Saturday, December 27, 2008

ನುಡಿರಾಣಿಯ ಗುಡಿ ಕುವೆಂಪು

ನುಡಿರಾಣಿ
ನುಡಿರಾಣಿಯ ಗುಡಿ ಕುವೆಂಪು
ಕುವೆಂಪು ಅವರ "ಗುಡಿ"


ಕವಿಗಳು ಕಾವ್ಯಾರಂಭದಲ್ಲಿ ತಮ್ಮ ತಮ್ಮ ಇಷ್ಟದೈವವನ್ನು, ಆಶ್ರಿತ ರಾಜರನ್ನು, ಕಾವ್ಯಾಧಿದೇವತೆಯಾದ ಸರಸ್ವತಿಯನ್ನು ಸ್ತುತಿಸುವುದು ಸಂಪ್ರದಾಯ. ಬಹುತೇಕ ಎಲ್ಲ ಸಂಸ್ಕೃತ ಮತ್ತು ಕನ್ನಡ ಕವಿಗಳು ಸರಸ್ವತಿಯನ್ನು ಸ್ತುತಿಸುತ್ತಾ ಬಂದಿದ್ದಾರೆ. ಪ್ರಾರಂಭದಲ್ಲಿ ಸೃಜನಾತ್ಮಕವಾಗಿದ್ದ ಸರಸ್ವತಿಯ ಸ್ತುತಿ ನಂತರ ಕಾಟಾಚಾರದ ಸ್ತುತಿಯಾಗಿ ಮಾರ್ಪಟ್ಟಿದ್ದು ಸಾಹಿತ್ಯ ಚರಿತ್ರೆಯಿಂದ ವೇದ್ಯವಾಗುತ್ತದೆ. ಆದರೆ ಇಪ್ಪತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯದ ಪುನರುತ್ಥಾನ ನಡೆದು ಹಲವಾರು ಮಹತ್ವಪೂರ್ಣ ಕವಿಗಳೂ ಕಾವ್ಯಗಳೂ ಹುಟ್ಟಿಬಂದಿದ್ದರಿಂದ ಸರಸ್ವತಿಯ ಸ್ತುತಿಗೂ ಹೊಸರೂಪ ದೊರಕಿದೆ.

ಯುಗದ ಕವಿಯೆಂದೇ ಕರೆಯಲ್ಪಡುವ ಕುವೆಂಪು ಎಲ್ಲ ಕವಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸರಸ್ವತಿಯ ಸ್ತುತಿಯನ್ನು ಒಂದು ಕಾವ್ಯ ತಂತ್ರವಾಗಿ ಬಳಸಿಕೊಂಡಿದ್ದಾರೆ. ಹಲವಾರು ಬಿಡಿಕವನಗಳಲ್ಲಿ, ಚಿತ್ರಾಂಗದಾ ಮತ್ತು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಸಂಪ್ರದಾಯದಂತೆ ಸರಸ್ವತಿಯನ್ನು ಸ್ತುತಿಸಿದ್ದಾರೆ. ಆದರೆ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಮಾತ್ರ ಒಂದು ಕಾವ್ಯತಂತ್ರವಾಗಿ ಸರಸ್ವತಿಯ ಸ್ತುತಿಯನ್ನು ವಿಶೇಷ ಬಳಸಿಕೊಂಡಿದ್ದಾರೆ. ಚಿತ್ರಾಂಗದಾ ಕಾವ್ಯದಲ್ಲಿಯೇ ಈ ಬೆಳವಣಿಗೆಯನ್ನು ಕಾಣಬಹುದು. ಪ್ರಸ್ತುತ ಲೇಖನದಲ್ಲಿ ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಕಾವ್ಯತಂತ್ರವಾಗಿ ಅಂತರ್ಗತವಾಗಿರುವ ಸರಸ್ವತಿಯ ಸ್ತುತಿಯ ಸ್ವರೂಪವನ್ನು ತಿಳಿಯಲು ಯತ್ನಿಸಲಾಗುವುದು. ‘ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಅರ್ಪಣೆಯ ಭಾಗದಲ್ಲಿಯೇ ಸರ್ವಭಾಷಾಮಯಿಯಾದ ಸರಸ್ವತಿಯನ್ನು ವಿಶ್ವಭಾಷಾಮಯೀಯಾಗಿಸಿರುವ ‘ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್’ ಮತ್ತು ‘ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ’ ಎಂಬ ಸಾಲುಗಳು ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿವೆ.

‘ಏರುವೆನ್ ವಾಗ್ದೇವಿಯಮೃತ ರಸನೆಯ ಲಸನ್ ನಾವೆಯಂ’ ಎನ್ನುತ್ತಾ ಆದಿಕವಿಗೆ ವಂದಿಸಿ, ‘ದೇವಕವಿ, ನನ್ನನೊಯ್ಯನೆ ಕಾವ್ಯ ವಿದ್ಯುದ್ ವಿಮಾನದೊಳ್ ನಿರಿಸಿ, ಮೇಣ್ ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಇದುವರೆಗಿನ ಕವಿಗಳು -‘ಚಿತ್ರಾಂಗದಾ’ದಲ್ಲಿ ಕುವೆಂಪೂ ಸಹ- ಸರಸ್ವತಿಯು ನಮ್ಮ ನಾಲಗೆಯಲ್ಲಿ ನೆಲಸಲಿ, ನರ್ತಿಸಲಿ’ ಎಂದು ಪ್ರಾರ್ಥಿಸಿರುವುದನ್ನು ನೋಡಿದ್ದೇವೆ. ಇಲ್ಲಿ ನೇರವಾಗಿ ಸರಸ್ವತಿಯನ್ನು ನಾಲಗೆಗೆ ಆಹ್ವಾನಿಸದೆ, ಆದಿಕವಿಯನ್ನು ‘ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಪ್ರಾರ್ಥಿಸುತ್ತಿದ್ದಾರೆ. ಇಲ್ಲಿ ‘ಆತ್ಮಜಿಹ್ವೆಗೆ’ ಎಂಬ ಮಾತು ಹೊಸದಾಗಿ ಬಂದಿದೆ. ಆದಿಕವಿಯೇ ಸರಸ್ವತಿಯನ್ನು ಕವಿಯಾತ್ಮಜಿಹ್ವೆಗೆ ಇರಿಸಿದ ಮೇಲೆ ಸರಸ್ವತಿಯ ಪ್ರಾರ್ಥನೆ ಕೆಳಗಿನಂತೆ ಬಂದಿದೆ.

ಬಾಳು, ವೀಣಾಪಾಣಿ; ಬಾಳು, ಬ್ರಹ್ಮನ ರಾಣಿ;
ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.
ನಂದನದಿ ತುಂಬಿಯೋಂಕೃತಿ ತುಂಬಿ ಮೊರೆವಂತೆವೋಲ್
ಕರ್ಣಾಟಕದ ಜನದ ಕರ್ಣವೀಣಾ ತುಂಬಿ
ನಿನ್ನ ವಾಣಿಗೆ ವಿಕಂಪಿಸಿ, ಜೀಂಕೃತಿಯ ಬೀರಿ,
ರಸದ ನವನೀತಮಂ ಹೃದಯದಿ ಮಥಿಸುವಂತೆ
ಗಾನಗೆಯ್, ಹೇಳು, ಓ ಭಾವಗಂಗಾವೇಣಿ. (ಕವಿಕ್ರತು ದರ್ಶನ, ಸಾಲುಗಳು: ೮೭-೮೮)

ಈ ಭಾಗದಲ್ಲಿ ಭಾವಗಂಗಾವೇಣಿ ಎಂಬ ವಿಶೇಷಣ ಗಮನ ಸೆಳೆಯುತ್ತದೆ. ಭಾರತೀಯರಿಗೆ ಗಂಗಾನದಿಯೇ ದೊಡ್ಡನದಿ. ಗಂಗಾವೇಣಿ ಎಂದರೂ ಸಮಾಧಾನವಾಗದ ಕವಿಗೆ, ಸರಸ್ವತಿಯನ್ನು ಭಾವಗಂಗಾವೇಣಿಯನ್ನಾಗಿ ನೋಡುವ ಬಯಕೆ. ಈ ವಿಶೇಷಣ ಸರಸ್ವತಿಯ ಅಲೌಕಿಕ ಪ್ರತಿಮೆಗೆ ಭವ್ಯಭೂಮತೆಯನ್ನು ತಂದುಕೊಟ್ಟಿದೆ. ಮುಂದಿನ ಭಾಗದಲ್ಲಿ ಸರಸ್ವತಿಯ ಸಾಮರ್ಥ್ಯದ ಅರಿವು ಮೂಡುತ್ತದೆ.

ತೀಡಿದರೆ ನಿನ್ನುಸಿರು, ಮದ್ದಿಗೆ ಕಿಡಿ ತಗುಳ್ದು
ಹೊಮ್ಮುವಂದದಿ ಜ್ಯೋತಿ, ಜಡವೆ ಚಿನ್ಮಯವಾಗಿ
ಚಿಮ್ಮಿದಪುದಯ್. ಮುಟ್ಟಿದರೆ ನಿನ್ನ ಮೆಯ್, ರಾಮಾಂಘ್ರಿ
ಸೋಂಕಿದೊಡನೆಯೆ ಕಲ್ಲು ಕಡುಚೆಲ್ವು ಪೆಣ್ಣಾಗಿ
ಸಂಭವಿಸಿದೋಲ್, ಪಂಕದಿಂ ಕಲಾಪಂಕಜಂ
ಕಂಗೊಳಿಪುದಯ್, ಭುವನ ಮನಮಂ ಮೋಹದಿಂದಪ್ಪಿ
ಸೆಳೆದು. ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ
ಪೊರಸೋಸಿದಪುದು ಕಬ್ಬಿನ ರಸಂ. ಮಂತ್ರಮಯಿ
ನೀಂ ಬಡಿಯೆ, ಬಂಡೆಯಿಂ ನೀರಿನೊಳ್ಬುಗ್ಗೆಯಂ
ಹೊಮ್ಮಿ ಚಿಮ್ಮುವುದಲ್ತೆ, ಮುತ್ತು ಚಿಪ್ಪೊಡೆವಂತೆವೋಲ್
ಬಿರಿದು. ರಸಚಿತ್ ತಪೋಬಲಕೆಲ್ಲೆ ತಾನೊಳದೆ
ಪೇಳ್, ಕಲಾಲಕ್ಷ್ಮಿ? ಕೃಪೆಗೆಯ್, ತಾಯೆ, ಪುಟ್ಟನಂ,
ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ. (ಕವಿಕ್ರತು ದರ್ಶನ, ಸಾಲುಗಳು: ೧೨೮-೧೪೦)

ಕಬ್ಬಿಣದಿಂದಲೂ ಕಬ್ಬಿನ ರಸವುಕ್ಕಿಸುವ ವಾಣಿ ಇಲ್ಲಿ ರಸಸರಸ್ವತಿ. ಮಂತ್ರಮಯೀ ನೀನು ಬಡಿದರೆ ಬಂಡೆಯಿಂದಲೂ ನೀರುಕ್ಕುವುದು ಎಂಬ ಮಾತು ಋಗ್ವೇದದ, ರಭಸವಾಗಿ ಹರಿಯುವ ಸರಸ್ವತಿನದಿಯನ್ನು ಸೂಚಿಸುತ್ತದೆ. ‘ಕನ್ನಡದ ಪೊಸಸುಗ್ಗಿ ಬನ’ ಎಂಬ ಮಾತು ನವೋದಯ ಕಾವ್ಯಸಂದರ್ಭವನ್ನು ಧ್ವನಿಸುತ್ತದೆ. ನವೋದಯದ ಕೋಗಿಲೆಯಾದ ನೀನು ನನಗೆ ಕೃಪೆ ಮಾಡು ಎಂಬುದು ಕವಿಯ ಪ್ರಾರ್ಥನೆ.

‘ಶ್ರೀರಾಮಾಯಣದರ್ಶನಂ’ನ ಕೆಲವು ಸಂಚಿಕೆಗಳು (ಉದಾ: ಅಗ್ನಿಯಾತ್ರೆ ಮತ್ತು ಅತ್ತಲಾ ದೈತ್ಯ ಸಭೆಯೊಳ್) ಆರಂಭದಲ್ಲಿ ಸರಸ್ವತಿಯ ಬದಲು ಆದಿಕವಿ ವಾಲ್ಮೀಕಿಯನ್ನು ಕಾವ್ಯಾವೇಶಕ್ಕಾಗಿ ಸರಸ್ವತಿಯನ್ನು ಸ್ತುತಿಸುವಂತೆಯೇ ಸ್ತುತಿಸಿರುವುದುಂಟು. ಕೆಲವು ಸಂಚಿಕೆಯ ಪ್ರಾರಂಭದಲ್ಲಿ, ಒಮ್ಮೊಮ್ಮೆ ಸಂಚಿಕೆಯ ನಡುವೆಯೂ ಸರಸ್ವತಿಯ ಸ್ತುತಿಯಿದೆ. ಎಂಟನೆಯ ಸಂಚಿಕೆಯ ಆರಂಭದಲ್ಲಿ ಬಂದಿರುವ ಸರಸ್ವತಿಯ ಸ್ತುತಿ ಹೀಗಿದೆ.

ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ
ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ
ಹೃದಯಮಂ; ನಡೆಸೆನ್ನ ಈ ಮಹಾಕಾವ್ಯಮಂ,
ತಾಯಿ ಕಂದನ ಕೈಯನಾನುತೆ ನಡೆಯಿಪಂತೆ. (ಕುಣಿದಳುರಿಯ ಉರ್ವಶಿ!, ಸಾಲುಗಳು: ೧-೪)

ಆತ್ಮವೆಂಬ ವೀಣೆಯ ತಂತಿಯನ್ನು ನುಡಿಸುವಂತೆ ರಸರಾಣಿಯನ್ನು ಕವಿ ಕೋರುತ್ತಾರೆ. ಮೊದಲೇ ‘ಪಸುಳೆ ನಾನ್; ತಾಯಿ ನೀನು’ ಎಂದಿರುವುದರಿಂದ ‘ತಾಯಿ ಕಂದನ ಕಯ್ಯನಾನುತೆ ನಡೆಯಿಪಂತೆ’ ಎಂಬ ಉಪಮೆ ಅರ್ಥಪೂರ್ಣವಾಗಿದೆ; ಕವಿಗಳೆಲ್ಲರೂ ಸರಸ್ವತಿಯ ಸುತರು ಎಂಬರ್ಥವನ್ನು ಧ್ವನಿಸುತ್ತದೆ. ಮುಂದುವರೆದು, ತನ್ನ ಮುಂದಿರುವ ಕಾವ್ಯದ ದೂರವನ್ನು, ಕಾವ್ಯದ ಉದ್ದೇಶವನ್ನು ಹೇಳಿ, ಅದಕ್ಕೆ ಸಹಕರಿಸುವಂತೆ ಸರಸ್ವತಿಯನ್ನು ಸ್ತುತಿಸುತ್ತಾರೆ.

........ಪರಕೆಯಿರಲೆನಗೆ
ನಿನ್ನಮೃತ ವರದ ಕರದಾ, ದೇವಿ ಓ ಶಾರದಾ!
ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ
ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ
ದೀನರಿಗೆ? ನನ್ನೀ ಕೃತಿಯನೋದುವಾತ್ಮರಾ
ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,
ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ! (ಕುಣಿದಳುರಿಯ ಉರ್ವಶಿ!, ಸಾಲುಗಳು: ೧೪-೨೦)

ಕಾವ್ಯರಚನೆಯಲ್ಲಿ ತೊಡಗಿರುವ ಕವಿಗೆ ಕಾವ್ಯಾವೇಶವನ್ನು ಕೊಡುವಂತೆ, ಕಾವ್ಯವನ್ನು ಓದುವ ಸಹೃದಯರಿಗೂ ಸರಸ್ವತಿಯೆ ಕೃಪೆ ಮಾಡು ಎಂಬುದು ನವೀನವಾಗಿದೆ. ಸಹೃದಯರಿಗೆ ಒಲಿಯುವಳಾದ್ದರಿಂದ ಸರಸ್ವತಿಗೆ ‘ಸಹೃದಯ ಸರಸಲಕ್ಷ್ಮಿ’ ಎಂಬ ವಿಶೇಷಣ ಚೆನ್ನಾಗಿ ಒಪ್ಪುತ್ತದೆ. ‘ಕಿಷ್ಕಿಂಧಾ ಸಂಪುಟ’ದ ಪ್ರಾರಂಭದ ಸಂಚಿಕೆಯಲ್ಲಿ, ಸರಸ್ವತಿಯ ಕಯ್ಯ ವೀಣೆಯನ್ನು ಪ್ರಾರ್ಥಿಸುತ್ತಾರೆ.

ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ
ತ್ರೈಭುವನ ಸಮ್ಮೋಹಿನಿಯೆ, ಕವನಕಮನೀಯೆ!
ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ
ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ
ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ
ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್. (ಲಂಕೇಶನೊಲಿಸಿದನು ಮಾರೀಚನಂ, ಸಾಲುಗಳು: ೧-೬)

ಕವಿಗೆ ಸರಸ್ವತಿ ಮತ್ತು ಸರಸ್ವತಿಯ ವೀಣೆಯ ಬಗೆಗೆ ಯಾವ ಭೇದಭಾವವೂ ಇಲ್ಲ. ಆದರೆ, ಎರಡನ್ನೂ ಬೇರೆ ಬೇರೆ ಎಂಬಂತೆ ಸ್ತುತಿಸುವುದರಿಂದ ವೈವಿಧ್ಯ ಉಂಟಾಗಿದೆ; ಏಕತಾನತೆಯ ಭಯವಿರುವುದಿಲ್ಲ. ಸರಸ್ವತಿಗೆ ‘ಈ’ ‘ಈಕ್ಷತಿ’ ‘ಈಕ್ಷಿತಾ’ ಎಂಬ ಹೆಸರುಗಳೂ ಇವೆ. ಇವುಗಳಿಗೆ ಈಕ್ಷಿಸು, ಅವಲೋಕಿಸು, ಗ್ರಹಿಸು ಮುಂತಾದ ಅರ್ಥಗಳಿವೆ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಶತತಂತ್ರಿಯಾ ಶ್ರೀಕಂಠದಿಂ ಗಾನಗೆಯ್’ ಎಂಬ ಪ್ರಯೋಗಗಳಲ್ಲಿ, ಸರಸ್ವತಿಗಿರುವ ಈ ಹೆಸರುಗಳ ಅರ್ಥಪ್ರಸ್ತುತತೆಯನ್ನು ಕಂಡುಕೊಳ್ಳಬಹುದು. ಕಣ್ಣೆದುರಿಗೆ ತಾನು ಕಂಡದ್ದನ್ನು ಕವಿಮನಸ್ಸು ಗ್ರಹಿಸಿ, ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ಅದಕ್ಕೆ ‘ಪ್ರತಿಭೆ’ ಎಂಬ ಸಾಮರ್ಥ್ಯ ಬೇಕು. ಆ ಪ್ರತಿಭೆಯೇ ಸರಸ್ವತಿ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಗಾನಗೆಯ್’ ‘ಸರ್ವಪಾರದರ್ಶಿಕೆ’ ಮೊದಲಾದ ಪ್ರಯೋಗಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇಲ್ಲಿ ಹಾಡುತ್ತಿರುವವಳು ವೀಣಾಸರಸ್ವತಿ; ಬರೆಯುತ್ತಿರುವವನು ಕವಿ. ಆದ್ದರಿಂದ ಸರಸ್ವತಿಯ ದರ್ಶನವೇ ಕವಿಯ ದರ್ಶನವೂ ಆಗಿರುತ್ತದೆ. ಇಂತಹುದೇ ಮತ್ತೊಂದು ಪ್ರಸಂಗ ‘ರಯ್‌ಗೆ ಕರೆದೊಯ್, ಓ ಅಗ್ನಿ!’ ಸಂಚಿಕೆಯ ಪ್ರಾರಂಭದಲ್ಲಿ ಬಂದಿದೆ.

ಕ್ರಾಂತದರ್ಶಿನಿ, ಈ ಜಗತ್‌ಕಾಂತಿಕರೆ, ಶಾಂತೆ,
ಭ್ರಾಂತಿಹರೆ, ಸುಚಿರೆ, ಸುಸ್ಥಿರೆ, ಪರಾತ್ಪರೆ, ವಾಣಿ,
ಓ ಪರಾತ್ಪರವಾಣಿ, ಮಿಡಿ ನಿನ್ನ ಬೀಣೆಯಂ;
ನುಡಿ ಮುಂದೆ ನಡೆದುದಂ, ನಿನಗೆ ಕಾಣ್ಬಂದದಿಂ (ರಯ್‌ಗೆ ಕರೆದೊಯ್, ಓ ಅಗ್ನಿ!, ಸಾಲುಗಳು: ೧-೫)

ಕಾವ್ಯದ, ಸಾಹಿತ್ಯದ ಅರಿವಿನಿಂದ ನಮ್ಮ ಭ್ರಮೆಗಳು ಕಳೆದು, ಶಾಂತಿ ಲಬಿಸುತ್ತದೆ; ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ‘ಭ್ರಾಂತಿಹರೆ’ ‘ಶಾಂತೆ’ ‘ಜಗತ್‌ಕಾಂತಿಕರೆ’ ಎಂಬ ವಿಶೇಷಣಗಳು ಗಮನಸೆಳೆಯುತ್ತವೆ.

‘ಇರ್ದುದು ಮಹೇಂದ್ರಾಚಲಂ’ ‘ರಾಮಾಯಣದರ್ಶನಂ’ನಲ್ಲಿ ಒಂದು ಪ್ರಮುಖ ಘಟ್ಟ. ಸೀತಾನ್ವೇಷಣೆಗಾಗಿ ದಿಕ್ಕು ದಿಕ್ಕಿಗೆ ಸುಗ್ರೀವನಾಜ್ಞೆ ಹೊತ್ತು ಹೋಗಿದ್ದ ಕಪಿಸೈನ್ಯದ ಕಾರ್ಯಫಲವನ್ನು ಅರಿತು ಮುಂದಿನ ಸಿದ್ಧತೆಗೆ ತೊಡಗುವ ಸಮಯ. ಕಪಿಸೈನ್ಯದ ಹಲವು ಗುಂಪುಗಳ ಕಾರ್ಯಸಾಹಸವನ್ನು ಅರಿಯಲು ಕವಿ ಆಶ್ರಯಿಸುವುದು ಮತ್ತೆ ವಿಪಂಚಿ ಅಂದರೆ ವೀಣೆಯನ್ನೆ!

ಓ, ಏಳ್, ವಿಪಂಚಿಯೆ, ಕಲಾಲತಾಂಗಿಯ ಬೆರಳ್
ತಳಿರ ಸೋಂಕಿನ ಸೊಮ್ಪು ಸಾಲ್ವುದೇನಿನ್ ನಿನಗೆ?
ಪ್ರಳಯ ಭೈರವ ಡಮರು ರೌರವಾವೇಶಮಂ
ಆಹ್ವಾನಗೆಯ್............................................. (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೧-೪)

ಕಲಾಲತಾಂಗಿಯ ಬೆರಳೆಂಬ ತಳಿರಿನಿಂದ ವೀಣೆಯನ್ನು ಮೀಟಿ ಹೊಮ್ಮಿಸಿದ ನಾದ, ಮುಂದಿನ ಸಾಹಸದ ಕಥೆಯನ್ನು ಹೇಳಲಾರದು. ಸಾಹಸದ ಕಥೆಯಾದ್ದರಿಂದ ಡಮರು ರೌರವಾವೇಶವನ್ನು ಆಹ್ವಾನಗೆಯ್ಯುವಂತೆ ಪ್ರಾರ್ಥಿಸುತ್ತಾರೆ. ಮುಂದುವರೆದು,

ತಾಂಡವ ಶಿವನ ಕಯ್ಯ ಡಮರು ಆವೇಶಮಂ
ಆಹ್ವಾನಗೆಯ್! ಸಾಗರೋಪಮಂ ಗಾನಗೆಯ್
ಆಂಜನೇಯನ ಸಾಗರೋಲ್ಲಂಘನದ ಮಹಾ
ಸಾಹಸ ಕಥಾಸರಿತ್ಸಾಗರದ ಸಂಮಥನಮಂ! (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೨೬-೨೮)

ಆಂಜನೇಯನ ಸಾಗರೋಲ್ಲಂಘನದ ಸಾಹಸದ ಕಥೆಯಾದ್ದರಿಂದ ಶಿವನ ಡಮರಿನ ಆವೇಶ ಬೇಕೆಂಬುದು ಕವಿಯ ಆಶಯ. ನಿರಂತರವಾಗಿ ಹರಿದ ಕವಿಪ್ರತಿಭೆ ನಿಲುಗಡೆಯ ಬಯಸಿ, ನಿಂತು, ಮುಂದುವರೆಯುವುದಕ್ಕೆ ಮೊದಲು ಮತ್ತೆ ಮತ್ತೆ ಸರಸ್ವತಿಗೆ ಕಾವ್ಯಾವೇಶಕ್ಕಾಗಿ,

.........ದರ್ಶನದೋರೆಮಗೆ,
ಓ ವಾಙ್ಮಯಿಯೆ, ನಿತ್ಯಸತ್ಯಂ ನಿಕ್ವಣಿಸುವೋಲ್
ವಚಸ್‌ತಂತ್ರಿ ಕವಿಯ ಚಿದ್ಯಂತ್ರಸಮ ಹೃದ್ವೀಣೆಯಿಂ! (ಕನಕಲಂಕಾನ್ವೇಷಣಂ, ಸಾಲುಗಳು: ೧೦-೧೨)

ಎಂದು ಬೇಡುತ್ತದೆ. ಸರಸ್ವತಿಯ ಸತ್ಯವಾಣಿ ನಿತ್ಯವಾದುದು. ವಾಣಿಯ ವೀಣೆಯೊರೆದುದನೇ ಹಾಡುವ ಕವಿಯ ಹೃದಯ ವೀಣೆಯೂ ಅದನ್ನೇ ದನಿಗೈಯಬೇಕು. ಆ ದರ್ಶನವನ್ನೇ ಕವಿ ಬೇಡುತ್ತಾನೆ. ಹೀಗೆ ಘಟನೆಯಿಂದ ಘಟನೆಗೆ ಹೊರಳುವ ಮೊದಲು, ಸರಸ್ವತಿಯ ಸ್ತುತಿಯನ್ನು ಪರಿಣಾಮಕಾರಿಯಾಗಿ ‘ತಪಸ್ಸಿದ್ಧಿ’ ಎಂಬ ಸಂಚಿಕೆಯ ಪ್ರಾರಂಭದಲ್ಲಿ ಬಳಸಿಕೊಳ್ಳಲಾಗಿದೆ. ಲಂಕೆಯಲ್ಲಿನ ಯುದ್ಧ, ಯುದ್ಧಾನಂತರದ ಕಾರ್ಯಭರಗಳ ವರ್ಣನೆಯಲ್ಲಿ ಮುಳುಗಿಹೋಗಿದ್ದ ಕವಿಗೆ, ಒಮ್ಮೆಲೆ ಅಯೋಧ್ಯೆಯ ನೆನಪಾಗುತ್ತದೆ. ಆಗ ವಾಗ್ದೇವಿಯನ್ನೇ ಪ್ರಾಥಿಸುತ್ತಾರೆ.

ಸಾಲದೇನಿನಿತೆ ಸೂಚನೆ ನಿನಗೆ, ಓ ವಾಣಿ,
ವಾಗ್ದೇವಿ? ಯಾಚಿಸುವೆ ಕೈಮುಗಿದು. ಪಿಂತಿರುಗು;
ಬಾ, ತಾಯಿ; ಸಾಲ್ಗುಮಾ ಲಂಕೆ, .॒.....................
....................................................................
ತೋರೆಮಗೆಂತು ಸುವ್ರತನ್ ಭರತದೇವಂ?
...........................................................
ಹಾಡಿ ತೋರೆಮಗೆ, ಓ ತಾಯೆ, ಹೇ ವಾಗ್ದೇವಿ! (ತಪಸ್ಸಿದ್ಧಿ, ಸಾಲುಗಳು: ೧೫-೨೫)

ಈ ರೀತಿಯ ಕಾವ್ಯತಂತ್ರದ ಭಾಗವಾಗಿ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಸರಸ್ವತಿಯ ಸ್ತುತಿ ಮತ್ತೆ ಮತ್ತೆ ಬಳಕೆಯಾಗಿದೆ.

ಏನು ಮೌನವಿದೆನ್ನ ಕೋಮಲೆ? ಕೋಪವೆ ನಿನಗೆ
ಕಾಮಿಸಿದನಿನಿಯನೆಂದನ್ಯ ವಿಷಯ ವಧೂ
ಸರೋಜ ಶಾರದೆಗೆ? ತಂಗೆಗೆ ಕರುಬುವರೆ, ಪೇಳ್,
ಉದಾತ್ತೆ ನೀಂ? ರೂಪಕ ರೂಪಿಯಾದೊಡೇನಾ
ಪ್ರೇಮಮುಂ ರಾಮ ಮಹಿಮಾ ಕೀರ್‍ತಿ ಕಥೆಯಲ್ತೆ?
ಕವಿಯೊಲ್ಮೆ ಕಡಲಲ್ತೆ? ಬಡಬ ಕುಂಭೋದ್ಭವರ್
ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್
ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್
ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ
ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ
ಹರಜಟಾ ಜೂಟಪ್ರಪಾತ ಗಂಗಾ ಸ್ತೋತ್ರಮಂ ಸಂಗೀತಮಂ! (ಸೈನ್ಯಗುಪ್ತಿ, ಸಾಲುಗಳು: ೧-೧೨)

ಸರಸ್ವತಿಯ ಸ್ತುತಿ ಕಾವ್ಯತಂತ್ರವಾಗಿ ಬಳಕೆಯಾಗಿರುವುದಕ್ಕೆ ಒಂದು ಉತ್ತಮ ಉದಾಹರಣೆ ಮೇಲಿನ ಭಾಗ. ಕವಿಪ್ರತಿಭೆ ಅಲೌಕಿಕವಾದರೂ, ಕವಿ ಲೌಕಿಕನೇ! ಕಾವ್ಯ ರಚನೆ ನಿಂತು, ಮತ್ತೆ ಪ್ರಾರಂಭವಾಗಬೇಕಾದಾಗ, ಸರಸ್ವತಿಯನ್ನು ರಮಿಸಿ, ನಮಿಸಿ ಮುಂದುವರೆಯುವ ಸುಂದರ ಚಿತ್ರಣ ಇದಾಗಿದೆ. ಇನಿಯನಾದ ಬ್ರಹ್ಮನೇನಾದರೂ ಅನ್ಯ ವಿಷಯ ವಧೂ ಸರೋಜೆಗೆ ಒಲಿದನೆಂದು ಕೋಪವೆ? ಅದೂ ಒಂದು ಮಹಿಮೆಯಲ್ಲವೆ. ಉದಾತ್ತೆಯಾದ ನೀನು ತಂಗೆಗೆ ಕರುಬುವುದೆ? ಸೃಷ್ಟಿಕರ್ತನೊಲ್ಮೆ ಕಡಂತೆ. ಅದನ್ನು ಕೃಶಾಂಗಿಯಾದ ನಿನ್ನ ತಂಗೆಯೊಬ್ಬಳು ಎಷ್ಟೆಂದು ಕುಡಿಯಬಲ್ಲಳು? ಕೋಪವನ್ನು ಬಿಡು ಎಂದು ಸಂತೈಸಿ, ರಮಿಸಿ, ವೀಣೆಯನ್ನು ಹಿಡಿದು ಮುಂದಿನ ಕಥೆಯನ್ನು ನುಡಿಸುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯ ಸಾಹಿತ್ಯದಲ್ಲಿ, ಪಾತ್ರಕ್ಕೆ ಒಂದು ಹೆಸರನ್ನಿಟ್ಟರೆ ಕವಿಯ ಕೆಲಸ ಮುಗಿದಂತೆ; ಆ ಪಾತ್ರಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತವೆ. ಅಷ್ಟರ ಮಟ್ಟಿಗೆ ಕವಿ ನಿರ್ಲಿಪ್ತನಾಗಿರಬೇಕು. ಹಾಗೇ, ತನ್ನದೇ ಕಾವ್ಯದ ಪಾತ್ರವೊಂದು ಏನೋ ಗಹನವಾದ, ರಹಸ್ಯವಾದ (ಬೇರೆ ಪಾತ್ರಗಳಿಗೆ ತಿಳಿಯದಂತೆ) ಕಾರ್ಯವೊಂದನ್ನು ಎಸಗುತ್ತಿರುತ್ತದೆ. ಆಗ ಸ್ವತಃ ಕವಿಯೇ ಅಚ್ಚರಿಪಡುತ್ತಾನೆ. ಅದೇನೆಂದು ತನ್ನ ಸ್ಫೂರ್ತಿಯ ಸೆಲೆಯಾದ, ತನಗೆ ಕಾವ್ಯವನ್ನು ಹೇಳಿ ಬರೆಸುತ್ತಿರುವ ವಾಗ್ದೇವಿಯ ಮೊರೆಹೋಗುತ್ತಾನೆ. ಸಂದರ್ಭಕ್ಕನುಗುಣವಾದ ವಿಶೇಷಣಗಳೊಂದಿಗೆ, ಅಂತಹದೊಂದು ಸನ್ನಿವೇಶ ‘ದಶಾನನ ಸ್ವಪ್ನಸಿದ್ಧಿ’ ಸಂಚಿಕೆಯ ಆರಂಭದಲ್ಲಿ ಬಂದಿದೆ.

ಪೇಳ್ ತಾಯೆ
ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ
ಮಹತ್ ಪೂಜೆಯಂ ಶರ್ವಮಂದಿರದೊಳೇಕಾಂಗಿ?
ಜ್ಞಾನಾಧಿದೇವಿ ನೀಂ, ಮೇಣ್ ವಿಜ್ಞಾನ ನೇತ್ರಿ:
ಹೊರನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ
ಲೌಕಿಕಾತೀತಮಹ ನಿತ್ಯಸತ್ಯಂಗಳಂ
ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ
ಸೂಕ್ಷ್ಮಮಂ, ಕೋಶಕೋಶಗಳಿತರ ಕಾಲಮಂ
ದೇಶಮಂ, ಕಾರಣವನಂತೆ ಕಾರಣದಾಚೆ
ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ
ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾತೀತೆ! (ದಶಾನನ ಸ್ವಪ್ನಸಿದ್ಧಿ, ಸಾಲುಗಳು: ೫-೧೫)

ಸರಸ್ವತಿಯು ಜ್ಞಾನದೇವಿ, ವಿಜ್ಞಾನ ನೇತ್ರಿ, ವಿಶ್ವಾಂತರಾತ್ಮೆಯಾದ್ದರಿಂದ ಕಾಲ, ದೇಶ, ಕಾರಣ, ಕಾರಣದಾಚೆಗಿನ ಲೀಲಾ, ಉದ್ದೇಶ ಇವೆಲ್ಲವನ್ನೂ ತೋರಿಸಬಲ್ಲಳು. ‘ಅವಿದ್ಯೆ, ವಿದ್ಯೆ ವಿದ್ಯಾತೀತೆ’ ಎಂಬ ಮಾತಂತೂ ಸರಸ್ವತಿಯ ಅಲೌಕಿಕ ಪ್ರತಿಮೆಗೆ ತೊಡಿಸಿದ ನುಡಿಯಾಭರಣವಾಗಿದೆ.

ಕುವೆಂಪು ಅವರ ಸರಸ್ವತಿಯ ವಿರಾಡ್‌ದರ್ಶನವಾಗುವುದು, ಋತಚಿತ್ ಸ್ವರೂಪಿಣಿಯರಾದ ಶಿವೆ, ಸರಸ್ವತಿ ಮತ್ತು ಲಕ್ಷ್ಮಿಯರನ್ನು ವಂದಿಸಿ ಪ್ರಾರಂಭಿಸುವ ‘ಅಭಿಷೇಕ ವಿರಾಡ್‌ದರ್ಶನ’ವೆಂಬ ಕೊನೆಯ ಸಂಚಿಕೆಯಲ್ಲಿ. ಶ್ರೀರಾಮ ಪಟ್ಟಾಭಿಷೇಕದ ವಿಶ್ವರೂಪವನ್ನು ತೋರಿಸಲ್ ಸ್ವತಃ ‘ಅನಾದಿಕವಿ’ಯೇ ಬರುತ್ತಾನೆ. ಇದುವರೆಗೂ ‘ನೀನೊರೆದುದನು ನಾನು ಬರೆವೆನು’ ಎನ್ನುತ್ತಿದ್ದ ಕವಿ, ಆ ಸೃಷ್ಟಿಪ್ರಜ್ಞೆಗೆ ‘ಅನಾದಿಕವಿ’ ಎಂಬ ವಿಶೇಷಣವನ್ನು ಇಲ್ಲಿ ತಂದಿದ್ದಾರೆ. ಪುಲ್ಲಿಂಗವಾಚಿಯಾದರೂ, ‘ಅನಾದಿಕವಿ’ ಕಲ್ಪನೆ ಸರಸ್ವತೀ ತತ್ವದ ವಿಸ್ತೃತ ರೂಪವೇ ಆಗಿದೆ. ‘ನೀನಾರು?’ ಎಂದ ಕವಿಗೆ,

ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು! (ಅಭಿಷೇಕ ವಿರಾಡ್‌ದರ್ಶನಂ, ಸಾಲುಗಳು: ೩೪-೩೮)

ಇಲ್ಲಿ ವ್ಯಕ್ತವಾಗುವ ಸರಸ್ವತಿ ಸ್ವರೂಪ ಕಾಲದೇಶಗಳನ್ನು ಮೀರಿದ್ದು. ಕಾವ್ಯದುದ್ದಕ್ಕೂ, ಸರಸ್ವತಿ ಮತ್ತು ಸರಸ್ವತಿಯ ವೀಣೆಯನ್ನು ಕಾವ್ಯಾವೇಶಕ್ಕಾಗಿ ಬೇಡಿದ ಕವಿಪ್ರತಿಭೆ, ಎಲ್ಲ ಕವಿಗಳಿಗೂ ಮಾತೃರೂಪವಾದ ಪ್ರತಿಭಾಸ್ವರೂಪವನ್ನು ಸರಸ್ವತಿಗೆ ನಿರ್ಮಿಸಿದೆ. ಈ ಸರಸ್ವತಿಯು ಸರ್ವಭಾಷಾಮಯೀ ಮಾತ್ರವಲ್ಲ. ವಿಶ್ವಮಾತೆಯೂ ಹೌದು. ಕಾವ್ಯಾರಂಭದಲ್ಲಿ ಬಂದ ‘ವಿಶ್ವವಾಣ’ ಎಂಬ ಒಂದು ಮಾತು, ವೇದವಾಗುವುದು ಈ ಕೊನೆಯ ಸಂಚಿಕೆಯಲ್ಲಿ. ಸರಸ್ವತಿಯು ನುಡಿಸಿದ್ದನ್ನಷ್ಟೇ ಸರಸ್ವತಿಯ ಬಾಹುರೂಪರಾದ ಕವಿಗಳು ಬರೆಯುವುದು. ಆದ್ದರಿಂದ ಕಾವ್ಯವೆಂಬುದು ಸರಸ್ವತಿಯ ಕೃತಿ, ಭಗವಂತನ ಅವತಾರವಾಗುತ್ತದೆ. ‘ಕೃತಿರೂಪದಿಂದಲೂ ಭಗವಂತನ ಅವತಾರವಾಗುತ್ತದೆ’ ಎಂಬ ಮಾತಿಗೆ ಅನುಗುಣವಾಗಿಯೇ, ಕವಿ ತಾನು ಬರೆದ ‘ಕೃತಿಸರಸ್ವತಿ’ಗೆ ತಾನೇ ಮಣಿಯುತ್ತಾನೆ.

ಅಂದ ಹಾಗೆ ‘ನುಡಿರಾಣಿಯ ಗುಡಿ ಕುವೆಂಪು’ ಎಂಬ ಸಾಲು ಕುವೆಂಪು ಅವರ ‘ಕುವೆಂಪು’ ಎಂಬ ಕವಿತೆಯದ್ದು!

Tuesday, December 23, 2008

ಹಳ್ಳಿ ರೂಟ್

ಮೊನ್ನೆ ಭಾನುವಾರ ಊರಿಗೆ ಹೋಗಿದ್ದೆ. ಮಾಮೂಲಿನಂತೆ ಚೆನ್ನರಾಯಪಟ್ಟಣದವರೆಗೂ ಬಸ್ಸಿನಲ್ಲಿ ಹೋಗದೆ, ಹಿರಿಸಾವೆಯಲ್ಲಿ ಇಳಿದು, ಅಕ್ಕನಹಳ್ಳಿ ಕೂಡಿಗೆ ಹೋಗುವ ಯೋಚನೆ ನನ್ನದಾಗಿತ್ತು. ಅಕ್ಕನಹಳ್ಳಿ ಕೂಡಿನಲ್ಲಿ ಸ್ವಲ್ಪ ಕೆಲಸವೂ ಇತ್ತೆನ್ನಿ. ಆದರೆ ಹಿರಿಸಾವೆಯಿಂದ ಅಕ್ಕನಹಳ್ಳಿ ಕೂಡಿಗೆ ಹೋಗಲು ಬಸ್ಸುಗಳ ಸೌಕರ್ಯ ತುಂಬಾ ಕಡಿಮೆ. ಹೆಚ್ಚಾಗಿ ಆಟೋ ಅಥವಾ ಜೀಪುಗಳನ್ನು ಆಶ್ರಯಿಸಬೇಕು. ಅವರು ಕೇಳಿದಷ್ಟು ದುಡ್ಡು ತೆರುವುದಲ್ಲದೆ ಗಂಟೆಗಟ್ಟಲೆ ಕಾಯಲೂ ಬೇಕು. ಆದರೆ ಮೊನ್ನೆ ಮಾತ್ರ ನನ್ನ ಅದೃಷ್ಟವೋ ಎಂಬಂತೆ ಹಿರಿಸಾವೆ-ನುಗ್ಗೆಹಳ್ಳಿ ರಿಟರ್ನ್ ಬಸ್ ನನಗಾಗಿಯೇ ಕಾಯುತ್ತಿರುವಂತೆ ನಿಂತಿತ್ತು. ಸಂತೋಷದಿಂದಲೇ ಹತ್ತಿ ಅಕ್ಕನಹಳ್ಳಿ ಕೂಡಿಗೆ ಒಮದು ಟಿಕೆಟ್ ಕೇಳಿದೆ. ಕಂಡಕ್ಟರ್ ‘ಇದು ಬಳಸಿಕೊಂಡು ಹೋಗುತ್ತೆ’ ಎಂದ. ನಾನು ‘ಪರವಾಗಿಲ್ಲ ಟಿಕೆಟ್ ಕೊಡಿ’ ಎಂದೆ.
ನನಗೆ ಗೊತ್ತಿತ್ತು. ಲೇಟು ಎಂದರೆ ಹತ್ತರಿಂದ ಹದಿನೈದು ನಿಮಿಷ ಮಾತ್ರ ಎಂದು. ಆಟೋ ಜೀಪುಗಳಲ್ಲಿ ಕುರಿಯಂತೆ ಕೈಕಾಲು ಮುದುರಿ ಕುಳಿತು ಹೋಗುವುದಕ್ಕಿಂತ ಇದೇ ವಾಸಿಯೆನ್ನಿಸಿತ್ತು. ಬಸ್ ಹೊರಟು ಬೀಳಗಿಹಳ್ಳಿ, ತೋಟಿ, ತೋಟಿಕೊಪ್ಪಲು, ಮಾದಲಗೆರೆ ಮುಖಾಂತರ ಅಕ್ಕನಹಳ್ಳಿ ತಲುಪಿ ಅಲ್ಲಿಂದ ಮುಂದಕ್ಕೆ ಹೋಗುವುದಿತ್ತು. ಕೇವಲ ಹನ್ನೆರಡು ಕಿಲೋಮೀಟರ್ ತಲಪಲು ಇಲ್ಲಿ ಕನಿಷ್ಠ ಮುಕ್ಕಾಲು ಗಂಟೆ ಬೇಕು!. ಅಷ್ಟೊಂದು ಸ್ಟಾಪ್‌ಗಳು ಎನ್ನುವುದಕ್ಕಿಂತ, ರಸ್ತೆಗಳು ಅಷ್ಟೊಂದು ಕರಾಬ್ ಎನ್ನುವುದು ಸೂಕ್ತ.
ಬಸ್ ಮಾದಲಗೆರೆ ಸಮೀಪ ಹೋಗುತ್ತಿತ್ತು. ಆಗ ಯಾರೋ ರಸ್ತೆ ಬದಿಯಿಂದ ಕೂಗಿ ‘ಮುಂದೆ ಜೀಪ್ ಹೋಗಿದೆ’ ಎಂದು ಹೇಳಿದ. ಬಸ್ ಗಕ್ಕನೆ ನಿಂತಿತು. ಡ್ರೈವರ್ ‘ಲೋ ಬಸವರಾಜ, ಜೀಪು ಹೋಗಿದೆಯಂತೋ’ ಎಂದ. ಇಡೀ ಬಸ್ಸಿನಲ್ಲಿ ವಿದ್ಯುತ್ ಸಂಚಾರವಾಯಿತು. ಏಳೆಂಟು ಮಂದಿ ಕಂಡಕ್ಟರನ ಸುತ್ತ ಜಮಾಯಿಸಿ ‘ಟಿಕೆಟ್ ಕೊಡಿ’ ಎನ್ನತೊಡಗಿದರು! ಕಂಡಕ್ಟರ್ ಎಲ್ಲರಿಗೂ ಲಗುಬಗೆಯಿಂದ ಟಿಕೆಟ್ ಹರಿದು ಕೊಟ್ಟು ರೈಟ್ ಹೇಳಿದ. ಕೇವಲ ಒಂದೇ ನಿಮಿಷದಲ್ಲಿ ಮಾದಲಗೆರೆಯಲ್ಲಿ ಬಸ್ ನಿಂತಿತು. ಎರಡೂ ಬಾಗಿಲಿನಿಂದ ಚೆಕಿಂಗ್ ಮಾಡುವ ಅಧಿಕಾರಿಗಳು ಹತ್ತಿ, ಕಂಡಕ್ಟರನ ಕೈಯಿಂದ ಟಿಕೆಟ್ ಕೊಡುವ ಯಂತ್ರವನ್ನು ಕಸಿದುಕೊಂಡು ತಪಾಸಣೆಗೆ ನಿಂತರು. ಬಸ್ಸು ಮುಂದೆ ಹೊರಟಿತು. ಜೀಪು ಹಿಂಬಾಲಿಸತೊಡಗಿತು. ಆದರೆ ತಪಾಸಣಾ ಅಧಿಕಾರಿಗಳಿಗೆ ಒಬ್ಬನೇ ಒಬ್ಬ ಟಿಕೆಟ್ ಇಲ್ಲದ ಪ್ರಯಾಣಿಕ ಸಿಗಲಿಲ್ಲ.! ಕಂಡಕ್ಟರ್ ತನ್ನ ದಪ್ಪದಾದ ಮೀಸೆಯ ಅಡಿಯಲ್ಲಿ ನಗುತ್ತಿದ್ದ.
ಅಕ್ಕನಹಳ್ಳಿಯ ಕೂಡು ಬಂತು. ತಪಾಸಣಾ ಅಧಿಕಾರಿ ಬಸ್ಸು ಇಳಿಯತೊಡಗಿದ. ನಾನು ಅವನ ಹಿಂದೆ ಇಳಿಯುತ್ತಿದ್ದೆ. ‘ಮೋಸ್ಟ್ ಕರೆಪ್ಟೆಡ್ ನನ್ಮಗ ಈ ಕಂಡಕ್ಟರ್. ಯಾರೋ ಇನ್ಫಾರ್‍ಮೇಷನ್ ಕೊಟ್ಟಿರಬೇಕು. ಇಲ್ಲಾಂದ್ರೆ ಸಿಕ್ಕೋತಿದ್ದ’ ಎಂದು ತನಗೆ ತಾನೇ ಹೇಳಿಕೊಂಡ. ಅದು ನನಗೂ ಕೇಳಿಸಿತು. ಇಳಿದು ಜೀಪು ಬರುವುದನ್ನು ಕಾಯುತ್ತಾ ನಿಂತ ಆ ಅಧಿಕಾರಿಯ ಕಣ್ಣಿಗೂ ನನ್ನ ಕಣ್ಣಿಗೂ ಒಂದು ಬೇಟಿಯಾಯಿತು. ಬಸ್ಸು ಮುಂದೆ ಹೋಯಿತು. ಆಗ ನಾನು ‘ಸಾರ್ ತಪ್ಪು ತಿಳಿಯಬೇಡಿ, ನೀವು ಪ್ರಮೋಷನ್ ಮೇಲೆ ಈ ಕೆಲಸಕ್ಕೆ ಬಂದವರಲ್ಲ ಅಲ್ಲವೇ?’ ಎಂದೆ. ಆತ ಆಶ್ಚರ್ಯದಿಂದ ‘ಹೌದು ನಿಮಗೆ ಹೇಗೆ ಗೊತ್ತಾಯಿತು?’ ಎಂದ. ‘ನೀವು ಕಂಡಕ್ಟರ್ ಕೆಲಸ ಮಾಡಿ ಪ್ರಮೋಷನ್ ಮೇಲೆ ಬಂದಿದ್ದರೆ, ಈ ಕಂಡಕ್ಟರ್ ಈಗ ನಿಮ್ಮನ್ನು ಹೇಗೆ ಏಮಾರಿಸಿದ ಎಂದು ತಿಳಿಯುತ್ತಿತ್ತು’ ಎಂದೆ. ‘ಏನು ನನ್ನನ್ನು ಏಮಾರಿಸಿದನೆ! ಹೇಗೆ?’ ಎಂದ. ಜೀಪು ದೂರದಲ್ಲಿ ಬರುತ್ತಿತ್ತು. ಆಗ ನಾನು ಹೇಳಿದೆ.
‘ಸಾರ್ ನೀವು ಟಿಕೆಟ್‌ನ ನಂಬರ್ ಅಷ್ಟೇ ಚೆಕ್ ಮಾಡಿದಿರಿ. ಅದರ ಬದಲು ಆ ಟಿಕೆಟ್ ಹರಿದ ಸಮಯವನ್ನೂ ನೀವು ನೋಡಿದ್ದರೆ, ನೀವು ಚೆಕ್ ಮಾಡುವ ಮೊದಲು, ಕೇವಲ ಒಂದು ನಿಮಿಷದ ಮುಂಚೆ ಹರಿದ ಟಿಕೆಟ್‌ಗಳು ನಿಮಗೆ ಏಳೆಂಟಾದರು ಸಿಗುತ್ತಿದ್ದವು. ಒಂದು ಅಲ್ಲಿಂದ ಹಿಂದಿದ್ದ ಸ್ಟಾಪಿನಿಂದ ಅಲ್ಲಿಗೆ ಬರಲು ಸುಮಾರು ಎಂಟತ್ತು ನಿಮಿಷಗಳಾಗಿದ್ದವು. ಸ್ಟೇಜ್ ಕೊನೆಗೊಂಡು ಎಂಟ್ರಿ ಲಾಕ್ ಕೂಡಾ ಆಗಿತ್ತು. ಮತ್ತೆ ಮುಂದಿನ ಸ್ಟಾಪ್ ಬರುವ ಮೊದಲೆ ಮಿಷನ್ನಿನ ಲಾಕ್ ಓಪನ್ ಮಾಡಿದ್ದು ನಿಮಗೆ ತಿಳಿಯುತ್ತಿತ್ತು ಅಲ್ಲವೆ?’ ಎಂದೆ. ಆ ಅಧಿಕಾರಿ ಒಂದು ಕ್ಷಣ ಯೋಚಿಸಿ, ‘ನೀವು ಹೇಳಿದ್ದು ಸರಿ. ಈ ನನ್ನಮಗ ಇನ್ನೊಮ್ಮೆ ಸಿಗಲಿ ಆಗ ತೋರಿಸ್ತೀನಿ’ ಎಂದು ಮುಂದೆ ಬಂದ ಜೀಪು ಹತ್ತಿ, ನನ್ನತ್ತ ಕೈಬೀಸಿ ಹೊರಟೇ ಹೋದ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ನಾನು ಹೈಸ್ಕೂಲ್ ಓದುವಾಗ, ಜೀಪ್ ಬಂದು ಬಸ್ಸಿಗೆ ಕಾಯುತ್ತಾ ಕುಳಿತಿದ್ದರೆ, ನಾನೇ ಓಡಿ ಹೋಗಿ ಕಂಡಕ್ಟರ್‌ನಿಗೆ ತಿಳಿಸಿಬಿಡುತ್ತಿದ್ದೆ! ಕಂಡಕಕ್ಟರ್ ಡ್ರೈವರ್ ಅವರಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳುತ್ತಿದ್ದೆ. ಈ ಘಟನೆಯನ್ನು ನಾನು ನನ್ನ ಹೈಸ್ಕೂಲ್ ದಿನಗಳು ಪುಸ್ತಕದಲ್ಲಿ ದಾಖಲಿಸಿದ್ದೇನೆ ಕೂಡ. ಮೊನ್ನೆ ಅದೆಲ್ಲಾ ನೆನಪಾಯಿತು ಅಷ್ಟೆ!

Tuesday, December 16, 2008

ಅವಸರವಿಲ್ಲ...


ಇಂದು ಅವಸರವಿಲ್ಲ ನನಗೆ
ಹೋಗಿಬನ್ನಿ, ಶುಭವಾಗಲಿ ನಿಮಗೆ
ಇಂದು ನೀವು; ನಾಳೆ ನಾವು
ಬಂದೆ ಬರುವೆವು ಅಲ್ಲಿಗೆ.

ನೀವೆ ಹಚ್ಚಿದ ಹಣತೆಗೆ
ಜೊತೆಗಿರಬೇಕು ಇನ್ನಷ್ಟು ದಿನ
ನಿಮ್ಮದೇ ಕನಸು ನನಸಾಗುವತನಕ
ನೀವಿತ್ತ ದೀಕ್ಷೆ; ನಿಮಗಿತ್ತ ಮಾತು
ನೀವು ತೋರಿಸಿದ ದಾರಿ
ನಾ ತೊಟ್ಟ ಗುರಿ
ತಲುಪಿದ ಮೇಲೆ
ನಾನಿಲ್ಲಿ ಇರುವೆನೇನು?

ಎನ್ನ ಜೊತೆಗೆ ನೀವೆ ಈಗಲೂ
ಎಂದಿನಂತೆ ಬೆಂಗಾವಲೂ!
ಅಂದು ಮೈನೇವರಿಸುತ್ತಿದ್ದರಿ
ಇಂದು ಮನ ತಡವುತ್ತಿರುವಿರಿ
ಅಂತ್ಯವೆಂಬುದೇ ಇಲ್ಲ; ಗುರುವೇ
ನಾನಿನ್ನ ಬೇಡುವುದಿಲ್ಲ.

ಸಾಕೆಂಬುದಿಲ್ಲ
ಹಾಗೆಂದು ಬೇಕಂಬುದೂ ಇಲ್ಲ
ಸಾಕು ಬೇಕುಗಳ ಪಟ್ಟಿಗೆ
ಲೆಕ್ಕ ಇಟ್ಟವರಿಲ್ಲ.
ಇಂದು ನಾಳೆಗೂ ಇರಲಿ
ಭ್ರಮೆ ಹರಿಯುವತನಕ
ನಾನಿಲ್ಲಿ. ನೀವಲ್ಲಿ
ನನಗೆ ಅವಸರವಿಲ್ಲ
ಗೊತ್ತೆನೆಗೆ,
ಬೇಸರವೂ ಇಲ್ಲ ನಿಮಗೆ.

Saturday, December 13, 2008

ನವಿಲುಕಲ್ಲಿನಲ್ಲಿ ಸೂರ್ಯೋದಯದ ವರ್ಣವೈಭವ

ನವಿಲುಕಲ್ಲಿನಲ್ಲಿ ಸೂರ್ಯೋದಯ

ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ

ಪೊಣ್ಮುತಿದೆ ಶೀಖರಕಂದರಮಯಂ ಸಹ್ಯಾದ್ರಿ.

ಸ್ಪಷ್ಟತರವಾಗುತಿರೆ ಭೂವ್ಯೋಮಗಳ ಸಂದಿ

ದೃಶ್ಯಚಕ್ರದ ನೇಮಿಯಂದದಿ ದಿಗಂತಫಣಿ

ಸುತ್ತುವರಿದಿದೆ ದೃಷ್ಟಿವಲಯಮಂ. ನಾಣ್ಗೆಂಪು

ಮೊಗದೊಳೇರುವ ಉಷಾ ಭೋಗಿನಿಯ ಫಣೆಯಲ್ಲಿ

ಬೆಳ್ಳಿ, ಉಜ್ವಲ ತಾರೆ, ಕುಂಕುಮ ಹರಿದ್ರದಿಂ

ರಂಜಿಸುವ ಪೊಂಬಣೆಗೆ ರಜತ ತಿಲಕದ ಬಿಂದು

ತಾನೆನೆ ವಿರಾಜಿಸಿದೆ.

-ಶ್ರೀ ಕುವೆಂಪು

Friday, December 12, 2008

ಶ್ರೀ ಕುವೆಂಪು ಅವರು ಕವಿತೆಯೊಂದರಲ್ಲಿ ನವಿಲುಕಲ್ಲು ಗುಡ್ಡದಲ್ಲಿ ಆಗುವ ಸೂರ್ಯೋದಯದ ವರ್ಣನೆಯನ್ನು ಮಾಡಿದ್ದಾರೆ. ಅಂತಹ ನವಿಲುಕಲ್ಲು ಗುಡ್ಡಕ್ಕೆ ಹೋಗಿ ಸ್ವರ್ಗ ಸದೃಶ್ಯವಾದ ಸೂರ್ಯೋದಯದ ವರ್ಣವೈಭವವನ್ನು ಸವಿಯುವುದೇ ಒಂದು ಸಾಹಸ ಹಾಗೂ ಸಾರ್ಥಕ ಕೆಲಸ ಅದರ ಕೆಲವು ಚಿತ್ರಗಳು ಇಲ್ಲಿವೆ. (ದಿನಾಂಕ ಮತ್ತು ಸಮಯವನ್ನು ಕ್ಯಾಮೆರಾದಲ್ಲಿ ಸರಿಯಾಗಿ ಸೆಟ್ ಮಾಡಲಿಲ್ಲವಾದ್ದರಿಂದ ತಪ್ಪಾಗಿ ನಮೂದಾಗಿರುತ್ತದೆ)





















Thursday, December 11, 2008

ತೇಜಸ್ವಿ: ಮಾತು ಮೂರು ಅರ್ಥ ನೂರಾರು

“ತೇಜಸ್ವಿ: ಮಾತು ಮೂರು ಅರ್ಥ ನೂರಾರು” ಎಂಬ ಈ ಲೇಖನ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆದರೆ ಆ ಪತ್ರಿಕೆಗಿರುವ ಸೀಮಿತ ಓದುಗ ವಲಯದಿಂದಾಗಿ ಹೆಚ್ಚಿನ ಜನಕ್ಕೆ ಲೇಖನ ತಲುಪಿಲ್ಲವೆಂಬುದು ನನ್ನ ಅಭಿಪ್ರಾಯ. ಅದೀಗ ನನ್ನ ಬ್ಲಾಗಿನಲ್ಲಿ!
ತೇಜಸ್ವಿ: ಮಾತು ಮೂರು ಅರ್ಥ ನೂರಾರು
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಪಿಯಿಸಿ ವಿದ್ಯಾರ್ಥಿಯಾಗಿದ್ದೆ. ನಮಗೆ ‘ಕರ್ವಾಲೊ’ ಕಾದಂಬರಿ ಪಠ್ಯವಾಗಿತ್ತು. ನನ್ನ ಆಗಿನ ಅಭ್ಯಾಸದಂತೆ ತರಗತಿಗಳು ಪ್ರಾರಂಭವಾಗುವ ಮೊದಲೇ ಪಠ್ಯಪುಸ್ತಕಗಳನ್ನು ಓದಿ ಮುಗಿಸಿದ್ದೆ. ಅಲ್ಲಿಂದ ಪರೀಕ್ಷೆ ಮುಗಿಯುವ ಒಂದು ವರ್ಷದ ಅವಧಿಯಲ್ಲಿ ಸುಮಾರು ಇಪ್ಪತ್ತೈದು ಬಾರಿ ಕರ್ವಾಲೋ ಕಾದಂಬರಿಯನ್ನು ಓದಿದ್ದೆ! ಪರೀಕ್ಷೆಯ ದೃಷ್ಟಿಯಿಂದ ಒಂದು ಬಾರಿಯೂ ಓದಲಿಲ್ಲ. ಕಾದಂಬರಿಯ ಕರ್ತೃ ‘ಪೂರ್ಣಚಂದ್ರ ತೇಜಸ್ವಿ’ ಎಂಬುದಷ್ಟೇ ಗೊತ್ತಾದರೂ, ಅವರ ಪೂರ್ವಾಪರವನ್ನಾಗಲೀ, ಇತರ ಕೃತಿಗಳ ವಿವರಗಳನ್ನಾಗಲೀ ನಾನು ಗಮನಿಸಲೇ ಇಲ್ಲ. ಹೀಗೆ ಕರ್ವಾಲೋ ಕಾದಂಬರಿಯ ಮೂಲಕ ತೇಜಸ್ವಿ ನನ್ನವರಾದರು.
ಮುಂದಿನ ದಿನಗಳಲ್ಲಿ ತೇಜಸ್ವಿಯವರ ಇತರ ಕೃತಿಗಳನ್ನು ಓದುವ ಅವಕಾಶ ಭಿಸಿತ್ತು. ಆದರೂ ಅವರು ಕುವೆಂಪು ಅವರ ಮಗ ಎಂಬುದು ತಿಳಿದಿದ್ದು, ಮೈಸೂರಿನಲ್ಲಿ ಕುವೆಂಪು ಅವರು ನಿಧನರಾದ ದಿನದಂದು! ಅಷ್ಟರಮಟ್ಟಿಗೆ ತನ್ನ ಓದುಗರಿಂದ ಅಪರಿಚತರಾಗಿ ತೇಜಸ್ವಿ ಉಳಿದಿದ್ದರು. ಅದು ಅವರ ಅಪೇಕ್ಷೆಯಲ್ಲದಿದ್ದರೂ ಇಷ್ಟವಾದುದ್ದೇ ಆಗಿತ್ತು.
ತೇಜಸ್ವಿಯವರನ್ನು ಗಂಟೆಗಟ್ಟಲೆ ಬೇಟಿಯಾಗಿ ಮಾತನಾಡುವ ಅವಕಾಶ ನನಗೆ ಸಿಗಲಿಲ್ಲ. ಅವರ ಮಾತಿನ ಪ್ರಖರತೆ ನನಗೆ ಗೊತ್ತಾಗಿದ್ದು ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಪತ್ರಗಳ ಮೂಲಕ ಮಾತ್ರ. ಅವರು ಭಾಗವಹಿಸಿದ್ದ ಮೂರ್‍ನಾಲ್ಕು ಸಂವಾದ ಕಾರ್ಯಕ್ರಗಳಲ್ಲಿ ತೇಜಸ್ವಿಯವರಿಗೆ ಪ್ರಶ್ನೆ ಕೇಳಿದ್ದುಂಟು. ಸಂವಾದ ಕಾರ್ಯಕ್ರಮ ಮುಗಿದ ನಂತರ ನಿಂತು ಮಾತನಾಡುವಾಗ ಪರಿಚಯ ಮಾಡಿಕೊಂಡಿದ್ದುಂಟು. ಆದರೂ ತೇಜಸ್ವಿ ನಮಗೆ ದಕ್ಕಿದ್ದು ಅವರ ಕೃತಿಗಳ ಮೂಲಕ ಮಾತ್ರ. ಬೆಂಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಬೆಂಗಳೂರಿನಲ್ಲಿ ಒಂದು ವಿಚಾರ ಕಮ್ಮಟವನ್ನು ಸಂಘಟಿಸುವ ಹಾಗೂ ಆ ವಿಚಾರ ಕಮ್ಮಟದಲ್ಲಿ ಮಂಡಿತವಾದ ಪ್ರಬಂಧಗಳನ್ನು ಸಂಪಾದಿಸುವ ಅವಕಾಶ ನನಗೆ ಲಭಿಸಿತ್ತು. ಆ ಕಮ್ಮಟಕ್ಕೆ ಉದ್ಘಾಟನಾ ಭಾಷಣ ಮಾಡಲು ಬಂದಿದ್ದ, ತೇಜಸ್ವಿಯವರ ಗೆಳೆಯ ಕೆ.ರಾಮದಾಸ್ ಅವರು, ಹೋಟೆಲ್ ರೂಮಿನಲ್ಲಿ ಕುಳಿತು ತೇಜಸ್ವಿಯವರ ಬಗ್ಗೆ ಭಾವುಕರಾಗಿ ಮಾತನಾಡಿದ್ದರು. ಅವರ ಮಾತುಗಳಿಂದ ತೇಜಸ್ವಿ ನಮಗೆ ಇನ್ನಷ್ಟು ಹತ್ತಿರವಾಗಿದ್ದರು.
ಅವರ ಸಾಹಿತ್ಯವನ್ನು ಕುರಿತ ಹಲವಾರು ಸಾಹಿತ್ಯಕಮ್ಮಟದಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ಹೀಗೆ ತೇಜಸ್ವಿ ತಮ್ಮ ಕೃತಿಗಳ ಮೂಲಕವೇ ನನ್ನ ಹಾಗೂ ನನ್ನಂತಹ ಸಾವಿರಾರು ಓದುಗರಿಗೆ ಪರೋಕ್ಷ ಗುರುವಾದವರು. ಅವರ ಋಷಿ ಸದೃಶ ಬದುಕು ಹಾಗೂ ಆ ಬದುಕಿನ ಉಪಉತ್ಪನ್ನಗಳಾದ ಅವರ ಕೃತಿಗಳು ಅವರಿಗೆ ಗುರುವಿನ ಸ್ಥಾನವನ್ನು ತಂದುಕೊಟ್ಟಿವೆ. ಅದು ಅವರಿಗೆ ಇಷ್ಟವಿತ್ತೋ ಇಲ್ಲವೋ! ಈಗಿನ ನನ್ನ ಅರಿವಿಗೆ, ಪ್ರಜ್ಞೆಗೆ ಅವರೇ ಗುರು ಎಂಬುದಂತೂ ನನ್ನ ಮಟ್ಟಿಗೆ ಸತ್ಯಸ್ಯಸತ್ಯ.
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಹತ್ತಿರದವರು ಸತ್ತಾಗ ದುಃಖವಾಗುತ್ತದೆ. ನಾಲ್ಕು ದಿನ ಅಳುವುದರಿಂದಲೂ ಕಾಲದ ಪ್ರಭಾವದಿಂದಲೂ ಆ ದುಃಖ ಕಡಿಮೆಯಾಗಿ ಇಲ್ಲವಾಗುತ್ತದೆ. ಆದರೆ ತೇಜಸ್ವಿ ನಿಧನರಾದರೆಂದು ತಿಳಿದಾಗ ದುಃಖಕ್ಕಿಂತ ಹೆಚ್ಚಾಗಿ ಒಂದು ಬಗೆಯ ಶೂನ್ಯ ನನ್ನನ್ನಾವರಿಸಿತ್ತು. ಅಂದು ಸುಮಾರು ೨.೨೫ರ ಹೊತ್ತಿಗೆ, ಕಾಲೇಜಿನಲ್ಲಿದ್ದ ನನಗೆ ಮನೆಯಿಂದ ‘ತೇಜಸ್ವಿ ನಿಧನರಾದರಂತೆ’ ಎಂಬ ಸುದ್ದಿ ಪೋನ್ ಮುಖಾಂತರ ತಲುಪಿದಾಗ ಒಂದು ರೀತಿಯ ಶೂನ್ಯ ಆವರಿಸಿತ್ತು. ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಿದರೂ ಏನೋ ಒಂದು ರೀತಿಯ ಮಂಕು ಕವಿದಿತ್ತು. ‘ಅಲ್ಲಿದ್ದ ನಮ್ಮ ಒಂದು ವಸ್ತು ಇಲ್ಲವಾಗಿದೆ’, ‘ಏನೋ ನಮ್ಮದು ಕಳೆದು ಹೋಗಿದೆ’ ಎಂಬ ಭಾವನೆಗಳು ಮನಸ್ಸನ್ನಾವರಿಸಿತ್ತು. ಆ ಶೂನ್ಯದಿಂದ ಹೊರಬರಲು ಸುಮಾರು ಮೂರು ಘಂಟೆಗಳೇ ಬೇಕಾಯಿತು. ಹಾಗೆ ಹೊರಬರಲು ನೆರವಾಗಿದ್ದು, ತೇಜಸ್ವಿ ಬದುಕನ್ನು ನೋಡುತ್ತಿದ್ದ ರೀತಿ ಹಾಗೂ ಅವರ ಕ್ರಿಯಾಶೀಲತೆಯ ನೆನಪುಗಳೇ!
ತೇಜಸ್ವಿ ಮಾತನಾಡಿದ್ದು ಕಡಿಮೆ. ಕೆಲವೊಂದು ಬಾರಿ ಅವರು ಮಾತನಾಡಲೆಂದು ಬೆಂಗಳೂರಿನ ಮಾಧ್ಯಮಗಳು ಕಾಯುತ್ತಿದ್ದವೇನೋ ಅನ್ನಿಸುತ್ತಿತ್ತು. ಯಾವುದೇ ಒಂದು ಚಿಕ್ಕ ವಿಷಯಕ್ಕಾದರೂ ಸರಿಯೆ, ಅವರ ಪ್ರತಿಕ್ರಿಯೆ ಪತ್ರಿಕೆಯಲ್ಲಿ ಬಂದಿತೆಂದರೆ ಸಾಕು ಇಡೀ ಕನ್ನಡ ಸಾಂಸ್ಕೃತಿಕ ಲೋಕವೇ ಎಚ್ಚರಗೊಳ್ಳುತ್ತಿತ್ತು. ಇತ್ತೀಚಿಗೆ ನಾಡಗೀತೆ, ಇಂಗ್ಲೀಷ್ ಭಾಷಾಕಲಿಕೆ, ಕನ್ನಡ ತಂತ್ರಾಂಶ ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಪತ್ರಿಕೆಗಳಿಗೆ ಕಾಗದ ಬರೆದಿದ್ದರು. ಗೋಹತ್ಯೆ ನಿಷೇಧದ ಸಾಧಕಬಾದಕಗಳನ್ನು ಕುರಿತು ಅಂದಿನ ಪ್ರಧಾನಿ ವಾಜಪೇಯಿಯವರಿಗೆ ಬಹಿರಂಗ ಪತ್ರ ಬರೆದಿದ್ದರು. ಆಗೆಲ್ಲಾ ಕನ್ನಡ ಸಾಂಸ್ಕೃತಿಕ ಲೋಕ ಸ್ಪಂದಿಸಿದೆ. ನಾಡಗೀತೆಯ ಚರ್ಚೆಯಲ್ಲಂತೂ ಅವರ ವೈಚಾರಿಕ ಪ್ರಖರತೆಯ ಸ್ಪಷ್ಟ ಪರಿಚಯ ಕನ್ನಡ ಜನತೆಗಾಗಿದೆ. ಇನ್ನೂ ಕೆಲವೊಮ್ಮೆ ಅವರ ಮೌನವನ್ನು ಹಾಗೂ ವಿಚಾರಧಾರೆಯನ್ನು ಸಹಿಸದ ಬೆಂಗಳೂರಿನ ಸುದ್ದಿಜೀವಿಗಳು ಚಟಪಡಿಸಿದ್ದುಂಟು. ‘ತೇಜಸ್ವಿ ಕನ್ನಡಕ್ಕಾಗಿ ಕಡಿದು ಕಟ್ಟೆ ಹಾಕಿರುವುದು ಏನನ್ನು?’, ‘ಕಾಫಿತೋಟದಲ್ಲಿ ಬೆಚ್ಚಗೆ ಕುಳಿತಿದ್ದಾರೆ’ ಎಂದು ಅವಿಚಾರಿಗಳಾಗಿ ಕಾಲು ಕೆರೆಯುತ್ತಿದ್ದುದೂ ಇದೆ. ಅಂತಹವುಗಳಿಗೆಲ್ಲಾ ತೇಜಸ್ವಿ ಉತ್ತರಿಸುತ್ತಿರಲಿಲ್ಲ. ಆದರೆ ಪ್ರಾರಂಭದ ದಿನದಲ್ಲಿ ಅದನ್ನು ಸಹಿಸದ ನಮಗೆ, ವಾಚಕರವಾಣಿಗೆ ಪತ್ರ ಬರೆದು ಸುದ್ದಿಜೀವಿಗಳನ್ನು ಕುಟುಕುವ ಚಪಲ. ಅದೆಲ್ಲವನ್ನು ಈಗ ಗಮನಿಸಿದರೆ, ತೇಜಸ್ವಿಯ ಮೌನವೇ ಅರ್ಥಪೂರ್ಣವಾಗಿತ್ತೆನಿಸುತ್ತದೆ. ಆದರೆ ತೇಜಸ್ವಿ ನಮ್ಮಲ್ಲಿ ಮೂಡಿಸಿದ ಅರಿವು ಅದರ ಬಗ್ಗೆ ಪಶ್ಚತ್ತಾಪಪಟ್ಟುಕೊಂಡು ಕೂರಲು ಬಿಡುವುದಿಲ್ಲ. ನೆನ್ನೆ ನೆನ್ನೆಗೆ, ನಾಳೆ ನಾಳೆಗೆ ಆದರೂ ನೆನ್ನೆಗಳಿಂದ ಪಾಠ ಕಲಿಯಲು ಆ ‘ಅರಿವು’ ನಮ್ಮನ್ನು ಸದಾ ಪ್ರೇರೇಪಿಸುತ್ತಿರುತ್ತದೆ.
ಸ್ವತಃ ಗ್ರಂಥಪಾಲಕನಾದ ನಾನು ತೇಜಸ್ವಿ ಸಾಹಿತ್ಯದ ಓದುಗನಾಗಿದ್ದಂತೆ ಒಂದು ರೀತಿಯಲ್ಲಿ ಪ್ರಚಾರಕನೂ ಆಗಿದ್ದೆ. ಕನ್ನಡದಲ್ಲಿ ಓದಲು ಒಳ್ಳೆಯ ಪುಸ್ತಕಗಳಿದ್ದರೆ ಕೊಡಿ ಎನ್ನುವವರಿಗೆ ನಾನು ಮೊದಲು ಕೊಡುತ್ತಿದ್ದುದು ತೇಜಸ್ವಿಯವರ ಕೃತಿಗಳೇ. ತೇಜಸ್ವಿಯವರ ಒಂದೆರಡು ಕೃತಿಗಳನ್ನು ಓದಿದವರು ಬಂದು ಅವರ ಉಳಿದ ಪುಸ್ತಕಗಳನ್ನು ಕೇಳಿ ಪಡೆದುಕೊಂಡು ಓದಿದವರಿದ್ದಾರೆ. ನನ್ನ ಸ್ನೇಹಿತರ ವಲಯದಲ್ಲೇ ಹತ್ತಾರು ಜನಕ್ಕೆ ತೇಜಸ್ವಿಯವರ ಕೃತಿಗಳ ಹುಚ್ಚನ್ನು ಹಿಡಿಸಿದ್ದೆ. ಅವರ ಎಲ್ಲಾ ಕೃತಿಗಳನ್ನು ಸರದಿಯ ಪ್ರಕಾರ ಓದಿ ಚರ್ಚೆ ಮಾಡಿದ್ದೇವೆ. ಇತ್ತೀಚಿಗೆ ಕನ್ನಡವನ್ನು ಓದಲು ಕಲಿತ, ಸಾಹಿತ್ಯದ ಬಗ್ಗೆ ಆಸಕ್ತಿಯಿರುವ ಗುಜರಾಥಿ ಮಹಿಳೆಯೊಬ್ಬರಿಗೆ, ನನ್ನ ಇನ್ನೊಬ್ಬ ಗ್ರಂಥಾಲಯ ಮಿತ್ರನ ಕೋರಿಕೆಯ ಮೇರೆಗೆ ನಾನು ಮೊದಲಿಗೆ ಸೂಚಿಸಿದ್ದು, ಪರಿಸರದ ಕಥೆಗಳು ಮತ್ತು ಕರ್ವಾಲೋ ಪುಸ್ತಕಗಳನ್ನು. ಕೇವಲ ಮೂರೇ ದಿನಗಳಲ್ಲಿ ಓದಿಮುಗಿಸಿದ ಅವರು ತೇಜಸ್ವಿಯವರ ಎಲ್ಲಾ ಕೃತಿಗಳನ್ನು ಓದುವ ಆಸೆ ವ್ಯಕ್ತಪಡಿಸಿದರಂತೆ. ಆದರೆ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆಯದೆ ಎಲ್ಲಾ ಪುಸ್ತಕಗಳನ್ನು ಕೊಂಡೇ ಓದುತ್ತೇನೆ ಎಂದರಂತೆ! ಇದು ತೇಜಸ್ವಿಯವರ ಸಾಹಿತ್ಯಕ್ಕಿರುವ ಶಕ್ತಿ. ಗುರುಲಿಂಗ ಕಾಪಸೆಯವರೊಂದಿಗೆ ಮಾತನಾಡುತ್ತಿದ್ದ ಮರಾಠಿ ಸಾಹಿತಿ ವಿ.ಸಾ. ಖಾಂಡೇಕರರು ‘ನಿಮ್ಮ ತೇಜಸ್ವಿ ಬೇರೆ ಭಾಷೆಯ ಲೇಖಕರಿಗಿಂತ ನೂರು ವರ್ಷ ಮುಂದಿದ್ದಾರೆ’ ಎಂದಿದ್ದರಂತೆ. ‘ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ’ ಎಂದು ಕನ್ನಡಿಗರು ಗುರುತಿಸುವ ಮೊದಲೇ, ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಖಾಂಡೇಕರರು ತೇಜಸ್ವಿ ಸಾಹಿತ್ಯದ ಅನನ್ಯತೆಯನ್ನು ಗುರುತಿಸಿದ್ದರು! ಅವರ ಬರವಣಿಗೆ ಓದುಗನೊಂದಿಗೆ ಬಹುಬೇಗ ಉತ್ತಮ ಸಂವಹನವನ್ನು ಏರ್ಪಡಿಸಿಕೊಂಡುಬಿಡುತ್ತದೆ. ಅವರ ಪುಸ್ತಕದ ವಿವರಗಳು ನಮ್ಮ ಬದುಕಿನ ವಿವರಗಳಾಗಿಬಿಡುತ್ತವೆ. ಅವರ ಪಾತ್ರಗಳಲ್ಲೊಂದು ನಾವಾಗಿರುತ್ತೇವೆ. ನಮ್ಮ ಅಕ್ಕಪಕ್ಕದವರಾಗಿರುತ್ತಾರೆ. ಇದು ತೇಜಸ್ವಿಯವರ ಸಾಹಿತ್ಯದ ವಿಶೇಷ.
ತೇಜಸ್ವಿ ಸಾಹಿತ್ಯದ ಓದುಗನಾಗಿದ್ದರೂ ಅವರ ಪುಸ್ತಕಗಳ ಬಗ್ಗೆ ಬಂದಿರುವ ವಿಮರ್ಶೆಯನ್ನು ಓದಲು ನನಗೆ ಬಹಳ ಕಷ್ಟವಾಗುತ್ತಿತ್ತು. ಏಕೋ ಈ ವಿಮರ್ಶಕರು ತೇಜಸ್ವಿಯವರನ್ನು ಓದುಗನಿಂದ ದೂರ ಮಾಡುತ್ತಿದ್ದಾರೆ ಎಂಬ ಗುಮಾನಿ ನನ್ನನ್ನು ಕಾಡುತ್ತಿತ್ತು. ಅಣ್ಣನ ನೆನಪು ಪುಸ್ತಕದಲ್ಲಿ ತೇಜಸ್ವಿ ಹೇಳುವಂತೆ ವ್ಯಾಖ್ಯಾನ ಬೇಕಾಗುವುದು ಪದ್ಯಸಾಹಿತ್ಯಕ್ಕೆ ಮಾತ್ರ; ಗದ್ಯಸಾಹಿತ್ಯಕ್ಕಲ್ಲ. ಗದ್ಯದಲ್ಲಿ ‘ಅವನು ಸತ್ತ’ ಎಂದರೆ ಸತ್ತ ಎಂದೇ ಅರ್ಥ. ಪದ್ಯದಲ್ಲಿಯಾದರೆ ಅದನ್ನೊಂದು ಪ್ರತಿಮೆಯೆನ್ನಾಗಿಯೂ ಬಳಸಿಕೊಳ್ಳಬಹುದು. ಅದರಲ್ಲೂ ತೇಜಸ್ವಿಯಂಥ ಅಪ್ರತಿಮ ಗದ್ಯಲೇಖಕನ ಪುಸ್ತಕಗಳನ್ನು ವ್ಯಾಖ್ಯಾನಿಸುವುದರ ಅಗತ್ಯವೇ ಇಲ್ಲ. ನಾವು ಪರಿಸರಕ್ಕೆ ಮಾಡುವ ಸಹಾಯವೇ ಅದಕ್ಕೆ ಉರುಳಾಗುವಂತೆ, ತೇಜಸ್ವಿಯವರ ಸಾಹಿತ್ಯಕ್ಕೆ ನಾವು ಮಾಡುವ ವಿಮರ್ಶೆಯೇ ಓದುಗ ಮತ್ತು ಕೃತಿಯ ನಡುವಿನ ಗೋಡೆಯಾಗಿಬಿಡುವ ಅಪಾಯವಿದೆ. ಇತ್ತೀಚಿಗೆ ತೇಜಸ್ವಿ ಸಾಹಿತ್ಯವನ್ನು ಕುರಿತ ವಿಚಾರಕಮ್ಮಟಗಳಲ್ಲೂ ಇಂತಹ ಅಭಿಪ್ರಾಯಗಳು ಮೂಡಿಬಂದಿವೆ. ವಿಮರ್ಶೆಯ ಸಿದ್ಧಮಾದರಿಗಳನ್ನು ಇಟ್ಟುಕೊಂಡು ತೇಜಸ್ವಿ ಕೃತಿಗಳನ್ನು ಪರಿಶೀಲಿಸಲಾಗದು ಎನ್ನುವ ವಿಮರ್ಶಕರೇ ಆಡಿದ ಮಾತನ್ನು ಮರೆತು ಸಿದ್ಧಮಾದರಿಗಳ ಚೌಕಟಿನಲ್ಲೇ ಮಾತನಾಡುವುದನ್ನು ನೋಡಿದ್ದೇನೆ. ಏಕೆಂದರೆ ಅಗತ್ಯವನ್ನಷ್ಟೇ ಗುರುತಿಸುವ ವಿಮರ್ಶಕನ ಪ್ರತಿಭೆ ಅದಕ್ಕೆ ಬೇಕಾಗಿರುವ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಸೋಲುತ್ತಿದೆ. ಈ ರೀತಿಯ ‘ಪ್ರೌಢ ಠಕ್ಕ ವಿಮರ್ಶೆ’ಯ ಬಗ್ಗೆ ತೇಜಸ್ವಿಯವರಿಗಿದ್ದ ವಿರೋಧ ಎಲ್ಲರಿಗೂ ತಿಳಿದಿದ್ದೇ ಆಗಿದೆ. ಆದರೆ ತೇಜಸ್ವಿಯವರು ಶುದ್ಧ ವಿಮರ್ಶೆಯ ವಿರೋಧಿಯಾಗಿರಲಿಲ್ಲ. ಇತ್ತೀಚಿಗೆ ಅವರು ಸಹೃದಯ ವಿಮರ್ಶೆಯನ್ನು ಮೆಚ್ಚಿಕೊಂಡಿದ್ದರು. ಕುವೆಂಪು ಅವರು ದ್ರೌಪದಿಯ ಶ್ರೀಮುಡಿ ಮತ್ತು ತಪೋನಂದನ ಕೃತಿಗಳಲ್ಲಿ ನಡೆಸಿರುವ ಹಳೆಗನ್ನಡ ಕೃತಿಗಳ ವಿಮರ್ಶಾ ಮಾದರಿಗಳನ್ನು ಇಂದಿನ ಅಗತ್ಯಗಳೆಂದು ಪ್ರತಿಪಾದಿಸಿದ್ದರು.
ತೇಜಸ್ವಿ ಸಾಹಿತ್ಯಕ್ಕೆ ಹೇಗೆ ವ್ಯಾಖ್ಯಾನ ಬೇಕಿಲ್ಲವೋ ಹಾಗೇ ಅವರ ಮಾತುಗಳಿಗಂತೂ ಯಾವ ವಿವರಣೆಯೂ ಬೇಕಾಗಿಲ್ಲ. ನೇರ ನುಡಿಯ ತೇಜಸ್ವಿ ನಾಡಿನ ಹಲವಾರು ವಿಷಯಗಳ ಬಗ್ಗೆ ಸಾರ್ವಜನಿಕವಾಗಿ, ಖಾಸಗಿಯಾಗಿ ಪ್ರತಿಕ್ರಿಯತಿಸಿದ್ದಾರೆ. ಈ ಪ್ರತಿಕ್ರಿಯೆ ಕೇವಲ ಮಹತ್ವದ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಗೆ ನೋಡಿದರೆ ಮನುಷ್ಯನ ಬದುಕಿನ ಪ್ರತಿಯೊಂದು ಕ್ಷಣವೂ ಮಹತ್ವದ್ದೇ ಆಗಿರುತ್ತದೆ ಎಂದು ನಂಬಿದ್ದವರು ತೇಜಸ್ವಿ. ಅವರ ಒಂದೊಂದು ಮಾತೂ ಅರಿತವಾದ ಅಲುಗಿನಂತೆ. ಆದರೆ ಅವುಗಳಲ್ಲೂ ಅವರ ಅಭಿವ್ಯಕ್ತಿಯ ಅಂತಸ್ಸತ್ವವಾದ ಹಾಸ್ಯದ ಲೇಫನ ಮಾತ್ರ ಇದ್ದೇ ಇರುತ್ತದೆ. ಅವುಗಳು ಮಾಡುವ ಪರಿಣಾಮ ಮಾತ್ರ ಅಗಾಧವಾದುದು. ತೇಜಸ್ವಿಯವರ ಪ್ರತಿಕ್ರಿಯೆಗಾಗಿ ಮಾಧ್ಯಮವಲಯ ಕಾಯುತ್ತಿತ್ತು ಎಂದು ಹೇಳಿದ್ದು ಈ ಅರ್ಥದಲ್ಲೇ. ತೇಜಸ್ವಿಯವರ ಪ್ರತಿಕ್ರಿಯೆಗಳನ್ನು ಒಂದೆಡೆ ಸಂಗ್ರಹಿಸುವುದಷ್ಟೇ ಈ ಲೇಖನದ ಉದ್ದೇಶ. ಅವುಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ಕೊಡುವ ಉದ್ದೇಶವಿಲ್ಲ. ಆಯಾಯಾ ಸಂದರ್ಭದೊಂದಿಗೆ ಅವರ ಪ್ರತಿಕ್ರಿಯಗಳನ್ನು ನೀಡಲಾಗುವುದು. ಈ ಪ್ರತಿಕ್ರಿಯೆಗಳಿಗೆ ಪತ್ರಿಕೆಗಳು, ಅವರ ಕೃತಿಗಳು, ಸಂವಾದಗಳಲ್ಲಿ ಅವರು ಕೊಟ್ಟ ಉತ್ತರಗಳು ಆಧಾರಗಳಾಗಿವೆ. ತೇಜಸ್ವಿ ಸಾಹಿತ್ಯದ ಓದುಗನಾದ ಮೇಲೆ ಅವರ ಮಾತುಗಳನ್ನು ಸಂಗ್ರಹಿಸುವ ನನ್ನ ಹವ್ಯಾಸದಿಂದಾಗಿ ನೂರಾರು ಪತ್ರಿಕಾ ಸಂಗ್ರಹಗಳು ನನ್ನಲ್ಲಿದ್ದು ಅವುಗಳಲ್ಲಿ ಕೆಲವನ್ನಾದರೂ ಒಂದೆಡೆ ತರುವ ನನ್ನ ಕನಸು ಈ ಲೇಖನದ ಮೂಲಕ ಈಡೇರುತ್ತಿದೆ.
* * * * *
ಕರ್ವಾಲೋ ಕಾದಂಬರಿಗೆ ಮುನ್ನುಡಿ ಬರೆಯುವಂತೆ ಜಿ.ಎಚ್.ನಾಯಕ್ ಅವರನ್ನು ತೇಜಸ್ವಿ ಕೇಳಿದಾಗ ನಾಯಕರು ‘ತೇಜಸ್ವಿ, ತಮಾಷೆ ಮಾಡ್ತಿರೇನ್ರಿ? ಬೇರೆ ದೊಡ್ಡವರ ಹತ್ತಿರ ಬರೆಸಬಹುದಲ್ಲ?’ ಎಂದರಂತೆ. ಅದಕ್ಕೆ ಪ್ರತಿಯಾಗಿ ತೇಜಸ್ವಿ ಹೇಳಿದ್ದು ಹೀಗೆ: “ಏ... ದೊಡ್ಡವರಿಗೆಲ್ಲ ಅರ್ಥ ಆಗಲ್ಲ ಕಣ್ರೀ... ನೀವೇ ಬರೀಬೇಕು. ನೀವು ಏನಾದ್ರೂ ಬರೀರಿ, ಎಷ್ಟಾದ್ರೂ ಬರೀರಿ. ನಾನು ನೋಡೋದಿಲ್ಲ. ನೇರ ಶ್ರೀರಾಮ್‌ಗೆ ಕೊಟುಬಿಡಿ. ಪ್ರಿಂಟ್ ಆದಮೇಲೆ ನೋಡ್ತೀನಿ!”
ನಾಯಕರೊಂದಿಗೆ ನಡೆದ ಇನ್ನೊಂದು ಮಾತುಕತೆ ಹೀಗಿದೆ.
ತೇಜಸ್ವಿ: ನಾಯಕ್ರೆ ನಾನು ಮೈಸೂರಲ್ಲೇ ಕೆಲಸಕ್ಕೆ ಸೇರಿದ್ರೆ ಕನ್ನಡ ಡಿಪಾರ್ಟ್‌ಮೆಂಟಿಗೆ ನನ್ನನ್ನೇ ಡೈರಕ್ಟರ್ ಮಾಡ್ತಿದ್ರು ಅಲ್ವಾ?
ಜಿ.ಎಚ್.ನಾಯಕ್: ಯಾರ್‍ಯಾರೋ ಆಗಿದ್ದಾರೆ ತೇಜಸ್ವಿ. ನೀವು ಆಗಿದ್ರೆ ಚೆನ್ನಾಗಿರೋದು.
ತೇಜಸ್ವಿ: ಹೌದು ಆಗಬೌದಿತ್ತು. ಆದ್ರೆ ನಿಮ್ ಕಣ್ಣಲ್ಲಿ ನಾನು ಹೇಲ್‌ಗುಪ್ಪೆ ಥರಾ ಕಾಣಿಸ್ತಿದ್ದೆ
‘ಕನ್ನಡಿಗರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ’ ಎಂಬ ಆರೋಪಕ್ಕೆ: “ನೀವು ಬರೆದ ಕಗ್ಗವನ್ನೆಲ್ಲ ಜನ ಕೊಂಡು ಓದ್ತಾ ಇಲ್ಲ. ಅದಕ್ಕೆ ಪುಸ್ತಕ ಕೊಂಡು ಓದೋ ಪ್ರವೃತ್ತಿ ಬೆಳೆದೇ ಇಲ್ಲ ಅನ್ನೋದು ತಪ್ಪು...”
ತೇಜಸ್ವಿಯವರ ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಬಂದಿದ್ದಕ್ಕೆ: “ನಾನು ಬರೆಯೋದು ಓದುಗರಿಗೆ ಕಣ್ರೀ. ಅದಕ್ಕಿರುವ ಏಕೈಕ ಮಾರ್ಗ ಪತ್ರಿಕೆಗಳು. ನಾವಿಲ್ಲಿ ಸಾವಿರ ಕಾಪಿನೋ ಎರಡು ಸಾವಿರ ಕಾಪಿನೋ ಪ್ರಿಂಟ್ ಮಾಡ್ಕೊಂಡು ಕೂತ್ರೆ ಏನು ಪ್ರಯೋಜನ. ಒಂದು ಪತ್ರಿಕೇಲಿ ಬಂದ್ರೆ ಲಕ್ಷಾಂತರ ಮಂದಿ ಓದುತ್ತಾರೆ”
ತಾರಿಣಿಯವರ ‘ಮಗಳು ಕಂಡ ಕುವೆಂಪು’ ಕೃತಿಗೆ ನೀಡಿದ ಪ್ರತಿಕ್ರಿಯೆ: “ಎಷ್ಟು ಚೆನ್ನಾಗಿ ಬರೆದಿದ್ದಾಳ್ರೀ, ವಂಡರ್‌ಫುಲ್”
ಜಾಗತೀಕರಣವಾಗಿದ್ದು ಏಕೆ ಒಳ್ಳೆಯದೆಂದು ವಿವರಿಸುತ್ತಾ: “ನೋಡ್ರಿ ಈ ಜಾಗತೀಕರಣದ ಪ್ರಕ್ರಿಯೆಗಳು ತೀವ್ರವಾಗಿ ನಡೆದರೆ ಭಾರತದಲ್ಲಿ ನೆಲೆನಿಂತಿರುವ ಜಾತಿಪದ್ಧತಿಯ ಬೇರುಗಳು ಸಡಿಲವಾಗಬಹುದೇನೋ ಅನ್ನಿಸುತ್ತಿದೆ.”
ತಬರನ ಕಥೆ ಅಷ್ಟೇನು ಗ್ರೇಟ್ ಕಥೆ ಅಲ್ಲ ಎಂಬ ನಾಯಕರ ಅಭಿಪ್ರಾಯಕ್ಕೆ ತೇಜಸ್ವಿಯವರ ಉತ್ತರ “ಹೌದಾ? ಹಾಗಂತೀರಾ? ನೋಡ್ಬೇಕು”
ಬೆಂಗಳೂರಿನಲ್ಲಿ ಸೈಟ್ ತೆಗೆದುಕೊಂಡು ಮನೆ ಕಟ್ಟುವ ಗಿರೀಶ್ ಕಾಸರವಳ್ಳಯವರ ಮಾತಿಗೆ ನೀಡಿದ ಸಲಹೆ. “ಸೈಟ್ ತಗೋ. ಆದರೆ ಸಿನಿಮಾ ಮಂದಿ ಇರುವ ಕಡೆ ಮಾತ್ರ ತಗೋಬೇಡ. ಏಕೆಂದರೆ ನಿಮ್ಮ ನಿಮ್ಮೋರೇ ಸೇರಿಕೊಂಡರೆ ನೀವು ಬರೀ ಸಿನಿಮಾ ಬಗ್ಗೆ ಮಾತ್ರ ಮಾತಾಡ್ತೀರ. ಹಾಗಾಗಿ ಬೇರೆ ವಿಷಯಗಳ ಬಗ್ಗೆ ಮಾತೇ ಹರಿಯಲ್ಲ. ನನ್ನ ನೋಡು, ಎಷ್ಟು ದೂರದಲ್ಲಿದೀನಿ. ಇಲ್ಲಿ ಮೀನು ಹಿಡಿಯೋರು, ಹಕ್ಕಿ ಹಿಡಿಯೋರು, ಕೃಷಿ ಮಾಡೋರೇ ನನ್ನ ಗೆಳೆಯರು. ಸಾಹಿತಿಗಳ ಸಹವಾಸವೇ ಇಲ್ಲ!”
ತಬರನ ಕಥೆಯ ಸ್ಕ್ರಿಪ್ಟ್ ತೋರಿಸಿದ್ದಕ್ಕೆ: “ನಿಮಗೆ ಕಥೆ ಕೊಟಿದ್ದೇನೆ. ನಿಮಗೆ ಹ್ಯಾಗೆ ಬೇಕೋ ಹಾಗೆ ಸಿನಿಮಾ ಮಾಡಿ. ನನ್ನದೇನು ಅಭ್ಯಂತವಿಲ್ಲ. ಆದರೆ ಜನ ನೋಡೋ ಅಂತಹ ಸಿನಿಮಾ ಮಾಡಿ”
ತಬರನ ಕಥೆ ಚಿತ್ರೀಕರಣದ ಸಮಯದಲ್ಲಿ ತೇಜಸ್ವಿಯವರ ಮನೆಯ ಮಹಡಿಯ ಮೇಲೆ ಚಿತ್ರೀಕರಿಸಲು ಗಿರೀಶ್ ಕಾಸರವಳ್ಳಿಯವರು ತೇಜಸ್ವಿಯವರ ಒಪ್ಪಿಗೆಯನ್ನು ಕೇಳಿದ್ದಕ್ಕೆ ಕೊಟ್ಟ ಉತ್ತರ: “ನೀವು ಮೇಲೆ ಶೂಟ್ ಮಾಡಿಕೊಳ್ಳಬಹುದು, ನಾನಂತೂ ಅಲ್ಲಿಗೆ ಬರುವುದಿಲ್ಲ. ನೀವೇನಾದರೂ ಕೆಳಗೆ ಬಂದಿರೋ, ನಾನು ಶೂಟ್ ಮಾಡಿಬಿಡುತ್ತೇನೆ!”
ಕೃಷ್ಣೇಗೌಡನ ಆನೆ ಕಥೆಯ ಸಿನಿಮಾ ಹಕ್ಕನ್ನು ಕೇಳಲು ಬಂದ ನಿರ್ದೇಶಕರಿಗೆ- ಹೇಳಿದ ಮಾತು: “ಯಾವ ಕಾರಣಕ್ಕೂ ಇದನ್ನು ಆರ್ಟ್ ಸಿನಿಮಾ ಮಾಡಿ ಬೋರು ಹೊಡೆಸಬೇಡಿ. ಕೆಡಿಸಿದ್ರೆ ಜನ ನನ್ನ ಬೈತಾರೆ. ಚೆನ್ನಾಗಿ ಮಾಡಿದ್ರೆ ನನಗೂ ಹೆಸರು ಬರುತ್ತೆ”
ಅಣ್ಣನ ನೆನಪು ಕೃತಿಯನ್ನು ನಾಟಕ ಮಾಡುವ ಮಾತಿಗೆ ತೇಜಸ್ವಿಯವರ ಅಭಿಪ್ರಾಯ: “ನಾಟಕ ಬೇಡಪ್ಪ... ಅದೇನೊ ಟ್ರಯಲ್ ನೋಡಿ. ಅದು ಟಿ.ವಿ.ಸೀರಿಯಲ್ ತರ ಆದ್ರೆ ಆಗಬೌದು.... ಸ್ಟೇಜ್ ಮೇಲೆ... ಐ ಡೋಂಟ್ ನೋ ಹೌ ಇಟ್ ಲುಕ್”
‘ಸಾರ್ ನೀವು ಬ್ಯುಸೀನಾ’ ಎಂಬ ಪ್ರಶ್ನೆಗೆ ತೇಜಸ್ವಿ ಕೊಟ್ಟ ಉತ್ತರ: “ಅಯ್ಯೋ ನಾನು ಸಾಯೋತನ್ಕ ಬ್ಯುಸಿಯಾಗಿರ್‍ತೀನಿ ಬಿಡ್ರಿ”
ತೇಜಸ್ವಿ ತಾವು ಯಾವಾಗಲೂ ಬ್ಯುಸಿಯಾಗಿರುವುದಕ್ಕೆ ಕೊಡುತ್ತಿದ್ದ ಕಾರಣ: “ನಮ್ಮ ಗ್ಯಾರಂಟಿ ಪೀರಿಯಡ್ ಮುಗಿದು ಹೋಗಿದೆ ಕಣ್ರೀ. ಅದಷ್ಟು ಬೇಗ ಮಾಡಬೆಕು ಅಂದುಕೊಂಡಿದ್ದನ್ನೆಲ್ಲ ಮಾಡಿ ಮುಗಿಸಬೇಕು”
ಈಗೇನು ಬರಿತೀದೀರಾ ಎಂಬ ಪ್ರಶ್ನೆಗೆ ತೇಜಸ್ವಿ ಉತ್ತರ “ಯಾವಾಗ್ಲೂ ಯಾಕಯ್ಯ ಬರೀಬೇಕು?”
ಬೆಂಗಳೂರಿನ ಒಬ್ಬ ಕಲಾವಿದ ಮಿತ್ರನಿಗೆ “ನೀವು ಬೆಂಗಳೂರಿನ ಕಲಾವಿದರೆಲ್ಲ ಕ್ಯಾಕ್ಟಸ್‌ಗಳು ಕಣಯ್ಯಾ”
ಸಾವಿನ ಬಗ್ಗೆ ಗೆಳೆಯರೊಡನೆ ಮಾತನಾಡುತ್ತ “ಜಗತ್ತಿನಲ್ಲಿಯೇ ಅದ್ಭುತ ಕಣ್ರೀ. ಡೆತ್ ಇಸ್ ಎ ಮಿರಾಕಲ್. ಅದನ್ನು ಒಮ್ಮೆಯಾದರೂ ಅನುಭವಿಸಬೇಕು”
ಮುನೀರ್ ಎಂಬುವವರು ತೇಜಸ್ವಿಯವರ ಸ್ಕೂಟರ್ ಹಿಂದೆ ಕುಳಿತು ಹೋಗುವಾಗ ಸ್ಕಿಡ್ಡಾಗಿ ಸ್ಕೂಟರ್ ಬಿದ್ದರೂ, ಕೈಯಲ್ಲಿ ಹಿಡಿದಿದ್ದ ಮೊಟ್ಟೆ ಹೊಡೆಯದಂತೆ ಹಿಡಿದುಕೊಂಡಿದ್ದಕ್ಕೆ ನೀಡಿದ ಪ್ರಶಂಸೆ. “ರಾಜೂ (ರಾಜೇಶ್ವರೀ) ಈ ಮುನೀರ ಎಂತಹ ಮೊಟ್ಟೆಬಾಕ ಗೊತ್ತಾ, ಜೀವ ಬೇಕಾದರೆ ಬಿಟ್ಟೇನು, ಮೊಟ್ಟೆ ಬಿಡೋಲ್ಲ ಅಂತಾನೆ”
ತಮ್ಮ ಸ್ಕೂಟರ್‌ನ ಹಿಂಬದಿಯ ಸೀಟನ್ನು ತೆಗೆಸಿದ್ದಕ್ಕೆ ತೇಜಸ್ವಿ ನೀಡಿದ ಕಾರಣ: “ತೋಟದಿಂದ ಮೂಡಿಗೆರೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕವರು ಡ್ರಾಪ್ ಕೇಳ್ತಾರೆ. ಕೂರಿಸ್ಕೊಳ್ದಿದ್ರೆ ಬಯ್ಕೊತಾರೆ. ಕೂರಿಸ್ಕೊಂಡ್ರೆ ಅದು ಇದು ಮಾತನಾಡಿ ತಲೆಗೆ ಮೆದುಳಿಗೆ ಕೈ ಹಾಕ್ತಾರೆ ಮುಂಡೆ ಮಕ್ಳು. ಅದಕ್ಕೆ ಹಿಂದಿನ ಸೀಟು ತೆಗಿಸ್ಬಿಟೆ”
ತೇಜಸ್ವಿ ಸ್ಕೂಟರ್‌ನಲ್ಲಿ ಹೋಗುವಾಗ ನಮಸ್ಕಾರ ಮಾಡಿದವರೊಬ್ಬರಿಗೆ ಗ್ರಹಚಾರ ಬಿಡಿಸಿದ್ದು ಹೀಗೆ: “ನಿಮಗೆ ಬೇರೆ ಕೆಲಸ ಇಲ್ಲವಾ, ಡ್ರೈವಿಂಗ್ ಮಾಡುವವರಿಗೆ ನಮಸ್ಕಾರ ಮಾಡ್ತೀರಾ, ನಿಮಗೆ ನಮಸ್ಕಾರ ಹೇಳಲು ಹೋಗಿ ನಾವು ಆಕ್ಸಿಡೆಂಟ್ ಮಾಡ್ಕೋಬೇಕಾ”
ಕರ್ನಾಟಕ ರಕ್ಷಣಾ ವೇದಿಕೆಯವರು ಎಂ.ಈ.ಎಸ್. ಶಾಸಕರಿಗೆ, ಮೇಯರ್‌ಗೆ ಮಸಿ ಬಳಿದಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು ಅದಕ್ಕೆ ಪ್ರತಿಯಾಗಿ ತೇಜಸ್ವಿ ಹೇಳಿದ್ದು ಹೀಗೆ: “ಕನ್ನಡದ ಕತ್ತು ಹಿಚುಕುವವರ ಮುಖಕಕ್ಕೆ ಮಸಿ ಬಳಿಯದೇ ಫೇರ್ ಅಂಡ್ ಲೌಲಿ ಹಚ್ಬೇಕಾ?”
‘ಫೇರ್ ಅಂಡ್ ಲೌಲಿ ಹಚ್ಬೇಕಾ’ ಎಂಬ ತೇಜಸ್ವಿಯವರ ಹೇಳಿಕೆಯಿಂದಾಗಿ ಆ ಕಂಪೆನಿಯ ಮಾರಾಟ ಹೆಚ್ಚಿತೆಂಬುದೊಂದು ವರದಿ. ಅದಕ್ಕೆ ಆ ಕಂಪೆನಿಯ ಅಧಿಕಾರಿಯೊಬ್ಬ ‘ಸಾರ್ ನಿಮ್ಮ ಹೇಳಿಕೆಯಿಂದ ನಮ್ಮ ನಮ್ಮ ಕಂಪೆನಿ ಪ್ರಾಡಕ್ಟ್ ಮಾರಾಟ ಹೆಚ್ಚಾಗಿದೆ’ ಎಂದು ಹೇಳಿ ಗಿಫ್ಟ್ ಕೊಡಲು ಮುಂದಾಗಿದ್ದಾನೆ. ಆಗ ತೇಜಸ್ವಿ “ಕಂತ್ರಿ ನನ್ಮಗನ ಆಚೆ ಕಳಿಸ್ರೋ. ನಮ್ ಹುಡುಗರಿಗೆ ನೈತಿಕ ಶಕ್ತಿ ತುಂಬಲಿಕ್ಕೆ ಹಾಗೆ ಹೇಳಿದ್ದರೆ ಲಂಚ (ಗಿಪ್ಟ್) ಕೊಡಲಿಕ್ಕೆ ಬಂದವ್ನೆ” ಎಂದು ಕೂಗು ಹಾಕಿದ್ದರಂತೆ!
೯೦ರ ದಶಕದಲ್ಲಿ ಉಂಟಾದ ಬಿಜೆಪಿಯ ಬೆಳವಣಿಗೆಯ ಬಗ್ಗೆ ಕೆಲವರಲ್ಲಿ ಆತಂಕ. ಆದರೆ ತೇಜಸ್ವಿ ಆ ಆತಂಕವನ್ನು ನಿವಾರಣೆ ಮಾಡಿದ್ದು ಮಾತ್ರ ಅಚ್ಚರಿ “ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ರಾಮರಾಜ್ಯ ಸ್ಥಾಪನೆ ಆಗುತ್ತದೆ ಎಂದು ಕೆಲವರಿಗೆ ಭ್ರಮೆ ಇದೆ. ಈ ಭ್ರಮೆ ಅದಷ್ಟು ಬೇಗ ಕಳಚಿ ಹೋಗುವುದಕ್ಕಾಗಿಯಾದರೂ ಬಿಜೆಪಿ ಒಮ್ಮೆ ಅಧಿಕಾರಕ್ಕೆ ಬರಬೇಕು”
ರಾಜ್ಯಕ್ಕೆ ಅಗತ್ಯವಿರುವ ಪ್ರಾದೇಶಿಕ ಪಕ್ಷವೊಂದರ ಬಗ್ಗೆ: “ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟುವ ಅಗತ್ಯವಿದೆ. ಈ ರೀತಿಯ ಪಕ್ಷ ಕಟ್ಟುವಲ್ಲಿ ಎಚ್.ಡಿ.ದೇವೇಗೌಡರು ಸಮರ್ಥರಾಗಿದ್ದರು. ಆದರೆ ಅವರು ಆಗ ರಾಷ್ಟ್ರರಾಜಕಾರಣಕ್ಕೆ ಹೋದರು; ಈಗ ಕುಟುಂಬಕ್ಕೆ ಮಾತ್ರವೇ ಸೀಮಿತರಾಗಿಬಿಟ್ಟರು”
ತೇಜಸ್ವಿಯವರನ್ನು ಎಂ.ಎಲ್.ಸಿ. ಮಾಡಲು ಕೆಲವರು ಪ್ರಯತ್ನಿಸಿದ್ದುಂಟು. ನೀವ್ಯಾಕೆ ಒಪ್ಪಲಿಲ್ಲ? ಎಂಬುದಕ್ಕೆ ತೇಜಸ್ವಿಯವರ ಉತ್ತರ ‘’ಮಾರಾಯ್ರೆ ನನಗೆಲ್ಲಿ ಟೈಮು? ಅಲ್ಲಿ ವಿಧಾನಪರಿಷತ್‌ನಲ್ಲಿ ಯಾರಾದ್ರೂ ಬಾಯಿನ ತೆರೆದ್ರೆ ಸಂಜೆ ತನಕ ಭಾಷಣ ಮಾಡೋರು. ಅಷ್ಟೊಂದು ಭಾಷಣ ಕೇಳ್ಕೊಂಡು ನಾನು ಕುತ್ಕೊಳ್ಳೋಕೆ ಆಗ್ತಿತ್ತಾ”
ತಮ್ಮ ಕ್ಷೇತ್ರದ ಶಾಸಕರಿಗೆ ತೇಜಸ್ವಿ ಕೇಳಿದ ಪ್ರಶ್ನೆ: “ರಾಜಕಾರಣ ಹೊಲಸು ಆಗುತ್ತಿದೆ. ಏನು ರಾಜಕಾರಣ ಮಾಡುತ್ತೀರಿ ಅರ್ಥವಾಗುತ್ತಿಲ್ಲ. ಚುನಾವಣೆಯಲ್ಲಿ ಕಳ್ಳರು-ಸುಳ್ಳರು ಎಲ್ಲರನ್ನೂ ವೋಟು ಕೇಳುವುದು ಪಾಪದ ಕೆಲಸ ಅಲ್ವಾ?”
ತಾವು ವೋಟು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಸೋತಾಗ “ಇದುವರೆಗೂ ನಾನು ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ. ನಿಮಗೋಸ್ಕರ ಮೈಸೂರಿನಿಂದ ಬಂದು ವೋಟ್ ಹಾಕಿದ್ದೆ. ಅಲ್ಲಿಂದ ಬಂದು ವೋಟ್ ಹಾಕಿದ್ರೂ ಸೋತ್ರಾ?”
ದೇಶದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದವರಿಗೆ ತೇಜಸ್ವಿಯವರ ಸಮಾಧಾನ: “ದೇಶದಲ್ಲಿ ಯುವಶಕ್ತಿ ಅಗಾಧವಾಗಿದೆ. ಭ್ರಷ್ಟಾಚಾರ ಇನ್ನಿತರೆ ಅನಿಷ್ಟಗಳ ವಿರುದ್ಧ ಸಿಡಿದೇಳುವ ಹಂತಕ್ಕೂ ತಲುಪಿದೆ. ಈ ಹಂತದಲ್ಲಿ ಅವರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುವ ಕೆಲಸ ನಡೆಯಬೇಕಾಗಿದೆ ಅಷ್ಟೆ. ಯುವಕರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ದಾಗ ಮಾತ್ರ ದೇಶ ತನ್ನಿಂದ ತಾನೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ.”
ದತ್ತಪೀಠದ ಬಗ್ಗೆ ನಡೆದ ಗಲಾಟಯ ಬಗ್ಗೆ ಮಾತನಾಡುತ್ತಾ ಮಹಿಳಾ ವರದಿಗಾರರೊಬ್ಬರು ‘ಸಾರ್ ಇದಕ್ಕೆಲ್ಲಾ ಏನಾದ್ರೂ ಮಾಡಬೇಕು’ ಅಂದಾಗ ತೇಜಸ್ವಿ ಹೇಳಿದ್ದು: “ಏನ್ರಿ ಮಾಡೋದು? ಕೊಲೆ ಮಾಡಬ್ಯಾಡಿ, ಮನುಷ್ಯ ಮನುಷ್ಯನ್ನ ಕಡಿಯೋದು ತಪ್ಪು ಅಂತಾ ಹೇಳೋಕೆ ಖುರಾನು ಭಗವದ್ಗೀತೆ ಬೇಕಾಗಿಲ್ಲಾರಿ. ಆ ಭಾವನೆ ಮನುಷ್ಯನ ಒಳಗಡೆಯಿಂದ ಬರಬೇಕೆ ಅಷ್ಟೆ”
ಕಾವೇರಿ ತೀರ್ಪಿಗೆ ಗಿರೀಶ್ ಕಾರ್ನಾಡ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ: “ಗಿರೀಶ್‌ಗೆ ವ್ಯವಸಾಯ ಅಂದ್ರೆ ಎನೂ ಗೊತ್ತಿಲ್ಲ”
ಕಾವೇರಿ ತೀರ್ಪಿಗೆ ತೇಜಸ್ವಿ ಸೂತ್ರ: ರೈತರು ತಮ್ಮ ಹೊಲಗಳ ಮೇಲೆ ಬಿದ್ದ ಮಳೆ ನೀರಿಗೆ ಎಷ್ಟರ ಮಟ್ಟಿಗೆ ಬಾಧ್ಯಸ್ತರೋ, ಹಾಗೆಯೇ ನಮ್ಮ ರಾಜ್ಯಗಳು ತಮ್ಮ ಭೂಪ್ರದೇಶದ ಮೇಲೆ ಬೀಳುವ ಮಳೆ ನೀರಿಗೆ ಬಾಧ್ಯಸ್ತರಾಗಬೇಕಾಗುತ್ತದೆ. ಆಗ ಕರ್ನಾಟಕದಲ್ಲಿ ಬಿದ್ದ ಮಳೆ ನೀರಿಗೆ ರಾಜ್ಯ ಹಕ್ಕುದಾರನಾಗುವುದು. ನಮಗೆ ವಿದ್ಯುತ್ ಕೊರತೆ ಬಿದ್ದಾಗ ನಾವು ನೆರೆ ರಾಜ್ಯಗಳಿಂದ ವಿದ್ಯುತ್ ಅನ್ನು ಖರೀದಿಸುವುದಿಲ್ಲವೆ? ಹಾಗೇ ತಮಿಳು ನಾಡು ನೀರಿನ ಕೊರೆತ ಬಿದ್ದಾಗ ನಮ್ಮಲ್ಲಿ ಹೆಚ್ಚುವರಿ ನೀರು ಶೇಖರಣೆಯಾಗಿದ್ದರೆ, ಅದನ್ನು ಖರೀದಿಸಬಹುದು. ಭಾರತ ಒಕ್ಕೂಟ ರಾಜ್ಯ ವ್ಯವಸ್ಥೆಗೆ ಈ ಸೂತ್ರ ಪರಿಹಾರವಾಗಬಲ್ಲದು”
ದೇವರು ವಿಸ್ಮಯ ಇವುಗಳ ಬಗ್ಗೆ ಅನಂತಮೂರ್ತಿಯವರಿಗೆ ಹೀಗೆ ಹೇಳಿದ್ದರಂತೆ: “ಈ ಪ್ರಪಂಚದಲ್ಲಿ ದೇವರು ಇದ್ದಾನೆ ಅಂತ ತಿಳಿದಾಗ ಎಂತಹ ವಿಸ್ಮಯ ಹುಟ್ಟಬಹುದೋ ಅದೇ ದೇವರು ಇಲ್ಲ ಅಂತ ತಿಳಿದಾಗಲೂ ಪ್ರಪಂಚದ ವಿದ್ಯಮಾನಗಳೆಲ್ಲಾ ಅಷ್ಟೇ ವಿಸ್ಮಯಕಾರಿಯಾಗಿರಬಹುದು”
ತೇಜಸ್ವಿಯವರ ಮನೆಯ ಹೆಸರು ನಿರುತ್ತರ. ಅದಕ್ಕೆ ನೀಡಿದ ವಿವರಣೆ: “ಮಳೆ ಬರುತ್ತದೆ, ರೈತ ಬೀಜ ಬಿತ್ತುತ್ತಾನೆ, ಆಗ ಬೆಳೆ ಬರುತ್ತದೆ. ಇದು ರೈತರ ಬದುಕಿನಲ್ಲಿ ಅನಿರೀಕ್ಷಿತ”
ತೇಜಸ್ವಿ ಕನ್ನಡಕ್ಕೆ ನೀಡಿದ ಕೊಡುಗೆ ಮಹತ್ವವಾದುದು ಎಂಬ ಮಾತಿಗೆ ತೇಜಸ್ವಿಯವರ ಪ್ರತಿಕ್ರಿಯೆ: “ಅಯ್ಯೋ ಹೋಗ್ರಿ ಹೋಗ್ರಿ. ಈ ಕೊಡುಗೆ ಗಿಡುಗೆ ಅನ್ನೋದೆಲ್ಲಾ ದೊಡ್ಡ ಮಾತು ಕಂಡ್ರಿ. ನಾನು ಎಲ್ಲರ ಥರಾ ಆರ್ಡಿನರಿ ಮನುಷ್ಯಾ ಕಣ್ರೀ”
ಪಂಪ ಪ್ರಶಸ್ತಿ ಬಂದಾಗ ಅಭಿನಂಧಿಲು ಫೋನು ಮಾಡಿದ ಮಿತ್ರರಿಗೆ: ಅಯ್ಯೋ ಮಾರಾಯ್ರ ನಮ್ ಪಾಡಿಗೆ ನಮ್ ಬಿಡ್ರೋ. ನಿಮ್ ಪ್ರಶಸ್ತಿ ತಗೊಂಡು ನಾನೇನ್ ಮಾಡ್ಲಿ. ನನ್ ಪಾಡಿಗೆ ನನ್ ಬಿಟ್ರೆ ಸಾಕಪ್ಪ”
ಸಭೆ ಸಮಾರಂಭಗಳಲ್ಲಿ ಭಾಗವಹಿಸದಿರುವುದಕ್ಕೆ ತೇಜಸ್ವಿ ಕೊಟ್ ಕಾರಣ: “ಸನ್ಮಾನ ಮಾಡ್ಸಿಕೊಳ್ಳೋದು ಆರತಿ ಗೀರತಿ ಎತ್ತೋದು ಶುರುಮಾಡ್ತು ಅಂದ್ರೆ ತಾಳಕ್ಕಾಗಲ್ಲ ಕಣ್ರೀ. ನಾಚಿಕೆ ಆಗುತ್ತೆ -ನನಗೆ. ನನಗೆ ಮಾಡೋದು ಇರಲಿ ಬೇರೆಯವರಿಗೆ ಯಾರಿಗಾದ್ರೂ ಮಾಡಿದ್ರೂನು ನೋಡೋದಿಕ್ಕಾಗಲ್ಲ. ಎದ್ದು ಓಡಿ ಬಂದ್ಬಿಡ್ತೀನಿ”
ಯಾವುದಾದರೂ ಸಭೆ ಸಮಾರಂಭಕ್ಕೆ ತೇಜಸ್ವಿಯವರನ್ನು ಕರೆದರೆ ಅವರು ಹೇಳುತ್ತಿದ್ದುದು. ಸಭೆ ಸಮಾರಂಭ ಸನ್ಮಾನ ಹಾಗೂ ಭಾಷಣಗಳಿಗೆ ನನ್ನನ್ನು ಕರಿಬ್ಯಾಡ್ರೋ. ಬಾಕಾದ್ರೆ ಎಲ್ಲರ ಜತೆ ಬಂದು ಸ್ವಲ್ಪ ಹೊತ್ತು ಕೂತಿದ್ದು ಹರಟೆ ಹೊಡೆದು ಹೋಗ್ತೀನಿ”
ಯಾರ್‍ಯಾರದೋ ಬಲವಂತಕ್ಕೆ ಒಪ್ಪಿಕೊಂಡಾಗಲೂ ಅವರು ಹಾಕುತ್ತಿದ್ದ ಶರತ್ತು: “ಟಿ.ಎ., ಡಿ.ಎ. ಕೊಡಕೂಡದು, ಲಾಡ್ಜ್ ಬುಕ್ ಮಾಡಕೂಡದು”
ಬೆಂಗಳೂರಿನ ಯೌವನಿಕಾದಲ್ಲಿ ನಡೆದ ಸಂವಾದ ಕಾರ್ಯಕ್ರಮ ಮುಗಿದ ಮೇಲೆ ಸಂಘಟಕರು ಅವರ ಜೊತೆ ಪೋಟೋ ತೆಗೆಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾಗ ಅವರು ಹೇಳಿದ್ದು: “ಕ್ರಾಂತಿ ಮಾಡಿ ಅಂದ್ರೆ ಫೋಟೋ ತೆಗಿಸ್ಕೋಳದಲ್ಲಾರ್ರೀ”
ಪಂಪ ಪ್ರಶಸ್ತಿ ತೆಗೆದುಕೊಳ್ಳಲು ಬನವಾಸಿಗೆ ಯಾಕೆ ಹೋಗಲಿಲ್ಲ ಎಂಬುದಕ್ಕೆ ಅವರು ಹೇಳಿದ್ದು “ವೇದಿಕೆ ಹತ್ತಲು ನಾಚಿಕೆಯಾಗುತ್ತ ಕಣ್ರೀ” ಎಂದು. ನಿಮಗೆ ಜ್ಞಾನಪೀಠ ಬರುವುದನ್ನು ಕಾಯುತ್ತಿದ್ದೇವೆ ಎಂಬ ಮಾತಿಗೆ “ಅಯ್ಯೋ ನಮ್ಮ ಪಾಡಿಗೆ ನಮ್ಮನ್ನ ಬಿಡ್ರೋ ಮಾರಾಯ” ಎಂಬ ಉತ್ತರ.
ಹಾಸನದಲ್ಲಿ ವರದಿಗಾರನೊಬ್ಬನ ಜೊತೆಯಲ್ಲಿ ಟೀ ಕುಡಿಯುವಾಗ, ಟೀ ಕೊಟ್ಟ ಹುಡುಗ ‘ಸಾರ್ ನೀವು ತೇಜಸ್ವಿ ಅಲ್ಲವೆ?’ ಎಂದು ಗುರುತು ಹಿಡಿಯುತ್ತಾನೆ. ಆಗ ತೇಜಸ್ವಿ ಪ್ರತಿಕ್ರಿಯೆ: “ಲೋ ನನ್ನ ಗುರುತು ಹಿಡಿದ್ಯಲ್ಲೋ... (ವರದಿಗಾರನಿಗೆ) ನೀ ಏನಾದ್ರೂ ಹೇಳಿಕೊಟ್ಟಿದ್ಯಾ... ಬಡ್ಡಿಮಗನೆ. ನೀನು ಅಂತೋನೆ ಬಿಡು”
ತಮಗೆ ಇಷ್ಟವಿಲ್ಲದ್ದನ್ನು ನೇರವಾಗಿ ‘ಇಷ್ಟವಿಲ್ಲ’ ಎಂದು ತೇಜಸ್ವಿ ಹೇಳುತ್ತಾರೆ. ತೇಜಸ್ವಿ ದಂಪತಿಗಳನ್ನು ಊಟಕ್ಕೆ ಕರೆದಿದ್ದವರೊಬ್ಬರು, ಬಲವಂತ ಮಾಡಿ ಹೆಚ್ಚಿಗೆ ಬಡಿಸಿದಾಗ “ನೋಡಿ ನನಗೆ ಬೇಕಾದ್ದನ್ನು ಕೇಳಿ ಹಾಕಿಸಿಕೊಂಡು ತಿನ್ನುತ್ತೇನೆ. ಈ ರೀತಿ ಬಲವಂತ ಮಾಡಿ ಹಿಂಸೆ ಕೊಡಬೇಡಿ” ಎಂದು ರೇಗಿದ್ದರಂತೆ.
ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗೆಗಿನ ಸರಕಾರದ ನಿರಾಸಕ್ತಿಯನ್ನು ಕಂಡು ಕೋಪಗೊಂಡ ತೇಜಸ್ವಿ ಹೇಳಿದ್ದು ಹೀಗೆ. “ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಕೋಟಿಗಟ್ಲೆ ವ್ಯಯಿಸುವ ಸರ್ಕಾರ ತಂತ್ರಾಂಶ ಅಭಿವೃದ್ಧಿಗೇಕೆ ಹಣ ನೀಡಬಾರದು?”
ಕನ್ನಡ ತಂತ್ರಾಂಶಕ್ಕೇಕೆ ಅಷ್ಟೊಂದು ಪ್ರಾಮುಖ್ಯ ಎಂಬ ಪ್ರಶ್ನೆಗೆ: “ಕಂಪ್ಯೂಟರ್‍ನಲ್ಲಿ ಇಂಗ್ಲೀಷ್‌ನಷ್ಟೇ ಸರಳವಾಗಿ ಮತ್ತು ಸಹಜವಾಗಿ ಕನ್ನಡವನ್ನು ಬಳಸಲು ಸಾಧ್ಯವಾಗದಿದ್ದರೆ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ”
ಎಸ್.ಎಂ.ಕೃಷ್ಣನೇತೃತ್ವದ ಮೈಕ್ರೋಸಾಫ್ಟ್ ಕಂಪೆನಿಯೊಂದಿಗೆ ತಂತ್ರಾಂಶ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಾಗ: “ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್‌ನಂತಹ ಬಹುರಾಷ್ಟ್ರೀಯ ಸಂಸ್ಥೆಗೆ ಕನ್ನಡವನ್ನು ಅಡ ಇಡುವುದು ಸರಿಯಲ್ಲ. ಭಾಷೆಗೆ ತಕ್ಕ ಹಾಗೆ ತಂತ್ರಾಂಶ ಇರಬೇಕೇ ಹೊರತು, ತಂತ್ರಾಂಶಕ್ಕೆ ತಕ್ಕ ಹಾಗೆ ಭಾಷೆ ಬದಲಾಗಬೇಕು ಎಂದರೆ ಯಾವ ನ್ಯಾಯ?”
ಕನ್ನಡ ವಿಶ್ವವಿದ್ಯಾಲಯದಿಂದ ತೇಜಸ್ವಿಯವರಿಗೆ ನಾಡೋಜ ಪುರಸ್ಕಾರ ನೀಡಲು ವಿಶ್ವವಿದ್ಯಾಲಯದವರು ಸಂಪರ್ಕಿಸಿದಾಗ “ಕನ್ನಡ ತಂತ್ರಾಂಶ ಅಭಿವೃದ್ಧಿಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ” ಎಂದಿದ್ದರು.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಹಸ್ತಪ್ರತಿ ಪರಕಟಣೆಯ ಸಂದರ್ಭದಲ್ಲಿ ಅವರು ನೀಡಿದ ಪ್ರತಿಕ್ರಿಯೆ: ನೋಡಯ್ಯಾ... ನಾನು ಕನ್ನಡದ ಜನತೆಗೆ ಮೋಸ ಮಾಡಿ ಹಣವನ್ನು ಕಿತ್ತುಕೊಳ್ಳಬೇಕಿಲ್ಲ, ನನಗೆ ಬದುಕುವುದು ಗೊತ್ತಿದೆ. ಆದರೆ ಒಂದು ರೀತಿಯಲ್ಲಿ ನನ್ನೊಡನೆ ಆತ್ಮೀಯತೆಯಿಂದದ್ದವರು ಎಲ್ಲೋ ಒಂದು ಕಡೆ ಪರ್ಸನಲ್ ಆದ ಕೆಲವು ವಿಚಾರಗಳನ್ನು ತಂದು ಅವಮಾನ ಮಾಡಿದರು.”
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಬಗ್ಗೆ: “ನಾನಂತೂ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವವನು”
ಕುರ್‌ಕುರೆ ಎಂಬ ಕರಿದ ತಿಂಡಿಯ ಬಗ್ಗೆ: “ನಮ್ಮವರು ಮಾಡುವ ಮಿಕ್ಸ್ಚರ್ ಹಿಟ್ಟು ತಿಂದಂತಾಗುತ್ತದೆ. ಕುರ್‌ಕುರೆ ಒಳ್ಳೆ ಕುರುಂಕುರುಂ ಅನ್ನುತ್ತೆ”
ಹಕ್ಕಿಯ ಒಳ್ಳೆಯ ಫೋಟೋ ತೆಗೆದಿದ್ದಕ್ಕೆ ಪ್ರತಿಯಾಗಿ ಹಕ್ಕಿಗಳಿಗೆ ಹೇಳುತ್ತಿದುದು: “ನನಗೆ ಒಳ್ಳೆಯ ಪೋಸು ಕೊಡೋಕೆಂದೇ ಇಲ್ಲಿಗೆ ಬರುತ್ತವೆ ಮುಂಡೇವು”
ಉದಯರವಿ ಪ್ರಕಾಶನದ ಎಂಬ್ಲಮ್ ಸಂಯೋಜಿಸಿದ್ದರ ಬಗ್ಗೆ: “ನೋಡಯ್ಯಾ, ಇದೊಂದು ಹಕ್ಕೀನಾ ಒಂದೇ ಪಿಕ್ಚರ್‌ನಲ್ಲಿ ಹಿಡಿಯೋದು ಅಂದ್ರೆ ಕಷ್ಟ. ಅದಕ್ಕೇ ನೋಡು ಎರಡು ಚಿತ್ರ ಬೇರೆ ಬೇರೆ ತೆಗೆದು ಒಂದೇ ಎನ್ನುವಂತೆ ಜೋಡಿಸಿದ್ದೇನೆ”
ಕಾರಿನಲ್ಲಿ ಹೋಗುವಾಗ ಪೋಲೀಸಿನವನೊಬ್ಬ ಗಣಪತಿ ಹಬ್ಬಕ್ಕೆ ಚಂದಾ ಕೇಳುತ್ತಾನೆ. ತೇಜಸ್ವಿ ಐವತ್ತು ರೂಪಾಯಿ ಕೊಡುತ್ತಾರೆ. ಅದನ್ನು ಪ್ರತಿಭಟಿಸಿದ ರಾಮದಾಸ್ ಅವರಿಗೆ ತೇಜಸ್ವಿ ಹೇಳಿದ್ದು: “ರ್ರೀ ರಾಮದಾಸ್ ನಿಮಗೆ ಏನೂ ಗೊತ್ತಾಗಲ್ಲ ಕಣ್ರೀ. ನನ್ಹತ್ರ ಕಾರ್ ಡ್ರೈವಿಂಗ್ ಲೈಸೆನ್ಸ್ ಇಲ್ಲ, ಕಾರಿನ ಡಾಕ್ಯುಮೆಂಟ್ ಇಲ್ಲ. ಅವನು ಅದ್ನೆಲ್ಲ ಕೇಳಿದ್ರೆ ಏನ್ರೀ ಮಾಡೋದು. ಸುಮ್ಮನೆ ಐವತ್ತು ರೂಪಾಯಿ ಕೊಟ್ಟು ದೊಡ್ಡ ರಗಳೆಯಿಂದ ಪಾರಾದರೆ ಸಾಕಲ್ವೇನ್ರಿ”
