Wednesday, December 29, 2010

ಕುವೆಂಪು ಜನುಮದಿನ: ಒಂದಷ್ಟು ಕವಿತೆಗಳ ಮೆಲುಕು

ಕುವೆಂಪು
ಹಕ್ಕಿಯುಲಿಗಳುಕ್ಕುವಿಂಪು
ಸುಗ್ಗಿದಳಿರ ಸಗ್ಗಸೊಂಪು
ಹೊಸಹೊಂಗೆಯ ನೆಳಲ ತಣ್ಪು
ಚಿಂಗೆನ್ನೆಯ ಚೆಲುವು ನುಣ್ಪು
ಸುರಹೊನ್ನೆಯ ಗೊಟ್ಟಿಗಂಪು
ಉಸಯಾಸ್ತದ ಬೈಗುಗೆಂಪು
ನಿರ್ಝರಿಣಿಯ ನೆರೆಯ ತಿಣ್ಪು
ಗಿರಿಶೃಂಗದ ಬರ್ದಿಲ ಬಿಣ್ಪು
ಗಡಿಕಾಣದ ಕಡಲ ಗುಣ್ಪು
ಉಡು ರವಿ ಶಶಿ ನಭದ ಪೆಂಪು
ಆದಿ ಆತ್ಮದ ಸಿರಿ ಅಲಂಪು
ಎಲ್ಲವೊಂದುಗೂಡಲೆಂದು
ವಿಧಿಯ ಮನಸು ಕಡೆದ ಕನಸು
ಕಾಣ್ಬ ಕಣಸೆ, ಕಾಣ್: ಕುವೆಂಪು!
ಭಕ್ತಿಯಡಿಯ ಹುಡಿ - ಕುವೆಂಪು!
ಗುರುಹಸ್ತದ ಕಿಡಿ - ಕುವೆಂಪು!
ನುಡಿರಾಣಿಯ ಗುಡಿ - ಕುವೆಂಪು!
ಸಿರಿಗನ್ನಡ ಮುಡಿ - ಕುವೆಂಪು!
ಇರ್ದುಮಿಲ್ಲದೀ ಕುವೆಂಪು!
ಶ್ರೀ ರಾಮಾಯಣ ದರ್ಶನಂ
ಪಂಪನಾ ಗಾಂಭೀರ‍್ಯ
ರನ್ನ ವೀರ‍್ಯ
ಜನ್ನನಾ ಋಜು ಕುಶಲ
ಕಥನಕಾರ‍್ಯ
ನಾಗವರ‍್ಮನ ಕಲ್ಪನಾ
ಕಂದಂಬರೀ ಚಂದ್ರಿಕಾ
ಸ್ವಾಪ್ನ ಸೌಂದರ‍್ಯ
ರಾಘವಾಂಕನ ನಾಟಕೀಯ ಚಾತುರ‍್ಯ
ನಾರಣಪ್ಪನ ದೈತ್ಯರುಂದ್ರತಾ ದಿವ್ಯಧೈರ‍್ಯ
ಲಕ್ಷ್ಮೀಶನಾ ಮೃದುಲ ಮಂಜುಲ ನಾದಮಾದುರ‍್ಯ
ರತ್ನಾಕರನ ಯೋಗದೃಷ್ಟಿಯ ಸಾಗರೌದಾರ‍್ಯ
ಸಕಲ ಛಂದಸ್ ಸರ್ವ ಮಾರ್ಗ ಶೈಲಿಗಳಮರ ಐಶ್ವರ‍್ಯ
ಸರ್ವವೂ ಸಂಗಮಿಸಿದೀ ’ದರ್ಶನಂ’ ತಾನಕ್ಕೆ ಕೃತಿಗಳಾಚಾರ‍್ಯ!
ಅನಾದಿಕವಿ ಊವಾಚ
ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನೆಗೆ ಬಾಹುಮಾತ್ರಗಳಲ್ತೆ?
ಬಹು ನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೂನುಂ ನಾನೆಯೆ, ಕುವೆಂಪು!
ನಾನೊರೆದುದಲ್ಲದೆಯೆ ನೀನ್ ಬರೆದುದೇನ್ ವತ್ಸ?
ನಿನ್ನಹಂಕಾರದಲ್ಪತೆ ಗೆಯ್ದ ದೋಷಗಳ್, ಕೇಳ್,
ನಿನ್ನವಲ್ಲದೆ ಕೃತಿಯ ಪೆರ‍್ಮೆಗೇಂ ಕವಿಯೆ ನೀನ್?
ಏಳ್, ಏಳ್! ತೊರೆ ಆ ಅವಿದ್ಯೆಯಂ! ನತೋರ್ಪೆನದೊ
ಕಾಣ್!
ಪೂರ್ಣದೃಷ್ಟಿಯ ಮಹಾಕಾದಂಬರಿ
ಸರಸ್ವತಿಯ ಸಹಸ್ರಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ ಕಾದಂಬರಿಯೆ ಮಹಾಸದನ!
ಒಂದಷ್ಟು ಚುಟುಕಗಳು
ಮಠಾಧಿಪತಿ
ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ‍್ಮವ ಮೆರೆವರ ನೋಡಯ್ಯ!
ದೆವ್ವ-ದೇವ
ಕಾಡಿಸುವ ಕಾಡುದೇವತೆಗೆ ಹೊಗಳಿಕೆ ಬೇಕು;
ಪ್ರೇಮನಿಧಿಯಾಗಿರುವ ದೇವರಿಗೊಲುಮೆ ಸಾಕು.
ಕಲೆ-ನೆಲೆ
ಮಾತು ನನ್ನ ಕಲೆ
ಮೌನ ನನ್ನ ನೆಲೆ
ವ್ಯಾಕರಣ
ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು:
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!
ಅವಿದ್ಯಾ
ಆಶ್ಚರ್ಯಗಳ ಮಧ್ಯೆ
ಪ್ರಶ್ನಚಿಹ್ನೆ;
ಸರ್ವವನು ಸುತ್ತಿಹುದು
ಒಂದು ಸೊನ್ನೆ!
ದೊರೆ ಮತ್ತು ಪುರೋಹಿತ
ಕೂಡಿದಾಗ ಹುಟ್ಟಿತು ಮತ!
ಮೊದಲ ಠಕ್ಕ ಮೊದಲ ಬೆಪ್ಪ
ಕೂಡಿದಾಗ ಮೂಡಿತು ಮತ!
ಯಾವುದನೃತ? ಯಾವುದ ಋತ?
ಅಂತೂ ನಡೆಯಿತದ್ಭುತ!
(ಭಾರತ-ಚೀನಾ ಯುದ್ಧಕಾಲದಲ್ಲಿ)
ಚೀಣಿಯರ ಧಾಳಿ
ಬರಿ ಹಿಮದ ಧೂಳಿ!
ತೂರಿ ಹೋಗುವುದು
ಸ್ವಲ್ಪ ತಾಳಿ!
ಆದರೀ ಕರಾಳಿ
ಇಂಗ್ಲೀಷಿನ ಗಾಳಿ
ಬೀಸಿ ಹೋಗುವುದೆ?
ಸ್ವಲ್ಪ ಕೇಳಿ!
ಸಾಕು, ತಾಯೀ, ಸಾಕು, ಈ ಸಾವು, ಈ ನೋವು;
ಚೀಣೀ ಪಿಶಾಚಿಯಿಂ ಬುದ್ಧಿ ಕಲಿತೆವು ನಾವು!
ಚೀಣೀ ರಾಕ್ಷಸ ದಳವನು ಸೀಳಿ
ಓ ಬಾ ಬಾ ಬಾ , ಹೇ ಮಹಾ ಕಾಳಿ!

ರಣ! ರಣ! ರಣ! ರಣ!
ಹಿಮಾಲಯದಿ ರಕ್ಕಸ ಗಣ
ಕುಣಿಯುತಿಹುದು ರಿಂಗಣ!
ಕೊಡು ಹಣ; ತೊಡು ಪಣ;
ತೀರಿಸು ನಾಡೃಣ!
ಇಲ್ಲಗೈ ನಿನ್ನ ನೀನು
ದೇವರಲ್ಲದುಳಿವುದೇನು?
ಚುನಾವಣೆ
ಅಂದು ಹೂವಿನ ಹಾರ
ಇಂದು ಕಲ್ಲೇಟು:
ಏನಿದೀ ಗ್ರಹಚಾರ?
ಹಾಳು ಈ ಓಟು!
ಕೇಂದ್ರ ಆಕಾಶವಾಣಿಯಲ್ಲಿ ಸುದ್ದಿ
ಹತ್ತುಸಾವಿರ ಜನರು ಅಮರನಾಥದ ಗುಹೆಗೆ
ಯಾತ್ರೆ ದರ್ಶನವಿತ್ತು ಸಂದರ್ಶಿಸಿದರಂತೆ
ಐಕಿಲಿನ ಶಿವಲಿಂಗವನು ಪೂಜಿಗೈಯಲ್ಕೆ
ಮತ್ತೆ ಅಚ್ಚರಿಯೆ ಅನ್ನ ಸಮಸ್ಯೆ ಈ ದೇಶಕ್ಕೆ?
[ಆಕರ : ಕುವೆಂಪು ಸಮಗ್ರಕಾವ್ಯ ಸಂಪುಟಗಳು ಮತ್ತು ಶ್ರೀ ರಾಮಾಯಣ ದರ್ಶನಂ]

3 comments:

Unknown said...

ಕುವೆಂಪು ಕವನದ ಕತ್ೃ ಯಾರು.?

Unknown said...

ಸರ್ ಕುವೆಂಪು ಕವನದ ಕತ್ೃ ಯಾರು.?

Unknown said...

ಕುವೆಂಪು ಕವನದ ಕರ್ತೃ ಸ್ವತಃ ಕುವೆಂಪು ಅವರೇ!!!