Monday, August 24, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 23

ಮೊದಮೊದಲ್ ಸೇದಿದ ಸಿಗರೇಟು!
ಹಾಸ್ಟೆಲ್ಲಿನಲ್ಲಿ ನಮ್ಮದೇ ಆದ ಒಂದು ಗುಂಪಿದ್ದಂತೆ, ಸ್ಕೂಲ್‌ನಲ್ಲೂ ಒಂದು ಗುಂಪಿತ್ತು. ಆ ಗುಂಪಿನಲ್ಲಿ ನಾನೊಬ್ಬನೇ ಹಾಸ್ಟೆಲ್ಲಿನ ವಿದ್ಯಾರ್ಥಿಯಾಗಿದ್ದೆ. ಚಿಕ್ಕಮಗಳೂರಿನಿಂದ ಬಂದಿದ್ದ ಬೆಳಗುಲಿಯ ಚಿಕ್ಕಹೊನ್ನೇಗೌಡ, ಹಳೇಬೀಡಿನ ಸ್ಕೂಲಿನಿಂದ ಬಂದಿದ್ದ ಹಾಗೂ ಬೆಳಗುಲಿಯ ಮಾವನ ಮನೆಯಿಂದ ಸ್ಕೂಲಿಗೆ ಬರುತ್ತಿದ್ದ ಪುಷ್ಪಾಚಾರಿ, ತಿಮ್ಲಾಪುರದಿಂದ ಸೈಕಲ್‌ನಲ್ಲಿ ಬರುತ್ತಿದ್ದ ಸುರೇಶ, ಬ್ಯಾಡರಹಳ್ಳಿಯ ಬಿ.ಬಿ.ಮಂಜುನಾಥ ಮತ್ತು ನಾನು ಗುಂಪಿನ ಸದಸ್ಯರಾಗಿದ್ದೆವು. ಒಮ್ಮೊಮ್ಮೆ ಮೊಲದ ಮಂಜ ಇನ್ಯಾರಾದರೂ ಸೇರುತ್ತಿದ್ದರು. ನಾವೆಲ್ಲಾ ಸೈಕಲ್‌ನಲ್ಲಿ ಶ್ರವಣಬೆಳಗೊಳಕ್ಕೆ ಹೋಗಿಬಂದಿದ್ದೆವು. ಆಗ ನಮ್ಮ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದವರೆ! ನಮ್ಮ ಈ ಪಟಾಲಮ್ಮು ಯಾವುದೇ ಅಪಾಯಕರ ಕಾರ್ಯಗಳಿಗೆ ಕೈಹಾಕದಿದ್ದರೂ ಕೆಲವು ಸಣ್ಣ ಪುಟ್ಟ ಗುಪ್ತ ಕಾರ್ಯಚರಣೆ ನಡೆಸುವುದು ಇತ್ತು. ಹುಡುಗಿಯರ ಹಿಂದಿನ ಡೆಸ್ಕಿನಲ್ಲಿ ಕುಳಿತುಕೊಳ್ಳುತಿದ್ದ ನಾವು, ಬ್ಯಾಗಿನಿಂದ ದಾರಗಳನ್ನು ಕಿತ್ತುಕೊಂಡು ಹುಡುಗಿಯರ ಜಡೆಗಳನ್ನು ಪರಸ್ಪರ ಗಂಟು ಹಾಕುವುದು, ಅವರು ಚಪ್ಪಲಿ ಬಿಟ್ಟಿದ್ದರೆ, ಒಂದನ್ನು ಹಿಂದಕ್ಕೆ ಇನ್ನೊಂದನ್ನು ಇನ್ನೆಲ್ಲಿಗೋ ತಳ್ಳುವುದು, ಪೇಪರ್ ಬಾಲವನ್ನು ನಿರ್ಮಿಸಿ ಹುಡುಗರಿಗೆ ಅಂಟಿಸುವುದು, ಮೇಷ್ಟ್ರು ಬರುವಷ್ಟರಲ್ಲಿ ಡಸ್ಟರ್ ಮೇಲಿದ್ದ ಸ್ಪಂಜ್ ಕಿತ್ತು, ಮತ್ತೆ ಸುಮ್ಮನೆ ಅದರ ಮೇಲೆಯೇ ಏನೂ ಆಗಿಲ್ಲ ಎನ್ನುವಂತೆ ಇಡುವುದು, ಡೆಸ್ಟರ್‌ಗೆ ಇಂಕ್ ಸುರಿಯುವುದು, ಹುಡುಗರು ನಡೆದು ಬರುವಾಗ ಅಡ್ಡಗಾಲು ಕೊಡುವುದು ಮೊದಲಾದವುಗಳನ್ನು ಮಾಡುತ್ತಾ ಅದನ್ನೇ ಪರಮಸಂತೋಷ ಎಂದುಕೊಂಡಿದ್ದೆವು.
ಒಂದು ದಿನ ಹೊನ್ನೇಗೌಡ ಲೇಟಾಗಿ ಬಂದು, ಬೇರೆ ಡೆಸ್ಕಿನಲ್ಲಿ ಹಿಂದೆ ಕೂರಬೇಕಾಯಿತು. ಆಗ ಅಟೆಂಡೆನ್ಸ್ ಹೇಳಲು ಎದ್ದು ನಿಂತಿದ್ದ ಹುಡುಗ ಕುಳಿತುಕೊಳ್ಳುವಷ್ಟರಲ್ಲಿ ಪೆನ್ನನ್ನು ಇಟ್ಟು ಅದು ಆ ಹುಡುಗನ ಕುಂಡಿಗೆ ಚುಚ್ಚಿ ಆತ ಗೊಳೋ ಎಂದು ಅತ್ತಿದ್ದರಿಂದ ಮೇಷ್ಟ್ರು ಹೊನ್ನೇಗೌಡನ ತೊಡೆಯಲ್ಲಿ ಬಾಸುಂಡೆ ಮೂಡಿಸಿದ್ದರು! ಚೆನ್ನಾಗಿ ನೆನಪಿರುವ ಇನ್ನೊಂದು ಘಟನೆಯೆಂದರೆ ನಾವು ಮೊದಲ ಬಾರಿಗೆ ಸಿಗರೇಟು ಸೇದಿದ್ದು!
ದಸರಾ ರಜಾ ಮುಗಿದು ತರಗತಿಗಳು ಒಂದು ಶನಿವಾರ ಮತ್ತೆ ಶುರುವಾಗಬೇಕಾಗಿತ್ತು. ಮೊದಲೇ ಸೋಮಾರಿಗಳಾಗಿದ್ದ ಮೇಷ್ಟ್ರುಗಳು ಒಂದಾಗಿ, ‘ಶನಿವಾರ ಯಾಕೆ ಬರಬೇಕು? ಅದೂ ಹಾಫ್ ಡೇ ಬೇರೆ. ಆದ್ದರಿಂದ ಎಲ್ಲರೂ ಸೋಮುವಾರ ಬಂದುಬಿಡಿ’ ಎಂದು ತೀರ್ಮಾನ ಮಾಡಿದ್ದರು. ಹಾಸ್ಟೆಲ್ ಭಾನುವಾರದಿಂದ ಶುರುವಾಗುವುದರಲ್ಲಿತ್ತು. ನಮ್ಮ ಈ ಪಟಾಲಮ್ಮು ಮಾತ್ರ ಶನಿವಾರವೇ ಬಂದು ಹೋಗಬೇಕೆಂದು ತೀರ್ಮಾನಿಸಿಕೊಂಡಿದ್ದೆವು. ಊರಿನಲ್ಲಿ ರಜ ಕಳೆಯುವುದು ಬೇಸರದ ಸಂಗತಿಯಲ್ಲವಾದರೂ ಇಪ್ಪತ್ತಮೂರು ದಿನಗಳ ನಂತರ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರುವುದು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ.
ಸರಿ. ಅಂದು ಶನಿವಾರ ಐವರೂ ತಪ್ಪದೆ ಹಾಸ್ಟೆಲ್ ಬಳಿ ಬಂದು ಸೇರಿದೆವು. ಏನೇನೋ ಮಾತನಾಡಿದೆವು. ಹರಟೆ ಹೊಡೆದೆವು. ಮಂಜಣ್ಣನ ಹೋಟೆಲಿನ ಬೋಂಡ ತಿಂದೆವು. ಸುಮ್ಮನೆ ಸುತ್ತಾಡುತ್ತ ಮೆಳೆಯಮ್ಮನ ಗುಡಿಯ ಬಳಿಗೂ ಹೋಗಿ, ಪರೀಕ್ಷೆಯಲ್ಲಿ ಪಾಸು ಮಾಡುವಂತೆ ಕೇಳಿಕೊಂಡೆವು! ಆದರೂ ಹೊತ್ತು ಹೋಗುತ್ತಿಲ್ಲ. ಸಮಾಧಾನವೂ ಇಲ್ಲ. ಆ ಸಂದರ್ಭದಲ್ಲೇ ಸುರೇಶ ಒಂದು ಭಯಂಕರ ಐಡಿಯಾ ಕೊಟ್ಟ. ಅದೇ, ಎಲ್ಲರೂ ಸಿಗರೇಟು ಸೇದುವುದು!
ಆ ಸುರೇಶನನ್ನು ನಾವು ಬೆಂಕಿ ಎಂದು ಕರೆಯುತ್ತಿದ್ದೆವು. ಆತ ಆಗಾಗ ಬೀಡಿ ಸಿಗರೇಟು ಸೇದುತ್ತಿದ್ದುದ್ದು ನಮಗೆ ಗೊತ್ತಿತ್ತು. ಆತ ಚಿಕ್ಕ ಹುಡುಗನಾಗಿದ್ದಾಗ ಕಣಗಾಲದಲ್ಲಿ ಹಾಕಿದ್ದ ಬೆಂಕಿಯಲ್ಲಿ ಮಕಾಡೆ ಬಿದ್ದುಬಿಟ್ಟಿದ್ದನಂತೆ. ಅದರಿಂದಾಗ ಆತನ ಹೊಟ್ಟೆ, ಎದೆ, ಕುತ್ತಿಗೆ ಭಾಗವೆಲ್ಲಾ ಸುಟ್ಟು ಹೋಗಿದ್ದರ ಕುರುಹಾಗಿ ಚರ್ಮವೆಲ್ಲಾ ಸುಕ್ಕುಸುಕ್ಕಾಗಿತ್ತು. ಈ ಘಟನೆಯನ್ನು ಕೇಳಿದ ದಿನ ಪುಷ್ಪಾಚಾರಿ ಅವನಿಗೆ ಬೆಂಕಿ ಎಂದು ಅಡ್ಡ ಹೆಸರು ಇಟ್ಟುಬಿಟ್ಟಿದ್ದ! ಅಂದಿನಿಂದ ನಾವು ಆತನನ್ನು ಸುರೇಶ ಅಂದಿದ್ದೇ ಇಲ್ಲ; ಕೇವಲ ಮೇಸ್ಟರುಗಳ ಎದುರಿಗೇನಾದರು ಆತನನ್ನು ಮಾತನಾಡಿಸುವಾಗ ಮಾತ್ರ ಸುರೇಶ ಎನ್ನುತ್ತಿದ್ದೆವು. ಉಳಿದಂತೆ ಬೆಂಕಿ ಎಂಬುದೇ ಅವನ ಹೆಸರಾಗಿತ್ತು. ಆತ ಕೊಟ್ಟ ಸಿಗರೇಟು ಸೇದುವ ಸಲಹೆಗೆ ಎಲ್ಲರ ಒಪ್ಪಿಗೆಯೂ ಸಿಕ್ಕಿತು. ಸಿಗರೇಟನ್ನು ಬೆಂಕಿಯೇ ಕೊಡಿಸುವುದು ಎಂದು, ಸಿಗರೇಟು ಸೇದಿದ ಮೇಲೆ ಬಾಯಿಂದ ವಾಸನೆ ಬರದಂತೆ ತಿನ್ನಲು ಕಡ್ಲೆಪುರಿ ಚಾಕಲೇಟು ಮೊದಲಾದವುಗಳನ್ನು ಇತರರು ತರುವುದೆಂದು ತೀರ್ಮಾನವಾಯಿತು.
ಸಿಗರೇಟುಗಳನ್ನು ತೆಗೆದುಕೊಂಡು ಬಹಳಷ್ಟು ದೂರ ನಡೆದು ನಿರ್ಜನವಾಗಿದ್ದ ಒಂದು ಜಾಗದಲ್ಲಿ ಮರವೊಂದರ ಕೆಳಗೆ ಕುಳಿತು ಸಿಗರೇಟು ಹಚ್ಚಿದೆವು. ಮೊದಲ ದಮ್ಮಿಗೆ ನನಗೆ ಕೆಮ್ಮು ಹತ್ತಿತ್ತು. ಎದೆ ಹಿಡಿದು ಕೆಮ್ಮತ್ತಿದ್ದ ನನ್ನ ಕಣ್ಣು ಮೂಗಿನಲ್ಲಿ ನೀರು ಬರುತ್ತಿತ್ತು. ‘ಮೊದಲು ಹೀಗೆಯೇ ಆಗುವುದು, ಅಮೇಲೆ ಎನೂ ಆಗುವುದಿಲ್ಲ’ವೆಂದು ಬೆಂಕಿ ಸಲಹೆ ಬೇರೆ ಕೊಡುತ್ತಿದ್ದ! ನಾಲ್ಕೈದು ದಮ್ಮು ಸೇದುವುದರಲ್ಲೇ ಸುಸ್ತಾಗಿ ಬಿಸಾಕಿಬಿಟ್ಟೆ, ಪುಷ್ಪಾಚಾರಿಯೂ ನನ್ನದೇ ದಾರಿ ಹಿಡಿದ. ಇನ್ನಿಬ್ಬರು ಕೆಮ್ಮುತ್ತಲೇ ಪೂರ್ತಿ ಸೇದಿ ಎಂಜಾಯ್ ಮಾಡಿದರು! ಆದರೆ ಬೆಂಕಿ ಮಾತ್ರ ಸಿಗರೇಟಿನ ಫಿಲ್ಟರ್‌ವರೆಗೆ ಉರಿ ಬರುವವರೆಗೂ ಸೇದಿ ಹೊಗೆ ಬಿಡುತ್ತಿದ್ದ!
ನಾನು ಈ ಮೊದಲು ಸಿಗರೇಟು ಸೇದಿರಲಿಲ್ಲ. ಆದರೆ ಬೀಡಿ ಸೇದಿದ್ದೆ ಎಂದರೆ ನನಗೇ ಆಶ್ಚರ್ಯ! ನಿಮಗೂ ಆಶ್ಚರ್ಯವಾಗಬಹುದು!! ಆದರೆ ಅದು ಕದ್ದು ಮುಚ್ಚಿ ಸೇದಿದ್ದಲ್ಲ!!! ಎಲ್ಲರ ಎದುರಿಗೇ ಅದೂ ನಮ್ಮ ಮನೆಯಲ್ಲೇ ಕೇವಲ ಒಂದೆರಡು ದಮ್ಮು ಸೇದುವಷ್ಟಕ್ಕೆ ಮಾತ್ರ ಸೀಮಿತವಾಗಿತ್ತು.
ಅದು ಆಗಿದ್ದು ಹೀಗೆ. ನಮ್ಮ ಅಜ್ಜ ನಾನು ಎಂಟನೇ ತರಗತಿಯಲ್ಲಿದ್ದಾಗ ತೀರಿಹೋದರು. ಅವರು ತೀರಿ ಹೋಗುವ ಮೊದಲು ಒಂದೈದಾರು ತಿಂಗಳ ಕಾಲ ಹಾಸಿಗೆಯಲ್ಲಿದ್ದರು. ಎದ್ದು ನಡೆದಾಡುತ್ತಿರಲಿಲ್ಲ. ನಾವು ಆರು ಜನ ಅವರ ಮೊಮ್ಮಕ್ಕಳು ಅವರನ್ನು ತುಂಬಾ ಪ್ರೀತಿಸುತ್ತಿದ್ದೆವು. ಪೈಪೋಟಿಯ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳಲು, ಅವರ ಬೇಕು ಬೇಡಗಳನ್ನು ಪೂರೈಸಲು ಸಿದ್ಧರಾಗಿರುತ್ತಿದ್ದೆವು. ನನ್ನಜ್ಜನ ಮೆಚ್ಚಿನ ಹವ್ಯಾಸವೆಂದರೆ ಬೀಡಿ ಸೇದುವುದು. ಸಾಯುವ ಹಿಂದಿನ ದಿನವೂ ಅವರು ಬೀಡಿಯನ್ನು ಸೇದಿದ್ದರು! ಕೆಲವರು ಬೀಡಿ ಸೇದುವುದನ್ನು ಬಿಡಬೇಕೆಂದರೂ ನನ್ನಜ್ಜ ಬಿಟ್ಟಿರಲಿಲ್ಲ. ತುಂಬುಜೀವನವನ್ನು ತುಂಬಾ ಚಟುವಟಿಕೆಯಿಂದ ಕಳೆದಿದ್ದ ನನ್ನಜ್ಜನಿಗೆ ತೊಂಬತ್ತು ವರ್ಷಗಳಿಗೂ ಜಾಸ್ತಿಯಾಗಿತ್ತು. ಆದ್ದರಿಂದ ಈ ವಯಸ್ಸಿನಲ್ಲಿ ಅವರಿಗೆ ಇಷ್ಟವಾಗಿದ್ದ ಹವ್ಯಾಸವನ್ನು ನಿಲ್ಲಿಸುವುದು ಬೇಡ ಎಂದು ನಮ್ಮ ತಂದೆಯೂ ಅವರಿಗೆ ಬೀಡಿ ಪೂರೈಸುತ್ತಿದ್ದರು. ಆಗ ನಮ್ಮ ಮನೆಯಲ್ಲಿ ಕುಕ್ಕೆಗಟ್ಟಲೆ ಬೀಡಿ ತಂದು ಕೆಲಸಕ್ಕೆ ಬರುವವರಿಗೆಲ್ಲಾ ಕೊಡಲು ಇಟ್ಟಿರುತ್ತಿದ್ದರು. ಹಾಸಿಗೆಯಲ್ಲಿದ್ದ ನಮ್ಮಜ್ಜ ದಿನಕ್ಕೆ ಮೂರ‍್ನಾಲ್ಕು ಬಾರಿಯಾದರೂ ಬೀಡಿ ಬೇಕೆಂದು ಕೇಳಿ ಸೇದಿ ಸಂತೋಷ ಪಡುತ್ತಿದ್ದರು.
ಕೊನೆಯ ದಿನಗಳಲ್ಲಿ ಅವರು ತುಂಬಾ ನಿಶ್ಯಕ್ತರಾಗಿದ್ದರು. ನಾವು ಬೀಡಿಗೆ ಬೆಂಕಿ ಅಂಟಿಸಿ ಕೊಟ್ಟರೆ ಅದನ್ನು ಅವರು ಸೇದುವಷ್ಟರಲ್ಲಿ ಬೆಂಕಿ ಆರಿಹೋಗುತ್ತಿತ್ತು. ಆಗ ಬೆಂಕಿಯನ್ನು ಹಚ್ಚಿಸಿಕೊಟ್ಟಿಲ್ಲ ಎಂದು ನಮ್ಮನ್ನು ಬಯ್ಯುತ್ತಿದ್ದರು. ಅದಕ್ಕಾಗಿ ನಾನು ಕಂಡುಕೊಂಡಿದ್ದ ಮಾರ್ಗವೆಂದರೆ, ಅವರ ಬಾಯಿಗೆ ಬೀಡಿ ಇಡುವ ಮೊದಲು ನಾನು ಒಂದು ದಮ್ಮು ಚೆನ್ನಾಗಿ ಎಳೆದು, ನಂತರ ಇಡುತ್ತಿದ್ದೆ. ಆಗ ಇನ್ನು ಬೆಂಕಿ ಪ್ರಖರವಾಗಿರುತ್ತಿದ್ದುದರಿಂದ ಸ್ವಲ್ಪ ಎಳೆದರೂ ಸ್ವಲ್ಪವಾದರೂ ಹೊಗೆ ಬಾಯೊಳಗೆ ಹೋಗುತ್ತಿತ್ತು. ಅದನ್ನು ಬಾಯಿ ಮೂಗೊಳಗೆ ಅವರು ಹೊರಗೆ ಬಿಡುತ್ತಿದ್ದರು. ಆಗೆಲ್ಲಾ ಅವರ ಮುಖ ತೃಪ್ತಿಯಿಂದ ಕೂಡಿರುತ್ತಿತ್ತು!
ಸಿಗರೇಟು ಸೇದಿದ ನನ್ನ ಮೊದಲ ಅನುಭವ ಮಾತ್ರ ನನ್ನಲ್ಲಿ ಅಪರಾಧೀ ಭಾವನೆಯನ್ನು ಮೂಡಿಸಿತ್ತೋ ಅಥವಾ ಆಗ ಉಂಟಾದ ಕೆಮ್ಮು, ಅದರಿಂದ ನಾನು ಪಟ್ಟ ಕಷ್ಟ ಇವುಗಳಿಂದಾಗಿಯೋ ನಾನು ಮತ್ತೆಂದೂ ಸಿಗರೇಟು ಸೇದುವ ಗೋಜಿಗೆ ಹೋಗಲಿಲ್ಲ. ಈಗಲೂ, ಕೆಎಸ್ಸಾರ್ಟಿಸಿಯಲ್ಲಿ ಡ್ರೈವರ್ ಆಗಿರುವ ಬಿ.ಬಿ.ಮಂಜುನಾಥ ಚನ್ನರಾಯಪಟ್ಟಣದ ಬಸ್‌ಸ್ಟ್ಯಾಂಡ್‌ನಲ್ಲಿ ಯಾವಾಗಲಾದರೂ ಸಿಕ್ಕರೆ, ಬೈಟು ಟೀ ಹೇಳಿ, ಆತ ಒಂದು ಸಿಗರೇಟು ಸೇದುತ್ತಾನೆ. ಆಗ ಮೊದಲು ಸಿಗರೇಟು ಸೇದಿದ ದಿನವನ್ನು ಮೆಲುಕು ಹಾಕುತ್ತಾ ಎಂಜಾಯ್ ಮಾಡುತ್ತೇವೆ!
ಚಿತ್ರಕೃಪೆ:ಅಂತರಜಾಲ

11 comments:

Ittigecement said...

ಹ್ಹಾ...ಹ್ಹಾ...!!

ಮಸ್ತ್ ಆಗಿದೆ....
ನನಗೂ ನನ್ನ ಹಳೆಯ ನೆನಪುಗಳನ್ನು ನೆನಪು ಮಾಡಿದ್ದೀರಿ..
ನನ್ನ ಮೊದಲು ಬೀಡಿ ಸೇದಿದ ಅನುಭವ ಬರೆಯುವ ಹಂಬಲ ಇದೆ...
ಮುಂದೊಮ್ಮೆ ಬರೆಯುವೆ...

ಅಜ್ಜನಿಗೆ ಬೀಡಿ ಸೇದಿಸಿ ಕೊಡುವಾಗ ನಿವೂ ಸೇದಿದ್ದು...
ನಿಮ್ಮ ಗೆಳೆಯರ ಗುಂಪು ....
ಅಸೂಯೆ ಹುಟ್ಟಿಸುವಂತಿದೆ ನಿಮ್ಮ ಬಾಲ್ಯ....

ಜಲನಯನ said...

ಡಾ. ಸತ್ಯ ನಿಮ್ಮ ಹೈಸ್ಕೂಲಿನ ದಿನಗಳು ಚನ್ನಾಗಿ ಮೂಡಿ ಬರ್ತಾ ಇವೆ. ನಿಮ್ಮಂತೆಯೇ ಹಲವರಿಗೆ ಈ ಅನುಭವ ಇರಬೇಕು. ನಮಗೂ ಅಜ್ಜಂದಿರೇ ಈ ಹವ್ಯಾಸದ ಬಗ್ಗೆ ಇಂಟ್ರಡ್ಯೂಸರ್ಸ್ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು. ಅವರ ಹೊಗೆ ಬಿಡುವ ಗತ್ತು ನಮ್ಮಲ್ಲಿ ಹಲವರಿಗೆ ಹೀರೋಯಿಕ್ ಆಗಿ ಕಂಡಿದ್ದರೂ ಅಚ್ಚರಿಯೇನಲ್ಲ. ನಮಗೆ ಹೆಚ್ಚೆಂದರೆ ಸಾಸಿವೆ ಕಡ್ಡಿ (ಒಣ ಕಡ್ಡಿ ಪೊಳ್ಳಾಗಿದ್ದು ಹತ್ತಿಸಿ ದಮ್ಮು ಎಳೆದರೆ ಹೊಗೆ ಬಿಡುವಷ್ಟು ಹೊಗೆಯನ್ನು ಎಳೆದುಕೊಳ್ಳಬಹುದು) ಯನ್ನು ಬೀಡಿಯಂತೆ ಸೇದಿದ್ದು ಉಂಟು. ಕೆಮ್ಮುತ್ತಾ ಎಲ್ಲರ ನಿದ್ರೆ ಕೆಡಸಿದಾಗ ನಮ್ಮ ದೊಡ್ಡಪ್ಪ "ಬೀಡೀ ಸೇದ್ಬ್ಯಾಡ ಅಂದ್ರೂ ಕಟ್-ಗಟ್ಲೆ ಎಳೀತೀಯಾ ದಮ್ಮು..ಇಲ್ಲಿ ಮಲಗೋರಿಗೆ..ನಿದ್ದೆ ಬರೋಲ್ಲ .." ಅಂತ ಸಿಡಿಮಿಡಿ ಆಗ್ತಿದ್ದುದು ನಮ್ಮನ್ನು ಆ ಹವ್ಯಾಸದಿಂದ ದೂರ ಇಡುವಲ್ಲಿ ಸಹಾಯಕವಾಯ್ತು.
ಬರಹ-ಲೇಖನದ ಶೈಲಿ ಚನ್ನಾಗಿದೆ, ಷುಭವಾಗಲಿ ನಿಮ್ಮೆಲ್ಲ ಪ್ರಯತ್ನಕ್ಕೆ.

shivu.k said...

ಸತ್ಯನಾರಯಣ ಸರ್,

ನಿಮ್ಮ ಸಿಗರೇಟು ಬೀಡಿ ನೆನಪು ಭಲೇ ಮಜವಾಗಿದೆ. ಹುಡುಗರು ಬಾಲ್ಯದಲ್ಲಿ ಏನೇ ತಪ್ಪುಗಳನ್ನು ಮಾಡಿದರೂ ಹಿರಿಯರು ಸಹಿಸುತ್ತಾರೆ ಸಿಗರೇಟು ಸೇದುವುದನ್ನು ಬಿಟ್ಟು.

ನಾನು ಬಾಲ್ಯದಲ್ಲೊಮ್ಮೆ ಸಿಗರೇಟು ಸೇದಿದ ನೆನಪು ಬರೆಯಬೇಕೆನ್ನಿಸುತ್ತದೆ. ಆಗಿನ ಮೊದಲ ಆನುಭವ, ಸೇದಿಸುವ ಗೆಳೆಯರ ಒತ್ತಾಯ ನಂತರದ ಪರಿಣಾಮ ಇತ್ಯಾದಿಗಳ ನೆನಪಾಗುತ್ತಿದೆ....
ನೀವು ದೈರ್ಯಮಾಡಿ ಬರೆದಿರುವುದು ಇತರರಿಗೂ ಸ್ಫ್ರೂರ್ತಿಯುಂಟುಮಾಡಿದೆ...

ಧನ್ಯವಾದಗಳು.

umesh desai said...

ಸರ ನಿಮ್ಮ ಅನಭವ ಮಜಾ ಆಗಿತ್ತು ಯಾಕೋ ಎಲ್ಲ ಬ್ಲಾಗಿಗರು ಹಳೆ ಸಂಗತಿಗಳ ಬಗ್ಗೆ ಬರೆಯುತ್ತಾರೆ ನಾನು ಸಹ ಏನು ಕಾರಣ ಇರಬಹುದು....

ಸವಿಗನಸು said...

ಮಜಾ ಇತ್ತು ನಿಮ್ಮ ಬೀಡಿ ಸಿಗರೇಟು ಕಥೆ ಓದಿ....ನಮ್ಮದೂ ಹೀಗೆ ಗೆಳೆಯರ ಗುಂಪಿನಲ್ಲೆ ಏಂಟನೆ ಕ್ಲಾಸಿನಲ್ಲಿ ಸಿಗರೇಟ್ ಸೇದಿದ ನೆನಪು ಮೆಲುಕು ಹಾಕಿಸಿದ್ದೀರಾ....
ನಾವು ಹೀಗೆ ಕೆಮ್ಮಿದ್ದು ಉಂಟು ಮೊದಮೊದಲು,,,,
ಚೆನ್ನಾಗಿದೆ ನಿಮ್ಮ ಬಾಲ್ಯ....

ಗೌತಮ್ ಹೆಗಡೆ said...

chennagide sir barahada prasanga:)

ರೂpaश्री said...

ಮಜವಾಗಿತ್ತು ಸರ್!

PARAANJAPE K.N. said...

ಹಳೆಯ ನೆನಪು ಮೆಲುಕು ಹಾಕುವುದರಲ್ಲಿದೆ ಒ೦ದು ರೀತಿಯಲ್ಲಿ ಆನ೦ದದ ಅನುಭೂತಿ

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಮೊದಲ ಸಿಗರೇಟಿನ ಅನುಭವ ಪ್ರತಿಯೊಬ್ಬರಿಗೂ ಒಂದೊಂದು ವಿಚಿತ್ರ ಭಾವವನ್ನು ಕೊಟ್ಟಿರುತ್ತಲ್ವಾ? ಎಲ್ಲರದ್ದೂ ಒಂದೆಡೆ ಕ್ರೂಡೀಕರಿಸಿದರೆ ಹೇಗೆ? ಸಕತ್ ಮಜ ಬರುತ್ತೆ!

AntharangadaMaathugalu said...

ಸಾರ್....

ಬರಹದ ಶೈಲಿ ಸುಲಲಿತವಾಗಿ, ಓದಿಸಿಕೊಂಡು, ಖುಶಿ ಕೊಡ್ತು.

ಶ್ಯಾಮಲ

Jayalaxmi said...

ನಾವು ಹುಡುಗಿಯರೇ ವಾಸಿ! :) ಈ ಬೀಡಿ ಸಿಗರೇಟುಗಳ ರಗಳೆಗಳಿಲ್ಲದೆ ಬಾಲ್ಯ ಕಳೆಯುತ್ತೇವೆ. ಆದರೆ... ಈ ಥರದ ಅನುಭವಗಳಲ್ಲೂ ಎಂಥದೋ ಮಜ ಇರಬಹುದೇನೋ ಅಲ್ಲ?! :)