Monday, March 30, 2009

ಮೂರು ಸೋಮಾರಿಗಳ ಕಥೆಯ ಸಮಸ್ಯೆಗೆ ಅಜ್ಜ ಹೇಳಿದ 'ಪರಿಹಾರ'

ಪರಿಹಾರ ತಿಳಿದುಕೊಳ್ಳುವ ಮೊದಲು ಒಂದಿಷ್ಟು ಮಾತುಕಥೆಯಾಡೋಣ.
ನನ್ನ ಮಗಳು ನನ್ನನ್ನು ಆಗಾಗ ಕಥೆ ಹೇಳುವಂತೆ ಪೀಡಿಸುತ್ತಿರುತ್ತಾಳೆ. ಹೇಳಿದ ಕಥೆಗಳನ್ನೇ ಮತ್ತೆ ಮತ್ತೆ ಹೇಳೋದು, ಸ್ವಲ್ಪ ಬದಲಾಯಿಸಿ ಹೇಳೋದು, ಹೊಸ ಕಥೆಗಳನ್ನು ಸೃಷ್ಟಿ ಮಾಡಿ ಹೇಳೊದು... ಹೀಗೆ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿರುತ್ತೇನೆ. ಇನ್ನು ನನಗೆ ಅನುಕೂಲವಾದ ಸಮಯವನ್ನು ನೋಡಿಕೊಂಡು ಅವಳಿಗೆ 'ಒಂದು ಕಥೆ ಹೇಳುತ್ತೇನೆ' ಎಂದು ಪುಸಲಾಯಿಸಿ, ನನ್ನ ಕೆಲಸ ಹಗುರ ಮಾಡಿಕೊಳ್ಳುವುದು ಉಂಟು. ಮೊನ್ನೆ ಹಬ್ಬದ ಹಿಂದಿನ ದಿನ ಊರಿಗೆ ಹೋಗಿದ್ದೆವು. ಬಸ್ ಸ್ಟಾಪಿನಿಂದ ನಮ್ಮ ತೋಟದ ಮನೆಗೆ ಒಂದು ಕಿಲೋಮೀಟರ್ ಆಗುತ್ತದೆ. ಮೊದಲು ಅವಿಭಕ್ತ ಕುಟುಂಬವಾಗಿದ್ದಾಗ ಯಾರಾದರು ಗಾಡಿ ಅಥವಾ ಸೈಕಲ್ ಅಥವಾ ಬೈಕ್ ತಂದು ಬಸ್ ಸ್ಟ್ಯಾಂಡಿನಿಂದ ಕರೆದೊಯ್ಯುತ್ತಿದ್ದರು. ಈಗ ಅದೆಲ್ಲಾ ಇಲ್ಲ. ಜೊತೆಗೆ ಊರಿನ ತುಂಬಾ ಆಟೋಗಳು ಇವೆ. ನಾನೊಮ್ಮೆ ಒಬ್ಬ ಆಟೋದವನನ್ನು 'ಇಷ್ಟೊಂದು ಆಟೋ ಇದ್ದಾವಲ್ಲ, ನಿಮಗೆ ಏನಾದರು ಗಿಟ್ಟುತ್ತದೆಯೇ?' ಎಂದು ಕೇಳಿದ್ದೆ. ಅದಕ್ಕೆ ಅವನು 'ಆಟೋದಿಂದ ನನಗಂತೋ ಲಾಭವಾಗಿಲ್ಲ. ಎತ್ತಿನ ಗಾಡಿ ಅಥವಾ ಬೈಕ್ ಅಥವಾ ಸ್ಕೂಟರ್ ಇಟ್ಟುಕೊಳ್ಳುವ ಬದಲು ಆಟೋ ಇಟ್ಟುಕೊಂಡಿದ್ದೇನೆ, ಅಷ್ಟೆ. ಬಿಡುವಾದಾಗ ಬಾಡಿಗೆಗೆ ಓಡಿಸುತ್ತೇನೆ. ಇದ್ದಂತೆ ನಾನು ನಮ್ಮ ಮನೆಯವರು ಓಡಾಡುವುದಕ್ಕೆ ಮಾತ್ರ ಬಳಸಿಕೊಳ್ಳುತ್ತೇನೆ' ಎಂದು ಹೇಳಿದ್ದ!
ಇಂತಹ ನಾನ್-ಪ್ರೊಫೆಷನಲ್(!) ಆಟೋಡ್ರೈವರುಗಳಿಂದಾಗಿ ನನಗೆ ಅನುಕೂಲವಾಗಿರುವುದಕ್ಕಿಂತ ಅನಾನುಕೂಲವಾಗಿರುವುದೇ ಹೆಚ್ಚು! ಏಕೆಂದರೆ ನಾವು ಕರೆದಾಗಲೆಲ್ಲಾ ಅವರು ಬರದಿರುವುದೇ ಹೆಚ್ಚು. 'ಅಣ್ಣ ಮಳೆ ಬಂದು ರಸ್ತೆಯೆಲ್ಲಾ ಕೆಸರಾಗಿದೆ' ಎಂದೋ, 'ಡೀಸೆಲ್ ಇಲ್ಲ' ಎಂದೋ, 'ಗಾಡಿ ರಿಪೇರಿ' ಎಂದೋ ಸುಲಭವಾಗಿ ಹೇಳಿ ತಪ್ಪಿಸಿಕೊಂಡುಬಿಡುತ್ತಾರೆ. ಅಂತಹ ದಿನಗಳಲ್ಲಿ ನಮಗೆ ನಮ್ಮ ಕಾಲುಗಳೇ ಗತಿ! ಬಂದರೂ ಕೇಳಿದಷ್ಟು ಕೊಡಬೇಕು. ಬೆಂಗಳೂರಿನ ಆಟೋಗಳಿಗಿಂತ ಐದು ಆರು ಪಟ್ಟು ಹಣ ಕೊಟ್ಟಿರುವುದೂ ಉಂಟು. ಒಂದು ಕಿಲೋಮೀಟರ್ ದೂರ ಕ್ರಮಿಸುವುದಕ್ಕೆ ಕನಿಷ್ಠ ಮೂವತ್ತು ಗರಿಷ್ಠ ಐವತ್ತು ರೂಪಾಯಿವರೆಗೂ ನಾನು ಕೊಟ್ಟಿದ್ದೇನೆ! ಬೆಂಗಳೂರಿನಲ್ಲಿ ಮಿನಿಮಮ್ (ಎರಡು ಕಿಲೋಮೀಟರ್) ಹದಿನಾಲ್ಕು ರುಪಾಯಿ! ಮೊನ್ನೆ ಯುಗಾದಿಯ ದಿನವೇ, ಈ ಆಟೋ ಡ್ರೈವರುಗಳ ಜೂಜಾಟದ ಹುಚ್ಚಿನಿಂದಾಗಿ, ನಾನು ಹತ್ತು ಕಿಲೋಮೀಟರ್ ನಡೆಯಬೇಕಾಯಿತು!
ಮೊನ್ನೆಯೂ ಹಾಗೇ ಆಯಿತು. ಯಾವ ಆಟೋದವನು ಬರಲಿಲ್ಲ. ದಿನಾ ಬೆಂಗಳೂರಿನಲ್ಲಿ ಮೂರು ಕಿಲೋಮೀಟರ್ ವಾಕಿಂಗ್ ಮಾಡುವ ನನ್ನ ಹೆಂಡತಿ ಬ್ಯಾಗ್ ಹಿಡಿದು ನಡೆಯುವುದು ಕಷ್ಟ ಎಂದು ಗೊಣಗಿದಳು. ಇನ್ನು ನನ್ನ ಮಗಳು 'ಎತ್ತಿಕೊಂಡರಷ್ಟೆ' ಎಂದು ಬಿಟ್ಟಳು. ಅವಳು ನಡೆಯುವುದಕ್ಕೆ ಚಿಕ್ಕ ಮಗುವಾದರೂ ಎತ್ತಿಕೊಳ್ಳುವುದಕ್ಕೆ ಖಂಡಿತಾ ದೊಡ್ಡ ಮಗು!
ಸರಿ ಅದಕ್ಕೆ ಒಂದು ಉಪಾಯ ಮಾಡಿದೆ. 'ನಾನು ಕಥೆ ಹೇಳುತ್ತೇನೆ. ಅದನ್ನು ಕೇಳುತ್ತಾ ಹೂಂಗುಟ್ಟುತ್ತಾ ನಡೆದುಕೊಂಡು ಬಾ' ಎಂದು ಪುಸಲಾಯಿಸಿದೆ. ಅವಳಿಗೆ ಖುಷಿಯಾಯಿತು. ಆದರೆ ಒಂದು ಕಂಡಿಷನ್ ಹಾಕಿದಳು 'ಇದುವರೆಗೆ ಹೇಳಿರುವ ಕಥೆಯನ್ನು ಮತ್ತೆ ಹೇಳಬಾರದು' ಎಂದು!
ನನಗೆ ಪೀಕಲಾಟಕ್ಕೆ ಬಂತು. ಈ ಕಥೆಗಳೇ ಹಾಗೆ. ನಮಗೆ ಬೇಕಾದಾಗ ನೆನಪಿಗೆ ಬರುವುದಿಲ್ಲ! ಆಗ ನನ್ನ ಕೈಹಿಡಿದಿದ್ದು ಈ ಸೋಮಾರಿಗಳ ಕಥೆ! ಸಾಧ್ಯವಾದಷ್ಟು ಅವಳಿಗೆ ಅರ್ಥವಾಗುವಂತೆ ಸರಳ ಮಾಡಿಕೊಂಡು ನಿಧಾನವಾಗಿ ಕಥೆ ಹೇಳುತ್ತಾ ನಡೆಯತೊಡಗಿದೆ. ಭೂತಗನ್ನಡಿಯನ್ನು ಟಿ.ವಿ. (ದೂರದರ್ಶನ) ಎಂದು, ಹಾರುವ ಕುದುರೆಯನ್ನು ಎಲಿಕ್ಯಾಪ್ಟರ್ ಎಂದು, ಮಂತ್ರದಂಡವನ್ನು ಮ್ಯಾಜಿಕ್ ಸ್ಟಿಕ್ ಎಂದು ಹೀಗೇ ಏನೇನೋ.... ಅಂತೂ ಕಥೆಯನ್ನು ಹೇಳಿಬಿಟ್ಟೆ. ಕೊನೆಗೆ ಆ ಹುಡುಗಿಯನ್ನು ಯಾರಿಗೆ ಕೊಟ್ಟು ಮದುವೆ ಮಾಡಿಸುವುದು? ಎಂಬ ಪ್ರಶ್ನೆಯನ್ನು ಕೇಳಿದೆ. ನನ್ನ ಹೆಂಡತಿ ತಲೆ ಕೆಡಿಸಿಕೊಳ್ಳತೊಡಗಿದಳು. ಆದರೆ ನನ್ನ ಮಗಳು ಹಿಂದೆ ಮುಂದೆ ಯೋಚಿಸದೆ 'ಆ ಮ್ಯಾಜಿಕ್ ಸ್ಟಿಕ್ ಇತ್ತಲ್ಲ, ಅವನಿಗೆ ಕೊಡಬೇಕು' ಎಂದು ಉತ್ತರಿಸಿಬಿಟ್ಟಳು. ಉತ್ತರ ತಪ್ಪಿತ್ತು. ಆದರೂ ನನಗೆ ಖುಷಿಯಾಗಿದ್ದು ನನ್ನ ಮಗಳ ನನ್ನ ಕಥೆಗಳನ್ನು ಸೀರಿಯಸ್ಸಾಗಿ ಕೇಳುತ್ತಿದ್ದಾಳಲ್ಲ, ಈ ಜಾನಪದ ಕಥೆಗಳಿಗೆ ಮಕ್ಕಳನ್ನು ಚಿಂತನೆಗೆ ತಳ್ಳಬಲ್ಲ ಶಕ್ತಿ ಇದೆಯಲ್ಲಾ ಎಂಬ ಕಾರಣಕ್ಕೆ. ಕೊನೆಗೆ ಆ ಉಳಿದಿಬ್ಬರೂ ಜಗಳ ತೆಗೆಯುತ್ತಾರೆ ಎಂಬುದನ್ನು ಅವಳಿಗೆ ವಿವರಿಸಿ ಹೇಳಿ ಸಮಸ್ಯೆಗೆ ಪರಿಹಾರವನ್ನೂ ಹೇಳಿದೆ. ಅಷ್ಟರಲ್ಲಿ ನಾವು ನಮ್ಮ ಮನೆ ಬಾಗಿಲಿಗೆ ಬಂದಿದ್ದಾಯಿತು!
ನನಗೆ ಚೆನ್ನಾಗಿ ನೆನಪಿದೆ. ನನ್ನಜ್ಜ ಈ ಕಥೆಯನ್ನು ಮೊದಲ ಬಾರಿಗೆ ನಮಗೆ ಹೇಳಿದಾಗ ಅಲ್ಲಿದ್ದ ನಾವೆಲ್ಲಾ ಮೂರು ಭಾಗಗಳಾಗಿ ಒಬ್ಬೊಬ್ಬರೂ ಒಬ್ಬಬ್ಬರ ಪಕ್ಷ ವಹಿಸಿ ವಾದ ಮಂಡಿಸಿದ್ದೂ ಉಂಟು. ಆದರೆ ನಮ್ಮೆಲ್ಲಾ ವಾದಗಳನ್ನು ಖಂಡತುಂಡವಾಗಿ ನಿರಾಕರಿಸಿ ಒಂದೇ ಸಾಲಿನಲ್ಲಿ ಉತ್ತರ ಹೇಳಿದ್ದರು ನನ್ನ ಅಜ್ಜ. ನಂತರ ನಮ್ಮ ಬಂಧುಬಳಗದ ಮಕ್ಕಳಿಗೆಲ್ಲಾ ಕಥೆ ಹೇಳಿ ನಿಜವಾದ ಉತ್ತರನಮಗೆ ಗೊತ್ತಿದ್ದರಿಂದ ಹೆಮ್ಮೆಯಿಂದ ಬೀಗಿದ್ದೂ ಇದೆ. ಈಗ ನನ್ನ ಮಗಳೂ ಅದನ್ನೇ ಮಾಡುತ್ತಿದ್ದಾಳೆ.
ಈಗ ನಮ್ಮ ಸಮಸ್ಯೆಗೆ ಬರೋಣ. ಆ ಹುಡುಗಿಗೆ ಒಬ್ಬ ಯೋಗ್ಯನೊಡನೆ ಮದುವೆ ಮಾಡಿಸಿ ಆ ಊರಿನಲ್ಲಿ ಕದಡಿರುವ ಶಾಂತಿಯನ್ನು ನಾವು ಮರುಸ್ಥಾಪಿಸಬೇಕಾಗಿದೆ! ಕಥೆಯಲ್ಲಿ ಬರುವ ಇತರ ಪಾತ್ರಗಳ ಕಡೆಗೆ ಗಮನ ಹರಿಸೋಣ. ಈ ಮೂರು ಸೋಮಾರಿಗಳ ಪಾತ್ರಗಳನ್ನು ಬಿಟ್ಟರೆ ಕಥೆಯಲ್ಲಿ ಪ್ರಮುಖವಾದ ಪಾತ್ರ ಬರೋದು ಅಂಗಡಿ ಇಟ್ಟುಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಿರುವ ಪರವೂರಿನ ಕುಂಟ! ಪರಸ್ಪರ ಉಪಯೋಗ ಬರುವ ಮೂರು ಸಾಮಾನುಗಳನ್ನು ಆತ ಈ ಸೋಮಾರಿಗಳಿಗೆ ಹೊಂದಿಸಿಕೊಟ್ಟಿದ್ದರಿಂದಲೇ ಆ ಹುಡುಗಿಗೆ ಜೀವ ಉಳಿಸಲು ಸಾಧ್ಯವಾಯಿತು! ಆದ್ದರಿಂದ ಯಾರೋ ಬುದ್ದಿವಂತ ಸೂಚಿಸಿದ್ದರಿಂದ, ಹಾಗೂ ಹುಡುಗಿಗೆ ಒಬ್ಬ ಯೋಗ್ಯ ವರ ಸಿಗುವುದರಿಂದ ಊರವರು ಆ ಹುಡುಗಿಯನ್ನು ಆ ಸ್ವಾವಲಂಬಿ ಕುಂಟನಿಗೆ ಕೊಟ್ಟು ಮದುವೆ ಮಾಡಿಸುತ್ತಾರೆ. ಅದರಿಂದಾಗಿ ಊರಿನಲ್ಲಿ ಉಂಟಾಗಿದ್ದ ಮೂರು ಪಾರ್ಟಿಗಳು ನಾಶವಾಗಿ ಎಲ್ಲರೂ ಒಂದಾಗುತ್ತಾರೆ.
