ಬೆಳಿಗ್ಗೆ ಎದ್ದವಳೆ ರಜನಿ ತನ್ನ ಕಣ್ಣು ಕಿವಿಗಳೆರಡನ್ನೂ ಮಗಳ ರೂಮಿನೆಡೆಗೆ
ನೆಟ್ಟಳು. ರೂಮಿನ ಬಾಗಿಲು ತೆಗೆದೇ ಇತ್ತಾದರೂ ಒಳಗೆ ಮಗಳು ಇರುವ ಸೂಚನೆಗಳು ಕಾಣಲಿಲ್ಲ.
ರಜನಿ ಬಾತ್ ರೂಮಿನ ಕಡೆ ಹೋಗುತ್ತಾ ’ಸಾನ್ವಿ ನನಗೆ ಹೇಳದೆ ಕೆಲಸಕ್ಕೆ ಹೊರಟು ಬಿಟ್ಟಳೆ?
ಹಾಗಾಗಿದ್ದರೆ, ಇದೇ ಮೊದಲ ಬಾರಿಗೆ ಮಗಳು ನನಗೆ ತಿಳಿಸದೆ ಮನೆಯಿಂದ ಹೊರ ಹೊರಟಿದ್ದಾಳೆ’
ಎನ್ನಿಸಿ ತಲೆ ಸುತ್ತು ಬಂದಂತಾಯ್ತು. ಹೇಗೋ ಸಾವಾರಿಸಿಕೊಂಡು ಬ್ರಷ್ ಮಾಡಿ, ಮುಖ ತೊಳೆದು
ಮಗಳ ರೂಮಿನ ಕಡೆ ನಡೆದಳು. ಒಳಗೆ ಕಣ್ಣಾಡಿಸಿದವಳಿಗೆ ಆಶ್ಚರ್ಯವಾಗುವಂತೆ, ಮಗಳು
ಪದ್ಮಾಸನ ಹಾಕಿ ಕುಳಿತಿರುವುದು ಕಂಡಿತು. ಆಫೀಸಿಗೆ ಹೊರಡಲು ಸಿದ್ಧಳಾಗಿಯೇ
ಕುಳಿತಿದ್ದಾಳೆ ಎಂದುಕೊಂಡು ಕಿಟಕಿಯಿಂದ ಹೊರಗೆ ನೋಡಿದ ರಜನಿಗೆ ಸಿದ್ಧವಾಗಿ ನಿಂತಿದ್ದ
ಸ್ಕೂಟರ್ ಕಂಡಿತು. ಹಾಗೇ ಬಾಗಿಲಿಗೆ ಒರಗಿ ನಿಂತು, ಧ್ಯಾನದಲ್ಲಿ ಮುಳುಗಿದ್ದ ಮಗಳನ್ನೇ
ನೋಡುತ್ತಾ ನಿಂತವಳಿಗೆ, ರಾತ್ರಿ ನಡೆದ ಮಾತುಕತೆಗಳು ನೆನಪಾದವು. ’ಎಲ್ಲ ಗಂಡಸರು
ಕೆಟ್ಟವರು ಎಂಬ ನಿನ್ನ ಪೂರ್ವಾಗ್ರಹದಿಂದ ಒಮ್ಮೆ ಹೊರ ಬಂದು ನೋಡು. ಅದರಿಂದ ನೀನು ಹೊರ
ಬರದಿದ್ದರೆ, ನಿನ್ನ ಹೋರಾಟದ ಬದುಕೇ ವ್ಯರ್ಥವಾಗಿ ಹೋಗಲಿದೆ.’ ಎಷ್ಟು ತಣ್ಣಗೆ
ಹೇಳಿದ್ದಳು. ಆದರೆ ನಾನೇಕೆ ಹಾಗೆ ಕೂಗಾಡಿದ್ದೆ? ’ನಿನಗೆ ಅಮ್ಮನಿಗಿಂತ ಅವನೇ
ಹೆಚ್ಚಾದನೆ?’ ಛೆ! ಎಂಥಾ ಅವಿವೇಕಿತನ ಅನ್ನಿಸಿತು ರಜನಿಗೆ.
ನನ್ನ ಮಾತಿನಿಂದ ಮಗಳು ಕೋಪ ಮಾಡಿಕೊಂಡಿರಬಹುದು, ಮಾತೂ ಆಡಿಸದಿರಬಹುದು ಎನ್ನಿಸಿತು. ಅಷ್ಟರಲ್ಲಿ ಸಾನ್ವಿ ಕಣ್ತೆರೆದು, ಅದೇ ತುಂಬು ಮುಗುಳ್ನಗೆಯಿಂದ ’ಅಮ್ಮಾ, ನೀನು ಮಲಗಿ ಬಿಟ್ಟಿದ್ದೆಯಲ್ಲ, ಅದಕ್ಕೆ ಎಚ್ಚರವಾಗುವವರೆಗೂ ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದೆ ಅಷ್ಟೆ. ನಾನಿನ್ನು ಬರುತ್ತೇನೆ’ ಎಂದು ಬ್ಯಾಗು ಹಿಡಿದು ಸ್ವಲ್ಪ ಅವಸರದಲ್ಲೇ ಹೊರಟಳು. ಅವಳು ಸ್ಕೂಟರ್ ಹತ್ತಿ ಹೊರಟ ನಂತರವೇ ರಜನಿಗೆ ಗಡಿಯಾರ ನೋಡಬೇಕೆನ್ನಿಸಿದ್ದು. ನಿತ್ಯ ತಾನು ಏಳುವದಕ್ಕಿಂತ ಎರಡು ಗಂಟೆಗಳ ತಡವಾಗಿ ಎದ್ದಿದ್ದಾಳೆ! ನಾನು ಏಳಲೆಂದೇ ಕಾಯ್ದು, ಅರ್ಧಗಂಟೆ ತಡವಾಗಿ ಆಫೀಸಿಗೆ ಹೋಗುತ್ತಿದ್ದಾಳೆ. ಒಂದು ಕ್ಷಣ ರಜನಿಗೆ ನಾಚಿಕೆಯೆನ್ನಿಸಿತು. ಅಡುಗೆ ಮನೆಗೆ ನುಗ್ಗಿ ಕಾಫಿ ಮಾಡಿ ಕುಡಿಯುತ್ತಾ ಹಾಗೇ ವರಾಂಡಕ್ಕೆ ಬಂದು ಕುಳಿತುಕೊಂಡಳು.
ಮೊನ್ನೆ ಮೊನ್ನೆಯವರೆಗೂ ಪುಟಾಣಿಯಂತಿದ್ದ ಮಗಳು ಈಗ ಎಷ್ಟೊಂದು ಬೆಳೆದಿದ್ದಾಳೆ. ಮಾತು ಕೃತಿಯಲ್ಲಿ ಎಷ್ಟೊಂದು ಪ್ರಬುದ್ಧತೆ ಬಂದಿದೆ. ರಾತ್ರಿ ನಾನು ಅಷ್ಟೊಂದು ಜೋರು ಧ್ವನಿಯಲ್ಲಿ ಕಠಿಣವಾಗಿ ಮಾತನಾಡಿದರೂ ಮಗಳು ಧ್ವನಿಯೇರಿಸಲಿಲ್ಲ. ಆದರೆ ಹೇಳಬೇಕೆಂದಿರುವುದನ್ನು ಸ್ಪಷ್ಟವಾಗಿ ಹೇಳಿದಳು. ಈಗಿನ ಮಕ್ಕಳ ಧೈರ್ಯವೇ ಧೈರ್ಯ. ನನಗೆ ಈ ಧೈರ್ಯವಿದ್ದಲ್ಲಿ, ಈ ಇಪ್ಪತ್ತೈದು ವರ್ಷಗಳನ್ನು ನಾನು ಇನ್ನೂ ಉತ್ತಮವಾಗಿ ಕಳೆಯಬಹುದಾಗಿತ್ತು. ಕೊಟ್ಟ ಹೆಣ್ಣು ಕುಲಕ್ಕೆ ಹೊರತು ಎಂದು ದೂರ ಮಾಡಿದ ತಂದೆ ತಾಯಿ, ಮಗನನ್ನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಿಕೊಂಡಳು ಎಂದು ದ್ವೇಷ ಸಾಧಿಸುತ್ತಿದ್ದ ಅತ್ತೆ, ಗಂಡು ಮಗುವನು ಹೆರಲಿಲ್ಲ ಎಂಬ ನೆಪವನ್ನಿಟ್ಟುಕೊಂಡು ಆಸ್ತಿಯಾಸೆಗೆ ಬೇರೊಂದು ಮದುವೆಗೆ ಸಿದ್ಧನಾಗಿದ್ದ ಗಂಡ ಇವರೆಲ್ಲರ ನಡುವೆ ನನ್ನ ಬದುಕಿಗೆ ಒಂದು ಅರ್ಥವನ್ನು ಕೊಟ್ಟಿದ್ದು ಇದೇ ಮಗಳು. ನನಗೆ ಮಗಳಂತೆ ತಣ್ಣಗೆ ಇದ್ದು ಒಮ್ಮೆಲೆ ದೈರ್ಯ ಪ್ರದರ್ಶಿಸುವ ತಾಕತ್ತು ಇಲ್ಲದಿರಬಹುದು. ಆದರೆ, ಎಲ್ಲರಿಂದಲೂ ದೂರವಾಗಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಬದುಕು ಕಟ್ಟಿಕೊಂಡಿದ್ದು, ಮಗಳನ್ನು ಸಜ್ಜನಳಾಗಿ ಬೆಳೆಸಿದ್ದು, ಒಳ್ಳೆಯ ಶಿಕ್ಷಣ ಕೊಡಿಸಿದ್ದು ಇವೆಲ್ಲವೂ ನನ್ನ ಧೈರ್ಯದ ಪ್ರತಿಫಲವೇ ಅಲ್ಲವೆ? ಆದರೆ ಹೀಗೇಕೆ ನಾನು ಧೈರ್ಯ ಕೆಡುತ್ತಿದ್ದೇನೆ. ಮಗಳು ನನಗೆ ಇದಿರಾಡಿದಳು ಎಂದೆ ಅಥವಾ ನನಗೆ ಈ ಗಂಡಸು ಜಾತಿಯ ಮೇಲೆ ಕಳೆದುಹೋಗಿರುವ ನಂಬಿಕೆಯೀಂದಲೇ… ಮುಗಿದು ಹೋಗಿದ್ದ ಕಾಫಿಯ ಕಪ್ಪನ್ನು ಹಾಗೇ ಹಿಡಿದು ಯೋಚಿಸುತ್ತಿದ್ದಳು ರಜನಿ.
ಇದೆಲ್ಲವೂ ಒಮ್ಮೆಲೆ ಸರಿಯಾಗಿಬಿಟ್ಟರೆ ಎಷ್ಟು ಚಂದ ಅನ್ನಿಸತು. ಮೊದಲಿನಂತೆ ನಾನು ನನ್ನ ಮಗಳು ನಡುವೆ ಯಾವುದೇ ಗೋಡೆ ಕಟ್ಟಿಕೊಳ್ಳದೆ ಮುಕ್ತವಾಗಿ ಮಾತನಾಡುವ ಸಂದರ್ಭ ಸೃಷ್ಟಿಯಾಗಬೇಕು. ಅದಕ್ಕೆ ಏನು ಮಾಡಬೇಕು? ಏನಾದರೂ ಮಾಡಲೇ ಬೇಕು ಅನ್ನಿಸಿತು ರಜನಿಗೆ. ಹೋರಾಟದಿಂದ ಬದುಕನ್ನು ರೂಪಿಸಿಕೊಂಡವಳಿಗೆ ಇದೊಂದು ಸಮಸ್ಯೆಯೇ ಅಲ್ಲವೆನ್ನಿಸಿ ಸ್ವಲ್ಪ ಸಮಾಧಾನವೆನ್ನಿಸಿತು. ಮೊದಲು, ಮೊದಲಿನಿಂದ ಏನೇನಾಯಿತು ಎಂದು ಯೋಚಿಸಬೇಕು, ವಿಚಾರ ಮಾಡಬೇಕು. ನಂತರ ನನ್ನ ಮತ್ತು ಸಾನ್ವಿ ಇಬ್ಬರ ಅಭಿಪ್ರಾಯಗಳನ್ನು ಮುಕ್ತವಾಗಿ ಯೋಚಿಸಬೇಕು. ಆಗ, ನಮ್ಮಿಬ್ಬರ ನಡುವಿನ ಈ ಕಹಿ ಘಟನೆಗೆ ಅಂತ್ಯ ಹಾಡಬಹುದು ಎನ್ನಿಸಿ, ಮನಸ್ಸಿನಲ್ಲಿ ಸ್ವಲ್ಪ ಧೈರ್ಯವೂ ಮೂಡಿತು. ಆ ಧೈರ್ಯವನ್ನು ಕಳೆದಕೊಳ್ಳುವ ಮೊದಲೇ ಕಾರ್ಯಪ್ರವೃತ್ತಳಾಗಿ ಇಂದು ಸಂಜೆಯ ಒಳಗಾಗಿ ನಾನು ಮತ್ತೆ ನನ್ನ ಮಗಳ ಮುದ್ದಿನ ಅಮ್ಮನಾಗಬೇಕು ಅನ್ನಿಸಿದ ಕ್ಷಣ ಮನಸ್ಸು ಒಂದು ರೀತಿಯ ಹಗುರತೆಯನ್ನು ಅನುಭವಿಸಿತು.
ಇವೆಲ್ಲವೂ ಶುರುವಾಗಿದ್ದು ಕಳೆದ ಮೂರು ತಿಂಗಳಿನಿಂದ. ಆತ ಬಂದು ಎಲ್ಲವನ್ನೂ ಕೆಡಿಸಿದನೆ, ಅಥವಾ ಹೊಸದೊಂದು ಸಮಸ್ಯೆಯನ್ನು ಹುಟ್ಟು ಹಾಕಿದನೆ? ಹಾಗೆ ನೋಡಿದರೆ ಆ ಸಮಸ್ಯೆಯ ಮೂಲ ಸಾನ್ವಿಯೇ ಹೊರತು ಅವನಲ್ಲ. ನೋಡುತ್ತಾ ಹೋದರೆ ಸಮಸ್ಯೆಯ ಮೂಲ ನಾನೇ ಅಲ್ಲವೆ? ಒಂದು ಕ್ಷಣ ನನ್ನ ಅತಿಯಾದ ಒಳ್ಳೆಯತನದಿಂದ ಭಾವುಕಳಾಗಿ ಅತಿಯಾದ ಆತ್ಮೀಯತೆಯನ್ನು ಅವನಿಗೆ ತೋರಿಸಿದೆನೆ? ನಾನು ಅವನೊಡನೆ ನಿರ್ಭಾವುಕಳಾಗಿ ವರ್ತಿಸಿಬಿಟ್ಟಿದ್ದರೆ ಈ ಸಮಸ್ಯೆಯೇ ಏಳುತ್ತಿರಲಿಲ್ಲ. ಅವನಾರೊ? ನಾವಾರೊ? ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಬದುಕಿನಲ್ಲಿ ನಡೆದ ಒಂದು ಆಕಸ್ಮಿಕ ಘಟನೆಯ ನೆಪವಾಗಿ ಈಗ ಈತ ಅವತರಿಸಿದ್ದಾನೆ ಎಂದರೆ ಅದು ಬದುಕಿನ ವೈಚಿತ್ರವಲ್ಲವೆ? ಅಥವಾ ಬದುಕೆಂಬುದು ಇರುವುದು ಹೀಗೆಯೇ?… ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಾ ರಜನಿಗೆ ಹಿಂದೆ ನಡೆದ್ದೆಲ್ಲವೂ ಒಮ್ಮೆ ನೆನಪಾಗತೊಡಗಿತ್ತು. ಸಮಸ್ಯೆಯ ಪರಿಹಾರಕ್ಕೆ ಅದು ಅವಶ್ಯವೂ ಆಗಿತ್ತು ಹಾಗೂ ಅದಕ್ಕೆ ರಜನಿಯ ಮನಸ್ಸು ಸಿದ್ಧವಾಗಿಯೂ ಇತ್ತು.
ರಜನಿ ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಮೇಲೆಯೇ ಪ್ರೀತಿಯಲ್ಲಿ ಬಿದ್ದಿದ್ದು. ಅಪ್ಪ ಅಮ್ಮ ಸಂಪ್ರದಾಯವಾದಿಗಳು. ಈ ಪ್ರೀತಿಗೀತಿ ಎಂದರೆ ಮಾರುದ್ದ ಹಾರುತ್ತಿದ್ದರು. ಆದರೆ ರಜನಿಯನ್ನು ಪ್ರೀತಿಸಿದ್ದ ಆನಂದನಿಗೆ ಯಾವುದರಲ್ಲೂ ಕೊರತೆಯಿರಲಿಲ್ಲ; ಅಪ್ಪ ಇರಲಿಲ್ಲ ಎಂಬುದೊಂದನ್ನು ಬಿಟ್ಟು. ರಜನಿಯ ಅಪ್ಪ ಅಮ್ಮ ’ಎಂತದೊ ಒಂದು ಗಂಡನ್ನು ಅವಳೇ ಹುಡುಕಿಕೊಂಡಿದ್ದಾಳೆ. ಅದೊಂದನ್ನು ಬಿಟ್ಟರೆ ಆನಂದ ನಿರಾಕರಿಸುವಂತಹ ಸಂಬಂಧವೇನೂ ಅಲ್ಲ. ಅಂತೂ ’ನೀನು ಪ್ರೀತಿಸಿದ್ದೀಯ, ಆರಿಸಿಕೊಂಡಿದ್ದೀಯ. ಮುಂದಿನದಲ್ಲೆಕ್ಕೂ ನೀನೆ ಜವಾಬ್ದಾರಿ’ ಎಂದು ಮದುವೆಗೆ ಒಪ್ಪಿಬಿಟ್ಟಿದ್ದರು. ಮದುವೆಯೂ ಚೆನ್ನಾಗಿಯೇ ನಡೆದು ಹೋಯಿತು. ಆದರೆ, ಮದುವೆಯಾಗಿ ಗಂಡನ ಮನೆಯಲ್ಲಿ ನೆಲೆ ನಿಂತ ಮೇಲೆಯೇ ಗೊತ್ತಾಗಿದ್ದು, ಅವಳ ಅತ್ತೆಗೆ ಆ ಮದುವೆ ಇಷ್ಟವಿರಲಿಲ್ಲ ಎಂದು. ಮಾತು ಮಾತಿಗೂ ’ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಿಕೊಂಡೆ’ ಎಂಬ ಅರ್ಥ ಬರುವಂತೆ ಅತ್ತೆ ಮಾತನಾಡುತ್ತಿದ್ದರು. ಆದರೂ ರಜನಿಗೆ ಬದುಕು ಸಹ್ಯವಾಗಿಯೇ ಇತ್ತು. ಆನಂದನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಕಡಿಮೆ ಸಂಬಳದ್ದಾದರೂ ಅವಳಿಗೊಂದು ಕೆಲಸವೂ ಇತ್ತು. ಎಲ್ಲವೂ ಚೆನ್ನಾಗಿತ್ತು… ಸಾನ್ವಿ ಹುಟ್ಟುವವರೆಗೆ!
ಸಾನ್ವಿ ಇನ್ನು ಹೊಟ್ಟೆಯಲ್ಲಿದ್ದಾಗಲೇ ಆನಂದ ಸ್ವಲ್ಪ ಅಂತರ್ಮುಖಿಯಂತೆ ವರ್ತಿಸುತ್ತಿದ್ದು, ಕೆಲವೊಮ್ಮೆ ಮಾತಿನಲ್ಲಿ ಒರಟುತನ ರಜನಿಯ ಗಮನಕ್ಕೆ ಬಂದಿತ್ತಾದರೂ, ಅವರಿಗೆ ಬೇಕೆಂದಾಗಲೆಲ್ಲಾ ನಾನು ಮೊದಲಿನಂತೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹೀಗೆ ಆಡುತ್ತಿರಬಹುದು ಎಂದುಕೊಂಡಿದ್ದಳು. ಒಮ್ಮೆ ಮಗುವಾದ ಮೇಲೆ ಮತ್ತೆ ಸರಿಹೋಗುತ್ತಾರೆಂಬ ಸಮಾಧಾನದಿಂದಲೇ ಮಗುವಿನ ನಿರೀಕ್ಷೆ ಮಾಡುತ್ತಿದ್ದಳು. ಆದರೆ ಆಗಿದ್ದೇನು? ಹೆರಿಗೆಯಲ್ಲಿ ತುಂಬಾ ತೊಂದರೆಯಾಯಿತು. ತಾಯಿ ಮಗು ಇಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಾದ ಸಂದರ್ಭವೆಂದು ಡಾಕ್ಟರು ಹೇಳಿದ್ದರಂತೆ. ಹೇಗೋ, ತಾಯಿ ಮಗಳಿಬ್ಬರು ಉಳಿದರು. ಆದರೆ, ಆದರೆ… ಮುಂದೆ ತಾಯಿಯಾಗುವ ಭಾಗ್ಯ ರಜನಿಗಿಲ್ಲ ಎಂದು ಡಾಕ್ಟರು ಹೇಳಿದಾಗ, ಆ ಕ್ಷಣ ರಜನಿಗೆ ಏನೂ ಅನ್ನಿಸಲಿಲ್ಲ. ಮುದ್ದಾದ ಮಗು ಇದೆಯಲ್ಲ ಸಾಕು ಅನ್ನಿಸಿಬಿಟ್ಟಿತು. ರಜನಿ ಹೆರಿಗೆಯ ನೋವಿನಲ್ಲಿದ್ದಾಗ ಹೊರಗೆ ಅತ್ತೆ ಗಂಡ ಏನೆಂದುಕೊಂಡಿದ್ದರೊ ಅವಳಿಗೆ ತಿಳಿಯದು. ಆದರೆ ಹೆಣ್ಣು ಮಗು ಎಂದಾಕ್ಷಣ, ಅತ್ತೆ ಮಗುವನ್ನು ಮುಟ್ಟಿಯೂ ನೋಡದೆ ಮುಖ ತಿರುಗಿಸಿ ಹೊರಟಿದ್ದರು. ಗಂಡನ ನಡುವಳಿಕೆಯಲ್ಲಿ ಮೊದಲಿದ್ದ ಅಂತರ್ಮುಖತೆ, ಮಾತಿನಲ್ಲಿದ್ದ ಒರಟುತನ ಹೆಚ್ಚಾಯಿತು. ಮಾತು ಮಾತಿನಲ್ಲೂ ಗಂಡು ಮಗುವನ್ನು ನೀನು ಹೆರಲಿಲ್ಲ ಎಂಬುದೇ ಅವನ ಅಭಿವ್ಯಕ್ತಿಯಾಗಿತ್ತು. ಸರಿಯಾಗಿ ಮುಖಕ್ಕೆ ಮುಖಕೊಟ್ಟು ಮಾತನಾಡುತ್ತಿರಲಿಲ್ಲ. ಮೊದಲೇ ರಜನಿಯೆಂದರೆ ದ್ವೇಷ ಸಾಧಿಸುತ್ತಿದ್ದ ಅತ್ತೆಗೆ, ಮಗನ ಈ ನಡವಳಿಕೆ ಒಳ್ಳೆಯ ಅಸ್ತ್ರವಾಗಿಬಿಟ್ಟಿತ್ತು. ಅದು ದಿನ ಕಳೆದಂತೆ ಬೆಳೆಯುತ್ತಲೇ ಹೋಗಿ ಬದುಕು ಅಸಹನೀಯ ಅನ್ನಿಸಿಬಿಟ್ಟಿತು ರಜನಿಗೆ.
ಸಾನ್ವಿಗೆ ಆರೇಳು ತಿಂಗಳು ತುಂಬುವುದರೊಳಗೆ ಅವಳ ಗಂಡನಿಗಿದ್ದ ಹೊರ ಸಂಬಂಧವೊಂದರ ಸುಳಿವು ರಜನಿಗೆ ದೊರೆತು ಕ್ರುದ್ಧಳಾದಳು. ಅಪ್ಪ ಅಮ್ಮ ಇಬ್ಬರೂ ವಿಷಯ ತಿಳಿದರೂ ನಿರ್ಲಿಪ್ತರಾಗಿ ನಿನ್ನ ಸಂಸಾರ ನಿನ್ನದು ಎಂದು ಕೈ ತೊಳೆದುಕೊಂಡುಬಿಟ್ಟಿದ್ದರು. ಗಂಡ ಅತ್ತೆ ಬಾಯಿ ಬಿಟ್ಟು ’ಮನೆ ಬಿಟ್ಟು ತೊಲಗು’ ಎಂದು ಹೇಳಲಿಲ್ಲ ಅಷ್ಟೆ. ಆದರೆ ಮಾಡಬೇಕಿದ್ದಲ್ಲೆವನ್ನೂ ಮಾಡುತ್ತಲೇ ಇದ್ದರು. ಅಂತಹ ಅಸಹನೀಯ ಬದುಕಿಗೆ ಒಂದು ಅಂತ್ಯ, ತುಂಬಾ ನಾಟಕೀಯವಾಗಿ ಒದಗಿ ಬಂತು.
ಸಾನ್ವಿ ಹುಟ್ಟಿ ವರ್ಷವಾದರೂ ಕೆಲಸಕ್ಕೆ ಹೋಗಿರಲಿಲ್ಲ. ಕೆಲಸಕ್ಕೆ ಹೋದರೆ ಸಾನ್ವಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಒಂದು ವರ್ಷ ತುಂಬುತ್ತಲೇ, ಅತ್ತೆ ಗಂಡ ಕೆಲಸಕ್ಕೆ ಹೋಗಕೂಡದೆಂದು ಎಷ್ಟೇ ಹೆದರಿಸಿದರೂ ಕೇಳದೆ ಮಗುವನ್ನು ಡೇ ಕೇರಿನಲ್ಲಿ ಹಾಕಿ ಕೆಲಸಕ್ಕೆ ಸೇರಿಬಿಟ್ಟಳು. ಒಂದೆರಡು ತಿಂಗಳು ಕಳೆದಿರಬಹುದು ಅಷ್ಟೆ. ಒಂದು ದಿನ ಸಂಜೆ ಆಫೀಸಿನಲ್ಲಿ ಕೆಲಸ ಹೆಚ್ಚಿದ್ದರಿಂದ ತಡವಾಗಿ, ಮಗಳನ್ನು ಕರೆದುಕೊಂಡು ಬರಲು ಡೇ ಕೇರಿನತ್ತ ಹೆಜ್ಜೆ ಹಾಕುತ್ತಿದ್ದಳು. ಹಾದಿಯಲ್ಲಿ ಬೃಹತ್ತಾಗಿ ಬೆಳೆದಿದ್ದ ಮರಗಳ ಸಾಲಿನಲ್ಲಿ ಸಾಗಬೇಕಾದರೆ ಯಾರೋ ಒಬ್ಬ ಧುತ್ತನೆ ಬಂದು ಎದುರಿಗೆ ನಿಂತು, ಚಾಕು ತೋರಿಸಿ ಹಣಕೊಡುವಂತೆ ಕೇಳಿ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡ. ರಜನಿಗೆ ಜೀವ ಬಾಯಿಗೆ ಬಂದಿತು. ಆದರೂ ಸಾವಾರಿಸಿಕೊಂಡು, ಅದರಲ್ಲಿ ಹಣವಿಲ್ಲ. ಇದ್ದರೂ ನೂರೊ ಇನ್ನೂರೊ ಅಷ್ಟೆ ಎಂದಳು. ಆ ರಸ್ತೆಯಲ್ಲಿ ಜನಸಂಚಾರವೂ ಇರಲಿಲ್ಲ. ಆತ ಅತ್ತಿತ್ತ ನೋಡುತ್ತ ಸ್ವಲ್ಪ ಭಯದಿಂದಲೇ ಹಿಂದಿ ಮಿಶ್ರಿತ ಕನ್ನಡ ಭಾಷೆಯಲ್ಲಿ ಏನೇನೊ ಮಾತನಾಡುತ್ತಿದ್ದ. ಮಾತಿನ ಭರದಲ್ಲಿ ಆತ ಹಿಡಿದಿದ್ದ ಚಾಕು ಯಾವಾಗಲೊ ಆತನ ಪ್ಯಾಂಟಿನ ಜೇಬು ಸೇರಿತ್ತು. ಸಮಯ ನೋಡಿ ಕಿರುಚಿಕೊಳ್ಳಬೇಕು ಅಂದುಕೊಳ್ಳುತ್ತಿದ್ದ ರಜನಿಗೆ, ಆತನ ಮಾತುಗಳ ನಡುವೆ ಬಿಕ್ಕುತ್ತಿರುವ ಧ್ವನಿ ಕೇಳಿ ಸುಮ್ಮನಾಗಿಬಿಟ್ಟಳು. ಆಗ ಅವಳಿಗೆ ಅರ್ಥವಾಗಿದ್ದಿಷ್ಟು. ಆತ, ಯಾವುದೊ ಕಂಪೆನಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಆರು ವರ್ಷದ ಮಗನಿದ್ದಾನೆ. ತಾಯಿಯಿಲ್ಲದ ತಬ್ಬಲಿ. ಆತನಿಗೆ ಸಖತ್ ಖಾಯಿಲೆ. ತುರ್ತಾಗಿ ಆಪರೇಷನ್ ಆಗಬೇಕು ಕನಿಷ್ಠ ಹತ್ತು ಸಾವಿರಾವದರೂ ಬೇಕು. ಎಲ್ಲೂ ಸಾಲ ಸಿಗಲಿಲ್ಲ. ಈ ಊರಿನಲ್ಲಿ ಯಾರೂ ಪರಿಚಯದವರಿಲ್ಲ. ಮಗನನ್ನು ಉಳಿಸಿಕೊಳ್ಳಬೇಕು ಎಂಬ ಒಂದೇ ಆಸೆಯಿಂದ ಕಳ್ಳತನಕ್ಕೆ ಬಂದೆ. ಇಲ್ಲೂ ಏನು ಗಿಟ್ಟಲಿಲ್ಲ ಎಂದು ಗೋಳಾಡಿದ್ದ ಆತ, ಏನಾದರೂ ಸಹಾಯ ಮಾಡುವಂತೆ ಬೇಡಿಕೊಂಡ.
ರಜನಿ, ತನ್ನ ಬಳಿ ಏನೂ ಇಲ್ಲವೆಂದು, ಆತನಿಂದ ಕೊಸರಿಕೊಂಡು ಹೋಗುವ ಸಂದರ್ಭದಲ್ಲೇ ಆಕೆಯ ಕೊರಳಲ್ಲಿದ್ದ ಮಾಂಗಲ್ಯದ ಸರ ಆತನ ಕಣ್ಣಿಗೆ ಬಿದ್ದಿದ್ದು. ಕ್ಷಣಾರ್ಧದಲ್ಲಿ ಚಾಕನ್ನು ಮತ್ತೆ ಹೊರತೆಗೆದು ಆಕೆಯ ಕುತ್ತಿಗೆಗೆ ಹಿಡಿದು, ಸರವನ್ನು ಕಿತ್ತುಕೊಂಡುಬಿಟ್ಟಿದ್ದ. ಅವಳನ್ನು ಬಿಟ್ಟು ಹೊರಟ ಆತ ಒಂದು ಕ್ಷಣ ತಡೆದು ಮತ್ತೆ ಅವಳ ಕೈಸೇರಿದ್ದ ಬ್ಯಾಗನ್ನೂ ಕಿತ್ತು ಕ್ಷಣಾರ್ಧದಲ್ಲಿ ಮರಗಳ ಸಾಲಿನ ಕತ್ತಲಲ್ಲಿ ಮರೆಯಾಗಿಬಿಟ್ಟಿದ್ದ. ಮಗನ ಖಾಯಿಲೆಯ ಕಾರಣದಿಂದ ಅಳುತ್ತಿದ್ದ ಅವನ ಬಗ್ಗೆ, ತನ್ನ ಮಗುವನ್ನು ಕರೆದು ತರಲು ಹೊರಟಿದ್ದ ರಜನಿ ಸ್ವಲ್ಪ ಕರುಣೆಯಿಂದಲೇ ಅವನ ಮಾತುಗಳನ್ನು ಆಲಿಸುತ್ತಿದ್ದವಳು, ಅವನ ಈ ನಡೆಯನ್ನು ನಿರೀಕ್ಷಿಸಿಯೇ ಇರಲಿಲ್ಲ. ಆಗಲೇ ಸಾಕಷ್ಟು ತಡವಾಗಿದ್ದುದರಿಂದ, ಮನೆಯಲ್ಲಿ ಗಂಡ ಅತ್ತೆಯರ ಮಾತಿನ ಧಾಳಿಯನ್ನು ಎದುರಿಸಬೇಕಾದ್ದರಿಂದ ಹಾಗೂ ಇನ್ನು ಕೂಗಿದರೂ ಉಪಯೋಗವಿಲ್ಲ ಎಂದುಕೊಂಡು ಡೇ ಕೇರಿನತ್ತ ನಡೆದಳು.
ಅವಳ ನಿರೀಕ್ಷೆಯಂತೆ ಮನೆಯಲ್ಲಿ ಅತ್ತೆ ಗಂಡ ಇಬ್ಬರೂ ಧಾಳಿಗೆ ಸಿದ್ಧರಾಗಿ ನಿಂತಿದ್ದರು. ರಜನಿ ಸಂಯಮದಿಂದಲೇ ನಡೆದುದೆಲ್ಲವನ್ನೂ ಹೇಳಿದಳು. ಅವರ ಕೋಪದ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಮಾಂಗಲ್ಯ ಸರವನ್ನು ಕಳೆದುಕೊಂಡು ಬಂದಿದ್ದಾಳೆ ಎಂಬುದು. ಬಾಯಿಗೆ ಬಂದಹಾಗೆ ಮಾತನಾಡಿ, ಯಾವನೊ ಮಿಂಡನಿಗೆ ಕೊಟ್ಟು ಬಂದಿದ್ದಾಳೆ; ಅದಕ್ಕೇ ಇಷ್ಟು ಸಮಾಧಾನದಿಂದ ಇದ್ದಳೇ ಎಂದು ರಜನಿಯನ್ನು ಹಾಗೂ ಏನೂ ಅರಿಯದ ಕಂದನನ್ನು ಅನಿಷ್ಟವೆಂದು ನಿಂದಿಸಿದಾಗ, ರಜನಿಗೆ ಅಸಹ್ಯ ಎನ್ನಿಸಿಬಿಟ್ಟಿತು. ತನ್ನ ಒಂದಷ್ಟು ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡು ಮಗುವನ್ನು ಎತ್ತಿಕೊಂಡು ಮನೆ ಬಿಟ್ಟು ಹೊರಟೇಬಿಟ್ಟಳು. ಆ ರಾತ್ರಿಯನ್ನು ಸ್ನೇಹಿತೆಯೊಬ್ಬಳ ಮನೆಯಲ್ಲಿ ಕಳೆದು ಮುಂದಿನ ದಾರಿಯನ್ನು ನಿರ್ಧರಿಸಿಬಿಟ್ಟಿದ್ದಳು. ವರ್ಷ ತುಂಬುವಷ್ಟರಲ್ಲಿ ಆನಂದನ ಸಂಬಂಧಕ್ಕೆ ವಿಚ್ಛೇಧನದ ಮುದ್ರೆಯೊತ್ತಿ, ಮಗಳ ಭವಿಷ್ಯಕ್ಕೆ ಪಣತೊಟ್ಟವಳಿಗೆ, ಆತ ಇನ್ನೊಂದು ಮದುವೆಯಾದ ಸುದ್ದಿ ತಿಳಿದಾಗಲು ಮನಸ್ಸು ವಿಕಾರವಾಗಿರಲಿಲ್ಲ.
ಅಂದಿನಿಂದ ಶುರುವಾದ ಅವಳ ಹೋರಾಟದ ಬದುಕು ಒಂದು ನೆಲೆ ನಿಂತು, ಮಗಳಿಗೆ ಮದುವೆ ಮಾಡುವ ಆಲೋಚನೆ ಅವಳ ಮನಸ್ಸಿಗೆ ಬರುಷ್ಟರಲ್ಲಿಯೇ ಈಗಿನ ಸಮಸ್ಯೆ ಶುರುವಾಗಿದ್ದು. ಮೂರು ತಿಂಗಳ ಹಿಂದೆ, ಅವಳಿಗೆ ಬಂದ ಕಾಗದಲ್ಲಿ, ಇಂತಹ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಜನಿ ಎಂಬುವವರು ನೀವೇ ಆಗಿದ್ದರೆ, ನಿಮ್ಮನ್ನು ಬೇಟಿಯಾಗಿ ಒಂದು ವಿಷಯವನ್ನು ಅರಿಕೆ ಮಾಡಿಕೊಳ್ಳಬೇಕಾಗಿದೆ. ದಯಮಾಡಿ ಅವಕಾಶ ಮಾಡಿಕೊಡಿ. ನೀವು ಕೆಲಸ ಮಾಡುತ್ತಿದ್ದ ಕಛೇರಿಯಿಂದಲೇ ಈ ಮನೆಯ ವಿಳಾಸ ತಿಳಿದುಕೊಂಡೆ ಎಂದು ಬರೆದಿತ್ತು. ಕೆಳಗೆ ಕುಲವಂತ್ ಎಂಬ ಹೆಸರೂ ಅದರ ಕೆಳಗೆ ಮೊಬೈಲ್ ನಂಬರ್ ಬರೆದಿತ್ತು. ರಜನಿಗೆ ಏನೊಂದೂ ಅರ್ಥವಾಗಲಿಲ್ಲ. ಕಾಗದದಲ್ಲಿ ತಿಳಿಸಿದಂತೆ ಆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದವಳು ಅವಳೆ. ಆದರೆ ಈ ಕುಲವಂತ್ ಯಾರು? ಆತ ನನ್ನನ್ನು ಏಕೆ ಭೇಟಿಯಾಗಬೇಕು? ಆತನ ನನಗೆ ತಿಳಿಸಬೇಕಾಗಿರುವ ವಿಷಯ ಯಾವುದು? ತುಂಬಾ ತಲೆಕೆಡಿಸಿಕೊಂಡಳು. ಮಗಳಲ್ಲೂ ಈ ವಿಷಯ ತಿಳಿಸಿ ಪರಿಹಾರ ಕೇಳಿದಳು. ಮಗಳು, ಅದೊಂದು ಸಮಸ್ಯೆಯೇ ಅಲ್ಲವೆನ್ನುವಂತೆ ’ಅಮ್ಮಾ, ಹೀಗೆ ವಿಷಯ ತಿಳಿಯದೇ ಒದ್ದಾಡುವುದಕ್ಕಿಂತ, ಆತನನ್ನು ಬರಲು ಹೇಳು. ವಿಷಯ ಏನೆಂದು ತಿಳಿಯುತ್ತದೆ. ಆಮೇಲೆ ಮುಂದೇನು ಎಂದು ಯೋಚಿಸೋಣ’ ಎಂದಿದ್ದಳು. ಸಾನ್ವಿಯೇ ಕಾಗದದಲ್ಲಿದ್ದ ನಂಬರಿಗೆ ಮೆಸೇಜ್ ಮಾಡಿ, ಮುಂದಿನ ಭಾನುವಾರ ನೀವು ಬಂದು ಅಮ್ಮನನ್ನು ಭೇಟಿಯಾಗಬಹುದು ಎಂದು ತಿಳಿಸಿದಳು.
ಭಾನುವಾರ ಹತ್ತಿರವಾದಂತೆ ರಜನಿ ಉದ್ವೇಗದಲ್ಲಿ ಮುಳಗಿ ಏಳುತ್ತಿದ್ದಳು. ಸಾನ್ವಿ ಮಾತ್ರ ಯಾವುದೇ ಒತ್ತಡಕ್ಕೂ ಒಳಗಾಗದೆ, ಅಮ್ಮನಿಗೆ ಸಮಾಧಾನ ಹೇಳುತ್ತ, ’ನಾನಿದ್ದೇನಲ್ಲ’ ಎನ್ನುತ್ತಿದ್ದಳು. ಸುಮಾರು ಹತ್ತು ಗಂಟೆಯ ವೇಳೆಗೆ, ಮನೆಯ ಮುಂದೆ ಟ್ಯಾಕ್ಸಿಯೊಂದು ನಿಂತಾಗ ಇಬ್ಬರೂ ಅದಕ್ಕೆ ಕಣ್ಣಾದರು. ಸುಮಾರು ಮೂವತ್ತು ಮೂವತ್ತೈದರ ಕಟ್ಟುಮಸ್ತಾದ ಯುವಕನೊಬ್ಬ ಇಳಿದು ಅವರೆಡೆಗೆ ಬಂದ. ಯಾರೂ ಬೇಕಾದರೂ, ಆತ ಪೊಲೀಸು ಎಂದೊ ಮಿಲಿಟರಿಯವನು ಎಂದೊ ಹೇಳಬಹುದಿತ್ತು, ಹಾಗಿತ್ತು ಆತನ ದೃಢ ನಿಲುವು. ಅಚ್ಚುಕಟ್ಟಾದ ಕ್ರಾಫ್ ಕಟ್, ಪ್ರಕಾಶಮಾನವಾಗಿ ಹೊಳೆಯುತ್ತಿರುವ ಕಣ್ಣುಗಳು, ಮುಗುಳುನಗೆಯನ್ನು ಸೂಸುತ್ತಿದ್ದ ಆತನ ಮುಖದಲ್ಲಿ ಒಂದು ರೀತಿಯ ಗಾಂಭೀರ್ಯವಿತ್ತು. ಮುಂದೆ ಸಾಗಿ ಬಂದವನು, ’ರಜನಿ ಯಾರು?’ ಎಂಬ ಅರ್ಥದಲ್ಲಿ ನೋಡಿ, ಅರ್ಥವಾದವನಂತೆ ತುಸು ಬಾಗಿ ರಜನಿಗೆ ನಮಸ್ಕರಿಸಿದ. ಆರಂಭದ ಸ್ವಾಗತವಾದ ಮೇಲೆ ಮಾತಿಗೆ ಕುಳಿತ ಆತ, ತನ್ನ ಹೆಸರು ಕುಲವಂತ್ ಎಂದು ಪರಿಚಯಿಸಿಕೊಂಡು ತಾನು ಬಂದ ಉದ್ದೇಶವನ್ನು ಹೇಳಿದ್ದ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ರಜನಿಯ ಮಾಂಗಲ್ಯವನ್ನು ಕಿತ್ತು ಓಡಿ ಹೋಗಿದ್ದ ಬಲವಂತ್ ಎಂಬ ಸೆಕ್ಯುರಿಟಿ ಗಾರ್ಡ್ ಈಗ ದಿವಂಗತ. ಆತನ ಮಗನೇ ಈ ಕುಲವಂತ್. ಅಪ್ಪ ನಿಮಗೆ ಕೊಡಬೇಕೆಂದು ಒಂದು ಪತ್ರವನ್ನು ಕೊಟ್ಟು, ಅದರ ಜೊತೆಯಲ್ಲಿ ಈ ಒಂದು ಲಕ್ಷ ರುಪಾಯಿಯನ್ನು ನಿಮಗೆ ತಲುಪಿಸುವಂತೆ ಸಾಯುವ ಮುನ್ನ ನನ್ನಿಂದ ಮಾತು ತೆಗೆದುಕೊಂಡಿದ್ದ ಎಂದು ತಿಳಿದಾಗ ರಜನಿಗೆ ಮಾತೇ ಹೊರಡಲಿಲ್ಲ. ರಜನಿ ಪತ್ರವನ್ನು ಓದಿ ದಿಘ್ಮೂಢಳಾಗಿ ಸಾನ್ವಿಯ ಕೈಗೆ ಇತ್ತಿದ್ದಳು. ಸಾನ್ವಿ ಪತ್ರವನ್ನು ಓದಿ ಸನ್ನಿವೇಶವನ್ನು ಅರ್ಥ ಮಾಡಿಕೊಂಡಳು.
ಅಂದು ರಜನಿಯ ಮಾಂಗಲ್ಯವನ್ನು ಕದ್ದು ಓಡಿ ಹೋಗಿದ್ದ ಬಲವಂತ್ ಅದನ್ನು ಮಾರಿ ಮಗನ ಆಪರೇಷನ್ ಮಾಡಿಸಿದ್ದ. ಆದರೆ ಆತನಿಗೆ ತಾನು ಮಾಡಿದ್ದು ತಪ್ಪು. ಹೆಣ್ಣು ಮಗಳ ಮಾಂಗಲ್ಯವನ್ನು ಕಿತ್ತು ತಪ್ಪು ಮಾಡಿದೆ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಹೇಗಾದರೂ ಮಾಡಿ ಅದನ್ನು ಯಾವ ರೂಪದಲ್ಲಾದರೂ ಹಿಂತಿರುಗಿಸಿ ಆ ತಾಯಿಯಲ್ಲಿ ತಾನು ಕ್ಷಮೆ ಕೇಳಬೇಕೆಂದುಕೊಂಡ. ಆತನ ಈ ನಿರ್ಧಾರ ಆತನಿಗೆ ಮಾಂಗಲ್ಯ ಸರ ಕಿತ್ತುಕೊಂಡ ಕ್ಷಣದಲ್ಲಿಯೇ ಮನೋಗಮ್ಯವಾಗಿತ್ತೊ ಏನೋ, ಆಕೆಯ ಬ್ಯಾಗನ್ನು ಕಿತ್ತು ತಂದಿದ್ದ. ಅದರಲ್ಲಿದ್ದ ಅವಳ ಕಛೇರಿಯ ವಿಳಾಸವಿದ್ದ ಕಾರ್ಡುಗಳನ್ನು ಎತ್ತಿಟ್ಟುಕೊಂಡಿದ್ದ. ತಾನು ಇನ್ನು ಇಲ್ಲಿದ್ದರೆ, ಪೋಲೀಸರ ಕೈಗೆ ಸಿಕ್ಕಿ ಬೀಳಬಹುದು. ಇದರಿಂದ ನನ್ನ ಮಗ ಅನಾಥನಾಗಬೇಕಾಗುತ್ತದೆ. ಜೊತೆಗೆ ನಾನು ಋಣಮುಕ್ತನಾಗುವುದೂ ಸಾಧ್ಯವಿಲ್ಲ. ಆದ್ದರಿಂದ ಈ ಊರನ್ನೇ ಬಿಟ್ಟು, ಬೇರೆಲ್ಲಾದರೂ ನೆಲೆಸಿ, ತನ್ನ ಕಾರ್ಯವನ್ನು ಸಾಧಿಸಬೇಕೆಂದು ಯೋಜಿಸಿ. ತನ್ನ ತವರು ರಾಜ್ಯದ ಡೆಹ್ರಾಡೂನನ್ನು ಸೇರಿಬಿಟ್ಟಿದ್ದ. ಅಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿ, ಆತ ಭಾರತೀಯ ಸೇನೆಯಲ್ಲಿ ಒಳ್ಳೆಯ ಹುದ್ದೆಗೆ ಸೇರಿಸುವಲ್ಲಿ ತನ್ನ ಇಡೀ ಬದುಕನ್ನೇ ಸವೆಸಿದ್ದ. ಇನ್ನೇನು ಎಲ್ಲಾ ಕೆಲಸ ಮುಗಿಯಿತು, ಮಗನಿಗೆ ಮದುವೆ ಮಾಡುವ ಮೊದಲು ನಾನು ಋಣಮುಕ್ತನಾಗಬೇಕು ಎಂದುಕೊಳ್ಳುವಷ್ಟರಲ್ಲಿ ಕ್ಯಾನ್ಸರ್ ಆತನನ್ನು ಆವರಸಿಕೊಂಡಿತ್ತು. ಅದರಲ್ಲಿಯೇ ನಾಲ್ಕು ವರ್ಷಗಳನ್ನು ಕಳೆದ ಆತ ಒಂದು ದಿನ ಮಗನನ್ನು ಕರೆಸಿ ಎಲ್ಲಾ ವಿಷಯ ತಿಳಿಸಿ ಕಣ್ಣು ಮುಚ್ಚಿಬಿಟ್ಟಿದ್ದ.
ಆಗಲೇ ಕುಲವಂತನಿಗೆ, ಅಪ್ಪ ನನಗೆ ಕನ್ನಡ ಮಾತನಾಡುವುದನ್ನು ಏಕೆ ಕಲಿಸಿದ್ದ, ಕರ್ನಾಟಕದ ಬಗ್ಗೆ ಏಕೆ ಹೆಚ್ಚಿಗೆ ತಿಳಿಸಿ ಹೇಳುತ್ತಿದ್ದ ಎಂಬ ಹಲವಾರು ಅನುಮಾನಗಳಿಗೆ ಉತ್ತರ ದೊರಕಿದ್ದು. ಅಪ್ಪ ಅವನ ಮನಸ್ಸಿನಲ್ಲಿ ಬಹು ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಂತಿದ್ದ. ಕುಲವಂತ್ ಅಪ್ಪ ಕೊಟ್ಟಿದ್ದ ಕಛೆರಿಗೆ ಸಂಪರ್ಕ ಸಾಧಿಸಿ ರಜನಿಯ ವಿಳಾಸ ಪತ್ತೆ ಹಚ್ಚುವಷ್ಟರಲ್ಲಿ ಮೂರು ತಿಂಗಳುಗಳೇ ಕಳೆದು ಹೋಗಿದ್ದವು. ’ಅಪ್ಪ ಅಂದು ಮಾಡಿದ ತಪ್ಪಿಗೆ ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ದಯಮಾಡಿ, ಇದನ್ನು ಸ್ವೀಕರಿಸಿ ನಮ್ಮ ತಂದೆಯನ್ನು ಋಣಮುಕ್ತನನ್ನಾಗಿ ಮಾಡಬೇಕು. ಆ ಮೂಲಕ ಅವನ ಆತ್ಮಕ್ಕೆ ಶಾಂತಿ ದೊರಕಿಸಬೇಕು’ ಎಂದು ಕೈಮುಗಿದು ನಿಂತಿದ್ದ ಕುಲವಂತನನ್ನು ನೋಡಿ ರಜನಿ, ಸಾನ್ವಿ ಇಬ್ಬರೂ ಮಾತಿಲ್ಲದವರಾದರು. ರಜನಿ, ತನ್ನ ಗಂಡ ಕಟ್ಟಿದ್ದ ಒಂದು ಚಿನ್ನದ ತುಣುಕಿಗೆ ’ಮಾಂಗಲ್ಯ’ ಎಂಬ ಗೌರವದಿಂದ, ಅದನ್ನು ಚಿನ್ನದ ಸರವೊಂದಕ್ಕೆ ಸೇರಿಸಿ ಧರಿಸಿದ್ದು ಈ ರೀತಿ ಉಪಯೋಗಕ್ಕೆ ಬಂದೀತೆ ಎಂದು ಆಶ್ಚರ್ಯಪಟ್ಟಳು.
ಒಂದು ತಿಂಗಳ ಮಟ್ಟಿಗೆ ರಜೆಯಲ್ಲಿ ಬಂದಿದ್ದ ಕುಲವಂತನನ್ನು ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ರಜನಿ ಹೇಳಿದಳು. ಆದರೆ, ಆತ ಇಲ್ಲಿಯ ತನ್ನ ಸಹದ್ಯೋಗಿ ಮಿತ್ರನ ಜೊತೆಯಲ್ಲಿ, ಅಪ್ಪ ಬಹಳವಾಗಿ ಹೇಳುತ್ತಿದ್ದ ಈ ರಾಜ್ಯದ ಪ್ರವಾಸ ಮಾಡಲು ನಿರ್ಧರಿಸಿದ್ದ. ಒಂದು ವಾರದ ಮಟ್ಟಿಗೆ ಅಲ್ಲಿ ಇರಲು ಒಪ್ಪಿದ್ದು, ಅವರು ಆ ಹಣವನ್ನು ತೆಗೆದುಕೊಳ್ಳಲು ಒಪ್ಪಿದ ಮೇಲೆಯೆ. ಹಣ ತೆಗೆದುಕೊಳ್ಳಲು ರಜನಿ ಒಪ್ಪಿದ್ದೂ ಕೂಡಾ, ಸಾನ್ವಿ ಆ ಹಣವನ್ನು ಅಗತ್ಯವಿರುವ ಮಕ್ಕಳ ಚಿಕಿತ್ಸೆಗೆ ಬಳಸುವ ಉಪಾಯ ಸೂಚಿಸಿದ ಮೇಲೆಯೆ.
ಒಂದು ವಾರ ಕಳೆಯುವುದರೊಳಗಾಗಿ ಕುಲವಂತ್ ಅವರ ಮನೆಯಲ್ಲಿ ಒಬ್ಬನಾಗಿ ಹೋಗಿದ್ದ. ರಜನಿಗೆ ಬದುಕು ಎಷ್ಟೊಂದು ಸುಂದರ ಅನ್ನಿಸತು. ಕುಲವಂತನ ನಡೆ ನುಡಿ ಎಲ್ಲದರಲ್ಲೂ ಒಂದು ಗಾಂಭೀರ್ಯವಿತ್ತು; ಸಭ್ಯತೆಯಿತ್ತು. ಆತ ಅವರ ಮನೆಯಲ್ಲಿ ಕಳೆದ ಒಂದು ವಾರದಲ್ಲಿ ತನಗೆ ನೆನಪಿರದ ತನ್ನ ತಾಯಿಯನ್ನು ರಜನಿಯಲ್ಲಿ ಕಂಡಿದ್ದ. ಸಾನ್ವಿಯ ಜೊತೆಗಿನ ಒಡನಾಟ ಆತನಲ್ಲಿ ಹೊಸತೊಂದು ತಂಗಾಳಿಯನ್ನೇ ಎಬ್ಬಿಸಿತ್ತು. ಸಾನ್ವಿಗೂ ಅಷ್ಟೆ! ಕುಲವಂತ್ ತನ್ನ ಸ್ನೇಹಿತನೊಂದಿಗೆ ಕರ್ನಾಟಕ ಸುತ್ತುವ ಯೋಜನೆಯಲ್ಲಿ ಹಲವಾರು ಏರ್ಪಾಟುಗಳನ್ನು ಮಾಡಿಕೊಂಡ. ರಜನಿ ಸಾನ್ವಿಯರ ಜೊತೆಯಲ್ಲಿಯೇ ಹಲವಾರು ಊರುಗಳನ್ನು ಸುತ್ತಿದ. ರಜೆ ಮುಗಿದು ಅವನು ಊರಿಗೆ ಹೊರಟು ನಿಂತ ದಿನ, ಇಪ್ಪತ್ತೈದು ವರ್ಷಗಳಿಂದ ಎಂದೂ ಅಳದಿದ್ದವಳು ಬಿಕ್ಕಳಿಸಿ ಅತ್ತುಬಿಟ್ಟಿದ್ದಳು. ಸಾನ್ವಿಯೇ ಅಮ್ಮನಿಗೆ ಸಮಾಧಾನ ಮಾಡಿದ್ದಳು.
ಕುಲವಂತ್ ಊರಿಗೆ ಹೊರಟಾಗ ದುಃಖಿಸುತ್ತಿದ್ದ ಅಮ್ಮನನ್ನು ಸಮಾಧಾನ ಮಾಡಿದ್ದ ಸಾನ್ವಿಗೆ, ಕುಲವಂತ್ ಹೊರಟು ಹೋದ ಮೇಲೆ ತಾನೇನನ್ನೊ ಕಳೆದಕೊಂಡೆ ಅನ್ನಿಸತೊಡಗಿತ್ತು. ಕೆಲವೇ ದಿನದಲ್ಲಿ ಅವಳಿಗೆ ಅದು ಏನೆಂದು ಅರ್ಥವೂ ಆಯಿತು. ಅಮ್ಮನ ಬಳಿ ಮೊದಲಿನಂತೆ ಮಾತನಾಡುವುದು ಕಷ್ಟವೆನ್ನಿಸತೊಡಗಿತು. ಆಕೆ, ತಡ ಮಾಡದೆ, ಕುಲವಂತನಿಗೆ ಫೋನ್ ಮಾಡಿ, ಆತನನ್ನು ತಾನು ಪ್ರೀತಿಸುತ್ತಿರುವ ವಿಷಯವನ್ನು ಧೈರ್ಯವಾಗಿ ತಿಳಿಸಿಬಿಟ್ಟಳು. ಅದಕ್ಕಾಗಿಯೇ ಕಾಯುತ್ತಿದ್ದನೇನೊ ಎಂಬಂತೆ ಕುಲವಂತ್, ಆಕೆಯ ಪ್ರೀತಿಯನ್ನು ತಕ್ಷಣ ಸ್ವೀಕರಿಸಿದ. ಆದರೆ ’ನಿನ್ನ ಅಮ್ಮನ ಒಪ್ಪಿಗೆ ದೊರೆಯುವವರೆಗೂ ನಾನೇನನ್ನೂ ಹೇಳಲಾರೆ’ ಎಂದುಬಿಟ್ಟ. ಸಾನ್ವಿಗೆ ಅದೊಂದು ದೊಡ್ಡ ಸಮಸ್ಯೆ ಎನ್ನಿಸಲೇ ಇಲ್ಲ. ಆದರೆ ಕುಲವಂತ್, ’ಎಲ್ಲಿಂದಲೊ ಬಂದವನು, ಹಿಂದು ಮುಂದು ತಿಳಿಯದವನು, ಕೇವಲ ಒಂದೇ ವಾರದಲ್ಲಿ ನನ್ನ ಮಗಳ ತಲೆಯಲಿ ಪ್ರೀತಿ ಪ್ರೇಮದ ವಿಷಯ ತುಂಬಿ, ಮಗಳನ್ನು ನನ್ನಿಂದ ದೂರ ಮಾಡಿಬಿಟ್ಟ ಎಂದು ನಿನ್ನ ಅಮ್ಮನಿಗೆ ಅನ್ನಿಸಿದರೆ, ಅದು ನಮಗೆ ಒಳ್ಳೆಯದಲ್ಲ. ಆಕೆ ಜೀವನದಲ್ಲಿ ತುಂಬಾ ನೊಂದಿದ್ದಾಳೆ. ಅವಳ ನೋವಿನಲ್ಲಿ ಅಷ್ಟೊ ಇಷ್ಟೊ ನನ್ನ ತಂದೆಯ ಪಾತ್ರವೂ ಇದೆ. ಅವರಿಗೆ ನೋವಾಗುವುದು ನನಗೆ ಇಷ್ಟವಿಲ್ಲ’ ಎಂದಿದ್ದು ರಜನಿಗೆ ಸ್ವಲ್ಪ ಮಟ್ಟಿನ ಆತಂಕವನ್ನುಂಟು ಮಾಡಿತು.
ಇನ್ನು ವಿಷಯ ಮುಚ್ಚಿಟ್ಟು ಪ್ರಯೋಜನವಿಲ್ಲವೆಂದು ಅರಿತ ಸಾನ್ವಿ ನೇರವಾಗಿ ರಜನಿಗೆ ವಿಷಯ ತಿಳಿಸಿದಳು. ಅವಳ ಆತಂಕ ನಿಜವಾಗಿಸುವಂತೆ ರಜನಿ ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಳು. ’ಅಮ್ಮ ಈ ವಿಷಯದಲ್ಲಿ ಕುಲವಂತ್ ಯಾವ ತಪ್ಪನ್ನೂ ಮಾಡಿಲ್ಲ. ನಾನೇ ಮೊದಲಾಗಿ ಅವನ ಬಳಿ ಪ್ರೀತಿಯ ವಿಷಯ ಪ್ರಸ್ತಾಪಿಸಿದೆ. ಆದರೂ ಅವನು, ನಿನ್ನ ಅಮ್ಮನ ಒಪ್ಪಿಗೆಯ ನಂತರವೇ ನನ್ನ ಒಪ್ಪಿಗೆ ಎಂದು ಹೇಳಿದ್ದಾನೆ’ ಎಂದು ಸಾನ್ವಿ ಎಷ್ಟೇ ಬಿಡಿಸಿ ಹೇಳಿದರೂ ರಜನಿಗೆ ದುಃಖ ತಡೆಯಲಾಗಲಿಲ್ಲ.
’ಹೌದು ಆತ ಒಳ್ಳೆಯವನೆ. ಇಷ್ಟು ದಿನ ನಾನು ನೋಡಿದೆನಲ್ಲ. ಮಗಳೆ, ನನ್ನ ಆತಂಕ ಅದಲ್ಲ. ಆತ ಎಷ್ಟೇ ಒಳ್ಳೆಯವನಿರಬಹುದು. ಆದರೆ ಗೊತ್ತಿದ್ದೂ ಗೊತ್ತಿದ್ದೂ ಒಬ್ಬ ಕಳ್ಳನ ಮಗನಿಗೆ ಮಗಳನ್ನು ಮದುವೆ ಮಾಡಿಕೊಡಬೇಕಾ? ಎಂದು ಮನಸ್ಸಿಗೆ ತುಂಬಾ ಆತಂಕವಾಗುತ್ತಿದೆ’ ಎಂದು ಗೋಳಾಡಿದಳು. ’ಅಮ್ಮ ನನಗೆ ನಿನ್ನ ಆತಂಕ ಅರ್ಥವಾಗುತ್ತಿದೆ. ಆತ ಎಂತಹ ಸಂದರ್ಭದಲ್ಲಿ ಕಳ್ಳತನ ಮಾಡಿದ್ದಾನೆ ಎಂಬುದು ನಿನಗೆ ಈಗ ಗೊತ್ತಾಗಿದೆ. ಅದಕ್ಕಾಗಿ ಆತ ಎಷ್ಟೊಂದು ಪಶ್ಚತ್ತಾಪ ಪಟ್ಟಿದ್ದಾನೆ ಎಂಬುದು ಗೊತ್ತಾಗಿದೆ. ಋಣಮುಕ್ತನಾಗಬೇಕೆಂದು ಆತ ಎಷ್ಟು ಹಂಬಲಿಸಿದ್ದನೆಂದೂ ತಿಳಿದಿದೆ. ಅಪ್ಪನ ಆಸೆಯ ಈಡೇರಿಕೆಗಾಗಿ ಕುಲವಂತ್ ಇಲ್ಲಿಯವರೆಗೆ ಬರುವ ಅಗತ್ಯವೇನಿತ್ತು? ಅಪ್ಪ ಸತ್ತ ಮೇಲೆ ಅವನ ಆಸೆಯೂ ಸತ್ತಂತೆ ಎಂದು ಸುಮ್ಮನಿರಬಹುದಿತ್ತಲ್ಲ. ಸಾವಿರಾರು ಮೈಲಿಯಿಂದ ನಮ್ಮನ್ನು ಹುಡುಕಿಕೊಂಡು ಬಂದು, ಆದ ತಪ್ಪಿಗೆ, ತನ್ನ ಅಪ್ಪನ ತಪ್ಪಿಗೆ ಕ್ಷಮೆ ಕೇಳಿದ್ದಾನೆ. ಅಪ್ಪನ ಆಸೆಯಂತೆ ಅವನನ್ನು ಋಣಮುಕ್ತನನ್ನಾಗಿಸಿದ್ದಾನೆ. ಇನ್ನು ನೀನು ಕೊಡಬಹುದಾಗಿದ್ದ ಜಾತಿಯ ಕಾರಣ. ಅದನ್ನು ನೀನು ಇಪ್ಪತ್ತೈದು ವರ್ಷಗಳ ಹಿಂದೆಯೇ ಮೀರಿಬಿಟ್ಟಿದ್ದೀಯ. ಅದರಲ್ಲಿ ನಿನಗೆ ನಂಬಿಕೆಯೂ ಇಲ್ಲ ಎಂದು ನನಗೆ ಗೊತ್ತು. ಅಮ್ಮಾ, ನನಗೆ ಚೆನ್ನಾಗಿ ಗೊತ್ತು, ಈ ಆತಂಕ ನಿಜವಾಗಿ ನಿನ್ನನ್ನು ಕಾಡುತ್ತಿರುವುದು ಈ ಕ್ಷಣಕ್ಕಷ್ಟೆ. ಆದರೆ ನಿನ್ನ ಆತಂಕಕ್ಕೆ ಬೇರೆಯದೇ ಕಾರಣವಿದೆ ಎಂದು ನನಗೆ ಅನ್ನಿಸುತ್ತಿದೆ’ ಎಂದು ದೀರ್ಘವಾಗಿ ಮಾತನಾಡಿದ ಸಾನ್ವಿ ಸುಮ್ಮನೆ ಕುಳಿತು ಬಿಟ್ಟಳು.
’ನಾನು ಪ್ರೀತಿಸಿಯೇ ಮದುವೆಯಾಗಿದ್ದು. ಕೇವಲ ಒಂದೇ ವಾರದಲ್ಲಿ ಪ್ರೀತಿ ಹುಟ್ಟುತ್ತದೆಯೆ? ಈ ಗಂಡಸರ ವಿಷಯ ಅಷ್ಟೊಂದು ಸುಲಭವಲ್ಲ. ಮಗಳೆ, ಯೋಚನೆ ಮಾಡು’ ಎಂದು ಏನೇನೊ ಹಲುಬಿದ ರಜನಿಗೆ ಸಾನ್ವಿಯ ಸಮಾಧಾನ ತಲೆಯಲ್ಲಿ ಹೋಗಲೇ ಇಲ್ಲ. ಆಗಲೇ ಸಾನ್ವಿ, ನಿನಗೆ ಗಂಡಸರ ಬಗ್ಗೆ ಪೂರ್ವಾಗ್ರಹವಿದೆ ಎಂದು ಹೇಳಿ ಅದರಿಂದ ಹೊರಗೆ ಬಂದು ಯೋಚಿಸುವಂತೆ ಹೇಳಿದ್ದು.
ಎಷ್ಟು ಹೊತ್ತು ಹಾಗೇ ಕುಳಿತಿದ್ದಳೊ, ರಜನಿಗೆ ಹೊಟ್ಟೆ ಚುರುಗುಟ್ಟತೊಡಗಿತು. ದಿನಾ ತಾನೇ ತಿಂಡಿ ಮಾಡುತ್ತಿದ್ದುದು. ರಜೆಯ ದಿವಸಗಳಲ್ಲಿ ಮಾತ್ರ ಸಾನ್ವಿ ತಿಂಡಿ ಮಾಡಲು ಜೊತೆ ಸೇರುತ್ತಿದ್ದಳು. ಇಂದು ಸಾನ್ವಿ ಏನು ಮಾಡಿಕೊಂಡಳೊ ಎನ್ನಿಸಿ ಮನಸ್ಸಿಗೆ ಕಸಿವಿಸಿಯಾಯಿತು. ಅಡುಗೆ ಮನೆಗೆ ಹೋಗಿ ನೋಡಿದವಳಿಗೆ ಆಶ್ಚರ್ಯವಾಗುವಂತೆ ಅವಳಿಗಿಷ್ಟವಾದ, ಅವರೇ ಕಾಳು ಹಾಕಿ ಮಾಡಿದ ಉಪ್ಪಿಟ್ಟು ಹಾಟ್ ಬಾಕ್ಸಿನಲ್ಲಿ ಕುಳಿತಿತ್ತು. ಸಾನ್ವಿಗೆ ಉಪ್ಪಿಟ್ಟು ಎಂದರೆ ಅಷ್ಟಕ್ಕಷ್ಟೆ. ಉಪ್ಪಿಟ್ಟು ತಿನ್ನುವುದಿರಲಿ, ತಿನ್ನುವವರನ್ನು ನೋಡಿದರೂ ನನಗಾಗುವುದಿಲ್ಲ ಎನ್ನುತಿದ್ದಳಾದರೂ, ನಾನು ಮಾಡಿದ ದಿನ ಅದೇ ಮಾತುಗಳನ್ನು ಹೇಳುತ್ತಲೇ ಉಪ್ಪಿಟ್ಟು ತಿನ್ನುತ್ತಿದ್ದಳು. ಇಂದು ನನಗಾಗಿ ಉಪ್ಪಿಟ್ಟು ಮಾಡಿದ್ದಾಳೆ ಎನ್ನಿಸಿ, ಒಂದು ಕ್ಷಣ ಮಗಳ ಬಗ್ಗೆ ಹೆಮ್ಮೆಯನ್ನಿಸಿತು. ಒಂದಷ್ಟು ತಿಂಡಿಯನ್ನು ತಟ್ಟೆಗೆ ಹಾಕಿಕೊಂಡು ಬಂದು ಸೋಪಾದಲ್ಲಿ ಕುಳಿತಳು.
ಇಂದು ನನ್ನ ಎದುರಿಗೆ ಇರುವ ಸಮಸ್ಯೆ ಏನು? ಇಂದು ಸಂಜೆಯ ಒಳಗಾಗಿ ಅದಕ್ಕೆ ನಾನು ಕಂಡುಕೊಳ್ಳಬೇಕಾದ ಪರಿಹಾರವೇನು? ಮೊದಲನೆಯ ತುತ್ತು ಮುಗಿಯುವಷರಲ್ಲೇ, ಅವಳಿಗೆ ಕುಲವಂತ್ ಯೋಗ್ಯ ವರನಂತೂ ಹೌದು ಅನ್ನಿಸಿ ಮನಸ್ಸಿನಲ್ಲಿ ಸ್ವಲ್ಪ ಉತ್ಸಾಹ ಮೂಡಿತು. ಇನ್ನೊಂದಿಷ್ಟು ತುತ್ತುಗಳು ಒಳಗಿಳಿಯುವಷ್ಟರಲ್ಲಿ, ನೆನ್ನೆ ಮನಸ್ಸಿನಲ್ಲಿ ಉಂಟಾಗಿದ್ದ, ಆತನ ತಂದೆ ಕಳ್ಳತನ ಮಾಡಿದ್ದ ಎಂಬ ನೆನಪು, ಈಗ ಕಹಿಯೆನ್ನಿಸಲಿಲ್ಲ. ಜೊತೆಗೆ ಅದೊಂದು ಅರ್ಥವಿಲ್ಲದ ಯೋಚನೆ ಅನ್ನಿಸಿ ತನಗೆ ತಾನೇ ನಕ್ಕಳು. ಮೂರನೆಯದು, ಗಂಡಸರ ವಿಚಾರ. ಇದೇ ನಿಜವಾಗಿದ್ದಲ್ಲಿ ನಾನು ಮಗಳಿಗೆ ಮದುವೆಯನ್ನೇ ಮಾಡುವ ಹಾಗಿಲ್ಲ ಎಂಬ ವಿಚಾರ ಮನಸ್ಸಿಗೆ ಹೊಳೆದಿದ್ದೇ ತಡ ಅವಳ ಮನಸ್ಸಿನಲ್ಲಿ ಮುಸುಕಿದ್ದ ಆತಂಕದ ತೆರೆ ಹಿಂದೆ ಸರಿಯಿತು.
ಸಂಜೆ ಮಗಳು ಮನೆಗೆ ಬರುವಷ್ಟರಲ್ಲಿ ಅವಳಿಗಿಷ್ಟವಾದ ಚಿಕನ್ ಬಿರಿಯಾನಿ ಮಾಡಬೇಕು ಅನ್ನಿಸಿತು, ರಜನಿಗೆ. ಆ ಯೋಚನೆ ಮನಸ್ಸಿಗೆ ಬಂದದ್ದೇ ತಡ ಅದಕ್ಕಾಗಿ ಸಿದ್ಧತೆ ನಡೆಸಲು ಸಡಗರಿದಂದಲೇ ಮೇಲೆದ್ದಳು.
No comments:
Post a Comment