Monday, August 13, 2012

ಬ್ರಾಹ್ಮನಾಯಿ-ಶೂದ್ರಕೋಳಿ

ಮನೆಗಳಲ್ಲಿ ಸಾಕುಪ್ರಾಣಿಗಳಿದ್ದರೆ, ಮನೆಯಲ್ಲಿನ ಮಕ್ಕಳು ಅವುಗಳೊಂದಿಗೆ ಕಾಲ ಕಳೆಯುವುದು ಹೆಚ್ಚು. ಪ್ರಾಣಿಗಳೊಂದಿಗೆ ಬೆಳೆಯುವ ಮಕ್ಕಳಲ್ಲಿ ಪ್ರಾಣಿ-ಪರಿಸರ ಪ್ರಜ್ಞೆ ಸಹಜವಾಗಿಯೇ ಬೆಳೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ರೈತಕುಟುಂಬಗಳಲ್ಲಿ ಮಕ್ಕಳು ಸಹಜವಾಗಿಯೇ ಹತ್ತಾರು ಪ್ರಾಣಿಗಳ ಒಡನಾಟದಲ್ಲಿ ಬೆಳೆಯುತ್ತವೆ. ನಾವು ಚಿಕ್ಕವರಾಗಿದ್ದ ನಮ್ಮ ಅಜ್ಜಿ ಸಾಕಿದ್ದ ಕೋಳಿಗಳಲ್ಲಿ, ಒಂದೊಂದು ಕೋಳಿಗಳಿಗೆ ನಮ್ಮ ಹೆಸರಿಟ್ಟು ಅದರ ಉಸ್ತುವಾರಿ ನೋಡಿಕೊಳ್ಳುವಂತೆ ಮಾಡಿದ್ದರು. ನಾವು ಊಟದ ಕೊನೆಯಲ್ಲಿ ಸ್ವಲ್ಪ ಮುದ್ದೆ-ಅನ್ನ ಉಳಿಸಿ ನಮ್ಮ ಕೋಳಿಗಳಿಗೆ ಪ್ರತ್ಯೇಕವಾಗಿ ತಿನ್ನಿಸಲು ಪ್ರಯತ್ನಿಸುತ್ತಿದ್ದೆವು. ಕಡ್ಲೆಪುರಿ ತಿನ್ನಿಸಿದರೆ ಹೆಚ್ಚು ಕೊಬ್ಬಿ ಬೆಳೆಯುತ್ತವೆ ಎಂಬ ನಂಬಿಕೆಯಿಂದ, ವಾರಕ್ಕೊಮ್ಮೆ ಸಂತೆಯ ದಿನ ಮನೆಗೆ ತರುತ್ತಿದ್ದ ಪುರಿಗಡಲೆಯ ನಮ್ಮ ಭಾಗದಲ್ಲಿ ಒಂದಷ್ಟನ್ನು ಉಳಿಸಿ ಕೋಳಿಗಳಿಗೆ ತಿನ್ನಿಸುತ್ತಿದ್ದೆವು. ಸ್ವಲ್ಪ ದೊಡ್ಡವರಾದ ಮೇಲೆ ಒಂದೊಂದು ಟಗರು ಮರಿಯನ್ನು ನಾವು ಮುತುವರ್ಜಿ ವಹಿಸಿ ಸಾಕುವಂತೆ ನಮ್ಮ ಅಜ್ಜ-ಅಜ್ಜಿ ಏರ್ಪಾಡು ಮಾಡಿದ್ದರು. ಮನೆಯಲ್ಲಿದ್ದ ಮೂರು ನಾಯಿಗಳಲ್ಲಿ ಒಂದೊಂದನ್ನು ಒಬ್ಬರು ಹಂಚಿಕೊಂಡು, ನಮ್ಮವುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದೆವು. ಹೀಗೆ ಸಾಕುತ್ತಿದ್ದ ಸಾಕು ಪ್ರಾಣಿಗಳು ಸಹ ಪರಸ್ಪರ ಸ್ನೇಹದಿಂದ ಇರುತ್ತಿದ್ದವು. ನಾಯಿ ನಾಯಿಗಳಿರಲಿ, ಬೆಕ್ಕು-ನಾಯಿಗಳು, ನಾಯಿ-ಕೋಳಿಗಳು ಪರಸ್ಪರ ಸ್ನೇಹದಿಂದ ಇರುವುದನ್ನು ನಾನು ನೋಡಿದ್ದೇನೆ. ನಮ್ಮ ಮನೆಯಲ್ಲಿದ್ದ ನಾಯಿ ಮತ್ತು ಬೆಕ್ಕು ಒಂದೇ ತಟ್ಟೆಯಲ್ಲಿ ಹಾಲು ಕುಡಿಯುತ್ತಿರುವ ಪೋಟೋ ಕೂಡಾ ತೆಗೆದಿಟ್ಟಿದ್ದೇನೆ. ನಾಯಿಯ ಬೆನ್ನ ಮೇಲೆ ಸವಾರಿ ಮಾಡುತ್ತಿರುವ ಕೋಳಿಯ ಚಿತ್ರಣ ಇನ್ನೂ ನನ್ನ ಮನಃಪಟಲದಲ್ಲಿ ಉಳಿದಿದೆ.

ಕವಿ ಕುವೆಂಪು, ರೈತಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ಕುಪ್ಪಳಿ ಮನೆಯಲ್ಲಿದ್ದ ನಾಯಿಗಳ ಸಂಖ್ಯೆ ಎರಡಂಕಿಗಿಂತ ಕಡಿಮೆಯಿರಲಿಲ್ಲ ಎಂಬುದು ಗಮನಾರ್ಹ. ಅವರು ನಾಯಿಗಳನ್ನು, ವಿಶೇಷವಾಗಿ ಬೇಟೆಯಲ್ಲಿ ಪಳಗಿದ್ದ ನಾಯಿಗಳನ್ನು ಹೆಚ್ಚು ಹಚ್ಚಿಕೊಳ್ಳುತ್ತಿದ್ದರು. ಅಂತಹ ಒಂದು ನಾಯಿ, ಹಂದಿಯಿಂದ ಗಾಯಗೊಂಡು ಮೃತಪಟ್ಟಾಗ ಅದಕ್ಕೆ ಒಂದು ಚರಮಗೀತೆಯನ್ನೂ ಕುವೆಂಪು ರಚಿಸಿರುವುದನ್ನು ನೋಡಿದ್ದೇವೆ. ಕಾನೂರು ಹೆಗ್ಗಡತಿಯಲ್ಲಿ, ಪುಟ್ಟಣ್ಣ ಸತ್ತ ನಾಯಿಯ ವಿಷಯದಲ್ಲಿ ತೋರುವ ಭಕ್ತಿ-ಗೌರವಗಳಲ್ಲಿಯೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಹುಲಿಯನ ಬಗೆಗಿನ ಗುತ್ತಿಯ ಪ್ರೇಮದಲ್ಲೂ ಕುವೆಂಪು ಅವರ ನಾಯಿಗಳ ಬಗೆಗಿನ, ಅವುಗಳ ’ಸೈಕಾಲಜಿ’ ಬೆಗೆಗಿನ ಅರಿವನ್ನು ಮನಗಾಣಬಹುದಾಗಿದೆ.
ಕುವೆಂಪು ಮೈಸೂರಿನ ಉದಯರವಿಯಲ್ಲಿದ್ದರೂ ಮಲೆನಾಡಿನ, ತಮ್ಮ ಮನೆಯ ಕನಸನ್ನೂ ಎಂದೂ ಬಿಟ್ಟವರಲ್ಲ. ತಮ್ಮ ಮನೆಯಲ್ಲಿ ಕೋಳಿ, ನಾಯಿ, ಹಸು, ಬೆಕ್ಕು ಮೊದಲಾದ ಸಾಕು ಪ್ರಾಣಿಗಳನ್ನು ಸಾಕುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಕೇವಲ ಸಾಕುಪ್ರಾಣಿಗಳನ್ನು ಮಾತ್ರವಲ್ಲದೆ, ಮನೆಯ ಮುಂದಿನ ಹೂದೋಟದಲ್ಲಿ ಬರುತ್ತಿದ್ದ ಹಕ್ಕಿ, ಅಳಿಲು ಮೊದಲಾದವುಗಳನ್ನು ಗಮನಿಸುತ್ತಿದ್ದರು. ಅವು ಮೊಟ್ಟೆ ಇಟ್ಟಾಗ, ಮರಿ ಮಾಡಿದಾಗ ಮಕ್ಕಳನ್ನು ಕರೆದು ತೋರಿಸುತ್ತಿದ್ದರು. ಒಮ್ಮೆ ದಾರಿಯಲ್ಲಿ ಇಲಿಯ ಬಿಲವೊಂದರಲ್ಲಿ ಅದು ಹೊರಗೆ ತಂದು ಹಾಕಿರುವ ಮಣ್ಣನ್ನು ತೋರಿಸಿ, ತೇಜಸ್ವಿ-ಚೈತ್ರರಿಗೆ ಇಲಿಯ ಬಿಲದ ಬಗ್ಗೆ ಆಸಕ್ತಿ ಮೂಡಿಸಿರುತ್ತಾರೆ. ಹುಡುಗಾಟದ ಈ ಇಬ್ಬರು, ತಂದೆ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆ, ಆ ಇಲಿಯ ಬಿಲವನ್ನು ಮಣ್ಣಿನಿಂದ ಮುಚ್ಚಿ ಏನೂ ಆಗದವರಂತೆ ಮುಂದೆ ಹೋಗಿರುತ್ತಾರೆ. ಮಾರನೆಯ ದಿನ ಹೋದಾಗ, ಇಲಿಯ ಬಿಲದಲ್ಲಿ ಅವರು ಮುಚ್ಚಿದ್ದ ಮಣ್ಣು ಪಕ್ಕಕ್ಕೆ ಸರಿಸಿ, ಇಲಿ ರಾಜಾರೋಷವಾಗಿ ಓಡಾಡಿಕೊಂಡಿರುವುದು ಗಮನಕ್ಕೆ ಬರುತ್ತದೆ. ಆ ವಿಷಯ ಕುವೆಂಪು ಅವರ ಗಮನಕ್ಕೆ ಬಂದಾಗ, ಇನ್ನೊಮ್ಮೆ ಹಾಗೆ ಮಾಡಬಾರದೆಂದು ತಿಳಿಸಿ ಹೇಳುತ್ತಾರೆ. ಸ್ವತಃ ತೇಜಸ್ವಿಯವರೇ ಒಂದು ಕಡೆ, ನನಗೆ ಪ್ರಾಣಿ-ಪರಿಸರದ ಆಸಕ್ತಿಯನ್ನು ಮೊದಲು ಮೂಡಿಸಿದವರೇ ನನ್ನ ತಂದೆ ಎಂದು ಹೇಳಿದ್ದಾರೆ.

ಉದಯರವಿಯಲ್ಲಿ ಒಮ್ಮೆ ಸಾಕಲು ತಂದಿದ್ದ ಕೋಳಿಮರಿಗಳನ್ನು, ನಾಲ್ಕೂ ಜನ ಮಕ್ಕಳಿಗೆ ಒಂದೊಂದು ಎಂದು ಹೇಳಿ, ಅವುಗಳ ಯೋಗಕ್ಷೇಮವನ್ನು ಅವರವರೇ ನೋಡಿಕೊಳ್ಳುವಂತೆ ಮಾಡಿರುತ್ತಾರೆ. ಚೈತ್ರ ಮತ್ತು ಕಲಾ ಅವರದು ಹೇಟೆಗಳಾದರೆ, ತೇಜಸ್ವಿ ಮತ್ತು ತಾರಿಣಿಯವರದು ಹುಂಜಗಳು. ನಾಲ್ಕೂ ಜನ ಪೈಪೋಟಿಯಲ್ಲೇ ಕೋಳಿಗಳನ್ನು ಸಾಕುತ್ತಿರುತ್ತಾರೆ. ಕೋಳಿಗಳು ಕೊಬ್ಬಿ ಬೆಳೆಯಲಾರಂಭಿಸುತ್ತವೆ. ಹೇಟೆಗಳು ಮೊಟ್ಟೆ ಇಡಲಾರಂಭಿಸುತ್ತವೆ. ಮಕ್ಕಳಿಗೆ ಅದನ್ನು ಕಂಡು ಖುಷಿಯೋ ಖುಷಿ. ಅಂತಹ ಖುಷಿಯ ದಿನಗಳಲ್ಲಿ ಒಂದು ದಿನ (೧೦.೬.೧೯೫೦) ಮನೆಯ ಕೈತೋಟದಲ್ಲಿದ್ದ ಹಲಸಿನ ಮರದ, ಮೊದಲ ಹಣ್ಣನ್ನು ಕತ್ತರಿಸಿ, ದೇವರಿಗೆ ಅರ್ಪಿಸಿ, ತಾವೂ ತಿನ್ನುವ ಕಾರ್ಯದಲ್ಲಿ ಮನೆಯವರೆಲ್ಲ ಮುಳುಗಿರುತ್ತಾರೆ. ಸ್ವತಃ ಹೇಮಾವತಿಯವರು ಹಲಸನ್ನು ಕತ್ತರಿಸುತ್ತಿದ್ದರೆ, ಕುವೆಂಪು ಹಾಗೆ ಹೀಗೆ ಎಂದು ಸಲಹೆ ಕೊಡುತ್ತಿರುತ್ತಾರೆ. ತೇಜಸ್ವಿ-ಚೈತ್ರ ಹೊರಗೆ ಆಡಲು ಹೋಗಿರುತ್ತಾರೆ. ತಾರಿಣಿ-ಕಲಾ ಇಬ್ಬರೂ ತಾಯಿಗೆ ಸಹಕರಿಸುತ್ತಿರುತ್ತಾರೆ. ದೇವರಿಗೆ ಅರ್ಪಣೆಯಾಗಿ, ಇನ್ನೇನು ತೊಳೆಯನ್ನು ಬಿಡಿಸ ಬಾಯಿಗಿಡಬೇಕು ಎನ್ನುವಷ್ಟರಲ್ಲಿ, ಹೊರಗಡೆ, ಒಮ್ಮೆಲೆ ಎಲ್ಲಾ ಕೋಳಿಗಳು ಕೂಗಲಾರಂಬಿಸುತ್ತವೆ. ಮನೆಯ ಒಳಗಿದ್ದವರು, ಹೊರಗಿದ್ದವರು ಎಲ್ಲರೂ ಒಮ್ಮೆಲೆ ಧಾವಿಸಿ ಬರುತ್ತಾರೆ. ನಾಯಿಯೊಂದು ಕೋಳಿಯನ್ನು ಹಿಡಿದುಬಿಟ್ಟಿರುತ್ತದೆ. ಅದು ಅವರ ಮನೆಯ ಸಾಕು ನಾಯಿಯಲ್ಲ. ಮನೆಯ ಸಾಕು ನಾಯಿಯ ಜೊತೆ ಕೋಳಿಗಳು ಸಲುಗೆಯಿಂದಲೇ ವರ್ತಿಸುತ್ತಿದ್ದವು. ಈಗ ಹಿಡಿದಿರುವುದು ಯಾವುದೊ ಕಂತ್ರಿನಾಯಿ. ಕಲಾ-ತಾರಿಣಿ ಇಬ್ಬರು ನನ್ನ ಕೋಳಿ ಹೋಯಿತು ಎಂದು ರೋಧಿಸುತ್ತಿರುತ್ತಾರೆ. ಸೇರಿದ್ದವರೆಲ್ಲರ ಕೂಗಾಟದ ನಡುವೆ, ಚೈತ್ರ-ತೇಜಸ್ವಿ ಬರುವಷ್ಟರಲ್ಲಿ, ಕುವೆಂಪು ಅವರೇ ನಾಯಿಯ ಬೆನ್ನು ಹತ್ತುತ್ತಾರೆ. ಅದು ಹಿಂದಿನ ಮನೆಯ ಕಡೆ ನುಗ್ಗುತ್ತದೆ. ಅವರ ಮನೆಯವರು ಹೊರಗೆ ಬಂದು ನಿಂತಿರುತ್ತರಾದರೂ, ನಾಯಿಯನ್ನು ಗದರಿಸುವ, ಕೋಳಿಯನ್ನು ಬಿಡಿಸುವ ಗೋಜಿಗೆ ಹೋಗದೆ, ಕೋಳಿ ಹಿಡಿದಿರುವ ನಾಯಿಯ ಬೆನ್ನು ಅಟ್ಟಿರುವ ಕುವೆಂಪು ಅವರನ್ನು ನೋಡುತ್ತಾ, ನಗುತ್ತಾ ಮೋಜನ್ನು ಅನುಭವಿಸುತ್ತ ನಿಂತಿರುತ್ತಾರೆ. ಅಷ್ಟರಲ್ಲಿ ನಾಯಿ ಅವರ ಮನೆಯೊಳಗೇ ನುಗ್ಗಲಾರಂಭಿಸುತ್ತದೆ. ನಾಯಿ ಕೋಳಿ ಹಿಡಿದು ಅವರ ಮನೆಯೊಳಗೆ ನುಗ್ಗುವ ಹಾಗೆ ಮುಂದುವರೆಯುತ್ತದೆ. ಅವರು ಬ್ರಾಹ್ಮಣರಾದ್ದರಿಂದ, ಕಲ್ಲು ಹೊಡೆದು, ನಾಯಿಯನ್ನು ಬೆದರಿಸಿ, ಓಡಿಸುವ ಹಾಗೂ ಕೋಳಿ ಬಿಡಿಸುವ ಯಾವ ಸಾಹಸಕ್ಕೂ ಅವರು ಕೈಹಾಕುವುದಿಲ್ಲ. ನಾಯಿ ಆ ಮನೆಯೊಳಗೆ ನುಗ್ಗುವಷ್ಟರಲ್ಲಿ ಅದನ್ನು ಬೆನ್ನು ಹತ್ತಿದ್ದ ಕುವೆಂಪು ಅಡ್ಡ ಬಂದಿದ್ದರಿಂದ, ನಾಯಿ ಗಾಬರಿಯಾಗಿ ಕೋಳಿಯನ್ನು ಅಲ್ಲೇ ಬಿಟ್ಟು ಆ ಮನೆಯ ಕಾಂಪೋಂಡು ನೆಗೆದು ಓಡಿ ಹೋಗಿರುತ್ತದೆ. ಅಷ್ಟರಲ್ಲಾಗಲೇ ಕೋಳಿ ತನ್ನ ಕೊನೆಯ ಉಸಿರನ್ನೆಳೆದಿರುತ್ತದೆ. ಕುವೆಂಪು ಆ ಕೋಳಿಯನ್ನು ಹಿಡಿದು ಮನೆಯ ಕಡೆ ಹೆಜ್ಜೆ ಹಾಕುತ್ತಾರೆ. ಅಷ್ಟರಲ್ಲಿ ತೇಜಸ್ವಿ-ಚೈತ್ರರೂ ಬರುತ್ತಾರೆ. ಸತ್ತಿರುವುದು ತಾರಿಣಿ ಸಾಕುತ್ತಿದ್ದ ಕೋಳಿ ಎಂದು ತಿಳಿದಾಗ, ತಾರಿಣಿಯ ದುಃಖ ಹೆಚ್ಚಾಗುತ್ತದೆ. ಅಳುತ್ತಾ, ನಾಯಿಯನ್ನು ಶಪಿಸುತ್ತಾ ತಾರಿಣಿ ರೋಧಿಸುತ್ತಾರೆ. ಇನ್ನುಳಿದವರು ಸಧ್ಯ ನಮ್ಮ ಕೋಳಿ ಸಿಕ್ಕಿಹಾಕೊಳ್ಳಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುತ್ತಾರೆ. ಪ್ರೀತಿಯಿಂದ ಸಾಕಿದ್ದ ಕೋಳಿ ಸತ್ತು, ತುಳಸಿಕಟ್ಟೆಗೆ ಅನತಿ ದೂರದಲ್ಲಿ ನಿಷ್ಪಂದವಾಗಿ ಬಿದ್ದಿದ್ದನ್ನು ಕಂಡು ತಾರಿಣಿ ಅಳುತ್ತಲೇ ಇರುತ್ತಾರೆ. ಮಗಳ ಅಳುವನ್ನು ನಿಲ್ಲಿಸಲು, ಕುವೆಂಪು ಅವರು ದೇವರ ಮನೆಗೆ ಹೋಗಿ ಹೂವೊಂದನ್ನು ತಂದು, ಆ ಸತ್ತಕೋಳಿಯ ಮೇಲೆ ಇಟ್ಟು, ’ಅಳಬೇಡ, ನಿನ್ನ ಕೋಳಿ ದೇವರ ಹತ್ತಿರ ಹೋಯಿತು’ ಎಂದು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ತಾರಿಣಿಯ ದುಃಖವೇನು ಕಡಿಮೆಯಾಗುವುದಿಲ್ಲ. ಕೊಯ್ದು ಇಟ್ಟಿದ್ದ ಹಲಸಿನ ತೊಳೆ ಹಾಗೆಯೇ ಉಳಿದುಬಿಡುತ್ತದೆ.

ಅದೇ ದಿನ ಸಂಜೆ ಎಳುಗಂಟೆಯ ಹೊತ್ತಿಗೆ ಕುವೆಂಪು ಮಗಳನ್ನು ಕರೆದು, ಪಕ್ಕದ ಕುರ್ಚಿಯಲ್ಲಿ ಕೂರಿಸಿಕೊಂಡು ಅಂದು ಬರೆದಿದ್ದ ಕವಿತೆಯನ್ನು ಓದುತ್ತಾರೆ. ಆ ಪದ್ಯದ ಅರ್ಥ ಎಷ್ಟು ಅರ್ಥವಾಯಿತೊ ಇಲ್ಲವೊ ತಾರಿಣಿಗೆ ಮಾತ್ರ ಸಮಾಧಾನವಾಗುತ್ತದೆ. ತನ್ನ ಪ್ರೀತಿಯ ಕೋಳಿಯ ಮೇಲೆ ಬರೆದಿದ್ದ ಪದ್ಯದ ದೆಸೆಯಿಂದ ಆಕೆಯ ದುಃಖ ಕಡಿಮೆಯಾಗುತ್ತದೆ. ಆ ಕವಿತೆಯ ಶೀರ್ಷಿಕೆ ’ಬ್ರಾಹ್ಮನಾಯಿ-ಶೂದ್ರಕೋಳಿ’. ಅದು ’ಪ್ರೇತ-ಕ್ಯೂ’ ಕವನಸಂಕಲನದಲ್ಲಿ ’ಸಂಭವಿಸಿದ ಒಂದು ಘಟನೆಯಿಂದ ಪ್ರೇರಿತ’ ಎಂಬ ಅಡಿಟಿಪ್ಪಣಿಯೊಂದಿಗೆ ಪ್ರಕಟವಾಗಿದೆ.

ಪದ್ಯದ ಮೊದಲ ಭಾಗದಲ್ಲಿ ಅವರ ಮನೆಯಲ್ಲಿದ್ದ ಕೋಳಿ, ಅದನ್ನು ಹಿಡಿಯಲು ಹೊಂಚುತ್ತಿದ್ದ ಕಂತ್ರಿನಾಯಿ, ಹಾಗೂ ತಮ್ಮನೆಯ ನಾಯಿ ಮತ್ತು ಕೋಳಿಯಲ್ಲಿದ್ದ ಸ್ನೇಹದ ವಿಷಯ ಬರುತ್ತದೆ. ಎರಡನೆಯ ಭಾಗದಲ್ಲಿ ಅಂದು ನಡೆದ ಘಟನೆಯ ಚಿತ್ರಣವಿದ್ದರೆ, ಮೂರನೆಯ ಭಾಗದಲ್ಲಿ, ತನ್ನ ಕೋಳಿಯ ಸಾವಿಗಾಗಿ ಮರುಗುವ ಪುಟ್ಟಹುಡುಗಿಯ ಚಿತ್ರಣ ಮತ್ತು ನಾಯಿಯನ್ನು ಗದರಿಸಿ ಕೋಳಿಯನ್ನು ಉಳಿಸಬಹುದಾದರೂ, ಆ ನಿಟ್ಟಿನಲ್ಲಿ ಏನನ್ನೂ ಮಾಡದೇ ಇದ್ದರೂ, ಇಡೀ ಘಟನೆಯನ್ನು ಮೋಜು ಎಂಬಂತೆ ನೋಡಿ ನಗುತ್ತಿದ್ದವರ ಚಿತ್ರಣವಿದೆ.

ಶೂದ್ರಕೋಳಿ ಮೇಯುತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮನಾಯಿ ಹೊಂಚುತಿತ್ತು
ಅಲ್ಲಿ ಇಲ್ಲಿ.
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತಿತ್ತು.
ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನಪಟ್ಟೆ;
ಒಡಲಿನಲ್ಲಿ ಖಾಲಿಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿಹತ್ತೆ ಬಂತು;
ಸಾಧು ಎಂದು ಶೂದ್ರಕೋಳಿ
ನೋಡೆ ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್ವವೀಡಿನೊಂದು ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ಗೆ ಶೂದ್ರಕೋಳಿ
ಭಕ್ಷ್ಯವಾಯ್ತು!
ಮರಿಯತನದಿ ಮೊದಲುಗೊಂಡು
ಸಾಕಿ ಸಲಹಿ ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೊಳೋ ಎಂದು ಹುಡುಗಿಯೊಂದು
ಅಳುತಲಿತ್ತು.
’ಶುದ್ಧ ಶೂದ್ರ ಹುಡುಗಿ’ ಎಂದು
ಹಾರ್ವನೊಡನೆ ಹಾರ್ತಿ ನಿಂದು,
ಕೇಳಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚೆಂದ ನೋಡಿ
ನಗುತಲಿತ್ತು!

ಪದ್ಯವನ್ನು ಕೇಳಿ ಪುಟ್ಟ ಬಾಲಕಿಗೆ ತನ್ನ ಪ್ರೀತಿಯ ಹುಂಜದ ಸಾವಿನ ದುಃಖದ ತೀವ್ರತೆ ಕಡಿಮೆಯಾಗುತ್ತದೆ. ಅದನ್ನು ಕುರಿತು ತಾರಿಣಿಯವರು ಹೀಗೆ ಹೇಳಿದ್ದಾರೆ. ನನ್ನ ಕೋಳಿ ಬಗ್ಗೆ ತಂದೆಯವರು ಕವನ ಬರೆದದ್ದು ಮನಸ್ಸಿನ ದುಃಖ ಕಡಿಮೆ ಮಾಡಿತು. ಅದಕ್ಕೆ ಸಂದಿರುವ ಗೌರವಕ್ಕೆ ಹೆಮ್ಮೆಯಾಯಿತು. ತುಂಬ ಪ್ರೀತಿಯಿಂದ ಸಾಖಿದ ಕೋಳಿಯ ದುರಂತ ಅಂತ್ಯದ, ದುಃಖ ವೇದನೆಗಳು ಕಡಿಮೆಯಾದವು. ಚೈತ್ರ-ತೇಜಸ್ವಿ ಅನೇಕ ದಿನಗಳವರೆಗೆ ಆ ನಾಯಿಗೆ ಸರಿಯಾಗಿ ಚಚ್ಚಬೇಕೆಂದು ಹುಡುಕುತ್ತಿದ್ದರು. ಆದರೆ ಪರಮಕುತಂತ್ರಿ ನಾಯಿ ಅವರಿಗೆ ಕಾಣಲು ಸಿಗುತ್ತಿರಲಿಲ್ಲ. ಇನ್ನುಮುಂದೆ ನಮ್ಮ ಮನೆಯಲ್ಲಿ ಕೋಳಿ ಮರಿ ತರುವುದನ್ನು ನಿಲ್ಲಿಸಿದರು. ನನ್ನ ದುಃಖ ಅಳುವಿನಿಂದಾಗಿ ಅಂದಿಗೆ ನಮ್ಮ ಕೋಳಿ ಸಾಕಣೆಗೆ ಪೂರ್ಣವಿರಾಮವಾಯಿತು.
ಕೋಳಿ ಸಾಕುವುದನ್ನು ಇವರು ನಿಲ್ಲಿಸಿರಬಹುದು. ಆದರೆ ಹಲಸಿನ ಮರ ಹಣ್ಣು ಕೊಡುವುದನ್ನು ನಿಲ್ಲಿಸಿಲ್ಲ. ಪ್ರತಿವರ್ಷ ಹಣ್ಣು ಕತ್ತರಿಸುವಾಗಲೆಲ್ಲಾ, ನನ್ನ ಕೋಳಿಯ ಅಂತ್ಯದ ದುರಂತ ಘಟನೆಯೊಂದಿಗೆ ತಂದೆಯವರು ಬರೆದ ಕವನ ಇಂದಿಗೂ ನೆನಪಾಗುವುದು ಎನ್ನುತ್ತಾರೆ ತಾರಿಣಿಯವರು.

3 comments:

Rajanikanth said...

"ಧ್ವನಿ" ಪೂರ್ಣ ಪದ್ಯ...

Badarinath Palavalli said...

ಸಾಕು ಪ್ರಾಣಿಗಳನ್ನು ಹೊಂದಲು ಪ್ರೇರೇಪಿಸುವ ಈ ಬರಹ ಸಂಗ್ರಹ ಯೋಗ್ಯ.
www.badari-poems.blogspot.com

ಶಾನಿ said...

ನಾಯಿ ಬೆಕ್ಕುಗಳ ನಿಕಟ ಒಡನಾಟದ ಆ ದಿನಗಳನ್ನು ನೆನಪಿತು ನಿಮ್ಮ ಸುಂದರ ಬರಹ!