Friday, July 09, 2010

ಕಲಕೇತಯ್ಯ ಅಥವಾ ಕಲಕೇತ ಬೊಮ್ಮಯ್ಯ

ಕೈಯಲ್ಲಿ ಹಿಡಿದಿದ್ದ ಬೆತ್ತ ಗಾಳಿಯಲ್ಲಿ ವಿವಿಧ ಆಕೃತಿಗಳನ್ನು ರಚಿಸುತ್ತಾ ತಿರುಗುತ್ತಿತ್ತು. ಕಾಲಿನಲ್ಲಿದ್ದ ಕಿರುಗೆಜ್ಜೆಗಳು ಕಾಲಂದಿಗೆಯೊಂದಿಗೆ ಸೇರಿ ಘಲ್ ಘಲ್ ಶಬ್ದವನ್ನು ಕುಣಿತಕ್ಕೆ ಅನುಗುಣವಾಗಿ ಹೊರಹೊಮ್ಮಿಸುತ್ತಿದ್ದವು. ಮುಂದಲೆಯಲ್ಲಿ ಎತ್ತಿಕಟ್ಟಿದ ಮುಡಿ, ನೊಸಲಲ್ಲಿ ಧರಿಸಿದ ವಿಭೂತಿ, ಕಿವಿಗಳಲ್ಲಿ ಧರಿಸಿದ ಹಸಿರಿನೋಲೆ, ಕಾಲುಗಳಲ್ಲಿ ಗೆಜ್ಜೆ-ಅಂದಿಗೆ, ಎಡಗೈಯಲ್ಲಿ ಟಗರಿನ ಕೊಂಬು, ಬಲಗೈಯಲ್ಲಿ ಬೆತ್ತ ಮೈಮೇಲೆ ಕಾವಿಯ ಬಟ್ಟೆ ಧರಿಸಿದ ಕಲಕೇತಯ್ಯ ಮದ್ದಳೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಬೀದಿಬೀದಿಯ ಜನರೆಲ್ಲಾ ಭಲೇ...ಭಲೇ ಎಂದು ಕೂಗಿ ಆತನನ್ನು ಉರಿದುಂಬಿಸುತ್ತಿದ್ದರು. ಕಲಕೇತಯ್ಯ ಗತ್ತಿನ ನಡಿಗೆ ಹಾಕುತ್ತಾ ಬರುತ್ತಿದ್ದ ಹಾಗೆ ಯಾವಾವುದೋ ಕೆಲಸದ ಮೇಲೆ ಹೊರಟವರೆಲ್ಲಾ ಒಂದರಗಳಿಗೆ ನಿಂತು ಅವನ ಕುಣಿತವನ್ನು ನೋಡಿಯೇ ಮುನ್ನಡೆಯುತ್ತಿದ್ದರು. ಬೀದಿಯ ಕೊನೆಗೆ ಬಂದಾಗ ಕೇತಯ್ಯನ ಕುಣಿತಕ್ಕೆ ವಿರಾಮ. ನೋಡುತ್ತಿದ್ದ ಜನರೆಲ್ಲಾ ತಮಗೆ ತೋಚಿದಷ್ಟು ಹಣವನ್ನು ಕೇತಯ್ಯನ ಸಂಗಡಿಗ ಹಿಡಿದ ಜೋಳಿಗೆಯಲ್ಲಿ ಹಾಕುತ್ತಿದ್ದರು.

ತಮ್ಮ ಬಿಡಾರಕ್ಕೆ ಹಿಂದುರಿಗಿದ ನಂತರ ಕೇತಯ್ಯ ತನ್ನ ಅಂದಿನ ಗಂಜಿಯೂಟಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಎಣಿಸಿ ತೆಗೆದುಕೊಡು ಉಳಿದುದ್ದನ್ನು ಬಡವರಿಗೆ, ಅಂಗವಿಕಲರಿಗೆ ಹಂಚಿಬಿಡುವಂತೆ ತನ್ನ ಸಂಗಡಿಗರಿಗೆ ಹೇಳುತ್ತಾನೆ. ಸಂಗಡಿಗರೆಲ್ಲಾ ಕೆಲವೇ ಸಮಯದಲ್ಲಿ ಸಂಗ್ರಹಗೊಂಡ ಅಷ್ಟೂ ಹಣವನ್ನು ನಿರ್ಗತಿಕರಿಗೆ ಹಂಚಿಬರುತ್ತಾರೆ. ಬರುವಷ್ಟರಲ್ಲಿ ಸಿದ್ದಗೊಂಡಿದ್ದ ಗಂಜಿಯೂಟವನ್ನು ಉಂಡು ಎಲ್ಲರೂ ವಿಶ್ರಾಂತಿಯ ಮೊರೆ ಹೋಗುತ್ತಾರೆ.

ಸುಮಾರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದಲ್ಲಿದ್ದ ಕಿಳ್ಳೇಕ್ಯಾತ ಕುಲದ ಕಲಕೇತ ಬೊಮ್ಮಯ್ಯ ಎಂಬುವವನ ದಿನಚರಿಯಿದು. ತನ್ನ ಕುಲದ ವೃತ್ತಿಯಾದ ವೇಷದ ಕುಣಿತವನ್ನು ನಿಷ್ಠೆಯಿಂದ ನಡೆಸುತ್ತಾ, ಕುಣಿತ ನೋಡಿದವರಿಗೆ ಮನರಂಜನೆಯನ್ನು, ಅದರಿಂದ ಗಳಿಸಿದ ಹಣವನ್ನು ನಿರ್ಗತಿಕರಿಗೆ ಹಂಚುತ್ತಾ ನಿಸ್ಸಂಗ್ರಹ ಬುದ್ದಿಯಿಂದ ಬದುಕು ಸಾಗಿಸುತ್ತಿದ್ದ ಶಿವಭಕ್ತ ಹಾಗೂ ಬಸವಾನುಯಾಯಿ ಈತ.

ಕಿನ್ನರಯ್ಯ ಎಂಬ ಶರಣ ತಾನು ನಡೆಸುತ್ತಿದ್ದ ದಾಸೋಹದಿಂದ ಕಲ್ಯಾಣದಲ್ಲಿ ಅತ್ಯಂತ ಚಿರಪರಿಚಿತನಾಗಿರುತ್ತಾನೆ. ಒಂದು ದಿನ ಬಡವನೊಬ್ಬನು ಕಿನ್ನರಯ್ಯ ನಿತ್ಯಪಡಿಕೊಡುವನೆಂದು ತಿಳಿದು ಅದಕ್ಕಾಗಿ ಅವನಲ್ಲಿಗೆ ಹೊರಟಿರುತ್ತಾನೆ. ದಾರಿಯಲ್ಲಿ ಸಿಕ್ಕ ಕೇತಯ್ಯನು ಆ ಬಡವನ ಕಷ್ಟವೇನೆಂದು ತಿಳಿದುಕೊಂಡು, ಅಂದು ತಾನು ಗಳಿಸಿದ್ದೆಲ್ಲವನ್ನೂ, ತನಗೂ ಒಂದಷ್ಟು ಇಟ್ಟುಕೊಳ್ಳದೆ ಆ ಬಡವನಿಗೆ ದಾನ ಮಾಡಿಬಿಡುತ್ತಾನೆ. ಆತ ಕೊಟ್ಟಿದ್ದೆಲ್ಲವನ್ನೂ ಆ ಬಡವ ಹೊರಲಾರದೆ ತನ್ನಿಂದ ಆದಷ್ಟನ್ನು ಹೊತ್ತುಕೊಂಡು ದಾರಿಯಲ್ಲಿ ಬರುವಾಗ ಬಸವಣ್ಣ ಮತ್ತು ಕಿನ್ನರಯ್ಯ ಅವರನ್ನು ಬೇಟಿ ಮಾಡಿ ಕೇತಯ್ಯನ ದಾನಗುಣವನ್ನು ಪ್ರಶಂಸಿಸುತ್ತಾನೆ. ಬಸವ ಬೇರೊಬ್ಬ ಆಳನ್ನು ಕಳುಹಿಸಿ ಉಳಿದ ಹೊನ್ನನ್ನು ಆ ಬಡವನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಬಸವಣ್ಣ ಕಿನ್ನರಯ್ಯನಲ್ಲಿ ಕೇತಯ್ಯನ ನಿಸ್ಸಂಗ್ರಹಬುದ್ದಿಯನ್ನು ಕೊಂಡಾಡುತ್ತಾನೆ. ಅದನ್ನು ಕೇಳಿದ ಕಿನ್ನರಯ್ಯ ‘ಅಯ್ಯೋ ನಾನು ಕೊಡುವ ಪಡಿಯೇ ದೊಡ್ಡದೆಂದು ನಾನೆಂದುಕೊಂಡಿದ್ದೆ. ಆದರೆ ಇಲ್ಲಿ ನನಗೊಬ್ಬ ಗುರುವಿದ್ದಾನೆ’ ಎಂದುಕೊಂಡು ಕೇತಯ್ಯನಲ್ಲಿಗೆ ಬಂದು ಅವನನ್ನು ಸ್ತುತಿಸುತ್ತಾನೆ.

ಕೇತಯ್ಯನ ಹನ್ನೊಂದು ವಚನಗಳು ದೊರಕಿವೆ. ಆತನ ಅಂಕಿತ ‘ಮೇಖಲೇಶ್ವರಲಿಂಗ’. ‘ಎನ್ನ ತಗರು ಆರು ಸನ್ನೆಗೆ ಏರದು, ಮೂರು ಸನ್ನೆಗೆ ಓಡದು, ಲೆಕ್ಕವಿಲ್ಲದ ಸನ್ನೆಗೆ ಧಿಕ್ಕರಿಸಿ ನಿಲುವುದು’, ‘ಕಾಲನಾಲ್ಕು ಮುರಿದು, ಕೋಡೆರಡ ಕಿತ್ತು, ಆರಡಗಿತ್ತು ತಗರಿನ ಹಣೆಯಲ್ಲಿ, ಮೂರು ಹೋಯಿತ್ತು ತಗರಿನ ಕೋಡೆರಡರಲ್ಲಿ, ಎಂಟು ಹೋಯಿತ್ತು ಕಾಲು ನಾಲ್ಕರಲ್ಲಿ, ತಗರಿನ ಜೀವ ಉಭಯದ ಸನ್ನೆಯಲ್ಲಿ ಹೋಯಿತ್ತು’ ಎನ್ನುವ ಮೊದಲಾದ ಬೆಡಗಿನ ವಚನಗಳು ‘ಪ್ರಥಮದಲ್ಲಿ ರುದ್ರತ್ವ, ಅದು ಘಟಿಸಿದಲ್ಲಿ ಈಶ್ವರತ್ತ, ಈ ಎರಡು ಕೂಡಿದಲ್ಲಿ ಸದಾಶಿವತತ್ವ’ ಎಂಬ ತ್ರಿವಿಧ ವಚನಗಳು ಗಮನಸೆಳೆಯುತ್ತವೆ. ಸ್ವತಃ ಬಸವಣ್ಣನೇ ತನ್ನೊಂದು ವಚನದಲ್ಲಿ ‘ಕಲಕೇತನಂತಪ್ಪ ತಂದೆ ನೋಡೆನೆಗೆ’ ಎಂದು ಕೇತಯ್ಯನನ್ನು ನೆನೆದಿದ್ದಾನೆ.

2 comments:

ಸಾಗರದಾಚೆಯ ಇಂಚರ said...

ಇವರ ಬಗ್ಗೆ ಏನೂ ತಿಳಿದಿರಲಿಲ್ಲ
ಇವರು ಬರೆದ ಸಾಲುಗಳು ಅದ್ಭುತ
ಪರಿಚಯ ಮಾಡಿಸಿದ್ದಕ್ಕೆ ನಮನಗಳು

ವಸಂತ್ said...

ತುಂಬಾ ಚೆನ್ನಾಗಿದೆ.

ವಸಂತ್