Tuesday, December 18, 2012

ನಮ್ಮ ಗಣೇಶ ಮೇಷ್ಟ್ರು


ನಾಳೆ 19.12.2012 ಬುಧವಾರ ಸಂಜೆ 4.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಮ್ಮ ಮೇಷ್ಟ್ರು ಡಾ. ಕೈದಾಳ ರಾಮಸ್ವಾಮಿ ಗಣೇಶ ಅವರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿದೆ. ಅವರಿಗೆ "ಕೈದಾಳ" ಎಂಬ ಅಭಿನಂದನಾ ಗ್ರಂಥವನ್ನು ಅವರ ವಿದ್ಯಾರ್ಥಿಗಳು, ಅಭಿಮಾನಿಗಳು ಮಿತ್ರರು ಸೇರಿ ಸಮರ್ಪಿಸಲಿದ್ದಾರೆ.
ಅವರ ಮತ್ತು ನನ್ನ ಗುರು-ಶಿಷ್ಯ ಸಂಬಂಧವನನ್ಉ ಕುರಿತಂತೆ ಈ ಬರಹ

೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಸಂಜೆ ವೇಳೆ ಕಳೆಯಲು, ಜೊತೆಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡುತ್ತಿದ್ದುದರಿಂದ ಉಪಯೋಗವಾಗಬಹುದೆಂದು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಶಾಸನಶಾಸ್ತ್ರ ಪ್ರವೇಶ ತರಗತಿಗೆ ಸೇರಿಕೊಂಡಿದ್ದೆ. ಮೊದಲ ವರ್ಷ ಕಳೆದು ಪ್ರೌಢ ತರಗತಿಗಳು ಆರಂಭವಾಗುವಷ್ಟರ ಹೊತ್ತಿಗೆ ನಾನು ಸಾಯಂಕಾಲದ ವೇಳೆ ಕರ್ತವ್ಯ ನಿರ್ವಹಿಸಬೇಕಾಗಿದ್ದರಿಂದ, ಆರಂಭದ ತರಗತಿಗಳಿಗೆ ಹೋಗಲಾಗಲೇ ಇಲ್ಲ. ಶಾಸನಶಾಸ್ತ್ರ ತರಗತಿಗಳಲ್ಲಿ ನಡೆಯುತ್ತಿದ್ದ ಕರ್ನಾಟಕ ಸಾಂಸ್ಕೃತಿಕ ಇತಿಹಾಸದ ಬಗೆಗಿನ ಚರ್ಚೆಗಳು ನನ್ನ ಆ ಕಡೆಗೆ ಎಳೆಯುತ್ತಲೇ ಇದ್ದವು. ಒಂದು ದಿನ ನನ್ನ ಸಹದ್ಯೋಗಿಯನ್ನು ಹೇಗೋ ಒಪ್ಪಿಸಿ ತರಗತಿಗೆ ನಡೆದೇ ಬಿಟ್ಟೆ. ಇನ್ನೂ ಮೆಟ್ಟಿಲು ಹತ್ತುತ್ತಿರುವಾಗಲೇ ಹಳಗನ್ನಡ ಪದ್ಯವೊಂದರ ಸಾಲುಗಳು ಕಿವಿಗಪ್ಪಳಿಸುತ್ತಿದ್ದವು. ಧ್ವನಿ ಹೊಸದಾಗಿತ್ತು ಅಂದರೆ ಪ್ರವೇಶ ತರಗತಿಗಳಲ್ಲಿ ಇದ್ದ ಮೇಷ್ಟ್ರು ಇವರಾಗಿರಲಿಲ್ಲ. ಮುಂದುವರೆದು ಬಾಗಿಲಲ್ಲಿ ನಿಂತಾಗ, ನಾನು ಒಳ ಬರಲೇ ಎಂದು ಕೇಳುವಷ್ಟರಲ್ಲಿ ಬನ್ನಿ ಬನ್ನಿ ಎಂದು ಕುಳಿತುಕೊಳ್ಳಲು ಜಾಗ ತೋರಿಸಿ ಮತ್ತೆ ಪಾಠ ಮಾಡುತ್ತಿದ್ದ ಪದ್ಯಗಳಲ್ಲಿ ಮುಳುಗಿದರು. ಪದ್ಯಗಳನ್ನು ಅವರು ಓದುತ್ತಿದ್ದ ರೀತಿಯೇ ನನ್ನನ್ನು ಮಂತ್ರಮುಗ್ಧನನ್ನಾಗಿಸಿತ್ತು. ಅತ್ಯಂತ ಸ್ಪಷ್ಟವಾಗಿ, ಪದ್ಯವನ್ನು ಓದಿ, ಬಿಡಿಸಿ ಓದಿ, ಅರ್ಥೈಸಿ, ಅನ್ವಯಿಸಿ ಅವರು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಒಂದು ಗಂಟೆಯ ಕಾಲ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನ ಹೆಸರು ಕೇಳಿ ಅಟೆಂಡೆನ್ಸ್ ರಿಜಿಸ್ಟರಿನಲ್ಲಿ ಹೆಸರು ಬರೆದುಕೊಂಡರು ಮೇಷ್ಟ್ರು.
ಸೊಗಸಾದ ಹಳಗನ್ನಡ ಪಾಠವನ್ನು ನಾನು ಮೊದಲ ಬಾರಿಗೆ ಕೇಳಿದ್ದೆ. ತರಗತಿಯ ನಂತರ, ಪಾಠ ಮಾಡಿದ ಮೇಷ್ಟ್ರು ಡಾ.ಕೆ.ಆರ್.ಗಣೇಶ ಅವರೆಂತಲೂ, ಅವರು ಮಾಡುತ್ತಿದ್ದುದು ಬೊಪ್ಪಣನ ಗೊಮ್ಮಟಸ್ತುತಿಯೆಂತಲೂ ನನಗೆ ತಿಳಿಯಿತು. ಹೀಗೆ ನನ್ನ ಮತ್ತು ಮೇಷ್ಟ್ರ ಮುಖಾಮುಖಿಯಾಯಿತು. ಅಂದಿನಿಂದ ನಾನು ಹಠ ಹಿಡಿದು ನನ್ನ ಕೆಲಸದ ಅವಧಿಯನ್ನು ಬದಲಾಯಿಸಿಕೊಂಡು ತರಗತಿಗಳಿಗೆ ಹಾಜರಾಗತೊಡಗಿದೆ. ಗಣೇಶ ಮೇಷ್ಟ್ರು ನಮ್ಮ ಮೇಷ್ಟ್ರು ಆಗಿದ್ದರು! ಪ್ರೌಢ ತರಗತಿಯಲ್ಲಿ ಮೇಷ್ಟ್ರ ಜೊತೆಯಲ್ಲಿ ಎರಡು ಬಾರಿ ಪ್ರವಾಸ ಹೋಗಿಬರುವ ಅವಕಾಶ ನನಗೆ ಲಭಿಸಿತು. ಒಮ್ಮೆ ಶ್ರವಣಬೆಳಗೊಳಕ್ಕೆ ಹೋಗಿಬಂದೆವು. ಎರಡನೆಯ ಬಾರಿ ಹತ್ತು ದಿನಗಳ ಭರ್ತಿ ಪ್ರವಾಸದಲ್ಲಿ ಅರಳಗುಪ್ಪೆ, ಅರಸೀಕೆರೆ, ಹೊಂಬುಚ್ಚ, ಕೋಟಿಪುರ, ಬನವಾಸಿ, ಹಾನಗಲ್ಲು, ಗದಗ, ಬದಾಮಿ, ಪಟಟ್ದಕಲ್ಲು, ಐಹೊಳೆ, ಮಹಾಕೂಟ ಎಲ್ಲವನ್ನೂ ಅಧ್ಯಯನದ ದೃಷ್ಟಿಯಿಂದ ನೋಡುವ ಅವಕಾಶ ನನ್ನದಾಯಿತು. ಆಗ ಗಣೇಶ ಮೇಷ್ಟ್ರ ನಿಜವಾದ ವಿದ್ವತ್ತು, ಅವರೊಳಗಿನ ಅತ್ಯಂತ ಯಶಸ್ವೀ ಶಿಕ್ಷಕ, ಅವರ ಪ್ರತಿಭೆ, ವಿಶಾಲವಾದ ಕಾರ್ಯಕ್ಷೇತ್ರ ಅನುಭವ ಎಲ್ಲವೂ ನನಗೆ ಮನದಟ್ಟಾಯಿತು.
ಬಾ.ರಾ. ಗೋಪಾಲ ಪ್ರಶಸ್ತಿ ಸಮಾರಂಭ

ಪ್ರೌಢ ತರಗತಿಗಳು ಮುಗಿಯುವಷ್ಟರಲ್ಲಿ, ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹಸ್ತಪ್ರತಿ ತರಗತಿಗಳು ನಡೆಯುತ್ತವೆ ಎಂದು, ಅಲ್ಲಿಯೂ ಗಣೇಶ ಮೇಷ್ಟ್ರು ಪಾಠ ಮಾಡುತ್ತಾರೆಂದು ತಿಳಿದು, ಹೋಗಿ ಸೇರಿಕೊಂಡೆ. ಅಲ್ಲಿಯೂ ಅಷ್ಟೆ ಕನ್ನಡ ಕಾವ್ಯ ಛಂದಸ್ಸು ಪಾಠ ಕೇಳುವ ಸೌಭಾಗ್ಯ ಸಿಕ್ಕಿತು. ಹಸ್ತಪ್ರತಿ ತರಗತಿಗಳು ಮುಗಿಯುವಷ್ಟರಲ್ಲಿ, ಪ್ರತಿಷ್ಠಾನದಲ್ಲೇ ಸಿರಿಕಂಟ ಕಾವ್ಯಾಸಕ್ತರ ಕೂಟದ ರಚನೆಯಾಯಿತು. ನಾನು ಸಂಚಾಲಕನಾಗಿದ್ದೆ. ಸಿರಿಕಂಟದ ಆಶ್ರಯದಲ್ಲಿ ಹಳಗನ್ನಡ ಕಾವ್ಯಾಭ್ಯಾಸ ಶಿಭಿರಗಳನ್ನು ನಡೆಸುತ್ತಿದ್ದೆವು. ಗಣೇಶ ಮೇಷ್ಟ್ರ ಮಾರ್ಗದರ್ಶನ ಅದಕ್ಕಿತ್ತು. ಕನ್ನಡ ಸಾಹಿತ್ಯದ ಆಳಕ್ಕಿಳಿಯಲು ನನಗೆ ನೆರವಾಗಿದ್ದೇ ಆ ತರಗತಿಗಳು. ಆ ವರ್ಷವೂ ಮೇಷ್ಟ್ರ ಮಾರ್ಗದರ್ಶನದಲ್ಲಿ ಕರ್ನಾಟಕದ ಹಲವಾರು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ಸ್ಥಳಗಳನ್ನು ಸಂದರ್ಶಿಸುವ ಸೌಭಾಗ್ಯ ನನ್ನದಾಗಿತ್ತು.
ಆ ನಡುವೆ ನನ್ನ ಕನ್ನಡ ಎಂ.ಎ. ಮುಗಿದಿತ್ತು. ಕನ್ನಡ ಛಂದಸ್ಸಿಗೆ ನಾನು ಮಾಡಿಕೊಂಡಿದ್ದ ನೋಟ್ಸುಗಳನ್ನು ಸ್ವಲ್ಪ ವಿಸ್ತರಿಸಿ ಪುಸ್ತಕರೂಪಕ್ಕೆ ತಂದಿದ್ದೆ. ಅದನ್ನು ಪ್ರಕಟಿಸಲು ಸುಮುಖ ಪ್ರಕಾಶನದವರು ಮುಂದೆ ಬಂದಿದ್ದರು. ಆಗ ನಾನು ಅದನ್ನು ಮೇಷ್ಟ್ರ ಗಮನಕ್ಕೆ ತಂದೆ. ಅವರು ಅದನ್ನೊಮ್ಮೆ ಇಡಿಯಾಗಿ ಓದಿ, ತಿದ್ದಿ, ಚೊಕ್ಕದಾದ ಮುನ್ನುಡಿಯನ್ನೂ ಬರೆದು ನನ್ನನ್ನು ಆಶೀರ್ವದಿಸಿದ್ದರು. ಹಾಸನದಲ್ಲಿ ನನ್ನ ಮದುವೆ ನಡೆಯುವುದಿತ್ತು. ಅಷ್ಟು ದಊರ ಬರುತ್ತಾರೊ ಇಲ್ಲವೊ ಎಂಬ ಅನುಮಾನದಿಂದಲೇ ಮದುವೆ ಆಹ್ವಾನವಿತ್ತಿದ್ದೆ. ಆಶ್ಚರ್ಯವೆಂದರೆ, ಮದುವೆಯ ದಿನ ಬೆಳಿಗ್ಗೆ ಅವರು ನನ್ನೆದುರಿಗೆ ಪ್ರತ್ಯಕ್ಷಾವಾಗಿದ್ದರು. ನಾನಾಗ ಮದುವೆ ಗಂಡಿನ ವೇಷದಲ್ಲಿದ್ದು, ವಾದ್ಯದವರ ಹಿಂದೆ, ಬಂಧು-ಬಳಗದವರ ಸ್ನೇಹಿತರ ನಡುವೆ ನಡೆದುಕೊಂಡು ಛತ್ರ ಪ್ರವೇಶ ಮಾಡುವುದರಲ್ಲಿದ್ದೆ. ಮೇಷ್ಟ್ರನ್ನು ನೋಡಿ ನಾನು, ತಕ್ಷಣ ಎಲ್ಲದರಿಂದ ಬಿಡಿಸಿಕೊಂಡು ಒಬ್ಬರೇ ನಿಂತಿದ್ದ ಅವರನ್ನು ಮಾತನಾಡಿಸಲು ಓಡಿದೆ. ನಾನು ಹಾಗೆ ಓಡಿದ್ದನ್ನು ಕಂಡು ಅಲ್ಲಿದ್ದವರೆಲ್ಲಾ ಸ್ವಲ್ಪ ಗೊಂದಲಕ್ಕೀಡಾಗಿಬಿಟ್ಟಿದ್ದರು. ಅದು ಮೇಷ್ಟ್ರ ಗಮನಕ್ಕೂ ಬಂದಿತ್ತು. ತಕ್ಷಣ, ಅವರೇ ಮುಂದೆ ಬಂದು, ನೀವು ಹೋಗಿ, ಅವರ ಜೊತೆ ನಿಲ್ಲಿ. ನಾನು ಒಬ್ಬನೇ ಇದ್ದರೂ ನನಗೇನೂ ಯೋಚನೆಯಿಲ್ಲ. ಇನ್ನೇನು ಉಳಿದವರು ಬಂದುಬಿಡುತ್ತಾರೆ ಎಂದು ನನ್ನನ್ನು ಹಿಂದಕ್ಕೆ ಓಡಿಸಿಬಿಟ್ಟಿದ್ದರು!
ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹತ್ತಿದ್ದ ಹಳಗನ್ನಡ ಕಾವ್ಯದ ರುಚಿಯನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಆಗ ನಾನು ಹಿರಿಯರಾದ ಜಿ.ಎಸ್.ಎಸ್.ರಾವ್, ಸಂಧ್ಯಾ ಮೇಡಂ, ಮನೋಜ್ ಅವರನ್ನು ಸೇರಿಸಿಕೊಂಡು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ಮೇಷ್ಟ್ರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುವ ಕಾರ್ಯತಂತ್ರವನ್ನು ರೂಪಿಸಿದೆ. ಅದು ಮನೋಜ್ ಅವರ ಮನೆಯಲ್ಲಿ ಕಾರ್ಯಗತವಾಯಿತು. ನನ್ನ ಶ್ರೀಮತಿ ಶ್ವೇತಾ ಮತ್ತು ಮನೋಜ್ ಅವರ ಶ್ರೀಮತಿ ರಂಜಿತಾ ನಮ್ಮ ಗುಂಪಿಗೆ ಸೇರಿಕೊಂಡರು. ಐದು ತಿಂಗಳ ನನ್ನ ಮಗಳನ್ನು ನಡುವೆ ಮಲಗಿಸಿಕೊಂಡು ನಾವು ಸುತ್ತಲು ಕುಳಿತು ಕಾವ್ಯವನ್ನು ಓದಿ ನಮಗೆ ತೋಚಿದಂತೆ ಅರ್ಥೈಸುತ್ತಿದ್ದೆವು. ಮಾರ್ಗದರ್ಶಕರಾಗಿದ್ದ ಮೇಷ್ಟ್ರು ನಮ್ಮನ್ನು ತಿದ್ದುತ್ತಿದ್ದರು. ನಮ್ಮ ತಂಡದ ಯಾರೇ ತಪ್ಪು ಹೇಳಿದರೂ, ಅದನ್ನು ತಪ್ಪು ಎನ್ನದೆ, ಅದೂ ಒಂದು ರೀತಿಯಲ್ಲಿ ಸರಿ ಎಂದು ಹೇಳಿ, ನಂತರ ಅವರೇ ಅದನ್ನು ವಿವರಿಸುತ್ತಿದ್ದರು. ಅವರು ಕಾವ್ಯವನ್ನು ಓದುವ ರೀತಿ, ಪದವಿಭಾಗ, ಅನ್ವಯ, ಸ್ವಾರಸ್ಯ ಮೊದಲಾದವನ್ನು ನಿಧಾನವಾಗಿ ಕಲಿಸಿದರು. ಆದರೆ ಅವರು ಅದನ್ನು ನಮಗೆ ಕಲಿಸುತ್ತಿದ್ದೇನೆ ಎಂದು ಯಾವತ್ತೂ ಹೇಳಲಿಲ್ಲ. ನಮಗೂ ಹಾಗೆ ಅನ್ನಿಸಲಿಲ್ಲ. ಆದರೆ ನಮಗೆ ಆಶ್ಚೆರ್ಯವಾಗುವ ರೀತಿಯಲ್ಲಿ ನಾವು ಅದನ್ನು ಕಲಿಯುತ್ತಿದ್ದೆವು.
ರಾಮಾಯಣ ದರ್ಶನಂ ತರಗತಿಯಲ್ಲಿದ್ದ ನಾವು ಆರೂ ಜನರು ಮೇಷ್ಟ್ರ ಮಾರ್ಗದರ್ಶನದಲ್ಲಿ ಭುವನೇಶ್ವರ, ಪುರಿ, ಕೊನಾರ್ಕ್ ಮೊದಲಾದ ಕಡೆ ಒಂದು ಪ್ರವಾಸ ಮಾಡಿ ಬಂದೆವು. ತರಗತಿಗಳು ವಾರಕ್ಕೆ ಒಂದು ದಿನ ನಡೆಯುತ್ತಿದ್ದವು. ಅದರ ನಡುವೆ, ಹಿರಿಯರಾದ ಜಿ.ಎಸ್.ಎಸ್. ರಾವ್ ಅವರ ಆರೋಗ್ಯದಲ್ಲಿ ಏರುಪೇರಾದಾಗ, ಅವರು ಹುಷಾರಾದ ಮೇಲೆ ಅವರ ಮನೆಯಲ್ಲೇ ತರಗತಿಗಳು ನಡೆಯಲಾರಂಭಿಸಿದವು. ಸುಮಾರು ಮೂರೂವರೆ ವರ್ಷಗಳ ಕಾಲ, ವಾರಕ್ಕೆ ಒಂದು ದಿನ, ಒಂದು-ಒಂದೂವರೆ ಗಂಟೆಗಳ ಕಾಲ ನಮ್ಮ ಕಾವ್ಯಾಧ್ಯಯನ ನಡೆದೆ ಯಶಸ್ವಿಯಾಗಿ ಮುಗಿಯಿತು! ಎಷ್ಟೋ ದಿನಗಳು, ಅವರು ಬರುವಾಗಲೇ, ಬಿಸಿಬಿಸಿ ಬನ್ ಅಥವಾ ಪ್ಲೇನ್ ಕೇಕ್ ಅಥವಾ ಕಡ್ಲೆಬೀಜವನ್ನೂ ತರುತ್ತಿದ್ದರು. ಅದನ್ನು ನಮಗೆ ಕೊಟ್ಟು,ನಾವು ತಿಂದು ಮುಗಿಸಿದ ಮೇಲೆಯೇ ತರಗತಿಗಳು ಆರಂಭವಾಗುತ್ತಿದ್ದವು. ಆಗಾಗ ನನ್ನ ಮಗಳಿಗೆ ಚಾಕೊಲೇಟ್ ಸಹ ಇರುತ್ತಿತ್ತು. ಅದರ ನಡುವೆಯೇ ನನ್ನ ಶ್ರೀಮತಿ ಮುಕ್ತವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡುತ್ತಿದ್ದಳು. ಅದಕ್ಕೂ ಮೇಷ್ಟ್ರು ಆಗಾಗ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಕೆಲವೊಮ್ಮೆ ನಮ್ಮ ಮನೆಗೇ ಬಂದು ಕಾವ್ಯಮೀಮಾಂಸೆ, ಭಾಷಾಚರಿತ್ರೆ ಪಾಠ ಮಾಡಿ, ನನ್ನ ಮಗಳೊಂದಿಗೆ ಸ್ವಲ್ಪ ಹೊತ್ತು ಆಟವಾಡಿ ಹೋಗುತ್ತಿದ್ದರು. ಆದ್ದರಿಂದ ನನ್ನ ಮಗಳಿಗೆ ಅವರು ಮೇಷ್ಟ್ರುತಾತ ಆಗಿದ್ದರು.
ನನ್ನ ಪಿಹೆಚ್.ಡಿ. ಅಧ್ಯಯನ ಆರಂಭವಾದಾಗ ನಾನು ಅವರ ಸಲಹೆಗಳನ್ನು ಕೇಳುತ್ತಿದ್ದೆ. ನಾನು ಕೇಳುತ್ತಿದ್ದ ಎಲ್ಲ ಅನುಮಾನಗಳಿಗೆ ಉತ್ತರಿಸುತ್ತಿದ್ದರೂ, ತೀರ್ಮಾನಗಳನ್ನು ನನಗೆ ಬಿಡುತ್ತಿದ್ದರು. ನನ್ನ ಮಹಾಪ್ರಬಂಧ ಅಂತಿಮವಾಗುತ್ತಿದ್ದಾಗಲೇ, ನನ್ನ ಮನೆಯೂ ನಿರ್ಮಾಣವಾಗುತ್ತಿತ್ತು. ನನ್ನ ಬರವಣಿಗೆಯನ್ನು ಅವರಿಗೊಮ್ಮೆ ತೋರಿಸಿ ಅಭಿಪ್ರಾಯ ಪಡೆಯುತ್ತಿದ್ದೆ. ಮಹಾಪ್ರಬಂದವನ್ನು ತಿದ್ದುವಲ್ಲಿ ಅವರ ಸಹಕಾರವನ್ನು ವರ್ಣಿಸಲಸಾಧ್ಯ. ಸ್ವತಃ ಅವರೇ ನನ್ನ ಕೇಲೇಜಿನ ಬಳಿ ಬಂದು, ನನ್ನ ಗ್ರಂಥಾಲಯಲದಲಿ ಕುಳಿತು, ಪ್ರೂಫ್ ನೋಡಿಕೊಡುತ್ತಿದ್ದರು. ಪ್ರೂಫ್ ನೋಡುವಾಗಲೇ ಅವರಿಗಾದ ಸಂದೇಹಗಳನ್ನು ಒಂದು ಹಾಳೆಯಲ್ಲಿ ಬರೆದು, ಇವುಗಳ ಕಡೆಗೆ ಗಮನ ಹರಿಸಿ ಎಂದು ನನಗೆ ಕೊಡುತ್ತಿದ್ದರು. ಅವರ ಸಂಗ್ರಹದ ಹಲವಾರು ಅಪರೂಪದ ಪುಸ್ತಕಗಳನ್ನು ನನಗೆ ತಂದುಕೊಟ್ಟು, ನಾನು ಗ್ರಂಥಾಲಯಗಳಿಗೆ ಅಲೆಯುವ ಶ್ರಮವನ್ನೂ ತಪ್ಪಿಸಿದ್ದರು. ಅವರ ಶಿಶ್ಯವಾತ್ಸಲ್ಯದಿಂದ ನಾನು ನನ್ನ ಪಿಹೆಚ್.ಡಿ. ಅಧ್ಯಯನವನ್ನು ಯಶಸ್ವಿಯಾಗಿ ಮುಗಿಸಿದೆ. ಅದು ಮುಂದೆ ಪುಸ್ತಕ ರೂಪದಲ್ಲಿ ಪ್ರಕಟವಾದಾಗ, ನನ್ನ ಇನ್ನೊಬ್ಬ ಮೇಷ್ಟ್ರೂ, ಮಾರ್ಗದರ್ಶಕರೂ ಆದ ಡಾ. ದೇವರಕೊಂಡಾರೆಡ್ಡಿ ಮತ್ತು ಡಾ. ಕೆ.ಆರ್. ಗಣೇಶ ಅವರಿಗೆ ಗೌರವಪೂರ್ವಕವಾಗಿ ಅರ್ಪಣೆ ಮಾಡಿದ್ದೆ.
ರಾಮಾಯಣದರ್ಶನಂ ಮುಗಿದ ಮೇಲೆ ಪಂಪಭಾರತವನ್ನು ನಮ್ಮ ತಂಡ ಅಧ್ಯಯನಕ್ಕೆ ಆರಿಸಿಕೊಂಡತು. ಗಣೇಶ ಮೇಷ್ಟ್ರು ಪಂಪನ, ಹಾಗೂ ಅವನ ಕಾವ್ಯದ ಗುಣಾವಗುಣಗಳನ್ನೆಲ್ಲಾ ಸರ್ವ ಆಯಾಮಗಳಿಂದ ನಮಗೆ ಬಿಡಿಸಿಟ್ಟಿದ್ದರು.  ಅಧ್ಯಯನದಲ್ಲಿ ಅವರ ಶ್ರದ್ಧೆ, ಶಿಷ್ಯಂದಿರಾದ ನಮಗೇ ನಾಚಿಕೆ ಮೂಡಿಸುವಂತಿತ್ತು! ಇಡೀ ಪಂಪಭಾರತದ ಪುಸ್ತಕವನ್ನು ಬಿಚ್ಚಿ. ಪ್ರತಿ ಹಾಳೆಯ ನಡುವೆ ಒಂದು ಬಿಳಿ ಹಾಳೆಯನ್ನು ಇಟ್ಟು ಮತ್ತೆ ಬೈಂಡ್ ಮಾಡಿಸಿದ್ದರು. ಹಲವಾರು ಹಳಗನ್ನಡದ ಕಾವ್ಯಗಳನ್ನು ಅವರು ಅದೇ ರೀತಿ ರೀ-ಬೈಂಡ್ ಮಾಡಿಸಿ ಇಟ್ಟುಕೊಂಡಿದ್ದರು. ಪ್ರತಿ ಪದ್ಯವನ್ನು ಓದಿ, ಅರ್ಥೈಸಿ, ಅನ್ವಯಿಸಿರುತ್ತಿದ್ದರು. ತಮ್ಮ ಅನುಮಾನಗಳನ್ನು ಬಿಳಿ ಹಾಳೆಯಲ್ಲಿ ಬರೆದಿರುತ್ತಿದ್ದರು. ಛಂದಸ್ಸು, ಅಲಂಕಾರ, ವಿಶೇಷ ಯಾವುದನ್ನೂ ಅವರು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ನಿಜವಾಗಿಯೂ ಹಳಗನ್ನಡದ ಅಧ್ಯಯನಕ್ಕೆ ಒಂದು ಮಾದರಿ ಎಂದರೆ ಅದು ನಮ್ಮ ಮೇಷ್ಟ್ರು ಮಾತ್ರ. ಪಂಪಭಾರತ ಮುಗಿಯುತ್ತಿದ್ದಂತೆ, ಅವರೇ ಹರಿಶ್ಚಂದ್ರಕಾವ್ಯವನ್ನು ಸೂಚಿಸಿ ಅಧ್ಯಯನವನ್ನು ಮುಂದುವರೆಸೆವಂತೆ ನಮ್ಮನ್ನು ಪ್ರೇರೇಪಿಸಿದ್ದಾರೆ.
ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯ ಇವೆಲ್ಲದರ ನಡುವೆಯೂ ಅವರು ಹಲವಾರು ಕ್ಷೇತ್ರಗಳಲ್ಲಿ ಆಸಕ್ತರು. ತಮ್ಮ ಹಳೆಯ ಸ್ಕೂಟರುಗಳನ್ನು ರಿಪೇರಿ ಮಾಡುವುದರಲ್ಲಿ, ಅವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ಅವರ ನೈಪುಣ್ಯತೆ ಅಗಾಧವಾದದ್ದು. ಅವರ ಕಂಪ್ಯೂಟರ್ ಜ್ಞಾನವನ್ನು ನೋಡಿ ನಮ್ಮ ಕನ್ನಡ ಮೇಷ್ಟ್ರುಗಳು ಕಲಿಯಬೇಕು. ಅತ್ಯಂತ ವೇಗವಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಟೈಪ್ ಮಾಡುವ ಚಾಕಚಕ್ಯತೆಯೂ ಅವರಿಗಿದೆ. ಅವರ ಕೈಬರಹವೂ ಅಷ್ಟೆ, ತಪ್ಪಿಲ್ಲದ ಸ್ಪಷ್ಟ ಬರವಣಿಗೆ. ಸಾವಿರಾರು ಜನರ ಹಸ್ತಪ್ರತಿಗಳ ನಡುವೆಯೂ ನಾನು ಅವರ ಕೈಬರಹದ ಹಸ್ತಪ್ರತಿಯನ್ನು ಸುಲಭವಾಗಿ ಗುರುತಿಸಬಲ್ಲೆ. ಅವರೇ ಸಿದ್ಧ ಪಡಿಸಿದ ಹಲವಾರು ನೋಟ್ಸುಗಳನ್ನು ಅವರೇ ಕ್ಸೆರಾಕ್ಸ್ ಮಾಡಿಸಿ ನಮಗೆ ಓದಲು ಕೊಟ್ಟಿದ್ದಾರೆ. ಅವರು ಸಿದ್ಧಪಡಿಸಿರುವ ಶಾಸನಗಳ, ಕಾಲೇಜಿನ ಪಠ್ಯಭಾಗಗಳ, ಕಾವ್ಯಭಾಗಗಳ ನೋಟ್ಸುಗಳನ್ನು ಹೇಗಿವೆಯೋ ಹಾಗೇ ಮುದ್ರಿಸಿದರೂ ಅತ್ಯುತ್ತಮ ಪುಸ್ತಕಗಳಾಗುತ್ತವೆ.
ಮೇಷ್ಟ್ರಿಗೆ ಹಳೆಯ ಹಿಂದಿ ಚಲನಚಿತ್ರಗೀತೆಗಳೆಂದರೆ ಇಷ್ಟ. ಹಲವಾರು ಸಿನಿಮಾದ ಸಿ.ಡಿ.ಗಳನ್ನು ಸಂಗ್ರಹಸಿದ್ದಾರೆ. ಹಲವಾರು ಯುದ್ಧ ಸರಣಿಯ ಇಂಗ್ಲಿಷ್ ಸಿನಿಮಾಗಳನ್ನು ನಾನು ಅವರಿಂದ ಸಿ.ಡಿ. ಪಡೆದು ನೋಡಿದ್ದೇನೆ. ಯಾವಾಗಲೂ ರೇಡಿಯೋ ಒಂದನ್ನು ಜೊತೆಯಲ್ಲಿರಿಸಿಕೊಂಡು, ತಮಗೆ ಬೇಕೆನ್ನಿಸಿದಾಗ, ಯಾವುದೋ ಸ್ಟೇಷನ್ನಿಗೆ ಟ್ಯೂನ್ ಮಾಡಿ, ಶಾಸ್ತ್ರೀಯ ಸಂಗೀತವನ್ನೊ, ಹಳೆಯ ಗೀತೆಗಳನ್ನು ಕೇಳುತ್ತ ಅವರು ದಿವ್ಯಾನಂದವನ್ನು ಅನುಭವಿಸಬಲ್ಲರು. ಕ್ರಿಕೆಟ್ ಬಗ್ಗೆಯೂ ಅಷ್ಟೆ! ಅದರಲ್ಲೂ ಟೆಸ್ಟ್ ಕ್ರಿಕೆಟ್ ಎಂದರೆ ಅವರಿಗೆ ಅಚ್ಚುಮೆಚ್ಚು. ಜೊತೆಗೆ, ಲೆಕ್ಕ ಪತ್ರಗಳನ್ನು ಇಡುವುದರಲ್ಲಿ, ಅವುಗಳನ್ನು ಆಡಿಟ್ ಮಾಡುವುದರಲ್ಲಿ ಅವರಿಗೆ ವಿಶೇಷ ಆಸಕ್ತಿಯಿದೆ. ಹಲವಾರು ಸಣ್ಣಪುಟ್ಟ ಸಂಘಸಂಸ್ಥೆಗಳಿಗೆ ಉಚಿತವಾಗಿ ಆಡಿಟ್ ಮಾಡಿಕೊಡುವ ಅವರ ಹವ್ಯಾಸ ಗಮನಾರ್ಹ.
ತಾನಾಯ್ತು, ತನ್ನ ಕೆಲಸವಾಯ್ತು. ತನ್ನಿಂದಂತೂ ಯಾರಿಗೂ ತೊಂದರೆಯಿಲ್ಲ. ಎಂದು ಅವರು ಬಾಯಿಬಿಟ್ಟು ಹೇಳದಿದ್ದರೂ, ಅದರಂತೆಯೇ ಬದುಕುತ್ತಿರುವವರು. ಅವರ ಪ್ರತಿಫಲಾಪೇಕ್ಷೆಯಿಲ್ಲದ ಕರ್ತವ್ಯಶೀಲತೆ, ವೃತ್ತಿಯ ಬಗೆಗಿನ ಗೌರವ, ಕ್ರಿಯಾಶೀಲ ಬದುಕು ಸದಾ ಅನುಕರಣೀಯ.


No comments: