ಮೊನ್ನೆ ಭಾನುವಾರ ಊರಿಗೆ ಹೋಗಿದ್ದೆ. ಮಾಮೂಲಿನಂತೆ ಚೆನ್ನರಾಯಪಟ್ಟಣದವರೆಗೂ ಬಸ್ಸಿನಲ್ಲಿ ಹೋಗದೆ, ಹಿರಿಸಾವೆಯಲ್ಲಿ ಇಳಿದು, ಅಕ್ಕನಹಳ್ಳಿ ಕೂಡಿಗೆ ಹೋಗುವ ಯೋಚನೆ ನನ್ನದಾಗಿತ್ತು. ಅಕ್ಕನಹಳ್ಳಿ ಕೂಡಿನಲ್ಲಿ ಸ್ವಲ್ಪ ಕೆಲಸವೂ ಇತ್ತೆನ್ನಿ. ಆದರೆ ಹಿರಿಸಾವೆಯಿಂದ ಅಕ್ಕನಹಳ್ಳಿ ಕೂಡಿಗೆ ಹೋಗಲು ಬಸ್ಸುಗಳ ಸೌಕರ್ಯ ತುಂಬಾ ಕಡಿಮೆ. ಹೆಚ್ಚಾಗಿ ಆಟೋ ಅಥವಾ ಜೀಪುಗಳನ್ನು ಆಶ್ರಯಿಸಬೇಕು. ಅವರು ಕೇಳಿದಷ್ಟು ದುಡ್ಡು ತೆರುವುದಲ್ಲದೆ ಗಂಟೆಗಟ್ಟಲೆ ಕಾಯಲೂ ಬೇಕು. ಆದರೆ ಮೊನ್ನೆ ಮಾತ್ರ ನನ್ನ ಅದೃಷ್ಟವೋ ಎಂಬಂತೆ ಹಿರಿಸಾವೆ-ನುಗ್ಗೆಹಳ್ಳಿ ರಿಟರ್ನ್ ಬಸ್ ನನಗಾಗಿಯೇ ಕಾಯುತ್ತಿರುವಂತೆ ನಿಂತಿತ್ತು. ಸಂತೋಷದಿಂದಲೇ ಹತ್ತಿ ಅಕ್ಕನಹಳ್ಳಿ ಕೂಡಿಗೆ ಒಮದು ಟಿಕೆಟ್ ಕೇಳಿದೆ. ಕಂಡಕ್ಟರ್ ‘ಇದು ಬಳಸಿಕೊಂಡು ಹೋಗುತ್ತೆ’ ಎಂದ. ನಾನು ‘ಪರವಾಗಿಲ್ಲ ಟಿಕೆಟ್ ಕೊಡಿ’ ಎಂದೆ.
ನನಗೆ ಗೊತ್ತಿತ್ತು. ಲೇಟು ಎಂದರೆ ಹತ್ತರಿಂದ ಹದಿನೈದು ನಿಮಿಷ ಮಾತ್ರ ಎಂದು. ಆಟೋ ಜೀಪುಗಳಲ್ಲಿ ಕುರಿಯಂತೆ ಕೈಕಾಲು ಮುದುರಿ ಕುಳಿತು ಹೋಗುವುದಕ್ಕಿಂತ ಇದೇ ವಾಸಿಯೆನ್ನಿಸಿತ್ತು. ಬಸ್ ಹೊರಟು ಬೀಳಗಿಹಳ್ಳಿ, ತೋಟಿ, ತೋಟಿಕೊಪ್ಪಲು, ಮಾದಲಗೆರೆ ಮುಖಾಂತರ ಅಕ್ಕನಹಳ್ಳಿ ತಲುಪಿ ಅಲ್ಲಿಂದ ಮುಂದಕ್ಕೆ ಹೋಗುವುದಿತ್ತು. ಕೇವಲ ಹನ್ನೆರಡು ಕಿಲೋಮೀಟರ್ ತಲಪಲು ಇಲ್ಲಿ ಕನಿಷ್ಠ ಮುಕ್ಕಾಲು ಗಂಟೆ ಬೇಕು!. ಅಷ್ಟೊಂದು ಸ್ಟಾಪ್‌ಗಳು ಎನ್ನುವುದಕ್ಕಿಂತ, ರಸ್ತೆಗಳು ಅಷ್ಟೊಂದು ಕರಾಬ್ ಎನ್ನುವುದು ಸೂಕ್ತ.
ಬಸ್ ಮಾದಲಗೆರೆ ಸಮೀಪ ಹೋಗುತ್ತಿತ್ತು. ಆಗ ಯಾರೋ ರಸ್ತೆ ಬದಿಯಿಂದ ಕೂಗಿ ‘ಮುಂದೆ ಜೀಪ್ ಹೋಗಿದೆ’ ಎಂದು ಹೇಳಿದ. ಬಸ್ ಗಕ್ಕನೆ ನಿಂತಿತು. ಡ್ರೈವರ್ ‘ಲೋ ಬಸವರಾಜ, ಜೀಪು ಹೋಗಿದೆಯಂತೋ’ ಎಂದ. ಇಡೀ ಬಸ್ಸಿನಲ್ಲಿ ವಿದ್ಯುತ್ ಸಂಚಾರವಾಯಿತು. ಏಳೆಂಟು ಮಂದಿ ಕಂಡಕ್ಟರನ ಸುತ್ತ ಜಮಾಯಿಸಿ ‘ಟಿಕೆಟ್ ಕೊಡಿ’ ಎನ್ನತೊಡಗಿದರು! ಕಂಡಕ್ಟರ್ ಎಲ್ಲರಿಗೂ ಲಗುಬಗೆಯಿಂದ ಟಿಕೆಟ್ ಹರಿದು ಕೊಟ್ಟು ರೈಟ್ ಹೇಳಿದ. ಕೇವಲ ಒಂದೇ ನಿಮಿಷದಲ್ಲಿ ಮಾದಲಗೆರೆಯಲ್ಲಿ ಬಸ್ ನಿಂತಿತು. ಎರಡೂ ಬಾಗಿಲಿನಿಂದ ಚೆಕಿಂಗ್ ಮಾಡುವ ಅಧಿಕಾರಿಗಳು ಹತ್ತಿ, ಕಂಡಕ್ಟರನ ಕೈಯಿಂದ ಟಿಕೆಟ್ ಕೊಡುವ ಯಂತ್ರವನ್ನು ಕಸಿದುಕೊಂಡು ತಪಾಸಣೆಗೆ ನಿಂತರು. ಬಸ್ಸು ಮುಂದೆ ಹೊರಟಿತು. ಜೀಪು ಹಿಂಬಾಲಿಸತೊಡಗಿತು. ಆದರೆ ತಪಾಸಣಾ ಅಧಿಕಾರಿಗಳಿಗೆ ಒಬ್ಬನೇ ಒಬ್ಬ ಟಿಕೆಟ್ ಇಲ್ಲದ ಪ್ರಯಾಣಿಕ ಸಿಗಲಿಲ್ಲ.! ಕಂಡಕ್ಟರ್ ತನ್ನ ದಪ್ಪದಾದ ಮೀಸೆಯ ಅಡಿಯಲ್ಲಿ ನಗುತ್ತಿದ್ದ.
ಅಕ್ಕನಹಳ್ಳಿಯ ಕೂಡು ಬಂತು. ತಪಾಸಣಾ ಅಧಿಕಾರಿ ಬಸ್ಸು ಇಳಿಯತೊಡಗಿದ. ನಾನು ಅವನ ಹಿಂದೆ ಇಳಿಯುತ್ತಿದ್ದೆ. ‘ಮೋಸ್ಟ್ ಕರೆಪ್ಟೆಡ್ ನನ್ಮಗ ಈ ಕಂಡಕ್ಟರ್. ಯಾರೋ ಇನ್ಫಾರ್‍ಮೇಷನ್ ಕೊಟ್ಟಿರಬೇಕು. ಇಲ್ಲಾಂದ್ರೆ ಸಿಕ್ಕೋತಿದ್ದ’ ಎಂದು ತನಗೆ ತಾನೇ ಹೇಳಿಕೊಂಡ. ಅದು ನನಗೂ ಕೇಳಿಸಿತು. ಇಳಿದು ಜೀಪು ಬರುವುದನ್ನು ಕಾಯುತ್ತಾ ನಿಂತ ಆ ಅಧಿಕಾರಿಯ ಕಣ್ಣಿಗೂ ನನ್ನ ಕಣ್ಣಿಗೂ ಒಂದು ಬೇಟಿಯಾಯಿತು. ಬಸ್ಸು ಮುಂದೆ ಹೋಯಿತು. ಆಗ ನಾನು ‘ಸಾರ್ ತಪ್ಪು ತಿಳಿಯಬೇಡಿ, ನೀವು ಪ್ರಮೋಷನ್ ಮೇಲೆ ಈ ಕೆಲಸಕ್ಕೆ ಬಂದವರಲ್ಲ ಅಲ್ಲವೇ?’ ಎಂದೆ. ಆತ ಆಶ್ಚರ್ಯದಿಂದ ‘ಹೌದು ನಿಮಗೆ ಹೇಗೆ ಗೊತ್ತಾಯಿತು?’ ಎಂದ. ‘ನೀವು ಕಂಡಕ್ಟರ್ ಕೆಲಸ ಮಾಡಿ ಪ್ರಮೋಷನ್ ಮೇಲೆ ಬಂದಿದ್ದರೆ, ಈ ಕಂಡಕ್ಟರ್ ಈಗ ನಿಮ್ಮನ್ನು ಹೇಗೆ ಏಮಾರಿಸಿದ ಎಂದು ತಿಳಿಯುತ್ತಿತ್ತು’ ಎಂದೆ. ‘ಏನು ನನ್ನನ್ನು ಏಮಾರಿಸಿದನೆ! ಹೇಗೆ?’ ಎಂದ. ಜೀಪು ದೂರದಲ್ಲಿ ಬರುತ್ತಿತ್ತು. ಆಗ ನಾನು ಹೇಳಿದೆ.
‘ಸಾರ್ ನೀವು ಟಿಕೆಟ್‌ನ ನಂಬರ್ ಅಷ್ಟೇ ಚೆಕ್ ಮಾಡಿದಿರಿ. ಅದರ ಬದಲು ಆ ಟಿಕೆಟ್ ಹರಿದ ಸಮಯವನ್ನೂ ನೀವು ನೋಡಿದ್ದರೆ, ನೀವು ಚೆಕ್ ಮಾಡುವ ಮೊದಲು, ಕೇವಲ ಒಂದು ನಿಮಿಷದ ಮುಂಚೆ ಹರಿದ ಟಿಕೆಟ್‌ಗಳು ನಿಮಗೆ ಏಳೆಂಟಾದರು ಸಿಗುತ್ತಿದ್ದವು. ಒಂದು ಅಲ್ಲಿಂದ ಹಿಂದಿದ್ದ ಸ್ಟಾಪಿನಿಂದ ಅಲ್ಲಿಗೆ ಬರಲು ಸುಮಾರು ಎಂಟತ್ತು ನಿಮಿಷಗಳಾಗಿದ್ದವು. ಸ್ಟೇಜ್ ಕೊನೆಗೊಂಡು ಎಂಟ್ರಿ ಲಾಕ್ ಕೂಡಾ ಆಗಿತ್ತು. ಮತ್ತೆ ಮುಂದಿನ ಸ್ಟಾಪ್ ಬರುವ ಮೊದಲೆ ಮಿಷನ್ನಿನ ಲಾಕ್ ಓಪನ್ ಮಾಡಿದ್ದು ನಿಮಗೆ ತಿಳಿಯುತ್ತಿತ್ತು ಅಲ್ಲವೆ?’ ಎಂದೆ. ಆ ಅಧಿಕಾರಿ ಒಂದು ಕ್ಷಣ ಯೋಚಿಸಿ, ‘ನೀವು ಹೇಳಿದ್ದು ಸರಿ. ಈ ನನ್ನಮಗ ಇನ್ನೊಮ್ಮೆ ಸಿಗಲಿ ಆಗ ತೋರಿಸ್ತೀನಿ’ ಎಂದು ಮುಂದೆ ಬಂದ ಜೀಪು ಹತ್ತಿ, ನನ್ನತ್ತ ಕೈಬೀಸಿ ಹೊರಟೇ ಹೋದ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ನಾನು ಹೈಸ್ಕೂಲ್ ಓದುವಾಗ, ಜೀಪ್ ಬಂದು ಬಸ್ಸಿಗೆ ಕಾಯುತ್ತಾ ಕುಳಿತಿದ್ದರೆ, ನಾನೇ ಓಡಿ ಹೋಗಿ ಕಂಡಕ್ಟರ್‌ನಿಗೆ ತಿಳಿಸಿಬಿಡುತ್ತಿದ್ದೆ! ಕಂಡಕಕ್ಟರ್ ಡ್ರೈವರ್ ಅವರಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳುತ್ತಿದ್ದೆ. ಈ ಘಟನೆಯನ್ನು ನಾನು ನನ್ನ ಹೈಸ್ಕೂಲ್ ದಿನಗಳು ಪುಸ್ತಕದಲ್ಲಿ ದಾಖಲಿಸಿದ್ದೇನೆ ಕೂಡ. ಮೊನ್ನೆ ಅದೆಲ್ಲಾ ನೆನಪಾಯಿತು ಅಷ್ಟೆ!
Tuesday, December 23, 2008
ಹಳ್ಳಿ ರೂಟ್
Subscribe to:
Post Comments (Atom)
1 comment:
ಚೆನ್ನಾಗಿದೆ.
ಓದಿ ನಗು ಬಂತು, ಹಾಗೆಯೇ ಸ್ವಲ್ಪ ವಿಷಾದ ಕೂಡ !
Post a Comment