Thursday, July 11, 2013

ರನ್ನ ಒಬ್ಬ ಮನಶ್ಯಾಸ್ತ್ರಜ್ಞನೂ ಹೌದು!

ರನ್ನನ ’ಸಾಹಸಭೀಮವಿಜಯಂ’ ಕಾವ್ಯದಲ್ಲಿ ದುರ್ಯೋಧನ ಪ್ರತಿನಾಯಕನಾಗಿ ವಿಜೃಂಭಿಸಿದ್ದಾನೆ. ದುರ್ಯೋಧನನ ಚಲ, ಅಹಂಕಾರ, ಜಿಗುಟುತನ, ಭಂಡತನ, ಸ್ವಾಭಿಮಾನ, ದುರಭಿಮಾನ, ದ್ವೇಷಮನೋಭಾವ, ಕುಟಿಲತೆ, ಚಂಚಲತೆ, ದುಡುಕುತನ ಎಲ್ಲವನ್ನೂ ರನ್ನ ಚಿತ್ರಿಸಿದ್ದಾನೆ. ದುರಂತ ಸನ್ನಿವೇಶದ ಮನುಷ್ಯನೊಬ್ಬನ ಮನಸ್ಥಿತಿ ಹೇಗಿದ್ದಿರಬಹುದು ಎಂಬುದನ್ನು ರನ್ನ ಬಿಟಿಸಿಟ್ಟಿದ್ದಾನೆ. ಪ್ರಸ್ತುತ, ರನ್ನನ ಜಾಣ್ಮೆಯನ್ನು ತೋರಿಸುವ ಒಂದು ಪ್ರಸಂಗವನ್ನು ನೋಡಬಹುದು. ಅದು ದುರಂತನಾಯಕನೊಬ್ಬನ ಚಿತ್ರಣವೂ ಆಗಿರುವುದು ಮಾತ್ರ ವಿಶೇಷ.
ದುರ್ಯೋಧನ ಒಬ್ಬನನ್ನು ಬಿಟ್ಟು ಇಡೀ ಕೌರವ ಸೇನೆಯಲ್ಲಾ ನಾಶವಾಗಿದೆ. ಸಂಜಯನ ಸಹಾಯದಿಂದ ಯುದ್ಧಭೂಮಿಯಲ್ಲಿ ಪರ‍್ಯಟನ ನೆಡೆಸುತ್ತಾನೆ. ಅಲ್ಲಿ ಆತ ಕಾಣುವ ದೃಶ್ಯಗಳೇ ಮುಂದಿನ ಅವನ ನಿರ್ಧಾರಗಳನ್ನು ಗಟ್ಟಿಗೊಳಿಸುವಂತಹವು. ಆದರೆ ತನ್ನ ಅಪಾರ ಬಂಧು, ಬಳಗ, ಸಹೋದರರ, ಸ್ನೇಹಿತರ ಕೊಳೆಯುತ್ತಿರುವ ಶವಗಳನ್ನು ನೋಡಿ ಆತನ ಮನಸ್ಥಿತಿ ಹೇಗಾಗಿರಬೇಡ. ಆತನ ಗೋಳಾಟವೇ ಅಲ್ಲಿ ಕಾರುಣ್ಯದ ಕಡಲಾಗುತ್ತದೆ. ಆದರೆ, ಆಗಿನ ಆತನ ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆಯಿತ್ತೆ? ಅಥವಾ, ಸತ್ತಮೇಲೆ ಕೆಟ್ಟ ಮಾತೇಕೆ ಎಂದು, ಸತ್ತವರ ಬಗ್ಗೆ ಅಭಿಮಾನದಿಂದ ಮಾತನಾಡಿದನೆ? ಇದನ್ನು ಮನಗಾಣುವ ಮೊದಲು, ಆತ ಯುದ್ಧಭೂಮಿಯನ್ನು ಪ್ರವೇಶಿಸದ ಸಂದರ್ಭದಲ್ಲಿ, ತನ್ನ ಸೇನೆಗೆ ಆದ ಗತಿ, ತನಗಾದ ಸೋಲಿನಿಂದಾಗಿ ಆತ ನೋವಿನಿಂದ, ಬೇಸರದಿಂದ ಆಡಿದ ಮಾತುಗಳನ್ನು ಗಮನಿಸಬೇಕು. ಈ ಸಂದರ್ಭದಲ್ಲಿ ಆತ ದ್ರೋಣರ ಬಗ್ಗೆ ಹೇಗೆ ಮಾತನಾಡುತ್ತಾನೆ ನೋಡಿ.
ಈ ದ್ರೌಣಿಯುಂ ದ್ರೋಣನುಂ ಜೋಳದ ಪಾಳಿಯಂ ಬಗೆದರಿಲ್ಲಾ.
ಇಸಲ್ ಅಂಬಂ ತಿರುವಾಯ್ಗೆ ತಂದಱವರೇ?
ತಾಮ್ ಇರ್ವರುಂ ಕಯ್ದುವಂ ಬಿಸುಟರ್!
ರುದ್ರನ ಅವತಾರವೆಂದೇ ನಾನು ಅಶ್ವತ್ಥಾಮನನ್ನು ಸಾಕಿದ್ದೆ. ಆದರೆ, ಆತನೂ ಅವನ ತಂದೆಯೂ ಮಾಡಿದ್ದಾದರೂ ಏನು? ಅನ್ನದ ಹಂಗೂ ಇಲ್ಲದೆ, ಬಾಣವನ್ನು ಬಿಲ್ಲಿನ ಹಗ್ಗಕ್ಕೆ ಸೋಕಿಸದೆ, ಆಯುಧವನ್ನೇ ಕೈಚೆಲ್ಲಿದರು. ಆದರೆ ನಾನು, ಶತ್ರುಸೈನ್ಯಕ್ಕೆ ಅಶ್ವತ್ಥಾಮನೊಬ್ಬನೇ ಸಾಕು ಎಂದುಕೊಂಡು ಮೋಸಹೋದೆ! ಕೋಪಾವೇಶದಿಂದ ಕ್ಷತ್ರಿಯರು ಯುದ್ಧ ಮಾಡಬಹುದು. ಹಾಗೆಂದು ಮಿಕ್ಕವರೂ (ದ್ರೋಣ, ಅಶ್ವತ್ಥಾಮರು) ಮಾಡಲಾದೀತೆ? ಇವರನ್ನು ನಂಬಿ ನನ್ನ ಮಕ್ಕಳು ತಮ್ಮಂದಿರು ಸಾಯಬೇಕಾಯಿತು.
ಪದುಳಂ ಕುಳ್ಳಿರ್ದು, ಎಮಗೆ ಆಯದ ಮಾತಂ ತಗುಳೆ ಗೞಪಿ ಪೋದಂ.
ಸಂದಿರ್ದ ಅದಟರೊಳ್ ಇಱದಱಯಂ.
ತಪ್ಪದೆ ಕಮ್ಮಱಯೋಜನ್ ಎನಿಸಿದಂ ಬಿಲ್ಲೋಜಂ!
ತಾನು ಮಾತ್ರ ಹಾಯಾಗಿ ಕುಳಿತು, ನಮಗೆ ಚೆನ್ನಾಗಿ ಹೆಚ್ಚುಗಾರಿಕೆ ಮಾತನಾಡಿ, ಎದುರಾದ ವೀರರನ್ನು ಎದುರಿಸಿ ಯುದ್ಧ ಮಾಡದೆ ಹೋದನು ಈ ದ್ರೋಣ. ಆದರೆ ತಾನು ಮಾತ್ರ, ಕಮ್ಮಾರನೂ ಓಜನೆನಿಸಿಕೊಂಡಂತೆ, ಬಿಲ್ಲೋಜ ಎನ್ನಿಸಿಕೊಂಡು ಬಿಟ್ಟ!
ಏಕೆ ಕಮ್ಮಾರನು ಓಜನಾಗಬೇಡವೆ? ಎಂಬ ಪ್ರಶ್ನೆ ಏಳುತ್ತದೆ. ಅದನ್ನೇ ಶ್ರೀ ಎಲ್. ಬಸವರಾಜು ಅವರು ವಿಶ್ಲೇಷಣೆ ಮಾಡಿದ್ದಾರೆ. ಉಪಾಧ್ಯಾಯ – ಓಜ ಎಂಬ ಬಿರುದು ವೈದಿಕದಲ್ಲಿ ಬ್ರಾಹ್ಮಣರಿಗೆ ಮೀಸಲಾಗಿತ್ತು. ಅದನ್ನು ರಾಜನಾದ ದುರ್ಯೋಧನ ಸಹಜವಾಗಿಯೇ ತನ್ನದೂ ಎಂದುಕೊಂಡಿದ್ದಾನೆ. ಆದರೆ ಜೈನವೈಶ್ಯನಾದ ರನ್ನನದೂ ಅದೇ ಅಭಿಪ್ರಾಯವೋ? ಎಂದು ಪ್ರಶ್ನಿಸಿದ್ದಾರೆ. ಕಾವ್ಯದಲ್ಲಿ ಪಾತ್ರ ಮಾತನಾಡಿದ್ದು ಅದು ಕವಿಯ ಅಭಿಪ್ರಾಯ ಆಗುತ್ತದೊ ಇಲ್ಲವೊ ಎಂಬುದು ಆಯಾಯ ಸಂದರ್ಭವನ್ನು ಅವಲಂಬಿಸಿರುತ್ತದೆ. ದುರ್ಯೋಧನ ಮೊದಲೇ ದುರಹಂಕಾರಿ. ಆತನ ಕಾಲಕ್ಕೆ ವರ್ಣವ್ಯವಸ್ಥೆ ಬಲವಾಗಿಯೇ ಇತ್ತು. ಪ್ರತಿಭಾವಂತನಾದ ಕಮ್ಮಾರನೊಬ್ಬನು ಸುಂದರವಾದ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದವನು ತನ್ನ ಹೆಸರಿನೊಂದಿಗೆ ಓಜ ಎಂಬುದನ್ನು ಸೇರಿಸಿಕೊಳ್ಳುವುದು (ಮಲ್ಲೋಜ, ಕಾಡೋಜ, ತಿಪ್ಪೋಜ) ಒಂದು ಸಾಮಾನ್ಯ ಬೆಳವಣಿಗೆಯಾಗಿತ್ತು. ಆದರೆ, ಕಲ್ಲು ಕೆತ್ತುವವನು ಓಜನಾಗುವುದನ್ನು ವರ್ಣಾಶ್ರಮದ ನೆಲೆಯಲ್ಲಿ ಯೋಚಿಸುವ ದುರ್ಯೋಧನ ಸಹಿಸಲಾರ. (ಕಮ್ಮಾರನೊಬ್ಬನು ಓಜ ಎನ್ನಿಸಿಕೊಳ್ಳುವುದನ್ನು ಸಹಿಸದ ದುರ್ಯೋಧನ, ಕರ್ಣನನ್ನು ಸಹಿಸಿಕೊಂಡಿರಲಿಲ್ಲವೆ? ಅವನನ್ನು ಅಂಗರಾಜನನ್ನಾಗಿ ಮಾಡಿರಲಿಲ್ಲವೆ? ಎಂಬ ಪ್ರಶ್ನೆಗಳು ಎದುರಾಗುತ್ತವೆಯಾದರೂ, ಅದಕ್ಕೆ ದುರ್ಯೋಧನನಿಗೆ ಬೇರೆ ಕಾರಣವಿತ್ತು ಎಂಬುದು ತಿಳಿದ ವಿಚಾರವಾಗಿದೆ. – ಆನಱವೆಂ, ಪೃಥೆಯಱವಳ್, ದಾನವರಿಪುವಱವನ್, ಅರ್ಕನಱವಂ, ದಿವ್ಯಜ್ಞಾನಿ ಸಹದೇವನಱವಂ; ನೀನಾರ್ಗೆಂದು) ಕಲ್ಲು ಕೆತ್ತುವವನೂ ಓಜ ಎನ್ನಿಸಿಕೊಂಡಂತೆ, ನೀವೂ ಬಿಲ್ಲೋಜ ಅನ್ನಿಸಿಕೊಂಡಿರಿ ಅಷ್ಟೆ ಎಂದು ದ್ರೋಣನನ್ನು ಲೇವಡಿ ಮಾಡುತ್ತಿದ್ದಾನೆ. ಅಂದ ಮಾತ್ರಕ್ಕೆ ಅದು ರನ್ನನ ಅಭಿಪ್ರಾಯವಾಗಬೇಕಿಲ್ಲ. ಏಕೆಂದರೆ ಅವಕಾಶ ಸಿಕ್ಕಾಗಲೆಲ್ಲಾ ರನ್ನ ಬ್ರಾಹ್ಮಣ ಶ್ರೇಷ್ಟತೆಯನ್ನು (ಅದೂ ದರ್ಯೋಧನನ ಬಾಯಿಂದಲೇ) ವಿರೋಧಿಸಿದ್ದಾನೆ ಎಂಬುದನ್ನು ಮುಂದೆ ಕಾಣಬಹುದು. ದುರ್ಯೋಧನನ ದೃಷ್ಟಿಯಲ್ಲಿ, ಕ್ಷತ್ರಿಯನಾದ ಆತ ಮಾತ್ರ ಶ್ರೇಷ್ಠ! ಉಳಿದವರೆಲ್ಲರೂ – ಕಮ್ಮಾರನೂ ಬ್ರಾಹ್ಮಣನೂ – ಒಂದೆ!
ಈಯಲ್, ಇಱಯಲ್, ಶರಣ್ಬುಗೆ ಕಾಯಲ್ ಕ್ಷತ್ರಿಯರ್ ಬಲ್ಲರ್.
ಅಬ್ರಹ್ಮಣ್ಯಂಭೋ ಎನಲುಂ, ಅವಿಧಾ ಅನಲುಂ ಬ್ರಾಹ್ಮಣರ್ ಬಲ್ಲರ್!
ಇಱಯಲ್ ಅವರ್ ಎತ್ತ ಅಱವರ್?
ದಾನ ಮಾಡುವುದನ್ನು, ಯುದ್ಧ ಮಾಡುವುದನ್ನು. ಶರಣು ಬಂದವರ ಕಾಪಾಡುವುದನ್ನು ಕ್ಷತ್ರಿಯರು ಮಾಡಬಲ್ಲರು. ಬ್ರಾಹ್ಮಣರಾದರೊ ಮೈಲಿಗೆಯಾದರೆ ಅಬ್ರಹ್ಮಣ್ಯಂಭೋ ಎನ್ನುತ್ತಾರೆ; ಭಯವಾದರೆ ಅವಿಧಾ ಎನ್ನುತ್ತಾರೆ. ಅವರಿಗೆ ಗೊತ್ತಿರುವುದು ಇಷ್ಟೆ! ಚತುರ್ವರ್ಣೀಯರಲ್ಲಿ, ದ್ವಿಜರಿಗೆ ದರ್ಭೆಯನ್ನು ಹಿಡಿದು ಮಂತ್ರ ಹೇಳುವ ಅಧಿಕಾರವಿದೆಯೇ ಹೊರತು ಶಸ್ತ್ರಾಸ್ತ್ರವೆಂದರೆ, ಅದು ಜಾತಿ ವಿರುದ್ಧ! (ಘಾತಿಪ ಶಸ್ತ್ರಾಸ್ತ್ರಮ್ ಅವರ್ಗೆ ಜಾತಿವಿರುದ್ಧಂ!).
ಭಾರಧ್ವಾಜಂ ಓಜಂ ಗಡ, ಚಿಃ.
ಪಾಂಡು ತನೂಜರ ಪಕ್ಕದೊಳೆ ಪಾೞಗಿಡೆ ನೆಗೞ್ದುದಱಿಂ,
ಗಡ ಬಿಲ್ಲ ಬಲ್ಮೆಯುಂ, ಕುಲಮುಂ ನಿರ್ವ್ಯಾಜಂ ಮಸುೞ್ದುವು.
ನೀತಿ ನಿಯಮವನ್ನು ಬಿಟ್ಟು ಪಾಂಡುತನಯರ ಪರವಹಿಸಿದ್ದರಿಂದ ಆತನ ಕುಲ ಮತ್ತು ಬಿಲ್ಲುವಿದ್ಯೆ ಎರಡೂ ನಿಜವಾಗಿಯೂ ಹಾಳಾದವು!
ಬೇರೆಲ್ಲರನ್ನು ಬಿಟ್ಟು, ದ್ರೋಣರನ್ನೇ ತನ್ನ ಸ್ಥಿತಿಗೆ ಕಾರಣ ಎಂದು ಭಾವಿಸಿರುವ ದುರ್ಯೋಧನನ ಈ ಕೋಪಕ್ಕೆ ಕಾರಣವೂ ಇದೆ. ಆತ ಗುರುವಾಗಿದ್ದುದು ಮತ್ತು ಅರ್ಜುನನ ಬಗ್ಗೆ ವಿಶೇಷ ಒಲವಿಟ್ಟುಕೊಂಡಿದ್ದು ಮೊದಲ ಕಾರಣವಾದರೆ, ಅರ್ಜುನನ ಬಗ್ಗೆ ಕಡುವಿರೋಧವನ್ನು ಬೆಳೆಸಿಕೊಂಡಿದ್ದ, ಆ ಕಾರಣಕ್ಕಾಗಿಯೇ ತನ್ನ ಅಂತರಂಗಕ್ಕೆ ಸೇರಿಸಿಕೊಂಡಿದ್ದ ತನ್ನ ಪ್ರಿಯಮಿತ್ರ ಕರ್ಣನ ವಿಷಯದಲ್ಲಿ ದ್ರೋಣ ನಡೆದುಕೊಂಡ ರೀತಿ ಎರಡನೆಯ ಕಾರಣವಾಗಿದೆ.
ನೆಗೞ್ದ ಇಂದ್ರ ಸುತನಿನ್ ಏಗುಂದಿದನೋ?
ಕಮಲಪ್ರಿಯ ನಂದನನ್ ಪ್ರಿಯಮಿತ್ರನೆನಗೆ,
ಅವನನ್ ಎನ್ನ ಪಕ್ಕದೆ ಪೞದು ಅಪ್ರಿಯಮಂ ಮಾಡಿದನ್
ಆ ಕಳಶಯೋನಿ.
ಕಳಶಯೋನಿ (ಕುಂಭಸಂಭವ=ದ್ರೋಣ) ಎಂದು ದ್ರೋಣನನ್ನು ಸಂಬೋಧಿಸುತ್ತಿರುವ ದುರ್ಯೋಧನನ ಸಿಟ್ಟು, ಕರ್ಣನ ಅವನ ಬಗೆಗಿನ ಪ್ರೀತಿಯನ್ನು ಅರ್ಥ ಮಾಡಿಸುತ್ತದೆ. ಅಷ್ಟಲ್ಲದೆ, ದ್ರೋಣನ ಬಗ್ಗೆ ಅವನಿಗಿರುವ ತಿರಸ್ಕಾರವನ್ನೂ ಸೂಚಿಸುತ್ತದೆ. ತನ್ನ ಗುರುವಿನ ಹುಟ್ಟನ್ನು (ಸಹಜವಾದ ಹುಟ್ಟು ಇಲ್ಲದವನು) ಪ್ರಸ್ತಾಪಿಸಿ ಹೀಯಾಳಿಸುತ್ತಿದ್ದಾನೆ, ದುರ್ಯೋಧನ. ಇಂದ್ರನ ಮಗನಾದ ಅರ್ಜುನನಿಗೆ ಯಾವುದರಲ್ಲಿ ಕಡಿಮೆ ನನ್ನ ಕರ್ಣ? ಎನ್ನುವಲ್ಲಿ, ಅರ್ಜುನನ ಹುಟ್ಟಿನ ಬಗ್ಗೆಯೂ ಇಂದ್ರಸುತ’ ಎಂದು ನೆನಪಿಸುತ್ತಾನೆ. ದ್ರೋಣ ಕರ್ಣನ ಬಗ್ಗೆ ಅಂದು ಆಡಿದ ಮಾತಿಗೆ ನಾವು ಪಂಪನನ್ನೇ ನೋಡಬೇಕು. (ಕುಲಜರನ್ ಉದ್ಧತರಂ ಭುಜಬಲಯುತರಂ ಹಿತರನ್ ಈ ಸಭಾ ಮಧ್ಯದೊಳಗ್ಗಲಿಸಿದ ಮದದಿಂ ನಾಲಗೆ ಕುಲಮಂ ತಬ್ಬುವವೋಲೆ ಉಱದೆ ನೀಂ ಕೆಡೆನುಡಿವೈ)
ದುರ್ಯೋಧನನಿಗೆ ದ್ರೋಣ ಅಶ್ವತ್ಥಾಮರ ಬಗ್ಗೆ ಇಷ್ಟೊಂದು ದ್ವೇಷ ಬರಲು ಅವರಿಬ್ಬರು ಯುದ್ಧವನು ಕೇಚೆಲ್ಲಿದ ರೀತಿ. ಕ್ಷತ್ರಿಯನಾದ ಆತನ ದೃಷ್ಟಿಯಲ್ಲಿ ಯುದ್ಧವೆಂದರೆ, ಗೆಲಲಾರ್ಪೊಡೆ ಇಱದು ಗೆಲ್ವುದು ಗೆಲಲಾಱದೊಡೆ ಅಣ್ಮಿ ಸಾವುದು, ಅಷ್ಟೆ! ಗೆಲ್ಲಲೂ ಆಗದೆ, ಸಾಯಲೂ ಆಗದೆ ದ್ರೋಣ ಅಶ್ವತ್ಥಾಮರಂತೆ ತೊಲಗುವಡೆ ’ನೆಗೞ್ತೆ ತಲಗದೆ ಇರ್ಕುಮೆ ಮೆಯ್ಯಿಂ?’
ತನ್ನವರಿಗಾದ ಗತಿ, ತನಗಾದ ಸೋಲಿನ ಹತಾಶೆಯಿಂದ ಇಷ್ಟೆಲ್ಲಾ ದ್ರೋಣರನ್ನು ದೂಷಿಸುವ ದುರ್ಯೋಧನ ದ್ರೋಣರ ಶವವನ್ನು ಕಂಡೊಡನೆ ಆತ ತೋರುವ ಪ್ರತಿಕ್ರಿಯೆ ಬೇರೆಯದೇ ತೆರನಾಗುತ್ತದೆ.
ಕಾಲಿಡಲೂ ಜಾಗವಿಲ್ಲದಂತೆ ತುಂಬಿದ್ದ ಆಯುಧಗಳ ರಾಶಿಯಲ್ಲಿ ನೆಡೆಯಲಾಗದೆ, ಆಗಲೇ ಊದಿಕೊಂಡಿದ್ದ ಹೆಣಗಳನ್ನೆ ತುಳಿಯುತ್ತಾ ಸಂಜಯನ ಜೊತೆ ಬರುವ ದುರ್ಯೋಧನ ದ್ರೋಣನ ಹೆಣವನ್ನು ಕಾಣುತ್ತಾನೆ. ಧೃಷ್ಟದ್ಯುಮ್ನ ದ್ರೋಣನ ಕೊರಳನ್ನು ಕತ್ತರಿಸುವ ಮೊದಲು ಮೃಗೀಯವಾಗಿ ದ್ರೋಣನ ತಲೆಗೂದಲನ್ನು ಹಿಡಿದಿದ್ದರಿಂದ, ಆತನ ಶಿರಸ್ತ್ರಾಣ ಅನಾಥವಾಗಿ ಬಿದ್ದಿದೆ. ದ್ರೋಣನ ಆ ಸ್ಥಿತಿಯನ್ನು ಕಂಡ ದುರ್ಯೋಧನನ ಹೊರಬರುವಷ್ಟರಲ್ಲಿ, ಆತನ ಮನಸ್ಸಿನಲ್ಲೇ ಮೂಡುವ ಭಾವನೆಗಳನ್ನು ರನ್ನ ಒಂದೇ ಸಾಲಿನಲ್ಲಿ ’ಗುರುವಂ ಲಘುಸಂಧಾನದೆ ನರನ್ ಇಸೆ’ ಎಂದು ಹೇಳುತ್ತಾನೆ. ಗುರುವೆಂಬ ಕಾರಣದಿಂದ ಅರ್ಜುನ ಹೆಚ್ಚು ನೋವುಂಟು ಮಾಡುವ ಬಾಣಗಳನ್ನು ಬಳಸದೆ, ಸುಲಭದ ಬಾಣಗಳನ್ನೇ ಬಳಸಿ ಕೊಂದಿದ್ದಾನೆ! ಇದು ಅರ್ಜುನನ ಪ್ರಶಂಸೆಯೊ? ಅಥವಾ, ಅಂತಹ ಸುಲಭ ಬಾಣಗಳನ್ನು ಎದುರಿಸಲಾಗದೆ ಪ್ರಾಣಬಿಟ್ಟ ದ್ರೋಣನ ಬಗ್ಗೆ ಇರುವ ತಿಸ್ಕಾರವೊ? (ಅದೇನೇ ಇರಲಿ, ಅಲ್ಲಿ ರನ್ನ ’ಗುರು-ಲಘುಮಿಶ್ರಿತಂ ದೊರೆಕೊಳೆ ತದ್ಗುರು ತಚ್ಛಂದೋವೃತ್ತಿಗೆ ದೊರೆಯೆನಿಸಿರ್ದುದು’ ಎಂದು ಕಾವ್ಯಮೀಮಾಂಸೆಯನ್ನೂ ಹೇಳಿಬಿಡುತ್ತಾನೆ). ಮುಂದೆ ದುರ್ಯೋಧನ ಮಾತನಾಡುತ್ತಾನೆ.
ಬಿಲ್ಲ ಬಿನ್ನಣಕೆ, ನಿಮ್ಮೊಡನೆ ಇದಿರ್ಚಿ ಕಾದಿ ಗೆಲಲ್ಕೆ,
ಗಾಂಡಿವಿಯಲ್ತು ಪಿನಾಕಪಾಣಿಯುಂ ನೆಱೆಯನ್!
ಕುಂಭಸಂಭವ, ನಿಮಗಿಂತು ಏತೆಱದಿನ್ ಸಾವುಂ ಸಂಭವಿಸಿರ್ದುದೊ?
ಅದು ನಿಮ್ಮ ಉಪೇಕ್ಷೆ ಎಂದಱಯೆನ್; ಅದು ಎನ್ನ ಕರ್ಮವಶಮ್ ಎಂದಱಯೆಂ!
ಹಿಂದೆ ಎಲ್ಲ ತಪ್ಪನ್ನೂ ದ್ರೋಣನ ಮೇಲೆ ಹಾಕಿ ದೂಷಿಸಿದ್ದ ದುರ್ಯೋಧನನೇ ಇಲ್ಲಿ ನಿಮ್ಮ ಸಾವು ನಿಮ್ಮ ಉಪೇಕ್ಷೆಯಿಂದಾದುದಲ್ಲ; ಅದು ನನ್ನ ಕರ್ಮವಶದಿಂದ ಆದುದು ಎನ್ನುತ್ತಿದ್ದಾನೆ. ಅಷ್ಟಲ್ಲದೆ, ದ್ರೋಣನ ಸಾಮರ್ಥ್ಯವನ್ನು ಅರ್ಜುನ ಮತ್ತು ಪಿನಾಕಪಾಣಿಯಾದ ಶಿವನ ಸಾಮರ್ಥ್ಯಕ್ಕಿಂತಲೂ ಹಿರಿದು ಎಂದು ಪ್ರಶಂಸಿಸುತ್ತಿದ್ದಾನೆ! ಅಲ್ಲಿ ಕಳಶಯೋನಿಜ ಎಂದು ತಿರಸ್ಕಾರದಿಂದ ನುಡಿದಿದ್ದ; ಇಲ್ಲಿ ಕುಂಭಸಂಭವ ಎಂಬುದನ್ನು ಗೌರವದ ಧ್ವನಿಯಲ್ಲಿ ಬಳಸುತ್ತಿದ್ದಾನೆ. ಇಲ್ಲಿ ದ್ರೋಣನ ಮೇಲಿನ ಸಿಟ್ಟೆಲ್ಲಾ ಒಮ್ಮೆಲೆ, ’ದ್ರುಪದಾತ್ಮಜಾತನ್ (ಧೃಷ್ಟದ್ಯುಮ್ನ) ಓವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕಮ್ ಎತ್ತ ಪೋದುದೊ, ಶರವೆತ್ತ ಪೋದುದೊ, ಲಲಾಟದಿನ್ ಇಂಗಳಗಣ್ಣು ಅದೆತ್ತ ಪೋದುದೊ, ಅಲಂಪುಮ್ ಅದೆತ್ತ ಪೋದುದೋ!’ ಅಶ್ವತ್ಥಾಮನ ಮೇಲೆ ತಿರುಗಿಬಿಡುತ್ತದೆ. ಭಾರಧ್ವಾಜಂ ಓಜಂ ಗಡ, ಚಿಃ ಎಂದು ದ್ರೋಣನಿಗೆ ದಿಕ್ಕಾರ ಹೇಳಿದ್ದ, ಯುದ್ಧವನ್ನು ಸುಲಭವಾಗಿ ಕೈಚೆಲ್ಲಿದ ಎಂದು ಹೇಳಿದ್ದ ದುರ್ಯೋಧನನ ಮುಂದಿನ ಮಾತುಗಳಿವು.
ಅನ್ಯ ಸೈನ್ಯದ ಒಡಲೊಳ್ ಶರಸಂಧಾನಮನ್
ತನ್ನ ಶಿಷ್ಯರ ಮೆಯ್ಯೊಳ್ ಬಿಲ್ಬಲ್ಮೆಯಂ
ನಿಖಿಳ ದಿಕ್ಚಕ್ರದೊಳ್ ನಿಜಕೀರ್ತಿಯಂ
ಹರಪಾದಾಂಬುಜ ಯುಗ್ಮದೊಳ್ ಚಿತ್ತಮಂ
ನಿಱಸಿದಂ!
ಚಾಪಾಗಮಾಚಾರ್ಯನೊಳ್ ದೊರೆಯಾರು
ಎಂಬಿನಮ್ ಅಣ್ಮಿ ಸತ್ತ ಅಳವು ಅದೇಂ ದ್ರೋಣಂಗೆ ಮೆಯ್ವುತ್ತದೋ!
ಪ್ರತಿಯೊಬ್ಬ ಶತ್ರುವಿನ ಮೈಯಲ್ಲೂ ಬಾಣವನ್ನು ನಾಟಿಸಿ, ಬಿಲ್ವಿದ್ಯೆಯ ಗುರುವಾಗಿದ್ದ ದ್ರೋಣನಿಗೆ ಸರಿಸಮರಾರು ಎನ್ನುವಂತೆ ಹೋರಾಡಿ, ಸತ್ತ ಕೀರ್ತಿ ದ್ರೋಣನೊಬ್ಬನಿಗೆ ಮಾತ್ರ ಸಾಧ್ಯ ಎಂದು ದ್ರೋಣನ ಶೌರ್ಯವನ್ನು ಪ್ರಶಂಸಿಸುವ ಆತ, ತನ್ನ ಶಿಷ್ಯರ ಮೈಯಲ್ಲಿ ಬಿಲ್ವಿದ್ಯೆಯನ್ನು ಶಾಶ್ವತವಾಗಿ ನಿಲ್ಲಿಸಿದ ಒಳ್ಳೆಯ ಗುರುವೂ ಆಗಿದ್ದ, ಎಂದೂ ಹೊಗಳುತ್ತಾನೆ. ಮಾತಿನ ಶ್ರದ್ಧಾಂಜಲಿಯನ್ನು ಅರ್ಪಿಸಿದ ದುರ್ಯೋಧನ ’ಎನ್ನನ್ ಉಪೇಕ್ಷಿಸಿ ಕಾದಿದನ್. ಇನ್ನು ಈ ಗುರುಗೆ ಎಱಗೆನ್’ ಎಂದುಕೊಳ್ಳದೆ ದ್ರೋಣನ ಕಾಲಿಗೆ ನಮಸ್ಕರಿಸುತ್ತಾನೆ. ಅದನ್ನು ಕಂಡ ರನ್ನ (ಹೌದು ರನ್ನ!) ತಾನು ಸೃಷ್ಟಿಸಿದ ಕಲಾಕೃತಿಗೆ ತಾನೇ ಕೈಮುಗಿಯುವ ಕಲಾಕಾರನಂತೆ, ’ಪಿರಿಯರ್ ಮುನ್ನಂ ಮಾಡಿದುದನ್ ಎಡೆಯೊಳೇಂ ಮಱೆದಪರೇ?’ ಎನ್ನುವಲ್ಲಿ ದುರ್ಯೋಧನನನ್ನು ’ಪಿರಿಯರ್’ ಎಂದು ಕರೆಯುತ್ತಾನೆ.
ಆದರೆ, ದುರ್ಯೋಧನನ ಒಟ್ಟು ವ್ಯಕ್ತಿತ್ವವನ್ನು, ರನ್ನನ ಚಿತ್ರಣದ ಹಿನ್ನೆಲೆಯಲ್ಲೂ ಗಮನಿಸಿದಾಗ, ಆತ ದುರ್ಯೋಧನನ್ನು ’ಹಿರಿಯ’ ಎಂದು ಕರೆದಿರುವುದು ಅತಿಶಯೋಕ್ತಿಯಂತೆ ಕಾಣುತ್ತದೆ. ಅದಕ್ಕೇ ಶ್ರೀ ಎಲ್. ಬಸವರಾಜು ಅವರು, ’ದುರ್ಯೋಧನ ಅದೆಂಥ ದೊಡ್ಡವನು ಹಿರಿಯನು? ಚಕ್ರವರ್ತಿ ಎಂದಲ್ಲವೇ? ರನ್ನನಂತಹ ಕವಿಗಳು ತಮ್ಮ ಪೋಷಕ ಚಕ್ರವರ್ತಿಗಳನ್ನು ಸಿಕ್ಕಿದಾಗಲೆಲ್ಲಾ ಅಸಂಬದ್ಧವಾಗಿ ಹೊಗಳುವುದು ಅವರ ಘನತೆಗೆ ಅವರೇ ಮಾಡಿಕೊಂಡಿರುವ ಅವಮಾನ!’ ಎನ್ನುತ್ತಾರೆ.
ಆದರೆ, ಅದನು ಇನ್ನೊಂದು ನೆಲೆಯಲ್ಲೂ ನೋಡಬಹುದು. ದುರ್ಯೋಧನ ಸ್ವಭಾವತಃ ದುಷ್ಟ ಎಂದರೂ, ಅದು ಮಾನವ ಸಹಜವಾದ ಗುಣಗಳಲ್ಲಿ ಒಂದು. ಆತ ಬೆಳೆದ ರೀತಿ, ಆತನಿಗೆ ಒದಗಿದ ಸಂದರ್ಭ, ಸಂಸ್ಕಾರ, ಆತನ ಬದುಕು ಅವನನ್ನು ರೂಪಿಸಿರುತ್ತವೆ. ಆದರೆ ತನ್ನ ವೈಯಕ್ತಿಕ ನೆಲೆಯಲ್ಲಿ, ತನಗಾದ ನಷ್ಟ, ಅವಮಾನದ ಹಿನ್ನೆಲೆಯಲ್ಲಿ, ದ್ರೋಣನನ್ನು ಗುರುವೆಂದು ಕೂಡಾ ಭಾವಿಸದೆ, ಆತನ ಹುಟ್ಟನ್ನು ಹೀಯಾಳಿಸುತ್ತಾನೆ. ಆದರೆ, ಅದೇ ದ್ರೋಣನ ಶವದ ಮುಂದೆ ನಿಂತಾಗ, ಮಾನವ ಸಹಜವಾಗಿಯೇ ದ್ರವಿಸುತ್ತಾನೆ. ಆದರೆ, ಆತ ಆಡುವ ಮಾತುಗಳು ಮಾತ್ರ (ಮೇಲಿನ ದೂಷಣೆಯನ್ನು ಗಮನಿಸಿ ಹೇಳುವುದಾದರೆ) ಕೃತಕವೇನೊ ಅನ್ನಿಸಿಬಿಡುತ್ತವೆ. ಸಾವು ಮನುಷ್ಯನನ್ನು ಬಗ್ಗಿಸುತ್ತದೆ; ಅಥವಾ ಸಾವಿನ ಬಗ್ಗೆ ಮನುಷ್ಯನಿಗಿರುವ ಪರಿಕಲ್ಪನೆ ಆತನನ್ನು ಮೆತ್ತಗಾಗಿಸುತ್ತದೆ. ಸತ್ತ ದೇಹವನ್ನು ಕಂಡಾಗ, ಎಂತಹ ಕಲ್ಲುಹೃದಯದ ಮನುಷ್ಯನೂ ಒಂದು ಕ್ಷಣ ದ್ರವಿಸುತ್ತಾನೆ. ಹಾಗೆಯೇ ಇಲ್ಲಿ ದುರ್ಯೋಧನ ಕೂಡ. ಆದರೆ, ಇದು ದುರ್ಯೋಧನನ ಆಗಿನ ಸ್ಥಿತಿಯುನ್ನೂ ಸೂಚಿಸುತ್ತದೆ. ಶ್ರೀ ಎಲ್ ಬಸವರಾಜು ಅವರೇ ಹೇಳುವಂತೆ ದುರ್ಯೋಧನ ಸ್ತಿಮಿತಗೆಟ್ಟಿದ್ದಾನೆ. ಇದು ಒಬ್ಬ ದುರಂತನಾಯಕನ ಮನದ ಹದಗೆಟ್ಟ ಸ್ಥಿತಿಯೂ ಆದೀತು! ಒಟ್ಟಾರೆ ಇಂತಹ ಸಂದರ್ಭವನ್ನು ಸೊಗಸಾಗಿ ನಿಭಾಯಿಸಿರುವ ರನ್ನ ಒಬ್ಬ ಮನಶ್ಯಾಸ್ತ್ರಜ್ಞನೂ ಹೌದು.

1 comment:

Harihara Sreenivasa Rao said...

Kavigalu maatanaduvudu shbdagala moolavaadre manassina majalugalannu meetuvudee navarasagala moolakavallave? idralli kannadadavaru ettida kai.Intha prsangagalannu paripoornavaagi basi kondu saarvatrika, saarvakaalikavaagisuvudee avara kaayaka. Entaha haleya oodugalanna hosdaagi nooduvallii aneeka endina samasyegalige uttaragaloo siguttave. Ishto samaya tegedukonu brediruva nimage dhanya vaadagalu