Tuesday, May 24, 2011

ಸರಸ್ವತಿ ಸಮ್ಮೋಹಿತೆಯಾದಳ್ ಅಗ್ಗಳೆಯಾದಳ್ ವಿಶ್ವಭೂಚಕ್ರದೊಳ್ - ಜನ್ನ

ಕವಿಚಕ್ರವರ್ತಿತ್ರಯರಲ್ಲಿ ಒಬ್ಬನಾದ ಜನ್ನನು ’ಯಶೋಧರ ಚರಿತ್ರೆ’ಯ ಪ್ರಾರಂಭದಲ್ಲಿ ಸರಸ್ವತಿಯನ್ನು ಸ್ತುತಿಸಿಲ್ಲ. ಆದರೆ, ಸರಸ್ವತಿಗೆ ತನ್ನ ಮೇಲೆ ವಿಶೇಷ ಪ್ರೀತಿ ಎಂದು ಹೇಳಿಕೊಂಡಿದ್ದಾನೆ.
ವಾಣಿ ಪಾರ್ವತಿ ಮಾಡಿದ
ಜಾಣೆಂತುಟೊ ಭಾಳಲೋಚನಂ ಕವಿಸುಮನೋ
ಬಾಣನ ಮಗನೆಂದಖಿಳ 
ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ||
ಸರಸ್ವತಿ ಮತ್ತು ಪಾರ್ವತಿಯರು ಸೇರಿ ಮಾಡಿದ ಜಾಣತನದಿಂದ ಭಾಳಲೋಚನನು (ಜನ್ನನು) ಕವಿಸುಮನೋಬಾಣನ ಮಗನೆಂದು ಅಖಿಲಕ್ಷೋಣಿಗೆ ಹೆಸರಾಯ್ತು; ಈ ಪ್ರೀತಿಗೆ ಆಶ್ಚರ್ಯವೇಕೆ? ಎನ್ನುತ್ತಾನೆ ಜನ್ನ.
’ಯಶೋಧರ ಚರಿತ್ರೆ’ಯ ಕೊನೆಯ ಪದ್ಯದಲ್ಲಿ ಆತ ಸರಸ್ವತಿಯನ್ನು ಪ್ರಾರ್ಥಿಸಿರುವ ರೀತಿ ಅನನ್ಯವಾಗಿದೆ.
ಪರಮಜಿನೇಂದ್ರಶಾಸನವಸಂತದೊಳೀ ಕೃತಿಕೋಕಿಲಸ್ವನಂ
ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಗೆ ಸಂತತಂ
ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್
ಸಿರಿ ನೆರೆದಿರ್ಕೆ ನಾೞ್ಪ್ರಭು ಜನಾರ್ದನದೇವನ ವಕ್ತ್ರಪದ್ಮದೊಳ್||
ಪರಮಜಿನೇಂದ್ರನ ಶಾಸನ ಅಂದರೆ ಮಾತು ಅಥವಾ ಆಜ್ಞೆ ಎಂಬ ವಸಂತದಲ್ಲಿ ಜನ್ನನ ಕಾವ್ಯವೆಂಬ ಕೋಗಿಲೆಯ ಧ್ವನಿ ಕೇಳಲಿ ಎಂಬುದು ಕವಿಯ ಆಶಯ. ’ನಾೞ್ಪ್ರಭು ಜನಾರ್ದನದೇವನ ವಕ್ತ್ರಪದ್ಮದೊಳ್ ಪರಿಮಳದಂತೆ ವಾಣಿ ನೆಲಸಿರ್ಕೆ’ ಎಂಬ ಮಾತು ನವೀನವಾಗಿದೆ. ಈಗಾಗಲೇ ನಾವು ಗಮನಿಸಿರುವಂತೆ ಕೆಲವು ಕವಿಗಳು ’ಸರಸ್ವತಿಯೇ ತಮ್ಮ ಮುಖಕಮಲದಲ್ಲಿ ನೆಲಸಲಿ’ ಎಂದು ಪ್ರಾರ್ಥಿಸಿರುವುದುಂಟು. ಅವುಗಳಿಗಿಂತ, ’ಸರಸ್ವತಿಯು ತನ್ನ ಮುಖಕಮಲದಲ್ಲಿ ಪರಿಮಳದಂತೆ ನೆಲಸಿರಲಿ’ ಎಂದು ಪ್ರಾರ್ಥಿಸಿರುವ ಜನ್ನನ ಕಲ್ಪನೆ ನವೀನವಾಗಿದೆ.
ಜನ್ನ ’ಅನಂತನಾಥಪುರಾಣ’ ಕಾವ್ಯದಲ್ಲಿ ಸರಸ್ವತಿಯನ್ನು ’ಜಿನೇಂದ್ರವಾಗ್ವನಿತೆ’ ಎಂದು ಸ್ತುತಿಸಿದ್ದಾನೆ. 
ಪದವಿನ್ಯಾಸ ವಿಶೇಷದೊಳ್ ಪದವಿಲಾಸಂ ಸೊಂಪುವೆತ್ತಿರ್ದ ಕಾ
ವ್ಯದ ಮೆಯ್ಯೊಳ್ ಸಮುದಾಯಶೋಭೆ ವಿನುತಸ್ಯಾದರ್ಥದೊಳ್ ಮಧ್ಯ ಭಾ
ಗದ ಕಾಶ್ಯಂ ನಯಯುಗ್ಮದೊಳ್ ನಯನಭಾವಂ ಭಂಗಿಯಂ ತಾಳ್ದಿ ಸ
ನ್ನಿಧಿಯಾಗಿರ್ದ ಜಿನೇಂದ್ರವಾಗ್ವನಿತೆ ನಿಲ್ಕಸ್ಮನ್ಮುಖಾಂಭೋಜದೊಳ್||
’ಜಿನೇಂದ್ರ ವಾಗ್ವನಿತೆ’ ಎಂಬುದು ಪಂಪನ ’ಪರಮಜಿನೇಂದ್ರವಾಣಿಯೆ ಸರಸ್ವತಿ’ ಎಂಬ ಪರಿಕಲ್ಪನೆಯಂತೆಯೇ ಇದೆ. ಪದಗಳ ವಿನ್ಯಾಸ ಮತ್ತು ವಿಶೇಷದಲ್ಲಿ ಪದಗಳ ವಿಲಾಸ ಮತ್ತು ಸಮೃದ್ಧಿಯಾಗಿರುವ ತನ್ನ ಕಾವ್ಯಕ್ಕೆ ಸಮುದಾಯ ಶೋಭೆಯನ್ನು ಸರಸ್ವತಿಯು ನೀಡಬೇಕೆಂದು ಪ್ರಾರ್ಥಿಸಿರುವುದು ಹೊಸದಾಗಿದೆ. ಕಾವ್ಯವು ಕವಿಯ ರಚನೆಯಾದರೂ, ಒಂದು ಜನಾಂಗದ ಸಮುದಾಯದ ಅಭಿವ್ಯಕ್ತಿಯಾಗಿರುತ್ತದೆ. ಆದ್ದರಿಂದ ಕಾವ್ಯಕ್ಕೆ ಸಮುದಾಯದ ಮನ್ನಣೆ ಅಗತ್ಯವಾಗಿರುತ್ತದೆ. ಈ ದೃಷ್ಟಿಯಿಂದ ಜನ್ನನ ಬೇಡಿಕೆ ನ್ಯಾಯಸಮ್ಮತವೂ ನವೀನವೂ ಆಗಿದೆ. ಹೊಸದಂಪತಿಗಳ ಕಣ್ಣಿನ ಭಾವಕ್ಕೂ ಭಂಗಿಗೂ ಆಶ್ರಯಸ್ಥಾನವಾಗಿರುವವಳು ಎಂಬುದಂತೂ ಅತ್ಯಂತ ಹೊಸ ಕಲ್ಪನೆ. ಅಂತಹ ಜಿನೇಂದ್ರವಾಗ್ವನಿತೆಯಾದ ಸರಸ್ವತಿಯು ತನ್ನ ನಗುಮುಖಕಮಲದಲ್ಲಿ ನಿಲ್ಲಬೇಕು ಎಂಬುದು ಜನ್ನನ ಪ್ರಾರ್ಥನೆ. ಗ್ರಂಥರಚನೆಯ ಕಾಲದ ದೃಷ್ಟಿಯಿಂದ, ಕ್ರಿ.ಶ.೧೨೦೯ರಲ್ಲಿ ರಚಿತವಾದ ’ಯಶೋಧರ ಚರಿತ್ರೆ’ಯಲ್ಲಿ, ವಾಣಿ ಪರಿಮಳದಂತೆ ತನ್ನ ಮುಖಕಮಲದಲ್ಲಿ ನೆಲಸಲಿ ಎಂದು ನವೀನ ಕಲ್ಪನೆಯನ್ನು ಸೃಷ್ಟಿಸಿದ್ದ ಜನ್ನ, ಕ್ರಿ.ಶ.ಸುಮಾರು ೧೨೩೦ರ ರಚನೆಯಾದ ’ಅನಂತನಾಥಪುರಾಣ’ದಲ್ಲಿ ’ವಾಗ್ದೇವಿಯು ತನ್ನ ಮುಖಕಮಲದಲ್ಲಿ ನೆಲಸಲಿ’ ಎಂಬ ಕವಿಸಮಯದ ಸಾಂಪ್ರದಾಯಿಕ ಜಾಡನ್ನೇ ಹಿಡಿದಿರುವುದು ಆಶ್ಚರ್ಯವಾಗಿದೆ. ’ವಾಗ್ದೇವಿಯು ತನ್ನ ಮುಖಕಮಲದಲ್ಲಿ ನೆಲಸಲಿ’ ಎಂದು ಪ್ರಾರ್ಥಿಸಿದ ಜನ್ನ ಮುಂದುವರೆದು, ತನ್ನ ಮುಖಕಮಲವನ್ನು ಸಮೀಪಿಸಿದ್ದರಿಂದಲೇ ಸರಸ್ವತಿಗೆ ವಿಶ್ವಭೂಚಕ್ರದಲ್ಲಿ ಸ್ಥಾನ ಸಿಕ್ಕಿತೆಂದು ಹೆಮ್ಮೆ ಪಟ್ಟುಕೊಳ್ಳುತ್ತಾನೆ.
ಚತುರಂ ನೀಱನುದಾರನುಜ್ವಲ ಯಶಂ ಸೌಭಾಗ್ಯಸಂಪನ್ನನೂ
ರ್ಜಿತ ಪುಣ್ಯೋದಯನೀ ಜನಾರ್ದನನ ವಕ್ತ್ರಾಂಭೋಜಮಂ ಸಾರ್ದು ಸು
ಸ್ಥಿತೆಯಾಗಿರ್ದುದಱಂದೆ ತಾ ಸೊಬಗೆಯಾದಳ್ ಜಾಣೆಯಾದಳ್ ಸರ
ಸ್ವತಿ ಸಮ್ಮೋಹಿತೆಯಾದಳಗ್ಗಳೆಯೆಯಾದಳ್ ವಿಶ್ವಭೂಚಕ್ರದೊಳ್||
ಚತುರನೂ ಸುಂದರನೂ ಉದಾರನೂ ಉಜ್ವಲನೂ ಯಶವಂತನೂ ಸೌಭಾಗ್ಯಸಂಪನ್ನನೂ ಏಳಿಗೆ ಹೊಂದಿದ ಪುಣ್ಯೋದಯನೂ ಆದ ಜನ್ನನ ಮುಖಕಮಲವನ್ನು ಸಮೀಪಿಸಿ, ಅಲ್ಲಿ ಸುಸ್ಥಿರವಾಗಿ ನಿಂತಿದ್ದರಿಂದಲೇ ಸರಸ್ವತಿಗೆ, ಈ ವಿಶ್ವಭೂಚಕ್ರದಲ್ಲಿ ಸೊಬಗು, ಜಾಣತನ ಹಾಗೂ ಆಕರ್ಷಣೆಯುಂಟಾಯಿತು ಮತ್ತು ಅವುಗಳಿಂದಾಗಿ ಅವಳ ಶ್ರೇಷ್ಠತೆ ಹೆಚ್ಚಿತು ಎಂಬುದು ಜನ್ನಕವಿಯ ಸ್ವಸ್ತುತಿ. ಆದರೆ, ಕಾವ್ಯದ ಇನ್ನೆರಡು ಪದ್ಯಗಳಲ್ಲಿ ಜನ್ನ, ಸಾಹಿತ್ಯನಟಿಯೂ ವಚಶ್ರೀಯೂ ತನ್ನ ಮುಖತಿಲಕವನ್ನು ಅಲಂಕರಿಸಲಿ ಎನ್ನುತ್ತಾನೆ. ’ಸಾಹಿತ್ಯನಟಿ’ ಎಂಬುದು ನಾಗಚಂದ್ರನ ’ವಿದ್ಯಾನಟಿ’ಯ ಇನ್ನೊಂದು ಅವತಾರದಂತಿದೆ.
ಕವಿಯು ಬೆಳೆದಂತೆ ಆತನ ಆತ್ಮವಿಶ್ವಾಸವೂ ಹೆಚ್ಚುತ್ತಾ ಹೋಗುತ್ತದೆ ಎಂಬುದಕ್ಕೆ ಜನ್ನನ ಸರಸ್ವತೀ ದರ್ಶನ ಒಂದು ಉತ್ತಮ ಉದಾಹರಣೆ. ಪ್ರಾರಂಭದಲ್ಲಿ, ಸರಸ್ವತಿಯು ತನ್ನ ಮುಖಕಮಲದಲ್ಲಿ ಪರಿಮಳದಂತೆ ವ್ಯಾಪಿಸಿರಲಿ ಎಂದಿದ್ದ ಜನ್ನ, ನಂತರ ನನ್ನ ಮುಖಕಮಲದಲ್ಲಿ ನೆಲಸಲಿ ಎನ್ನುತ್ತಾನೆ. ಕವಿಯ ಪ್ರೌಢಿಮೆ ಹೆಚ್ಚಿದಂತೆ, ಕೀರ್ತಿ ಶಿಖರವನ್ನು ಏರಿದಂತೆ, ಆತನ ಆತ್ಮವಿಶ್ವಾಸ ವೃದ್ಧಿಸಿದಂತೆ, ಜನ್ನ ’ತನ್ನಿಂದಲೇ ಸರಸ್ವತಿಗೆ ವಿಶ್ವಭೂಚಕ್ರದಲ್ಲಿ ಶ್ರೇಷ್ಠತೆ ಹೆಚ್ಚಾಗಿದೆ’ ಎಂದು ಭಾವಿಸುತ್ತಾನೆ. ಮೇಲ್ನೋಟಕ್ಕೆ ಇದು ಹುಂಬತವೆನಿಸಬಹುದು. ಆದರೆ ಅದು ಹುಂಬತನವಾಗಿರದೆ, ಬಡಾಯಿಯಾಗಿರದೆ, ಸಶಕ್ತ ಕವಿಯೊಬ್ಬನ ಆತ್ಮವಿಶ್ವಾಸದ ನುಡಿಗಳಾಗಿವೆ ಎಂಬುದನ್ನು ಗಮನಿಸಬೇಕು. ಪ್ರತಿಯೊಂದು ಶ್ರೇಷ್ಠ ಸಾಹಿತ್ಯಕೃತಿಯೂ ಸರಸ್ವತಿಯ ಅವತಾರವೇ ಆಗಿರುತ್ತದೆ. ಹೀಗೆ ಎತ್ತಿದ ಹೊಸ ಅವತಾರಗಳೆಲ್ಲವೂ ಸರಸ್ವತಿಯ ಶ್ರೇಷ್ಠತೆಯನ್ನು ಹೆಚ್ಚಿಸುತ್ತಲೇ ಇರುತ್ತವೆ. ಆತನ ಸಾಹಿತ್ಯನಟಿ ಎಂಬ ಕಲ್ಪನೆಯೂ ಅದನ್ನೇ ಪುಷ್ಟೀಕರಿಸುತ್ತದೆ. 

No comments: