Friday, March 15, 2013

ನಿಷ್ಕಾಮ ಕರ್ಮಯೋಗಿ - ಅಭಿನವ ಗಾಂಧಿ : ಶ್ರೀ ಕಲ್ಯಾಣಸುಂದರಂ


ವೃತ್ತಿಯಿಂದ ಗ್ರಂಥಪಾಲಕರಾಗಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶ್ರೀ ಕಲ್ಯಾಣಸುಂದರಂ ಅವರು, ತಮ್ಮ ಸೇವಾವಧಿಯಲ್ಲಿ ದೊರಕಿದ ಸಂಬಳವನ್ನು ಸಂಪೂರ್ಣವಾಗಿ ದಾನ ಮಾಡಿ ವಿಶೇಷ ಸಾಧನೆ ಗೈದಿದ್ದಾರೆ. ಅವರೆಂದೂ ಸಂಬಳವನ್ನೇ ಡ್ರಾ ಮಾಡಿಕೊಳ್ಳಲಿಲ್ಲ. ಬಂದ ಸಂಬಳವೆಲ್ಲಾ ಅಗತ್ಯವಿರುವವರಿಗೆ ದಾನ ಮಾಡಿಬಿಡುತ್ತಿದ್ದರು. ಕೇವಲ ಸಂಬಳವನ್ನಷ್ಟೇ ಅಲ್ಲ, ತಮ್ಮ ನಿವೃತ್ತಿಯ ನಂತರ ಬಂದ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು ಭವಿಷ್ಯನಿಧಿ ಹಣ, ನಂತರ ಬರುತ್ತಿರುವ ನಿವೃತ್ತಿವೇತನವನ್ನೂ ಇಡಿಯಾಗಿ ದಾನ ಮಾಡಿ ಆದರ್ಶಪ್ರಾಯರಾಗಿದ್ದಾರೆ. ಹೀಗೆ ಬಂದುದೆಲ್ಲವನ್ನೂ ದಾನ ಮಾಡಿದರೆ ಅವರ ಜೀವನ ನಡೆಯುತ್ತಿದ್ದುದ್ದು ಹೇಗೆ? ಅವರಿಗೆ ಬೇಕಾಗಿದ್ದ ಕನಿಷ್ಠ ಅಗತ್ಯಗಳಿಗಾಗಿ ಹೋಟೆಲೊಂದರಲ್ಲಿ ಮಾಣಿಯ ಕೆಲಸ ಮಾಡಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಂಪಾದಿಸಿಕೊಂಡು, ಅತ್ಯಂತ ಸರಳವಾದ ಆದರೆ ಅತ್ಯಂತ ಅರ್ಥಪೂರ್ಣವಾದ ಬದುಕನ್ನು ಬಾಳುತ್ತಿರುವವರು ಶ್ರೀ ಕಲ್ಯಾಣಸುಂದರಂ ಅವರು. ಹೀಗೆ ತಮಗೆ ಬಂದ ಸಂಬಳದ ಹಣವನ್ನೆಲ್ಲಾ ಬೇರೆಯವರಿಗೆ ಸಾಮಾಜಿಕ ಕಾರಣಗಳಿಗಾಗಿ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ವ್ಯಕ್ತಿ ಇವರೇ ಆಗಿದ್ದಾರೆ. ಇದು ಬದುಕಿರುವಾಗಿನ ಮಾತು. ಆದರೆ ತಾವು ಸತ್ತ ಮೇಲೂ ಈ ದಾನದ ಪ್ರಕ್ರಿಯೆ ಮುಂದುವರೆಯಬೇಕು ಎಂಬಂತೆ, ಮರಣಾನಂತರ ತಮ್ಮ ಕಣ್ಣು ಮತ್ತು ಇಡೀ ದೇಹವನ್ನು ತಿರುನಲ್ವೇಲಿ ಮೆಡಿಕಲ್ ಕಾಲೇಜಿಗೆ ದಾನ ನೀಡಿ, ಹಿಮಾಲಯದೆತ್ತರಕ್ಕೆ ಏರಿಬಿಟ್ಟಿದ್ದಾರೆ.
ಇವರ ಈ ಅತ್ಯಂತ ಅಪರೂಪದ ಸಾಧನೆಯನ್ನು ಗುರುತಿಸಿದ ವಿಶ್ವಸಂಸ್ಥೆ (ಯು.ಎನ್.ಒ.) ಕಲ್ಯಾಣಸುಂದರಂ ಅವರನ್ನು ಇಪ್ಪತ್ತನೆಯ ಶತಮಾನದ ವ್ಯಕ್ತಿ ಎಂದು ಘೊಷಿಸಿ ಗೌರವಿಸಿದೆ. ಇದನ್ನು ಗಮನಿಸಿದ ಅಮೇರಿಕಾದ ಸಂಸ್ಥೆಯೊಂದು ಕಲ್ಯಾಣಸುಂದರಂ ಅವರನ್ನು ಸಹಸ್ರಮಾನದ ವ್ಯಕ್ತಿ (ಮ್ಯಾನ್ ಆಫ್ ದಿ ಮಿಲೇನಿಯಂ) ಎಂದು ಘೋಷಿಸಿರುವುದು ಮಾತ್ರವಲ್ಲದೆ ಬರೋಬ್ಬರಿ ಮೂವತ್ತು ಕೋಟಿ ರೂಪಾಯಿಗಳನ್ನು ಕಲ್ಯಾಣಸುಂದರ ಅವರಿಗೆ ದತ್ತಿಯನ್ನಾಗಿ ನೀಡಿ ಮಹತ್ವದ ಸಾಧನೆ ಮಾಡಿತು. ಆದರೆ ಅದನ್ನೂ ಮೀರಿಸುವಂತೆ, ಕಲ್ಯಾಣಸುಂದರಂ ಅವರು ಹಾಗೆ ಬಂದ ಇಡೀ ಹಣವನ್ನು ಸಮಾಜದಲ್ಲಿ ಅಗತ್ಯವಿರುವವರಿಗೆ ದಾನ ಮಾಡಿ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿಬಿಟ್ಟರು! ತಮ್ಮ ಸೇವಾಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ’ಪಾಲಂ’ ಎಂಬ ಸೇವಾಸಂಸ್ಥೆಯನ್ನೇ ಕಟ್ಟಿದ್ದಾರೆ.
ಕಲ್ಯಾಣಸುಂದರಂ ಅವರು ಕೇವಲ ತಮಗೆ ಬಂದುದೆಲ್ಲವನ್ನು ಬೇರೆಯವರಿಗೆ, ಸಮಾಜಕ್ಕೆ ದಾನ ಮಾಡುವುದರಲ್ಲಷ್ಟೇ ತೃಪ್ತರಲ್ಲ; ತಮ್ಮ ವೃತಿಯಲ್ಲು ಅತ್ಯಂತ ಯಶಸ್ವಿಯಾಗಿದ್ದವರು. ಅವರೊಬ್ಬ ಉತ್ತಮ ಗ್ರಂಥಪಾಲಕ. ಅವರ ಗ್ರಂಥಾಲಯದ ಬಗೆಗಿನ ಸಾಧನೆಯನ್ನು ಗುರುತಿಸಿದ ಕೇಂದ್ರಸರ್ಕಾರ ಅವರಿಗೆ ಭಾರತದ ಅತ್ಯುತ್ತಮ ಗ್ರಂಥಪಾಲಕ (ಬೆಸ್ಟ್ ಲೈಬ್ರೇರಿಯನ್ ಇನ್ ಇಂಡಿಯಾ) ಎಂಬ ಗೌರವನ್ನು ನೀಡಿದೆ. ಪ್ರಪಂಚದ ಹತ್ತು ಉತ್ತಮ ಗ್ರಂಥಪಾಲಕರಲ್ಲಿ ಇವರೂ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ’ದಿ ಇಂಟರ್‌ನ್ಯಾಷನಲ್ ಬಯಾಗ್ರಫಿಕಲ್ ಸೆಂಟರ್’ ಕೇಂಬ್ರಿಡ್ಜ್ ಇವರು ಕಲ್ಯಾಣಸುಂದರಂ ಅವರನ್ನು ’ಇಪ್ಪತ್ತನೆಯ ಶತಮಾನದ ಅಸಮಾನ್ಯ ವ್ಯಕಿ’ ಎಂದು ಘೊಷಿಸಿದ್ದಾರೆ.
ಕಲ್ಯಾಣಸುಂದರಂ ನಮ್ಮನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ. ತಿರುನಲ್ವೇಲಿಯ ಮೇಲಕರಿವೇಲಂಕುಲಮ್ ಎಂಬ ೧೯೫೩ರ ಆಗಸ್ಟ್ ತಿಂಗಳಿನಲ್ಲಿ ಶ್ರೀಯುತರ ಜನನ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸುಂದರಂ ಅವರಿಗೆ ತಾಯಿಯೇ ಸರ್ವಸ್ವವೂ ಆಗಿದ್ದರು. ದೀನ ದಲಿತರ ಸೇವೆಯ ಮಹತ್ವವನ್ನು, ಅದರಿಂದ ದೊರಕುವ ಆತ್ಮತೃಪ್ತಿಯನ್ನು ಮೊದಲು ಕಲ್ಯಾಣಸುಂದರಂ ಅವರಿಗೆ ತೋರಿಸಿಕೊಟ್ಟವರು ಸ್ವತಃ ಅವರ ಮಾತೃಶ್ರೀಯವರೆ! ಅವರ ಪಾಲಿಗೆ ತಾಯಿಯೇ ಪೋಷಕ ಹಾಗೂ ಪ್ರೇರಕ!
ಬಡತನದಲ್ಲಿ ಅಮ್ಮನ ಪೋಷಣೆಯಲ್ಲಿ ವಿದ್ಯಾಭ್ಯಾಸ ನಡೆಯಿತು. ಗ್ರಂಥಾಲಯ ವಿಜ್ಞಾನ ಪದವಿಗಾಗಿ ಅವರು ಮಧುರೈ ಕಾಮರಾಜ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ ಅವರಿಗೆ ಅತ್ಯುನ್ನತ ಶ್ರೇಣಿಯ ಫಲಿತಾಂಶವನ್ನು ತಂದುಕೊಡುತ್ತದೆ. ಗ್ರಂಥಾಲಯ ವಿಜ್ಞಾನದಲ್ಲಿ ಚಿನ್ನದ ಪದಕದೊಂದಿಗೆ ಪದವಿ ಗಳಿಸುವುದರ ಜೊತೆಗೆ, ಸಾಹಿತ್ಯ ಮತ್ತು ಇತಿಹಾಸದಲ್ಲೂ ಸ್ನಾತಕೋತ್ತರ ಪದವಿ ಗಳಸಿದ್ದಾರೆ. ತಮಿಳುನಾಡಿನ ಟ್ಯುಟಿಕಾರಿನ್ ಜಿಲ್ಲೆಯ ಶ್ರೀವೈಕುಂಠಂ ಎಂಬಲ್ಲಿಯ ಕುಮಾರಕುರುಪಾರ ಆರ‍್ಟ್ಸ್ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ತಮ್ಮ ಇಡೀ ಬದುಕನ್ನು ಸವೆಸಿದವರು.
ಸುಂದರಂ ಅವರು ಕಾಲೇಜು ಸೇರಿದ್ದಾಗ, ಚೀನಾ-ಭಾರತ ಯುದ್ಧದ ಕಾರ್ಮೋಡ ಆವರಿಸಿಬಿಟ್ಟಿತ್ತು. ಯುದ್ಧಕ್ಕಾಗಿ, ಯುದ್ಧ ಸಂತ್ರಸ್ತರಿಗಾಗಿ ಸಾರ್ವಜನಿಕವಾಗಿ ನಿಧಿಸಂಗ್ರಹ ಮೊದಲಾದ ಕಾರ್ಯಗಳು ನಡೆಯುತ್ತಿದ್ದವು. ಆಗ ಸುಂದರಂ ಅವರು ತಮ್ಮ ಬಳಿಯಿದ್ದ ಚಿನ್ನದ ಸರವೊಂದನ್ನು, ಅಂದಿನ ತಮಿಳುನಾಡು ಮುಖ್ಯಮಂತ್ರ ಕಾಮರಾಜ್ ಅವರಿಗೆ ಯುದ್ಧನಿಧಿಯನ್ನಾಗಿ ನೀಡುತ್ತಾರೆ. ಆ ಸಂದರ್ಭದಲ್ಲಿ ’ಆನಂದ ವಿಕಟನ್’ ಪತ್ರಿಕೆಯ ಸಂಪಾದಕರಾಗಿದ್ದ ಬಾಲಸುಬ್ರಮಣಿಯನ್ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಆಗ ಸುಂದರಂ ಅವರು, ತಾವು ಚಿನ್ನದ ಸರವನ್ನು ಯುದ್ಧನಿಧಿಗೆ ದಾನ ನೀಡಿದ್ದನ್ನು ತಿಳಿಸಿ, ಅದರ ಬಗ್ಗೆ ಪತ್ರಿಕೆಯಲ್ಲಿ ಬರೆಯುವಂತೆ ಕೇಳಿಕೊಳ್ಳುತ್ತಾರೆ. ಆಗ ಬಾಲಸುಬ್ರಮಣಿಯನ್ ಅವರು ’ನಿನ್ನ ಸ್ವಂತ ಸಂಪಾದನೆಯ ಏನನ್ನಾದರೂ ದಾನ ಮಾಡಿದಾಗ ನಿನ್ನ ಬಗ್ಗೆ ಬರೆಯುತ್ತೇನೆ’ ಎಂದು ಸುಂದರಂ ಅವರನ್ನು ಕಳುಹಿಸಿಬಿಡುತ್ತಾರೆ. ಏಕೆಂದರೆ ಆ ಚಿನ್ನದ ಸರ ಅವರ ತಾಯಿಯ ಕೊಡುಗೆಯಾಗಿತ್ತು. ಬಾಲಸುಬ್ರಮಣಿಯನ್ ಅವರ ಮಾತು ಕಲ್ಯಾಣಸುಂದರಂ ಅವರೊಳಗಿದ್ದ ಚೇತನವನ್ನು ಬಡಿದೆಬ್ಬಿಸಿಬಿಟ್ಟಿತು. ಅಂದು ಒಂದು ಮಾತನ್ನೂ ಅವರು ಆಡುವುದಿಲ್ಲ. ಅವರ ಮಾತನ್ನು ತಮ್ಮ ಬದುಕಿನ ಸವಾಲು ಎಂಬಂತೆ ಸ್ವೀಕರಿಸಿಬಿಡುತ್ತಾರೆ. ಮುಂದೆ ಗ್ರಂಥಪಾಲಕರಾಗಿ ವೃತ್ತಿಜೀವನ ಆರಂಭಿಸಿದ ಮೊದಲ ದಿನದಿಂದಲೇ ಅವರ ದಾನದ ಪ್ರಕ್ರಿಯೆ ಆರಂಭವಾಗಿಬಿಡುತ್ತದೆ. ತಮ್ಮ ಗಳಿಕೆಯನ್ನು ಮಾತ್ರವಲ್ಲದೆ, ವಂಶಪಾರಂಪರ್ಯವಾಗಿ ತಮಗೆ ಬಂದ ಆಸ್ತಿಯೆಲ್ಲವನ್ನೂ ದಾನ ಮಾಡಿಬಿಡುತ್ತಾರೆ. ಬಂದ ಸಂಬಳವನ್ನೆಲ್ಲಾ ದಾನ ಮಾಡುತ್ತ, ಮುಂದೆ ೧೯೯೮ರಲ್ಲಿ ವೃತ್ತಿಯಿಂದ ನಿವೃತ್ತರಾದಾಗ ಬಂದ ಭವಿಷ್ಯನಿಧಿ, ನಿವೃತ್ತಿವೇತನ ಎಲ್ಲವನ್ನೂ ದಾನದ ಪಟ್ಟಿಗೆ ಸೇರಿಸಿಬಿಡುತ್ತಾರೆ! ಅವರ ವಿರೋಧವನ್ನು ಲೆಕ್ಕಿಸದೆ, ಅಂದಿನ ಜಿಲ್ಲಾಧಿಕಾರಿಗಳು ಅವರನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಯನ್ನು ಹೊರಜಗತ್ತಿಗೆ ಬಿಚ್ಚಿಡುತ್ತಾರೆ.
ಕಲ್ಯಾಣಸುಂದರಂ ಅವರ ಬದುಕಿನಲ್ಲೊಮ್ಮೆ ತರಗತಿಯಲ್ಲಿ ಗಾಂಧೀ ತತ್ವದ ಬಗ್ಗೆ ಉಪನ್ಯಾಸ ಮಾಡವ ಅವಕಾಶ ದೊರೆಯುತ್ತದೆ. ಗಾಂಧೀಜಿಯವರ ಸರಳತೆ, ತ್ಯಾಗ, ಸತ್ಯಪ್ರೇಮ ಮೊದಲಾದ ವಿಷಯಗಳ ಬಗ್ಗೆ ಮಾತನಾಡಿದ ಕಲ್ಯಾಣಸುಂದರಂ ಅವರಿಗೆ, ತಾವು ಧರಿಸಿರುವುದು ದುಬಾರಿಯಾದ ಉಡುಪು ಎನ್ನಿಸಿಬಿಡುತ್ತದೆ. ಅನುಕರಣೀಯ ಸತ್ಯಕ್ಕಿಂತ ಆಚರಣೀಯ ಸತ್ಯವೇ ಶ್ರೇಷ್ಠ ಎಂಬಂತೆ, ಅಂದೇ ಅವರು ಖಾದಿಧಾರಿಯಾಲು ನಿರ್ಧರಿಸಿಬಿಡುತ್ತಾರೆ. ಅಂದಿನಿಂದ ಸರಳತೆಯೆ ಮತ್ತೊಂದು ಹೆಸರಾದ ಖಾದಿ ಸುಂದರಂ ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಕಲ್ಯಾಣಸುಂದರಂ ಅವರಿಂದ ಪ್ರಭಾವಿತರಾಗಿರುವ ಬಹುದೊಡ್ಡ ವಿದ್ಯಾರ್ಥಿಸಮುದಾಯವೇ ಅವರೊಂದಿಗೆ ಇದೆ. ಪಾಲಂ ಸಂಸ್ಥೆ ಅತ್ಯಂತ ಯಶಸ್ವಿಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಲ್ಲಿ ಈ ವಿದ್ಯಾರ್ಥಿ ಸಮುದಾಯದ ಪಾಲೂ ಇದೆ. ಮಕ್ಕಳ ಮೇಲೆ ಅತ್ಯಂತ ಪ್ರಭಾವ ಬೀರುವ ಸಾಮರ್ಥ್ಯ ಶ್ರೀ ಕಲ್ಯಾಣಸುಂದರಂ ಅವರಿಗೆ ತಮ್ಮ ಅರ್ಥಪೂರ್ಣ ಬದುಕಿನಿಂದಲೇ ಲಭಿಸಿದೆ ಎನ್ನಬಹುದು.
ಕಲ್ಯಾಣಸುಂದರಂ ಅವರ ಪಾಲಂ ಸೇವಾಸಂಸ್ಥೆ, ದಾನಿಗಳ ಮತ್ತು ದಾನ ಪಡೆಯುವವರ ನಡುವಿನ ಸೇತುವಿನಂತೆ ಕೆಲಸ ಮಾಡುತ್ತಿದೆ. ಹಣ, ವಸ್ತುಗಳು ಹೀಗೆ ಬರುವ ದಾನಗಳೆಲ್ಲವನ್ನೂ ಸಂಗ್ರಹಿಸಿ, ಅದನ್ನು ಅಗತ್ಯವಿರುವ ಜನರಿಗೆ ಸೂಕ್ತವಾಗಿ ತಲುಪಿಸುವ ಫಲಾಪೇಕ್ಷೆಯಿಲ್ಲದ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳಿಂದ ನಿರ್ಗತಿಕರಾದವರಿಗೆ, ಪುನಃ ಅವರ ಬದುಕನ್ನು ಕಟ್ಟಿಕೊಳ್ಳಲು ಪಾಲಂ ಸಂಸ್ಥೆ ತನ್ನ ಸೇವೆಯನ್ನು ನೀಡಿದೆ. ಸರ್ವೋದಯ ತತ್ವದಲ್ಲಿ ನಂಬಿಕೆಯಿಟ್ಟಿರುವ ಕಲ್ಯಾಣಸುಂದರಂ ಅವರು, ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಮುಚ್ಚಿಹೋಗುವವರೆಗೆ ಯಾರೂ ಸುರಕ್ಷಿತರಲ್ಲ ಎನ್ನುತ್ತಾರೆ. ಆದ್ದರಿಂದ ಯಾವುದಾದರು ರೂಪದಲ್ಲಿ ನಮ್ಮ ಸಮಾಜಮುಖಿ ಸೇವೆ ಮುಂದುವರೆಯಬೇಕೆಂದು ಅವರು ಆಶಿಸುತ್ತಾರೆ. ತಮ್ಮ ಪಾಲಂ ಸಂಸ್ಥೆಯ ಬಗ್ಗೆ ಅವರಿಗೊಂದು ಕನಸಿದೆ. ಆ ಸಂಸ್ಥೆಯ ಮೂಲಕ ಅತ್ಯಂತ ಆಧುನಿಕ ಉಪಕರಣಗಳಿಂದ ಕೂಡಿದ ರಾಷ್ಟ್ರಮಟ್ಟದ ಡಿಜಿಟಲ್ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಅದು ಸಮಾಜದ ಎಲ್ಲ ಸ್ತರದ ಜನರಿಗೂ ಉಪಯೋಗವ ರೀತಿಯಲ್ಲಿರಬೇಕೆಂಬುದು ಅವರ ಆಸೆ. ಒಳ್ಳೆಯ ಗ್ರಂಥಪಾಲಕ ಎಲ್ಲದರ ಬಗ್ಗೆಯೂ ವಿಶಾಲವಾದ ಜ್ಞಾನವನ್ನು ಹೊಂದಿದವನಾಗಿರಬೇಕು, ಜ್ಞಾನದ ವಿಷಯದಲ್ಲಿ ತಾರತಮ್ಯವಿರಬಾರದು ಎಂದು ಅವರು ಬಯಸುತ್ತಾರೆ.
ತಮಿಳುನಾಡಿನಲ್ಲೊಂದು ಅಂತರಾಷ್ಟ್ರೀಯ ಮಟ್ಟದ ಮಕ್ಕಳ ವಿಶ್ವವಿದ್ಯಾಲಯವನ್ನು ಕಟ್ಟಬೇಕೆಂಬ ಅಪೇಕ್ಷೆಯೂ ಇದೆ. ಸಚ್ಚಾರಿತ್ರ್ಯಯವುಳ್ಳ ಜನರ ಪ್ರಯತ್ನದಿಂದ ಮಾತ್ರ ಮಹತ್ವವಾದುದನ್ನು ಸಾಧಿಸಲು ಸಾಧ್ಯ ಎಂಬುದು ಅವರ ನಂಬಿಕೆ. ಸರಿದಾರಿಯಲ್ಲಿ ಸಚ್ಚಾರಿತ್ರ್ಯದಿಂದ ಬದುಕುವ ವ್ಯಕ್ತಿಯ ಮೌನ ಮಾತಿಗಿಂತ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ನಿನ್ನನ್ನು ನೀನು ಕಂಡುಕೊಳ್ಳಬೇಕಾದರೆ ಪರರ ಸೇವೆಯಲ್ಲಿ ನಿನ್ನನ್ನು ನೀನು ಮೊದಲು ಕಳೆದುಕೊಳ್ಳಬೇಕು ಎಂಬ ಮಹಾತ್ಮ ಗಾಂಧಿಜಿಯವರ ನುಡಿಯ ಮೂರ್ತರೂಪವೇ ಶ್ರೀ ಕಲ್ಯಾಣಸುಂದರಂ.
ತಮ್ಮ ವಿಶಿಷ್ಟ ಸಾಧನೆಯಿಂದ ತೃಪ್ತರಾಗಿರುವ ಕಲ್ಯಾಣಸುಂದರಂ ಅವರು ಅವಿವಾಹಿತರಾಗಿಯೇ ಉಳಿದುಬಿಟ್ಟಿದ್ದಾರೆ. ತಮಿಳು ಸಿನಿಮಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುಂದರಂ ಅವರನ್ನು ತಮ್ಮ ತಂದೆಯಾಗಿ ದತ್ತು ತೆಗೆದುಕೊಂಡು ಇನ್ನೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಮಕ್ಕಳಿಲ್ಲದವರು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಮಾತ್ರ ನೋಡಿದ್ದವರಿಗೆ, ದತ್ತಕದ ರೂಪದಲ್ಲಿ ಬೇರೊಬ್ಬ ವ್ಯಕ್ತಿಯನ್ನೇ ತಂದೆಯನ್ನಾಗಿ ಸ್ವೀಕರಿಸಿದ ರಜನೀಕಾಂತರ ಈ ನಡೆ ವಿಶಿಷ್ಟವಾಗಿ ಕಂಡರೆ ಆಶ್ಚರ್ಯವೇನಿಲ್ಲ. ಅದಕ್ಕೆಲ್ಲಾ ಕಾರಣ ಕಲ್ಯಾಣಸುಂದರಂ ಅವರ ಅತ್ಯಂತ ಸರಳ, ನಿಷ್ಕಾಮ, ನಿಷ್ಕಳಂಕ, ನಿಷ್ಕಪಟ ಮನಸ್ಸು ಮತ್ತು ಬದುಕು!
ರಾಜಕಾರಣಿಗಳು, ಕಲಾವಿದರೂ, ಕೈಗಾರಿಕೋದ್ಯಮಿಗಳು, ಮಾದ್ಯಮದವರು, ಕ್ರೀಡಾಪಟುಗಳು, ಅಧಿಕಾರಿಗಳು, ರೈತರು, ವಿದ್ಯಾರ್ಥಿಗಳು ಹೀಗೆ ಪ್ರತಿಯೊಬ್ಬ ಭಾರತೀಯನೂ ಕಲ್ಯಾಣಸುಂದರಂ ಅವರ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕಾಗಿದೆ; ಅವರನ್ನು ಗೌರವಿಸಬೇಕಾಗಿದೆ. ಆದರೆ ’ಹಿತ್ತಲ ಗಿಡ ಮದ್ದಲ್ಲ’, ’ಮನೆ ಸಾರಿಗೆ ರುಚಿ ಕಮ್ಮಿ’ ಎಂಬ ಗಾದೆಗಳಂತೆ ಭಾರತೀಯನೊಬ್ಬನ ಈ ಅಪ್ರತಿಮ ಸಾಧನೆಯನ್ನು ಭಾರತೀಯರೇ ಗುರುತಿಸಲಿಲ್ಲ. ಹೀಗೆ ಗುರುತಿಸಿದ ಮೇಲೆಯೂ ಅವರನ್ನು ಗೌರವಿಸುವ ಸನ್ನಡತೆಯನ್ನು ನಾವು ತೋರಲಿಲ್ಲ ಎಂಬುದು ಮಾತ್ರ ವಿಷಾದನೀಯ. ಕೆಲವು ಸಿನಿಮಾಗಳಲ್ಲಿ ನಟಿಸಿದ ಆದರೆ ಹಲವಾರು ಕ್ರಮಿನಲ್ ಕೇಸುಗಳನ್ನು ಮೈಮೇಲೆಳೆದುಕೊಂಡಿರುವ ನಟನೊಬ್ಬನಿಗೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯನ್ನೇ ಕೊಡುವ, ನಟನೊಬ್ಬನ ವಿವಾಹ ವಿಚ್ಛೇಧನ ಸುದ್ದಿಯನ್ನೇ ದಿನವಿಡೀ ಸುದ್ದಿಯನ್ನಾಗಿಸುವ, ಸುಳ್ಳನ್ನೇ ಕಾಯಕ ಮಾಡಿಕೊಂಡಿರುವ ರಾಜಕಾರಣಿಗಳನ್ನೂ ಕರೆದು ಗೌರವ ಡಾಕ್ಟರೇಟ್ ನೀಡುವ, ಕೆಲವೇ ಸಿಕ್ಸರ್ ಬೌಂಡರಿ ಬಾರಿಸಿ ರಾತ್ರೋರಾತ್ರಿ ಹೀರೋಗಳಾದವರಿಗೆಲ್ಲಾ ರಾಷ್ಟ್ರೀಯ ಗೌರವವನ್ನು ನೀಡುವ ನಾವು, ಹೋಲಿಕೆಯೇ ಇಲ್ಲದ ಒಬ್ಬ ನಿಷ್ಕಾಮ ಕರ್ಮಯೋಗಿಗೆ ಮಾಡಿದ್ದಾದರು ಏನು? ಇದು ಪ್ರತಿಯೊಬ್ಬ ನಾಗರೀಕನೂ ತನಗೆ ತಾನೇ ಕೇಳಿಕೊಳ್ಳಬೇಕಾದ ಪ್ರಶ್ನೆಯೂ ಹೌದು; ಉತ್ತರಿಸಲೇಬೇಕಾದ ಪ್ರಶ್ನೆಯೂ ಹೌದು!
ಒಂದು ಮಾತಂತೂ ಸತ್ಯ: ನಮ್ಮ ಯಾವ ಪ್ರಶಂಸೆಯನ್ನೂ ಪ್ರಶಸ್ತಿಯನ್ನೂ ಮೀರಿದ ಬದುಕು ಕಲ್ಯಾಣಸುಂದರಂ ಅವರದ್ದು. ನಮ್ಮ ಪ್ರಶಸ್ತಿಗಳಿಂದ, ಪ್ರಶಂಸೆಯಿಂದ ಅವರಿಗೆ ಏನೂ ಆಗಬೇಕಿಲ್ಲ. ಆದರೆ ನಮಗೆ ನಾವೇ ಶುದ್ಧರಾಗಲು, ಕೊನೆಗೆ ಮನುಷ್ಯರಾಗಲು ಅದೊಂದು ಉತ್ತಮ ಅವಕಾಶವನ್ನು ಒದಗಿಸಬಲ್ಲುದು ಅಷ್ಟೆ!

No comments: