“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು ದೊಡ್ಡ ವಿಷಯ? ನಾನೇ ಸ್ವತಃ ಬೆಳಗ್ಗೆ ಮತ್ತು ಸಾಯಂಕಾಲ ಸ್ವಲ್ಪ ಹಾಲು ಕರೆದು, ಉಳಿಕೆಯ ಹಾಲನ್ನು ಕರುವಿಗೆ ಉಣ್ಣಲು ಬಿಡುತ್ತೇನೆ” ಎಂದೆ.
ಮರು ದಿನ ಬೆಳಗಾಗುತ್ತಲೇ ಎಳೇ ಕರುವಿನ ದನ ಕೆಂಪಿ ‘ಅಂಬಾ, ಅಂಬಾ!’ ಎಂದು ಅರಚುತ್ತಾ ಇತ್ತು. ನಾನು ನನ್ನ ನಿತ್ಯದ ಯೂನಿಫಾರ್ಮ್ ಆದ ಅರ್ಧ ಪ್ಯಾಂಟ್(ಶಾರ್ಟ್ಸ್), ಟೀ ಶರ್ಟ್, ಮಣಿಗಂಟಿನ ವರೆಗೆ ಕವರ್ ಮಾಡುತ್ತಾ ಇದ್ದ ಬಾಟಾ ಕಂಪನಿಯ ‘ಹಂಟರ್ ಬೂಟ್” ಹಾಗೂ ಬೆಂಗಳೂರಿನಲ್ಲಿ ನಾನು ಕೊಂಡಿದ್ದ ಅಗಲ ಬ್ರಿಮ್ನ ಹ್ಯಾಟು ಧರಿಸಿ ಹಟ್ಟಿಗೆ ಹೋದೆ.
ಹಿಂದಿನ ದಿನ ಸಾಯಂಕಾಲವೇ ಕೆಂಪಿ ದನವನ್ನು ಪ್ರತ್ಯೇಕವಾಗಿ ಕರುಗಳ ಕೋಣೆಯಲ್ಲೇ ಬಾಲು ಕಟ್ಟಿ ಹೋಗಿದ್ದ. ನಾನು ನನ್ನ ಬಿಡಾರದಿಂದ ಹಾಲು ಕರೆಯಲು ಒಂದು ಪಾತ್ರೆ. ಅದರಲ್ಲಿ ಅರ್ಧವಾಸಿ ತಣ್ಣೀರು ತೆಗೆದುಕೊಂಡು ಹಟ್ಟಿಯ ಕಡೆ ಹೊರಟೆ. ನನ್ನ ತಾಯಿಯವರು ದನಗಳನ್ನು ಕರೆಯುವ ಮೊದಲು ಅವಕ್ಕೆ ಆಹಾರ ಕೊಟ್ಟು ಅವುಗಳ ಕೆಚ್ಚಿಲನ್ನು ತೊಳೆದು ಹಾಲು ಹಿಂಡುತ್ತಾ ಇದ್ದುದು ನೆನಪಿನಲ್ಲಿ ಇತ್ತು. ನಾನು ಕೂಡಾ ಹಾಗೆಯೇ ಮಾಡಲು ಹೊರಟಿದ್ದೆ.
ನನಗೆ ಆ ದಿನಗಳಲ್ಲಿ ಹುಲಿಯ ಹಾಲನ್ನು ಕರೆಯುವ ಸ್ಥೈರ್ಯ ಹಾಗೂ ಹುಮ್ಮಸ್ಸು ಇತ್ತು. ’ಯಕಶ್ಚಿತ್ ಒಂದು ನಾಟಿದನದ ಹಾಲು ಕರೆಯುವದೇನು ಮಹಾ!’ ಎಂದು ಕೊಳ್ಳುತ್ತಾ ನಮ್ಮ ಕೆಂಪಿ ದನ ಮತ್ತು ಕರು ಇದ್ದ ಹಟ್ಟಿಯನ್ನು ಪ್ರವೇಶಿಸಿದೆ.
ಧೈರ್ಯವಾಗಿ ‘ಕೆಂಪಿ, ಕೆಂಪಿ!’ ಎನ್ನುತ್ತಾ ಅದರ ಬಳಿ ಹೋದೆ. ಎರಡು ಸಲ ದನದ ಹೆಸರು ಹಿಡಿದು ಕರೆದಾಗಲೇ ‘ಹಾಲುಕರೆಯುವ ಕೆಲಸ ಅರ್ಧ ಮುಗಿಸಿದೆ’ ಎಂಬ ಭಾವನೆ ನನ್ನಲ್ಲಿ ಮೂಡಿತ್ತು.
ಕೆಂಪಿ ದನ ತನ್ನ ಕರುವಿನ ಮೈ ನೆಕ್ಕುತ್ತಾ ನಿಂತಿತ್ತು. ಅದು ನನ್ನ ಕಡೆಗೆ ಗಮನ ಕೊಡಲೇ ಇಲ್ಲ. ಅಟ್ಟದ ಏಣಿ ಹತ್ತಿ ಅದರ ಎದುರಿಗೆ ಒಂದು ಕಟ್ಟು ಒಣ ಹುಲ್ಲು ತಂದು ಹಾಕಿದೆ. ಅದು ಖುಷಿಯಿಂದ ಆ ಹುಲ್ಲನ್ನು ತಿನ್ನ ತೊಡಗಿತು.
ಅದರ ಪುಟ್ಟ ಕರು ಆಗಲೇ ಹೊಟ್ಟೆತುಂಬಾ ಆಗಲೇ ಹಾಲು ಕುಡಿದಿದ್ದರಿಂದ ಸಂತೋಷವಾಗಿ ನನ್ನ ಕಡೆ ಪಿಳಿ ಪಿಳಿ ನೋಡುತ್ತಾ ಇತ್ತು.
ನಾನು ದನದ ಎಡ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ತಂಬಿಗೆಯಲ್ಲಿ ಇದ್ದ ತಣೀರನ್ನು ಅದರ ಕೆಚ್ಚಲಿಗೆ ಎರಚಿ ಕೆಚ್ಚಲನ್ನು ತೊಳೆಯಲು ಕೈ ಹಾಕುವ ಮೊದಲೇ ಮಿಂಚಿನ ವೇಗದಲ್ಲಿ ಏನೇನೋ ನಡೆದು ಬಿಟ್ಟಿತು.
ನನ್ನ ಕಣ್ಣಿನ ಇದುರು ಏನೋ ಕಪ್ಪಗಿನ ವಸ್ತು ಸುಳಿದಂತೆ ಆಯಿತು.
ಅದು ನನ್ನ ಮುಖದ ಮೇಲೆಯೇ ಬಂದು ಇಳಿಯಿತು.
ಲಟ್! ಎಂಬ ಶಬ್ದ ಕೂಡಾ ಆಯಿತು.
ನಾನು ಆ ಕ್ಷಣದಲ್ಲೇ ಆಯತಪ್ಪಿ ಹಟ್ಟಿಯ ಶಿಲೆ ಹಾಸಿದ ನೆಲದ ಮೇಲೆ ಬಿದ್ದುಬಿಟ್ಟಿದ್ದೆ.
ನೆಲದಲ್ಲಿ ಬಿದ್ದಿದ್ದ ಸೆಗಣಿ ನನ್ನ ಮೈಗೆ ಮೆತ್ತಿಕೊಳ್ಳುತ್ತಾ ಇತ್ತು.
ನನ್ನ ಕೈಯ್ಯಲ್ಲಿ ಇದ್ದ ಪಾತ್ರೆ ಎಲ್ಲೋ ಹಾರಿ ಹೋಗಿತ್ತು.
ನನ್ನ ತಲೆಯಲ್ಲಿ ಅಗಲ ಬ್ರಿಮ್ ಉಳ್ಳ ಹ್ಯಾಟು ಇದ್ದಿದ್ದರಿಂದ ತಲೆ ನೆಲಕ್ಕೆ ಹೊಡೆದ ವೇಗಕ್ಕೆ ನನ್ನ ತಲೆ ಒಡೆದು ಹೋಗಲಿಲ್ಲ. ಬಿದ್ದ ರಭಸಕ್ಕೆ ನನ್ನ ಹ್ಯಾಟ್ ತಲೆಯಿಂದ ಕಳಚಿ ಸೆಗಣಿಯ ಮೇಲೆ ಅಂಗಾತ ಬಿದ್ದಿತು.
‘ನಾನಗೆ ಏನಾಯಿತು?’ ಎಂದು ಊಹಿಸುವ ಮೊದಲೇ ನನ್ನ ಮುಖದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. ಹೇಗೋ ಸುಧಾರಿಸಿಕೊಂಡು ಎದ್ದೆ. ನನ್ನ ತಲೆ ‘ಧಿಂ!’ ಎನ್ನುತ್ತಿತ್ತು. ಬಲ ಕಣ್ಣಿನ ಕೆಳಗೆ ಕೆಳದವಡೆಯ ತನಕ ತಡೆಯಲಾರದ ನೋವು ಪಸರಿಸಿತು. ಮುಖ ಮುಟ್ಟಿ ನೋಡಿಕೊಂಡಾಗ ಮುಖದ ಬಲಭಾಗ ಊದಿಕೊಳ್ಳುತ್ತಾಇರುವುದು ಸ್ಪಷ್ಟವಾಯಿತು.
ಮೆಲ್ಲನೆ ಕೆಳಗೆ ಬಿದ್ದಿದ್ದ ಹ್ಯಾಟ್ ಎತ್ತಿಕೊಂಡೆ. ಎಲ್ಲಿಗೋ ಹಾರಿ ಹೋಗಿದ್ದ ಪಾತ್ರೆಯನ್ನು ಹುಡುಕದೇ ‘ಅದು ಹಾಳಾಗಿ ಹೋಗಲಿ!’ ಎಂದು ಶಪಿಸುತ್ತಾ ಮೇಲೆ ಎದ್ದೆ. ಮೈ ಮೇಲೆ ಪಸರಿಸಿದ್ದ ಹಸೀ ಸೆಗಣಿಯ ವಾಸನೆ ತಡೆಯಲು ಅಸಾಧ್ಯ ಎನಿಸಿತು.
ನಾನು ದನದ ಕಡೆ ನೋಡಿದೆ. ಅದು ಏನೂ ನಡೆದಿಲ್ಲವೇನೋ ಎಂಬಂತೆ ತನ್ನ ಕರುವನ್ನು ನೆಕ್ಕುತ್ತಾ ಇತ್ತು. ನನಗೆ ದನದ ಮೇಲೆ ಸಿಟ್ಟು ಉಕ್ಕಿಬಂದಿತ್ತು.
ಪೆಟ್ಟು ತಿಂದ ನೋವಿನಿಂದಾಗಿ ನನ್ನಲ್ಲಿ ನಿಧಾನವಾಗಿ ವಿವೇಕವೂ ಮೂಡಿ ಬರುತ್ತಿತ್ತು. ‘ಆ ಪುಟ್ಟ ಕರುವಿಗೆ ಸೇರಿದ ಹಾಲನ್ನು ಹಿಂಡಿ ತೆಗೆಯುವ ಅಧಿಕಾರ ನಿನಗೆಲ್ಲಿ?’ ಎಂದು ನನ್ನ ಒಳಮನಸ್ಸು ನನ್ನನ್ನು ಕೇಳುತ್ತಾ ಇತ್ತು.
ಮುಖವನ್ನು ಇನ್ನೊಮ್ಮೆ ಸವರಿಕೊಂಡು ನೋಡಿದೆ. ‘ಯಾವ ಹಲ್ಲೂ ಕಿತ್ತು ಹೋಗಿಲ್ಲ. ದವಡೆಯ ಎಲುಬು ಮುರಿದಿಲ್ಲ’ ಎಂದು ಖಾತ್ರಿ ಮಾಡಿಕೊಂಡೆ. ದಪ್ಪವಾಗಿ ಪೊದೆಯಂತೆ ಬೆಳೆದಿದ್ದ ಗಡ್ದದ ಕೂದಲುಗಳು ನನ್ನ ದವಡೆಯ ಎಲುಬು ಮತ್ತು ಹಲ್ಲುಗಳನ್ನು ಕಾಪಾಡಿದ್ದುವು.
‘ಕನ್ನಡಿ ನೋಡಿಕೊಳ್ಳೋಣ!’ ಎಂದರೆ, ಗಡ್ದ ಧಾರಿಯಾದ ನನ್ನ ಮನೆಯಲ್ಲಿ ಕನ್ನಡಿಯೇ ಇರಲಿಲ್ಲ. ಶೇವಿಂಗ್ ಅಗತ್ಯವೇ ಇಲ್ಲದ ಮುಖ! ತಲೆಯಲ್ಲಿ ಬಾಚಣಿಗೆ ಬೇಡದ "ಕ್ರೂ"ಕಟ್! ಗುಡಿಸಲಿಗೆ ಹೋಗಿ ಸ್ಟೈನ್ಲೆಸ್ ಸ್ಟೀಲಿನ ಊಟದ ತಟ್ಟೆಯಲ್ಲಿ ಮುಖ ನೋಡಿಕೊಂಡೆ. ಯಾರದೋ ಮುಖ ಬಲ ಬದಿ ಊದಿಕೊಂಡಂತೆ ಕಂಡಿತು. ಬಲಕಣ್ಣು ಊದಿಕೊಂಡು ಅರ್ಧ ಮುಚ್ಚಿತ್ತು.
ನಾನು ಮಾಮೂಲಿಯಾಗಿ ಸ್ನಾನಕ್ಕೆ ಉಪಯೋಗಿಸುತ್ತಾ ಇದ್ದ ಮಾರ್ಗೋ ಸೋಪ್ ಹಿಡಿದು ನೇರವಾಗಿ ನದಿಯ ಬದಿಗೆ ನಡೆದೆ, ಶೂ ಮತ್ತು ಹ್ಯಾಟ್ ಸಮೇತ ನೀರಿಗಿಳಿದು ಮೈಗೆ ಮೆತ್ತಿದ ಸೆಗಣಿ ತೊಳೆದುಕೊಂಡೆ. ಹರಿಯುವ ನೀರಿನಲ್ಲಿ ಹ್ಯಾಟ್ ಮತ್ತು ಬೂಟ್ ತೊಳೆದು ಬದಿಗೆ ಇರಿಸಿದೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದು ಬಟ್ಟೆ ಬದಲಾಯಿಸಿದೆ.
ಬೆಳಗ್ಗಿಗೆ ಇಟ್ಟುಕೊಂಡ ಹಿಂದಿನ ದಿನದ ಹಾಲು ಆಗಲೇ ಮುಂಜಾನೆಯ ಟೀ ಮಾಡಿದಾಗ ಖರ್ಚಾಗಿತ್ತು. ಬಿಸಿ ಬಿಸಿಯಾಗಿ ಒಂದು ಮಗ್ ಕಪ್ಪು ಚಹಾ ಮಾಡಿ ಕುಡಿದೆ.
ಹೊಳೆಯ ನೀರಿನ ಅಭಿಷೇಕದಿಂದ ಮುಖದ ಊತ ಕಡಿಮೆ ಆಗುತ್ತಾ ಇತ್ತು.
ಕೆಲಸದ ಆಳುಗಳು ಇನ್ನೂ ಬಂದಿರಲಿಲ್ಲ. ಗಂಟೆ ನೋಡಿದರೆ ಏಳೂವರೆ! ಅರೆ! ನನ್ನ ಕೈಯ್ಯಲ್ಲಿ ಇದ್ದ ಸ್ವಿಸ್ “ಎನಿಕಾರ್” ವಾಚ್ ಇನ್ನೂ ನಡೆಯುತ್ತಾ ಇತ್ತು! ಅದು ನೀರು ಕುಡಿದಿರಲೂ ಇಲ್ಲ!
ಪೆಟ್ಟು ತಿಂದ (ಒದೆಸಿಕೊಂಡ) ಮುನಿಸು ಇನ್ನೂ ಕಡಿಮೆ ಆಗಿರಲಿಲ್ಲ. ಆ ಕೆಂಪಿ ಎಂಬ ದನಕ್ಕೆ ಚೆನ್ನಾಗಿ ಹೊಡೆದು ಬಿಡೋಣಾಂತ ಒಮ್ಮೆ ಅನ್ನಿಸಿತು. ‘ಎಲೋ ಬುದ್ಧಿಯುಳ್ಳ ಮನುಷ್ಯ ಪ್ರಾಣಿಯೇ! ದನದ ಮೇಲೆ ಯಾಕೆ ಸಿಟ್ಟು ಮಾಡುತ್ತೀಯಾ? ತಪ್ಪು ನಿನ್ನದೇ ಅಲ್ಲವೇ? ನಿನಗೂ ಅದು ಹಾಲು ಹಿಂಡಲು ಬಿಡುತ್ತಿತ್ತೋ ಏನೋ? ನಿನ್ನ ವಿಚಿತ್ರ ವೇಷ! ಮುಖ ತುಂಬ ಗಡ್ಡ! ತಲೆಯ ಮೇಲೆ ಒಂದು ಅಗಲ ಹ್ಯಾಟು! ಅದರ ಮೇಲೆ, ಚಳಿಗಾಲದ ಈ ಹವಾಮಾನದಲ್ಲಿ ಅದರ ಕೆಚ್ಚಲಿಗೆ ಮಹಾ ಬುದ್ಧಿವಂತನಂತೆ ತಣ್ಣೀರು ಎರೆಚಿದೆ! ನೀನು ಮಾಡಿದ್ದು ತಪ್ಪಲ್ಲವೇ?’ ಎಂದಿತು ಸುಪ್ತ ಮನಸ್ಸು.
‘ಹೌದು! ನಾನು ಉಗುರು ಬೆಚ್ಚನೆಯ ನೀರು ಕೊಂಡೊಯ್ಯ ಬೇಕಿತ್ತು! ಹೊಳೆಯಲ್ಲೇ ದಿನಾ ತಣ್ಣೀರಲ್ಲಿ ಮುಳುಗಿ ಸ್ನಾನ ಮಾಡುವ ಈ ನರ ಪ್ರಾಣಿಗೆ, ಒಂದೆರಡು ದಿನಗಳ ಹಿಂದಷ್ಟೇ ಕರು ಹಾಕಿದ ಆ ದನಕ್ಕೆ ಚಳಿ ಆಗಬಹುದೆಂಬ ಪರಿಜ್ಞಾನವೇ ಇರಲಿಲ್ಲ! ಸರಿ! ನಾನು ತಪ್ಪೇ ಮಾಡಿರಬಹುದು. ಆದರೆ, ಆ ದನ ನನಗೆ ಅಷ್ಟು ಜೋರಾಗಿ ಒದೆಯಬೇಕಿರಲಿಲ್ಲ! ನಿಧಾನವಾಗಿ ಕಾಲು ಝಾಡಿಸಿ ಅದು ಹೆದರಿಸಿದ್ದರೆ ಸಾಕಿತ್ತು!’ ಅಂತ ನನ್ನೊಳಗೇ ಸ್ವಲ್ಪ ಸಮಾಧಾನ ಮಾಡಿಕೊಂಡೆ.
ನನ್ನ ಮನೆಯೊಳಗೆ ಒಂದು ಚಿಕ್ಕ ನೀಲಿ ಪೈಂಟ್ನ ಡಬ್ಬಿ ಮತ್ತು ಬ್ರಶ್ ಇತ್ತು. ಅದನ್ನು ಒಪಯೋಗಿಸಿ ನನ್ನ ಮನೆಗೆ K ಸ रि ಎಂಬ ಹೆಸರನ್ನು ಬರೆದಿದ್ದೆ. ಕೂಡಲೇ ಆ ಡಬ್ಬವನ್ನು ಹುಡುಕಿ ನಮ್ಮ ಹಟ್ಟಿಗೆ zoo ಎಂಬ ಹೆಸರನ್ನು ಬರೆದು ಅಂದು ತಿಂದ ಒದೆಗೆ ಸೇಡು ತೀರಿಸಿಕೊಂಡೆ.
ಆನಂತರ ನಾನು ಅಂದಿನ ಒದೆ ತಿಂದ ಪ್ರಸಂಗವನ್ನು ಬಲವಂತವಾಗಿ ಮರೆತೇ ಬಿಟ್ಟೆ!
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಹಲವಾರು ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ
(ಚಿತ್ರಗಳು: ಲೇಖಕರವು)
7 comments:
ನಾಟಿದನ ನಾಟಿದನವೇ ಸರಿ !
ನಾನೂ ಹಾಲು ಕರೆಯಲು ಹೋಗಿ ಒಂದೆರಡು ಸಾರಿ ಒದಿಸಿಕೊಂಡಿದ್ದಿದೆ. ಈ ದನಗಳು ಹೀಗೀಗೆ ಇರುತ್ತವೆ ಎಂದು ಹೇಳಲಾಗುವದಿಲ್ಲ. ಸೌಮ್ಯ ಸ್ವಭಾವದ ಪ್ರಾಣಿಗಳು ಒಮ್ಮೊಮ್ಮೆ ಗುರ್ ಎನ್ನುವದುಂಟು.
ಪೇಜತ್ತಾಯವರ ಚೆಂದದ ಬರಹವನ್ನು ಉಣಬಡಿಸಿದ್ದಕ್ಕೆ ಥ್ಯಾಂಕ್ಸ್.
ನಾನು ಇನ್ನೂ ಅದರ ಅನುಭವ ಪಡೆದಿಲ್ಲ
ಆದರೆ ನಿಮ್ಮ ಲೇಖನ ಒಂದು ಅನುಭವ ಲೇಖನದಂತಿದೆ
hello sir,
Nimma baraha odi tumba nagu bartha ittu,kannige kattuvanthe barediddira,papa tumba novvagirbeku allva..
ನನ್ನ ಹಿರಿಯ ಮಿತ್ರರೂ ಆಗಿರುವ ಕೇಸರಿ (ಪೆಜತಾಯ) ರ ಅನುಭವ ಕಥನ ಕಾಗದದ ದೋಣಿ ಅದಾಗಲೇ ಪೂರ್ತಿ ಓದಿಯಾಗಿದೆ. ನಿಮ್ಮ ಬ್ಲಾಗಿನಲ್ಲಿ ಮತ್ತೊಮ್ಮೆ ಓದಿ ಖುಶಿಗೊ೦ಡೆ.
ಅಂತೂ ಗುಟ್ಟು ಗೊತ್ತಾಯಿತು, ಕೇಸರಿಯವರು zoo ಸೇರಿದ ಕಥೆ. ನಿರೂಪಣೆ ಚೆನ್ನಾಗಿತ್ತು. ದನ್ಯವಾದಗಳು.
ಗೋವಿಂದ
ಬರೆಯುವುದನ್ನು ಪುಸ್ತಕ ರೂಪಕ್ಕೆ ತಂದರೆ ಎಲ್ಲರಿಗೂ ತಲುಪತಿತ್ತು. ಇದು ನನ್ನ ಅನಿಸಿಕೆ. ಲೇಖನ ಚನ್ನಾಗಿದೆ. ನಮ್ಮ ಬಾಲ್ಯ ನೆನೆಪಿಗೆ ಬಂತು,
ದನ್ಯವಾದಗಳು
Post a Comment