Saturday, June 20, 2009

ನರಿ ಮತ್ತು ಕಾಗೆ ಕಥೆ - ಪ್ರಾಸ ರಹಿತ ಭೋಗಷಟ್ಪದಿ

ಆತ್ಮೀಯ ಮಿತ್ರರೇ,
ಹಲವಾರು ತಾಂತ್ರಿಕ ಕಾರಣಗಳಿಂದಾಗಿ ನನ್ನ ಬ್ಲಾಗನ್ನು ಸರಿಯಾಗಿ ಮೇಂಟೇನ್ ಮಾಡಲಾಗುತ್ತಿಲ್ಲ ಹಾಗೂ ಬೇರಾವುದೇ ಬ್ಲಾಗುಗಳಿಗೆ ಬೇಟಿ ಕೊಡಲಾಗುತ್ತಿಲ್ಲ. ಬಹುಶಃ ಇದು ಇನ್ನೊಂದು ಇಪ್ಪತ್ತು ದಿನಗಳಿಗಾದರೂ ಮುಂದುವರೆಯುತ್ತದೆ. ಆದ್ದರಿಂದ ಈ ಪೋಸ್ಟನ್ನು ನಾನು ಬೇರೆಡೆಯಿಂದ ಅಪ್‌ಲೋಡ್ ಮಾಡುತ್ತಿದ್ದೇನೆ. ಒಮ್ಮೆ ನಮ್ಮ ನೆಟ್‌ವರ್ಕ್ ಸರಿಯಾಗಿ ಅಂತರ್ಜಾಲದ ಸಮಸ್ಯೆ ದೂರವಾದರೆ ಮತ್ತೆ ಎಂದಿನಂತೆ ಬ್ಲಾಗ್ ಆಕ್ಟಿವಿಟೀಸಿನಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಲ್ಲಿಯವರೆಗಿನ ತೊಂದರೆಗಾಗಿ ಕ್ಷಮೆಯಿರಲಿ.

ಸದ್ಯಕ್ಕೆ ಇನ್ನೊಂದು ಮಕ್ಕಳ ಕಥೆಯನ್ನು ಭೋಗ ಷಟ್ಪದಿಯಲ್ಲಿ ಬರೆದಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಕಾಗಿ ಪ್ರಾರ್ಥನೆ.

1
ಒಂದು ಕಾಡಿನಲ್ಲಿ ಇದ್ದ
ಕಾಗೆಯೊಂದು ಒಂದು ದಿವಸ
ತಿನ್ನಲಿಕ್ಕೆ ಏನು ಸಿಗದೆ ಹಸಿದು ಹೋಯಿತು
ಹಸಿದ ಕಾಗೆ ಊಟ ಹುಡುಕಿ
ಊರ ಕಡೆಗೆ ಹಾರಿ ಬಂದು
ಮಾಂಸ ಕಡಿಯೊ ಜಾಗದಲ್ಲಿ ಚೂರು ಕಂಡಿತು
2
‘ಹಸಿದ ಒಡಲ ತಣ್ಣಗಿಡಲು
ಇಷ್ಟು ಸಾಕು ಸದ್ಯ ಎನುತ’
ಚೂರು ಮಾಂಸ ಕಚ್ಚಿಕೊಂಡು ಹಾರಿ ಹೋಯಿತು
ಒಂದು ಮರದ ಕೊಂಬೆಗಿಳಿದು
ಕುಳಿತುಕೊಂಡು ಮಾಂಸ ತಿನಲು
ತವಕದಿಂದ ಮರವನರಸಿ ಕುಳಿತುಕೊಂಡಿತು
3
‘ಚೂರು ಮಾಂಸ ಕಚ್ಚಬೇಕು
ತೃಪ್ತಿಯಿಂದ ಜಿಗಿಯಬೇಕು
ಸವಿಯಬೇಕು’ ಎಂದುಕೊಂಡು ಬಾಯಿಗಿಟ್ಟಿತು
ಅಷ್ಟರಲ್ಲಿ ಹಳೆಯ ಗೆಳೆಯ
ನರಿಯು ಬಂದು ಹರುಷದಿಂದ
ಕೈಯ ಬೀಸಿ ‘ಕಾಗೆಯಣ್ಣ’ ಎಂದು ಕರೆಯಿತು
4
‘ನಿನ್ನ ನೋಡಿ, ಮಾತನಾಡಿ
ನಿನ್ನ ಕೂಡೆ ಲಲ್ಲೆ ಹೊಡೆದು
ನಿನ್ನ ಹಾಡು ಕೇಳಿ ಹಲವು ವರ್ಷವಾಯಿತು
‘ಈಗ ನೋಡು ಸಮಯ ಬಂತು
ನಿನ್ನ ನೆನೆದು ಓಡಿ ಬಂದೆ
ಒಂದೆ ಹಾಡು ಸಾಕು, ಒಮ್ಮೆ ಹಾಡು’ ಎಂದಿತು
5
ನೆನೆಯಿತಾಗ ಕಾಗೆಯಣ್ಣ
ಹಿಂದೆ ಹೀಗೆ ಒಂದು ನರಿಯು
ತನ್ನ ತಾತನಿಂದ ತಿಂಡಿ ಕಸಿದ ಕಥೆಯನು
ನರಿಯ ಕಪಟ ಬಲ್ಲ ಕಾಗೆ
ಕುಶಲದಿಂದ ಬಾಯಿ ಬಿಡದೆ
ಬಾಯಿಯಿಂದ ಕಾಲ್ಗೆ ತಂತು ಮಾಂಸ ಚೂರನು
6
‘ಮರೆಯಲಾರೆ ಗೆಳೆಯ ನಾನು
ನಿನ್ನ ತಾತ ಹೀಗೆ ಹೇಳಿ
ನನ್ನ ತಾತನಿಂದ ತಿಂಡಿ ಕಸಿದ ಕಥೆಯನು
ಮತ್ತೆ ನಾನು ಮೋಸ ಬಿದ್ರೆ
ಜಗದಿ ಬದುಕೊ ಹಕ್ಕು ಇಲ್ಲ
ಎಂಬ ಅರಿವು ನನಗೆ ಈಗ ಮನದಿ ಮೂಡಿದೆ
7
ನಿನ್ನ ನಂಬೆ ನಾನು ಇನ್ನು
ಬಲ್ಲೆ ನಿನ್ನ ಮನದ ಕಪಟ
ನಯದ ನುಡಿಯು ಸಾಕು ತೊಲಗು ನಾನು ಹಾಡೆನು
ಅಸಮರೊಡನೆ ಸ್ನೇಹ ಮಾಡಿ
ಮೂರ್ಖನಾಗೊ ಇಚ್ಛೆ ಇಲ್ಲ
ಹಿರಿಯರಿಂದ ಕಲಿತ ಪಾಠ ನಾನು ಮರೆಯೆನು’
8
ಎಲ್ಲ ಕಾಲದಲ್ಲು ಮೋಸ
ಮಾಡಿ ಬದುಕಲಾಗದೆಂಬ
ನಗ್ನಸತ್ಯವರಿತು ನರಿಯು ಹೊರಟು ಹೋಯಿತು
ಕಾಲಧರ್ಮ ಉರುಳೊ ಭೂಮಿ
ಒಮ್ಮೆ ಮೇಲೆ ಒಮ್ಮೆ ಕೆಳಗೆ
ಸತ್ಯವಿದನು ಅರಿತ ಜನರ ಕಷ್ಟ ಕಳೆವುದು

