Tuesday, May 05, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 13

ಬಿ.ಸಿ.ಎಂ. ಹಾಸ್ಟೆಲ್
ಕುಂದೂರುಮಠದಲ್ಲಿ ಒಂದು ಓ.ಬಿ.ಸಿ. ಹಾಸ್ಟೆಲ್ ಇತ್ತು. ಓ.ಬಿಸಿ. ಹಾಸ್ಟೆಲ್ ಎಂಬುದು ಅದರ ಚಿರಪರಿಚಿತ ನಾಮವಾದರೂ ನಿಜವಾದ ಹೆಸರು ಬಿ.ಸಿ.ಎಂ. ಹಾಸ್ಟೆಲ್ ಎಂಬುದು. ‘ಬ್ಯಾಕ್‌ವರ್ಡ್ ಕಮ್ಯುನಿಟಿ ಅಂಡ್ ಮೈನಾರಿಟಿ ಹಾಸ್ಟೆಲ್’ ಎಂಬುದು ಅದರ ವಿಸ್ತರಣೆ. ಓ.ಬಿ.ಸಿ ಅಂದರೆ, ‘ಅದರ್ ಬ್ಯಾಕ್‌ವರ್ಡ್ ಕಮ್ಯುನಿಟಿ’ ಎಂದಷ್ಟೇ ಆಗುವುದರಿಂದ ಬಿ.ಸಿ.ಎಂ. ಎಂಬುದೇ ಸೂಕ್ತವಾಗಿತ್ತು. ಕನ್ನಡದಲ್ಲಿ ಬರೆದಿದ್ದ ಬೋರ್ಡಿನಲ್ಲಿ ‘ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ’ ಎಂದೇ ಬರೆಯಲಾಗಿತ್ತು. ಆ ಹಾಸ್ಟೆಲ್ಲಿನಲ್ಲಿ ಐವತ್ತು ವಿದ್ಯಾರ್ಥಿಗಳಿಗೆ ಎಲ್ಲಾ ಅನುಕೂಲ ಮಾಡಿಕೊಡಲಾಗಿತ್ತು.
ಎಲ್ಲಾ ಎಂಬ ಮಾತು ಸ್ವಲ್ಪ ದೊಡ್ಡದಾಗಬಹುದು. ಏಕೆಂದರೆ ಆಗ ಅದಕ್ಕೆ ಸ್ವಂತ ಕಟ್ಟಡವೇ ಇರಲಿಲ್ಲ. ಕುಂದೂರುಮಠಕ್ಕೆ ಸೇರಿದ ಒಂದು ಮನೆಯೇ ಅದರ ಕಾರ್ಯಸ್ಥಾನ. ಒಂದು ದೊಡ್ಡ ಹಾಲ್, ಪಡಸಾಲೆ, ಒಂದು ಕೋಣೆ, ಹಿಂಬದಿಯಲ್ಲಿದ್ದ ಒಂದು ಚಿಕ್ಕ ಹಾಲ್ ಇಷ್ಟೇ ಜಾಗ! ಹಾಲ್‌ನಲ್ಲಿ ಸುಮಾರು ನಲವತ್ತು ವಿದ್ಯಾರ್ಥಿಗಳು ತಮ್ಮ ಪೆಟ್ಟಿಗೆಗಳನ್ನು ಇಟ್ಟುಕೊಳ್ಳಬಹುದಾದ ಜಾಗಕ್ಕಷ್ಟೆ ಒಡೆಯರಾಗಿದ್ದರು. ಹತ್ತನೇ ತರಗತಿಯ ಸುಮಾರು ಹತ್ತು-ಹನ್ನೆರಡು ವಿದ್ಯಾರ್ಥಿಗಳು ಪಡಸಾಲೆಯಲ್ಲಿ ವಾಸ್ತವ್ಯ ಹೂಡಬೇಕಿತ್ತು. ಇದ್ದ ಏಕೈಕ ಕೋಣೆಯು ಆಫೀಸ್ ಕಮ್ ಸ್ಟೋರ್ ರೂಮ್! ಹಿಂದಿನ ಚಿಕ್ಕ ಹಾಲ್, ಕಿಚನ್ ಕಮ್ ಡೈನಿಂಗ್‌ಹಾಲ್. ಇನ್ನು ಕಕ್ಕಸ್ಸಿಗೆ ಕುಂದೂರುಮಠದ ಸುತ್ತಲೂ ಇದ್ದ ಕುರುಚಲು ಕಾಡು, ಸ್ನಾನಕ್ಕೆ ಬೋರ್‌ವೆಲ್ ಅಥವಾ ಮಠಕ್ಕೆ ಸೇರಿದ್ದ ಎರಡು ಬಾವಿ. ಇದಿಷ್ಟೂ ಅಲ್ಲಿದ್ದ ಮೂಲಭೂತ ಸೌಕರ್ಯ!
ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಅಂದರೆ ಹಾಸಿಗೆ, ತಟ್ಟೆ ಲೋಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಪುಸ್ತಕಗಳು, ಸಾಕಷ್ಟು ನೋಟ್ ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ತಿಂಗಳಿಗೊಂದು ಲೈಫ್‌ಬಾಯ್ ಸೋಪ್, ಒಂದು ರಿನ್ ಸೋಪ್, ಹಲ್ಲುಪುಡಿ, ಹರಳೆಣ್ಣೆ, ಸೀಗೆಪುಡಿ ಎಲ್ಲವನ್ನೂ ಪೂರೈಸುತ್ತಿದ್ದರು. ವಿದ್ಯುತ್ ಇಲ್ಲದ ಆ ಮನೆಯಲ್ಲಿ, ರಾತ್ರಿ ಉಪಯೋಗಕ್ಕೆ ಸೀಮೆಎಣ್ಣೆ ಅಥವಾ ಕ್ಯಾಂಡೆಲ್‌ಗಳನ್ನು ಪೂರೈಸುತ್ತಿದ್ದರು. ಎರಡು ತಿಂಗಳಿಗೊಮ್ಮೆ ಸ್ಥಳೀಯ ಕ್ಷೌರಿಕನೊಬ್ಬ ಬಂದು ಎಲ್ಲರಿಗೂ ಷಾರ್ಟ್ ಕಟಿಂಗ್ ಮಾಡಿ ಹೋಗುತ್ತಿದ್ದ. ದಿನಕ್ಕೆ ಎರಡು ಊಟ ಮತ್ತು ಒಂದು ತಿಂಡಿಯ ವ್ಯವಸ್ಥೆಯೂ ಇತ್ತು. ತಿಂಗಳಿಗೆ ಎರಡು ಬಾರಿ ಸ್ಪೆಷಲ್ ಎಂದು ವೆಜ್‌ಪಲಾವ್ ಮತ್ತು ಪಾಯಸ ಮಾಡಿಸುತ್ತಿದ್ದರು. ಸ್ಕೂಲಿನಲ್ಲಿ ಮಧ್ಯಾಹ್ನ ಲಂಚ್ ಅವರ್ ಕೇವಲ ನಲವತ್ತು ನಿಮಿಷಗಳಿದ್ದುದ್ದರಿಂದ ಆ ಸಮಯದಲ್ಲಿ ಊಟ ಮಾಡಲಾಗುವುದಿಲ್ಲವೆಂದು, ಹಾಗೂ ಮಧ್ಯಾಹ್ನ ಊಟ ಮಾಡುವುದರಿಂದ ತರಗತಿಯಲ್ಲಿ ನಿದ್ದೆ ಬರುತ್ತದೆಂದು ವಿದ್ಯಾರ್ಥಿಗಳೆಲ್ಲ ಒತ್ತಾಯಿಸಿ, ಬೆಳಿಗ್ಗೆಯೇ ಊಟ ಮಾಡುವುದೆಂದು ಮಧ್ಯಾಹ್ನ ತಿಂಡಿ ತಿನ್ನುವುದೆಂದು ವಾರ್ಡನ್‌ರ ಮನವೊಲಿಸಿದ್ದರು. ಅದರಂತೆ ಮಧ್ಯಾಹ್ನ ಏನಾದರೂ ಸಿಂಪಲ್ಲಾಗಿ ತಿಂಡಿ ಇರುತ್ತಿತ್ತು. ಚಿತ್ರಾನ್ನ, ಉಪ್ಪಿಟ್ಟು ಇವೆರಡೇ ಹೆಚ್ಚಾಗಿ ಮಾಡುತ್ತಿದ್ದ ತಿಂಡಿಗಳು. ಸೋಮಾರಿಗಳಾದ ನಾವು ಕೆಲವರು, ಮಧ್ಯಾಹ್ನ ಇಷ್ಟು ಕಡಿಮೆ ತಿಂಡಿ ತಿನ್ನಲು, ತಿನ್ನುವ ಮೊದಲು ಮತ್ತು ನಂತರ ಎರಡು ಬಾರಿ ಅಷ್ಟು ದೊಡ್ಡ ತಟ್ಟೆ ತೊಳೆಯಬೇಕೇಕೆ? ಎಂದು ತಿಂಡಿಯನ್ನು ಕೈಯಿಗೇ ಹಾಕಿಸಿಕೊಂಡು ತಿನ್ನುತ್ತಿದ್ದೆವು!
ಊಟದ ವ್ಯವಸ್ಥೆಯಂತೂ ತುಂಬಾ ಅಚ್ಚುಕಟ್ಟಾಗಿತ್ತು. ಮೊದಲು ನಾನು ಹಾಸ್ಟೆಲ್ ಸೇರಿದಾಗ ಇಬ್ಬರು ಭಟ್ಟರು ಅಡುಗೆ ಮಾಡಲು ಇದ್ದರು, ನಂತರ ಮೂವರಾದರು. ಒಬ್ಬ ವಾರ್ಡನ್ ಇರುತ್ತಿದ್ದರು. ವಾರ್ಡನ್ ತಿಂಗಳಿಗೊಮ್ಮೆ ಚನ್ನರಾಯಪಟ್ಟಣಕ್ಕೆ ಹೋಗಿ ತಿಂಗಳಿಗೆ ಬೇಕಾಗುವಷ್ಟು ರೇಷನ್ ಕೊಂಡು ತರುತ್ತಿದ್ದರು. ಅಕ್ಕಿ-ರಾಗಿ ಮಾಡಲು ಪಕ್ಕದ ಬೆಳಗುಲಿಯ ಇಬ್ಬರು ಹೆಂಗಸರು ಬರುತ್ತಿದ್ದರು. ಅವರು ಹಾಗೆ ಸಿದ್ಧಪಡಿಸಿದ ರಾಗಿಯನ್ನು, ಮೆಣಸಿನಕಾಯಿಯನ್ನು, ಸಂಬಾರ ಸಾಮಾನುಗಳನ್ನು ಒಂದು ದಿನ ಭಟ್ಟರು ಮೂಡನಹಳ್ಳಿಯಲ್ಲಿದ್ದ ಮಿಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಅಡುಗೆಯಲ್ಲಾ ಸೌದೆ ಒಲೆಯಲ್ಲೇ ನಡೆಯುತ್ತಿತ್ತು. ಸೌದೆಗಾಗಿ ತಿಂಗಳಿಗೆ ಒಂದೆರಡು ಗಾಡಿ ತೆಂಗಿನ ಮಟ್ಟೆಗಳನ್ನು ಅಕ್ಕಪಕ್ಕದ ಊರುಗಳಿಂದ ಕೊಂಡುಕೊಳ್ಳಲಾಗುತ್ತಿತ್ತು. ತರಕಾರಿಯೂ ಅಷ್ಟೆ. ವಾರಕ್ಕೊಮ್ಮೆ ಚನ್ನರಾಯಪಟ್ಟಣದಿಂದ ಬರುವಂತೆ ವ್ಯವಸ್ಥೆಯಾಗಿತ್ತು.
ನಾನು ಅಲ್ಲಿದ್ದ ಮೂರು ವರ್ಷಗಳಲ್ಲಿ ಮೂವರು ವಾರ್ಡನ್‌ಗಳು, ನಾಲ್ವರು ಭಟ್ಟರು ಅಲ್ಲಿ ಕೆಲಸ ಮಾಡಿದ್ದರು. ಭೀಮಪ್ಪ ಕರಿಯಪ್ಪ ಜಟಗೊಂಡ ಅವರು ವಾರ್ಡನ್ನಾಗಿ ಬರುವ ಮೊದಲು ಅಲ್ಲಿದ್ದ ವಾರ್ಡನ್ ಸಿಟಿಯವರಾಗಿದ್ದು, ಅವರಿಗೆ ಹಳ್ಳಿಯಲ್ಲಿ ಹೇಗೆ ಬದುಕಬೇಕೆಂದಾಗಲೀ, ಹಳ್ಳಿಯವರ ಸಮಸ್ಯೆಯಾಗಲೀ ಗೊತ್ತೇ ಇರಲಿಲ್ಲ. ಅವರ ಜೀವಮಾನದಲ್ಲೇ ಅವರು ಪಂಚೆ ಉಟ್ಟಿರಲಿಲ್ಲವಂತೆ! ಅದರಿಂದಾಗಿ ಇಲ್ಲಿ ಕಕ್ಕಸ್ಸು ವ್ಯವಸ್ಥೆಯೂ ಇಲ್ಲದೆ ಪ್ರಾರಂಭದಲ್ಲಿ ಅವರು ತುಂಬಾ ಕಷ್ಟ ಪಡಬೇಕಾಯಿತಂತೆ! ಆದರೆ ಜಟಗೊಂಡ ಅವರು ಹಳ್ಳಿಯ ಹಿನ್ನೆಲೆಯಲ್ಲಿ ಬಂದವರಾದ್ದರಿಂದ ಅವರಿಗೆ ಇವಾವೂ ಸಮಸ್ಯೆ ಎನ್ನಿಸಲೇ ಇಲ್ಲ. ಬಂದ ಕೆಲವೇ ದಿನಗಳಲ್ಲಿ ನಮ್ಮವರಲ್ಲಿ ಒಬ್ಬರಾಗಿ ಬೆರೆತು ಹೋದರು.
ಸಾಮಾನ್ಯವಾಗಿ ಹಾಸ್ಟೆಲ್ಲಿನ ಯಾವ ಕೆಲಸವೂ ಕೇವಲ ಈ ವಾರ್ಡನ್ ಮತ್ತು ಭಟ್ಟರ ಕೈಯಿಂದ ಆಗುತ್ತಿರಲಿಲ್ಲ. ಪ್ರತಿಯೊಂದಕ್ಕೂ ವಿದ್ಯಾರ್ಥಿಗಳ ನೆರವು ಬೇಕಾಗುತ್ತಿತ್ತು. ರೇಷನ್ ತರಲು, ಸೌದೆ ತಂದು ಒಂದೆಡೆ ಪೇರಿಸಲು, ಮಿಲ್‌ಗೆ ರಾಗಿ ತೆಗೆದುಕೊಂಡು ಹೋಗಲು, ತರಕಾರಿ ತರಲು, ಅನ್ನ ಬಸಿಯಲು, ರಾಗಿಮುದ್ದೆ ಕಟ್ಟಲು.... ಹೀಗೆ ಎಲ್ಲದಕ್ಕೂ ವಿದ್ಯಾರ್ಥಿಗಳ ನೆರವನ್ನು ಅವರು ಧಾರಾಳವಾಗಿ ಪಡೆಯುತ್ತಿದ್ದರು. ಇದ್ದ ಒಂದೇ ಬೋರ್‌ವೆಲ್ಲಿನಿಂದ ನೀರನ್ನು ತರಲು ಹುಡುಗರನ್ನು ಸರದಿಯ ಮೇಲೆ ಬಳಸಿಕೊಳ್ಳಲಾಗುತ್ತಿತ್ತು. ಹೀಗೆ ಅವರಿಗೆ ನೆರವು ನೀಡುತ್ತಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ. ಜಟಗೊಂಡ ಅವರು ಬಂದ ಹೊಸತರಲ್ಲಿ ಅವರೊಡನೆ ಚನ್ನರಾಯಪಟ್ಟಣಕ್ಕೆ ರೇಷನ್ ತರಲು ಹೋಗಿದ್ದೆ. ಎಲ್ಲ ಭಾರವಾದ ಸಾಮಾನುಗಳನ್ನು ಕೊಂಡು ಒಂದು ಗಾಡಿ ಗೊತ್ತು ಮಾಡಿ ಅದರಲ್ಲಿ ಪೇರಿಸಿದ್ದೆವು. ಎರಡು ಸಣ್ಣ ಬಾಕ್ಸ್‌ಗಳನ್ನು ನಾವು ಬಸ್‌ಸ್ಟ್ಯಾಂಡ್‌ನಲ್ಲಿ ಇಟ್ಟುಕೊಂಡು ಬಸ್ಸಿಗೆ ಕಾಯುತ್ತಿದ್ದೆವು. ನಾನು ಮತ್ತು ಭಟ್ಟರಾದ ಧರ್ಮಣ್ಣ ಮಾತನಾಡುತ್ತಾ ಕುಳಿತಿದ್ದಾಗ, ಜಟಗೊಂಡ ಅವರು ‘ಒಂದು ನಿಮಿಷ ಇರ್ರೋ, ಬಂದೆ’ ಎಂದು ಅಂಗಡಿ ಸಾಲುಗಳಿದ್ದ ಕಡೆ ಹೋದರು. ಸುಮಾರು ಹತ್ತು ನಿಮಿಷಗಳ ನಂತರ ಹಿಂತಿರುಗಿದ ಅವರು, ‘ಯಾವ ಸೀಮೆ ಊರ್ರೋ ಇದು! ಒಂದು ಕೆ.ಜಿ. ಶೇಂಗಾ ಈ ಊರಾಗ ಸಿಗಾಂಗಿಲ್ಲ. ಸುಡುಗಾಡು’ ಎಂದು ಬೆವರು ಒರೆಸಿಕೊಂಡಿದ್ದರು. ಧರ್ಮಣ್ಣ ಇದ್ದವನು ‘ಶೇಂಗಾ ಏಕೆ ಸಾರ್ ಸಿಗೋಲ್ಲ. ಬನ್ನಿ ನಾನು ಕೊಡಿಸುತ್ತೇನೆ’ ಎಂದು ಅವರು ಹೋಗಿದ್ದ ಅಂಗಡಿಗೇ ಹೋಗಿ, ಒಂದು ಕೆಜಿ ಕಡ್ಲೆಬೀಜ ಕೊಡಿಸಿದ. ಆಗ ಜಟಗೊಂಡ ಅವರು ‘ಅದರಪ್ಪನ, ಈಗ ತಾನೆ ಬಂದು ಶೇಂಗಾ ಕೇಳಿದರೆ ಇಲ್ಲ ಅಂದ್ರು. ನೀನು ಬಂದರೆ ಕೊಟ್ರಲ್ಲೊ’ ಎಂದು ಆಶ್ಚರ್ಯಪಟ್ಟಿದ್ದರು!
ಬೆಳಗಾಂ ಕಡೆಯವರಾದ ಅವರಿಗೆ, ಶೇಂಗಾ ಎಂಬುದಕ್ಕೆ ಬಯಲುಸೀಮೆಯವರು ಕಡ್ಲೆ ಅಥವಾ ನೆಲಗಡ್ಲೆ ಎನ್ನುತ್ತಾರೆಂದು ಗೊತ್ತೇ ಇರಲಿಲ್ಲ. ನಮ್ಮ ಕಡೆಯವರಿಗೆ ಕಡ್ಲೆಬೀಜಕ್ಕೆ ಶೇಂಗಾ ಎನ್ನುತ್ತಾರೆಂಬುದೂ ಗೊತ್ತಿರಲಿಲ್ಲ!
ಮಗ ಬಾಳ ಬೆರಕಿ ಇದ್ದಾನ!
ಶೇಂಗಾ-ಕಡ್ಲೆಬೀಜದ ಘಟನೆ ನಡೆದ ನಂತರ ಇಂತದ್ದೇ ಮತ್ತೊಂದು ಅವಾಂತರ ನಡೆದಿತ್ತು. ಒಮ್ಮೆ ಜಟಗೊಂಡ ಅವರ ಊರಿನ ಕಡೆಯವರು ಯಾರೋ ಹಾಸ್ಟೆಲ್ಲಿಗೆ ಬಂದಿದ್ದರು. ಹೊಸದಾಗಿ ಹಾಸ್ಟೆಲ್ಲಿಗೆ ಸೇರಿಕೊಂಡಿದ್ದ ಸುರೇಶ ಎಂಬ ಎಂಟನೇ ತರಗತಿಯ ಹುಡುಗನೊಬ್ಬ ಓದಿನಲ್ಲಿ ಚುರುಕಾಗಿದ್ದ. ಆ ಹುಡುಗನ ಬಗ್ಗೆ ಅವರಿಗೆ ಹೇಳುವಾಗ, ‘ಮಗ ಬಾಳ ಬೆರಕಿ ಇದ್ದಾನ’ ಎಂದರು.
ಅವರು ‘ಬೆರಕಿ’ ಎಂದು ಉಚ್ಛರಿಸುವ ‘ಬೆರಕೆ’ ಪದಕ್ಕೆ ನಮ್ಮ ಬಯಲುಸೀಮೆಯಲ್ಲಿ ಕೆಟ್ಟ ಅರ್ಥವಿದೆ. ನಮ್ಮ ಕಡೆ ಈ ಬೆರೆಕೆ ಪದವನ್ನು ಸೇರಿಸಿಕೊಂಡು ‘ಬೆರಕೆಗೆ ಹುಟ್ಟಿದವನು’ ಎಂದು ಬಯ್ಯುವುದಿದೆ. ಅದರ ಅರ್ಥ, ಸಾಮಾಜಿಕವಾಗಿ ಸ್ವೀಕರಿಸಲ್ಪಟ್ಟ ಆತನ ಅಪ್ಪನಿಗಲ್ಲದೆ, ಬೇರೆಯವನಿಗೆ ಹುಟ್ಟಿದವನು ಎಂಬುದು! ಅಂದರೆ, ಹೆಂಡತಿ ತನ್ನ ಗಂಡನಲ್ಲದವನ ಜೊತೆ ಸೇರಿದ್ದರಿಂದ ಜನಿಸಿದವನನ್ನು ‘ಬೆರಕೆ’ ಎಂದು ಬಯ್ಯುತ್ತಾರೆ! ಈ ಪದವನ್ನು ನಮ್ಮಲ್ಲಿ ಯಾರಾದರು ಬಳಸಿದರೆಂದರೆ ಜಗಳ ವಿಪರೀತಕ್ಕೆ ಹೋಗಿದೆ ಎಂದೇ ಅರ್ಥ. ಜಟಗೊಂಡ ಅವರು ಆ ಪದವನ್ನು ಯಾವ ಅರ್ಥದಲ್ಲಿ ಬಳಸಿದರೆಂದು ನಮಗೆ ಗೊತ್ತಿರಲಿಲ್ಲವಾದ್ದರಿಂದಲೂ, ವಾರ್ಡನ್ ಕೆಟ್ಟ ಮಾತು ಬಳಸುವುದಿಲ್ಲವೆಂಬ ನಂಬಿಕೆಯಿಂದಲೂ ನಾವು ಸುಮ್ಮನಿದ್ದೆವು.
ಅದನ್ನು ಕೇಳಿಸಿಕೊಂಡ ಸುರೇಶ ಅಷ್ಟೇನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೆಲವು ಬೇರೆ ಹುಡುಗರು ಸುರೇಶನನ್ನು ಮತ್ತೆ ಮತ್ತೆ ‘ಬೆರಕೆ’ ಎನ್ನಲು ಶುರುವಾದಾಗ ಸುರೇಶನ ತಲೆ ಕೆಟ್ಟಿರಬೇಕು. ಶನಿವಾರ ಊರಿಗೆ ಹೋದ ಸುರೇಶ ಸೋಮವಾರ ಬರುವಾಗ ಜೊತೆಯಲ್ಲಿ ತನ್ನ ತಂದೆ ಮತ್ತು ಅಣ್ಣನನ್ನು ಕರೆದುಕೊಂಡು ಬಂದಿದ್ದ! ಅವರಿಬ್ಬರು ಬಂದವರೆ ಜಟಗೊಂಡ ಅವರ ಬಳಿ ಬಂದು ಜಗಳಕ್ಕೆ ನಿಂತರು. ಜಟಗೊಂಡ ಅವರಿಗೆ ತಾನು ಮಾಡಿದ ತಪ್ಪು ಏನೆಂದು ತಿಳಿಯಲಿಲ್ಲ. ಸುರೇಶನ ಅಣ್ಣ ಮತ್ತು ತಂದೆ ‘ಬೆರಕೆ’ ಎಂಬ ಪದವನ್ನು ಹೇಳದೆ, ‘ನಮ್ಮ ಹುಡುಗನನ್ನು ನೀವು ಕೆಟ್ಟದ್ದಾಗಿ ಬಯ್ದಿದ್ದೇಕೆ? ನಮ್ಮ ಮನೆಯವರೇನು ಅಂತವರಲ್ಲ!’ ಎಂದು ಜಗಳಕ್ಕೆ ನಿಂತರು.
ಜಟಗೊಂಡ ಅವರಿಗೆ ಏನೂ ಅರ್ಥವಾಗದೆ ಸುರೇಶನನ್ನೇ ಕರೆದು ಕೇಳಿದರು. ‘ಏ, ಹೇಳಲೆ ಸುರೇಶ, ನಾನಿನಗೆ ಏನಾರ ಬಯ್ದೆನೇನು?’ ಎಂದರು.
ಆತ ಹೆದರಿಕೊಳ್ಳುತ್ತಲೇ ‘ಸಾರ್, ನೀವು ಅವತ್ತು ನನ್ನನ್ನು ಮಗ ಬಹಳ ಬೆರಕೆ ಇದಾನೆ ಅಂತ ಯಾರತ್ರಲೋ ಹೇಳ್ತಿದ್ರಿ. ಅದಕ್ಕೆ ಬೇರೆ ಹುಡುಗರು ನನ್ನನ್ನು ಬೆರಕೆ ಎಂದು ಆಡಿಕೊಳ್ಳುತ್ತಿದ್ದಾರೆ’ ಎಂದ.
ಜಟಗೊಂಡ ಸ್ವಲ್ಪ ಸಮಾಧಾನದಿಂದ ‘ಅದ್ರಲಿ ಏನ್ ತಪ್ಪದ. ಈಗಲೂ ಹೇಳ್ತೀನಿ, ನೀನು ಬಾಳ ಬೆರಕಿ ಇದ್ದೀಯ ಅಂತ. ನಾನೇನು ಸುಳ್ಳ ಹೇಳಾಂಗಿಲ್ಲ. ಕರೇನ ಹೇಳಾಂವ’ ಎಂದರು.
ಆಗ ಸುರೇಶನ ಅಣ್ಣ ‘ಏನ್ರಿ ನನ್ನ ತಮ್ಮನ್ನ ಬೆರಕೆಗ್ಹುಟ್ಟಿದವನು ಅನ್ನೋಕೆ ಎಷ್ಟು ಧೈರ್ಯ ನಿಮಗೆ’ ಎಂದು ಕೂಗಾಡಲು ಆರಂಭಿಸಿದ.
ಗಾಭರಿಯಾದ ಜಟಗೊಂಡ ‘ಲೇ ತಮ್ಮ, ನಾನು ಅವನನ್ನ ಬೆರಕಿ ಇದಾನೆ ಅಂದ್ನೆ ಹೊರ್ತು, ಬೆರಕಿಗ್ಹುಟ್ಟಿದವನು ಅಂತ ಎಲ್ಲಿ ಅಂದೆ. ಸುಳ್ಳು ಸುಳ್ಳೆ ಹೇಳಬೇಡ ಮತ್ತ’ ಎಂದರು.
ಚನ್ನರಾಯಪಟ್ಟಣದ ಅಂಗಡಿಯಲ್ಲಿ ಷೇಂಗಾ ಕೇಳಿ ಇಲ್ಲ ಅನ್ನಿಸಿಕೊಂಡಿದ್ದ ಜಟಗೊಂಡ ಅವರ ಬಗ್ಗೆ ಗೊತ್ತಿದ್ದ ಧರ್ಮಣ್ಣ ಮತ್ತು ನಾನು, ‘ಸಾರ್ ನಮ್ಕಡೆ, ಬೆರಕೆಗ್ಹುಟ್ಟಿದವನು ಅಂದ್ರೆ ಕೆಟ್ಟ ಬಯ್ಗಳ. ಆದರೆ ನೀವು ಸುರೇಶನನ್ನು ಮೇಲಿಂದ ಮೇಲೆ ಬೆರಕಿ ಅನ್ನುತ್ತಿದ್ದೀರಾ. ನೀವು ಯಾವ ಅರ್ಥದಲ್ಲಿ ಅನ್ನುತ್ತಿದ್ದೀರೋ ನಮಗ್ಯಾರಿಗೂ ಗೊತ್ತಾಗ್ತಾ ಇಲ್ಲ’ ಎಂದೆವು.
‘ಏನು? ಬೆರಕಿ ಅಂದ್ರ ಕೆಟ್ಟ ಬಯ್ಗಳ ಏನು?! ಅಯ್ಯೋ ನಮ್ಕಡಿ ಶಾಣ್ಯಾ ಇದ್ದವನಿಗೆ ಬೆರಕಿ ಅಂತಾರ್ರೋ. ಅಂದ್ರ ಚಲೋ ಇದ್ದಾನ, ಬುದ್ಧಿವಂತ ಇದ್ದಾನ, ಜಾಣ ಇದ್ದಾನ ಅಂತ ಅರ್ಥ. ಆತ ಓದೋದ್ರಲ್ಲಿ ಬುದ್ದಿವಂತ ಇರೋದ್ರಿಂದ ನಾನು ಆತನ್ನ ಬೆರಕಿ ಇದ್ದಾನ ಅಂದಿದ್ದು’ ಎಂದು ಒಂದು ದೀರ್ಘ ವಿವರಣೆ ಕೊಟ್ಟರು. ಆಗ ನಮಗೆಲ್ಲ ಜ್ಞಾನೋದಯವಾಗಿತ್ತು. ಸುರೇಶನ ತಂದೆ ಮತ್ತು ಅಣ್ಣ ಇಬ್ಬರೂ ‘ಸರ್ ನಮಗೆ ಅದು ಗೊತ್ತಿರಲಿಲ್ಲ’ ಎಂದು ಹೊರಟು ಹೋದರು. ಈ ಘಟನೆಯನ್ನು ಮೇಲಿಂದ ಮೇಲೆ ಅವರಿವರಲ್ಲಿ ಹೇಳಿಕೊಂಡು ವಾರ್ಡನ್ ನಗುತ್ತಿದ್ದರು.
ಜಟಗೊಂಡ ಅವರು ಹೀಗೆ ಬೆಳಗಾವಿ ಕಡೆಯ ಮಾತುಗಳನ್ನು ಬಳಸಿ ಪೇಚಿಗೆ ಸಿಲುಕಿಕೊಳ್ಳುವ ಘಟನೆ ಮತ್ತೆ ನಡೆಯಲಿಲ್ಲ. ಆದರೆ ‘ಬಚ್ಚಲು’ ಮತ್ತು ‘ತಿಂಡಿ’ ಎಂಬ ಎರಡು ಪದಗಳು ಅಪಹಾಸ್ಯಕ್ಕೆ ಗುರಿಯಾಗಿದ್ದವು. ಸೋಮಾರಿಗಳಾಗಿದ್ದ ಹಾಸ್ಟೆಲ್ ಹುಡುಗರು ಕೈ, ತಟ್ಟೆ, ಲೋಟ ತೊಳೆಯಲು ದೂರ ಹೋಗದೆ ಊಟದ ಮನೆಯ ಬಾಗಿಲಿನಲ್ಲೇ ತೊಳೆಯುತ್ತಿದ್ದರು. ಅದರಿಂದಾಗಿ ಬಾಗಿಲಿನ ಬಳಿ ಯಾವಾಗಲು ಗಲೀಜಾಗಿರುತ್ತಿತ್ತು.
ಒಂದು ದಿನ ವಾರ್ಡನ್ ಬಂದವರೇ ‘ಯಾವನಲೇ ಅಂವಾ. ಆ ಬಾಗ್ಲಲ್ಲೇ ತೊಳೆದೂ ತೊಳೆದೂ ಅದನ್ನ ಬಚ್ಚಲ ಮಾಡಿಟ್ಟಿರಿ. ಊಟದ ಮನೆ ಸ್ವಚ್ಛ ಇರಬೇಕು ಅನ್ನೊ ಖಬರು ಇರಾಂಗಿಲ್ಲೇನು?’ ಎಂದು ಬಯ್ಯತೊಡಗಿದರು.
ಆಗ ಹುಡಗರೆಲ್ಲಾ ‘ಸಾರ್ ನಾವು ತಿಕ ಮಖ ಸ್ನಾನ ಎಲ್ಲಾ ತೊಳೆಯಾದು ಬೋರ್‌ವೆಲ್ ಹತ್ರ. ನಾವು ಇಲ್ಲಿ ಬಾಗಿಲ ಹತ್ತಿರ ಯಾರು ಸ್ನಾನ ಮಾಡೋದಿಲ್ಲ ಸಾರ್’ ಎಂದು ಒಕ್ಕೊರಲಿನಿಂದ ಹೇಳಿದರು. ನಮ್ಮ ಕಡೆ ‘ಚರಂಡಿ’ ಎಂಬುದಕ್ಕೆ ಅವರ ಕಡೆ ‘ಬಚ್ಚಲು’ ಅನ್ನುತ್ತಿದ್ದಾರೆ ಎಂದು ನಾವ್ಯಾರೂ ಊಹಿಸಿರಲಿಲ್ಲ.
‘ಅಲ್ರೋ, ನಿಮಗೇನಾಗ್ಯದ ಅಂತಿನಿ. ನಾನು, ನೀವು ಎಂಜಲು ತಟ್ಟೆ ಲೋಟ ಎಲ್ಲಾ ಬಾಗ್ಲ ಹತ್ರ ತೊಳೆದು ಗಟಾರ ಮಾಡಿದರಿ ಅಂದ್ರ, ನಾವೇನು ಅಲ್ಲಿ ಸ್ನಾನ ಮಾಡೋದಿಲ್ಲ ಅಂತಿರಿ!’ ಎಂದು ಆಶ್ಚರ್ಯ ಪಟ್ಟಿದ್ದರು. ನಮ್ಮ ಕಡೆ ಬಚ್ಚಲು ಎಂದರೆ ‘ಸ್ನಾನ ಮಾಡುವ ಮನೆ’ ಎಂದಷ್ಟೇ ಅರ್ಥ ಇರುವುದನ್ನು ತಿಳಿಸಿ ಹೇಳಿದ ಮೇಲೆ ನಕ್ಕುಬಿಟ್ಟಿದ್ದರು.
ಇನ್ನಮ್ಮೆ ಪಾಠ ಮಾಡುವಾಗ ಒಬ್ಬ ಹುಡುಗ ಪಿಸಪಿಸನೆ ಪಕ್ಕದವನೊಂದಿಗೆ ಮಾತನಾಡುತ್ತಿದ್ದ. ಅದನ್ನು ಗಮನಿಸಿದ ಜಟಗೊಂಡ ‘ಏನಲೇ ಮಗನಾ, ಮೈಗೆ ತಿಂಡಿ ಹತ್ತಿತೇನು? ಬೇಕಾ ಲಾತಾ’ ಎಂದರು. ನಮಗೆ ‘ಬೇಕಾ ಲಾತಾ’ ಎಂಬುದು ಅರ್ಥವಾಗಿತ್ತು. ಆದರೆ ಮೈಗೆ ತಿಂಡಿ ಹತ್ತುವುದೆಂದರೇನು? ಅರ್ಥವಾಗಲಿಲ್ಲ. ಸ್ವಲ್ಪ ಧೈರ್ಯಸ್ಥನಾಗಿದ್ದ ಆ ಹುಡುಗ ‘ಸಾರ್ ತಿಂಡಿ ಕೈಯಿಗೂ ಬಾಯಿಗೂ ಮಾತ್ರ ಹತ್ತುತ್ತೆ. ಮೈಯಿಗೆ ಹತ್ತೋದಿಲ್ಲ ಸಾರ್’ ಎಂದು ಬಿಟ್ಟ.
ಜಟಗೊಂಡ ಅವರು ‘ಏನಲೇ ಮಗನ. ನನಗೆ ಹೊಳ್ಳಿ ಮಾತಾಡ್ತಿ’ ಎಂದು ಹೊಡೆಯಲು ಹೋದರು.
ಆಗ ಆ ಹುಡುಗ ‘ಸಾರ್ ನಮ್ಕಡೆ ತಿಂಡಿ ಅಂದ್ರೆ, ಟಿಫನ್... ನಾಷ್ಟ ಅಂತ ಸಾರ್. ಅದೆ, ರೊಟ್ಟಿ, ಇಡ್ಲಿ, ದೋಸೆ ಜೊತೆಗೆ ನೀವು ಹಾಸ್ಟೆಲ್ಲಿನಲ್ಲಿ ಕೊಡೋ ಉಪ್ಪಿಟ್ಟು, ಚಿತ್ರಾನ್ನ ಇವಕ್ಕೆ ತಿಂಡಿ ಅಂತಾರೆ ಸಾರ್. ಅದಕ್ಕೆ ನಾನು, ತಿಂಡಿ ಕೈಯಿಗೂ ಬಾಯಿಗೂ ಮಾತ್ರ ಹತ್ತುತ್ತೆ ಅಂದಿದ್ದು ಸಾರ್’ ಎಂದು ಎದ್ದು ಓಡಿ, ಅವರ ಏಟಿನಿಂದ ತಪ್ಪಿಸಿಕೊಂಡ.
ಹೊಡೆಯಲು ಹೋಗಿದ್ದ ಜಟಗೊಂಡ ಅವರು ಬಿದ್ದು ಬಿದ್ದು ನಗತೊಡಗಿದರು. ಜೊತೆಗೆ ಹುಡುಗರೂ ಸೇರಿಕೋಂಡರು. ಅವರ ಕಡೆ, ಮೈಯಿಗೆ ತಿಂಡಿ ಹತ್ತುವುದೆಂದರೆ, ಮೈ ಕಡಿಯುವುದು ಎಂದರ್ಥ! ಹಾಗೆ ನಮಗೆ ಮೈ ಕಡಿತವಾದರೆ ನಾವು ಅದನ್ನು ಕೆರೆದುಕೊಳ್ಳುತ್ತೇವೆ!! ಜಟಗೊಂಡ ಅವರು ತುರಿಸಿಕೊಳ್ಳುತ್ತಾರೆ!!!

6 comments:

PARAANJAPE K.N. said...

ಅನುಭವ ಕಥನ ಚೆನ್ನಾಗಿದೆ

Unknown said...

ಹಾ ಹಾ.. ಚೆನ್ನಾಗಿದೆ ನಿಮ್ಮ ಅನುಭವ ಕಥನ!! :-) ಹೈಸ್ಕೂಲ್ ದಿನಗಳು ಪುಸ್ತಕ ಓದಬೇಕೆನ್ನಿಸುತ್ತಿದೆ... (ಸಮಯವಿದ್ದಾಗ ನಿಮ್ಮ ಬ್ಲಾಗ್ ಅನ್ನು ಮೊದಲಿಂದ ಓದುವೆ)... ನಿಮ್ಮ ಬರಹಗಳತ್ತ ಆಕರ್ಷಿತನಾಗಿದ್ದೇನೆ... ನಿಮ್ಮ ಬ್ಲಾಗ್ ಗೆ ಹೀಗೆ ಬರುತ್ತಿರುತ್ತೇನೆ...

sunaath said...

ನಿಮ್ಮ ವಾರ್ಡನ್ ಭಾಳಾ ‘ಬೆರಕಿ’ (=ಶ್ಯಾಣ್ಯಾರು) ಇದ್ದಾರ ನೋಡ್ರಿ! ಎಷ್ಟರ ನಗಸ್ತಾರ ಅಂತೀರಿ!

shivu.k said...

ಸತ್ಯನಾರಾಯಣ ಸರ್,

ನಿಮ್ಮ ಈ ಕಥಾನಕದಲ್ಲಿ ಹಾಸ್ಟೆಲ್ ಬಗ್ಗೆ ಆಗಾಗ ಬರೆದರೂ ಅದರ ಬಗ್ಗೆ ಬರೆದಿರಲಿಲ್ಲವಲ್ಲ ಅಂದುಕೊಳ್ಳುತ್ತಿದ್ದೆ...ನಿಮ್ಮ ಬಾಲ್ಯದ ಹಾಸ್ಟೆಲ್ ಜೀವನ ಮತ್ತು ಅದರ ಇಷ್ಟ-ಕಷ್ಟಗಳನ್ನು ಚೆನ್ನಾಗಿ ವಿವರಿಸಿದ್ದೀರಿ....ಮತ್ತೆ "ಬೆರಕಿ, ತಿಂಡಿ, ಬಚ್ಚಲು, ಟಿಫಿನ್, ಇತ್ಯಾದಿ ಪದಗಳ ಪ್ರಯೋಗದ ಅನುಭವಗಳನ್ನು ಓದಿ ಖುಷಿಯಾಯಿತು...

ನನಗೆ ಮತ್ತೊಂದು ಆಶ್ಚರ್ಯವೆಂದರೆ ಈ ಲೇಖನ ಸರಣಿ ಓದುತ್ತಿದ್ದಂತೆ ನೀವು ಪ್ರತಿಯೊಂದು ವಿಚಾರವನ್ನು ಸೂಕ್ಷ್ಮವಾಗಿ, ಕೂಲಂಕಸವಾಗಿ, ಮತ್ತು ಚೆನ್ನಾಗಿ ನೆನಪಿಟ್ಟುಕೊಂಡು ಬರೆದಿರುವುದು...

ಮುಂದುವರಿಯಲಿ...ಧನ್ಯವಾದಗಳು..

ಶ್ವೇತಾ said...

uttara karnatakada warden avara bhaasheyindaada nage prasangagaLu bahaLa rasavattaagide...

ಶ್ವೇತಾ said...

uttara karnatakada warden avara bhaashe yindaada nage prasangagaLu rasavattagive..