ತೇಜಸ್ವಿ ನಿಧನರಾಗುವ ನಾಲ್ಕೈದು ದಿನ ಮುಂಚೆ ರಾಮದಾಸ್ ಅವರಿಗೆ ಫೋನ್ ಮಾಡಿದಾಗ “ಮೊನ್ನೆ ಸ್ವಲ್ಪ ಗುಡ್ಡ ಹತ್ತಿದೆ ನೋಡ್ರಿ. ಅಷ್ಟಕ್ಕೆ ಸುಸ್ತಾಯ್ತು... ನಮಗೆಲ್ಲ ವಾಯಸ್ಸಾಗುತ್ತಿದೆ ರಾಮದಾಸ್... ನಾವು ಹುಡುಗರಲ್ಲ. ಅದೇನ್ರಿ ಇನ್ನೂ ನೀವು ಎಲ್ಲ ಕಡೆ ಹೋಗಿ ಭಾಷಣ ಮಾಡ್ತೀರ. ಸ್ವಲ್ಪ ಕಡಿಮೆ ಮಾಡಿಕೊಳ್ರಿ..”
ತೇಜಸ್ವಿ ನಿಧನರಾಗುವ ಐದು ತಿಂಗಳ ಮುಂಚೆ ಆಸ್ಪತ್ರೆ ಸೇರಿದ್ದರು. ಅಲ್ಲಿಂದ ಡಿಸ್‌ಚಾರ್ಜ್ ಆಗಿ ಮನೆಗೆ ಬಂದ ತೇಜಸ್ವಿಯವರಿಗೆ ಫೋನ್ ಮಾಡಿದ ಪರಿಚಯದ ವರದಿಗಾರೊಬ್ಬರು ‘ಏನ್ ಸಾರ್ ಚೆನ್ನಾಗಿದೀರಾ?’ ಎಂದು ಕೇಳಿದ್ದಕ್ಕೆ- “ಏನ್ ಚಂದ ರ್ರೀ... ಅದೇನೋ ಆಯಿಲ್ ಮಸಾಜ್ ಅಂತ ಮಾಡಿಸ್ಕೊಂಡೆ ಕಣ್ರೀ, ಅಲರ್ಜಿ ಆಗಿ ವಾರಗಟ್ಲೆ ಆಸ್ಪತ್ರೆಯಲ್ಲಿರಬೇಕಾಯ್ತು. ಅದೂ ಬೆಂಗಳೂರಲ್ಲಿ... ಆ ಟ್ರಾಫಿಕ್ಕೂ... ಆ ಜನ.... ಯಾವಾಗ ಆ ಊರು ಬಿಟ್ಟುಬಿಡೋಣ ಅನ್ನಿಸಿತ್ತು. ಆದರೆ ಒಂದು ತಿಂಗಳು ಅಲ್ಲೇ ಕೊಳೆ ಹಾಕ್ಬಿಟ್ರು ಕಣ್ರೀ... ನನ್ನ ಸ್ಥಿತಿ ಬಗ್ಗೆ ಸಿಂಪತಿ ತೋರಿಸೋದಿರಲಿ.. ಈ ವಯಸ್ಸಲಿ ಆಯಿಲ್ ಮಸಾಜ್ ಮಾಡಿಸ್ಕೊಳ್ಳೊ ಉಸಬಾರಿ ಯಾಕೆ ಬೇಕಿತ್ತು ಅಂತ, ಬಯ್ಯೋರೆ ಹೆಚ್ಚಾಗಿದ್ರು ಕಣ್ರೀ. ಅದಕ್ಕೇ ಎಲ್ಲೂ ಹೊರಗೆ ಹೋಗ್ತಾ ಇಲ್ಲ. ಆರೋಗ್ಯ ಪರ್‍ಮಿಟ್ ಮಾಡೋದಿರ್ಲಿ ಡಾಕ್ಟ್ರೂ ಪರ್‍ಮಿಟ್ ಕೊಡ್ತಾ ಇಲ್ಲ ಕಣ್ರಿ...”
ಕಾಲಿನ ಗಾಯ ವಾಸಿಯಾಗಿ ಮತ್ತೆ ಮೂಡಿಗೆರೆಗೆ ಹೋಗುವ ಹಿಂದಿನ ದಿನ ಗೆಳೆಯರೊಬ್ಬರಿಗೆ ಹೇಳಿದ್ದು: “ಈ ಖಾಯಿಲೆಗಿಂತಲೂ ದೊಡ್ಡ ಹಿಂಸೆ ಮೂಡಿಗೆರೆ ಬಿಟ್ಟು ಈ ಆಸ್ಪತ್ರೇಲಿ ಮಲಗುವುದು. ನಾಳೆ ಮೂಡಿಗೆರೆಗೆ ಹೊರಟಿದ್ದೇನೆ. ಇನ್ನೆಂದೂ ಈ ಆಸ್ಪತ್ರೆ ಸಹವಾಸವಲ್ಲ. ತೋಟ ಈ ನಾಲ್ಕು ತಿಂಗಳಲ್ಲಿ ಮೂವತ್ತು ಭಾಗ ಹಾಳಾಗಿ ಹೋಗಿರುತ್ತೆ. ಹೋಗಿ ಸರಿ ಮಾಡಿದ್ರೆ ಆಯಿತು ಬಿಡು”
ಯಾವುದೋ ವಿಷಯವಾಗಿ ಬೆಂಗಳೂರಿನಲ್ಲಿ ಬೇಟಿಯಾಗಿ ಮಾತನಾಡುವ ಎಂದ ಗೆಳೆಯರೊಬ್ಬರಿಗೆ ತೇಜಸ್ವಿ ಹೇಳಿದ್ದು ಹೀಗೆ: “ಬೇಡ ಮಾರಾಯ ಅದೊಂದು ಊರಿನ ಕುಲವಾ? ಅಲ್ಲಿ ಯಾರು ಯಾರನ್ನು ಮಾತಾಡ್ಸೋಕೆ ಆಗಲ್ಲ. ಅಲ್ಲೇನಿದ್ರೂ ವ್ಯಾಪಾರ ಮಾಡಬಹುದು ಅಷ್ಟೆ”
ಮೂಡಿಗೆರೆ ತೋಟದಲ್ಲಿ ತೇಜಸ್ವಿಯವರನ್ನು ಬೇಟಿಯಾದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ‘ಸಾರ್ ನಿಮ್ಮನ್ನು ನೋಡಲು ಬೆಂಗಳೂರಿನಿಂದ ಬಂದಿದ್ದೇವೆ’ ಎಂದಾಗ ತೇಜಸ್ವಿ “ಹೌದಾ ನೋಡಿ ಚೆನ್ನಾಗಿ ನೋಡಿ” ಎಂದು ಸೊಂಟದ ಮೇಲೆ ಕೈಹಾಕಿ ನಿಂತರಂತೆ. ಆಗ ಒಬ್ಬರು ‘ಸರ್ ನಿಮ್ಮನ್ನು ಕಾರಂತರಂತೆ ತಿಳಿದುಕೊಂಡಿದ್ದೆ. ನೀವು ತುಂಬಾ ಸರಳ ಸರ್’ ಅಂದಿದ್ದಕ್ಕೆ ತೇಜಸ್ವಿ ಹೇಳಿದ್ದು ಹೀಗೆ: ಕಾರಂತರನ್ನು ನೀವು ಎಷ್ಟು ಸಲ ಮಾತನಾಡಿಸಿದ್ದೀರಿ? ಒಂದು ಬಾರಿಯೂ ಇಲ್ಲ. ಕಾರಂತರು ನನಗಿಂತ ಚೆನ್ನಾಗಿ ಮಾತನಾಡುತ್ತಾರೆ”
ಚಳುವಳಿಗಳು ಅರ್ಥ ಕಳೆದುಕೊಂಡಿವೆ ಎಂದು ಹೇಳುತ್ತಾ: “ಸಮಾಜವಾದಿ ಘೋಷಣೆ ಕೂಗಿ ನಾವು ಮಾಡಿದಂತೆ ನೀವು ಮಾಡಬೇಡಿ. ನಾವು ಫೂಲ್ಸ್ ಆದಂತೆ ನೀವು ಆಗಬೇಡಿ”
ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದ ಉತ್ಸಾಹಿ ತರುಣನೊಬ್ಬನಿಗೆ ತೇಜಸ್ವಿಯೇ ಪ್ರಶ್ನೆ ಕೇಳಿದರು “ಎಲ್ಲಿಂದ ಬಂದಿದೀರಿ ನೀವು?” ‘ಸರ್ ಚಿಕ್ಕಮಗಳೂರಿನಿಂದ’ ಎಂಬ ಉತ್ತರಕ್ಕೆ ತೇಜಸ್ವಿ ಪ್ರತಿಕ್ರಿಯಿಸಿದ್ದು ಹೀಗೆ: “ಯಾಕ್ರಿ ಸುಮ್ನೆ ಅಷ್ಟೊಂದು ದೂರದಿಂದ ಬಂದಿದ್ದೀರಿ?”
ಅಭಯಾರಣ್ಯಕ್ಕಾಗಿ ಕಾಡಿನ ಜನರನ್ನು ಸ್ಥಾಳಾಂತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ: “ನೋಡ್ರಿ, ಭದ್ರಾ ಹುಲಿ ಅಭಯಾರಾಣ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಮಂದಿಗೆ ಪುನರ್ವಸತಿ ಕಲ್ಪಸಲಾಗಿದೆ. ಈಗ ಅವರಿಗೆಲ್ಲಾ ದುಡ್ಡು ಕೊಡ್ತೀವಿ ಮತ್ತೆ ಕಾಡಿಗೆ ಹೋಗ್ರಿ ಅಂದರೆ ಹೊಡೆಯುತ್ತಾರೆ ಅಷ್ಟೆ. ರ್ರೀ ಅವರ ಬದುಕು ಅವರ ಇಷ್ಟದ ಹಾಗೆ ನಡೆಯಬೇಕು. ನಿವ್ಯಾರ್ರೀ ಅದನ್ನ ನಿರ್ಧರಿಸೋಕೆ?”
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುವೆಂಪು ಸಾಹಿತ್ಯ ಕುರಿತ ವಿಚಾರಸಂಕಿರಣ ನಡೆದಿತ್ತು. ಆಗ ಒಬ್ಬ ವಿಮರ್ಶಕ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಗುತ್ತಿಯ ನಾಯಿ ಹುಲಿಯನಿಗೆ ಸಿಕ್ಕಿದ ಪ್ರಾಶಸ್ತ್ಯವನ್ನು ಪ್ರಶ್ನಿಸುತ್ತಾನೆ. ಅದಕ್ಕೆ ತೇಜಸ್ವಿ ನೀಡಿದ ಪ್ರತಿಕ್ರಿಯೆ. “ನಾಯಿ ಸಾಕುವುದು ನಿಮಗಿರಲಿ, ನಿಮ್ಮ ಜಾತಿಗೂ ಗೊತ್ತಿಲ್ಲ. ಆದ್ದರಿಂದ ಹುಲಿಯನ ಸುದ್ದಿಗೆ ಮಾತ್ರ ಬರಬೇಡಿ.”
ಮಾನಸಗಂಗೋತ್ರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತೇಜಸ್ವಿ ಉಪನ್ಯಾಸಕರನ್ನು ಕುರಿತು ಹೇಳಿದ್ದು: “ಉಪನ್ಯಾಸಕರು ಸಮಾಜಕ್ಕೆ ಹೊಸದನ್ನು ಹೇಳಬೇಕು. ಸಮಾಜ ತಪ್ಪುದಾರಿಗೆ ಹೋಗುತ್ತಿದ್ದರೆ ಅದನ್ನು ತಿದ್ದಬೇಕು. ಅದು ಬಿಟ್ಟು ತಿಂಗಳಿಗೆ ಸಂಬಳ ಬರುತ್ತೆ ತಗೊಂಡು ತಾವಾಯಿತು ತಮ್ಮ ಕುಟುಂಬವಾಯಿತು ಎನ್ನುವಂತಿದ್ದರೆ ಅವರಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ”
ಅಸಂಬದ್ಧವಾದ ಪ್ರಶ್ನೆಗಳು ಸಂವಾದ ಕಾರ್ಯಕ್ರಮದಲ್ಲಿ ತೂರಿ ಬಂದರೆ ತೇಜಸ್ವಿ ಹೇಳುತ್ತಿದ್ದುದು ಹೀಗೆ: “ಅಯ್ಯೋ ಏನ್ರೀ ಇವೆಲ್ಲಾ ಪ್ರಶ್ನೆಗಳೇನ್ರಿ?”
ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದು: “ತಿಂಗಳಿಗೆ ೩೫ ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳೊ ನೀವು ಏನ್ ಪಾಠ ಮಾಡ್ತಿದ್ದೀರಾ ಅನ್ನೋದು ಇವರ ಪ್ರಶ್ನೆ ಕೇಳಿದ್ರೆ ಅರ್ಥವಾಗುತ್ತೆ”
ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಜಾರಿಗೆ ತರುವುದು ಹೇಗೆ ಎಂಬ ಪ್ರಶ್ನೆಗೆ ನೀಡಿದ ಉತ್ತರ: “ಕಾನೂನು ಮಾಡಿಬಿಡ್ರಿ”
ಪುಸ್ತಕ ಪ್ರಕಾಶನದ ಶ್ರೀರಾಮ್‌ಗೆ ಹೇಳಿದ್ದರಂತೆ: “ಪುಸ್ತಕ ಬರೆಯೋದೆಲ್ಲಾ ದೊಡ್ಡ ಕೆಲಸ ಅಲ್ಲಾರೀ. ಮಿಲೆನಿಯಂ ಸೀರೀಸ್ ಬರೆದ ಹಾಗೆ ತಿಂಗಳಿಗೊಂದು ಬರ್‍ದ್ ಹಾಕ್ಬೌದು”
ಎನ್.ಎಸ್.ಡಿ.ಗಾಗಿ ಪ್ರಸನ್ನ ಬೆಂಗಳೂರಿನಲ್ಲಿ ಉಪವಾಸ ಮಾಡಿದ್ದರು. ಆಗ ತೇಜಸ್ವಿ ಹೇಳಿದ್ದು: “ಈ ವಯಸ್ನಲ್ಲಿ ಅದನ್ನೆಲ್ಲಾ ಅಷ್ಟೊಂದು ಗಂಭೀರವಾಗಿ ತಗೋಬೇಡ”
ಅಂತಾರ್ಜಾತಿ ವಿವಾಹವಾದವರಿಗೆ ಮೀಸಲಾತಿಯಲ್ಲಿ ಅವಕಾಶ ಕಲ್ಪಿಸುವ ಸಂಬಂಧ ಬೆಂಗಳೂರಿನ ಯವನಿಕಾದಲ್ಲಿ ತೇಜಸ್ವಿಯವರೊಂದಿಗೆ ಒಂದು ಸಂವಾದ ಕಾರ್ಯಕ್ರಮವಿತ್ತು. ‘ಹೀಗೆ ಮೀಸಾಲತಿ ಪಡೆದುಕೊಂಡ ಅಂತಾರ್ಜಾತಿ ವಿವಾಹವಾದವರದೂ ಒಂದು ಹೊಸ ಜಾತಿಯಾಗಿಬಿಡುವ ಅಪಾಯವಿಲ್ಲವೆ?’ ಎಂಬ ನನ್ನ ಪ್ರಶ್ನೆಗೆ, “ಮೊದಲು ಮೀಸಲಾತಿ ಕೊಡಲಿ ಬಿಡ್ರಿ. ಅಮೇಲೆ ನೋಡೋಣ” ಎಂದಿದ್ದರು. ಇಂದಿಗೂ ಆ ವಿಷಯವಾಗಿ ಯಾವುದೇ ಪ್ರಗತಿಯಾಗಿಲ್ಲ!
ಸಾಹಿತ್ಯದಲ್ಲಿ ಧರ್ಮ ಬೇಡ ಅನ್ನುವುದಾದರೆ ಧರ್ಮಕ್ಕೆ ಬೇರೆ ಸಂವಾದಿ ಯಾವುದು ಎಂಬುದಕ್ಕೆ: “ಧರ್ಮಕ್ಕೆ ಸಂವಾದಿಯಾಗಿ ಸಾಹಿತ್ಯದಲ್ಲಿ ವಿಜ್ಞಾನ ಹಾಗೂ ವೈಚಾರಿಕತೆಯನ್ನು ಬಳಸುವ ದಿಸೆಯಲ್ಲಿ ನನ್ನ ಇತ್ತೀಚಿನ ಕೃತಿಗಳಾದ ಕರ್ವಾಲೋ ಮತ್ತು ಚಿದಂಬರ ರಹಸ್ಯಗಳನ್ನು ಒಂದು ಪ್ರಯೋಗವೆಂದು ಕರೆಯಬಹುದು”
ಕುವೆಂಪು ಅಂತ್ಯಸಂಸ್ಕಾರ ಮಾನಸಗಂಗೋತ್ರಿಯಲ್ಲೇ ನಡೆಯಬೇಕು ಎಂದು ಕೆಲವರು ಉದಯರವಿಯಲ್ಲಿ ಧರಣಿ ಕುಳಿತಿದ್ದರು. ಆಗ ತೇಜಸ್ವಿ ಆಡಿದ ಮಾತು: “ವಿಶ್ವವಿದ್ಯಾಲಯ ವಿಶ್ವವಿದ್ಯಾಲಯವಾಗಿರಬೇಕೇ ಹೊರತು ಕುಲಪತಿಗಳ ಗೋರಿಯಾಗಬಾರದು. ಜತೆಗೆ ಒಬ್ಬ ಕುಲಪತಿಯನ್ನು ಮಲಗಿಸಿದರೆ ಸಾಕು, ಸಾಲಾಗಿ ಕುಲಪತಿಗಳನ್ನು ಮಲಗಿಸಬೇಕಾಗುತ್ತದೆ ಅಷ್ಟೆ”
ಕುವೆಂಪು ಅವರ ಚಿತೆಗೆ ಎಲ್ಲರೂ ಒಂದೊಂದು ಕಟ್ಟಿಗೆಯ ಚಕ್ಕೆ ಇಡುತ್ತಿರುವಾಗ ತೇಜಸ್ವಿಗೂ ಇಡಲು ಯಾರೋ ಹೇಳಿದರಂತೆ. ತೇಜಸ್ವಿ ಬಲಗೈಯಲ್ಲಿ ಇಡುತ್ತಿರುವುದನ್ನು ಗಮನಿಸಿದ ಡಿ.ಬಿ.ಚಂದ್ರೇಗೌಡ ಅವರು ‘ಅಯ್ಯೊ ಬಲಗೈಲಿ ಇಡಬಾರದು; ಎಡಗೈಯಲ್ಲಿ ಇಡಿ’ ಅಂದರಂತೆ. ತಕ್ಷಣ ತೇಜಸ್ವಿ ನೀಡಿದ ಪ್ರತಿಕ್ರಿಯೆ ಹೀಗಿತ್ತು: “ನಾನು ಈಗ ಎಡಗೈಯಲ್ಲಿ ಚಕ್ಕೆ ಇಟ್ಟರೆ, ಅಣ್ಣ ತನ್ನ ಜೀವಮಾನವಿಡೀ ಯಾವುದರ ವಿನಾಶಕ್ಕಾಗಿ ಹೋರಾಡಿದರೋ ಅದೆಲ್ಲಾ ಹೊಳೆಯಲ್ಲಿ ಕೊಚ್ಚಿಹೋದಂತೆ” ತೇಜಸ್ವಿ ಕುವೆಂಪು ಚಿತೆಗೆ ಕೊಳ್ಳಿ ಇಟ್ಟಿದ್ದು ಬಲಗೈಯಿಂದಲೇ!
ಕುಪ್ಪಳ್ಳಿಯಲ್ಲಿ ಕುವೆಂಪು ಅವರ ದೇಹಸಂಸ್ಕಾರವಾದ ಮೇಲೆ ಯಾರೋ ಪರಿಚಿತರು ತೇಜಸ್ವಿಗೆ ಹೇಳಿ ಹೋಗಲು ಬಂದರಂತೆ. ಆಗ ತೇಜಸ್ವಿ “ನೀವೆಲ್ಲಾ ಯಾಕೋ ಮಾರಾಯ ಅಷ್ಟು ದೂರದಿಂದ ಬಂದ್ರಿ. ನಾನು ಸತ್ತಾಗ ಮಾತ್ರ ಹೀಗೆಲ್ಲಾ ಬರಬೇಡಿ” ಅಂದರಂತೆ!
ಕುಪ್ಪಳ್ಳಿಗೆ ತೇಜಸ್ವಿ ಹೋದರೆ ಕುವೆಂಪು ಸಮಾದಿಯ ಬಳಿ ಹೋಗುತ್ತಿರಲಿಲ್ಲ. ಅದನ್ನು ಪ್ರಶ್ನಿಸಿದವರಿಗೆ ತೇಜಸ್ವಿ ಹೀಗೆ ಹೇಳಿದರು. “ನನ್ನ ತಂದೆ ನನ್ನ ಒಳಗೇ ಇದ್ದಾರೆ. ನಾನು ಅವರನ್ನು ನೋಡಿಕೊಂಡು ತಮಾಷೆ ಮಾಡಿಕೊಂಡು ಬೆಳೆದವನು. ಅವರ ಕೃತಿಗಳು ಅವರು ನಿಸರ್ಗವನ್ನು ನೋಡಿ ಗ್ರಹಿಸುತ್ತಿದ್ದ ರೀತಿ ಇವೆಲ್ಲಾ ನನ್ನಲ್ಲಿ ಉಳಿದುಬಿಟ್ಟಿವೆ. ಹೀಗಾಗಿ ತಂದೆಯನ್ನು ಪೂಜ್ಯಸ್ಥಾನಕ್ಕೆ ಏರಿಸೋದು ವು ಹೇಳಿದ ರೀತಿಯಲ್ಲಿ ಕಲ್ಪಿಸಿಕೊಳ್ಳೋದು ನಂಗೆ ಸಾಧ್ಯವಿಲ್ಲ ಕಣ್ರೀ”
* * * * *
ಈ ಮೇಲಿನ ತಾಜಸ್ವಿಯವರ ಮಾತುಗಳನ್ನು ಗಮನಿಸಿದವರಿಗೆ ಖಂಡಿತಾ ಒಂದು ವಿಷಯ ಮನದಟ್ಟಾಗುತ್ತದೆ. ಅದೆಂದರೆ ಅವರ ಮಾತುಗಳು ಎಂದೂ ತೂಕತಪ್ಪದವು; ಹಾಸ್ಯದ ಲೇಫನದೊಂದಿಗೇ ಹೊರಹೊಮ್ಮಿದವುಗಳು; ಅವುಗಳು ಮಹತ್ವವಾದ ಆಶಯಗಳನ್ನು ಹೊತ್ತೇ ವ್ಯಕ್ತವಾದಂತಹವುಗಳು. ಕೆಲವುಗಳನ್ನು ತೇಜಸ್ವಿ ಉದ್ದೇಶಪೂರ್ವಕವಾಗಿ ಆಡಿದ್ದಿಲ್ಲದಿರಬಹುದು. ಆದರೆ ತೇಜಸ್ವಿಯ ಸ್ವಭಾವ ಮತ್ತು ಆಶಯಕ್ಕೆ ಅನುಗುಣವಾಗಿಯೇ ಅವು ವ್ಯಕ್ತವಾಗಿವೆ. ಮತ್ತೊಂದು ಪ್ರಮುಖ ಅಂಶವೆಂದರೆ, ಈ ಯಾವುದೇ ಮಾತುಗಳನ್ನು ವ್ಯಾಖ್ಯಾನಿಸಿ ಓದುಗರಿಗೆ ಅರ್ಥಮಾಡಿಸುವ ತೊಂದರೆ ಖಂಡಿತಾ ಬೇಕಿಲ್ಲ ಎನ್ನುವುದು.
ಸಹೃದಯರಲ್ಲಿ ನನ್ನದೊಂದು ಕೋರಿಕೆ. ಈ ಲೇಖನಕ್ಕೆ ಯಾವುದೇ ಕಾಪಿರೈಟ್ ಇರುವುದಿಲ್ಲ. ಲೇಖನದ ಎರಡನೆಯ ಭಾಗಕ್ಕೆ, ತಮ್ಮ ನೆನಪಿನಲ್ಲಿರುವ ಹಾಗೂ ಸಂಗ್ರಹದಲ್ಲಿರುವ ತೇಜಸ್ವಿಯವರ ಮಾತುಗಳನ್ನು ಸೇರಿಸಬಹುದು!

Wednesday, December 10, 2008

ಧಾರ್ಮಿಕ ಶ್ರದ್ದೆಯ ನಿರ್ಲಕ್ಷ್ಯ!!!

‘ಕಾಡು ಹಕ್ಕಿಯ ನೆನಪು’ ಎಂಬ ತೇಜಸ್ವಿ ಕುರಿತಾದ ವಿಚಾರ ಸಂಕಿರಣದಲ್ಲಿ ರಹಮತ್ ತರೀಕೆರೆಯವರ ಭಾಷಣದ ಒಂದು ಅಂಶ ಹೀಗಿತ್ತು. ‘ನಮ್ಮ ಗ್ರಾಮೀಣ ಪರಿಸರದಲ್ಲಿ ಮತೀಯವಲ್ಲದ, ಕೋಮುವಾದವಲ್ಲದ ಕೇವಲ ಶುದ್ದ ಧಾರ್ಮಿಕ ಶ್ರದ್ಧೆಯನ್ನು ನಂಬಿರುವ ಬಹುದೊಡ್ಡ ಜನ ಸಮುದಾಯವಿದೆ. ಕುವೆಂಪು ಕಾರಂತ ಮೊದಲಾದವರು ಇಂತಹ ಧಾರ್ಮಿಕ ಶ್ರದ್ಧೆಯನ್ನು ಮುಖಾಮುಖಿಯಾಗುತ್ತಲೇ ತಮ್ಮ ವೈಚಾರಿಕ ನಿಲುವನ್ನು ಪ್ರತಿಪಾದಿಸಿದರು. ಆದರೆ ತೇಜಸ್ವಿ ಅದನ್ನು ಮುಖಾಮುಖಿಯಾಗದೆ ಬೈಪಾಸ್ ಮಾಡಿಬಿಡುತ್ತಾರೆ. ಅವರ ಯಾವುದೇ ಕೃತಿಯಲ್ಲಿ ಹಬ್ಬ, ಜಾತ್ರೆ ಇತ್ಯಾದಿಗಳು ಕಾಣಿಸುವುದಿಲ್ಲ. ಇದೊಂದು ಉದ್ದೇಶಪೂರ್ವಕ ನಿರ್ಲಕ್ಷ್ಯ’
ತರೀಕೆರೆಯವರ ಅಭಿಪ್ರಾಯ ಸರಿಯಾಗಿಯೇ ಇದೆ. ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ತೇಜಸ್ವಿ ಅದನ್ನು ಮುಖಾಮುಖಿಯಾಗುತ್ತಾರಾದರೂ, ಅದು ಪ್ರಾಮುಖ್ಯ ಪಡೆಯುವುದೇ ಇಲ್ಲ! ಅವರ ಪೂರ್ಣದೃಷ್ಟಿ ಹೊಸ ಹುಟ್ಟಿನ ಕಡೆಗೇ ಇರುತ್ತದೆ. ಆದರೆ ಇದೊಂದು ಕೊರತೆಯಲ್ಲ. ಹಾಗೆ ನೋಡಿದರೆ ತೇಜಸ್ವಿಯವರ ಧರ್ಮದ ಬಗೆಗಿನ ತಿಳುವಳಿಕೆ, ಮುಂಜಾಗ್ರತೆ ಏನು ಎಂಬುದು ‘ನಾಡಗೀತೆ’ ವಿವಾದದ ಸಮಯದಲ್ಲಿ ಅವರು ಪತ್ರಿಕೆಗಳಿಗೆ ಬರೆದ ಪತ್ರಗಳಲ್ಲಿಯೇ ವ್ಯಕ್ತವಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ ಧರ್ಮದ ಪಾಲು ಬಹು ದೊಡ್ಡದು ಎಂಬುದು ಅರಿವಾಗುತ್ತದೆ. ರಾಶಿ ರಾಶಿ ಸಾಹಿತ್ಯ ಧರ್ಮದ, ಧಾರ್ಮಿಕ ಶ್ರದ್ಧೆಯ ಮುಖವಾಣಿಯಂತೆಯೇ ಸೃಷ್ಟಿಯಾಗಿರುವುದುನ್ನು ಕಾಣಬಹುದು. ಧರ್ಮ ಮತ್ತು ಧಾರ್ಮಿಕ ಶ್ರದ್ಧೆಯ ಬಗ್ಗೆ ಬರೆಯುತ್ತಲೇ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಬರೆದ ಪಂಪನ ಪರಿಕಲ್ಪನೆಯ ಧರ್ಮಾತೀತ ನಿಲುವು ಮುಸುಕಾಗಿ ಧಾರ್ಮಿಕ ಶ್ರದ್ಧೆಯೇ ಮೇಲುಗೈ ಪಡೆಯುವಂತೆ ಪಂಪನ ನಂತರದ ಸಾಹಿತ್ಯ ಚರಿತ್ರೆ ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಧರ್ಮದ ಹಿನ್ನಲೆಯಲ್ಲಿ ಜೈನಯುಗ, ವೀರಶೈವಯುಗ ಮತ್ತು ಬ್ರಾಹ್ಮಣಯುಗ ಎಂದು ವಿಭಾಗಿಸುವಷ್ಟರ ಮಟ್ಟಿಗೆ ಧಾರ್ಮಿಕ ಶ್ರದ್ಧೆ ಕೆಲಸ ಮಾಡಿದೆ.
ಆದ್ದರಿಂದಲೇ, ಸದಾ ಹೊಸತರ ಕಡೆಗೆ ಯೋಚಿಸುತ್ತಿದ್ದ, ಹೊಸದಿಗಂತದೆಡೆಗೆ ಹಂಬಲಿಸುತ್ತಿದ್ದ ಚಲನಶೀಲ ಬರಹಗಾರರಾದ ತೇಜಸ್ವಿ ಧರ್ಮವನ್ನು ಬೈಪಾಸ್ ಮಾಡಲು ನಿರ್ಧರಿಸಿದ್ದಿರಬೇಕು. ಅಂತೆಯೇ ಸತ್ಯಮೂರ್ತಿಯವರಿಗೆ ಬರೆದ ಪತ್ರದಲ್ಲಿ (ಆಹ್ವಾನ ಪತ್ರಿಕೆಯಲ್ಲಿ ಅಚ್ಚಾಗಿದೆ) ‘ಬರೀ ರಾಜಕಾರಣ ಇತ್ಯಾದಿಗಳನ್ನು ಬರೆದು ಓದುಗರನ್ನು ಬೋರ್ ಮಾಡಕೂಡದೆಂದು ನಿರ್ಧರಿಸಿದ್ದೇನೆ’ ಎಂದಿರುವುದು. ಇಲ್ಲಿನ ‘ಇತ್ಯಾದಿ’ಗಳ್ಲಲಿ ಧರ್ಮವೂ ಸೇರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಅಂತರ್ಗತವಾಗಿದ್ದ ಧರ್ಮಾತೀತ ಮತ್ತು ಜಾತ್ಯಾತೀತ ನಿಲುವು ಅವರಿಗೆ ಪ್ರಮುಖವಾಗಿ ಕಂಡಿರಬೇಕು. ಅದನ್ನು ಮುಂಚೂಣಿಗೆ ತರುವ ಮಹಾಪ್ರಯತ್ನವೇ ಅವರ ವಿಶಿಷ್ಟ ಬಗೆಯ ಸಾಹಿತ್ಯ ರಾಶಿ! ಇದು ನಮ್ಮ ದೇಶಕ್ಕೆ ಬೇಕಾಗಿರುವ ತುರ್ತು ಅಗತ್ಯಗಳಲ್ಲಿ ಒಂದು. ಈ ನಿಟ್ಟಿನಲ್ಲಿ ತೇಜಸ್ವಿಯವರ ನಿರ್ಲಕ್ಷ್ಯ ಉದ್ದೇಶಪೂರ್ವಕವಾದರೂ ಸ್ವಾಗತಾರ್ಹವೆ.