Monday, December 29, 2014

ಸಪ್ತರ್ಷಿ ಅಯ್ಯರ್ ಮತ್ತು ವಿದ್ಯಾರ್ಥಿ ಕವಿ

ಆವೊತ್ತು ನಮಗಿದ್ದುದ್ದು ಇಂಗ್ಲಿಷ್ ಪೀರಿಯಡ್. ಇಂಗ್ಲಿಷ್ ಪಾಠ ಹೇಳುವ ಅಧ್ಯಾಪಕರು ರಜಾ ತೆಗೆದುಕೊಂಡಿದ್ದರು. ಆದರೆ ಆಗ ಮಹಾರಾಜಾ ಹೈಸ್ಕೂಲಿಗೆ ಹೆಡ್‌ಮಾಸ್ಟರ್ ಆಗಿದ್ದ ಆರ್.ವಿ. ಕೃಷ್ಣಸ್ವಾಮಿ ಅಯ್ಯರ್ ಅವರು ಬಹಳ ನಿಷ್ಠುರ ನಿಷ್ಠಾವಂತರಾಗಿದ್ದುದರಿಂದ ಅಧ್ಯಾಪಕರು ರಜಾ ತೆಗೆದುಕೊಂಡು ಬರಲಾಗದಿದ್ದರೂ ವಿದ್ಯಾರ್ಥಿಗಳಿಗೆ ಪೀರಿಯಡ್ ನಷ್ಟವಾಗಬಾರದೆಂದು ಬೇರೆ ಯಾರಾದರೂ ಅಧ್ಯಾಪಕರು ಆ ಕರ್ತವ್ಯಕ್ಕೆ ನಿಯಮಿತರಾಗಿರುತ್ತಿದ್ದರು. ಪಾಠ ಇಂಗ್ಲಿಷ್ ಪೀರಿಯಡ್ ಆಗಿದ್ದರೂ ಗಣಿತದ ಅಧ್ಯಾಪಕರಾದರೂ ಚಿಂತೆಯಿಲ್ಲ, ಆ ಪೀರಿಯಡ್ಡನ್ನು ತೆಗೆದುಕೊಳ್ಳಲೇಬೇಕಾಗಿತ್ತು! ನಾವು ಇಂಗ್ಲಿಷ್ ಅಧ್ಯಾಪಕರಿಗಾಗಿ ಕಾಯುತ್ತಾ ಕುಳಿತಿದ್ದೆವು, ಮೊದಲನೆಯ ಪೀರಿಯಡ್ಡಿನಲ್ಲಿ. ಸಾಮಾನ್ಯವಾಗಿ ಮೊದಲನೆಯ ಪೀರಿಯಡ್ಡುಗಳೆಲ್ಲ ರಾಜಭಾಷೆಯಾದ ಇಂಗ್ಲಿಷಿಗೇ ಮೀಸಲಾಗಿರುತ್ತಿತ್ತು. ಕನ್ನಡಕ್ಕೆ ಕೊನೆಕೊನೆಯ ಗಂಟೆಗಳು, ಕನ್ನಡ ಕಾಟಾಚಾರ ಮಾತ್ರದ ವಿಷಯವಾಗಿದ್ದುದರಿಂದ.
ಅಧ್ಯಾಪಕರೇನೊ ಸ್ವಲ್ಪ ತಡವಾಗಿಯಾದರೂ ಬಂದರು. ನೋಡುತ್ತೇವೆ: ಇಂಗ್ಲಿಷ್ ಅಧ್ಯಾಕರಲ್ಲ, ಗಣಿತದ - ಅದರಲ್ಲಿಯೂ ’ಆಲ್ಜೀಬ್ರ’ದ (ಬೀಜಗಣಿತದ) ಅಧ್ಯಾಪಕರು, ಸಪ್ತರ್ಷಿ! ಅವರೂ ಅಯ್ಯರೆ; ಆದರೆ ನಾವು ಅವರನ್ನು ’ಸಪ್ತರ್ಷಿ’ ಎಂದೆ ಕರೆಯುತ್ತಿದ್ದುದು.
