Wednesday, August 13, 2014

ಗೌರಿ ಕಲ್ಯಾಣ

ಪೆಟ್ಟಿಗೆ ದೇವರ ಉತ್ಸವಕ್ಕೆ ಬರಬೇಕೆಂದು ಗೌರಮ್ಮ ಬರೆದಿದ್ದ ಕಾಗದವನ್ನು ಕಂಡು ಬಹಳ ಸಂತೊಷವಾಯಿತು. ಶಿವರಾತ್ರಿ ಕಳೆದು ಮೂರನೆಯ ದಿನಕ್ಕೆ ನಡೆಯಲಿದ್ದ ಉತ್ಸವಕ್ಕೆ ಹೊರಡಲು ಇನ್ನೂ ಒಂದು ವಾರ ಸಮಯವಿತ್ತು. ಅವಳ ಪರಿಚಯವಾಗಿ ಎರಡು ವರ್ಷಗಳಾದ ಮೇಲೆ ಬಂದ ಮೊದಲ ಪತ್ರ ಇದಾಗಿತ್ತು. ಎರಡು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಜನಪದ ಕಲಾಮೇಳವನ್ನು ವರದಿ ಮಾಡಲೆಂದು ಹೋಗಿದ್ದಾಗ ಮೊದಲ ಬಾರಿಗೆ ಅವಳನ್ನು ನೋಡಿದ್ದೆ. ಕಲಾಮೇಳದ ಕೊನೆಯ ದಿನದ ಕೊನೆಯ ಕಾರ್ಯಕ್ರಮ ಗೌರಮ್ಮಳದಾಗಿತ್ತು. ಆಗಲೇ ಎದ್ದು ಹೊರಟಿದ್ದ ಜನ ನೆಲಕ್ಕೆ ಅಂಟಿ ಕುಳಿತುಕೊಳ್ಳುವಂತೆ ಸುಶ್ರಾವ್ಯವಾಗಿ, ನಾಲ್ಕು ಜನ ಹಿಮ್ಮೇಳದ ಮಹಿಳೆಯರೊಂದಿಗೆ ಹಾಡಲು ಪ್ರಾರಂಭಿಸಿದಾಗ ಜನ ಬೆರಗಾಗಿ ನೋಡಿದ್ದರು. ಅಂದು ಗೌರಮ್ಮ ಹಾಡಿದ್ದ ಹಾಡಿನ ಸಾಲುಗಳು ಇನ್ನೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿವೆ.
        ಅಕ್ಕಕ್ಕ ಮಾತನಾಡೆ ಚಿಕ್ಕ ಗೌರಸಂದ್ರ
        ಹೆಚ್ಚಿನ ಮಾನ್ಯದ ಗರತಿ ಮತ್ತೊಂದು ಮಾತನಾಡೆ||ಅಕ್ಕಕ್ಕ||
        ಏಳುತಲೆ ಎದ್ದು ತಾಯೀನ ನೆನದೇವು
        ನಾಗಭೂಷಣದ ನೆರಿಗೋಳೆ ಮಾತನಾಡೆ||ಅಕ್ಕಕ್ಕ||
        ಮಟ್ಟ ಮಧ್ಯಾಹ್ನದಾಗ ಹುಟ್ಟಿತ್ತು ಬೇವಿನ ಮರ
        ಹುಟ್ಟುತಲೆ ಕಾಯಿ ಜಡಿವುತಲೆ||ಅಕ್ಕಕ್ಕ||
        ಹುಟ್ಟುತಲೆ ಕಾಯಿ ಜಡಿವುತಲೆ ಅಕ್ಕ ಮಾರಿ
        ಹುಟ್ಟಳು ಬೇವಿನ ಮರುದಾಗೆ||ಅಕ್ಕಕ್ಕ||
        ಹುಟ್ಟಿದ ಏಳೆ ದಿನಕ್ಕೆ ಶಿವಪೂಜೆ ಬೊಮ್ಮಲಿಂಗ
        ಜೊತಿ ಬಂದು ಬಿಳಿಯ ಕಣಗಾಲ||ಅಕ್ಕಕ್ಕ||
        ಹೋಗಿ ನೋಡನು ಬನ್ನಿ ಓಲೆ ಇಟ್ಟವಳೆ
        ಬೊಮ್ಮಯ್ಯನ ಅಕ್ಕಯ್ಯ ಮಾತನಾಡೆ||ಅಕ್ಕಕ್ಕ||
ಹೀಗೆ ಸುಮಾರು ಹದಿನೈದು ನಿಮಿಷಗಳ ಕಾಲ ಹಾಡಿ ಮುಗಿಸಿದಾಗ ಇಡೀ ಸಭೆ ಎದ್ದು ನಿಂತು ‘ಒನ್ಸ್‌ಮೋರ್’ ಎಂದಿತ್ತು. ಸಂಘಟಕರ ಅಪ್ಪಣೆಯ ಮೇರೆಗೆ ಮತ್ತೊಂದು ಹಾಡನ್ನು ಮೊದಲಿಗಿಂತ ಚನ್ನಾಗಿ ಹಾಡಿದ್ದಳು. ಮೊದಲ ಹಾಡಿನಲ್ಲಿದ್ದ ಒಂದು ರೀತಿಯ ಭಯ ಎರಡನೆಯ ಹಾಡಿನಲ್ಲಿರಲಿಲ್ಲ.
ಬೆಳ್ಲಿನ ಗೊಂಡೇದ ಶರಣಾನೆ ಓಬಯ್ಯಾ
ಎಲ್ಲೋದರು ನಿಮ್ಮ ದಯವಿರಲಿ ಹೂವೇ
ಹೂವೇ ಸೋಬಾನವೇ ವನದೊಳಗಿನ ಹೂವೆಲ್ಲ ಸೋಬಾನವೇ||
ಎತ್ತಗೋದರು ನಮ್ಮ ನೆತ್ತಿ ಮ್ಯಾಲಿರುವೋನೆ
ಮುತ್ತೀನ ಗೊಂಡೇನ ಶರಣಾನೆ||ಹೂವೇ||
ಮುತ್ತೀನ ಗೊಂಡೇನ ಶರಣಾನೆ ಓಬಯ್ಯ
ಎತ್ತೋದರು ನಿನ್ನ ದಯವಿರಲಿ||ಹೂವೇ||
ಸೂರ್ಯ ಮೂಡಿದಂಗೆ ಮೂಡ್ಯಾನ ಓಬಯ್ಯ
ಹೂವಿನ ಉರಿಬಾಣ ಬಲಗೈಲಿ||ಹೂವೇ||
ಹೂವಿನ ಉರಿಬಾಣ ಬಲಗೈಲಿ ಹಿಡುಕೊಂಡು
ಮೂಡ್ಯಾನೆ ಕಕ್ಕೆ ಮರುದಾಗೆ||ಹೂವೇ||
ಆಕೆ ಹಾಡು ನಿಲ್ಲಿಸಿ ಐದು ನಿಮಿಷಗಳ ಕಾಲ ನಿರಂತರವಾಗಿ ಬಿದ್ದ ಚಪ್ಪಾಳೆಯೇ ಆ ತಂಡಕ್ಕೆ, ಇಡೀ ಜನಪದ ಮೇಳದಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿತ್ತು. ಅತ್ಯುತ್ತಮವಾದ ಮೂರು ಕಲಾ ತಂಡಗಳನ್ನು ಗುರುತಿಸಲು ಒಂದು ಸಮಿತಿಯೂ ನೇಮಕವಾಗಿದ್ದು, ಅದರ ವರದಿ ಸಂಜೆ ಆರು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೊರಬೀಳುವದರಲ್ಲಿತ್ತು. ಅದಕ್ಕೆ ಇನ್ನೂ ಒಂದು ಗಂಟೆ ಇದ್ದುದ್ದರಿಂದ ನಾನು ಆಕೆಯ ಬೆನ್ನು ಬಿದ್ದೆ.
ನಾನು ಪತ್ರಿಕೆಯವನೆಂದು ತಿಳಿದಾಗ, ಚಿಪ್ಪಿನೊಳಗೆ ಮುದುರಿಕೊಳ್ಳುವ ಆಮೆಯಂತೆ ವರ್ತಿಸಿದ ಗೌರಮ್ಮ ಮತ್ತು ಆಕೆಯ ಕಲಾತಂಡದಲ್ಲಿ ಇದ್ದುದ್ದು ಕೇವಲ ಆರು ಜನರು ಮಾತ್ರ. ಅದರಲ್ಲಿ ಹಾಡುತ್ತಿದ್ದ ಐದು ಮಂದಿ ಮಹಿಳೆಯರಾಗಿದ್ದರೆ, ಒಬ್ಬ ಅವರ ಜೊತೆಯಲ್ಲಿ ಬಂದಿದ್ದ ಓಬಳಯ್ಯ ಎಂಬ ಗಂಡಸು. ಸುಮಾರು ಒಂದು ಗಂಟೆ ಕಾಲ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಸಾಕಷ್ಟು ವಿವರಗಳನ್ನೂ ಸಂಗ್ರಹಿಸಿ, ನಮ್ಮ ಪತ್ರಿಕೆಯಲ್ಲಿ ವಿವರವಾಗಿ ಎರಡು ಕಂತುಗಳ ಒಂದು ಸಚಿತ್ರ ಲೇಖನವನ್ನು ಪ್ರಕಟಿಸಿದ್ದೆ. 
ಅವರು ಮೊಳಕಾಲ್ಮೂರು ತಾಲ್ಲೂಕಿನ ಗೌರಸಂದ್ರ ಎಂಬ ಊರಿನಿಂದ ಬಂದಿದ್ದ ಮ್ಯಾಸಬೇಡ ಎಂಬ ಬುಡಕಟ್ಟು ಜನಾಂಗದವರಾಗಿದ್ದರು. ಸುಮಾರು ಹದಿನೆಂಟು ವರ್ಷಗಳನ್ನು ದಾಟಿರದ ಗೌರಮ್ಮಳೇ ಆ ತಂಡದ ನಾಯಕಿಯಾಗಿದ್ದಳು. ಏಕೆಂದರೆ, ಗೌರಮ್ಮ ಒಬ್ಬಳೇ ಅವರಲ್ಲಿದ್ದ ವಿದ್ಯಾವಂತೆ. ಹಟ್ಟಿಯ ಪೂಜಾರಿಯ ಒಬ್ಬಳೇ ಮಗಳಾಗಿದ್ದರಿಂದಲೂ, ಹಟ್ಟಿಗೆ ಮದುವೆ ಮತ್ತೊಂದು ಕಾರ್ಯಗಳನ್ನು ಮಾಡಿಸಲು ಬರುತ್ತಿದ್ದ, ಪೂಜಾರಿಗೆ ಚನ್ನಾಗಿ ಪರಿಚಯವಿದ್ದ ಬ್ರಾಹ್ಮಣ ಜೋಯಿಸ ವೆಂಕಟಯ್ಯನವರು ಕರುಣೆ ತೋರಿಸಿದ್ದರಿಂದ ಬ್ರಾಹ್ಮಣ ಕೇರಿಯಲ್ಲಿದ್ದ ನಾಲ್ಕನೇ ಕ್ಲಾಸನ್ನು ಮುಗಿಸಿದ್ದಳು. ಆಕೆ ಸ್ಕೂಲಿಗೆ ಸೇರಿದ್ದರಿಂದ ಪೂಜಾರಿಯು ಹಟ್ಟಿಯ ಜನರ ಬಾಯಿಗೆ ಬಿದ್ದಿದ್ದ. ಅದನ್ನು ತಿಳಿದಿದ್ದ ಜೋಯಿಸರು ಅವಳನ್ನು ಮುಂದಿನ ಓದಿಗೆ ಕಳಿಸು ಎಂದು ಹೇಳಲಿಲ್ಲ. ಗೌರಮ್ಮಳ ಓದು ಹಟ್ಟಿಗೆ ಬರುತ್ತಿದ್ದ ಯಾವುದಾದರೊಂದು ಕಾಗದವನ್ನು ಓದಿಸಲು ಬ್ರಾಹ್ಮಣರ ಕೇರಿಗೆ ಹೋಗುವದನ್ನು ತಪ್ಪಿಸುವಷ್ಟಕ್ಕೇ ಸೀಮಿತವಾಗಿತ್ತು. ಹಟ್ಟಿಯ ಇತರ ಹೆಂಗಸರ ಜೊತೆ ಸೇರಿ ಚೆನ್ನಾಗಿ ಹಾಡುತ್ತಿದ್ದ ಗೌರಮ್ಮ, ಅಕ್ಕ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ದೇವರ ಉತ್ಸವ ಮುಂತಾದವಕ್ಕೆ ಹೋಗಿ ಹಾಡಿ ಬರುವ ಒಂದು ತಂಡವನ್ನು ರೂಪಿಸಿಕೊಂಡಳು. ಕೈಗೊಂದಿಷ್ಟು ದುಡ್ಡು ಬೀಳುತ್ತಿದ್ದರಿಂದ ಇತರ ಹೆಂಗಸರ ಗಂಡಂದಿರೂ ಬಾಯಿ ಮುಚ್ಚಿಕೊಂಡಿದ್ದರು.
        ಜೋಯಿಸರ ಕಿರಿಯ ಮಗ ಮೈಸೂರಿನಲ್ಲಿ ಓದುತ್ತಿದ್ದವನು. ಅಲ್ಲಿ ನಡೆಯು ಜನಪದ ಕಲಾಮೇಳಕ್ಕೆ ಗೌರಮ್ಮಳ ತಂಡವನ್ನು ಒಪ್ಪಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದ. ನಾನು ಅವರ ಇನ್ನಿತರ ಹಾಡುಗಳು ಆಚಾರ ವಿಚಾರಗಳ ಬಗ್ಗೆ ಕೇಳಿದಾಗ, ‘ಒಮ್ಮೆ ಊರಿಗೆ ಬನ್ನಿ. ಎಷ್ಟು ಬೇಕಾದರೂ ಹಾಡು ಕೇಳಬಹುದು. ಎಲ್ಲಾ ಆಚಾರ ವಿಚಾರಗಳೂ ಗೊತ್ತಾಗುತ್ತವೆ’ ಎಂದು ತುಸು ನಾಚಿಕೆಯಿಂದಲೇ ಉತ್ತರಿಸಿದ್ದಳು ಗೌರಮ್ಮ. ಅದಕ್ಕೆ ಪೂರಕವಾಗಿ ಓಬಳಯ್ಯ, ‘ಸ್ವಾಮಿ ಪೆಟ್ಟಿಗೆ ದೇವರ ಉತ್ಸವಕ್ಕೆ ಬಂದು ಬುಡಿ. ನಮ್ಮ ದೇವರು ದಿಂಡಿರು ಎಲ್ಲಾ ಗೊತ್ತಾಗುತ್ತೆ’ ಎಂದು ಅಹ್ವಾನವಿತ್ತಿದ್ದ. ಪೆಟ್ಟಿಗೆ ದೇವರ ಉತ್ಸವಕ್ಕೆ ಕಾಗದ ಬರೆಯುವಂತೆ ಹೇಳಿ ನನ್ನ ವಿಳಾಸವನ್ನು ಮರೆಯದೆ ಕೊಟ್ಟಿದ್ದೆ. ಅಂದು ಸಂಜೆ ನಡೆದ ಸಮಾರಂಭದಲ್ಲಿ ಅವರ ತಂಡಕ್ಕೆ ಮೊದಲನೇ ಸ್ಥಾನ ಸಿಕ್ಕಿತ್ತು. ನಾನು ಗೌರಮ್ಮಳ ಮುಖವನ್ನೇ ನೋಡುತ್ತಿದ್ದೆ. ಆಕೆಯ ತಂಡದ ಹೆಸರು ಹೇಳುತ್ತಿದ್ದಂತೆ ಚಿಕ್ಕ ಹುಡುಗಿಯಂತೆ ಚಪ್ಪಾಳೆ ತಟ್ಟಿ ನಕ್ಕಿದ್ದಳು. ಅವಳು ಬಹುಮಾನ ಪಡೆಯವ ಚಿತ್ರಗಳನ್ನು ಆಕೆಗೆ ಕಳುಹಿಸುವಾಗ ಅದರ ಬಗ್ಗೆ ಒಂದು ಕಾಗದವನ್ನೂ ಬರೆದಿದ್ದೆ. ಆದರೆ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಯಿರದೆ, ಅವರ ವಿಷಯವೇ ಮರೆತುಹೋಗಿದ್ದ ಈ ದಿನಗಳಲ್ಲಿ ‘ಊರಿಗೆ ಬನ್ನಿ’ ಎಂದು ಗೌರಮ್ಮ ಬರೆದಿದ್ದ ಪತ್ರ ನನ್ನಲ್ಲೇನೋ ಹೊಸ ಹುರುಪನ್ನು ಮೂಡಿಸಿತ್ತು.
*    *   *  * *** *  *   *    *
ಮೊಳಕಾಲ್ಮೂರಿನಿಂದ ಗೌರಸಂದ್ರ ಸೇರುವಷ್ಟರಲ್ಲಿ ಸೂರ್ಯ ಪಡುವಣಕ್ಕಿಳಿಯುತ್ತಿದ್ದ. ನಾನು ಒಂದಿಂಚು ದೂಳಿನಿಂದ ಮುಚ್ಚಿ ಹೋಗಿದ್ದೆ. ಸುಮ್ಮರು ನಲವತ್ತು-ಐವತ್ತು ಗುಡಿಸಲುಗಳಿದ್ದ ಆ ಹಳ್ಳಿಯ ಮುಂದೆ ನಾನು ನಿಂತಾಗ ಅಲ್ಲಿದ್ದ ಮಕ್ಕಳು ಹೆದರಿ ಓಡಿಬಿಟ್ಟರು. ನಾಲ್ಕು ಸಾಲುಗಳಲ್ಲಿ ಕಟ್ಟಿದ್ದ, ಐದಾರು ಅಡಿ ಎತ್ತರದ ಮಣ್ಣಿನ ಗೋಡೆಯ ಮೇಲೆ ಬಿದಿರನ್ನು ಜೋಡಿಸಿ ಬಾದೆಹುಲ್ಲನ್ನು ಹೊದೆಸಿ ನಿರ್ಮಿಸಿದ್ದ ಎಲ್ಲಾ ಗುಡಿಸಲುಗಳೂ ನೋಡಲು ಒಂದೇ ರೀತಿಯಿದ್ದವು. ಅವುಗಳ ನಡುವೆ ವೃತ್ತಾಕಾರದಲ್ಲಿ, ಎತ್ತರವಾಗಿದ್ದ ಗುಡಿಸಲಿನ ಬಳಿ ಜನ ಸೇರಿಕೊಂಡು ಏನನ್ನೋ ಮಾಡುತ್ತಿದ್ದರು. ಅದರಿಂದ ಸ್ವಲ್ಪ ಎಡಕ್ಕೆ, ಬೇರೆ ಗುಡಿಸಲುಗಳಿಗಿಂತ ಸ್ವಲ್ಪ ದಡ್ಡದಾದ ಇನ್ನೊಂದು ಗುಡಿಸಲಿತ್ತು.
ನಾನು ಆ ಜನಗಳನ್ನು ಸಮೀಪಿಸುವಷ್ಟರಲ್ಲಿ ಗೌರಮ್ಮ ನನ್ನ ಮುಂದೆ ಪ್ರತ್ಯಕ್ಷಳಾದಳು. ‘ನೀವು, ನೀವು ಪತ್ರಿಕೆಯವರಲ್ಲವೆ?’ ಎಂದು ಅವಳು ಕೇಳಿದ ಪ್ರಶ್ನೆ, ನನಗೆ ‘ಚಿಕ್ಕವಳಿದ್ದಾಗ ಇವಳು ಹೇಗಿದ್ದಿರಬೇಕು?’ ಎಂದು ಯೋಚಿಸುವಂತೆ ಮಾಡಿತು. ನನ್ನನ್ನು ಕರೆದುಕೊಂಡು ಹೊರಟ ಗೌರಮ್ಮ, ‘ನೋಡಿ. ಇದೆ ನಮ್ಮ ಪೆಟ್ಟಿಗೆ ದೇವರ ಗುಡಿ’ ಎಂದು ವೃತ್ತಾಕಾರದಲ್ಲಿದ್ದ ಗುಡಿಸಲನ್ನು ತೋರಿದಳು. ಮುಂದಕ್ಕೆ ನಡೆದು, ಅದರ ಎಡಕ್ಕೆ ಇದ್ದ ದೊಡ್ಡ ಗುಡಿಸಲಿನ ಮೆಟ್ಟಿಲನ್ನತ್ತಿ, ‘ಒಳಗೆ ಬನ್ನಿ. ಇದೆ ನಮ್ಮ ಮನೆ’ ಎಂದು ಸ್ವಾಗತಿಸಿದಳು. ‘ಅಪ್ಪ. ಇವರೆ ನಾನ್ಹೇಳಿದ್ದ ಪತ್ರಿಕೆಯವರು. ಮೈಸೂರಿನಲ್ಲಿ ನಮ್ಮ ಬಗ್ಗೆ ಬರೆದು, ಅದರ ಚಿತ್ರ ಕಳಿಸಿದ್ದರಲ್ಲ ಅವರೆ’ ಎಂದು ಆಕೆಯ ಅಪ್ಪನಿಗೆ ಪರಿಚಯ ಮಾಡಿಸಿದಳು. ಚಿಮಣಿ ದೀಪದ ಬೆಳಕಿಗೆ ಕಣ್ಣು ಹೊಂದಿಸಿಕೊಂಡು ನೋಡಿದ ನನಗೆ ಕಂಡಿದ್ದು, ಸುಮಾರು ಐವತ್ತು ವರ್ಷ ವಯಸ್ಸಿನ ಕಪ್ಪು ಬಣ್ಣದ ಕಂಬಳಿಯನ್ನು ಬಲ ಪಕ್ಕಕ್ಕೆ ಹಾಕಿಕೊಂಡು, ಎಡಭಾಗದಲ್ಲಿ ಒಂದು ಬಲವಾದ ದೊಣ್ಣೆಯನ್ನು ಇಟ್ಟುಕೊಂಡು ಕುಳಿತಿದ್ದ ಅಜಾನುಬಾಹುವನ್ನು. ಆತನ ಮುಂದೆ ಕುಳಿತಿದ್ದ ಇಬ್ಬರು ನಾವು ಬಂದ ತಕ್ಷಣ ಎದ್ದು ಹೊರಟರು. ನಮಸ್ಕಾರ, ಪ್ರತಿನಮಸ್ಕಾರಗಳಾದ ಮೇಲೆ ನನ್ನ ಕಡೆಗೆ ಕಂಬಳಿಯನ್ನು ನೂಕುತ್ತ ‘ಕುಕ್ಕಳ್ಳಿ’ ಎಂದ. ಆತನ ಕಿವಿಯಲ್ಲಿದ್ದ ಒಂಟಿಗಳು ದೀಪದ ಬೆಳಕಿಗೆ ಠಳಾಯಿಸುತ್ತಿದ್ದವು. ‘ನೋಡಿ ಅಯ್ಯನವರೆ, ನಾನು ಪತ್ರಿಕೆಯವನು. ನನ್ನ ಬಗ್ಗೆ ನಿಮ್ಮ ಮಗಳು ಎಲ್ಲಾ ಹೇಳಿರಬಹುದು. ನಿಮ್ಮ ಹಬ್ಬ ಹರಿದಿನ, ದೇವರು ಇತ್ಯಾದಿಗಳನ್ನೆಲ್ಲ ನೋಡ್ಬೇಕು ಅಂತ ಮೈಸೂರಲ್ಲಿ ಹೇಳಿದ್ದೆ. ನಾಳೆ ಹಬ್ಬ ಅಂತ ಗೊತ್ತಾಯ್ತು. ಅದಕ್ಕೆ ಬಂದೆ. ನಿಮಗೆ ಗೊತ್ತಿರೊ ವಿಚಾರಗಳನ್ನು ಸ್ವಲ್ಪ ಹೇಳಿದ್ರೆ ನಿಮ್ಮ ಬಗ್ಗೆ ಏನಾದ್ರು ಬರಿಬಹುದು’ ಎಂದೆ. ಅದಕ್ಕವನು ‘ಆಗಲಿ ತಗಳಿ. ನಮ್ಮಟ್ಟಿಗೆ ಓದ್ದೊರು ಬರೋದೆ ಕಡಿಮೆ. ಬಂದ್ರೆ ಆ ಅಯ್ನೋರು, ಇಲ್ಲ ಅವ್ರ ಮಗ. ನಾಳೆ ನಾಡ್ದು ಎರಡು ದಿನ ಹಬ್ಬ. ನೋಡ್ಕಂಡು ಹೋಗಿ. ನಿಮ್‌ಗೇನು ಬೇಕೊ ಅದನ್ನೆಲ್ಲ ನಮ್ಮ ಗೌರಿ ಹೇಳತಾಳೆ. ಅವಳಿಗೆ ಎಲ್ಲಾ ಗೊತೈತೆ’ ಎಂದ. ‘ನಾನು ಸ್ವಲ್ಪ ಹೊರಗೆ ಅಡ್ಡಾಡಿಕೊಂಡು ಬರ್ತಿನಿ’ ಎಂದು ಮೇಲೆದ್ದೆ. ಗೌರಿಯೂ ಹಿಂದೆ ಬಂದಳು.
ಪೆಟ್ಟಿಗೆ ದೇವರ ಗುಡಿಯ ಬಳಿ ಬಂದಾಗ ಎಂಟತ್ತು ಜನ ನಮ್ಮ ಸುತ್ತ ಸುತ್ತಿಕೊಂಡರು. ಮಕ್ಕಳು ನಾನೂ ಒಬ್ಬ ಮನುಷ್ಯ ಎಂದುಕೊಂಡು ಸ್ವಲ್ಪ ಹತ್ತಿರ ಬದಿದ್ದವು. ಗೌರಿ ಸ್ವಲ್ಪ ಜೋರಾಗಿ ‘ಇವ್ರು ಪತ್ರಿಕೆಯೋರು. ಬೆಂಗ್ಳೂರಿಂದ ಬಂದವ್ರೆ ನಮ್ಮೂರಿನ ಪೆಟ್ಟಿಗೆ ದೇವ್ರ ಹಬ್ಬ ನೋಡಾಕೆ. ನಮ್ಮ ಚಿತ್ರ ಎಲ್ಲ ಕಳ್ಸಿದ್ದರಲ್ಲ ಇವ್ರೆ’ ಎಂದಳು. ಓಬಳಯ್ಯ ಮುಂದೆ ಬಂದು ‘ನಾನ್ ಸ್ವಾಮಿ, ಓಬಳಯ್ಯ. ಮೈಸೂರಿಗೆ ಬಂದಿದ್ನಲ್ಲ’ ಎಂದು ಪರಿಚಯಿಸಿಕೊಂಡ. ಗೌರಿ ಕೊನೆಯಲ್ಲಿ ‘ಇವ್ರೆ’ ಎನ್ನುವಾಗ ನಾಚಿಕೊಂಡಳೆ ಎಂದು ನಾನು ಯೋಚಿಸುತ್ತಿದ್ದೆ!
ರಾತ್ರಿ ಬಹಳ ಹೊತ್ತಾಗುತ್ತಾ ಹೋದಂತೆ ಚಳಿಯೂ ಹೆಚ್ಚಾಗುತ್ತಾ ಹೋಗುತಿತ್ತು. ಗೌರಿಯ ಹಟ್ಟಿಯ ಹೊರಗಿನ ಜಗಲಿಯಲ್ಲಿ ಕುಳಿತು ಮಾತನಾಡುವಾಗ ನಡುವೆ ನಾನು ‘ಈ ಚಳಿಗೆ ಒಳ್ಳೆ ಕೋಳಿ ಸಾರು ಮುದ್ದೆ ಇದ್ದಿದ್ರೆ ಚನ್ನಾಗಿತ್ತು’ ಅಂದೆ. ತಕ್ಷಣ ಸುಮ್ಮನಿರುವಂತೆ ಹೇಳಿದ ಗೌರಿ ‘ನೀವು ಕೋಳಿ ತಿನ್ನುತ್ತೀರ ಎಂದು ಗೊತ್ತಾದರೆ ನಿಮ್ಮನ್ನು ಪೆಟ್ಟಿಗೆ ದೇವರ ಗುಡಿಯ ಒಳಗೆ ಸೇರಿಸದೆ ಓಡಿಸುತ್ತಾರೆ ಅಷ್ಟೆ’ ಎಂದಳು. ನನಗೆ ಆಶ್ಚರ್ಯವಾಯಿತು. ದನ, ಕೋಣ ತಿನ್ನುವ ಈ ಜನಕ್ಕೆ ಕೋಳಿ ಏಕೆ ಆಗುವುದಿಲ್ಲ ಎಂದು. ಅದನ್ನೆ ಗೌರಿಗೆ ಕೇಳಿದಾಗ, ‘ಅದು ನಮ್ಮ ದೇವರಿಗೆ ಆಗುವುದಿಲ್ಲ. ಅದು ನಮ್ಮ ಹಟ್ಟಿಗೆ ಬಂದರೆ ಸಾಯಿಸಿ ದೂರ ಎಸೆಯುತ್ತಾರೆ. ಅಲ್ಲದೆ ಇಡೀ ಹಟ್ಟಿಯನ್ನು ಸಗಣಿಯಿಂದ ಸಾರಿಸಿ ಸೂತಕ ಕಳೆಯುತ್ತಾರೆ’ ಎಂದಳು. ‘ಅದೆ ಏಕೆ?’ ಎಂದರೆ, ‘ವಿಜಯನಗರದ ರಾಮರಾಯನಿಗೂ ಸಾಬರಿಗೂ ಯುದ್ಧವಾಗುವಾಗ, ಒಂದು ಕೋಳಿ ನಮ್ಮ ಕಡೆಯ ವೀರನೊಬ್ಬನನ್ನು ರಕ್ಷಿಸಿತ್ತು ಅದಕ್ಕೆ, ಎಂದಳು. ನನಗೆ ಇನ್ನು ಆಶ್ಚರ್ಯ! ‘ನಿಮ್ಮ ವೀರನನ್ನು ರಕ್ಷಿಸಿದ ಕೋಳಿಯನ್ನು ಪೆಟ್ಟಿಗೆ ದೇವರ ಗುಡಿಯಲ್ಲೇ ಇಟ್ಟು ಪೂಜೆ ಮಾಡಬೇಕೆ ಹೊರತು ಒಡೆದು ಸಾಯಿಸುವುದೆ?’ ಎಂದೆ. ‘ಏನು? ನೀವು ಯಾವಗಲೂ ಪತ್ರಿಕೆಯವರಂತೆಯೇ ಪ್ರಶ್ನೆ ಕೇಳುತ್ತೀರಿ’ ಎಂದು ಸ್ವಲ್ಪ ಹೆಚ್ಚಾಗಿಯೇ ನಾಚಿಕೊಂಡಳು.
ನಾನು ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ. ಅದನ್ನು ಗಮನಿಸಿದ ಗೌರಿ ‘ಅದೇಕೊ ನನಗೆ ಗೊತ್ತಿಲ್ಲ’ ಎಂದಳು ಚಿಕ್ಕ ಮಗುವಿನಂತೆ. ಮತ್ತೆ ನನ್ನ ಪ್ರಶ್ನೆಗಳು ಮುಂದುವರೆದವು. ‘ನಾನವಳಿಗೆ ಹತ್ತಿರವಾಗುತ್ತಿದ್ದೇನೆ’ ಎಂಬ ಒಂದು ಭಾವನೆ ಮನಸ್ಸಿಗೆ ಬಂದು ಹಿತವೆನಿಸಿತು. ‘ವಿಜಯನಗರದ ಯುದ್ಧದಲ್ಲಿ ನಿಮ್ಮ ಜನ ಭಾಗವಹಿಸಿದ್ದರೆ?’ ಎಂದೆ. ಅವಳಿಗೆ ನನ್ನ ಈ ಪ್ರಶ್ನೆಯಿಂದ ಖುಷಿಯಾದಂತೆ ಅನ್ನಿಸಿತು. ‘ಹೌದು. ನಮ್ಮ ಜನ ಆ ಯುದ್ಧದಲ್ಲಿ ಮೀಸಲು ಪಡೆಯವರಾಗಿದ್ದರಂತೆ. ಬೆಟ್ಟ ಗುಡ್ಡಗಳೆಡೆಯಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ನಮ್ಮವರನ್ನೇ ರಾಮರಾಯ ನಂಬಿಕೊಂಡಿದ್ದನಂತೆ. ನಮ್ಮವರು ಬೇಹುಗಾರರಾಗಿಯೂ ಕೆಲಸ ಮಾಡಿದ್ದರಂತೆ’ ಎಂದು ಚಿಕ್ಕ ಮಗುವಿನಂತೆಯೇ ಉತ್ತರಿಸಿದಳು. ಅವಳೀಗ ಯಾವುದೇ ಸಂಕೋಚವಿಲ್ಲದೆ ನನ್ನ ಮುಖವನ್ನೇ ನೋಡುತ್ತ ಮಾತನಾಡುತ್ತಿದ್ದಳು. ‘ನಿಮ್ಮ ಹೆಂಗಸರೇಕೆ ಕುಪ್ಪಸ ಹಾಕುವುದಿಲ್ಲ? ಎಂದಾಗ ‘ಅಯ್ಯೋ ಅದೊಂದು ದೊಡ್ಡ ರಗಳೆ. ಕುಪ್ಪಸ ಹಾಕಿಕೊಂಡರೆ ಅವರಿಗೆ ಹುಣ್ಣಾಗುತ್ತಂತೆ. ದೇವರಿಗೂ ಕೋಪ ಬರುತ್ತಂತೆ. ಅದಕ್ಕೆ’ ಎಂದಳು. ‘ಮತ್ತೆ ನೀನು ಹಾಕಿದ್ದೀಯ?’ ಎಂದಾಗ ‘ನಾನು ಪೂಜಾರಿ ಮಗಳು’ ಅಂದು ನನ್ನೆಡೆಯಿಂದ ದೃಷ್ಟಿಯನ್ನು ಹೊರಳಿಸಿ ‘ನೀವು ಬಂದಿದ್ದೀರಲ್ಲ ಅದಕ್ಕೆ’ ಎಂದು ಮತ್ತಷ್ಟು ನಾಚಿಕೊಂಡಳು. ‘ಈ ಪೂಜಾರಿ ಅಂದರೆ ಏನು?’ ಎಂದು ನಾನು ಪ್ರಶ್ನೆ ಕೇಳುವುದಕ್ಕು ಅವಳ ಅಪ್ಪ ಬರುವುದಕ್ಕು ಸರಿಯಾಯಿತು. ‘ಇದನ್ನು ಅಪ್ಪನನ್ನೆ ಕೇಳಿ’ ಎಂದು ಎದ್ದು ಹೊರಟಳು. ನನಗೆ ಮತ್ತೆ ಮಾತು ಮುಂದುವರೆಸುವುದಕ್ಕೆ ಬೇಸರವಾದರೂ ಪೂಜಾರಿ ಹೇಳಿದ್ದೆಲ್ಲವನ್ನು ಕೇಳಿಸಿಕೊಂಡೆ.
        ‘ನಾವು ಬ್ಯಾಡರು ಅಂತ ಕಾಡ ಜನ. ನಿಜವಾಗಲು ನಾವು ನಾಯಕರು. ಚಿತ್ರದುರ್ಗದ ಮದಕರಿ ನಾಯಕ್ರಿಲ್ವರ ಅವ್ರ ವಂಶದೋರು ನಾವು. ನಾವು ಬ್ಯಾಟೆ ಆಡ್ತೀವಲ್ಲ ಅದಕ್ಕೆ ಬ್ಯಾಡರು ಅಂತಾರೆ. ನೀವೇನೊ ಕೇಳಿದರಲ್ಲ. ಪೂಜಾರಿ ಯಾರು ಅಂತ. ಈಗ ನಮ್ಮ ಪೆಟ್ಟಿಗೆ ದೇವರಿಲ್ವ. ಅದಕ್ಕೆ ಪೂಜಾರಿ ಆಗಿರೋದು ಅಂತ. ಹೆಂಗಸ್ರು ಪೂಜಾರಿ ಆಗಬಹುದು. ಆದರೆ ಅವ್ಳು ಮದುವೆ ಆಗಂಗಿಲ್ಲ. ಗಂಡ್ಸು ಆಗಬಹುದು. ಹೆಂಗ್ಸುನ್ನ ದೇವ್ರ ಹೊತ್ತೊಳು ಅಂತಾರೆ. ಅವ್ಳಿಗೆ ಮಕ್ಳುಗಿಕ್ಳು ಆದರೆ ಏನು ತೊಂದರೆ ಇಲ್ಲ. ನಮ್ಮ ಜನ್ದೋವು ತಾಮುಂದೆ ನಾಮುಂದೆ ಅಂತ ತೆರ ಕೊಟ್ಟು ಮದುವೆ ಆಯ್ತವೆ. ಪೂಜಾರಿ ಆಗದಂದ್ರೆ ಬಾಳ ದೊಡ್ಡ ಮಾತು. ಅವ್ರಿಗೆ ಬೇರೆ ಮಶಾಣನೆ ಇರುತ್ತೆ. ನಾಳೆ ನೀವೆ ನೋಡ್ತಿರಲ್ಲ. ಒಂದೆರಡು ಗಂಡೈಕ್ಳಿಗೆ ಮುದ್ರೆ ಹಾಕಿ ಪೂಜಾರಿ ಬಿಡ್ತಾರೆ’ ಎಂದು ಮಾತು ಮುಗಿಸಿದ ಪೂಜಾರಯ್ಯ ‘ಇನ್ನ ವಸಿ ನಿದ್ದೆ ಮಾಡೋಗಿ. ಬೆಳಿಗ್ಗೆ ಹೊತ್ತಿಗ್ಮುಂಚೆ ಏಳ್ಬೇಕು’ ಎಂದು ಎದ್ದು ಹೊರಟ.
*    *   *  * *** *  *   *    *
ಬೆಳಿಗ್ಗೆ ಐದುಐದೂವರೆಗೆಲ್ಲ ಗೌರಿಯೇ ಬಂದು ಎಬ್ಬಿಸಿದಾಗ ನಾನೂ ಖುಷಿಯಿಂದಲೇ ಎದ್ದು ಕುಳಿತೆ. ಗೌರಿಯಾಗಲೆ ಮಿಂದು ಮಡಿಯುಟ್ಟಿದ್ದಳು. ನಾನು ಅವಳನ್ನೇ ನೋಡುತ್ತಿರುವುದನ್ನು ಗಮನಿಸಿದ ಗೌರಿ ‘ನೀವು ಸ್ನಾನ ಮಾಡಿ. ಗುಡಿ ಹತ್ರ ಹೋಗಾನ ದೇವರನ್ನ ಎತ್ತೊ ಹೊತ್ಗೆ’ ಎಂದಳು. ನಾನು ಸ್ವಲ್ಪ ಚುಡಾಯಿಸುವವನ ರೀತಿಯಲ್ಲಿ ‘ನಿಮ್ಮಲ್ಲಿ ಅಳಿಯನಿಗೂ ಇದೇ ರೀತಿ ಉಪಚಾರ ಇರುತ್ತಾ’ ಎಂದೆ. ‘ಉಪಚಾರವೇನೊ ಇರುತ್ತೆ. ಆದರೆ ನೀವು ಆಗ್ತಿನಿ ಅಂದ್ರೆ ಸಗಣಿ ತಿಂದು, ಗಂಜಲ ಕುಡ್ದು ನಾಲಗೆನೂ ಸುಟ್ಟಗಬೇಕಾಗುತ್ತೆ’ ಎಂದು ನಕ್ಕಳು. ನಾನೂ ಅವಳಿಗೆ ಇಷ್ಟವಾಗಿದ್ದೇನೆ ಎಂಬ ದೈರ್ಯದಿಂದ ‘ನಾನು ಈ ಮನೆ ಅಳಿಯ ಆಗಬಹುದೆ?’ ಎಂದು ಮೆಲುದನಿಯಲ್ಲಿ ಕೇಳಿದೆ. ಅವಳ ಒಂದು ಮಾತನ್ನೂ ಆಡದೆ ನನ್ನ ಕಡೆಗೊಮ್ಮೆ ನೋಡಿ ಎದ್ದು ಹೋದಳು. ನನಗೆ ‘ಅಯ್ಯೊ, ನಾನು ಹೀಗೆ ಕೇಳಬಾರದಿತ್ತು’ ಅನ್ನಿಸಿತು.
ನಾವು ಗುಡಿಯ ಬಳಿ ಬರುವಷ್ಟರಲ್ಲಿ ನೂರಾರು ಜನ ಜಮಾಯಿಸಿಬಿಟ್ಟಿದ್ದರು. ಓಬಳಯ್ಯ ಬಿಳಿ ಕಸೆ ಅಂಗಿ ಚಲ್ಲಣ ತೊಟ್ಟು ಗುಡಿಯ ಬಾಗಿಲಲ್ಲೆ ನಿಂತಿದ್ದ. ಗೌರಿಯ ತಂದೆ ಬಂದು ಕಾಯಿ ಹೊಡೆದಾಕ್ಷಣ ಪೆಟ್ಟಿಗೆಯಾಕಾರದ ದೇವರನ್ನು ಒಂದು ಕಂಬಳಿಯಲ್ಲಿಟ್ಟು ಹೊತ್ತುಕೊಂಡು ಕೆರೆಯ ಕಡೆಗೆ ಹೊರಟರು. ಗೌರಿ ‘ಇದೇ ಪೆಟ್ಟಿಗೆ ದೇವರು’ ಎಂದು ನನ್ನ ಕಿವಿಯಲ್ಲಿ ಉಸುರಿದಳು. ಅದು ನನಗೆ ಇಷ್ಟವಾಯಿತಾದರೂ, ಹಲವಾರು ಕಣ್ಣುಗಳು ನಮ್ಮನ್ನೇ ನೋಡುತ್ತಿದ್ದುದನ್ನು ಕಂಡು ಒಂದು ರೀತಿಯ ಮುಜುಗರವಾಯಿತು. ಅದನ್ನು ತೋರಿಸಿಕೊಳ್ಳದೆ, ‘ಅದರ ಒಳಗೇನಿದೆ?’ ಎಂದೆ. ‘ನನಗೂ ಗೊತ್ತಿಲ್ಲ. ನಮ್ಮ ಪೆಟ್ಟಿಗೆ ದೇವ್ರು ತಾಮ್ರದ್ದು. ಅದನ್ನು ತಗಿದಂಗೆ ಬೆಸಗೆ ಹಾಕ್ಬಿಟ್ಟವರೆ. ನಾನು ಬೇರೆ ಹಟ್ಟಿ ಮರದ ಪೆಟ್ಟಿಗೆ ದೇವರನ್ನು ನೋಡಿದ್ದೀನಿ. ಅದ್ರೊಳಗೆ ಅದೆಂತದೋ ಕಲ್ಲಿರ್ತವೆ’ ಎಂದಳು. ‘ಸಾಲಿಗ್ರಾಮದ ಕಲ್ಲು’ ಎಂದು ನಾನಂದಾಗ ‘ಹೌದು ಹೌದು. ನಿನ್ಗೆಂಗೆ ಗೊತ್ತು?’ ಎಂದಳು. ಅವಳು ಏಕವಚನ ಬಳಸಿದ್ದು ನನಗೆ ಇಷ್ಟವಾಯಿತು. ‘ನಮ್ಮ ಜನ ಪೆಟ್ಟಿಗೆಯಲ್ಲಿ ಕಲ್ಲಿಟ್ಟು ಪೂಜೆ ಮಾಡ್ತಾರೆ ಅಂದ್ರೆ ಅದು ಸಾಲಿಗ್ರಾಮದ ಕಲ್ಲೇ ಆಗಿರುತ್ತೆ’ ಎಂದೆ.
ಕೆರೆಯಲ್ಲಿ ಪೆಟ್ಟಿಗೆ ದೇವರಿಗೆ ಸ್ನಾನ ಮಾಡಿಸಿಕೊಂಡು ಹೊಸ ಕಂಬಳಿಯಲ್ಲಿಟ್ಟು ತಂದರು. ಇನ್ನೊಂದು ಕಂಬಳಿಯಲ್ಲಿ ಗದ್ದುಗೆ ಮಾಡಿ ದೇವರನ್ನು ಪ್ರತಿಷ್ಠೆ ಮಾಡಿ ಪೂಜೆಗೆ ಪ್ರಾರಂಭಿಸಿದರು. ಅಷ್ಟರಲ್ಲಿ ಇಬ್ಬರು ಹುಡುಗರನ್ನು ಅಲ್ಲಿಗೆ ಕರೆತಂದರು. ಇಬ್ಬರಿಗೂ ಸುಮಾರು ಏಳೆಂಟು ವರ್ಷಗಳಿರಬಹುದು ಅಷ್ಟೆ. ಇಬ್ಬರಿಗೂ ಸ್ನಾನ ಮಾಡಿಸಿ ಚಲ್ಲಣ ತೊಡಿಸಿದ್ದರು. ಅದಕ್ಕಿದ್ದ ಲಾಡಿಯ ತುದಿಗೆ ಕುಚ್ಚಿನಂತ ಗೊಂಡೆ ಹೂವಿನ ಅಲಂಕಾರವಿತ್ತು. ಅವರಿಗೆ ತೊಡಿಸಿದ್ದ ಕಸೆ ಅಂಗಿಗೆ ಎರಡೂ ಕಡೆ ತ್ರಿಶೂಲ, ಚೇಳು, ಹಾವು, ಸೂರ್ಯ ಮುಂತಾದವುಗಳನ್ನು ಕಸೂತಿ ಹಾಕಿದ್ದರು. ಪೂಜಾರಿಯು ಬಂದು ಅವರಿಬ್ಬರಿಗೂ ತೀರ್ಥ ಹಾಕಿದ ಮೇಲೆ, ಓಬಳಯ್ಯ ಕಾಯಿಸಿದ ಸ್ವಸ್ತಿಕ್ ಆಕಾರದ ಮುದ್ರೆಯನ್ನು ತಂದು ಹೆಂಗಸರ ಕಡೆಗೆ ನೋಡಿ ‘ಹೂಂ, ಹೇಳಿ’ ಎಂದ. ನಾನು ನನ್ನ ರೆಕಾರ್ಡರನ್ನು ಆನ್ ಮಾಡಿದೆ.
ಹತ್ತನೆ ವರುಸದ ಮುಟ್ಟಾದ ಎಲಿವಳಗ
ತಾಯಂಜನದೇವಿ ಧರಿಸ್ಯಾಳ ಸುವ್ವೀ
ತಾಯಂಜನದೇವಿ ಧರಿಸಿದ ಕಾರಣದಿಂದ ಸುವ್ವೀ
ಸ್ವಾಮಿ ಹುಟ್ಟ್ಯಾನು ಲಂಕಿ ಹನುಮಯ್ಯ ಸುವ್ವೀ
ಅಕ್ಕಂಜಣದೇವಿ ಬಾಲನ ಪಡೆದಾಳೆ ಸುವ್ವೀ
ಕಾಲ ತೊಳೆವುಕೆ ನೀರ ಮೊದಲಿಲ್ಲ ಸುವ್ವೀ
ಕಾಲ ತೊಳೆವುಕೆ ನೀರಿಲ್ಲ ಹನುಮಯ್ಯ ಸುವ್ವೀ
ದೋರಲ ಸಮುದ್ರ ತಿರುವ್ಯಾನೆ ಸುವ್ವೀ
ಹೀಗೆ ಹಾಡು ಸಾಗಿರುವಾಗಲೇ ಓಬಳಯ್ಯ ಇಬ್ಬರು ಹುಡುಗರಿಗೂ ತೋಳಿನ ಮೇಲೆ ಮುದ್ರೆ ಹೊತ್ತಿದ. ಅವರಲ್ಲಿ ಒಬ್ಬನೂ ತುಟಿತೆರೆದು ಅಳಲಿಲ್ಲ. ಆದರೆ ನನಗೆ ಅಯ್ಯೋ ಎನ್ನಿಸಿತು. ಗೌರಿಯ ಮುಖ ನೊಡಿದೆ. ಅವಳಿಗೂ ಅಯ್ಯೋ ಅನ್ನಿಸಿರಬೇಕು ಎಂದುಕೊಂಡೆ. ‘ಇಂದಿನಿಂದ ಅವರು ಪೂಜಾರಿಯರು’ ಎಂದ ಗೌರಿಯ ಮಾತಿನಲ್ಲಿ ನೋವಿತ್ತೆ ಎಂದು ಹುಡುಕುವ ವಿಫಲ ಪ್ರಯತ್ನವನ್ನೂ ಮಾಡಿದೆ.
        ಸುಮಾರು ಮೂರು ಗಂಟೆಯ ಹೊತ್ತಿಗೆ ದೇವರ ಉತ್ಸವಗಳೆಲ್ಲ ಮುಗಿದು ಸೀಪರು ಅಡಿಗೆ ಸಿದ್ದವಾಗಿ ಕಾಯುತ್ತಿತ್ತು. ‘ಪೂಜಾರಿ ಇನ್ನು ಊಟಕ್ಕೆ ಏಳಿ’ ಎಂದಾಗ ಜನವೆಲ್ಲ ಗುಡಿಯ ಮುಂದೆ ಎರಡು ಸಾಲಾಗಿ ಕುಳಿತರು. ಮುತ್ತುಗದ ಎಲೆಯನ್ನು ನವ್ಯಕಲಾಕೃತಿಯಂತೆ ಜೋಡಿಸಿ ಕಟ್ಟಿದ್ದ ಊಟದ ಎಲೆಗಳ ಮೇಲೆ ಮಾಡಿದ್ದ ಎಲ್ಲಾ ರೀತೀಯ ಅಡುಗೆಯನ್ನು ಎಲ್ಲರಿಗೂ ಬಡಿಸುವವರಗೆ ತಿನ್ನಬಾರದೆಂದು ಗೌರಿ ಮೊದಲೇ ನನಗೆ ಹೇಳಿದ್ದಳು. ಓಬಳಯ್ಯ ಮುಂದೆ ನಿಂತು ಬಡಿಸುತ್ತಿದ್ದ. ‘ಎಲ್ಲಾರ್ದು ಆಯ್ತು ಪೂಜಾರ್ರೆ’ ಎಂದಾಗ, ಪೂಜಾರಿ ‘ಇನ್ನು ಊಟ ಮಾಡಬೌದಲ್ಲ’ ಎಂದು ಹೇಳುತ್ತಿರುವಾಗಲೇ ಸಾಲಿನ ನಡುವಿನಿಂದ ಎದ್ದ ಠೊಣಪನಂತಿದ್ದವನೊಬ್ಬ, ‘ಪೂಜಾರ್ರೆ, ಒಂದು ಮಾತು ಇತ್ಯರ್ಥ ಆಗಗಂಟ ತುತ್ತು ಎತ್ತಂಗಿಲ್ಲ’ ಎಂದ. ಗೌರಿ ‘ಅವ್ನ ಹೆಸ್ರು ಪಾಲ’ ಎಂದಳು. ಅತ್ತ ಪೂಜಾರಿ ‘ಹೇಳು ಪಾಲ. ಅದೇನು ಮಾತು?’ ಎಂದ. ‘ನಿಮ್ಮಗಳಿಚಾರನೆ’ ಎಂದಾಗ ಅಲ್ಲಿದ್ದ ಸಮಸ್ತರ ಬಾಯಿಂದ ಚಿತ್ರವಿಚಿತ್ರವಾದ ಶಬ್ಧಗಳು ಹೊರಬಂದವು. ನಾನು ಗೌರಿ ಮುಖಮುಖ ನೋಡಿಕೊಂಡೆವು. ಸದ್ಯಕ್ಕೆ ಊಟವಿಲ್ಲವೆಂದೋ ಏನೋ ಕೆಲವರು ಕುಕ್ಕುರಗಾಲಲ್ಲಿ ಕುಳಿತುಕೊಂಡರು. ಎದ್ದು ನಿಂತ ಪಾಲ ‘ಪೂಜಾರ್ರೆ ನಮ್ಮಟ್ಟಿ ಕಟ್ಟು ಕಟ್ಳೆ ನಿಮಗೆ ಗೊತ್ತೇ ಇದೆ. ನಮ್ಮ ಕುಲದ ಎಣ್ಣುಮಗ್ಳು ಇನ್ನೊಂದು ಕುಲದವನ್ನ ಮದುವೆ ಆಗಂಗಿಲ್ಲ. ಅದ್ರಲ್ಲು ನಿಮ್ಮಗ್ಳು ಹಿಂಗೆ ನಮ್ಮ ಜಾತಿಯವನೆ ಅಲ್ಲದ ಪ್ಯಾಟೆ ಹುಡುಗನ ಜೊತೆ ಮೊದುವೆಗೆ ಮೊದ್ಲೆ ತಿರ್ಗಾಡದು ಸರಿಯಾಗ್ತದ. ಅವ್ಳೇನು ದೇವ್ರ ಹೊತ್ತವ್ಳು ಅಲ್ವಲ್ಲ ಹೆಂಗಾದ್ರು ಮಾಡ್ಕಳ್ಳಿ ಅನ್ನಾಕೆ’ ಎಂದ. ಇದಾವುದನ್ನೂ ನಿರೀಕ್ಷಿಸಿರದ ನನಗೆ ಆಶ್ಚರ್ಯವೂ ಭಯವೂ ಆಗಿ ಗೌರಿಯ ಮುಖವನ್ನು ನೋಡುವ ಮನಸ್ಸಾಗಲಿಲ್ಲ.
ಪೂಜಾರಿ ಎದ್ದು ನಿಂತು ‘ಮಾಜನಗಳೆ, ವಿಷಯ ನನ್ನ ಮನೆಗೆ ಸಂಬಂಧಿಸಿರೋದ್ ಆದ್ರಿಂದ ನಾನು ಕೆಳಗೆ ಕುತ್ಗಂತಿನಿ. ನಾಕು ಜನ ಮುಖಂಡ್ರು ಹೆಂಗಿದ್ರು ಅವ್ರೆ. ಇನ್ನೊಬ್ರು ಯಾರಾದ್ರು ಮೇಲಕ್ಕೆ ಕುತ್ಕಳ್ಳಿ’ ಎಂದು ಕೆಳಗಿಳಿದು ಬಂದು ನಿಂತುಕೊಂಡ. ಯಾರೋ ‘ಓಬಳಯ್ಯ’ ಅಂದರು. ಇನ್ನಾರೋ ‘ಪಾಲಯ್ಯ’ ಅಂದರು. ಆದರೆ ಕಟ್ಟೆ ಮೇಲೆ ಕುಳಿತಿದ್ದವನೊಬ್ಬ ‘ಬಾ ಓಬಳಯ್ಯ’ ಎಂದಾಗ ಓಬಳಯ್ಯ ಹೋಗಿ ಕುಳಿತುಕೊಂಡ. ಪಂಚಾಯ್ತಿ ಶುರುವಾಯಿತು. ನಮ್ಮಿಬ್ಬರಿಗೂ ಎದ್ದು ನಿಲ್ಲುವಂತೆ ಯಾರೋ ಹೇಳಿದರು. ನಾವು ಎದ್ದು ಕಟ್ಟೆಗೆ ಸಮೀಪ ಬಂದು ನಿಂತು ಕೂಂಡೆವು. ನಾನು ಮಾತನಾಡಲು ಹೋದಾಗ ಗೌರಿ ಸುಮ್ಮನಿರುವಂತೆ ಕಣ್ಣಲ್ಲೆ ಸೂಚಿಸಿದಳು. ಬುಡಕಟ್ಟು ಜನಾಂಗದಲ್ಲಿ ಈ ತರದ ವಿಷಯಗಳನ್ನು ಬಹಳ ಗಂಭೀರವಾಗಿ ತಗೆದುಕೊಳ್ಳುತ್ತಾರೆ ಎಂದು ಎಲ್ಲೋ ಓದಿದ್ದು ಜ್ಞಾಪಕಕ್ಕೆ ಬಂದು ಸಣ್ಣಗೆ ಭಯವಾಗುವುದರ ಜೊತೆಗೆ ಗೌರಿಗೆ ಏನು ಮಾಡುತ್ತಾರೋ ಅನ್ನಿಸಿ ಮನಸ್ಸಿಗೆ ಬೇಸರವಾಯಿತು. ಪಾಲಯ್ಯ ಮುಂದುವರೆಸಿ, ‘ಈಗ ಹೆಂಗು ಅವ್ಳು ಕುಲಗೆಟ್ಟವ್ಳೆ. ಅವ್ಳನ್ನು ದೇವ್ರಿಗೆ ಬುಟ್ಬುಡಿ. ಇಲ್ಲಾಂದ್ರೆ ಅವಯ್ಯನಿಗೆ ಕೊಟ್ಟು ಮದುವೆ ಮಾಡಿ. ಅವ್ರು ತೆರ ತಪ್ದಂಡ ಕೊಡ್ಲಿ’ ಎಂದ. ಪಾಲಯ್ಯ ನನಗೆ ಇಷ್ಟವಾಗತೊಡಗಿದ. ಆದರೆ ಯಾರದರೂ ಗೌರಿಯನ್ನು ದೇವರಿಗೇ ಬಿಡಬೇಕೆಂದರೆ ಎಂದು ಭಯವಾಯಿತು. ‘ನೋಡಿ. ನಾವೇನು ತಪ್ಪು ಮಾಡಿಲ್ಲ. ಗೌರಿ ಒಳ್ಳೆ ಹುಡುಗಿ. ನನ್ಜೊತೆ ಅವಳು ತಿರುಗಾಡಿದ್ದೆ ತಪ್ಪಾಗಿದ್ರೆ ನೀವು ಕೇಳಿದ ತಪ್ಪುದಂಡವನ್ನು ನಾನು ಕೊಡ್ತಿನಿ. ಅವಳನ್ನು ದೇವರಿಗೆ ಬಿಡುವ ವಿಚಾರ ಬೇಡ’ ಎಂದೆ. ‘ಆಗ ಮೇಲೆ ಕುಳಿತಿದ್ದವರೊಬ್ಬರು ‘ಸಯಾಬ್ರೆ, ಇದೆಲ್ಲ ನಿಮ್ಗೆ ಗೊತ್ತಾಗಕಿಲ್ಲ. ಸುಮ್ಕಿರಿ’ ಎಂದು ಗೌರಿಗೆ ‘ಏನವ್ವ ಗೌರಿ. ನೀನ್ ಓದ್ದೋಳು. ಈಗ ನೀನೆ ಹೇಳು. ದೇವ್ರಿಗೆ ಒಪ್ಪಿಸ್ಕೊಂತಿಯಾ ಇಲ್ಲ ಈವಯ್ಯನ್ನ ಮದುವೆ ಆಗ್ತಿಯ. ನೀನ್ ಮದುವೆ ಆಗ್ತಿನಿ ಅಂದ್ರೆ ಈವಯ್ಯನ್ಕುಟೆ ಮದುವೆ ಮಾಡ್ಸ್ ಜವಬ್ದಾರಿ ಈ ಪಂಚಾತಿದು’ ಎಂದ. ಗೌರಿ ಏನು ಹೇಳುತ್ತಾಳೆ ಎಂದು ನಾನು ಕುತೂಹಲದಿಂದ ನೊಡತೊಡಗಿದೆ. ಅವಳು ಮಾತನಾಡದೆ ಅವಳ ಅಪ್ಪನ ಕಡೆಗೆ ನೊಡುತ್ತಿದ್ದಳು. ಆಗ ಸಾಲಿನಲ್ಲಿದ್ದವ್ನೊಬ್ಬ ‘ಹೊತ್ತಾಗುತ್ತೆ ಬೇಗ ಯೋಳಮ್ಮೌ. ಈಗ್ಲೆ ಅಡ್ಗೆ ತಣ್ಗಾಗೈತೆ’ ಎಂದು ಕೂಗಿದ. ಅದಕ್ಕೆ ಪರವಿರೋದವಾದ ಕೂಗುಗಳೂ ಕೇಳಿಬಂದವಾದರೂ ನಾನಾವುದನ್ನೂ ಗಮನಿಸದೆ, ಗೌರಿಯನ್ನೇ ನೋಡುತ್ತಿದ್ದೆ. ‘ಅವ್ರು ಒಪ್ಪೊದಾದ್ರೆ ನಾನು ಅವ್ರನ್ನೆ ಮದುವೆಯಾಗ್ತಿನಿ. ಇಲ್ಲಂದ್ರೆ ನಿಮ್ಮ ದಮ್ಮಯ್ಯ ಅಂತಿನಿ ದೇವ್ರಿಗೆ ಮಾತ್ರ ಬಿಡ್ಬೇಡಿ. ಇನ್ನೇನಾದ್ರು ಶಿಕ್ಷೆ ಕೊಡಿ’ ಎಂದು ಕೈ ಮುಗಿದು ಕೇಳಿದಳು. ಬೇರೆಯವರು ಇನ್ನು ಏನಾದರು ಹೇಳಬಹುದೆಂದುಕೊಂಡ ನಾನು ತಕ್ಷಣ ‘ನೋಡಿ. ತಪ್ಪು ನನ್ನದು. ಗೌರಿಗೆ ಏಕೆ ಶಿಕ್ಷೆ. ಅವಳನ್ನು ಯಾವ ದೇವರಿಗೂ ಬಿಡುವುದೂ ಬೇಡ. ನಾನೇ ಮದುವೆಯಾಗುತ್ತೇನೆ. ಹೇಳಿ ಎಷ್ಟು ತೆರ ಕೊಡಬೇಕು’ ಎಂದೆ. ಗೌರಿಯ ಮುಖ ಸಂತೋಷದಿಂದ ಕಂಗೊಳಿಸುತ್ತಿತ್ತು. ಅತ್ತ ಪೂಜಾರಿಯೂ ಕೃತಜ್ಞತಾಪೂರ್ವಕವಾಗಿ ನನ್ನಡೆಗೆ ನೋಡುತ್ತಿದ್ದ.
ಮುಖಂಡರಲ್ಲೊಬ್ಬರು, ‘ಮಾಮೂಲಿ, ಐವತ್ತೊಂದ್ರುಪಾಯಿ ತೆರ ಕೊಡ್ಲಿ. ಇನ್ನೈವತ್ತೊಂದ್ರುಪಾಯಿ ದಂಡ ಕೊಡ್ಲಿ’ ಎಂದರು. ಆಗ ಪಾಲನೆದ್ದು, ‘ಅದೆಂಗಾದಾತು ಬುಡಿ. ನಮ್ಮ ಕುಲದವ್ರೆ ಐವತ್ತೊಂದ್ರುಪಾಯಿ ತೆರ ಕೊಡ್ತಾರೆ. ಈವಯ್ಯ ಬೇರೆ ಜಾತಿ. ಕೊಡ್ಲಿ ಬುಡಿ ಇನ್ನೊಂದಿಷ್ಟು ತೆರಾನ. ದಂಡಾನು ಅಷ್ಟೆ’ ಎಂದ. ಆಗ ಇನ್ನೊಬ್ಬ ಪಂಚಾಯ್ತಿದಾರ ‘ಪಾಲಯ್ಯ ನಿಂದು ಅತಿಯಾಯ್ತು. ಕಟ್ಟೆ ಮ್ಯಾಲೆ ಕೂತಿರೊ ನಮ್ಗೇನು ಗೊತ್ತಿಲ್ವ ಏನ್ ಮಾಡ್ಬೇಕು ಅಂತ. ಸುಮ್ಕಿರು’ ಎಂದು ನನ್ನ ಕಡೆಗೆ ತಿರುಗಿ ‘ನೋಡಿ ಅಯ್ನೋರೆ. ನೂರೈವತ್ತೊಂದ್ರುಪಾಯಿ ತೆರ ಕೊಟ್ಬುಡಿ. ದಂಡಾನು ಅಷ್ಟೆ’ ಅಂದ. ನಾನು ‘ಆಗಲಿ. ಆದ್ರೆ ಮದುವೇನ ಇವತ್ತೇ ಮಾಡಿ ಕೊಡ್ಬೇಕು. ಮದುವೆ ಖರ್ಚಿಗೇನು ಯೋಚ್ನೆ ಮಾಡೋದ್ಬೇಡ. ನಾನ್ಕೊಡ್ತಿನಿ’ ಎಂದೆ. ಗೌರಿ ನಗುತ್ತಿರುವಂತೆ ಕಾಣುತ್ತಿತ್ತು ನನ್ನ ಅವಸರವನ್ನು ಕಂಡು. ಆದರೆ ನನಗೆ ಯಾವ ಅವಸರವೂ ಇರಲಿಲ್ಲ. ಬೇರೆ ಯಾರಾದರೂ ಏನಾದರೂ ಹೇಳಿ, ಯಾವ ಗೊತ್ತು ಗುರಿಯಿಲ್ಲದೇ ಸಾಗುತ್ತಿದ್ದ ಈ ಪಂಚಾಯ್ತಿಯಲ್ಲಿ ಗೌರಿಯನ್ನು ದೇವರಿಗೆ ಬಿಡಿ ಎಂದುಬಿಟ್ಟರೆ ಎಂಬ ಭಯ ನನ್ನದಾಗಿತ್ತು. ನಾನು ಹೇಳಿದ್ದಕ್ಕೆ ಪಂಚಾಯ್ತಿದಾರರು ಒಪ್ಪಿಕೊಂಡರಾದರೂ, ‘ಊಟಕ್ಕೆ ಮೊದಲು ಮದುವೆ ಸಾಧ್ಯವಿಲ್ಲ. ದೋಯಿಸ್ರನ್ನು ಕರೆಸ್ಬೇಕು. ಅದ್ರಿಂದ ಈಗ ಊಟ ಆಗ್ಲಿ ನಾಳೆ ಮದುವೆ ಆಗ್ಲಿ’ ಎಂದರು. ಇದಕ್ಕೆ ಬಹಳ ಮಂದಿ ಒಪ್ಪಿಗೆಯನ್ನೂ ಕೊಟ್ಟರು. ನಾನು ಹೆಮ್ಮೆಯಿಂದ ಗೌರಿಯ ಕಡೆಗೆ ನೊಡುತ್ತಿದ್ದರೆ ಪಾಲಯ್ಯ, ‘ಮದುವೆ ಬೇಕಾದ್ರೆ ನಾಳೆನೆ ಮಾಡಿ. ಈಗ ತೆರ ಕೊಟ್ಟು ಇಳ್ಳೇವು ಶಾಸ್ತ್ರ ಮಾಡ್ಕಂಬುಡ್ಲಿ. ಅದುಕ್ಮುಂಚೆ ಈವಯ್ಯನ ಅಪ್ಪ ಅವ್ವನ್ನ ಒಂದು ಮಾತ್ಕೇಳ್ಬಾರದ? ಅದು ಈಗ್ಲೆ ತೀರ್ಮಾನ ಆಗ್ಲಿ’ ಎಂದ.
ಮತ್ತೆ ಪಾಲ ನನಗೆ ಇಷ್ಟವಾದ. ನನಗೆ ತೊಂದರೆ ಕೊಡಬೇಕೆಂಬುದೇ ಅವನ ಎಣಿಕೆಯಾಗಿದ್ದಿರಲಿಲ್ಲ ಅನ್ನಿಸಿತು. ‘ನೋಡಿ, ನನ್ನ ತಂದೆ ತಾಯಿ ಭಯ ನಿಮಗೆ ಬ್ಯಾಡ. ಅವರಾರು ಈಗಿಲ್ಲ. ನಾನು ಒಬ್ಬೊಂಟಿ. ಈಗ ಬೇಕಾದ್ರೆ ಅದೇನೊ ಶಾಸ್ತ್ರ ಅಂದ್ರಲ್ಲ ಅದನ್ನು ಮಾಡಿ. ಪಾಪ, ಜನ ಎಲ್ಲ ಊಟನಾದ್ರು ಮಾಡ್ಲಿ’ ಎಂದೆ. ಎದ್ದು ನಿಂತೆ ಓಬಳಯ್ಯ ‘ಇನ್ಮೇಲೆ ನೀನೆಲ್ಲಿ ಒಬ್ಬೊಂಟಿ ಬುಡಣ್ಣಯ್ಯೌ. ನಾವಿಲ್ವ. ಗೌರವ್ವಿಲ್ವಾ. ತತ್ತಾ ಇತ್ತ ನೂರೈವತ್ತೊಂದ್ರುಪಾಯಿಯ’ ಎಂದ. ಆತನ ಮಾತು ನನಗೆ ಇಷ್ಟವಾಯಿತು. ಜಗತ್ತಿನಲ್ಲಿ ನನಗೂ ಬಂಧುಗಳಿದ್ದಾರೆ ಎನ್ನಿಸಿತು. ನಾನು ನೂರೈವತ್ತೊಂದು ರುಪಾಯಿ ಕೊಡುವಷ್ಟರಲ್ಲಿ ಮುಖಂಡರೊಬ್ಬರು ಪೂಜಾರಿಯನ್ನು ಕರೆದು ಅವನ ಕೈಯಲ್ಲಿ ವಿಳ್ಳೇದೆಲೆಯನ್ನೂ ಅಡಿಕೆಯನ್ನೂ ಕೊಟ್ಟರು. ನನ್ನಿಂದ ಹಣವನ್ನು ಪಡೆದ ಪೂಜಾರಿ ಅದರಲ್ಲಿನ ಒಂದು ರುಪಾಯಿಯನ್ನು ತಿರುಗಿ ವಿಳ್ಳೇದೆಲೆಯ ಮೇಲೆ ಇಟ್ಟು ‘ನಮ್ಮ ಹೆಣ್ಣು ನಿಮಗೆ’ ಎಂದು ನನಗೆ ತಿರುಗಿ ಕೊಟ್ಟರು.
        ‘ಇನ್ನಾದ್ರು ಊಟ ಮಾಡ್ಬೌದಲ್ಲ’ ಎಂದ್ ಓಬಳಯ್ಯ ‘ನಾಳೆ ಮದುವೆ ಊಟ. ಒಂದೆರಡು ಕುರಿಗಳನ್ನಾದ್ರು ಕಡಿಬೇಕಪ್ಪ’ ಎಂದು ಪೂಜಾರಿಗೆ ಹೇಳಿದ. ಆದರೆ ಮತ್ತೆ ಎದ್ದು ನಿಂತ ಪಾಲಯ್ಯ, ‘ನಂದು ಇನ್ನೂ ಒಂದ್ಮಾತೈತೆ’ ಎಂದ. ಜನರೆಲ್ಲ ‘ಏನು" ಎಂಬಂತೆ ಅಸಹನೆಯಿಂದ ಅವನ ಕಡೆಗೆ ನೋಡಿದರು. ‘ಯಾಕ್ರಪ್ಪ ಎಲ್ಲ ಮರೆತುಬುಟ್ರಾ. ಕುಲ್ವಲ್ಲದಕುಲ್ದೋನ ಜೊತೆ ಮದುವೆಯಾದೋಳ ಮತ್ತೆ ನಮ್ಮ ಕುಲಕ್ಕೆ ಸೇರಿಸ್ಕಣದುಕ್ಕು ಮುಂಚೆ ಅವ್ಳ ಸುದ್ದಿಯಾಗ್ಬಾರ್ದಾ? ಅದನ್ನು ಯೀಗ್ಲೆ ತೀರ್ಮಾನ ಮಾಡ್ಬುಡಿ’ ಎಂದ. ಈ ಪಾಲಯ್ಯ ನನಗೆ ವಿಚಿತ್ರ ಮನುಷ್ಯನಂತೆ ಕಂಡ. ತನ್ನ ಕುಲದಲ್ಲಿ ಅಚಲವಾದ ನಿಷ್ಟೆಯನ್ನು ಹೊಂದಿದ್ದವನಂತೆ, ತನ್ನ ಕುಲಕ್ಕೂ ದೇವರಿಗೂ ಒಂದಿನಿತೂ ಅಪಚಾರವಾಗಬಾರದೆಂದು ಹಾರೈಸುವ ಹಿತೈಷಿಯಂತೆ ಕಂಡ. ಓಬಳಯ್ಯ ಮತ್ತೆ ನಿಂತು ‘ಅದ್ಕೂ ನಿನ್ಗೀಗ್ಲೆ ಅವಸ್ರಾನ? ಇದ್ದೇ ಇದೆ. ಗೌರಿನ ತಂಗಡಿ ಗಿಡದ್ ಬಳಿ ನಿಲ್ಸಿ, ಬೇವಿನ್ಕಡ್ಡಿಲಿ ನಾಲ್ಗೆ ಸುಟ್ಟು, ಗೋಗಂಧದಲ್ಲಿ ತೊಳ್ದು ಸುದ್ದಿ ಮಾಡಿ ಕರ್ಕಾಣದು. ಅಷ್ಟೆಯ’ ಎಂದ. ಅದಕ್ಕೆ ಎಲ್ಲರೂ ಒಪ್ಪಿದರು.
ಆದರೆ ನನಗೆ ಇದು ಒಪ್ಪಿಗೆಯಾಗಲಿಲ್ಲ. ‘ನೋಡಿ. ನೀವು ಅಂದ್ಕೊಂಡಿರೊ ತಪ್ಪು ನನ್ನಿಂದ ಆಗಿದೆ. ಅದೇನು ಶುದ್ದೀಕರಣ ಮಾಡ್ತಿರೊ ಅದನ್ನ ನನಗೆ ಮಾಡಿ. ಈ ನಾಲ್ಗೆ ಸುಡೋದು ಅದನ್ನೆಲ್ಲ ನನ್ಕೈಲಿ ನೋಡಕ್ಕಾಗಲ್ಲ’ ಎಂದೆ. ಅದಕ್ಕೆ ಮುಂದೆ ಬಂದ ಗೌರಿ, ‘ಇಲ್ಲ ನೀವು ನನಗೆ ಮಾಡಿರೊ ಉಪ್ಕಾರನೆ ಸಾಕು. ನನ್ನ ನಾಲ್ಗೆನೆ ಸುಡುಸ್ಕೋತಿನಿ. ಬೇಕಾದ್ರೆ ನೀವು ದೂರ ನಿಂತ್ಕಳಿ’ ಎಂದಳು. ಓಬಳಯ್ಯ ಜೋರಾಗಿ ನಗುತ್ತ ‘ಕೇಳ್ರಪ್ಪ. ನಮ್ಗೆ ಊಟದ್ ಚಿಂತೆ. ಇವರಿಗೆ ಇನ್ನವುದೋ ಚಿಂತೆ. ಅದೆಲ್ಲ ಮದುವೆ ಆದ್ಮೇಲಿನ್ ಮಾತು. ಈಗ ಊಟ ಮಾಡೇಳಿ’ ಎಂದು ಪೂಜಾರಿಯ ಕಡೆಗೆ ತಿರುಗಿ ‘ಪೂಜಾರಪ್ಪ ಇನ್ನೇನು ಯೇಳ್ಬುಡು’ ಎಂದ. ಗೌರಿಯ ಅಪ್ಪ ತನ್ನ ಎರಡು ಕೈಗಳನ್ನೆತ್ತಿ ‘ಇನ್ನ ಊಟ ಮಾಡ್ಬೌದಪ್ಪ. ಮಾಡಿ’ ಎಂದು ಜೋರಾಗಿ ಕೂಗಿದ.
ಜನರೆಲ್ಲ ಊಟದ ಕಡೆಗೆ ಗಮನಹರಿಸಿದರೆ ನಾವಿಬ್ಬರು ಪರಸ್ಪರ ಮುಖ ನೋಡಿಕೊಳ್ಳುತ್ತಿದ್ದುದನ್ನು ಗಮನಿಸಿದ ಓಬಳಯ್ಯ, ‘ಯಾಕೆ? ಮದುವೆ ಗಂಡುಹೆಣ್ಣಿಗೆ ಊಟ ಬ್ಯಾಡವಾ?’ ಎಂದಾಗ ಜನರೆಲ್ಲ ಒಂದು ಗಳಿಗೆ ಊಟ ನಿಲ್ಲಿಸಿ ‘ಗೊಳ್’ ಎಂದು ನಕ್ಕು ಮತ್ತೆ ಊಟ ಮುಂದುವರೆಸಿದರು.
*    *   *  * *** *  *   *    *

1 comment:

Badarinath Palavalli said...

ಕಥನ ಇಷ್ಟವಾಯಿತು ಸಾರ್.