Thursday, October 15, 2009

ಪರಿಸರ ಪ್ರೇಮ ಬೆಳೆಸಿಕೊಳ್ಳಲು ಯಾರ ನಿರ್ಬಂಧವೂ ಇಲ್ಲ

(ಹಿರಿಯರಾದ ಶ್ರೀ ಮಧುಸೂದನ ಪೆಜತ್ತಾಯ ಅವರು, ನನ್ನ ಬ್ಲಾಗಿನ ಇದುವರೆಗಿನ ಏಕೈಕ ಅತಿಥಿ ಬರಹಗಾರ. ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿದ್ದ 'ಕಾಗದದ ದೋಣಿ' ಇವರ ಆತ್ಮಕತೆಯ ಸರಣಿ. ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ ಮನಸ್ಸಿಗೆ ಮುದನೀಡುವಂತದ್ದು. ವೃತ್ತಿಯಿಂದ ಪ್ರಗತಿಪರ ಕಾಫಿ ಬೆಳೆಗಾರರಾದ ಶ್ರೀಯುತರು ಒಳ್ಳೆಯ ಬರಹಗಾರರು, ಮಾತುಗಾರರೂ, ಕೃಷಿ ಪಂಡಿತರೂ ಆಗಿದ್ದಾರೆ. ಈಗ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಒಂದಿಷ್ಟು ಒಳ್ಳೆಯ ಬರವಣಿಗೆಯನ್ನು ಆಗಾಗ ಮಾಡುತ್ತಿರುತ್ತಾರೆ. ಅದನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಂಡು ಸಂತೋಷ ಪಡುತ್ತಾರೆ. ಹಾಗೆ ಬಂದ ಈ ಮೇಲ್ ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಈ ಹಿಂದೆ ನನ್ನ ಬ್ಲಾಗಿನಲ್ಲಿ ಅವರ ಪೂರ್ವಾನುಮತಿಯೊಂದಿಗೆ ಪ್ರಕಟಿಸಿದ್ದೇನೆ.
ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!
ಇಂದು ನಾನು ಮಣ್ಣಿನ ದಾಸನಾದೆ!
ಈಗಲೂ ಮೊನ್ನೆ ಬಂದ ಈ ಮೇಲ್ 'ಬ್ಲಾಗ್ ಆಕ್ಷನ್ ಡೇ'ಗೆ ಪೂರಕವಾದ ವಿಷಯ ಅದರಲ್ಲಿ ಇರುವುದರಿಂದ ನಿಮ್ಮ ಮುಂದಿಡುತ್ತಿದ್ದೇನೆ.)

ಇಂದಿನ ಯುವಜನರಿಗೆ ಪರಿಸರದ ಅರಿವು ಮೂಡಿಸಲು ಶಾಲಾಕಾಲೇಜುಗಳಲ್ಲಿ ಸ್ವಲ್ಪ ಪ್ರಯತ್ನ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ!
ಇಂದಿನ ಯುವ ಪೀಳಿಗೆಯ ಕೆಲ ಮಂದಿಗೆ ಪ್ರಕೃತಿ, ವನ ಭೋಜನ ಮುಂತಾದುವೆಲ್ಲಾ ಒಂದು ಮನೋರಂಜನೆ. ಕೆಲವರಿಗೆ ಪಿಕ್ನಿಕ್ ಮಾಡಿ, ಪೇಪರ್ ಪ್ಲೇಟ್, ನೀರಿನ ಬಾಟಲಿ ಎಸೆದು ಬರುವ ಜಾಗ,
ಹಲವು ಜನರಿಗೆ ಫಾರಂ ಹೌಸ್ ಎಂದರೆ ಮೋಜಿನ ತಾಣ! ಇದು ಹೊಸಾ ಸಂಸ್ಕೃತಿ ಅಂತೆ!
ಹಲವು ಜನ ನನ್ನ ಪರಿಚಯಸ್ಥರು " ನಿಮ್ಮ ತೋಟಕ್ಕೆ ಬರುತ್ತೇವೆ. ಶಿಕಾರಿ ಮಾಡಲು ಬಿಡುತ್ತೀರಾ? ಸ್ವಲ್ಪ ಕುಡಿದು ರಿಲ್ಯಾಕ್ಸ್ ಮಾಡಬಹುದೆ? ನಿಮ್ಮಲ್ಲಿ ಶಿಕಾರಿ ಮಾಂಸದ ಅಡುಗೆ ಮಾಡಿಸಿ ಹಾಕುತ್ತೀರಾ? ಕಾರ್ಡ್ಸ್ ಆಡಬಹುದೇ? ಸಾಯಂಕಾಲ ಕ್ಯಾಂಫ್ ಫೈರ್ ಮಾಡಿ ಅದರ ಸುತ್ತ ನರ್ತಿಸಬಹುದೇ? ನಿಮ್ಮಲ್ಲಿ ಹೈ ವ್ಯಾಟ್ಟೇಜ್ ಮ್ಯೂಸಿಕ್ ಸಿಸ್ಟಂ ಇದೆಯೇ? ಡ್ರಿಂಕ್ಸ್ ನಾವೇ ತರುತ್ತೇವೆ " ಅನ್ನುತ್ತಾರೆ.
ಆಗ ನಾನು " ಕ್ಷಮಿಸಿ. ನಮ್ಮ ಹಳ್ಳಿಯ ಮನೆ ನಮ್ಮ ಕಾರ್ಯ ಕ್ಷೇತ್ರ. ನಾವು ಸಸ್ಯಾಹಾರಿಗಳು. ಶಿಕಾರಿ, ಕಾರ್ಡ್ಸ್ ಮತ್ತು ಡ್ರಿಂಕ್ಸ್ ನಮ್ಮಲ್ಲಿ ನಿಶಿದ್ಧ. ಕುಡಿದು ಕುಣಿಯುವ ಸಂಸ್ಕೃತಿ ನಮ್ಮಲ್ಲಿ ಇಲ್ಲ. ಸೂರ್ಯ ಹುಟ್ಟಿದಾಗ ಏಳುತ್ತೇವೆ. ಕೆಲಸ ಮಾಡುತ್ತೇವೆ. ಸೂರ್ಯ ಮುಳುಗಿದ ಮೇಲೆ ಮನೆಗೆ ಬಂದು ದಿನದ ಪೇಪರ್ ಓದಿ ಬೇಗನೇ ಸಸ್ಯಾಹಾರೀ ಊಟ ಮಾಡಿ ಮಲಗುತ್ತೇವೆ. ಬೆಳಗ್ಗೆ ಬೇಗಲೇ ಏಳುತ್ತೇವೆ. ತೋಟದಲ್ಲಿ ನನ್ನ ಪುಸ್ತಕ ಸಂಗ್ರಹ ಇದೆ. ನನ್ನಲ್ಲಿ ಒಳ್ಳೆಯ ಬೈನಾಕುಲರ್ ಇದೆ. ಪಕ್ಷಿವೀಕ್ಷಣೆ ಮಾಡಿ. ಚಾರಣ ಮಾಡಿ. ಎಲ್ಲಾ ಮರಗಳ ಗಿಡಗಳ ಹಕ್ಕಿಗಳ ಕನ್ನಡ ಮತ್ತು ತುಳು ಹೆಸರುಗಳನ್ನು ಬಲ್ಲ ಆಳು ಒಬ್ಬನನ್ನು ಜತೆಗೆ ಕಳುಹಿಸುವೆ. ಕೆಮೆರಾ ತನ್ನಿ. ಫೋಟೋ ತೆಗೆದುಕೊಳ್ಳಿ. ನದಿಯಲ್ಲಿ ಈಜು ಹೊಡೆಯಲು ಅಥವಾ ಮೀನುಗಾರಿಕೆ ಮಾಡಲು ನಮ್ಮಲ್ಲಿ ಅನುಮತಿ ಕೊಡುವುದಿಲ್ಲ. ಒಳ್ಳೆಯ ಜಮಖಾನ ಒಂದನ್ನು ಕೊಡುತ್ತೇವೆ. ಒಳ್ಳೆಯ ಮರಗಳ ನೆರಳಲ್ಲಿ ವಿಶ್ರಮಿಸಿ. ಅಲೇ ನಿದ್ರೆ ಕೂಡಾ ಮಾಡಬಹುದು. ಊಟ ತಿಂಡಿಯ ಸಮಯಕ್ಕೆ ಸರಿಯಾಗಿ ನಮ್ಮ ಮನೆಯಲ್ಲಿ ಹಾಜರಾಗಿ. ನಮ್ಮ ಸಸ್ಯ ಕ್ಷೇತ್ರ ನಮಗೆ ಒಂದು ಪವಿತ್ರವಾದ ಜಾಗ. ನಮ್ಮ ಮನೆ ಮತ್ತು ಮನಗಳನ್ನು ಒಂದು ಮಂದಿರ ಎಂದು ತಿಳಿದು ನಾವು ಹಳ್ಳಿಯಲ್ಲಿ ಬಾಳುತ್ತೇವೆ. ಪುಷ್ಕಳ ಊಟ, ತಿಂಡಿ, ಕಾಪಿ ಚಹಾ ಕೊಡುತ್ತೇವೆ. ನಮ್ಮ ಜೀವನ ರೀತಿ ಗಮನಿಸಿ. ನಮ್ಮ ಹಾಗೇ ನಮ್ಮ ಜತೆ ಬಾಳಿ. ಯಾವ ಕೆಲಸವನ್ನೂ ಮಾಡದೇ ಆರಾಮವಾಗಿ ನಮ್ಮ ಅತಿಥಿಗಳಾಗಿ ಬೇಕಷ್ಟು ದಿನ ನಮ್ಮಲ್ಲಿ ಇರಿ. ಕಾರ್ಮಿಕರ ಮತ್ತು ನೌಕರರ ಪರಿಚಯ ಮಾಡಿಕೊಳ್ಳಿ ಅವರಲ್ಲಿ ವಿಚಾರ ವಿನಿಮಯ ಮಾಡಿ. ನಮ್ಮ ಕೃಷಿ ಪದ್ಧತಿ ಮತ್ತು ನಮ್ಮ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಅರಿಯಿರಿ. ನಮ್ಮ ಸಾಂಪ್ರದಾಯಿಕ ಕೃಷಿ ಜೀವನ ವಿಧಾನವನ್ನು ನಾವು ಬಿಟ್ಟಿಲ್ಲ. ಕರೆಂಟು ಇದ್ದಾಗ ಟೀವಿ ಅಥವಾ ಫ್ಯಾನ್ ಉಪಯೋಗಿಸಬಹುದು. ನಮ್ಮಲ್ಲಿ ರೇಡಿಯೋ ಇದೆ. ವಿ. ಸಿ. ಡಿ. ಪ್ಲೇಯರ್ ಇನ್ನೂ ಇಟ್ಟಿಲ್ಲ. ಕರೆಂಟು ಹೋದಾಗ ನಾವು ಸೋಲಾರ್ ಲೈಟ್ ಉಪಯೋಗಿಸುತ್ತೇವೆ. ಸೀಮೆ ಎಣ್ಣೆ ದೀಪದ ಕಷ್ಟ ಇಲ್ಲ. ಸ್ನಾನಕ್ಕೆ ಸದಾ ಕಟ್ಟಿಗೆ ಒಲೆಯ ಬಿಸಿನೀರು ಸಿಗುತ್ತೆ. ಹೆಚ್ಚಿನ ಅಡುಗೆ ಕಟ್ಟಿಗೆಯ ಒಲೆಯಲ್ಲೇ ಮಾಡುತ್ತೇವೆ, ನೆಲದಲ್ಲೇ ಕುಳಿತು ಬಾಳೆ ಎಲೆಯಲ್ಲಿ ಉಣ್ಣುತ್ತೇವೆ. ಊಟ ತಿಂಡಿಗಳ ಬಗ್ಗೆ ದಾಕ್ಷಿಣ್ಯ ಬೇಡ. ಸಾಯಂಕಾಲ ಬ್ಯಾಡ್ಮಿಂಟನ್, ಕ್ಯಾರಂ, ಚೆನ್ನೆಮಣೆ, ಚೆಸ್ಸ್, ಪಗಡೇ ಆಟ, ಹಾವು ಏಣಿ ಆಟ ಅಥವಾ ವಾಲಿಬಾಲ್ ಆಡಬಹುದು. ಬೆಳಗ್ಗೆ ಮತ್ತು ಸಂಜೆ ಹೊತ್ತು ಪಕ್ಷಿಗಳ ಕಲರವ ಕೇಳಬಹುದು. ಮನೆಯಲ್ಲಿ ದನ ಕರು ಇವೆ. ನಾಯಿಗಳು ಇವೆ. ಅವುಗಳನ್ನು ನೋಡಿ ಸಂತಸ ಪಡಬಹುದು. ಹೆಚ್ಚಿನಂಶ ನಮ್ಮಲ್ಲಿ ಈಗ ಟೆಲಿಫೋನ್ ಕೆಡುವುದಿಲ್ಲ. ಡಯಲ್ ಅಪ್ ಉಪಯೋಗಿಸಿ ಲ್ಯಾಪ್ ಟಾಪ್ ಬಳಸ ಬಹುದು. ನಿಮಗೆ ಸ್ವಾಗತ!" ಅನ್ನುತ್ತಾ ಇದ್ದೆ.
ನಮ್ಮ ಜತೆ ವಾಸ ಮಾಡಲು ಕಳೆದ ೩೮ ವರುಷಗಳಲ್ಲಿ ಬೆರಳ ಎಣಿಕೆಯ ಮಂದಿ ಮಾತ್ರ ಬಂದರು. ಎರಡು ದಿನಗಳಲ್ಲೇ ವಾಪಸ್ ಹೊರಟರು. ಅವರಿಗೆ ನಮ್ಮಲ್ಲಿ " ಬೋರ್" ಆಗುತ್ತಂತೆ!
ನನಗೆ ನನ್ನ ಕೃಷಿ ಜೀವನದಲ್ಲಿ ಎಂದೂ ಬೋರ್ ಆಗಿಲ್ಲ. ಸಂತೋಷವಾಗೇ ಇದ್ದೆ. ಇಂದು ನಿವೃತ್ತನಾಗಿ ಪೇಟೆಯ ಕಾಂಕ್ರಿಟ್ ಗೂಡಿನಲ್ಲಿ ಕಷ್ಟದಿಂದ ವಾಸಿಸುತ್ತಾ ಇದ್ದೇನೆ. ನನಗೆ ಇಂದು ಡಾಕ್ಯ್ಟರು ಹತ್ತಿರ, ಕಾಫಿಯ ಕಾಡು ದೂರ!
ಕೃಷಿಕ್ಷೇತ್ರದ ನೆನಪುಗಳೊಂದಿಗೆ ಇಂದು ಕೂಡಾ ಸಂತಸವಾಗಿ ಕಾಲ ಕಳೆಯುತ್ತಾ ಇದ್ದೇನೆ.

No comments: