Saturday, April 10, 2010

ನಾಯಿಗೂ ಒಂದು ಸ್ಮಾರಕ!

ಈ ಹಿಂದೆ ಎಲ್ಲೋ, ಕರಾವಳಿಯಲ್ಲಿರುವ ಒಂದು ನಾಯಿಸ್ಮಾರಕದ ಬಗ್ಗೆ ಓದಿದ್ದೆ. ಇಂದು ದಟ್ಟ್ ಕನ್ನಡ.ಕಾಂನಲ್ಲಿ ಚೆನ್ನಪಟ್ಟಣದಲ್ಲಿ ನಾಯಿಗೂ ಒಂದು ದೇವಸ್ಥಾನವಿರುವುದು ತಿಳಿಯಿತು. (ಅದರ ಫೋಟೋ ಮಾತ್ರ ಹಾಕಿದ್ದಾರೆ). ಇದಾದ ಮೇಲೆ ಒಂದು ನಾಯಿಯ ಸ್ಮಾರಕವೃತ್ತಾಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿದೆ.
ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕ ಶಾಸನವೊಂದು ಮಂಡ್ಯಜಿಲ್ಲೆಯ ಆತಕೂರಿನಲ್ಲಿದೆ (ಈಗ ಅದನ್ನು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ). ಶಾಸನದ ಜೊತೆಯಲ್ಲಿ(ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣ ಮತ್ತು ಚೋಳದೊರೆ ಮೂರನೇ ರಾಜಾದಿತ್ಯನ ನಡುವೆ ತಕ್ಕೋಲ ಎಂಬಲ್ಲಿ ಯುದ್ಧದಲ್ಲಿ ರಾಜಾದಿತ್ಯ ಹತನಾಗುತ್ತಾನೆ. ರಾಜಾದಿತ್ಯನನ್ನು ಕೊಂದವು ಕೃಷ್ಣನ ದಂಡನಾಯಕನಾದ ಗಂಗದೊರೆ ಬೂತುಗ. ಈ ಬೂತುಗನಿಗೆ ನೆರವಾದವನು ಆತನ ಅಂಕಕಾರನಾದ ಮಣೆಲರ ಆತನ ಸಾಹಸವನ್ನು ಮೆಚ್ಚಿದ ಕೃಷ್ಣನು ‘ನಿನಗೆ ಏನು ಬೇಕು ಬೇಡಿಕೋ’ ಎಂದು ಕೇಳುತ್ತಾನೆ. ಆಗ ಮಣೆಲರ ಕೃಷ್ಣನ ಬಳಿಯಿದ್ದ ‘ಕಾಳಿ’ ಎಂಬ ಹೆಣ್ಣುನಾಯಿಯನ್ನು (ಶಿಲ್ಪದಲ್ಲೂ ಹೆಣ್ಣು ನಾಯಿಯನ್ನು ಕೆತ್ತಲಾಗಿದೆ) ಬೇಡಿ ಪಡೆದುಕೊಳ್ಳುತ್ತಾನೆ. (ದತ್ತಿ, ಜಹಗೀರು, ಸೇನಾಪತಿ ಮುಂತಾದವುಗಳನ್ನು ಬೇಡದೆ ಕೇವಲ ನಾಯಿಯನ್ನು ಮಣೆಲರ ಬೇಡಿದನೆಂದರೆ ಆ ನಾಯಿಯ ಸಾಹಸ ಎಂಥದ್ದಿರಬಹುದು!? ಹರಿ ಎಂಬುದು ಮಣೆಲರನ ಕುದುರೆಯ ಹೆಸರು. ಬಹುಶಃ ಮಣೆಲರ ಪ್ರಾಣಿಪ್ರಿಯನಾಗಿದ್ದರಬಹುದು).
ಆ ನಾಯಿಯೊಂದಿಗೆ ತನ್ನ ಸಹಯೋಧರ ಜೊತೆ ಊರಿಗೆ ಮಣೆಲರ ವಾಪಸ್ಸಾಗುತ್ತಿದ್ದಾಗ, ಕೆಳಲೆನಾಡಿನ ಬೆಳತೂರಿನ ಪಶ್ಚಿಮಕ್ಕೆ ಇರುವ ಕಲ್ಲುಗುಡ್ಡವೊಂದರಲ್ಲಿ ಹಂದಿಯೊಂದಕ್ಕೆ ಮುಖಾಮುಖಿಯಾಗುತ್ತಾರೆ. ‘ಕಾಳಿ’ ನಾಐಇಯನ್ನು ಹಂದಿಯ ಮೇಲೆ ಛೂ ಬಿಡುತ್ತಾಋಎ. ಹಂದಿಗೂ ನಾಯಿಘೂ ಭಯಂಕರವಾದ ಹೋರಾಟ ನಡೆಯುತ್ತದೆ. ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ಮಣೆಲರನಿಗೆ ಅತೀವ ದುಃಖವಾಗುತ್ತದೆ. ನಾಯಿಯ ಶವವನ್ನು ತನ್ನ ಊರಾದ ಆತಕೂರಿಗೆ ತಂದು ಚಲ್ಲೇಶ್ವರ ದೇವಾಲಯದ ಎದುರಿಗೆ ಸಂಸ್ಕಾರ ಮಾಡುತ್ತಾನೆ. ನಂತರ ಅದಕ್ಕೆ (ಹಂದಿ ನಾಯಿ ಹೋರಾಡುತ್ತಿರುವ ಹಾಗೂ ವಿವರಗಳನ್ನುಳ್ಳ) ಸ್ಮಾರಕಶಿಲೆಯನ್ನು ಮಾಡಿಸಿ ನೆಡೆಸುತ್ತಾನೆ. ಊರಿನ ಹಿರಿಯಕೆರೆಯ ಕೆಳಗೆ ಮತ್ತಿಮರಗಳ ಬಳಿಯ ಕಾಲುವೆಯ ಸಮೀಪದಲ್ಲಿದ್ದ ಎರಡು ಖಂಡುಗ ಬೆಳೆಯುವ ಗದ್ದೆಯನ್ನು ದತ್ತಿಯಾಗಿ ಬಿಟ್ಟು ಕಾಳಿ ಸಮಾಧಿಯ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ.
ನಾಯಿಗಾಗಿ ಬಿಟ್ಟ ದತ್ತಿಯನ್ನು ಯಾರಾದರೂ ಹಾಳು ಮಾಡುತ್ತಾರೆ ಎಂಬ ಭಯದಿಂದ ಉಗ್ರವಾದ ಶಾಪಾಶಯವನ್ನು (ಶಾಸನದ ಕೊನೆಯಲ್ಲಿ ಶಾಪಾಶಯವಿರುವುದು ರೂಢಿ) ‘ದತ್ತಿಯನ್ನು ಹಾಳು ಮಾಡಿದವನು ನಾಯಿಯನ್ನು ಸಂಭೋಗಿಸಿದ ಪಾಪಕ್ಕೆ ಗುರಿಯಾಗುತ್ತಾನೆ’ ಎಂದೂ ಬರೆಸಿದ್ದಾನೆ.
 
ಇತಿಹಾಸದಲ್ಲಿ ದಾಖಲಾಗಿರುವ ಇಂತಹ ಹಲವಾರು ವಿಷಯಗಳನ್ನು ತಿಳಿಯಬಯಸುವವರಿಗೆ ಈ ಕೆಳಗಿನ ಪುಸ್ತಕ ಒಂದು ಕೈದೀವಿಗೆ.
ಪುಸ್ತಕ: ಶಾಸನ ಸರಸ್ವತಿ
ಲೇಖಕರು: ಡಾ.ಕೈದಾಳ ರಾಮಸ್ವಾಮಿ ಗಣೇಶ, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು
ಪ್ರಕಾಶಕರು: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, ೨೦೦೭-೨೦೦೮
ಪುಟಗಳು: ೧೯೦
ಬೆಲೆ: ರೂಪಾಯಿ ಎಪ್ಪತ್ತೈದು ಮಾತ್ರ

3 comments:

ಸಾಗರದಾಚೆಯ ಇಂಚರ said...

ನಿಮ್ಮ ಲೇಖನ ಓದಿ ನಾಯಿ ಸ್ಮಾರಕದ ಬಗೆಗೆ ಕುತೂಹಲ ಮೂಡಿತು
ಪುಸ್ತಕ ಸಿಕ್ಕಿದರೆ ಒಇದಬೇಕು ಅದರ ಬಗೆಗೆ

shivu.k said...

ಸರ್,

ನಾಯಿಗೆ ಸ್ಮಾರಕವಿರುವ ವಿಚಾರ ತಿಳಿದಿರಲಿಲ್ಲ. ಅದರ ಇತಿಹಾಸ, ಹೋರಾಟ ಸಾವು ಇತ್ಯಾದಿಗಳ ಮಾಹಿತಿಯನ್ನು ಒದಗಿಸಿದ್ದೀರಿ..ಧನ್ಯವಾದಗಳು.

balasubramanya said...

ನೀವು ಹೇಳಿರುವ ಮಾಹಿತಿ ನಿಜ ನಾನು ಈ ಸ್ಮಾರಕ ನೋಡಿದ್ದೇನೆ ಹಾಗು ಆ ಊರಿಗೂ ಸಹ ಭೇಟಿನೀದಿದ್ದೇನೆ.ಹಳೆಯದನ್ನು ನೆನಪು ಮಾಡಿಕೊಟ್ಟ ನಿಮಗೆ ಧನ್ಯವಾದಗಳು.