Monday, July 11, 2011

ಕವಿಕುಮಾರ ಸಂಭವಂ! ಪೂರ್ಣಚಂದ್ರಾವತಾರ

’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ ಮೂಡಿವೆ. ಮೊದಲಿಗೆ ತೀವ್ರವಾಗಿ ನನ್ನ ಗಮನ ಸೆಳೆದ ಕವಿತೆ ’ಗರ್ಭಗುಡಿ’. ತನ್ನ ಸತಿ ಗರ್ಭಿಣಿ ಎಂದು ತಿಳಿದಾಗ ಕವಿಯ ಮನಸ್ಸಿನಲ್ಲಾದ ಸಂತೋಷ ಭಾವ ಕವನ ರೂಪದಲ್ಲಿ ಸಾಕ್ಷಾತ್ಕಾರಗೊಂಡಿದೆ. ಈ ಕವಿತೆಯ ಬಗ್ಗೆ ಹಿರಿಯರಾದ ಎಸ್.ವಿ.ಪರಮೇಶ್ವರಭಟ್ಟರು ತನ್ನ ಸತಿ ಗರ್ಭಿಣಿಯಾದಾಗ ಗರ್ಭದಲ್ಲಿ ಅರ್ಭಕನಿರುವುದನ್ನು ಅರಿತವರು ತನ್ನ ಸತಿಯನ್ನು ’ಗರ್ಭಗುಡಿ’ಯೆಂದೇ ಪರಿಗಣಿಸುತ್ತಾರೆ. ’ತೇಜಸ್ವಿ ಪೂರ್ಣಚಂದ್ರ ಶರೀರೆ ಶಿವಕೃತಿ ಕಲಾರಂಗಮೆನಗೆ ನೀನ್ ಓ ನೀರೆ!’ ತಮ್ಮ ಸತಿಯನ್ನು ಯಾವ ದಿವ್ಯೌನ್ನತ್ಯದಲ್ಲಿ ಕಾಣುತ್ತಿದ್ದಾರೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬಹುದು’ ಎಂದು ಬರೆದಿದ್ದಾರೆ. ’ಪ್ರಿಯ ಸತಿಗೆ’ ಎಂಬ ಕವಿತೆಯಲ್ಲಿ ಕುವೆಂಪು ’ಹೇಮಾ’ ಎಂಬುದನ್ನು ’ಹೇ ಮಾ ಸತಿಯೆ’ ಎಂದು ಬರೆದಿರುವುದರಲ್ಲಿಯೂ, ಸತಿಯನ್ನು ’ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಛಕ್ತಿ; ಕಲೆಗೆ ವಿದ್ಯಾಶಕ್ತಿ; ಪ್ರಾಣಕೆ ಪ್ರೇಮಶಕ್ತಿ!’ ಎಂದು ಸಂಬೋಧಿಸಿರುವುದರಲ್ಲಿಯೂ ಈ ಔನ್ನತ್ಯವನ್ನು ಕಾಣಬಹುದಾಗಿದೆ.
ತಮ್ಮ ಸತಿ ಶಾರದಾದೇವಿಯವರನ್ನು ದೇವಿಯ ರೂಪದಲ್ಲಿ ಕಂಡವರು ಶ್ರೀ ರಾಮಕೃಷ್ಣ ಪರಮಹಂಸರು. ಅವರ ಗೋತ್ರಸಂಜಾತರಾದ (ಶ್ರೀರಾಮಕೃಷ್ಣ ಭಗವದ್‌ಗೋತ್ರಸಂಜಾತನಂ - ಶ್ರೀರಾಮಯಾಣದರ್ಶನಂ) ಕುವೆಂಪು ಅವರಿಗೆ ಅವರ ಶ್ರೀಮತಿಯೂ ಅಷ್ಟೆ, ಕವಿಯ ಶಿವಕೃತಿಗೆ ಕಲಾರಂಗವಾಗಿ ಕಾಣುತ್ತಾರೆ!
ಬಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ
ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ; ಪೂಜ್ಯೆ
ನೀನೆನಗೆ. ಓ ಲಕ್ಷ್ಮಿ, ಓ ಸೃಷ್ಟಿಸಾಮ್ರಾಜ್ಯೆ,
ನಿನ್ನ ಕರ್ಮದ ಮಹಿಮೆ ನಿನಗರಿಯದಿದೆ: ಬಳ್ಳಿ

ಹೂ ಹಡೆವುದಲ್ತೆ? ಸಾಮಾನ್ಯ ಪಾಮರ ದೃಷ್ಟಿಕಾಣದದರಲಿ ಕೃತಿರಹಸ್ಯದ ಪವಾಡಮಂ;ಬ್ರಹ್ಮಶಿಲ್ಪಿಯ ಪರಮ ಕಲೆಯ ಕೈವಾಡಮಂಕಂಡು ರೋಮಾಂಚ ರಸವಶನು ಕವಿ! ತವ ಸೃಷ್ಟಿ
ಕವಿಕೃತಿಗೆ ಕೀಳಲ್ಲ. ಪೇಳ್ವವಂಗರಿಯದಿರೆ
ಕೇಳ್ವ ರಸಿಕಂಗರಿಯದಿಹುದೆ ವರಕೃತಿ ಮಹಿಮೆ?
ತನ್ನ ತಾನರಿಯದು ಮಹತ್ತು, ಕೈಮುಗಿಯದಿರೆ
ಜಗತ್ತು: ರಾಮಾನುಚರನಾಂಜನೇಯಂಗುಪಮೆ!

ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ,ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ!
ದಿವ್ಯಶಿಶುವನ್ನು ತನ್ನುದರದಲ್ಲಿ ಧರಿಸಿ ನಿಂತಿರುವ ಗರ್ಭಿಣಿ ದೇವಾಲಯದಂತೆಯೇ ಕವಿಗೆ ಕಂಡು ಪೂಜನೀಯಳಾಗಿದ್ದಾಳೆ. ಆಕೆ ಲಕ್ಷ್ಮಿ. ಸೃಷ್ಟಿಯ ಸಾಮ್ರಾಜ್ಯೆ! ಆದರೆ ಅದರ ಮಹತ್ವ ಆಕೆಗೆ ಅರಿವಿಲ್ಲ; ಗರ್ಭವತಿಯಾಗುವುದು, ಮಗುವಿಗೆ ಜನ್ಮ ನೀಡುವುದು ಬಳ್ಳಿ ಹೂವನ್ನು ಬಿಡುವಷ್ಟೇ ಸಹಜಕ್ರಿಯೆಯಂತೆ ಆಕೆ ಭಾವಿಸುತ್ತಾಳೆ. ಬೇರೆಯವರು ಕೈ ಎತ್ತಿ ಮುಗಿಯುವವರೆಗೂ ಮಹತ್ತಿಗೂ ತನ್ನ ಮಹತ್ವ ಗೊತ್ತಿರುವುದಿಲ್ಲವಂತೆ! ಶಿಶುಜನನವಾಗುವುದು, ಹೂವು ಬಳ್ಳಿಯಲ್ಲಿ ಅರಳುವುದು ಕೃತಿರಹಸ್ಯದ ಪವಾಡವಿದ್ದಂತೆ. ಆ ಕೃತಿ ರಹಸ್ಯದ ಪವಾಡ ಪಾಮರದೃಷ್ಟಿಗೆ ಕಾಣುತ್ತದೆಯೇ? ಕಾಣುವುದಿಲ್ಲ. ಆದರೆ ಕವಿ! ಬ್ರಹ್ಮಶಿಲ್ಪಿಯ ಪರಮ ಪವಿತ್ರವಾದ ಕಲೆಯ ಕೈವಾಡವನ್ನು ಕಂಡು, ದರ್ಶನಗೊಂಡು ರೋಮಾಂಚನಾಗುತ್ತಾನೆ, ರಸವಶನಾಗುತ್ತಾನೆ.

ನರರೂಪದಲ್ಲಿ ಮಾತ್ರವಲ್ಲ; ಕೃತಿರೂಪದಲ್ಲೂ ಭಗವಂತನ ಅವತಾರವಾಗುತ್ತದೆ ಎಂಬ ದರ್ಶನದ ಕವಿ ಕುವೆಂಪು. ಶಿಶುಜನನ ಸೃಷ್ಟಿಯ ಬೆರಗು. ಅದು ಕವಿಕೃತಿಗೆಂದೂ ಕೀಳಲ್ಲ. ಆದರೆ ಅಂತಹ ಅದ್ಭುತವಾದ ಮಹತ್ವ ಅದರ ಕರ್ತೃವಿಗೇ ಕಾಣುವುದಿಲ್ಲ! ಆದರೆ ರಸಿಕನಾದ ಕವಿಗೆ, ಸಹೃದಯನಿಗೆ ಅದು ಕಾಣುತ್ತದೆ. ಯಾವುದು ಯಾವುದಕ್ಕೆ ಹೋಲಿಕೆ. ರಾಮನನ್ನು ಅನುಸರಿಸಿದವರೆಲ್ಲಾ ಅಂಜನೇಯನಿಗೆ ಉಪಮೆಯೇ?

ಕವನದ ಕೊನೆಯ ಎರಡು ಸಾಲುಗಳಂತು ದರ್ಶನದಿಂದ ಆವಿರ್ಭವಿಸಿದಂತವು. ಸಾಮಾನ್ಯವಾಗಿ ಹೆಂಡತಿಯನ್ನು ಅರ್ಧಾಂಗಿ ಎಂದು ಕರೆಯುತ್ತಾರೆ. ಇಲ್ಲಿ ಕವಿ ’ಪೂರ್ಣಾಂಗಿ’ ಎಂಬ ಕವಿಯೆ ಸಂಬೋಧನೆ ವಿಶೇಷವಾದುದು. ತಮ್ಮ ಪೂರ್ಣಾಂಗಿ, ಮಂಗಳಕೃತಿಗೆ ಕಲಾರಂಗವೆಂದು ಭಾವಿಸುತ್ತಾರೆ. ’ತೇಜಸ್ವಿ ಪೂರ್ಣಚಂದ್ರ ಶರೀರೆ’ ಎಂಬ ಮಾತು ಗರ್ಭವತಿಯಾದ್ದರಿಂದ ನಿನ್ನ ಶರೀರ ಪೂರ್ಣಚಂದ್ರ ಸಮವಾದ ತೇಜಸ್ಸಿನಿಂದ ಕೂಡಿದೆ ಎಂಬುದನ್ನು ಧ್ವನಿಸುತ್ತದೆ. ಆದರೆ ದರ್ಶನದ ಅಂತರತಮನ್ನು ಅರಿತವರಾರು? ಕವಿಗೆ ತನ್ನ ಪೂರ್ಣಾಂಗಿಯ ಉದರದಲ್ಲಿರುವ ಶಿಶು ಗಂಡು ಎಂಬುದು ದರ್ಶನವಾಗಿತ್ತೋ ಏನೋ!? ಕವಿತೆ ಪ್ರಾರಂಭದಲ್ಲಿಯೇ ’ದಿವ್ಯಾರ್ಭಕಂ’ ಎಂಬ ಮಾತು ಬಂದಿದೆ. ಅರ್ಭಕ ಎಂಬುದಕ್ಕೆ ಸಣ್ಣದು; ಚಿಕ್ಕದು, ಮೊಲೆಗೂಸು, ಎಳೆಯ ಕೂಸು ಎಂಬ ಅರ್ಥಗಳ ಜೊತೆಗೆ ಪುಲ್ಲಿಂಗ ಭಾವವನ್ನು ಸ್ಫುರಿಸುವ ಪುಟ್ಟ ಬಾಲಕ, ಸಣ್ಣ ಹುಡುಗ ಮೊದಲಾದ ಅರ್ಥಗಳೂ ಇವೆ. ಮುಂದೆ ಹುಟ್ಟಲಿರುವ ಕೂಸಿಗೆ ’ಪೂರ್ಣಚಂದ್ರ ತೇಜಸ್ವಿ’ ಎಂಬ ಹೆಸರನ್ನು ಮೊದಲೇ ಸೂಚಿಸಿರುವಂತೆ ಕಾಣುತ್ತದೆ! ಮುಂದೆ ಮಗು ಹುಟ್ಟಿದಾಗ ’ಕುಮಾರ ಸಂಭವ’ ಕವಿತೆಯಲ್ಲಿ ’ಪ್ರೇಮಾಂಗಿನಿಯೇ ನನ್ನ ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ: ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ!’ ಎಂಬ ಮಾತು ಬರುತ್ತದೆ.
ಈ ಕವಿತೆಯ ಶಿಲ್ಪದ ಬಗ್ಗೆ ಒಂದೆರಡು ಮಾತು ಹೇಳಬೇಕೆನ್ನಿಸುತ್ತದೆ. ನಾಲ್ಕು ನಾಲ್ಕು ಸಾಲುಗಳಂತೆ ಮೊದಲ ಮೂರು ಪದ್ಯಗಳು ಹಾಗೂ ಕೊನೆಯಲ್ಲಿ ಎರಡು ಸಾಲುಗಳು ಬಂದಿರುತ್ತವೆ. ಮೊದಲ ಮೂರೂ ಪದ್ಯಗಳ ಒಟ್ಟು ದರ್ಶನ ಕೊನೆಯ ಎರಡು ಸಾಲಿನಲ್ಲಿ ಕೆನೆಗಟ್ಟಿದಂತಿದೆ. ಮೊದಲ ಮೂರು ಪದ್ಯಗಳನ್ನು ಬೇರೆ ಬೇರೆಯಾಗಿ ಓದಲು ಸಾಧ್ಯವೇ ಇಲ್ಲ! ಮೊದಲ ಪದ್ಯದ ಕೊನೆಯ ಸಾಲಿನ ಕೊನೆಯ ಪದ ’ಬಳ್ಳಿ’ ಎಂಬುದು ಅರ್ಥವಾಗಬೇಕಾದರೆ ಎರಡನೆಯ ಪದ್ಯದ ಮೊದಲ ಸಾಲಿನ ’ಹೂ ಹಡೆವುದಲ್ತೆ?’ ಎಂಬುದನ್ನು ಓದಿಕೊಳ್ಳಲೇ ಬೇಕು. ಹಾಗೆಯೇ ಎರಡನೆಯ ಪದ್ಯದ ಕೊನೆಯ ಸಾಲಿನ ’ತವ ಸೃಷ್ಟಿ’ ಎಂಬುದು ಮೂರನೆಯ ಪದ್ಯದ ಮೊದಲ ಸಾಲಿನಲ್ಲಿ ’ಕವಿಕೃತಿಗೆ ಕೀಳಲ್ಲ’ ಎಂದು ಮುಂದುವರೆಯುತ್ತದೆ. (ಈ ರೀತಿಯ ಪದ್ಯದಿಂದ ಪದ್ಯಕ್ಕೆ ಮುಂದುವರೆಯುವ ಪದ್ಧತಿ ಪಂಪನ ಕಾವ್ಯದಲ್ಲೂ ಇದೆ. ಪಂಪನಲ್ಲಿ ಕಂದ ಪದ್ಯದಿಂದ ಮತ್ತೊಂದು ಕಂದ ಪದ್ಯಕ್ಕೆ, ಕೆಲವೊಮ್ಮೆ ಪದ್ಯದಿಂದ ಗದ್ಯಕ್ಕೆ(ವಚನಕ್ಕೆ), ಗದ್ಯದಿಂದ ಪದ್ಯಕ್ಕೆ, ವೃತ್ತದಿಂದ ವೃತ್ತಕ್ಕೆ ಈ ರೀತಿಯ ಮುಂದುವರಿಕೆಯನ್ನು ಕಾಣಬಹುದು.)

ಜೇನಾಗುವ ಸಂಕಲನದ ಇನ್ನೊಂದು ಕವಿತೆ ’ಬಿನ್ನಯ್ಸಿದಳು ತಾಯಪ್ಪಳಿಂತು’ ಎಂಬುದು. ತನ್ನೊಡಲಿನಲ್ಲಿರುವ ಕಂದನ ಬಗ್ಗೆ ಕನಸು ಕಾಣುವ ತಾಯಿಯ ಚಿತ್ರ. ತನ್ನ ಮಗ ಹೇಗಿರಬೇಕು? ಏನಾಗಬೇಕು? ಎಂದು ಸಂಕಲ್ಪಿಸುವ ಚಿತ್ರ. ಗಮನಿಸಬೇಕು. ಈ ಕವಿತೆಯುದ್ದಕ್ಕೂ ಕವಿ ಮಗುವನ್ನು ಪುಲ್ಲಿಂಗವಾಚಿಯಾಗಿಯೇ ಸಂಬೋಧಿಸಿದ್ದಾರೆ. ’ಕಳುಹು ಆವೇಶದ ಪುತ್ರನನು’ ಎಂದು ನೇರವಾಗಿಯೇ ಪ್ರಾರ್ಥಿಸಿರುವ ಸಾಲುಗಳುಂಟು. ಈ ಕವಿತೆಯ ವಿಶೇಷವೆಂದರೆ, ಇಂದು ಈ ತುದಿಯಲ್ಲಿ ನಿಂತು ನೋಡುವಾಗ ಕುವೆಂಪು ದಂಪತಿಗಳ ಸಂಕಲ್ಪ ಮತ್ತು ತೇಜಸ್ವಿ ಬದುಕಿದ ರೀತಿಯ ನಡುವೆ ಸೂಕ್ಷ್ಮತೆರನಾದ ಸಂಬಂಧವಿರುವುದು! ಈ ಪದ್ಯಕ್ಕೆ ಯಾವುದೇ ವಿವರಣೆಯ ಅಗತ್ಯವೇ ಇಲ್ಲ. ಅಷ್ಟೊಂದು ಸರಳವಾದ ಪದಗಳಲ್ಲಿ ಸಂಕಲ್ಪಗೊಂಡ ಪ್ರಾರ್ಥನೆ ಇದಾಗಿದೆ. ಅದನ್ನು ಇಡಿಯಾಗಿ ಇಲ್ಲಿ ಉಲ್ಲೇಖಿಸಬಯಸುತ್ತೇನೆ.
ಕಳುಹಿಸು ಯೋಗ್ಯನನು,ಹೇ ಗುರುವೇ,ಕಳುಹಿಸು ಭಾಗ್ಯನನು,ಶ್ರೀ ಗುರುವೇ. 
ಕಳುಹಿಸು ಮಂಗಳ ಚೆಲುವನನು,
ಲೋಕವನೊಲಿವನನು;
ಬಾಳಿನ ಬವರವ ಗೆಲುವನನು,

ನಿನ್ನೊಳೆ ನಿಲುವನನು.-
ಕಳುಹು ಆವೇಶದ ಪುತ್ರನನು,
ದೇಶದ ಮಿತ್ರನನು;
ಕಳುಹು ಪವಿತ್ರ ಚರಿತ್ರನನು,
ಗೌರವ ಪಾತ್ರನನು.-
ಕಳುಹು ಕಲಾರಸ ಭಕ್ತನನು
ಕಾವ್ಯಾಸಕ್ತನನು;
ಕನ್ನಡ ಸೇವಾ ಶಕ್ತನನು

ನಿನ್ನಡಿ ಯುಕ್ತನನು.-
ಕಳುಹು ನಿರಂಕುಶ ಮುಕ್ತನನು,
ಮೌಢ್ಯ ವಿರಕ್ತನನು;
ಕಳುಹು ಮನೋ ಸ್ವಾತಂತ್ರ್ಯನನು,

ಶಿವ ಪರ ತಂತ್ರನನು.-
ಕಳುಹಿಸು ನಿತ್ಯ ನವೀನನು,
ಸತ್ಯಾಧೀನನನು;

ಮಹಿಮೆಗೆ ಮಾತ್ರವೆ ದೀನನನು,
ಕವಿ ಸಮಗಾನನನು.-
ಕೃಪೆ ಅನಂತಕೆ ಪಾತ್ರನನು,
ಪ್ರಿಯ ರುಚಿ ಗಾತ್ರನನು;
ಕಳುಹು ಸದಿಚ್ಛಾ ಸೂತ್ರನನು,
ಚೇತನ ನೇತ್ರನನು!

ಕುವೆಂಪು ದಂಪತಿಗಳ ಸಂಕಲ್ಪದಂತೆ, ಪ್ರಾರ್ಥನೆಯಂತೆ, ಆಶಯದಂತೆಯೇ ’ಕುಮಾರ ಸಂಭವ’ ಆಗುತ್ತದೆ. ಅದೇ ಹೆಸರಿನ ಕವಿತೆಯಲ್ಲಿ ಕುವೆಂಪು ಪುತ್ರೋದಯದ ಸಂತೋಷವನ್ನು ಉತ್ಕಟವಾಗಿ ಬಿಡಿಸಿಟ್ಟಿದ್ದಾರೆ. ಐದೈದು ಮಾತ್ರೆಗಳ ನಾಲ್ಕು ನಾಲ್ಕು ಗಣಗಳ ಪಂಕ್ತಿಗಳು ಕವಿತೆಗೆ ವಿಶಿಷ್ಟವಾದ ಆವೇಗವನ್ನು ತಂದುಕೊಟ್ಟಿವೆ. ಕವಿಯ ಸಂತೋಷ, ಉದ್ವೇಗ ಪ್ರತಿ ಪದದಲ್ಲೂ, ಪಂಕ್ತಿಯಲ್ಲೂ ಮಡುಗಟ್ಟಿವೆ!
ಕೇಳ್ದೊಡನೆ ಚಿಮ್ಮಿತಾನಂದದೋಕಳಿಬುಗ್ಗೆ
ತುಂಬಿದೆದೆ ಬಾನಲ್ಲಿ ಮಳೆಯ ಬಿಲ್ಲನು ಕಟ್ಟಿ!
ನಂದನ ವನದ ಕಲ್ಪತರು ಶಿಖರವನು ಮುಟ್ಟಿ
ಕವಿಯ ಕಲ್ಪನೆ, ಇಂದ್ರನಮರಾವತಿಗೆ ಲಗ್ಗೆ
ನುಗ್ಗಿತೆನೆ, ನೆಗೆಯುತೈರಾವತದ ಬೆನ್ಗೇರಿ,
ದೇವಗಂಗೆಯ ಮೀಯುತಮೃತದ ಮಡುವನೀಂಟಿ,
ದಿಕ್ಪಾಲ ಪುರಗಳಂ ಚರಿಸುತೆಲ್ಲೆಯ ದಾಂಟಿ,
ಮೈಮರೆತುದೆನ್ನ ಗುರುದೇವನಂಘ್ರಿಯ ಸಾರಿ
ನಮಿಸುತೆ ಕೃತಜ್ಞತಾ ಭಕ್ತಿಯಲಿ!-
ಎಂದು ಭೋರ್ಗರೆದು ಒಮ್ಮೆಲೆ ತನ್ನ ಗುರುದೇವನಲ್ಲಿ ಕವಿಯ ಮನಸ್ಸು ನಿಂತು-
-ಗುರು, ನಿನ್ನ
ಕೃಪೆ ನನ್ನ ಸತಿಸುತರ ಮೇಣೆನ್ನ ಮೇಲಿರಲಿ
ಸರ್ವದಾ. ಶ್ರದ್ಧೆ ಬಳುಕದೆ ನಿತ್ಯವಾಗಿರಲಿ
ನಿನ್ನ ಮಹಿಮೆಯೊಳೆಮಗೆ.-
ಎಂದು ಗುರುದೇವನಲ್ಲಿ ಆಶಿರ್ವಾದವನ್ನು ಬಯಸಿ, ಪೂರ್ಣಚಂದ್ರಸಮನಾದ ತೇಜಸ್ಸನ್ನುಳ್ಳ ಪುತ್ರನನ್ನು ದಯಪಾಲಿಸಿದ ತನ್ನ ಶ್ರೀಮತಿಯನ್ನು
-ಪ್ರೇಮಾಂಗಿನಿಯೇ-
ಎಂದು ಸಂಬೋಧಿಸಿ,
-ನನ್ನ
ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ:
ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ!
ಎಂದು ಮಗುವಿಗೆ ಆಶೀರ್ವಾದವನ್ನು ಸಂಕಲ್ಪಿಸಿ ನಿಲುಗಡೆಗೆ ಬರುತ್ತದೆ ಕವಿಯ ಮನಸ್ಸು.

ಮುಂದೆ ’ಸ್ವಾಗತ ನಿನಗೆಲೆ ಕಂದಯ್ಯ’ ಎಂಬ ಕವನದಲ್ಲಿ ’ಜನ್ಮಾಂತರದ ಬಂಧುವು ಕಲ್ಪಾಂತರದ ಬಂಧವೂ, ಶೃಂಗಾರ ಸಾಗರ ಸಾಕ್ಷಾತ್ಕಾರವೂ’ ಆದ ಮಗನಿಗೆ,
ಸುಂದರ ಪೃಥ್ವಿಗೆ ಸ್ವಾಗತವಯ್ಯ,
ಪುಣ್ಯಭಾರತಕ್ಕೆ ಸ್ವಾಗತವಯ್ಯ,
ನನ್ನ ಕನ್ನಡಕೆ ಸ್ವಾಗತವಯ್ಯ,
ಎಂದು ಸ್ವಾಗತಗೀತೆ ಹಾಡುತ್ತಾರೆ.
ಭೋಗಿಯೊ, ಯೋಗಿಯೊ? ಮುಕ್ತನೊ, ಬದ್ಧನೊ?
ರಾಮನೊ? ಕೃಷ್ಣನೊ? ಕ್ರಿಸ್ತನೊ? ಬುದ್ಧನೊ?
ಯಾರೂ ಬೇರೆಯ ಕವಿಯೋ ಸಿದ್ಧನೊ?
ಯಾರನು ಕಳುಹಿಸಿದನೋ ಕಾಣೆ!
ಯಾರಾದರು ಆಗದಕೇನಂತೆ?
ನಮ್ಮೊಲುಮೆಯ ಕುಡಿ ನಮಗೆಮ್ಮಂತೆ:
ಕಂದಾ, ನೀನೆಮಗಿಂಪಿನ ಸಂತೆ;
ಸಲಹುತ್ತೊಲಿವೆವೋ, ಶಿವನಾಣೆ!
ಎಂದು ಮಗನನ್ನು ಸಲಹುವ ಸಂಕಲ್ಪ ಮಾಡುತ್ತಾರೆ. ರಾತ್ರಿಯಿಡೀ ಆಳುತ್ತಿದ್ದ ಮಗುವಿಗೆ ಕವಿ ಹೇಳುವ ಮಾತುಗಳಲ್ಲಿ ಸ್ವಾರಸ್ಯವಿದೆ. ಕವಿಯ ಕಣ್ಣಲ್ಲಿ ದೇವರ ಸಮಾನವಾದ ಮಗು ಈ ಲೋಕದ್ದೇ ಅಲ್ಲ! ಆದರೆ ಈ ಲೋಕದ ಮಹತ್ವವನ್ನು ತಿಳಿಸುತ್ತಾ ಮಗುವನ್ನು ಸಮಾಧಾನ ಮಾಡಲೆಳೆಸುವ ತಂದೆಯಾಗಿ ಕವಿ ಕಾಣುತ್ತಾರೆ.
ಆ ಲೋಕವ ನೆನೆದಳದಿರೊ, ಕಂದ.
ಕೋಳೇನ್? ಈ ಲೋಕವಿದೂ ಚಂದ:
ರವಿ, ಶಶಿ, ಗಗನಂ, ತಾರಾವೃಂದ,
ಸಾಗರ, ನದಿ, ವನ, ಗಿರಿಧಾತ್ರಿ,
ಕವಿಕೃತಿ, ಕನ್ನಡ ನುಡಿ, ನಿನ್ನಮ್ಮ,
ತಂಬೆಲರ್, ಆನ್, ಅಲರ್, ಅಂತೆಯೆ ನಮ್ಮ
ಗಾಂಧಿಜಿಯಿರುವರೊ! ಆಳದಿರೊ, ತಮ್ಮಾ,
ಕೊನೆಗಾಣುವುದೋ ಈ ರಾತ್ರಿ!
ಈ ರಾತ್ರಿ ಕಳೆಯುವುದು ಅಳಬೇಡ ಎಂದು ಹೇಳುತ್ತ ಕೊನೆಯಲ್ಲಿ,
ಮೂಡಲಿ ನಿನ್ನಿಂದೊಳ್ಪಿಗೆ ಕೋಡು;
ತಿಳಿಯಲಿ, ಹೊಳೆಯಲಿ, ನಮ್ಮೀ ನಾಡು;
ತೊಲಗಲಿ ಕತ್ತಲೆ, ಬತ್ತಲೆ, ಕೇಡು;
ಮಂಗಳನಾಗಯ್ ಲೋಕಕ್ಕೆ!
ಎಂದು ಮಗುವಿಗೊಂದು ಗುರಿಯನ್ನು ಸಂಕಲ್ಪಿಸಿ,
ನಮ್ಮೆದೆ ಬಾನಿನ ಚಂದಯ್ಯ
ಸ್ವಾಗತ ನಿನಗೆಲೆ ಕಂದಯ್ಯ!
ಎಂದು ಹಾಡುತ್ತಾರೆ.

3 comments:

ಎಂ.ಶಿವನಂಜಯ್ಯ said...

ನಿಮ್ಮ ಕುವೆಂಪು ಸಾಹಿತ್ಯಲೋಕದ ರಸಯಾತ್ರೆ ನಿರಂತರವಾಗಿರಲಿ.

ಸಾಗರದಾಚೆಯ ಇಂಚರ said...

tumbaa sundara baraha
sangrahayogyavaagide
kuvempu hesare maiyyalli romaanchana golisuttade

ಸಿಂಧು sindhu said...

tumba chenaagide.

thanks for this.

rgds,Sindhu