ಹೆಡ್ಮಾಸ್ಟರ್ ವೆಂಕಟಪ್ಪ
ಶ್ರೀ ವೆಂಕಟಪ್ಪ ಅವರು ಹೆಡ್ಮಾಸ್ಟರಾಗಿ ಕುಂದೂರುಮಠಕ್ಕೆ ಬರುವಷ್ಟರಲ್ಲಿ ಅಲ್ಲಿಯ ಹೈಸ್ಕೂಲ್ ಅಸ್ತಿತ್ವವನ್ನೇ ಕಳೆದುಕೊಳ್ಳುವುದರಲ್ಲಿತ್ತು. ಅವರು ಬಂದು ಎರಡೇ ವರ್ಷದಲ್ಲಿ ಫಲಿತಾಂಶವನ್ನು ಎರಡಂಕಿ ದಾಟಿಸಿದರು. ಅವರ ಈ ಶ್ರಮದಿಂದಾಗಿ ಅಲ್ಲಿಗೆ ಜೂನಿಯರ್ ಕಾಲೇಜು ಬಂದಿದ್ದನ್ನು ಮೊದಲೇ ಹೇಳಿದ್ದೇನೆ. ಅವರು ಮೂಡನಹಳ್ಳಿಯಲ್ಲಿ ಒಂದು ಕೊಠಡಿ ಮಾಡಿಕೊಂಡು ವಾಸ್ತವ್ಯ ಹೂಡಿದ್ದರು. ಅವರ ಸಂಸಾರ ಹಾಸನದಲ್ಲೋ ಸಕಲೇಶಪುರದಲ್ಲೋ ಇತ್ತೆಂದು ಮಾತನಾಡುವುದನ್ನು ಕೇಳಿದ್ದೆ. ದಿನವೂ ಕುಂದೂರು ಮಠಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ನಾವು ಮಿಡ್ಲಿಸ್ಕೂಲಿಗೆ ಅದೇ ದಾರಿಯಲ್ಲಿ ಹೋಗಿಬರುತ್ತಿದ್ದುದರಿಂದ ನಮಗೂ ಅವರ ಪರಿಚಯ ಅಲ್ಪಸ್ವಲ್ಪ ಆಗಿತ್ತು. ಸಂಜೆ ಹೊತ್ತು ವಾಪಸ್ಸು ಮೂಡನಹಳ್ಳಿಗೆ ಬರುವಾಗ ಮಾತ್ರ ಅವರು ವಿರಾಮವಾಗಿ ವಾಕಿಂಗ್ ಮಾಡಿಕೊಂಡು, ಅಲ್ಲಿಲ್ಲಿ ನಿಂತು ಕೈಕಾಲು ಆಡಿಸಿಕೊಂಡು ವ್ಯಾಯಾಮ ಮಾಡಿಕೊಂಡು ಬರುತ್ತಿದ್ದರು. ನಾನು ಎಂಟನೇ ತರಗತಿಗೆ ಸೇರುವ ಮೊದಲೇ ಅವರು ‘ತುಂಬಾ ಸ್ಟ್ರಿಕ್ಟ್’ ಎಂದು ಹೆಸರುವಾಸಿಯಾಗಿದ್ದರು. ‘ತರಗತಿಯೊಳಗೆ ಮೇಷ್ಟ್ರುಗಳು ಸರಿಯಾಗಿ ಪಾಠ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಹೊರಗೆ ನಿಂತು ಕೇಳಿಸಿಕೊಳ್ಳುತ್ತಿದ್ದರು. ಮೇಷ್ಟ್ರುಗಳನ್ನು ಪ್ರತ್ಯೇಕವಾಗಿ ಕರೆದು ಬಯ್ಯುತ್ತಿದ್ದರು’ ಎಂದು ಆಗಾಗ ಹುಡುಗರು ಮಾತನಾಡಿಕೊಳ್ಳುತ್ತಿದ್ದರು.
