Monday, May 11, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 14

ಅಡುಗೆ ಭಟ್ಟರು
ಇನ್ನು ಭಟ್ಟರ ಬಗ್ಗೆ ಖಂಡಿತ ಇಲ್ಲಿ ಹೇಳಲೇಬೇಕು. ಹುಡುಗರಿಂದ ಎಲ್ಲಾ ಕೆಲಸಕ್ಕೂ ನೆರವು ಧಾರಾಳವಾಗಿ ಸಿಗುತ್ತಿದ್ದುದರಿಂದ ಮೊದಲಿದ್ದ ಇಬ್ಬರು ಭಟ್ಟರು ಒಟ್ಟಿಗೆ ಇಲ್ಲಿ ಉಳಿಯುತ್ತಿದ್ದು ತುಂಬಾ ಅಪರೂಪ. ವಾರದಲ್ಲಿ ಮೂರು ದಿನ ಒಬ್ಬರಿದ್ದರೆ, ಇನ್ನುಳಿದ ದಿನಗಳಲ್ಲಿ ಇನ್ನೊಬ್ಬನಿರುತ್ತಿದ್ದ. ಸ್ಥಳೀಯರಾದ ಇವರನ್ನು ಬದಲಾಯಿಸಲು ಪರ ಊರಿನವರಾದ ವಾರ್ಡನ್ನರಿಗೂ ಸಾಧ್ಯವಾಗಲಿಲ್ಲ. ಸ್ವಲ್ಪ ವಿದ್ಯಾವಂತನಾಗಿದ್ದ ಅಪ್ಪಣ್ಣ ಎಂಬುವವನು ‘ಹೆಡ್‌ಕುಕ್’ ಆಗಿದ್ದ. ಆವನಂತೂ ಹುಟ್ಟಾ ಸೋಮಾರಿಯಾಗಿದ್ದು ಅಡುಗೆಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ರಾಗಿ ಮುದ್ದೆ ಗಂಟುಗಂಟಾಗಿರುತ್ತಿತ್ತು. ಮುದ್ದೆ ಕಟ್ಟಲು ಆತ ನಾಲ್ಕೈದು ಹುಡುಗರನ್ನು ಬಳಸಿಕೊಳ್ಳುತ್ತಿದ್ದ. ಸಾರು ನೀರು ನೀರಾಗಿದ್ದು, ಮುದ್ದೆ ತಿನ್ನಲು ಹೊಂದಿಕೊಳ್ಳುತ್ತಿರಲಿಲ್ಲ. ಹುಡುಗರು ಮೇಲಿಂದ ಮೇಲೆ ಗಲಾಟೆ ಮಾಡಿದಾಗ ಆತ ಕಂಡುಕೊಂಡಿದ್ದ ಸುಲಭ ಮಾರ್ಗವೆಂದರೆ, ಒಂದಷ್ಟು ಹುರಿಗಡಲೆ ಹಿಟ್ಟನ್ನು ಸಾರಿಗೆ ಕದರಿ ಬೇಯಿಸಿಬಿಡುತ್ತಿದ್ದ!
ಜ್ಯೂನಿಯರ್ ಕುಕ್ ಧರ್ಮಣ್ಣ
ಧರ್ಮಣ್ಣ ಎಂಬುವವನು ಮಾತ್ರ ಒಳ್ಳೆಯ ಅಡುಗೆಯವನಾಗಿದ್ದ. ಆತನನ್ನು ನಾವು ಜ್ಯೂನಿಯರ್ ಕುಕ್ ಎನ್ನುತ್ತಿದ್ದೆವು. ತಾನಿದ್ದ ದಿನಗಳಲ್ಲಿ ಆತ ಇದ್ದುದರಲ್ಲಿಯೇ ಚೆನ್ನಾಗಿ ಅಡುಗೆ ಮಾಡುತ್ತಿದ್ದ. ಹುಡುಗರನ್ನು ಹೆಚ್ಚು ಬಳಸಿಕೊಳ್ಳುತ್ತಿರಲಿಲ್ಲ. ಹುಡುಗರೊಂದಿಗೆ ಯಾವಾಗಲೂ ತಮಾಷೆ ಮಾಡಿಕೊಂಡು ಕೆಲಸ ಮಾಡುತ್ತಿದ್ದ. ಹುಡುಗರೂ ಅಷ್ಟೆ. ಆತನೊಂದಿಗೆ ತುಂಬಾ ಸ್ನೇಹದಿಂದ ವರ್ತಿಸುತ್ತಿದ್ದರು. ಒಮ್ಮೊಮ್ಮೆ ಅಪ್ಪಣ್ಣ ಧರ್ಮಣ್ಣನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ನಿಂತಾಗ ಹುಡುಗರು ಧರ್ಮಣ್ಣನ ಪರ ವಹಿಸಿ ವಾರ್ಡನ್ ಬಳಿ ಮಾತನಾಡುತ್ತಿದ್ದುದ್ದೂ ಉಂಟು. ಆದರೆ ಧರ್ಮಣ್ಣ ಓದು ಬರಹ ಬಾರದ ಅನಕ್ಷರಸ್ಥನಾಗಿದ್ದ.
ಇನ್ನೂ ಯುವಕನಾಗಿದ್ದ ಆತ ಹುಡುಗರಿಂದ ಹೇಳಿಸಿಕೊಂಡು ಕನ್ನಡದ ‘ಧ’ ಮತ್ತು ಇಂಗ್ಲಿಷ್‌ನ ‘ಡಿ’ ಎಂಬ ಎರಡು ಅಕ್ಷರಗಳನ್ನು ಬರೆಯಲು ಕಲಿತುಕೊಂಡಿದ್ದ. ಪ್ರತಿನಿತ್ಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಆತ ಬರೆಯುತ್ತಿದ್ದುದ್ದು ಯಾವುದಾರೊಂದು ಅಕ್ಷರ ಮಾತ್ರ. ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವಾಗ ಮಾತ್ರ ಕನ್ನಡದ ‘ಧ’ ಅಕ್ಷರವನ್ನು ನಾಲ್ಕು ಬಾರಿ ಯೋಚಿಸಿ ನಿಧಾನವಾಗಿ ಬರೆಯುತ್ತಿದ್ದನಂತೆ. ಆದರೆ ಆತ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದ. ಯಾರಾದರೂ ನೋಡಿದರೆ ಆತನನ್ನು ಅಡುಗೆ ಭಟ್ಟ ಎನ್ನಲು ಸಾಧ್ಯವೇ ಇರಲಿಲ್ಲ.
ಆತನಿಗೆ ನಾಯಿಗಳನ್ನು ಕಂಡರೆ ತುಂಬಾ ಇಷ್ಟ. ಉಳಿಯುತ್ತಿದ್ದ ಊಟವನ್ನು ನಾಯಿಗಳಿಗೆ ಹಾಕುತ್ತಿದ್ದ ಅಷ್ಟೆ. ಆದರೆ ಆ ನಾಯಿಗಳೋ ಆತನನ್ನು ಕಂಡರೆ ಸಾಕು, ಕಾಲ ಕೆಳಗೆಲ್ಲ ನುಗ್ಗಿ ಆತ ಹಾಕಿದ್ದ ಗರಿ ಗರಿ ಪ್ಯಾಂಟ್‌ನ್ನು ಕೊಳೆ ಮಾಡಿಬಿಡುತ್ತಿದ್ದವು. ಆಗ ಅವುಗಳನ್ನು ಆತ ಬಯ್ಯುತ್ತಿದ್ದ ಬಯ್ಗಳ ಸ್ವಾರಸ್ಯಕರವಾಗಿದೆ. ಸಣ್ಣ ಮರಿನಾಯಿಗಳಿಗೆ ಆತ ‘ಹೋಗೋ ನಾಯಿಗ್ಹುಟ್ಟಿದ್ದೆ’ ಎನ್ನುತ್ತಿದ್ದ. ಮತ್ತೆ ಯಾವುದಾರು ನಾಯಿಯನ್ನು ಬೇರೆಯವರಿಗೆ ತೋರಿಸುವಾಗ ಅಥವಾ ಪರಿಚಯ ಮಾಡಿಸುವಾಗ ‘ಅದೇ ಚೆಡ್ಡಿ ಹಾಕಿಲ್ವಲ್ಲ ಆ ನಾಯಿ’ ಎಂದೋ, ‘ಅಲ್ಲಿ ನೋಡು ಬಟ್ಟೆ ಹಾಕಿಕೊಳ್ಳದೆ ಬೆತ್ತಲೆ ನಿಂತಿದೆಯಲ, ನಾಚಿಕೆ ಇಲ್ಲದೆ’ ಎಂದು ಗುಂಪಿನಲ್ಲಿದ್ದ ನಾಯಿಯನ್ನು ನಿರ್ದೇಶಿಸಿ ಮಾತನಾಡುತ್ತಿದ್ದ!
ಕ್ರಾಂತಿಕಾರಿ ಜಯಣ್ಣ!
ನಾವು ಒಂಬತ್ತನೇ ತರಗತಿಗೆ ಬರುವಷ್ಟರಲ್ಲಿ ಇನ್ನೊಬ್ಬ ಭಟ್ಟನ ಆಗಮನವಾಯಿತು. ಆತನ ಹೆಸರು ಜಯಣ್ಣ. ಆತನನ್ನು ನಾವು ಸಬ್‌ಜ್ಯೂನಿಯರ್ ಭಟ್ಟ ಎನ್ನುತ್ತಿದ್ದೆವು. ಆತ ಇದ್ದುದ್ದು ಒಂದೇ ವರ್ಷ. ಆತ ಆರಕ್ಕೇರದ ಮೂರಕ್ಕಿಳಿಯದ ಭಟ್ಟ. ಆದರೆ ಮೊದಲ ಇಬ್ಬರು ಭಟ್ಟರ ಹಾಗೆ ವಾರಕ್ಕೆ ಕೇವಲ ಮೂರು ದಿನ ಮಾತ್ರವಲ್ಲದೆ ಯಾವಾಗಲೂ ಹಾಸ್ಟೆಲ್ಲಿನಲ್ಲಿಯೇ ಇರುತ್ತಿದ್ದ. ಕೆಲವು ಹೊಟ್ಟೆಬಾಕ ವಿದ್ಯಾರ್ಥಿಗಳನ್ನು ಬುಟ್ಟಿಗೆ ಹಾಕಿಕೊಂಡು, ಅವರಿಗೆ ಅವರು ಕೇಳಿದ್ದನ್ನು ಕೇಳಿದಷ್ಟು ಬಡಿಸಿ, ತನ್ನ ಬೀಡಿಗೆ ಕಾಸು ಮಾಡಿಕೊಳ್ಳುತ್ತಿದ್ದ. ಆದರೆ ಆತ ಅಲ್ಲಿದ್ದಾಗ ಮಾಡಿದ ಸುದ್ದಿಗಿಂತ ಅಲ್ಲಿಂದ ವರ್ಗವಾಗಿ ಬೇರೆಡೆಗೆ ಹೋದಾಗ ಸುದ್ದಿಯಾಗಿದ್ದೆ ಹೆಚ್ಚು!
