ದೇಸಿ ಛಂದಸ್ಸಿನ ಮುಖ್ಯ ಲಕ್ಷಣದಂತೆ ಷಟ್ಪದಿಯೂ ಅಂಶ ಛಂದಸ್ಸೇ ಆಗಿತ್ತು. ಬ್ರಹ್ಮ, ವಿಷ್ಣು, ರುದ್ರ ಎಂದು ಮೂರು ಬಗೆಯ ಅಂಶಗಳನ್ನು ಒಳಗೊಂಡಿರುವುದೇ ಅಂಶ ಛಂದಸ್ಸು. ಅಂಶ ಷಟ್ಪದಿಯ ಒಂದು ಉದಾಹರಣೆ:
ವಿ ವಿ
ವಿ ವಿ
ವಿ ವಿ ರು
ವಿ ವಿ
ವಿ ವಿ
ವಿ ವಿ ರು
ಅದುಪರ/ಮಾಸ್ಪದ
ಮದುಪುಣ್ಯ/ಸಂಪದ
ಮದುಮಹಾ/ಭ್ಯುದಯವಿ/ಲಾಸಾವಾಸಂ
ಅದುದಿಬ್ಯಂ/ಮದುಸೇಬ್ಯ
ಮದುಸೌಮ್ಯ/ಮದುರಮ್ಯ
ಮದುಸುಖಾ/ಧಾರಸಂ/ಸಾರಸಾರಂ
ಸುಮಾರು ಹನ್ನೆರಡನೇ ಶತಮಾನದಲ್ಲಿ ಉಂಟಾದ ದೇಸಿ ಛಂದಸ್ಸಿನ ಪುರುಜ್ಜೀವನ ಮತ್ತು ನವೀಕರಣದ ಫಲವಾಗಿ ತ್ರಿಪದಿಯಂತೆಯೇ ಷಟ್ಪದಿಯೂ ಮಾತ್ರಗಣಾತ್ಮಕವಾಗಿ ಬದಲಾಯಿತು. ಅಕ್ಷರಬಂದ ಸಂಪೂರ್ಣ ಮಾತ್ರಗಳ ಸಂಖ್ಯೆಯನ್ನೇ ಆದರಿಸುವಂತಾಯಿಯತು. ಲಘುವಿಗೆ ಒಂದಾ ಮಾತ್ರೆ, ಗುರುವಿಗೆ ಎರಡು ಮಾತ್ರೆ ಲೆಕ್ಕ.
ಆದರೆ ಈ ಮಾತ್ರಾಷಟ್ಪದಿಯಲ್ಲಿ ದೊಡ್ಡ ಕ್ರಾಂತಿಯೇ ಆಗಿಹೋಯಿತು. ಪ್ರಮುಖವಾಗಿ ಆರು ವಿಧಗಳು ಬೆಳೆದು ಬಂದವು. ಒಂದೇ ಮಾತ್ರೆಯ ವ್ಯತ್ಯಾಸವಾದರೂ ಅವುಗಳ ಲಯ, ಸೊಗಸು ಅದ್ಭುತವಾದುದ್ದು. ಕೆಳಗೆ ಕೊಟ್ಟಿರುವ ಉದಾಹರಣೆಗಳನ್ನು ಓದಿಕೊಳ್ಳುವಾಗ ಹಾಡಿಕೊಳ್ಳುವಾಗ ಅವುಗಳ ಲಯದ ವ್ಯತ್ಯಾಸ, ಸೊಗಸು ನಿಮಗೇ ಮನದಟ್ಟಾಗುತ್ತದೆ.
ಶರ ಷಟ್ಪದಿ
4 4
4 4
4 4 4 ಗುರು
4 4
4 4
4 4 4 ಗುರು
ಈಶನ/ಕರುಣೆಯ
ನಾಶಿಸು/ವಿನಯದಿ
ದಾಸನ/ಹಾಗೆಯೆ/ನೀಮನ/ವೇ
ಕ್ಲೇಶದ/ವಿಧವಿಧ
ಪಾಶವ/ಹರಿದು ವಿ
ಲಾಸದಿ/ಸತ್ಯವ/ತಿಳಿಮನ/ವೇ
ಕುಸುಮ ಷಟ್ಪದಿ
5 5
5 5
5 5 5 ಗುರು
5 5
5 5
5 5 5 ಗುರು
ಅವರವರ/ದರುಶನಕೆ
ಅವರವರ/ವೇಷದಲಿ
ಅವರವರಿ/ಗೆಲ್ಲ ಗುರು/ನೀನೊಬ್ಬ/ನೆ
ಅವರವರ/ಭಾವಕ್ಕೆ
ಅವರವರ/ಪೂಜೆಗಂ
ಅವರವರಿ/ಗೆಲ್ಲ ಶಿವ/ನೀನೊಬ್ಬ/ನೆ
ಭೋಗ ಷಟ್ಪದಿ
3 3 3 3
3 3 3 3
3 3 3 3 3 3 ಗುರು
3 3 3 3
3 3 3 3
3 3 3 3 3 3 ಗುರು
ಮೆರೆಯು/ತಿದ್ದ/ಭಾಗ್ಯ/ವೆಲ್ಲ
ಹರಿದು/ಹೋಯಿ/ತೆನುತ/ತಿರುಕ
ಮರಳಿ/ನಾಚಿ/ಹೋಗು/ತಿದ್ದ/ಮರುಳ/ನಂತೆಯೇ
ಧರೆಯ/ಭೋಗ/ವನ್ನು/ಮೆಚ್ಚಿ
ಪರವ/ಮರೆತು/ಕೆಡಲು/ಬೇಡ
ಧರೆಯ/ಭೋಗ/ಕನಸಿ/ನಂತೆ/ಕೇಳು/ಮಾನ/ವಾ
ಭಾಮಿನಿ ಷಟ್ಪದಿ
3 4 3 4
3 4 3 4
3 4 3 4 3 4 ಗುರು
3 4 3 4
3 4 3 4
3 4 3 4 3 4 ಗುರು
ಇಳಿದು/ಬಂದಳು/ವರ್ಷೆ/ಯಂದದಿ/
ಒಲಿದು/ಬಂದಳು/ನಲ್ಲೆ/ಯಂದದಿ/
ತೊಳೆಯ/ಬಂದಳು/ಮನದ/ಕಲ್ಮಶ/ಹರಿಯ/ಮೆರೆಸಲು/ತಾ
ನಿಳೆಯ/ರೂಪದಿ/ಸಹನೆ/ಯಿಂದಾ/
ಕಳೆಯ/ಬಂದಳು/ಮೋಹ/ಮತ್ಸರ/
ಗಳನು/ಭಾಮಿನಿ/ನಾರ/ಣಪ್ಪನಿ/ಗೊಲಿದ/ಳಿಂದುಮು/ಖೀ
ಪರಿವರ್ಧಿನಿ ಷಟ್ಪದಿ
4 4 4 4
4 4 4 4
4 4 4 4 4 4 ಗುರು
4 4 4 4
4 4 4 4
4 4 4 4 4 4 ಗುರು
ಸ್ಮರ ರಾ/ಜ್ಯದ ಮೈ/ಸಿರಿ ಶೃಂ/ಗಾರದ
ಶರನಿಧಿ/ರತಿ ನಾ/ಟ್ಯದ ರಂ/ಗ ಸ್ಥಳ
ವಿರಹದ/ನೆಲೆವೀ/ಡೋಪರ/ಕೂರಾ/ಟದ ಕೊಸ/ರಿನ ಗೊ/ತ್ತು
ಸರಸರ/ಸಂತವ/ಣಿಯ ಮನೆ/ಸುಗ್ಗಿಯ
ಪುರವಾ/ಗರ ಭೂ/ಪಾಲಯ/ವಪ್ಪಂ
ತಿರೆಪೇ/ಳಿದನಮ/ರುಕವನು/ದೇಪಮ/ಹೀಪತಿ/ಕನ್ನಡಿ/ಸಿ
ವಾರ್ಧಕ ಷಟ್ಪದಿ
5 5 5 5
5 5 5 5
5 5 5 5 5 5 ಗುರು
5 5 5 5
5 5 5 5
5 5 5 5 5 5 ಗುರು
ಪುರದಪು/ಣ್ಯಂಪುರುಷ/ರೂಪಿಂದೆ/ಪೋಗುತಿದೆ
ಪರಿಜನದ/ಭಾಗ್ಯವಡ/ವಿಗೆನಡೆಯು/ತಿದೆಸಪ್ತ
ಶರಧಿಪರಿ/ವೃತಧರೆಯ/ಸಿರಿಯಸೊಬ/ಗಙತ/ವಾಸಕ್ಕೆ/ಪೋಗುತಿದೆ/ಕೋ
ಎರೆವದೀ/ನಾನಾಥ/ರಾನಂದ/ವಡಗುತಿದೆ
ವರಮುನೀಂ/ದ್ರರಯಾಗ/ರಕ್ಷೆಬಲ/ವಳಿಯುತಿದೆ
ನಿರುತವೆಂ/ದೊಂದಾಗಿ/ಬಂದುಸಂ/ದಿಸಿನಿಂದ/ಮಂದಿನೆಱೆ/ಮೊಱೆಯಿಟ್ಟು/ದು
ಉದ್ಧಂಡ ಷಟ್ಪದಿ
ಕೇವಲ ಈ ಆರು ವಿಧಗಳಿಗೇ ಷಟ್ಪದಿಯ ಬೆಳವಣಿಗೆ ಸೀಮಿತವಾಗಿ ಉಳಿಯಲಿಲ್ಲ. ಬೇರೆ ಇನ್ನೊಂದು ಉದ್ಧಂಡ ಷಟ್ಪದಿ ಎನ್ನುವ ಪ್ರಕಾರವೂ ಬೆಳಕಿಗೆ ಬಂತು. ಅದರಲ್ಲಿಯೇ ಎರಡು-ಮೂರು ಕವಲುಗಳಾದವು. ಆದರೆ ಅದು ಅಷ್ಟೊಂದು ಜನಪ್ರಿಯವಾಗಿ ಬೆಳೆಯಲಿಲ್ಲ. ಒಂದೆರಡು ಉದಾಹರಣೆಗಳನ್ನು ನೋಡಬಹುದು.
