Wednesday, June 11, 2014

ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಏಕೆ ಓದಬೇಕು?

‘ರಾಮಾಯಣದ ಕಥೆ ಗೊತ್ತಿರುವುದೆ. ಅದನ್ನೇ ಆಧರಿಸಿ ಬರೆದ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಏಕೆ ಓದಬೇಕು?’ ಇದು ನನ್ನ ಸ್ನೇಹಿತರೊಬ್ಬರು ನನಗೆ ಕೇಳಿದ ಪ್ರಶ್ನೆ. ಆಗ ನಾನು ಅವರಿಗೆ ಶ್ರೀ ರಾಮಾಯಣ ದರ್ಶನಂ ಕಾವ್ಯದಿಂದಲೇ ಆಯ್ದ ಒಂದು ಕಥೆ ಹೇಳಿದೆ. (ಅಲ್ಲಿ ಕಥೆ ಹೇಳಿದ ಹಾಗೆಯೇ ಇಲ್ಲಿ ಬರೆಯುವುದು ಕಷ್ಟ). ಅದು ಹೀಗಿದೆ:
[KAN0010483b.jpg]
ಕಪಿಸೈನ್ಯವೆನ್ನೆಲ್ಲ ಕಟ್ಟಿಕೊಂಡು ಲಂಕೆಗೆ ಮುತ್ತಿಗೆ ಹಾಕಲು ರಾಮ ಹೊರಟಿದ್ದಾನೆ. ಸಮುದ್ರದ ದಡ ಸೇರಿ ಆ ರಾತ್ರಿ ಮಂತ್ರಾಲೋಚನೆಯಲ್ಲಿ ತೊಡಗುತ್ತಾರೆ. ರಾಮ ಕಪಿಸೈನ್ಯದ ಸೇನಾಪತಿಯಾದ ನೀಲನನ್ನು ಪ್ರತ್ಯೇಕವಾಗಿ ಕರೆದು, ಸಮುದ್ರೋಲ್ಲಂಘನದ ಗಂಭೀರತೆಯ ಬಗ್ಗೆ ಮಾತನಾಡುತ್ತಿದ್ದಾಗ, ಇಬ್ಬರು ಸೈನಿಕರು ಅತ್ತ ಬರುತ್ತಾರೆ. ನೀಲ-ರಾಮರನ್ನು ಕಂಡು ಇಬ್ಬರೂ ಧೀರ ಮರ್ಯಾದೆಯಿಂದ ನಮಸ್ಕರಿಸುತ್ತಾರೆ. ಆಗ ರಾಮ ‘ನೀವು ಯಾರ ಪಡೆಯವರು?’ ಎಂದು ಸ್ನೇಹಭಾವದಿಂದ ಕೇಳುತ್ತಾನೆ. ಬಂದಿದ್ದವರಲ್ಲಿ ಕುಳ್ಳಗಿದ್ದವನು ಉದ್ದಗಿದ್ದವನ ಮುಖವನ್ನು ನೋಡುತ್ತಾನೆ. ಆಗ ಆ ಉದ್ದಗಿದ್ದವನು ‘ನಾವು ದಧಿಮುಖೇಂದ್ರನ ದಳದವರು’ ಎಂದು ಉತ್ತರಿಸುತ್ತಾನೆ. ‘ನಿಮ್ಮ ಹೆಸರೇನು?’ ಎಂಬ ಪ್ರಶ್ನೆಗೆ, ‘ಈತ ನನ್ನ ಗೆಳೆಯ ರಂಹ ನನ್ನನ್ನು ವಹ್ನಿ ಎನ್ನುತ್ತಾರೆ.’ ಎನ್ನುತ್ತಾನೆ.
ರಾಮ ‘ನೀವು ಯಾವ ಯುದ್ಧದಲ್ಲಿ ಪಳಗಿದವರಾಗಿದ್ದೀರಿ?’ ಎನ್ನುತ್ತಾನೆ. ವಹ್ನಿ ‘ಈ ನನ್ನ ಮಿತ್ರ ವಜ್ರಮಜಷ್ಠಿಯ ಮಲ್ಲಯುದ್ಧದಲ್ಲಿ ಫಳಗಿದವನು. ಕಾಡಾನೆಯ ಕೋಡನ್ನು ಹಿಡಿದು ಅದರ ನೆತ್ತಿ ಹಿಸಿದು ಹೋಗುವಂತೆ ಗುದ್ದಬಲ್ಲವನು. ಮೊನ್ನೆಯಷ್ಟೇ ನಾನು ಇದನ್ನು ಕಂಡಿದ್ದೇನೆ’ ಎಂದು ತನ್ನ ಮಿತ್ರನ ಬಗ್ಗೆ ಮಾತ್ರ ಹೇಳಿ ಸುಮ್ಮನಾಗುತ್ತಾನೆ. ಆದರೆ ರಾಮ ‘ನೀನು?’ ಎಂದು ಕೇಳಿದಾಗ, ವಿನಯಪೂರ್ವಕವಾಗಿ ಉತ್ತರಿಸುವ (ತನ್ನ ಬಗ್ಗೆ ತಾನೇ ಹೇಳಿಕೊಳ್ಳುವ ಸಂಕೋಚದಲ್ಲಿ) ಆಲೋಚನೆಯಿಲ್ಲಿ ವಹ್ನಿ ಇದ್ದಾಗಲೇ, ಆತನ ಸ್ನೇಹಿತ ರಂಹ, ನಿಜವಾಗಿಯೂ ಹೃದಯದಿಂದ ಉಕ್ಕುತ್ತಿದ್ದ ಉತ್ಸಾಹದಿಂದ ‘ಗಗನಮನದಲ್ಲಿ ಈತ ಅಪ್ರತಿಮ. ಶತ್ರುಗಳ ಆನೆಗಳಿಗೆ ಸಿಂಹನಿದ್ದಂತೆ ಈ ವಹ್ನಿದೇವ. ಮಹಾಮಾಯಾವಿ; ಜೊತೆಗೆ ಇಚ್ಛೆ ಬಂದ ರೂಪವನ್ನು ಧರಿಸಬಲ್ಲವನು. ಬಂಡೆಯನ್ನೆತ್ತಿ ಕವಣೆ ಕಲ್ ಬೀರಿದನೆಂದರೆ ಶತ್ರುವಿನ ಕೋಟೆ ಎಷ್ಟೇ ಬಲಿಷ್ಟವಾಗಿದ್ದರೂ ಬಿರುಕು ಬಿಟ್ಟ ಹಾಗೆಯೇ! ಬಿಲ್ಲು ವಿದ್ಯೆಯಂತೂ ಈತನಿಗೆ ಮಕ್ಕಳಾಟ. ಕತ್ತಿಯುದ್ಧದ ಕಲಿ. ಗದಾಯುದ್ಧ ಭಯಂಕರನೂ ಹೌದು……’ ಹೀಗೆ ರಂಹ ತನ್ನ ಮಾತು ಮುಂದುವರಿಸುತ್ತಿದ್ದಾಗಲೇ ವಹ್ನಿ ತಡೆಯುತ್ತಾನೆ. ರಾಮನೆಲ್ಲಿ ತಪ್ಪು ತಿಳಿಯುತ್ತಾನೊ ಎಂಬ ಭಯ ಆತನದು.
ರಂಹನನ್ನು ತಡೆದು ರಾಮನೆಡೆಗೆ ತಿರುಗಿದ ವಹ್ನಿ, ‘ರಾಜೇಂದ್ರ ಈ ನನ್ನ ಮಿತ್ರನ ಅತಿ ಉತ್ಸಾಹವ್ನನು ಮನ್ನಿಸಿ’ ಎನ್ನುತ್ತಾನೆ. ರಾಮ ‘ನಿನ್ನನ್ನು ನೋಡಿದರೆ ಆತ ಹೇಳಿದ್ದು ಅತಿ ಅಲ್ಪ ಎನ್ನಿಸುತ್ತದೆ ವಹ್ನಿ’ ಎಂದಾಗ, ವಹ್ನಿ ತಲೆ ಬಾಗಿ ನಮಸ್ಕರಿಸುತ್ತಾನೆ. ಮತ್ತೆ ‘ದಧಿಮುಖೇಂದ್ರನ ದಳದಲ್ಲಿ ನಾನೊಬ್ಬನೆ ಅತ್ಯಲ್ಪ. ಇನ್ನೂ ಮಹಾಮಹಾ ಧೀರರಿದ್ದಾರೆ’ ಎನ್ನುತ್ತಾನೆ. ‘ನಿನ್ನಂತಹ ತುಳಿಲಾಳುಗಳನ್ನು ಪಡೆದ ದಧಿಮುಖೇಂದ್ರನೆ ಧನ್ಯ. ಪರಸ್ಪರ ಸ್ನೇಹದಿಂದ ಸಾಮರ್ಥ್ಯದಿಂದ ಇರುವ ನೀವಿಬ್ಬರೂ ನಿಜವಾಗಿಯೂ ಮಹಿಮರು’ ಎಂದು ಹೇಳಿ ಸ್ವಲ್ಪ ತಡೆದು ವಹ್ನಿ, ‘ನಿನಗೆ ಸಹಧರ್ಮಿಣಿಯ ಸುಖದ ಒಡನಾಟವಿದೆಯೆ?’ ಎಂದು ಕೇಳಿದ. ‘ಊರಿನಲ್ಲಿದ್ದಾಳೆ’ ಎನ್ನುತ್ತಾನೆ ವಹ್ನಿ.
‘ಅಯ್ಯೊ. ಇರುವರೇನು? ಇರುವುದನ್ನು ಬಿಟ್ಟು ಬಂದು ಸಂಕಟಕ್ಕೆ ಸಿಕ್ಕಿಬಿಟ್ಟೆ. ಅತ್ತ ನಿನ್ನ ಹೆಂಡತಿಯೂ ದುಃಖಿ. ನನ್ನ ಕಾರಣದಿಂದ ನಿಮಗೆಲ್ಲಾ ಈ ಕಷ್ಟ’ ಎಂದು ರಾಮ ಪರಿತಪಿಸುತ್ತಾನೆ. ತಕ್ಷಣ ವಹ್ನಿಗೆ ಅರ್ಥವಾಗುತ್ತದೆ. ಮೊಣಕಾಲೂರಿ, ಕೈಮುಗಿದು ‘ನನ್ನ ಮಾತಿನ ಅರ್ಥವ್ಯಾಪ್ತಿ ತಪ್ಪಿತು. ನನ್ನ ವಿನೋದವನ್ನು ಕ್ಷಮಿಸು’ ಎಂದು ಬೇಡುತ್ತಾನೆ. ತಕ್ಷಣ ರಾಮ ಸ್ನೇಹಭಾವದಿಂದ ಆತನನ್ನು ಹಿಡಿದೆತ್ತಿ ‘ಏಳೇಳು ಭಟಶ್ರೇಷ್ಠ. ಮಕ್ಕಳಿದ್ದಾರೆಯೆ ನಿನಗೆ?’ ಎನ್ನುತ್ತಾನೆ. ‘ಒಬ್ಬನಿದ್ದಾನೆ’ ಎನ್ನುತ್ತಾನೆ ವಹ್ನಿ. ‘ಚಿಕ್ಕವನೆ?’ ಎಂಬ ರಾಮನ ಮಾತಿಗೆ ‘ಚಿಕ್ಕವನಲ್ಲದಿದ್ದರೆ ಈಗ ನನ್ನ ಪಕ್ಕದಲ್ಲಿರುತ್ತಿರಲಿಲ್ಲವೆ ನಿನ್ನ ಸೇವೆಯ ದೇವಕಾರ್ಯಕ್ಕೆ!’ ಎನ್ನುತ್ತಾನೆ ವಹ್ನಿ. ‘ಮತ್ತೀಗ ಅವರಿಗೆ ರಕ್ಷಕರು ಯಾರು?’ ಎಂಬ ರಾಮನ ಪ್ರಶ್ನೆಗೆ ‘ನಾನೆ’ ಎಂದುತ್ತರಿಸುತ್ತಾನೆ, ವಹ್ನಿ. ‘ನೀನೆ?’ ಎಂದ ರಾಮ ಸ್ವಲ್ಪ ಹೊತ್ತು ತಡೆದು ‘ಮರಣದಲ್ಲಿ ರಣ ಇದೆ. ಹಣಬರೆಹವು ಹೇಳುವುದು ಪಕ್ಕಕ್ಕಿರಲಿ, ಕೈಬರೆಹವೂ ಅದನ್ನೇ ಸಾರುತ್ತಿದೆ, ನೋಡು’ ಎನ್ನುತ್ತಾನೆ.
ರಾಮನ ಮಾತಿಗೆ ವಹ್ನಿ ಮತ್ತು ನೀಲರಿಬ್ಬರೂ ನಗುತ್ತಾರೆ. ತನ್ನ ಧೈರ್ಯಕ್ಕೆ ನಾಲಗೆಯನ್ನು ನೀಡಿದ ವಹ್ನಿ ‘ಯಾವ ಧರ್ಮಕ್ಕೆ ನಾವು ಸಾವನ್ನಪ್ಪುತ್ತೇವೆಯೋ ಆ ಧರ್ಮ ಲೋಕವನ್ನು ಕಾಪಾಡುತ್ತದೆ. ಅದಕ್ಕೆ ನನ್ನ ಸತಿಸುತರು ಹೊರತಲ್ಲ!. ರಾಜೇಂದ್ರ ಈ ಯುದ್ಧದಲ್ಲಿ ಸರ್ವಸೇನಾಪತಿ ನೀಲ ನಮ್ಮನ್ನು ಮುನ್ನಡೆಸುತ್ತಿದ್ದಾನೆ. ಆದ್ದರಿಂದ ನಾವೆಲ್ಲರೂ ನಮ್ಮ ನಮ್ಮ ಮನೆಗಳ ಮಂಗಳವನ್ನು ಕಾಣುತ್ತೇವೆ. ಅದಲ್ಲದಿದ್ದರೂ, ವಿಧಿ ಅನ್ಯವನ್ನು ಬಗೆದರೆ, (ನನಗೆ ಗೊತ್ತು ವಿದಿಗೆ ಕರುಣೆಯೆಂಬುದಿಲ್ಲ!) ಬದುಕುವುದಕ್ಕಿಂತ ಸಾವೇ ಮೇಲು. ರಾವಣ ಹೊತ್ತೊಯ್ದಿರುವುದು ಒಬ್ಬನ ಸತಿಯನ್ನಲ್ಲ; ಸತಿತನವನ್ನೇ ಹೊಯ್ದಿದ್ದಾನೆ. ಆ ಸತೀತ್ವವನ್ನು ಕಾಪಾಡಲಾಗದಿದ್ದರೆ ಈ ಭೂಮಿಯ ಮೇಲೆ ಗಂಡಸೊಬ್ಬನೂ ಇರಲಾಗದು! ರಘುವರ, ನೀನು ಕೇಳಿದ ಕುಶಲ ಪ್ರಶ್ನೆಯ ಕೃಪೆಯಿಂದಲೇ ಹೆಂಡತಿ ಮಕ್ಕಳು ಸುರಕ್ಷಿತರಾಗಿದ್ದಾರೆ!’ ಎಂದು ಉತ್ತರಿಸುತ್ತಾನೆ. ರಾಮನಿಗೆ ಮನಸ್ಸು ತುಂಬಿ ಬರುತ್ತದೆ. ಸೈನಿಕಸ್ನೇಹಿತರನ್ನು ಕೈಸನ್ನೆಯಿಂದಲೇ ಕಳುಹಿಸಿಕೊಡುತ್ತಾನೆ.
ಬೆಳದಿಂಗಳು ಭೂಮಿ ಕಡಲನ್ನು ಒಂದೇ ಎನ್ನುವಂತೆ ವ್ಯಾಪಿಸಿಬಿಟ್ಟಿರುತ್ತದೆ. ರಾಮ ಸೇನಾಪತಿ ನೀಲನೆಡೆಗೆ ತಿರುಗಿ ‘ನಿಮ್ಮ ಸಂಸ್ಕೃತಿ ಮಿಗಿಲ್ ನಿಮ್ಮ ನಾಗರಿಕತೆಗೆ ಪಿರಿದು!’ ಎಂದು ಉದ್ಘರಿಸುತ್ತಾನೆ.
ಕಥೆ ಮುಗಿದು ಐದಾರು ನಿಮಿಷ ಯಾರೂ ಮಾತನಾಡಲಿಲ್ಲ. ನಂತರ ನಾನೇ ಮುಂದುವರೆದು ನನ್ನ ಸ್ನೇಹಿತರಿಗೆ, ಈ ಕಥೆಯಲ್ಲಿ ನಿಮ್ಮ ಗಮನಕ್ಕೆ ಬಂದ ಕೆಲವು ಮೌಲ್ಯಗಳನ್ನು ಹೇಳಿ ಎಂದೆ.

ರಾಮನ ಸ್ನೇಹಭಾವ, ರಾಜ ಸೈನಿಕ ಎಲ್ಲರೂ ಒಂದೆ ಎಂಬ ಪ್ರಜಾಪ್ರಭುತ್ವವಾದಿ ನಿಲುವು, ತಮ್ಮ ತಮ್ಮ ಬಗ್ಗೆ ಏನೂ ಹೇಳದೆ ಪರಸ್ಪರರ ಸಾಮರ್ಥ್ಯದ ಬಗ್ಗೆ ಮಾತ್ರ ಗೌರವದಿಂದ ಹೇಳುವ ರಂಹ ಮತ್ತು ವಹ್ನಿಯರು, ಅವರ ಸ್ವಾಮಿನಿಷ್ಠೆ, ತನ್ನ ಸಹೋದ್ಯೋಗಿಗಳು ನನಗಿಂತ ಸಾಮರ್ಥ್ಯರು ಎನ್ನುವಲ್ಲಿರುವ ವಿನಯ, ಗಂಡನಿಂದ ದೂರವಾಗಿ ದುಃಖದಲ್ಲಿದ್ದಿರಬಹುದಾದ ಸೈನಿಕನ ಹೆಂಡತಿಯ ದುಃಖ ತನ್ನ ಸೀತೆಯ ದುಃಖಕ್ಕಿಂತ ಕಡಿಮೆಯಲ್ಲ ಎಂಬ ಭಾವ, ಹೆಂಡತಿ ಮಕ್ಕಳ ಹೊಣೆ ನನ್ನದು ಎಂಬ ಮಾನವಪ್ರಯತ್ನದ ಮಾತು, ಮಾನವಪ್ರಯತಯ್ನವನ್ನೂ ಮೀರಿ ಘಟಿಸಬಹುದಾದ ಸಂಗತಿಗಳಿಗೆ ಭಾರತೀಯ ಸಂಸ್ಕೃತಿಯ ತಳಹದಿಯಾದ ಧರ್ಮ ಆದ್ಯಾತ್ಮದ ಸಮಾಧಾನ, ನಾವು ರಕ್ಷಿಸಿದ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ರಾಷ್ಟ್ರಭಾವ, ಧರ್ಮದ ಉಳಿವಿಗಾಗಿ ವೈಯಕ್ತಿಕ ತ್ಯಾಗಕ್ಕೂ ಸಿದ್ಧವಾದ ಮನಸ್ಥಿತಿ, ನಿನ್ನ ಪ್ರಶ್ನೆಯಿಂದಲೇ ಅವರು ಕ್ಷೇಮ ಎನ್ನುವಲ್ಲಿ ಇರುವ ಅಗಾಧವಾದ ನಂಬಿಕೆ, ತನ್ನೊಬ್ಬನ ಸುಖಕ್ಕೋಸುಗ ಸೈನಿಕರು, ಅವರ ಹೆಂಡತಿ ಮಕ್ಕಳೆಲ್ಲರೂ ಅನುಭವಿಸಬೇಕಾದ ದುಃಖದ ಅರಿವು, ಯುದ್ಧವೆಂದರೆ ಸಾವು ಎಂಬ ಮಾತು, ಅದರಿಂದ ಸೂಚಿತವಾಗುವ ಯುದ್ಧವಿರೋಧಿ ನಿಲುವು, ಸೀತೆಯ ರೂಪದಲ್ಲಿ ರಾವಣ ಕದ್ದೊಯ್ದದ್ದು ಸತೀತ್ವವನ್ನೇ ಎಂಬ ಸಾರ್ವತ್ರೀಕರಣಭಾವ, ಸೈನಿಕನೂ ಜ್ಞಾನಿಯೂ ಆಗಿರಬಲ್ಲ ಎಂಬಂತಹ ವಹ್ನಿಯ ಮಾತುಗಳು, ನಿಮ್ಮ ಸಂಸ್ಕೃತಿ ದೊಡ್ಡದು ಎನ್ನುವಲ್ಲಿ ಬಹುಮುಖೀ ಸಂಸ್ಕೃತಿಯ ಬಗೆಗಿನ ಗೌರವ, ಮನ್ನಣೆ…….. ಹೀಗೆ ನನ್ನ ಕಥೆಯ ಕೇಳುಗ ಸ್ನೇಹಿತರು ಹೇಳುತ್ತಲೇ ಇದ್ದರು!
“ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೆ?” ಎಂದೆ. “ಕುವೆಂಪು ಬರೆದಿರುವುದು ರಾಮಾಯಣವನ್ನಲ್ಲ; ರಾಮಾಯಣ ದರ್ಶನವನ್ನು. ಅದಕ್ಕಾಗಿ ಓದಲೇಬೇಕು” ಎಂದರು.
ಈ ಪುಟ್ಟ ಸಂಗತಿಯ ಬಗ್ಗೆ ಯೋಚಿಸಿದಂತೆಲ್ಲಾ ಬೆಳೆಯುತ್ತಲೇ ಹೋಗುತ್ತದೆ ನಮ್ಮ ವಿಚಾರಲಹರಿ. ’ನಿನ್ನ ಮಗನ ರಕ್ಷಕ ಯಾರು?’ ಎಂಬ ಪ್ರಶ್ನೆಗೆ ವಹ್ನಿ ’ನಾನೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ. ಪುತ್ರವಿರಹದಿಂದಲೇ ಮರಣವನ್ನಪ್ಪಿದ ತನ್ನ ತಂದೆ ರಾಮನಿಗೆ ನೆನಪಾಗಿರಬೇಕು. ರಾಮ ನಿಟ್ಟುಸಿರು ಬಿಡುತ್ತಾನೆ. ಗಮನಿಸಬೇಕು, ಕವಿ ಇಲ್ಲಿ ರಾಮ ಎನ್ನುವುದಿಲ್ಲ, ’ದಶರಥಾತ್ಮಜ’ ಎನ್ನುತ್ತಾರೆ! ’
ನನ್ನ ಸತಿಸುತರೊಂದು ಹೊರತೆ’ ಎಂಬ ವಹ್ನಿಯ ಮಾತುಗಳು ಕವಿಯ ಸಮಷ್ಟಿಪ್ರಜ್ಞೆಗೆ ಸಾಕ್ಷಿಯಾಗಿವೆ. ’ಮರಣದಲ್ಲಿ ರಣವಿದೆಯಪ್ಪಾ, ಹಣೆಬರೆಹ ಹೇಳೋದೇನೇ ಇರಲಿ, ಕೈಬರೆಹವೇ ಸಾರುತಿದೆ’ ಎಂಬ ರಾಮನ ಮಾತಿನಲ್ಲಿ ವ್ಯಕ್ತವಾಗುವ ಹಾಸ್ಯಪ್ರಜ್ಞೆ ಮನಮುಟ್ಟುತ್ತದೆ.
ಇಲ್ಲಿ ಬರುವ ವಹ್ನಿ ರಂಹ ಇಬ್ಬರೂ ಸಾಮಾನ್ಯ ಸೈನಿಕರು. ಆದರೂ ಸಂಸ್ಕೃತಿಯಲ್ಲಿ ಸಂಪನ್ನರು! ವಹ್ನಿ ತನ್ನ ಸ್ನೇಹಿತನ ಬಲದ ಬಗ್ಗೆ ಮೊದಲು ಮಾತನಾಡಿ, ತನ್ನ ವಿಷಯ ಬಂದಾಗ ಸಂಕೋಚಪಡುತ್ತಾನೆ. ಇತ್ತ ರಂಹ ಯಾವುದಕ್ಕೂ ಬಾಯಿ ತೆರೆಯದವನು, ಸಂಕೋಚವನ್ನೇ ಮೈದಾಳಿ ನಿಂತವನು, ವಹ್ನಿಯ ಸಾಮರ್ಥ್ಯವನ್ನು ತಿಳಿಸಲು ಮಾತ್ರ ಉತ್ಸಾಹ ತೋರುತ್ತಾನೆ. ಪರಸ್ಪರ ಎಂತಹ ಗೌರವ ಆ ಸ್ನೇಹಿತರಲ್ಲಿ! ತನ್ನ ಪ್ರಶಂಸೆಯ ಮಾತು ಬಂದಾಗಲೂ, ತನ್ನ ಸೇನಾಪತಿ ದಧೀಮುಖನ ಪಡೆಯಲ್ಲಿ ನಾನೇ ಅತ್ಯಲ್ಪ. ಉಳಿದವರು ಇನ್ನೂ ಅಸಾಮಾನ್ಯರು ಎಂಬಲ್ಲಿ ಇರುವ ವಿನಯ ಇದಂತೂ ಮನಸ್ಸಿಗೆ ತಾಕುತ್ತದೆ. ಸೈನಿಕರೊಂದಿಗೂ ರಾಮ ಅಷ್ಟೊಂದು ಸರಸವಾಗಿ ಸ್ನೇಹಭಾವದಿಂದ ಮಾತನಾಡುವವನಾಗಿರುವುದೇ ಆತ ಪುರುಷೋತ್ತಮ ಎಂಬುದಕ್ಕೆ ಸಾಕ್ಷಿ!
ಕನ್ನಡಭಾಷೆಯ ಕಾವ್ಯಸೌಂದರ್ಯವನ್ನು ಸವಿಯಲೋಸುಗವೂ ಈ ಕಾವ್ಯವನ್ನು ಓದಬೇಕು. ಇದೇ ಭಾಗದ ಕೆಲವು ಸಾಲುಗಳು:
“ನಿನ್ನ ನೋಡಿದರಾತನೊರೆದನತ್ಯಲ್ಪಮಂ,
ವಹ್ನಿ !” ಕೋಸಲನೃಪನ ನುಡಿಗೆ ತಲೆಬಾಗಿದನ್
ದೀರ್ಘೋನ್ನತಂ ; ಮತ್ತೆ “ದಧಿಮುಖೇಂದ್ರನ ದಳದಿ
ನಾನೊರ್ವನತ್ಯಲ್ಪನೆಯೆ ದಿಟಂ, ದೇವ.” “ನೀನ್
ಅಲ್ಪನಾಗಿರ್ಪವೊಲ್ ತುಳಿಲಾಳ್ಗಳಂ ಪಡೆದ
ದಧಿಮುಖೇಂದ್ರನೆ ಧನ್ಯನೈಸೆ ! — ನೀಮಿರ್ವರುಂ
ಮಹಿಮರೆ ವಲಂ, ಪರಸ್ಪರ ಸಖ್ಯದಿಂ, ಮತ್ತೆ
ಪೇರದಟಿನಿಂ. — ವಹ್ನಿ, ನಿನಗೆ ಸಹಧರ್ಮಿಣಿಯ
ಸುಖ ಸಂಗಮಿರ್ಪುದೇನಯ್ ?” “ಇರ್ದುದೆನ್ನೂರೊಳಗೆ.”
ಪ್ರತ್ಯತ್ತರದ ಇಂಗಿತವ್ಯಂಗ್ಯಕೊಂದಿನಿತೆ
ನಕ್ಕು, ಸೀತಾಪ್ರಾಣವಲ್ಲಭಂ: “ಇರ್ದುದೇನ್ ?
ಅಯ್ಯೊ ಇರ್ಪುದನುಳಿದು ಬಂದು ಸಂಕಟಕೇಕೆ
ಸಿಲ್ಕಿದಯ್? ನಿನ್ನವೊಲೆ ನಿನ್ನಾಕೆಯುಂ ದಃಖಿ !”
ಸುಯ್ದು ಕೇಳ್ದನ್, “ನನ್ನ ಕತದಿಂದಾದುದಲ್ತೆ
ನಿಮಗೆ ಬನ್ನಮ್, ವಹ್ನಿ ?”
ತತ್ತರಿಸಿದನು ವಹ್ನಿ
ಸುಯ್ಲುರಿಗೆ ಸಿಲ್ಕಿ. ಕೈಮುಗಿದು, ಮೊಣಕಾಲೂರಿ,
ಬೇಡಿದನ್: “ದೇವ, ಮನ್ನಿಸು ನನ್ನ ಬಿನದಮಂ.
ತಪ್ಪಿತರ್ಥವ್ಯಾಪ್ತಿ!”
“ಏಳೇಳ್, ಭಟವರೇಣ್ಯ;
ಮಕ್ಕಳಿಹರೇ ನಿನಗೆ?” ರಘುಜನೆಂದನು, ದನಿಯೆ
ನೇಹವ ಸೂಸುವಂತೆ.
“ಇರ್ಪನೊರ್ವನ್, ದೇವ.”
“ಚಿಕ್ಕವನೆ?” “ಅಲ್ಲದಿರೆ ನನ್ನ ಪಕ್ಕದೊಳಿರನೆ
ನಿನ್ನ ಸೇವೆಯ ದೇವ ಕಾರ್ಯಕ್ಕೆ?” “ಅವರ್ಗಾರ್
ರಕ್ಷಕರ್?” “ನಾನೆ!” ಸುಯ್ಯುತೆ ದಶರಥಾತ್ಮಜಂ
ವೀರ ವಹ್ನಿಯ ಕಣ್ಗಳಂ ಕರುಣೆಯಿಂ ನೋಡಿ
“ನೀನೆ?” ಎಂದಿನಿತು ಜಾನಿಸಿ ಮತ್ತೆ, “ಮರಣದೋಳ್
ರಣಮಿಹುದು, ವಹ್ನಿ; ಹಣೆಬರೆಹಮೊರೆಯುವುದಿರ್ಕೆ,
ಸಾರುತಿದೆ ಕೈಬರೆಹಮುಂ!” ಧ್ವನಿಯರಿತು ನಕ್ಕನಾ
ರಾಮ ನೀಲರ ಕೂಡೆ ಭಟವರಿಷ್ಠಂ ವಹ್ನಿ; ಮೇಣ್
ತನ್ನ ಧೈರ್ಯಕೆ ನೀಡಿದನು ನಾಲಗೆಯನಿಂತು:
“ಆವ ಧರ್ಮಕೆ ಸಾವನಪ್ಪುವೆವೊ ಪೊರೆವುದಾ
ಧರ್ಮಮೀ ಲೋಕಮಂ. ನನ್ನ ಸತಿಸುತರೊಂದು
ಹೊರತೆ? …..
ದಶಶಿರಂ ಪೊತ್ತುಯ್ದುದೊರ್ಬ್ಬನ ಸತಿಯನಲ್ತು;
ಸತಿತನವನುಯ್ದಿಹನ್! ಪುರುಷನಿರಲಾಗದೀ
ಧರೆಯ ಮೇಲೊರ್ವನುಂ ಪೊರೆಯದನ್ನೆಗಮಾ
ಸತೀತ್ವಮಂ! ರಘುವರ, ಸುರಕ್ಷಿತರ್ ನನ್ನವರ್
ನಿನ್ನ ಈ ಕೇಳ್ದ ಕುಶಲಪ್ರಶ್ನ ಕೃಪೆಯಿಂದಮುಂ!”

ಕುವೆಂಪು ವಾಲ್ಮೀಕಿಯ ರಾಮಾಯಣವನ್ನೇ ಕನ್ನಡದಲ್ಲಿ ಅನುವಾದಿಸಿದ್ದರೆ, ರಾಮಾಯಣದ ಕಥೆಯನ್ನಷ್ಟೇ ಬರೆದಿದ್ದರೆ ಅದೊಂದು ಕನ್ನಡ ರಾಮಾಯಣ ಮಾತ್ರವಾಗುತ್ತಿತ್ತು. ರಾಮಾಯಣದ ಕಥೆ ’ನಿತ್ಯ’. ಅದಕ್ಕೆ ವಿರಾಮವೆಂಬುದೇ ಇಲ್ಲ. (’ರಾಮಾಯಣಂ ಅದು ವಿರಾಮಾಯಣಂ ಕಣಾ!’). ರಾಮಾಯಣ ರಾಮನಿಗಿಂತಲೂ ದೊಡ್ಡದು (ರಾಮಂಗೆ ಮಿಗಿಲಲ್ತೆ ರಾಮಾಯಣಂ). ಎಲ್ಲರಿಗೂ ಗೊತ್ತಿರುವ ವಾಲ್ಮೀಕಿ ರಾಮಾಯಣದ ಕಥೆಯ ಮೂಲಕ (ತನು ನಿನ್ನದಾದೊಡಂ ಚೈತನ್ಯ ನನ್ನದೆನೆ, ಕಥೆ ನಿನ್ನದಾದೊಡಂ ಕೃತಿ ನನ್ನ ದರ್ಶನಂ) ಕುವೆಂಪು ರಾಮಾಯಣದ ದರ್ಶನವನ್ನು ಹೀಗೆ ಸಣ್ಣ ಸಣ್ಣ ಸಂಗತಿಗಳ ಮೂಲಕ, ಕಥೆ-ಸಂಭಾಷಣೆಗಳ ಮೂಲಕ, ಅಲಂಕಾರಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಆದ್ದರಿಂದಲೇ ಇದು ರಾಮಾಯಣ ದರ್ಶನ, ರಾಮಾಯಣದ ಕಥೆ ಗೊತ್ತಿದ್ದವರೂ ಓದಲೇ ಬೇಕಾದ ದರ್ಶನಕಾವ್ಯ.
(ಮೂಲದಲ್ಲಿಯೇ ಈ ಪ್ರಸಂಗವನ್ನು ಓದುವವರಿಗೆ: ಶ್ರೀರಾಮಾಯಣ ದರ್ಶನಂ, ಸಂಪುಟ 3; ಸಂಚಿಕೆ 6; ಸಾಲುಗಳು 215-297.)

1 comment:

Badarinath Palavalli said...

3K ಅವರು ನಡೆಸಿದ ನವೆಂಬರ್ ಪ್ರಶಸ್ತಿಯಲ್ಲಿ ನನ್ನ ಕವಿತೆ ಗೆದ್ದದ್ದಕ್ಕಾಗಿ ಕುವೆಂಪುರವರ ಈ ಮಹಾಕಾವ್ಯ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದೀಗ ಗುಕ್ಕು ಗುಕ್ಕಾಗಿ ನಾನು ಓದಿಕೊಳ್ಳುತ್ತಿದ್ದೇನೆ.