ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ ವಾಗ್ವಿಳಾಸ ಸರಸ್ವತಿಯ ವಿಷಯದಲ್ಲಿಯೂ ಉದಾರವಾಗಿಯೇ ಇದೆ. ‘ಆದಿಪುರಾಣ’ ಕೃತಿರಚನೆಯ ಶಿಸ್ತಿನಲ್ಲೇ ಸರಸ್ವತಿಯು ನೆಲೆಯಾಗಿರುವುದನ್ನು ಕಾಣಬಹುದು. ಮೊದಲನೆಯ ಆಶ್ವಾಸವೊಂದನ್ನು ಉಳಿದು ಪ್ರತಿ ಆಶ್ವಾಸದ ಪ್ರಾರಂಭದ ಪದ್ಯದಲ್ಲಿ ತನ್ನ ಕಾವ್ಯದ ಮುಖ್ಯಪಾತ್ರಗಳಾದ ಮಹಾಬಲ, ಲಲಿತಾಂಗ, ವಜ್ರಜಂಘ, ಸುವಿಧಿ, ಪುರುದೇವ, ಶ್ರೀಪತಿ, ಆದಿನಾಥ, ಭರತ ಮೊದಲಾದವರನ್ನು ಸರಸ್ವತಿಗೆ ಮಣಿಹಾರವನ್ನಾಗಿಸಿದ್ದಾನೆ. ಸ್ವತಃ ತನ್ನನ್ನೇ ಮೂರು ಪದ್ಯಗಳಲ್ಲಿ ಸರಸ್ವತೀಮಣಿಹಾರನೆಂದು ಕರೆದುಕೊಳ್ಳುತ್ತಾನೆ. ಅದರಲ್ಲಿ ಒಂದು ಪದ್ಯವಂತೂ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.
ಅತಿಸುಭಗೆಗೆ ಸಂದಂ ಸರ
ಸ್ವತಿಗೀತನ ಲಲಿತಾವಾಗ್ವಿಳಾಸಮೆ ದಲಂ
ಕೃತಿಯವೊಲೆಸೆದಪುದು ಜಗ
ತ್ಪ್ರತೀತನೀತನೆ ಸರಸ್ವತೀ ಮಣಿಹಾರಂ
ಈತನ ಲಲಿತವಾದ ವಾಗ್ವಿಳಾಸ, ಅತಿಸುಭಗಳಾದ ಸರಸ್ವತಿಗೆ ವಿಶೇಷವಾದ ಅಲಂಕಾರವಾಗುತ್ತದೆ. ಜಗತ್ಪ್ರಸಿದ್ಧನಾದ ಪಂಪ ಸರಸ್ವತಿಯ ಕಂಠದ ಮಣಿಹಾರ. ‘ಆದಿಪುರಾಣ’ದ ಪ್ರಾರಂಭದಲ್ಲಿಯೇ ಬಂದಿರುವ ಸರಸ್ವತಿಯ ಸ್ತುತಿ ಜೈನ ಕಾವ್ಯಪ್ರಪಂಚಕ್ಕೆ ದಿಕ್ಸೂಚಿಯಾಗಿ, ಜೈನಪರಂಪರೆಯ ಸರಸ್ವತಿಯ ಪರಿಕಲ್ಪನೆಯನ್ನು ಒಂದು ಸೂತ್ರಬದ್ಧವಾಗಿಸಿದೆ.
ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಱದು ಪೆಣ್ಣರೂಪಮಂ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ
ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಿಯೆ ವಾಗ್ವಿಳಾಸಮಂ
‘ಪರಮಜಿನೇಂದ್ರವಾಣಿಯೇ ಸರಸ್ವತಿ, ಅದು ಬೇರೆಯಲ್ಲ. ಹೆಣ್ಣಿನ ರೂಪವನ್ನು ಧರಿಸಿ ನಿಂತಿಲ್ಲ. ಅಂತಹ ಜಿನವಾಣಿಯು ಭಾವಿಸಿ ಓದುವ ಕೇಳುವ ಪೂಜಿಸುವ ಆದರಿಸುವ ಭವ್ಯಕೋಟಿಗೆ (ಜಿನಭಕ್ತರಿಗೆ) ನಿರಂತರ ಸೌಖ್ಯವನ್ನು ಕೊಡುವುದು. ಅಂತಹ ಸರಸ್ವತಿಯು ನಮಗೆ ವಾಗ್ವಿಳಾಸವನ್ನು ಮಾಡಲಿ’ ಎಂದು ಬೇಡಿಕೊಳ್ಳುತ್ತಾನೆ. ನದಿಯಾಗಿ, ನದಿದೇವತೆಯಾಗಿ ಮೊದಮೊದಲು ಪ್ರಚಲಿತದಲ್ಲಿದ್ದ ಸರಸ್ವತಿಯು ವಾಗ್ದೇವತೆಯಾಗಿ, ವಿದ್ಯಾದೇವತೆಯಾಗಿ ನಂತರ ಹೆಚ್ಚು ಪ್ರಸಿದ್ಧಳಾಗಿದ್ದಾಳೆ. ವಾಗ್ದೇವತೆಯನ್ನು ಸ್ತ್ರೀರೂಪದಲ್ಲಿಯೇ ಆರಾಧಿಸುತ್ತಾ ಬಂದಿರುವವರಿಗೆ ಪಂಪನ ‘ಪರಮಜಿನೇಂದ್ರನವಾಣಿಯೆ ಸರಸ್ವತಿ, ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತಿರುವುದಲ್ಲ’ ಎಂಬ ಪರಿಕಲ್ಪನೆ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಜೈನ ಪರಿಕಲ್ಪನೆಯಲ್ಲಿ, ಜೈನವೇದವೇ ಸರಸ್ವತಿ. ಅವುಗಳು ಶ್ರೇಷ್ಠರಾದ ತೀರ್ಥಂಕರರ ವಾಣಿಯಲ್ಲದೆ ಬೇರೆಯಲ್ಲ. ಸಂಸ್ಕೃತ ‘ಮಹಾಪುರಾಣ’ದಲ್ಲಿ ಆದಿಜಿನನ ಮೊಗದಿಂದ ಉದಯಿಸಿದ ಮಾತೇ ಸರಸ್ವತಿಯಾಯಿತು ಎಂಬ ಪರಿಕಲ್ಪನೆಯಿದೆ. ಜಿನನು ರಾಗದ್ವೇಷದಿಂದ ಮುಕ್ತನಾದ ಸಿದ್ಧ. ಅವನು ಕಾವ್ಯವನ್ನಾಗಲಿ, ಶಾಸ್ತ್ರವನ್ನಾಗಲಿ ಸೃಷ್ಟಿಸುವುದಿಲ್ಲ. ಅವನು ಮಾತನಾಡಿದ್ದೆಲ್ಲ ಕಾವ್ಯವಾಗುತ್ತದೆ ಹಾಗೂ ಶಾಸ್ತ್ರವಾಗುತ್ತದೆ. ಜೈನರ ನಂಬಿಕೆಯಂತೆ ಆ ಶಾಸ್ತ್ರಗಳೇ ಸರಸ್ವತಿ. ವೈದಿಕ ಪರಂಪರೆಯಲ್ಲೂ ಸರಸ್ವತಿಯ ಸೃಷ್ಟಿಕರ್ತ ಬ್ರಹ್ಮನೇ ಆಗಿದ್ದಾನೆ. ಬ್ರಹ್ಮ ಸರಸ್ವತಿಯ ಸೃಷ್ಟಿಕರ್ತನಾದರೆ, ಕವಿಗಳು ಸರಸ್ವತಿಯ ರೂಪಗಳಾದ ಕಾವ್ಯಗಳ ಸೃಷ್ಟಿಕರ್ತರು. ಆದ್ದರಿಂದ ಕವಿಗಳು ಅಭಿನವ ಸೃಷ್ಟಿಕರ್ತರು.