4 4 4 4 4
4 4 4 4 4
4 4 4 4 4 4 4 ಗುರು
4 4 4 4 4
4 4 4 4 4
4 4 4 4 4 4 4 ಗುರು
ಬಂದಳು/ಬಂದಳು/ಚಿನ್ನದ/ಚಿಗರೆಯ/ತೆರದಲಿ
ತಂದಳು/ತಂದಳು/ಕಣ್ಮಣಿ/ಸೊಬಗನು/ಸಿರಿಯಲಿ
ಚೆಂದವೊ/ಚೆಂದವೊ/ಈಜಗ/ಎನ್ನುತ/ಕುಣಿಯುತ/ಕುಣಿಸುತ/ಹಾಡಿದ/ಳು
4 4 4 4 4
4 4 4 4 4
4 4 4 4 4 4 4 4
4 4 4 4 4
4 4 4 4 4
4 4 4 4 4 4 4 4
ಪರಿಣಾ/ಮದಕಣಿ/ಶಾಂತಿಯ/ನಿಧಿಭ/ಕ್ತಿಯಸಾ
ಗರುಮೇ/ಕೋನಿ/ಷ್ಟೆಯಹರ/ಗತಿಸಾ/ಮರ್ಥ್ಯದ
ತರುನೀ/ತಿಯಕಡೆ/ಉದಯಾ/ಗಾರಂ/ಪುಣ್ಯದ/ಪಂಜಂ/ಸತ್ಯದ/ಸದನಾ
ಈ ಉದಾಹರಣೆಗಳಲ್ಲಿ ನಿಮಗಿಷ್ಟವಾದುದನ್ನು ಮೇಲಿಂದ ಮೇಲೆ ಹಾಡಿಕೊಳ್ಳಿ. ನೀವೇನಾದರು ಕವಿತೆ ಬರೆಯುವವರಾಗಿದ್ದರೆ, ನಿಮ್ಮಿಂದ ಅದೇ ಲಯದ ಕವಿತೆ ಹುಟ್ಟುತ್ತದೆ. ಪಂಡಿತರಿಂದ ತಿಣುಕಿ ಸೃಷ್ಟಿಯಾದುದಲ್ಲ; ಜನಪದರಿಂದ ಸಹಜವಾಗಿ ಸೃಷ್ಟಿಯಾದ ಛಂದೋಗಂಗೋತ್ರಿ! ಇದೇ ದೇಸಿ ಛಂದಸ್ಸಿನ ವೈಶಿಷ್ಟ್ಯ.
4 comments:
ಸರ್,
ಇದು ನಿಜಕ್ಕೂ ಸಂಗ್ರಹ ಯೋಗ್ಯ ಬರಹ. ಆರುಸಾಲಿನ ಷಟ್ಪದಿಯಲ್ಲಿ ಅಡಗಿರುವ ವೈವಿದ್ಯತೆಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ..
ಧನ್ಯವಾದಗಳು.
ಷಟ್ಪದಿ ಎಷ್ಟೊಂದು ಸುಂದರ ಅಲ್ಲವೇ?
ತುಂಬಾ ಚೆನ್ನಾಗಿ ಹೇಳಿದ್ದಿರಿ
ಷಟ್ಪದಿಗಳ ಪ್ರಕಾರಗಳನ್ನೆಲ್ಲ ಉದಾಹರಣೆಗಳೊಂದಿಗೆ ವಿವರಿಸಿದ್ದೀರಿ. ಓದಿ ತುಂಬಾ ಖುಶಿಯಾಯಿತು. ಧನ್ಯವಾದಗಳು.
ಅಬ್ಬ! ನಮಗೆಲ್ಲ ವ್ಯಾಕರಣ (grammar) ಎಂದರೆ ದೊಡ್ಡ ತಲೆನೋವು ಆಗುತ್ತಿತ್ತು. ವ್ಯಾಕರಣ, ಕಾವ್ಯ, ಕಾವ್ಯರಚನೆ, ಭಾಷಾರಚನೆ, ಭಾಷಾ ಪ್ರಾಕಾರಗಳು, ತುಂಬಾ ವೈವಿಧ್ಯಮಯ. ಅಭ್ಯಸಿಸಲು ತಾಳ್ಮೆ, ಆಸಕ್ತಿ ಬೇಕು.
Post a Comment