ನಾನು ಆ ಸ್ಕೂಲಿಗೆ ಸೇರಿಕೊಂಡಾಗಲೂ ಸ್ವಂತದ್ದು ಎಂಬ ಕಟ್ಟಡ ಇರಲಿಲ್ಲ. ಮಠಕ್ಕೆ ಸೇರಿದ ಮೂರು ಹೆಂಚಿನ ಮನೆಗಳಲ್ಲಿ ಸ್ಕೂಲ್ ಮತ್ತು ಹಾಸ್ಟೆಲ್ ಎರಡೂ ನಡೆಯಬೇಕಾಗಿತ್ತು. ಒಂದು ಮನೆಯ ಹಾಲ್‌ನಲ್ಲಿ ಹಾಸ್ಟೆಲ್ ಮತ್ತು ಹಿಂಬದಿಯ ಪಡಸಾಲೆಯಲ್ಲಿ ಅಡುಗೆ ಮನೆಯಿತ್ತು. ಅದರಲ್ಲಿ ಬರೋಬ್ಬರಿ ಐವತ್ತು ಜನ ವಿದ್ಯಾರ್ಥಿಗಳಿದ್ದರು! ಅದೇ ಕಟ್ಟಡದ ತೆರೆದ ಜಗುಲಿಯಲ್ಲಿ ಒಂಬತ್ತನೇ ತರಗತಿಗೆ ಪಾಠ ಪ್ರವಚನಗಳು ನಡೆಯುತ್ತಿದ್ದವು. ಹತ್ತನೇ ತರಗತಿ ನಡೆಯುತ್ತಿದ್ದ ಮನೆಯಲ್ಲಿಯೂ ಹಿಂಬದಿಯಲ್ಲಿ ಮಠದ ಕಂಟ್ರಾಕ್ಟರ್ ಅವರ ಆಳುಗಳ ಒಂದು ಸಂಸಾರವಿತ್ತು. ಇನ್ನುಳಿದ ಒಂದು ಮನೆಯ ಪಡಸಾಲೆಯೇ ಆಫೀಸ್ ರೂಂ ಮತ್ತು ಸ್ಟಾಫ್ ರೂಮಾಗಿತ್ತು. ಅದೇ ಮನೆಯ ಹಾಲ್‌ನಲ್ಲಿ ಎಂಟನೇ ತರಗತಿಯ ಪಾಠಪ್ರವಚನಗಳು ನಡೆಯಬೇಕಾಗಿತ್ತು. ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!
ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು. ಅವರು ತರಗತಿಗೆ ಬಂದ ಮೊದಲ ದಿನವೇ ಮಾನಿಟರ್‌ನನ್ನು ಚುನಾಯಿಸುವ ಕೆಲಸ ಮಾಡಿದರು. ನಾನೂ ಸೇರಿದಂತೆ ಮೂವರು ಚುನಾವಣೆಗೆ ನಿಂತಿದ್ದವು. ಮತದಾನದ ನಂತರ ನಾನು ಇದ್ದ ಅರವತ್ತು ಮತಗಳಲ್ಲಿ ಐವತ್ತಕ್ಕು ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದೆ! ಕೇವಲ ಒಂದೇ ಗಂಟೆಯಲ್ಲಿ ಚುನಾವಣೆ ಮಾಡಿ ಫಲಿತಾಂಶವನ್ನು ಘೋಷಿಸಿದ ವೆಂಕಟಪ್ಪನವರು, ನಾನು ಮಾಡಬೇಕಾದ ಕೆಲಸದ ಪಟ್ಟಿಯನ್ನೂ ಹೇಳಿಬಿಟ್ಟರು. ಅವರು ಆಫೀಸ್ ರೂಮಿನಲ್ಲಿ ಕುಳಿತಿದ್ದಾಗ ‘ಮಾನಿಟರ್’ ಎಂದು ಕೂಗಿದೊಡನೆ ಎದ್ದು ಹೋಗಬೇಕಾಗಿತ್ತು. ಅವರು ತರಗತಿಗೆ ಬರುವಷ್ಟರಲ್ಲಿ ಬೋರ್ಡ್ ಒರೆಸಿ, ಸೀಮೆಸುಣ್ಣ ತಂದು ಇಟ್ಟಿರಬೇಕಾಗಿತ್ತು. ಜವಾನ ನಂಜಪ್ಪ ಇರದಿದ್ದಾಗ ಬೆಲ್ ಕೂಡಾ ನಾನೇ ಹೊಡೆಯಬೇಕಾಗಿತ್ತು. ದಿನವೂ ಒಂದಷ್ಟು ಕೋಲುಗಳನ್ನು ತಂದು ಮೇಷ್ಟ್ರುಗಳಿಗೆ ಕೊಡಬೇಕಾಗಿತ್ತು! ಅದಕ್ಕಿಂತ ಹೆಚ್ಚಾಗಿ ಪ್ರತಿ ಶನಿವಾರ ಆ ಮನೆಯ ನೆಲವನ್ನು ಸಗಣಿ ಹಾಕಿ ಸಾರಿಸಲು ವ್ಯವಸ್ಥೆ ಮಾಡಬೇಕಾಗಿತ್ತು. ಆ ಮನೆಯ ನೆಲಕ್ಕೆ ಗಾರೆ ಇರಲಿಲ್ಲ. ಹತ್ತು-ಹತ್ತು ಹುಡುಗರ ಗುಂಪುಗಳನ್ನು ಮಾಡಿ ಒಂದೊಂದು ಗುಂಪಿನವರು ಒಂದೊಂದು ವಾರ ನೆಲವನ್ನು ಗುಡಿಸಿ ಸಾರಿಸಬೇಕಾಗಿತ್ತು. ಅದರ ಮೇಲುಸ್ತುವಾರಿ ಮಾತ್ರ ನನ್ನದಾಗಿತ್ತು!
ವೆಂಕಟಪ್ಪನವರು ಸ್ಟ್ರಿಕ್ಟ್ ಎಂದು ಅಷ್ಟೊಂದು ಹೆಸರಾಗಿದ್ದರೂ ಹುಡುಗರಿಗೆ ಹೊಡೆಯುತ್ತಿದ್ದುದ್ದು ತುಂಬಾ ಕಡಿಮೆ. ಹಾಗೆ ಹೊಡೆಯಲೇ ಬೇಕಾದ ಸಂದರ್ಭದಲ್ಲಿ, ಹುಡುಗರನ್ನು ಬಗ್ಗಿ ನಿಲ್ಲುವಂತೆ ಹೇಳುತ್ತಿದ್ದರು. ಬಗ್ಗಿ ನಿಂತ ಹುಡುಗರ ಕುಂಡಿಯ ಮೇಲೆ ಕೋಲಿನಿಂದ ಹೊಡೆಯುತ್ತಿದ್ದರು. ಹುಡುಗಿಯರಿಗೂ ಅದೇ ಶಿಕ್ಷೆ. ಅವರು ಜೋರಾಗಿ ಹೊಡೆಯುತ್ತಿರಲಿಲ್ಲವಾದರೂ, ಬೇರೆ ಹುಡುಗರ ನಡುವೆ ಹಾಗೆ ಕುಂಡಿ ಬಗ್ಗಿಸಿ ಹೊಡೆಸಿಕೊಳ್ಳುವುದು ಅವಮಾನದ ಸಂಗತಿಯಾಗಿತ್ತು. ಅದೃಷ್ಟವೆಂದರೆ, ನನಗೆ ಅವರಿಂದ ಹೊಡೆಸಿಕೊಳ್ಳುವ ದಿನ ಬರಲೇ ಇಲ್ಲ!
ಹೆಡ್ಮಾಸ್ಟರಿಗೆ ನೀರು ಕೊಟ್ಟಿದ್ದು!
ವೆಂಕಟಪ್ಪನವರು ನನ್ನನ್ನು ‘ಮಾನಿಟರ್’ ಎಂದು ಘೊಷಿಸಿದಾಗ ಹೇಳಿರದ, ಆದರೆ ತೀರಾ ವೈಯಕ್ತಿಕ ಎನ್ನಬಹುದಾದ ಒಂದು ಕೆಲಸವನ್ನು ನಾನು ಅವರಿಗೆ ಮಾಡಿಕೊಡಬೇಕಾಗಿತ್ತು. ಅದಕ್ಕೆ ಅವರು ನನಗೆ ಪ್ರತಿಯಾಗಿ ‘ಥ್ಯಾಂಕ್ಸ್’ ಎಂದು ಹೇಳುತ್ತಿದ್ದರು. ಈಗ ಆ ಕೆಲಸವನ್ನು ನೆನಪಿಸಿಕೊಂಡರೆ ನಗು ಬರುತ್ತದೆಯಾದರೂ ಆಗ ನನಗೆ ಹೆಮ್ಮೆಯೆನ್ನಿಸುತ್ತಿತ್ತು. ಆ ಕೆಲಸವನ್ನು ನಾನು ಅವರಿಗೆ ಮಾಡಿಕೊಡುವುದರಿಂದ, ನಾನು ಅವರ ಅಂತರಂಗದ ಶಿಷ್ಯನಾಗಿದ್ದೇನೆ ಎಂಬ ಹೆಮ್ಮೆ ನನ್ನಲ್ಲಿತ್ತೇನೋ! ಅಂದ ಹಾಗೆ ಆ ಕೆಲಸ ಏನೆಂದರೆ, ಯಾವಾಗಲಾದರೂ ಅವರು ಶಾಲೆಯ ವೇಳೆಯಲ್ಲಿ ಕಕ್ಕಸಿಗೆ ಹೋಗಬೇಕಾದಾಗ, ಅವರಿಗೆ ನೀರನ್ನು ತಗೆದುಕೊಂಡು ಹೋಗಿ ಕೊಡುವುದು!
ಸ್ವಂತ ಕಟ್ಟಡವೇ ಇಲ್ಲದ ಆ ಸ್ಕೂಲಿನಲ್ಲಿ, ಟಾಯಿಲೆಟ್ ರೂಮ್ ಎಂಬುದು ಅದರ ಹೆಸರನ್ನೂ ಕೇಳಿರದ ವಸ್ತುವಾಗಿತ್ತು. ಸಿಟಿಯವರಾದ ವೆಂಕಟಪ್ಪನವರಿಗೆ ಮಾತ್ರ ಇದರಿಂದ ಬಹಳ ತೊಂದರೆಯಾಗಿತ್ತೆಂದು ಕಾಣುತ್ತದೆ. ಮೂಡನಹಳ್ಳಿಯಲ್ಲಿ ಅವರು ಇಳಿದುಕೊಂಡಿದ್ದ ರೂಮಿನ ಮನೆಯಲ್ಲೂ ಕಕ್ಕಸ್ಸು ರೂಮ್ ಇರಲಿಲ್ಲ. ಆದರೆ ಅದು ಅವರಿಗೆ ಅಷ್ಟೊಂದು ಸಮಸ್ಯೆಯಾಗಿ ಕಂಡಿರಲಿಲ್ಲ. ಕಾರಣ ಅವರ ದಿನಚರಿ ಊರೆಲ್ಲಾ ಮಲಗಿರುವಾಗ, ಅಂದರೆ ಬೆಳಗಿನ ಜಾವ ನಾಲ್ಕೂವರೆ ಐದಕ್ಕೆಲ್ಲಾ ಶುರುವಾಗಿಬಿಡುತ್ತಿತ್ತು. ಊರಿನ ಆಸುಪಾಸಿನಲ್ಲಿದ್ದ ಕೆರೆಗಳಲ್ಲಿ ಆಗ ವರ್ಷವಿಡೀ ನೀರಿರುತ್ತಿದ್ದುದರಿಂದ ಅವರು ಸ್ನಾನಕ್ಕೂ ಆ ಕೆರೆಗಳನ್ನೆ ಆಶ್ರಯಿಸಿದ್ದರು. ಆದರೆ ಯಾವಾಗಲಾದರೊಮ್ಮೆ ಅವರಿಗೆ ಅವೇಳೆಯಲ್ಲಿ, ಅಂದರೆ ಸ್ಕೂಲಿನಲ್ಲಿದ್ದಾಗ ಕಕ್ಕಸ್ಸಿಗೆ ಹೋಗಬೇಕೆಂದರೆ ಮಾತ್ರ ಪೇಚಾಟವಾಗುತ್ತಿತ್ತು. ಅದಕ್ಕೆ ಅವರು ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿದ್ದರು. ಅದಕ್ಕೆ ನನ್ನ ಸಹಕಾರ ಬೇಕಾಗಿತ್ತು ಅಷ್ಟೆ!
ಕುಂದೂರುಮಠದ ಹೈಸ್ಕೂಲಿನಿಂದ ಯಾವ ಕಡೆಗಾದರೂ ಸರಿಯೆ, ನೂರಿನ್ನೂರು ಮೀಟರ್ ನಡೆದರೆ ಕುರುಚಲು ಕಾಡು ಸಿಗುತ್ತಿತ್ತು. ಅಲ್ಲಲ್ಲಿ ಹೊಲ ತೋಟಗಳೂ ಇದ್ದವು. ಸ್ಕೂಲಿನ ಉತ್ತರಕ್ಕೆ ಸ್ವಲ್ಪ ಕಣಿವೆ ಎನ್ನಬಹುದಾದ ತಗ್ಗಾದ ಪ್ರದೇಶವಿತ್ತು. ಅಲ್ಲಿ ಕುರುಚಲುಗಿಡಗಳೂ, ಕೆಲವು ದೊಡ್ಡ ಮರಗಳೂ ಯಥೇಚ್ಚವಾಗಿ ಬೆಳೆದಿದ್ದವು. ಅವರು ‘ಮಾನಿಟರ್’ ಎಂದು ಕೂಗಿ ಕರೆದಾಗ, ನಾನು ಹೋದರೆ, ಆಗ ಅಲ್ಲಿ ಯಾರೂ ಇರದಿದ್ದರೆ, ಅಂದು ನಾನು ನೀರು ತೆಗೆದುಕೊಂಡು ಹೋಗಬೇಕಾಗಿದೆ ಎಂದು ಸಾಮಾನ್ಯವಾಗಿ ನಾನು ಊಹಿಸುತ್ತಿದ್ದೆ. ಯಾರಾದರೂ ಬೇರೆ ಮೇಷ್ಟ್ರುಗಳಿದ್ದರೆ ಅವರೇ ಬಾಗಿಲಿಗೆ ಬಂದು ನಿಂತು ನನ್ನನ್ನು ಕರೆದು ಹೊರಗೆ ಹೇಳುತ್ತಿದ್ದರು. ಆಗ ನಾನು ಅಲ್ಲಿದ್ದ ಒಂದು ದೊಡ್ಡ ಚೆಂಬು ಅಥವಾ ಸಣ್ಣ ಬಿಂದಿಗೆ (ಸುಮಾರು ಐದಾರು ಲೀಟರ್ ನೀರು ಹಿಡಿಯುವಂಥದ್ದು) ತುಂಬಾ ನೀರು ತುಂಬಿಕೊಂಡು ಅದನ್ನು ತೆಗೆದುಕೊಂಡು ಹೋಗಿ ಆ ದೂರದ ಕಣಿವೆಯಲ್ಲಿದ್ದ ಒಂದು ಹೊಂಗೇಮರದ ಬುಡದಲ್ಲಿ ಇಟ್ಟು ಬರುತ್ತಿದ್ದೆ. ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ‘ಹದಿನೈದು ನಿಮಿಷ ಬಿಟ್ಟುಕೊಂಡು ಬಾ’ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ‘ಥ್ಯಾಂಕ್ಸ್’ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು.
ಹೀಗೆ ಒಂದು ದಿನ ಬಿಂದಿಗೆ ಇಟ್ಟು ವಾಪಸ್ಸು ಸ್ಕೂಲಿಗೆ ಹಿಂತಿರುಗದೇ, ಬಿಸಿಲು ಹೆಚ್ಚಾಗಿದ್ದುದ್ದರಿಂದ, ಅಲ್ಲೇ ಸ್ವಲ್ಪ ದೂರದಲ್ಲಿದ್ದ ಮರದ ನೆರಳಿನಲ್ಲಿ ನಿಂತುಕೊಂಡಿದ್ದೆ. ಅವರೇ ಮೊದಲೊಂದು ದಿನ ‘ದೂರ ಮರದ ನೆರಳಿನಲ್ಲಿ ಬೇಕಾದರೆ ನಿಂತಿರು’ ಎಂದು ಹೇಳಿದ್ದರು, ಕೂಡಾ. ಹಾಗೆ ನಿಂತಿದ್ದರಿಂದ, ಅವರು ಅಲ್ಲಿಂದ ಮುಂದಕ್ಕೆ ಸೂಮಾರು ಐವತ್ತು ಮೀಟರ್ ದೂರವಾದರೂ ಬಿಂದಿಗೆಯನ್ನು ತೆಗೆದುಕೊಂಡು ಹೋಗುತ್ತಾರೆಂದು ನನಗವತ್ತು ತಿಳಿಯಿತು. ಹಾಗೆ ಹೋಗುವ ಮೊದಲು ಅವರು ತಮ್ಮ ಷೂಗಳನ್ನು ತಗೆದು, ಬಿಳಿಯಬಣ್ಣದ (ಅವರು ಯಾವಾಗಲೂ ಬಿಳಿಯ ವಸ್ತ್ರಗಳನ್ನೇ ಧರಿಸುತ್ತಿದ್ದರು.) ಪ್ಯಾಂಟನ್ನು ಬಿಚ್ಚಿ, ಅದನ್ನು ಹೊಂಗೇ ಮರದ ಕೊಂಬೆಗೆ ನೇತುಹಾಕುತ್ತಿದ್ದರು. ನಂತರ ಮತ್ತೆ ಸಾಕ್ಸ್ ತೊಡದೆ ಷೂಗಳನ್ನು ಮಾತ್ರ ಧರಿಸಿ ತಂಬಿಗೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ತಿರುಗಿ ಬಂದು ಷೂ ತಗೆದು, ಪ್ಯಾಂಟ್ ತೊಟ್ಟು ನಂತರ ಸಾಕ್ಸ್, ಷೂ ತೊಟ್ಟುಕೊಂಡು ಬರುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ನಾನು ಹೋಗಿ ಖಾಲಿ ಬಿಂದಿಗೆಯನ್ನು ತಗೆದುಕೊಂಡು ಬರುತ್ತಿದ್ದೆ. ಕೆಂಪಗೆ ಸಲಕ್ಷಣವಾಗಿದ್ದ ಅವರು, ಬಿಳಿಯ ಚಡ್ಡಿ, ಷರ್ಟ್, ಷೂಗಳನ್ನು ಮಾತ್ರ ಧರಿಸಿ ಕೈಯಲ್ಲಿ ತಂಬಿಗೆ ಹಿಡಿದುಕೊಂಡು ಹೋಗುವುದನ್ನು ಈಗ ಚಿತ್ರಿಸಿಕೊಂಡರೆ ನಗೆ ಬರುವ ಬದಲು ಅಯ್ಯೋ ಎನ್ನಿಸುತ್ತದೆ!
ಒಂದು ದಿನ ಹಾಗೆ ಅವರು ವಾಪಸ್ಸು ಬಂದ ಕೆಲವೇ ನಿಮಿಷಗಳಲ್ಲಿ ಮತ್ತೆ ‘ಮಾನಿಟರ್’ ಎಂದು ಕೂಗಿದರು. ನಾನು ಒಳಗೆ ಹೋದೊಡನೆ ಬಾಗಿಲನ್ನು ಭದ್ರಪಡಿಸಲು ಹೇಳಿದರು. ನಂತರ ತಮ್ಮ ಪ್ಯಾಂಟನ್ನು ಕಳಚಿ, ನನ್ನ ಕೈಗೆ ಕೊಡುತ್ತಾ ‘ಅದರಲ್ಲಿ ಇರುವೆಗಳು ಸೇರಿಕೊಂಡಿವೆ. ಎಲ್ಲವನ್ನು ಹುಡುಕಿ ತೆಗೆದುಬಿಡು’ ಎಂದು ಹೇಳುತ್ತಲೇ, ತೊಡೆ, ಕುಂಡಿ, ಸೊಂಟದ ಕಡೆಗೆಲ್ಲಾ ಫಟ್ ಫಟ್ ಎಂದು ಹೊಡೆದುಕೊಳ್ಳುತ್ತಾ ಇರುವೆಗಳ ಸಂಹಾರಕಾರ್ಯದಲ್ಲಿ ನಿರತರಾಗಿದ್ದರು.
ನಾನು ಚೆನ್ನಾಗಿ ಕೊಡವಿಕೊಟ್ಟ ಪ್ಯಾಂಟನ್ನು ಮತ್ತೊಮ್ಮೆ ಪರಿಶೀಲಿಸಿ ಹಾಕಿಕೊಂಡರು. ಬಾಗಿಲು ತಗೆದು ನಾನು ಹೊರಟು ನಿಂತಾಗ ನನ್ನನ್ನು ಹತ್ತಿರಕ್ಕೆ ಕರೆದು, ಪ್ರೀತಿಯಿಂದ ತಲೆ ಸವರುತ್ತಾ ‘ಥ್ಯಾಂಕ್ಯೂ ಮೈ ಚೈಲ್ಡ್, ಥ್ಯಾಂಕ್ಯೂ ವೆರಿಮಚ್. ಬಟ್ ಐ ಯಾಮ್ ವೆರಿ ಸಾರಿ. ನಿನ್ನಿಂದ ಈ ಕೆಲಸ ಮಾಡಿಸಿಕೊಂಡಿದ್ದಕ್ಕೆ’ ಎಂದರು. ನನಗೆ ಏನು ಹೇಳಬೇಕೆಂದು ಗೊತ್ತಿರಲಿಲ್ಲ. ಸುಮ್ಮನೆ ಹೊರಗೆ ಬಂದೆ. ನಾನು ‘ಸ್ಸಾರಿ’ ಎಂಬ ಪದವನ್ನು ಅವತ್ತೇ ಮೊದಲು ಕೇಳಿದ್ದು! ಆದರೆ ಅವರು ನನ್ನ ತಲೆಯನ್ನು ಸವರಿ ಮಾತನಾಡಿಸಿದ್ದು ನನಗೆ ಖುಷಿಯೆನ್ನಿಸಿತ್ತು. ಸುಮಾರು ಹೊತ್ತು ಆಗಾಗ ನನ್ನ ತಲೆಯನ್ನು ನಾನೇ ಸವರಿಕೊಳ್ಳುತ್ತಿದ್ದೆ!
ನನ್ನ ಈ ಬಗೆಯ ಕೆಲಸಕ್ಕಾಗಿ ಪ್ರಾರಂಭದಲ್ಲಿ ಬೇರೆ ಹುಡುಗರು ನನ್ನನ್ನು ‘ಚೆಂಬು’ ಎಂದು ಹೀಗಳೆಯುತ್ತಿದ್ದರು. ಹೀಗೆ ನನ್ನನ್ನು ‘ಚೆಂಬು’ ಎಂದು ಹೀಗಳೆದವರಿಬ್ಬರನ್ನು, ಗಲಾಟೆ ಮಾಡಿದವರ ಪಟ್ಟಿಯಲ್ಲಿ ಸೇರಿಸಿ ಚೆನ್ನಾಗಿ ಏಟು ಕೊಡಿಸಿದ್ದರಿಂದ, ನಂತರ ಯಾರೂ ಹಾಗೆ ಕರೆಯುವ ಸಾಹಸ ಮಾಡಲಿಲ್ಲ!
ಇಪ್ಪತ್ತೈದು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶದ ಶಾಲೆಗಳು ಎದುರಿಸುತ್ತಿದ್ದ ನೂರಾರು ಸಮಸ್ಯೆಗಳಲ್ಲಿ ಟಾಯಿಲೆಟ್ ಸಮಸ್ಯೆ ಒಂದು ಮಾತ್ರ. ಅಂದು ವೆಂಕಟಪ್ಪನವರು ಎದುರಿಸುತ್ತಿದ್ದ ಸಮಸ್ಯೆಯನ್ನು ಎಲ್ಲಾ ಭಾಗದ ಶಾಲೆಗಳ ಬೇರೆ ಬೇರೆ ಉಪಾಧ್ಯಾಯರೂ ಎದುರಿಸಿದ್ದಾರೆ. ಮಹಿಳಾ ಶಿಕ್ಷಕಿಯರ ಮತ್ತು ವಿದ್ಯಾರ್ಥಿನಿಯರ ಕಷ್ಟವನ್ನಂತೂ ಹೇಳುವಂತೆಯೇ ಇಲ್ಲ. ಇಂದೂ ಆ ಸಮಸ್ಯೆ ಪೂರ್ಣವಾಗೇನೂ ತೊಲಗಿಲ್ಲ. ಎಲ್ಲಾ ಶಾಲೆಗಳ ಬಳಿ ಶೌಚಾಲಯಗಳನ್ನು ಸರ್ಕಾರ ನಿರ್ಮಿಸಿದೆಯಾದರೂ ಅದರ ನಿರ್ವಹಣೆ ಮಾತ್ರ ಚಿಂತಾಜನಕವಾಗಿದೆ. ಎಷ್ಟೋ ಶಾಲೆಗಳಲ್ಲಿ ನೀರಿಲ್ಲದೆ, ಇಡೀ ಶೌಚಾಲಯವೇ ತಿಪ್ಪೆಗುಂಡಿ ಆಗಿರುವ ನಿದರ್ಶನಗಳಿವೆ. ಇಂತಹ ಬರ್ಬರವಾದ ಶೈಕ್ಷಣಕ ಪರಿಸರದಿಂದ ಹೇಗೋ ಶಿಕ್ಷಣ ಮುಗಿಸಿ ಹೊರ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾಗಿರುವುದು ಮಾತ್ರ ವಿಪರ್ಯಾಸ!
ಸೈಕಲ್ ಲಿಫ್ಟ್
ಶ್ರೀ ವೆಂಕಟಪ್ಪನವರಿಗೆ ನಾನೊಮ್ಮೆ ಸೈಕಲ್ಲಿನಲ್ಲಿ ಲಿಫ್ಟ್ ಕೊಡುವ ಅವಕಾಶ ಬಂದಿತ್ತು. ಕುಂದೂರುಮಠದಿಂದ ಸುಮಾರು ಹತ್ತು ಹದಿನೈದು ಕಿಲೋಮೀಟರ್ ದೂರದ ಒಂದು ಊರು (ಅದರ ಹೆಸರು ನೆನಪಿಗೆ ಬರುತ್ತಿಲ್ಲ). ಅಲ್ಲಿದ್ದ, ವೆಂಕಟಪ್ಪನವರ ಬಂಧುಗಳೊಬ್ಬರು ತೀರಿ ಹೋಗಿದ್ದರು. ಸ್ಕೂಲಿನಲ್ಲಿದ್ದ ಅವರಿಗೆ, ವಿಷಯ ಟೆಲಿಗ್ರಾಂ ಮೂಲಕ ತಿಳಿಯಿತು. ಆದರೆ ಬಸ್‌ಗಳಾಗಲೀ ಬೇರಾವ ವಾಹನಗಳಾಗಲೀ ಇಲ್ಲದ ಆ ಊರಿಗೆ ಹೋಗುವುದು ಹೇಗೆ? ಬಸ್ ಇರಲಿ, ಒಂದು ಒಳ್ಳೆಯ ಜೆಲ್ಲಿ ರಸ್ತೆಯೂ ಇರಲಿಲ್ಲ. ಅವರು ಹೇಗಾದರೂ ಮಾಡಿ ಆ ಊರು ತಲುಪಿದರೆ, ಸಂಜೆ ಅಲ್ಲಿಂದ ಹಾಗೇ ಹಾಸನಕ್ಕೆ ಹೋಗುವುದು, ಎಂಬುದು ಅವರ ಅಭಿಪ್ರಾಯವಾಗಿತ್ತು. ಕೊನೆಗೆ ಪಿ.ಟಿ. ಮೇಷ್ಟ್ರು ಮತ್ತು ನಾನು ಒಂದು ಸೈಕಲ್ಲಿನಲ್ಲಿ ಮತ್ತು ಅವರು ಒಂದು ಸೈಕಲ್ಲಿನಲ್ಲಿ ಅಲ್ಲಿಗೆ ಹೋಗುವುದು. ಅಲ್ಲಿಂದ ವಾಪಸ್ ಬರುವಾಗ ನಾನು ಮತ್ತು ಪಿ.ಟಿ. ಮೇಷ್ಟ್ರು ಎರಡೂ ಸೈಕಲ್‌ಗಳಲ್ಲಿ ವಾಪಸ್ ಬರುವುದು ಎಂದು ತೀರ್ಮಾನವಾಯಿತು. ಇದ್ದುದರಲ್ಲಿಯೇ ಒಂದು ಒಳ್ಳೆಯ ಸೈಕಲ್ಲನ್ನು ಹುಡುಗನೊಬ್ಬನಿಂದ ಹೆಡ್ಮಾಸ್ಟರಿಗೆಂದು ತೆಗೆದುಕೊಳ್ಳಲಾಯಿತು. ಇನ್ನೊಂದು ಸುಮಾರಾಗಿದ್ದ ಸೈಕಲ್ಲಿನಲ್ಲಿ ಪಿ.ಟಿ. ಮೇಷ್ಟ್ರು ಮತ್ತು ನಾನು ಡಬಲ್ ರೈಡ್‌ನಲ್ಲಿ ಹೊರಟೆವು. ಸೈಕಲ್ ಅಭ್ಯಾಸವೇ ತಪ್ಪಿ ಹೋಗಿದ್ದ ವೆಂಕಟಪ್ಪನವರು ಪ್ರಾರಂಭದಲ್ಲಿ ಕಷ್ಟಪಟ್ಟರೂ ಹೇಗೋ ಸುಧಾರಿಸಿಕೊಂಡು ಸೈಕಲ್ ತುಳಿದು, ಊರನ್ನೂ ತಲುಪಿಬಿಟ್ಟರು. ಆದರೆ ಅವರಿಗೆ ನಮ್ಮನ್ನು ಹಾಗೆಯೇ ಕಳುಹಿಸಲು ಇಷ್ಟವಿರಲಿಲ್ಲ. ಇನ್ನು, ಸಾವು ಸಂಭವಿಸಿರುವ ಅವರ ಬಂಧುಗಳ ಮನೆಯಲ್ಲಿ ತಿನ್ನಲು ಅಪೇಕ್ಷಿಸುವಂತಿಲ್ಲ. ಪಿ.ಟಿ. ಮೇಷ್ಟ್ರೇನೋ ‘ಬೇಡ ಬಿಡಿ ಸಾರ್, ನಾವು ಹೋಗುತ್ತೇವೆ. ಅಲ್ಲಿಯೇ ಹೋಗಿ ನಾವು ತಂದಿರುವ ಊಟವನ್ನೇ ಮಾಡುತ್ತೇವೆ’ ಎಂದರು. ಆದರೆ ವೆಂಕಟಪ್ಪನವರು ಅಂದು ಹೇಳಿದ ಪ್ರತಿಯೊಂದು ಪದಗಳೂ ನನಗೆ ಚೆನ್ನಾಗಿ ನೆನಪಿವೆ. ‘ನಿಮ್ಮದು ಹೇಗೋ ನಡೆಯುತ್ತದೆ ರೀ. ಆದರೆ, ನನಗೆ ನನ್ನ ವಿದ್ಯಾರ್ಥಿಯದೇ ಚಿಂತೆ. ಅಷ್ಟು ದೂರ ನನಗಾಗಿ ಸೈಕಲ್‌ನಲ್ಲಿ ಬಂದಿದ್ದಾನೆ. ಈ ಕಡೆಯಿಂದ ಸೈಕಲ್ ಬೇರೆ ತುಳಿಯಬೇಕು..... ನೀವು ಒಂದು ಕೆಲಸ ಮಾಡಿ. ನಾನು ಹೊಡೆದುಕೊಂಡು ಬಂದ ಸೈಕಲ್ಲನ್ನು ಅವನಿಗೆ ಕೊಟ್ಟು ಬಿಡಿ. ಅದು ತುಳಿಯಲು ಸುಲಭವಾಗಿರುವಂತಿದೆ’ ಎಂದರು. ತಕ್ಷಣ ಯಾರನ್ನೋ ವಿಚಾರಿಸಿ ಅಲ್ಲಿದ್ದ ಒಂದು ಗೂಡಂಗಡಿಯಿಂದ ನಾಲ್ಕು ಬಾಳೇಹಣ್ಣನ್ನು ತೆಗೆದುಕೊಟ್ಟು, ‘ತಿಂದು ನೀರು ಕುಡಿದು ಹೊರಡಿ’ ಎಂದು ಹೇಳಿದರು. ಆದರೆ ಬರುವಾಗ, ಆ ಊರಿನಿಂದ ಹೊರಗೆ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಪಿ.ಟಿ. ಮೇಷ್ಟ್ರು ನಾನು ಹೊಡೆಯುತ್ತಿದ್ದ ಸೈಕಲ್ಲನ್ನು ತಾವು ತೆಗೆದುಕೊಂಡರು! ನಾನೇನೂ ಮಾತನಾಡುವಂತಿರಲಿಲ್ಲ. ವೆಂಕಟಪ್ಪನವರ ಮಾನವೀಯತೆ, ಶಿಷ್ಯ ಪ್ರೀತಿಯನ್ನು ನಾನು ಹಲವಾರು ಬಾರಿ ಕಂಡಿದ್ದೆ. ಅಂದೂ ಕಂಡೆ. ಆದರೆ ಪಿ.ಟಿ. ಮೇಷ್ಟ್ರುಂತಹ ಧೂರ್ತರೂ ಶಿಕ್ಷಣಕ್ಷೇತ್ರದಲ್ಲಿ ಇದ್ದಾರೆ ಎಂಬ ಸತ್ಯ ಮಾತ್ರ ಅಂದೇ ಗೊತ್ತಾಗಿದ್ದು!

No comments:
Post a Comment