Wednesday, August 12, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 22

ಗೌರ್ನಮೆಂಟ್ ಹಾಸ್ಪಿಟಲ್ ಮತ್ತು ನರ್ಸ್ ನಾಗಮ್ಮ
ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅಲ್ಲಿದ್ದ ಗೌರ್‍ನಮೆಂಟ್ ಆಸ್ಪತ್ರೆ ತುಂಬಾ ಪ್ರಸಿದ್ಧಿ ಪಡೆದಿತ್ತು. ಡಾಕ್ಟರ್ ಬೆಟ್ಟೇಗೌಡರು ಏನೇನೋ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದರು. ನಮ್ಮ ಬಂಧುಗಳೇ ಆಗಿದ್ದ ವೀರಭದ್ರೇಗೌಡ ಎಂಬುವವರು ಅಲ್ಲಿಗೆ ಕಾಂಪೌಂಡರ್ ಆಗಿ ಬಂದಿದ್ದರು. ಆಸ್ಪತ್ರೆಯ ಆಶ್ರಯದಲ್ಲಿ ತಿಂಗಳಿಗೊಂದು ಜನನ ನಿಯಂತ್ರಣ ಆಪರೇಷನ್ ಕ್ಯಾಂಪ್ ನಡೆಯುತ್ತಿತ್ತು. ಕಣ್ಣಿನ ಪರೀಕ್ಷೆಗೆಂದು ತಿಂಗಳಿಗೊಮ್ಮೆ ಕ್ಯಾಂಪ್ ನಡೆಯುತ್ತಿತ್ತು. ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಸಪ್ಲೈ ಆಗುತ್ತಿದ್ದ ಔಷಧಿಗಳನ್ನು ಈ ಆಸ್ಪತ್ರೆಯಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿತ್ತು.
ಜನಪ್ರಿಯರಾಗಿದ್ದ, ಡಾಕ್ಟರ್ ಬೆಟ್ಟೇಗೌಡರು ಇಂಜೆಕ್ಷನ್ ತೆಗದುಕೊಂಡ ಕೆಲವು ರೋಗಿಗಳಿಂದ ಎರಡು ಅಥವಾ ಮೂರು ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದರು. ಅದನ್ನು ಕೆಲವರು ‘ಸರ್ಕಾರಿ ಆಸ್ಪತ್ರೆಯಲ್ಲಿ ದುಡ್ಡೇಕೆ ಕೊಡಬೇಕು’ ಎಂದು ಪ್ರತಿಭಟಿಸುತ್ತಿದ್ದರು. ಆಗ ಬೆಟ್ಟೇಗೌಡರು, ‘ನೋಡಪ್ಪ, ಸರ್ಕಾರ ಎಲ್ಲಾ ಖಾಯಿಲೆಗಳಿಗೂ ಔಷಧಿಗಳನ್ನು ಸಪ್ಲೈ ಮಾಡುವುದಿಲ್ಲ. ನಿನಗೆ ನಾನು ಔಷಧಿಯನ್ನು ಬರೆದುಕೊಟ್ಟರೆ, ಅದನ್ನು ತರಲು ನೀನು ಚನ್ನರಾಯಪಟ್ಟಣಕ್ಕೆ ಹೋಗಬೇಕು. ಅಷ್ಟಕ್ಕೆ ನೀನು ಎಷ್ಟು ಖರ್ಚು ಮಾಡಬೇಕು? ಅಲ್ಲದೆ, ನೀನು ಹೋಗಿ ತರುವ ಹೊತ್ತಿಗೆ ನಿನ್ನ ಖಾಯಿಲೆಯ ಗತಿ ಏನಾಗಬೇಡ. ಅದಕ್ಕೆ ನಾನೇ ಒಂದಷ್ಟು ದುಡ್ಡು ಹಾಕಿ ಔಷಧಿ ತಂದಿದ್ದೇನೆ. ಅದಕ್ಕೆ ನೀವಲ್ಲದೆ ನಾನು ದುಡ್ಡು ಕೊಡಬೇಕೆ?’ ಎನ್ನುತ್ತಿದ್ದರು. ಪ್ರತಿಭಟನೆ ಮಾಡಿದವರು ತೆಪ್ಪಗೆ ‘ಇರುವುದು ಇಷ್ಟೆ’ ಎಂದು ಒಂದೋ ಎರಡೋ ರೂಪಾಯಿ ಕೊಟ್ಟು ಕಾಲು ಕೀಳುತ್ತಿದ್ದರು. ಹೀಗೆ ಹಣ ತೆಗೆದುಕೊಳ್ಳುತ್ತಿದ್ದರೂ ಬೆಟ್ಟೇಗೌಡರ ಜನಪ್ರಿಯತೆಗೇನೂ ಕೊರತೆಯಾಗಿರಲಿಲ್ಲ. ದೂರದ ಊರುಗಳಿಂದ ಗಾಡಿ ಕಟ್ಟಿಕೊಂಡು ರೋಗಿಗಳನ್ನು ಕರೆದುಕೊಂಡು ಬರುತ್ತಿದ್ದರು. ‘ಡಾಕ್ಟರರ ಕೈಗುಣ ಚೆನ್ನಾಗಿದೆ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತರಲು ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಸಿಬ್ಬಂದಿಗಳಿದ್ದರು. ಹತ್ತಾರು ಜನ ನರ್ಸ್‌ಗಳಿದ್ದರು. ಎಲ್ಲಾ ಊರುಗಳ ಮನೆಗಳ ಗೋಡೆಯ ಮೇಲೆ ‘ಎರಡೇ ಮಕ್ಕಳು ಸಾಕು’, ‘ನಿರೋಧ್ ಬಳಕೆ ಬುದ್ಧಿವಂತ ಪುರುಷರ ಲಕ್ಷಣ’ ಎಂಬ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ನರ್ಸ್‌ಗಳು ಮನೆಮನೆಗೆ ಹೋಗಿ ಜನರಲ್ಲಿ ಮಕ್ಕಳಾಗದ ಹಾಗೆ ಆಪರೇಷನ್ ಮಾಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವಲ್ಲಿ ನಿರತರಾಗಿದ್ದರು. ಆಪರೇಷನ್ ಮಾಡಿಸಿಕೊಂಡವರಿಗೆ ಇನ್ನೂರೋ ಇನ್ನೂರೈವತ್ತೋ ರೂಪಾಯಿ ದುಡ್ಡನ್ನು ಕೊಡಲಾಗುತ್ತಿತ್ತು. ಜೊತೆಗೆ, ಕರ್ನಾಟಕ ರಾಜ್ಯ ಲಾಟರಿಯ ಐದು ಟಿಕೆಟ್‌ಗಳನ್ನೂ ಕೊಡಲಾಗುತ್ತಿತ್ತು! ಆಪರೇಷನ್ ಮಾಡಿಸಿಕೊಳ್ಳಲು ಮನವೊಲಿಸಿದ ನರ್ಸ್‌ಗೆ ಕಮೀಷನ್ ಕೂಡಾ ದೊರೆಯುತ್ತದೆಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಹೆಚ್ಚಿನ ಸಿಬ್ಬಂಧಿಗಳು ಹಾಸನದಿಂದಲೋ ಚನ್ನರಾಯಪಟ್ಟಣದಿಂದಲೋ ಬಂದು ಹೋಗುತ್ತಿದ್ದರು. ನಾಗಮ್ಮ ಎಂಬ ನರ್ಸ್ ಮಾತ್ರ ಅಲ್ಲಿಯೇ ಒಂದು ಕ್ವಾರ್ಟ್ರಸ್‌ನಲ್ಲಿ ಉಳಿದುಕೊಂಡಿದ್ದಳು. ಅವಳ ಗಂಡನೂ ಡಾಕ್ಟರಾಗಿದ್ದು, ತಿಪಟೂರಿನಲ್ಲೋ ಅರಸೀಕೆಯಲ್ಲೋ ಕ್ಲಿನಿಕ್ ನಡೆಸುತ್ತಿದ್ದರಂತೆ. ಇನ್ನೂ ಚಿಕ್ಕ ವಯಸ್ಸಿನ ಆಕೆ ಚುರುಕಾಗಿ ಕೆಲಸ ಮಾಡುತ್ತಾ ಓಡಾಡುತ್ತಿದ್ದಳು. ಸಕ್ಕರೆ ಖಾಯಿಲೆಯಿದ್ದ ದೊಡ್ಡ ಸ್ವಾಮೀಜಿಯವರಿಗೆ, ಪ್ರತಿದಿನ, ಇಂಜೆಕ್ಷನ್ ಚುಚ್ಚಿ ಬರುವುದೂ ಅವಳ ಕೆಲಸವಾಗಿತ್ತು. ಸಂಜೆಯ ವೇಳೆ ಏನೂ ಕೆಲಸವಿಲ್ಲದಿದ್ದರೆ ಬಂದು ಹಾಸ್ಟೆಲ್ಲಿನ ಬಳಿ ಹುಡುಗರು ಕಬಡ್ಡಿ, ವಾಲಿಬಾಲ್ ಆಡುವುದನ್ನು ನೋಡುತ್ತಾ, ಹರಟೆ ಹೊಡೆಯುತ್ತಾ ಕುಳಿತಿರುತ್ತಿದ್ದಳು. ವಾರ್ಡನ್, ಭಟ್ಟರೆಲ್ಲರೂ ಅವಳಿಗೆ ಚೆನ್ನಾಗಿ ಪರಿಚಯವಾಗಿದ್ದರು. ಹಾಸ್ಟೆಲ್ಲಿನಲ್ಲಿ ಸ್ಪೆಷಲ್ ಮಾಡಿದ ದಿನ ಅವಳನ್ನು ಒಮ್ಮೊಮ್ಮೆ ಊಟಕ್ಕೆ ಕರೆಯಲಾಗುತ್ತಿತ್ತು.
ನಮ್ಮ ಹಾಸ್ಟೆಲ್ಲಿನಲ್ಲಿ ಕಳ್ಳತನವಾದ ದಿನವೇ ಕುಂದೂರಿನಲ್ಲಿ ಕೊಲೆಯಾದ ವಿಚಾರವನ್ನು ಹೇಳಿದೆನಲ್ಲ. ಆ ದಿನಗಳಲ್ಲಿ ಕುಂದೂರುಮಠದಲ್ಲಿ ಒಂದು ರೀತಿಯ ಭಯದ ವಾತಾವರಣವಿತ್ತು. ಕತ್ತಲಾದ ಮೇಲೆ ಒಬ್ಬೊಬ್ಬರೇ ಯಾರೂ ಹೊರಗೆ ಹೋಗುತ್ತಿರಲಿಲ್ಲ. ಇಡೀ ಕ್ವಾರ್ಟ್ರಸ್ಸಿನಲ್ಲಿ ಒಬ್ಬಳೇ ವಾಸವಾಗಿದ್ದ ನಾಗಮ್ಮನಿಗೂ ಈ ಭಯ ಕಾಡಿತ್ತು. ಅದಕ್ಕೆ ಅವಳು ನಮ್ಮ ವಾರ್ಡನ್ ಬಳಿ ಬಂದು ರಾತ್ರಿ ವೇಳೆ ಮನೆಯಲ್ಲಿ ಮಲಗಲು ನಾಲ್ಕಾರು ಹುಡುಗರನ್ನು ಕಳುಹಿಸುವಂತೆ ಕೇಳಿಕೊಂಡಿದ್ದಳು. ವಾರ್ಡನ್ನರೂ ಒಪ್ಪಿದರು. ನನ್ನನ್ನು ಸೇರಿಸಿ ನಾಲ್ಕು ಜನ ಹತ್ತನೇ ತರಗತಿಯ ಹುಡುಗರನ್ನು ಕರೆದು ದಿನಾ ರಾತ್ರಿ ಊಟವಾದ ಮೇಲೆ ನಾಗಮ್ಮನ ಮನೆಗೆ ಹೋಗಿ, ಅಲ್ಲಿಯೇ ಓದಿಕೊಂಡು ಮಲಗಬೇಕೆಂದು ಹೇಳಿದರು. ಅಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯಿತ್ತು. ಹಾಸ್ಟೆಲ್ಲಿನ ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಸುತ್ತಲೂ ಕುಳಿತು ಓದುತ್ತಿದ್ದ ಹಾಗೂ ಆ ಮಸಿಯನ್ನೇ ಉಸಿರಾಡುತ್ತಿದ್ದ ನಮಗೆ, ಮೂಗಿನೊಳಗೆ ಕಪ್ಪಗೆ ‘ಕಿಟ್ಟ’ ಕಟ್ಟಿಕೊಳ್ಳುತ್ತಿತ್ತು. ಬೆಳಿಗ್ಗೆ ಸ್ನಾನ ಮಾಡುವಾಗ, ಮೂಗಿನೊಳಗೆ ಬೆರಳು ಹಾಕಿ ಕಪ್ಪಗಿನ ಕಿಟ್ಟ ತೆಗೆದು ತೆಗೆದು ನಮಗೆ ಬೇಸರವಾಗಿತ್ತು. ವಿದ್ಯುತ್ ದೀಪದ ಬೆಳಕಿನಲ್ಲಿ ಓದಬಹುದೆಂಬ ಆಸೆಯಿಂದ ನಾವು ಹೊರಡಲು ಸಿದ್ಧರಾದೆವು. ಸ್ವತಃ ನಾಗಮ್ಮನೇ ಕುಳ್ಳ ಶಿವೇಗೌಡನೂ ಇರಲಿ ಎಂದು ಕರೆದಿದ್ದರಿಂದ ಒಟ್ಟು ಐದು ಜನ ನಮ್ಮ ನಮ್ಮ ಹಾಸಿಗೆ ಪುಸ್ತಕಗಳನ್ನು ತೆಗೆದುಕೊಂಡು ನಮ್ಮ ‘ಅಡ್ಡಾ’ವನ್ನು ಬದಲಿಸಿದೆವು.
ಅಲ್ಲಿ ಓದುವುದಕ್ಕಿಂತ ನಮಗೆ ಹೆಚ್ಚು ಆಕರ್ಷಣೆಯೆಂದರೆ ಅವರಲ್ಲಿದ್ದ ಒಂದು ರೇಡಿಯೋ. ಅದನ್ನು ಹಾಕಿಕೊಂಡು ಹರಟೆ ಹೊಡೆಯುವುದು ನಮ್ಮ ನೆಚ್ಚಿನ ಹವ್ಯಾಸವಾಗಿತ್ತು. ಸ್ವತಃ ನಾಗಮ್ಮನೇ ಬಯ್ದು, ‘ಓದಿಕೊಳ್ಳದಿದ್ದರೆ ವಾರ್ಡನ್‌ಗೆ ಹೇಳುತ್ತೇನೆ’ ಎನ್ನುವವರೆಗೂ ನಮ್ಮ ಆಟ ಮುಂದುವರೆಯುತ್ತಲಿತ್ತು. ಕೇವಲ ರಾತ್ರಿ ಹೊತ್ತು ಮಾತ್ರ ನಮಗೆ ಆಡುತಾಣವಾಗಿದ್ದ ನಾಗಮ್ಮನ ಮನೆ ಶನಿವಾರ ಭಾನುವಾರಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಆಡುತಾಣವಾಗಿದ್ದು ಈ ರೇಡಿಯೋ ನೆಪದಿಂದಲೇ! ಭಾನುವಾರ ಮಧ್ಯಾಹ್ನ ಎರಡೂವರೆಯಿಂದ ಮೂರೂವರೆಯವರೆಗೆ ಒಂದು ಕನ್ನಡ ಸಿನಿಮಾದ ಕಥೆಯನ್ನು ಆಗ ರೇಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರು. ಅದನ್ನು ಕೇಳಲು ನಾವು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದರ ನಡುವೆ ಆಗಾಗ ನಾಗಮ್ಮ ನಮಗೆ ಮೊಟ್ಟೆ, ಬ್ರೆಡ್, ಹಣ್ಣು ಕೊಡುತ್ತಿದ್ದುದ್ದು ಇನ್ನೊಂದು ಆಕರ್ಷಣೆಯಾಗಿತ್ತು. ಕೆಲವೊಮ್ಮೆ ನಾವೇ ದುಡ್ಡು ಸೇರಿಸಿ ಮೊಟ್ಟೆ ತಂದು ಆಮ್ಲೆಟ್ ಮಾಡಿಸಿಕೊಂಡು ತಿಂದದ್ದೂ ಉಂಟು!
ಇಂಥದ್ದೇ ಒಂದು ಮಧ್ಯಾಹ್ನ ನಾಗಮ್ಮ ಎಲ್ಲೋ ಹೊರಗೆ ಹೋಗಿದ್ದಳು. ನಾವು ಸಿನಿಮಾ ಕಥೆ ಕೇಳಿ ಓದುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆವು. ನಮ್ಮ ಜೊತೆಗಿದ್ದ ಕುಳ್ಳ ಶಿವೇಗೌಡ ಒಂಬತ್ತನೇ ತರಗತಿಯಲ್ಲಿದ್ದುದ್ದರಿಂದಲೋ ಏನೋ, ನಾನೇನು ಅಷ್ಟು ಓದಬೇಕಾಗಿಲ್ಲ ಎಂದು ಸುಮ್ಮನೇ ಕೋಣೆ ಕೋಣೆ ತಿರುಗುತ್ತಾ ಅದೂ ಇದೂ ಹುಡುಕಿ ತಂದು ನಮಗೆ ತೋರಿಸುವುದು ಮಾಡುತ್ತಿದ್ದ. ಆತ ನಾಗಮ್ಮನ ರೂಮಿನಿಂದ ತಂದ ಒಂದು ಕವರನ್ನು ನೋಡಿದಾಗ ಅದರಲ್ಲಿ ನೂರಾರು ನಿರೋಧ್‌ಗಳು ಇದ್ದವು. ಆಗ ಆಸ್ಪತ್ರೆಯವರು ಪ್ರಚಾರಕ್ಕಾಗಿ ಅಂಟಿಸುತ್ತಿದ್ದ ಭಿತ್ತಿಪತ್ರಗಳಲ್ಲಿ ನಿರೋಧ್‌ಗಳ ಚಿತ್ರವನ್ನು ಅದರ ಉಪಯೋಗವನ್ನು ನಾವು ಮನಗಂಡಿದ್ದೆವು. ನರ್ಸ್‌ಗಳು ಅವುಗಳನ್ನು ಮನೆಮನೆಗೆ ಹಂಚುತ್ತಿದ್ದರೆಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೂ ಅವುಗಳನ್ನು ಪ್ರತ್ಯಕ್ಷವಾಗಿ ಅಷ್ಟು ಹತ್ತಿರದಿಂದ ನೋಡಿದ್ದು ಅವತ್ತೇ.
ನಮ್ಮ ಜೊತೆಯಲ್ಲಿದ್ದ ಕಿಲಾಡಿಯೊಬ್ಬ ಒಂದು ಪ್ಯಾಕೆಟ್ ಓಪನ್ ಮಾಡಿ, ಅದನ್ನು ಬಲೂನ್ ರೀತಿ ಊದಿಯೇಬಿಟ್ಟ!. ಅವನಿಂದ ಪ್ರೇರೇಪಿತರಾದ ಕುಳ್ಳ ಮತ್ತು ಇನ್ನೊಂದಿಬ್ಬರು ತಾವೂ ಊದಲು ಕುಳಿತರು. ನಾನು ಮತ್ತು ಸೋಮಶೇಖರ ಎಷ್ಟು ಬೇಡವೆಂದರೂ ಐದೇ ನಿಮಿಷದಲ್ಲಿ ಹತ್ತಾರು ನಿರೋಧ್‌ಗಳನ್ನು ಊದಿ ಊದಿ ಗಂಟು ಹಾಕಿ ಹಾಲ್‌ನಲ್ಲಿ ಹಾರಿಬಿಟ್ಟುಬಿಟ್ಟರು. ನಮಗೆ ಏನು ಮಾಡಲು ತೋಚದೆ ಒಂದೊಂದನ್ನೇ ಹಿಡಿದು ನಾವು ಓದಿಕೊಳ್ಳುತ್ತಿದ್ದ ರೂಮಿಗೆ ತಳ್ಳುತ್ತಿದ್ದೆವು. ಹಾಲ್‌ನ ಕಿಟಕಿ ರಸ್ತೆಯ ಕಡೆಗೇ ಇದ್ದುದ್ದರಿಂದ ಯಾರಾದರು ನೋಡುತ್ತಾರೆ ಎಂಬ ಭಯ ನಮ್ಮದು. ನಾವು ಓದಿಕೊಳ್ಳುತ್ತಿದ್ದ ರೂಮ್ ಹಿಂಬದಿಗಿತ್ತು. ಕೊನೆಗೆ ಅವುಗಳನ್ನು ಹಿಡಿದು ಹಿಡಿದು ರೂಮಿಗೆ ತುಂಬುವ ಕೆಲಸ ನಮಗೂ ಮೋಜೆನ್ನಿಸಿ ಅವರನ್ನು ಮತ್ತೆ ಮತ್ತೆ ಊದಲು ಪ್ರೇರೇಪಿಸಿದೆವು. ಆ ಮೂವರೂ ಸುಮಾರು ಐವತ್ತಕ್ಕೂ ಹೆಚ್ಚು ನಿರೋಧ್‌ಗಳನ್ನು ಊದಿ ಮುಗಿಸಿದಾಗ ಆ ರೂಮ್ ಅರ್ಧದಷ್ಟನ್ನು ಊದಿದ ನಿರೋಧ್ ಬಲೂನ್‌ಗಳೇ ಆವರಿಸಿಕೊಂಡುಬಿಟ್ಟಿದ್ದವು. ಇನ್ನು ಮುಂದೆ ಊದಲು ಅವರಲ್ಲಿ ಶಕ್ತಿ ಉಳಿದಿರಲಿಲ್ಲ!
ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ನಾಗಮ್ಮ ಬರುವಷ್ಟರಲ್ಲಿ ಅವುಗಳನ್ನು ಒಡೆದು ಹಾಕುವುದೆಂದು ತೀರ್ಮಾನ ಮಾಡಿದೆವು. ಆದರೆ ಹೇಗೆ. ಒಂದು ಬಲೂನ್ ಹಿಡಿದು ಒಡೆಯಲು ಪ್ರಾರಂಭಿಸಿದರೆ ಅದು ಸಾಧ್ಯವೇ ಆಗುತ್ತಿರಲಿಲ್ಲ. ಹೇಗೆ ಅಮುಕಿದರೂ, ಕಾಲಿನಿಂದ ತುಳಿದರೂ ಅದು ಒಡೆಯುತ್ತಿರಲಿಲ್ಲ. ಗಂಟು ಬಿಚ್ಚಲೂ ಆಗಲಿಲ್ಲ. ಆಗ ನಾನು ಒಂದು ಗಂಧದ ಕಡ್ಡಿ ಹಚ್ಚಿ ಅವುಗಳಿಗೆ ಮುಟ್ಟಿಸುವ ಐಡಿಯಾ ಕೊಟ್ಟೆ. ಗಂಧದ ಕಡ್ಡಿ, ಬೆಂಕಿಕಡ್ಡಿ ಹುಡುಕಿ ಹಚ್ಚಿಕೊಂಡು ಒಂದೆರಡು ಬಲೂನ್‌ಗಳನ್ನು ಹೊಡೆದಿರಬಹುದು ಅಷ್ಟೆ. ಅವುಗಳು ಉಂಟು ಮಾಡುತ್ತಿದ್ದ ಶಬ್ದ ನಮ್ಮನ್ನು ಭಯಬೀಳಿಸಿತ್ತು. ಅದಕ್ಕಿಂತ ಹೆಚ್ಚಾಗಿ ನಮಗೆ ದಿಗಿಲಾಗಿದ್ದು ನಾಗಮ್ಮ ಬಂದು ಬಾಗಿಲು ಬಡಿದಿದ್ದು.
ತಕ್ಷಣ ನಾವು ರೂಮಿನ ಬಾಗಿಲನ್ನು ಮುಚ್ಚಿ ಏನೂ ಆಗದವರಂತೆ ಬಾಗಿಲು ತೆಗೆದು ಓದುತ್ತಾ ಕುಳಿತುಕೊಂಡೆವು. ನಾಗಮ್ಮನಿಗೆ ಆಶ್ಚರ್ಯ! ಇಂದೇಕೆ ಹಾಲ್‌ನಲ್ಲಿ ಕುಳಿತು ಓದಿಕೊಳ್ಳುತ್ತಿದ್ದಾರೆ ಎಂದು. ‘ಯಾಕೆ ಇಲ್ಲಿ ಕುಳಿತಿದ್ದೀರ?’ ಎಂದು ಕೇಳಿಯೇ ಬಿಟ್ಟಳು. ನಾವು ‘ಅಲ್ಲಿ ತುಂಬಾ ಸೆಕೆ. ಅದಕ್ಕೆ’ ಎಂದು ಒಂದು ಸುಳ್ಳನ್ನು ಹೇಳಿಬಿಟ್ಟೆವು. ಆದರೆ ನಾವು ಹೇಳಿದ್ದು ಸುಳ್ಳು ಎಂಬುದು ನಮ್ಮ ಮಾತಿನಲ್ಲಿದ್ದ ನಡುಕವೇ ಹೇಳುತ್ತಿತ್ತು. ನಾಗಮ್ಮ ನಮ್ಮ ಮಾತನ್ನು ನಂಬದೆ ‘ಏನಾದರು ರೂಮಿನಲ್ಲಿ ಚೆಲ್ಲಿದ್ದೀರಾ?’ ಎನ್ನುತ್ತಾ, ನಾವು ನೋಡು ನೋಡುತ್ತಿರುವಂತೆ ಬಾಗಿಲನ್ನು ಜೋರಾಗಿ ತೆಗೆದೇಬಿಟ್ಟಳು!

ಬಾಗಿಲನ್ನು ಜೋರಾಗಿ ತಳ್ಳಿದ ರಭಸಕ್ಕೆ ರೂಮಿನಲ್ಲಿ ಸುಮ್ಮನೆ ತೇಲುತ್ತಾ ಕುಳಿತಿದ್ದ ಬಲೂನ್‌ಗಳೆಲ್ಲಾ ಒಮ್ಮೆಲೆ ಮೇಲೇರಿ ಕುಣಿಯಲಾರಂಭಿಸಿದವು! ಕೆಲವು ಅವಳ ಕಡೆಗೂ ನುಗ್ಗಿ ಬಂದವು. ನಾಗಮ್ಮ ನಮ್ಮೆಡೆಗೆ ತಿರುಗಿ, ‘ಯಾರು ಇದನ್ನೆಲ್ಲಾ ಮಾಡಿದ್ದು, ಅವನ್ನೇನು ಬಲೂನ್ ಎಂದುಕೊಂಡಿದ್ದೀರಾ ಹೇಗೆ?’ ಎಂದು ಅಬ್ಬರಿಸಿದಳು. ನಾವು ಅಷ್ಟೂ ಜನ ಅವಳ ಎದುರಿಗೆ ಕೈಮುಗಿದು ‘ತಪ್ಪಾಯಿತು ಸಿಸ್ಟರ್ ನಾವೆ ಮಾಡಿದ್ದು. ಇದೊಂದು ಬಾರಿ ಇದನ್ನು ಯಾರಿಗೂ ಹೇಳಬೇಡಿ. ಮತ್ತೆ ಮಾಡಲ್ಲ.’ ಎಂದು ಮುಂತಾಗಿ ಬೇಡಿಕೊಂಡೆವು. ಅವಳು ನಗುತ್ತಾ ‘ಹೋಗಲಿ ಬಿಡಿ, ಮೊದಲು ಅವುಗಳ ಗಾಳಿಯನ್ನು ತೆಗೆದು, ಎಲ್ಲವನ್ನೂ ನೀರು ಕಾಯಿಸುವ ಒಲೆಗೆ ಹಾಕಿ’ ಎಂದಳು. ನಾವು ಅದಕ್ಕೆ ಮಾಡಿದ ಪ್ರಯತ್ನವನ್ನು ಅವಳ ಮುಂದೆ ಹೇಳಿದೆವು. ಕೊನೆಗೆ ಅವಳೇ ರೂಮಿನ ಕಿಟಕಿ ಬಾಗಿಲುಗಳನ್ನೆಲ್ಲಾ ಹಾಕಿಸಿ, ಸಾಧ್ಯವಾದಷ್ಟು ಶಬ್ದ ಬರದಂತೆ ಎಚ್ಚರವಹಿಸಿ ಒಡೆಯಲು ಸಹಕರಿಸಿದಳು.
ಅವುಗಳ ಸಂಹಾರಕಾರ್ಯದಲ್ಲಿ ನಿರತರಾಗಿರುವಾಗ ‘ಇವುಗಳನ್ನು ಬಲೂನ್‌ಗಳು ಎಂದುಕೊಂಡಿದ್ದಿರಾ’ ಎಂದು ನಾಗಮ್ಮ ಕೇಳಿದಳು. ಆಗ ನಾವು ‘ಅವು ಬಲೂನ್‌ಗಳಲ್ಲ ಅಂತ ಗೊತ್ತು. ನೀವು ಆಸ್ಪತ್ರೆ ಮುಂದೆ ಅಂಟಿಸಿರೋ ಪೋಸ್ಟರಿನಲ್ಲಿ ಅದರ ಬಗ್ಗೆ ಬರೆದಿರೋದನ್ನ ಓದಿದ್ದೀವಿ’ ಎಂದು ಹೇಳಿದೆವು. ಅವಳೂ ನಕ್ಕು ಸುಮ್ಮನಾಗಿಬಿಟ್ಟಳು. ಆದರೆ ಹದಿನೈದು ದಿನ ಕಳೆಯುವುದರಲ್ಲಿ ಈ ವಿಷಯ ಹೇಗೋ ಎಲ್ಲರಿಗೂ ತಿಳಿದುಹೋಗಿತ್ತು. ಆಗಲೂ ನಮಗೆಲ್ಲಾ ಕುಳ್ಳ ಶಿವೇಗೌಡನ ಮೇಲೆಯೇ ಅನುಮಾನ ಬಂದಿತ್ತು. ಆದರೆ ವಿಷಯ ಅಷ್ಟೊಂದು ಗಂಭೀರತೆ ಪಡೆದುಕೊಳ್ಳಲಿಲ್ಲವಾದ್ದರಿಂದ ನಾವು ಎಂದಿನಂತೆ ನಾಗಮ್ಮನ ಮನೆ ಕಾವಲು ಕೆಲಸಕ್ಕೆ ಹೋಗುತ್ತಿದ್ದೆವು. ಅದರಿಂದ ಆದ ಒಂದೇ ಬದಲಾವಣೆ ಎಂದರೆ ನಾಗಮ್ಮ ತನ್ನ ರೂಮಿಗೆ ಬೀಗ ಹಾಕಿಕೊಂಡು ಹೊರಗೆ ಹೋಗಲಾರಂಭಿಸಿದ್ದು!
ಚಿತ್ರಕೃಪೆ: ಅಂತರಜಾಲ

5 comments:

PARAANJAPE K.N. said...

ಚೆನ್ನಾಗಿದೆ.ಅದಾಗಲೇ ಪುಸ್ತಕ ಕೊಂಡು ಓದಿದ್ದೇನೆ.

shivu.k said...

ಸತ್ಯನಾರಾಯಣ ಸರ್,

ಅಪರೇಷನ್ ಮಾಡಿಸಿಕೊಂಡರೆ ದುಡ್ಡಿನ ಜೊತೆಗೆ ಲಾಟರಿ ಟಿಕೆಟ್ ಕೊಡುವುದು, ಮತ್ತೆ ನಾಗಮ್ಮನ ರೂಮಿನಲ್ಲಿ ನಿರೋಧ್ ಊದುವ ಪ್ರಕರಣವನ್ನು ಓದಿ ಸಕ್ಕತ್ ನಗುಬಂತು...ಆಗಿನ ಬಾಲ್ಯದ ಆಟಗಳೇ ಒಂಥರ ಮಜ ಅಲ್ವೆ ಸರ್.,

ರೂpaश्री said...

haha sakkat nagu baMtu nimma nirOdh baloon aaTa Odi:))

ಸಾಗರದಾಚೆಯ ಇಂಚರ said...

ನಿಮ್ಮ ಪುಸ್ತಕ ದ ಪ್ರತಿಯನ್ನು ತೆಗೆದುಕೊಂಡು ಓದುತ್ತೇನೆ, ಸೊಗಸಾಗಿದೆ ಬರವಣಿಗೆ

PARYAYA said...

Chennagide. Munduvaresi.
Nethrakere Udaya Shankara