Friday, August 07, 2009

ಇಂದು ನಾನು ಮಣ್ಣಿನ ದಾಸನಾದೆ! - ಶ್ರೀ ಮಧುಸೂದನ ಪೆಜತ್ತಾಯ

ನಾನು ಗೊಬ್ಬರಮಿತ್ರನಾದ ಕತೆಯನ್ನು ಮುಂದೊಮ್ಮೆ ಹೇಳುತ್ತೇನೆ!(ref) ಎಂದಿದ್ದೆನಲ್ಲ. ಈಗ ಹೇಳುತ್ತೇನೆ ಕೇಳಿ.
ನಾನು ಕಾಲೇಜು ಮುಗಿಸಿ ಭತ್ತದ ವ್ಯವಸಾಯಕ್ಕೆ ಇಳಿದ ಮೊದಲ ದಿನ ನಮ್ಮ ವ್ಯವಸಾಯ ಕ್ಷೇತ್ರದ ಹಟ್ಟಿಯ ಗೊಬ್ಬರವನ್ನು ತಲೆಯ ಮೇಲೆ ಹೊತ್ತು ನನ್ನ ಅಕ್ಕನ ಗದ್ದೆಗೆ ಹಾಕಿದೆ. ೧೯೬೭ ಜೂನ್ ಕೊನೆಯ ವಾರ ಇರಬೇಕು!
ಆ ದಿನ ಭಾನುವಾರ! ಕೆಲಸದವರಾರೂ ಬಂದಿರಲಿಲ್ಲ.
ನಾನು ನಿರ್ಮಿಸಿದ ನನ್ನ ಅಕ್ಕನ ಹೊಸಾ ‘ಫಾರ್ಮ್’ ಕಾಡಿನ ಬದಿಯ ನಿರ್ಜನ ಜಾಗದಲ್ಲಿ ಇತ್ತು. ನನ್ನ ಅಕ್ಕನ ಗದ್ದೆಯ ಆಚೆಯ ದಡದಲ್ಲಿ ತುಂಬಿದ ಸುವರ್ಣಾ ನದಿ ಹರಿಯುತ್ತಾ ಇತ್ತು. ಗದ್ದೆಯ ಈ ಕಡೆಗೆ ನನ್ನ ಒಂಟಿ ಕೋಣೆಯ ಅರಮನೆ! ಅದರ ಪಕ್ಕದಲ್ಲೇ ನೆಲ ಹಾಸಿಗೆ ಹಸೀ ಸೊಪ್ಪು ಹಾಕುವ, ಮಧ್ಯದಲ್ಲಿ ಬೈಪಣೆ (ಗೋದಿಲು) ಇದ್ದ ವಿಶಾಲವಾದ ಹಟ್ಟಿ ಇತ್ತು.
ಬೆಳಗಾಗಲೇ ನಮ್ಮ ದನಗಳನ್ನು ನನ್ನ ’ಮ್ಯಾನ್ ಫ್ರೈಡೇ’ ಅರ್ಥಾತ್ ಚೀಂಪ ನಾಯ್ಕ ಮೇಯಿಸಲು ಒಯ್ದಿದ್ದ.
ಅಂದು ಕಾಡಿನ ಪಕ್ಕದ ನಮ್ಮ ಸಸ್ಯ ಕ್ಷೇತ್ರದಲ್ಲಿ ನಾನೊಬ್ಬನೇ! ಏಕಾಂಗಿ.
ನಮ್ಮ ಹಟ್ಟಿಯ ಎಲ್ಲಾ ಗೊಬ್ಬರವನ್ನು ಒಬ್ಬನೇ ಹೊತ್ತು ಗದ್ದೆಗೆ ಹಾಕುವ ’ಛಾಲೆಂಜ್’ ನನ್ನ ಮನದಲ್ಲಿ ಹುಟ್ಟಿತು.
ಅದನ್ನು ಸ್ವೀಕರಿಸಿಯೇ ಬಿಟ್ಟೆ!
ಹಿಂದಿನ ದಿನ ಮಾಡಿಟ್ಟ ಎಂಟು ಚಪಾತಿಗಳನ್ನು ಅಕ್ಕ ಡಾ. ಶಶಿಕಲಾ ಬಾಟಲಿಗೆ ಹಾಕಿ ಕೊಟ್ಟಿದ್ದ ಅವಳ ಮನೆಯ ಉಪ್ಪಿನಕಾಯಿ ಜತೆಗೆ ತಿಂದೆ. ಒಂದು ಮಗ್ ಬಿಸಿ ಟೀ ಮಾಡಿಕೊಂಡು ಕುಡಿದೆ.

ಬೇಸಿಗೆಯ ಧಗೆಯಲ್ಲಿ ಭದ್ರಾನದಿಯ ಮೇಲೆ ಮೋಡ!

ಪಾದರಕ್ಷೆ ಮತ್ತು ಶರಟು ಬಿಚ್ಚಿಟ್ಟು ಗೊಬ್ಬರದ ಇಸ್ಮುಳ್ಳು (ಕೊಕ್ಕೆ) ಮತ್ತು ದೊಡ್ಡ ಕಣ್ಣಿನ ಬೆತ್ತದ ಬುಟ್ಟಿ ಕೈಗೆತ್ತಿಕೊಂಡು ಸೆಗಣಿ ವಾಸನೆ ಹೊಡೆಯುತ್ತಾ ಇದ್ದ ಸೊಪ್ಪಿನ ಹಟ್ಟಿಯ ಗೊಬ್ಬರ ಗೋರಲು ಶುರುಮಾಡಿದೆ.
"ಇಂದಿನಿಂದ ಈ ಹಟ್ಟಿ ಗೊಬ್ಬರ ನನ್ನ ಮಿತ್ರ! ಗೊಬ್ಬರ ಇಲ್ಲದೆ ಸಾಗುವಳಿ ಇಲ್ಲ! ಈ ದಿನ ಈ ಹಟ್ಟಿಯ ಗೊಬ್ಬರವನ್ನು ಏಕಾಂಗಿಯಾಗಿ ಗದ್ದೆಗೆ ಸಾಗಿಸಿ, ಹಳ್ಳಿಗರ ಕೈಯ್ಯಲ್ಲಿ ‘ಸೈ’ ಎನ್ನಿಸಿಕೊಳ್ಳುವೆ! " ಅಂತ ನನ್ನ ಕೃಷಿ ಜೀವನದ ’ಓ ನಾಮ’ ಹಾಡಿದೆ.
ಕಳಿತ ಗೊಬ್ಬರದಿಂದ ಇಳಿಯುತ್ತಾ ಇದ್ದ (ಅಂದರೆ ಬಹು ರಸವತ್ತಾಗಿ ಕೊಳೆತಿದ್ದ) ಆ ಗಂಜಳದ ವಾಸನೆಯ ನೀರು ನನ್ನ ಕಣ್ಣುಗಳಿಗೆ ನುಗ್ಗಿದ್ದರಿಂದ ನನ್ನ ಕಣ್ಣುಗಳು ಉರಿಯುತ್ತಿದ್ದುವು. ಸ್ವಲ್ಪ ಕಣ್ಣೀರು ಸುರಿಸಿದ ಮೇಲೆ ಕಣ್ಣುಗಳು ಅದಕ್ಕೆ ಒಗ್ಗಿಕೊಂಡುವು. ದೊಡ್ಡ ಬಾಕಿಮಾರು ಗದ್ದೆಯ ಹರವಿನಲ್ಲಿ ಹಠ ಹಿಡಿದು ಇನ್ನೂರು ಚಿಲ್ಲರೆ ಬುಟ್ಟಿ ಗೊಬ್ಬರವನ್ನು ಎಂಟು ಅಡಿಗೊಂದರಂತೆ ಗುಪ್ಪೆ ಹಾಕಲು ಶುರು ಮಾಡಿದೆ.
ತಲೆಯ ಮೇಲೆ ಅಡಿಕೆಯ ಹಾಳೆಯ ಮುಟ್ಟಾಳೆ ಇತ್ತು. ಉಳಿದಂತೆ ಧರಿಸಿದ್ದು ಖಾಕಿಯ ಬಣ್ಣದ ಶಾರ್ಟ್ಸ್ ಮಾತ್ರ.
ಆಷಾಢ ಮಾಸದ ಮಳೆ ಮಧ್ಯೆ ಮಧ್ಯೆ ಬಿಡುವು ಕೊಟ್ಟು ಬರುತ್ತಾ ಇತ್ತು.
ಮೈ ಮೇಲಿನ ಗೊಬ್ಬರವನ್ನು ಮತ್ತು ಸುವಾಸನೆಯ ಆ ನೀರನ್ನು ಆ ಮಳೆ ಸ್ವಲ್ಪಮಟ್ಟಿಗೆ ಆಗಾಗ ತೊಳೆದು ಸಹಾಯ ಮಾಡುತ್ತಾ ಇತ್ತು! ಜತೆಗೆ, ನನ್ನ ಮೈಯಿಂದ ಬೆವರು ಧಾರಾಕಾರವಾಗಿ ಇಳಿಯುತ್ತಲೂ ಇತ್ತು.
ಕೆಲವೇ ನಿಮಿಷಗಳಲ್ಲಿ ನನ್ನ ಮೂಗು ಗೊಬ್ಬರದ ವಾಸನೆಗೆ ಒಗ್ಗಿ ಬಿಟ್ಟಿತು!
ಕೊನೆಗೆ ಆ ವಾಸನೆ ನನಗೆ ಗೊತ್ತಾಗಲೇ ಇಲ್ಲ!
ಗೊಬ್ಬರದ ನೀರು ನನ್ನ ಬಾಯಿಗೆ ಹರಿದು ಬಂದಾಗ ಉಗುಳನ್ನು ’ಥೂ!’ ಎಂದು ಉಗಿಯುತ್ತಾ ಇದ್ದೆ, ಅಷ್ಟೆ!
ಬರೇ ಕಾಲಿನ ನಡಿಗೆ ಆದ್ದರಿಂದ ನನ್ನ ಕಾಲಿನ ಚರ್ಮ ಕೊನೆಕೊನೆಗೆ ಉರಿಹತ್ತತೊಡಗಿತು. ‘ಸದಾ ಪಾದರಕ್ಷೆ ಧರಿಸಿ ನಾಜೂಕುಗೊಂಡ ನನ್ನ ಕಾಲುಗಳಿಗೆ
ನೋವನ್ನು ಔಡುಗಚ್ಚಿ ಸಹಿಸಿಕೊಂಡೆ.

ಸುಳಿಮನೆ ತೊಟ್ಟಿಯಲ್ಲಿ ಮಳೆ (16-05-2009)

ಅಂತೂ, ಸೊಪ್ಪಿನ ಹಟ್ಟಿಯ ಗೊಬ್ಬರ ಖಾಲಿಮಾಡಿದ್ದಾಯಿತು.
ಹಠದಿಂದ ಇನ್ನೂರು ಚಿಲ್ಲರೆ ದೊಡ್ಡ ಬುಟ್ಟಿ ಹಟ್ಟಿ ಗೊಬ್ಬರವನ್ನು ಏಕಾಂಗಿಯಾಗಿ ಆ ದಿನ ಹೊತ್ತು ಗದ್ದೆಗೆ ಹಾಕಿಯೇ ಬಿಟ್ಟಿದ್ದೆ!
"ಗದ್ದೆ ಸಾಗುವಳಿಯನ್ನು ಶುರುಮಾಡಿ ಸೆಗಣಿ ಗೊಬ್ಬರಕ್ಲ್ಕೆ ಅಂಜಿದೊಡೆ ಎಂತಯ್ಯಾ?" - ಅಂತ ಒಂದು ಅಣಕು ಪದ್ಯ ರಚಿಸಿ ಗಟ್ಟಿಯಾಗಿ ಹಾಡಿದೆ.
ಚೀಂಪ ನನ್ನ ರಾಗವನ್ನು ಅಪ್ಪಿ ತಪ್ಪಿ ಕೇಳಿದ್ದರೆ ಅಂದೇ ರಾಜೀನಾಮೆ ಕೊಟ್ಟು ಓಡಿಯೇ ಹೋಗುತ್ತಿದ್ದ!
ಕೆಲಸ ಮುಗಿದ ಕೂಡಲೇ ನದಿಗೆ ಹಾರಿ ಮಿಂದೆ! ಮೈ ಮೇಲಿನ ಖಾಕಿ ಚಡ್ಡಿಗೂ ಸರಾಗವಾಗಿ ಸೋಪ್ ಹಾಕಿ, ವಾಸನೆ ಹೋಗುವ ತನಕ ನೊರೆ ಎಬ್ಬಿಸಿದೆ! ಅದುವರೆಗೆ ನನಗೆ ಬಟ್ಟೆ ಒಗೆದು ಗೊತ್ತಿರಲಿಲ್ಲ! ಆ ದಿನಗಳಲ್ಲಿ ಬಟ್ಟೆ ಧರಿಸಿ ನೀರಿಗೆ ಇಳಿದು ಅವನ್ನು ಕ್ಲೀನ್ ಆಗುವತನಕ ಲೈಫ್ ಬಾಯ್ ಸೋಪ್ ಹಾಕಿ ತೊಳೆಯುತ್ತಿದ್ದೆ! ಇಂದೂ ಕೈಯ್ಯಲ್ಲಿ ಬಟ್ಟೆ ಒಗೆಯ ಬೇಕಾದಾಗ ಹೀಗೆಯೇ ಮಾಡುತ್ತೇನೆ. ಇತ್ತೀಚೆಗೆ ನನ್ನ ಶ್ರೀಮತಿ ಸರೋಜಮ್ಮನ ’ಬಾಷ್’ ವಾಶಿಂಗ್ ಮಷೀನ್ ಬಳಸಲು ಕಲಿತಿದ್ದೇನೆ!
ಒಮ್ಮೆಗೇ ಹಸಿವು ಕಾಡಿತು. ಅಡುಗೆ ಮಾಡಲು ಹಸಿವು ಬಿಡಲಿಲ್ಲ!
ಅವಲಕ್ಕಿಯ ದೊಡ್ದ ಅಲ್ಯೂಮಿನಿಯಂ ಡಬ್ಬಕ್ಕೇ ಮನೆಯಲ್ಲಿದ್ದ ಎಲ್ಲಾ ಮೊಸರು ಸುರಿದು ಉಪ್ಪು ಹಾಕಿ ಕಬಳಿಸಿಬಿಟ್ಟೆ.! ಹಸಿವಿನ ರಾಕ್ಷಸ ತಣ್ಣಗಾದ!
ಕೊನೆಗೆ,
"ಇಂದು ನಾನು ಮಣ್ಣಿನ ದಾಸನಾದೆ!" - ಅಂತ ಸ್ವಲ್ಪ ಹೆಮ್ಮೆ ಅನ್ನಿಸಿತು.
ಆ ದಿನದಿಂದ ಹಟ್ಟಿಯ ಗೊಬ್ಬರ ಎಂದಿಗೂ ನನಗೆ "ಅಹಸ್ಯ ಅಥವಾ ವಾಸನೆ" ಎಂದು ಅನ್ನಿಸುತ್ತಲೇ ಇಲ್ಲ!
ಇದು ವೃತ್ತಿಪರ ರೈತನಾದ ನನ್ನ "ಲಿವಿಂಗ್ ಕಂಡೀಶನ್!" - ಎಂದು ಒಪ್ಪಿಕೊಂಡು ಬಾಳುತ್ತಾ ಇದ್ದೇನೆ.



ಈಗ ಸೆಗಣಿಯ ಬಗ್ಗೆ ಇನ್ನೊಂದು ಪ್ರಹಸನ!
ಶಿವಮೊಗ್ಗದಲ್ಲಿ ನಾವು ವಾಸ ಇರುವಾಗ ಅಂಗಳಯ್ಯನ ಕೆರೆ ಏರಿಯಾದಲ್ಲಿ ಒಂದು ಮನೆ ಒಕ್ಕಲಿನ ಸಮಾರಂಭಕ್ಕೆ ಹೋಗಲೇ ಬೇಕಾಯಿತು. ಬೆಳಗಿನ ಜಾವ ನಾಲ್ಕುಗಂಟೆಗೆ ಮನೆ ಒಕ್ಕಲು! ಪುರೋಹಿತರು "ಗೋಮಯ ತನ್ನಿ" ಎಂದರು! ಆ ಮನೆಯ ಒಬ್ಬ ವೃದ್ಧೆ ಕತ್ತಲೆಯಲ್ಲೇ ತಡಕಾಡಿ ಬೀದಿಬದಿಯಲ್ಲಿದ್ದ ಗೋಮಯ ಹುಡುಕಿ ತಂದರು. ಪುರೋಹಿತರು ಅದನ್ನು ನೀರು ಹಾಕಿ ಕಲಸುತ್ತಾ ಇದ್ದಾಗ ಮುಖ ಸಿಂಡರಿಸಿ “ಥತ್! ಗೋಮಯ ಕೇಳಿದರೆ ಕತ್ತೆಯ ಲದ್ದಿ ಯಾಕೆ ತಂದಿರಿ?" ಎಂದು ಆ ಹಿರಿಯರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಾ ಬೆಳಗಿನ ತನಕ ಸ್ನಾನ ಮಾಡಿದರು!
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಎರಡು ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ
(ಚಿತ್ರಗಳು: ಲೇಖಕರವು)

6 comments:

sunaath said...

ನಿಮ್ಮ ಪರಿಶ್ರಮಕ್ಕೆ ತಕ್ಕ ಫಲವೇ ಸಿಗುತ್ತಲಿದೆ. ಲೇಖನದ ಜೊತೆಗೆ ನೀವು ನೀಡಿದ ಫೋಟೋಗಳು ಅದ್ಭುತವಾಗಿವೆ.

ಸಾಗರದಾಚೆಯ ಇಂಚರ said...

ನಿಮ್ಮ ಪರಿಶ್ರಮ ಮೆಚ್ಚುವನ್ತದ್ದೆ, ನಮ್ಮ ಕೆಲಸ ನಾವೇ ಮಾಡಿಕೊಂಡರೆ ಸಿಗುವ ಸುಖ ಇನ್ಯಾವುದರಲ್ಲೂ ಇಲ್ಲ ಅಲ್ಲವೇ?

AntharangadaMaathugalu said...

ಸಾರ್...
ಚಿತ್ರಗಳು ಸಿಕ್ಕಾಪಟ್ಟೆ ಚೆನ್ನಾಗಿದೆ. ನಿಮ್ಮ ಬರಹ ಈಗಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಸಾರ್.. ಮಣ್ಣಿನ ದಾಸನಾಗುವ ನಿರ್ಧಾರ ತುಂಬಾ ಕಠಿಣ ಹಾಗೂ ಅತ್ಯಂತ ಪವಿತ್ರಕಾರ್ಯ ಎಂದು ನನ್ನ ಅಭಿಪ್ರಾಯ.

ಶ್ಯಾಮಲ

shivu.k said...

ಸತ್ಯನಾರಾಯಣ ಸರ್,

ನೀವು ರೈತನಾಗಿ ಇಷ್ಟೋಂದು ಕೆಲಸ ಮಾಡಿದ್ದೀರೆಂದು ತಿಳಿದು ತುಂಬಾ ಖುಷಿಯಾಯಿತು. ಓದುತ್ತಾ ನಿಮ್ಮ ಕಠಿಣ ಶ್ರಮ ಎಂಥದ್ದು ಅನ್ನುವುದರ ಚಿತ್ರಣಗಳು ಕಣ್ಣ ಮುಂದೆ ಬರುವಷ್ಟು ಚೆನ್ನಾಗಿ ಬರೆದಿದ್ದೀರಿ....

ಧನ್ಯವಾದಗಳು.

ರೂpaश्री said...

ಸತ್ಯ ಸರ್,
ನೀವು ಇಷ್ಟೆಲ್ಲಾ ಪರಿಶ್ರಮ ಪಟ್ಟಿದ್ದೀರ.. ಎಲ್ಲವನ್ನೂ ಚೆನ್ನಾಗಿ ಬರೆದಿದ್ದೀರಿ.
"ಸುಳಿಮನೆ ತೊಟ್ಟಿಯಲ್ಲಿ ಮಳೆ" ಫೋಟೋ ತುಂಬಾ ಚೆನ್ನಾಗಿದೆ!!!

Ittigecement said...

ನಾನು ಪಿಯೂಸಿಯಲ್ಲಿ ಫೇಲಾಗಿ ಒಂದು ವರ್ಷ ಹೊಲದಲ್ಲಿ ಕೆಲಸ ಮಾಡಿದ ನೆನಪುಗಳು ಮರುಕಳಿಸಿತು....

ಆ ಹಳ್ಳಿಯ ಮುಗ್ಧತೆ...
ಆಪ್ತತೆ ನಿಮ್ಮ ಬರಹಗಳಲ್ಲಿ ನಾನು ಕಾಣುತ್ತೇನೆ...
ಭಾವಲೋಕದಲ್ಲಿ ಮುಳುಗಿಸಿ ಬಿಡುತ್ತೀರಿ....

ಸುಂದರ ಬರಹಕ್ಕಾಗಿ ಅಭಿನಂದನೆಗಳು....