ಸಪ್ತರ್ಷಿಯವರು ತುಂಬ ಸಾತ್ವಿಕ ವ್ಯಕ್ತಿ, ಮಹಾ ಸಾಧು, ಇತರ ಅಧ್ಯಾಪಕರನ್ನು ಕಂಡರೆ ನಮಗಾಗುತ್ತಿದ್ದ ಭಯಭಾವನೆ ಅವರ ಮುಂದೆ ಉಂಟಾಗುತ್ತಿರಲಿಲ್ಲ. ಅವರು ತುಸು ಸ್ಥೂಲಕಾಯದ ಜಬಲುಜಬಲು ವ್ಯಕ್ತಿ. ಅವರ ಉಡುಪೂ ಇತರರಂತೆ ’ಟ್ರಿಮ್’ ಆಗಿರುತ್ತಿರಲಿಲ್ಲ. ಅಂಚಿಲ್ಲದ ಒಂದು ಬಿಳಿ ರುಮಾಲು ಸುತ್ತಿರುತ್ತಿದ್ದರು. ಅದೂ ಖಾದಿಯದೇ ಇರಬೇಕು. ಒಂದು ಖಾದಿಬಟ್ಟೆಯ ಬಿಳಿಕೋಟು; ಅಂಥಾದ್ದೆ ಬಿಳಿ ಪಂಚೆ ಕಚ್ಚೆ ಹಾಕಿರುತ್ತಿದ್ದರು. ವಯಸ್ಸು ಐವತ್ತರ ಆಚೆ ಈಚೆ ಇರಬಹುದು. ನಡೆ, ನುಡಿ, ಚಲನ ವಲನ, ದನಿ ಎಲ್ಲದರಲ್ಲಿಯೂ ಅತ್ಯಂತ ಸಾವಧಾನದ ಭಂಗಿ. ಕೆಲವರು ಅವರಿಗೆ ಹಿಂದೊಮ್ಮೆ ತಲೆ ಕೆಟ್ಟಿತ್ತೆಂದು ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ಕೆಲವರು ಅವರಿಗೆ ’ಈಗಲೂ ಅಷ್ಟಕಷ್ಟೆ!’ ಎಂದೂ ಸೂಚಿಸುತ್ತಿದ್ದರು. ಅದಕ್ಕೆಲ್ಲ ಕಾರಣ ಅವರ ಆಧ್ಯಾತ್ಮಿಕ ಧ್ಯಾನಶೀಲತೆ ಎಂದೇ ನನ್ನ ಭಾವನೆ. ಅವರು ಸಿಟ್ಟುಗೊಂಡದ್ದನ್ನಾಗಲಿ ಮುಖ ಸಿಂಡರಿಸಿದ್ದನ್ನಾಗಲಿ ನಾನು ಕಂಡಿರಲಿಲ್ಲ. ಯಾವಾಗಲೂ ಮುಗುಳು ನಗುಮೊಗದಿಂದಲೆ ಮಾತಾಡುತ್ತಿದ್ದರು. ಪಾಠ ಹೇಳುವಾಗಲೂ! ಅವರು ತೆಗೆದುಕೊಳ್ಳುತ್ತದ್ದುದ್ದು, ಬೀಜಗಣಿತ. ನನಗೇನು ಅಂತಹ ಹೃದಯಪ್ರಿಯ ವಿಷಯವಾಗಿರಲಿಲ್ಲ ಅದು. ಆದರೂ ಅವರ ಪೀರಿಯಡ್ಡಿನ್ನು ಸಂತೋಷದಿಂದ ಎದುರುನೋಡುತ್ತಿದ್ದರು ವಿದ್ಯಾರ್ಥಿಗಳು. ಬೀಜಗಣಿತದಂತಹ ಅಪ್ರಿಯ ವಿಷಯವೂ ಪ್ರಿಯವಾಗುತ್ತಿತ್ತು ಸಪ್ತರ್ಷಿಷಗಳು ಬೋಧಿಸಿದಾಗ.
ಅವರು ’ಆಲ್ಜೀಬ್ರ’ ಪಾಠಕ್ಕೇ ಶುರುಮಾಡುತ್ತಾರೆ ಎಂದು ಭಾವಿಸಿದ್ದ ನಮಗೆ ಅಚ್ಚರಿಯಾಯಿತು ’ The Nature of Poetry’ (’ಕಾವ್ಯ ಸ್ವರೂಪ’ ಅಥವಾ ಕವಿತೆ ಎಂದರೇನು?) ಎಂಬ ವಿಷಯದ ಮೇಲೆ ಪ್ರಬಂಧ ಬರೆಯಿರಿ ಎಂದು ಅವರು ಹೇಳಿದಾಗ. ಪ್ರಬಂಧವನ್ನು ಇಂಗ್ಲಿಷಿನಲ್ಲಿಯೆ ಬರೆಯಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿರಲಿಲ್ಲ. ಆಗ ಕನ್ನಡ ಇಂಗ್ಲಿಷಿನ ಸಿಂಹಾಸನದ ಕೆಳಗೆ ಕಾಲೊರಸಾಗಿತ್ತಷ್ಟೆ! ಆ ಭಾಷೆಯಲ್ಲಿ ಪ್ರಬಂಧ ಬರೆಯಿಸಿಕೊಳ್ಳುವಷ್ಟು ಗೌರವ ಅದಕ್ಕೆಲ್ಲಿಂದ ಬರಬೇಕು, ಆ ವರ್ನಾಕ್ಯುಲರ್‌ಗೆ, ಅಂದರೆ, ಗುಲಾಂಭಾಷೆಗೆ?
