Wednesday, February 11, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 3

ಮೆಳೆಯಮ್ಮನ ಕಥೆ, ಮಲ್ಲಿಕಾರ್ಜುನ ಪೂಜಾರಿ ಇತ್ಯಾದಿ...
ಕುಂದೂರುಮಠದಲ್ಲಿರುವ ಹಲವಾರು ದೇವರುಗಳನ್ನು ಪೂಜೆ ಮಾಡಲು ಸಾಕಷ್ಟು ಪೂಜಾರಿಗಳು ಇದ್ದರು. ಅವರೆಲ್ಲರೂ ಕುಂದೂರಿನಲ್ಲಿ ವಾಸವಾಗಿದ್ದರು. ಅವರಿಗೆ ಮಠದ ವತಿಯಿಂದ ಜಮೀನು ಕೊಡಲಾಗಿತ್ತು. ಮಂಗಳಾರತಿ ತಟ್ಟೆಗೆ ಬೀಳುವ ಕಾಸು ಅವರದೇ ಆಗುತ್ತಿತ್ತು. ಅವರಿಗೆ ಸಂಬಳ ಕೊಡುವ ಪ್ರತ್ಯೇಕ ವ್ಯವಸ್ಥೆ ಇದ್ದಂತಿರಲಿಲ್ಲ. ಈ ಪೂಜಾರಿಗಳು ಮೂರ್‍ನಾಲ್ಕು ಕುಟಂಬಕ್ಕೆ ಸೇರಿದ, ಲಿಂಗಾಯಿತ ಸಮಾಜದವರಾಗಿದ್ದರು. ಒಂದೊಂದು ತಿಂಗಳ ಕಾಲದ ಸರದಿಯ ಮೇಲೆ ಎಲ್ಲಾ ದೇವಾಲಯಗಳಲ್ಲೂ ಒಬ್ಬೊಬ್ಬರು ಪೂಜೆ ಮಾಡುತ್ತಿದ್ದರು. ಲಿಂಗಾಯಿತರಾದರೂ ರಂಗನಾಥಸ್ವಾಮಿಗೂ ಅವರೇ ಪೂಜೆ ಮಾಡುತ್ತಿದ್ದುದ್ದು ಯಾವುದೇ ಧರ್ಮಸಾಮರಸ್ಯದಿಂದಲ್ಲ; ಕೇವಲ ಸ್ವ-ಅನುಕೂಲಕ್ಕಾಗಿ ಮಾತ್ರ!
ಮೆಳೆಯಮ್ಮ ಎಂಬ ರಕ್ತದೇವತೆಯ ಪೂಜೆ ಮಾಡಲು ಈ ಪೂಜಾರಿಗಳಲ್ಲಿ ಪೈಪೋಟಿ ಇತ್ತೆಂಬುದು ಮಾತ್ರ ಸುಳ್ಳಲ್ಲ. ಏಕೆಂದರೆ ಅದಕ್ಕೆ ಬರುತ್ತಿದ್ದ ಅಸಂಖ್ಯಾತ ಭಕ್ತರಿಂದಾಗಿ ಅವರ ಮಂಗಳಾರತಿ ತಟ್ಟೆಯ ಆದಾಯ ಹೆಚ್ಚುತ್ತಿತ್ತು. ಕೇವಲ ದೇವರಿಗೆ ಹಣ್ಣು-ಕಾಯಿ ಮಾಡಿಸಲು ಬಂದವರಿಂದಲೂ, ಒಂದೊಂದು ಬಾಳೆಹಣ್ಣು ಮತ್ತು ಒಂದು ಹೋಳು ತೆಂಗಿನಕಾಯಿಯನ್ನು ತಾವೇ ಇಟ್ಟುಕೊಳ್ಳುತ್ತಿದ್ದರು.
ಇಂತಹ ಪೂಜಾರಿಗಳ ಸಮೂಹದಲ್ಲಿ ಮಲ್ಲಕಾರ್ಜುನ ಎಂಬ ಹುಡಗನೂ ಇದ್ದ. ನನಗಿಂತ ಒಂದು ವರ್ಷ ಚಿಕ್ಕವನಾಗಿದ್ದ ಆತ ಐದನೇ ತರಗತಿಯಲ್ಲಿದ್ದಾಗಲಿಂದಲೂ ನನಗೆ ಪರಿಚಯ. ಆತ ಎಂಟನೇ ತರಗತಿಗೆ ಕುಂದೂರುಮಠದ ಹೈಸ್ಕೂಲಿಗೆ ಸೇರಿಕೊಂಡಾಗ, ಬೆಳಿಗ್ಗೆ ಸಂಜೆ, ಯಾವುದಾದರೊಂದು ದೇವಾಲಯದಲ್ಲಿ ಪೂಜೆ ಮಾಡುವ ಕೆಲಸವೂ ಅವನದಾಗಿತ್ತು. ಅತಿ ಹೆಚ್ಚು ಮಾತನಾಡುತ್ತಿದ್ದ ಆತ, ತಾನು ಪೂಜೆ ಮಾಡುವ ದೇವರನ್ನು ಅತಿ ಹೆಚ್ಚು ‘ಸತ್ಯವುಳ್ಳದ್ದು’ ಎಂದು ಹೇಳುತ್ತಿದ್ದ. ಮೆಳೆಯಮ್ಮನನ್ನು ಪೂಜೆ ಮಾಡುವಾಗ ‘ಮೆಳೆಯಮ್ಮ ಸತ್ಯವುಳ್ಳ ದೇವತೆ’ ಎನ್ನುತ್ತಿದ್ದರೆ, ರಂಗನಾಥಸ್ವಾಮಿಯನ್ನು ಪೂಜಿಸುವ ದಿನಗಳಲ್ಲಿ ‘ರಂಗನಾಥಸ್ವಾಮಿಯೇ ಹೆಚ್ಚು ಸತ್ಯವುಳ್ಳ ದೇವರು’ ಎನ್ನುತ್ತಿದ್ದ. ಅವನ ಕೆಲವೊಂದು ಅಸಂಗತ ವಿಚಾರಗಳನ್ನು ನಾನಿಲ್ಲಿ ಹೇಳಬಯಸುತ್ತೇನೆ.
ಮೆಳೆಯಮ್ಮ ಅಲ್ಲಿ ಪ್ರತಿಷ್ಠಾಪನೆಯಾಗಿದ್ದಕ್ಕೆ ಆತ ಹೇಳುತ್ತಿದ್ದ ಕಥೆ ಹೀಗಿದೆ. ಒಂದು ದಿನ ತಂದೆ ಮತ್ತು ಮಗ ಸಂತೆಗೆ ಗಾಡಿಯಲ್ಲಿ ಹೋಗಿ ಹಿಂದಕ್ಕೆ ಬರುತ್ತಿದ್ದರು. ಆಗ ಗಾಡಿಯ ಒಂದು ಗುಜ್ಜುಗೋಲು ಅಂದರೆ ಗಾಡಿಯ ಇಕ್ಕೆಲಗಳಲ್ಲಿರುವ ತಡಿಕೆಗೆ ಆಧಾರವಾಗಿರುವ ಕೋಲು ಬಿಗಿಯಾಗಿರದೆ ಮತ್ತೆ ಮತ್ತೆ ಕಳಚಿಹೋಗುತ್ತಿತ್ತಂತೆ. ಆಗ ಅದನ್ನು ಭದ್ರಪಡಸಲು ಅವರು ಒಂದು ಕಲ್ಲನ್ನು ಗಾಡಿಯಲ್ಲೇ ಇಟ್ಟುಕೊಂಡು ಸಂತೆಯಿಂದ ವಾಪಸ್ಸು ಬರುತ್ತಿದ್ದರಂತೆ. ಈಗ ಗುಡಿಯಿರುವ ಜಾಗದಲ್ಲಿ ಅಗಾಧವಾದ ಮೆಳೆ ಎಂದರೆ ಪೊದೆ ಇತ್ತಂತೆ. ಅಲ್ಲಿ ಬರುವಾಗ, ಗಾಡಿಯಲ್ಲಿದ್ದ ಕಲ್ಲು ಕೆಳಗೆ ಬಿದ್ದು ಹೋಯಿತಂತೆ. ಅದನ್ನು ಮತ್ತೆ ತೆಗೆದುಕೊಳ್ಳಲು ಹೋದರೆ ಅದು ಕೈಗೆ ಬರಲಿಲ್ಲವಂತೆ! ಕಣ್ಣ ಮುಂದೆಯೇ ನೆಲ್ಲಕ್ಕೆ ಬಿದ್ದ ಕಲ್ಲನ್ನು ಎತ್ತಿಕೊಳ್ಳಲು ಹೋದರೆ ಅದು ಬರುತ್ತಿಲ್ಲವೆಂದರೆ, ‘ಅದರಲ್ಲಿ ಏನೋ ಶಕ್ತಿಯಿರಬೇಕು’ ಎಂದು ಆ ಕಲ್ಲನ್ನು ಪೂಜಿಸಿ ಹೋದರಂತೆ! ಸುತ್ತಲೂ ಮೆಳೆಯಿದ್ದುದರಿಂದ ಅದಕ್ಕೆ ಮೆಳೆಯಮ್ಮ ಎಂಬ ಹೆಸರಾಯಿತಂತೆ! ಈಗ ಮೆಳೆಯಮ್ಮನೆಂದು ಪೂಜಿಸುವುದು ಯಾವುದೇ ಶಿಲ್ಪವನ್ನಲ್ಲ; ಆಕಾರವಿಲ್ಲದ ಒಂದು ಕಲ್ಲನ್ನು!
ಈ ಮೆಳೆಯಮ್ಮ ರಕ್ತದೇವತೆ. ಕುರಿ, ಕೋಳಿ, ಹಂದಿಗಳನ್ನು ಮೆಳೆಯಮ್ಮನಿಗೆ ಬಲಿ ಕೊಡಲಾಗುತ್ತದೆ. ಹಾಗೆ ಬಲಿಕೊಟ್ಟ ಪ್ರಾಣಿಗಳ ಮಾಂಸದಿಂದ ಅಡುಗೆ ಮಾಡಿ ಅದನ್ನು ಮೆಳೆಯಮ್ಮನಿಗೆ ‘ಎಡೆ’ ಇಟ್ಟು ಪೂಜಿಸಿ ಹೋಗುವ ಸಂಪ್ರದಾಯವಿದೆ. ಹೀಗೆ ಮಾಂಸಾಹಾರಿಯಾದ ದೇವರನ್ನು, ಮಾಂಸವನ್ನೇ ತಿನ್ನದ, ತಿನ್ನುವವರನ್ನು ಕಂಡರೆ ಹೇಸಿಕೊಳ್ಳುವ ಪೂಜಾರಿಗಳು ಪೂಜಿಸುವುದು ಮಾತ್ರ ವಿಚಿತ್ರ! ನಾವು ಯಾವಾಗಲಾದರೂ ಮಲ್ಲಿಕಾರ್ಜುನನ್ನು ರೇಗಿಸಲು ಈ ವಿಷಯ ಪ್ರಸ್ತಾಪಿಸಿದರೆ ಆತ ಅದಕ್ಕೊಂದು ಕಥೆ ಹೇಳುತ್ತಿದ್ದ. ಮೆಳೆಯಮ್ಮ ನಿಜವಾಗಿಯೂ ಮಾಂಸವನ್ನು ಬಯಸುವುದಿಲ್ಲವಂತೆ! ಆ ಮಾಂಸದ ಎಡೆ ಏನಿದ್ದರೂ ಮೆಳೆಯಮ್ಮನ ಭೂತಗಳಿಗಂತೆ! ಮೆಳೆಯಮ್ಮನ ಗುಡಿಯೆದುರು ಮೆಳೆಯಮ್ಮನ ಭೂತಗಳು ಎಂದು ಕರೆಯುವ ಏಳೆಂಟು ಕರಿಯ ಕಲ್ಲಿನ ಗುಂಡುಗಳು ಆತನ ಮಾತಿಗೆ ಸಾಕ್ಷಿಯಾಗಿದ್ದವು. ಆ ಕಲ್ಲಿನ ಗುಂಡುಗಳಿಗಿಂತ ಮುಂದಕ್ಕೆ ಅಂದರೆ ಮೆಳೆಯಮ್ಮನ ಗುಡಿಯ ಆವರಣದೊಳಕ್ಕೆ ಮಾಂಸದ ಎಡೆಯನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ.
ಜನಗಳು ಮಾಂಸದ ಎಡೆಯನ್ನು ತಂದಾಗ ಪೂಜಾರಿಗಳು ಅದಕ್ಕೆ ತೀರ್ಥವನ್ನು ಚಿಮುಕಿಸಬೇಕಾಗಿತ್ತು. ‘ಮಾಂಸದ ಎಡೆಗೆ ತೀರ್ಥ ಹಾಕುವಾಗ ಅದರ ವಾಸನೆ ಕುಡಿಯುವುದರಿಂದ, ನೀವೂ ಮಾಂಸ ತಿಂದಂತೆಯೇ ಲೆಕ್ಕ’ ಎಂದು ನಾವು ಮಲ್ಲಿಕಾರ್ಜುನನನ್ನು ರೇಗಿಸುತ್ತಿದ್ದೆವು. ಆಗ ಕುಂದೂರಿನ ಸುತ್ತಮುತ್ತಲೆಲ್ಲಾ ಹುಚ್ಚಯ್ಯನೆಂದು ಕರೆಸಿಕೊಳ್ಳುತ್ತಾ, ತಿರುಗುವ ನಂಜಯ್ಯ ಎಂಬುವವನಿದ್ದನು. ಅವನೂ ಒಂದು ಕಾಲದಲ್ಲಿ ಮೆಳೆಯಮ್ಮನ ಪೂಜಾರಿಗಳಲ್ಲಿ ಒಬ್ಬನಾಗಿದ್ದನಂತೆ! ಆತ ಮಾನಸಿಕ ಅಸ್ವಸ್ಥನಾಗಿದ್ದುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ. ಆದರೆ ಮಲ್ಲಿಕಾರ್ಜುನ ಮಾತ್ರ, ನಾವು ರೇಗಿಸಿದಾಗ, ಹುಚ್ಚಯ್ಯನನ್ನು ತೋರಿಸಿ ‘ನೋಡಿ, ಅವನು ಒಂದು ಕಾಲದಲ್ಲಿ ಮೆಳೆಯಮ್ಮನನ್ನು ಪೂಜೆ ಮಾಡುತ್ತಿದ್ದವನೆ! ಮಾಂಸ ತಿಂದು, ಹೆಂಡ ಕುಡಿಯುವುದನ್ನು ಕಲಿತು ತಲೆಕೆಟ್ಟು ಹೋಯಿತು! ಮೆಳೆಯಮ್ಮನ ಗುಡಿಯ ಒಳಗೆಲ್ಲಾ ವಾಂತಿಬೇಧಿ ಮಾಡಿಕೊಂಡಿದ್ದನಂತೆ!! ಮೆಳೆಯಮ್ಮ ಅವನಿಗೆ ಶಾಪ ಕೊಟ್ಟು ಈಗ ಹುಚ್ಚನಾಗಿದ್ದಾನೆ, ಗೊತ್ತಾ!!! ಎಂದು ನಮ್ಮನ್ನೆಲ್ಲಾ ಭಯಬೀಳುವಂತೆ ಮಾಡಿದ್ದ.
ಹೀಗೆ ಮಾಂಸದ ಎಡೆಯನ್ನು ಹಾಕಿ, ಪೂಜಾರಿಗಳು ತೀರ್ಥ ಎಂದು ನೀರನ್ನು ಚುಮುಕಿಸಿ, ಭಕ್ತರು ಇನ್ನು ಸರಿಯಾಗಿ ಕೈ ಮುಗಿಯುವಷ್ಟರಲ್ಲಿ ಅಲ್ಲಿದ್ದ ಅಸಂಖ್ಯಾತ ನಾಯಿಗಳು ನುಗ್ಗಿ, ಒಂದನ್ನೊಂದು ಕಚ್ಚುತ್ತಾ ಮಾಂಸದ ಎಡೆಗೆ ಮುತ್ತಿಕೊಳ್ಳುತ್ತಿದ್ದವು. ಆ ನಾಯಿಗಳೆಲ್ಲವೂ ಅತ್ಯಂತ ದಷ್ಟಪುಷ್ಟವಾಗಿದ್ದವು. ಅಲ್ಲಿದ್ದ ನಾಯಿಗಳು ದೀರ್ಘಯುಷಿಗಳಾಗಿರದೆ, ಕೇವಲ ಮೂರ್‍ನಾಲ್ಕು ತಿಂಗಳಲ್ಲೇ ಸತ್ತು ಹೋಗುತ್ತವೆ ಎಂಬ ನಂಬಿಕೆ ಅಲ್ಲಿದೆ. ಆದರೆ ಅಲ್ಲಿದ್ದ ನಾಯಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಅವುಗಳನ್ನು ಗುರುತಿಟ್ಟುಕೊಂಡು, ಅವುಗಳ ಆಯಸ್ಸನ್ನು ಲೆಕ್ಕ ಹಾಕುವವರು ಯಾರೂ ಇಲ್ಲವಾದ್ದರಿಂದ ಮೇಲಿನ ಮಾತಿಗೆ ಯಾವ ಪುರಾವೆಯೂ ಇಲ್ಲ. ಒಮ್ಮೆ ಅವುಗಳ ಸಂಖ್ಯೆ ವಿಪರೀತವಾದಾಗ ಮಠದವರೇ ಅವುಗಳಿಗೆ ವಿಷದ ಇಂಜೆಕ್ಷನ್ನು ಚುಚ್ಚಿಸಿದರೆಂದೂ, ಆದರೂ ಅವು ಸಾಯಲಿಲ್ಲವೆಂದು, ಅದೊಂದು ಪವಾಡವೆಂಬಂತೆ ಒಮ್ಮೆ ಮಲ್ಲಿಕಾರ್ಜುನ ಹೇಳಿದ್ದ! ನಂತರದ ದಿನಗಳಲ್ಲಿ ಅಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿ, ಅವರು ದೊಣ್ಣೆ ಹಿಡಿದುಕೊಂಡು ಎಡೆಯನ್ನು ನಾಯಿಗಳು ಮುಟ್ಟದಂತೆ ಕಾಯ್ದುಕೊಂಡು, ತಾವೇ ಅದನ್ನು ತೆಗೆದುಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ!
ರಂಗನಾಥನ ಪೂಜೆ ಮಾಡುವಾಗಲೆಲ್ಲಾ ಆತ ರಂಗನಾಥನ ಪರವಾಗಿ ಮಾತನಾಡುತ್ತಿದ್ದನೆಂದು ಮೊದಲೇ ಹೇಳಿದ್ದೇನೆ. ಅವನು ಅಲ್ಲಿಗೆ ಬಂದು, ಪೂಜೆಗೆ ಬಾಗಿಲನ್ನು ತೆರೆದಾಗ, ಹೊರಗಡೆಯೇ ಇದ್ದ ಒಂದು ಘಂಟೆಯನ್ನು ಜೋರಾಗಿ ಬಡಿಯುತ್ತಿದ್ದ. ನಾವು ‘ಅದನ್ನು ಬಾರಿಸುವುದು ಏಕೆ?. ಎಂದು ಕೇಳಿದರೆ, ‘ರಂಗನಾಥಸ್ವಾಮಿಯ ಸರ್ಪವೊಂದು ಅಲ್ಲಿ ವಾಸವಾಗಿದೆ. ಹಾಗೆ ಘಂಟೆಯನ್ನು ಬಾರಿಸದೇ ಒಳಗೆ ಹೋಗಲು ಅದು ಬಿಡುವುದಿಲ್ಲ’ ಎಂದೂ, ‘ದೇವರೂ ನಿದ್ರೆ ಮಾಡುತ್ತಾನೆ. ಘಂಟೆ ಬಾರಿಸದೆ ಹಾಗೇ ಹೋಗುವುದರಿಂದ ತೊಂದರೆಯಾಗುತ್ತದೆ!’ ಎಂದೂ ಹೇಳುತ್ತಿದ್ದ. ಯಾರೋ ಭಕ್ತರು, ನೋಡಲು ಸ್ವಲ್ಪ ವಕ್ರ ವಕ್ರವಾಗಿ ಕಾಣುವ ಸೋರೆಕಾಯಿಯನ್ನು ದೇವಾಲಯಕ್ಕೆ ಕೊಟ್ಟಿದ್ದರು. ಅದನ್ನು ರಂಗನಾಥನ ದೇವಸ್ಥಾನದಲ್ಲಿ ನೇತುಹಾಕಿದ್ದರು. ಅದನ್ನು ನಮಗೆ ತೋರಿಸುತ್ತಾ ‘ನೋಡಿ. ಅದು ನೋಡಲು ಸರ್ಪ ಕಂಡಂತೆ ಕಾಣುತ್ತದೆಯಲ್ಲವೇ? ನಾನು ಘಂಟೆ ಬಾರಿಸಿದ ನಂತರ ಅದು ಅದರೊಳಗೆ ಹೋಗಿ ಮಾಯವಾಗಿಬಿಡುತ್ತದೆ!’ ಎಂದು ಕಣ್ಣಿಗೆ ಕಟ್ಟಿದವನಂತೆ ಹೇಳುತ್ತಿದ್ದ. ಆ ಸೋರೆಕಾಯಿಯನ್ನು ತುಂಬಾ ಎತ್ತರದಲ್ಲಿ ನೇತುಹಾಕಿದ್ದರು. ಅದು ಕೆಳಗಡೆಯೆ ಇದ್ದರೂ ನಾವಾರೂ ಅದರಲ್ಲಿ ಸರ್ಪವಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೋಗುತ್ತಿರಲಿಲ್ಲ, ಬಿಡಿ!
ಅಲ್ಲಿ ಎರಡು ಸುಬ್ಬಪ್ಪನ ಗುಡಿಗಳಿದ್ದುದ್ದರಿಂದ, ಆ ಕ್ಷೇತ್ರವನ್ನು ಸುಬ್ರಹ್ಮಣ್ಯ ಕ್ಷೇತ್ರವೆಂದೂ ಅಲ್ಲಿ ನಾಗರಹಾವುಗಳನ್ನು ಕೊಲ್ಲಬಾರದೆಂದು ನಂಬಿಕೆಯಿದೆ. ಒಮ್ಮೆ ಹಾಸ್ಟೆಲ್ಲಿನ ಬಳಿ ಹುಡುಗರೆಲ್ಲಾ ಸೇರಿಕೊಂಡು ಒಂದು ನಾಗರಹಾವನ್ನು ಸಾಯಿಸಿಬಿಟ್ಟಿದ್ದೆವು. ಯಾರೋ, ನಾಗರಹಾವನ್ನು ಸಾಯಿಸಿದ್ದು ತಪ್ಪೆಂದು, ಅದರಿಂದ ನಿಮಗಾರಿಗೂ ಒಳ್ಳೆಯದಾಗುವುದಿಲ್ಲವೆಂದೂ ಹೆದರಿಸಿದರು. ಆಗ ಇದೇ ಮಲ್ಲಿಕಾರ್ಜುನನು ಹಾವಿಗೆ ಅಂತ್ಯಸಂಸ್ಕಾರ ಮಾಡಿಸಿದ್ದ! ಹಾವನ್ನು ಸುಡುವ ಮೊದಲು, ಅದರ ಬಾಯಿಯನ್ನು ಮನುಷ್ಯರ ಕಕ್ಕಸ್ಸಿಗೆ ಮುಟ್ಟಿಸುವಂತೆ ತಾಖೀತು ಮಾಡಿದ್ದ! ನಂತರ ಒಂದು ಹಿತ್ತಾಳೆಯ ನಾಣ್ಯವನ್ನು ಸುಣ್ಣ ಬಳಿದು ಹಾವಿನ ಬಾಯಿಯೊಳಗೆ ಹಾಕಿಸಿ ಸುಡಲು ಹೇಳಿದ. ಹಾವು ಚೆನ್ನಾಗಿ ಸುಟ್ಟು ಹೋದಮೇಲೆ, ಅದರ ಬೂದಿಯಲ್ಲೆಲ್ಲಾ ಹುಡುಕಿ, ಹಿತ್ತಾಳೆಯ ನಾಣ್ಯವನ್ನು ತೆಗೆದುಕೊಂಡ. ‘ಅದನ್ನು ಏನು ಮಾಡುತ್ತೀಯಾ?’ ಎಂದು ನಾವು ಕೇಳಿದ್ದಕ್ಕೆ, ‘ನಾಣ್ಯಕ್ಕೆ ಒಂದು ತೂತು ಮಾಡಿಸಿ, ಉಡುದಾರಕ್ಕೆ ಸೇರಿಸಿ ಹಾಕಿಕೊಳ್ಳುತ್ತೇನೆ. ಆಗ ನನಗೆ ನಾಗರಹಾವಿನ ಭಯವಿರುವುದಿಲ್ಲ. ಯಾವ ಹಾವೂ ನನಗೆ ಕಚ್ಚುವುದಿಲ್ಲ. ನನ್ನನ್ನು ಕಂಡರೆ ಬಾಲ ಮುದುರಿಕೊಂಡು ಹೋಗುತ್ತವೆ!’ ಎಂದು ಅದಕ್ಕೆ ಹಲವಾರು ನಿದರ್ಶನಗಳನ್ನು ಕೊಟ್ಟಿದ್ದ.
ಕೇವಲ ಹತ್ತು ಹದಿನೈದು ವರ್ಷದ ಮಲ್ಲಿಕಾರ್ಜುನನ ಸುಳ್ಳು, ಮೂಡನಂಬಿಕೆಗಳನ್ನೆಲ್ಲಾ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ, ಎಲ್ಲರಂತೆ ನಾನೂ ಆಗ ನಂಬಿದ್ದೆ. ಇವೆಲ್ಲವನ್ನೂ ಒತ್ತಟ್ಟಿಗಿಟ್ಟು ನೋಡಿದಾಗ, ಆತನ ಬುದ್ದಿಶಕ್ತಿಗೆ ಮೆಚ್ಚಿ ನಾವು ತಲೆದೂಗಲೇಬೇಕು, ಅಲ್ಲವೇ!?
ಹೀಗೆ ಸುತ್ತ ಹತ್ತೂರಿಗೆ ಕೇಂದ್ರಬಿಂದುವಾಗಿದ್ದ ಕುಂದೂರುಮಠ ರಾಜಕೀಯ ನೇತಾರರ, ಪುಡಾರಿಗಳ, ಸೋಮಾರಿಗಳ ಗಮನಕ್ಕೆ ಬಂದು ಒಂದು ಕೇಂದ್ರದಂತೆ ರೂಪುಗೊಂಡಿತ್ತು. ಕೇವಲ ಸರ್ಕಾರಿ ಕೃಪಾಪೋಷಿತ ಆಸ್ಪತ್ರೆ, ಹೈಸ್ಕೂಲ್, ಹಾಸ್ಟೆಲ್, ಮಂಡಲ ಪಂಚಾಯಿತಿ ಆಫೀಸ್ ಇಷ್ಟಕ್ಕೆ ಮಾತ್ರ ತನ್ನ ಅಭಿವೃದ್ಧಿಯನ್ನು ಸೀಮಿತಗೊಳಿಸಿಕೊಂಡಿತ್ತು. ಇಂತಹ ಮಠದಲ್ಲಿದ್ದ ಸರ್ಕಾರಿ ಹೈಸ್ಕೂಲಿಗೆ, ಆ ಸುತ್ತಲಿನ ಇತರ ಮಕ್ಕಳಂತೆ ನಾನೂ ಎಂಟನೇ ತರಗತಿಗೆ ಅಡ್ಮಿಷನ್ ಆದೆ.

1 comment:

aak said...

http://www.nitte.ac.in/nmamit/articles.php?detailId=2778&fldId=4&linkId=482&parentId=20&mainId=20

are you attending the "National workshop on Web Technology for Effective Managment of Library & Information Sciences".
click on the link above.