Wednesday, December 10, 2008

ಧಾರ್ಮಿಕ ಶ್ರದ್ದೆಯ ನಿರ್ಲಕ್ಷ್ಯ!!!

‘ಕಾಡು ಹಕ್ಕಿಯ ನೆನಪು’ ಎಂಬ ತೇಜಸ್ವಿ ಕುರಿತಾದ ವಿಚಾರ ಸಂಕಿರಣದಲ್ಲಿ ರಹಮತ್ ತರೀಕೆರೆಯವರ ಭಾಷಣದ ಒಂದು ಅಂಶ ಹೀಗಿತ್ತು. ‘ನಮ್ಮ ಗ್ರಾಮೀಣ ಪರಿಸರದಲ್ಲಿ ಮತೀಯವಲ್ಲದ, ಕೋಮುವಾದವಲ್ಲದ ಕೇವಲ ಶುದ್ದ ಧಾರ್ಮಿಕ ಶ್ರದ್ಧೆಯನ್ನು ನಂಬಿರುವ ಬಹುದೊಡ್ಡ ಜನ ಸಮುದಾಯವಿದೆ. ಕುವೆಂಪು ಕಾರಂತ ಮೊದಲಾದವರು ಇಂತಹ ಧಾರ್ಮಿಕ ಶ್ರದ್ಧೆಯನ್ನು ಮುಖಾಮುಖಿಯಾಗುತ್ತಲೇ ತಮ್ಮ ವೈಚಾರಿಕ ನಿಲುವನ್ನು ಪ್ರತಿಪಾದಿಸಿದರು. ಆದರೆ ತೇಜಸ್ವಿ ಅದನ್ನು ಮುಖಾಮುಖಿಯಾಗದೆ ಬೈಪಾಸ್ ಮಾಡಿಬಿಡುತ್ತಾರೆ. ಅವರ ಯಾವುದೇ ಕೃತಿಯಲ್ಲಿ ಹಬ್ಬ, ಜಾತ್ರೆ ಇತ್ಯಾದಿಗಳು ಕಾಣಿಸುವುದಿಲ್ಲ. ಇದೊಂದು ಉದ್ದೇಶಪೂರ್ವಕ ನಿರ್ಲಕ್ಷ್ಯ’
ತರೀಕೆರೆಯವರ ಅಭಿಪ್ರಾಯ ಸರಿಯಾಗಿಯೇ ಇದೆ. ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ತೇಜಸ್ವಿ ಅದನ್ನು ಮುಖಾಮುಖಿಯಾಗುತ್ತಾರಾದರೂ, ಅದು ಪ್ರಾಮುಖ್ಯ ಪಡೆಯುವುದೇ ಇಲ್ಲ! ಅವರ ಪೂರ್ಣದೃಷ್ಟಿ ಹೊಸ ಹುಟ್ಟಿನ ಕಡೆಗೇ ಇರುತ್ತದೆ. ಆದರೆ ಇದೊಂದು ಕೊರತೆಯಲ್ಲ. ಹಾಗೆ ನೋಡಿದರೆ ತೇಜಸ್ವಿಯವರ ಧರ್ಮದ ಬಗೆಗಿನ ತಿಳುವಳಿಕೆ, ಮುಂಜಾಗ್ರತೆ ಏನು ಎಂಬುದು ‘ನಾಡಗೀತೆ’ ವಿವಾದದ ಸಮಯದಲ್ಲಿ ಅವರು ಪತ್ರಿಕೆಗಳಿಗೆ ಬರೆದ ಪತ್ರಗಳಲ್ಲಿಯೇ ವ್ಯಕ್ತವಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ ಧರ್ಮದ ಪಾಲು ಬಹು ದೊಡ್ಡದು ಎಂಬುದು ಅರಿವಾಗುತ್ತದೆ. ರಾಶಿ ರಾಶಿ ಸಾಹಿತ್ಯ ಧರ್ಮದ, ಧಾರ್ಮಿಕ ಶ್ರದ್ಧೆಯ ಮುಖವಾಣಿಯಂತೆಯೇ ಸೃಷ್ಟಿಯಾಗಿರುವುದುನ್ನು ಕಾಣಬಹುದು. ಧರ್ಮ ಮತ್ತು ಧಾರ್ಮಿಕ ಶ್ರದ್ಧೆಯ ಬಗ್ಗೆ ಬರೆಯುತ್ತಲೇ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಬರೆದ ಪಂಪನ ಪರಿಕಲ್ಪನೆಯ ಧರ್ಮಾತೀತ ನಿಲುವು ಮುಸುಕಾಗಿ ಧಾರ್ಮಿಕ ಶ್ರದ್ಧೆಯೇ ಮೇಲುಗೈ ಪಡೆಯುವಂತೆ ಪಂಪನ ನಂತರದ ಸಾಹಿತ್ಯ ಚರಿತ್ರೆ ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಧರ್ಮದ ಹಿನ್ನಲೆಯಲ್ಲಿ ಜೈನಯುಗ, ವೀರಶೈವಯುಗ ಮತ್ತು ಬ್ರಾಹ್ಮಣಯುಗ ಎಂದು ವಿಭಾಗಿಸುವಷ್ಟರ ಮಟ್ಟಿಗೆ ಧಾರ್ಮಿಕ ಶ್ರದ್ಧೆ ಕೆಲಸ ಮಾಡಿದೆ.
ಆದ್ದರಿಂದಲೇ, ಸದಾ ಹೊಸತರ ಕಡೆಗೆ ಯೋಚಿಸುತ್ತಿದ್ದ, ಹೊಸದಿಗಂತದೆಡೆಗೆ ಹಂಬಲಿಸುತ್ತಿದ್ದ ಚಲನಶೀಲ ಬರಹಗಾರರಾದ ತೇಜಸ್ವಿ ಧರ್ಮವನ್ನು ಬೈಪಾಸ್ ಮಾಡಲು ನಿರ್ಧರಿಸಿದ್ದಿರಬೇಕು. ಅಂತೆಯೇ ಸತ್ಯಮೂರ್ತಿಯವರಿಗೆ ಬರೆದ ಪತ್ರದಲ್ಲಿ (ಆಹ್ವಾನ ಪತ್ರಿಕೆಯಲ್ಲಿ ಅಚ್ಚಾಗಿದೆ) ‘ಬರೀ ರಾಜಕಾರಣ ಇತ್ಯಾದಿಗಳನ್ನು ಬರೆದು ಓದುಗರನ್ನು ಬೋರ್ ಮಾಡಕೂಡದೆಂದು ನಿರ್ಧರಿಸಿದ್ದೇನೆ’ ಎಂದಿರುವುದು. ಇಲ್ಲಿನ ‘ಇತ್ಯಾದಿ’ಗಳ್ಲಲಿ ಧರ್ಮವೂ ಸೇರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಅಂತರ್ಗತವಾಗಿದ್ದ ಧರ್ಮಾತೀತ ಮತ್ತು ಜಾತ್ಯಾತೀತ ನಿಲುವು ಅವರಿಗೆ ಪ್ರಮುಖವಾಗಿ ಕಂಡಿರಬೇಕು. ಅದನ್ನು ಮುಂಚೂಣಿಗೆ ತರುವ ಮಹಾಪ್ರಯತ್ನವೇ ಅವರ ವಿಶಿಷ್ಟ ಬಗೆಯ ಸಾಹಿತ್ಯ ರಾಶಿ! ಇದು ನಮ್ಮ ದೇಶಕ್ಕೆ ಬೇಕಾಗಿರುವ ತುರ್ತು ಅಗತ್ಯಗಳಲ್ಲಿ ಒಂದು. ಈ ನಿಟ್ಟಿನಲ್ಲಿ ತೇಜಸ್ವಿಯವರ ನಿರ್ಲಕ್ಷ್ಯ ಉದ್ದೇಶಪೂರ್ವಕವಾದರೂ ಸ್ವಾಗತಾರ್ಹವೆ.

No comments: