Monday, April 30, 2012

ಶಿಲ್ಪಕಲೋನ್ನತಿಯ ಶಿಖರ: ಅಮೃತೇಶ್ವರ ದೇವಾಲಯ


ಕರ್ನಾಟಕದ ವಾಸ್ತು ಮತ್ತು ಶಿಲ್ಪಕಲೆಗೆ ಹೊಯ್ಸಳ ಅರಸರ ಕೊಡುಗೆ ಅಪಾರ. ಸುಮಾರು ಇನ್ನೂರೈವತ್ತು ವರ್ಷಗಳ ಕಾಲ ರಾಜ್ಯವಾಳಿದ ಹೊಯ್ಸಳರು, ಕಲ್ಯಾಣಿ ಚಾಲುಕ್ಯರ ವಾಸ್ತುಶೈಲಿಯನ್ನು ಮುಂದುವರೆಸಿ ನೂರಾರು ಅತ್ಯಂತ ಸುಂದರವಾದ ದೇವಾಲಯಗಳನ್ನು ಕಟ್ಟಿದ್ದಾರೆ. ಗಾತ್ರದಲ್ಲಿ ಚಿಕ್ಕದಾದರು, ಬಹುಶಃ ಬೇಲೂರು ಹಳೇಬೀಡು ದೇವಾಲಾಯಗಳಷ್ಟೇ ಸುಂದರವಾದ ದೇವಾಲಯಗಳಲ್ಲಿ ಅಮೃತಾಪುರದ ಅಮೃತೇಶ್ವರ ದೇವಾಲಯವೂ ಒಂದು.

ಚಿಕ್ಕಮಂಗಳೂರು ಜಿಲ್ಲೆ ತರೀಕೆರೆ ತಾಲ್ಲೋಕಿನ ಅಮೃತಾಪುರ ಐತಿಹಾಸಿಕ ಸ್ಥಳ. ಸುಮಾರು ಒಂದು ಸಾವಿರ ವರ್ಷಗಳ ಕಾಲ ಇತಿಹಾಸವಿರುವ ಈ ಊರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಸ್ಥಳ. ಇಲ್ಲಿ ಹತ್ತು ಶಾಸನಗಳು ದೊರೆತಿವೆ. ಕನ್ನಡ ಸಾಹಿತ್ಯಲೋಕದ ಕವಿಚಕ್ರವರ್ತಿಗಳಲ್ಲಿ ಒಬ್ಬನಾದ ಜನ್ನ ರಚಿಸಿರುವ ಎರಡು ಶಾಸನಗಳಲ್ಲಿ ಒಂದು ಇಲ್ಲಿದೆ. ಕ್ರಿ.ಶ. ೧೧೯೮ ಜನವರಿ ಒಂದಕ್ಕೆ ಸರಿಹೊಂದುವ ಈ ಶಾಸನದ ರಚನೆ ಜನ್ನನದಾದರೆ, ಲಿಪಿಕಾರ ನಾಕಂಣ್ನ. ಕಲ್ಲಿನಲ್ಲಿ ಕೆತ್ತಿದವನು ರೂವಾರಿ ಮಲ್ಲೋಜ. ಪುಟ್ಟ ಚಂಪೂ ಕಾವ್ಯವೆನಿಸಿರುವ ಈ ಶಾಸನದಲ್ಲಿ ಚೈತ್ರಪರ್ವಿ ಎಂಬ ಹಬ್ಬದ ಬಗ್ಗೆ ವಿವರಗಳಿರುವುದು ವಿಶೇಷ. ಅಮೃತೇಶ್ವರ ದೇವಾಲಯವನ್ನು ಕಟ್ಟಿಸಿದ ಹೊಯ್ಸಳ ವೀರಬಲ್ಲಾಳನ ದಂಡನಾಯಕ ಅಮಿತ ಎಂಬುವವನು ಬಿಟ್ಟ ದಾನ-ದತ್ತಿ ವಿಚಾರಗಳನ್ನು ಶಾಸನ ತಿಳಿಸುತ್ತದೆ. ಸೋಮನಾಥಪುರ, ಅರಸೀಕೆರೆ, ನುಗ್ಗೆಹಳ್ಳಿ, ಹಾರನಹಳ್ಳಿ ಮೊದಲಾದ ದೇವಾಲಯಗಳ ಪ್ರಮುಖ ರೂವಾರಿ ಮಲ್ಲಿತಮನೇ ಈ ದೇವಾಲಯದ ರೂವಾರಿಯಾಗಿರುವುದು ವಿಶೇಷ.

ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಅಮೃತೇಶ್ವರ ಲಿಂಗವಿದ್ದರೆ, ನವರಂಗದಲ್ಲಿ ಸರಸ್ವತೀ, ಸಪ್ತಮಾತೃಕಾ ಮೊದಲಾದ ಶಿಲ್ಪಗಳಿವೆ. ಸುಮಾರು ಐದು ಅಡಿ ಎತ್ತರವಿರುವ ಆಸೀನ ಸರಸ್ವತೀ ಶಿಲ್ಪವಂತೂ ಅತ್ಯಂತ ಸುಂದರ ಕಲಾಕೃತಿಯಾಗಿದೆ. ನವರಂಗದ ದಕ್ಷಿಣದ್ವಾರದ ಮುಖಾಂತರ ಹೊರಕ್ಕೆ ಬಂದರೆ ಇನ್ನೊಂದು ಮಂಟಪವಿದೆ. ಅದನ್ನು ಸರಸ್ವತೀ ಮಂಟಪವೆಂದೂ, ದೇವೀಗುಡಿಯೆಂದೂ ಹೇಳುತ್ತಾರೆ.

ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ವಿಶಾಲವಾದ ಮುಖಮಂಟಪ. ಐವತ್ತಕ್ಕೂ ಹೆಚ್ಚು ವಿವಿಧ ವಿನ್ಯಾಸದ ಆಕರ್ಷಕ ಕಂಬಗಳಿಂದ ಕೂಡಿದ ಮಂಟಪ ೧೨೦೬ರಲ್ಲಿ ರಚಿತವಾಗಿದ್ದೆಂದು ತಿಳಿದು ಬರುತ್ತದೆ. ಮೂವತ್ತಕ್ಕೂ ಹೆಚ್ಚು ಅಂಕಣಗಳಿದ್ದು, ಪ್ರತೀ ಅಂಕಣಕ್ಕೂ ಪ್ರತ್ಯೇಕ ಭುವನೇಶ್ವರಿಗಳಿವೆ. ಒಂದರಂತೆ ಇನ್ನೊಂದಿಲ್ಲ. ಕಲ್ಯಾಣಿ ಚಾಲುಕ್ಯರ ದೇವಾಲಯಗಳಲ್ಲಿ ಕಂಡುಬರುವಂತೆ, ಭುವನೇಶ್ವರಿಗಳಲ್ಲಿ ಗಣೇಶ, ಶಿವ, ಷಣ್ಮುಖ, ಬ್ರಹ್ಮ, ಸರಸ್ವತೀ, ವೇಣುಗೋಪಾಲ ಮೊದಲಾದ ನೂರಾರು ಶಿಲ್ಪಗಳಿವೆ. ಶಿಲ್ಪಗಳ ಸಾಲಿನಮೇಲೆ ಅಷ್ಟದಿಕ್ಪಾಲಕರನ್ನು ಕಾಣಬಹುದು. ಮಂಟಪದ ನಡುವೆ ಅಲಂಕೃತ ನಂದಿಯಿದೆ.
ದೇಗುಲದ ಹೊರಭಾಗವಂತೂ ಶಿಲ್ಪಕಲಾ ಚಾತುರ್ಯದ ಔನ್ನತ್ಯವೆನ್ನಬಹುದು. ಸೂಕ್ಷ್ಮ ಕೆತ್ತನೆಗಳ ನೂರಾರು ಶಿಖರಗಳ ಸಣ್ಣ ಸಣ್ಣ ಮಾದರಿಗಳನ್ನು ಕೆತ್ತಲಾಗಿದೆ. ಇವುಗಳ ಮಧ್ಯದಲ್ಲಿ ಸಿಂಹ, ಆನೆ, ನವಿಲು, ಕಪಿ, ಹಂಸ, ಮಿಥುನ ಶಿಲ್ಪಗಳ ಸಮೂಹವೇ ಇದೆ. ರಾಮಾಯಣ, ಭಾಗವತ ಮತ್ತು ಮಹಾಭಾರತದ ಕಥಾ ಸಂಧರ್ಭಗಳನ್ನು ಚಿತ್ರಿಸಲಾಗಿದೆ. ಇವುಗಳನ್ನು ವಿವರವಾಗಿ ನೋಡಲು ಕನಿಷ್ಟ ಒಂದು ದಿನವಾದರೂ ಬೇಕು! ಬೇಲೂರು ಹಳೇಬೀಡು ಮತ್ತು ಸೋಮನಾಥಪುರದ ದೇವಾಲಯಗಳಲ್ಲಿ ಕಂಡುಬರುವ ಶಿಲ್ಪಗಳಿಗಿಂತ ಸುಂದರವಾದ ಶಿಲ್ಪಗಳೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ದಕ್ಷಿಣದಲ್ಲಿ ದಶರಥನ ಪುತ್ರಕಾಮೇಷ್ಠಿ, ಮೂವರು ರಾಣಿಯರು, ನಾಲ್ವರು ಮಕ್ಕಳು, ರಾಮಲಕ್ಷ್ಮಣರು ವಿಶ್ವಾಮಿತ್ರನೊಡನೆ ಹೋಗುತ್ತಿರುವುದು, ತಾಟಕಿಯ ವಧೆ, ಶಿವಧನಸ್ಸನ್ನು ಮುರಿಯುವುದು, ವನವಾಸದ ದೃಶ್ಯಗಳು, ಸ್ವರ್ಣಮೃಗದ ಬೇಡಿಕೆ, ಸೀತಾಪಹರಣ, ವಾಲಿ-ಸುಗ್ರೀವರ ಯುದ್ಧ, ಸೇತುಬಂಧ, ಕುಂಭಕರ್ಣನನ್ನು ಎಬ್ಬಿಸುವುದು ಹಾಗೂ ಯುದ್ಧದ ಸನ್ನಿವೇಶಗಳು ನೂರಾರು ಶಿಲ್ಪಗಳಲ್ಲಿ ನಿರೂಪಿತವಾಗಿವೆ.

ಉತ್ತರಭಾಗದಲ್ಲಿ ಕೃಷ್ಣನ ಜನನ, ವಸುದೇವನು, ಯಮುನಾ ನದಿ ದಾಟುವುದು, ಗೋಕುಲದಲ್ಲಿ ಕೃಷ್ಣನ ತುಂಟಾಟಗಳು, ಕಾಳಿಂಗಮರ್ಧನ, ಗೋವರ್ಧನಧಾರಿ, ವೇಣುಗೋಪಾಲ ಮೊದಲಾದ ಶಿಲ್ಪಗಳು ಅತ್ಯಂತ ಸುಂದರವಾಗಿ ಚಿತ್ರಿತವಾಗಿವೆ. ಕಂಸ ವಧೆಯ ಪ್ರಸಂಗಗಳನ್ನು ವಿವರವಾಗಿ ಬಿಡಿಸಲಾಗಿದೆ. ಪಾಂಡವರ ಜನನದಿಂದ ಲಾರಂಭಿಸಿ ಭೀಮನು ಕೌರವರನ್ನು ಮರದಿಂದ ಬೀಳಿಸುವುದು, ದ್ರುಪದನ ಗರ್ವಭಂಗ, ಅರಗಿನ ಮನೆಯನ್ನು ಸುಡುವುದು, ಬಕಾಸುರ ವಧೆ, ಮತ್ಸ್ಯಯಂತ್ರ ಭೇದನ, ದ್ರೌಪದೀ ಸ್ವಯಂವರ, ರಾಜಸೂಯ ಯಾಗ, ಪಗಡೆಯಾಟ, ದ್ರೌಪದೀ ವಸ್ತ್ರಾಪಹರಣ, ವನವಾಸ, ಗೋಗ್ರಹಣ, ಕಿರಾತನಾರ್ಜುನವಿಜಯ ಮುಂತಾದ ಪ್ರಸಂಗಗಳು ನೂರಾರು ಶಿಲ್ಪಗಳಲ್ಲಿ ಚಿತ್ರಿತವಾಗಿವೆ.

ಇಲ್ಲಿನ ಸುಖನಾಸಿಯೂ ವಿಶೇಷವಾಗಿದ್ದು, ಮೇಲೆ ಹೊಯ್ಸಳನ ಶಿಲ್ಪವಿದೆ. ಇಕ್ಕೆಲಗಳಲ್ಲಿ ಬ್ರಹ್ಮ, ವಿಷ್ಣು, ಗಜಾಸುರಮರ್ಧನ ಶಿವ, ನಂದಿ ಗಣೇಶ ಮೊದಲಾದ ಶಿಲ್ಪಗಳಿವೆ. ಉಳಿದ ಭಿತ್ತಿಯ ಮತ್ತು ಛಾವಣಿಯ ಭಾಗಗಳು ವಿವಿಧ ಚಿತ್ತಾರದ ’ಶಿಲಾರಂಗೋಲಿ’ ಎನ್ನಬಹುದಾದ ಕೆತ್ತನೆಗಳಿಂದ ತುಂಬಿ ಹೋಗಿವೆ. ಅಮೃತಕಳಶವನ್ನು ಹಿಡಿದಿರುವ ಅಮೃತೇಶ್ವರನ, ಸುಮಾರು ನೂರಕ್ಕೂ ಹೆಚ್ಚು ಶಿಲ್ಪಗಳನ್ನು ಸ್ಥಳವಿದ್ದಲ್ಲೆಲ್ಲಾ ಬಿಡಿಸಲಾಗಿದೆ.
ಇಡೀ ದೇವಾಲಯವನ್ನು ಸುತ್ತವರೆದಂತೆ ಒಂದು ದೊಡ್ಡ ಪ್ರಾಕಾರವಿದೆ. ಈ ಪ್ರಾಕರವೂ ವಿವಿಧ ವಿನ್ಯಾಸದ ಕಲಾಕೃತಿಗಳಿಂದ ಅಲಂಕೃತವಾಗಿರುವುದು ಇಲ್ಲಿಯ ವಿಶೇಷ. ಹಂಸ, ಮತ್ಸ್ಯ, ಚಕ್ರ, ಪದ್ಮ, ಲಜ್ಜಾಗೌರಿ ಮೊದಲಾದ ಚಿತ್ರಗಳನ್ನು. ವೃತ್ತಾಕರದ ಅಲಂಕರಣ ಫಲಕಗಳಲ್ಲಿ ಕಾಣಬಹುದು.

ಇಷ್ಟೊಂದು ಶಿಲ್ಪಕಲಾ ಶ್ರೀಮಂತಿಕೆಯ ಈ ದೇವಾಲಯವನ್ನು ಕೇಂದ್ರ ಪುರಾತತ್ವ ಇಲಾಖೆಯವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಸುಂದರ ಹೂದೋಟವನ್ನೂ ನಿರ್ಮಿಸಿದ್ದಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಅನುಕೂಲವಿಲ್ಲ. ಮಾಹಿತಿಯೂ ಇಲ್ಲ. ತರೀಕೆರೆಯಿಂದ ಇಲ್ಲಿಗೆ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲ. ರಸ್ತೆಯಂತೂ ಕೇಳುವಂತೆಯೇ ಇಲ್ಲ. ಈ ರಸ್ತೆಯ ನೆವದಿಂದಲೆ, ಇಲ್ಲಿಗೆ ಬಂದು ಹೋಗಲು ತರೀಕೆರೆಯ ಆಟೋರಿಕ್ಷಾದವರು ಹೆಚ್ಚು ಹಣ ಕೇಳುತ್ತಾರೆ. ಪ್ರವಾಸೋದ್ಯಮ ಇಲಾಖೆಯವರು ಮನಸ್ಸು ಮಾಡಿದರೆ, ಚಿಕ್ಕಮಂಗಳೂರು ಜಿಲ್ಲೆಗೆ, ಅದರಲ್ಲೂ ವಿಶೇಷವಾಗಿ ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್‌ಗಿರಿಗೆ ಬರುವ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಒದಗಿಸಿ, ಇಲ್ಲಿಗೆ ಬರುವಂತೆ ಮಾಡಬಹುದು. ಆ ದಿನಗಳು ಬೇಗ ಬರಲಿ ಎಂದು ಆಶಿಸೋಣ.

2 comments:

Harihara Sreenivasa Rao said...

chitra vivarane chennagide
Dr.Harihara Sreenivasa Rao

ModMani said...

sir is it chikkamagaluru athava chikka mangaluru ..?