Monday, April 16, 2012

ಕಾನೂರು ಹೆಗ್ಗಡಿತಿ - 75

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ ಸಾರ್ಥಕ ೭೫ ವರ್ಷಗಳು ಕಳೆದಿವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ.
ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.
ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಸ್ನೇಹಿತರಲ್ಲಿ ನೀವೇಕೆ ಬರೆಯಲು ಪ್ರಯತ್ನಿಸಬಾರದು? ಎಂದು ಪೀಡಿಸುತ್ತಿದ್ದರಂತೆ. ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ನೀವೇ ಏಕೆ ಬರೆಯಬಾರದು? ಎಂದರಂತೆ. ಆಗ ಕುವೆಂಪು ಅವರು ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ - ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ! ಎಂದು ನಕ್ಕಬಿಟ್ಟಿದ್ದರಂತೆ. ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!
ಗುರುವಿನ ಸಲಹೆಯನ್ನು ಆಶೀರ್ವಾದ ರೂಪದಲ್ಲಿ ಧರಿಸಿದ ಕವಿ, ಮಹಾ ಕಾದಂಬರಿ ರಚಿಸುವ ಗೀಳಿಗೆ ವಶವಾಗಿಬಿಡುತ್ತಾರೆ. ಆಗ ಮೊದಲು ಹುಟ್ಟಿದ್ದೇ ’ಕಾನೂರು ಹೆಗ್ಗಡಿತಿ’. ಮಲೆನಾಡಿನ ಮೂಲೆಯಲ್ಲಿ, ಕಾನೂರು ಸುಬ್ಬಮ್ಮ ಹೆಗ್ಗಡಿತಿ ಮೊದಲಾದ ಹೆಸರುಗಳನ್ನು ಆಲೋಚಿಸಿದ್ದರೂ ಕೊನೆಯಲ್ಲಿ ನಿಂತದ್ದು ’ಕಾನೂರು ಹೆಗ್ಗಡಿತಿ’ ಎಂಬುದು.
ಮಹಾ ಕಾದಂಬರಿ ಎಂದರೆ ನೂರಾರು ಪುಟಗಳು, ಸಾವಿರಾರು ಘಟನೆಗಳು, ಅಸಂಖ್ಯಾತ ಸ್ಥಳಗಳು ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸುತ್ತಾ ಹದಗೆಡದಂತೆ ಕಟ್ಟಿಕೊಡುವ ಕಥನಕ್ರಮವೇ ಮುಖ್ಯವಾದುದು. ವೆಂಕಣ್ಣಯ್ಯನವರ ಮಾತಿನಲ್ಲೇ ಹೇಳುವುದಾದರೆ ಕಥನ, ಸಂವಾದ ಮತ್ತು ವರ್ಣನೆಗಳ ಹದವರಿತ ಮಿಶ್ರಣವಾಗಿರಬೇಕು. ಮುಂದುವರೆದು ಹೇಳುವುದಾದರೆ ಭೂತ-ವರ್ತಮಾನ-ಭವಿಷ್ಯತ್ ಹೀಗೆ ತ್ರಿಕಾಲದಲ್ಲೂ ಕವಿಯ ಮನಸ್ಸು ಸಂಚರಿಸುತ್ತಿರಬೇಕಾಗುತ್ತದೆ. ಭವಿಷ್ಯದ ಕಡೆಗೆ ದೃಷ್ಟಿಯಿಟ್ಟು ವರ್ತಮಾನದಲ್ಲಿ ವಿಹರಿಸುತ್ತಿದ್ದರೂ ಕವಿಯ ಒಂದು ಕೈ ಭೂತಕಾಲದತ್ತಲೂ ಚಾಚಿರುತ್ತದೆ. ಆ ಭೂತಕಾಲವೇ ನಮ್ಮ ಇಂದಿನ ವರ್ತಮಾನವನ್ನು ರೂಪಿಸುತ್ತಿದೆ ಎಂಬ ಎಚ್ಚರವಿದ್ದೇ ಇರುತ್ತದೆ. ಭೂತ-ವರ್ತಮಾನಗಳೆರಡೂ ನಮ್ಮ ಭವಿಷ್ಯಕಾಲಕ್ಕೆ ಮುನ್ನುಡಿಯಂತಿರುತ್ತವೆ.
ಈ ಮಹಾಕಾದಂಬರಿಗೆ ೭೫ ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ, ಕಾದಂಬರಿಯಲ್ಲಿ ಕಲಾತ್ಮಕವಾಗಿ ಸೇರಿರುವ ಒಂದು ಐತಿಹಾಸಿಕ ಘಟೆನೆಯನ್ನು ಸ್ಮರಿಸುವುದು ಈ ಲೇಖನ ಆಶಯ. ಒಂದು ರೀತಿಯಲ್ಲಿ ಕಲಾವತಾರಗೊಂಡ ಲೋಕಸತ್ಯವೊಂದರ ಅವಲೋಕನ!
ಕಾದಂಬರಿಯಲ್ಲಿ, ಗಾಂಧೀಜಿಯವರ ಮದ್ಯಪಾನ ವಿರೋದದ ಪ್ರಭಾವದಿಂದ ಮಲೆನಾಡಿನ ಗೌಡರುಗಳೆಲ್ಲಾ ಸಭೆ ಸೇರಿ ಮದ್ಯಪಾನ ಮಾಡುವುದಿಲ್ಲವೆಂದು ಗುತ್ತುವಳಿ ಸ್ವೀಕರಿಸಿ, ನಂತರ ಕೆಲವೇ ದಿನಗಳಲ್ಲಿ, ಕದ್ದು ಮುಚ್ಚಿ ಮದ್ಯಪಾನ ಮಾಡುವ ಚಿತ್ರಣ ಬರುತ್ತದೆ. ಆ ಸಭೆಯಿಂದಾದ ಒಂದೇ ಉಪಯೋಗವೆಂದರೆ ಮೊದಲು ಬಹಿರಂಗವಾಗಿ ಮನೆಯ ಹೆಂಗಸರು ಮಕ್ಕಳು ಮುಂದೆಲ್ಲಾ - ಕೆಲವೊಮ್ಮೆ ಅವರೊಟ್ಟಿಗೆ ಕುಡಿಯುತ್ತಿದ್ದವರು ನಂತರ ಕದ್ದು ಮುಚ್ಚಿ ಯಾರಿಗೂ ತಿಳಿಯದಂತೆ ಕುಡಿಯುವವರಾಗುತ್ತಾರೆ. ಕೆಲವರು ಸಂಪೂರ್ಣವಾಗಿ ಆ ಚಟದಿಂದ ವಿಮುಕ್ತರಾಗುತ್ತಾರೆ. ಈ ಘಟನೆಗೆ ಕುವೆಂಪು ಅವರಿಗೆ ದೊರೆತ ಸ್ಪೂರ್ತಿ ಒಂದು ಸತ್ಯಘಟನೆಯಿಂದ ಪ್ರೇರಿತವಾಗಿರುವುದು ಎಂಬುದು ಮಾತ್ರ ಸತ್ಯ!
ಸನ್ ೧೯೧೧ ಡಿಸೆಂಬರ್ ೨೧ನೆಯ ತಾರೀಖು (ಆಗ ಕುವೆಂಪು ಅವರು ಏಳು ವರ್ಷದ ಬಾಲಕ) ತೀರ್ಥಹಳ್ಳಿಯ ಶ್ರೀ ಯಡೆಹಳ್ಳಿ ಶೇಷಪ್ಪನವರ ಷಾಪಿನ ಮಹಡಿ ಮೇಲೆ ನಾಮಧಾರಿ ಒಕ್ಕಲಿಗರು ಅಥವಾ ನಾಡವ ಸಮುದಾಯದ ಮುಖಂಡರು ಸಭೆ ಸೇರಿರುತ್ತಾರೆ. ಸಭೆಯನ್ನು ಕರೆದವರು ಹಾಗೂ ನೇತೃತ್ವ ವಹಿಸಿದವರು ಮತ್ತೂರು ಸೀಮೆಯ ಸಾಹುಕಾರರಾಗಿದ್ದ ಶ್ರೀ ದೇವಂಗಿ ರಾಮೈಯ್ಯಗೌಡರು. ಇವರು, ಮುಂದೆ ಕುವೆಂಪು ಅವರಿಗೆ ಹೆಣ್ಣುಕೊಟ್ಟ ಮಾವ. ಮೈಸೂರು ರಾಜರ ಪ್ರತಿನಿಧಿಯಾಗಿದ್ದ, ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ಆಗಿದ್ದ ಶ್ರೀ ರಾಮಣ್ಣಗೌಡರು ಪ್ರಗತಿಗಾಮಿಗಳಾಗಿದ್ದರು. ಮೂಡನಂಬಿಕೆ, ಜಾತಿಪದ್ಧತಿ ಇವುಗಳ ಬಗ್ಗೆ ತೀವ್ರವಾದ ವೀರೋಧವನ್ನು ಉಳ್ಳವರಾಗಿದ್ದರು. ವಿಧವಾ ವಿವಾಹದ ಪರವಾಗಿಯೂ ಇದ್ದವರು. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಅತಿಮುಖ್ಯವೆಂದು ಭಾವಿಸಿದ್ದವರು.
ಅಂದು ಸಭೆ ನೆಡೆಸಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದಕ್ಕೆ ೫೬ ಪ್ರಮುಖರ ಸಹಿಯೂ ಇದೆ. ಅಂದಿನ ತೀರ್ಮಾನಗಳನ್ನೆಲ್ಲಾ ಸೇರಿಸಿ ನಾಮಧಾರಿ ಅನ್ಯೋನ್ಯಾಭಿವೃದ್ಧಿ ಸಬಾ ಎಂಬ ಶೀರ್ಷಿಕೆಯಡಿ ಗೊತ್ತುವಳೀ ಪತ್ರವನ್ನು ಸಿದ್ಧಪಡಿಸಲಾಗಿದೆ.
ಅದರಿಂದ ತಿಳಿದು ಬರುವ ಪ್ರಮುಖ ಅಂಶವೆಂದರೆ, ಈ ರೀತಿಯ ಸಭೆ ಇದೇ ಮೊದಲಿನದಾಗಿರಲಿಲ್ಲ. ಅಲ್ಲಿಗೆ ಒಂದು ವರ್ಷದ ಹಿಂದೆ ಸಭೆ ಸೇರಿ, ಮದ್ಯಪಾನವನ್ನು ಕಡಮೆ ಮಾಡಬೇಕೆದು ತೀರ್ಮಾನಿಸಲಾಗಿರುವ ವಿಷಯವೂ ತಿಳಿಯುತ್ತದೆ. ಅದು ಯಶಸ್ವಿಯಾಗಿರುವುದರಿಂದ ಈ ಸಾಲಿನ ಸಭೆಯಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕೆ ಯಾವ ಏರ್ಪಾಡು ಮಾಡಬೇಕೆಂದು ದೀರ್ಘ ಚರ್ಚೆ ನಡೆಯುತ್ತದೆ.
ಆರಂಭದಲ್ಲಿ, ಮದ್ಯಪಾನ ಮಾಡುವುದರಿಂದ ಉಂಟಾಗತಕ್ಕ ನಷ್ಟ, ಕಷ್ಟ, ಭ್ರಷ್ಟಾದಿಗಳ ವಿಷಯವಾಗಿ ಬಹು ಸ್ವಾರಸ್ಯವಾದ ಒಂದು ಉಪನ್ಯಾಸವನ್ನು ಶ್ರೀ ದೇವಂಗಿ ರಾಮಣ್ಣಗೌಡರು ನೀಡಿದರೆಂದು ದಾಖಲಾಗಿದೆ. ಅವರ ಉಪನ್ಯಾಸದ ನಂತರ ಸರ್ವರೂ ಮದ್ಯಪಾನ ನಿರೋಧಿಸುವುದರಲ್ಲಿ ಸ್ಥಿರಪ್ರತಿಜ್ಞರಾದರು ಎಂದು ದಾಖಲಿಸಿದೆ. ನಂತರ ಮದ್ಯಪಾನ ಮಾಡಿ ಮನೆಮಠಗಳನ್ನು ಕಳಕೊಂಡ ಮದ್ಯಪಾನಾಗ್ರೇಸರರ ಚರಿತ್ರೆಗಳನ್ನು ಯೆಡೆಹಳ್ಳಿ ಶೇಷಪ್ಪನವರು, ಮಂಡಗದ್ದೆ ಸೀಮೆ ಭರಮಯ್ಯಗೌಡರು, ಶಿಂಧುವಾಡಿ ಚನ್ನಪ್ಪಗೌಡರು ಸಭಿಕರ ಮನಸ್ಸನ್ನಾಕರ್ಷಿಸುವಂತೆ ಭಾಷಣ ಮಾಡಿ ಸಭೆಯವರನ್ನು ಆನಂದಮಗ್ನರನ್ನಾಗಿ ಮಾಡಿದರಂತೆ!
