Monday, May 25, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 16

ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯೂ ಮತ್ತು ಅವನ ನಾಯಿಯು
ಹಾಸ್ಟೆಲ್ಲಿನ ನನ್ನ ಜೀವನದಲ್ಲಿ ನಾನು ಕಂಡ ನಾಲ್ಕಾರು ವಿಶೇಷ ವಿದ್ಯಾರ್ಥಿಗಳ ಬಗ್ಗೆ ಇಲ್ಲಿ ಹೇಳಬಯಸುತ್ತೇನೆ. ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯ ಹೆಸರನ್ನು ಮೊದಲೇ ಪ್ರಸ್ತಾಪಿಸಿದ್ದೇನೆ. ನೋಡಲು ಗಟ್ಟಿಮುಟ್ಟಾಗಿ ಆ ವಯಸ್ಸಿಗೆ ತುಸು ಹಚ್ಚೇ ಎನ್ನಿಸುವಂತ ಎತ್ತರಕ್ಕಿದ್ದ ಆತ ಮಂಡ್ಯ ಜಿಲ್ಲೆ, ಕಿಕ್ಕೇರಿ ಕಡೆಯವನು. ಈ ಮೊದಲು ಹೇಳಿದ ಡಿ.ಎಸ್.ಎನ್. ಅವರ ಊರಿಗೆ ಹತ್ತಿರದವನಂತೆ! ಈತ ನನಗಿಂತ ಒಂದು ತರಗತಿ ಮುಂದಿದ್ದ. ಆದ್ದರಿಂದ ಆತನೊಂದಿಗೆ ನನ್ನ ಒಡನಾಟ ಎರಡು ವರ್ಷದ್ದು. ಈತ ಊಟ ಮಾಡುವುದರಲ್ಲಿ, ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದಾಗಿರುತ್ತಿದ್ದ. ಒಮ್ಮೆ ಊಟಕ್ಕೆ ಕುಳಿತನೆಂದರೆ ಏಳು ಮುದ್ದೆಗಳನ್ನಾದರೂ ಸಲೀಸಾಗಿ ಊಟ ಮಾಡಿಬಿಡುತ್ತಿದ್ದ. ಜೊತೆಗೆ ಒಂದೆರಡು ತಟ್ಟೆ ಅನ್ನವನ್ನೂ ಮುಗಿಸಿಬಿಡುತ್ತಿದ್ದ. ವಾರ್ಡನ್ ಅವರೇ ಆತನಿಗೆ ತಿನ್ನುವಷ್ಟು ಊಟ ಬಡಿಸುವಂತೆ ಹೇಳಿಬಿಟ್ಟಿದ್ದರು.
ಆತನಿಗೆ ಧರ್ಮಣ್ಣ ಭಟ್ಟರೆಂದರೆ ಅಚ್ಚುಮೆಚ್ಚು. ಬೆಳೆಯುವ ಹುಡುಗ ಎಂದು ಧರ್ಮಣ್ಣ ಆತ ತಿನ್ನುವಷ್ಟನ್ನು ಬಡಿಸಿಬಿಡುತ್ತಿದ್ದ. ಆದರೆ ಅಪ್ಪಣ್ಣ ಹಾಗಲ್ಲ. ಆತನ ಮನೋಸ್ಥಿತಿ ಸರಿಯಿಲ್ಲದಿದ್ದರೆ, ಅದರ ಸಿಟ್ಟೆಲ್ಲಾ ಹುಡುಗರ ಮೇಲೆ ಹಾಕುತ್ತಿದ್ದ. ಒಬ್ಬರಿಗೆ ಒಂದೂವರೆ ಮುದ್ದೆಗಿಂತ ಹೆಚ್ಚು ಬಡಿಸುತ್ತಿರಲಿಲ್ಲ. ಅನ್ನವನ್ನು ಲೆಕ್ಕಕ್ಕೆ ಎರಡು ಸ್ಪೂನ್ ಎಂದು ಅತ್ಯಂತ ಕಡಿಮೆ ಬಡಿಸುತ್ತಿದ್ದ. ಆ ದಿನಗಳಲ್ಲಿ ಪಾಪ, ಸ್ವಾಮಿಗೆ ಊಟ ಸಾಕಾಗುತ್ತಿರಲಿಲ್ಲ. ಅದಕ್ಕೆ ಆತ ಕಂಡುಕೊಂಡಿದ್ದ ಮಾರ್ಗವೆಂದರೆ ತನ್ನ ಎರಡೂ ಕಡೆ, ಕಡಿಮೆ ಊಟ ತಿನ್ನುವ ಇಬ್ಬರನ್ನು ಊಟಕ್ಕೆ ಕೂರಿಸಿಕೊಳ್ಳುತ್ತಿದ್ದ. ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಬಡಿಸಲು ಬಂದಾಗ ಏನನ್ನೂ ಬೇಡ ಎನ್ನದೆ ಬಡಿಸಿಕೊಂಡು, ಅದನ್ನು ಎಂ.ಕೆ. ಸ್ವಾಮಿಯ ತಟ್ಟೆಗೆ ವರ್ಗಾಯಿಸಿಬಿಡುತ್ತಿದ್ದೆವು.
ಸ್ವತಃ ಸ್ವಾಮಿಗೇ ಊಟ ಸಾಕಾಗುತ್ತಿರಲಿಲ್ಲವಾದರೂ ಆತ ಒಂದು ನಾಯಿಮರಿಯನ್ನು ಸಾಕಿಕೊಂಡಿದ್ದ. ಅದಕ್ಕೇನು ಆತ ಊಟ ಹಾಕಬೇಕಾಗಿರಲಿಲ್ಲ. ಏಕೆಂದರೆ ಊಟದ ಕೊನೆಯಲ್ಲಿ ಹುಡುಗರೆಲ್ಲ ತಮ್ಮ ತಮ್ಮ ತಟ್ಟೆಗಳಲ್ಲಿ ಉಳಿದದ್ದನ್ನು ಹಾಕಿದರೆ ಅದಕ್ಕೆ ಸಾಕಾಗಿತ್ತು. ಆದರೂ ಎಂ.ಕೆ.ಸ್ವಾಮಿ ಮಾತ್ರ ಒಂದೆರಡು ಗುಕ್ಕನ್ನಾದರೂ ತನ್ನ ಕೈಯಾರೆ ಅದಕ್ಕೆ ತಿನ್ನಿಸುತ್ತಿದ್ದ. ಅದೂ ದಷ್ಟಪುಷ್ಟವಾಗಿ ಬೆಳೆದಿತ್ತು. ಅದಕ್ಕೆ ಆತನೇ ಸ್ನಾನ ಮಾಡಿಸುತ್ತಿದ್ದ. ತನ್ನ ಪಕ್ಕದಲ್ಲಿಯೇ ಮಲಗಿಸಿಕೊಳ್ಳುತ್ತಿದ್ದ. ಒಮ್ಮೆ ಇದನ್ನು ಆಡಿಕೊಂಡವನೊಂದಿಗೆ ಬೆಟ್ ಕಟ್ಟಿ, ನಾಯಿಯೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಕೂಡ ಮಾಡಿದ್ದ! ಒಂದೇ ತಟ್ಟೆಯಲ್ಲಿ ಒಂದು ಕಡೆ ಅವನು ಊಟ ಮಾಡುತ್ತಿದ್ದರೆ ಆತನ ಪ್ರೀತಿಯ ನಾಯಿ ತಟ್ಟೆಯ ಇನ್ನೊಂದು ಬದಿಯಲ್ಲಿ ತಿನ್ನುತ್ತಿದ್ದುದ್ದನ್ನು ನಾವೆಲ್ಲಾ ಪರಮಾಶ್ಚರ್ಯವೆಂಬಂತೆ ನೋಡಿದ್ದೆವು. ಅಂದ ಹಾಗೆ ಆತ ಆ ಬೆಟ್‌ನಲ್ಲಿ ಗೆದ್ದದ್ದು, ಮಾರನೆಯ ದಿನ ಬೆಳಿಗ್ಗೆ ಮಂಜಣ್ಣನ ಹೋಟೆಲಿನ ಹತ್ತು ಇಡ್ಲಿಗಳನ್ನು! ಈತನ ಈ ಗಟ್ಟಿತನವನ್ನು ನೋಡಿಯೇ ಡಿ.ಎಸ್.ಎನ್. ತೋಟದ ಕೆಲಸ ಮಾಡಲು ರಜಾದಿನಗಳಲ್ಲಿ ಚಿಕ್ಕಯ್ಯ ಮತ್ತು ನನ್ನಣ್ಣನೊಂದಿಗೆ ಈತನನ್ನೂ ಕರೆದುಕೊಂಡು ಹೋಗಿದ್ದಿರಬಹುದು! ತನ್ನ ಮೂರನೇ ಪ್ರಯತ್ನದಲ್ಲಿ ಆತ ಹತ್ತನೇ ತರಗತಿ ಪಾಸು ಮಾಡಿದ. ನಂತರ ಮಿಲಿಟರಿ ಸೇರಿಕೊಂಡನೆಂದು ಯಾರೋ ಹೇಳಿದ್ದು ನೆನಪಿದೆ.
ಇಂಗ್ಲೀಷ್‌ನಲ್ಲಿ ಇಪ್ಪತ್ತಮೂರುವರೆ ಅಕ್ಷರ!
ಚಂದ್ರಯ್ಯ ಎಂಬ ವಿದ್ಯಾರ್ಥಿ ಐದನೇ ತರಗತಿಯಿಂದಲೂ ಹಾಸ್ಟೆಲ್ಲಿನಲ್ಲಿದ್ದವನು. ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಐದನೇ ತರಗತಿಯಿಂದಲೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು. ನನ್ನದೇ ತರಗತಿಯವನು. ಆದರೆ ಇಂಗ್ಲೀಷ್ ಇರಲಿ ಕನ್ನಡವನ್ನೂ ಓದಲು ಬರೆಯಲು ಬರುತ್ತಿರಲಿಲ್ಲ. ಬಹುಶಃ ಅಷ್ಟು ದಡ್ಡ ವಿದ್ಯಾರ್ಥಿಯನ್ನು ನಾನೆಂದೂ ಕಂಡಿಲ್ಲ. ಆದರೂ ಪ್ರತಿ ವರ್ಷ ಪಾಸಾಗಿ ಹತ್ತನೇ ತರಗತಿಯವರಗೆ ಬಂದಿದ್ದ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಜಟಗೊಂಡ ಅವರು ಪಾಠ ಮಾಡುತ್ತಿದ್ದರೆಂದು ಹಿಂದೆ ಹೇಳಿದೆನಲ್ಲ, ಹಾಗೆ ಪಾಠ ಮಾಡುವಾಗ ಅವರು ಒಬ್ಬರ ಕೈಯಲ್ಲಿ ಪಾಠ ಓದಿಸುತ್ತಾ ಬೇರೆಯವರು ಕೇಳಿಸಿಕೊಳ್ಳುವಂತೆ ಹೇಳಿ, ಕೊನೆಯಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹುಡುಗರು ಉತ್ತರ ಹೇಳದಿದ್ದಾಗ ಅವರೇ ಉತ್ತರವನ್ನು ಹೇಳಿ, ಪರೀಕ್ಷೆಯಲ್ಲಿ ಹೇಗೆ ಬರೆಯಬೇಕೆಂದು ಹೇಳುತ್ತಿದ್ದರು.
ಅದೊಂದು ದಿನ ಚಂದ್ರಯ್ಯನನ್ನು ಓದಲು ಹೇಳಿದರು. ಇಂಗ್ಲೀಷ್ ಪಾಠ. ಪುಸ್ತಕ ಹಿಡಿದುಕೊಂಡು ಎದ್ದು ನಿಂತ ಚಂದ್ರಯ್ಯ ಒಂದೆರಡು ನಿಮಿಷವಾದರೂ ಬಾಯಿ ಬಿಡಲಿಲ್ಲ. ನಮಗೆಲ್ಲಾ ಚಂದ್ರಯ್ಯನ ಬಂಡವಾಳ ಗೊತ್ತಿದ್ದರಿಂದ, ಏನಾಗುತ್ತದೆಯೋ ನೋಡೋಣ ಎಂದು ಕಾದು ಕುಳಿತಿದ್ದೆವು. ‘ಓದೋ...’ ವಾರ್ಡನ್ ಮತ್ತೊಮ್ಮೆ ಹೇಳಿದರು. ಮತ್ತೂ ಒಂದು ನಿಮಿಷ ಕಳೆಯಿತು. ಅವರಿಗೆ ರೇಗಿ, ‘ಏನಲೇ ಮಂಗ್ಯಾ ನನಮಗನ. ಓದು ಎಂದರೆ ಕಣ್ ಬಿಡ್ತಾ ನಿಂತೀಯಲ್ಲೊ. ಕಣ್ಣು ಕಾಣಂಗಿಲ್ಲೇನು. ಹೇಳು’ ಎಂದು ಪುಸ್ತಕ ತಿರುಗಿಸಿ ಬೆರಳಿನಲ್ಲಿ ನಿರ್ದೇಶಿಸುತ್ತಾ ‘ಟಿ.ಹೆಚ್.ಇ. ಅಂದರೆ ‘ದಿ’, ಹೀಗೆ ಹೇಳಲೆ ಮಗನ’ ಎಂದು ಕೂಗಿದರು. ಅವನು ಪ್ರಾಮಾಣಿಕವಾಗಿ ಅಷ್ಟನ್ನು ಮಾತ್ರ ಹೇಳಿ ಮತ್ತೆ ಬಾಯಿಗೆ ಬೀಗ ಬಡಿದುಕೊಂಡ!
ಸಿಟ್ಟಿಗೆದ್ದ ವಾರ್ಡನ್ ‘ಏನಲೇ ಮಗನ ಮೆಟ್ರಿಕ್ ಕಲಿಯಾಕ ಹತ್ತೀಯಾ. ಇಂಗ್ಲೀಷ್ ಅಕ್ಷರ ಬರಾಂಗಿಲ್ಲ ಅಂದ್ರ ಹೆಂಗ! ಹೋಗಲಿ ಇಂಗ್ಲೀಷ್‌ನಾಗ ಎಷ್ಟು ಅಕ್ಷರದಾವಪ್ಪ. ಅದಾರ ಹೇಳು ನೋಡಾನ’ ಎಂದರು.
ಆತ ಯಾವ ಅಳುಕೂ ಇಲ್ಲದೆ ‘ಇಪ್ಪತ್ತನಾಲ್ಕು ಸಾರ್’ ಎಂದು ಬಿಟ್ಟ. ನಾವೆಲ್ಲಾ ‘ಗೊಳ್’ ಎಂದು ನಕ್ಕೆವು. ಆದರೆ ಜಟಗೊಂಡ ಅವರಿಗೆ ನಿಜವಾಗಿ ಸಿಟ್ಟು ಬಂದಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಇಷ್ಟರ ಮಟ್ಟಿಗೆ ದಡ್ಡ ಇದ್ದರೆ ಹೇಗೆ ಎಂಬ ಚಿಂತೆ ಅವರದಾಗಿತ್ತು ಎನ್ನಿಸುತ್ತದೆ. ಅಲ್ಲದೆ ಅಲ್ಲಿಯವರೆಗೆ ಒಂದು ವರ್ಷವೂ ಫೇಲ್ ಆಗದೆ ಬಂದಿದ್ದ ಆತನನ್ನು ಕಂಡು ಅವರಿಗೆ ಮೈಯೆಲ್ಲಾ ಉರಿದಿರಬೇಕು.
‘ಹೋಗಲಿ ಮಗನಾ. ಕನ್ನಡನಾದರೂ ಓದುತ್ತೀಯಾ?’ ಅಂದರು. ಆತ ಹೌದೆಂದು ತಲೆಯಾಡಿಸಿದ. ಕನ್ನಡ ಪುಸ್ತಕ ಬಿಡಿಸಿ ಕೊಟ್ಟು ಓದು ಎಂದಾಗ ಮತ್ತೆ ಬಾಯಿಗೆ ಬೀಗ ಬಡಿದುಕೊಂಡವನಂತೆ, ಗೊಮ್ಮಟನಂತೆ ನಿಂತುಬಿಟ್ಟ. ಇದನ್ನು ಕಂಡು ಅವರ ಸಹನೆ ಒಡೆಯಿತು. ಹೊಡೆಯುವಂತೆ ಕೈ ಎತ್ತುತ್ತಾ, ‘ಅಲ್ಲವೋ ಸೂಳಿಮಗನ, ಕನ್ನಡ ಕೂಡ ಓದಾಕೆ ಬರಾಂಗಿಲ್ಲ. ಇಂಗ್ಲೀಷ್‌ನಾಗೆ ಎಷ್ಟು ಅಕ್ಷರ ಅದಾವ ಅಂತ ಗೊತ್ತಿಲ್ಲ....’ ಅಂತ ಅವರು ಹೇಳುತ್ತಿರುವಾಗಲೇ ಚಂದ್ರಯ್ಯ ‘ಗೊತ್ತು ಸಾರ್, ಗೊತ್ತು ಸಾರ್. ಇಪ್ಪತ್ತಮೂರೂವರೆ ಅಕ್ಷರ ಅವೆ ಸಾರ್!’ ಎಂದು ಕೂಗಿಕೊಂಡ.
ಎತ್ತಿದ ಕೈಯನ್ನು ಹಾಗೆಯೇ ಇಳಿಸಿದ ಜಟಗೊಂಡ ಅವರು ಸುಸ್ತಾಗಿ ಅಲ್ಲಿದ್ದ ಟ್ರಂಕ್ ಮೇಲೆ ಕುಳಿತು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ‘ಮಗನ ನಾನೀಗಲೇ ಹಾಸ್ಟೆಲ್ ಬಿಟ್ಟು ನಿನ್ನ ಓಡಿಸಿಬಿಡಬಹುದು. ಆದರೆ ಹುಡ್ಗ ಹತ್ತನೇ ತರಗತಿಯವರೆಗೆ ಪಾಸು ಮಾಡಿದ್ದಾನಲ್ಲ ಅಂತ ಯಾರದ್ರು ಕೇಳಿದರೆ ನಾನೇನೂ ಉತ್ತರ ಕೊಡಂಗಿಲ್ಲ. ಆದ್ದರಿಂದ ಇನ್ನೊಂದಾರು ತಿಂಗಳು ಹಾಸ್ಟೆಲ್ಲಿನ ಫ್ರೀ ಊಟ ತಿಂದು, ಪರೀಕ್ಷೆ ಕುಂತ ನಾಟ್ಕ ಮಾಡಿ ಮನಿಗೆ ಹೊರಡು ಮಗನ’ ಎಂದು ದುಃಖದ ಧ್ವನಿಯಲ್ಲಿ ಹೇಳಿ ಎದ್ದು ಹೊರಟರು. ಅಂದು ಪಾಠ ಮುಂದುವರೆಯಲಿಲ್ಲ.
ಟಿ.ಹೆಚ್.ಇ. - ದಿ; ಟಿ.ಐ.ಜಿ.ಇ.ಆರ್. - ಟೈಗರ್ ರಮೇಶ!
ರಮೇಶ ಎಂಬ ಇನ್ನೊಬ್ಬ ವಿದ್ಯಾರ್ಥಿಯಿದ್ದ. ಆತನನ್ನು ಕೆರೆಗಳ್ಳಿ ಎಂದು ಅವನ ಊರಿನ ಹೆಸರಿನಿಂದಲೇ ಕರೆಯುತ್ತಿದ್ದೆವು. ಆತ ಹಿಂದೆ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರ ದೂರದ ಸಂಬಂಧಿಯಂತೆ! ರನ್ನಿಂಗ್ ರೇಸ್‌ನಲ್ಲಿ ಪ್ರವೀಣನಾಗಿದ್ದ ಆತನಿಗೆ ಎ.ಬಿ.ಸಿ.ಡಿ. ನೋಡಿಕೊಂಡು ಓದಲು ಬರೆಯಲು ಮಾತ್ರ ಬರುತ್ತಿತ್ತು. ಪುಸ್ತಕ ಮುಚ್ಚಿ ಬರೆಯಲಾಗಲೀ, ಪದಗಳ ಸ್ಪೆಲ್ಲಿಂಗ್ ಹೇಳಲಾಗಲೀ ಆತನಿಗೆ ಕೊನೆಯವರೆಗೂ ಬರಲೇಯಿಲ್ಲ. ‘ಹನ್ನೆರಡು ಅಟೆಂಪ್ಟ್ ಆದರೂ ಪಾಸಾಗದಿದ್ದರೆ, ಅವರೇ ಎಲ್ಲರನ್ನು ಗಾಂಧಿ ಪಾಸ್ ಮಾಡುತ್ತಾರೆ’ ಎಂದು ಆತ ಬಲವಾಗಿ ನಂಬಿದ್ದ!
ಒಂದು ದಿನ ಗಣಿತ ಮೇಷ್ಟ್ರಾದ ಜಿ.ಎಸ್.ಎಸ್. ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ಇಂಗ್ಲೀಷ್ ಬಗ್ಗೆ ಪಾಠ ಮಾಡುತ್ತಿದ್ದರು. ಆ ದಿನ ಹಿಂದಿನ ಬೆಂಚಿನಲ್ಲಿ ಕುಳಿತು ಗಲಾಟೆ ಮಾಡುತ್ತಿದ್ದ ಈ ರಮೇಶ ಅವರ ಕಣ್ಣಿಗೆ ಬಿದ್ದ. ಅಪರೂಪಕ್ಕೆ ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ತಮ್ಮ ಇಂಗ್ಲೀಷ್ ಪಾಂಡಿತ್ಯವನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದ ಬಿಸಿರಕ್ತದ ಯುವ ಮೇಷ್ಟ್ರು ಜಿ.ಎಸ್.ಎಸ್. ಅವರಿಗೆ ಹೇಗಾಗಿರಬೇಡ! ಗಣಿತದ ಕ್ಲಾಸ್‌ನಲ್ಲಿ ರಮೇಶ ದಡ್ಡನೆಂದು ಅವರಿಗೆ ತಿಳಿದಿದ್ದರಿಂದ ಅವನನ್ನು ಎದ್ದು ನಿಲ್ಲಿಸಿ ಪಾಠ ಓದುವಂತೆ ಹೇಳಿದರು. ಪುಸ್ತಕ ಹಿಡಿದು ನಿಂತ ರಮೇಶ ಟಿ.ಹೆಚ್.ಇ. - ದಿ, ಟಿ.ಐ.ಜಿ.ಇ.ಆರ್. - ಟೈಗರ್ ಎಂದು ಅಕ್ಷರಗಳನ್ನು ಹೇಳುತ್ತಾ ನಂತರ ಕೂಡಿಸಿ ಪದವನ್ನು ಹೇಳುತ್ತಾ ಓದತೊಡಗಿದ. ಅವನನ್ನು ಕೀಟಲೆ ಮಾಡಬೇಕೆಂದೋ ಏನೋ ಜಿ.ಎಸ್.ಎಸ್. ‘ಹಿ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು, ಆತ ಹೇಳಲಿಲ್ಲ. ಅವರು ಅದನ್ನು ಬೋರ್ಡ್ ಮೇಲೆ ಬರೆದು ‘ಇದು ಏನು?’ ಎಂದರು. ಆತ ನಿಧಾನವಾಗಿ ‘ಹೆಚ್.ಇ. - ಹಿ’ ಎಂದು ಹೇಳಿದ. ಅದನ್ನು ಡಸ್ಟರ್‌ನಿಂದ ಒರೆಸಿದ ಜಿಎಸ್.ಎಸ್. ಮತ್ತೆ ‘ಹಿ’ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು. ಪುಣ್ಯಾತ್ಮ ರಮೇಶ ಬಾಯಿ ಬಿಡಲೇ ಇಲ್ಲ. ಮೇಷ್ಟ್ರೇ ಮೊದಲು ನಗಲು ಪ್ರಾರಂಭಿಸಿದ್ದರಿಂದ ತರಗತಿಯ ಎಲ್ಲರೂ ಗೊಳ್ ಎಂದು ನಗಲಾರಂಭಿಸಿದರು. ಅವರು ಮತ್ತೆ ‘ಷಿ’ ಎಂಬ ಪದವನ್ನೂ ಅದೇ ರೀತಿ ಬರೆದು ಅಳಿಸಿ ಆತನನ್ನು ಗೋಳು ಹುಯ್ದುಕೊಂಡರು. ಇಡೀ ತರಗತಿಯೇ ನಕ್ಕು ನಕ್ಕು ಸುಸ್ತಾಯಿತು.
ಈ ಎರಡು ಘಟನೆಗಳನ್ನು ಇಲ್ಲಿ ನಾನು ಪ್ರಸ್ತಾಪಿಸಲು ಕಾರಣ ಇಷ್ಟೆ. ಇಂಗ್ಲೀಷ್ ಎಂಬುದು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಭೂತವಾಗಿಯೇ ಕಾಡುತ್ತಿದೆ. ಅದು ನಮ್ಮದಾಗಲು ಸಾಧ್ಯವೇ ಆಗಿಲ್ಲ. ವ್ಯವಸ್ಥೆಯೂ ಅದಕ್ಕೆ ಪೂರಕವಾಗಿಲ್ಲ. ಇಂದೂ ತಕ್ಕಮಟ್ಟಿಗಾದರೂ ಒಳ್ಳೆಯ ಇಂಗ್ಲೀಷ್‌ನ್ನು ಕಲಿಸುವ ಮೇಷ್ಟ್ರುಗಳೂ ಹೆಚ್ಚಿಲ್ಲ. ಬಿ.ಎಸ್ಸಿ. ಪದವಿಯ ನಂತರ ಎರಡು ಸ್ನಾತಕೋತ್ತರ ಪದವಿ, ಒಂದು ಪಿಹೆಚ್.ಡಿ ಮಾಡಿರುವ ನನಗೂ ಇಂಗ್ಲೀಷ್ ಇನ್ನೂ ಕಬ್ಬಿಣದ ಕಡಲೆಯೇ ಆಗಿದೆ! ಆ ವಿಷಯವಾಗಿ ಆಗಾಗ ಕೀಳರಿಮೆಯೂ ಕಾಡುತ್ತದೆ!
ಅಂದಿನಂತೆ ಇಂದಿಗೂ ಇಂಗ್ಲೀಷ್ ಬೇಕೆ ಬೇಡವೇ ಎಂಬುದರ ಬಗ್ಗೆಯೇ ವೃಥಾ ವಾದವಿವಾದಗಳು ನಡೆಯುತ್ತಿರುವುದು ಮಾತ್ರ ದುರದೃಷ್ಟಕರ. ಇಂಗ್ಲೀಷ್ ಬೇಡವೇ ಬೇಡ ಎನ್ನುವವರು ಮೊದಲು ಯೋಚಿಸಬೇಕಾದ್ದು ಇಂಗ್ಲೀಷ್ ಇಂದಿನ ಮತ್ತು ಮುಂದಿನ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾದ ಭಾಷೆಯಾಗಿದೆಯೆ ಇಲ್ಲವೆ ಎಂಬ ಸಂಗತಿ. ಆಗಿಲ್ಲ ಎಂದು ಮೊಂಡುವಾದ ಹೂಡುವವರಿಗೆ ನಾವೇನು ಮಾಡಲಾಗುವುದಿಲ್ಲ. ಜಾಗತೀಕರಣದ ಒಳ್ಳೆಯ ಫಲವನ್ನು ನಾವು ಅನುಭವಿಸಲು ಸಿದ್ಧರಾಗಿರುವಂತೆ ಅದರಿಂದ ಬರುವ ಕೆಟ್ಟದ್ದನ್ನು ಅನುಭವಿಸಲೂ ನಾವು ಸಿದ್ಧರಿರಬೇಕಾಗುತ್ತದೆ. ಬರುವ ಒಳ್ಳೆಯ ಫಸಲನ್ನು ತಿನ್ನಲು ಕೇವಲ ಒಂದು ವರ್ಗಕ್ಕೆ ಸಾಧ್ಯವಾದರೆ, ಅದರ ಕೆಟ್ಟ ಫಸಲು ಇನ್ನೊಂದು ವರ್ಗಕ್ಕೆ ಮೀಸಲಾಗಬೇಕಾಗುತ್ತದೆ. ಇದಾಗಬಾರದು. ಆದ್ದರಿಂದಲೇ ‘ಒಂದು ಭಾಷೆಯಾಗಿ ಇಂಗ್ಲೀಷ್ ಅಗತ್ಯವಾಗಿ ಬೇಕು’ ಎಂದರೆ ತಪ್ಪು ಎನ್ನಲಾಗುವುದಿಲ್ಲ ಅಲ್ಲವೆ?

9 comments:

ರವಿಕಾಂತ ಗೋರೆ said...

ಚೆನ್ನಾಗಿದೆ ನಿಮ್ಮ ಇಂಗ್ಲಿಷ್ ಪುರಾಣ :-) ನೀವು ಹೇಳಿದ್ದು ನಿಜ... ಈಗಿನ ಕಾಲದಲ್ಲಿ ಇಂಗ್ಲಿಷ್ illaandre ಜೀವನ ತುಂಬ ಕಷ್ಟ.... ಇಂಗ್ಲಿಷ್ ಕಲಿಯೋಣ, ಜೊತೆಗೆ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳೋಣ .. ಏನಂತೀರಾ??

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

"ಇಪ್ಪತ್ತುಮೂರುವರೆ" ಅಕ್ಷರ ಬಹಳ ನಗು ತರಿಸಿತು....
ಆ ದಿನಗಳ ಘಟನೆಗಳನ್ನು ಚೆನ್ನಾಗಿ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದೀರಿ...

ನಮ್ಮ ಓದಿನ(ಶಿಕ್ಷಣದ) ಪರಮೋಚ್ಛ ಧ್ಯೇಯ "ನೌಕರಿ"...
ಹಾಗಾಗಿ "ಇಂಗ್ಲಿಷನ್ನು ಭಾಷೆಯಾಗಿ ಕಲಿತರೂ ಅದು ಏನು ಪ್ರಭಾವ ಬೀರ ಬೇಕೊ ಅದನ್ನು ಮಾಡಿರುತ್ತದೆ...

ಇದು ನನ್ನ ಅಭಿಪ್ರಾಯ....

ಚಂದದ ಬರಹಕ್ಕೆ ಅಭಿನಂದನೆಗಳು....
ನಿಮ್ಮ ಈಮೇಲ್ ಅಡ್ರೆಸ್ ಕೊಡಿ....
ನನ್ನದು

ಸಿಮೆಂಟು ಮರಳಿನ ಮಧ್ಯೆ said...
This comment has been removed by the author.
ಸಿಮೆಂಟು ಮರಳಿನ ಮಧ್ಯೆ said...

kash531@gmail.com

PARAANJAPE K.N. said...

ತಮಾಷೆ, ಗ೦ಭೀರತೆ ಎಲ್ಲದರ ಮಿಶ್ರಣದ ನಿಮ್ಮ ಬರಹ ಬದುಕಿನ ವಿವಿಧ ಮಗ್ಗುಲುಗಳ ಪರಿಚಯ ಮಾಡಿಕೊಡುತ್ತದೆ, ಹೌದು, ಇ೦ಗ್ಲೀಶ ವ್ಯಾಮೋಹ ಇ೦ದು ವ್ಯಾಪಕವಾಗಿ ನನ್ನ ಸ೦ಸ್ಕ್ರುತಿ ಮರೆಯಾಗುವತ್ತ ಸಾಗುತ್ತಿದೆ. ಬರಹ ಚೆನ್ನಾಗಿದೆ.

sunaath said...

ಸತ್ಯನಾರಾಯಣರೆ,
ಬರಹದಷ್ಟೆ ಚೆನ್ನಾಗಿ, ಚಿತ್ರವನ್ನೂ ಬಿಡಿಸುತ್ತೀರಲ್ಲ!
ಅಭಿನಂದನೆಗಳು.

Dr. B.R. Satynarayana said...

ಸುನಾಥ್

ಕಾಮೆಂಟಿಗಾಗಿ ಧನ್ಯವಾದಗಳು. ಚಿತ್ರವನ್ನು ನಾನು ಬರೆದಿದ್ದಲ್ಲ. ಪುಸ್ತಕಕ್ಕಾಗಿ ಪರಮೇಶ್ ಡಿ. ಜೋಳದ್ ಎಂಬುವವರಿಂದ ಬರೆಸಿದ್ದು. ಜೋಳದ್ ಅವರು ನನ್ನ ಪಿಹೆಚ್.ಡಿ.ಮಹಾಪ್ರಬಂಧಕ್ಕೂ ಚಿತ್ರ ಬರೆದುಕೊಟ್ಟಿದ್ದರು. ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಶಿವಪ್ರಕಾಶ್ said...

ಇದೆ ಇಂಗ್ಲೀಷ್ನಿಂದ ನಾನು ಕೂಡ ಬಹಳ ಕಷ್ಟ ಪಟ್ಟಿದ್ದೇನೆ.
ಒಂದು ಪ್ಯಾರ ಓದಿ ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದೆ.
ಈಗ ಆದೆ ಇಂಗ್ಲೀಷಿನ್ನು ಸರಾಗವಾಗಿ ಓದಬಲ್ಲೆ ಬರೆಯಬಲ್ಲೆ.
ಏನೇ ಆದರು ಇಂಗ್ಲಿಷ್ ನಮ್ಮ ಮಾತೃಭಾಷೆ ಅಲ್ಲವಲ್ಲ..
ಒಳ್ಳೆಯ ಲೇಖನಕ್ಕೆ ಧನ್ಯವಾದಗಳು

shivu said...

ಸರ್,

ಎಂ.ಕೆ.ಸ್ವಾಮಿಯ ಊಟದ ಕತೆ ಬಲು ಸೊಗಸಾಗಿದೆ...ಅವನು ನಾಯಿಯ ಜೊತೆ ತಿಂದಿದ್ದು, ಇಂಗ್ಲಿಷ್ ಅಕ್ಷರಗಳ ಹೇಳುವ ನಿಮ್ಮ ಆಗಿನ ಗೆಳೆಯರ ಬುದ್ಧಿವಂತಿಕೆ ಎಲ್ಲವನ್ನು ಚೆನ್ನಾಗಿ ಬರೆದಿದ್ದೀರಿ....ಇಷ್ಟಕ್ಕೂ ಇದೆಲ್ಲಾ ನಿಮಗೆ ಹೇಗೆ ನೆನಪಿಟ್ಟುಕೊಂಡು ಬರೆದಿದ್ದೀರಿ ಅನ್ನುವುದೊಂದೆ ನನ್ನಲ್ಲಿ ಅಚ್ಚರಿ ಹುಟ್ಟಿಸಿರುವುದು...
ಅಭಿನಂದನೆಗಳು ಸರ್.