Saturday, January 05, 2013

ತುರಿಸುವಾನಂದ


ಸ್ವಲ್ಪ ತಡೀರಿ...
ತಲೆಬರಹವನ್ನಷ್ಟೇ ನೋಡಿ, ನಿತ್ಯಾನಂದ ಸತ್ಯಾನಂದರ ಬಗ್ಗೆ ಕೇಳಿದ್ದವರು ಇದ್ಯಾವ ಆನಂದ? ’ತುರಿಸುವಾನಂದ’ ಎಂದು ತಲೆ ಕೆಡಿಸಿಕೊಳ್ಳಬೇಡಿ. ಬೇಕಾದರೆ ಹಾಗೇ ಕೆರೆದುಕೊಳ್ಳಿ. ಇದು ಯಾವ ನಿತ್ಯಾನಂದನ ಪೈಕಿಯೂ ಅಲ್ಲ. ಇದು ಒಂದು ರೀತಿಯಲ್ಲಿ ಸರ್ವಾನಂದ ಎನ್ನಬಹುದು.
ಈಗ ಕೇಳಿ. ರಾವಣನೊಮ್ಮೆ ತಪಸ್ಸು ಮಾಡಿದ. ಯಥಾ ಪ್ರಕಾರ ದೇವರು ಪ್ರತ್ಯಕ್ಷನಾಗಿ ’ನಿನಗೇನು ವರ ಬೇಕು?’ ಎಂದ. ರಾವಣ ’ನಾನು ಬಿಸಿನೀರು ಸ್ನಾನ ಮಾಡುವಾಗ ಕಜ್ಜಿತುರಿಕೆ ಉಂಟಾಗುವಂತೆ ವರ ಕೊಡು’ ಎನ್ನುತ್ತಾನೆ. ಈಗ ಅರ್ಥವಾಗಿರಬೇಕಲ್ಲ, ಯಾವ ಆನಂದ ಎಂದು. ಈ ಆನಂದಕ್ಕೆ ಒಮ್ಮೆಯೂ ಒಳಗಾಗದ ಮನುಷ್ಯರಿರಲಿ, ಪ್ರಾಣಿ-ಪಕ್ಷಿಗಳು, ಕ್ರೀಮಿ-ಕೀಟಗಳು ಇಲ್ಲವೆನ್ನಬಹುದು. ಹುಲಿ ಸಿಂಹಗಳು ಒರಟಾದ ಮರ ಕಲ್ಲುಗಳಿಗೆ ತಮ್ಮ ದೇವಹವನ್ನು ಉಜ್ಜಿ ಆನಂದ ಪಡೆಯುತ್ತವೆ. ಕೋಳಿ ಇರುವ ಎರಡು ಕಾಲಿನಲ್ಲಿ ಒಂದು ಕಾಲಿನ ಮೇಲೆ ನಿಂತುಕೊಂಡು ಇನ್ನೊಂದರಿಂದ ಮುಂಭಾಗವನ್ನು ತುರಿಸಿಕೊಂಡರೆ, ಹಿಂಭಾಗವನ್ನು ತನ್ನ ಕೊಕ್ಕಿನಿಂದಲೇ ತುರಿಸಿಕೊಳ್ಳುತ್ತದೆ. ಹಸುವೊಂದು ತನ್ನ ಕೋಡು ಮತ್ತು ಕಿವಿಯ ನಡುವಿನ ಜಾಗದಲ್ಲಿ ತುರಿಕೆಯಾಗುತ್ತಿದ್ದರೆ, ಹಿಂದಿನ ಕಾಲಿನಿಂದ ಅದನ್ನು ತುರಿಸಿಕೊಳ್ಳುತ್ತದೆ, ಅರ್ಥಾತ್ ಆನಂದ ಹೊಂದುತ್ತದೆ. ತುಂಟಾಟ, ಮೊಂಡಾಟ ಮಾಡುವ ದನಗಳನ್ನು ಒಲಿಸಿಕೊಳ್ಳಲು ಅವುಗಳ ಕಿವಿ ಕೋಡಿನ ಸಂದಿಯಲ್ಲಿ ತುರಿಸಿದರೆ ಸಾಕು. ಅವು ತುರಿಸಿದವನ ತೊಡೆಯಮೇಲೆಯೇ ಬೇಕಾದರೆ ಮಲಗಿ ಬಿಡುತ್ತವೆ! ಕೋತಿಯಂತೂ ಬಿಡಿ. ಮನುಷ್ಯರಂತೆಯೇ ತುರಿಸಿಕೊಳ್ಳುತ್ತೆ, ಹೇನು ಹಿಡಿಯುತ್ತೆ. ತುಂಬಾ ಬ್ಯಸಿಯಾಗಿರುವ ಮನುಷ್ಯರು ’..... ತುರಿಸಿಕೊಳ್ಳೋದಿಕ್ಕೂ ಪುರುಸೊತ್ತು ಇಲ್ಲ’ ಎಂದು ತಾವೆಷ್ಟು ಬ್ಯುಸಿ ಎಂಬುದನ್ನು ತೋರಿಸಿಕೊಳ್ಳಲು ಹೇಳುತ್ತಾರೆ. ಬಡಪಾಯಿಗಳು! ಆನಂದ ಪಡೆಯುವುದಕ್ಕೂ ಕೇಳಿಕೊಂಡು ಬಂದಿರಬೇಕಲ್ಲ!
ಒಮ್ಮೆ ಅಕಾಲದಲ್ಲಿ ಮರಣಮುಖಿಯಾಗಿದ್ದ ತನ್ನ ಮಗುವನ್ನು ಬದುಕಿಸಿಕೊಳ್ಳಬೇಕೆಂದು ಹೆಣ್ಣು ಮಗಳೊಬ್ಬಳು, ದಯಾಮಯನಾದ ಏಸುವಿನ ಬಳಿ ಬಂದು ಬೇಡಿಕೊಂಡಳಂತೆ. ಆಗು ಏಸುವು ’ತಾಯಿ, ಒಮ್ಮೆಯೂ ತುರಿಸಿಕೊಳ್ಳದವರ ಕೈಯಲ್ಲಿ ಮಗುವನ್ನಿಡು. ಮಗು ಬದುಕುತ್ತದೆ’ ಎಂದು ಹೇಳಿದನಂತೆ! ಆ ಮಗು ಬದುಕಲಿಲ್ಲ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೆ? ಮಗು ಗರ್ಭದಲ್ಲಿರುವಾಗಲೇ ತುರಿಸಿಕೊಳ್ಳುತ್ತದಂತೆ! ಚಟ್ಟದಲ್ಲಿರುವ ಶವಕ್ಕೂ ತುರಿಸಿಕೊಳ್ಳುವ ಬಯಕೆಯಾದರೂ, ತನ್ನನ್ನು ಹೊತ್ತವರು ಭಯಪಟ್ಟು, ಎಲ್ಲಿ ತನ್ನನ್ನು ಬಿಸಾಕಿ ಓಡಿಹೋಗುತ್ತಾರೊ ಎಂಬ ಭಯದಿಂದ ಹಾಗೆ ಮಾಡುವುದಿಲ್ಲವಂತೆ! ರಷ್ ಇರುವ ಬಸ್ಸು-ರೈಲುಗಳಲ್ಲಿ, ತನ್ನದೆಂದು ತಿಳಿದುಕೊಂಡು ಬೇರೆಯವರ ಮೈ ತುರಿಸುವವರೂ ಉಂಟು!
ಕೆಲವರು ತಾವು ಕೆಲಸ ಮಾಡುತ್ತಿದ್ದಾಗ, ತಮ್ಮ ತಮ್ಮ ಕೈಯಲ್ಲಿದ್ದ ಉಪಕರಣ ಆಯುಧಗಳಿಂದಲೇ ತಮ್ಮ ತಮ್ಮ ಬೆನ್ನು ತುರಿಸಿಕೊಳ್ಳುವುದನ್ನು ನೋಡಬಹುದು. ಹೊಲ ಕೊಯ್ಲು ಮಾಡುತ್ತಿರುವವ ಅದೇ ಕುಡುಗೋಲಿನಿಂದ ಬೆನ್ನು ತುರಿಸಿಕೊಂಡರೆ, ಗಾಡಿ ಹೊಡೆಯುವವ ಕೈಯಲ್ಲಿರುವ ಬಾರುಕೋಲಿನಿಂದಲೇ ಬೆನ್ನು ತುರಿಸಿಕೊಳ್ಳುತ್ತಾನೆ. ಟೈಲರ್ ತನ್ನಲ್ಲಿರುವ ಅಳತೆಕಡ್ಡಿಯನ್ನು ಆಶ್ರಯಿಸಿದರೆ, ಆಫಿಸಿನಲ್ಲಿ ಕುಳಿತವ ರೂಲರ್ ಅನ್ನೇ ಬಳಸುತ್ತಾನೆ! ಈಗಂತೂ ತುರಿಸಿಕೊಳ್ಳುವುದಕ್ಕೂ, ಉಪಕರಣಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ ಬಿಡಿ. ತಲೆ ಕೆರೆದುಕೊಳ್ಳಲು, ಬೆನ್ನು ತುರಿಸಿಕೊಳ್ಳು, ಅಮಗಾಲು ಮಸಾಜು ಮಾಡಿಕೊಳ್ಳಲು ಬೇರೆ ಬೇರೆಯದೇ ಮಷೀನ್ನುಗಳು ಸಿಗುತ್ತವೆ ಎಂದ ಮೇಲೆ ಅದರ ಮಹಾತ್ಮೆಯ ಬಗ್ಗೆ ಹೇಳುವುದೇನಿದೆ?
ನಮ್ಮ ಹಳ್ಳಿಯಲ್ಲಿ ತುರಿಕೆ ಸೊಪ್ಪು ಎಂಬ ಗಿಡ ಬೆಳೆಯುತ್ತಿತ್ತು. ಅದು ಅಂಗೈ ಅಂಗಾಲು ಬಿಟ್ಟು ನಮ್ಮ ದೇಹದ ಬೇರೆ ಯಾವ ಭಾಗಕ್ಕೆ ತಾಕಿದರೂ ಭಯಕರ ತುರಿಕೆಯುಂಟು ಮಾಡುತ್ತಿತ್ತು. ನಾವು ಸ್ಕೂಲಿನ ಬಿಡುವಿನ ವೇಳೆ ಅದನ್ನು ಕೆಲವು ಹುಡುಗರ ಮೇಲೆ ಪ್ರಯೋಗಿಸಿ, ಅವರಿಗೆ ತುರಿಕೆಯ ಆನಂದವನ್ನು ದಯಪಾಲಿಸುತ್ತಿದ್ದೆವು. ಒಮ್ಮೊಮ್ಮೆ ಅದಕ್ಕೆ ಪ್ರತಿಯಾಗಿ ಅವರು ನಮಗೆ ಮೇಷ್ಟರ ಮುಖಾಂತರ ಲಾತ ದಯಪಾಲಿಸುತ್ತಿದ್ದುದೂ ಉಂಟು!
 ’ಕಾದ ಬೆನ್ನು ಕೆರೆಯೋದಿಕ್ಕೆ, ಕಾಲ ಮುಳ್ಳು ಕೀಳೋದಿಕ್ಕೆ, ಕುಡಿಯೊ ನೀರು ಕೊಡೋದಿಕ್ಕೆ ಇಲ್ಲ ಅನ್ನಬಾರದು’ ಅನ್ನೊ ನೀತಿವಾಕ್ಯವೇ ನಮ್ಮ ಹಳ್ಳಿಗಳಲ್ಲಿದೆ. ಯಾರಾದರು ’ಬೆನ್ನು ಕಡಿಯುತ್ತಿದೆ. ಸ್ವಲ್ಪ ಕೆರಿ’ ಎಂದರೆ ಸುಮ್ಮನೆ ಕೆರೆಯಬೇಕಂತೆ. ನಾವು ಚಿಕ್ಕವರಾಗಿದ್ದಾಗ, ಅದನ್ನೇ ನೆಪ ಮಾಡಿಕೊಂಡು, ನಮ್ಮ ಅಜ್ಜ-ಅಜ್ಜಿಯರ ಕೈಯಲ್ಲಿ ಬೆನ್ನು ತುರಿಸಿಕೊಂಡು ಆನಂದ ಹೊಂದುತ್ತಿದ್ದೆವು. ಒಮ್ಮೊಮ್ಮೆ ಓದುವುದನ್ನು, ಕೆಲಸ ಮಾಡುವುದನ್ನು ತಪ್ಪಿಸಿಕೊಳ್ಳಲು ಈ ನೆಪವನ್ನು ಬಳಸುತ್ತಿದ್ದುದ್ದುಂಟು. ಇರಲಿ ಬಿಡಿ, ಆ ದಿನಗಳು ಇನ್ನೆಲ್ಲಿ?
ನನ್ನ ಸ್ನೇಹಿತರ ಮಗನೊಬ್ಬ, ’ತಾಯಿಯ ತೊಡೆಯ ಮೇಲೆ ಮಲಗಿಕೊಂಡು ಓದುತ್ತೇನೆ. ಇಲ್ಲ ಅಂದರೆ ಓದು ನನಗೆ ತಲೆಗೆ ಹತ್ತುವುದಿಲ್ಲ’ ಎನ್ನುತ್ತಿದ್ದ. ಆತನ ತಾಯಿ, ಅವನ ತಲೆ-ಬೆನ್ನು ಸವರುತ್ತಾ ತುರಿಸುತ್ತಾ ಕುಳಿತುಕೊಂಡರೆ ಮಾತ್ರ ಆತನ ಓದು! ಆಗಾಗ್ಗೆ ನನ್ನ ಮಗಳು, ರಾತ್ರಿ ಹೊತ್ತು ಮಲಗುವಾಗ, ’ಅಪ್ಪ ನನ್ನ ಕಿವಿಯ ಹಿಂಭಾಗ ತುರಿಸು, ಕೂದಲೊಳಗೆ ಕೈಯಾಡಿಸು’ ಎಂದು ಪೀಡಿಸುತ್ತಾಳೆ. ಹಾಗ ಮಾಡಲು ಆರಂಬಿಸಿದ ಕೆಲವೇ ನಿಮಿಷಗಳಲ್ಲಿ ನಿದ್ದೆ ಹೊಡೆಯಲು ಆರಂಭ ಮಾಡುತ್ತಾಳೆ. ಕೆಲವೊಮ್ಮೆ ನಾನು ಈ ಆನಂದಕ್ಕಾಗಿ, ನನ್ನ ಮಗಳ ಇಷ್ಟದ ಕಾರ್ಟೂನ್ ಚಾನೆಲ್ ಹಾಕಲು, ಅವಳು ನನ್ನ ತಲೆ ತುರಿಸುತ್ತಾ ಕೂರಬೇಕೆಂದು ಕಂಡೀಷನ್ನು ಹಾಕುತ್ತೇನೆ. ಒಮ್ಮೆ ನಾನು ನ್ಯೂವ್ಸ್ ಚಾನೆಲ್ ಹಾಕಿದಾಗ, ನನ್ನ ಮುಂದೆ ಕುಳಿತು, ’ನನ್ನ ತಲೆಯನ್ನೂ ತುರಿಸು’ ಎಂದು ಹಠ ಮಾಡಿದ್ದಳು. ಹಳ್ಳಿಯ ಕಡೆ ಏಳೆಂಟು ಜನ ಹೆಂಗಸರು ಒಬ್ಬರ ಹಿಂದೆ ಒಬ್ಬರು ಕುಳಿತು ತಲೆಯಲ್ಲಿ ಹೇನು ಹಿಡಿಯುವ ಚಿತ್ರಣ ಕಾಣ ಸಿಗುತ್ತದೆ. ಹೇನು ಹಿಡಿಯುತ್ತಾರೋ ಅಥವಾ ತಲೆ ತುರಿಸಿಕೊಂಡು ಸುಖಿಸುತ್ತಾರೋ ಯಾರಿಗೆ ಗೊತ್ತು? ಯಾರಾದರೂ ಬೆನ್ನು ತುರಿಸಿಕೊಳ್ಳುತ್ತಿದ್ದರೆ, ನನ್ನ ಬೆನ್ನಿನಲ್ಲೂ ನವೆಯಾಗುತ್ತಿರುವ ಅನುಭವವಾಗುತ್ತದೆ. ಒಟ್ಟಾರೆ ಈ ತುರಿಸಿಕೊಳ್ಳುವಿಕೆ ಆನುಷಂಗಿಕವೂ ಹೌದು; ಸಾಂಕ್ರಾಮಿಕವೂ ಹೌದು!
ನಾನು ಹೈಸ್ಕೂಲು ಓದುತ್ತಿದ್ದಾಗ, ನಮ್ಮ ಹಾಸ್ಟೆಲ್ಲಿನಲ್ಲಿ ಒಬ್ಬ ಹುಡುಗನಿದ್ದ. ಆತ ಕೆಲಸ ಮಾಡುವಾಗ, ಓದುವಾಗ, ಸುಮ್ಮನೆ ಕುಳಿತಿದ್ದಾಗ ಎಲ್ಲರಂತೆ ಸಾಮಾನ್ಯವಾಗಿಯೇ ಇರುತ್ತಿದ್ದ. ಆದರೆ ಯಾರೊಂದಿಗಾದರೂ ಮಾತನಾಡುವಾಗ, ಸ್ಕೂಲಿನಲ್ಲಿ ಮೇಷ್ಟರು ಕೇಳಿದ ಪ್ರಶ್ನೆಗೆ ಉತ್ತರ ಹೇಳುವಾಗ ಮಾತ್ರ ತನ್ನ ದೇಹದ ಯಾವುದಾದರೊಂದು ಭಾಗವನ್ನು ಕೆರೆದುಕೊಳ್ಳುತ್ತಿದ್ದ. ಆ ಭಾಗ ಹೀಂದೆ ಮುಂದೆ ಎಂದು ನೋಡುತ್ತಿರಲಿಲ್ಲ. ಯಾರು ಎಷ್ಟೇ ಹೇಳಿದರೂ, ಮೇಷ್ಟರು ಕೈ ಮೇಲೆ ನಾಲ್ಕು ಬಾರಿಸಿದರೂ, ಕಜ್ಜಿರಾಯ, ಕೆರಕಪ್ಪ ಎಂಬ ಅಡ್ಡ-ಉದ್ದ ಹೆಸರುಗಳಿಂದ ಹೀಯಾಳಿಸಿದರೂ ಆತನ ತುರಿಸಿಕೊಳ್ಳುವ ಚಾಳಿ ಹೋಗಲಿಲ್ಲ ಅಂದರೆ, ಆ ಕೆರೆತ ಆತನಿಗೆ ನೀಡುತ್ತಿದ್ದ ಆನಂದ ಎಂತಹುದಿದ್ದಿರಬೇಕು!
ಹೈಸ್ಕೂಲು ಹುಡುಗ, ಪೆದ್ದು ಹಾಳಾಗಿ ಹೋಗಲಿ ಬಿಡಿ. ಆದರೆ ನಾನು ಮಾನಸಗಂಗೋತ್ರಿಯಲ್ಲಿ ಓದುತ್ತಿದ್ದಾಗ, ಗಣಿತ ವಿಭಾಗದ ಹುಡುಗಿಯೊಬ್ಬಳಿಗೂ ಈ ಚಟ ಇದ್ದುದನ್ನು ನಾವು ಹುಡುಗರು ಸಂಶೋಧನೆ ಮಾಡಿದ್ದೆವು. ಎರಡು ವರ್ಷ ಕಳೆಯುವುದರೊಳಗೆ, ಆ ಹುಡಗಿಗೆ ಮದುವೆ ಗೊತ್ತಾಯ್ತು. ವಿಷಯ ತಿಳಿದ ನಾವು ’ಮದುವೆಯ ದಿನವೂ ಈಕೆ ಹೀಗೆ ಕೆರೆದುಕೊಳ್ಳುತ್ತಿದ್ದರೇ ಆ ಹುಡುಗನ ಗತಿಯೇನಪ್ಪ?’ ಎಂದು ಚಿಂತಿಸುತ್ತಿರಬೇಕಾದರೆ, ಆಕೆಯೇ ಇನ್ವಿಟೇಷನ್ ಕೊಡಲು ಬಂದಳು. ನೋಡಿದರೆ, ಆಕೆಯನ್ನು ಮದುವೆಯಾಗುತ್ತಿದ್ದ ಹುಡುಗ, ನಮ್ಮ ಸಂಶೋಧನಾ ತಂಡದ ಸದಸ್ಯನಾಗಿದ್ದ! ನಮ್ಮ ಬಾಯಿ ಬಂದ್. ಯಾವುದನ್ನೂ ಮುಚ್ಚಿಟ್ಟದೆ, ನವೆಯಾದಾಗ ಮುಕ್ತವಾಗಿ ಕೆರೆದುಕೊಳ್ಳುವ ಆ ಹುಡುಗಿಗೆ, ಎರಡು ವರ್ಷ ನಮ್ಮ ಜೊತೆಯಲ್ಲಿದ್ದರೂ ಆಕೆಯನ್ನು ಲವ್ ಮಾಡುತ್ತಿರುವ ಹಾಗೂ ಮದುವೆಯಾಗುತ್ತಿರುವ ವಿಷಯವನ್ನು ಮುಚ್ಚಿಟ್ಟಿದ್ದ ಈತ ಜೋಡಿ! ನಮ್ಮ ಮನಸ್ಸಿನಲ್ಲಿ ಇನ್ನೂ ಏನೇನೋ ಯೋಚನೆಗಳ ಮಿಕ್ಸಿ ಓಡುತ್ತಿರಬೇಕಾದರೆ, ಆ ಹುಡುಗಿಯೇ ’ನನಗೆ ಗೊತ್ತು. ನೀವೆಲ್ಲಾ ನನ್ನ ಬಗ್ಗೆ ಏನೇನು ಮಾತನಾಡಿಕೊಳ್ಳುತ್ತಿದ್ದಿರಿ ಎಂದು. ಇವನೆ ಎಲ್ಲ ಹೇಳಿದ್ದಾನೆ. ಆದರೆ ನನಗೇನು ಬೇಜಾರಿಲ್ಲ. ಇದಕ್ಕೆಲ್ಲಾ ಬೇಜಾರು ಮಾಡಿಕೊಂಡರೆ ಆ ಸುಖವನ್ನು ಕಳೆದುಕೊಳ್ಳಬೇಕಾಗುತ್ತದೆ!’ ಎಂದುಬಿಟ್ಟಳು. ನಾವು ಇಂಗು ತಿಂದ ಮಂಗಗಳಾಗಿದ್ದೆವು. ಸದ್ಯ, ಮಂಗಗಳಾದರೂ ಮೈ ಪರಚಿಕೊಳ್ಳುವ ಧೈರ್ಯವನ್ನು ಅವಳೆದುರಿಗೆ ಮಾಡಲಿಲ್ಲ.
ನನ್ನ ಹೈಸ್ಕೂಲು ಹಾಸ್ಟೆಲ್ಲು ಜೀವನದಲ್ಲಿ ಭೀಮಪ್ಪ ಕರಿಯಪ್ಪ ಜಟಗೊಂಡ ಎಂಬ ವ್ಯವಸ್ಥಾಪಕರಿದ್ದರು. ಅವರು ಬೆಳಗಾಂ ಜಿಲ್ಲೆಯವರು. ತುಂಬಾ ಗಲಾಟೆ ಮಾಡುತ್ತಿದ್ದ ಹುಡುಗರನ್ನು ಅವರು ಗದರಿಸುತ್ತಿದ್ದ ರೀತಿಯೇ ಮಜವಾಗಿತ್ತು. ’ಯಾವನ್ಲೇ ಅವ. ಒದರ‍್ಲಿಕ್ಹತ್ತಿರಾನು? ಮೈಗೆ ತಿಂಡಿ ಹತ್ತಿತೇನಲೇ ಮಗನಾ?’ ಎನ್ನುತ್ತಿದ್ದರು. ಮೊದಲ ಬಾರಿಗೆ ಅವರು ಈ ಮಾತನ್ನು ಹೇಳಿದಾಗ ಒಂದು ದೊಡ್ಡ ಪ್ರಸಂಗವೇ ಅಲ್ಲೇ ಏರ್ಪಟ್ಟಿತ್ತು. ಊಟ ಮಾಡುವಾಗ ಹುಡುಗನೊಬ್ಬ ಸುಮ್ಮನೆ ನಗುವುದು, ಅಕ್ಕಪಕ್ಕದವರೊಂದಿಗೆ ಮಾತನಾಡುವುದು ಮಾಡುತ್ತಿದ್ದ. ಅದನ್ನು ಗಮನಿಸಿ ಅವರು ’ಯಾಕಲೆ ಮಗನ. ಮೈಗೆ ತಿಂಡಿ ಹತ್ತಿತೇನಲೇ’ ಅಂದರು. ಹುಡುಗ ಕಿಲಾಡಿಯಿದ್ದ. ಅವನು ’ಸರ್, ತಿಂಡಿ ಮೈಗೆ ಹತ್ತೋದಿಲ್ಲ ಸರ್. ಕೈಗೆ-ಬಾಯ್ಗೆ ಹತ್ತುತ್ತೆ’ ಎಂದ. ಅವರು ಆತ ತಿರುಗಿ ಮಾತನಾಡುತ್ತಿದ್ದಾನೆ ಎಂದು ಭಾವಿಸಿ ಆತನನ್ನು ಹಿಡಿದು ಬಡಿಯಲು ಹೋಗಿದ್ದರು. ಆಗ ಅವರ ಕಡೆಯ ತಿಂಡಿಯ ಅರ್ಥ ಗೊತ್ತಿದ್ದ ಅಡುಗೆ ಭಟ್ಟನೊಬ್ಬ ’ಸರ್ ಇಲ್ಲಿ ತಿಂಡಿ ಅಂದರೆ ಟಿಫನ್ನು ಸಾರ್ ಟಿಫನ್ನು. ನಿಮ್ಮ ಕಡೆ ಹಾಗೆ ’ನವೆ’ ಅಲ್ಲ’ ಎಂದು ಸಮಾಧಾನ ಪಡಿಸಿದ್ದ. ನಮ್ಮ ಬಯಲು ಸೀಮೆಯಲ್ಲಿ ’ಏನ್ ಮೈ ಕಡಿಯುತ್ತಾ ನಿನಗೆ’ ಎಂದು ಅಬ್ಬರಿಸುವುದು, ’ಇವತ್ತು ಕೈ ಕಡಿತಾ ಇದೆ. ಯಾರಿಗೆ ಬೀಳ್ತವೋ ಒದೆ’ ಅನ್ನುವುದು ಸಾಮಾನ್ಯ ಸಂಗತಿ.
ತುರಿಸುವಾನಂದವನ್ನು ಸಂಪೂರ್ಣವಾಗಿ ಅನುಭವಿಸಿ ದಿವಂಗತನಾಗಿರುವ ಒಬ್ಬ ವ್ಯಕ್ತಿ ನನಗೆ ಗೊತ್ತು. ನಾವು ಚಿಕ್ಕವರಾಗಿದ್ದಾಗ ಆತ ನಮ್ಮ ಮನೆಗೆ, ನಮ್ಮ ಪರಿಚಿತರೊಬ್ಬರ ಮನೆಯವರ ಶಿಫಾರಸ್ಸಿನಂತೆ, ರೇಷ್ಮೆ ಬೆಳೆಯಲು ಸಹಾಯ ಮಾಡಲು ಬಂದಿದ್ದ. ನಮ್ಮ ಪಕ್ಕದ ಊರಿನವನೆ. ಆತ ಮದುವೆಯಾಗಿ ಒಂದು ವರ್ಷವಾಗುವಷ್ಟರಲ್ಲಿ ಆತನ ಕಾಲಿನಲ್ಲಿ ಹುಣ್ಣಾಗಿ ಒಳಗಳೊಗೆ ಕೊಳೆಯುತ್ತಾ ಬಂದಿತ್ತಂತೆ. ಆತ ಊರೂರು ಆಸ್ಪತ್ರೆ ತಿರುಗಿದ. ಮಣಿಪಾಲ, ಬೆಂಗಳೂರು ಎಲ್ಲ ಆಯಿತು. ಹೋದ ಕಡೆಯಲ್ಲೆಲ್ಲಾ ಒಂದೇ ಮಾತು ’ಕಾಲು ಕತ್ತರಿಸಬೇಕು’ ಅಂತ. ಆತ ಒಪ್ಪಲಿಲ್ಲ. ನೋವು ಮರೆಯುವುದಕ್ಕೆ ಕುಡುಕನಾದ. ಕುಡುಕನಾದ ಮೇಲೆ ಹೆಂಡತಿಗೆ ಹೊಡೆಯದಿದ್ದರೆ ಹೇಗೆ? ಅದನ್ನೂ ಮಾಡಿದ. ಬಸುರಿಯಾಗಿದ್ದ ಆಕೆ ಯಾರ ಜೊತೆಯಲ್ಲೋ ಓಡಿಹೋದಳು. ಕಾಲು ಮಂಡಿಯವೆರೆಗೂ ಒಳಗೊಳಗೆ ತಿನ್ನುತ್ತಾ ಬಂತು. ಮನೆ ಆಸ್ತಿಯೆಲ್ಲವನ್ನೂ ಕಳೆದುಕೊಂಡಿದ್ದ. ಕೊನೆಗೆ ಒಂದು ದಿನ ನೋವು ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಕೆರೆಗೆ ಹಾರಿದ. ಪಾಪಿ ಚಿರಾಯು. ಚೆನ್ನಾಗಿ ಈಜು ಬರುತ್ತಿದ್ದುದರಿಂದ ನೀರಿನಲ್ಲಿ ಮುಳುಗಿ ಸಾಯುವ ಪ್ರಯತ್ನ ಈಡೇರಲಿಲ್ಲ. ತೊಡೆಯ ಒಳಭಾಗದಲ್ಲಿ ನೋವು ನವೆ ತಡೆಯಲಾಗಲಿಲ್ಲ. ಒಂದು ದಿನ ಬಟ್ಟೆಯ ತುಂಡೊಂದನ್ನು ಸೀಮೆಎಣ್ಣೆಯಲ್ಲಿ ನೆನೆಸಿ, ಕಡಿಯುತ್ತಿದ್ದ ತೊಡೆಯ ಭಾಗಕ್ಕೆ ಇಟ್ಟು ಬೆಂಕಿಕಡ್ಡಿ ಗೀರಿ ಹತ್ತಿಸಿದ. ಅಂಗೈಗಲ ಮಾಂಸಖಂಡ ಸುಟ್ಟು ಕಳಚಿ ಬಿದ್ದರೂ, ತುಟಿ ಕಚ್ಚಿ ನೋವು ಸಹಿಸಿದ. ಹಲವಾರು ತಿಂಗಳಗಳ ನಂತರ ಆ ಸುಟ್ಟ ಗಾಯ ವಾಸಿಯಾಯಿತು. ಅಲ್ಲಿಂದ ಮೇಲಕ್ಕೆ ಕಾಲಿನ ಒಳಗಿನ ನೋವು, ನವೆ ನಿಂತು ಹೋಗಿತ್ತು. ಕಾಲು ಸ್ವಲ್ಪ ಕುಂಟಾಗಿತ್ತು. ಸುಟ್ಟ ಜಾಗದಲ್ಲಿ ಎರಡು ಬೆರಳು ಗಾತ್ರದ ಗಂಟು ನಿರ್ಮಾಣವಾಗಿತ್ತು. ಆ ಭಾಗದಲ್ಲಿ ಮಾತ್ರ ನವೆಯುಂಟಾಗುತ್ತಿತ್ತು. ಅದನ್ನು ತುರಿಸಿಕೊಳ್ಳುತ್ತಾ ಕಣ್ಣು ಮುಚ್ಚಿ ಸುಖವನ್ನನುಭವಿಸುತ್ತಾ ಗಂಟೆಗಟ್ಟಲೆ ಕುಳಿತು ಬಿಡುತ್ತಿದ್ದ. ಒಮ್ಮೊಮ್ಮೆ ನವೆ ಜಾಸ್ತಿಯಾದಾಗ, ಉಗುರಿನಿಂದ ಪಟಪಟ ಕಿತ್ತುಕೊಳ್ಳುತ್ತಿದ್ದ. ಒಮ್ಮೊಮ್ಮೆ ಉಗುರಿನ ಬದಲು ಬ್ಲೇಡ್ ಕೂಡಾ ಬಳಸುತ್ತಿದ್ದ! ಕೆಲಸ ಮಾಡುವಾಗ ದಾರಿಯಲ್ಲಿ ನಡೆಯುವಾಗ ಎಲ್ಲೆಂದರಲ್ಲಿ ಕುಳಿತು, ಎಡಗೈ ತೋರುಬೆಳಿನ ಮೇಲೆ ನಡುಬೆರಳಿನಿಂದ ಒತ್ತಡ ಹೇರುತ್ತಾ, ಗಾಯದ ಗಂಟಿನ ಮೇಲೆ ತುರಿಸಿಕೊಳ್ಳುತ್ತಾ ಕುಳಿತು ಬಿಡುತ್ತಿದ್ದ. ಕಣ್ಣು ಮುಚ್ಚಿ ಕುಳಿತುಕೊಂಡು, ತುರಿಸಿಕೊಳ್ಳುತ್ತಿದ್ದ ಆತನ ಮುಖದಲ್ಲಿ ಒಂದು ರೀತಿಯ ಅಲೌಕಿಕ ಆನಂದವಿರುತ್ತಿತ್ತು. ಯಾರಾದರೂ ಮಧ್ಯೆ ಕೂಗಿದರೆ, ಊಟಕ್ಕೆ ಕರೆದರೆ ಆತ ಸ್ಪಂದಿಸುತ್ತಿದ್ದು ತುಂಬಾ ನಿಧಾನವಾಗಿ. ಇಂತಪ್ಪ ವ್ಯಕ್ತಿಗೆ, ಕೆಲವರು ಕುಂಟಮೇಷ್ಟ್ರು, ಪಿಟೀಲು ಎಂದು ಏನೇನೂ ಅಡ್ಡ ಹೆಸರು ಇಟ್ಟಿದ್ದರೂ ಅದರ ಬಗ್ಗೆ ಆತ ತಲೆಕೆಡಿಸಿಕೊಳ್ಳಲಿಲ್ಲ, ಒಬ್ಬರ ಬಗ್ಗೆಯೂ ಕೆಟ್ಟ ಮಾತಾಡಲಿಲ್ಲ. ’ಹಾಗೆ ದಾರಿಯಲ್ಲಿ ಮೈಮರೆತು ಕುತ್ಕೊಂಬೇಡ್ವೊ. ಯಾವ್ದಾದ್ರು ಬಸ್ಸು ಲಾರಿ ಹತ್ತಿ ಬಿಟ್ಟಾವು’ ಎಂದು ನನ್ನ ಅಜ್ಜಿ ಆಗಾಗ ಹೇಳುತ್ತಿದ್ದರು.
ಆತ ತನ್ನ ಕೊನೆಗಾಲದ ಹತ್ತು ಹನ್ನೆರಡು ವರ್ಷಗಳನ್ನು ನಮ್ಮ ಮನೆಯಲ್ಲೇ ಕಳೆದ. ನಮ್ಮ ತೋಟದಲ್ಲಿ ಬಿಡುತ್ತಿದ್ದ ಹೂವುಗಳನ್ನು ಕೊಯ್ದು ಹಾರ ಕಟ್ಟಿ ಮಾರಾಟ ಮಾಡುತ್ತಿದ್ದ. ಮಂಗಳವಾರ, ಶುಕ್ರವಾರ ಮೆಳೆಯಮ್ಮನ ದೇವಸ್ಥಾನದಲ್ಲಿ ಸಿಗುತ್ತಿದ್ದ ಬಿಟ್ಟಿ ಬಾಡೂಟಕ್ಕೂ ಹೋಗುತ್ತಿದ್ದ. ಬೋಂಡ ಟೀ ಆತನ ಅಚ್ಚು ಮೆಚ್ಚಿನ ಆಹಾರವಾಗಿದ್ದವು. ಅದರ ಜೊತೆಗೆ ಆತನಿಗಿದ್ದ ಇನ್ನೊಂದು ಮೋಹವೆಂದರೆ ನಾಟಕದ ಹಾಡುಗಳನ್ನು, ಜಾನಪದ ಗೀತೆಗಳನ್ನು ಹಾಡುವುದು. ದಾರಿಯಲ್ಲಿ ಹೋಗುವಾಗ ಜೋರಾಗಿ ಹಾಡಿಕೊಳ್ಳುತ್ತಿದ್ದ. ಹಳ್ಳಿಗಳಲ್ಲಿ ನಾಟಕವನ್ನಾಡಿದರೆ, ಸ್ಟೇಜಿನ ಮೇಲೆ ನಿಂತು ಮೈಕ್ ಮುಂದೆ ಹಾಡುವುದೆಂದರೆ ಆತನಿಗೆ ಬಲು ಖುಷಿ. ಒಮ್ಮೆ ಹೀಗೆ ಹಾಡುತ್ತಿದ್ದಾಗ, ಕಾಲಿನಲ್ಲಿ ಅಸಾಧ್ಯ ನವೆ ಶುರುವಾಗಿಬಿಟ್ಟಿದೆ. ಯಾವ ಮುಲಾಜು ಇಲ್ಲದೆ, ಹಾಡನ್ನು ಅರ್ಧಕ್ಕೇ ನಿಲ್ಲಿಸಿ, ಗಾಯದ ಗಂಟನ್ನು ತನ್ನ ವಿಶಿಷ್ಟ ಭಂಗಿಯಲ್ಲಿ ಕುಳಿತು ತುರಿಸಿಕೊಳ್ಳಲು ಆರಂಭಿಸಿದ! ಜನರೆಲ್ಲಾ ’ಹೋ’ ಎಂದು ಕೂಗಿದರೂ ಆತ ಜರುಗಲಿಲ್ಲ. ಕೊನೆಗೆ ಸ್ವಲ್ಪ ಬಲವಂತವಾಗಿಯೇ ಪರದೆಯ ಹಿಂಬದಿಗೆ ಎಳೆದು ಕೂರಿಸಬೇಕಾಯಿತು! ಆಹಾ! ತುರಿಸಿಕೊಳ್ಳುವ ಆನಂದದ ಮಹಿಮೆಯೇ ಅಂತಹದ್ದೇನೊ?
ಅದೆಲ್ಲದರ ನಡುವೆಯೂ ಆತನಿಗೊಂದು ಆಸೆಯಿತ್ತು. ತಾನೊಂದು ಮದುವೆಯಾಗಿ ಸಂಸಾರ ಹೂಡಬೇಕು ಎಂದು. ’ಗಂಡ ಸತ್ತವಳೊ, ಬಿಟ್ಟವಳೊ, ಯಾರೊ ಒಬ್ಬಳು ಸಿಕ್ಕರೆ ಸಾಕು. ಕಡೆಗಾಲದಲ್ಲಿ, ಮೂಲೆಗೆ ಕೂತಾಗ ಒಂದಷ್ಟು ಹಸಿಬಿಸಿ ಮಾಡಿ ಹಾಕಿದರೆ ಸಾಕು’ ಎನ್ನುತ್ತಿದ್ದ. ಮುಂದೊಂದು ದಿನ ಆತ, ಇನ್ನೂ ಚೆನ್ನಾಗಿ ತಿರುಗಾಡಿಕೊಂಡು ಇದ್ದಾಗಲೇ, ಜ್ವರ ಬಂದಂದ್ದೇ ನೆಪವಾಗಿ, ಹಾಗೆಯೇ ತೊಡೆ ತುರಿಸಿಕೊಳ್ಳುತ್ತಲೇ ಕೊನೆಯುಸಿರೆಳೆದುಬಿಟ್ಟ! ಅದೂ ತನಗೆ ಇಷ್ಟವಾಗಿದ್ದ ಬೋಂಡ ಟೀ ಜೊತೆಗೆ ಇಡ್ಲಿಯನ್ನೂ ತಿಂದು, ತಡಿಕೆ ಹೋಟೆಲಿನ ಮುಂಭಾಗದಲ್ಲೇ ಪ್ರಾಣಬಿಟ್ಟಿದ್ದ!
ತುರಿಸಿಕೊಳ್ಳುವ ಆನಂದದ ಕಥೆಯನ್ನು ಆರಂಭಿಸಿ, ವಿಷಾದದಲ್ಲಿ ಮುಗಿಸುತ್ತಿದ್ದಾನಲ್ಲ ಎಂದು ಯೋಚಿಸದೆ ನೀವು ಮಾತ್ರ ನಿರ್ಭಯರಾಗಿ ತಲೆ ಕೆರೆದುಕೊಳ್ಳಿ. ತುರಿಸುವಾನಂದವನ್ನು ಅನುಭವಿಸಿ. ಜೊತೆಗೆ ನಾನೂ ಇದ್ದೇನೆ!

No comments: