್‌ಸ್ಪ್ರೆಡ್ ಮತ್ತು ಕೆಳಗಿನ ಜಮಖಾನದ ನಡುವೆ ಐರನ್ ಮಾಡಬೇಕಾದ ಷರ್ಟ್ ಅಥವಾ ಫ್ಯಾಂಟನ್ನು ನೆರಿಗೆಯಿಲ್ಲದಂತೆ ಹಾಸಿ ಮಲಗಿಕೊಳ್ಳುತ್ತಿದ್ದ. ಬೆಳಿಗ್ಗೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಐರನ್ ಮಾಡಿದಂತೆಯೇ ಆ ಬಟ್ಟೆಗಳು ಕಾಣುತ್ತಿದ್ದವು. ಆದರೆ ಆತನ ಈ ಪ್ರಯೋಗ ಕೇವಲ ಒಂದೆರಡು ವಾರದಲ್ಲಿ ಅವನಿಂದಲೇ ಬಂದ್ ಆಯಿತು!
ಒಂದು ದಿನ ಹೀಗೆ ಪ್ಯಾಂಟ್-ಷರ್ಟ್ ಎರಡನ್ನೂ ಹಾಸಿಗೆಯ ನಡುವೆ ಸೇರಿಸಿಕೊಂಡು ಮಲಗಿದ್ದ ಆನೆಕೆರೆಯು, ನಡುರಾತ್ರಿಯಲ್ಲಿ ನಿದ್ದೆಯಲ್ಲಿದ್ದಾಗಲೇ ಅವನಿಗೆ ಗೊತ್ತಿಲ್ಲದೆ ಉಚ್ಚೆ ಹುಯ್ದುಕೊಂಡುಬಿಟ್ಟಿದ್ದ! ಬೆಳಿಗ್ಗೆ ಎದ್ದು ಆತ ಐರನ್ ಆಗಿರುವ ತನ್ನ ಫ್ಯಾಂಟ್ ಷರ್ಟ್‌ನ್ನು ಬೇರೆಯವರಿಗೆಲ್ಲಾ ತೋರಿಸುವ ಸಂಭ್ರಮದಲ್ಲಿ ಆತ ಉಚ್ಚೆ ಹುಯ್ದುಕೊಂಡಿದ್ದು ಎಲ್ಲರಿಗೂ ಗೊತ್ತಾಯಿತು. ‘ತಾನು ಉಚ್ಚೆ ಹುಯ್ದುಕೊಂಡಿದ್ದಲ್ಲವೆಂದೂ, ರಾತ್ರಿ ತಾನು ಮಠದ ಪೌಳಿಯ ಬಳಿ ಉಚ್ಚೆ ಮಾಡಿಯೇ ಬಂದು ಮಲಗಿದ್ದೆ’ ಎಂದೂ ವಾದಿಸಿದ. ಆದರೆ ಆತ ಹಾಗೆ ಪೌಳಿಯ ಬಳಿ ಉಚ್ಚೆ ಮಾಡಿದ್ದು ಕನಸಿನಲ್ಲಿ ಎಂಬುದನ್ನು ಒಪ್ಪಲು ಸಿದ್ಧನಿರಲಿಲ್ಲ. ಮಹಾನ್ ಪುಕ್ಕಲನಾಗಿದ್ದ ಆತ ಮಠದ ಪೌಳಿಯವರೆಗೂ ಹೋಗಿ ಉಚ್ಚೆ ಹುಯ್ದು ಬರುವುದು ಸಾಧ್ಯವೇ ಇರಲಿಲ್ಲ. ಕನಸ್ಸಿನಲ್ಲಿ ಪೌಳಿಯ ಬಳಿ ಉಚ್ಚೆ ಹುಯ್ಯುತ್ತಿದ್ದ ಆತ ತನ್ನ ಹಾಸಿಗೆಯ ಮೇಲೆಯೇ ಹುಯ್ದುಕೊಂಡುಬಿಟ್ಟಿದ್ದ. ಅಂದಿನಿಂದ ಆತನಿಗೆ ‘ಮಗ್ಗಲುಚ್ಚೆ’ ಎಂಬ ಅಡ್ಡ ಹೆಸರು ಅಂಟಿಕೊಂಡುಬಿಟ್ಟಿತ್ತು. ಒಮ್ಮೊಮ್ಮೆ, ಆತನ ಮೇಲೆ ಕೋಪ ಬಂದಾಗ, ಹಾಸ್ಟೆಲ್ಲಿನ ವಾರ್ಡನ್ ಸಹ ‘ಮಗ್ಗಲುಚ್ಚೆ’ ಎಂದು ಬಯ್ದಿದ್ದಿದೆ!
ಇನ್ನು ಅವನಿಗೆ ‘ಇಪ್ಪತ್ತು ಇಡ್ಲಿ’ ಎಂದು ಅಡ್ಡ ಹೆಸರು ಬಂದಿದ್ದು ಹೀಗೆಯೇ ಆತ ಮಾಡಿಕೊಂಡ ಎಡವಟ್ಟಿನಿಂದಾಗಿ. ಅಷ್ಟೇನು ಭಾರೀ ಆಳಲ್ಲದ ಆತ ಇನ್ನೂ ಆರನೇ ಕ್ಲಾಸ್ ಓದುವ ಚಿಕ್ಕ ಹುಡುಗನಂತೆ ಕಾಣುತ್ತಿದ್ದ. ಆದರೆ ಆತ ತಿನ್ನಲು ಕುಳಿತರೆ ದೊಡ್ಡವರು ತಿನ್ನುವಂತೆ ಎರಡ್ಮೂರು ಮುದ್ದೆ, ತಟ್ಟೆ ತುಂಬಾ ಅನ್ನ ಎಲ್ಲವನ್ನೂ ಬಾರಿಸುತ್ತಿದ್ದ. ಹಾಗೆ ಹೆಚ್ಚು ತಿಂದಿದ್ದ ದಿನ ಆತನ ಹೊಟ್ಟೆ ಒಂದು ಕಡೆ ದಪ್ಪವಾದಂತೆ ಕಂಡು ನಾವು ಅವನಿಗೆ ‘ನಿನ್ನ ಹೊಟ್ಟೆ ಒಡೆದು ಹೋಗುತ್ತದೆ. ನೋಡುತ್ತಿರು’ ಎಂದು ತಮಾಷೆ ಮಾಡುತ್ತಿದ್ದೆವು. ಸುಬ್ಬೇಗೌಡ ಎಂಬ ಹುಡುಗನಿಗೂ ಇವನಿಗೂ ಯಾವ್ಯಾವುದಕ್ಕೋ ಮಾತು ಬೆಳೆದು, ಅದು ಇಪ್ಪತ್ತು ಇಡ್ಲಿ ತಿನ್ನುವ ಪಂದ್ಯಕ್ಕೆ ಎಡೆ ಮಾಡಿಕೊಟ್ಟಿತ್ತು. ಆನೆಕೆರೆ ಇಪ್ಪತ್ತು ಇಡ್ಲಿ ತಿನ್ನುತ್ತಿದ್ದನೋ ಏನೋ? ಆದರೆ ಸುಬ್ಬೇಗೌಡನಿಗೆ ಅವನ ಮಾತಿನ ಮೇಲೆ ನಂಬಿಕೆಯಿರಲಿಲ್ಲ. ಆತ ಅಡುಗೆ ಭಟ್ಟ ಅಪ್ಪಣ್ಣನನ್ನು ಸಾಕ್ಷಿಯಾಗಿರಿಸಿಕೊಂಡು ಬೆಟ್ ಕಟ್ಟಿಯೇ ಬಿಟ್ಟ. ಕೇವಲ ಇಪ್ಪತ್ತು ರೂಪಾಯಿ ಬೆಟ್ ಅಷ್ಟೆ. ಆನೆಕೆರೆ ಗೆದ್ದರೆ ಇಡ್ಲಿ ದುಡ್ಡನ್ನು ಸುಬ್ಬ ಕೊಡಬೇಕಾಗಿತ್ತು. ಸೋತರೆ ಆನೆಕೆರೆ ಕೊಡಬೇಕಾಗಿತ್ತು.
ಸರಿ ಒಂದು ಭಾನುವಾರ ಬೆಳಿಗ್ಗೆ ಮಂಜಣ್ಣನ ಹೋಟೆಲಿನಿಂದ ಇಪ್ಪತ್ತು ಬಿಸಿ ಬಿಸಿ ಇಡ್ಲಿ ತಂದು ಮಠದ ಹಿಂಬದಿಗಿದ್ದ ಕಲ್ಬಾವಿಯ ಬಳಿ ಸೇರಿದ್ದರು. ಆತ ತಿನ್ನುತ್ತಾನೆ ಅಥವಾ ಇಲ್ಲ ಎಂದು ಬೇರೆ ಕೆಲವರೂ ಅಷ್ಟಿಷ್ಟು ಬೆಟ್ ಕಟ್ಟಿಕೊಂಡಿದ್ದರು. ಸುಮಾರು ಇಪ್ಪತ್ತು ಮೂವತ್ತು ಹುಡುಗರ ನಡುವೆ ರಾಶಿಯಾಗಿ ಬಿದ್ದಿದ್ದ ಇಪ್ಪತ್ತು ಇಡ್ಲಿ, ಚಟ್ನಿಯ ಮುದ್ದೆ, ಕುಡಿಯಲು ನೀರು ಎಲ್ಲವೂ ಅಣಿಯಾಗಿತ್ತು. ಇಪ್ಪತ್ತು ಎಂಬ ಸಂಖ್ಯೆ ರಮೇಶನಿಗೆ ಸಣ್ಣದಾಗಿ ಕಂಡು ಒಪ್ಪಿಕೊಂಡಿದ್ದನೋ ಏನೂ? ಆದರೆ ಆ ಇಡ್ಲಿಯ ರಾಶಿ ನೋಡಿ ನಮಗೇ ಗಾಬರಿಯಾಯಿತು.
ಆತ ತಿನ್ನಲು ಪ್ರಾರಂಭಿಸಿ ಹತ್ತು... ಹನ್ನೆರಡು... ಹದಿನೈದು ಇಡ್ಲಿಗಳನ್ನು ಸರಾಗವಾಗಿಯೇ ಮುಗಿಸಿದ. ಇನ್ನೇನು ಐದೇ ಇಡ್ಲಿಗಳಲ್ಲವೆ? ಆತ ಗೆಲ್ಲುವುದು ಗ್ಯಾರಂಟಿ ಎಂದು ಆತನ ಪರವಾಗಿ ಬೆಟ್ ಕಟ್ಟಿದ್ದವರೆಲ್ಲಾ ಖುಷಿಯಾಗಿದ್ದರು. ನಂತರ ಒಂದು ಇಡ್ಲಿ ತಿನ್ನುವಷ್ಟರಲ್ಲಿ ಆತನ ತಿನ್ನುವ ವೇಗಕ್ಕೆ ಕಡಿವಾಣ ಬಿತ್ತು. ಬಿಕ್ಕಳಿಕೆ ಮೇಲಿಂದ ಮೇಲೆ ಬರಲಾರಂಭಿಸಿದವು. ನೀರು ಕುಡಿದರೆ ತಿನ್ನಲಾಗುವುದಿಲ್ಲವೆಂದೋ ಏನೋ ಆತ ನೀರು ಕುಡಿದೇ ಇರಲಿಲ್ಲ. ತಡೆದು ತಡೆದು ಆತ ಇನ್ನೂ ಎರಡು ಇಡ್ಲಿ ಮುಗಿಸಿದ. ನಂತರ ಸ್ವಲ್ಪ ನೀರು ಕುಡಿದು, ಸುಧಾರಿಸಿಕೊಂಡು ಮತ್ತೆ ಶುರುವಿಟ್ಟುಕೊಂಡ. ಹತ್ತೊಂಬತ್ತು ಇಡ್ಲಿಯೂ ಮುಗಿದವು. ಉಳಿದ ಒಂದರಲ್ಲಿ ಅರ್ಧವೂ ಖಾಲಿಯಾಯಿತು. ಆತ ಎಲ್ಲವನ್ನೂ ಬಾಯಿಯಲ್ಲೇ ತುರುಕಿಕೊಂಡಂತೆ ಕಾಣುತ್ತಿದ್ದ. ಉಳಿದರ್ಧದಲ್ಲಿ ಅರ್ಧ ಭಾಗವೂ ಖಾಲಿಯಾಯಿತು! ಇತ್ತ ಸುಬ್ಬನ ಮುಖ ಕಪ್ಪಿಟ್ಟಿತ್ತು. ಇನ್ನೇನು ಆ ತುತ್ತನ್ನು ಎತ್ತಿ ಬಾಯಿಗೆ ಹಾಕಿ ನುಂಗಿದರೆ ಸಾಕು, ಆತ ಗೆದ್ದುಬಿಡುತ್ತಿದ್ದ. ಹುಡುಗರೆಲ್ಲಾ ಕೂಗಿ ಕೂಗಿ ಹುರಿದುಂಬಿಸುತ್ತಿದ್ದರು. ಆತ ಒಂದೆರಡು ಕ್ಷಣ ತಡೆದು ತಿಂದಿದ್ದರೆ ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತೋ ಏನೋ. ಆದರೆ ಹುಡುಗರು ಹುರಿದುಂಬಿಸುತ್ತಿದ್ದುದರಿಂದ ಉತ್ತೇಜನಗೊಂಡು ಅದನ್ನು ಎತ್ತಿ ಬಾಯಿಯ ಬಳಿಗೆ ಕೈ ತಂದಿದ್ದನೋ ಇಲ್ಲವೋ, ‘ವ್ಯಾಕ್’ ಎಂದು ವಾಂತಿ ಮಾಡಿಬಿಟ್ಟ! ಅದನ್ನು ನಿರೀಕ್ಷಿಸಿರದ, ಅವನ ಮುಂದೆ ನಿಂತು ಹುರಿದುಂಬಿಸುತ್ತಿದ್ದವರ ಮೇಲೆಲ್ಲಾ ವಾಂತಿಯ ಸುರಿಮಳೆಯಾಯಿತು. ಅವರು ಎಚ್ಚೆತ್ತುಕೊಂಡು ಹಿಂದೆ ಸರಿಯುವುದರಲ್ಲಿ ಮತ್ತೊಮ್ಮೆ ‘ವ್ಯಾಕ್’ ಎಂದು ಮೊದಲಿಗಿಂತ ಜೋರಾಗಿ ಹಾರಿಸಿಬಿಟ್ಟ! ವಾಂತಿ ಮಾಡುವಾಗಿನ ಕಷ್ಟದಿಂದಲೋ, ಪಂದ್ಯದಲ್ಲಿ ಸೋತುದ್ದರಿಂದಲೂ ಆತನ ಮೂಗು ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ಸುಬ್ಬ ಮಾತ್ರ ಗೆದ್ದ ಖುಷಿಯಲ್ಲಿದ್ದರಿಂದ ರಮೇಶನ ಸ್ಥಿತಿಯನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಎರಡೇ ಬಾರಿ ‘ವ್ಯಾಕ್’ ಎಂದು ಅರ್ಧ ಗಂಟೆಯಿಂದ ಹೊಟ್ಟೆಗೆ ತುಂಬಿಕೊಂಡಿದ್ದ, ಇಡ್ಲಿ, ಚಟ್ಣಿ ಎಲ್ಲವನ್ನೂ ಹೊರಹಾಕಿದ್ದ! ಪಂದ್ಯ ಸೋತರೂ ಆತನಿಗೆ ‘ಇಪ್ಪತ್ತು ಇಡ್ಲಿ’ ಎಂಬ ಅಡ್ಡ ಹೆಸರು ಮಾತ್ರ ಕೊನೆಯವರೆಗೂ ಅಂಟಿಕೊಂಡಿತ್ತು!
ಚಿತ್ರಕೃಪೆ: ಅಂತರಜಾಲ
11 comments:
ನಿಮ್ಮ ಅನುಭವ ಗಳ ಬುತ್ತಿ ಬಿಚ್ಚುತ್ತಾ ಹೋದ೦ತೆ ಹೊಸಹೊಸ ಸ೦ಗತಿಗಳು ಹೊರಬರುತ್ತಿವೆ. ಇದರಲ್ಲಿರುವ ಸ್ವಾರಸ್ಯ, ಲಘುಹಾಸ್ಯ ಚೆನ್ನಾಗಿದೆ. ಇ೦ತಹ ನೆನಪುಗಳನ್ನು ಮೆಲುಕು ಹಾಕುವುದು ನಿಮಗೂ ಒ೦ಥರದ ಖುಷಿಯ ಅನುಭೂತಿ ಅಲ್ಲವೇ ?
ಪರಾಂಜಪೆ ಸರ್, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ನಿಮ್ಮ ಅನಿಸಿಕೆ ಖಂಡಿತಾ ನಿಜ! ಅದು ಪದಗಳಿಗೆ ನಿಲುಕದ ಅನುಭೂತಿ. ಹೇಳಲು ಹೊರಟರೆ ವಾಚ್ಯವಾಗಿಯೇ ಉಳಿದು ಬಿಡುತ್ತದೆ. ಈ ಮಾಲಿಕೆಯ ಕೊನೆಯಲ್ಲಿ ಅದರ ಮುನ್ನುಡಿಯನ್ನು ಪ್ರಕಟಿಸುತ್ತೇನೆ. ಆ ಮುನ್ನುಡಿಯಲ್ಲಿ ಈ ನೆನಪುಗಳು ನನ್ನಿಂದ ಬರೆಡಸಿಕೊಂಡ ರೀತಿಯ ಬಗ್ಗೆ ಬರೆದಿದ್ದೇನೆ.
ಸತ್ಯಾವ್ರಿಗೆ ನಮಸ್ಕಾರ, ಓದಾಯ್ತು, ನಿಮ್ಮ ಹೈಸ್ಸ್ಕೂಲ್ ದಿನ ಖುಷಿ ಕೊಡ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ನೀವು ಚನ್ನರಾಯಪಟ್ಟಣದ ಹತ್ತಿರದವ್ರು ಅಂತ ಗೊತ್ತಾಯ್ತು. ನಿಮ್ಮೂರು ಯಾವ್ದು ಅಂತ ಹೇಳಿದ್ರೆ ನಮ್ಮೂರು ನಿಮ್ಮೂರಿಂದ ಎಷ್ಟು ದೂರ ಅಂತ ಹೇಳೋದೂ ಸುಲಭ. ನನ್ನಪ್ಪ ಅಮ್ಮ ಈಗಿರೋದು. ಗನ್ನಿಕಡದತ್ರ, ಅಡಿಕೆಕೆರೆ ಹೊಸೂರು. ತರಬೇನ ಈಗ ತುರುಬೆ ಅಂತ ಕರೀತಿದಾರೆ ಅಂತ ಕೇಳಿದೀನಿ. ನಿಮ್ಮ ತರಬೆ ಈ ತುರುಬೇ ಒಬ್ನೇನೋ? ಇಬ್ರೋ? ಅನ್ನೋದೊಂದೇ ಯಕ್ಷಪ್ರಶ್ನೆ!!!
ಈಗ ನೀವು ಬರೆದಿರೋ ನಿಮ್ಮ ಹೈಸ್ಕೂಲು ದಿನದ ೨೧ನೇ ವಿಭಾಗದ ಮೊದಲ್ನೇ ನೆನಪು, ನೆನಪು ಚೆನ್ನಾಗಿದೆ. ಆದ್ರೆ, ಬರವಣಿಗೆ ತುಂಬಾ ಪುಸ್ತಕದ ಬರವಣಿಗೆ ಆಗೋಯ್ತು. ಸಾಮಾನ್ಯವಾಗಿ ಈ ಊರು ಸುತ್ತಮುತ್ತ ಮಾತಾಡೋವಾಗ ರಾಗ ಎಳೀತಾರೆ. ದೇಶೀಯ ಭಾಷೆ ಪರಿಚಯ ಮಾಡಿಸ್ಬಹುದಿತ್ತು. ಇನ್ನೂ ಸ್ವಲ್ಪ ಪದಗಳ್ನ ಕಡಿಮೆ ಮಾಡಿ ಬರೀಬಹುದಿತ್ತು ಅಂತ ನನ್ನ ಭಾವನೆ. ಇನ್ನೊಂದಿಷ್ಟು ಮಸಾಲೇನೂ ತುಂಬಿ ಬರೀಬಹುದಿತ್ತು.
ಇನ್ನು ಎರಡ್ನೇದು. ಮೊದಲ್ನೇ ಕಥೆ ಬರವಣಿಗೆಯಲ್ಲಿರೋ ಹಿಡಿತ ಎರಡ್ನೇದ್ರಲ್ಲಿಲ್ಲಾ ಅನ್ನೋ ಭಾವನೆ ಬರುತ್ತೆ. ಅತಿ ಉತ್ಸುಕತೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಬರೆದಿರೋ ಪ್ರಬಂದದ ಥರಾ ಅನ್ನಿಸ್ತು.
ಆದ್ರೆ ಎರಡೂ ಬರವಣಿಗೆಗೆ ಬೇಸರ ಬೇಡ, ಎಷ್ಟೇ ಆದ್ರೂ ಇದು ೨೨ನೇ ಭಾಗಕ್ಕೆ ಮುನ್ನುಡಿ ಅಲ್ವೇ? ಕೈಕಟ್ಟಿ ಕೂತಿದ್ರೆ ಆಗ್ತಿತ್ತೇ? ನಿಮ್ಮ ೨೨ನೇ ಭಾಗಕ್ಕೆ ಕಾಯ್ತೀನಿ.
ಇಂದು ನಿಮ್ಮ ಆತ್ಮೀಯ ಡೇರಿಕ್.
ಚೆನ್ನಾಗಿ ನಿರೂಪಿಸಿದ್ದೀರಾ.....ನನ್ನ ದೊಡ್ಡಮ್ಮನ ಮಗ ಎಳನೆ ಕ್ಲಾಸಿನಲ್ಲೂ ಹಾಸಿಗೆ ನೆನೆಸುತ್ತಿದ್ದ ಅದೂ ಹೇಗೆ ಹಳ್ಳಿಯಲ್ಲಿ ಅಟ್ಟದ ಮೇಲೆ ಹಾಸಿಗೆ ನೆನೆದು ತೊಪ್ಪೆಯಾಗಿ ಅಟ್ಟದ ಕೆಳಗೆ ಅಕ್ಕಿ ಮೂಟ್ಟೆಯ ಮೇಲೆ ತೊಟ್ಟಿಕಿಸುತ್ತಿದ್ದ....ನಿಮ್ಮ ಲೇಖನ ನೋಡಿ ನೆನಪಾಯಿತು
ಡಾ. ಸತ್ಯ...ಚನ್ನಾಗಿದೆ ನಿಮ್ಮ ಅನುಭವಗಳ ಮೂಟೆಯ ಮಸಾಲೆ...!! ನಮ್ಮ ಹಾಸ್ಟಲ್ ಅಸಕ್ಕೆ ಪೀಠಿಕೆ ರೂಪದ ವಾಸ ಪ್ರಾರಂಭವಾದದ್ದು ಎಸ್ಸೆಸ್ಸೆಲ್ಸಿ ಯ ಕಡೆಯ ಐದು ತಿಂಗಳ ಸಮಯ. ಆಗ..ನನ್ನ ಸ್ನೇಹಿತನೊಬ್ಬ ರೂಂ ಬಾಡಿಗೆ ಸತತ ಎರಡು ತಿಂಗಳು ಕೊಡದೇ ಹೋದಾಗ..ಬಾಡಿಗೆ ವಸೂಲಿಗೆ ಬಂದಿದ್ದ ಓನರ್ ಕೈಯಿಂದ ತಪ್ಪಿಸಿಸ್ಕೋಳ್ಳಲು ಸುಮಾರು ಮೂರು ಘಂಟೆ ಟಯಿಲೆಟ್ ನಲ್ಲೇ ಕಳೆದ..ಆಮೇಲೆ ಯಜಮಾನರು ಹೋದರೆಂದು ಖಾತ್ರಿಮಾಡಿಕೊಂಡು..ಹೊರ ಬಂದ..ಕ್ರಾಸ್ ಕೊಶ್ಚನ್ ಮಾಡುತ್ತಿದ್ದರಿಂದ ಅವನಿಗೆ ಕ್ರಾಸ್ ಗಿರೀಶ ಎಂದೇ ಪ್ರಸಿದ್ಧನಾಗಿದ್ದ...ಆದರೆ ಅಂದಿನಿಂದ..ಕವಾ ಗಿರೀಶ ಅಂತ ಅನ್ವರ್ಥನಾಮನಾದ...ಕವಾ..ಅಂದರೆ ಗೊತ್ತಾಯಿತಲ್ಲ...ಕಕ್ಕಸ್ ವಾಸಿ...ಹಹಹ!
chennagide....lavalavikege gobbara andre hale ..nenapugale...swarasyakaravagide..chandrashekhar yethadka
ಸತ್ಯ ಸರ್,,,, ಚೆನ್ನಾಗಿ ಇದೆ... ತಮ್ಮ ಅನುಭವವನ್ನ ಚೆನ್ನಾಗಿ ವರ್ನಿಸ್ಥ ಇದ್ದೀರಾ.... ಹಾಗೆ ನಮ್ಮ ಹಳೇ ಕಾಲದ ನೆನಪುಗಳೆಲ್ಲವೂ ಬಂದು ಹೋಗುತ್ತೆ....
ಸತ್ಯ ನಾರಾಯಣ ಸರ್,
ನಿಮ್ಮ ಆನುಭವಗಳು ಒಂದಕ್ಕಿಂತ ಒಂದು ವಿಭಿನ್ನ. ಇಂಥ ಸಂಗತಿಗಳು ಎಲ್ಲರ ಜೀವನದಲ್ಲೂ ನಡೆದಿರುತ್ತವೆ. ಆದ್ರೆ ಅದನ್ನು ಈ ರೀತಿ ಪ್ರತಿಯೊಂದನ್ನು ನೆನಪಿಸಿಕೊಂಡು ಹೀಗೆ ನವಿರುಹಾಸ್ಯದಿಂದ ಸ್ವಾರಸ್ಯವಾಗಿ ಬರೆಯುತ್ತೀರಲ್ಲ, ಅದು ನನಗೆ ತುಂಬಾ ಇಷ್ಟವಾಗುತ್ತೆ. ಓದುತ್ತಿದ್ದರೇ ಒಂದೊಂದು ದೃಶ್ಯಗಳು ಕಣ್ಣ ಮುಂದೆ ತೇಲು ಹೋಗುತ್ತವೆ...
ಧನ್ಯವಾದಗಳು.
hello sir..
Nimma hostel dinagalunna oduttadda iddene,tumba kushi kodutte nivu madiro kitapathi kkelsa nodi..nnamma school days nenpu barutte..
nimma baravanige chenagide
good luck
ನಿಮ್ಮ ಹೈಸ್ಕೂಲ್ ದಿನಗಳ ಕಥೆ ಸುಂದರವಾಗಿದೆ. ಕಥೆಯೊಳಗಿನ ನಿವೇದನೆ, ಅದರೊಳಗಿನ ಹಾಸ್ಯ ಸೇರಿ ಬರವಣಿಗೆಯ ತೂಕ ಹೆಚ್ಚಿಸಿದೆ
Post a Comment