7 comments:

Guruprasad said...

ತುಂಬ ಚೆನ್ನಾಗಿ ಇದೆ.... ಓದುತ್ತ ಇರಬೇಕಾದ್ರೆ ನಾನು ಚಿಕ್ಕ ಮಗು ಅಗಿಬಿತ್ ಇದ್ದೆ....ಸಿಂಪಲ್ and cute ಕವನ

sunaath said...

ಬಹಳ ದಿನಗಳ ನಂತರ ಭಾಮಿನೀ ಷಟ್ಪದಿಯಲ್ಲಿ ಕವನ ಒಂದನ್ನು
ಓದಿ ಖುಶಿಯಾಯಿತು. ಕವನ ಸುಂದರವಾಗಿ comprehensive ಅಗಿ ಬಂದಿದೆ.

Unknown said...

ನಿರೂಪಣೆ ಬಹಳ ಬಹಳ ಚೆನ್ನಾಗಿದೆ - ಒಮ್ಮೆ ಮಕ್ಕಳಿಗೆ ಹೇಳಿಕೊಟ್ಟರೆ ಅವರೆಂದೂ ಮರೆಯೋಲ್ಲ
ಸತ್ಕಾರ್ಯವು ಅನವರತ ಸಾಗಲಿ

ಗುರುದೇವ ದಯಾ ಕರೊ ದೀನ ಜನೆ

ಬಿಸಿಲ ಹನಿ said...

ಸತ್ಯನಾರಾಯಣ ಸರ್,
ನಿಮ್ಮ ಭೋಗ ಷಟ್ಪದಿಯ ಕವನಗಳು ತುಂಬಾ ಸೊಗಸಾಗಿ ಬರುತ್ತಿವೆ. ಮುಂದುವರಿಸಿ.

shivu.k said...

ಸತ್ಯ ನಾರಾಯಣ ಸರ್,

ಈ ಪದ್ಯವನ್ನು ನಾವು ಚಿಕ್ಕಂದಿನಲ್ಲಿ ಕೇಳಿದ್ದೆವು. ಈಗ ಅದನ್ನು ಕೊನೆಯಲ್ಲಿ ತಿದ್ದುಪಡಿ ಮಾಡಿರುವುದು ಈಗಿನ ಕಾಲದ ಮಕ್ಕಳಿಗೆ ಸರಿಯಾಗಿದೆ...

ಮತ್ತೆ ನಿಮ್ಮ ಅಂತರ್‌ಜಾಲ ಬೇಗ ಸರಿಹೋಗಲಿ ಎಂದು ಆರೈಸುವೆ...

ಧನ್ಯವಾದಗಳು...

Vikram Arul said...

ಚೆನ್ನಾಗಿ ಇದೆ....

Anonymous said...

Best eCOGRA Sportsbook Review & Welcome Bonus 2021 - CA
Looking for an eCOGRA https://deccasino.com/review/merit-casino/ Sportsbook Bonus? At this eCOGRA Sportsbook deccasino review, we're https://sol.edu.kg/ talking about a variety of febcasino.com ECCOGRA sportsbook promotions.