Showing posts with label ಕುವೆಂಪು. Show all posts
Showing posts with label ಕುವೆಂಪು. Show all posts

Wednesday, March 18, 2015

ಕುವೆಂಪು ತೇಜಸ್ವಿಗೆ ಬರೆದ ಒಂದು ಪತ್ರ!

ಶ್ರೀ
ಕುವೆಂಪು
’ಉದಯರವಿ’
ವಾಣೀವಿಲಾಸಪುರಂ, ಮೈಸೂರು
ತಾ|| ೨೪.೧.’೫೬
ಪ್ರೀತಿಯ ಚಿರಂಜೀವಿ ತೇಜಸ್ವಿಗೆ,
ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರ್ಯವಾಯಿತು; ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು.
ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳುಮಾಡದೆ ನಾಲ್ಕಾರು ಸಾರಿ ಶಾಂತಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು.
ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತ್ನಾಕರ ಮಾವ ಕಾಗದ ಬರೆದಿದ್ದರು - ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು ನಿನ್ನ ಜಯಕ್ಕ ಕಾಗದ ಬರೆದಿದ್ದರಂತೆ - ನೀನೇನೋ ಇಂಜಕ್‌ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು! ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ.
ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ; ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು.
ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ನಿನಗೆ, ತಿಳಿಸಿದಂತೆ - ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಅವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ, ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೆ ನಿನಗೆ ಹೇಳುತ್ತಿದ್ದೇನೆ.
ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿಕೊಡುತ್ತವೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ.
ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢ ಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ.
ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವಾ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.
ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣ್ಯೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ.
ನೀನು ಶ್ರೀರಾಮಾಯಣದರ್ಶನವನ್ನು ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಅವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ - ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ. - ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ವರ್ಷ ಮೈಸೂರಿಗೇ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನ್ಮೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನೆಲ್ಲ ಪಡೆಯುವುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು.
ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು ಆದರೆ ಅದು ಬದಲಾಗುವವರೆಗೆ ಅದರಲ್ಲಿಯೆ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದರೂ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ ಓದುವಾಗ ಸೈನ್ಸನ್ನೇ ತೆಗೆದುಕೊಂಡಿದ್ದೆ. ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಮಟ್ಟಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು. ಈಗ ನೀನು ಅರ್ಟ್ಸ್ ತೆಗೆದುಕೊಂಡಿದ್ದೀಯೆ. ಆದರಿಂದ ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನಮಾಡಬಲ್ಲುದು.
ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆ ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ.
ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು, ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ ಶ್ರೇಯಸ್ಸು ಅಭ್ಯುದಯ ಸುಖ ಶಾಂತಿ ಏಳ್ಗೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ. ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರ್ತವ್ಯ. ನಿನಗೆ ಏನೇನು ನೆರವು ಬೇಕೋ ಅದನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ಶ್ರೇಯಸ್ಸಿಗೆ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟ್ಟರೆ ನನಗೆ ಪರಮಾನಂದವಾಗುತ್ತದೆ. ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈಚಾಚಿದರೆ!
ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.
ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತ್ತಾರೆ. ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!!
ಆಶೀರ್ವಾದಗಳು
ಕುವೆಂಪು
***


ತೇಜಸ್ವಿಗೆ ಹದಿನೇಳು ವರ್ಷ ತುಂಬಿ ಹದಿನೆಂಟಕ್ಕೆ ಕಾಲಿಡುವ ಸಂದರ್ಭ. ಶಿವಮೊಗ್ಗೆಯಲ್ಲಿ, ಅವರ ಅಜ್ಜಿಯ ಮನೆಯಲ್ಲಿದ್ದುಕೊಂಡು, ಆರ್ಟ್ಸ್ ತೆಗೆದುಕೊಂಡು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ತನ್ನ ಮನೋವ್ಯಾಪರಗಳನ್ನು, ದಿಕ್ಕುದೆಸೆಯಿಲ್ಲದೆ ಹರಿಯುತ್ತಿದ್ದ ಯೋಚನಾತರಂಗಗಳನ್ನು, ಅದರಿಂದ ಉಂಟಾಗುತ್ತಿದ್ದ, ಮನೋಕ್ಲೇಷವನ್ನು ಅತ್ಯಂತ ಮುಕ್ತವಾಗಿ ತನ್ನ ತಂದೆಯವರಿಗೆ ಕಾಗದ ಬರೆದು ತಿಳಿಸಿರುತ್ತಾರೆ. ೬.೧.೧೯೫೬ರಂದು ಬರೆದಿರುವ ಕಾಗದ, ಹಾಗೂ ಅದಕ್ಕೂ ಮೊದಲು ಬರೆದ ದಿನಾಂಕವಿರದ ಒಂದು ಕಾಗದ ಈ ಎರಡಕ್ಕೂ ಉತ್ತರರೂಪವಾಗಿ ಕುವೆಂಪು ಬರೆದಿರುವ ಪತ್ರವೇ ಮೇಲಿನದು. ವಯಸ್ಸಿಗೆ ಬರುತ್ತಿರುವ ಮಗನೊಡನೆ, ನಿಜವಾದ ಪ್ರೀತಿ ವಾತ್ಸಲ್ಯವಿರುವ ತಂದೆಯೊಬ್ಬ ಎಷ್ಟು ಪ್ರಬುದ್ಧವಾಗಿ ಹಾಗೂ ಅಷ್ಟೇ ಸಂಯಮದಿಂದ ವರ್ತಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.
ಕಾಗದವನ್ನು ಓದಿ ಇಟ್ಟುಕೊ ಅಥವಾ ನನಗೇ ವಾಪಸ್ಸು ತಂದು ಕೊಡು ಎಂದು ಆರಂಭದಲ್ಲಿಯೇ ಹೇಳಿರುವುದು, ಕಾಗದದಲ್ಲಿ ಪ್ರಸ್ತಾಪಿಸುತ್ತಿರುವ ವಿಚಾರಗಳು ಮಹತ್ವವಾದವುಗಳು ಎಂಬುದನ್ನು ಯುವಕ ತೇಜಸ್ವಿಗೆ, ಮನಗಾಣಿಸುವ ಉದ್ದೇಶದಂತಿದೆ. ಒಬ್ಬ ತಂದೆಗೆ, ತನ್ನ ಮಗ ಬರೆದ ಕವಿತೆಗಳನ್ನು ಓದಿದರೆ ಆಗುವ ಸಂತೋಷ, ಇಲ್ಲಿ ಕವಿಯೂ ಆದ ತಂದೆಗೆ ಆಗಿದೆ. ಅದರ ಜೊತೆಗೆ, ದಾರ್ಶನಿಕನೂ, ಕಾವ್ಯಮೀಮಾಂಸಕನೂ ಆಗಿರುವ ಕುವೆಂಪು ಅವರಿಗೆ ಅದರ ಓರೆಕೋರೆಗಳು ಕಾಣಿಸುತ್ತವೆ. ಮೊದಲು, ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸಿದರೂ, ಮುಂದೆ ಸಾಹಿತ್ಯಕ್ಕೆ ಅಗತ್ಯವಾಗಿ ಬೇಕಾದ ಭಾಷಾ ಶುದ್ಧಿ ಮತ್ತು ಛಂದಸ್ಸುಗಳ ಪರಿಚಯ ಕುರಿತು ಬರೆಯುತ್ತಾರೆ. ಅದನ್ನು ಮನಗಾಣಿಸಲು ಒಂದು ಉಪಮೆಯನ್ನೂ ಕೊಡುತ್ತಾರೆ. ಅದೇನು ಕಾವ್ಯಮೀಮಾಮಸೆಯ, ವಿಮರ್ಶೆಯ ತತ್ವವನ್ನು ಹೊತ್ತುದಲ್ಲ ಎಂಬುದನ್ನು ಗಮನಿಸಬೇಕು. ಆಗಿನ ಯುವಕ ಕನಸಾಗಿದ್ದ ಸೈಕಲ್ಲು ಸವಾರಿಯ ಉಪಮೆಯೇ ತಂದೆ ಮಗನಿಗೆ ಹೇಳಬೇಕಾದುದನ್ನು ಸಮರ್ಥವಾಗಿ ಸಾಧಿಸುತ್ತದೆ. ಮೊದಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು ಎನ್ನುವ ಅಭಿಪ್ರಾಯದಲ್ಲಿ, ಕವಿನಿರ್ಮಿತಿ ನಿಯತಿಕೃತ ನಿಯಮರಾಹಿತ್ಯ ತತ್ವದ ವಾಸನೆಯಿದೆ. ಜೊತೆಗೆ ಅದು ನನ್ನ ಸ್ವಂತ ಅನುಭವ ಎಂದು ಹೇಳುವುದರ ಮೂಲಕ ಸಾಧಕನಿಗೆ ಎದುರಾಗುವ ಸವಾಲಿನ ಸಾರ್ವತ್ರಿಕರಣ ಎಂಬಂತೆ ಬಿಂಬಿಸಿದ್ದಾರೆ.
ಭಾಷೆಯನ್ನು ಪೂರ್ವಸಾಹಿತ್ಯಾಭ್ಯಾಸದಿಂದ ಪಡೆಯಬೇಕು, ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿಕೊಡುತ್ತದೆ ಎಂಬ ಮಾತು ತೇಜಸ್ವಿಯವರ ಬದುಕನ್ನು ಕಂಡವರಿಗೆ, ಕುವೆಂಪು ಅವರ ಮುಂಗಾಣ್ಕೆಯನ್ನು ಕಟ್ಟಿಕೊಡುತ್ತದೆ. ಭಿನ್ನವಾಗಿ ಬದುಕಿದ್ದರಿಂದಲೇ ಬೇರೆಯವರಿಗಿಂತ ಭಿನ್ನವಾದ ಸಾಹಿತ್ಯ ಸೃಷ್ಟಿಸಲು ಸಾದ್ಯವಾಯಿತು ಎಂಬ ಮಾತಿಗೆ, ಮೂರ್ತರೂಪದ ಆಧಾರ, ತೇಜಸ್ವಿಯವರ ಬದುಕಾಗಿದ್ದರೆ, ಅಮೂರ್ತ ರೂಪದ ಆಧಾರ ಈ ಮಾತುಗಳೇ ಆಗುತ್ತವೆ. ಜೊತೆಗೆ ’ವಿಚಾರ ಬಹುದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದೇನೆ’ ಎನ್ನುವಲ್ಲಿ, ಮಗನ ಮುಂದೆ ಒಂದು ಕುತೂಹಲದ ಬಾಗಿಲನ್ನು ತೆರೆದಿಡುತ್ತಿದ್ದಾರೆ. ಮುಂದುವರೆದು ’ದೃಢಮನಸ್ಸಿನಿಂದ ಕಾರ್ಯೋನ್ಮುಖನಾದರೆ ಫಲ ಸಿಗುವ ಸೂಚನೆಯಿದೆ’ ಎಂದು ಹೇಳುವುದರ ಮೂಲಕ, ನಿನ್ನ ಪ್ರಯತ್ನವೂ ಬೇಕು ಎಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಅನ್ನಿಸುತ್ತದೆ.
“ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.” ಈ ಸಾಲುಗಳಂತೂ ಅತ್ಯಂತ ಅರ್ಥಪೂರ್ಣವಾದವುಗಳು. ‘ಜೇನಾಗುವಾ’ ಕವನಸಂಕಲನದ ತೇಜಸ್ವಿ ಜನನದ ಮೊದಲಿನ ಕವಿತೆಗಳಾದ, ’ಗರ್ಭಗುಡಿ’ ಮತ್ತು ‘ಬಿನ್ನಯ್ಸಿದಳು ತಾಯಪ್ಪಳಿಂತು’ ಹಾಗೂ ಜನನ ನಂತರದ ಕವಿತೆಗಳಾದ ‘ಕುಮಾರಸಂಭವ’, ‘ಸ್ವಾಗತ ನಿನಗೆಲೆ ಕಂದಯ್ಯ’, ‘ನಾಮಕರಣೋತ್ಸವ’, ‘ತನಯನಿಗೆ’, ‘ತನುಜಾತನಹುದಾತ್ಮಜಾತನುಂ’, ‘ಅಮೃತಕಾಗಿ’, ‘ಕುಣಿಯುತ ಬಾ ಕಂದಯ್ಯ’, ‘ಕಂದನ ಮೈ’ ಮತ್ತು ‘ಹರಕೆರೆಯ ಹರಕೆ’ ಕವಿತೆಗಳನ್ನು ಓದಿದರೆ, ಕುವೆಂಪು ಸಂಕಲ್ಪಸಿದ್ಧಿಯ ಬಗ್ಗೆ ಅಚ್ಚರಿಯಾಗುತ್ತದೆ.
ಬದುಕು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯ ಹೊಸಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೇ ಎಂಬ ಮಾತು, ತಾರುಣ್ಯೋದಯದ ಹೊಸ್ತಿಲಲ್ಲಿರುವ ಮಕ್ಕಳ -ಹೆಣ್ಣಾಗಲಿ, ಗಂಡಾಗಲಿ- ವಿಷಯದಲ್ಲಿ ಪ್ರತಿಯೊಬ್ಬ ತಂದೆ-ತಾಯಿ ಕೂಡಾ ಅರಿತುಕೊಳ್ಳಬೇಕಾದುದ್ದಾಗಿದೆ.
ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ, ’ದಶಾನನ ಸ್ವಪ್ನಸಿದ್ಧಿ’ ಮತ್ತು ’ದೈತ್ಯನೇರ್ದನ್ ಚೈತ್ಯಮಂಚಮಂ’ ಸಂಚಿಕೆಗಳನ್ನೋದಿ ಭಾವಾವೇಶಕ್ಕೊಳಗಾದ ವಿಚಾರವನ್ನು ಮಗನ ಪತ್ರದಿಂದ ಅರಿತಿದ್ದ ತಂದೆ, ’ಅವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ’ ಎಂದು ಹೇಳುತ್ತಾರೆ. ಜೊತೆಗೆ ’ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ವರ್ತಿಸುವುದು ಉತ್ತಮ’ ಎಂದು ಎಚ್ಚರಿಸಿಯೂ ಎಚ್ಚರಿಸುತ್ತಾರೆ. (ಕುವೆಂಪು ಮತ್ತು ತೇಜಸ್ವಿಯವರಿಗಿದ್ದ ಪೂರ್ಣಪ್ರಜ್ಞೆ ಮತ್ತು ಪೂರ್ಣದೃಷ್ಟಿ ಕುರಿತಂತೆ, ತೇಜಸ್ವಿಯನ್ನು ಹುಡುಕುತ್ತಾ..... ಕೃತಿಯಲ್ಲಿರುವ ಲೇಖನವನ್ನು ಗಮನಿಸಬಹುದು.)
ಪತ್ರದ ಮುಂದಿನ ಭಾಗ ಅತ್ಯಂತ ಮಹತ್ವವಾದುದು. ಮಗನ ಮುಂದೆ ಸದ್ಯಕ್ಕಿರುವ ಸವಾಲು ಪರೀಕ್ಷೆ. ಅದನ್ನು ಯಶಸ್ವಿಯಾಗಿ ಮುಗಿಸುವ ಅವಶ್ಯಕತೆ ಇದ್ದೇ ಇದೆ. ಆ ಕ್ಷಣಕ್ಕೆ ಅದೇ ಮಹತ್ವದ್ದು ಕೂಡಾ. ಅದನ್ನು ಮಗನಿಗೆ ಮನಗಾಣಿಸುವ, ಈ ಹಿಂದೆಯೂ ಮಗನಿಗೆ ಹೇಳಿದ್ದ ‘ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ.’ ಎಂಬ ಮಾತುಗಳು ಮಹತ್ವವಾದವುಗಳು. ಇದು ಪ್ರತಿಯೊಬ್ಬ ಚಿಂತಕ, ಬುದ್ಧಿಜೀವಿ, ಕ್ರಾಂತಿಕಾರಿ ಇತ್ಯಾದಿಯವರಿಗೆ ಅನ್ವಯಿಸುವಂತದ್ದು.
ಅಂದಿನ ವಿದ್ಯಾಭ್ಯಾಸ ಕ್ರಮ, ಅದರ ಬೋಧನಾ ವಿಧಾನ ಹಾಗೂ ಅದರಲ್ಲಿದ್ದ ಮಿತಿಗಳು, ಇಂಗ್ಲೀಷ್ ಹೇರಿಕೆ ಇವೆಲ್ಲಾ ತೊಡಕುಗಳಿಂದ ಮಗನ ಮನಸ್ಸು ದಂಗೆಯಯೇಳುತ್ತಿದ್ದೆ ಎಂಬುದನ್ನು ತಂದೆ ಗಮನಿಸಿದ್ದಾರೆ. ಅದರ ಶಮನಕ್ಕಾಗಿ ‘ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು.’ ಎಂದು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಎಚ್ಚರಿಕೆಯೂ ಹೌದು. ’ನಾನೂ ನಿನ್ನ ಹಾಗೆಯೇ ಎಂದು ತಾವು ಸೈನ್ಸ್ ತೆಗೆದುಕೊಂಡು ಪರೀಕ್ಷಾ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟನ್ನು ಓದಿ ಪಾಸು ಮಾಡಿದ್ದೆ’ ಎಂಬ ವಿಚಾರವನ್ನು ಹೇಳಿ, ಇಂತಹ ಸಮಸ್ಯೆ ಸರ್ವರದ್ದು ಹಾಗೂ ಸರ್ವಕಾಲದ್ದು ಎಂದು ಮನಗಾಣಿಸುತ್ತಾರೆ. ಸದ್ಯಕ್ಕೆ ಮುಂದಿರುವ ಪರೀಕ್ಷೆ ಮುಗಿದರೆ ಬೇರೆಯದಕ್ಕೆ ಬೇಕಾದಷ್ಟು ಸಮಯ ನಂತರ ಇದ್ದೇ ಇದೆ ಎಂದು ನೆನಪಿಸುತ್ತಾರೆ.
‘ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ.’ ಈ ಮಾತು, ಕುವೆಂಪು ಅವರ, ‘ಕವಿನಿರ್ಮಿತಿ ನಿಯತಿಕೃತ ನಿಯಮರಾಹಿತ್ಯ’ ಎಂಬ ದೃಷ್ಟಿಕೋನ ಕೇವಲ ಅವರ ಸಾಹಿತ್ಯಸೃಷ್ಟಿಗೆ ಸಂಬಂಧಿಸಿದ್ದಲ್ಲ; ಬದುಕಿಗೂ ಸಂಬಂಧಿಸಿದ್ದು ಎಂಬುದನ್ನು ಮನಗಾಣಿಸುತ್ತದೆ.
ಕೊನೆಯಲ್ಲಿ, ಗುರುದೇವನಲ್ಲಿ ಮತ್ತು ಜಗನ್ಮಾತೆಯಲ್ಲಿ ನಿನ್ನ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳುತ್ತಾ, ‘ದೃಢ ಮನಸ್ಸಿನಿಂದ ಮುನ್ನಡೆಯಬೇಕಾದ್ದು ನಿನ್ನ ಪವಿತ್ರ ಕರ್ತವ್ಯ’ ಎನ್ನುವ ಮೂಲಕ ಮಗನಿಗೆ ಆತನ ಜವಾಬ್ದಾರಿಯನ್ನು ಮನಗಾಣಿಸುತ್ತಾರೆ. ಮಕ್ಕಳ ಅಭಿವೃದ್ಧಿಯೇ ತಂದೆ ತಾಯಿಯರ ಅಂತಿಮ ಕನಸು ಎಂಬುದನ್ನು ಮನಗಾಣಿಸುತ್ತಾರೆ. ತಂದೆ ತಾಯಿಯರ ಪ್ರಯತ್ನ ಎಷ್ಟೇ ಇದ್ದರೂ, ಸ್ವಪ್ರಯತ್ನವೂ ಮುಖ್ಯ ಎಂಬುದನ್ನು ಮಗನ ಮನಸ್ಸಿಗೆ ಮುಟ್ಟಿಸುತ್ತಾರೆ. ‘ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈಚಾಚಿದರೆ!’ ಈ ಮಾತುಗಳ ಸಂಸ್ಕಾರ ಮತ್ತು ಸ್ವಪ್ರಯತ್ನಗಳು ಒಬ್ಬ ಮನುಷ್ಯನನ್ನು ಔನ್ನತ್ತಕ್ಕೇರಿಸಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿವೆ. ಇದಕ್ಕೆ ಪೂರಕವಾಗಿ ಹದಿನೆಂಟು ವರ್ಷಗಳ ಹಿಂದೆಯೇ ಬರೆದ ’ತನುಜಾತ್ಮನಹುದಾತ್ಮಜಾತನುಂ’ ಕವಿತೆಯ ಸಾಲುಗಳನ್ನು ಗಮನಿಸಿದರೆ, ಕುವೆಂಪು ಅವರ ದರ್ಶನದೃಷ್ಟಿ ಅಚ್ಚರಿಗೆ ಕಾರಣವಾಗದಿರದು.
ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ್‍ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ’ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯರಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ.
ಇಡೀ ಪತ್ರದಲ್ಲಿ ಅಡಿಗೆರೆ ಎಳೆದಿರುವ ಒಂದೇ ವಿಚಾರವೆಂದರೆ, ’ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.’ ಎಂಬುದು. ತೇಜಸ್ವಿಯವರ ಹಿಂದಿನ ಪತ್ರದಲ್ಲಿ, ಲಾಜಿಕ್ ವಿಷಯವಾಗಿ ಕೇಳಿದ ಪ್ರಶ್ನೆಗೆ ಉಪನ್ಯಾಸಕರು ನೀಡಿದ ಅಸಂಬದ್ಧ ಉತ್ತರದಿಂದ ಕುಪಿತರಾಗುವ ವಿಚಾರವನ್ನು ಓದಿರುತ್ತಾರೆ. ಅದಕ್ಕೆ ಈ ಬುದ್ಧಿವಾದ ಮತ್ತು ಅಡಿಗೆರೆ!
ಪತ್ರವನ್ನು ಮುಗಿಸುವ ಮುನ್ನ, ತಾಯಿ, ತಮ್ಮ, ಮತ್ತು ತಂಗಿಯರ ವಿಚಾರವನ್ನು ಹೇಳಿ, ನಾವೆಲ್ಲರೂ ನಿನ್ನ ಜೊತೆಯಿದ್ದೇವೆ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ತಾರುಣ್ಯೋದಯಲ್ಲಿ ಪ್ರಕ್ಷುಬ್ಧಗೊಂಡ ಮನಸ್ಸಿಗೆ ಕೌಟಂಬಿಕ ಸಾಂತ್ವನ ಅತ್ಯಂತ ಮುಖ್ಯವಾದುದು. ಆ ಕ್ಷಣದಲ್ಲಿ ಕುಟುಂಬದ ನೆನಪು ಮಹತ್ತರವಾದುದನ್ನು ಸಾಧಿಸಬಲ್ಲುದು.
ಒಟ್ಟಾರೆಯಾಗಿ, ಈ ಪತ್ರ ಪ್ರತಿಯೊಬ್ಬ ತಂದೆ ಮಗನೂ/ಮಗಳು ಓದಬೇಕಾದ ಅಮೂಲ್ಯ ದಾಖಲೆಯಾಗಿದೆ. ಇದನ್ನು ಅತ್ಯಂತ ಸುರಕ್ಷಿತವಾಗಿ ಕಾಯ್ದಿಟ್ಟು ಪ್ರಕಟಿಸಿರುವ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಧನವ್ಯಾದಗಳು.

Thursday, March 12, 2015

ಕುವೆಂಪು ಅವರ ಸರಸ್ವತೀ ದರ್ಶನ

'ನೀ ಹೇಳೆ, ನಾನು ಬರದೆ, ನೀ ಹಾಡೆ ನಾನೊರೆದೆ!’ ಎಂದು ಪ್ರಾರಂಭಿಸಿ, ರಾಮಾಯಣದರ್ಶನದ ಕೊನೆಯಲ್ಲಿ ಸರಸ್ವತೀ ತತ್ವವನ್ನು ಅನಾದಿಕವಿಯ ಸ್ಥಾನದ ಉತ್ತುಂಗಕ್ಕೆ ಏರಿಸಿದ ಕವಿ ಕುವೆಂಪು. ’ನಿನ್ನ ವಾಣಿ’ ಎಂಬ ಕವಿತೆಯ ’ಕವಿಯ ಗಾನದೊಳಗೆಲ್ಲ ವಾಣಿಗಳು ಹೊಮ್ಮುತಿವೆ’ ಎಂದು ಚಿಕ್ಕ ತೊರೆಯಾಗಿ ಆರಂಭವಾದ ಸರಸ್ವತೀ ದರ್ಶನ ಕಡಲಾಗುವುದು,
ಯುಗಯುಗದಿ ಸಂಭವಿಪೆನೆಂಬ ಭಗವದ್ದಿವ್ಯಮಾ
ವಚನಮೇಂ ನರರೂಪ ಮಾತ್ರಕ್ಕೆ ಮುಡಿಪೆ, ಪೇಳ್?
.............................................................
..........ಕೃತಿರೂಪಮಾ ಭಗವದಾವಿರ್ಭಾವ
ಬಹುರೂಪ ಸೂತ್ರತೆಗೆ?
ಎಂಬ ಸಾಲುಗಳಲ್ಲಿ. ಕುವೆಂಪು ಕಾವ್ಯದಲ್ಲಿ, ಸರಸ್ವತಿಯ ಸ್ತುತಿ ಎಂಬುದು ಕಾವ್ಯಕ್ಕೆ ಅನಿವಾರ್ಯವಾದ ಕರ್ಮವಾಗಿರದೆ, ಒಂದು ಕಾವ್ಯ ತಂತ್ರವಾಗಿ, ಹಂತ ಹಂತವಾಗಿ ಬೆಳೆದು ಬಂದಿದೆ. ಕವಿಯ ಪ್ರಾರಂಭ ಕವನಗಳಿಂದ ಆರಂಭವಾಗಿ ಹನಿಗವನ, ಕವನ, ಖಂಡಕಾವ್ಯ, ಮಹಾಕಾವ್ಯಗಳಲ್ಲಿ ಬೆಳೆದು ಹೊಸ ದರ್ಶನವಾಗಿ ಸರಸ್ವತೀ ತತ್ವ ವಿಕಾಸವಾಗಿರುವುದನ್ನು ಕಾಣಬಹುದು. ’ಗೊಲ್ಲನ ಬಿನ್ನಹ’ ಕವಿತೆಯಲ್ಲಿ, ’ಒಂದೇ ವೀಣೆಯ ತಂತಿಗಳಂತೆ.॒..... ಪರುಷವು ಹರಿದೀ ವೀಣೆಯ ವಾಣಿ’ ಎಂದು ಹಾಡುವ ಮೂಲಕ ಬಿಡಿ ಬಿಡಿ ಕವಿತೆಗಳಾದರೂ ಅಲ್ಲಿ ಎಲ್ಲವೂ (ಸರ್ವಭಾಷಾ ಸಾಹಿತ್ಯವೂ) ಸರಸ್ವತಿಯ ವೀಣೆಯ ವಾಣಿಯೆ ಎಂದು ಪ್ರತಿಪಾದಿಸಿದ್ದಾರೆ.
’ಕಬ್ಬದಂಗನೆ’ ಎಂದು ಕಾವ್ಯಸರಸ್ವತಿಯನ್ನು ಸಂಬೋಧಿಸಿರುವ ’ಕವಿತೆಗೆ’ ಎಂಬ ಕವನ ಪೂರ್ತಿಯಾಗಿ ಕಾವ್ಯಸರಸ್ವತಿಯ ವೈಶಿಷ್ಟ್ಯವನ್ನು ಮನಗಾಣಿಸುತ್ತದೆ.
.....ರಮಣೆಯೆ!
ನಿನ್ನ ಸಂಗದಿಂದ ತಿರುಕ ರಾಜನಾದನು!
ಮತ್ತು
ನಿನ್ನ ಪುಣ್ಯಸಂಗ ಲಭಿಸೆ ಧನ್ಯನಾದೆನು!
ನಿನ್ನ ಕೂಡೆ ಜನರಿಗೆಲ್ಲ ಗಣ್ಯನಾದೆನು!
ಅಲ್ಲಗಳೆಯುತ್ತಿದ್ದ ಜನಕೆ ಮಾನ್ಯನಾದೆನು!
ಎಂಬ ಮಾತುಗಳಿಂದ ’ಕಾವ್ಯಸರಸ್ವತಿ’ ಎಂಬ ಪರುಷಮಣಿಗಿರುವ ಸಾಮರ್ಥ್ಯದ ಪರಿಚಯವಾಗುತ್ತದೆ.
ನೀನೆ ಎನ್ನ ಬಾಳ ಮುಕ್ತಿ, ನೀನೆ ಎನ್ನ ಆತ್ಮಶಕ್ತಿ,
ನೀನೆ ಸೊಗವು, ನೀನೆ ಹರುಷ
ಕಬ್ಬದಂಗನೆ.
ಸಗ್ಗಬೇಡ, ಮುಕ್ತಿಬೇಡ, ಸಿರಿಯನೊಲ್ಲೆ, ನೆವನೊಲ್ಲೆ
ನೀನೆ ಎನಗೆ ಸಾಕು ಸಾಕು
ಮುದ್ದು ಮೋಹಿನಿ!
ಕಾವ್ಯ ಸರಸ್ವತಿಯ ಸಂಗವಿದ್ದರೆ ಬೇರೇನೂ ಬೇಡ ಎನ್ನುವ ಕವಿಯ ಮಾತು ಸರಸ್ವತಿಯ ಪ್ರಭಾವವನ್ನು ಮನಗಾಣಿಸುತ್ತದೆ. ಕಬ್ಬದಂಗನೆ ಎಂಬ ದೇಸಿಪ್ರಯೋಗ ಸರಸ್ವತಿಯನ್ನು ಕನ್ನಡತಿಯನ್ನಾಗಿಸಿದೆ.
’ಕಲಾ ಸುಂದರಿ’ ಕವಿತೆಯ ಹನ್ನೆರಡು ಚರಣಗಳಲ್ಲಿ ಸೃಷ್ಟಿದೇವತೆಯ ಶಕ್ತಿ, ಚೆಲುವು, ಒಲವು ಮೊದಲಾದವುಗಳು ವರ್ಣಿತವಾಗಿವೆ. ಕಾವ್ಯಕಾಮಿನಿ, ರಸಮೂರ್ತಿ, ಸರ್‍ವರಸಪ್ರದಾಯಕಿ, ಅಸೀಮ ಸ್ಫೂರ್ತಿದೇವತೆ, ನಿತ್ಯನೂತನ ಪ್ರಸೂತೆ ಮೊದಲಾದ ವಿಶೇಷಣಗಳು ಗಮನಸೆಳೆಯುತ್ತವೆ.
ನಿನ್ನ ಎದೆಯ ಮರೆಯಲಿ ನನಗೆ ಮುಕುತಿ ದೊರೆಯಲಿ
ನಿತ್ಯ ಹೇ ನಿಃಶ್ರೇಯಸಿ!
ನಿಖಿಲ ಹೃದಯಪದ್ಮಪಾಣಿ, ಮರಣ ಹರಣ ಅಮೃತವಾಣಿ,
ವಿಶ್ವದೇಕಮಾತ್ರ ರಾಣಿ,
ಹೇ ಮಾನಸ ಮಂದಿರೆ!
ಸೃಷ್ಟಿಮಾತೆಯೂ, ಮುಕ್ತಿದಾತೆಯೂ ಆದ ಸರಸ್ವತಿಗೆ ಕವಿ ಶರಣು ಹೋಗುತ್ತಾನೆ. ವಿಶ್ವದೇಕಮಾತ್ರ ರಾಣಿ ಎಂಬುದು  ಮಾತು ಜಗತ್ತಿನ ಪ್ರಮುಖ ಸಂಪತ್ತು ಎಂಬುದನ್ನು ಧ್ವನಿಸುತ್ತದೆ.
’ನರ್‍ತಿಸಿದಳು ಸ್ವರಸುರನಾರಿ’ ಕವಿತೆಯಲ್ಲಿ ಬಳಸಿರುವ ’ರಸಸಂಚಾರಿ’ ವಿಶೇಷಣವೂ ಗಮನಸೆಳೆಯುತ್ತದೆ. ಸ್ವರದೇವತೆಯಾದ ಸರಸ್ವತಿಯು ಇಲ್ಲಿ ರಸವನ್ನು ಹಂಚುವ ಸಂಚಾರಿ! ’ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಗೆ’ ಎಂಬ ಕವನ ಮಹಾರಾಜ ಕಾಲೇಜಿನ ಶತಮಾನೋತ್ಸವದ ಸಂದರ್ಭದಲ್ಲಿ ಬರೆದದ್ದು. ಹರಿಹರನಿಗೆ ತನ್ನ ಕೃತಿ ’ವಾಗ್ದೇವಿಯ ವಾಸಸ್ಥಾನ’ವಾಗಿ ಕಂಡಿದ್ದರೆ, ಇಲ್ಲಿ ವಿದ್ಯಾಲಯವೇ ಸರಸ್ವತಿಯಾಗಿ ಕವಿಗೆ ಕಂಡಿದೆ. ಉಪನಿಷತ್ ಮಂತ್ರದಿಂದ ಪ್ರೇರಿತವಾದ,
ಅಸತ್ತಿನಿಂದ ಸತ್ತಿನೆಡೆಗೆ
ತಮಸ್ಸಿನಿಂದ ಜ್ಯೋತಿಯೆಡೆಗೆ
ಮೃತ್ಯುವಿನಿಂದ ಅಮೃತದೆಡೆಗೆ
ಕರೆದೊಯ್ಯುವ ತಾರಿಣಿ
ವಿದ್ಯೆಯಾಗಿ ಮುಕ್ತಿಯೀವ
ಅವಿದ್ಯಾಪರಿಹಾರಿಣಿ, ಬಂಧಭವತಾರಿಣಿ
ಎಂದು ವಿದ್ಯಾಲಯೆ ಸರಸ್ವತಿಗೆ ವಂದಿಸುತ್ತಾರೆ. ಈ ಕವಿತೆಯ ಪ್ರತಿ ಚರಣವೂ ಸರಸ್ವತಿಗೇ ಸಂಬಂಧಿಸಿದ್ದಾಗಿದೆ. ಭೌತಿಕವಾಗಿ ಕಾಣುವ ವಿದ್ಯಾಲಯವನ್ನು, ಇಂದಿನ ಜಗತ್ತಿನಲ್ಲಿ ವ್ಯಾಪಾರಿ ತಾಣವಾಗಿರುವ ವಿಶ್ವವಿದ್ಯಾಲಯವನ್ನು ಸರಸ್ವತಿಯಾಗಿ ಕಂಡು ಸ್ತುತಿಸಿದ ಕವಿ, ಕವಿತೆಯುದ್ದಕ್ಕೂ, ಕವಿಪ್ರಾಣಪದ್ಮೆ, ಜಗಜ್ಜೀವವೀಣೆ, ಭವ್ಯಸೃಷ್ಟಿರೂಪಿಣಿ, ಕರ್ನಾಟಕ ಸರಸ್ವತಿ, ಕವಿಯಾತ್ಮ ತೃಷೆಯ ತರು ಮೊದಲಾದ ವಿಶೇಷಣಗಳನ್ನು ಬಳಸಿ ಸ್ತುತಿಸಿದ್ದಾರೆ. ’ವಿಶ್ವಪ್ರಜ್ಞೆಗೆ ವೇದಿಕೆಯಾದುದು ಶ್ರೀ ವಿದ್ಯಾಲಯ!’ ಎಂಬ ಮಾತು ಏಕಕಾಲಕ್ಕೆ ಶಾಲಾಕಾಲೇಜುಗಳ ಮಹತ್ವವನ್ನೂ ಸರಸ್ವತಿಯ ಮಹತ್ವವನ್ನೂ ಸ್ಫುರಿಸುತ್ತದೆ.
’ಪೂರ್ಣದೃಷ್ಟಿಯ ಮಹಾಕಾದಂಬರಿ’ ಎನ್ನುವ ಹನಿಗವನದಲ್ಲಿ ಕಾದಂಬರಿಯನ್ನು,
ಸರಸ್ವತಿಯ ಸಹಸ್ರಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ ಕಾದಂಬರಿಯೆ ಮಹಾಸದನ!
ಎಂದು ಕೊಂಡಾಡಿದ್ದಾರೆ. ಕೃತಿಯೊಂದು ’ವಾಗ್ದೇವಿಯವಾಸಸ್ಥಾನ’ವೆಂಬ ಹರಿಹರನ, ’ವಿದ್ಯಾನಟಿಯ ನಾಟ್ಯವೇದಿಕೆ’ ಎಂಬ ನಾಗಚಂದ್ರನ ಕಲ್ಪನೆಯ ಮುಂದುವರೆದ ಭಾಗವಾಗಿ ಈ ಹನಿಗವನ ಮೂಡಿ ಬಂದಿದೆ. ವಾಗ್ದೇವಿಯ ವಾಸಸ್ಥಾನ ಕಾದಂಬರಿ ಎಂಬ ಮಹಾಸದನವಾಗಿದೆ. ವಿದ್ಯಾನಟಿಗೆ ಸಹಸ್ರಬಾಹು, ಸಹಸ್ರಪಾದ, ಸಹಸ್ರವದನಗಳು ಮೂಡಿ ಸರಸ್ವತಿಯ ನೃತ್ಯವನ್ನು ಭವ್ಯವನ್ನಾಗಿಸಿದೆ.
ಕವಿಗಳು ಸರಸ್ವತಿಯನ್ನು ’ಹೃತ್ಕಮಲದಲ್ಲಿ, ವದನಾರವಿಂದದಲ್ಲಿ, ನಾಲಗೆಯಲ್ಲಿ ನೆಲಸು’ ಎಂದು ಪ್ರಾರ್ಥಿಸುತ್ತಾರೆ. ಆದ್ದರಿಂದ ನಿಜಕವಿಯಾದವನೂ ಸರಸ್ವತಿಗೆ ಸದನಸ್ವರೂಪನಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ’ಕುವೆಂಪು’ ಎಂಬ ಕವಿತೆಯ ’ನುಡಿರಾಣಿಯ ಗುಡಿ- ಕುವೆಂಪು’ ಎಂಬ ಮಾತು ಗಮನ ಸೆಳೆಯುತ್ತದೆ.
’ಆಸೆ!’ ಎಂಬ ಕವಿತೆಯಲ್ಲಿ ಕವಿಯು ತನ್ನ ಆಸೆಗಳನ್ನು ಸರಸ್ವತಿಯಲ್ಲಿ ನಿವೇದಿಸಿಕೊಳ್ಳುತ್ತಾರೆ.
ಸೊಬಗಿನ ಸೆರೆಮನೆಯಾಗಿಹೆ ನೀನು;
ಚೆಲುವೇ, ಸರಸತಿಯೆ!
ಅದರಲಿ ಸಿಲುಕಿದ ಸೆರೆಯಾಳಾನು,
ನನ್ನೆದೆಯಾರತಿಯೆ!
ಎಂದು ಪ್ರಾರಂಭವಾಗುವ ಕವಿತೆಯಲ್ಲಿ ಸರಸ್ವತಿಯ ಸೌಂದರ್ಯವನ್ನು ಕುರಿತಾದ ವಿಶೇಷಣಗಳಿವೆ. ಕವಿಯು ಅಂತಹ ಕೆಲವು ವಿಶೇಷಣಗಳೊಂದಿಗೆ ತನ್ನ ಆಸೆಗಳನ್ನು ಸರಸ್ವತಿಯಲ್ಲಿ ನಿವೇದಿಸಿಕೊಳ್ಳುತ್ತಾನೆ. ಎಳೆಮೊಗದಲ್ಲಿ ನಸುನಗೆಯಾಗುವ ಆಸೆ, ತಾವರೆ ಬಣ್ಣದ ಹಣೆಯಲ್ಲಿ ಕುಂಕುಮವಾಗಿರುವ ಆಸೆ, ಬಳ್ಳಿಯಂತಿರುವ ಕೈಗೆ ಹೊಂಬಳೆಯಾಗಿರುವ ಆಸೆ, ನಿಂತಿರುವ ಪದ್ಮವನ್ನು ಮುಚ್ಚಿ ಶೈವಲದಂತೆ ಕಾಣುತ್ತಿರುವ ಸೀರೆಯ ನಿರಿಗೆಯಾಗಿರುವ ಆಸೆ, ಬಡನಡುವಿಗೆ ಕಟಿಬಂಧವಾಗಿರುವ ಆಸೆ, ಹಿಡಿದಿರುವ ವೀಣೆಯಾಗುವ ಆಸೆ ಮೊದಲಾದವುಗಳನ್ನು ಕವಿ ಹೇಳುತ್ತಾರೆ. ಕೊನೆಯಲ್ಲಿ ಬರುವ ಚೆಲುವೆ, ತರಳೇ, ಮುದ್ದಿನ ಹೆಣ್ಣೆ ಎಂಬ ಮಾತುಗಳು ’ಗಾಡಿಗೆ ತವರ್ಮನೆ’ ಎಂಬ ಆಂಡಯ್ಯನ ಮಾತುಗಳನ್ನು ನೆನಪಿಸುತ್ತವೆ. ’ಕಾಮನ ಕಣ್ಣೆ’ ಎಂದು ಸರಸ್ವತಿಯನ್ನು ಕರೆದಿರುವುದು, ನೇಮಿಚಂದ್ರನು ಸರಸ್ವತಿಗೆ ಹೇಳಿರುವ ’ಕಾಮಸಂಜನನಿ’ ಎಂಬ ವಿಶೇಷಣವನ್ನು ಧ್ವನಿಸುತ್ತದೆ.
ನಾಟ್ಯಸರಸ್ವತಿಯ ವಿಗ್ರಹವೊಂದರ ಪ್ರೇರಣೆಯಿಂದಾಗಿ ರಚಿತವಾಗಿರುವ ಕವಿತೆ, ’ನಾಟ್ಯಸರಸ್ವತಿಗೆ’.
ನರ್‍ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
ಎಂದು ಪ್ರಾರಂಭವಾಗುವ ಕವಿತೆ,
ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
...........
ಮಮ ಮಸ್ತಕ ನೀರೇಜದಲಿ!
ಎಂದು ಮುಕ್ತಾಯವಾಗುತ್ತದೆ. ನಮ್ಮ ಬುದ್ಧಿಯಲ್ಲಿ ’ವಿಜ್ಞಾನದ ಕಾಂತಿ ಅವತರಿಸಿ ಶಾಂತಿ ಬರುವಂತೆ ನರ್‍ತಿಸು ನಮ್ಮ ಮಸ್ತಕದಲ್ಲಿ’ ಎನ್ನುವ ನುಡಿ ಸೊಗಸಾಗಿ ಮೂಡಿ ಬಂದಿದೆ. ನಾಗಚಂದ್ರನಲ್ಲಿ ಆತನ ಕಾವ್ಯವು ’ವಿದ್ಯಾನಟಿಯ ನಾಟ್ಯವೇದಿಕೆ’ಯಾಗಿದ್ದರೆ, ಇಲ್ಲಿ ಸ್ವತಃ ಕವಿಯ ಮಸ್ತಕವೇ ನೃತ್ಯವೇದಿಕೆಯಾಗಿದೆ. ಸರ್ವರ ಮಸ್ತಕವೂ ಸರಸ್ವತಿಯ ನೃತ್ಯವೇದಿಕೆಯಾಗಬೇಕೆಂಬುದು ಪ್ರಸ್ತುತ ಕವಿತೆಯ ಆಶಯ.
’ಅಖಂಡ ಕರ್ಣಾಟಕ!’ ಕವಿತೆಯಲ್ಲಿ ಬರುವ ’ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ ತನಗೆ ರುಚಿರಕುಂಡಲ’, ’ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ’ ಎಂಬ ಸಾಲುಗಳು ’ಕರ್ನಾಟಕಸರಸ್ವತಿ’ ಎಂಬ ಪರಿಕಲ್ಪನೆಯ ವಿಸ್ತೃತ ರೂಪಗಳು.
ರಾಮಾಯಣವನ್ನು ಸರಸ್ವತಿಯ ವೀಣೆಯೆಂದೇ ಕುವೆಂಪು ಭಾವಿಸಿದ್ದಾರೆ. ಸಾವಿರಾರು ವರ್ಷಗಳಿಂದ ಸಾವಿರಾರು ಕವಿಗಳಿಗೆ ಪ್ರತ್ಯಕ್ಷ ಪರೋಕ್ಷ ಪ್ರಭಾವ ಬೀರುತ್ತಾ ಬಂದಿರುವ ಕೃತಿಗೆ ಸಿಕ್ಕ ಮನ್ನಣೆ ಅದು. ಕವಿಗೆ ಸರಸ್ವತಿಯು ಎಂದೂ ದೂರದವಳಲ್ಲ. ಸರಸ್ವತಿಯನ್ನು ಯಾವಾಗ ಬೇಕಾದರೂ ಸಂಧಿಸಿ ಮಾತನಾಡುವ ರೀತಿಯಲ್ಲಿರುವ ’ಅದ್ಭುತ ರಾಮಾಯಣ ಅಥವಾ ವಾಲ್ಮೀಕಿಗೊಂದು ಎಚ್ಚರಿಕೆ’ ಕವನದ ಮೊದಲ ಸಾಲಿನಲ್ಲಿಯೆ, ’ಓ ತಾಯಿ ಸರಸ್ವತಿಯೆ, ನಿನ್ನ ಬೀಣೆಯ ಮೇಲೆ ಕುಳಿತೇನ ಮಾಡುತಿವೆ ಈ ಗೂಬೆಗಳ ಮಾಲೆ’ ಎಂದು ಪ್ರಶ್ನಿಸುತ್ತಾರೆ. ಉತ್ತರರಾಮಾಯಣದಲ್ಲಿ ಮೂಲರಾಮಾಯಣದ ಆಶಯಕ್ಕೆ ವಿರುದ್ಧವಾದ ಅಸಂಗತವಾದ ಪ್ರಕ್ಷಿಪ್ತಗಳು ಸೇರಿರುವುದನ್ನು ಮೇಲಿನ ಸಾಲು ಧ್ವನಿಸುತ್ತದೆ.
’ಪಂಪ’ ಕವಿತೆಯ ಮೊದಲ ಕಂದಪದ್ಯ ಹೀಗಿದೆ.
ಶ್ರೀ ವಾಗ್ದೇವಿಯ ವೀಣೆಯಿ
ನಾವಗುಮುಗುವಿಂಚರವೊನಲೆಮ್ಮೀ ಕರ್ನಾ
ಟಾವನಿಯಂ ಪುಗಲಾಯ್ತು ಸ
ರೋವರಮದರೊಳ್ ಸರೋಜವಾದೈ, ಪಂಪಾ!
ವಾಗ್ದೇವಿಯ ವೀಣೆಯ ಇಂಚರವು ಹೊಮ್ಮಿದ್ದರಿಂದಲೇ ಕವಿಗಳ ಸರೋವರದ ಮಧ್ಯದ ಸರೋಜವಾದನು ಪಂಪ ಎಂಬ ಮಾತು ’ಸರಸ್ವತಿಯ ವೀಣೆ ನುಡಿಯುತ್ತಿದ್ದರೇ ಕವಿಗಳು ಬರೆಯಲು ಸಾಧ್ಯ’ ಎಂಬ ಕಲ್ಪನೆಯನ್ನು ಮೂಡಿಸುತ್ತದೆ. ಈ ಕಲ್ಪನೆಯ ವಿಸ್ತರಣೆಯ ರೂಪವನ್ನು ’ಮಹಾದರ್ಶನ’, ’ಚಿತ್ರಾಂಗದಾ’ ಮತ್ತು ’ರಾಮಾಯಣ ದರ್ಶನಂ’ ಕಾವ್ಯಗಳಲ್ಲಿ ಕಾಣಬಹುದು.
’ಮಹಾದರ್ಶನ’ ಸುಮಾರು ೮೦೫ ಸಾಲುಗಳ ಖಂಡಕಾವ್ಯದ ವಿಸ್ತಾರವನ್ನುಳ್ಳ ನೀಳ್ಗವಿತೆ. ಕಾವ್ಯದ ಆರಂಭದಲ್ಲಿ ಮಹಾಕವಿಗಳ ಮತ್ತು ನಿರಾಕಾರನಾದ ಪರಮಾತ್ಮನ ಸ್ತುತಿಯಾದ ಮೇಲೆ ವಾಗ್ದೇವಿಯನ್ನು ಸ್ತುತಿಸಲಾಗಿದೆ. 
ಏಳು, ವಾಣಿಯೆ ಏಳು! ಬಿಜ್ಜೆಯರಸಿಯೆ ಏಳು; ವೀಣೆಯನು ತಾಳು
ನವಯುಗದ ಪರಮಾವತಾರನಂ, ಭಕುತ ಜನರಿಗೆ ಮುದದಿ ಪೇಳು|
ಬಿಜ್ಜೆಯರಸಿ ಎಂಬ ದೇಸಿ ವಿಶೇಷಣ ಗಮನ ಸೆಳೆಯುತ್ತದೆ. ಸರ್ವಸಾಹಿತ್ಯವೂ ಸರಸ್ವತಿಯೆ ಬರೆಸಿದ್ದು. ಸರಸ್ವತಿಯ ವೀಣೆ ನುಡಿದರಷ್ಟೇ ಕವಿಗಳಿಗೆ ಬರೆವುದು ಸಾಧ್ಯ ಎಂಬ ಭಾವ ಪ್ರಕಟವಾಗಿದೆ. ಮಧ್ಯೆ, ಎಲ್ಲೆಲ್ಲಿ ಯಾವುದರ ಮೂಲಕ ದರ್ಶನವನ್ನು ಸರಸ್ವತಿಯು ನೀಡಬಹುದೆಂಬುದರ ದೊಡ್ಡ ಪಟ್ಟಿಯೇ ಇದೆ. ಆದರೆ, ಕೊನೆಯಲ್ಲಿ,
ಹಿಂದೆ ರಾಮನ ಕತೆಯ ವಾಲ್ಮೀಕಿ ವೀಣೆಯಲಿ.......,
ಬಾದರಾಯಣನೆಂಬ ತಂತಿಯಲಿ ಭಾರತವ ಹಾಡಿರುವೆ.....
ನವಿಲು ವಾಹನೆ ಏಳು..... ಪಾಣಿಯಲಿ ವೀಣೆಯನು ಪಿಡಿದೇಳು,
ಮಧುರತಮ ವಾಣಿಯಲಿ ಪೇಳು
ಎಂಬ ಸಾಲುಗಳು, ವೀಣೆಯನ್ನು ತಾಳಿ ಕತೆಯನ್ನು ಹೇಳು ಎಂಬುದರ ವಿಸ್ತರಣೆಯಾಗಿವೆ. ’ನವಿಲು ವಾಹನೆ ಏಳು.....’ ಎಂಬುದರಿಂದ ಸರಸ್ವತಿಯ ವಾಹನ ನವಿಲು ಎಂದಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಸರಸ್ವತಿಯು ಹಂಸವಾಹನೆ. ಇಲ್ಲಿ ಸರಸ್ವತಿಯು ಹಂಸವಾಹನೆಯ ಬದಲು ನವಿಲುವಾಹನೆ ಆಗಿದ್ದೇಕೆ ಎಂಬುದನ್ನು,
ನವಿಲುವಾಹನೆ ಏಳು, ವಾಹನದ ಮಳೆಬಿಲ್ಲ ರಾಗಗಳ ಕೀಳು
ಕಣ್ಣುಗಳ ಬಣ್ಣಗಳ ಪದಗಳನು ಸಿಂಗರಿಸುವಂದದಲಿ ಹೂಳು
ಎಂಬ ಸಾಲುಗಳು ಸಮರ್ಥಿಸುತ್ತವೆ. ಕಾವ್ಯಕ್ಕೆ ಅಲಂಕಾರಗಳು ಮುಖ್ಯ. ಅವುಗಳಲ್ಲಿ ವೈವಿಧ್ಯವಿದ್ದರೆ ಇನ್ನೂ ಚೆನ್ನ. ನವಿಲಿನ ಕಣ್ಣು ಮತ್ತು ಬಣ್ಣಗಳಂತಹ ಪದಗಳನ್ನು ಅಂದರೆ ಅಲಂಕಾರಗಳನ್ನು ’ಹೂಳು’ ಎಂದರೆ, ನೀನು ನುಡಿಸುವ ವಾಣಿಯಲ್ಲಿ ಬಿತ್ತು, ಸೇರಿಸು ಎಂದರ್ಥ. ಪ್ರಸ್ತುತ ಕವಿತೆಗೆ ’ನವಿಲುವಾಹನೆ’ ಎಂಬುದು ಸಾರ್ಥಕ ವಿಶೇಷಣವಾಗಿದೆ.
’ಚಿತ್ರಂಗದಾ’ ಕಾವ್ಯದ ಮೊದಲ ಪರ್ವದ ಮೊದಲ ನಲವತ್ತೆರಡು ಸಾಲುಗಳಲ್ಲಿ ಸರಸ್ವತಿಯ ವಿಸ್ತೃತವಾದ ಸ್ತುತಿಯಿದೆ.
ಬ್ರಹ್ಮಮಾನಸ ಮಹದ್‌ಗರ್ಭಸಂಭವೆ, ವಿರಾಟ್
ಪ್ರಭವೆ, ಭವ್ಯಾನಂದ ವಿಭವೆ, ಶಾರದೆ, ವರದೆ,
ಭಾವಚಿಂತಾಖನಿಯೆ, ಶಿಖಿವಾಹಿನಿಯೆ, ವಾಣಿ
ಭುವನಮೋಹನ ಮಧುರ ದಿವ್ಯ ವೀಣಾಪಾಣಿ
ವಾಗ್ದೇವಿ, ಸರಸ ಕವಿತಾ ಕಲಾ ಕಲ್ಯಾಣಿ,
ತುಂಬುವೆನು ನಿನ್ನಮಲ ಪಾದ ಪಂಕೇಜದಲಿ
ಮುಂಗುರುಳ್ದುಂಬಿಗಳನೆಲೆ ತಾಯೆ, ಕೃಪೆಗೈದು
ಕಂದನಂ ಕಾರುಣ್ಯದಿಂ ಕಂಡು, ಜಡಮತಿಗೆ
ದಿವ್ಯ ವೈದ್ಯುತ್ವ ಚೇತನವನಿತ್ತು ನಲಿದೊಲಿದು
ನರ್‍ತನಂಗೈಯೆನ್ನ ಜಿಹ್ವೆಯಲಿ.
ಬ್ರಹ್ಮಮಾನಸ ಮಹದ್‌ಗರ್ಭಸಂಭವೆ ಎಂಬುದು ಸರಸ್ವತಿಯನ್ನು ಬ್ರಹ್ಮನ ಮಾನಸಪುತ್ರಿಯನ್ನಾಗಿಸಿದೆ. ಇಲ್ಲಿ ಸರಸ್ವತಿಯ ವಾಹನ ನವಿಲು (ಶಿಖಿವಾಹಿನಿ). ಶಾರದೆ ಎಂಬುದು ಸರಸ್ವತಿಯ ಹೆಸರಾಗಿ ಬಳಕೆಯಾಗಿದೆ. ಸ್ತುತಿಯ ಎರಡನೇ ಹಂತದಲ್ಲಿ, ಕಾವ್ಯಕಾಮಿನಿಯಾದ ವಾಣಿಯು ’ನಾನುಲಿವ ಗಾನದಲಿ ಕನ್ನಡನಾಡಿನೆರ್ದೆವೂವರಳ್ವವೋಲ್’ ಮಾಧುರ್ಯವನ್ನು, ಸ್ಫೂರ್ತಿಯನ್ನು ದಯಪಾಲಿಸಲಿ ಎಂಬ ಪ್ರಾರ್ಥನೆಯಿದೆ.
ಓ ಕಲ್ಪನಾ ಸುಂದರಿಯೆ, ನಿನ್ನ ಮಹಿಮೆಯೊಳೆ
ವ್ಯಾಧನಾದಂ ಪ್ರಥಮಕವಿ! ಪಸುಳೆ ನಾಂ, ತಾಯೆ,
ನೀನೊರ್ಮೆ ಚುಂಬಿಸಲ್ಕೆನ್ನೀ ತೊದಲ್ವ ತುಟಿ
ಗಾನಗೈಯದೆ ಪೇಳ್ ಬೃಹತ್ ಕಾವ್ಯ ಸಂಗೀತೆಯಂ?
ಸರಸ್ವತಿಯ ಕೃಪೆಯಿಂದ ವ್ಯಾಧ ವಾಲ್ಮೀಕಿ ಪ್ರಥಮಕವಿಯಾಗಿದ್ದಾನೆ. ಇನ್ನೂ ಮಗು ನಾನು; ತಾಯಿ ನೀನು. ನನ್ನ ತೊದಲುವ ತುಟಿಯನ್ನೊಮ್ಮೆ ಚುಂಬಿಸಿದರೆ ಸಾಕು, ಮಹಾಕಾವ್ಯವೇ ಹೊಮ್ಮುತ್ತದೆ ಎಂಬ ಭಾವ ಚೆನ್ನಾಗಿ ಮೂಡಿಬಂದಿದೆ. ವಾಲ್ಮೀಕಿ, ವ್ಯಾಸ, ಪಂಪ, ರನ್ನರ ದಿವ್ಯ ಕಾವ್ಯಗಳೆಂಬ,
ಕೀರ್ತಿಕಾಮಿನಿಯಡಿಗಳಮಲತರ ಧೂಳಿಯಂ
ಶಿರದೊಳಾನುವ ಪುಣ್ಯಮಂ ಬಯಸಿ, ಹೇ ದೇವಿ,
ನಿನ್ನನೆದೆತುಂಬ ಪ್ರಾರ್ಥಿಸುವೆ: ಕೃಪೆದೋರೆನಗೆ
ನಿನ್ನ ವೀಣಾವಾಣಿಯಂ ನೀಡು, ಓ ತಾಯೆ!
ಎಂದು, ಇಷ್ಟಕ್ಕೂ ಸುಮ್ಮನಾಗದ ಕವಿಮನಸ್ಸು, ಸರಸ್ವತಿಯಿಂದ, ಸರಸ್ವತಿಯ ವೀಣೆಯ ಕಡೆಗೆ ಹೊರಳುತ್ತದೆ.
ಏಳು, ವೀಣೆಯೆ ಏಳು! ಹೇಳು ಮುಂದಿನ ಕಥೆಯ
ಹೇ ಅಮೃತಭಾಷಿಣಿಯೆ!
ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾರೆ. ’ಮಹಾದರ್ಶನ’ ಕವಿತೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ’ವೀಣೆಯ ತಾಳಿ ಕಥೆಯ ಹೇಳು’ ಎಂಬ ಕಲ್ಪನೆ ಇಲ್ಲಿ ವಿಸ್ತಾರಗೊಂಡಿದೆ. ತಾನು ಬರೆಯಲು ಉದ್ದೇಶಿಸಿರುವ ಕವಿತೆಯನ್ನು ಸರಸ್ವತಿಯ ವೀಣೆಯು ಹಾಡಲಿ ಎಂಬುದು ಕವಿಯ ಆಶಯ. ’ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ’, ಎಂದು ಕಾವ್ಯ ಮತ್ತು ಕರ್ತೃತ್ವವೆರಡನ್ನೂ ಭಗವಂತನಿಗೇ ಅರ್ಪಿಸುವ ನುಡಿಯ ಮುಂದುವರೆದ ರೂಪ ಈ ಪ್ರಾರ್ಥನೆ. ಅಲ್ಲಿ ಸ್ವತಃ ವೀರನಾರಾಯಣನೇ ಕವಿ. ಇಲ್ಲಿ ಸರಸ್ವತಿಯೇ ಕವಿಯಾದರೂ, ಕತೆಯ ನುಡಿಯುವುದು ಸರಸ್ವತಿಯ ವೀಣೆ!
ಕಾವ್ಯದ ಯಾವುದೋ ಒಂದು ಘಟ್ಟದಲ್ಲಿ, ಸನ್ನಿವೇಶ ಬದಲಾವಣೆಯಾಗುವಾಗ ನಿರಂತರವಾಗಿ ಹರಿಯುತ್ತಿದ್ದ ಕವಿಪ್ರತಿಭೆಗೆ ತತ್ಕಾಲೀನ ಅಡ್ಡಿ ಬಂದಂತಾಗಬಹುದೇನೋ!? ಅಂತಹ ಸಂದರ್ಭದಲ್ಲಿ ಕುವೆಂಪು ’ಮುಂದಿನ ಸನ್ನಿವೇಶವೇನು?’ ಎಂಬಂತೆ ಸರಸ್ವತಿಯನ್ನು ಕೇಳುತ್ತಾರೆ. ಇದು ಒಂದು ರೀತಿಯಲ್ಲಿ ಕಾವ್ಯತಂತ್ರವಾಗಿಯೇ ಬಂದಿರುವುದು ’ಚಿತ್ರಾಂಗದಾ’ ಕಾವ್ಯದಲ್ಲಿ ಆರಂಭವಾಗಿ ’ರಾಮಾಯಣದರ್ಶನಂ’ನಲ್ಲಿ ವಿಕಸಿತವಾಗಿದೆ ಎನ್ನುವುದನ್ನು ಮುಂದೆ ಗಮನಿಸಲಾಗುವುದು. ಪ್ರಸ್ತುತ ’ಚಿತ್ರಂಗದಾ’ದಲ್ಲಿ ಆ ರೀತಿಯ ಎರಡು ಪ್ರಸಂಗಗಳನ್ನು ಗುರುತಿಸಬಹುದು.
ಮತ್ತಾವ
ಮಾಯೆಯಂ ಮಥಸಿದೌ ನಿದ್ರಾಸಮುದ್ರದಲಿ,
ಓ ಸ್ವಪ್ನ ಸುಂದರಿಯೇ? ಸೃಷ್ಟಿಸಲ್ ತೊಡಗಿದರೆ
ನಿನ್ನ ಮಾಯಾಕುಂಚಕಿದಿರೆಲ್ಲಿ? ಎಣೆಯೆಲ್ಲಿ?
ದೇಗುಲದ ಕಲ್ನೆಲದಿ ಮಲಗಿಹ ತಳೋದರಿ
ಅದೇಕಿಂತು ಕಂಪಿಪಳ್? ಕಾಣುತಿಹಳೇನಾಕೆ? ತೋರ್
ಎಂದು ಕಲೆಗಾರ್ತಿ ಸರಸ್ವತಿಯನ್ನು ಕೇಳುತ್ತಾರೆ. ಮೂರನೆಯ ಪರ್ವಾರಂಭದಲ್ಲಿ
ಏಳು,ವೀಣೆಯೆ! ಏಳು, ಶೃಂಗಾರ ಸುಂದರಿಯೆ!
ಏಳು, ಅಂತರ್‍ಯಾಮಿ ಚಿಂತಾ ಪ್ರಭಾಮಯೀ
ಪ್ರತಿಭಾ ಮನೋಹರಿಯೆ! ಹೇಳು ಮುಂದಣ ಕಥಾ
ಭೋಗಮಂ!..............................
॒॒॒॒.॒..............................................................
..........ಜಡಮತಿಗೆ ರಸಮಂತ್ರಮಂ ನೀಡಿ,
ಮಿಡಿದು ನುಡಿಸೆನ್ನೆದೆಯ ನಾದಮಯದಿಂದ್ರಧನು
ತಂತ್ರಿಯಿಂ ಮಾಡಿದ ಮಹಾಕಾಶವೀಣೆಯಿಂ!
ಎಂದು ಸರಸ್ವತಿಯ ಮಹಾವೀಣೆಯನ್ನು ಪ್ರಾರ್ಥಿಸುತ್ತಾರೆ. ಆಕಾಶವೇ ವೀಣೆ; ಕಾಮನಬಿಲ್ಲೇ ತಂತಿಯಾದ್ದರಿಂದ ಸರಸ್ವತಿಯದ್ದು ಮಹಾವೀಣೆ. ಹೀಗೆ ಸರಸ್ವತಿಯ ವೀಣೆಯನ್ನು ಸ್ತುತಿಸುವಾಗ ಮುಂದಣ ಕತೆಯ ಆಶಯಕ್ಕೆ ಅನುಗುಣವಾಗಿಯೇ ಸರಸ್ವತಿಗೆ ವಿಶೇಷಣಗಳನ್ನು ಬಳಸಿರುವುದು ಉಚಿತವಾಗಿದೆ. ಉದಾಹರಣೆಗೆ ಚಿತ್ರಾಂಗದಾ ಕಾವ್ಯದ ಮೂರನೆಯ ಪರ್ವದಲ್ಲಿ ಶೃಂಗಾರಪ್ರಧಾನವಾದ ದೃಶ್ಯಗಳು ಹೆಚ್ಚಾಗಿ ಬರುತ್ತವೆ. ಪ್ರಾರ್ಥನೆಯಲ್ಲಿ ’ಶೃಂಗಾರ ಸುಂದರಿಯೇ’ ಎಂದು ಸ್ತುತಿಸಿರುವುದನ್ನು ಗಮನಿಸಬಹುದಾಗಿದೆ. ಹಳಗನ್ನಡ ಕಾವ್ಯಗಳಲ್ಲಿ, ಷಟ್ಪದಿ ಕಾವ್ಯಗಳಲ್ಲಿ ಆಯಾಯ ಆಶ್ವಾಸದ ಆಶಯವನ್ನು ವ್ಯಕ್ತಪಡಿಸುವ ಪದ್ಯಗಳನ್ನು ಆಶ್ವಾಸದ ವ್ರೆದಲಲ್ಲೇ ತಂದಿರುವುದನ್ನು ನೋಡಬಹುದಾಗಿದೆ. ಆದಿಪುರಾಣದಲ್ಲಿ ಪಂಪನು ಪ್ರಪ್ರಥಮವಾಗಿ ಈ ತಂತ್ರವನ್ನು ಬಳಸಿದ್ದಾನೆ. ಈ ಉದ್ದೇಶಕ್ಕಾಗಿ ಬಳಸಿರುವ ಕಂದಪದ್ಯಗಳೆಲ್ಲವೂ ’ಸರಸ್ವತೀ ಮಣಿಹಾರಂ’ ಎಂದು ಕೊನೆಗೊಂಡಿರುವುದನ್ನು, ಪಂಪನ ಸರಸ್ವತೀ ದರ್ಶನವನ್ನು ವಿವೇಚಿಸುವ ಸಂದರ್ಭದಲ್ಲಿ ಗಮನಿಸಿದ್ದೇವೆ.
’ಶ್ರೀರಾಮಾಯಣದರ್ಶನಂ’ ಬೃಹತ್ತು ಮತ್ತು ಮಹತ್ತುಗಳೆರಡರಲ್ಲೂ ’ಚಿತ್ರಾಂಗದಾ’ ಕಾವ್ಯದ ಮುಂದುವರೆದ ಆವೃತ್ತಿ. ಸರಸ್ವತಿಯ ಪ್ರಾರ್ಥನೆ, ವರ್ಣನೆ ಮತ್ತು ಕಾವ್ಯತಂತ್ರವಾಗಿ ವಾಗ್ದೇವಿಯ ಸ್ತುತಿಯನ್ನು ಬಳಸಿಕೊಂಡಿರುವ ವಿಚಾರದಲ್ಲೂ ಮುಂದುವರೆದ ಆವೃತ್ತಿಯೆ! ’ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಅರ್ಪಣೆಯ ಭಾಗದಲ್ಲಿಯೇ ಸರ್ವಭಾಷಾಮಯಿಯಾದ ಸರಸ್ವತಿಯನ್ನು ವಿಶ್ವಭಾಷಾಮಯೀಯಾಗಿಸಿರುವ ’ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್’ ಮತ್ತು ’ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ’ ಎಂಬ ಸಾಲುಗಳು ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿವೆ.
‘ಏರುವೆನ್ ವಾಗ್ದೇವಿಯಮೃತ ರಸನೆಯ ಲಸನ್ ನಾವೆಯಂ’ ಎನ್ನುತ್ತಾ ಆದಿಕವಿಗೆ ವಂದಿಸಿ, ‘ದೇವಕವಿ, ನನ್ನನೊಯ್ಯನೆ ಕಾವ್ಯ ವಿದ್ಯುದ್ ವಿಮಾನದೊಳ್ ನಿರಿಸಿ, ಮೇಣ್ ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಇದುವರೆಗಿನ ಕವಿಗಳು -‘ಚಿತ್ರಾಂಗದಾ’ದಲ್ಲಿ ಕುವೆಂಪೂ ಸಹ- ಸರಸ್ವತಿಯು ನಮ್ಮ ನಾಲಗೆಯಲ್ಲಿ ನೆಲಸಲಿ, ನರ್ತಿಸಲಿ’ ಎಂದು ಪ್ರಾರ್ಥಿಸಿರುವುದನ್ನು ನೋಡಿದ್ದೇವೆ. ಇಲ್ಲಿ ನೇರವಾಗಿ ಸರಸ್ವತಿಯನ್ನು ನಾಲಗೆಗೆ ಆಹ್ವಾನಿಸದೆ, ಆದಿಕವಿಯನ್ನು ‘ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಪ್ರಾರ್ಥಿಸುತ್ತಿದ್ದಾರೆ. ಇಲ್ಲಿ ‘ಆತ್ಮಜಿಹ್ವೆಗೆ’ ಎಂಬ ಮಾತು ಹೊಸದಾಗಿ ಬಂದಿದೆ. ಆದಿಕವಿಯೇ ಸರಸ್ವತಿಯನ್ನು ಕವಿಯಾತ್ಮಜಿಹ್ವೆಗೆ ಇರಿಸಿದ ಮೇಲೆ ಸರಸ್ವತಿಯ ಪ್ರಾರ್ಥನೆ ಕೆಳಗಿನಂತೆ ಬಂದಿದೆ.

ಬಾಳು, ವೀಣಾಪಾಣಿ; ಬಾಳು, ಬ್ರಹ್ಮನ ರಾಣಿ;
ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.
ನಂದನದಿ ತುಂಬಿಯೋಂಕೃತಿ ತುಂಬಿ ಮೊರೆವಂತೆವೋಲ್
ಕರ್ಣಾಟಕದ ಜನದ ಕರ್ಣವೀಣಾ ತುಂಬಿ
ನಿನ್ನ ವಾಣಿಗೆ ವಿಕಂಪಿಸಿ, ಜೀಂಕೃತಿಯ ಬೀರಿ,
ರಸದ ನವನೀತಮಂ ಹೃದಯದಿ ಮಥಿಸುವಂತೆ
ಗಾನಗೆಯ್, ಹೇಳು, ಓ ಭಾವಗಂಗಾವೇಣಿ. (ಕವಿಕ್ರತು ದರ್ಶನ, ಸಾಲುಗಳು: ೮೭-೮೮)

ಈ ಭಾಗದಲ್ಲಿ ಭಾವಗಂಗಾವೇಣಿ ಎಂಬ ವಿಶೇಷಣ ಗಮನ ಸೆಳೆಯುತ್ತದೆ. ಭಾರತೀಯರಿಗೆ ಗಂಗಾನದಿಯೇ ದೊಡ್ಡನದಿ. ಗಂಗಾವೇಣಿ ಎಂದರೂ ಸಮಾಧಾನವಾಗದ ಕವಿಗೆ, ಸರಸ್ವತಿಯನ್ನು ಭಾವಗಂಗಾವೇಣಿಯನ್ನಾಗಿ ನೋಡುವ ಬಯಕೆ. ಈ ವಿಶೇಷಣ ಸರಸ್ವತಿಯ ಅಲೌಕಿಕ ಪ್ರತಿಮೆಗೆ ಭವ್ಯಭೂಮತೆಯನ್ನು ತಂದುಕೊಟ್ಟಿದೆ. ಮುಂದಿನ ಭಾಗದಲ್ಲಿ ಸರಸ್ವತಿಯ ಸಾಮರ್ಥ್ಯದ ಅರಿವು ಮೂಡುತ್ತದೆ.

ತೀಡಿದರೆ ನಿನ್ನುಸಿರು, ಮದ್ದಿಗೆ ಕಿಡಿ ತಗುಳ್ದು
ಹೊಮ್ಮುವಂದದಿ ಜ್ಯೋತಿ, ಜಡವೆ ಚಿನ್ಮಯವಾಗಿ
ಚಿಮ್ಮಿದಪುದಯ್. ಮುಟ್ಟಿದರೆ ನಿನ್ನ ಮೆಯ್, ರಾಮಾಂಘ್ರಿ
ಸೋಂಕಿದೊಡನೆಯೆ ಕಲ್ಲು ಕಡುಚೆಲ್ವು ಪೆಣ್ಣಾಗಿ
ಸಂಭವಿಸಿದೋಲ್, ಪಂಕದಿಂ ಕಲಾಪಂಕಜಂ
ಕಂಗೊಳಿಪುದಯ್, ಭುವನ ಮನಮಂ ಮೋಹದಿಂದಪ್ಪಿ
ಸೆಳೆದು. ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ
ಪೊರಸೋಸಿದಪುದು ಕಬ್ಬಿನ ರಸಂ. ಮಂತ್ರಮಯಿ
ನೀಂ ಬಡಿಯೆ, ಬಂಡೆಯಿಂ ನೀರಿನೊಳ್ಬುಗ್ಗೆಯಂ
ಹೊಮ್ಮಿ ಚಿಮ್ಮುವುದಲ್ತೆ, ಮುತ್ತು ಚಿಪ್ಪೊಡೆವಂತೆವೋಲ್
ಬಿರಿದು. ರಸಚಿತ್ ತಪೋಬಲಕೆಲ್ಲೆ ತಾನೊಳದೆ
ಪೇಳ್, ಕಲಾಲಕ್ಷ್ಮಿ? ಕೃಪೆಗೆಯ್, ತಾಯೆ, ಪುಟ್ಟನಂ,
ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ. (ಕವಿಕ್ರತು ದರ್ಶನ, ಸಾಲುಗಳು: ೧೨೮-೧೪೦)

ಕಬ್ಬಿಣದಿಂದಲೂ ಕಬ್ಬಿನ ರಸವುಕ್ಕಿಸುವ ವಾಣಿ ಇಲ್ಲಿ ರಸಸರಸ್ವತಿ. ಮಂತ್ರಮಯೀ ನೀನು ಬಡಿದರೆ ಬಂಡೆಯಿಂದಲೂ ನೀರುಕ್ಕುವುದು ಎಂಬ ಮಾತು ಋಗ್ವೇದದ, ರಭಸವಾಗಿ ಹರಿಯುವ ಸರಸ್ವತಿನದಿಯನ್ನು ಸೂಚಿಸುತ್ತದೆ. ‘ಕನ್ನಡದ ಪೊಸಸುಗ್ಗಿ ಬನ’ ಎಂಬ ಮಾತು ನವೋದಯ ಕಾವ್ಯಸಂದರ್ಭವನ್ನು ಧ್ವನಿಸುತ್ತದೆ. ನವೋದಯದ ಕೋಗಿಲೆಯಾದ ನೀನು ನನಗೆ ಕೃಪೆ ಮಾಡು ಎಂಬುದು ಕವಿಯ ಪ್ರಾರ್ಥನೆ.

‘ಶ್ರೀರಾಮಾಯಣದರ್ಶನಂ’ನ ಕೆಲವು ಸಂಚಿಕೆಗಳು (ಉದಾ: ಅಗ್ನಿಯಾತ್ರೆ ಮತ್ತು ಅತ್ತಲಾ ದೈತ್ಯ ಸಭೆಯೊಳ್) ಆರಂಭದಲ್ಲಿ ಸರಸ್ವತಿಯ ಬದಲು ಆದಿಕವಿ ವಾಲ್ಮೀಕಿಯನ್ನು ಕಾವ್ಯಾವೇಶಕ್ಕಾಗಿ ಸರಸ್ವತಿಯನ್ನು ಸ್ತುತಿಸುವಂತೆಯೇ ಸ್ತುತಿಸಿರುವುದುಂಟು. ಕೆಲವು ಸಂಚಿಕೆಯ ಪ್ರಾರಂಭದಲ್ಲಿ, ಒಮ್ಮೊಮ್ಮೆ ಸಂಚಿಕೆಯ ನಡುವೆಯೂ ಸರಸ್ವತಿಯ ಸ್ತುತಿಯಿದೆ. ಎಂಟನೆಯ ಸಂಚಿಕೆಯ ಆರಂಭದಲ್ಲಿ ಬಂದಿರುವ ಸರಸ್ವತಿಯ ಸ್ತುತಿ ಹೀಗಿದೆ.

ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ
ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ
ಹೃದಯಮಂ; ನಡೆಸೆನ್ನ ಈ ಮಹಾಕಾವ್ಯಮಂ,
ತಾಯಿ ಕಂದನ ಕೈಯನಾನುತೆ ನಡೆಯಿಪಂತೆ. (ಕುಣಿದಳುರಿಯ ಉರ್ವಶಿ!, ಸಾಲುಗಳು: ೧-೪)

ಆತ್ಮವೆಂಬ ವೀಣೆಯ ತಂತಿಯನ್ನು ನುಡಿಸುವಂತೆ ರಸರಾಣಿಯನ್ನು ಕವಿ ಕೋರುತ್ತಾರೆ. ಮೊದಲೇ ‘ಪಸುಳೆ ನಾನ್; ತಾಯಿ ನೀನು’ ಎಂದಿರುವುದರಿಂದ ‘ತಾಯಿ ಕಂದನ ಕಯ್ಯನಾನುತೆ ನಡೆಯಿಪಂತೆ’ ಎಂಬ ಉಪಮೆ ಅರ್ಥಪೂರ್ಣವಾಗಿದೆ; ಕವಿಗಳೆಲ್ಲರೂ ಸರಸ್ವತಿಯ ಸುತರು ಎಂಬರ್ಥವನ್ನು ಧ್ವನಿಸುತ್ತದೆ. ಮುಂದುವರೆದು, ತನ್ನ ಮುಂದಿರುವ ಕಾವ್ಯದ ದೂರವನ್ನು, ಕಾವ್ಯದ ಉದ್ದೇಶವನ್ನು ಹೇಳಿ, ಅದಕ್ಕೆ ಸಹಕರಿಸುವಂತೆ ಸರಸ್ವತಿಯನ್ನು ಸ್ತುತಿಸುತ್ತಾರೆ.

........ಪರಕೆಯಿರಲೆನಗೆ
ನಿನ್ನಮೃತ ವರದ ಕರದಾ, ದೇವಿ ಓ ಶಾರದಾ!
ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ
ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ
ದೀನರಿಗೆ? ನನ್ನೀ ಕೃತಿಯನೋದುವಾತ್ಮರಾ
ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,
ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ! (ಕುಣಿದಳುರಿಯ ಉರ್ವಶಿ!, ಸಾಲುಗಳು: ೧೪-೨೦)

ಕಾವ್ಯರಚನೆಯಲ್ಲಿ ತೊಡಗಿರುವ ಕವಿಗೆ ಕಾವ್ಯಾವೇಶವನ್ನು ಕೊಡುವಂತೆ, ಕಾವ್ಯವನ್ನು ಓದುವ ಸಹೃದಯರಿಗೂ ಸರಸ್ವತಿಯೆ ಕೃಪೆ ಮಾಡು ಎಂಬುದು ನವೀನವಾಗಿದೆ. ಸಹೃದಯರಿಗೆ ಒಲಿಯುವಳಾದ್ದರಿಂದ ಸರಸ್ವತಿಗೆ ‘ಸಹೃದಯ ಸರಸಲಕ್ಷ್ಮಿ’ ಎಂಬ ವಿಶೇಷಣ ಚೆನ್ನಾಗಿ ಒಪ್ಪುತ್ತದೆ. ‘ಕಿಷ್ಕಿಂಧಾ ಸಂಪುಟ’ದ ಪ್ರಾರಂಭದ ಸಂಚಿಕೆಯಲ್ಲಿ, ಸರಸ್ವತಿಯ ಕಯ್ಯ ವೀಣೆಯನ್ನು ಪ್ರಾರ್ಥಿಸುತ್ತಾರೆ.

ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ
ತ್ರೈಭುವನ ಸಮ್ಮೋಹಿನಿಯೆ, ಕವನಕಮನೀಯೆ!
ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ
ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ
ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ
ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್. (ಲಂಕೇಶನೊಲಿಸಿದನು ಮಾರೀಚನಂ, ಸಾಲುಗಳು: ೧-೬)

ಕವಿಗೆ ಸರಸ್ವತಿ ಮತ್ತು ಸರಸ್ವತಿಯ ವೀಣೆಯ ಬಗೆಗೆ ಯಾವ ಭೇದಭಾವವೂ ಇಲ್ಲ. ಆದರೆ, ಎರಡನ್ನೂ ಬೇರೆ ಬೇರೆ ಎಂಬಂತೆ ಸ್ತುತಿಸುವುದರಿಂದ ವೈವಿಧ್ಯ ಉಂಟಾಗಿದೆ; ಏಕತಾನತೆಯ ಭಯವಿರುವುದಿಲ್ಲ. ಸರಸ್ವತಿಗೆ ‘ಈ’ ‘ಈಕ್ಷತಿ’ ‘ಈಕ್ಷಿತಾ’ ಎಂಬ ಹೆಸರುಗಳೂ ಇವೆ. ಇವುಗಳಿಗೆ ಈಕ್ಷಿಸು, ಅವಲೋಕಿಸು, ಗ್ರಹಿಸು ಮುಂತಾದ ಅರ್ಥಗಳಿವೆ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಶತತಂತ್ರಿಯಾ ಶ್ರೀಕಂಠದಿಂ ಗಾನಗೆಯ್’ ಎಂಬ ಪ್ರಯೋಗಗಳಲ್ಲಿ, ಸರಸ್ವತಿಗಿರುವ ಈ ಹೆಸರುಗಳ ಅರ್ಥಪ್ರಸ್ತುತತೆಯನ್ನು ಕಂಡುಕೊಳ್ಳಬಹುದು. ಕಣ್ಣೆದುರಿಗೆ ತಾನು ಕಂಡದ್ದನ್ನು ಕವಿಮನಸ್ಸು ಗ್ರಹಿಸಿ, ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ಅದಕ್ಕೆ ‘ಪ್ರತಿಭೆ’ ಎಂಬ ಸಾಮರ್ಥ್ಯ ಬೇಕು. ಆ ಪ್ರತಿಭೆಯೇ ಸರಸ್ವತಿ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಗಾನಗೆಯ್’ ‘ಸರ್ವಪಾರದರ್ಶಿಕೆ’ ಮೊದಲಾದ ಪ್ರಯೋಗಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇಲ್ಲಿ ಹಾಡುತ್ತಿರುವವಳು ವೀಣಾಸರಸ್ವತಿ; ಬರೆಯುತ್ತಿರುವವನು ಕವಿ. ಆದ್ದರಿಂದ ಸರಸ್ವತಿಯ ದರ್ಶನವೇ ಕವಿಯ ದರ್ಶನವೂ ಆಗಿರುತ್ತದೆ. ಇಂತಹುದೇ ಮತ್ತೊಂದು ಪ್ರಸಂಗ ‘ರಯ್‌ಗೆ ಕರೆದೊಯ್, ಓ ಅಗ್ನಿ!’ ಸಂಚಿಕೆಯ ಪ್ರಾರಂಭದಲ್ಲಿ ಬಂದಿದೆ.

ಕ್ರಾಂತದರ್ಶಿನಿ, ಈ ಜಗತ್‌ಕಾಂತಿಕರೆ, ಶಾಂತೆ,
ಭ್ರಾಂತಿಹರೆ, ಸುಚಿರೆ, ಸುಸ್ಥಿರೆ, ಪರಾತ್ಪರೆ, ವಾಣಿ,
ಓ ಪರಾತ್ಪರವಾಣಿ, ಮಿಡಿ ನಿನ್ನ ಬೀಣೆಯಂ;
ನುಡಿ ಮುಂದೆ ನಡೆದುದಂ, ನಿನಗೆ ಕಾಣ್ಬಂದದಿಂ (ರಯ್‌ಗೆ ಕರೆದೊಯ್, ಓ ಅಗ್ನಿ!, ಸಾಲುಗಳು: ೧-೫)

ಕಾವ್ಯದ, ಸಾಹಿತ್ಯದ ಅರಿವಿನಿಂದ ನಮ್ಮ ಭ್ರಮೆಗಳು ಕಳೆದು, ಶಾಂತಿ ಲಬಿಸುತ್ತದೆ; ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ‘ಭ್ರಾಂತಿಹರೆ’ ‘ಶಾಂತೆ’ ‘ಜಗತ್‌ಕಾಂತಿಕರೆ’ ಎಂಬ ವಿಶೇಷಣಗಳು ಗಮನಸೆಳೆಯುತ್ತವೆ.

‘ಇರ್ದುದು ಮಹೇಂದ್ರಾಚಲಂ’ ‘ರಾಮಾಯಣದರ್ಶನಂ’ನಲ್ಲಿ ಒಂದು ಪ್ರಮುಖ ಘಟ್ಟ. ಸೀತಾನ್ವೇಷಣೆಗಾಗಿ ದಿಕ್ಕು ದಿಕ್ಕಿಗೆ ಸುಗ್ರೀವನಾಜ್ಞೆ ಹೊತ್ತು ಹೋಗಿದ್ದ ಕಪಿಸೈನ್ಯದ ಕಾರ್ಯಫಲವನ್ನು ಅರಿತು ಮುಂದಿನ ಸಿದ್ಧತೆಗೆ ತೊಡಗುವ ಸಮಯ. ಕಪಿಸೈನ್ಯದ ಹಲವು ಗುಂಪುಗಳ ಕಾರ್ಯಸಾಹಸವನ್ನು ಅರಿಯಲು ಕವಿ ಆಶ್ರಯಿಸುವುದು ಮತ್ತೆ ವಿಪಂಚಿ ಅಂದರೆ ವೀಣೆಯನ್ನೆ!

ಓ, ಏಳ್, ವಿಪಂಚಿಯೆ, ಕಲಾಲತಾಂಗಿಯ ಬೆರಳ್
ತಳಿರ ಸೋಂಕಿನ ಸೊಮ್ಪು ಸಾಲ್ವುದೇನಿನ್ ನಿನಗೆ?
ಪ್ರಳಯ ಭೈರವ ಡಮರು ರೌರವಾವೇಶಮಂ
ಆಹ್ವಾನಗೆಯ್............................................. (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೧-೪)

ಕಲಾಲತಾಂಗಿಯ ಬೆರಳೆಂಬ ತಳಿರಿನಿಂದ ವೀಣೆಯನ್ನು ಮೀಟಿ ಹೊಮ್ಮಿಸಿದ ನಾದ, ಮುಂದಿನ ಸಾಹಸದ ಕಥೆಯನ್ನು ಹೇಳಲಾರದು. ಸಾಹಸದ ಕಥೆಯಾದ್ದರಿಂದ ಡಮರು ರೌರವಾವೇಶವನ್ನು ಆಹ್ವಾನಗೆಯ್ಯುವಂತೆ ಪ್ರಾರ್ಥಿಸುತ್ತಾರೆ. ಮುಂದುವರೆದು,

ತಾಂಡವ ಶಿವನ ಕಯ್ಯ ಡಮರು ಆವೇಶಮಂ
ಆಹ್ವಾನಗೆಯ್! ಸಾಗರೋಪಮಂ ಗಾನಗೆಯ್
ಆಂಜನೇಯನ ಸಾಗರೋಲ್ಲಂಘನದ ಮಹಾ
ಸಾಹಸ ಕಥಾಸರಿತ್ಸಾಗರದ ಸಂಮಥನಮಂ! (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೨೬-೨೮)

ಆಂಜನೇಯನ ಸಾಗರೋಲ್ಲಂಘನದ ಸಾಹಸದ ಕಥೆಯಾದ್ದರಿಂದ ಶಿವನ ಡಮರಿನ ಆವೇಶ ಬೇಕೆಂಬುದು ಕವಿಯ ಆಶಯ. ನಿರಂತರವಾಗಿ ಹರಿದ ಕವಿಪ್ರತಿಭೆ ನಿಲುಗಡೆಯ ಬಯಸಿ, ನಿಂತು, ಮುಂದುವರೆಯುವುದಕ್ಕೆ ಮೊದಲು ಮತ್ತೆ ಮತ್ತೆ ಸರಸ್ವತಿಗೆ ಕಾವ್ಯಾವೇಶಕ್ಕಾಗಿ,

.........ದರ್ಶನದೋರೆಮಗೆ,
ಓ ವಾಙ್ಮಯಿಯೆ, ನಿತ್ಯಸತ್ಯಂ ನಿಕ್ವಣಿಸುವೋಲ್
ವಚಸ್‌ತಂತ್ರಿ ಕವಿಯ ಚಿದ್ಯಂತ್ರಸಮ ಹೃದ್ವೀಣೆಯಿಂ! (ಕನಕಲಂಕಾನ್ವೇಷಣಂ, ಸಾಲುಗಳು: ೧೦-೧೨)

ಎಂದು ಬೇಡುತ್ತದೆ. ಸರಸ್ವತಿಯ ಸತ್ಯವಾಣಿ ನಿತ್ಯವಾದುದು. ವಾಣಿಯ ವೀಣೆಯೊರೆದುದನೇ ಹಾಡುವ ಕವಿಯ ಹೃದಯ ವೀಣೆಯೂ ಅದನ್ನೇ ದನಿಗೈಯಬೇಕು. ಆ ದರ್ಶನವನ್ನೇ ಕವಿ ಬೇಡುತ್ತಾನೆ. ಹೀಗೆ ಘಟನೆಯಿಂದ ಘಟನೆಗೆ ಹೊರಳುವ ಮೊದಲು, ಸರಸ್ವತಿಯ ಸ್ತುತಿಯನ್ನು ಪರಿಣಾಮಕಾರಿಯಾಗಿ ‘ತಪಸ್ಸಿದ್ಧಿ’ ಎಂಬ ಸಂಚಿಕೆಯ ಪ್ರಾರಂಭದಲ್ಲಿ ಬಳಸಿಕೊಳ್ಳಲಾಗಿದೆ. ಲಂಕೆಯಲ್ಲಿನ ಯುದ್ಧ, ಯುದ್ಧಾನಂತರದ ಕಾರ್ಯಭರಗಳ ವರ್ಣನೆಯಲ್ಲಿ ಮುಳುಗಿಹೋಗಿದ್ದ ಕವಿಗೆ, ಒಮ್ಮೆಲೆ ಅಯೋಧ್ಯೆಯ ನೆನಪಾಗುತ್ತದೆ. ಆಗ ವಾಗ್ದೇವಿಯನ್ನೇ ಪ್ರಾಥಿಸುತ್ತಾರೆ.

ಸಾಲದೇನಿನಿತೆ ಸೂಚನೆ ನಿನಗೆ, ಓ ವಾಣಿ,
ವಾಗ್ದೇವಿ? ಯಾಚಿಸುವೆ ಕೈಮುಗಿದು. ಪಿಂತಿರುಗು;
ಬಾ, ತಾಯಿ; ಸಾಲ್ಗುಮಾ ಲಂಕೆ, .?.....................
....................................................................
ತೋರೆಮಗೆಂತು ಸುವ್ರತನ್ ಭರತದೇವಂ?
...........................................................
ಹಾಡಿ ತೋರೆಮಗೆ, ಓ ತಾಯೆ, ಹೇ ವಾಗ್ದೇವಿ! (ತಪಸ್ಸಿದ್ಧಿ, ಸಾಲುಗಳು: ೧೫-೨೫)

ಈ ರೀತಿಯ ಕಾವ್ಯತಂತ್ರದ ಭಾಗವಾಗಿ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಸರಸ್ವತಿಯ ಸ್ತುತಿ ಮತ್ತೆ ಮತ್ತೆ ಬಳಕೆಯಾಗಿದೆ.

ಏನು ಮೌನವಿದೆನ್ನ ಕೋಮಲೆ? ಕೋಪವೆ ನಿನಗೆ
ಕಾಮಿಸಿದನಿನಿಯನೆಂದನ್ಯ ವಿಷಯ ವಧೂ
ಸರೋಜ ಶಾರದೆಗೆ? ತಂಗೆಗೆ ಕರುಬುವರೆ, ಪೇಳ್,
ಉದಾತ್ತೆ ನೀಂ? ರೂಪಕ ರೂಪಿಯಾದೊಡೇನಾ
ಪ್ರೇಮಮುಂ ರಾಮ ಮಹಿಮಾ ಕೀರ್‍ತಿ ಕಥೆಯಲ್ತೆ?
ಕವಿಯೊಲ್ಮೆ ಕಡಲಲ್ತೆ? ಬಡಬ ಕುಂಭೋದ್ಭವರ್
ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್
ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್
ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ
ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ
ಹರಜಟಾ ಜೂಟಪ್ರಪಾತ ಗಂಗಾ ಸ್ತೋತ್ರಮಂ ಸಂಗೀತಮಂ! (ಸೈನ್ಯಗುಪ್ತಿ, ಸಾಲುಗಳು: ೧-೧೨)

ಸರಸ್ವತಿಯ ಸ್ತುತಿ ಕಾವ್ಯತಂತ್ರವಾಗಿ ಬಳಕೆಯಾಗಿರುವುದಕ್ಕೆ ಒಂದು ಉತ್ತಮ ಉದಾಹರಣೆ ಮೇಲಿನ ಭಾಗ. ಕವಿಪ್ರತಿಭೆ ಅಲೌಕಿಕವಾದರೂ, ಕವಿ ಲೌಕಿಕನೇ! ಕಾವ್ಯ ರಚನೆ ನಿಂತು, ಮತ್ತೆ ಪ್ರಾರಂಭವಾಗಬೇಕಾದಾಗ, ಸರಸ್ವತಿಯನ್ನು ರಮಿಸಿ, ನಮಿಸಿ ಮುಂದುವರೆಯುವ ಸುಂದರ ಚಿತ್ರಣ ಇದಾಗಿದೆ. ಇನಿಯನಾದ ಬ್ರಹ್ಮನೇನಾದರೂ ಅನ್ಯ ವಿಷಯ ವಧೂ ಸರೋಜೆಗೆ ಒಲಿದನೆಂದು ಕೋಪವೆ? ಅದೂ ಒಂದು ಮಹಿಮೆಯಲ್ಲವೆ. ಉದಾತ್ತೆಯಾದ ನೀನು ತಂಗೆಗೆ ಕರುಬುವುದೆ? ಸೃಷ್ಟಿಕರ್ತನೊಲ್ಮೆ ಕಡಂತೆ. ಅದನ್ನು ಕೃಶಾಂಗಿಯಾದ ನಿನ್ನ ತಂಗೆಯೊಬ್ಬಳು ಎಷ್ಟೆಂದು ಕುಡಿಯಬಲ್ಲಳು? ಕೋಪವನ್ನು ಬಿಡು ಎಂದು ಸಂತೈಸಿ, ರಮಿಸಿ, ವೀಣೆಯನ್ನು ಹಿಡಿದು ಮುಂದಿನ ಕಥೆಯನ್ನು ನುಡಿಸುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯ ಸಾಹಿತ್ಯದಲ್ಲಿ, ಪಾತ್ರಕ್ಕೆ ಒಂದು ಹೆಸರನ್ನಿಟ್ಟರೆ ಕವಿಯ ಕೆಲಸ ಮುಗಿದಂತೆ; ಆ ಪಾತ್ರಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತವೆ. ಅಷ್ಟರ ಮಟ್ಟಿಗೆ ಕವಿ ನಿರ್ಲಿಪ್ತನಾಗಿರಬೇಕು. ಹಾಗೇ, ತನ್ನದೇ ಕಾವ್ಯದ ಪಾತ್ರವೊಂದು ಏನೋ ಗಹನವಾದ, ರಹಸ್ಯವಾದ (ಬೇರೆ ಪಾತ್ರಗಳಿಗೆ ತಿಳಿಯದಂತೆ) ಕಾರ್ಯವೊಂದನ್ನು ಎಸಗುತ್ತಿರುತ್ತದೆ. ಆಗ ಸ್ವತಃ ಕವಿಯೇ ಅಚ್ಚರಿಪಡುತ್ತಾನೆ. ಅದೇನೆಂದು ತನ್ನ ಸ್ಫೂರ್ತಿಯ ಸೆಲೆಯಾದ, ತನಗೆ ಕಾವ್ಯವನ್ನು ಹೇಳಿ ಬರೆಸುತ್ತಿರುವ ವಾಗ್ದೇವಿಯ ಮೊರೆಹೋಗುತ್ತಾನೆ. ಸಂದರ್ಭಕ್ಕನುಗುಣವಾದ ವಿಶೇಷಣಗಳೊಂದಿಗೆ, ಅಂತಹದೊಂದು ಸನ್ನಿವೇಶ ‘ದಶಾನನ ಸ್ವಪ್ನಸಿದ್ಧಿ’ ಸಂಚಿಕೆಯ ಆರಂಭದಲ್ಲಿ ಬಂದಿದೆ.

ಪೇಳ್ ತಾಯೆ
ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ
ಮಹತ್ ಪೂಜೆಯಂ ಶರ್ವಮಂದಿರದೊಳೇಕಾಂಗಿ?
ಜ್ಞಾನಾಧಿದೇವಿ ನೀಂ, ಮೇಣ್ ವಿಜ್ಞಾನ ನೇತ್ರಿ:
ಹೊರನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ
ಲೌಕಿಕಾತೀತಮಹ ನಿತ್ಯಸತ್ಯಂಗಳಂ
ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ
ಸೂಕ್ಷ್ಮಮಂ, ಕೋಶಕೋಶಗಳಿತರ ಕಾಲಮಂ
ದೇಶಮಂ, ಕಾರಣವನಂತೆ ಕಾರಣದಾಚೆ
ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ
ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾತೀತೆ! (ದಶಾನನ ಸ್ವಪ್ನಸಿದ್ಧಿ, ಸಾಲುಗಳು: ೫-೧೫)

ಸರಸ್ವತಿಯು ಜ್ಞಾನದೇವಿ, ವಿಜ್ಞಾನ ನೇತ್ರಿ, ವಿಶ್ವಾಂತರಾತ್ಮೆಯಾದ್ದರಿಂದ ಕಾಲ, ದೇಶ, ಕಾರಣ, ಕಾರಣದಾಚೆಗಿನ ಲೀಲಾ, ಉದ್ದೇಶ ಇವೆಲ್ಲವನ್ನೂ ತೋರಿಸಬಲ್ಲಳು. ‘ಅವಿದ್ಯೆ, ವಿದ್ಯೆ ವಿದ್ಯಾತೀತೆ’ ಎಂಬ ಮಾತಂತೂ ಸರಸ್ವತಿಯ ಅಲೌಕಿಕ ಪ್ರತಿಮೆಗೆ ತೊಡಿಸಿದ ನುಡಿಯಾಭರಣವಾಗಿದೆ.

ಕುವೆಂಪು ಅವರ ಸರಸ್ವತಿಯ ವಿರಾಡ್‌ದರ್ಶನವಾಗುವುದು, ಋತಚಿತ್ ಸ್ವರೂಪಿಣಿಯರಾದ ಶಿವೆ, ಸರಸ್ವತಿ ಮತ್ತು ಲಕ್ಷ್ಮಿಯರನ್ನು ವಂದಿಸಿ ಪ್ರಾರಂಭಿಸುವ ‘ಅಭಿಷೇಕ ವಿರಾಡ್‌ದರ್ಶನ’ವೆಂಬ ಕೊನೆಯ ಸಂಚಿಕೆಯಲ್ಲಿ. ಶ್ರೀರಾಮ ಪಟ್ಟಾಭಿಷೇಕದ ವಿಶ್ವರೂಪವನ್ನು ತೋರಿಸಲ್ ಸ್ವತಃ ‘ಅನಾದಿಕವಿ’ಯೇ ಬರುತ್ತಾನೆ. ಇದುವರೆಗೂ ‘ನೀನೊರೆದುದನು ನಾನು ಬರೆವೆನು’ ಎನ್ನುತ್ತಿದ್ದ ಕವಿ, ಆ ಸೃಷ್ಟಿಪ್ರಜ್ಞೆಗೆ ‘ಅನಾದಿಕವಿ’ ಎಂಬ ವಿಶೇಷಣವನ್ನು ಇಲ್ಲಿ ತಂದಿದ್ದಾರೆ. ಪುಲ್ಲಿಂಗವಾಚಿಯಾದರೂ, ‘ಅನಾದಿಕವಿ’ ಕಲ್ಪನೆ ಸರಸ್ವತೀ ತತ್ವದ ವಿಸ್ತೃತ ರೂಪವೇ ಆಗಿದೆ. ‘ನೀನಾರು?’ ಎಂದ ಕವಿಗೆ,

ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು! (ಅಭಿಷೇಕ ವಿರಾಡ್‌ದರ್ಶನಂ, ಸಾಲುಗಳು: ೩೪-೩೮)

ಇಲ್ಲಿ ವ್ಯಕ್ತವಾಗುವ ಸರಸ್ವತಿ ಸ್ವರೂಪ ಕಾಲದೇಶಗಳನ್ನು ಮೀರಿದ್ದು. ಕಾವ್ಯದುದ್ದಕ್ಕೂ, ಸರಸ್ವತಿ ಮತ್ತು ಸರಸ್ವತಿಯ ವೀಣೆಯನ್ನು ಕಾವ್ಯಾವೇಶಕ್ಕಾಗಿ ಬೇಡಿದ ಕವಿಪ್ರತಿಭೆ, ಎಲ್ಲ ಕವಿಗಳಿಗೂ ಮಾತೃರೂಪವಾದ ಪ್ರತಿಭಾಸ್ವರೂಪವನ್ನು ಸರಸ್ವತಿಗೆ ನಿರ್ಮಿಸಿದೆ. ಈ ಸರಸ್ವತಿಯು ಸರ್ವಭಾಷಾಮಯೀ ಮಾತ್ರವಲ್ಲ. ವಿಶ್ವಮಾತೆಯೂ ಹೌದು. ಕಾವ್ಯಾರಂಭದಲ್ಲಿ ಬಂದ ‘ವಿಶ್ವವಾಣ’ ಎಂಬ ಒಂದು ಮಾತು, ವೇದವಾಗುವುದು ಈ ಕೊನೆಯ ಸಂಚಿಕೆಯಲ್ಲಿ. ಸರಸ್ವತಿಯು ನುಡಿಸಿದ್ದನ್ನಷ್ಟೇ ಸರಸ್ವತಿಯ ಬಾಹುರೂಪರಾದ ಕವಿಗಳು ಬರೆಯುವುದು. ಆದ್ದರಿಂದ ಕಾವ್ಯವೆಂಬುದು ಸರಸ್ವತಿಯ ಕೃತಿ, ಭಗವಂತನ ಅವತಾರವಾಗುತ್ತದೆ. ‘ಕೃತಿರೂಪದಿಂದಲೂ ಭಗವಂತನ ಅವತಾರವಾಗುತ್ತದೆ’ ಎಂಬ ಮಾತಿಗೆ ಅನುಗುಣವಾಗಿಯೇ, ಕವಿ ತಾನು ಬರೆದ ‘ಕೃತಿಸರಸ್ವತಿ’ಗೆ ತಾನೇ ಮಣಿಯುತ್ತಾನೆ.

ಅಂದ ಹಾಗೆ ‘ನುಡಿರಾಣಿಯ ಗುಡಿ ಕುವೆಂಪು’ ಎಂಬ ಸಾಲು ಕುವೆಂಪು ಅವರ ‘ಕುವೆಂಪು’ ಎಂಬ ಕವಿತೆಯದ್ದು!

Thursday, January 22, 2015

ಭಗವಂತನ ನಿರಂಕುಶೇಚ್ಛೆಯ ವಿರುದ್ಧ ದಂಗೆಯೆದ್ದ ಬಾಲಕ!

ಒಂದು ಬೈಗು. ಸ್ಕೂಲಿನಿಂದ ಮನೆಗೆ ಬಂದು ಇತರರೊಡನೆ ತಿಂಡಿ ತಿಂದೆ. ಹೊರಗೆ ಅಲೆಯಲು ಹೋಗುವ ಮನಸ್ಸು ಕುದಿಯತೊಡಗಿತು. ಜೊತೆಯ ಸಹಪಾಠಿಗಳು ಯಾರೊಬ್ಬರೂ ನನ್ನೊಡನೆ ಬರಲೊಪ್ಪಲಿಲ್ಲ. ನಾನೊಬ್ಬನೆ ಹೊರಟೆ ರಬ್ಬರು ಬಿಲ್ಲನ್ನು ಕೈಯಲ್ಲಿ ಹಿಡಿದು, ಕಲ್ಲಿನ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, (ಆ ಕಲ್ಲಿನ ಚೀಲ ಅದರ ಹಿಂದಿನ ಅವತಾರದಲ್ಲಿ ನನ್ನದೆ ಇಜಾರದ ಒಂದು ಕಾಲಾಗಿತ್ತು. ಇಜಾರ ಮಂಡಿಯ ಹತ್ತಿರ ಸವೆದು ತೂತು ಬೀಳಲು ಅದನ್ನು ಅಲ್ಲಿಗೇ, ಹರಿದು ಚಡ್ಡಿಯನ್ನಾಗಿ ಮಾಡಿ ಹಾಕಿಕೊಂಡಿದ್ದೆ. ಉಳಿದ ಕತ್ತರಿಸಿದ ಎರಡು ಕಾಲಿನ ಅರ್ಧ ಭಾಗಗಳನ್ನು ಒಂದು ತುದಿ ಹೊಲಿದು ’ಚಾಟರ್ ಬಿಲ್ಲಿ’ಗೆ ಉಪಯೋಗಿಸಲು ಹರಳುಕಲ್ಲು ತುಂಬುವ ಚೀಲಗಳನ್ನಾಗಿಸಿದ್ದೆ. ಭಾರವಾಗಿದ್ದ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಘುವಂತೆ ನೇಲುಹಗ್ಗಗಳನ್ನು ಪಟ್ಟಿಯಾಗಿ ಹೊಲೆದಿದ್ದೆ.)

ಸೂರ್ಯ ಆಗತಾನೆ ಪಶ್ಚಿಮದಿಕ್ಕಿನ ಕಾಡುಗಳಲ್ಲಿ ಕಣ್ಮರೆಯಾಗಿದ್ದ. ಸಂಧ್ಯಾರಾಗ ಹಸುರನ್ನೆಲ್ಲ ಮೀಯಿಸಿತ್ತು. ಗೂಡುಗೊತ್ತುಗಳೀಗೆ ಹಿಂತಿರುಗುತ್ತಿದ್ದ ಹಕ್ಕಿಗಳ ತರತರಹ ಉಲಿ ಬನದ ನೀರವತೆಗೆ ರಾಗರೋಮಾಂಚನವೀಯುತ್ತಿತ್ತು. ಅದು ಹೊರತು ಬೇರೆ ಯಾವ ಸದ್ದೂ ಇರಲಿಲ್ಲ. ನಾನು ಹೋಗುತ್ತಿದ್ದ ಕಾಡು ಒಂದು ಪೃಶಾಂತ ವಾತಾವರಣದಿಂದ ಧ್ಯಾನಮಯವಾಗಿತ್ತು. ನನ್ನ ಕೈ ಬಿಲ್ಲನ್ನು ಹಿಡಿದಿದ್ದರೂ, ಕಣ್ಣು ಗುರಿಯನ್ನು ಹುಡುಕುವ ಕಾರ್ಯದಲ್ಲಿ ಮಗ್ನವಾದಂತೆಯಿದ್ದರೂ ಮನಸ್ಸು ಏನೇನನ್ನೊ ಮೆಲುಕುಹಾಕುತ್ತಿತ್ತು. ಒಮ್ಮೊಮ್ಮೆ ಅದು ತುಂಬ ಗಹನವೂ ಉನ್ನತವೂ ಆದ ವಿಚಾರಗಳ ಕಡೆಗೂ ಏರಿ ಇಳಿಯುತ್ತಿತ್ತು. ಪಾಪ, ಪುಣ್ಯ, ದೇವರು, ಜಗತ್ತು, ಸೃಷ್ಟಿ, ವಿಧಿ, ಕಾಡು, ಬೆಟ್ಟ, ಸೂರ್ಯ, ಚಂದ್ರ -ಹೀಗೆಲ್ಲ ಅಲೆಯುತ್ತಿತ್ತು ಆಲೋಚನೆ, ಅಥವಾ ಅದರ ಅಂಬೆಗಾಲಿಕ್ಕುವ ಒಂದು ಮನಃಸ್ಥಿತಿ!
ಅಷ್ಟರಲ್ಲಿ ಬಾಯಲ್ಲಿದ್ದ ಪೆಪ್ಪರಮೆಂಟು ಕರಗಿ ಖರ್ಚಾಗಿತ್ತು. ಮತ್ತೆ ಕೈ ತನಗೆ ತಾನೆ ಸ್ವಯಂಚಾಲಿತವಾಗಿ ಜೇಬಿನೊಳಗೆ ತೂರಿ ಹುಡುಕಿತು. ಇಲ್ಲ, ಪೆಪ್ಪರಮೆಂಟೆಲ್ಲ ಮುಗಿದು ಹೋಗಿವೆ! ಆದರೆ, ತಿಂಡಿಯ ಕೊಸರಾಗಿ ಬಂದಿದ್ದ ಒಂದು ಬಾಳೆಯ ಹಣ್ಣು ಜೇಬಿನ ಆಶ್ರಯ ಪಡೆದಿತ್ತು. ಕೈ ಅದನ್ನು ಈಚೆಗೆ ಎಳೆಯಿತು. ಸಿಪ್ಪೆಯನ್ನು ಸ್ವಲ್ಪಸ್ವಲ್ಪವಾಗಿ ಸುಲಿಯುತ್ತಾ ಅಷ್ಟಷ್ಟೆ ಭಾಗವನ್ನು ಕಚ್ಚಿಕಚ್ಚಿ ತಿನ್ನತೊಡಗಿತು ಬಾಯಿ. ಇಷ್ಟೆಲ್ಲ ಅನೈಚ್ಛಿಕವೊ ಎಂಬಂತಹ ಕ್ರಿಯೆ ನಡೆಯುತ್ತಿದ್ದಾಗ ಕಾಲುಗಳು ನಡೆಯುವ ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದುವು; ಕಣ್ಣುಗಳು ಪೊದೆ ಮರಗಳಲ್ಲಿ ದಿಟ್ಟಿನೆಟ್ಟು ಹುಡುಕುತ್ತಲೆ ಇದ್ದುವು; ಮನಸ್ಸೂ ತನ್ನ ಪಾಡಿಗೆ ತಾನು ಚಿಂತನ ಕಾರ್ಯದಲ್ಲಿ ತೊಡಗಿಯೆ ಇತ್ತು:
ಈ ಕಾಡು, ಈ ಗುಡ್ಡಸಾಲು, ಈ ಮೋಡ, ಈ ಆಕಾಶ ಇದನ್ನೆಲ್ಲ ಮಾಡಿದ್ದಾನಲ್ಲಾ ದೇವರು, ಅವನು ಎಂತಹ ಅದ್ಭುತ ಶಕ್ತಶಾಲಿಯಾಗಿರಬೇಕು? ಬಾವಿಸುತ್ತೇನೆ. ಎಲ್ಲ ಅವನ ಇಚ್ಛೆಯಂತೆಯೆ ಆಗಿದೆ. ಅವನ ಇಚ್ಛೆಗೆ ಎಲ್ಲವೂ ಅಧೀನ. ಈ ಪೊದೆಯ ಬಳಿ ಹಸುರಿನ ಮೇಲೆ ಅರ್ಧ ಕಾಣಿಸಿಕೊಂಡು ಇಲ್ಲಿ ಬಿದ್ದಿರುವ ಈ ಕಲ್ಲುಗುಂಡು ಇಲ್ಲಿಯೇ ಹೀಗೆಯೇ ಬಿದ್ದಿರಬೇಕೆಂದು ದೇವರು ನಿಯಮಿಸಿದ್ದಾನೆ. ಆದ್ದರಿಂದಲೆ ಅದು ಇಲ್ಲಿಯೇ ಬಿದ್ದಿದೆ, ಇಲ್ಲಿಂದ ಹಂದುವುದಿಲ್ಲ. ಎಲ್ಲ ಭಗವಂತನ ವಜ್ರನಿಯಮಕ್ಕೆ ಅಧೀನ. ಸ್ವತಂತ್ರೇಚ್ಛೆ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ -ಇದ್ದಕ್ಕಿದ್ದ ಹಾಗೆ ಹುಡುಗನ ಮನಸ್ಸು ಸೆರೆಯಲ್ಲಿ ಸಿಕ್ಕಿಬಿದ್ದ ಸಿಂಹದಂತಾಗಿ ಕಂಬಿಗಳನ್ನೆಲ್ಲ ಕಿತ್ತು ಬಿಡುವಂತೆ ನುಗ್ಗತೊಡಗಿತು. ಛೆಃ ಇದೆಂತಹ ದಾಸ್ಯ?
ಅಷ್ಟು ಹೊತ್ತಿಗೆ ಬಾಳೆಯಹಣ್ಣು ತಿಂದು ಮುಗಿದು, ಸಿಪ್ಪೆ ಮಾತ್ರ ಕೈಯಲ್ಲಿತ್ತು. ಕೈ ಯಾಂತ್ರಿಕವಾಗಿ ಅದನ್ನು ಬಲವಾಗಿ ಎಸೆಯಿತು. ಅದು ತುಸುವೆ ದೂರದಲ್ಲಿದ್ದ ಒಂದು ಮುಳ್ಳುಪೊದೆಯ ಹರೆಗೆ ತಗುಲಿ ಒಂದೆರಡು ಕ್ಷಣ ಅಲ್ಲಿ ನೇತಾಡಿ, ಕೆಳಗೆ ನೆಲದ ಹಸುರಿಗೆ ಬಿತ್ತು. ಕಾಲು ತನ್ನ ಪಾಡಿಗೆ ತಾನು ಮುಂದುವರಿಯಿತು. ಹತ್ತಿಪ್ಪತ್ತು ಮಾರು.
ಭಗವಂತನ ನಿರಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದಿದ್ದ ನನ್ನ ಮನಸ್ಸು, ಒಡನೆಯೆ, ಆಗತಾನೆ ನಡೆದಿದ್ದ ನಿದರ್ಶನವನ್ನು ಆಶ್ರಯಿಸಿ ಪ್ರತಿಭಟಿಸಲು ಹೆಡೆಯೆತ್ತಿ ನಿಂತಿತ್ತು.
ನೋಡಿದೆಯಾ ದೇವರ ಇಚ್ಛೆಯನ್ನು ಉಲ್ಲಂಘಿಸಲು ಯಾರಿಗೂ ಎಂದಿಗೂ ಸಾಧ್ಯವಿಲ್ಲ. ಈ ಬಾಳೆಹಣ್ಣಿನ ಸಿಪ್ಪೆ ಇಲ್ಲಿಯೇ ಇಂಥ ಜಾಗದಲ್ಲಿಯೆ ಬೀಳಬೇಕೆಂದು ಅವನು ನಿಯಮಿಸಿಬಿಟ್ಟಿದ್ದ. ಆದ್ದರಿಂದ ಅದು ಅಲ್ಲಿಯೇ ಬೀಳಬೇಕಾಯಿತು. ಅದು ಯಾರ ತೋಟದ್ದೊ? ಯಾರು ಯಾರಿಗೆ ಮಾರಿದ್ದೊ? ಅದನ್ನು ನಮ್ಮ ಮನೆಯವರು ತಂದು, ನೀನು ತಿಂದು, ಅದರ ಸಿಪ್ಪೆಯನ್ನು ಇಲ್ಲಿಗೇ ತಂದು ಹಾಕಬೇಕಾಯಿತು. ಆ ವಿಧಿಯ ಇಚ್ಛೆಗೆ ನೀನೆ ವಾಹಕ ಗುಲಾಮ! ನೀನು ಮನೆಯಲ್ಲಿಯೇ ಅದನ್ನು ತಿಂದು ಅಲ್ಲಿಯೆ ಎಸೆಯಬಹುದಾಗಿತ್ತು. ಆದರೆ ಅದರ, ಆ ನೂರಾರು ಗೊನೆಗಳಲ್ಲಿ ಒಂದು ಗೊನೆಯ ನೂರಾರು ಹಣ್ಣುಗಳಲ್ಲಿ ಒಂದು ಯಃಕಶ್ಚಿತ್ ಹಣ್ಣಿನ ಆ ಸಿಪ್ಪೆ ಇಲ್ಲಿಯೇ ಬೀಳಬೇಕೆಂದು ವಿಧಿ ಇಚ್ಛಿಸಿದ್ದುದರಿಂದ ನೀನು ಇಂದು ಸಂಜೆ ಶಾಲೆಯಿಂದ ಬಂದು ತಿಂಡಿಯ ನೆವದಿಂದ ಅದನ್ನು ಇಲ್ಲಿಗೆ ತಂದು ತಿಂದು ಇಲ್ಲಿಯೆ ಹಾಕಬೇಕಾಯಿತು. ಹಾಗಿದೆ ಭಗವಂತನ ಅಲುಗಾಡದ ಕಟ್ಟಳೆ.
ಹುಡುಗನ ಮನಸ್ಸು ರೇಗಿತು. ನಾನೇನು ವಿಧಿಯ ಗುಲಾಮನಲ್ಲ. ವಿಧಿಯ ಇಚ್ಛೆಗೆ ಭಂಗ ತರಲೇಬೇಕು.
ಸೂರ್ಯ ಚಂದ್ರ ಪೃಥ್ವಿ ನಕ್ಷತ್ರಾದಿಗಳನ್ನು ಸೃಷ್ಟಿಸಿ ನಿಯಮ ಬಂಧನದಲ್ಲಿಟ್ಟಿರುವ ಆ ದುಷ್ಟವಿಧಿಯನ್ನು ಭಂಗಿಸುವ ದೃಢಛಲದಿಂದ, ಸಿಪ್ಪೆಯನ್ನೆಸೆದು ಅಷ್ಟು ದೂರ ಹೋಗಿದ್ದ ನಾನು, ಮತ್ತೆ ಹಿಂದಕ್ಕೆ ಬಂದೆ! ಸಿಪ್ಪೆ ಬಿದ್ದಿದ್ದ ಸ್ಥಳಕ್ಕೆ ಧಾವಿಸಿ ಹುಡುಕಿದೆ. ಅದು ಹಸರು ಹುಲ್ಲಿನಲ್ಲಿ ಅಡಗಿ ಬಿದ್ದಿತ್ತು. (ಪಾಪ! ಆ ಸೆರೆಮನೆಯ ಭಯಂಕರ ಶಿಕ್ಷೆಗೆ ಗೋಳಿಡುತ್ತಾ!) ಸೆರೆ ಬಿಡಿಸುವವನಂತೆ ಅದನ್ನು ಎತ್ತಿಕೊಂಡೆ! ಮತ್ತೆ ಸ್ವಲ್ಪ ದೂರ ನಡೆದು ಅದನ್ನು ಬೇರೊಂದು ಕಡೆಗೆ ಎಸೆದು, ವಿಜಯಿಯ ಹೆಮ್ಮೆಯಿಂದ ಮುಂದುವರಿದೆ.
ಆದರೆ ಆ ಹೆಮ್ಮೆ ಅಲ್ಪಾಯುವಾಗಿ ಬಿಟ್ಟಿತು! ಹಾಳು ವಿಧಿ ಮೂದಲಿಸತೊಡಗಿತು. ಆ ಬಾಳೆಹಣ್ಣಿನ ಸಿಪ್ಪೆ ನಾನು ಮತ್ತೆ ಎಸೆದು ಈಗ ಅದು ಬಿದ್ದಿರುವ ಜಾಗದಲ್ಲಿಯೆ ಅದು ಬೀಳಬೇಕೆಂದು ವಿಧಿಯ ಇಚ್ಛೆಯಿದ್ದುದರಿಂದಲೆ ನಾನು ಪುನಃ ಅದರ ದಾಸನಂತೆ ಹಿಂದಕ್ಕೆ ಹೋಗಿ ಅದನ್ನು ತಂದು ಇಲ್ಲಿ ಎಸೆಯಬೇಕಾಯಿತಲ್ಲಾ! ನನಗೆ ತಲೆ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತು. ನನ್ನ ಅಸಹಾಯಕತೆಗೆ ನಾನೆ ದುಃಖಿಸಿ ಕಣ್ಣು ಹನಿತುಂಬಿತು. ಸೋಲಿಗೂ ಅವಮಾನಕ್ಕೂ ಅಳು ಬರುವಂತಾಯ್ತು. ಈ ಬಿದ್ದಿರುವ ಜಾಗದಿಂದಲೂ ಅದನ್ನು ತೆಗೆದು ಬೇರೆ ಕಡೆಗೆ ಬಿಸಾಡಬೇಕು ಎಂದೆನಿಸಿತು. ಆದರೆ ಏನು ಪ್ರಯೋಜನ? ಮತ್ತೆ ವಿಧಿಯ ದಾಸನಾಗಿಯೆ ಕೆಲಸ ಮಾಡಿದಂತಾಗುತ್ತದೆ. ಥೂ! ಹಾಳು ವಿಧಿಯ ಬಾಯಿಗೆ ಮಣ್ಣು ಹಾಕಲಿ! ಏನಾದರೂ ಸಾಯಲಿ! ನನಗೇಕೆ? ಎಂದೆಲ್ಲ ಶಪಿಸಿಬಿಟ್ಟು, ಮನಸ್ಸಿನಿಂದ ಅದನ್ನು ತಳ್ಳಿ, ರಬ್ಬರುಬಿಲ್ಲಿಗೆ ಕಲ್ಲುಹರಳು ಹಾಕಿಕೊಂಡು, ಬೇಗಬೇಗೆ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳಲು ಧಾವಿಸಿದೆ! ಹೊತ್ತುಮೀರಿ ಹೋದರೆ, ಹಾಳುವಿಧಿ, ಮನೆ ಮೇಷ್ಟರ ಕೈಲಿ ಛಡಿ ಏಟು ಹಾಖಿಸುವ ಹುನಾರು ಮಾಡಿದೆಯೋ ಏನೋ ಯಾಋಉ ಬಲ್ಲರು?
***
ಬೆಟ್ಟಕಾಡುಗಳಲ್ಲಿ, ತಿರುಗಾಡುವ ನನ್ನ ಆಜನ್ಮಚಪಲತೆಗೆ ’ಪ್ರಕೃತಿ ಪ್ರೇಮ’ ’ನಿಸರ್ಗಸೌಂದಾರ್ಯಆಭಿರುಚಿ’ ಎಂದು ನಾಮಕರಣ ಮಾಡಿಸಿಕೊಳ್ಳುವಷ್ಟು ಯೋಗ್ಯತೆಗೆ ಅರ್ಹವಾಗಿತ್ತೆಂದು ನಾನು ನಂಬಲಾರೆ. ಅದು ಒಂದು ತರಹ ಐಂದ್ರಿಯ ಸುಖಾನುಭವವಾಗಿತ್ತೆ ಹೊರತು ಬುದ್ಧಿಪೂರ್ವಕವಾದ ಸೌಂದರ್ಯಪ್ರಜ್ಞೆಯ ಆಸ್ವಾದವಾಗಿರಲಿಲ್ಲ. ಹಸಿದ ಪ್ರಾಣಿಗೆ ಹಸುರು ಮೇಯುವಾಗ ಒಂದು ಸುಖಾನುಭವವಾಗುತ್ತದೆ; ಅದಕ್ಕೆ ಹಸುರಿನ ಬಣ್ಣದ ಚೆಲುವಾಗಲಿ ಅದರ ಕೋಮಲತೆಯಾಗಲಿ ಬುದ್ಧಿಗಮ್ಯವಲ್ಲ. ಹಸುರಿನ ಚೆಲುವೂ ಕೋಮಲತೆಯೂ ಹುಲ್ಲು ಮೇಯುವ ಪ್ರಾಣಿಯ ಅಂತಃಪ್ರಜ್ಞೆಗೆ ಸಂಪೂರ್ಣ ಅಗಮ್ಯವೇನಲ್ಲ. ಸಂವೇದನೆ ಸಂಪೂರ್ಣ ಅಗಮ್ಯವಾಗಿ ಇದ್ದಿದ್ದರೆ ಅದು ಹುಲ್ಲು ಅಷ್ಟು ಹಸನಾಗಿ ಬೆಳೆದಿರದಿದ್ದ ಸ್ಥಳವನ್ನು ತಿರಸ್ಕರಿಸಿ ಈ ’ಸುಂದರ ಕೋಮಲ’ ಸ್ಥಾನಕ್ಕೇ ನುಗ್ಗಿ ಬರುತ್ತಿರಲಿಲ್ಲ. ಆದರೆ ಈ ಸೌಂದರ್ಯ ಈ ಕೋಮಲತೆಗೆಳು ಆ ಪ್ರಾಣಿಗೆ ತನ್ನ ಆಹಾರದ ಸಾರದ ಮತ್ತು ಸ್ವಾದುತ್ವದ ಅಂಗಗಳಾಗಿ ಇಂದ್ರಿಯಗೋಚರವಾಗಿ ಅದನ್ನು ಆಹ್ವಾನಿಸುತ್ತವೆ. ಅದು ’ಅಭಿರುಚಿ’ಗಿಂತಲೂ ಹೆಚ್ಚಾಗಿ ’ರುಚಿ’ಯಾಗಿರುತ್ತದೆ. ಅಂತಹ ಅಬುದ್ಧಿಪೂರ್ವಕವಾದ ಜೀವಪೌಷ್ಠಿಕ ಸಾಮಗ್ರಿಯಾಗಿತ್ತೆಂದು ತೋರುತ್ತದೆ, ನನಗೆ ಅಂದು ಆ ’ಪ್ರಕತಿ ಸೌಂದರ್ಯ!’ ನಾನು ’ಪ್ರಕೃತಿ’ಯನ್ನು ಸವಿಯುತ್ತಿದ್ದೆ ಎನ್ನುವುದಕ್ಕೆ ಬದಲಾಗಿ ’ಪ್ರಕೃತಿ’ಯೆ ನನ್ನನ್ನು ಸವಿಯುತ್ತಿದ್ದಳು ಎನ್ನಬಹುದಾಗಿತ್ತೇನೊ?! ಎಂತೂ ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲಚೇತನ ಮರಿಮೀನಾಗಿ ಓಲಾಡಿ ತೇಲಾಡುತ್ತಿತ್ತು.

Tuesday, January 20, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ

ಆದಿಕವಿ ಸಂಭೂತಿ'ಯಿಂದ.....

ನನ್ನ ಅಕ್ಷರಾಭ್ಯಾಸಕ್ಕೆ ಅಗೆಯಾದುದು ಹಿಂದೆ ವರ್ಣಿಸಿದಂತಹ ಯಾವುದೊ ಒಂದು ನವರಾತ್ರಿಯ ಸರಸ್ವತೀ ಪೂಜೆಯ ದಿನದಂದು ಎಂದು ತೋರುತ್ತದೆ. ಮಿಂದು ಮಡಿಯಾದ ಮೇಲೆ ಉಡಿದಾರ, ಲಂಗೋಟಿ, ಅಡ್ಡಪಂಚೆಡಗಳ ದೀಕ್ಷೆತೊಟ್ಟು, ಮರಳ ಮೇಲೆ ಅ ಆ ಬರೆದು, ನಡುಬೆರಳ ಮೇಲೆ ತೋರುಬೆರಳನ್ನು ಇಡುವುದು ಹೇಗೆ ಎಂಬುದನ್ನು ತೋರಿಸಿ, ಕಲಿಸಿ, ಅಕ್ಷರ ತಿದ್ದಲು ಹೇಳಿದ್ದರು. ಅದುವರೆಗೆ ಉಡಿದಾರ ಹಾಕುವುದಾಗಲಿ, ಲಂಗೋಟಿ ಕಟ್ಟುವುದಾಗಲಿ, ಅಡ್ಡಪಂಚೆ ಮುಂಡುಸುತ್ತಿ ಉಡುವುದಾಗಲಿ ನನ್ನ ಇಷ್ಟ ಮತ್ತು ಅನುಕೂಲದ ವಿಷಯವಾಗಿದ್ದುದು ಅಂದಿನಿಂದ ಸಾಧಿಸಲೇಬೇಕಾದ 'ನಿಷ್ಠೆ'ಯ ಕರ್ತವ್ಯವಾಗಿಬಿಟ್ಟಿತು! ಆಗತಾನೆ ಸಮಗ್ರ ಭರತಖಂಡದಲ್ಲಿ ಸುಸ್ಥಾಪಿತವಾದ ಬ್ರಿಟಿಷ್ ಸಾಮ್ರಾಜ್ಯ ಚೆನ್ನಾಗಿ ಬೇರು ಬಿಡಲು ತೊಡಗಿದ್ದ ಕಾಲ. ಆಡಳಿತ ವ್ಯವಸ್ಥೆಯನ್ನು ಕ್ರಮಗೊಳಿಸಿದ ಆಳರಸರು ಅದನ್ನು ಸುಗಮವಾಗಿ ತಮ್ಮ ಇಚ್ಛೆಯಂತೆ ನಡೆಸಿಕೊಂಡು ಹೋಗಲು ನಮ್ಮವರನ್ನೆ ದುಡಿವಾಳುಗಳನ್ನಾಗಿ ಮಾಡಲು ನಿರ್ಧರಿಸಿ, ಅದಕ್ಕೆ ಅನುಕೂಲವೂ ಅನುರೂಪವೂ ಆದ ವಿದ್ಯಾಭ್ಯಾಸ ಪದ್ಧತಿಯನ್ನು ಜಾರಿಗೆ ತಂದರು. ಅದರಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಬಹುಕಾಲ ಪರಿಣಾಮಕಾರಿಯಾದದ್ದು - ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯನ್ನೆ ಶಿಕ್ಷಣ ಮಾಧ್ಯಮವನ್ನಾಗಿ ಅಂಗೀಕರಿಸಿದ್ದು. ನನಗೆ ಬುದ್ಧಿ ತಿಳಿಯುವ ಹೊತ್ತಿಗಾಗಲೆ ನಮ್ಮ ಮನೆ ಕುಪ್ಪಳಿಯಿಂದಲೂ ವಾಟಗಾರು ಮನೆಯಿಂದಲೂ ದೇವಂಗಿ ಮನೆಯಿಂದಲೂ ಹೊಸ ವಿಧ್ಯಾಭ್ಯಾಸಕ್ಕಾಗಿ ತರುಣರು ಹೊರಗಣ ದೂರದೂರುಗಳಿಗೆ ಹೋಗತೊಡಗಿದ್ದರು; ಮತ್ತು ಹೋಗಿ, ವಿದ್ಯಾಭ್ಯಾಸವನ್ನು ನಿಲ್ಲಿಸಿ, ಹಿಂತಿರುತ್ತಯೂ ಇದ್ದರು. ಆ ಮಲೆನಾಡಿನ ಕಾಡಿನ ಮೂಲೆಯ ಕೊಂಪೆಯಿಂದ ಹುಡುಗರು ಮೈಸೂರಿಗೆ ಆಗಿನ ಕಾಲದಲ್ಲಿ ವಿದ್ಯಾರ್ಜನೆಗೆ ಹೋಗಿದ್ದರೆಂದರೆ ಅಚ್ಚರಿಯಾಗುತ್ತದೆ. ಆದರೆ ಅವರು ಹಾಗೆ ದೂರ ಹೋಗಲು ಸಾಧ್ಯವಾಗಿದ್ದುದೂ, ಹಾಗೆ ಹೋಗುವುದಕ್ಕೆ ಪ್ರಚೋದನೆ ಪ್ರೋತ್ಸಾಹ ಸಹಾಯಗಳು ದೊರಕಿದುದೂ ಕ್ರೈಸ್ತ ಮಿಷನರಿಗಳಿಂದ ಎಂಬುದನ್ನು ನೆನೆದರೆ ನಮ್ಮ ಆಶ್ಚರ್ಯ ವಿಷಾದಾಂಚಿತವೂ ಆಗುವುದರಲ್ಲಿ ಸಂದೇಹವಿಲ್ಲ. ಅದುವರೆಗೆ ನಮ್ಮ ಉಪ್ಪರಿಗೆಯ ಐಗಳ ಶಾಲೆಗೆ ಕಲಿಸಲು ಬರುತ್ತಿದ್ದವರು ಹೆಚ್ಚಾಗಿ ಕನ್ನಡ ಜಿಲ್ಲೆಯವರೆ. ಅವರ ವಿದ್ಯೆಯ ಮಟ್ಟ ಇರುತ್ತಿದ್ದುದೂ ಅಷ್ಟರಲ್ಲಿಯೆ. ಹುಡುಗರಿಗೆ ಅಕ್ಷರ ಕಲಿಸಿ, ಕನ್ನಡದಲ್ಲಿ ತುಸು ಬರೆಯಲೂ ಓದಲೂ ಹೇಳಿಕೊಟ್ಟರೆ ಮುಗಿಯಿತು. ಆದರೆ ಇನ್ನು ಮುಂದೆ ಕನ್ನಡ ಸಾಕೆ? ಇಂಗ್ಲಿಷಿನವರ ಆಳ್ವಿಕೆಯಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಆದೀತೆ? ಆದರೆ ಇಂಗ್ಲಿಷ್ ಹೇಳಿಕೊಡುವವರಾರು? ದೊರೆಗಳ ಭಾಷೆಯನ್ನು?

ಆ ಹಳ್ಳಿಗರು ಇನ್ನೆಷ್ಟು ವರ್ಷಗಳೆ ಕಾಯಬೇಕಿತ್ತೊ ಇಂಗ್ಲಿಷ್ ಕಲಿಯಲು? ಆದರೆ ಮತಪ್ರಚಾರ ಮತ್ತು ಮತಾಂತರ ಉದ್ದೇಶವೆ ಪ್ರಧಾನವಾಗಿದ್ದ ಕ್ರೈಸ್ತ ಮಿಷನರಿಗಳು ಬ್ರಿಟಿಷ್ ಸಾಮ್ರಾಜ್ಯದ ಮತ್ತು ಕ್ರೈಸ್ತಧರ್ಮದ ಮುಂಚೂಣಿಯ ದಳಗಳಾಗಿ ಸಹ್ಯಾದ್ರಿಯ ಕಾಡುಹಳ್ಳಿಗಳಿಗೂ ಕಾಲಿಟ್ಟರು. ಸ್ಕೂಲು ಆಸ್ಪತ್ರೆಗಳನ್ನು ತೆರೆದರು; ಸಾಧ್ಯವಾದಷ್ಟು ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು, ಕನ್ನಡ ಭಾಷೆಗೆ ಪರಿವರ್ತಿತವಾಗಿದ್ದ ಬೈಬಲ್ಲನ್ನೂ ಮ್ಯಾಥ್ಯೂ ಮಾರ್ಕ್ ಲ್ಯಾಕ್ ಜಾನ್ ಮೊದಲಾದ ಕ್ರಿಸ್ತಶಿಷ್ಯ ಸಂತರ ಸುವಾರ್ತೆಗಳನ್ನು ಓದಲು ಹಂಚಿದರು. 'ಹಿಂದೂಗಳಾಗಿ ಇದ್ದೂ ಬ್ರಾಹ್ಮಣರಿಂದ ಶೂದ್ರರೆಂದು ತಿರಸ್ಕೃತರಾಗಿ ಮೌಢ್ಯ ಅಜ್ಞಾನಗಳ ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸುತ್ತೇವೆ', 'ನಿಮ್ಮನ್ನು ಬ್ರಾಹ್ಮಣರ ದಾಸ್ಯದಿಂದ ಪಾರು ಮಾಡುತ್ತೇವೆ' ಎಂದು ಮನದಟ್ಟುವಂತೆ ಬೋಧಿಸಿದರು. ಶೂದ್ರರ ಮಕ್ಕಳಿಗೆ ನವೀನ ವಿದ್ಯಾಭ್ಯಾಸ ಮಾಡಿಸಲು ಅವರನ್ನು ಮೈಸೂರು ಬೆಂಗಳೂರುಗಳ ಕ್ರೈಸ್ತ ವಿದ್ಯಾಸಂಸ್ಥೆಗಳಿಗೆ ಕರೆದೊಯ್ದು, ಊಟ ಬಟ್ಟೆ ವಸತಿಗಳನ್ನು ಪುಕ್ಕಟೆಯಾಗಿಯೆ ನೀಡಿ, ಅವರ ತಂದೆ ತಾಯಿ ಬಂಧುಗಳ ಗೌರವ ಕೃತಜ್ಞತೆಗಳನ್ನು ಸೂರೆಹೊಯ್ದರು. ಆ ಎಲ್ಲ ಸ್ನೇಹ ಸೌಹಾರ್ಧ ಸಂಪರ್ಕಗಳ ಪರಿಣಾಮವಾಗಿಯೇ ಕ್ರೈಸ್ತ ಪಾದ್ರಿಗಳು ನಮ್ಮ ಮನೆ ಕುಪ್ಪಳಿಯ ಉಪ್ಪರಿಗೆಯ ವಿದ್ಯಾಸಂಸ್ಥೆಗೂ ಒಬ್ಬ ಇಂಗ್ಲಿಷ್ ಬಲ್ಲ ಕ್ರೈಸ್ತ ತರುಣರನ್ನು ನಮಗೆ ಮೇಷ್ಟರನ್ನಾಗಿ ಕಳಿಸುವ ಕೃಪೆ ಮಾಡಿದರು: ಅವರ ಹೆಸರು ಮೋಸಸ್!
ಮೋಸಸ್ ಅವರ ಆಗಮನದ ತರುವಾಯ 'ಐಗಳು' ಎಂಬ ನಾಮ ಸಂಪೂರ್ಣವಾಗಿ ಅಳಿಸಿಹೋಗಿ, 'ಮೇಷ್ಟರು' ಎಂಬ ಬಿರುದು ಪಟ್ಟಕ್ಕೇರಿತು ಮತ್ತು ಪಾಶ್ಚಾತ್ಯ ಪ್ರಭಾವದ ಆಧುನಿಕ ಪ್ರಪಂಚಕ್ಕೆ ಪ್ರವೇಶಿಸಿತು, ನಮ್ಮ ಉಪ್ಪರಿಗೆಯ ಶಾಲೆ.
ಮಕ್ಕಳೆಲ್ಲ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಬಹು ಸುಲಭವಾಗಿಯೆ ಒಳಗಾದೆವು. ಮೊದಲನೆಯದಾಗಿ, ಅವರ ವೇಷಭೂಷಣ ನಮ್ಮ ಹಳ್ಳಿಗರ ರೀತಿಯಿಂದ ಪ್ರತ್ಯೇಕವಾಗಿದ್ದು, ಪಟ್ಟಣದ ನಾಗರಿಕತೆಯ ಶೋಭೆಯಿಂದ ನಮ್ಮ ಶ್ಲಾಘನೆಗೆ ಒಳಗಾಗಿ ಆಕರ್ಷಣೀಯವಾಗಿತ್ತು. ಅವರು ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಅದೆಷ್ಟು ಬೆಳ್ಳಗೆ? ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ನಾವು ಸಾಮಾನ್ಯವಾಗಿ ನೋಡಿಯೆ ಇರಲಿಲ್ಲ. ನಮ್ಮ ಅಪ್ಪಯ್ಯ ಚಿಕ್ಕಪ್ಪಯ್ಯ ಅಜ್ಜಯ್ಯ ಅವರು ತೀರ್ಥಹಳ್ಳಿಯ ಮಾರ್ವಾಡಿ ಅಂಗಡಿಯಿಂದ ಕೊಂಡು ತರುತ್ತಿದ್ದ ಪಂಚೆಗಳು, ತಂದಾಗ ಮಾತ್ರ ತಕ್ಕಮಟ್ಟಿಗೆ ಬೆಳ್ಳಗಿದ್ದು, ನಮ್ಮ ಕಣ್ಮೆಚ್ಚಿಗೆ ಪಡೆಯುತ್ತಿದ್ದುವು. ಆದರೆ ಉಪಯೋಗಿಸಲು ತೊಡಗಿದ ಮೇಲೆ ಅವು ಎಂದಿಗೂ ಆ ಧವಳಿಮತೆಯನ್ನು ಮತ್ತೆ ಪಡೆಯುತ್ತಿರಲಿಲ್ಲ. ಒಗೆ ಕಂಡಂತೆಲ್ಲ ಅವುಗಳ ಬಣ್ಣಗೇಡು ಮುಂದುವರಿಯುತ್ತಿತ್ತು! ಸಾಬೂನು, ಸೋಪು ಈ ಮಾತುಗಳೂ ಪರಕೀಯವೂ ಅಪರಿಚಿತವೂ ಆಗಿದ್ದ ಆ ಕಾಲದಲ್ಲಿ ಚಬಕಾರ, ಚೌಳು, ಸೀಗೆ, ಅಂಟುವಾಳಕಾಯಿ ಇವುಗಳು ಬಟ್ಟೆಗಳಿಗೆ ಅಚ್ಚ ಬಿಳಿಯ ಸುಣ್ಣದ ಶ್ವೇತತ್ವವನ್ನು ದಯಪಾಲಿಸಲು ಸಮರ್ಥವಾಗುತ್ತಿರಲಿಲ್ಲ. ಆದ್ದರಿಂದಲೆ ಎಂದು ತೋರುತ್ತದೆ, ಬಿಳಿ ಬಟ್ಟೆಯ ವಿಚಾರವಾಗಿ ನಮ್ಮವರಿಗೆ ಒಂದು ತಿರಸ್ಕಾರ ಭಾವನೆ ಹೃದ್ಗತವಾಗಿ ಬಿಟ್ಟಿತು! ಎಟುಕದ ದ್ರಾಕ್ಷಿ ಹುಳಿ ಎಂಬಂತೆ!
ಅವರು ಬೆಳ್ಳನೆಯ ಕಚ್ಚೆಯುಟ್ಟು, ಹೊಸ ನಮೂನೆಯ ಷರ್ಟು ಹಾಕಿ, ಮೇಲೆ ಕರಿಯ ಅಥವಾ ಗೀರುಗೀರಿನ ಅಥವಾ ಇನ್ನಾವುದೊ ಕಣ್ಣು ಸೆಳೆಯುವ ಬಣ್ಣದ ಕೋಟು ಹಾಕಿಕೊಳ್ಳುತ್ತಿದ್ದರು. ಎಲ್ಲಕ್ಕಿಂತಯಲೂ ಕಿರೀಟಪ್ರಾಯವಾಗಿದ್ದುದೆಂದರೆ ಅವರು ಬಿಟ್ಟಿದ್ದ ಕ್ರಾಪು! ಅವರು ಎಣ್ಣೆ ಹಾಕಿ ಬಾಚಿ ಬೈತಲೆ ತೆಗೆದರೆಂದರೆ, ಮುಂದಲೆ ಚೌರ ಮಾಡಿಸಿಕೊಂಡು ಹಿಂದಲೆ ಜುಟ್ಟು ಬಿಟ್ಟಿದ್ದ ನಮ್ಮ ತಲೆಗಳು ನಾಚಿ ಮೂಲೆ ಸೇರುವಂತಾಗುತ್ತಿತ್ತು. ಅವರ ಕ್ರಾಫನ್ನೇ ನೋಡಿ ನೋಡಿ ಕರುಬಿ, ನಮ್ಮ ತಲೆಗಳನ್ನೂ ಏತಕ್ಕೆ ಹೀಗೆ ಚೌರ ಮಾಡಿಸಿಕೊಳ್ಳಬಾರದು ಎಂಬ ಮತೀಯ ಕ್ರಾಂತಿಭಾವವೋ ಎಂಬಂತಹ, ಒಂದು ಭಯಂಕರ ಮನೋಧರ್ಮ ಇಣುಕುತ್ತಿತ್ತು.
ಆ ಬಾಹ್ಯದ ಅನುಕರಣದ ಆಶೆ ನಮ್ಮಲ್ಲಿ ಆಶಾಮಾತ್ರವಾಗಿಯೆ ಉಳಿಯಬೇಕಾಗಿತ್ತು. ಅದು ಕೈಗೂಡುವ ಸಂಭವ ಒಂದಿನಿತೂ ಇರಲಿಲ್ಲ. ನಮ್ಮ ತಲೆಯ ಮೇಲಣ ಕೂದಲು ನಮ್ಮದೇ ಆಗಿದ್ದರೂ ಅದರ ಹಕ್ಕೆಲ್ಲ ನಮ್ಮ ತಂದೆ ತಾಯಿಗಳಿಗೆ ಹಿರಿಯರಿಗೆ ಸೇರಿದ್ದಾಗಿತ್ತು. ನಮ್ಮ ತಲೆಯ ಮೇಲೆ ಆ ಕೂದಲು ಹೇಗಿರಬೇಕು? ಹೇಗಿರಬಾರದು? ಎಂಬುದರ ಮೇಲಣ ಅಧಿಕಾರ ನಮಗೆ ಸ್ವಲ್ಪವೂ ಇರಲಿಲ್ಲ. ನಮ್ಮ ಆ ತಲೆಯ ಕೂದಲು ನಮ್ಮ ಮಟ್ಟಿಗೆ ಬರಿಯ ಐಹಿಕದ ವಸ್ತುವಾಗಿದ್ದರೂ, ನಮ್ಮ ಹಿರಿಯರಿಗೆ ಅವರ ಆಮುಷ್ಮಿಕ ಕ್ಷೇಮಕ್ಕೆ ಕೊಂಡೊಯ್ಯುವ ಸೂತ್ರವಾಗಿತ್ತು. ಜುಟ್ಟನ್ನು ಕತ್ತರಿಸಿ ಮಂಡೆ ಬೋಳಿಸುವುದು ಅಪ್ಪ ಅಮ್ಮ ಸತ್ತದ್ದಕ್ಕೆ ಸಂಕೇತವಾಗುತ್ತಿತ್ತು. ಅಪ್ಪ ಅಮ್ಮ ಬದುಕಿರುವವರು ಯಾರಾದರೂ ತಲೆ ಬೋಳಿಸುವುದುಂಟೆ? ಅಂತಹ ಪಾಷಂಡಿಕರ್ಮಕ್ಕೆ ನಮ್ಮನ್ನೆಂದೂ ಬಿಡುತ್ತಿರಲಿಲ್ಲ. ಅಲ್ಲದೆ ಹಾಗೆ ಮಾಡುವವರು ಜಾತಿಭ್ರಷ್ಟರಾದಂತೆಯೆ ಅಲ್ಲವೆ? ಅದು ಜಾತಿ ಕೆಟ್ಟ ಕಿಲಸ್ತರಿಗೆ ಮತ್ತು ಮುಸಲ್ಮಾನರಿಗೆ ಮಾತ್ರವೆ ಯೋಗ್ಯ: ಹಿಂದೂಗಳಿಗೆ ಶಿಖೆಯೇ ಸ್ವರ್ಗಕ್ಕೊಯ್ಯುವ ಏಣಿ! ಮತ್ತು ಧರ್ಮಧ್ವಜ!
ನಮ್ಮ ಬುರುಡೆಯ ಮೇಲಣ ವಸ್ತುವಿನ ವಿಚಾರದಲ್ಲಿ ನಮ್ಮ ಹಿರಿಯರಿಗೆ ಇರುತ್ತಿದ್ದ ಆಸಕ್ತಿ ನಮ್ಮ ಮಂಡೆಯ ಒಳಗಿನ ವಸ್ತುವಿನಲ್ಲಿಯೂ ಇರುತ್ತಿದ್ದರೆ ಮುಂದೆ ನಡೆದುದು ನಡೆಯುತ್ತಿರಲಿಲ್ಲವೋ ಏನೊ? ಆದರೆ ಮೆದುಳಿನ ವ್ಯಾಪಾರ ಆಲೋಚನಾ ರೂಪವಾದ್ದರಿಂದ ಆ ಅಗೋಚರದ ವಿಷಯದ ಕಡೆಗೆ ಅವರ ಲಕ್ಷ ಅಷ್ಟಾಗಿ ಬೀಳಲಿಲ್ಲ. ಆ ಕಾರಣವಾಗಿಯೆ ನಮಗೆ ಅಲ್ಲಿ ತಕ್ಕಮಟ್ಟಿನ ಸ್ವಾತಂತ್ರಕ್ಕೆ ಅವಕಾಶ ಒದಗಿತು. ಬಾಹ್ಯಕವಾಗಿ ನಡೆಯಲಾರದಿದ್ದ ಕ್ರಾಂತಿ ದಮನಗೊಂಡು ಆಂತರಿಕವಾಗಿ ತಲೆಯೆತ್ತಿತ್ತು. ನಮ್ಮ ಹೊಸ ಉಪಾಧ್ಯಾಯರ ಕ್ರೈಸ್ತಮತ ಬೋಧೆಗೆ ನಮ್ಮ ಮನಸ್ಸಿನ ಮೊಗ್ಗು ತನ್ನ ಬುದ್ಧಿಯ ಬಾಗಿಲು ತೆರೆದು ಮೆಲ್ಲಮೆಲ್ಲನೆ ಅರಳಿತು.

ಕ್ರಿಸ್ತನ ಬೋಧೆಯಿಂದ ನನ್ನ ಸಹಪಾಂಶು ಸಹಪಾಠಿಗಳಿಗೆ ಏನಾಯಿತೆಂಬುದನ್ನು ನಾನು ನಿಜವಾಗಿ ಹೇಳಲಾರೆ; ನನ್ನ ಮೇಲಾದ ಪರಿಣಾಮವನ್ನು ಮಾತ್ರ ಹೇಳಬಲ್ಲೆ.
ಅದುವರೆಗೆ ದೇವರು ಜೀವಲೋಕ ಪರಲೋಕ ಇವುಗಳ ವಿಚಾರವಾಗಿ ನಾನು ಪ್ರಜ್ಞಾಪೂರ್ವಕ ಬುದ್ಧಿಯಿಂದ ಆಲೋಚಿಸಿದ್ದನೆಂದು ತೋರುವುದಿಲ್ಲ. ಧೂಳಾಡುವ ಎಂಟೊಂಬತ್ತು ವರ್ಷದ ಹಳ್ಳಿ ಮಕ್ಕಳೊಡನೆ ಅಂಥಾದ್ದನ್ನೆಲ್ಲ ಮಾತಾಡುವರಾರು? ಅಂಥಾದ್ದನ್ನೆಲ್ಲ ಆಲೋಚಿಸಿ ಮಾತನಾಡಬಲ್ಲ ಹಿರಿಯರು ಕೂಡ ಯಾರಿದ್ದರು ಅಲ್ಲಿ? ಬಹುಶಃ ಅಂತಹ ಗುರುವಿಷಯ ಜಿಜ್ಞಾಸೆಗೆ ಶೂದ್ರರೆಂದೂ ಅರ್ಹರಲ್ಲ; ಅದೆಲ್ಲ ಬ್ರಾಹ್ಮಣರಿಗೆ ಸೇರಿದ್ದು; ಅವರ ಪಾದಪೂಜೆ ಮಾಡಿ, ಅವರು ಶಾಸ್ತ್ರ ಹೇಳಿದಂತೆ ಕೇಳಿಕೊಂಡಿದ್ದರೆ ಸಾಕು - ಎಂಬ ಸಂಪ್ರದಾಯದ ಶ್ರದ್ಧೆಯೂ ಆ ಮೌಢ್ಯಕ್ಕೆ ಪೋಷಕವೂ ರಕ್ಷಕವೂ ಆಗಿತ್ತೆಂದು ತೋರುತ್ತದೆ.
ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು; ಭೂತದ ಬನದಲ್ಲಿ ವರ್ಷಕ್ಕೊಮ್ಮೆ ಬಲಿ, ಹರಕೆ ಜರುಗುತ್ತಿತ್ತು; ದೆಯ್ಯ, ಜಕ್ಕಿಣಿ, ಕಲ್ಕುಟಿಗ ಮುಂತಾದ ದೆವ್ವ ಪಿಶಾಚಿಗಳ ಭೀಕರ ಕಥನಗಳೂ ಕಿವಿಯ ಮೇಲೆ ಬಿದ್ದು, ಕತ್ತಲೆಯಾದ ಮೇಲೆ ಮನೆ ತುಂಬ ಅವುಗಳ ಓಡಾಟದ ಹೊಂಚಿಕೆಯನ್ನು ಊಹಿಸಿ ಭಾವಿಸಿ ಬೆವರಿ ಬೇಗುದಿಗೊಳ್ಳುತ್ತಿದ್ದೆವು.
ಅದೃಶ್ಯದಲ್ಲಿ, ಅಪ್ರಾಕೃತದಲ್ಲಿ, ಅತೀಂದ್ರಿಯದಲ್ಲಿ ನಂಬಿಕೆ ನಮಗೆ ಹುಟ್ಟುಗುಣವಾಗಿತ್ತು. ಆದರೆ ಆ ಅತೀಂದ್ರಿಯ ವಸ್ತು, ಅದರ ಸ್ವರೂಪ, ಅದರಿಂದ ನಮ್ಮ ಮೇಲಾಗುವ ಪ್ರಭಾವ-ಇವುಗಳೆಲ್ಲ ಬೀಭತ್ಸ ಮತ್ತು ಭಯಾನಕ ವಲಯಗಳದ್ದೇ ಆಗಿತ್ತು. ದೇವರೂ ಕೂಡ ಬೃಹದಾಕಾರಗೊಂಡ, ನಿರಂಕುಶಾಧಿಕಾರಿ ದೆವ್ವವೇ ಆಗಿದ್ದ!
ದೇವರು, ಜೀವ, ಜಗತ್ತು, ಪಾಪ, ಪುಣ್ಯ, ಕರ್ಮ ಮುಂತಾದ ವಿಷಯಗಳನ್ನು ಕುರಿತು ನಮ್ಮಂತಹ ಮಕ್ಕಳೊಡನೆ ಯಾರು ತಾನೆ ಪ್ರಸ್ತಾಪಿಸುತ್ತಾರೆ? ಅದನ್ನು ತಿಳಿದುಕೊಳ್ಳುವ ಸಾಮರ್ಥ್ಯ, ಇಚ್ಛೆ ಇರುತ್ತದೆಯೇ ಮಕ್ಕಳಿಗೆ? ಅಂತಹ 'ಗುರು' ವಿಷಯ 'ಲಘು'ಗಳಿಗೇಕೆ? ಆದರೆ ಕ್ರೈಸ್ತಮತ ಪ್ರಚಾರಕರ ಭೋಧೆಗೆ ಒಳಗಾಗಿ ಕ್ರಿಸ್ತಮತವನ್ನಪ್ಪಿದ ಯುವಕ ಮೋಸಸ್ ಮೇಷ್ಟರಿಗೆ ನಾವು ಅಷ್ಟು 'ಲಘು'ಗಳಾಗಿ ತೋರಲಿಲ್ಲ. ಅವರು ನಮಗೆ ಕನ್ನಡ ಇಂಗ್ಲಿಷ್ ಕಲಿಸುವುದರ ಜೊತೆಗೆ ಯೇಸುಕ್ರಿಸ್ತನ ಕಥೆಯನ್ನು ಹೇಳಿದರು. ಮತಪ್ರಚಾರಕ ಉದ್ದೇಶದಿಂದಿರಬಹುದು. ಕನ್ನಡದಲ್ಲಿ ಅಚ್ಚಾಗಿದ್ದ 'ಮಾರ್ಕನ ಸುವಾರ್ತೆ' ಎಂಬ ಕಿರುಹೊತ್ತಿಗೆಯನ್ನು ಬಿಟ್ಟಿಯಾಗಿ, ನಮನಮಗೇ ಕೊಟ್ಟರು! ನಮ್ಮ ಮೆದುಳಿನ ವಿಚಾರದಲ್ಲಿ ಅದುವರೆಗೆ ಯಾರೂ ತೋರಿಸದಿದ್ದ ಗೌರವವನ್ನು ಹೊಣೆಗಾರಿಕೆಯನ್ನು ಹೊರಿಸಿ, ಆ ಪುಟ್ಟ, ಮುದ್ದಾಗಿ ಅಚ್ಚು ಮಾಡಿದ್ದ, ಮಾರ್ಕನ ಸುವಾರ್ತೆಯನ್ನು ನಮನಮಗೇ ಕೊಟ್ಟುಬಿಟ್ಟರು! ಒಬ್ಬೊಬ್ಬರಿಗೆ ಒಂದೊಂದು! ನನ್ನ ಬದುಕಿಗೆ ಬಂದು ಹೊಸಬಾಗಿಲು ತೆರೆದಂತಾಯ್ತು. ಒಂದು ವಿಸ್ಮಯಕಾರಕ ನೂತನ ಪ್ರಪಂಚಕ್ಕೆ ಪ್ರವೇಶಿಸಿದಂತಾಯ್ತು ನನ್ನ ಪ್ರಜ್ಞೆ. ಯಾವುದು ಎಷ್ಟರಮಟ್ಟಿಗೆ ಬುದ್ಧಿ ಸ್ಪಷ್ಟವಾಗಿತ್ತೋ ನಾನೀಗ ಹೇಳಲಾರೆ. ಆದರೆ ಪ್ರಾರ್ಥನೆ ಮಾಡಿದರೆ ದೇವರು ಓಕೊಳ್ಳುತ್ತಾನೆ; ಇಷ್ಟಗಳನ್ನು ಸಲ್ಲಿಸುತ್ತಾನೆ; ಯೇಸುಸ್ವಾಮಿ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದನು. ಆ ಪ್ರಾರ್ಥನೆ ಮತ್ತು ಶ್ರದ್ಧೆ ಎರಡೂ ಸೇರಿದರೆ 'ಪವಾಡ'ಗಳಾಗುತ್ತವೆ; ರೋಗಿ ಗುಣ ಹೊಂದುತ್ತಾನೆ; ಕುರುಡ ಕಾಣುತ್ತಾನೆ; ಭಗವಂತನು ಭೂಮಿಗಿಳಿದು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಇತ್ಯಾದಿಗಳನ್ನು ಕೇಳಿ ನನ್ನ ಚೇತನ ಭಕ್ತಿದೀಪ್ತವಾಯಿತು. ಮೇಲಿನ ತತ್ವಗಳಿಗೆ ಹಿಂದೂ ಪುರಾಣ ಕಥೆಗಳಲ್ಲಿ ಬರಗಾಲವೇನಿಲ್ಲ. ಆದರೆ ಅವುಗಳನ್ನು ಕುರಿತು ಬುದ್ಧಿ ಗೋಚರವಾಗುವಂತೆ ನಮ್ಮೊಡನೆ ಯಾರೂ ಜಿಜ್ಞಾಸೆ ಮಾಡಿರಲಿಲ್ಲ. ಅಲ್ಲದೆ ಯೇಸು ಸ್ವಾಮಿಯಂತೆಯೇ ಐತಿಹಾಸಿಕವಾದ ಬುದ್ಧಾದಿ ವಿಭೂತಿಪುರುಷರ ಜೀವನ ಕಥೆಗಳನ್ನು ಹೇಳಿ, ಹೃದಯಸ್ಪರ್ಶಿಯಾದ ಆ ತತ್ವಗಳು ಬುದ್ಧಿಯಲ್ಲಿಯೂ ಬೆಳಗುವಂತೆ ನಮ್ಮವರು ಯಾರೂ ತಿಳಿಸುವ ಗೋಜಿಗೆ ಹೋಗಿರಲಿಲ್ಲ.
ಸರಿ, ಯೇಸುಸ್ವಾಮಿಯಂತೆ ನಾವೂ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದರೆ ನಮಗೂ...? ಏನು? ಏನಾಗುತ್ತದೆ? ಏಕೆ? ತಿಳಿಯದು! - ಅಂತೂ ಹಾಗೆ ಪ್ರಾರ್ಥನೆ ಮಾಡಬೇಕು ಎಂಬ ಪ್ರೇರಣೆ ಉತ್ಕಟವಾಯಿತು. ನನ್ನ ಜೊತೆ 'ಐಗಳ ಶಾಲೆ'ಯಲ್ಲಿ ಓದುವುದಕ್ಕಿದ್ದ, (ಕೆಲವರು ನನಗಿಂತಲೂ ವಯಸ್ಸಾದವರು), ಇತರ ಬಾಲಕರಿಗೆ ಅದನ್ನೆಲ್ಲ ಹೇಳಿ ಒಪ್ಪಿಸಿದೆ. ಎಲ್ಲರೂ ಸಂಜೆಯ ಹೊತ್ತು ನಮ್ಮ ಮನೆಯ ಹಿಂದಿರುವ ಗುಡ್ಡಕ್ಕೆ (ಎಷ್ಟೋ ವರ್ಷಗಳ ಆನಂತರ ಅದಕ್ಕೆ 'ಕವಿಶೈಲ' ಎಂದು ನಾಮಕರಣ ಮಾಡಿದವನು ನಾನೆ!) ಏರಿದೆವು.
ಸೂರ್ಯ ಇನ್ನೂ ಮುಳುಗಿರಲಿಲ್ಲ. ಸಾಯಂ ಸಮಯದ ಗೋಧೂಳಿಯ ಹೊಂಗಾಂತಿ ಪಿಪಾಸೆಗೆ ಮಾದಕೋದ್ದೀಪಕವಾಗಿತ್ತು. ಕಲ್ಲು ಬಂಡೆಗಳೇ, ಅದರಲ್ಲಿಯೂ ಹಾಸುಗಲ್ಲುಗಳೇ ಹೆಚ್ಚಾಗಿರುವ ಆ ಗುಡ್ಡದ ಪಶ್ಚಿಮ ಭಾಗದಲ್ಲಿ ಒಂದೆಡೆ ನಾವೆಲ್ಲ ಪ್ರಾರ್ಥನೆ ಮಾಡುವುದಕ್ಕೆ ಯೋಗ್ಯವಾದ ಭಾಗವನ್ನು ಆರಿಸಿಕೊಂಡೆವು. ಏಕೊ ಏನೊ ತಿಳಿಯದು: ಕಣೆ ಬಿದಿರು ಗಳುಗಳನ್ನು ಕಡಿದು ಸುತ್ತಲೂ, ಒಡ್ಡು ಹಾಕಿ, ಪ್ರಾರ್ಥನಾ ವಲಯವನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡಿಕೊಂಡೆವು. ದನ ಗಿನ ನುಗ್ಗಿ ಸೆಗಣಿ ಹಾಕಬಾರದು ಎಂದಿರಬಹುದು. ಎಲ್ಲರೂ ಮೊಳಕಾಲು ಮಂಡಿಯೂರಿ, ಕೈಮುಗಿದುಕೊಂಡು ಕ್ರೈಸ್ತರು ಕೂರುವ ಭಂಗಿಯಲ್ಲಿ ಕುಳಿತು ಬಾಯಿಪಾಠ ಮಾಡಿದ ಪ್ರಾರ್ಥನೆ ಮಾಡಿದೆವು:


"ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ. 
ನಿನ್ನ ರಾಜ್ಯವು ಬರಲಿ. 
ಪರಲೋಕದಲ್ಲಿ ನೆರವೇರುವಂತೆ ನಿನ್ನ ಇಚ್ಛೆ ಭೂಲೋಕದಲ್ಲಿಯೂ ನೆರವೇರಲಿ.
ನಮ್ಮ ದಿನದಿನದ ಆಹಾರವನ್ನು ಈ ದಿನವೂ ದಯಪಾಲಿಸು.
ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನೂ ನೀನು ಕ್ಷಮಿಸು.
ನಾವು ಪಾಪವಶರಾಗದಂತೆ ನಮ್ಮನ್ನು ಪಾಪಪುರುಷನಿಂದ ಪಾರು ಮಾಡು."
ಪ್ರಾರ್ಥನೆ ನಮಗೆ ತಿಳಿಯುವ ಭಾಷೆಯಲ್ಲಿತ್ತು. ತಿಳಿಯುವ ಧಾಟಿಯಲ್ಲಿತ್ತು. ಸಂಸ್ಕೃತದಲ್ಲಿರುವಂತೆ ಪ್ರೌಢಕಾವ್ಯರೀತಿಯಲ್ಲಿಯೇ ಅಗ್ರಾಹ್ಯವಾಗಿರಲಿಲ್ಲ. ಏನೋ ಒಂದು ಮಹತ್ತಾದುದನ್ನು ಸಾಧಿಸಿದ ಹಿಗ್ಗಿನಿಂದ ನಾವೆಲ್ಲ ಕಪ್ಪಾಗುತ್ತಿದ್ದ ಬೈಗಿನಲ್ಲಿ ಗುಡ್ಡವಿಳಿದೆವು. ಎದುರು ಗುಡ್ಡದ ದಟ್ಟವಾದ ಕಡು ಮರಮರದೆಲೆಯ ಮಸಿ ಮುದ್ದೆಯ ಗೋಡೆಯಾಗಿತ್ತು.

Friday, December 19, 2014

ಕಾನೂರು ಹೆಗ್ಗಡಿತಿ ಕಾದಂಬರಿಯ ಪಾತ್ರಪ್ರಪಂಚ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ, ಇದೇ ಡಿಸೆಂಬರ್ ೧೬ನೆಯ ತಾರೀಖಿಗೆ (ಕುವೆಂಪು ಮುನ್ನುಡಿಯ ದಿನಾಂಕ) ಸಾರ್ಥಕ ೭೮ ವರ್ಷಗಳು ತುಂಬುತ್ತವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ. ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.
ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀ ಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ’ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ?’ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಲೇಖಕರಲ್ಲಿ ’ನೀವೇಕೆ ಬರೆಯಲು ಪ್ರಯತ್ನಿಸಬಾರದು?’ ಎಂದು ಪೀಡಿಸುತ್ತಿದ್ದರಂತೆ.
ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ’ನೀವೇ ಏಕೆ ಬರೆಯಬಾರದು?’ ಎಂದರಂತೆ. ಆಗ ಕುವೆಂಪು ಅವರು ’ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ!’ ಎಂದು ನಕ್ಕಬಿಟ್ಟಿದ್ದರಂತೆ.
ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ’ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!’
ಗುರುವಿನ ಸಲಹೆಯನ್ನು ಆಶೀರ್ವಾದ ರೂಪದಲ್ಲಿ ಧರಿಸಿದ ಕವಿ, ಮಹಾ ಕಾದಂಬರಿ ರಚಿಸುವ ಗೀಳಿಗೆ ವಶವಾಗಿಬಿಡುತ್ತಾರೆ. ಆಗ ಮೊದಲು ಹುಟ್ಟಿದ್ದೇ ’ಕಾನೂರು ಹೆಗ್ಗಡಿತಿ’. ’ಮಲೆನಾಡಿನ ಮೂಲೆಯಲ್ಲಿ’, ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಮೊದಲಾದ ಹೆಸರುಗಳನ್ನು ಆಲೋಚಿಸಿದ್ದರೂ ಕೊನೆಯಲ್ಲಿ ನಿಂತದ್ದು ’ಕಾನೂರು ಹೆಗ್ಗಡಿತಿ’ ಎಂಬುದು.
ಮಹಾ ಕಾದಂಬರಿ ಎಂದರೆ ನೂರಾರು ಪುಟಗಳು, ಸಾವಿರಾರು ಘಟನೆಗಳು, ಅಸಂಖ್ಯಾತ ಸ್ಥಳಗಳು ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸುತ್ತಾ ಹದಗೆಡದಂತೆ ಕಟ್ಟಿಕೊಡುವ ಕಥನಕ್ರಮವೇ ಮುಖ್ಯವಾದುದು. ವೆಂಕಣ್ಣಯ್ಯನವರ ಮಾತಿನಲ್ಲೇ ಹೇಳುವುದಾದರೆ ’ಕಥನ, ಸಂವಾದ ಮತ್ತು ವರ್ಣನೆಗಳ ಹದವರಿತ ಮಿಶ್ರಣವಾಗಿರಬೇಕು.’ ಮುಂದುವರೆದು ಹೇಳುವುದಾದರೆ ಭೂತ-ವರ್ತಮಾನ-ಭವಿಷ್ಯತ್ ಹೀಗೆ ತ್ರಿಕಾಲದಲ್ಲೂ ಕವಿಯ ಮನಸ್ಸು ಸಂಚರಿಸುತ್ತಿರಬೇಕಾಗುತ್ತದೆ. ಭವಿಷ್ಯದ ಕಡೆಗೆ ದೃಷ್ಟಿಯಿಟ್ಟು ವರ್ತಮಾನದಲ್ಲಿ ವಿಹರಿಸುತ್ತಿದ್ದರೂ ಕವಿಯ ಒಂದು ಕೈ ಭೂತಕಾಲದತ್ತಲೂ ಚಾಚಿರುತ್ತದೆ. ಆ ಭೂತಕಾಲವೇ ನಮ್ಮ ಇಂದಿನ ವರ್ತಮಾನವನ್ನು ರೂಪಿಸುತ್ತಿದೆ ಎಂಬ ಎಚ್ಚರವಿದ್ದೇ ಇರುತ್ತದೆ. ಭೂತ-ವರ್ತಮಾನಗಳೆರಡೂ ನಮ್ಮ ಭವಿಷ್ಯತ್‌ಕಾಲಕ್ಕೆ ಮುನ್ನುಡಿಯಂತಿರುತ್ತವೆ.
’ಕಾದಂಬರಿ ಕರತಲ ರಂಗಭೂಮಿ: ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ’ ಎಂದು ಮುನ್ನುಡಿಯಲ್ಲಿ ಕುವೆಂಪು ಮೊದಲಿಗೇ ಹೇಳಿದ್ದಾರೆ.
ಈ ಕಾದಂಬರಿ ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿ, ಗಾಂಧಿಪ್ರಭಾವ, ಮದ್ಯಪಾನ ವಿರೋಧಿ ಚಳುವಳಿ ಮೊದಲಾದವುಗಳು, ಮಲೆನಾಡಿನ ಬದುಕು, ಕೃಷಿ-ಕಾಡು, ಸಂಸ್ಕೃತಿ ಎಲ್ಲವೂ ಅನಾವರಣಗೊಳ್ಳುತ್ತವೆ. ಅದಕ್ಕೆ ಕುವೆಂಪು ಅವರು ತಮ್ಮ ಕಾದಂಬರಿಯನ್ನು ಕುರಿತು ’ನನ್ನ ಕಾದಂಬರಿ’ ಎಂಬ ಚುಟುಕುವೊಂದರಲ್ಲಿ
ಕಲೆ ಹಡೆದ ಕಲ್ಪನೆಯೆ
ಕತ್ತರಿಯು, ಕೇಳ;
ಹಾಳೆ ಹಾಳೆಗಳಾಗಿ
ಕತ್ತರಿಸಿ ಬಾಳ
ರಟ್ಟು ಹಾಕಿದೆನೊಟ್ಟು:
ಕಾದಂಬರಿಯ ಹುಟ್ಟು
ಗುಟ್ಟೆಲ್ಲ ರಟ್ಟು!
ಎಂದು ಹಾಡಿದ್ದಾರೆ.
ಈ ಮಹಾಕಾದಂಬರಿಗೆ ೭೮ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಕಾದಂಬರಿ ತೆರೆದುಕೊಳ್ಳುವ ಸ್ಥಳಗಳ, ಎಲ್ಲಾ ಪಾತ್ರಗಳ ಒಂದು ಪಟ್ಟಿಕೆಯನ್ನು ಸಂಪಾದಿಸಿದ್ದೇನೆ. ಮೊದಲ ಬಾರಿಗೆ ’ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ’ ಓದುಗರಿಗೆ, – ಈಗಾಗಲೇ ಓದಿರುವವರಿಗೂ – ಉಪಯೋಗವಾಗುತ್ತದೆ ಎಂಬ ನಂಬಿಕೆ ನನ್ನದು.

ಕಾದಂಬರಿಯಲ್ಲಿನ ಸ್ಥಳಗಳು
ತೀರ್ಥಹಳ್ಳಿ
ತೀರ್ಥಹಳ್ಳಿ ರಾಮತೀರ್ಥದ ಕಲ್ಲುಸಾರ
ಕಾನೂರು
ಮುತ್ತಳ್ಳಿ
ಸೀತೆಮನೆ
ಕೆಳಕಾನೂರು
ಅಗ್ರಹಾರ
ನೆಲ್ಲುಹಳ್ಳಿ
ಕಳ್ಳಂಗಡಿ
ಕಾನುಬೈಲು
ಕತ್ತಲೆಗಿರಿ
ಉಲ್ಲೇಖಮಾತ್ರವಾದ ಸ್ಥಳಗಳು
ಮೈಸೂರು
ಚಾಮುಂಡಿಬೆಟ್ಟ
ಅಠಾರ ಕಛೇರಿ
ಅರಮನೆ
ಕುಕ್ಕರಹಳ್ಳಿ ಕೆರೆ
ಕುರುವಳ್ಳಿ
ಕೊಪ್ಪ
ಬೆಂಗಳೂರು
ತಿರುಪತಿ
ಧರ್ಮಸ್ಥಳ
ಆಗುಂಬೆ ಘಾಟಿ
ಕುಂದದ ಗುಡ್ಡ
ಕುದುರೆಮುಖ
ಮೇರುತಿ ಪರ್ವತ
ಕೂಳೂರು ಸಿದ್ಧರಮಠ
ಸಿಬ್ಬಲುಗುಡ್ಡೆ
ಕಾನೂರು

ಚಂದ್ರಯ್ಯಗೌಡ : ಕಾನೂರು ಮನೆಯ ಯಜಮಾನ; ಹೂವಯ್ಯನ ತಂದೆ ಸುಬ್ಬಯ್ಯಗೌಡರ ತಮ್ಮ; ಸುಬ್ಬಯ್ಯಗೌಡರ
ಮರಣಾನಂತರ ಕಾನೂರು ಮನೆಗೆ ಯಜಮಾನರಾಗಿರುತ್ತಾರೆ
ಸುಬ್ಬಯ್ಯಗೌಡ : ಚಂದ್ರಯ್ಯಗೌಡರ ದಿವಂಗತ ಅಣ್ಣ; ಹೂವಯ್ಯನ ತಂದೆ
ನಾಗಮ್ಮ : ಹೂವಯ್ಯನ ತಾಯಿ; ಚಂದ್ರಯ್ಯಗೌಡರ ದಿವಂಗತ ಅಣ್ಣ ಸುಬ್ಬಯ್ಯಗೌಡರ ಹೆಂಡತಿ; ಸೀತೆಮನೆ ಸಿಂಗಪ್ಪಗೌಡರ ಹೆಂಡತಿಯ ಅಕ್ಕ
ಹೂವಯ್ಯ : ಚಂದ್ರಯ್ಯಗೌಡರ ಅಣ್ಣ ಸುಬ್ಬಯ್ಯಗೌಡ ಮತ್ತು ನಾಗಮ್ಮನವರ ಮಗ
? : ಚಂದ್ರಯ್ಯಗೌಡರ ಮೊದಲ ಹೆಂಡತಿ; ರಾಮಯ್ಯನ ತಾಯಿ
? : ಚಂದ್ರಯ್ಯಗೌಡರ ಎರಡನೆಯ ಹೆಂಡತಿ; ಪುಟ್ಟಮ್ಮ ಮತ್ತು ವಾಸುವಿನ ತಾಯಿ
ರಾಮಯ್ಯ : ಹೂವಯ್ಯನ ಚಿಕ್ಕಪ್ಪ ಚಂದ್ರಯ್ಯಗೌಡರ ಮೊದಲ ಹೆಂಡತಿಯ ಮಗ;
ಸುಬ್ಬಮ್ಮ : ಚಂದ್ರಯ್ಯಗೌಡರ ಮೂರನೆಯ ಹೆಂಡತಿ; ನೆಲ್ಲುಹಳ್ಳಿಯ ಪೆದ್ದೇಗೌಡರ ಮಗಳು
ಪುಟ್ಟಮ್ಮ : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗಳು; ರಾಮಯ್ಯನ ಮಲತಂಗಿ
ವಾಸು : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗ; ರಾಮಯ್ಯನ ಮಲತಮ್ಮ; ಕೊನೆಯಲ್ಲಿ ಕಾನೂರಿನ ಗೌಡನಾಗುವವನು; ಸೀತೆಯ ತಂಗಿ ಲಕ್ಷ್ಮಿಯನ್ನು ಮದುವೆಯಾಗುವವನು
ಪುಟ್ಟಣ್ಣ : ಮನೆಯ ಕೆಲಸಗಾರ; ಹೂವಯ್ಯನ ನಂಬಿಕಸ್ಥ ಬಂಟ; ಒಳ್ಳೆಯ ಬೇಟೆಗಾರ
ರಂಗಪ್ಪಸೆಟ್ಟಿ : ಕಾನೂರು ಮನೆಯ ಸೇರೆಗಾರ
ನಿಂಗ : ಗಾಡಿಯಾಳು; ಧರ್ಮಸ್ಥಳ ಯಾತ್ರೆಯ ನಡುವೆ ಅಕಾಲದಲ್ಲಿ ಮರಣ ಹೊಂದಿದವನು
ಪುಟ್ಟ : ನಿಂಗನ ಮಗ; ವಾಸುವಿನ ಸಮವಯಸ್ಕ; ಕೊನೆಯಲ್ಲಿ ಸಣ್ಣಪುಟ್ಟಣ್ಣ ಎಂದು ಕರೆಸಿಕೊಳ್ಳುವವನು
ಬೈರ : ಕಾನೂರು ಮನೆಯ ಜೀತದಾಳು; ಮನೆ ಭಾಗವಾದಾಗ ಹೂವಯ್ಯನ ಜೊತೆಗೆ ಸೇರುವವನು
ಸೇಸಿ : ಬೈರನ ಹೆಂಡತಿ
ಗಂಗ : ಬೈರನ ಮಗ; ವಾಸುವಿನ ಸಮವಯಸ್ಕ; ಚಿಕ್ಕವಯಸ್ಸಿಗೆ ಸತ್ತು ಹೋಗುತ್ತಾನೆ
ಸಿದ್ದ : ಜೀತದಾಳು
ಗಂಗೆ : ಘಟ್ಟದಾಳು; ಸೇರೆಗಾರರ ಪ್ರೇಯಸಿ; ಚಂದ್ರಯ್ಯಗೌಡರ ಪ್ರೀತಿಗೆ ಒಳಗಾಗಿದ್ದವಳು
ಕೃಷ್ಣಯ್ಯಸೆಟ್ಟಿ : ಗಂಗೆಯ ಮೊದಲ ಪ್ರಣಯಿ
ತಿಮ್ಮಯ್ಯಸೆಟ್ಟಿ : ಗಂಗೆಯನ್ನು ಮದುವೆಯಾದ ಮುದುಕ ಶ್ರೀಮಂತ
ತಿಮ್ಮ : ಹಳೆಪೈಕದವನು; ಚಂದ್ರಯ್ಯಗೌಡರ ಒಕ್ಕಲು; ಗೌಡರಿಗೆ ಕಳ್ಳು ಕಾಯಿಸಿಕೊಡುವವನು
ಬಾಡುಗಳ್ಳ ಸೋಮ: ಗಟ್ಟದಾಳು; ಕೊನೆಯಲ್ಲಿ ಕಾನೂರಿನ ಸೇರೆಗಾರ ಸೋಮಯ್ಯಸೆಟ್ಟಿ ಎಂದು ಕರೆಸಿಕೊಳ್ಳುವವನು
ಬಗ್ರ : ಘಟ್ಟದಾಳು
ಸದಿಯ : ಘಟ್ಟದಾಳು
ಕಾಡಿ : ಘಟ್ಟದಾಳು
ಸುಬ್ಬಿ : ಘಟ್ಟದಾಳು
ಗುತ್ತಿ : ಒಬ್ಬ ಆಳು (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕೊನೆಯಲ್ಲಿ ನಾಯಿಗುತ್ತಿ, ಕಾನೂರು ಚಂದ್ರಯ್ಯಗೌಡರಲ್ಲಿ ಜೀತದಾಳಾಗಿ ನಿಲ್ಲುವ ಸೂಚನೆಯಿದೆ. ಅದೇ ಗುತ್ತಿಯೆಂದು ತಿಳಿಯಬಹುದು)
ಬಚ್ಚ : ಬೇಲರಾಳು
? : ಗಂಗೆಯ ತಂದೆ
? : ಗಂಗೆಯ ತಾಯಿ
? : ಕಾನೂರು ಮನೆಯ ಅಡುಗೆಯವನು
? : ಹೂವಯ್ಯ ವಾಸವಿದ್ದ ಕೆಳಕಾನೂರು ಮನೆಯ ಅಡುಗೆಯವನು
? : ಕಾನೂರು ಪಟೇಲರು
ಮುತ್ತಳ್ಳಿ
ಶಾಮಯ್ಯಗೌಡ : ಮುತ್ತಳ್ಳಿ ಮನೆತನದ ಯಜಮಾನ; ಪಟೇಲ; ಕಾನೂರು ಚಂದ್ರಯ್ಯಗೌಡರ ಭಾವನೆಂಟ
ಗೌರಮ್ಮ : ಶಾಮಯ್ಯಗೌಡರ ಹೆಂಡತಿ; ಚಿನ್ನಯ್ಯನ ತಾಯಿ
ಚಿನ್ನಯ್ಯ : ಶಾಮಯ್ಯಗೌಡ-ಗೌರಮ್ಮನವರ ಮಗ; ಸೀತೆಯ ಅಣ್ಣ; ಕಾನೂರು ಪುಟ್ಟಮ್ಮನ ಗಂಡ
ಸೀತೆ : ಶಾಮಯ್ಯಗೌಡ-ಗೌರಮ್ಮನವರ ಹಿರಿಯ ಮಗಳು; ಚಿನ್ನಯ್ಯನ ತಂಗಿ;
ಲಕ್ಷ್ಮಿ : ಶಾಮಯ್ಯಗೌಡ-ಗೌರಮ್ಮನವರ ಕಿರಿಯ ಮಗಳು; ಸೀತೆಯ ತಂಗಿ; ಕೊನೆಯಲ್ಲಿ ಕಾನೂರು ವಾಸಪ್ಪಗೌಡನನ್ನು ಮದುವೆಯಾಗುವ ಹುಡುಗಿ
ರಮೇಶ : ಚಿನ್ನಯ್ಯ ಪುಟ್ಟಮ್ಮರ ಮೊದಲ ಮಗ
ಲಲಿತೆ : ಚಿನ್ನಯ್ಯ ಪುಟ್ಟಮ್ಮರ ಮಗಳು
ಮಾಧೂ : ಚಿನ್ನಯ್ಯ ಪುಟ್ಟಮ್ಮರ ಕೂಸು
ಕುಂಬಾರ ನಂಜ : ಶಾಮಯ್ಯಗೌಡರ ಒಕ್ಕಲು
? : ನಂಜನ ಹೆಂಡತಿ
ರಂಗಿ : ನಂಜನ ಹೆಣ್ಣುಕೂಸು
ಕಾಳ : ಮನೆಯ ಆಳು
ರಾಮಕ್ಕ : ಕಾಳನ ದಿವಂಗತ ತಾಯಿ
ಸೀತೆಮನೆ
ಸಿಂಗಪ್ಪಗೌಡ : ಸೀತೆಮನೆ ಯಜಮಾನ; ಹೂವಯ್ಯನ ತಾಯಿ ನಾಗಮ್ಮನವರ ತಂಗಿಯ ಗಂಡ; ಸಂಬಂಧದಲ್ಲಿ ಹೂವಯ್ಯನಿಗೆ ಚಿಕ್ಕಪ್ಪ;
? : ಸಿಂಗಪ್ಪಗೌಡರ ಹೆಂಡತಿ; ಹೂವಯ್ಯನ ತಾಯಿ ನಾಗಮ್ಮನವರ ಸಹೋದರಿ; ಕೃಷ್ಣಪ್ಪನ ತಾಯಿ
ಕೃಷ್ಣಪ್ಪ : ಸಿಂಗಪ್ಪಗೌಡರ ಮಗ
ಶಂಕರಯ್ಯ : ಸಿಂಗಪ್ಪಗೌಡರ ಕೊನೆಯ ಮಗ
ಕಿಲಸ್ತರ ಜಾಕಿ : ಕೃಷ್ಣಪ್ಪನ ಬಂಟ
? : ದನ ಕಾಯುವವನು
ಸುಕ್ರ : ಗಾಡಿ ಹೊಡೆಯುವವನು
ಅಗ್ರಹಾರ
ವೆಂಕಪ್ಪಯ್ಯ : ಜೋಯಿಸರು; ಚಂದ್ರಮೌಳೇಶ್ವರ ದೇವಾಲಯದ ಅರ್ಚಕರು
? & ? : ವೆಂಕಪ್ಪಯ್ಯನವರ ಇಬ್ಬರು ಮಕ್ಕಳು
? & ? : ಇಬ್ಬರು ಬ್ರಾಹ್ಮಣ ಬಾಲಕರು
ಮಂಜಭಟ್ಟರು : ವೃದ್ಧ ಬ್ರಾಹ್ಮಣರು
ಸಿಂಗಾಜೋಯಿಸರು: ಅಗ್ರಹಾರದ ಬ್ರಾಹ್ಮಣರು
ರಾಮಭಟ್ಟರು : ಅಗ್ರಹಾರದ ಬ್ರಾಹ್ಮಣರು
ಕೆಳಕಾನೂರು
ಅಣ್ಣಯ್ಯಗೌಡರು : ಚಂದ್ರಯ್ಯಗೌಡರ ಒಕ್ಕಲು
ಓಬಯ್ಯ : ಅಣ್ಣಯ್ಯಗೌಡರ ಎರಡನೆಯ ಹೆಂಡತಿಯ ಮಗ; ಕಾನೂರು ಬಿಟ್ಟು ಹೋದರೂ, ಕೊನೆಯಲ್ಲಿ ಕಾನೂರು ಮನೆಯಲ್ಲೇ ಆಶ್ರಯ ಪಡೆದಾತ
? : ಅಣ್ಣಯ್ಯಗೌಡರ ನಾಲ್ಕನೆಯ ಹೆಂಡತಿ
? : ಮೂರನೆಯ ಹೆಂಡತಿಯ ಮಗಳು
ನೆಲ್ಲುಹಳ್ಳಿ
ಪೆದ್ದೇಗೌಡ : ಸುಬ್ಬಮ್ಮನ ತಂದೆ
? : ಸುಬ್ಬಮ್ಮನ ತಾಯಿ
? : ಸುಬ್ಬಮ್ಮನ ಅತ್ತಿಗೆ
? : ಕುತ್ತುರೆ ಹಾಕುವ ಯುವಕ; ಸುಬ್ಬಮ್ಮ ಚಂದ್ರಯ್ಯಗೌಡರನ್ನು ಮದುವೆಯಾಗುವ ಮೊದಲು ಈ ಯುವಕನಿಗೆ ಕೊಡುವ ಗಾಳಿಸುದ್ದಿಯಿದ್ದಿತ್ತು.
ಕಳ್ಳಂಗಡಿ
ಚಿಕ್ಕಣ್ಣ : ಕಳ್ಳಂಗಡಿಯ ಮಾಲೀಕ
? : ಕಳ್ಳಗಂಡಿಯವನ ಹೆಂಡತಿ
? : ಅಂಗಡಿಯವನ ಮಗ
ಮನೆ ಹಿಸ್ಸೆ ಪಂಚಾಯ್ತಿಯಲ್ಲಿ ಭಾಗವಹಿಸಿದ್ದ ಪಾಲು ಮುಖಂಡರು
ಬಾಳೂರು ಸಿಂಗೇಗೌಡ
ಬೈದೂರು ಬಸವೇಗೌಡ
ನೆಲ್ಲಹಳ್ಳಿ ಪೆದ್ದೇಗೌಡ
ಮುದ್ದೂರು ಭರ್ಮೇಗೌಡ
ಎಂಟೂರು ಶೇಷೇಗೌಡ
ಮೇಗ್ರಳ್ಳಿ ನಾಗಪ್ಪ ಹೆಗ್ಗಡೆ
ಇತರೆ
ಅತ್ತಿಗದ್ದೆ ಹಿರಿಯಣ್ಣಗೌಡ
ರಂಗಮ್ಮ – ಅತ್ತಿಗದ್ದೆ ಹಿರಿಯಣ್ಣಗೌಡರ ಮಗಳು
ನುಗ್ಗಿಮನೆ ತಮ್ಮಣ್ಣಗೌಡ
ದಾನಮ್ಮ – ನುಗ್ಗಿಮನೆ ತಮ್ಮಣ್ಣಗೌಡರ ಮಗಳು
ಸಂಪಗೆಹಳ್ಳಿ ಪುಟ್ಟಯ್ಯಗೌಡ
ದುಗ್ಗಮ್ಮ – ಸಂಪಗೆಹಳ್ಳಿ ಪುಟ್ಟಯ್ಯಗೌಡರ ಮಗಳು
ತೀರ್ಥಹಳ್ಳಿ ಡಾಕ್ಟರ್
ಪೊಲೀಸಿನವರು
ತೀರ್ಥಹಳ್ಳಿ ಹೆಗ್ಗಡೆ
ಮಾರ್ಕ – ಹೆಂಡ ಕಟ್ಟುವ ಬಗನಿ ಮರಗಳಿಗೆ ಮಾರ್‍ಕ್ ಮಾಡುವವನು
ಗಾರ್ಡ – ಫಾರೆಸ್ಟ್ ಗಾರ್ಡ್
ಮುತ್ತಳ್ಳಿ ಸೇರೆಗಾರ
ಸೀತೆಮನೆ ಸೇರೆಗಾರ
ಕುದುಕ – ಬಿಲ್ಲರವನು
? – ಸೈಕಲ್ ಸವಾರ
ತೀರ್ಥಹಳ್ಳಿಯ ಕಿಲಸ್ತರು
ಸಾಕುಪ್ರಾಣಿಗಳು
ನಂದಿ ಮತ್ತು ಲಚ್ಚ – ಕಾನೂರು ಮನೆಯ ಎತ್ತುಗಳು
ಪುಟ್ರಾಮ – ಕಾನೂರಿನ ಒಂದು ಎತ್ತು
ಟೈಗರ್, ರೂಬಿ, ಟಾಪ್ಸಿ, ಡೈಮಂಡು, ಕೊತ್ವಾಲ, ಡೂಲಿ ಮತ್ತು ರೋಜಿ – ಕಾನೂರು ಮನೆಯ ನಾಯಿಗಳು
ಡೈಮಂಡು ಮತ್ತು ರೂಬಿ – ಮುತ್ತಳ್ಳಿ ಮನೆಯ ನಾಯಿಗಳು
? – ಎತ್ತು
ಪಾಟ್‌ರೈಟ್ – ಸೀತೆಮನೆಯ ಒಂದು ನಾಯಿ

Saturday, May 10, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 5

ಭಾಗ - 5 : ನೀನೊಲಿದ ವರನೆ ದೊರೆಯಲಿ ನಿನಗೆ! 
ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್ಲಿ ಹಿನ್ನೆಡೆಯಾಗಿದೆ. ಮಂಡೋದರಿಯ ಮಾತಿಗೆ, ಬೇಡಿಕೆಗೆ ಮಣಿದು ಕೊಲ್ಲೆನವಳಂ (ಸೀತೆಯನ್ನು) ಎಂದು ಮಾತು ಕೊಟ್ಟಿದ್ದಾನೆ. ಇತ್ತ ಮಗ ಅತಿಕಾಯನ ಮರಣದ ವಾರ್ತೆಯನ್ನು ಕೇಳಿದ ಧ್ಯಾನಮಾಲಿನಿ ಮರಣಶಯ್ಯೆಯಲ್ಲಿದ್ದಾಳೆ. ಸುದ್ದಿ ತಿಳಿದು ಅಲ್ಲಿಗೆ ಬಂದ ರಾವಣ ತುಂಬಾ ಸೋತುಹೋಗಿದ್ದಾನೆ; ವೇದಾಂತಿಯೂ ಆಗುತ್ತಾನೆ!
ಬಾಳ್!
ಕಳ್ಳನೊರೆದೊಂದು ಸುಳ್ಳಿನ ಸಂತೆ!
ಬರಿ ಬೊಂತೆ!
ಕಡೆಗೆ, ಬೆಂಕಿಯ ಹೊರೆದು,
ಬೂದಿರಾಸಿಯನುಳಿವ ಅರ್ಥವಿಲ್ಲದ ಬಣಗು ಕಂಥೆ!
ಇದಕೇಕಿನಿತು ಚಿಂತೆ?
ರಾವಣ ಈ ಮನಸ್ಥಿತಿಯಲ್ಲಿರುವಾಗಲೇ, "ಮೆಯ್ಯನಲ್ಲದೆ ಏಂ ಮನವನಿತ್ತೆನೆ?" ಎಂದು ರಾವಣನ ಶಕ್ತಿಯೇ ಉಡುಗುವಂತೆ ನುಡಿದ ಧಾನ್ಯಮಾಲಿನಿ
ಸ್ವಾಮಿ, ನನ್ನ ಮುಡಿಯಂ ನೋಡು,
ನಿಚ್ಚಮುಂ ತ್ರಿಜಟೆಯಿಂ ನಾಂ ಪಡೆದು ಮುಡಿದ
ರಘುರಾಮನ ಮಡದಿಯಡಿಯ ಪಾಪನಾಶಕ ಧೂಳಿ!.........
ಅದಕಾಗಿ ಆ ದೇವಿ ರಾಮಸತಿಗಿದೊ ಶತ ನಮಸ್ಕಾರಗಳ್!
ಎಂದು ಹೇಳಿ ಕಣ್ಣುಮುಚ್ಚಿಬಿಡುತ್ತಾಳೆ. ರಾವಣ ಕುಸಿಯಲಾರಂಬಿಸುತ್ತಾನೆ. ಅತ್ತ, ಇಂದ್ರಜಿತುವಿನ ಹೆಂಡತಿ ತಾರಾಕ್ಷಿ, ತನ್ನ ಪತಿಯ ಚಿತೆಯನ್ನು ಏರಲು ಸಿದ್ಧಳಾಗಿ ನಿಂತುಬಿಟ್ಟಿದ್ದಾಳೆ. ಅವಳನ್ನು ರಾವಣ-ಅನಲೆಯಲ್ಲದೆ ಬೇರೆ ಯಾರು ತಡೆದಾರು? ಅನಲೆ ತಡೆದು ನಿಲ್ಲಿಸಿದ್ದಾಳೆ. ದೊಡ್ಡಪ್ಪನನ್ನು ಕರೆತರಲು ಆಳನಟ್ಟಿದ್ದಾಳೆ. ವಿಷಯ ತಿಳಿದು ಧಾವಿಸಿ ಬಂದ ರಾವಣನಿಗೆ ಕಂಡದ್ದು, ಅನಲೆಯ ಅಪ್ಪುಗೆಯಲ್ಲಿ ಕುಸಿದ ಸೊಸೆ, ಮಗ ಮೇಘನಾದನ ವಲ್ಲಭೆ, ಮೊಮ್ಮಗ ವಜ್ರಾರಿಯ ತಾಯಿ, ತಾರಾಕ್ಷಿ. ರಾವಣ ಮರಗಟ್ಟಿ ನಿಲ್ಲುತ್ತಾನೆ. ಕವಿ ಉದ್ಘರಿಸುತ್ತಾರೆ: "ರಾಮಾಸ್ತ್ರತತಿಯಿಂ ಮುಂದೆ ಜಜ್ಜರಿತನಾದನ್ ಎಂಬುದು ಬರಿಯ ಕಥೆಯಲ್ತೆ?"
ದೊಡ್ಡಪ್ಪ ಬಂದುದನ್ನು ಕಂಡ ಅನಲೆ "ಸಖೀ, ಮಾವನದೊ! ಸುತನ ಸಾವಿನ ಸಿಡಿಲ್ ಬಡಿದು ಉಸಿರ್ ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್ ಗರಂ ತನಗೆರಗಿದಂತೆ" ಎನ್ನುತ್ತಾಳೆ. ಇಲ್ಲಿ ಅನಲೆಯ ಸಮಯಪ್ರಜ್ಞೆಯನ್ನೂ, ಅವಳ ಒಂದೊಂದು ಮಾತನ್ನೂ ಗಮನಿಸಬೇಕು. ’ಸಖೀ’ ಎಂದು ಸಂಬೋಧಿಸುವಲ್ಲೇ ಅವಳ ಮಾತೃಹೃದಯದ ಪರಿಚಯ ಮಾಡಿಸುತ್ತಾಳೆ. ಜೊತೆಗೆ, ’ನಿನ್ನ ನೋವ್ ಗರಂ ತನಗೆರಗಿದಂತೆ’ ಎಂದು ಹೇಳಿ ಆಕೆಯ ದುಃಖದ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸುತ್ತಾಳೆ. ರಾವಣ ಸೊಸೆಯನ್ನು ಸಮಾಧಾನ ಮಾಡಿ, ’ತಾನೇ ಸೇನಾಧಿಪನ ಪಟ್ಟವನ್ನು ಕಟ್ಟಿಕೊಂಡು ಯುದ್ಧವನ್ನು ಕೊನೆಗಾಣಿಸುತ್ತೇನೆ’ ಎಂದು ನಿಶ್ಚಯಿಸುತ್ತಾನೆ. ಸೊಸೆಗೆ ಮಗನನ್ನು ತೋರಿಸುವ ಇಚ್ಛೆಯಿಂದ, ವಜ್ರಾರಿಯನ್ನು ಹುಡುಕುತ್ತಾನೆ. ಅನಲೆ, ತಾಯಿ ಸರಮೆಯ ಬಳಿಯಿದ್ದ ವಜ್ರಾರಿಯನ್ನು ತಂದು ರಾವಣನ ಕೈಗೆ ಕೊಡುತ್ತಾಳೆ. ರಾವಣ "ಮಗಳೆ, ನೋಡಿಲ್ಲಿ ಇಹುದು ಬದುಕಿಗರ್ಥಂ, ಮತ್ತೆ ಬಾಳ್ಗೆ ಗುರಿ ನಿನಗೆ" ಎಂದು ವಜ್ರಾರಿಯನ್ನು ಆಕೆಯ ಮಡಿಲಿಗಿಡುತ್ತಾನೆ. ಅನಲೆ ಸಾಕ್ಷಿಯಾಗುತ್ತಾಳೆ ಜೊತೆಗೆ ತನ್ನ ಅತ್ತಿಗೆಯನ್ನು, ಗೆಳತಿಯನ್ನು ಉಳಿಸಿಕೊಳ್ಳುತ್ತಾಳೆ. ಹಿಂದೆ ಅನಲೆ ಸೀತೆಗೆ ಹೇಳಿದಂತೆ ಚಂದ್ರನಖಿಯೂ ರಾವಣನ ಆತ್ಮೋದ್ಧಾರಸಿದ್ಧಿಗೆ ಕೈಜೋಡಿಸುತ್ತಾಳೆ. "ಜನಕಕನ್ಯೆಯಂ ದಾಶರಥಿಗೊಪ್ಪಿಸು" ಎನ್ನುತ್ತಾಳೆ. ಅದಕ್ಕೆ ಇನ್ನೊಂದು ರೀತಿಯಲ್ಲಿ ಒಪ್ಪಿದ ರಾವಣ, 'ರಾಮನನ್ನು ಯುದ್ಧದಿ ಸೋಲಿಸಿ, ಸೆರೆಯಾಳಾಗಿಸಿ ತಂದು, ತನ್ನನ್ನು, ತನ್ನ ಸರ್ವ ಗರ್ವವನ್ನು ಸೋಲಿಸಿದ ಮೈಥಿಲಿಗೆ ಕಪ್ಪ ಕೊಡುತ್ತೇನೆ’ ಎನ್ನುತ್ತಾನೆ. ಆಗ ಚಂದ್ರನಖಿ "ಮಹಚ್ಛಿಲ್ಪಿ ನೀಂ ದಿಟಂ" ಎಂದು ಹೇಳಿ ಆನಂದಿಸುತ್ತಾಳೆ.
ಮುಂದೆ, ತನ್ನ ಎದೆಗೆ ಚುಚ್ಚಿದ ರಾಮನ ಬಾಣವನ್ನೇ, ರಾಮನೆಂದು ಭ್ರಮಿಸಿ, "ಸೆರೆ ಸಿಲ್ಕಿದನೊ ವೈರಿ" ಎಂದು ಉನ್ಮಾದಗೊಂಡು ಬಂದ ರಾವಣನನ್ನು ಸಂತೈಸಿ, ಮಂಡೋದರಿ ಬಾಣವನ್ನು ಕಿತ್ತಾಗ ರಾವಣ ಮರಣಮುಖಿಯಾಗುತ್ತಾನೆ. ತನ್ನ ಕಣ್ಣೆದುರಿಗೇ ತನ್ನ ದೊಡ್ಡಪ್ಪನು ಕಡೆಯುಸಿರೆಳೆವುದಕ್ಕೆ, ಅವನ ಹಿಂದೆಯೇ ದೊಡ್ಡಮ್ಮ ಮಂಡೋದರಿ ಮರಣವನ್ನಪ್ಪುವ ವೈಚಿತ್ರಕ್ಕೆ ಅನಲೆ ಸಾಕ್ಷಿಯಾಗುತ್ತಾಳೆ. ಮುಂದೆ, ರಾಮನೊಲಿದು ವಿಭೀಷಣನಿಗೆ ಲಂಕಾನಗರಿಯ ಪಟ್ಟಾಭಿಷೇಕವನ್ನು ನಿಶ್ಚಯಿಸುತ್ತಾನೆ. ಆದರೆ ವಿಭೀಷಣ ಅದನ್ನು ತನ್ನ ಕಯ್ಯಾರೆ, ತಾನೆ, ತಾರಾಕ್ಷಿ-ಇಂದ್ರಜಿತುವಿನ ಹಸುಳೆ ಶಿಶು ವಜ್ರಾರಿಯ ತಲೆಯ ಮೇಲೆ ಇಡುತ್ತಾನೆ. ಇವೆಲ್ಲವಕ್ಕೂ ಸಾಕ್ಷಿಯಾದ ಅನಲೆ, ಮುಖ್ಯವಾಗಿ ಸಾಕ್ಷಿಯಾಗಬಹುದಾದ ಮಹತ್ ಘಟನೆಯೊಂದಿದೆ; ಅದೇ ಸೀತಾರಾಮರ ಪುನರ್ಮಿಲನ!
ರಾಮನಾಜ್ಞೆಯನ್ನು ಹೊತ್ತು, ಸೀತೆಯನ್ನು ಕರೆದು ತರಲು ಹೊರಟ ಆಂಜನೇಯ, ವಿಭೀಷಣರ ಜೊತೆ ಅನಲೆಯೂ ಸೇರುತ್ತಾಳೆ. ಸೀತೆಯಿದ್ದ ಪರ್ಣಕುಟಿಯಿಂದ ಸ್ವಲ್ಪ ದೂರದಲ್ಲೇ ನಿಂತ ವಿಭೀಷಣ-ಆಂಜನೇಯರು, ಅನಲೆಯೊಬ್ಬಳನ್ನೇ ಸೀತೆಯ ಬಳಿಗೆ ಕಳುಹಿಸುತ್ತಾರೆ. ಆ ಕ್ಷಣ ಅನಲೆಯ ಸಂತೋಷಕ್ಕೆ ಎಣೆಯೇ ಇಲ್ಲ!
ದುಃಖವನೆಲ್ಲ ಮರೆತ ಅಣುಗಿ, ಸುಖವುಕ್ಕಿ,
ಭಾಷ್ಪಲೋಚನೆ, ಓಡಿ ಬಿಗಿದಪ್ಪಿ ಸೀತೆಯಂ,
ತೊದಲಿದಳ್, ತ್ರಿಜಟೆ ಪುಲಕಿಸಿ ಮೆಯ್ಮರೆಯುವಂತೆ:
ಶ್ರೀರಾಮ ಸಂದೇಶಮಂ ಪೊತ್ತ ಆಂಜನೇಯನಂ
ಕರೆತಂದು ನನ್ನಯ್ಯನ್ ಅದೊ ಅಲ್ಲೆ ನಿಂತಿಹನಮ್ಮ.
ನಿನ್ನ ಸಮಯವನರಿತು ಬಾ ಎಂದು ಎನಗೆ ಬೆಸಸಿದನ್
ಎನ್ನುತ್ತಾಳೆ. ಆಗ ಸೀತೆ
ಮಗಳೆ,
ಮಂಗಳದ ವಾರ್ತೆಯಂ ತಂದೆ.
ಚಿರಸುಖಿಯಾಗು.
ನೀನೊಲಿದ ವರನೆ ದೊರೆಯಲಿ ನಿನಗೆ!
ನಿನ್ನ ಕೈವಿಡಿದವಂ ಕೈಬಿಡದೆ ನಡೆಯಲೆಂದುಂ!
ಎಂದು ಅನಲೆಯನ್ನು ಆಶಿರ್ವದಿಸುತ್ತಾಳೆ. "ಪತಿಯ ವಚನಮಂ ಕೇಳ್ವಾತುರೆಗೆ ಸತಿಗೆ ನನಗೆ ಆವುದು ಅಸಮಯಂ? ಬೇಗದಿಂ ಕರೆದು ತಾರಮ್ಮಯ್ಯ ವಂದನೀಯರನಿರ್ವರುಂ!" ಎಂದು ಅನಲೆಗೆ ಹೇಳುತ್ತಾಳೆ. ಅವರಿಬ್ಬರು ಬಂದು ರಾಮನ ಸಂದೇಶವನ್ನು ಸೀತೆಗೆ ಒಪ್ಪಿಸುತ್ತಾರೆ. ಆಂಜನೇಯ-ಸೀತೆಯರ ನಡುವೆ ಸ್ವಾರಸ್ಯವಾದ ಮಾತುಕತೆ ನಡೆಯುತ್ತದೆ. ಕೊನೆಯಲ್ಲಿ, 'ಸೀತಾಂಜನೇಯರ ಜಗನ್ಮೋಹಕರ ಸಂವಾದ ಕಾವ್ಯರಸತೀರ್ಥದೊಳ್ ಮುಳುಗಿರ್ದ ರಾಕ್ಷಸೋತ್ತಮ ವಿಭೀಷಣನಿಗೆ’ ಆಂಜನೇಯನು
ಲೋಕಮಾನ್ಯೆಗೆ ಶಿರಸ್ನಾನಮಂ ಗೆಯ್ಸಿ,
ಶೀಘ್ರದಿಂ ಕರೆದು ತಾ,
ದಿವ್ಯಾಂಗರಾಗದಿಂದ ಅವತಂಸಯೋಗದಿಂ
ಭೋಗೀಂದ್ರಶಾಯಿಯರ್ಧಾಂಗಿಗೆ ಒಪ್ಪುವ ತೆರದಿ
ಸಿಂಗರಿಸಿ ಸುಮಗಂಧದಿಂ
ಎಂದು ಹೇಳುತ್ತಾನೆ. ಅವರ ಬಳಿಯೇ ನಿಂತು ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿದ್ದ ಅನಲೆಗೆ ವಿಭೀಷಣ ಹೀಗೆ ಹೇಳುತ್ತಾನೆ.
ಅನಲೆ,
ಬೆರಗು ಬಡಿದಂತೆ ಇಂತೇಕೆ ನಿಂತಿರುವೆ?
ತಡೆಯದೆಯೆ ಯಾನವೇರಿಸು ನಮ್ಮ ಭಾಗ್ಯದೀ ದೇವಿಯಂ.
ತ್ರಿಜಟೆಯ ಸಹಾಯದಿಂ, ನಿನ್ನ ತಾಯೊಡಗೂಡಿ,
ಪರಿಮಳ ದ್ರವ್ಯಮಯ ನವ್ಯ ತೈಲಂಗಳಂ ಪೂಸಿ,
ಮೀಯಿಸು ಸಖೋದಕ ಧಾರೆಯಿಂ,
ಪೊಂಗಿಂಡಿಗಳೊಳೆರೆದು ಪೊಯ್ ನೀರ್ಗಳಂ.
ಮತ್ತೆ, ಜನಕರಾಜನ ಮಗಳಿಗೆ, ಈ ದಶರಥನ ಸೊಸೆಗೆ, ರಾಮಪತ್ನಿಗೆ,
ಪಳಿಲಜ್ಜೆಯಂ ತೊರೆದು ಬಿಂಕದಿಂ ಕನಕ ಲಂಕಾ ಲಕ್ಷ್ಮಿ ತಲೆಯೆತ್ತಿ ನಿಲ್ವಂತೆವೋಲ್,
ತೊಡಿಸು, ಉಡಿಸು, ಮುಡಿಸು ದಿವ್ಯಾಂಬರ ಆಭರಣಮಂ ಪುಣ್ಯಪ್ರಸೂನಂಗಳಂ.
ಮಿಥಿಲೆಯಿಂದ ಅಂದು ಕೋಸಲಕೆ ದಿಬ್ಬಣಂಬೋದವೋಲ್,
ಇಂದೆಮ್ಮ ಲಂಕೆಯಿಂದ ಈಕೆ, ನವವಧುವೆನಲ್,
ಪ್ರಭುವೆಡೆಗೆ ಬೇಗದಿಂ ಪೋಗವೇಳ್ಕುಂ!
ತಂದೆಯ ಮಾತು ಕೇಳಿ ಸಿದ್ಧಳಾಗುತ್ತಿದ್ದ ಅನಲೆಗೆ, ಸೀತೆ ಸನ್ನೆಯಿಂದಲೇ ಅದನ್ನು ನಿರಾಕರಿಸುತ್ತಾಳೆ. ಇಂಗಿತಜ್ಞೆಯಾದ ಅನಲೆ, "ಅಸ್ನಾತೆಯಾಗಿಯೆ ಪೂಜ್ಯೆ ತೆರಳಲ್ಕೆ ಬಯಸುವಳ್, ತಂದೆ, ಪತಿಪಾದದರ್ಶನಕೆ" ಎಂದು ವಿಭೀಷಣನಿಗೆ ಹೇಳುತ್ತಾಳೆ. "ಆ ಪ್ರಭುವಿನಾಜ್ಞೆ, ದೇವಿ; ನನ್ನಿಚ್ಛೆಯೆಂದು ಅರಿಯದಿರ್" ಎನ್ನುತ್ತಾನೆ ವಿಭೀಷಣ. ಆಗ ಸೀತೆ, "ಮನ್ನಿಸು, ಮಹಾಪ್ರಾಜ್ಞ, ಭರ್ತೃವಾಜ್ಞೆಯೆ ಸತಿಗೆ ಪಥ್ಯಮಯ್. ನಿನ್ನಾಡಿತಕ್ಕೆ ಇದಿರ್ ನುಡಿಯೆನಿನ್. ತಂದೆ ನೀನು ಎನಗಿಲ್ಲಿ. ನೀನೆಂದವೋಲಕ್ಕೆ, ತಂದೆ!" ಎಂದು ನುಡಿದು ಅನಲೆಯನ್ನು ಆಶ್ರಯಿಸಿ ದಂಡಿಗೆಗೆ ಹೋಗಿ ಕುಳಿತುಕೊಳ್ಳುತ್ತಾಳೆ.
ಮುಂದೆ ಸೀತೆ ಸರ್ವಾಲಂಕಾರ ಭೂಷಿತೆಯಾಗಿ ರಾಮನಿದ್ದೆಡೆಗೆ, ಮೆರವಣಿಗೆಯಲ್ಲಿ ಬರುತ್ತಾಳೆ, ಅನಲೆಯ ಜೊತೆಗೆ. ಮೆರವಣಿಗೆಯ ನೇತೃತ್ವವನ್ನು ವಿಭೀಷಣನೇ ವಹಿಸಿರುತ್ತಾನೆ. ಕಪಿಸೈನ್ಯದ ಸಂಭ್ರಮವೂ ಮುಗಿಲು ಮುಟ್ಟುತ್ತದೆ. ಸದ್ದು ಅಡಗಿದ ಮೇಲೆ, "ಧರಾತ್ಮಜೆಯನ್ ಒರ್ವಳನೆ ಬಿಜಯಗೆಯ್ಸು ಎನ್ನೆಡೆಗೆ" ಎಂದು ರಾಮ ವಿಭೀಷಣನಿಗೆ ಆದೇಶಿಸುತ್ತಾನೆ. ವಿಭೀಷಣನಿಂದ ವಿಷಯ ತಿಳಿದ ಅನಲೆ "ನಾನುಂ ಆರ್ಯೆಯುಂ ಕೆಳೆಗೂಡಿ ಬಂದೊಡೆ ಏನ್ ಆರ್ಯಂಗೆ ತೊಂದರೆಯೆ?" ಎಂದು ವಿನೋದವಾಡುತ್ತಾಳೆ. ಆದರೆ ಸಂದರ್ಭ ಅವಳಂದುಕೊಂಡಂತೆ ಇರುವುದಿಲ್ಲ. ಅದನ್ನು ಅರಿತಿರುವ ವಿಭೀಷಣ ಮಗಳನ್ನು ಸುಮ್ಮನಿರುವಂತೆ ಸನ್ನೆ ಮಾಡುತ್ತಾನೆ. ಸಂತೋಷದಿಂದ ಪುಟಿಯುತ್ತಿದ್ದ ಅವಳ ಮುಖ ಕುಂದುತ್ತದೆ. ಸಂಕಟದಿಂದಲೇ, ಸಿಬಿಕೆಯ ಬಳಿಗೆ ಹೋಗಿ ತೆರೆಯೆಳೆದು ಸೀತೆಗೆ ವಿಷಯ ತಿಳಿಸುತ್ತಾಳೆ. ಸೀತೆ ರಾಮನ ಬಳಿ ಬಂದಾಗ, ರಾಮನಾಡುವ ಮಾತುಗಳು ವಿಭೀಷಣನಿಗೆ ಅಧಿಕಪ್ರಸಂಗದಂತೆ ಕಾಣುತ್ತವೆ. ಆದರೂ ಆತ ಅದನ್ನು ಸಹಿಸಿಕೊಳ್ಳುತ್ತಾನೆ. ಅದೆಲ್ಲವನ್ನೂ, ರಾಮನ ಮಾತುಗಳನ್ನೂ ದೂರದಲ್ಲಿಯೇ ನಿಂತು ಅನಲೆ ಕೇಳಿಸಿಕೋಳ್ಳುತ್ತಿದ್ದಾಳೆ. ತನ್ನದೇ ಕಾರಣಗಳನ್ನು ನೀಡಿ, "ರಾಕ್ಷಸಶ್ರೀಯುತೆ" ಎಂದು ಸೀತೆಯನ್ನು ನಿಂದಿಸಿ, 'ತನ್ನ ಕರ್ತವ್ಯವನ್ನು ತಾನು ಮಾಡಿದೆ' ಎಂದು ಹೇಳಿ, "ತೊಲಗುನಡೆ ಮೂರ್ಖೆ, ನೀನೆಲ್ಲಿಗಾದೊಡಂ ಎನ್ನ ಕಣ್ಮುಂದೆ ನಿಲ್ಲದಿರ್" ಎಂದು ರಾಮ ಕಠಿಣವಾಗಿ ವರ್ತಿಸುತ್ತಾನೆ.
ರಾಕ್ಷಸಂ ಮುಟ್ಟಿದನೆ?
ನಾನಲ್ತು, ದೈವಂ ಅಪರಾಧಿ.
ಮೆಯ್ಯನಲ್ಲದೆ ಮನವನೇಂ ಮುಟ್ಟಿದನೆ?
ಮುಟ್ಟಲಾರದೆ ಸುಟ್ಟು ಸೀದನಯ್
ಎಂದು ಅಬ್ಬರಿಸುತ್ತಾಳೆ. ಸೀತೆ ರಾಮನಿಗೆ ಪ್ರತ್ಯುತ್ತರವನ್ನೇನೊ ನೀಡುತ್ತಾಳೆ. ಆದರೆ ಕೊನೆಗೆ, "ಚಿತೆಯಂ ರಚಿಸು ಸೌಮಿತ್ರಿ! ಮಿಥ್ಯಾಪವಾದ ಘಾತಕೆ ಸಿಲ್ಕಿದೆನೆಗೆ ಬಾಳ್ ಮರಗೂಳನೊಂದು ಕೆಂಗೂಳ್" ಎಂದು ಲಕ್ಷ್ಮಣನಿಗೆ ಹೇಳುತ್ತಾಳೆ. ಲಕ್ಷ್ಮಣ "ಏನುಗ್ರನಗ್ರಜನೊ?" ಎಂದು ಅತ್ತಿಗೆಯ ಆಜ್ಞೆಯನ್ನು ಪಾಲಿಸುತ್ತಾನೆ. ಪತಿಗೆ ನಮಸ್ಕರಿಸಿ, ಮನದಲ್ಲಿ ಶಾಂತಿಯನ್ನಾಂತು, ನೋಡಿದವರೆಲ್ಲ ಬೆರಗಾಗುವಂತೆ ನಸುನಗುತ ಚಿತೆಯ ಬಳಿಗೆ ಬರುತ್ತಾಳೆ. ಅನಲೆ ಎಲ್ಲವನ್ನೂ ನಿಂತಲ್ಲಿಂದಲೇ ನೋಡುತ್ತಿದ್ದಾಳೆ. ಅಗ್ನಿಗೆ ನಮಸ್ಕರಿಸಿದ ಸೀತೆ,
ಮುಗಿದ ಕೈ ಮುಗಿದಂತೆ,
ತಪ್ತ ನವ ಹೇಮಾಭೆ ಪೊಕ್ಕಳ್ ಧಗದ್ಧಗಿಸುವುಜ್ಜ್ವಲ ಚಿತಾಗ್ನಿಯಂ,
ಮಂಗಳಾಜ್ಯಾಹುತಿಯವೋಲ್, ಪೂಜ್ಯೆ!
ಓಒಓ ಹೋಯೆಂದು ಹರಿದು ಹಬ್ಬಿದುದು
ಅಹಾ ರೋದನಂ ರೋದೋಂತಮಂ!
ಅಲ್ಲಿ ನೆರೆದಿದ್ದವರೆಲ್ಲಾ, ತಮ್ಮ ಕಣ್ಣೆದುರಿಗೇ ಸೀತೆ ಚಿತೆಗೆ ಬಿದ್ದಿದ್ದನ್ನು ಕಂಡು ದಿಗಿಲುಗೊಂಡು ರೋಧಿಸುತ್ತಿದ್ದಾರೆ. ಅಷ್ಟರಲ್ಲಿ, ಯಾರೂ ಊಹಿಸದಿದ್ದ, ಸ್ವತಃ ಲಕ್ಷ್ಮಣ, ಆಂಜನೇಯ, ಸುಗ್ರೀವ, ವಿಭೀಷಣ, ಅನಲೆಯರೂ ಊಹಿಸದಿದ್ದ ಘಟನೆಯೊಂದು ಕ್ಷಣಮಾತ್ರದಲ್ಲಿ ಘಟಿಸಿಬಿಡುತ್ತದೆ!
ನಿಷ್ಠುರಂ ಶಿಲಾಮೂರ್ತಿಯೆನೆ ನಿಷ್ಪಂದನಾಗಿ ನಿಂದು
ಅನಿತುಮಂ ಸಾಕ್ಷಿಯೊಲ್ ನಿಟ್ಟಿಸುತ್ತಿರ್ದ
ರಾಮಾನನಂ ತಾನಾಯ್ತು ದೀಪ್ಯಮಾನಂ.
ಚಲಿಸಿದನು ಚಿತೆಗೆ,
ನೋಳ್ಪರ್ ಆ ವಿಸ್ಮಯಂ ಚಿಂತೆಗೆ ತಿರುಗುವಂತೆ.
ಓವೊವೋ ಎಂಬನಿತರೊಳೆ ತಾಂ ಪ್ರವೇಶಿಸುತ್ತ
ಉಜ್ಜ್ವಲಿಪ ಗೋಪುರೋಪಮದ ಅಗ್ನಿ ಮಧ್ಯೆ
ಮರೆಯಾದನೈ ಜಮದಗ್ನಿಜಾತನಂ ಜಯಿಸಿದಾತಂ!
ಅಲ್ಲಿ ನೆರೆದಿದ್ದವರೆಲ್ಲರಿಗೂ, ಒಂದು ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಇನ್ನೊಂದು ಆಘಾತ! ’ದೇವರಪೂಜೆಗೆಂದು ಬಂದವರ ಮೇಲೆ ದೇವಸ್ಥಾನವೇ ಬಿದ್ದಂತಾಯ್ತು’. ಸೀತಾರಾಮರ ಪುನರ್ಮಿಲನಕ್ಕೆ ಸಾಕ್ಷಿಯಾಗಬೇಕಾದವರು, ಅವರಿಬ್ಬರ ಅಗ್ನಿಪ್ರವೇಶಕ್ಕೆ ಸಾಕ್ಷಿಯಾಗಬೇಕಾಯಿತು. ರಾಮ ಸೀತೆಗೆ ’ಅಗ್ನಿಪ್ರವೇಶ ಮಾಡು’ ಎಂದು ಹೇಳಲೇ ಇಲ್ಲ. ಆಯ್ಕೆಯನ್ನು ಅವಳಿಗೆ ಬಿಟ್ಟು, ’ನೀನು ಸ್ವತಂತ್ರಳು’ ಎಂದ. ಆದರೆ ಆಕೆ ಹಿಡಿದ ಹಾದಿಯನ್ನೇ ತಾನೂ ಆರಿಸಿಕೊಂಡ! ಆದರೆ, ನೋಡುವವರಿಗೆ, ಅದು, ’ಸೀತೆಯನ್ನು ರಕ್ಷಿಸುವುದಕ್ಕೆ ರಾಮನೂ ಅಗ್ನಿಪ್ರವೇಶ ಮಾಡಿದ್ದಾನೆ’ ಎಂಬಂತೆ ಸಹಜವಾಗಿಯೇ ನಡೆದುಹೋಗಿದೆ. ಪ್ರತಿಯೊಂದು ಚೇತನವೂ ರಾಮನ ಸ್ಮರಣೆಯಲ್ಲಿ ಮುಳುಗಿಬಿಡುತ್ತದೆ. ಆಗ ಅನಲೆಯ ಮನದಲ್ಲಿ ಬಹುದೊಡ್ಡ ಕೋಲಾಹಲವೇ ನಡೆಯುತ್ತಿರುತ್ತದೆ. ಎಲ್ಲರೂ ನೋಡು ನೋಡುತ್ತಲೇ,
ಹವ್ಯವಾಹನ ಪವಿತ್ರತನುವಿಂ
ಪೊಣ್ಮಿದನು ದಶರಥಾತ್ಮಜಂ
ಜಾನಕೀ ಪಾಣೀಗ್ರಹಣ ಕೃಪಾಲು!
ಸೀತೆಯಂ ಪಾವನಾಗ್ನಿಸ್ನಾತೆಯಂ,
ಕಿರ್ಚ್ಚಿನುರಿಯಿಂದೆ ಕಾಯ್ವ ತೆರದಿಂದೆ,
ಕರೆತಂದನೊಯ್ಯನೆ ಪೊರಗೆ
ದುರಿತವಿರಹಿತ ಶಾನ್ತ ಹರಿತಶಾದ್ವಲ ಚಾರು ಆ ಗಿರಿಯ ವೇದಿಕೆಗೆ.
ರಾಮನು ಸೀತೆಯೊಂದಿಗೆ ಚಿತೆಯಿಂದ ಮೇಲೆದ್ದು ಬರುತ್ತಾನೆ. ದಿವ್ಯದೇಹದಿಂದ, ದಿವ್ಯ ಮಾಲ್ಯಾಂಬರಗಳಿಂದ, ದಿವ್ಯತೇಜಸ್ಸಿನಿಂದ ಶೋಭಿಸುತ್ತಿದ್ದ ಸೀತಾರಾಮರನ್ನು ಕಂಡು ಕಪಿವೃಂದವೂ, ಲಂಕೆಯ ಜನರೂ ಹರ್ಷೋದ್ಗಾರದಿಂದ ಸ್ವಾಗತಿಸುತ್ತಾರೆ. ಆಗ,
.........ಓಡಿ ಬಂದ ಅನಲೆ
ದಿಂಡುಗೆಡೆದಳು ರಾಮಪದತಲದಿ ಸಂತೋಷಮೂರ್ಛಿತೆಯವೋಲ್:
ಮನ್ನಿಸೈ, ಸ್ವಾಮಿ;
ದೇವಿಯಂ ನಿಂದಿಸಿದ ನಿನ್ನನ್ ಎನಿತೆನಿತೊ ನಾಂ ಬಯ್ದೆನಯ್.
’ಹದಿಬದೆಯನ್ ಅಗ್ನಿವುಗಿಸುವುದಿರಲಿ, ತನ್ನಂ ಪರೀಕ್ಷಿಸುವರಾರೊ?
ತಾನೇಂ ಪೊರತೊ ದುರಿತ ದೋಷಕೆ?’
ಎನುತೆ ಶಂಕಿಸಿದೆನ್, ಆ ನಿಂದೆ ಭಸ್ಮವಾಯಿತು, ತಂದೆ,
ನೀನೊಡ್ಡಿದ ಈ ಚಿತೆಯ ಲೋಕಪಾವಕ ಪವನಸಖನಿಂದೆ:
ಪೂಜ್ಯೆಯಂ ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ!
ಲೋಕತೃಪ್ತಿಗೆ ಲೋಕಮರ್ಯಾದೆಗೆ ಒಳಗಾದೆ;
ಸರ್ವಲೋಕಪ್ರಭುವೆ, ಲೋಕಗುರು ನೀಂ ದಿಟಂ!
ಶತಶತಮಾನಗಳಿಂದ, ವಾಲ್ಮೀಕಿ ರಾಮಾಯಣದ ಈ ಸನ್ನಿವೇಶವನ್ನು ಓದಿ, ಕೇಳಿ ವ್ಯಾಕುಲಗೊಂಡಿದ್ದ, ಕ್ರೋಧಗೊಂಡಿದ್ದ, ಚಿಂತಿತವಾಗಿದ್ದ ಮನಸ್ಸುಗಳ ಪ್ರತಿನಿಧಿಯಂತೆ ಅನಲೆ ಮಾತನಾಡಿದ್ದಾಳೆ. ರಾವಣ ಮಹಾಶಿಲ್ಪಿ ಎಂದು ಚಂದ್ರನಖಿ ಹೇಳಿದ್ದಳು. ಇಲ್ಲಿ ಅನಲೆ ’ಲೋಕಗುರು’ ಎಂದು ರಾಮನಿಗೆ ಹೇಳುತ್ತಿದ್ದಾಳೆ! ರಾವಣತ್ವವು ಕಳೆದ ಮೇಲೆ ರಾವಣನೂ ರಾಮನೆ! ಯಾರೂ ಬೇಕಾದರೂ ರಾಮನಾಗಬಹುದು; ರಾವಣತ್ವವನ್ನು ತ್ಯಜಿಸುವುದರ ಮೂಲಕ. ಅಲ್ಲಿಯವರೆಗು ಕಣ್ಣ ಮುಂದೆ ನಡೆದ ಘಟನಾವಳಿಗಳನ್ನು, ಸಹೃದಯ ವಿಮರ್ಶಕಿಯಾಗಿ ಅನಲೆ ಅವಲೋಕಿಸಿತ್ತಾಳೆ. ಆಕೆಯ ಮಾತು ಅಲ್ಲಿ ನೆರೆದಿದ್ದವರಿಗೆಲ್ಲಾ ಹೃದಯದಂತರ್ ಬೋಧೆಯಾಗಲು, ಪ್ರತಿಯೊಬ್ಬರೂ ಬಂದು ಸೀತಾರಮರಿಗೆ ನಮಸ್ಕರಿಸುತ್ತಾರೆ.
ರಾಮಾಯಣದ ಪ್ರಮುಖ ಘಟ್ಟ ಸೀತೆಯ ಅಗ್ನಿಪ್ರವೇಶ. ಸೀತೆಯನ್ನು ರಕ್ಷಿಸುವ ನೆಪದಲ್ಲಿ ತಾನೂ ಪರೀಕ್ಷೆಗೆ ಒಳಪಡುವ ಉದಾತ್ತನನ್ನಾಗಿಸಿ ಶ್ರೀರಾಮನನ್ನು ಚಿತ್ರಿಸಿ, ಶ್ರೀರಾಮಾಯಣದರ್ಶನವನ್ನಾಗಿಸಿದ ಕವಿಪ್ರತಿಭೆ, ಆ ಘಟನೆಯ ನಂತರ ಅನಲೆಯೊಬ್ಬಳ ಮಾತುಗಳ ಮೂಲಕವೇ, ಅದರ ಅಂತರಾರ್ಥವನ್ನು ಜಗತ್ತಿಗೆ ಸಾರುವ ಮೂಲಕ ತಾನು ಸೃಜಿಸಿದ ಪಾತ್ರಕ್ಕೆ ಒಂದು ವಿಶೇಷ ವ್ಯಕ್ತಿತ್ವವನ್ನು ಆರೋಪಿಸಿ ಅನಲೆಯನ್ನು ಅಜರಾಮರಗೊಳಿಸಿದೆ.
ಅನಲೆಯನ್ನುಳಿದ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ, ಅನಲೆ ಇಡೀ ಕಾವ್ಯವನ್ನು ಆವರಿಸಿದ್ದಾಳೆ. ಆಕೆ ಕೇವಲ ಒಂದು ಪಾತ್ರವಾಗಿ ಉಳಿಯದೆ ಬೆಳೆಯುತ್ತಾ ಹೋಗುವ ಪರಿಯೇ ಒಂದು ಅಚ್ಚರಿ! ತನ್ನ ದರ್ಶನದ ಪ್ರತಿಪಾದನೆಗಾಗಿ, ತನ್ನ ಆದರ್ಶಕ್ಕೆ ಅನುಗುಣವಾದ ಒಂದು ಹೊಸ ಪಾತ್ರವನ್ನೇ ಸೃಷ್ಟಿಸಿ, ಆ ಪಾತ್ರ ರಾಮಾಯಣಕ್ಕೆ ಅನಿವಾರ್ಯ ಎನ್ನಿಸುವಂತೆ ಅದನ್ನು ಪೋಷಿಸಿದ್ದಾರೆ ಕವಿ. ಸರಮೆ, ವಿಭೀಷಣರನ್ನು ಹೆಸರಿಸುವಾಗ ಅನಲೆಯ ಬೊಪ್ಪ, ಅನಲೆಯ ತಾಯಿ ಎಂದು ಕಾವ್ಯದುದ್ದಕ್ಕೂ ಅನಲೆಯನ್ನು ನೆನಪಿಸುತ್ತಿರುತ್ತಾರೆ. ರಾವಣನ ಶ್ರೀದೇಹಕ್ಕೆ ಕಿಚ್ಚನ್ನಿಕ್ಕುವುದು ವಿಭೀಷಣ ಎನ್ನುವದಕ್ಕೆ ಬದಲಾಗಿ ’ಅನಲೆಯ ತಂದೆ ಕಿರ್ಚಿಡಲ್’ ಎನ್ನುತ್ತಾರೆ. ಈ ಎಲ್ಲಾ ಕಾರಣಗಳಿಂದಲೇ ನಾನು ಅನಲೆಯನ್ನು ’ಕವಿಮಾನಸಪತ್ರಿ’ ಎಂದು ಕರೆದದ್ದು. ಅನಲೆಯ ಪಾತ್ರವೊಂದೇ ಸಾಕು, ಕುವೆಂಪು ಅವರ ಕಲಾಸೃಷ್ಟಿಯ ವಿಶ್ವವಿರಾಡ್-ಸ್ವರೂಪವನ್ನರಿಯಲು. ಅನಲೆ ಕೂಡುಕುಟುಂಬವೊಂದರ ಮುದ್ದಿನ ಮಗಳು. ತಂದೆ ವಿಭೀಷಣ, ತಾಯಿ ಸರಮೆ. ದೊಡ್ಡಪ್ಪಂದಿರು ರಾವಣ-ಕುಂಭಕರ್ಣ. ದೊಡ್ಡಮ್ಮ ಮಂಡೋದರಿ, ಅಣ್ಣ ಇಂದ್ರಜಿತು, ಅತ್ತಿಗೆ-ಗೆಳತಿ ತಾರಾಕ್ಷಿ. ಪುಟ್ಟ ಹುಡುಗಿಗೆ ಆಡಲು ಇರುವ ಒಂದು ಜೀವಂತ ಗೊಂಬೆಯಂತೆ ವಜ್ರಾರಿ! ಬದುಕಿನ ಪ್ರಮುಖ ಘಟ್ಟದಲ್ಲಿ ಗುರುವಿನೋಪಾದಿಯಲ್ಲಿ ದೊರೆತ ಸೀತೆ, ಜೀವಿತಕ್ಕೊಂದು ದರ್ಶನವನ್ನೊದಗಿಸಿದ ರಾಮ. ಶ್ರೀಕುವೆಂಪುವ ಸೃಜಿಸಿದ ರಾಮಾಯಣದಲ್ಲಿ ಅನಲೆ ಮಕುಟಮಣಿಯಾಗಿದ್ದಾಳೆ, ನಿತ್ಯನೂತನಳಾಗಿದ್ದಾಳೆ, ಸಹೃದಯಶ್ರೀಯ ಪ್ರತಿನಿಧಿಯಾಗಿದ್ದಾಳೆ.
 ಅನಲೆಯಂತಹ ಮಗಳು ಮನೆಗೊಬ್ಬಳಿರಲಿ ಎನ್ನಿಸಿದರೆ ಅದು ದುರಾಸೆಯಲ್ಲ! ಆದ್ದರಿಂದಲೇ, "ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್!" ಎಂಬುದು ಕೇವಲ ರಾವಣನ ಮಾತಾಗಿ ಉಳಿಯದೆ, ಕವಿಯ ಮಾತೂ ಆಗುತ್ತದೆ; ಸಹೃದಯರ ಮಾತೂ ಆಗುತ್ತದೆ!
[ಮುಗಿಯಿತು]