Monday, March 02, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 6

ಸ್ಕೂಲಿಗೆ ಹೊಸ ಕಟ್ಟಡ ಇಂದು ಇಲ್ಲಿ ಕುಳಿತು ನಾನು ಶ್ರೀ ವೆಂಕಟಪ್ಪನವರಲ್ಲಿ ಗುರುತಿಸಬಹುದಾದ ಗುಣವೆಂದರೆ, ಯಾವ ಕಾರಣಕ್ಕೂ ಬೇರೆಯವರನ್ನು ದೂಷಿಸದ ಅವರ ಸ್ವಭಾವ. ಬೇರೆಯವರ ತಪ್ಪುಗಳನ್ನು ಅವರು ಗುರುತಿಸುತ್ತಿದ್ದರು. ಗುರುತಿಸಿ ತಿದ್ದುತ್ತಿದ್ದರು, ಆದರೆ ಅದನ್ನೇ ಜಗಜ್ಜಾಹೀರು ಮಾಡಿ ಅನಾವಶ್ಯಕವಾಗಿ ಪ್ರಚಾರ ಮಾಡುತ್ತಿರಲಿಲ್ಲ. ಬಹುಶಃ ಅವರು ಎದುರಿಸುತ್ತಿದ್ದ ಇಂತಹ ಸಂಕಷ್ಟಗಳಿಂದ ಪಾರಾಗಬೇಕೆಂಬ ಅವರ ನಿತ್ಯ ಹೋರಾಟದ ಫಲವಾಗಿ ಸ್ಕೂಲಿಗೆ ಸ್ವಂತ ಕಟ್ಟಡ ಸಿಗುವ ಕಾಲ ಹತ್ತಿರವಾಯಿತು. ಆಗ ಮಂತ್ರಿಗಳಾಗಿದ್ದ ದೇವೇಗೌಡರು ಸ್ಕೂಲ್, ಆಸ್ಪತ್ರೆ, ಹಾಸ್ಟೆಲ್ ಕಟ್ಟಡಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟಿದ್ದರು. ದುರಂತವೆಂದರೆ, ಸ್ಕೂಲ್ ಕಟ್ಟಡದ ಕಾಮಗಾರಿ ಮುಗಿಯುವ ಮೊದಲೇ ವೆಂಕಟಪ್ಪನವರು ಬೇರೆಡೆಗೆ ವರ್ಗವಾಗಿದ್ದು. ಅವರಿಗೆ ಒಂದು ಕಾಲೇಜನ್ನು ಮುನ್ನಡೆಸುವ ಸರ್ವಸಾಮರ್ಥ್ಯವಿದ್ದರೂ, ಪ್ರಾಂಶುಪಾಲರಾಗಲು ಬೇಕಾದ ಕ್ವಾಲಿಫಿಕೇಷನ್ ಇರಲಿಲ್ಲ. ಕಾಲೇಜು ಬರಲು ಕಾರಣಕರ್ತರಾಗಿ, ಅಷ್ಟೂ ದಿನ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದ ಅವರು, ಬೇರಾವುದೋ ಹೈಸ್ಕೂಲಿಗೆ ವರ್ಗವಾಗಿ ಹೋಗಬೇಕಾಯಿತು. ಕಾನೂನಿಗೆ ಕಣ್ಣಿಲ್ಲ ಎಂಬ ಮಾತು ಇಂತಹ ಘಟನೆಗಳನ್ನು ನೋಡಿಯೇ ಹುಟ್ಟಿಕೊಂಡಿರಬೇಕು! ಹೊಸ ಪ್ರಾಂಶುಪಾಲರು ಬರುವವರೆಗೆ ಹಿರಿಯ ಮೇಷ್ಟ್ರಾಗಿದ್ದ, ಗಾಂಧೀವಾದಿ ಹೆಚ್.ಸಿ. ಅಂದರೆ ಹೊಸಹಳ್ಳಿ ಚನ್ನೇಗೌಡ ಅವರು ಇನ್‌ಚಾರ್ಜ್ ವಹಿಸಿಕೊಂಡರು.
ಚನ್ನೇಗೌಡರು ತುಂಬಾ ಸರಳವಾದ ವ್ಯಕ್ತಿ. ಯಾವಾಗಲೂ ಖಾದಿ ಪ್ಯಾಂಟ್ ಮತ್ತು ಅರ್ಧತೋಳಿನ ಖಾದಿ ಶರ್ಟ್ ಧರಿಸುತ್ತಿದ್ದರು. ಗಣಿತ ಪಾಠ ಮಾಡುತ್ತಿದ್ದ ಅವರು ತುಂಬಾ ಮೆಲ್ಲಗೆ ಮಾತನಾಡುತ್ತಿದ್ದರು. ಅವರು ಅಷ್ಟೊಂದು ಸರಳವಾಗಿ ಇರುತ್ತಿದ್ದುದಕ್ಕೆ, ಅವರ ಬಗ್ಗೆ ಆಗ ಒಂದು ಕಥೆ ಜನಜನಿತವಾಗಿತ್ತು. ಅವರು ಮದುವೆಯಾದ ಹೊಸದರಲ್ಲಿ ತುಂಬಾ ಶೋಕಿದಾರರಾಗಿದ್ದರಂತೆ. ಒಂದು ದಿನ ದುಬಾರಿಯಾದ ಬಟ್ಟೆ, ವಡವೆ ತೊಟ್ಟು ಹೆಂಡತಿಯ ಮನೆಗೆ ಹೋಗುತ್ತಿರಬೇಕಾದರೆ ಕಳ್ಳರು ಅಡ್ಡಗಟ್ಟಿ ಎಲ್ಲವನ್ನೂ ಕಿತ್ತುಕೊಂಡು ಕೇವಲ ಬನಿಯನ್ ಮತ್ತು ಚೆಡ್ಡಿ ಮಾತ್ರ ಬಿಟ್ಟು ಹೋದರಂತೆ. ಅಂದಿನಿಂದ ಅವರು ಸರಳವಾಗಿ ಇರಲು ತೀರ್ಮಾನಿಸಿದರಂತೆ. ಸುಮಾರು ಹತ್ತು ಕಿಲೋಮೀಟರ್ ದೂರದ ಹೊಸಹಳ್ಳಿಯಿಂದ ಅವರು ಸೈಕಲ್ಲಿನಲ್ಲಿ ನಿತ್ಯ ಬಂದು ಹೋಗುತ್ತಿದ್ದರು. ಹೈಸ್ಕೂಲಿನಿಂದ ಕೂಗಳತೆಯ ದೂರದವರೆಗೂ, ಖಾದಿ ಪಂಚೆ ಉಟ್ಟುಕೊಂಡು ಬರುತ್ತಿದ್ದ ಅವರು, ಅಲ್ಲೆ ಯಾವುದಾದರೊಂದು ಮರದ ಮರೆಯಲ್ಲಿ ಸೈಕಲ್ ನಿಲ್ಲಿಸಿ, ಪಂಚೆ ತೆಗೆದು ಪ್ಯಾಂಟ್ ಹಾಕಿಕೊಂಡು ಸ್ಕೂಲಿಗೆ ಬರುತ್ತಿದ್ದರು. ಮತ್ತೆ ಸಂಜೆ ಹೋಗುವಾಗ ಅದೇ ಜಾಗದಲ್ಲಿ ಪ್ಯಾಂಟ್ ತೆಗೆದು ಪಂಚೆ ಉಟ್ಟುಕೊಂಡು ಹೋಗುತ್ತಿದ್ದರು!
ಇವರ ಮೃದುಸ್ವಭಾವದಿಂದಾಗಿ ಕೆಲವು ಮೇಷ್ಟ್ರುಗಳು ಆಗಲೇ ಬಾಲ ಬಿಚ್ಚಲು ಆರಂಭಿಸಿದ್ದರು. ಆಗ ಹೊಸದಾಗಿ ಬಂದ ಪ್ರಾಂಶುಪಾಲರು ಅದಕ್ಷರಾಗಿದ್ದರಿಂದಲೋ ಏನೋ ಇಡೀ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ಆ ವರ್ಷ ನಡೆದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪಾಸಾದವರ ಸಂಖ್ಯೆ ಕೇವಲ ಮೂರು! ಆದ್ದರಿಂದ ಪ್ರಥಮ ಪಿ.ಯು.ಸಿ.ಗೆ ಅಡ್ಮಿಷನ್ ಆದವರೂ ಅದೇ ಮೂರು ಜನ ಮಾತ್ರ! ಅದರಲ್ಲಿ ಒಬ್ಬರು ನಡುವೆಯೇ ಟೀ.ಸಿ. ತೆಗೆದುಕೊಂಡು ಚನ್ನರಾಯಪಟ್ಟಣದ ಕಾಲೇಜಿಗೆ ಸೇರಿಕೊಂಡಿದ್ದರಿಂದ ಕಾಲೇಜನ್ನು ಆಗಲೋ ಈಗಲೋ ಮುಚ್ಚುತ್ತಾರೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಸ್ವತಃ, ಹೈಸ್ಕೂಲಿನ ಕೆಲವು ಮೇಷ್ಟ್ರುಗಳೇ ‘ಈ ಕಾಲೇಜು ತೊಲಗಿದರೆ ಸಾಕು’ ಎನ್ನುತ್ತಿದ್ದುದನ್ನು ನಾನು ಕೇಳಿದ್ದೇನೆ. ಅವರಿಗೂ ಕಾಲೇಜಿನ ಲೆಕ್ಚರರಿಗೂ ಯಾವಾಗಲೂ ಜಗಳಗಳಾಗುತ್ತಿದ್ದವು. ಬಹುಶಃ ಕಾಲೇಜು ಲೆಕ್ಚರರಿಗೆ ಸಿಗುತ್ತಿದ್ದ ಅತಿಯಾದ ಗೌರವದಿಂದ, ಸಣ್ಣ ಮನಸ್ಸಿನ ಕೆಲವು ಮೇಷ್ಟ್ರುಗಳಿಗೆ ಹೊಟ್ಟೆ ಉರಿದಿರಬೇಕು!
ಹೈಸ್ಕೂಲ್ ಬಿಲ್ಡಿಂಗಿಗೆ ಹೆಂಚು ಹೊತ್ತಿದ್ದು
ನಾವು ಒಂಬತ್ತನೇ ತರಗತಿಗೆ ಬಂದಾಗ ಸ್ಕೂಲಿನ ಕಟ್ಟಡ ಮುಗಿಯುತ್ತಾ ಬಂದಿತ್ತು. ಇದ್ದಕ್ಕಿದ್ದಂತೆ ದೇವೇಗೌಡರು ಒಂದು ದಿನ ಉದ್ಘಾಟನೆಗೆ ಬರುತ್ತಾರೆ ಎಂಬ ಸುದ್ದಿ ಹರಡಿತ್ತು. ನೋಡಿದರೆ ಕಟ್ಟಡಕ್ಕೆ ಇನ್ನು ಹೆಂಚನ್ನೇ ಹಾಕಿರಲಿಲ್ಲ! ಉದ್ಘಾಟನೆಗೆ ಮುನ್ನ ಹೆಂಚನ್ನಾದರೂ ಹಾಕಿದರೆ, ಕಿಟಕಿ ಬಾಗಿಲು ಆಮೇಲೆ ಮಾಡಿಕೊಳ್ಳಬಹುದೆಂದು ಮಠದ ಸ್ವಾಮೀಜಿಯೂ, ಅಲ್ಲಿದ್ದ ಒಬ್ಬ ಮಾಜಿ ಛೇರ್ಮನ್ನನೂ, ಮತ್ತು ಕಂಟ್ರಾಕ್ಟ್ರರ್ ಲಿಂಗಪ್ಪನೂ ನಿರ್ಧರಿಸಿದ್ದರು. ಆದರೆ ಕಟ್ಟಡಕ್ಕೆ ಬಂದಿದ್ದ ಎಲ್ಲಾ ಹೆಂಚುಗಳನ್ನು (ಸುಮಾರು ಹತ್ತು ಸಾವಿರ!) ಮಠದ ಹೊರಪೌಳಿಯಲ್ಲಿ ಇಳಿಸಿದ್ದರು. ಅವುಗಳನ್ನು ಅಲ್ಲಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿದ್ದ ಸ್ಕೂಲಿನ ಬಳಿಗೆ ಸಾಗಿಸುವುದಕ್ಕೆ ಅವರುಗಳು ಕಂಡುಕೊಂಡ ಸುಲಭ ಮಾರ್ಗವೆಂದರೆ, ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು. ಪ್ರಾಂಶುಪಾಲರು ಅದಕ್ಷರಾಗಿದ್ದುದರಿಂದ ಸುಮಾರು ಒಂದೂವರೆ ದಿನ, ಮೂರೂ ತರಗತಿಗಳ ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದಣಿಯಬೇಕಾಯಿತು. ಮನುಷ್ಯತ್ವವನ್ನೇ ಮರೆತಂತಿದ್ದ ಕಂಟ್ರಾಕ್ಟರ್ ಲಿಂಗಪ್ಪ, ಮಕ್ಕಳಿಗೆ ಒಂದು ಪೆಪ್ಪರ್‌ಮೆಂಟನ್ನೂ ಕೊಡಿಸಲಿಲ್ಲ. ಆಗ ನಾವೆಲ್ಲಾ ‘ಆತನ ಹಿಂದಿನ ಮುಂದಿನ ವಂಶವೆಲ್ಲಾ ನಾಶವಾಗಲಿ’ ಎಂದು, ‘ಉದ್ಘಾಟನೆಗೆ ಬರುತ್ತಿರುವ ದೇವೇಗೌಡರು ಹಾಳಾಗಲಿ’ ಎಂದು ಬಯ್ದುಕೊಳ್ಳುತ್ತಲೇ ಹೆಂಚು ಹೊತ್ತಿದ್ದೆವು!
ಸ್ಕೂಲ್ ಹೊಸ ಕಟ್ಟಡಕ್ಕೆ ಶಿಫ್ಟ್ ಆದ ನಂತರ, ಹಾಸ್ಟೆಲ್ ಎಂಟನೇ ತರಗತಿ ಹಾಗೂ ಆಫೀಸು ನಡೆಯುತ್ತಿದ್ದ ಮನೆಗೆ ಬದಲಾಯಿತು. ಹಾಸ್ಟೆಲ್ಲಿದ್ದ ಮನೆಯನ್ನು ಆಸ್ಪತ್ರೆಗೆ ಬಿಟ್ಟುಕೊಟ್ಟರು. ಆಗ ಅಲ್ಲಿದ್ದ ಬೆಟ್ಟೇಗೌಡ ಎಂಬ ಡಾಕ್ಟರ್ ತುಂಬಾ ಹೆಸರುವಾಸಿಯಾಗಿದ್ದರು. ದೂರದ ಊರುಗಳಿಂದೆಲ್ಲಾ ಜನ ಅಲ್ಲಿದ್ದ ಆಸ್ಪತ್ರೆಗೆ ಬರುತ್ತಿದ್ದರಿಂದ, ಆಸ್ಪತ್ರೆಗೆ ದೊಡ್ಡ ಜಾಗ ಬೇಕಾಗಿತ್ತು. ಅದಕ್ಕೆ ಮೊದಲು ಆಸ್ಪತ್ರೆ, ಮಠದ ಒಳಗೇ ಒಂದು ದನದ ಕೊಟ್ಟಿಗೆಗೆ ಅಂಟಿಕೊಂಡಿದ್ದ ರೂಮಿನಲ್ಲಿತ್ತು!

2 comments:

ತೇಜಸ್ವಿನಿ ಹೆಗಡೆ- said...

ತುಂಬಾ ಕುತೂಹಲಕರ ಅನುಭವಗಳು. ಸಣ್ಣವಯಸ್ಸಿನಲ್ಲೇ ಕಷ್ಟಸಹಿಷ್ಣುಗಳಾಗಿದ್ದವರು ಮುಂದೆ ಬರುವ ದೊಡ್ಡ ಕಷ್ಟಗಳಿಗೆ ಹೆದರದೆ ಪಡೆಯುವ ಸುಖಗಳಿಗೆ ಮಾರುಹೋಗದೇ ಹೆಚ್ಚು ನಿರ್ಲಿಪ್ತರಾಗಿರುತ್ತರೆಂದು ಕೇಳಿದ್ದೇನೆ. ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ.

ಸಿಮೆಂಟು ಮರಳಿನ ಮಧ್ಯೆ said...

ಸರ್..

ನಿಮ್ಮ ಅನುಭವಗಳಿಂದ

ನಾವು ಕಲಿಯುವದು ಬಹಳಷ್ಟಿದೆ...

ನಿಮ್ಮ ಅನುಭವ ಭಂಡಾರದ

ಮುಂದಿನ ಭಾಗ ಕಾಯುತ್ತಿರುವೆ..

ವಂದನೆಗಳು..