Thursday, December 19, 2013

ಅಧ್ಯಾಪನ ವೃತ್ತಿ ಅಂದು - ಇಂದು

ಅಂದು 1934-35
ಅವರಿಗೆ ಅರಮನೆಯಲ್ಲಿ ಪ್ರೈವೇಟ್ ಟ್ಯೂಷನ್ ಹೇಳಲು ನನಗೆ ಆಹ್ವಾನ ಬಂದಿತ್ತು. ನನ್ನನ್ನು ಕಾರಿನಲ್ಲಿ ಕೊಂಡೊಯ್ದು ಮತ್ತೆ ಕಾರಿನಲ್ಲಿ ತಂದು ಮನೆಗೆ ಬಿಡುವುದಾಗಿಯೂ ಒಳ್ಳೆಯ ಸಂಭಾವನೆ ಕೊಡುವುದಾಗಿಯೂ ಕಾಲೇಜಿನ ಮುಖ‍್ಯಾಧಿಕಾರಿ ಹೇಳಿದರು...... I have got better business than teaching Princes! (ಈ ರಾಜಕುಮಾರರುಗಳಿಗೆ ಪಾಠ ಹೇಳುವುದಕ್ಕಿಂತಲೂ ನನಗೆ ಬೇರೆ ಉತ್ತಮತರ ಕೆಲಸವಿದೆ!) ಎಂದು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಟ್ಟೆ. ಎಲ್ಲರಿಗೂ ಆಶ್ಚರ್ಯ. ಅರಮನೆಯಿಂದ ಅಂತಹ ಕರೆ ಬರುವುದೇ ಎಂದು ಇತರರು ಹಾತೊರೆಯುತ್ತಿದ್ದರೆ ಇವನು ತಿರಸ್ಕರಿಸುತ್ತಾನಲ್ಲ ಎಂದು!
- ಕುವೆಂಪು 'ನೆನಪಿನ ದೋಣಿಯಲ್ಲಿ' ಪುಟ 1067
ಅಂದು 1969-70
ೆಲ್ಲರಂತೆ ನನಗೂ ಯುವ ಸ್ಫೂರ್ತಿ ಮಿಡಿಯುತ್ತಿತ್ತು. ಇಂತಹ ಸಂದರ್ಭದಲ್ಲೇ ನನಗೊಂದು ಅಪೂರ್ವ ಅವಕಾಶ ೊದಗಿಬಂದಿತು. ಅದೇ ಮೈಸೂರು ಸಂಸ್ಥಾನದ ಮಹಾರಾಜರ ಸುಪುತ್ರನಿಗೆ ಪಾಠ ಹೇಳಿಕೊಡುವ ಜವಾಬ್ದಾರಿ. ನಾನು ಅಳುಕಿನಿಂದಲೇ ಒಪ್ಪಿಕೊಂಡೆ.....
ಪ್ರಾಧ್ಯಾಪಕರ ಬಡಾವಣೆಯಿಂದ ಅರಮನೆಗೆ ನನ್ನನ್ನು ಕರೆದೊಯ್ಯಲು ಅರಮನೆಯಿಂದ ಕಾರು ಬರುತ್ತಿತ್ತು. ಅದು ಒಂದಲ್ಲಾ ಎರಡು. ಕಾರ್ಯದರ್ಶಿಗಳೇ ಈ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಇದು ನನಗೆ ಸಂಕೋಚಕ್ಕೆ ತಳ್ಳುತ್ತಿತ್ತು. ಆಗಿನ ಕಾಲದಲ್ಲಿ ಕಾರುಗಳೇ ವಿರಳ. ಅವು ಬಂದಿತೆಂದರೆ ಬಡಾವಣೆಯ ಜನರೆಲ್ಲಾ ಹೊರಗೆ ಬಂದು ನೋಡುತ್ತಿದ್ದರು. ಇದು ಸ್ವಲ್ಪ ದಿನ ಮಾತ್ರ ನಡೆಯಿತು. ನಾನು ದೃಢಮನಸ್ಸು ಮಾಡಿ, ನನ್ನ ವಿದ್ಯಾರ್ಥಿಗೆ ಹೇಳಿಬಿಟ್ಟೆ 'ನಾನು ಇನ್ಮುಂದೆ ಕಾರಿನಲ್ಲಿ ಬರುವುದಿಲ್ಲ. ನನಗೊಂದು ಸ್ಕೂಟರ್ ಬೇಕು. ಅದಕ್ಕಾಗಿ ಸಹಾಯ ಮಾಡಿ'
ಆಗ ಐಡಿಯಲ್ ಜಾವಾ ಸ್ಕೂಟರ್‍ ಗಳು ಉತ್ತುಂಗದಲ್ಲಿದ್ದ ಕಾಲ. ಬುಕ್ ಮಾಡಿದರೂ ಸ್ಕೂಟರ್ ಸಿಗಲು ಕನಿಷ್ಠ ನಾಲ್ಕು ತಿಂಗಳು ಸಮಯ ಬೇಖಿತ್ತು. ಆಗ ಅರಮನೆ ಆಡಳಿತ ವರ್ಗ ನನ್ನ ಸಹಾಯಕ್ಕೆ ಬಂದಿತು. ನೇರವಾಗಿ ಕಾರ್ಖಾನೆಯಿಂದಲೇ ಸ್ಕೂಟರ್ ಪಡೆಯಲು ಮತ್ತು ಇದಕ್ಕಾಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ 3600 ರೂ ಸಾಲ ದೊರಕಲು ಒಡೆಯರ್ ನೆರವಾದರು. ಇದು ನನ್ನ ಪಾಲಿಗೆ ದೊಡ್ಡ ಮೈಲಿಗಲ್ಲು.
ಪ್ರೊ. ಚಂಬಿ ಪುರಾಣಿಕ್ 'ತರಂಗ' ವಾರಪತ್ರಿಕೆ 26.12.2013
ಇಂದು............
ಹೆಚ್ಚಿನ ಉಪನ್ಯಾಸಕರು ಕಾಲೇಜುಗಳಲ್ಲಿ ಕೆಲಸ ಮಾಡುವುದು ನೆಪ ಮಾತ್ರಕ್ಕೆ! ವಿಶ್ವವಿದ್ಯಾಲಯಗಳ ಪ್ರಾದ್ಯಾಪಕರುಗಳು ನಿಯೋಜನೆ ಮೇಲೆ ಮಂತ್ರಿ ಮಹೋದಯರ ಜೊತೆ ಕೆಲಸ ಮಾಡುತ್ತಾರೆ. ಅಕಾಡೆಮಿಗಳ ಅಧ್ಯಕ್ಷರಾಗಿ ನಿಯೋಜಿತರಾಗುತ್ತಾರೆ. ಉಪನ್ಯಾಸಕರುಗಳು ನಾಯಿಕೊಡೆಗಳಂತೆ ಬೆಳೆದಿರುವ ಟ್ಯೂಷನ್ ಸೆಂಟರುಗಳಲ್ಲಿ ಹಲವು ಬ್ಯಾಚುಗಳಲ್ಲಿ ಪಾಠ ಮಾಡುತ್ತಾರೆ. ಕೆಲವರಂತೂ ವಿದ್ಯಾರ್ಥಿಗಳ ಮನೆಗೇ ಹೋಗಿ ಸಿ.ಇ.ಟಿ. ಸಂದರ್ಭದಲ್ಲಿ ಟ್ಯೂಷನ್ ಮಾಡಿ ಲಕ್ಷಾಂತರ ಗಳಿಸುತ್ತಾರೆ!
ಅಧ್ಯಾಪನ ವೃತ್ತಿ ಬದಲಾಗಿದೆಯೆ?
ಅಥವಾ
ನಾವು ಬದಲಾಗಿಲ್ಲವೆ?

1 comment:

sriranga said...

ಆತ್ಮಕಥನಗಳಲ್ಲಿ/ನೆನಪುಗಳ ಸಂಕಲನದಲ್ಲಿ ಸಾಮಾನ್ಯವಾಗಿ ಅದನ್ನು ಬರೆದವರು ತಾವು ಓದುಗರ ಕಣ್ಣಲ್ಲಿ , ಮನದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂಬ ಎಚ್ಚರದಿಂದ ಬರೆಯುತ್ತಾರೆ. ತಮ್ಮ ಕೆಲವು ನಡೆ ನುಡಿಗಳು ಓದುಗರ ಎದುರು ತಮ್ಮ ವ್ಯಕ್ತಿತ್ವ ಅಧಿಕಾರ/ಪ್ರಭುತ್ವಗಳ ಎದುರು do not care ಮಾದರಿಯದ್ದು ಎಂದು ವೈಭವೀಕರಿಸಿಕೊಳ್ಳುತ್ತಾರೆ. ಅದು ನಿಜವೋ ಸುಳ್ಳೋ ಅರ್ಧ ಸತ್ಯವೋ ಎಂದು ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಾವು ಉದಾಹರಿಸಿರುವ ಮೊದಲ ಎರಡು ಘಟನೆಗಳಲ್ಲಿ ಅವರು ಅಷ್ಟು harsh ಆಗಿ ಮಾತನಾಡಿದ್ದರ ಬಗ್ಗೆ ಅನುಮಾನಗಳು ಸಹಜವಾಗಿ ಓದುಗರಿಗೆ ಉಂಟಾಗುತ್ತದೆ. ಇನ್ನು ಮೂರನೆಯ ಘಟನೆ ಬಗ್ಗೆ - ಇಂದು ಕಾಲ ಬದಲಾಯಿಸಿದೆ. ಇದು ಸ್ಪರ್ಧಾತ್ಮಕ ಯುಗ. ಒಂದು ತಾಲ್ಲೂಕು ಕೆಂದ್ರದಲ್ಲೇ ನಾಲ್ಕೈದು ಟ್ಯೂಶನ್ ಕೇಂದ್ರಗಳಿರುತ್ತವೆ. ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದು ಬಡಾವಣೆಗೇ ನಾಲ್ಕೈದು ಇರುತ್ತವೆ. ಆದ್ದರಿಂದ ಮನೆಗೆ ಹೋಗಿ ಪಾಠ ಮಾಡುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ. ಜೀವನ ನಡೆಯಬೇಕಲ್ಲ.
-ಮು ಅ ಶ್ರೀರಂಗ ಬೆಂಗಳೂರು ೫-೩-೨೦೧೪