ನಂತರ ಮದ್ಯಪಾನ ನಿರೋಧಿಸುವುದು ಹೇಗೆ ಎಂಬುದಕ್ಕೆ ಕೆಲವೊಂದು ನಿಯಮಗಳನ್ನು ಸಭೆಯಲ್ಲಿ ರೂಪಿಸಲಾಗಿದೆ. ಮದ್ಯಪಾನ ಮಾಡಿಕೊಂಡು ಶುಭ, ಶೋಭನ, ಪ್ರಸ್ತ, ಪಾಡ್ಯಗಳಿಗೆ ಬರತಕ್ಕ ಮನುಷ್ಯನು ಸಭೆಗೆ ಬರಲು ಅಯೋಗ್ಯನೆಂದು ಭಾವಿಸಿ ಸಭೆಯಿಂದ ತಿರಸ್ಕರಿಸಬೇಕೆಂದು ತೀರ್ಮಾನಿಸಲಾಗುತ್ತದೆ. ಜೊತೆಗೆ ಸಭೆಯವರಿಗೆ ತೋಚಿದಷ್ಟು ದಂಡಾ ವಸೂಲು ಮಾಡಬಹುದೆಂದೂ ಹೇಳಿದೆ.
ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕೆ ಹೊರಟಾಗ ಗಲಭೆಯಾಗಬಹುದೆಂದು ಮೊದಲೇ ಯೋಚಿಸಿದ ಸಭೆ, ಗಲಭೆಯಾಗದಂತೆ ಏನು ಮಾಡಬಹುದೆಂದು ಯೋಚಿಸಿ, ತೆಗೆದುಕೊಂಡ ತೀರ್ಮಾನಗಳನ್ನು ಮುಂದಿನ ಸಭೆಗೆ ತಿಳಿಸಲು ಕೋರಲಾಗಿದೆ. ಜೊತೆಗೆ, ಈ ಮದ್ಯದ ಅಂಗಡಿಗಳನ್ನು ಹರಾಜಿನಲ್ಲಿ ನಾಡೋವರಾದ ನಮ್ಮ ಜನಾಂಗದವರು ಹಿಡಿಯಕೂಡದೆಂದು ಖಂಡಿತವಾಗಿ ತೀರ್ಮಾನಿಸಲಾಗಿದೆ.
ಇಷ್ಟು ಮದ್ಯಪಾನ ನಿರೋಧದ ಬಗ್ಗೆಯಾದರೆ, ಕನ್ಯಾ ವಿಕ್ರಯವನ್ನು ವಿರೋಧಿಸಿಯೂ ಆ ಸಭೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆಯೇ ಅಂತಹ ತೀರ್ಮಾನವಾಗಿದ್ದರೂ, ಕನ್ಯಾ ವಿಕ್ರಯ ನಿಲ್ಲದ್ದಕ್ಕೆ ಸಭೆ ವಿಷಾದ ಸೂಚಿಸಿ, ಇನ್ನು ಮುಂದೆಯಾದರೂ ಈ ದುಷ್ಟಪದ್ಧತಿಯನ್ನು ನಿಲ್ಲಿಸಲು ಎಲ್ಲರೂ ಪ್ರಯತ್ನ ಪಡಬೇಕೆಂದು ಕೋರಲಾಗಿದೆ. ಇದಲ್ಲದೆ, ವಿವಾಹ ಮತ್ತು ಪುನರ್ವಿವಾಹಗಳಲ್ಲಿ ವಸೂಲು ಮಾಡಬೇಕಾದ ನಾಲ್ಕು ರುಪಾಯಿ ಚಪ್ಪರದವೆಚ್ಚ, ಮತ್ತು ಅದರ ನಿರ್ವಹಣೆ ಮಾಡುವ ಅಧಿಕಾರವನ್ನು ದೇವಂಗಿ ರಾಮಣ್ಣಗೌಡರಿಗೆ ಸಭೆ ನೀಡಿದ್ದಲ್ಲದೆ, ಹತ್ತು ರೂಪಾಯಿಗಳವರೆಗಿನ ಖರ್ಚನ್ನು ನಿಭಾಯಿಸುವ ಅಧಿಕಾರವನ್ನೂ ಅವರಿಗೆ ನೀಡುತ್ತದೆ.
ಕೊನೆಯಲ್ಲಿ, ಪ್ರತಿ ಸಂವತ್ಸರದ ಪುಷ್ಯ ಶುದ್ಧ ಪಾಡ್ಯದಲ್ಲಿ ತೀರ್ಥಹಳ್ಳಿಯಲ್ಲಿ ಸಭೆ ಸೇರತಕ್ಕದೆಂದು ನಿರ್ಣಯವನ್ನು ತೆಗೆದುಕೊಂಡು, ಈ ಬಾರಿ ಸಭೆಗೆ ಕಾರಣರಾದ ದೇವಂಗಿ ರಾಮಣ್ಣಗೌಡರನ್ನು ಸ್ಥಳಾವಕಾಶ ಮಾಡಿಕೊಟ್ಟ ಯಡೆಹಳ್ಳಿ ಶೇಷಪ್ಪನವರಿಗೂ ಧನ್ಯವಾದಗಳನ್ನು ಸೂಚಿಸಲಾಗಿದೆ.
೨೪.೨.೧೯೧೨ರಂದು ಸಭೆಯ ನಿರ್ಣಯಗಳನ್ನು ದಾಖಲಿಸಿ, ೫೬ ಜನ ಪ್ರಮುಖರ ಸಹಿಗಳೊಂದಿಗೆ ಪ್ರತಿ ಮಾಡಿಸಿ ಹಂಚಲಾಗುತ್ತದೆ. ಹಾಗೆ ಸಹಿ ಮಾಡಿದವರಲ್ಲಿ ಕುವೆಂಪು ಅವರ ದೊಡ್ಡಚಿಕ್ಕಪ್ಪಯ್ಯನವರಾದ ಶ್ರೀ ಕುಪ್ಪಳಿ ರಾಮಣ್ಣಗೌಡರೂ, ಕುವೆಂಪು ಅವರ ಸೋದರತ್ತೆಯನ್ನು ವಿವಾಹವಾಗಿದ್ದ ಶ್ರೀ ಮಾದಲು ಶ್ಯಾಮೆನಾಯಕರೂ ಸೇರಿದ್ದಾರೆ. ಈ ಘಟನೆಯನ್ನು ತನ್ನಲ್ಲಿ ಪುನರವತರಿಸಿಕೊಂಡ ಕಾದಂಬರಿ ’ಕಾನೂರು ಹೆಗ್ಗಡಿತಿ’ ರಚನೆಯಾಗಿ ೭೫ ವರ್ಷಗಳಾಗಿವೆ. ಆ ಘಟನೆ ನಡೆದು ಈಗ್ಗೆ ಒಂದು ನೂರು ವರ್ಷಗಳೇ ಕಳೆದಿವೆ. ನೂರು ವರ್ಷಗಳ ಹಿಂದೆಯೇ ಮದ್ಯಪಾನದಿಂದಾಗುವ ಕಷ್ಟ-ನಷ್ಟಗಳನ್ನು ಮನಗಂಡು ಅದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಚಿಂತಿಸಿದ ಆರೋಗ್ಯವಂತ ಮನಸುಗಳಿಗೆ ನಮ್ಮದೂ ಒಂದು ಜಯಕಾರವಿರಲಿ.

1 comment:

Pejathaya said...

ಒಂದು ಮಹಾ ಕಾದಂಬರಿ ಹುಟ್ಟಿಬರಬೇಕಾದರೆ ಅದರಲ್ಲಿ ಭೂತ ಮತ್ತು ವರ್ತಮಾನದ ಸಂಗತಿಗಳು ಅಡಕವಾಗಿದ್ದು ಮುಂಬರುವ ಭವಿಷ್ಯದ ಆಶಯಗಳು ಮೂಡಿಬರಬೇಕು - ಎಂಬ ಅಂಶವನ್ನು ಡಾ. ಸತ್ಯನಾರಾಯಣ ಬಹು ಚೆನ್ನಾಗಿ ನಿರೂಪಿಸಿದ್ದಾರೆ.
ಸಾಮಾಜಿಕ ಸುಧಾರಣೆಗಳಾಗಲು ವರುಷಗಳೇ ಬೇಕಾಗುತ್ತವೆ ಅನ್ನುವುದು ಸರ್ವ ವಿದಿತ.
ಹಾಗಾಗಿ ಎಪ್ಪತ್ತೈದು ವರ್ಷ ಕಳೆದರೂ 'ಕಾನೂರು ಹೆಗ್ಗಡಿತಿ' ಮಹಾಕಾಗಂಬರಿಯ ವಸ್ತುಗಳು ಇನ್ನೂ ಪ್ರಚಲಿತ ಆಗಿವೆ.

ಓದುಗನು ಒಳ್ಳೆಯದನ್ನು ಹುಡುಕುತ್ತಾ ಮತ್ತು ಅದನ್ನು ರೂಢಿಸುತ್ತಾ ಮುಂದೆ ಸಾಗಬೇಕು! - ಎನ್ನುವ ಕುವೆಂಪು ಅವರ ಆಶಯ ಇನ್ನೂ ಜೀವಂತ ಇದೆ.

ವಂದನೆಗಳು.
ಪೆಜತ್ತಾಯ