ನಾವು ಮೊದಲ ಬಾರಿ ಈ ಉತ್ತರ ಕೇಳಿದಾಗ ಬಹಳ ನಿರಾಶೆಗೊಂಡಿದ್ದೆವು! ಆದರೆ ಕಾಲ ಕಳೆದಂತೆ ನಮ್ಮ ಯೋಚನಾ ಶಕ್ತಿ ಬಲಿತಂತೆ ಅದೇ ಸರಿ ಎನ್ನಿಸಲು ಶುರುವಾಯಿತು, ಅದೇ ಸರಿ ಕೂಡಾ!. ಅಂಗವಿಕಲನಾದರೂ ಬಹುತೇಕ ಅಂಗವಿಕಲರಂತೆ ಭಿಕ್ಷಾಟನೆಗೆ ಇಳಿಯದೆ, ಅಂಗಡಿ ಇಟ್ಟುಕೊಂಡು ಸ್ವಾವಲಂಬಿಯಾಗಿರುವ ಆತ ಮಾದರಿ ಮನುಷ್ಯ. ಜೀವನದಲ್ಲಿ ಆಕಸ್ಮಿಕವಾಗಿ ಸಿಕ್ಕ ವಸ್ತುಗಳಿಂದಾಗಿ ಹುಡುಗಿಗೆ ಮರುಜೀವ ನೀಡಲು ಕಾರಣರಾದ ಸೋಮಾರಿಗಳಿಗಿಂತ ಒಬ್ಬ ಸ್ವಾವಲಂಬಿ ಯುವಕ ಹೆಚ್ಚು ಅರ್ಹನಾಗುತ್ತಾನೆ.
ಜೊತೆಗೆ ಮಕ್ಕಳಲ್ಲಿ ಅಂಗವಿಕಲರ ಬಗ್ಗೆ ಒಂದು ಒಳ್ಳೆಯ ಯೋಚನೆಯನ್ನು, ಸದಾಶಯವನ್ನು ಮೂಡಿಸಲು, ಎಲ್ಲ ಮಕ್ಕಳಂತೆ ಅವರನ್ನು ಕಾಣಲು ಇಂತಹ ಕಥೆಗಳು ನೆರವಾಗುತ್ತವೆ ಎಂಬುದು ನನ್ನ ಅಭಿಪ್ರಾಯ.
ಯುಗಾದಿ ಹಬ್ಬದ ದಿನ ಸಂಜೆ ನನ್ನ ಮಗಳು ನನ್ನ ತಾಯಿಗೆ ಈ ಕಥೆಯನ್ನು ಹೇಳಿ ಪ್ರಶ್ನೆಯನ್ನೂ ಕೇಳಿದಳು! ಉತ್ತರ ಗೊತ್ತಿದ್ದರೂ ನನ್ನ ತಾಯಿ ಅವಳನ್ನೇ ಹೇಳುವಂತೆ ಪುಸಲಾಯಿಸಿದರು. ಅವಳು ಉತ್ತರ ಮಾತ್ರ ಹೇಳದೆ, ಆ ಮೂವರಲ್ಲಿ ಒಬ್ಬರ ಹೆಸರು ಹೇಳಿ ಅವನಿಗೆ ಮದುವೆ ಮಾಡಿಕೊಟ್ಟರೆ ಇನ್ನಿಬ್ಬರಿಗೆ ಏಕೆ ಬೇಸರವಾಗುತ್ತದೆ, ಏಕೆ ಕುಂಟನಿಗೆ ಮದುವೆ ಮಾಡಿಕೊಡಬೇಕು? ಅದರಿಂದ ಊರಿನಲ್ಲಿ ಜಗಳ ನಿಲ್ಲುತ್ತದೆ... ಇನ್ನೂ ಏನೇನೋ ಹೇಳುತ್ತಿದ್ದಳು. ನನ್ನ ತಾಯಿ ಖುಷಿಯಿಂದ ಕೇಳುತ್ತಿದ್ದರು!
ಅಂತೂ ನನ್ನ ಕಥೆಯನ್ನು ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಧನ್ಯವಾದಗಳು.

5 comments:

PARAANJAPE K.N. said...

ಸತ್ಯನಾರಾಯಣರೆ,
ಮಗಳಿಗೆ ಕಥೆ ಹೇಳುವ ಮೂಲಕ ನಡಿಗೆಯಲ್ಲಿ ಊರಿನ ದಾರಿ ಕ್ರಮಿಸಿದ ಹಾಗೆ ಹಳೆಯ ಕಾಲದಲ್ಲಿ ಅಜ್ಜ೦ದಿರು ಹೇಳುತ್ತಿದ್ದ ಕಥೆಗಳನ್ನು ನೆನಪಿಸಿದ್ದೀರಿ. ಚೆನ್ನಾಗಿದೆ

sunaath said...

ಸತ್ಯನಾರಾಯಣರೆ,
ಒಪ್ಪಿದೆ ನಿಮ್ಮ ಉತ್ತರವನ್ನು!

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮ ಉತ್ತರ ಸರಿ. ಅದೃಷ್ಟದ ಬಲದಿಂದ ಬದುಕಿಸಿದ ಸೊಂಬೇರಿಗಳಿಗಿಂತ ಕುಂಟನಾದರೂ ಸ್ವಾವಲಂಬಿಯಾದವನೇ ಸೂಕ್ತ ವರ. ನಿಮ್ಮ ಮಗಳಿಗೆ ನೀವು ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯಿತು.

shivu said...

ಸತ್ಯನಾರಾಯಣ ಸರ್,

ನಾನು ಎಷ್ಟೋ ಯೋಚಿಸಿದ್ದೆ ಉತ್ತರ ಹೇಳಲು ಹೊಳೆದಿರಲಿಲ್ಲ...ನಿಮ್ಮ ಉತ್ತರ ಈಗ ಸರಿಯೆನಿಸಿದೆ...
ಇನ್ನಷ್ಟು ಬರಲಿ ಇಂಥ ಕತೆಗಳು ನಿಮ್ಮ ಖಜಾನೆಯಿಂದ...
ಧನ್ಯವಾದಗಳು.

Dr.Gurumurthy Hegde said...

ಸತ್ಯನಾರಾಯಣ ಅವರೇ,
ಕಥೆ ತುಂಬಾ ಚೆನ್ನಾಗಿದೆ, ಹೀಗೆ ಬರೆಯುತ್ತಿರಿ