ಜಯಣ್ಣ ಮೊದಲಿಗೆ ಬಂದಾಗ ಆತನನ್ನು ಯಾರೂ ಯಾವ ಜಾತಿ ಎಂದು ಕೇಳಲಿಲ್ಲ. ಆತನೂ ಹೇಳಲಿಲ್ಲ. ಹಾಸ್ಟೆಲ್ಲಿನಲ್ಲಿ ಎಲ್ಲಾ ಜಾತಿಯ ಹುಡುಗರೂ ಇದ್ದರು. ಆತ ಯಾವ ಜಾತಿಯವನಾದರೂ ಹುಡುಗರು ಏನೂ ಅನ್ನುತ್ತಿರಲಿಲ್ಲ. ಆಲ್ಲದೆ ಆತ ಗೌರ್‍ನಮೆಂಟ್ ಸರ್ವೆಂಟ್ ಆಗಿ ಬಂದಿದ್ದರಿಂದ ಯಾರೂ ಏನನ್ನೂ ಮಾಡುವಂತೆಯೂ ಇರಲಿಲ್ಲ. ಅಲ್ಲಿದ್ದ ಒಂದು ವರ್ಷದ ಅವಧಿಯಲ್ಲಿ ಆತ ತನ್ನ ಜಾತಿಯನ್ನು ಘೋಷಿಸಿಕೊಳ್ಳುವ ಅವಕಾಶವೂ ಬಂದಿರಲಿಲ್ಲ.
ದುರಾದೃಷ್ಟಕ್ಕೆ ಕುಂದೂರುಮಠದಲ್ಲಿ ಅಸ್ಪೃಷ್ಯತೆ ಆಚರಣೆಯಲ್ಲಿತ್ತು. ಬಹುಶಃ ಈಗಲೂ ಇರಬಹುದು. ಮಠದ ಒಂದನೇ ಪೌಳಿಯವೊಳಗೆ ಮಾತ್ರ ದಲಿತರಿಗೆ ಪ್ರವೇಶವಿತ್ತು. ಸುಬ್ಬಪ್ಪನ ಗುಡಿಗಳ ಕಾಂಪೌಂಡಿನೊಳಕ್ಕೂ ಅವರು ಬರುವಂತಿರಲಿಲ್ಲ. ಮೆಳೆಯಮ್ಮನಿಗೆ ಅವರು ಬಲಿ ಕೊಡಲು ಬರುತ್ತಿದ್ದರಾದರೂ ಗುಡಿಯ ಒಳಗೆ ಹೋಗುವಂತಿರಲಿಲ್ಲ. ಆದರೆ ಬಲಿ ಕೊಡಲು ವಿಧಿಸಿದ್ದ ಸುಂಕವನ್ನು ಮಾತ್ರ ತಪ್ಪದೆ ಮಠಕ್ಕೆ ಒಪ್ಪಿಸಬೇಕಾಗಿತ್ತು! ಅಲ್ಲಿಯೇ ಇರುತ್ತಿದ್ದ ಯಾರಾದರೊಬ್ಬ ಮಠಕ್ಕೆ ಸೇರಿದವನನ್ನು ಹಿಡಿದು ಅವನ ಮುಖಾಂತರ ಸುಂಕವನ್ನು ಪಾವತಿಸುತ್ತಿದ್ದರು. ಹಾಸ್ಟೆಲ್ಲಿನಲ್ಲಿದ್ದ ಬಹುತೇಕ ವಿದ್ಯಾರ್ಥಿಗಳು ಬೆಳಿಗೆ ನಿತ್ಯಕರ್ಮ ಮುಗಿಸಿದ ಮೇಲೆ ಮೆಳೆಯಮ್ಮನ ಗುಡಿಗೋ ಮಠಕ್ಕೋ ಹೋಗಿಬರುವ ಅಭ್ಯಾಸ ಮಾಡಿಕೊಂಡಿದ್ದರು. ಆದರೆ ದಲಿತ ವಿದ್ಯಾರ್ಥಿಗಳು ಮಾತ್ರ ದೂರದಿಂದಲೇ ಕೈ ಮುಗಿಯಬೇಕಾಗಿತ್ತು!
ಇಷ್ಟೆಲ್ಲಾ ಕಟ್ಟುನಿಟ್ಟಿನ ಅಸ್ಪೃಷ್ಯತೆ ಆಚರಣೆಯಿರುವ ಕುಂದೂರುಮಠಕ್ಕೆ ತೀರ ಕೆಳಜಾತಿಯವನಾದ ಜಯಣ್ಣ, ಆತ ಗೌರ್‍ನಮೆಂಟ್ ಸರ್ವೆಂಟನಾಗಿದ್ದರೂ ಮಠದ ಒಳಗೆ, ದೇವಾಸ್ಥಾನದೊಳಗೆ, ಸಾಮೀಜಿಗಳ ಮನೆಯೊಳಗೆ ಎಲ್ಲಾ ಕಡೆ ಓಡಾಡಿದ್ದು ಮಹಾಪರಾಧವಾಗಿತ್ತು! ಆದರೆ ಆತ ದಲಿತನೆಂದು ಮಠದ ಹಿತಾಸಕ್ತಿಗಳಿಗೆ ಗೊತ್ತಾಗುವ ಒಂದೆರಡು ದಿನಗಳ ಮೊದಲೇ ಆತನಿಗೆ ವರ್ಗವಾಗಿ ಬೇರೆಡೆಗೆ ಹೋಗಿದ್ದ. ಇದರಿಂದಾಗಿ ಮಠದವರು ಎಷ್ಟೇ ಹಾರಾಡಿದರೂ ಅವನನ್ನು ಏನೂ ಮಾಡುವಂತಿರಲಿಲ್ಲ. ಕಾನೂನು, ಪೊಲೀಸ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಷ್ಟು ಬಲಿಷ್ಠ ಮಠವೂ ಅದಾಗಿರಲಿಲ್ಲ. ಕೇವಲ ಸುತ್ತ ಹತ್ತೂರಿನಲ್ಲಷ್ಟೇ ಅದರ ಪ್ರತಾಪಗಳು ತಕ್ಕಮಟ್ಟಿಗೆ ನಡೆಯುತ್ತಿದ್ದದ್ದು. ಆದ್ದರಿಂದ ಅವರು ಕೇವಲ ಮಾತಿನಲ್ಲೇ ಆತನಿಗೆ ಶಿಕ್ಷೆ ಕೊಟ್ಟರು! ಮಾತಿನಲ್ಲೇ ಕಂಬಕ್ಕೆ ಕಟ್ಟಿದರು! ಇನ್ನು ಏನೇನೋ ಮಾಡಿದರು!
ಆಗ ಅನೇಕರಂತೆ ನನಗೂ ಇದ್ದ ಅನುಮಾನ ಈಗಲೂ ನನಗಿದೆ. ಏನೆಂದರೆ ಆತ ಹೋಗುವ ಹಿಂದಿನ ದಿನವಷ್ಟೇ ಆತ ತನ್ನ ಜಾತಿಯನ್ನು ಬಹಿರಂಗ ಪಡಿಸಿ ಹೋಗಿರಬಹುದು. ಇಲ್ಲದಿದ್ದರೆ ವರ್ಷದಿಂದ ಗೊತ್ತಾಗದಿದ್ದ ಜಾತಿ ಆತ ಹೋದ ಎರಡೇ ದಿನಗಳಲ್ಲಿ ಗೊತ್ತಾಗಿದ್ದು ಹೇಗೆ? ಅಂತೂ ಮಠದವರು ಮಾತ್ರ ಸ್ವಲ್ಪ ದಿನಗಳ ಕಾಲ ಮಠದ ಪಾವಿತ್ರತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದು ನಿಜ!
ಗಲೀಜು ಗೋಪಿನಾಥ!
ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಇನ್ನೊಬ್ಬ ಭಟ್ಟ ಗೋಪಿನಾಥನ ಆಗಮನವಾಯಿತು. ನೋಡಲು ಕ್ಷಯರೋಗದವನಂತೆ, ಬೆಳ್ಳಗೆ ಬಿಳುಚಿಕೊಂಡಿದ್ದ ಆತ ಹಂಚಿಕಡ್ಡಿಯಂತೆ ಸಣ್ಣಗೆ ಉದ್ದಕ್ಕಿದ್ದ. ಅಡುಗೆ ಮನೆಯಲ್ಲಿಯೂ ಮತ್ತು ಸ್ವತಃ ಆತನಲ್ಲಿಯೂ ಯಾವ ಅಚ್ಚುಕಟ್ಟುತನವೂ ಇಲ್ಲದ ಆತನನ್ನು ಗಲೀಜು ಗೋಪಿ ಅಂತಲೇ ನಾವು ಕರೆಯುತ್ತಿದ್ದೆವು. ಸಣ್ಣಗೆ ಕೀರಲು ದನಿಯಲ್ಲಿ ಮಾತನಾಡುತ್ತಿದ್ದ. ಆತನ ಅಣ್ಣನೋ ತಮ್ಮನೋ ಬಿ.ಇ.ಓ. ಕಛೇರಿಯಲ್ಲಿ ಜೀಪ್ ಡ್ರೈವರ್‌ನಾಗಿದ್ದರಿಂದ ಇನ್ಫ್ಲುಯೆನ್ಸ್ ಮಾಡಿ ಕೆಲಸ ಕೊಡಿಸಿದ್ದಾನೆ ಎಂದು ಆಗ ಸುದ್ದಿಯಿತ್ತು. ಆತ ಎಷ್ಟು ದುರ್ಬಲನಾಗಿದ್ದನೆಂದರೆ ಒಂದು ಸಣ್ಣಭಾರವನ್ನು ಎತ್ತಲೂ ಅವನಿಂದ ಆಗುತ್ತಿರಲಿಲ್ಲ. ಅಪ್ಪಣ್ಣ ಮತ್ತು ಧರ್ಮಣ್ಣ ಈ ಇಬ್ಬರೂ ಇಲ್ಲದ ದಿನಗಳಲ್ಲಿ ಆತನಿಗೆ ಅಡುಗೆ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಆ ದಿನಗಳಲ್ಲಿ ಹುಡುಗರು ಮಾಡಿದ್ದೇ ಅಡುಗೆಯಾಗುತ್ತಿತ್ತು.
ಇಂತಹ ಗೋಪಿನಾಥನಿಗೆ ಒಂದು ದಿನ ಮದುವೆಯೂ ಆಯಿತು. ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಬಂದ ಆತ ಮಠದ ಮೊದಲನೇ ಪೌಳಿಯ ಆವರಣದಲ್ಲಿದ್ದ ಒಂದು ದನದ ಕೊಟ್ಟಿಗೆಯ ವಪ್ಪಾರಿನಲ್ಲಿದ್ದ ಸಣ್ಣ ಕೊಠಡಿಯಲ್ಲಿ ಬಾಡಿಗೆಗೆ ನಿಂತ. ಅದಕ್ಕಾಗಿ ಆತ ಮಠಕ್ಕೆ ಐವತ್ತು ರೂಪಾಯಿ ಬಾಡಿಗೆ ತೆರಬೇಕಾಗಿತ್ತು. ನೀರು, ಶೌಚಾಲಯ ಯಾವುದೂ ಇರಲಿಲ್ಲ. ನಮ್ಮ ಹಾಸ್ಟೆಲ್ಲಿನ ಅಡುಗೆ ಮನೆಯ ಬಾಗಿಲಿನಲ್ಲಿ ನಿಂತರೆ ಆತನ ವಾಸದ ಮನೆ ಕಾಣುತ್ತಿತ್ತು. ಆತನ ಕೆಟ್ಟ ಚಾಳಿಯೆಂದರೆ ಜಗತ್ತೆಲ್ಲವನ್ನೂ ಅನುಮಾನಿಸುವುದು. ಆತನ ಹೆಂಡತಿಯೂ ಆತನ ಈ ಅನುಮಾನದ ರೋಗಕ್ಕೆ ಆಗಾಗ ತುತ್ತಾಗುತ್ತಿದ್ದಳು. ಆತ ಇಲ್ಲಿ ನಿಂತು ನೋಡಿದಾಗ ಅತ್ತ ಆತನ ಹೆಂಡತಿ ಯಾವ ಕಾರಣಕ್ಕೋ ಬಾಗಿಲನ್ನು ತೆರೆದಿದ್ದರೆ, ಅಂದು ಅವಳಿಗೆ ಏಟು ಬಿದ್ದವೆಂದೇ ಅರ್ಥ. ಅವರ ಜಗಳ ಬಿಡಿಸಲು ವಾರ್ಡನ್, ಹುಡುಗರು, ಒಮ್ಮೊಮ್ಮೆ ಸ್ವಾಮೀಜಿಗಳು ಎಲ್ಲರೂ ಹೋಗಬೇಕಾಗುತ್ತಿತ್ತು. ಈಗ ನನಗನ್ನಿಸುವಂತೆ, ತನ್ನ ನಿಕೃಷ್ಟವಾದ ಶರೀರ, ಕೀರಲು ಧ್ವನಿ ಇವುಗಳಿಂದಾಗಿ ಆತನಿಗೆ ತನ್ನ ಬಗ್ಗೆಯೇ ಕೀಳರಿಮೆ ಇತ್ತೇನೋ. ಅದನ್ನು ಮುಚ್ಚಿಟ್ಟುಕೊಳ್ಳಲು ಆತ ಈ ಅನುಮಾನದ ರೋಗವನ್ನು ಅಂಟಿಸಿಕೊಂಡಿದ್ದನೋ ಏನೋ?

4 comments:

shivu said...

ಸರ್,

ಆಡಿಗೆ ಭಟ್ಟರ ಕತೆಗಳು ಚೆನ್ನಾಗಿವೆ...ಎಲ್ಲವನ್ನು ಎಷ್ಟು ಚೆನ್ನಾಗಿ ಗಮನಿಸಿ ಬರೆದಿದ್ದೀರಿ....ಇನ್ನೂ ಗಲೀಜು ಗೋಪಿನಾಥ, ಕ್ರಾಂತಿಕಾರಿ ಜಯಣ್ಣ!ರ ಬಗ್ಗೆಯೂ ವಿವರಣೆ ಚೆನ್ನಾಗಿದೆ...

ಧನ್ಯವಾದಗಳೂ

sunaath said...

ವಿದ್ಯಾರ್ಥಿನಿಲಯದ ಕತೆಯನ್ನು ಹೇಳುತ್ತಲೇ, ಆ ಕಾಲದ ಸಾಮಾಜಿಕ ಪರಿಸ್ಥಿತಿಯ ಚಿತ್ರಣವನ್ನೂ ಮನದಟ್ಟಾಗುವಂತೆ ನೀಡಿದ್ದೀರಿ.
ಸುಂದರ ಲೇಖನಕ್ಕಾಗಿ ಅಭಿನಂದನೆಗಳು.

PARAANJAPE K.N. said...

ಡಾ: ಸತ್ಯನಾರಾಯಣರೇ
ನಿಮ್ಮ ಹಾಸ್ಟೆಲ್ ಅನುಭವಗಳ ಸರಣಿ ರೋಚಕ. ಅವನ್ನೆಲ್ಲ ನೆನಪಿತ್ತು ಬರೆಯುತ್ತಿದ್ದೀರಲ್ಲ. That's great. ಚೆನ್ನಾಗಿದೆ ಅಡುಗೆ ಭಟ್ಟರ ಇತಿಹಾಸ, ಕು೦ದೂರುಮಠದ ರೀತಿರಿವಾಜು, ಇ೦ತಹ ಅನುಭವಗಳೇ ಒಬ್ಬ ವ್ಯಕ್ತಿಯನ್ನು ಪಕ್ವವಾಗಿಸುವುದು.

ರವಿಕಾಂತ ಗೋರೆ said...

ಚೆನ್ನಾಗಿದೆ ಅಡುಗೆ ಭಟ್ಟರ ಪುರಾಣ.. :-)