ಇಂದು ಪತ್ರಕೆಯೊಂದರಲ್ಲಿ ಈ ಸುದ್ದಿಯನ್ನು ಓದಿದಾಗ, ಸುಮಾರು ಹನ್ನೆರಡು ವರ್ಷಗಳ ಹಿಂದೆ ನಾನು ಬರೆದಿದ್ದ ಒಂದು ಸಣ್ಣ ಕಥೆ ನೆನಪಾಯಿತು. ಅದು thatskannada.com ನಲ್ಲಿ ಪ್ರಕಟವಾಗಿತ್ತು. ಎಂಥಾ ಕೊಇನ್ಸಿಡೆನ್ಸ್!!!
ಒಮ್ಮೆ ಓದಿ ನೋಡಿ.
ಬಿರುಬೇಸಿಗೆಯ ಮಧ್ಯಾಹ್ನದ ಬಿಸಿಲಿನಿಂದಾಗಿ ನಿದ್ದೆಯೂ ಬಾರದೆ ಬೆವರಿನಿಂದ ತೊಯ್ಯುತ್ತಾ ಛಾವಣಿಯನ್ನು ದಿಟ್ಟಿಸುತ್ತಾ ಬಿದ್ದುಕೊಂಡಿದ್ದ ರಂಗರಾಜನಿಗೆ ತನ್ನ ಯೋಚನಾ ಲಹರಿ ದಿಕ್ಕು ತಪ್ಪಿದ್ದು ಗೊತ್ತಾಗಿ ಹಣೆ ತೀಡಿಕೊಂಡ. ಎರಡು ವರ್ಷದ ಹಿಂದೆ ವಿಶ್ವಕನ್ನಡ ಪತ್ರಿಕೆ ಪ್ರಾರಂಭವಾಗಿ ರಂಗರಾಜ ಆ ತಾಲ್ಲೋಕಿನ ಅಧಿಕೃತ ವರದಿಗಾರನಾಗಿ ನೇಮಕಗೊಂಡಾಗ ಖುಷಿಯಿಂದ ಕುಣಿದಿದ್ದ. ಪತ್ರಕರ್ತನಾಗಬೇಕೆಂಬ ಮಹದಾಸೆಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿಕೊಂಡು ಮೂರ್‍ನಾಲ್ಕು ವರ್ಷ ಕೆಲಸವಿಲ್ಲದೆ ಅಲೆದುಕೊಂಡಿದ್ದವನಿಗೆ ರಾಜ್ಯ ಮಟ್ಟದ ಪತ್ರಿಕೆಯೊಂದಕ್ಕೆ ವರದಿಗಾರನಾಗಿ ನೇಮಕಗೊಂಡಾಗ ಸ್ವರ್ಗ ಆತನ ಮೂಗಿನ ನೇರಕ್ಕೇ ಇಳಿದಿತ್ತು. ಪ್ರಾರಂಭದ ನಾಲ್ಕೈದು ತಿಂಗಳು ಚೆನ್ನಾಗಿಯೇ ನಡೆದಿತ್ತು. ತಾನು ಬರೆದ ಸುದ್ದಿ ಬಂದಾಗ ಸ್ನೇಹಿತರ ಬಳಿ ಹೇಳಿಕೊಂಡು ಹೆಮ್ಮೆಪಡುತ್ತಿದ್ದ. ಕೆಲವೊಮ್ಮೆ ಮೊದಲೇ ಸ್ನೇಹಿತರ ಬಳಿ ತಾನು ಬರೆದ ಸುದ್ದಿ ಬರುತ್ತದೆ ಎಂದು ಜಂಭಪಟ್ಟೂ ಬರದೇ ಇದ್ದಾಗ ಮುಖ್ಯ ಕಛೇರಿಯ ಸುದ್ದಿ ಸಂಪಾದಕನನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ‘ಅವರು ಗ್ರಾಮೀಣ ಪ್ರದೇಶದವರನ್ನು ನೆಗ್ಲೆಕ್ಟ್ ಮಾಡ್ತಿದಾರೆ. ಅವರು ಇಂಟರ್‌ನೆಟ್ಟಲ್ಲಿ ಸಿಗೊ ಸುದ್ದಿಗಳನ್ನೇ ಕಟ್ ಅಂಡ್ ಪೇಸ್ಟ್ ಮಾಡಿ ಪ್ರಿಂಟ್ ಮಾಡ್ತಾರೆ’ ಎಂದು ತನಗೆ ಇಂಟರ್‌ನೆಟ್ ಬಗ್ಗೆಯೂ ಗೊತ್ತು ಎಂಬುದನ್ನು ಪರೋಕ್ಷವಾಗಿ ಪ್ರಸ್ಥಾಪಿಸುತ್ತಿದ್ದ.
ಮೊದಲೇ ಬೋಳೆ ಸ್ವಭಾವದವನಾಗಿದ್ದ ರಂಗರಾಜನಿಗೆ ದಿನಕಳೆದಂತೆ ಪತ್ರಿಕೆಯ ಸುದ್ದಿ ಸಂಪಾದಕರುಗಳ ಮೇಲೆ ಸಿಟ್ಟು ಹೆಚ್ಚಾಗತೊಡಗಿತು. ಬೇಕೆಂದೇ ನಾನು ಕಳುಹಿಸಿದ ಸುದ್ದಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂಬ ಭಯಂಕರ ಅನುಮಾನ ಬಂದು, ತಾನು ಕಳುಹಿಸುತ್ತಿರುವ ಸುದ್ದಿಯ ಪ್ರಾಮುಖ್ಯತೆಯ ಬಗ್ಗೆಯಾಗಲೀ, ಅದರ ಗುಣಮಟ್ಟದ ಬಗ್ಗೆಯಾಗಲೀ ಚಿಂತಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಟ್ಟಿದ್ದ.
* * * * * * * * *
ವಿಶ್ವಕನ್ನಡ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಬೆಂಗಳೂರಿನಲ್ಲಿ ನಡೆದಾಗ, ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸುವ ಬಗ್ಗೆ ಒಂದು ವಿಚಾರಸಂಕಿರಣವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಎಲ್ಲಾ ತಾಲ್ಲೋಕುಗಳ ಪತ್ರಿಕಾ ಹಂಚಿಕೆದಾರರು ಭಾಗವಹಿಸಿದ್ದರು. ರಂಗರಾಜನ ತಾಲ್ಲೋಕಿನಿಂದ ಹಂಚಿಕೆದಾರನಾದ ಭರಮಪ್ಪ ಭಾಗವಹಿಸಿದ್ದ. ರಂಗರಾಜನಿಗೂ ಭಾಗವಹಿಸುವ ಆಸೆಯಿತ್ತಾದರೂ, ಟಿ.ಎ., ಡಿ.ಎ. ಕೇವಲ ಏಜಂಟರಿಗೆ ಮೀಸಲಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಆಯಾಯ ಪ್ರದೇಶದ ಸುದ್ದಿಗಳಿಗೆ ಹೆಚ್ಚಿನ ಆಧ್ಯತೆ ಕೊಡುವುದರಿಂದ ಗ್ರಾಮ ಮಟ್ಟದಲ್ಲಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಬಹುದು ಎಂಬುದು ವಿಚಾರ ಸಂಕಿರಣದ ನಂತರ ಮೂಡಿದ ಒಮ್ಮತಾಭಿಪ್ರಾಯ. ಆದರೆ ಪಿಕಲಾಟಕ್ಕೆ ಬಂದಿದ್ದು ಮಾತ್ರ ರಂಗರಾಜನಿಗೆ.
ಅದು ಆಗಿದ್ದು ಹೀಗೆ. ಪತ್ರಿಕಾ ಏಜೆಂಟರ ಸಮಾವೇಶ ಮುಗಿಸಿಕೊಂಡು ಬಂದ ಭರಮಪ್ಪ ರಂಗರಾಜನಿಗೆ “ಸ್ವಾಮಿ ನೀವು ವಿಶ್ವಕರ್ನಾಟಕ ಪತ್ರಿಕೆಗೆ ನಮ್ಮ ತಾಲ್ಲೂಕಿನ ಅಧಿಕೃತ ವರದಿಗಾರರಾಗಿದ್ದೀರ. ಆದರೆ ನೀವು ನಮ್ಮ ಹಳ್ಳಿಗಳ ಯಾವುದೇ ಸುದ್ದಿಯನ್ನು ವರದಿ ಮಾಡುತ್ತಿಲ್ಲ. ಹೀಗಾದರೆ ಪತ್ರಿಕೆಗಳನ್ನು ಮಾರುವುದು ಹೇಗೆ? ನಿಮಗೆ ಗೊತ್ತಾ? ಅತ್ಯಂತ ಕಡಿಮೆ ಪತ್ರಿಕೆ ಮಾರುವ ತಾಲ್ಲೂಕುಗಳಲ್ಲಿ ನಮ್ಮದೇ ಮೂರನೆಯದು. ನೀವು ಸ್ವಲ್ಪ ಗಮನ ಕೊಟ್ಟಿರಾದರೆ, ನಮ್ಮ ಊರಿನ ಸುದ್ದಿ ಬಂದಿದೆ ಎಂದು ಜನ ಪತ್ರಿಕೆ ಕೊಂಡು ಓದುತ್ತಾರೆ. ಅಲ್ಲವೇ?" ಎಂದು ಆಗಾಗ ಪೀಡಿಸುತ್ತಿದ್ದ. ಒಬ್ಬನೇ ಇದ್ದಾಗ ಭರಮಪ್ಪ ಹೀಗೆಂದಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಆಸಾಮಿ ಇವನಲ್ಲ. ಸಿಕ್ಕ ಸಿಕ್ಕವರ ಎದುರಿಗೆಲ್ಲಾ ಭರಮಪ್ಪ ಪೀಡಿಸಲಾರಂಭಿಸಿದಾಗ ರಂಗರಾಜನೂ ಏನಾದರೂ ಸುದ್ದಿಗಳನ್ನು ಕಳುಹಿಸಲೇಬೇಕೆಂದು ತಲೆಕೆಡಿಸಿಕೊಳ್ಳತೊಡಗಿದ.
* * * * * * * * *
ಈ ವರ್ಷವೂ ಮುಂಗಾರು ಕೈಕೊಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದವು. ಬಿಸಿಲಿನ ಬೇಗೆ ಹೆಚ್ಚಾದಂತೆ ರಂಗರಾಜನಿಗೆ ಸುದ್ದಿಯ ಬರವೂ ಹೆಚ್ಚುತ್ತಿತ್ತು. “ಛೆ, ಈ ಹಳ್ಳಿಗಳಲ್ಲಿ ಜನ ಜೀವನ ಸತ್ತು ಹೋಗಿದೆ. ಇಲ್ಲಿ ಯಾರು ಬಡಿದಾಡಿ ಸಾಯುವುದೂ ಇಲ್ಲ. ಒಂದು ಗಲಾಟೆ ಇಲ್ಲ. ಯಾವ ಕ್ರಾಂತಿಯೂ ಇಲ್ಲ. ಒಟ್ಟಾರೆಯಾಗಿ ಇಡೀ ವ್ಯವಸ್ಥೆಯಲ್ಲಿ ಮೂವ್‌ಮೆಂಟ್ ಅನ್ನೋದು ಸತ್ತು ಹೋಗಿದೆ. ಬರೆದರೆ ಅವನ ಮಗನಿಗೆ ಇವನ ಮಗಳ ಮದುವೆಯಾಯಿತು. ಆತನ ಕೋಳಿಯನ್ನು ನರಿ ಹಿಡಿಯಿತು ಇಂತಹ ಸುದ್ದಿಗಳನ್ನೇ ಬರೆಯಬೇಕು. ಇಲ್ಲಿ ಕದ್ದು ಬಸುರಾದರೂ ಗುಟ್ಟು ಬಿಟ್ಟುಕೊಡಲ್ಲ. ಅದೇ ಸಿಟಿಯಲ್ಲಾದರೆ ಬಸುರಿಯಾದ ಹುಡುಗಿಯೇ ಸ್ಟೇಶನ್ನಿಗೆ ಹೋಗಿ ಕಂಪ್ಲೇಂಟ್ ಕೊಡುತ್ತಾಳೆ. ಸಿಟಿಯವರು ಸುದ್ದಿ ಮಾಡದೆ ಏನು ಮಾಡುತ್ತಾರೆ" ಎಂದು ತನ್ನ ಅಸಹನೆಯ ನಂಜನ್ನು ತಾನೆ ತಿನ್ನುತ್ತಿದ್ದ.
* * * * * * * * *
ಹೀಗಿರುವಾಗ, ಮೇ ತಿಂಗಳ ಕೊನೆಯ ಒಂದು ದಿನ ಊರಿನಲ್ಲಿ ಹರಡಿದ್ದ ಒಂದು ಸುದ್ದಿ ರಂಗರಾಜನ ಗಮನ ಸೆಳೆಯಿತು.
ದಿನ ಬೆಳಿಗ್ಗೆ ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದ ಜಯರಾಮ ಎಂಬ ಹುಡುಗ ಹತ್ತನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ಆತನಿಗೆ ಶೇಕಡಾ ತೊಂಬತ್ಮೂರು ಅಂಕಗಳು ಬಂದಿದ್ದವು. ಜಯರಾಮನ ತಂದೆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಓದಿಸುತ್ತಿದ್ದರು. ಇದೇ ಸುದ್ದಿ ಸುತ್ತಮುತ್ತಲ ಊರವರ ಬಾಯಲ್ಲೂ ಎಲೆ ಅಡಿಕೆಯಾಗಿ ಜಿಗಿಯಲ್ಪಡುತ್ತಿದ್ದರೆ, ರಂಗರಾಜನಿಗೆ ಖಚಿತವಾಗಿ ಇದನ್ನು ಸುದ್ದಿ ಮಾಡಬಹುದು ಎನ್ನಿಸಿತ್ತು. ತಕ್ಷಣ ಎದ್ದು ಪೆನ್ನು ಪ್ಯಾಡು ತಗೆದುಕೊಂಡು ನಿಜವಾದ ಪತ್ರಕರ್ತನ ಗತ್ತಿನಲ್ಲಿ ಸ್ಕೂಲಿನ ಕಡೆಗೆ ನಡೆಯತೊಡಗಿದ.
“ಅವನವ್ವನ್ ಇದು ಹೇಗೆ ಸುದ್ದಿಯಾಗಲ್ಲವೊ ನಾನು ನೋಡ್ತಿನಿ. ಬರಿ ಸುದ್ದಿಯಾದರೆ ಸಾಲದು. ಭರ್ಜರಿ ಸುದ್ದೀನೆ ಮಾಡಬೇಕು, ಸಿಟಿಯವರ ತಲೆ ಮೇಲೆ ಹೊಡೆದ ಹಾಗೆ" ಎಂದುಕೊಂಡ. ಜಯರಾಮನ ಕಷ್ಟವನ್ನು ಕಣ್ಣಿಗೆ ಕಟ್ಟಿದಂತೆ ಬರೆದು ಹೆಸರು ಮಾಡಬೇಕು ಅಂದುಕೊಂಡು ಸ್ಕೂಲಿಗೆ ಬಂದಾಗ ಹೆಡ್ಮಾಸ್ಟರು ಕಿವಿಯವರೆಗೂ ಬಾಯಿ ತೆರೆದು ಗುಡುಗನ್ನೂ ನಾಚಿಸುವಂತೆ ನಗುತ್ತಾ ಸ್ವಾಗತಿಸಿ “ನೀವು ಬಂದೇ ಬರ್ತೀರ ಅಂತ ನಾನು ಕಾಯ್ತಿದ್ದೆ. ಬನ್ನಿ" ಎಂದರು.
“ಸಾರ್, ಜಯರಾಮನ ಬಗ್ಗೆ ಪೇಪರ್‍ನಲ್ಲಿ ಬರೀತಾ ಇದ್ದೀನಿ. ಅವನದೊಂದು ಮಾರ್ಕ್ಸ್ ಲಿಸ್ಟ್ ಅಟೆಸ್ಟ್ ಮಾಡಿ ಕೊಡಿ" ಎಂದು ನೇರವಾಗಿ ಕೇಳಿದ ರಂಗರಾಜನ ಮಾತಿನಿಂದ ಪೆಚ್ಚಾದರೂ ತೋರಿಸಿಕೊಳ್ಳದ ಹೆಡ್ಮಾಸ್ಟರು “ಬರೀರಿ ಬರೀರಿ. ನಮ್ಮ ಸ್ಕೂಲಿನ ಹುಡುಗ ಬಡತನದಲ್ಲೂ ಕಷ್ಟಪಟ್ಟು ಓದಿದಾನೆ. ನಾವೂ ಬಹಳ ಮುತುವರ್ಜಿ ವಹಿಸಿ ಪಾಠ ಮಾಡಿದಿವಿ. ಅದನ್ನು ಬರೀರಿ" ಎಂದು ಹಲ್ಲು ಗಿಂಜಿದರು. ರಂಗರಾಜ ಮನಸ್ಸಿನಲ್ಲೇ ‘ಕಳ್ಳ ನನ್ಮಗ. ಇವನ ಬಗ್ಗೆ ಬರೀಬೇಕಂತೆ’ ಎಂದುಕೊಂಡ. ಜಯರಾಮನ ಅಂಕಗಳನ್ನು ಬಿಳಿಹಾಳೆಯ ಮೇಲೆ ಬರೆಯುತ್ತಾ “ಪತ್ರಕರ್ತರೆ ನಂದು ತಿಂಡಿ ಆಗಿಲ್ಲ. ಹಾಗೆ ಸಿಟಿ ಕಡೆ ಹೋಗಿ ತಿಂಡಿ ಕಾಫಿ ಮಾಡೋಣ. ನಾನು ನಿಮ್ಮ ಜೊತೆ ಬರತೀನಿ" ಎಂದ ಹೆಡ್ಮಾಸ್ಟರ ಮಾತಿನಿಂದ ಖುಷಿಯಾದ ರಂಗರಾಜ “ಆಗಲಿ ಸಾರ್. ನಿಮ್ಮ ಸ್ಕೂಲಿಗೆ ಡಿಸ್ಟಿಂಕ್ಷನ್ ಬಂದಿರೊ ಖುಷಿಯಲ್ಲಿ ನೀವು ಸ್ವೀಟು ಕೊಡಿಸ್ಬೇಕು" ಎಂದ. “ಆಗಲಿ, ಆಗಲಿ" ಎನ್ನುತ್ತ, ಬರೆದು ಮುಗಿಸಿ ಸಹಿ ಮಾಡುವಾಗ ತಮ್ಮ ಹೆಸರು ಸ್ಪಷ್ಟವಾಗಿ ಕಾಣುವಂತೆ ದಪ್ಪವಾಗಿ ಮಾಡಿ ಸೀಲು ಹಾಕಿ ಕೊಟ್ಟರು.
ತಾವು ಎಷ್ಟು ಕಷ್ಟಪಟ್ಟು ಪಾಠ ಮಾಡುತ್ತೇವೆ. ನಮ್ಮ ಶಾಲೆಗೆ ಡಿಸ್ಟಿಂಕ್ಷನ್ ಬರಲು ಪಟ್ಟ ಕಷ್ಟಗಳೇನು ಹೀಗೆ ಮುಂತಾದವುಗಳನ್ನು ವರ್ಣರಂಜಿತವಾಗಿ ಹೇಳುತ್ತಾ ಹೆಡ್ಮಾಸ್ಟರು ನಡೆಯುತ್ತಿದ್ದರೆ ‘ಹಾಂ, ಹೂಂ, ಹೌದು’ ಹೀಗೆ ಪ್ರತಿಕ್ರಿಯಿಸುತ್ತಾ ಸಾಗುತ್ತಿದ್ದ ರಂಗರಾಜನಿಗೆ, ಅವರು ತಿಂಡಿ ಕೊಡಿಸುತ್ತಾರೆ ಎಂದು ನೆನಪಾದಾಗ ಮಾತ್ರ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾ ನಡೆಯುತ್ತಿದ್ದ. ಆದರೆ ಅವನ ಮನಸ್ಸಿನಲ್ಲಿ ಯೋಚಿಸುತ್ತಿದ್ದುದೇ ಬೇರೆ. ಸುದ್ದಿಯನ್ನು ಬರೆಯುವಾಗ ಸಂಪಾದಕರುಗಳು ಮೆಚ್ಚುವಂತೆ ಬರೆಯಬೇಕು ಎನ್ನಿಸಿ, ಅದು ಹೇಗೆ ಎಂದು ತಲೆ ಕೆಡಿಸಿಕೊಂಡ. ಹೆಡ್ಮಾಸ್ಟರು ಕೊಡಿಸಿದ ಮಸಾಲೆ ದೋಸೆ ತಿಂದು ಕಾಫಿ ಕುಡಿಯುವಾಗ, ‘ಜಯರಾಮ ಎಲ್ಲಾ ಪತ್ರಿಕೆಗಳನ್ನು ಹಂಚುತ್ತಿದ್ದ. ಆದರೆ ನನ್ನ ಸುದ್ದಿಯಲ್ಲಿ ಜಯರಾಮ ವಿಶ್ವಕನ್ನಡ ಪತ್ರಿಕೆಯನ್ನು ಹಂಚುತ್ತಿದ್ದ ಹುಡುಗ ಎಂಬುದನ್ನು ಹೈಲೈಟ್ ಮಾಡಿ ಬರೆಯಬೇಕು. ಅದರಿಂದ ಪತ್ರಿಕೆಯವರಿಗೂ ಖುಷಿಯಾಗುತ್ತದೆ’ ಅಂದುಕೊಂಡ.
* * * * * * * * *
ಹೆಡ್ಮಾಸ್ಟರಿಗೆ ಗುಡ್‌ಬೈ ಹೇಳಿ ಮನೆಯ ಕಡೆ ತಿರುಗಿದವನಿಗೆ ಕಂಡಿದ್ದು ವಿಶ್ವಕನ್ನಡ ಪತ್ರಿಕೆಯ ಹಂಚಿಕೆದಾರ ಭರಮಪ್ಪ. “ಹೋ ಪತ್ರಕರ್ತ ರಂಗರಾಜ ಅವರು. ಜಯರಾಮನ ಬಗ್ಗೆ ಪತ್ರಿಕೇಲಿ ಒಳ್ಳೆ ಸುದ್ದಿ ಮಾಡಬೇಕಂತೀದಿರಂತೆ. ಮಾಡಿ ಮಾಡಿ. ಸಂತೋಷ ಅಲ್ಲವೇ? ನಮ್ಮೂರ ಹುಡುಗ. ನನ್ನ ಬಳಿಯೇ ಪೇಪರ್ ತಗೊಂಡು ಮನೆಮನೆಗೆ ಹಾಕುತ್ತಿದ್ದ. ಅಂದ ಹಾಗೆ ಅವನನ್ನು ಒಂದು ಸಾರಿ ಬೇಟಿ ಮಾಡ್ಬಿಡಿ. ಅವನದೊಂದು ಫೋಟೊ ಬೇಕಾದರೆ ಕೊಡಿಸ್ತಿನಿ ಬನ್ನಿ" ಎಂದರು. ಭರಮಪ್ಪನ ಸಲಹೆ ರಂಗರಾಜನಿಗೂ ಸರಿಯೆನ್ನಿಸಿತು. “ಅಷ್ಟು ಮಾಡಿ. ಇನ್ನು ಒಳ್ಳೇದೆ ಆಯಿತು" ಎಂದ.
ದಾರಿಯಲ್ಲಿ ನಡೆಯುತ್ತಿದ್ದಾಗ ಭರಮಪ್ಪ ಏನೋ ಹೇಳಲು ತವಕಿಸುತ್ತಿದ್ದ. ಇದನ್ನರಿತ ರಂಗರಾಜ “ಭರಮಪ್ಪನವರೆ ಹುಡುಗ ಹೇಗೆ?" ಎಂದು ಮಾತಿಗಾರಂಭಿಸಿದ. “ಹುಡುಗ ಒಳ್ಳೆಯವನೇ. ಪಾಪ ಬಡವ. ಇಷ್ಟೊಂದು ಮಾರ್ಕ್ಸ್ ತಗೀತಾನೆ ಅಂದಿದ್ದರೆ ನಾವು ಏನಾದರು ಸಹಾಯ ಮಾಡಬಹುದಿತ್ತು ಅಲ್ಲವಾ? ಆದರೂ ನೀನು ಸುದ್ದಿ ಮಾಡುವಾಗ ನಾವು ಆಗಾಗ ಸಹಾಯ ಮಾಡ್ತಿದ್ದಿವಿ ಅಂತ ಬರೆದು, ನಮ್ಮಿಬ್ಬರ ಹೆಸರು ಪತ್ರಿಕೇಲಿ ಬರೊಹಂಗೆ ಮಾಡ್ಬಿಡು. ಇದು ಪತ್ರಿಕೆಯವರಿಗೂ ಇಷ್ಟ ಆಗುತ್ತೆ. ‘ನಮ್ಮ ಪತ್ರಿಕಾ ಬಳಗದೋರು ಸೇವಾಮನೋಭಾವ ಇರೋರು’ ಅಂತ ತೋರಿಸಿಕೊಳ್ಳೋಕೆ ಅವರಿಗೂ ಇದೊಂದು ಅವಕಾಶ" ಎಂದು ನಿಂತು ರಂಗರಾಜನ ಮುಖವನ್ನೊಮ್ಮೆ ನೋಡಿದ.
ಭರಮಪ್ಪನ ಸಲಹೆ ರಂಗರಾಜನಿಗೂ ಇಷ್ಟವಾಯಿತು. ಆದರೂ ಏನೂ ಸಹಾಯ ಮಾಡದೆ, ಮಾಡಿದ್ದೇವೆ ಎಂದು ಬರೆಯುವುದು ಹೇಗೆ? ಎನ್ನಿಸಿ “ಭರಮಪ್ಪನವರೇ ನಾವು ಏನು ಸಹಾಯನೇ ಮಾಡಿಲ್ಲ. ನಾವು ಮಾಡಿದೀವಿ ಅಂತ ಬರೆಯೋದು. ನಾಳೆ ಅವನು ಮಾಡಿಲ್ಲ ಅನ್ನೋದು. ಆಗ ಮರ್ಯಾದೆ ಹೋಗೋದು ನಮ್ಮದೆ ತಾನೆ" ಎಂದ. “ಅದಕ್ಕೆ ನಾ ನಿಮ್ಮನ್ನ ದಡ್ಡರು ಅನ್ನೋದು. ಆ ಹುಡುಗನಿಗೆ ನಾ ಹೇಳ್ತಿನಿ. ‘ಪೇಪರ್‍ನಲ್ಲಿ ನಿನಗೆ ಸಹಾಯ ಮಾಡಿ ಅಂತ ಬರೀತಿವಿ. ನಿನಗೆ ಮುಂದೆ ಓದೋದಿಕ್ಕೆ ಹಣಕಾಸಿನ ಸಹಾಯ ಸಿಗೊ ಹಂಗೆ ಮಾಡ್ತೀವಿ. ನೀನು ಮಾತ್ರ ಯಾರಾದರು ಕೇಳಿದರೆ, ಭರಮಪ್ಪನವರು ರಂಗರಾಜು ಅವರು ಹೇಳೋದು ನಿಜ ಅಂತ ಹೇಳು’ ಅಂತ. ಅವನಿಗೂ ಸಹಾಯ ಬೇಕು ಹೇಳದೆ ಏನ್ಮಾಡ್ತಾನೆ" ಅಂದರು. ರಂಗರಾಜನಿಗೂ ಸರಿಯೆನ್ನಿಸಿ “ಆದರೆ ಯಾವ ರೀತಿ ಸಹಾಯ ಮಾಡಿದ್ವಿ ಅಂತ ಬರೆಯೋದು?" ಎಂದ.
“ಹುಡುಗನ ಪ್ರತಿಭೆಯನ್ನು ಗುರುತಿಸಿದ ಪತ್ರಿಕೆಯ ಈ ವರದಿಗಾರ ಹುಡುಗನಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂದುಕೊಂಡು ಪತ್ರಿಕೆಯ ಏಜೆಂಟರಾದ ಶ್ರೀ ಭರಮಪ್ಪನವರ ಮನವೊಲಿಸಿ, ಪತ್ರಿಕೆ ಹಂಚಲು ಕೊಡುತ್ತಿದ್ದ ಕಮಿಷನ್ ಅಲ್ಲದೆ ದಿನಕ್ಕೊಂದು ಪತ್ರಿಕೆಯನ್ನು ಉಚಿತವಾಗಿ ಕೊಡಲು ಏರ್ಪಾಡು ಮಾಡಿದ್ದರು. ನಮ್ಮ ಪತ್ರಿಕೆಯಲ್ಲಿ ಬರುತ್ತಿದ್ದ ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮಾರ್ಗದರ್ಶಿ’ ಎಂಬ ಲೇಖನದಿಂದ ಇಷ್ಟೊಂದು ಅಂಕ ಗಳಿಸಲು ಸಾದ್ಯವಾಯಿತು ಎಂದು ಜಯರಾಮ ಪ್ರತಿಕ್ರಿಯಿಸುತ್ತಾನೆ ಅಂತ ಬರೀರಿ. ಮುಂದಿನದನ್ನು ನಾನು ನೋಡ್ಕೋತಿನಿ" ಎಂದು ಭರಮಪ್ಪನವರೇ ವರದಿಗೊಂದು ರೂಪವನ್ನೂ ಕೊಟ್ಟುಬಿಟ್ಟರು.
ಎರಡು ದಿನಗಳ ನಂತರ ವಿಶ್ವಕನ್ನಡ ಪತ್ರಿಕೆಯ ಮುಖಪುಟದಲ್ಲಿ ‘ವಿಶ್ವಕನ್ನಡ ಪತ್ರಿಕೆ ಹಂಚುವ ಹುಡುಗನ ಸಾಧನೆ’ ಎಂಬ ತಲೆಬರಹದೊಂದಿಗೆ ಸುದ್ದಿ ಪ್ರಕಟವಾಗಿತ್ತು. ಪೂರ್ಣ ವರದಿಯ ಮಧ್ಯೆ ಬಾಕ್ಸ್ ಐಟಂನಲ್ಲಿ ವರದಿಗಾರ ಮತ್ತು ಏಜೆಂಟರ ಸೇವಾ ಮನೋಭಾವ, ಪತ್ರಿಕೆಯಿಂದ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಉಪಯೋಗದ ಬಗ್ಗೆ ಬರೆಯಲಾಗಿತ್ತು.
* * * * * * * * *
ಇವುಗಳೆಲ್ಲದರ ನಡುವೆ ಬಡ ಹುಡುಗನ ಶ್ರಮ ಕಳೆದು ಹೋಗಿತ್ತು.!
* * * * * * * * *
1 comment:
ತಮ್ಮ ಶೀರ್ಷಿಕೆಯು ಮಾದ್ಯಮದ ಅಸಲಿಯತ್ತನ್ನು ತೆರೆದಿಡುತ್ತಿದೆ.
ಕಥನವೂ ಸಹ ಇಷ್ಟವಾಯಿತು.
Post a Comment