ಸರಸ್ವತಿ ಎಂದರೆ ಹೆಣ್ಣರೂಪವನ್ನು ಧರಿಸಿದ ದೇವತೆ ಎಂಬ ಪೌರಾಣಿಕ ಕಲ್ಪನೆಯನ್ನು ನಿರಾಕರಿಸಿ, ಪಂಪನು ಜೈನಪರಂಪರೆಗೆ ಅನುಗುಣವಾಗಿ ಸರಸ್ವತಿಯನ್ನು ಪರಿಭಾವಿಸಿದ್ದಾನೆ. ಆದರೆ ವೈದಿಕ ಪಂರಂಪರೆಯಂತೆಯೇ ಜೈನರಲ್ಲಿಯೂ ಸರಸ್ವತಿಯು ವಾಗ್ದೇವತೆ; ವಿದ್ಯಾಧಿದೇವತೆಯೂ ಹೌದು. ಭಾವಿಸುವ, ಓದುವ, ಆಲಿಸುವ ಪೂಜಿಸುವ ಆದರಿಸುವವರಿಗೆ ನಿತ್ಯಸೌಖ್ಯವನ್ನು ಉಂಟುಮಾಡುವುದು ವಾಕ್. ಆ ವಾಕ್ಕಿಗೆ ದೇವತೆಯಾದ ಸರಸ್ವತಿಯು ಎಲ್ಲರಿಗೂ ವಾಗ್ವಿಳಾಸವನ್ನು ಮಾಡಲಿ ಎಂಬಲ್ಲಿ ಸರಸ್ವತಿಯನ್ನು ಕುರಿತಾದ ವೈದಿಕ ಪರಿಕಲ್ಪನೆ ಮುಂದುವರೆದಿದೆ.
‘ಪರಮಜಿನೇಂದ್ರವಾಣಿಯೆ ಸರಸ್ವತಿ, ಅವಳು ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತವಳಲ್ಲ’ ಎಂದು ಸಾರಿದ ಪಂಪ ತನ್ನ ಕಾವ್ಯಗಳಲ್ಲಿಯೇ ಸರಸ್ವತಿಗೆ ಹೆಣ್ಣಿನ ರೂಪವನ್ನು ತೊಡಿಸಿರುವುದುಂಟು. ‘ಅತಿಸುಭಗಗೆ ಸಂದ.......’ ಎಂಬ ಪದ್ಯದಲ್ಲಿ ಪಂಪ ಮಾಡಿಕೊಂಡಿರುವ ಆತ್ಮಶ್ಲಾಘನೆಯಲ್ಲಿ ಸರಸ್ವತಿಯು ಸ್ತ್ರೀರೂಪದಲ್ಲಿದ್ದಾಳೆ. ಆತನು ‘ತಾನೇ ಆಕೆಗೆ ಮಣಿಹಾರ’ ಎನ್ನುತ್ತಾನೆ. ಪ್ರತಿ ಅಧ್ಯಾಯದ ಮೊದಲ ಪದ್ಯದಿಂದಲೇ ಚಕ್ರವರ್ತಿಯಾದ ಭರತ, ಜಿನನಾದ ಆದಿನಾಥ ಮೊದಲಾದವರನ್ನೆಲ್ಲಾ ಸರಸ್ವತಿಯ ಕೊರಳಿನ ಮಣಿಹಾರವಾಗಿಸುತ್ತಾನೆ. ಹೀಗೇಕೆ? ಆದರೆ, ಆತನೆಲ್ಲೂ ‘ಸರಸ್ವತಿಯನ್ನು ಸ್ತ್ರೀರೂಪದಲ್ಲಿ ಚಿತ್ರಿಸುವುದಿಲ್ಲ’ ಎಂದು ಹೇಳಿಲ್ಲ. ‘ಹೆಣ್ಣರೂಪದಲ್ಲಿ ಸರಸ್ವತಿಯನ್ನು ಬಣ್ಣಿಸಲೇಬಾರದೆಂದು ಅವನೇನು ಹಟತೊಟ್ಟಿರಲಿಲ್ಲವೆಂದೂ, ಮೂಲಭೂತ ಅರ್ಥವನ್ನು ನಿರ್ವಚನ ಮಾಡಬೇಕೆಂದು ಬಯಸಿದ್ದನೆಂದೂ ತಿಳಿದುಕೊಳ್ಳಬಹುದು.’ ಕವಿ ಪ್ರತಿಮಾಪ್ರಿಯ ಮತ್ತು ಪ್ರಯೋಗಪ್ರಿಯ. ಕವಿ ಹೊಸಹೊಸತನ್ನು ಸೃಷ್ಟಿಸುವ ಅಭಿನವ ಸೃಷ್ಟಿಕರ್ತ ಎಂಬ ಮಾತಿಗೆ ಪಂಪನೇ ಸಾಕ್ಷಿ. ಪರಮಜಿನೇಂದ್ರವಾಣಿಯೆ ಸರಸ್ವತಿ ಎಂದು ಹೇಳಿದ ‘ಆದಿಪುರಾಣ’ದಲ್ಲಿಯೇ ಪಂಪ, ಸರಸ್ವತಿಯನ್ನು ವಾಗ್ವಧುವನ್ನಾಗಿಯೂ ಚಿತ್ರಿಸಿದ್ದಾನೆ. ‘ವಾಗ್ವಧೂಮುದ್ರೆಯೊಳ್ ಮುದ್ರಿಸಿ ನಿಂದತ್ತು ಆದಿತೀರ್ಥೇಶ್ವರ ಚರಿತದೊಳ್ ವಾಕ್ಯಮಾಣಿಕ್ಯಕೋಶಂ’ ಎನ್ನುತ್ತಾನೆ. ಆದಿತೀರ್ಥೇಶ್ವರ ಚರಿತ್ರೆಯಲ್ಲಿ ವಾಕ್ಯಗಳೆಂಬ ಮಾಣಿಕ್ಯಗಳ ಕೋಶಕ್ಕೆ ವಾಗ್ವಧೂ ಅಂದರೆ ಸರಸ್ವತಿಯೇ ಮುದ್ರೆಯೊತ್ತಿದ್ದಾಳಂತೆ! ಪಂಪನಿಗೆ ತನ್ನ ಕಾವ್ಯಗಳ ಶ್ರೇಷ್ಠತೆಯ ಬಗ್ಗೆ ಅಷ್ಟೊಂದು ವಿಶ್ವಾಸ.
ಪಂಪನು ತನ್ನ ‘ವಿಕ್ರಮಾರ್ಜುನವಿಜಯ’ ಕೃತಿಯಲ್ಲಿ,
ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾನಾವನುಮಿಲ್ಲೆನಲ್ ತದ
ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ
ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ
ಎಂದು ಪ್ರಾರ್ಥಿಸಿದ್ದಾನೆ. ಸರಸ್ವತಿಯು, ಅರಿಗ ಅಂದರೆ ಅರಿಕೇಸರಿಗೆ ನಿಷ್ಕಲ್ಮಷವಾದ ಬುದ್ಧಿಯನ್ನು ಕೊಡಲಿ ಎಂಬುದು ಕವಿಯ ಆಶಯ. ಆದರೆ ಆತ ಸರಸ್ವತಿಗೆ ಆರೋಪಿಸಿರುವ ಒಂದೊಂದು ಗುಣವೂ ವಿಚಾರಯೋಗ್ಯ. ವಾಙ್ಮಯಕ್ಕೆ ನಾಶವೆಂಬುದು ಒಂದಿನಿತೂ ಇಲ್ಲ. ಕೇಳಿದ ಮಾತ್ರಕ್ಕೇ ವಾಙ್ಮಯದ ಕೊನೆಯನ್ನು ತಿಳದವನು ಯಾವನೂ ಇಲ್ಲ. ವಾಙ್ಮಯ ಎಂಬುದು ತನಗೆ ತಾನೇ ಅಕ್ಷಯನಿಧಿ ಆಗಿರುವುದು. ಪ್ರೀತಿಯಿಂದ ಸೇವಿಸಿದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆನ್ನಿಸುವುದು ವಾಙ್ಮಯ. ಅಂತಹ ಸಮಸ್ತ ವಾಙ್ಮಯಕ್ಕೆ ಸರಸ್ವತಿಯು ತಾಯಿಯಾಗಿದ್ದಾಳೆ. ಒಬ್ಬ ವ್ಯಕ್ತಿ ಗಳಿಸಿದ ಆಸ್ತಿಯನ್ನು ಕಳೆದುಕೊಳ್ಳಬಹುದು. ಬೇರೆಯವರು ಕಿತ್ತುಕೊಳ್ಳಬಹುದು. ಅದು ತನ್ನಿಂದ ತಾನೇ ನಾಶವಾಗಬಹುದು. ಗಳಿಸಿದಾತನ ಮರಣಾನಂತರ ಅದು ಬೇರೆಯವರಿಗೆ ವರ್ಗವಾಗಬಹುದು. ಆದರೆ, ವಿದ್ಯೆ ಎಂಬ ಅಕ್ಷಯ ನಿಧಿ ಮಾತ್ರ ಮನುಷ್ಯ ತಾನು ಬದುಕಿರುವವರೆಗೂ ಕಳೆದುಕೊಳ್ಳಲಾರದ ಸಂಪತ್ತು. ಅದನ್ನು ಬೇರೆಯವರಿಗೆ ವರ್ಗಾಯಿಸಿದಷ್ಟೂ ಬೆಳೆಯುತ್ತಲೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಂತೆ ಮುಂದಿನ ತಲೆಮಾರಿಗೆ ಬಿಡಲಾಗುವುದಿಲ್ಲ. ಅಂತಹ ವಾಙ್ಮಯಕ್ಕೆ ಸರಸ್ವತಿಯು ‘ತಾಯಿ’ ಎಂಬ ಪರಿಕಲ್ಪನೆ ಪಂಪನದು. ‘ಅಂಬಿಕೆ ಸರಸ್ವತಿ’ ಎಂಬಲ್ಲಿ ತಾಯಿಯಂತೆ ಅವಳು ಪ್ರೇಮಮಯಿ. ಹೀಗೆ ಜಿನೇಂದ್ರವಾಣಿಯಾಗಿ ಕಾಣಿಸಿಕೊಂಡ ಸರಸ್ವತಿ, ಆದಿಪುರಾಣದಲ್ಲಿ ವಾಗ್ವಧು ಆಗಿ, ಪಂಪಭಾರತದಲ್ಲಿ ಅಂಬಿಕೆಯಾಗಿ ಪರಿಪೂರ್ಣತೆಯತ್ತ ಸಾಗುತ್ತಾಳೆ.
ಸುಮಾರು ಹತ್ತನೇ ಶತಮಾನದಲ್ಲಿಯೇ, ‘ಮಾನವಜಾತಿ ತಾನೊಂದೆ ವಲಂ’ ಎಂದು ಸಾರಿದ ಪಂಪ ಮಹಾನ್ ಮಾನವತಾವಾದಿ; ಒಬ್ಬ ಶ್ರೇಷ್ಠ ಕವಿ. ಅವನ ಕಾವ್ಯಗಳು ಈ ಲೋಕಕ್ಕೆ ಅಲಂಕಾರಪ್ರಾಯವಾಗಿರುವವು. ‘ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಪಂಪನ ವಾಗ್ವಿಲಾಸ’ ಶ್ರೇಷ್ಠ ತರಗತಿಯದ್ದು. ಅಂತೆಯೇ ಆತನ ಸರಸ್ವತೀ ದರ್ಶನವೂ ಸಹ.
6 comments:
ಪಂಪನ ಬಗೆಗೆ ಎಷ್ಟು ಓದಿದರೂ ಸಂತಸವೇ
ಆ ಮಹಾನ ಕವಿ ಸಿಗುವುದು ಬಹಳ ವಿರಳ
ಕವಿಗಳಲ್ಲಿ ಹಳಗನ್ನಡದಂತ ಕವಿಗಳು ಈಗಿಲ್ಲ ! ಅವರು ರಾಜಾಶ್ರಯದಲ್ಲಿ ತಮ್ಮನ್ನು ಕಾವ್ಯಕ್ಕಾಗಿಯೇ ತೊಡಗಿಸಿಕೊಂಡಿದ್ದರು, ಈಗೇನಿದ್ದರೂ ಕಾವ್ಯ-ಸಾಹಿತ್ಯ ಎಲ್ಲಾ ಬಿಡುವಿದ್ದ ವೇಳೆಯ ಹವ್ಯಾಸ ಅಂತಾಗಿಬಿಟ್ಟಿದೆ, ಏನೋ ಮಾಡೋಣ ಇದು ರಾಜರ ಕಾಲವಲ್ಲವಲ್ಲ, ಪಂಪ ಅತೀ ಶ್ರೇಷ್ಠ ಕವಿ, ಬನವಾಸಿಯ ಅವನ ವರ್ಣನೆ ನಿಜಕ್ಕೂ ವರ್ಣನಾತೀತ !
ಪಂಪ ಕನ್ನಡದ ಮಹಾನ್ ಕವಿ ಆತನ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆ
ಕನ್ನಡ ಸಾಹಿತ್ಯವು ಭಾರತೀಯ ಸಾಹಿತ್ಯಗಳಲ್ಲಿ ಬಹಳ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ನಮ್ಮ ಸಾಹಿತ್ಯವು ವಿಶಿಷ್ಟ ಕವಿಪುಂಗರವರಿಂದ ಶ್ರೀಮಂತ ಸಾಹಿತ್ಯವಾಗಿದೆ. ಅವರಲ್ಲಿ ಮೊದಲಿಗರಾಗಿ ನಿಲ್ಲುವುದು ಮಹಾಕವಿ ಪಂಪ.
😍
Post a Comment