Monday, March 08, 2010

‘ತ್ರಿಪದಿ’ಯಲ್ಲಿ ತ್ರಿವಿಧ

ತ್ರಿಪದಿ ಎಂಬುದು ಹೆಸರೇ ಸೂಚಿಸುವಂತೆ ಮೂರು ಪಾದಗಳುಳ್ಳ ಪದ್ಯ. ಇದನ್ನು ತಿಪದಿ, ತಿವದಿ, ತ್ರಿವುಡೆ, ತ್ರಿಪದಿಕಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಬೇಂದ್ರೆಯವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಇವುಗಳು ಅಚ್ಚಗನ್ನಡದ ಮಟ್ಟುಗಳು. ಜಾನಪದ ಸಾಹಿತ್ಯದಲ್ಲಿ ಇವುಗಳ ವಿರಾಟ್‌ಸ್ವರೂಪವನ್ನು ಕಂಡಾಗ ಇವುಗಳ ಇತಿಹಾಸವನ್ನು ನಿಖರವಾಗಿ ಗುರುತಿಸುವುದು ಕಷ್ಟವೆನ್ನಿಸುತ್ತದೆ. ಶಾಸನಗಳಲ್ಲಿ ಆಲ್ಲಲ್ಲಿ ಕಾಣಿಸಿಕೊಳ್ಳುತ್ತಾ, ಪಂಪ ಪೊನ್ನರ ಕೃತಿಗಳಲ್ಲಿ ಇಣುಕಿ, ಮುಂದಿನ ಕವಿಕೃತಿಗಳಲ್ಲಿ ಕಾಣಿಸಿಕೊಂಡು ಸರ್ವಜ್ಞನ ಕಾಲಕ್ಕೆ ಬೃಹತ್ತಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಂಡಿವೆ. ಕನ್ನಡ ಜಾನಪದ ಸಾಹಿತ್ಯಪ್ರಕಾರಗಳಲ್ಲಿ ತ್ರಿಪದಿಗಳದೇ ಸಿಂಹಪಾಲು.
ತ್ರಿಪದಿಗಳ ಲಕ್ಷಣಗಳನ್ನು ಈ ರೀತಿ ಸರಳೀಕರಿಸಬಹುದು.-
  • ಮೂರು ಪಾದಗಳು. 
  • ಹನ್ನೊಂದು ಗಣಗಳು. 
  • 6 ಮತ್ತು 10ನೇ ಗಣಗಳು ಬ್ರಹ್ಮಗಣಗಳು; ಉಳಿದವು ವಿಷ್ಣುಗಣಗಳು.  
  • ಕ್ವಚಿತ್ತಾಗಿ ವಿಷ್ಣುವಿಗೆ ಬದಲಾಗಿ ರುದ್ರ ಬರಬಹುದು. 
  • 1 ಮತ್ತು 2ನೇ ಪಾದದಲ್ಲಿ ನಾಲ್ಕು ನಾಲ್ಕು ಗಣಗಳು ಬಂದರೆ, 3ನೇ ಪಾದದಲ್ಲಿ ಮೂರು ಗಣಗಳು ಬರುತ್ತವೆ.
ಅಂಶ ತ್ರಿಪದಿಗೆ ಬಾದಾಮಿ ಶಾಸನದ (ಏಳನೇ ಶತಮಾನ) ಒಂದು ತ್ರಿಪದಿಯನ್ನು ನೋಡಬಹುದು.
ವಿ      ವಿ        ವಿ      ವಿ
ಸಾಧುಗೆ/ಸಾಧುಮಾ/ಧುರ್ಯಂಗೆ/ಮಾಧುರ್ಯಂ
ವಿ      ಬ್ರ       ವಿ       ವಿ
ಬಾಧಿಪ್ಪ/ಕಲಿಗೆ/ ಕಲಿಯುಗ/ವಿಪರೀತನ್
ವಿ       ಬ್ರ      ವಿ
ಮಾಧವ/ನೀತನ್/ಪೆಱನಲ್ಲ
ತ್ರಿಪದಿಗಳಲ್ಲಿ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,-
ಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಮೊದಲ ಗಣವು ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ರು       ವಿ        ವಿ      ವಿ
ಹೇಸಿನಿನ್ನ / ಬದುಕೀಗೆ/ ಆಶೆ ನಾ/ ಮಾಡಿಲ್ಲ
ವಿ        ಬ್ರ        ವಿ      ವಿ
ರೇಸಿಮೆ/ ಉಡುವ /ದೊರಿನನ್ನ/ ರಾಯರ
ವಿ        ಬ್ರ      ವಿ
ಆಶೆಮಾ/ಡೇನ /ಅನುಗಾಲ//
ವಿಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಕೊನೆಯ ಗಣ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ವಿ        ವಿ       ವಿ      ವಿ
ಹಲ್ಲೀಗೆ/ ಹಲಪೂಡಿ /ಗಲ್ಲಾಕೆ /ಹರಿಷಾಣ
ವಿ       ಬ್ರ       ವಿ      ವಿ
ಗೊಲ್ಲರೋ/ಣ್ಯಾಗ/ ಬರುವೊಳು/ ಕಂದವ್ವ
ವಿ       ಬ್ರ      ರು
ನಲ್ಲ್ಯಾರ/ ಒಳಗ/ಕರಚೆಲುವಿ//
ಚಿತ್ರಲತೆ
ಮೊದಲ ಮತ್ತು ಕೊನೆಯ ಗಣಗಳೆರಡೂ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತವೆ.
ರು      ವಿ      ವಿ      ವಿ
ಚೆಲುವಗಾತಿ/ ಚೆನ್ನವ್ವ/ ಒಲವಲ್ಲೆ/ ಬೆಳೆದೋಳು
ವಿ       ಬ್ರ      ವಿ      ವಿ
ಒಲವಿಗೆ /ಮನಸ/ ಕೊಟ್ಟೋಳು/ ಚೆಲುವಮ್ಮ
ವಿ       ಬ್ರ      ರು
ಒಲವಲ್ಲೆ /ಚೆಲುವ /ಕಂಡವಳು/
ಆಂಶಿಕವಾಗಿ ಮಾತ್ರಾಗಣವಾಗಿ ಪರಿವರ್ತಿತವಾಗಿರುವ ತ್ರಿಪದಿಗಳೂ ಇವೆ. ಅದರ ಲಕ್ಷಣಗಳು, 6 ಮತ್ತು 10ನೇ ಗಣಗಳು ಬ್ರಹ್ಮ ಗಣಗಳಾಗೇ ಉಳಿದುಕೊಂಡು, ಉಳಿದ ಗಣಗಳು 5 ಮಾತ್ರೆಯ ಗಣಗಳಾಗಿವೆ. ಅಕ್ಕಮಹಾದೇವಿಯ ಯೋಗಾಂಗತ್ರಿವಿಧಿಯಲ್ಲಿ ಇಂತಹ ತ್ರಿಪದಿಗಳು ಸಿಗುತ್ತವೆ. ಪ್ರಾರಂಭದಿಂದ ಅಂಶಗಣಾತ್ಮಕವಾಗಿದ್ದು, ಸುಮಾರು 12ನೇ ಶತಮಾನದ ಹೊತ್ತಿಗೆ ಮಾತ್ರಾಗಣಾತ್ಮಕವಾಗುವ ಪ್ರಕ್ರಿಯೆಯನ್ನು ತೋರುತ್ತಿರುವುದು ಗೊತ್ತಾಗುತ್ತದೆ.
5       5       5     5
ಮಾಘಮಾ/ಸವುಪೋಗೆ/ಮೇಲೆಬಂ/ದಿತುಚೈತ್ರ
5       ಬ್ರ      5     5
ಬೇಗಮಾ/ಮರವು/ತಳಿರೇರೆ/ಅದಕಂಡು
5       ಬ್ರ       5
ಕೂಗಿಕರೆ/ಯಿತ್ತು/ಕಳಕಂಠ/
12ನೇ ಶತಮಾದಿಂದೀಚಿಗೆ ಮಾತ್ರಾತ್ರಿಪದಿಗಳು ಹೆಚ್ಚಾಗಿ ದೊರೆಯುತ್ತವೆ. 6 ಮತ್ತು 10ನೇ ಗಣಗಳು 3 ಮಾತ್ರೆಯ ಗಣಗಳಾಗಿದ್ದರೆ, ಉಳಿದವು 5 ಮಾತ್ರೆಯ ಗಣಗಳಾಗಿವೆ. ಒಟ್ಟು 51 ಮಾತ್ರೆಗಳು.
5        5       5      5
ಸಾಲವನು/ಕೊಂಬಾಗ/ಹಾಲೋಗ/ರುಂಡಂತೆ
5        3       5      5
ಸಾಲಿಗನು/ಬಂದು/ಎಳೆವಾಗ/ಕಿಬ್ಬದಿಯ
5        3      5
ಕೀಲುಮುರಿ/ದಂತೆ/ ಸರ್ವಜ್ಞ
6 ಮತ್ತು 10ನೇ ಗಣಗಳಲ್ಲಿ ಕ್ವಚಿತ್ತಾಗಿ 3 ಮಾತ್ರೆಯ ಬದಲು 4 ಮಾತ್ರೆಗಳು ಬರಬಹುದು. ಆಗ ಒಟ್ಟು ಮಾತ್ರೆಗಳು ೫೨/೫೩ ಆಗುತ್ತವೆ.
ಅಂಶಗಣ ಮತ್ತು ಮಾತ್ರಾಗಣಗಳೆರಡರ ಲಕ್ಷಣಗಳಿಗೂ ಹೊಂದುವ ತ್ರಿಪದಿಗಳೂ ಇವೆ.
ವಿ/5    ವಿ/5     ವಿ/5    ವಿ/5
ತೊಟ್ಟೀಲ/ಹೊತ್ಕೊಂಡು/ತೌರ್ಬಣ್ಣ/ಉಟ್ಕೊಂಡು
ವಿ/5    ಬ್ರ/3     ವಿ/5    ವಿ/5
ಅಪ್ಪಕೊ/ಟ್ಟೆಮ್ಮೆ/ಹೊಡ್ಕೊಂಡು/ತಂಗ್ಯಮ್ಮ
ವಿ/5   ಬ್ರ/3    ವಿ/5
ತಿಟ್ಹತ್ತಿ/ ತಿರುಗಿ/ನೋಡ್ಯಾಳು//

12 comments:

ಮನದಾಳದಿಂದ............ said...

good one,
ತ್ರಿಪದಿಯ ಬಗ್ಗೆ ತುಂಬಾ ತಿಳಿಸಿಕೊಟ್ಟಿದ್ದೀರಾ.
thanks and keep writing.

PARAANJAPE K.N. said...

ಮಾಹಿತಿಯುಕ್ತವಾಗಿದೆ, ಸ೦ಗ್ರಾಹ್ಯ ವಿಚಾರ

shivu.k said...

ಸರ್,

ತ್ರಿಪದಿಗಳ ಬಗ್ಗೆ ಮಾಹಿತಿ ಚೆನ್ನಾಗಿದೆ. ಹೈಸ್ಕೂಲು ಮತ್ತು ಕಾಲೇಜು ದಿನಗಳು ನೆನಪಿಗೆ ಬಂದವು.

ಬಿಸಿಲ ಹನಿ said...

tripadigaLalli iShToMdu prakAragaLu iruvadu nimma lEKana Odida mEleyE gottAgiddu. adanni tiLisikoTTiddakke dhanyavAdagaLu.

V.R.BHAT said...

ವಿವರಣೆ ಅರ್ಥಪೂರ್ಣ, ಆದರೆ ಈಗಿನ ನವ್ಯ-ಕಾವ್ಯ ಪ್ರಾಕಾರಗಳಲ್ಲಿ ಇವೆಲ್ಲ ಮರೆಯಾಗುತ್ತಿವೆ, ಅದೇ ವಿಪರ್ಯಾಸ ! ಧನ್ಯವಾದ

Unknown said...

ತುಂಬಾ ಸುಂದರ ತ್ರಿಪದಿಳ ಚಂದವೊ ಚಂದ

Unknown said...

Super but not nice

Unknown said...

ತ್ರಿಪದಿಯೇ ಕನ್ನಡದ ಗಾಯತ್ರೀ... ದ. ರಾ. ಬೇಂದ್ರೆ

Unknown said...

ತ್ರಿಪದಿಯೇ ಕನ್ನಡದ ಗಾಯತ್ರೀ..... ವರಕವಿ ದ. ರಾ. ಬೇಂದ್ರೆ

Unknown said...

Kannada. Vakaranna

Unknown said...

ಚೆನ್ನಾಗಿದೆ

HULLAPPA S VANAKIHAL (Disabled) said...

ತ್ರಿಪದಿಗಳು ಸುಪರ್