ವಿದ್ಯಾರ್ಥಿಗಳಲ್ಲಿ ಪ್ರಬಂಧ ಬರೆಯುವಂತೆ ಎಲ್ಲರೂ ನಟಿಸುತ್ತಿದ್ದರು. ಆದರೆ ಕೆಲವರೇ ಮಾತ್ರ ನಿಜವಾಗಿಯೂ ಬರೆಯಲು ಪ್ರಯತ್ನಿಸುತ್ತಿದ್ದವರು: ಅನೇಕರಿಗೆ ವಿಷಯವೇ ಅಗಮ್ಯವಾಗಿತ್ತು! ಅಂತೂ ತಮ್ಮ ಕೈಸೇರಿದ ಕೆಲವನ್ನು ಸಪ್ತರ್ಷಿಗಳು ವೇದಿಕೆಯ ಮೇಲಿದ್ದ ಮೇಜಿನ ಹಿಂದಿದ್ದ ಕುರ್ಚಿಯ ಮೇಲೆ ಕುಳಿತು ಪರಿಶೀಲಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಎದ್ದು ನಿಂತರು. ಮುಖದ ಮೇಲೆ ಏನೊ ಆನಂದದ ಮಂದಹಾಸ. ಉತ್ಸಾಹದ ಧ್ವನಿಯಲ್ಲಿ ತರಗತಿಯನ್ನು ಸಂಬೋಧಿಸಿ ’ಮಿತ್ರರೆ, ವಿದ್ಯಾರ್ಥಿಗಳು ಬರೆದಿರುವ ಪ್ರಬಂಧಗಳಲ್ಲಿ ಒಂದನ್ನು ಮಾದರಿಯಾಗಿ ನಿಮಗೆ ಓದುತ್ತೇನೆ. ಕಿವಿಗೊಟ್ಟು ಆಲಿಸಿ’ ಎಂದು ಹೇಳಿ ಭಾವಪೂರ್ಣವಾಗಿ ಓದಲುತೊಡಗಿದರು. ನೋಡುತ್ತೇನೆ: ಅದು ನಾನು ಬರೆದದ್ದೆ: From joy we come, in joy we live, towards joy we move, and into joy we merge in end? -so sings the sage of the upanishads ಎಂದು ಪ್ರಾರಂಭಿಸಿದ್ದೆ ಆ ನನ್ನ ಪ್ರಬಂಧವನ್ನು.
ಸಪ್ತರ್ಷಿಗಳು ಇಡೀ ಪ್ರಬಂಧವನ್ನು ಗಂಭೀರವಾಗಿ ಪೂರ್ತಿಯಾಗಿ ಓದಿದರು. ಅವರ ಮುಖಭಂಗಿಯಲ್ಲಿ ತಾವು ಮಾಡುತ್ತಿರುವ ಕಾರ್ಯದ ಪವಿತ್ರತೆಯ ಅರಿವಿನಿಂದ ಮೂಡಿದುದೋ ಎಂಬಂತಹ ಗಾಂಭೀರ್ಯವಿತ್ತು. ಅವರ ಧ್ವನಿಯಲ್ಲಿ ಗೌರವ ಭಾವನೆ ಕಡಲಾಡುತ್ತಿತ್ತು. ಅವರ ಚೇತನವೆಲ್ಲ ಏನೊ ಒಂದು ಧನ್ಯತೆಯನ್ನು ಅನುಭಾವಿಸುವಂತಿತ್ತು. ಕ್ಲಾಸಿಗೆ ಕ್ಲಾಸೇ, ವಿಷಯದ ಅರಿವಾಗಲಿ ಬಿಡಲಿ, ಸೂಜಿಬಿದ್ದರೂ ಸದ್ದಾಗುವಂತಹ ನಿಃಶಬ್ದತೆಯಿಂದ ಕಿವಿನಿಮಿರಿ ಆಲಿಸಿತ್ತು. ಓದು ಪೂರೈಸಲು ಕೊಟಡಿಯೆ ಸಂತೃಪ್ತಿಯಿಂದೆಂಬಂತೆ ಸುಯ್ದಂತಾಯ್ತು. ಸಪ್ತರ್ಷಿಯವರು ಹೃದಯ ತುಂಬಿ ತಮಗಾದ ಆನಂದವನ್ನು ಪ್ರಶಂಸೆಯ ಅಮೃತಧಾರೆಯಲ್ಲಿ ಎರೆದುಬಿಟ್ಟರು. ಎಂದೆಂದಿಗೂ ಮರೆಯಲಾಗದಿದ್ದ ಒಂದೆರಡು ವಾಕ್ಯಗಳು ಮಾತ್ರ ನೆನಪಿಗೆ ಬರುತ್ತಿವೆ: Friends, this is a great day, we have spent an hour of blessedness! (ಮಿತ್ರರೆ, ಇದೊಂದು ಮಹಾ ಸುದಿನ. ನಾವು ಕಳೆದ ಈ ಒಂದು ಘಂಟೆ ಧನ್ಯ!)
ಇತರ ಪ್ರಬಂಧಗಳನ್ನು ಅವರವರಿಗೆ ಹಿಂದಕ್ಕೆ ಕೊಟ್ಟಂತೆ ನನ್ನದನ್ನು ನನಗೆ ಹಿಂತಿರುಗಿಸಲಿಲ್ಲ. ಅದನ್ನವರು ಜೇಬಿನಲ್ಲಿಟ್ಟುಕೊಂಡು ಸಮಯ ಸಂದರ್ಭ ಒದಗಿದಂತೆಲ್ಲ ಅಧ್ಯಾಪಕವರ್ಗದವರಿಗೂ ತಮ್ಮ ನಾಗರಿಕಮಿತ್ರರಿಗೂ ಓದಿ ಹೇಳುತ್ತಿದ್ದರೆಂದು ಎಷ್ಟೋ ಕಾಲದ ಮೇಲೆ ನನಗೆ ನಾ. ಕಸ್ತೂರಿಯವರು ಹೇಳಿದ ಜ್ಞಾಪಕ.
***
ಕೆಲವರಾದರೂ ಊಹಿಸಿದಂತೆ, ಇದು ಕುವೆಂಪು ಅವರ ಬದುಕಿನಲ್ಲಿ ನಡೆದ ಒಂದು ಘಟನೆ. ಮುಂದಿನ ಜನವರಿ ೨೨ಕ್ಕೆ ಈ ಘಟನೆ ನಡೆದು ೯೦ ವರ್ಷಗಳಾಗಲಿವೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬದಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಘಟನೆ. ಒಇದು ನಡೆದಾಗ ಕುವೆಂಪು ಅವರಿಗೆ ಕೇವಲ ಹತ್ತೊಂಬೊತ್ತು ವರ್ಷಗಳು. ಅಂದಿನ ದಿನಚರಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರೂ, ’ಸಪ್ತರ್ಷಿ ಅಯ್ಯರ್ ವಿಚಾರವಾಗಿಯೂ ನಾಲ್ಕು ಮಾತು ವಿವರವಾಗಿ ಬರೆಯದಿದ್ದರೆ ’ಅಸಾಧಾರಣ’ವಾದುದನ್ನು ’ಯಕಃಶ್ಚಿತ’ಗೊಳಿಸಿದ ಔದಾಸೀನ್ಯದ ಅಪರಾಧವೆಸಗಿದಂತಾಗುತ್ತದೆ.’ ಎಂದು ಈ ಘಟನೆಯನ್ನು ’ನೆನಪಿನ ದೋಣಿಯಲ್ಲಿ’ ವಿವರವಾಗಿ ದಾಖಲಿಸಿದ್ದಾರೆ. ಕುವೆಂಪು ಅವರ ೧೧೧ನೆಯ ಜನ್ಮದಿನೋತ್ಸವದಲ್ಲಿ ಕವಿಯೊಂದಿಗೆ ಕವಿಗುರುವನ್ನು ಸ್ಮರಿಸುವುದು ಸಂದರ್ಭೋಚಿತವೇ ಆಗಿದೆ.

-ಡಾ. ಬಿ.ಆರ್. ಸತ್ಯನಾರಾಯಣ
ಗ್ರಂಥಪಾಲಕರು, ಸುರಾನ ಕಾಲೇಜು
ಸೌತ್ ಎಂಡ್ ರಸ್ತೆ, ಬಸವನಗುಡಿ
ಬೆಂಗಳೂರು -04
9535570748

No comments: