Monday, November 11, 2013

ಶೂರ್ಪನಖಿಯಾದಳಾ ಚಂದ್ರನಖಿ!


ಪಂಚವಟಿಯಲ್ಲಿದ್ದ ರಾಮ ಸೀತಾ ಲಕ್ಷ್ಮಣರು, ಅಲ್ಲಿಗೆ ಒಟ್ಟು ಹನ್ನೊಂದು ವರ್ಷಗಳನ್ನು ಕಳೆದಿದ್ದರು. ಇನ್ನು ಅಯೋಧ್ಯೆಗೆ ಹಿಂತಿರುಗುವ ಯೋಚನೆ ಕೂಡಾ ನೆಡೆಸಿದ್ದರು. ಅಯೋಧ್ಯೆಯಿಂದ ಹೊರಟು, ತಾವು ಸಂದರ್ಶಿಸುತ್ತಾ ಬಂದ ತಪೋಧನರನ್ನು ಮತ್ತೊಮ್ಮೆ ಕಂಡು, ಆಶೀರ್ವಾದ ಪಡೆದು, ಅಲ್ಲಲ್ಲಿ ತಂಗುತ್ತಾ ಅಯೋಧ್ಯೆಯನ್ನು ಸೇರುವಷ್ಟರಲ್ಲಿ ಇನ್ನೊಂದು ವರ್ಷ ಕಳೆಯುತ್ತದೆ ಎಂದು ಯೋಚಿಸಿದ್ದರು. ಅದನ್ನೆ ರಾಮನು ಲಕ್ಷ್ಮಣನಿಗೆ
ನಾಮಿಲ್ಲಿಂದೆ ಪಿಂತೆ ಮರಳುವ ಪೊಳ್ತು ಸನಿಹಮಾದುದು, ತಮ್ಮ.
ನಾಳೆ ನಾಡಿದರೊಳಗೆ ಮಂಗಳ ಮುಹೂರ್ತಮಂ ಪಾರ್ದು ಪೊರಮಟ್ಟರೆ
ಅವಧಿಯ ಕೊನೆಗೆ,
ಭರತಂಗೆ ಪೂಣ್ಕೆನುಡಿಗೊಟ್ಟಂತೆ, ಮುಟ್ಟುವೆವು ಅಯೋಧ್ಯೆಯಂ.
ಬಂದ ಮಾರ್ಗಂಬಿಡಿದು
ಋಷಿವರ್ಯರಂ ಕಂಡು,
ವಂದಿಸಿ, ನುಡಿಸಿ ಮುಂದೆ ತೆರಳುವಂ

ಎಂದು ಹೇಳಿರುತ್ತಾನೆ.
ಬೆಳಿಗ್ಗೆ ಹೊಳೆಯಲ್ಲಿ ಮಿಂದು ನಾರ್ಮುಡಿಯುಟ್ಟು, ಹೀಗೆ ಮಾತನಾಡುತ್ತಾ ಪರ್ಣಕುಟಿಗೆ ಬರುತ್ತಿರಬೇಕಾದರೆ, ಬಿದಿರ ಮೆಳೆಯ ಮೇಲೆ ಕುಳಿತಿದ್ದ ಕಾಮಳ್ಳಿಗಳ ಗುಂಪೊಂದು, ಒಮ್ಮೆಲೆ ಇವರ ಬರುವಿಕೆಯಿಂದ ಎಚ್ಚೆತ್ತವಂತೆ ಹಾರಿಬಿಡುತ್ತವೆ. ಬಿದಿರ ಎಲೆಗಳಲ್ಲಿ ಹನಿಗಟ್ಟಿದ್ದ ಮಂಜುಹನಿಗಳು ಸಿಡಿದು, ಮೂವರ ಮೇಲೆ ಮುತ್ತಿನ ಮಳೆಯಂತೆ ಸುರಿದುಬಿಡುತ್ತದೆ. ಅದನ್ನು ಕಂಡ ಲಕ್ಷ್ಮಣನು, ದೇವಿಯರನು ಅಭಿನಂದಿಸುತ್ತಿಹಳು ಅರಣ್ಯಸಖಿ! ಎನ್ನುತ್ತಾನೆ. ಆಗ ತಕ್ಷಣ ಸೀತೆ,

ಅಲ್ತಲ್ತು.
ತಂಗಿ ಊರ್ಮಿಳೆಯ ಕಣ್ಣೀರುಗಳ್,
ಮುನ್ ಬರ್ಪ ಸೊಗಕೆ ಉರ್ಕಿ,
ಮುಂಗಾಣ್ಕೆಗಳನು ಅರ್ಪಿಸಿಹವೈ
ಪ್ರಾಣೇಶ್ವರನ ಚರಣತಲಕೆ!

ಎನ್ನುತ್ತಾಳೆ. ಲಕ್ಷ್ಮಣನಿಗೆ ಏಂ ಜಾಣ್ಮೆ ನುಡಿ ಎನ್ನಿಸಿತಾದರೂ ಅದಕ್ಕಿಂತ ಹೆಚ್ಚಾಗಿ ನಾಚಿಕೆಯಾಗುತ್ತದೆ. ಅದನ್ನು ಮರೆಸಲೆಳಸುವಂತೆ, ರಾಮನ ಕಡೆ ತಿರುಗಿ,

ಅಣ್ಣಯ್ಯ,
ನಿಮ್ಮ ಪಟ್ಟಾಭಿಷೇಕಕ್ಕೆ ಇಂತುಟೆ ವಲಂ ಮುತ್ತಿನ ಮಳೆಗಳಕ್ಕೆ
ಎಂದು ಪರಸಿದಳಲ್ತೆ ಸರ್ವಮಂಗಳೆ, ಜಗಜ್ಜನನಿ!

ಎನ್ನುತ್ತಾನೆ. ಆಗ ರಾಮನು ಹೇಳುವ ಮಾತುಗಳು ಮುಂದೆ ಒದಗಲಿರುವ ಆಘಾತಕ್ಕೆ ಮುನ್ನುಡಿಯಿಡುವಂತಿವೆ.

ತಾತ್ಪರ್ಯಮಂ ಪೇಳ್ವೆಯಾದೊಡಂ
ಏಕೋ ತಳ್ಳಂಕಗೊಳ್ಳುತ್ತಿದೆ ಮನ್ಮನಂ!
ಲೋಕದ ಅನುಭವಂ ಇಂತೆ:
ಗುರಿ ಬಳಿಗೆ ಸಾರಿ ಬರೆ ಪೆರ್ಚಿದಪುದು ಎರ್ದೆಯ ಕುದಿದಾಟಮುಂ!

ನಂತರ ಮೌನವನ್ನೆ ಹೊತ್ತು ಅವರು ಪರ್ಣಕುಟಿಗೆ ಬರುವಷ್ಟರಲ್ಲಿ. ಅಲ್ಲಿ ಕಿತ್ತಡಿಗಳ ಕೂಟವೊಂದು ನೆರೆದಿರುತ್ತದೆ. ನೆನ್ನೆಯ ದಿನ ಯಾರೋ ಮಾಯಾವಿಗಳು ಬಂದು ಅವರಿಗೆ ತೊಂದರೆ ಕೊಟ್ಟಿದ್ದರಂತೆ. ಅದನ್ನು ಪರಿಹರಿಸಬೇಕು ಎಂದು ತಪಸ್ವಿಗಳು ಬೇಡಿಕೊಳ್ಳುತ್ತಾರೆ. ಜಡೆವೊತ್ತವರಿಗೆ ಅಭಯವನ್ನಿತ್ತು ಕಳುಹಿಸಿದ ರಾಮ ಲಕ್ಷ್ಮಣನಿಗೆ

ಸೌಮಿತ್ರಿ, ಸುತ್ತಣ ಅರಣ್ಯಮಂ ಸುತ್ತಿ ಬಾ...
ಬೆನ್ಗಿರಲಿ ಋಷಿ ಅಗಸ್ತ್ಯನ ಕೊಟ್ಟ ಶರಧಿ...
ಶರಭಂಗ ಮುನಿಯಿತ್ತ ಕೋದಂಡಮಂ ಕೈಕೊಂಡು ನಡೆ...
ಮತ್ತೆ ಮೊದಲಾಗುವಂತೆವೋಲ್ ತೋರುತಿಹುದೆಮ್ಮ ಕಾಂತಾರ ಕಷ್ಟಂ!

ಎಂದು ತಡೆತಡೆದು ಕಳವಳದಿಂದ ಹೇಳುತ್ತಾನೆ.! ಲಕ್ಷ್ಮಣನಿಗೆ ರಾಮನ ಬಗೆಯ ಮಾತು ಅಚ್ಚರಿ ಮೂಡಿಸುತ್ತದೆ. ಆದರೆ ಅದನ್ನು ಬೆಳೆಸದೆ, ಅಣ್ಣನ ಆಜ್ಞೆಯನ್ನು ಮತ್ತು ತನ್ನ ಕೋದಂಡವನ್ನು ಹೊತ್ತು ಹೊರಡುತ್ತಾನೆ. ಸಂದರ್ಭದಲ್ಲಿ ರಾಮನ ಮನಸ್ಸಿನಲ್ಲಿ ಉಂಟಾಗುವ ಕಳವಳ ಮನಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಯೋಗ್ಯ. ಎಷ್ಟೋ ಬಾರಿ ಏನಾದರೂ ದುರ್ಘಟನೆ, ಅಥವಾ ಮುಖ್ಯವಾದ ಘಟನೆ ನಡೆಯುವ ಮೊದಲು ಮನಸ್ಸಿನಲ್ಲಿ ಇಂತಹ ಕಳವಳ ಮೂಡುವುದು ಸಹಜ; ಚಂಡಮಾರುತ ಹೇಳುವ ಮೊದಲು ಕಡಲಿನಲ್ಲಿ ಶಾಂತಿ ನೆಲೆಸಿರುವಂತೆ!
ಇತ್ತ ಕಾಡಿನಲ್ಲಿ ಅಲೆದು, ಆಯಾಸಗೊಂಡ ಲಕ್ಷ್ಮಣ ಸಂಜೆಯ ತಂಪಾದ ಗಾಳಿಗೆ ಮೈಯೊಡ್ಡಲು ಬಯಸಿ, ಪರ್ವತದ ತುದಿಯ ಕಲ್ಲೊಂದರ ಮೇಲೆ ಏರಿ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದ. ಆಗ ಆತನ ಕಿವಿಗೆ ಜೇನಿಳಿದಂತೆ ಒಂದು ಗಾನ ಬಹುದೂರದಿಂದ ಕೇಳಿಸಿತು. ಹೇಮಂತ ಋತುವಿನ ಕಾಡಿನ ಪುಷ್ಪಗಳ ಪರಿಮಳ ಆವರಿಸಿತ್ತು. ಸಂಜೆಯ ಆಕಾಶದಿಂದ ಕಾಡಿನೆಡೆಗೆ ಇಳಿದು ಭೂಮಿಯನ್ನು ಅಲಂಕರಿಸಿತ್ತು ಒಂದು ಕಾಮನಬಿಲ್ಲು! ಅರೆರೆ! ಇದೇನಿದು ಎಂದು ಲಕ್ಷ್ಮಣ ನೋಡುತ್ತಿರುವಂತೆ, ರಥವೋ ಎಂಬಂತೆ ಒಂದು ಬಣ್ಣಬಣ್ಣ ಮುಗಿಲು ಮಳೆಬಿಲ್ಲಿನ ಮುಖಾಂತರ ಇಳಿದು ಹತ್ತಿರ ಹತ್ತಿರವಾಗತೊಡಗಿತು. ಹೊನಲಿನ ಗಾನ ಹೆಚ್ಚಾಯಿತು. ಬೆಳಕು ಹೆಚ್ಚಾಗಿ ಸಂಜೆಯ ಕಾಡಿನ ಕಾಂತಿ ಬೆಳಗತೊಡಗಿತು. ಹಾಗೆಯೇ ಅದೆಲ್ಲವೂ ಪರ್ಣಕುಟಿಯಿದ್ದೆಡೆಗೆ ಇಳಿಯುತ್ತಿರುವಂತೆ ಕಂಡಿತು. ಕಳವಳಗೊಂಡ ಲಕ್ಷ್ಮಣ ಬೆಟ್ಟದ ತುದಿಯನ್ನು ಬಿಟ್ಟು ಬೇಗ ಬೇಗ ಪರ್ಣಕುಟಿಯ ಕಡೆಗೆ ನಡೆಯತೊಡಗಿದ.
ಇತ್ತ ರಾಮ ಮತ್ತು ಸೀತೆ ನೋಡು ನೋಡುತ್ತಿರುವಂತೆಯೇ, ಮಂಜಿನಂತೆ ಹರಡಿದ್ದ ಮುಗಿಲ ತೇರಿನಿಂದ ಸುಂದರವಾದ ಒಂದು ಸ್ತ್ರೀ ಮೂರ್ತಿ ನಯವಿನಯಮೊಯ್ಯಾರ ಸಂಸ್ಕೃತಿಗಳೊಂದಾಗಿ ಮೆಯ್ವೆತ್ತವೊಲ್ ಮೂಡಿಬಿಡುತ್ತದೆ! ಪಜ್ಜೆಗೆಜ್ಜೆಗಳುಲಿಯ ಜೊತೆಗೆ ಬಿಂಕವನ್ನು ಮಾಡುತ್ತಾ, ಬಲೆಯನ್ನು ಬೀಸುವಂತೆ ಆಕೆ

ಸುಸ್ವಾಗತಂ ನಿನಗೆ ಕೋಸಲೇಶ್ವರ. ನಮ್ಮ ದಕ್ಷಿಣಾವನಿಗೆ.
ಎಮಗೆ ನೀನ್ ಅತಿಥಿ.
ಚಂದ್ರನಖಿ ನಾಂ; ಲಂಕೇಶ್ವರ ಭಗಿನಿಯೆಂ!

ಎನ್ನುತ್ತಾಳೆ. ಸೀತೆಗೆ ಕಳವಳವಾಗುತ್ತದೆ. ಆಕೆ ರಾಮನ ಕಣ್ಣಭಾವವನ್ನು ಕಾಣಲೆಳೆಸುತ್ತಾಳೆ. ’ರಾವಣನ ನಾಮಶ್ರವಣ ಮಾತ್ರದಿಂ ತನ್ನ ಮನಕೆಂತು ತೋರ್ದುದೊ ಭಯಾನಕಂ, ತನ್ನ ರಮಣಂಗಂತೆ ಮೊಗದೊಳೆಸೆದುದು ಮಚ್ಚರದ ಕಿಚ್ಚುಎನ್ನಿಸುತ್ತದೆ. ಮೊದಲು ರಾಮನಿಗೆ, ನಂತರ ಲಕ್ಷ್ಮಣನಿಗೆ, ಈಗ ಸೀತೆಗೆ ಕಳವಳ ಕಾಡುತ್ತದೆ; ಮುಂದಿನ ಘೊರತೆಗೊಂದು ರೂಪ ಮೂಡುವಂತೆ! ಸೀತೆ ಕಂಡಂತೆ ರಾಮನಿಗೆ ಸಿಟ್ಟು ಬಂದಿತ್ತು. ಕೋಪದಲ್ಲಿ ಆತ ಬೀಸಿದ ನುಡಿಗತ್ತಿ ಇದು!

ರಾವಣನ ತಂಗೆ,
ತಳುವಿ ಬಂದೆಯೆಲಾ ಸುಖಾಗಮನಮಂ ಬಯಸೆ!
ನಾಳೆಯೋ ನಾಡಿದೋ ಬೀಳ್ಕೊಂಡಪೆವು ನಿಮ್ಮ ಅಡವಿ ಪೊಡವಿಯಂ.
ಅಯ್ಯೊ, ಆತಿಥ್ಯಮಂ ಸವಿವ ಸೌಭಾಗ್ಯಮನೆಗಿಲ್ಲಾಯ್ತಲಾ!

ರಾಮನ ಮಾತಿಗೆ ನಗುತ್ತಲೇ ಉತ್ತರಿಸುತ್ತಾಳೆ ಚಂದ್ರನಖಿ:

ಹೊಣೆ ನಮತು,
ನಂಟರ ಮನೆಗೆ ಹೋಗುವನ್ನೆಗಂ;
ಹೋದಂದು ನಾವವರ ಸೆರೆಯಲ್ತೆ ಬಿರ್ದ್ದನಿಕ್ಕುವವರೆಗೆ,
ಮೇಣ್ ಅವರೆ ಬೀಳುಕೊಡುವನ್ನೆಗಂ?
ನೀಮೆಂತು ಪಿಂತಿರುಗುವಿರಿ ನಾಮಿಕ್ಕುವಾ ಬಿರ್ದ್ದನುಣ್ಣದೆಯೆ?
ನಿಮಗುಂ ಅದು ತಗದು;
ನಮಗೆ ಅಪಕೀರ್ತಿ!

ರಾಮ ಮತ್ತೆ ಸಿಡಿಯುತ್ತಾನೆ:

ವಿಚಿತ್ರಂ,
ದಾಕ್ಷಿಣಾತಿಥ್ಯಂ
ಬಲತ್ಕಾರ ಸತ್ಕಾರಂ!
ದನುಜನನುಜೆ ಬಗ್ಗಿಯಾಳೆ? ಅವಳೂ ವಾದ ಹೂಡುತ್ತಾಳೆ.
ದಿಟದೊಲ್ಮೆ ಹಠವಾದಿ.
ಔಪಚಾರಿಕಮಲ್ತು, ಕೇಳ್,
ರಾಕ್ಷಸ ಕುಲದ ಛಲದ ದೃಢನಿಶ್ಚಲ ಪ್ರೀತಿ.
ಊಟದೊಳ್ ಕದನದಾಟದೊಳ್ ಅಂತೆ ಬೇಟದೊಳ್
ಬಲನಿಷ್ಠೆ ಎಮ್ಮ ಸಲ್ಲಕ್ಷಣಂ!
ಮಾಳ್ಪುದಂ ರಸಪೂರ್ಣಮೆನೆ ರಾಗಪೂರ್ವಕಮಾಗಿ ಮಾಳ್ಪುದದೆ ನಮಗೆ ನಲ್!
ಕೋಸಲೇಶ್ವರ,
ನಮ್ಮ ಪ್ರೇಮಮಂ ತಣಿಯುಣದೆ
ನೀಂ ಪಿಂತಿರುಗಿ ಪೋಪುದು ಅಸದಳಂ!

ಎನ್ನುತ್ತಾಳೆ. ಅವಳ ಮಾತಿನಲ್ಲಿ ಕೋರಿಕೆಯ ಜೊತೆಗೆ ಎಚ್ಚರಿಕೆಯೂ ಇದೆ! ಅದಕ್ಕೆ ರಾಮನ ಉತ್ತರ:

ಬಿರ್ದ್ದಿನೌತಣಮೇಕೆ?
ಮೇಣ್ ಅರಸು ಸೊಗಂ ಏಕೆ?
ನಾಡಿನೊಳವೆಲ್ಲಮಂ ತೊರೆದು, ನೋಂಪಿಗೆ ನೋಂತು
ಕಾಡನ್ ಅಲೆವ ಎಮಗೆ?

ಚಂದ್ರನಖಿ:

ಮೈತ್ರಿಯೆ ಕೊಡುಗೆಯಾಗುವೊಡೆ
ನೋಂಪಿಗೆ ಅದರಿಂ ಕೇಡೆ?

ರಾಮ:

ಉಂಟೆ?
ನೋಂಪಿಯ ಮುಡಿಗೆ ಪರಿಮಳದ ಪೂವಲ್ತೆ ಮೈತ್ರಿ!
ಅದಕೋಸುಗಮೆ, ಹಗೆತನವನಳಿಸುತ ಅಕ್ಕರೆಯನುಕ್ಕಿಸಲಿಕೆ
ಆಂ ತೊರೆದು ದೊರೆಗದ್ದುಗೆಯನ್ ಇಲ್ಲಿಗೈತಂದೆನೈಸೆ!

ಚಂದ್ರನಖಿ:

ನಿನ್ನವೋಲ್ ಆಣುಂ ಅದನರಸಿ ಬಂದಿಹೆನಿಂದು ನಿನ್ನೆಡೆಗೆ,
ಕೇಳ್, ಸರಸಿ. ನೀಂ ಕರುಣಿ, ಧರ್ಮಮತಿ, ದಾನರುಚಿ.
ನಾಥನಿಲ್ಲದ ತರುಣಿಯಾಂ.
ನನ್ನ ಬಾಳ್ ಬರಿಯ ಪಾಳ್.
ಮಡಿದನ್ ಎನ್ನಾಣ್ಮನ್ ಎನ್ನಣ್ಣನಿಂ ತನ್ನ ಕಿರುವರೆಯದೊಳ್.
ಪಾತಾಳಯುದ್ಧದೊಳ್ ತೊಡಗಿರ್ದರ್ ಇರ್ವರುಂ.
ಕಳ್ತಲೆಯ ಕುರುಡಿಂದೆ ಒರ್ವರ್ ಒರ್ವರನ್ ಅರಿಗೆ ಗೆತ್ತು ಪುರುಡಿಸಿ ಕಾದಿದರ್.
ಗಂಡನ್ ಅಳಿದನ್ ಗಂಡುಗಲಿ ರಾವಣನ ಕೈದುವಲಿಯಾಗಿ.

ಹೀಗೆ ತನ್ನ ಬಗ್ಗೆ ರಾಮನಿಗೆ ಕರುಣೆ ಮೂಡುವಂತೆ ತನ್ನ ಗಂಡ ಸ್ವತಃ ತನ್ನ ಅಣ್ನನಿಂದಲೇ ಹತನಾಗಿದ್ದನ್ನು ಹೇಳುತ್ತಾಳೆ. ನಂತರ ಮುಂದುವರೆದು ತನ್ನ ನಿಜದ ಮನದಿಚ್ಛೆಯನ್ನು ಬಿಚ್ಚಿಡುತ್ತಾಳೆ.

ನಾನು ಅಂದಿನಿಂದ ಈವರೆಗೆ
ಮಳೆಯ ನೀರ್ಗಾಣದೆ
ಬಂಜರಾದೊಳ್ನೆಲದ ಪಾಂಗಿಂದೆ ಬರ್ದುಕುತಿಹೆನ್
ಎಂತೊ ರಿಕ್ತತೆಗೆ ಅತ್ತು ಸತ್ತು ಬೇಸತ್ತು.
ನನ್ನೆರ್ದೆಯ ನೀರಸದ ಇಳೆಗೆ ನೀಂ ಮಳೆಯಾಗಿ ಕರೆಯಯ್ಯ,
ಹೊಳೆಯಾಗಿ ಹರಿಯಯ್ಯ;
ಹಚ್ಚನೆಯ ಹಸುರು ಪಯಿರಿನ ಬೆಳೆಯ ಸಿರಿಯಾಗಿ ಬಾರಯ್ಯ.
ಕಲ್ಪತರು ನೀನಲ್ತೆ ಬೇಳ್ಪರಿಗೆ?

ಹೀಗೆ ಹೇಳುತ್ತಲೇ ಮಿಂಚಿನ ಅಂಚನ್ನುಳ್ಳ ಮೋಡದಂತೆ ಹತ್ತಿರ ಬರುತ್ತಿದ್ದ ಮೇಘಾಂಗಿಯನ್ನು ರಾಮ ಪರ್ವತದಂತೆ ತಡೆಯುತ್ತಾನೆ:

ಅನಾರ್ಯೆ,
ನೀನ್ ಅನ್ಯಬಾರ್ಯೆ!
ರಾಕ್ಷಸ ವಿವಾಹಕ್ರಮಂ,
ಕೇಳ್ ನಮಗಸಹ್ಯಂ!

ಎಂದು ನಗುತ್ತಲೇ ನುಡಿದು, ಸೀತೆಯ ಕಡೆಗೆ ನೋಡಿ, ಚಂದ್ರನಖಿಯನ್ನು ಹಾಸ್ಯ ಮಾಡುವವನಂತೆ,

ಪತ್ನಿಯಿಹಳ್ ಎನಗಿವಳ್;
ಪ್ರಿಯೆಯುಂ ವಲಂ;
ಮೇಣ್ ಚೆಲ್ವಿಗೇನಲ್ಲಿ ಕೊರೆಯಿಲ್ಲ!
ತುಂಬಿಹ ಹೊಡೆಗೆ ಸೇರದು ಅಮೃತಾನ್ನಮುಂ.

ಎನ್ನುತ್ತಾನೆ.
ಚಂದ್ರನಖಿ:

ಒಪ್ಪಿದೆನ್.
ಸತಿಗೆ ಹೆಗಲೆಣೆಯನ್ ಆಂ ಕಂಡೆನಿಲ್ಲ.
ನನ್ನತ್ತಿಗೆಯ ರೂಪಿರ್ಪುದು ಇದಕೆ ಹೊಯಿಕೈಯಪ್ಪುದು
ಆದೊಡಂ ಗುಣಕೆ ಮಚ್ಚರಮೇಕೆ?-
ಸಿಹಿಗೆಂತು ರುಚಿಯಿಹುದೊ
ಕಹಿಗುಂ ಅಂತೆಯೆ ಬೇರೆ ರುಚಿಯಿರದೆ?
ಭೋಜನದ ರಸಿಕಂಗೆ ಬೇರೆ ಬೇರೆಯ ರುಚಿಯ ರಸಗಳೊಳ್ ಭೇದಭಾವಂ ಅದೇಕೆ?
ನಿಮ್ಮ ಉತ್ತರದ ರತಿಯ ಸಾತ್ವಿಕ ರಸದ ಜೊತೆಗೆ
ನಮ್ಮ ದಕ್ಷಿಣ ರತಿಯ ರಾಜಸವನು ಅನುಭವಿಸಿ ನೋಳ್ಪಡೆ
ಕಳಂಕಮೇಂ ರಾಜ ರಸಿಕತೆಗೆ?

ಹೀಗೆ ಕಾಮಾತುರಳಾದ ಚಂದ್ರನಖಿ ನಗೆ ಕೊಂಕಿಸುತ್ತಾ, ಹೂವಿನಾಕೃತಿಯ ಹಾವಿನಂದದಲಿ ಹೆಡೆಯೆತ್ತಿ ನಲಿಯುತ್ತಿದ್ದಾಗ, ಮೈಥಿಲಿಯ ಮನದನ್ನನಾದ ರಾಮನಿಗೆ ಕೋಪದಿಂದ ಹುಬ್ಬುಗಂಟಿಕ್ಕಿತು. ಅದು ನುಡಿರೂಪವನ್ನಾಂತುದು ಹೀಗೆ:

ನಿಲ್,
ನುಡಿಯದಿರ್ ಪೊಲ್ಲಮಂ.
ಸಾಲ್ಗುಮೀ ಪಾಣ್ಬೆಜಾಣ್/
ನೀನೆತ್ತಣಿಂದರಿವೆ, ಸಿತಗೆ,
ಹದಿಬದೆತನದ ನಿರ್ಮಲಾನಂದಮಂ?
ಹದಿಬದೆಗೆ ತೋರ್ದುಪುದು
ತನ್ನಿನಿಯನೊರ್ವನೊಳೆ ಸರ್ವ ಮನುಜರ,
ಮತ್ತೆ ಸರ್ವಲೋಕದ ಸರ್ವ ವೈವಿಧ್ಯಮುಂ.
ಪ್ರೇಮನಿಷ್ಠೆಯ ಪತಿಗುಂ
ಅಂತೆ ತನ್ನ ಸತಿಯೊಳೆ ತೋರ್ದಪುದು
ಸರ್ವ ಲಲನೆಯರ ಸರ್ವಶೃಂಗಾರಮುಂ!
ಲಂಕೇಶ್ವರನ ತಂಗೆ ನೀನಾಗಿಯುಂ ನುಡಿವೆ
ನಾಡಾಡಿ ಬೆಲೆವೆಣ್ಗಳುಂ ನಾಣ್ಚುವ ಅಳಿ ನುಡಿಗಳಂ;
ಸೋಜಿಗಂ!...
ಇಹಳಿಲ್ಲಿ ಮರ್ಯಾದೆವೆಣ್,
ಜನಕ ರಾಜರ್ಷಿಯ ಕುಮಾರ್ತೆ.
ಮಾತು ಸಾಕು.
ಇಲ್ಲಿರದೆ ನಡೆ, ಸಹೋದರ ಲಕ್ಷ್ಮಣಂ ಬರ್ಪನಿತರೊಳ್.
ಬಂದೊಡಪ್ಪುದು ನಿನಗೆ ತಗುವವೊಲ್ ಮದುವೆ ಮರಿಯಾದೆ!

ಮೊದಲು ರಾವಣನ ಹೆಸರು ಕೇಳಿದಾಗ, ಸೀತೆ ರಾಮನ ಮೊಗವನ್ನು ನೋಡಿದಾಗ, ಆಕೆ ಅಲ್ಲಿ ಕಂಡದ್ದು, ಮಚ್ಚರದ ಕಿಚ್ಚು! ಬಹುಷಃ ಅದು ಸೀತೆಯ ಗ್ರಹಿಕೆ ಮಾತ್ರ. ಆದರೆ ಸ್ವತಃ ರಾಮನಿಗೆ ರಾವಣನ ಬಗ್ಗೆ ಸದಭಿಪ್ರಾಯವೇ ಇದೆ. ಏಕೆಂದರೆ ಸೀತೆಯನ್ನು ಹೊತ್ತೊಯ್ಯುವವರೆಗೂ ರಾವಣನ ಕೀರ್ತಿ ಕಳಂಕವಿಲ್ಲದುದೇ ಆಗಿತ್ತು! ರಾಮ ಲಕ್ಷ್ಮಣನ ಹೆಸರೆತ್ತುತ್ತಿರುವಾಗಲೇ, ಚಂದ್ರನಖಿಗೆಇನ್ನೊಬ್ಬ ಸುಂದರ ಇಲ್ಲಿದ್ದಾನೆಎನ್ನುವುದು ಮನಕ್ಕೆ ನಾಟುವಷ್ಟರಲ್ಲೇ, ಸಂಜೆಯ ಮಂಜಿನಲ್ಲಿ ಲಕ್ಷ್ಮಣ ಮೂಡಿ ಬರುತ್ತಾನೆ. ಬಂದವನೇ ಏನೋ ಶಂಕೆಯಿಂದ ಚಂದ್ರನಖಿಯನ್ನು ಅಪಾದಮಸ್ತಕ ನೋಡುತ್ತಾನೆ. ಚಂದ್ರನಖಿಯೂ ನೋಡುತ್ತಾಳೆ. ’ರಾಜಸಗುಣದಲ್ಲಿ ತನಗೆಣೆಯಾದ ಜೊತೆಗಾರ ಸಿಕ್ಕಎಂದು ಆಕೆಯ ಮನ ಪುಳಕಗೊಳ್ಳುತ್ತದೆ. ರಾಮನಿಗಾದರೊ ಇಲ್ಲಿ ಸತಿಯಿದ್ದಾಳೆ. ಈತನಿಗೆ ಸತಿಯಿಲ್ಲ. ’ಸತಿಯಿಲ್ಲದಾತಂಗೆ ರತಿಯಾಗುವಾಸೆಗೆ ಮನಂ ಮಿಂಚಿತೆಂಬಂತೆ!’ ಆಕೆ ಸಂತೋಷಗೊಳ್ಳುತ್ತಾಳೆ. ’ಹೆಣ್ಣಿನಿಂದಣ್ಣಂಗೆ ಕಣ್ದಿರುಹಿದಲಕ್ಷ್ಮಣನಿಗೆ ರಾಮ ನಡೆದುದೆಲ್ಲವನ್ನೂ ಹೇಳುತ್ತಾನೆ. ಕೇಳಿದ ಲಕ್ಷ್ಮಣನಿಗೆ ಕಿಚ್ಚು ಹೆಚ್ಚುತ್ತದೆ. ತಕ್ಷಣ ತೊಲಗೆಲೆ ನಿಶಾಚರಿಯೆ! ಎಂದು ತೋಳನ್ನು ಬೀಸುತ್ತಾನೆ. ಬೆಟ್ಟದಿಂದ ಇಳಿದು ಬರುವಾಗ ಆಶಂಕೆಯಿಂದ ಬಾಣವನ್ನು ಕೈಯಲ್ಲಿಡದೇ ಬಂದಿರುತ್ತಾನೆ. ಇಲ್ಲಿಗೆ ಬಂದಾಗ, ಅಪರಿಚಿತ ಚಂದ್ರನಖಿಯನ್ನು ಕಂಡಾಗ, ರಾಮನು ಹೇಳಿದ್ದನ್ನು ಕೇಳಿದಾಗ ಕೈಯಲ್ಲಿದ್ದ ಬಾಣ ಆತನಿಗೆ ಮರೆತೇ ಹೋಗಿರುತ್ತಾನೆ. ಅದರ ಸಮೇತ ತನ್ನ ತೋಳನ್ನು ಬೀಸುತ್ತಾನೆ; ತೊಲಗೆಲೆ ನಿಶಾಚರಿಯೆ! ಎಂದು. ಪ್ರಮಾದ ಆಗಿಯೇ ಹೋಗುತ್ತದೆ. ಬಾಣ ಚಂದ್ರನಖಿಯ ಮುಖಕ್ಕೆ ಆಳವಾದ ಗಾಯ ಮಾಡಿಬಿಡುತ್ತದೆ. ನೆತ್ತರು ಉಕ್ಕಿದಂತೆ ಆಕೆಯ ಕೋಪವೂ ಉಕ್ಕುತ್ತದೆ. ’ತೆಕ್ಕನೆಯೆ ಶೂರ್ಪನಖಿಯಾದಾಳಾ ಚಂದ್ರನಖಿ!’ ಭೀಷಣಾಕೃತಿ ಮೂಡುತ್ತದೆ. ಸೀತೆ ಭಯದಿಂದ ಕಂಪಿಸುತ್ತಾಳೆ. ರಾಮನ ಮೇಲಿನ ಮೋಹದಿಂದ ಶೂರ್ಪನಖಿಗೆ ಮೋಹನಾಕೃತಿ ದೊರೆತು ಚಂದ್ರನಖಿಯಾಗಿದ್ದವಳುವೀಗ ವೈರದಿಂದ ವೈರೂಪ್ಯಳಾಗಿ ಮತ್ತೆ ಶೂರ್ಪನಖಿಯಾಗುತ್ತಾಳೆ. ’ನಖಚಯಂ ಮೊರದವೋಲಗುರ್ವಾದುವು’ ’ಕಾಮರೂಪದ ಭೀಮ ಭೀಕರಾಕಾರಮಂ ತಾಳ್ದುದೆ ತಡಂ’, ಲಕ್ಷ್ಮಣ ಬಾರಿ ಗುರಿಯಿಟ್ಟೇ ಆಕೆಯ ಮೂಗು ಕತ್ತರಿಸಿ ಬೀಳುವಂತೆ ಕತ್ತಿಯನ್ನು ಬೀಸುತ್ತಾನೆ. ತಕ್ಷಣ ಶೂರ್ಪನಖಿಯಾದ ಚಂದ್ರನಖಿ ಅಂಬರಕೆ ನೆಗೆಯುತ್ತಾಳೆ, ’ವರ್ಷಾಭ್ರವೇಷದಿಂ ರೋಷರವದಿಂದ ಅಶನಿ ಘೋಷದಿಂ, ನೆಲಂ ನಡುಗಿ ಗುಡುಗೆ ಗಿರಿಗಹ್ವರಂ!’.

No comments: