Tuesday, June 11, 2013

ನಮ್ಮ ತಲೆಯಲ್ಲಿರಬೇಕಾದದ್ದು ಮೆದುಳೊ? ಜಾತಿ ಮತ ಮೇಲುಕೀಳುಗಳ ಮಲವೊ?

ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು ಎತ್ತಿಟ್ಟುಕೊಂಡಿದ್ದ, ದೇವನೂರರ ’ಎದೆಗೆ ಬಿದ್ದ ಅಕ್ಷರ’ ಪಕ್ಕದಲ್ಲಿತ್ತು. ಮಿಣುಗುಡುತ್ತಿದ್ದ ಸೋಲಾರ್ ದೀಪದ ಬೆಳಕಿನಲ್ಲಿ, ಪುಸ್ತಕವನ್ನು ಕೈಗೆತ್ತಿಕೊಂಡು ಸುಮ್ಮನೆ ಒಂದು ಪುಟ (೨೪೫) ಬಿಡಿಸಿ ಕಣ್ಣಾಡಿಸಿದೆ. ಈಗ ನಮ್ಮನ್ನು ನಾವೇ ನೋಡಿಕೊಳ್ಳೋಣ. ಇಲ್ಲಿರೋ ಎಲ್ಲರ ಮಿದುಳನ್ನು ಬಿಚ್ಚಿಟ್ಟರೆ ಅಲ್ಲಿ ಕಾಣೋದೇನು? ಅದೇನು ಮಿದುಳಾ? ಅಲ್ಲಿ ಜಾತಿ ಮತ, ಮೇಲುಕೀಳುಗಳ ಮಲ… ಎಂಬ ಸಾಲುಗಳು ಮನಸ್ಸಿಗೆ ನಾಟಿದ್ದವು. ನೆನ್ನೆ ಸಂಜೆ ಊರಿನಿಂದ ವಾಪಸ್ಸು ಬರುವಾಗ, ಆ ಸಾಲುಗಳೇ ನನ್ನನ್ನು ಕಾಡುತ್ತಿದ್ದವು; ನಮ್ಮ ತಲೆಯಲ್ಲಿರಬೇಕಾದದ್ದು ಮೆದುಳೊ? ಜಾತಿ ಮತ, ಮೇಲುಕೀಳುಗಳ ಮಲವೊ? ನನ್ನ ಮನಸ್ಸು ನನ್ನ ಬಾಲ್ಯದ ಕಡೆ ಓಡಿತು. ಒಂದಷ್ಟು ಘಟನೆಗಳೂ ನೆನಪಾದವು. ನಾನು ಮೂರನೆಯ ತರಗತಿ ಓದಿದ್ದು ಹಳೇಬೀಡು ಸರ್ಕಾರಿ ಶಾಲೆಯಲ್ಲಿ. ಸುಮಾರು ೧೯೭೭-೭೮ರಲ್ಲಿ ಇರಬಹುದು. ಅಲ್ಲಿ ಅಪರೂಪಕ್ಕೊಮ್ಮೆ, ಮದ್ಯಾಹ್ನ ಶಾಲೆಗೆ ಚಕ್ಕರ್ಹಾ ಕಿ, ಕೆರೆಯ ಕೋಡಿಯಲ್ಲಿ ನೀರಿಗೆ ಬಿದ್ದು, ದೇವಸ್ಥಾನದ ಕಟ್ಟೆಯ ಮೇಲೆ ಅರೆಬೆತ್ತಲೆ ಮಲಗಿ, ಹುಡುಗರೊಂದಿಗೆ ಅಲೆದು, ಆಟವಾಡಿ, ಸಂಜೆ ಏನೂ ಆಗದವರಂತೆ ಮನೆಗೆ ಬರುತ್ತಿದ್ದೆ.
ಒಮ್ಮೆ ಹೀಗೆ ಆಯಿತು. ರಾಜು ಎಂಬ ಹುಡಗನೊಬ್ಬನಿದ್ದ. ವಯಸ್ಸಿನಲ್ಲಿ ನನಗಿಂತ ಎರಡ್ಮೂರು ವರ್ಷ ದೊಡ್ಡವನಾಗಿದ್ದರೂ ಮೂರನೆಯ ತರಗತಿಯಲ್ಲಿ ನನ್ನ ಜೊತೆಯಲ್ಲಿಯೇ ಓದುತ್ತಿದ್ದ. ಅಂದು ನಾವು ಮೂರ್ನಾಲ್ಕು ಹುಡುಗರು ಅವನೊಂದಿಗೆ ಸ್ಕೂಲಿಗೆ ಚಕ್ಕರ್ ಹಾಕಿ, ಕೆರೆ ಕೋಡಿಗೆ ಹೋಗಿ ನೀರಿನಲ್ಲಿ ಬಿದ್ದು ಒದ್ದಾಡಿದೆವು (ಒಬ್ಬರಿಗೂ ಈಜು ಬರುತ್ತಿರಲಿಲ್ಲ). ನಂತರ ದೇವಸ್ಥಾನದ ಉದ್ಯಾನವನದಲ್ಲಿದ್ದ, ಬಿಸಿಲಿಗೆ ಕಾದಿದ್ದ ಸಿಮೆಂಟ್ ಬೆಂಚಿನ ಮೇಲೆ ಮಲಗಿದೆವು. ಆದರೂ ಸಮಯ ಮುಗಿಯಲಿಲ್ಲ. ಆಗ ರಾಜು ನಮ್ಮ ಮನೆಗೆ ಹೋಗೋಣ. ಅಲ್ಲಿ ಕಡ್ಲೆಕಾಯಿ ಇದೆ ತಿನ್ನಬಹುದು ಎಂದ. ನಾವೂ ಒಪ್ಪಿ ಅವರ ಮನೆಗೆ ಹೋದೆವು. ಅಲ್ಲಿ ಅವರ ಅವ್ವ ಕೊಟ್ಟ ಕಡ್ಲೆಕಾಯಿ ತಿಂದು ನೀರು ಕುಡಿದೆವು. ಎಲ್ಲ ಮುಗಿಸಿ ಮನೆಗೆ ಹೊರಡುವಷ್ಟರಲ್ಲಿ, ಸ್ಕೂಲು ಬಿಟ್ಟು ಸ್ವಲ್ಪ ಸಮಯವೂ ಆಗಿತ್ತು. ನಾನು ವೇಗವಾಗಿ ನಡೆಯುತ್ತಿದ್ದೆ. ಆಗ, ನಮ್ಮ ಮನೆಯ ಸಮೀಪ ಅಂಗಡಿಯಲ್ಲಿದ್ದ, ನನಗೆ ಪರಿಚಯವಿದ್ದ ಅಂಗಡಿ ಮಾಲೀಕರ ಮಗ ಕೂಗಿದ. ಆತ ಹೈಸ್ಕೂಲಿನಲ್ಲಿ ಓದುತ್ತಿದ್ದಿರಬಹುದು. ಆತನ ತಂದೆ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿದ್ದರೆಂದು ನೆನಪು. ಎಲ್ಲಿಗೆ ಹೋಗಿದ್ದೆ? ಏಕಿಷ್ಟು ಲೇಟು? ಎಂದು ಕೇಳಿದ. ನಾನು, ಸ್ಕೂಲಿಗೆ ಚಕ್ಕರ್ ಹಾಕಿದ್ದು, ನೀರಿನಲ್ಲಿ ಆಟವಾಡಿದ್ದು ಯಾವುದನ್ನೂ ಹೇಳದೆ ರಾಜು ಜೊತೆ ಅವನ ಮನೆಗೆ ಹೋಗಿದ್ದೆ. ಅಲ್ಲಿ ಕಡ್ಲೆಕಾಯಿ ತಿಂದು ಬರುವಷ್ಟರಲ್ಲಿ ತಡವಾಯಿತು ಎಂದೆ. ಯಾವ ರಾಜು? ಎಲ್ಲಿದೆ ಅವರ ಮನೆ? ಎಂದ. ನಾನು ಹೇಳಿದೆ. ಅದಕ್ಕೆ ಅವನು ಏನೋ ಆದವನಂತೆ ಅಯ್ಯೋ ಅದು ಹೊಲಗೇರಿ! ಅಲ್ಲಿಗೆ ಏಕೆ ಹೋಗಿದ್ದೆ. ಅವರ ಮನೆಯಲ್ಲಿ ಕಡ್ಲೆಕಾಯಿ ತಿಂದು ಬಂದಿದ್ದೀಯ. ಇಳಿ ಇಳಿ. ಅಂಗಡಿ ಹತ್ತಿರ ಬರಬೇಡ. ಮನೆಗೆ ಹೋಗಿ, ಕೈಕಾಲು ತೊಳ್ಕೊಂಡು ಬಾ ಎಂದು ಮುಂತಾಗಿ ನನಗೆ ಹೇಳಿದ್ದ. ಈ ತರದ ಮಾತುಗಳು ನಾನು ಕೇಳಿದ್ದು ಅದೇ ಮೊದಲು.
ನಾನು ಹೈಸ್ಕೂಲು ಓದುವಾಗ ಮೂರು ವರ್ಷಗಳ ಕಾಲ ಹಾಸ್ಟೆಲ್ಲಿನಲ್ಲಿದ್ದೆ. ಅಲ್ಲಿ ಎಲ್ಲಾ ಜಾತಿಯವರೂ ಸೇರಿ ಒಟ್ಟಿಗೆ ಐವತ್ತು ಜನರಿದ್ದರು. ಹಿಂಬದಿಯ ವಪ್ಪಾರಿನಲ್ಲಿ ಅಡುಗೆ ಮನೆ. ಮುಂಬದಿಯ ಪಡಸಾಲೆಯಲ್ಲಿ ಆಫೀಸು. ಮದ್ಯದ ನಡುಮನೆಯಲ್ಲಿ ಐವತ್ತೂ ಹುಡುಗರು ತಮ್ಮ ಪೆಟ್ಟಿಗೆಗಳನ್ನು ಗೋಡೆ ಬದಿಗೆ ಇಟ್ಟುಕೊಂಡಿದ್ದೆವು. ಸಹಪಂಕ್ತಿಭೋಜನ ಇತ್ತು. ಅಲ್ಲಿದ್ದವರಲ್ಲಿ ಎಲ್ಲರ ಜಾತಿ ಎಲ್ಲರಿಗೂ ಗೊತ್ತಿರಲಿಲ್ಲ. ಅದೊಂದು ಸುಂದರ ಅನುಭವ ನೀಡಿದ ಬದುಕು. ಈ ಜಾತಿದ್ವೇಷ ಭಯಂಕರ ಅನುಭವ ನೀಡಿದ್ದು ಮಾನಸಗಂಗೋತ್ರಿಯಲ್ಲಿ. ಪ್ರಥಮ ವರ್ಷದ ತರಗತಿ ಆರಂಭವಾಗಿ ಮೂರ್ನಾಲ್ಕು ದಿನಗಳು ಕಳೆಯುವುದರಲ್ಲಿ, ಒಬ್ಬ ಬಂದು, ಹೀಗೆ ನಮ್ಮ ಜಾತಿಯ ಸಂಘದ ಸಭೆಯನ್ನು ಕರೆದಿದ್ದಾರೆ. ನೀನೂ ಬಾ. ಅಲ್ಲಿಯೇ ಮೆಂಬರ್ ಆಗಬಹುದು. ನಾನು ಮಾಡಿಸುತ್ತೇನೆ ಎಂದ. ಹಾಗೆ ಕರೆದವನು ಎರಡನೆಯ ವರ್ಷದ ವಿದ್ಯಾರ್ಥಿಯೇನಲ್ಲ; ನನ್ನದೇ ತರಗತಿಯವನು. ನಾನು ಗಂಗೋತ್ರಿಗೆ ಬಂದಾಗಲೇ ಅವನು ಬಂದಿದ್ದು. ಆದರೆ, ಅಲ್ಲಿ ಜಾತಿಗೊಂದು ಸಂಘವಿರುವುದು, ಅದಕ್ಕೊಂದು ಸಭೆ ನಡೆಯುವುದು ಮೆಂಬರ್ ಆಗುವುದು ಎಲ್ಲಾ ತಿಳಿದುಕೊಂಡಿದ್ದ! ಅದಕ್ಕಿಂತ ಹೆಚ್ಚಾಗಿ ನನ್ನ ಜಾತಿ ಯಾವುದೆಂದು ಅಷ್ಟು ಶೀಘ್ರವಾಗಿ ಪತ್ತೆ ಹಚ್ಚಿದ್ದ!
ಬೆಂಗಳೂರಿಗೆ ಉದ್ಯೋಗನಿಮಿತ್ತವಾಗಿ ಬಂದೆ. ಕೆಲಸ ಮಾಡುತ್ತಿರುವ ಜಾಗದ ಸಮೀಪವೇ ವಸತಿ ಏರ್ಪಡಿಸಿಕೊಳ್ಳುವ ಉದ್ದೇಶದಿಂದ ರೂಂ ಹುಡುಕುತ್ತಿದ್ದೆ. ಒಂದು ಕಡೆ ’ಟು ಲೆಟ್’ ಬೋರ್ಡ ನೋಡಿ ನುಗ್ಗಿದೆ. ಮೊನೆಯೊಡತಿ ಕೇಳಿದ ಮೊದಲ ಪ್ರಶ್ನೆಯೇ ’ನೀವು ಯಾವ ಜನ?’ ಎಂದು. ನನಗೆ ರೂಮು ಸಿಗಲಿಲ್ಲ ಎಂದು ಬೇರೆ ಹೇಳಬೇಕಿಲ್ಲ. ಇನ್ನೊಮ್ಮೆ ಯಾವುದೋ ಕಾಲೇಜೊಂದರಲ್ಲಿ (ಈಗ ಅದರ ಹೆಸರೇ ಮರೆತುಹೋಗಿದೆ. ಹೊಸದಾಗಿ, ಒಂದು ಮೂರು ಬೆಡ್ ರೂಮಿನ ಮನೆಯಲ್ಲಿ ಕಾಲೇಜು ಆರಂಭವಾಗಿತ್ತು!) ವಾಕ್ ಇನ್ಸಂ ದರ್ಶನಕ್ಕೆ ಹೋಗಿದ್ದೆ. ಸಂದರ್ಶನ ಯಶಸ್ವಿಯಾಗಿ ಮುಗಿಯಿತು. ಆಗ ಒಬ್ಬರು, ಮತ್ತೆ ನನ್ನನ್ನು ಅವರ ಕಛೇರಿಗೆ ಬರುವಂತೆ ಕರೆದೊಯ್ದರು. ಹೋಗುವಾಗ, ನನ್ನ ಊರು ತಂದೆ ತಾಯಿ ವಿಷಯ ಮಾತನಾಡುತ್ತಾ, ಹಾಗೆ ಮಾತನಾಡುತ್ತಲೇ ನನ್ನ ಬೆನ್ನು ಸವರತ್ತಾ, ನಾನು ಹೇಳಿದ್ದಕ್ಕೆಲ್ಲಾ ’ಗುಡ್ ಗುಡ್’ ಎಂದು ಮಾರುತ್ತರ ನೀಡುತ್ತಿದ್ದರು. ’ಇವರಿಗೆಲ್ಲಾ ಇಂಪ್ರೆಸ್ ಆಗಿದೆ. ಕೆಲಸ ಗ್ಯಾರಂಟೀ’ ಎಂದುಕೊಂಡೆ. ಆದರೆ ಕೆಲಸ ಸಿಗಲಿಲ್ಲ. ಮೂರ್ನಾಲ್ಕು ವರ್ಷಗಳ ನಂತರ, ಈ ವಿಷಯವನ್ನು ನನ್ನ ಸ್ನೇಹಿತರಾಗಿದ್ದ ಒಬ್ಬ ಪ್ರಾಂಶುಪಾಲರಿಗೆ ಯಾವುದೊ ಮಾತು ಬಂದು ಹೇಳಿದೆ. ಅದಕ್ಕೆ ಅವರು, ’ಅವರು ಇಂಪ್ರೆಸ್ ಆಗಿದ್ದನ್ನು ವ್ಯಕ್ತಪಡಿಸಲು ನಿನ್ನ ಬೆನ್ನು ಸವರಿಲ್ಲ. ಅದರ ಬದಲಿಗೆ ಅಲ್ಲಿ ಯಾವುದಾದರೂ ದಾರ -ಶಿವದಾರವೊ, ಜನಿವಾರವೊ- ಸಿಗುತ್ತದೆಯೊ ಎಂದು ನೋಡಿದ್ದಾರೆ ಅಷ್ಟೆ’ ಎಂದರು. ನನಗೆ ಅವರ ಮಾತಿನ ಅರ್ಥವಾಗಿ, ’ಹೀಗೂ ಉಂಟೆ?’ ಎನ್ನಿಸಿತು.
ಈ ಜಾತಿ ಕಾರಣದಿಂದ ಎಂತೆಂತಹಾ ಮಹಾಪ್ರತಿಭೆಗಳೂ ತಿರಸ್ಕಾರಕ್ಕೆ, ನಿರ್ಲಕ್ಷಕ್ಕೆ, ಅವಮಾನಕ್ಕೆ ಒಳಗಾಗಿವೆ ಎಂಬುದನ್ನು, ನನ್ನ ಗಮನಕ್ಕೆ ತಂದ ಒಂದೆರಡು ಘಟನೆಗಳನ್ನು ಹೇಳುತ್ತೇನೆ. ಒಮ್ಮೆ, ಸರ್ಕಾರಿ ಶಾಲೆಯೊಂದಕ್ಕೆ ಹಲವು ಪುಸ್ತಕಗಳನ್ನು ದಾನ ನೀಡಿದವರೊಬ್ಬರು, ಒಂದು ಪುಟ್ಟ ಸಮಾರಂಭ ಮಾಡಿ, ಮಕ್ಕಳಿಗೆ ಓದುವ ಹವ್ಯಾಸವನ್ನು ಕುರಿತು ಮಾತನಾಡಿ ಎಂದು ಕರೆದಿದ್ದರು. ಅದರಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಒಬ್ಬರು ನಮ್ಮನ್ನು ಅವರ ಮನೆಗೆ ಊಟಕ್ಕೆ ಕರೆದೊಯ್ದರು. ಅವರು ಮಾತು ಮಾತಿಗೆ ’ಶರಣು ಶರಣು’ ಎನ್ನುತ್ತಿದ್ದರು. ನಮ್ಮನ್ನೂ ಶರಣರು ಎಂದೇ ಕರೆಯುತ್ತಿದ್ದರು. ಬಸವಣ್ಣನ ದೊಡ್ಡ ಭಾವಚಿತ್ರ ಅವರ ಮನೆಯ ಗೋಡೆಯನ್ನು ಅಲಂಕರಿಸಿತ್ತು. ಊಟ ಮುಗಿಸಿ ಹೊರಟೆವು. ಅವರ ಮನೆಯಿಂದ ನಾಲ್ಕೈದು ಮೀಟರ್ ದೂರದಲ್ಲಿ ಒಂದು ಸಣ್ಣ ತಿಪ್ಪೆಗುಂಡಿಯಿತ್ತು. ಅದರ ಬದಿಯಲ್ಲಿ, ನಾಲ್ಕೇ ನಾಲ್ಕು ಪುಟ್ಟಕೊಂಬೆಗಳಿದ್ದ ಆಳೆತ್ತರದ ಎಂಥದ್ದೊ ಒಂದು ಗಿಡವಿತ್ತು. ಅದರ ನೆರಳಲ್ಲಿ ಒಬ್ಬ ವ್ಯಕ್ತಿ ಒಂದು ಅಲ್ಯೂಮಿನಿಯಮ್ ತಟ್ಟೆ ಲೋಟ ಇಟ್ಟುಕೊಂಡು ಕುಳಿತಿದ್ದ. ಮನೆಯೊಳಗಿಂದ ಒಬ್ಬರು ಬಂದು, ಬಾಳೆ ಎಲೆಯಲ್ಲಿದ್ದ ಒಂದು ರಾಶಿ ಅನ್ನವನ್ನು ಆತನ ತಟ್ಟೆಗೆ ಸುರಿದು ಮಾಯವಾದರು. ಆ ಅನ್ನಕ್ಕೆ ಮೊದಲೇ ಸಾರನ್ನು ಬೆರಸಲಾಗಿತ್ತು. ಒಳಗೆ, ಗೋಡೆಯ ಮೇಲೆ ಇದ್ದ ಬಸವಣ್ಣ ನಗುತ್ತಿದ್ದ!
ಇನ್ನೂ ಒಂದೆರಡು ಘಟನೆಗಳಿವೆ. ಈ ಎರಡೂ ಘಟನೆಗಳು ಒಬ್ಬನೇ ವ್ಯಕ್ತಿಯಿಂದಾದವು ಮತ್ತು ಎರಡೂ ಕುವೆಂಪೂ ಅವರ ವಿಚಾರದಲ್ಲಿಯೇ ಎಂಬುದು ಕಾಕತಾಳಿಯ ಅಷ್ಟೆ. ನಮ್ಮಲ್ಲಿ ಒಬ್ಬ ಸಂಸ್ಕೃತ ಉಪನ್ಯಾಸಕರಿದ್ದರು. ಶೀಘ್ರಕೋಪಿ. ಜಾತಿಯ ಮತ್ತು ಧರ್ಮದ ಮದ ಸ್ವಲ್ಪ ಎದ್ದು ಕಾಣುವಷ್ಟೇ ಇತ್ತು. ಅವರ ನಡೆ ನುಡಿಗಳಲ್ಲು ಅದು ವ್ಯಕ್ತವಾಗುತ್ತಿತ್ತು. ಒಮ್ಮೆ ನಾನು ಕಚೇರಿಯಲ್ಲಿ ಕುಳಿತಿದ್ದೆ. ಅವರು ಗ್ರಂಥಾಲಯಕ್ಕೆ ಬಂದವರು ನನ್ನ ಬಳಿಗೂ ಬಂದರು. ಆಗ ನನ್ನ ಟೇಬಲ್ಲಿನ ಮೇಲೆ, ’ಮಲೆಗಳಲ್ಲಿ ಮದುಮಗಳು’ ಪುಸ್ತಕದ ಹೊಸ ಅವೃತ್ತಿ ಇತ್ತು. ಹಾರ್ಡ್ ಬೌಂಡ್ ಪ್ರತಿಯದು. ಅದನ್ನು ಕೈಗೆತ್ತಿಕೊಂಡ ಅವರು ಒಂದೆರಡು ನಿಮಿಷ ಹಾಗೆ ಹೀಗೆ ತಿರುಗಿಸಿ, ಪರವಾಗಿಲ್ಲಾರೀ, ಕೇವಲ ನೂರ ಎಂಬತ್ತು ರೂಪಾಯಿಗೆ ಇಷ್ಟು ದೊಡ್ಡ ಪುಸ್ತಕ ಮಾಡಿದ್ದಾರೆ. ಅದೂ ಹಾರ್ಡ್ ಬೌಂಡ್. ಪುಟ್ಟಪ್ಪ ಅಂತೂ ಬದುಕಿದ್ದಾಗ ಕನ್ನಡಕ್ಕೆ ಏನೂ ಮಾಡಲಿಲ್ಲ. ಸತ್ತಮೇಲೆ ನೂರ ಎಂಬತ್ತು ರೂಪಾಯಿಗೆ ಎಂಟನೂರು ಪುಟದ ಪುಸ್ತಕ ಬಂದಿದೆ ಎಂದರು.
ನನ್ನ ಕಿವಿಯನ್ನು ನಾನೇ ನಂಬಲಾಗಲಿಲ್ಲ. ಆದರೆ ಅವರ ಮೂರ್ಖತನದ ಸ್ವಭಾವ ಅರಿವಿದ್ದ ನಾನು ಏನನ್ನೂ ಹೇಳದೆ, ಅವರನ್ನು ನಿರ್ಲಕ್ಷಿಸಿದೆ. ಕುವೆಂಪು ಕನ್ನಡಕ್ಕೆ ಏನು ಮಾಡಿದರು ಎಂಬುದು ಈಗ ಇತಿಹಾಸ. ಅದರ ಬಗ್ಗೆ ಅವರ ಅಭಿಪ್ರಾಯ ಏನೇ ಇರಲಿ, ಆದರೆ ಅವರ ಮಾತಿನಲ್ಲಿದ್ದ ತಿರಸ್ಕಾರ, ಕೃತಿಯಲ್ಲಿ ಅಚ್ಚಾಗಿರುವ ಕುವೆಂಪು ಎಂಬ ಹೆಸರನ್ನು ನಿರಾಕರಿಸಿ, ಪುಟ್ಟಪ್ಪ ಎಂದು ಒತ್ತಿ ಹೇಳಿದ ರೀತಿಯೇ ಅಸಹ್ಯವಾಗಿತ್ತು.
ಇನ್ನೊಮ್ಮೆ ಇದೇ ಉಪನ್ಯಾಸಕರು ನಡೆದುಕೊಂಡ ರೀತಿ ನೋಡಿ. ನಾಡಗೀತೆ ವಿವಾದ ನಾಡಿನೆಲ್ಲೆಡೆ ವಾದವಿವಾದಗಳನ್ನು ಹುಟ್ಟುಹಾಕಿತ್ತು. ಪೂರ್ತಿ ಇರಬೇಕೆ? ಮೂರು ಪ್ಯಾರಾಗಳು ಸಾಕೆ? ಮಧ್ವರ ಹೆಸರಿರಬೇಕೆ? ಇತ್ಯಾದಿ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿತ್ತು. ತೇಜಸ್ವಿ ಮತ್ತು ಪೇಜಾವರ ಶ್ರೀಗಳ ನಡುವೆ ಪತ್ರಿಕೆಯಲ್ಲಿ, ಆರೋಗ್ಯಕರ ಚರ್ಚೆಯೂ ನಡೆಯುತ್ತಿತ್ತು. ಆ ಸಂದರ್ಭದಲ್ಲೇ, ಧರ್ಮದರ್ಶಿ ಎಂಬ ಸ್ವನಾಮಪೂರ್ವ ಬಿರುದು ಬಾವಲಿಯನ್ನು ಅಂಟಿಸಿಕೊಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕರಾಗಿದ್ದವರು ಕುವೆಂಪು ಮತ್ತು ನಾಡಗೀತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರಾಡಿ ಎಬ್ಬಿಸಿಬಿಟ್ಟರು. ಆ ಸಂದರ್ಭದಲ್ಲಿ, ನಡೆದ ಸಭೆಯೊಂದರಲ್ಲಿ, ದೊಡ್ಡ ಜಟಾಪಟಿಯೇ ನಡೆದುಹೋಗಿ. ತಳ್ಳಾಟದಲ್ಲಿ ಅವರ ಪಂಚೆಯೇ ಬಿಚ್ಚಿಹೋಗಿತ್ತು. ’ಉದ್ದೇಶಪೂರ್ವಕವಾಗಿಯೇ ನನ್ನ ಪಂಚೆ ಎಳೆದರು’ ಎಂದು ಅವರು ಗೋಳಾಡುತ್ತಿದ್ದರು. ಘಟನೆ ನೆಡೆದ ಮಾರನೆಯ ದಿನ ಪತ್ರಿಕೆಯಲ್ಲೆಲ್ಲಾ ಅದೇ ಸುದ್ದಿ. ಆ ದಿನ ಬೆಳಿಗ್ಗೆ ಹತ್ತಿಪ್ಪತ್ತು ಜನ ಸಹದ್ಯೋಗಿಗಳು ಪ್ರೇಯರ್ ಆರಂಭಕ್ಕೂ ಮುನ್ನ ಮಾತನಾಡುತ್ತಾ ನಿಂತಿದ್ದೆವು. ಆಗ ಬಂದ ನಮ್ಮ ಸಂಸ್ಕೃತದ ಮೇಷ್ಟ್ರು ’ಆ …. ಪುಟ್ಟಪ್ಪ ಮಾಡಿದ ಕಚಡಾ ಕೆಲಸದಿಂದ ಏನೇನು ಆಗ್ತಿದೆ ನೋಡಿ’ ಎಂದು ಬಾಂಬ್ ಒಗೆದುಬಿಟ್ಟರು. ಅಲ್ಲಿದ್ದವರೆಲ್ಲಾ ಒಂದು ಕ್ಷಣ ಹೌಹ್ವಾರಿ ಬಿಟ್ಟರು. ಸಂಸ್ಕೃತ ಮೇಷ್ಟ್ರ ಜಾತಿಯವರೂ ಅಲ್ಲಿದ್ದರು. ಅವರ ಮುಖಗಳಲ್ಲೂ ಅವರ ಮಾತಿನ ಬಗ್ಗೆ ಇದ್ದ ಅಸಹ್ಯ ವ್ಯಕ್ತವಾಗುತ್ತಿತ್ತು. ಆದರೆ, ಯಾರೊಬ್ಬರೂ ಅವರ ಮಾತಿಗೆ ಪ್ರತಿಕ್ರಿಯೆ ನೀಡಲಿಲ್ಲ! ಆ ಕ್ಷಣಕ್ಕೆ ಅದೇ ಸರಿಯಾದ ಪ್ರತಿಕ್ರಿಯೆ ಎಂದು ನನಗೆ ಈಗಲೂ ಅನ್ನಿಸುತ್ತಿದೆ.
ಆ ಸಂಸ್ಕೃತ ಪಂಡಿತರು ಹುಟ್ಟುವ ಮೊದಲೇ ಕುವೆಂಪು ಅವರು ನಾಡಗೀತೆ ಬರೆದಿದ್ದರು! ಅದನ್ನು ಕರ್ನಾಟಕದ ನಾಡಗೀತೆ ಮಾಡಿರೆಂದು ಅವರೇನು ಅರ್ಜಿ ಹಾಕಿಕೊಂಡಿರಲಿಲ್ಲ. ಅರ್ಹತೆಯ ಆಧಾರದಿಂದಲೇ ಅದಕ್ಕೆ ಆ ಸ್ಥಾನ ದಕ್ಕಿತ್ತು. ಅವರ ಮರಣಾನಂತರ ಎದ್ದ ಜಾತಿ ರಾಜಕಾರಣದ ರಾಡಿಗೆ ಅವರು ಹೇಗೆ ಕಾರಣಾರಾಗುತ್ತಾರೆ? ಇದು ಸಾಮಾನ್ಯನಿಗೂ ಅರ್ಥವಾಗುವಂತದ್ದು. ಆದರೆ ಸಂಸ್ಕೃತ ಉಪನ್ಯಾಸಕರೊಬ್ಬರಿಗೆ ಅದು ಅರ್ಥವಾಗಲಿಲ್ಲ. ಅರ್ಥವಾಗಲಿಲ್ಲ ಎನ್ನುವುದಕ್ಕಿಂತ, ಅರ್ಥ ಮಾಡಿಕೊಳ್ಳಲು ಅವರು ಸಿದ್ಧರಿರಲಿಲ್ಲ ಎನ್ನುವುದೇ ಸರಿ. ಅಂತಹ ಸಂದರ್ಭಗಳಲ್ಲಿ ಅವರ ಜೊತೆ ವಾದಕ್ಕೆ ಇಳಿಯದೆ, ಸುಮ್ಮನಾಗುತ್ತಿದ್ದ ನಮ್ಮ ಸಹದ್ಯೋಗಿಗಳ ನಡವಳಿಕೆಯೇ ಅವರ ಜಾತಿ ಮತ್ತು ಧರ್ಮದ್ವೇಷದ ತೀವ್ರತೆ ಎಷ್ಟಿತ್ತೆಂಬುದಕ್ಕೆ ಉದಾಹರಣೆಯಾಗಿದ್ದವು. ದುರಂತವೆಂದರೆ, ಆ ಮೇಷ್ಟ್ರು ಅಕಾಲ ಮರಣಕ್ಕೆ ತುತ್ತಾಗಿಬಿಟ್ಟರು. ಅವರ ಕುಟುಂಬ ಸಂಕಷ್ಟದಲ್ಲಿತ್ತು. ಸಹದ್ಯೋಗಿಗಳೆಲ್ಲಾ ತಮ್ಮ ಒಂದು ದಿನದ ಸಂಬಳವನ್ನು ಒಟ್ಟು ಸೇರಿಸಿ ಆ ಕುಟುಂಬಕ್ಕೆ ನೀಡಲು ನಿರ್ಧರಿಸಿದರು. ಹಾಗೆ ಮಾಡಿದರೂ ಸಹ. ಆಶ್ಚರ್ಯವೆಂದರೆ, ಒಂದು ದಿನದ ಸಂಬಳ ದಾನ ಮಾಡಿದವರಲ್ಲಿ ಎಲ್ಲ ಜಾತಿಯವರೂ ಇದ್ದರು! ಈಗ ಹೇಳಿ. ನಮ್ಮ ತಲೆಯಲ್ಲಿರಬೇಕಾದದ್ದು ಮೆದುಳೊ? ಜಾತಿ ಮತ, ಮೇಲುಕೀಳುಗಳ ಮಲವೊ?

1 comment:

Harihara Sreenivasa Rao said...

swmi neerigllada jaati, beerigillada jaati, soft wear(.....), internetgilllada jaatiynnu naavinnoo tandu tumbuttiruvudoo, matte maatte adanne meluku haakikollabeke? Iddoo vote bank ge seemitavaagiruvagalee ,nimmanthahavarannoo seleyuttirudu namma ghanteyannu naave kadime maadikondantaaguvudillave? idarinda naavugalu horabaruvudu yaavaaga? Aa Bharatamateyee balllu. Naanu ittechege Kuvempu avaru kannadisiruva Sankarara Nirvaana shatakavannu oodide. Prayasha intaha manssiddidarindalee avarige viswa manava kalpane holedu adu Eee shatamaanadalli saakshaatkavagisuvudu nammellara kartavyavallave?