Monday, August 15, 2011

ವಾತ್ಸಲ್ಯ ವಿರಹಿ - ಸರಣಿ ವಿರಹ ಕವಿತೆಗಳು

ಈ ಸರಣಿಯಲ್ಲಿ ೧೩ ಕವಿತೆಗಳಿವೆ. ಪ್ರತಿಯೊಂದು ಕವಿತೆಯು ತವರಿನಲ್ಲಿ ತನ್ನ ಮಗನೊಂದಿಗಿರುವ ಸತಿಯ, ಮೂರುವರ್ಷದ ಮಗನ ಅಗಲುವಿಕೆಯಿಂದ ಮಾಡಿದ ಭಾವಗಳಿಂದ ಕೂಡಿವೆ. ಈ ಕವಿತೆಗಳ ಸರಣಿಗೂ ಮೊದಲು ನಾಲ್ಕು ಸಾಲಿನ ಒಂದು ಚುಟುಕವಿದೆ, ’ಪ್ರಣಯ ಕಟಕಿ’ ಎಂದದರ ಹೆಸರು.
ಬರಲಿರುವ ಕಂದಂಗೊ
ಬಂದ ಕಂದಂಗೊ
ಹೊಲಿಯುತಿರುವೀ ಅಂಗಿ
ಆರಿಗರ್ಧಾಂಗಿ?
ಈ ಚುಟುಕುವನ್ನು ಓದಿದಾಕ್ಷಣ ಒಂದು ಸುಂದರ ಚಿತ್ರಣ ಓದುಗನ ಮನಸ್ಸಿನಲ್ಲಿ ಮೂಡುವಷ್ಟು ಸರಳ ರಚನೆ ಇದಾಗಿದೆ. ಅಂಗಿಯನ್ನು ಹೊಲಿಯುತ್ತಾ ಕುಳಿತಿರುವ ಸತಿ ಒಂದು ಮಗುವಿನ ತಾಯಿ ಎಂಬುದು ’ಬಂದ ಕಂದಂಗೊ’ ಎಂಬ ಸಾಲಿನಲ್ಲಿ ಹರಳುಗಟ್ಟಿದ್ದರೆ, ’ಬರಲಿರುವ ಕಂದಂಗೊ’ ಎಂಬ ಸಾಲಿನಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ಭಾವವನ್ನು ಒಳಗೊಂಡಿದೆ.
ವಾತ್ಸಲ್ಯ ವಿರಹಿ ಸರಣಿಯ ಮೊದಲ ಕವಿತೆಯಲ್ಲಿಯೇ, ಹೆಂಡತಿ ತವರು ಮನೆಗೆ ಮೂರುವರ್ಷದ ಮಗನ ಜೊತೆ ಹೋಗಿದ್ದನ್ನು ನೋಡಬಹುದಾಗಿದೆ. ಚೊಚ್ಚಲ ಹೆರಿಗೆಗೆ ಹೋಗಿದ್ದಾಗ, ಕವಿಗೆ ಕೇವಲ ಒಲಿದ ಸತಿಯ ವಿರಹ ಮಾತ್ರ ಇತ್ತು; ಆದರೀಗ ಒಲಿದ ಸತಿ, ಪೂರ್ಣಚಂದ್ರಸಮ ಮೂರುವರ್ಷದ ತೇಜಸ್ವಿ ಇಬ್ಬರ ಅಗಲಿಕೆಯೂ ಕಾಡುತ್ತಿದೆ.
ನೀನಂದು ಹೋದಂದು
ತವರುಮನೆಗೆ
ಒಂದು ನೋವನು ಸಹಿಸಿ
ಸಾಕಾಯ್ತು ನನಗೆ.-
ಎಂಬ ಸಾಲುಗಳು ಮೊದಲ ಬಾರಿ ಸತಿ ಹೆರಿಗೆಗೆ ತವರಿಗೆ ಹೋದದ್ದನ್ನು, ಆಗ ಕವಿ ಅನುಭವಿಸಿದ್ದ ವಿರಹವನ್ನು ಮನಗಾಣಿಸುತ್ತವೆ. ಮುಂದುವರೆದು,
ಕಂದನೊಡಗೂಡಿ
ಮೂರುವರ್ಷದ ಮೇಲೆ,
ಕಂದನೊಡನಾಡಿ
ಬಾಳು ಸಾಗಿದ ಮೇಲೆ,
ಇಂದು ತೆರಳಿದೆ ಕೊನೆಗೆ
ಮತ್ತೆ ತಾಯ್ಮನೆಗೆ
ಮೂರು ವರ್ಷಗಳ ಕಾಲ ಕಂದನೊಡನೆ ಒಡನಾಡಿ ಬಾಳು ಸಾಗಿಸುತ್ತಿದ್ದ ತಂದೆಗೆ, ಸತಿ ಮತ್ತು ಸುತ ಇಬ್ಬರೂ ದೂರವಾಗಿದ್ದಾಗ, ತನ್ನ ವಿರಹ ದ್ವಿಗುಣವಾಗಿದೆ ಎನ್ನಿಸುತ್ತದೆ.
ನಿನ್ನೊಡನೆ ಕಂದನನು
ನೆನೆಯಲಾನಂದನನು,
ಆ ಒಂದು ನೋವಿಂದು
ಎರಡಾಗಿ ದಹಿಸೆ
ಸಾಕು ಸಾಕಾಗುತಿದೆ
ನನಗದನು ಸಹಿಸೆ!
ಚೊಚ್ಚಲ ಹೆರಿಗೆಗೆ ತವರಿಗೆ ಸತಿ ಹೋಗಿದ್ದಾಗ ಅನುಭವಿಸಿದ ಒಂದು ನೋವು, ಇಂದು ಕಂದನನ್ನು ನೆನೆದಾಗ ಎರಡಾಗಿ ವಿರಹಿ ತಂದೆಯನ್ನು ಸುಡುತ್ತಿದೆ. ಅದನ್ನು ಸಹಿಸಿ ಸಹಿಸಿ ಕವಿ ಹೈರಾಣವಾಗಿಬಿಟ್ಟಿದ್ದಾರೆ. ಕವಿತೆಯಲ್ಲಿ ಎದ್ದು ಕಾಣುವ ಸರಳತೆ ಹಾಗೂ ನಿಧಾನ ಗತಿ, ಕವಿತೆಯ ಭಾವವನ್ನು ಮನಮುಟ್ಟಿಸುತ್ತದೆ.
ಈ ಸರಣಿಯ ಎರಡನೆಯ ಕವಿತೆಯಿಂದ, ಕವಿ ಆಗ ಉದಯರವಿಯಲ್ಲಿ ಇರಲಿಲ್ಲ, ಬಾಡಿಗೆ ಮನೆಯಲ್ಲಿದ್ದರೆಂದು ತಿಳಿಯುತ್ತದೆ. ಆಗ ಕುವೆಂಪು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ರಾತ್ರಿ ರೈಲಿಗೆ ಹೆಂಡತಿ ಮಗುವನ್ನು ಸ್ವತಃ ಕವಿಯೇ ಹತ್ತಿಸಿ ಬಂದಿದ್ದರ ಚಿತ್ರಣವಿದೆ. ಅಂದು ತವರು ಮನೆಯಲ್ಲಿ ಬಿಟ್ಟು ಒಬ್ಬರೇ ರೈಲಿನಲ್ಲಿ ಮೈಸೂರಿಗೆ, ಉದಯರವಿಗೆ ಬಂದಿದ್ದರೆ, ಇಂದು ಹೆಂಡತಿ ಮಗವನ್ನು ತವರಿಗೆ ಕಳುಹಿಸಿ ಕವಿ ಬಾಡಿಗೆ ಮನೆಗೆ ಬರುತ್ತಿದ್ದಾರೆ. ಆದರೆ ಅನುಭವಿಸುವ ವಿರಹ ಮಾತ್ರ ಬದಲಾಗಿಲ್ಲ. ದ್ವಿಗುಣಗೊಂಡಿದೆ.
ರೈಲು ಹೊರಟಿತು ಮುಂದೆ.
ಬೀಳುಕೊಳುತಾ ನಿಂದೆ,
ನಿಲ್ದಾಣದಲ್ಲಿ.
ತಾಯಿ ಮಕ್ಕಳ್ವೆರಸಿ
ತಂದೆ ಹೊಟ್ಟೆಯನುರಿಸಿ
ಬಂಡಿ ಕಣ್ಮರೆಯಾಯ್ತು
ಇರುಳಿನಲ್ಲಿ . . . .
ಅಂದಿನಂತೆ ಇಂದೂ ಕವಿಗೆ ಸಿಟ್ಟು, ಕಿನಿಸು ಎಲ್ಲಾ ಇದೆ. ಆದರಿಂದು ಆ ಸಿಟ್ಟು ರೈಲಿನ ಮೇಲೆ ತಿರುಗಿದೆ! ತಂದೆಯ ಹೊಟ್ಟೆಯನುರಿಸುವಂತೆ ತಾಯಿ ಮಗವನ್ನು ಕರೆದುಕೊಂಡು ದೂರ ಹೋಗುತ್ತಿದೆಯಲ್ಲಾ ಎಂದು ರೈಲಿನ ಮೇಲೆ ಕವಿ ಕೋಪಗೊಳ್ಳುತ್ತಾರೆ. ಮುಂದುವರೆದು,
ಹಾಲು ಬೆಳ್ದಿಂಗಳಿನಲಿ
ಹಾಳು ಬೀದಿಯ ತೊಳಲಿ
ಬಂದೆನಂತೂ ಕೊನೆಗೆ
ಬಾಡಿಗೆಯ ಮನೆಗೆ!
ಬರುತ್ತಾರೆ. ಬಂದರೆ ಮತ್ತದೆ ಬಣ ಬಣ. ಅದು ಅವರ ಪಾಲಿಗೆ ಮನೆಯಲ್ಲ, ಮನೆ ಎಂಬ ಹೆಸರನು ಹೊತ್ತ ಶೂನ್ಯ!
ಹಕ್ಕಿ ಗೂಡನು ಕೊರೆದು
ಮರಿಮಾಡುತದ ತೊರೆದು
ಬಿಟ್ಟ ಪೊಟರೆಯೊಳೆಂತು
ಗಾಳಿ ನರಳುವುದಂತು
ನರಳಿದೆನು ನಿಂತು,
ಮನೆವೆಸರ ಇಟ್ಟಿಗೆಯ
ಆ ಶೂನ್ಯದಲಿ!
ಕವಿಯೆ ನಿಟ್ಟುಸಿರಿಗೆ ನರಳಿಕೆಗೆ ಒಂದೊಳ್ಳೆಯ ಉಪಮೆ ಇಲ್ಲಿದೆ. ಹಕ್ಕಿ ಮರವೊಂದರಲ್ಲಿ ಗೂಡು ಕೊರೆಯುತ್ತದೆ. ಮೊಟ್ಟೆ ಮಾಡುತ್ತದೆ. ಮರಿಯೂ ಆಗುತ್ತದೆ. ಮರಿಗೆ ರೆಕ್ಕೆ ಪುಕ್ಕ ಬಂದು ಬಲಿತಾದ ಮೇಲೆ ಹಕ್ಕಿಗಳ ಪರಿವಾರ ಗೂಡನ್ನು ಬಿಟ್ಟು ಹಾರಿ ಬೇರೆಡೆಗೆ ಹೋಗುತ್ತವೆ. ಇತ್ತ ಗೂಡು ಪಾಳು ಬೀಳುತ್ತದೆ. ಜೋರಾಗಿ ಗಾಳಿ ಬೀಸಿದಾಗ, ಆ ಪೊಟರೆಯಲ್ಲಿ ಗಾಳಿ ನುಗ್ಗುವಾಗ, ತಿರುಗಿ ಬರುವಾಗ ಉಂಟಾಗುವ ಸುಯ್ದನಿಯಂತೆ ಕವಿಯ ನಿಟ್ಟುಸಿರಿತ್ತಂತೆ! ಸತಿ-ಸುತರಿದ್ದಾಗ ನಂದನವನವಾಗಿದ್ದ ಮನೆ ಇಂದು ಶೂನ್ಯವಾಗಿಬಿಟ್ಟಿದೆ. ಮೊದಲ ಬಾರಿ ಅನುಭವಿಸಿದ್ದ ಶೂನ್ಯ ಶೋಧನೆಯ ಭಾವವನ್ನು ಇಂದೂ ಕವಿ ಅನುಭವಿಸುತ್ತಿದ್ದಾರೆ!
ಈ ಸರಣಿಯ ಮೂರನೆಯ ಕವಿತೆಯಲ್ಲಿ ನೇರವಾಗಿ ಕವಿ ತನ್ನ ಸುತ ತೇಜಸ್ವಿಯ ಅಗಲಿಕೆಯ ವಿರಹವನ್ನು ಹೊರಹಾಕಿದ್ದಾರೆ. ಅತ್ಯಂತ ಪ್ರೀತಿಪಾತ್ರರಾದವರು, ಕಣ್ಣಳತೆಯಿಂದ ದೂರವಿದ್ದಾಗ, ಕಂಡ ಜಡ-ಚೇತನಗಳಲ್ಲೆಲ್ಲಾ ಅವರನ್ನೇ ಕಾಣುವಂತೆ ಕವಿ ಇಲ್ಲಿ ಟುವ್ವಿ ಹಕ್ಕಿಯ ಹಾಡೊಂದರಲ್ಲಿ ತೇಜಸ್ವಿಯನ್ನು ಕಾಣುತ್ತಾರೆ! ಒಂದೇ ಸಮನೆ ಟುವ್ವಿ ಟುವ್ವಿ ಎಂದು ಹಕ್ಕಿ ಹಾಡುತ್ತಿರುವುದನ್ನು ಕೇಳಿದ ಕವಿಗೆ,
ಸುಮ್ಮನೆಯೆ ಕೂಗುತಿದೆ!
ಕೂಗುತಿಹದೇತಕಾ
ಟುವ್ವಿಹಕ್ಕಿ?
ಎಂಬ ಪ್ರಶ್ನೆ ಮೂಡುತ್ತದೆ. ತಕ್ಷಣ,
ತೇಜಸ್ವಿಯಗಲಿಕೆಯ ಉರಿಗೆ ಸಿಕ್ಕಿ?
ಅಂತಲ್ಲದಿನ್ನೇನು?
ಪಂತಕಟ್ಟುವೆ ನಾನು!
ಎಂದು ಉತ್ತರವನ್ನು ಕಂಡುಕೊಳ್ಳುತ್ತದೆ ಕವಿಯ ಮನಸ್ಸು. ಸತಿ-ಸುತರಿಂದ ದೂರವಿರುವುದಕ್ಕೆ ವಿರಹ ದುಃಖವನ್ನು ಅನುಭವಿಸುತ್ತಿದ್ದೇನೆ ಎನ್ನುತ್ತಾರೆ.
ಎಂದಿನಂದದಿ ನೀನು
ಕಣ್ಗೆ ಕಾಣದೆ ತಾನು
ವಿರಹ ದುಃಖಿ!
ತೇಜಸ್ವಿಯ ನೆನಪಿನಲ್ಲಿಯೇ ಮುಳಗಿರುವ ಕವಿಗೆ, ಟುವ್ವಿಹಕ್ಕಿಯ ಟುವ್ವಿ ಹಾಡು ’ಟುವ್ವಿ ಟುವ್ವಿ’ ಎಂಬುದಕ್ಕೆ ಬದಲಾಗಿ ’ತೇಜಸ್ವಿ ತೇಜಸ್ವಿ’ ಎಂದು ಹಾಡುತ್ತಿರುವಂತೆ, ತೇಜಸ್ವಿಯನ್ನು ಹಕ್ಕಿ ಕರೆಯುತ್ತಿರುವಂತೆ ಭಾಸವಾಗುತ್ತದೆ.
ತೇಜಸ್ವಿ ತೇಜಸ್ವಿ
ತೇಜಸ್ವಿ ತೇಜಸ್ವಿ
ತೇಜಸ್ವಿ ತೇಜಸ್ವಿ . . .
ಎಂದು ನಿನ್ನನೆ ಕರೆದು
ಮೊಟ್ಟೆಗೂಡನು ತೊರೆದು
ಹಾತೊರೆದು ಕೊರಗುತಿದೆ;
ನೆನೆ ನೆನೆದು ಮರುಗುತಿದೆ
ಪುಟ್ಟಹಕ್ಕಿ!
ಎಂದು ದೂರದಲ್ಲಿರುವ ಮಗನಿಗೆ ಹೇಳುತ್ತಿದ್ದಾರೆ. ಮುಂದುವರೆದು,
ನನ್ನ ಗೂಡಿಹ ಗಿಡದ
ಧೂಳಿಡಿದ ಬುಡದ
ಮಣ್ಣಾಟವನು ಬಿಡದ
ಅವ ಎತ್ತ ನಡೆದ?
ಎಂದು ಕರೆದೊರಲುತಿದೆ
ನಿನ್ನ ಟುವ್ವಿಯ ಹಕ್ಕಿ,
ವಿರಹದುಃಖಿ!
ನನ್ನಂತೆಯೇ ಆ ಹಕ್ಕಿಯೂ ತೇಜಸ್ವಿ ಕಾಣದಿರುವುದರಿಂದ ಉಂಟಾದ ವಿರಹದ ದುಃಖವನ್ನು ಅನುಭವಿಸುತ್ತಿದೆ ಎಂದು ಭಾವಿಸುತ್ತಾರೆ.
ದೂರದಲ್ಲಿರುವ ಮಗನ ಕ್ಷೇಮಾತುರನಾಗಿರುವ ತಂದೆಯಾಗಿ ಕುವೆಂಪು ನಾಲ್ಕನೆಯ ಕವಿತೆಯಲ್ಲಿ ಕಾಣುತ್ತಾರೆ. ತಮ್ಮ ಕಣ್ಣೆದುರಿಗೆ ಇರದ ಕಂದನ ಆಟಪಾಠಗಳೊಂದಿಗೇ, ಆಕಸ್ಮಿಕವಾಗಿ ಆಗಬಹುದಾದ ಅಪಘಾತಗಳ ನೆನಪೂ ಬಂದು ಮನಸ್ಸು ದಿಗಿಲು ಬೀಳುತ್ತದೆ.
ಅಲ್ಲಿ ಶಿವಮೊಗ್ಗೆಯಲಿ
ಮನೆ ಮುಂದೆ ರಸ್ತೆಯಲಿ
ನೀನು ದೂಳಾಡುತಿರೆ
ಬಹುವೇಗಿಯಾಗಿ ಬರೆ
ಮಾರಿ ಬಸ್ಸು,
ಕಂಡು ಮೇಲೇಳುತಿರೆ . . .
ಶಿವ ಶಿವಾ! . . .
ಗುರು ರಕ್ಷೆ! ಗುರು ರಕಷೆ!
ಸಾಕು ನನಗೀ ಶಿಕ್ಷೆ!
ಬೆಂಕಿಯಿಕ್ಕಲಿ! ಹಾಳು
ಕವಿ ಕಲ್ಪನೆಯ ಬಾಳು
ಗರಗಸದ ಗೋಳು:
ಸುಖದಃಖದೆಳತಕ್ಕೆ
ಸೀಳು ಸೀಳು!
ಕವಿಗೆ ಕಲ್ಪನಾ ಶಕ್ತಿ ಅತ್ಯಂತ ಮಹತ್ವದ್ದು. ಆದರೆ ದೈನಂದಿನ ಜೀವನದಲ್ಲಿ ಈ ಕಲ್ಪನೆ ತಂದಿಕ್ಕುವ ಆತಂಕದಿಂದ ಕವಿಕಲ್ಪನೆಯ ಬಾಳು ಗರಗಸದ ಗೋಳಾಗಿ ಕಂಡು ’ಬೆಂಕಿಯಿಕ್ಕಲಿ’ ಎಂದುಬಿಡುತ್ತಾರೆ. ವಿರಹತಾಪವೆ ಹಾಗೇನೋ ಅನ್ನಿಸುತ್ತದೆ. ಸೂರ‍್ಯೋದಯ ಹೆಣ ಮೂಡಿತು ಎನ್ನುವ, ಕಲ್ಪನಾ ಶಕ್ತಿಗೆ ಬೆಂಕಿಯನ್ನಿಕ್ಕು ಎನ್ನುವ ಮನಸ್ಥಿತಿಗೆ ದರ್ಶನಕಾರನಾದ ಕವಿಯನ್ನು ತಂದು ನಿಲ್ಲಿಸಿರುವ ’ವಿರಹ, ನಿನಗೆ ನಮೋ ನಮಃ!’

No comments: